ಬುಧವಾರ, ಅಕ್ಟೋಬರ್ 14, 2015

ಇದು ನಿಜವಾದ ಧರ್ಮವೇ ??

ಒಂದು ದೊಡ್ಡ ಜನಗಳ ಗುಂಪು  ಉತ್ತರ ಪ್ರದೇಶದ ಒಂದು ಗ್ರಾಮದಲ್ಲಿ ಇದ್ದಕ್ಕಿದ್ದಂತೆಯೇ ಒಂದು ಮನೆಗೆ ನುಗ್ಗುತ್ತದೆ. ಮನೆಯಲ್ಲಿದ್ದ ಕುಟುಂಬ ಸದಸ್ಯರನ್ನ ಬೀದಿಗೆ ನಿರ್ದಾಕ್ಷಣ್ಯವಾಗಿ  ಎಳೆದು ಬಾಯಿಗೆ ಬಂದಂತೆ ನಿಂದಿಸುತ್ತದೆ. ಆ ಕುಟುಂಬಕ್ಕೆ ಏನಾಗುತ್ತಿದೆ ಎನ್ನುವಷ್ಟರಲ್ಲಿ, ಆ ಗುಂಪು ಅವರ ಮೇಲೆರಗಿ ಜೀವ ಹೋಗುವಂತೆ ಅವರನ್ನು ಥಳಿಸುತ್ತದೆ. ಅಷ್ಟೊತ್ತಿಗೆ ಮನೆಯ ಮುಖಂಡನ ಜೀವವು  ಆ ಗುಂಪಿನ ಮೊಂಡುತನಕ್ಕೆ ನಲುಗಿ ನಂತರ ಬಲಿಯಾಗುತ್ತದೆ. 

          ಆ ರೀತಿಯಾಗಿ ಆಕ್ರಮಣ ಮಾಡಿದ ಆ ಗುಂಪು ಯಾವುದು , ಆ ಕುಟುಂಬ ಯಾರದ್ದು , ಸತ್ತುಹೋದ ಆ ಮನುಷ್ಯ ಯಾರು ಎಂದು ನಮಗೆಲ್ಲ ತಿಳಿದಿದೆ. ನಡೆದಿರುವ ಕೃತ್ಯ ಸರಿಯೋ ತಪ್ಪೋ , ಧರ್ಮವೋ ಅಧರ್ಮವೋ, ಯಾರದು ಸರಿ ಯಾರದು ತಪ್ಪು ಎನ್ನುವುದು ನಮ್ಮ ನಿಮ್ಮೆಲ್ಲರ ಯೋಚನೆಗೆ ಬಿಟ್ಟದ್ದು.
 
         ಕೆಲವರಿಗೆ  ಈ ಘಟನೆ ತೀರ ಅಸಹ್ಯ ಮತ್ತು ಅಧರ್ಮೀಯವಾಗಿ ಕಾಣಿಸುತ್ತದೆ , ಮತ್ತೆ ಕೆಲವರಿಗೆ ಇದು ಧರ್ಮ ರಕ್ಷಿಸಿದ ಮಹಾತ್ ಕಾರ್ಯವಾಗಿ ಕಾಣುತ್ತದೆ. ಎಲ್ಲಾ ಜನರು ಅವರದೇ ಆದ ದೃಷ್ಟಿಕೋನಗಳಿಂದ ಈ ಘಟನೆಯನ್ನು ವಿಶ್ಲೇಷಿಸುತ್ತಾರೆ. 


    
        ಈ ವಿಚಾರದಲ್ಲಿ ನನ್ನ ವೈಯುಕ್ತಿಕ ಭಾವನೆ ಏನೆಂದರೆ , "ಪ್ರತ್ಯಕ್ಷವಾಗಿ ನೋಡಿದರೂ ಸಹ ಪ್ರಮಾಣಿಸಿ ನೋಡು" ಎಂದು  ಹೇಳುವ ನಾವು , ಒಹಾಪೋಹಗಳ ಆಧಾರದ ಮೇಲೆ ಒಬ್ಬ ಮನುಷ್ಯನನ್ನು ಹತ್ಯೆ ಮಾಡಿ, ಅ ಘಟನೆಗೆ ಧರ್ಮ-ಅಧರ್ಮದ ಬಣ್ಣ ಲೇಪಿಸುವುದು ಅದೆಷ್ಟು ಸರಿ ?

         ಧಯವೇ ಧರ್ಮದ ಮೂಲವಯ್ಯ, ಧಯವೇ ನಮ್ಮ ಧರ್ಮದ ಭದ್ರ ಬುನಾದಿ, ಪರಧರ್ಮ ಸಹಿಷ್ಣತೆ ಎನ್ನುವ ಸತ್ವ ನಮ್ಮ ಧರ್ಮದ ಬೇರು ಎಂದು ಹೇಳುವ ನಾವು, ಇನ್ನೊಬ್ಬ ಧರ್ಮೀಯನನ್ನು ಕ್ಶುಲ್ಲಕ್ಕ ಗಾಳಿಮಾತಿನ ಆಧಾರದ ಮೇಲೆ  ಸಾಯಿಸಿ, ಗೋಹತ್ಯಗೆ ಬದಲಾಗಿ ಆತನ ಹತ್ಯ ಎನ್ನುವುದು ನಮ್ಮ ಧರ್ಮದ ಸಂಸ್ಕೃತಿಯೇ ?

        ದೇವರು ಕಣ-ಕಣಗಳಲ್ಲೂ,  ಜಗತ್ತಿನ ಎಲ್ಲಾ ಜೀವರಾಶಿಗಳಲ್ಲೂ, ಪ್ರತಿಯೊಬ್ಬರ ಹೃದಯದಲ್ಲೂ ಇದ್ದಾನೆ ಎನ್ನುವ  ಧರ್ಮವನ್ನು ಪಾಲಿಸುವ ನಾವು , ಮತ್ತೊಂದೆಡೆ ಅದೇ ಧರ್ಮ ಹೆಸರಿನಲ್ಲಿ ಮತ್ತೊಬ್ಬನ ಜೀವ ತೆಗೆದು, ನಾವು ಧರ್ಮ ರಕ್ಷಕರು ಎನ್ನುವುದನ್ನು ನಾವೇ ಒಪ್ಪಬಹುದೇ ? 

        ಕೆಲವರು ಧರ್ಮಾಂಧರಾಗಿ  ಒಳ್ಳೆಯ ಹಾದಿ ಬಿಟ್ಟು ಅಧರ್ಮಿಗಳಾಗಿ ಅನ್ಯಾಯ ಅಕ್ರಮಗಳನ್ನು ಮಾಡಿದರೆ , ಸೇಡು ತೀರಿಸಿಕೊಳ್ಳಲು ನಾವು ಕೂಡ ಅದೇ ಮಾರ್ಗವನ್ನು ತುಳಿದರೆ ನಮಗೂ ಮತ್ತು ಅವರಿಗೂ ಇರುವ ವ್ಯತ್ಯಾಸವಾದರೂ ಏನು ?

       ಇಂಥಹ ಘಟನೆಗಳಿಂದ ನಡೆದಾಗ ಧರ್ಮದ ಹೆಸರಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಕೆಲವು ರಾಜ್ಯಗಳಲ್ಲಿ ಈಗ ಚುನಾವಣಾ ಸಮಯವಾದ್ದರಿಂದ, ರಾಜಕೀಯ ಪಕ್ಷಗಳಿಗೂ ಈ ಘಟನೆ ಒಂದು ಕೆಟ್ಟ ಅಸ್ತ್ರವಾಗಿದೆ.  ಒಬ್ಬರನ್ನೊಬ್ಬರು ದೂರಲು , ಜನಗಳ ಮದ್ಯ ಕಿಚ್ಚು ಹಚ್ಚಲು, ತಾವು ಅಧಿಕಾರಕ್ಕೆ ಬರಲು ಎಲ್ಲಾ ರಾಜಕೀಯ ಪಕ್ಷಗಳು ಇಂಥಹ ಘಟನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದಕ್ಕೆ ನಾವು ಎಂದಿಗೂ ಅವಕಾಶ ಕೊಡಬಾರದು.
 
       ನಮ್ಮ ಸ್ವಂತ ಬುದ್ದಿಯಿಂದ , ಸ್ವಲ್ಪ ವಿವೇಚನೆಯಿಂದ ಯೋಚಿಸಿದರೆ ಮಾತ್ರ ಈ ಘಟನೆ ಯಾವ ಮಟ್ಟದ್ದು ,  ಈ ರೀತಿ ನೆಡೆದ್ದದ್ದು ಅದೆಷ್ಟು ದುರಾದೃಷ್ಟಕರ ಎಂದು ತಿಳಿಯುತ್ತದೆ. ಧರ್ಮೋ ರಕ್ಷಿತಿ ರಕ್ಷಿತಃ ಎಂಬುದರ ಸರಿಯಾದ ಅರ್ಥ ನಮಗೆ ಆಗದೆ ಹೋದಾಗ ಸಮಾಜದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ.  ಎಲ್ಲಾ ಧರ್ಮಗಳಲ್ಲೂ ಒಳ್ಳೆಯದು ಕೆಟ್ಟದ್ದು ಇದ್ದೆ ಇರುತ್ತದೆ. ನಾವು ಏನನ್ನು ಅಳವಡಿಸಿಕೊಳ್ಳುತ್ತೇವೆ ಅನ್ನುವುದು ಮುಖ್ಯ. ನಮ್ಮ ಧರ್ಮದಲ್ಲಿ ಇರುವ ಪ್ರತಿಯೊಬ್ಬರು ಒಳ್ಳೆಯವರಲ್ಲ, ಅನ್ಯ ಧರ್ಮದಲ್ಲಿ ಇರುವವರೆಲ್ಲರೂ  ಕೆಟ್ಟವರಲ್ಲ. ಧರ್ಮ ರಕ್ಷಣೆಯ ಸುಳ್ಳು ನೆವದ ಮೇಲೆ ಯಾವುದೇ ಧರ್ಮದ ಜನರು ಯಾವುದೇ ಅನ್ಯಾಯ ಅಕ್ರಮಗಳನ್ನು ಮಾಡಿದರೆ ಒಳ್ಳೆಯ ಸಮಾಜವು ಅಂಥಹ ಧರ್ಮವನ್ನು ಎಂದಿಗೂ ಒಪ್ಪುವುದಿಲ್ಲ.

ನಿಮಗಾಗಿ 
ನಿರಂಜನ್

ನಾಮಕರಣ



                                       ನಾಮಕರಣ 

ಅಡುಗೆ ಮನೆಯಲ್ಲಿ ಕೆಲಸ ಮಾಡಿಕೊಳ್ಳುತ್ತಿರುವ ರೂಪ ಈಗಿನ ಕಾಲದ ಹೆಣ್ಣು ಮಗಳು, ಅದೇ ಕೋಣೆಗೆ ಅಂಟಿಕೊಂಡಿರುವ ಸಣ್ಣ ದೇವರಮನೆಯಲ್ಲಿ ಪೂಜೆ ಮಾಡುತ್ತಿರುವ ಹಳೆಕಾಲದ "ದೇವಮ್ಮ" ರೂಪಳ ಅತ್ತೆ. ಈಗಿನ ಕಾಲಕ್ಕೂ ಮತ್ತು ಆಗಿನ ಕಾಲಕ್ಕೂ ಮದ್ಯ ಸಿಕ್ಕಿ ಹಾಕಿಕೊಂಡಿರುವವನು "ಮೋಹನ", ಪಕ್ಕದಲ್ಲೇ ಪೇಪರ್ ಓದುತ್ತಿದ್ದಾನೆ.

ದೇವಮ್ಮ :  ರೂಪ  , ಸ್ವಲ್ಪ ನೀರು ಕೊಡೆ ...

ರೂಪ :  ತಂದೆ ಅತ್ತೆ , ( ನೀರು ತಂದ ರೂಪ ಅತ್ತೆಗೆ) ನೀರು ತಗೋಳಿ ,

ದೇವಮ್ಮ : ನಿಮ್ಮ ಅಣ್ಣನ ಮಗನಿಗೆ ನಾಮಕರಣದ  ಮಾಡಿದ್ರೇನೆ  ರೂಪ ? 

ರೂಪ : ಇನ್ನೂ ಇಲ್ಲ ಅತ್ತೆ,  ಅವರು ಹೆಸರು ಚೂಸ್ ಮಾಡೋದ್ರಲ್ಲೇ ಇದ್ದಾರೆ .

ದೇವಮ್ಮ : ಹೌದ ? , ಹೆಸರು ಇಡೋಕೆ ಅಷ್ಟೊಂದು ಯಾಕೆ ತಲೆ ಕೆಡಿಸಿಕೊಂಡಿದ್ದಾರೆ ಅಂತ ?? ಯಾವ್ದೋ ಒಂದು ಹೆಸರು ಇಟ್ಟರೆ ಆಯ್ತಪ್ಪ. ಹೆಸರುಗಳಿಗೇನು ಬರವೆ ??. 

ರೂಪ : ಏನೋ ಗೊತ್ತಿಲ್ಲ ಅತ್ತೆ , ಅವರಿಷ್ಟ ಬಿಡಿ... 

ದೇವಮ್ಮ : ನನಗೆ ಹುಟ್ಟೋ ಮೊಮ್ಮಕ್ಕಳಿಗೆ ಹೆಸರು ಇಡೋದು, ಇಷ್ಟೊಂದು ಕಷ್ಟ ಆಗೋಲ್ಲ ನೋಡ್ತಾ ಇರು, 

ಮೋಹನ : ( ನಗುತ್ತ )  ಮೊದ್ಲು ಮಗು ಆಗ್ಲಿ ತಡಿಯಮ್ಮ ..( ರೂಪಾಳೂ ಕೂಡ ನಸು ನಗುತ್ತಾಳೆ, ಅಡುಗೆ ಮನೆಯಿಂದ )
 
ದೇವಮ್ಮ :  ಇರೋ ಹೆಸರುಗಳನ್ನೂ ಬಿಟ್ಟು , ಎಂತೆಂತವೋ ಹೆಸರನ್ನ ಹುಡಿಕೊಂಡು ಕೂತ್ರೆ ಹಿಂಗೆ ಲೇಟ್ ಆಗುತ್ತೆ ನೋಡು, ಏನೇನೋ ಕೇಳದ ಹೆಸರುಗಳು, ಅರ್ಥ ಆಗದ ಹೆಸರುಗಳೆಲ್ಲ ಇಡ್ತಾರೆ ಈ ಕಾಲದಲ್ಲಿ. ನಾ ಹಿಂಗೆ ಆಗೋಕೆ ಬಿಡೋಲ್ಲ ನೋಡ್ತಾ ಇರು. 

ರೂಪ : ಅದೆಲ್ಲ ಮಕ್ಳು ಅದಮೇಲೆ ಯೋಚನೆ ಮಾಡಿದ್ರೆ ಆಯ್ತು ಬಿಡಿ ಅತ್ತೆ. 

ದೇವಮ್ಮ : ಆಗ್ತಾವೆ ಬಿಡೇ , ನಿಮ್ಮಿಬ್ರಿಗೂ ಮದುವೇನೆ ಆಗಿದೆ ಅಂತೆ .  
  ( ರೂಪ ನಗುತ್ತ ಮೋಹನ ಮುಖ ನೋಡುತ್ತಾಳೆ ) 

ದೇವಮ್ಮ:  ಜನಕ್ಕೆ ಈ  ಹೆಸರು ಹುಡೋಕೊಕೆ ಯಾಕೆ ಇಷ್ಟು ಕ್ಷಷ್ಟ ಅಂತ ??  ಹೆಸರು ಇಡಬೇಕು ಅಂದ್ರೆನೂ  ಎಷ್ಟೊಂದು ಒಳ್ಳೆ ಹೆಸರು ಸಿಗ್ತಾವೆ.. .. 

ಮೋಹನ : ಹಾಗಾದ್ರೆ ನಂಗೆ ಗಂಡು ಮಗು ಆದ್ರೆ ಏನು ಹೆಸರು ಇಡೋಣಮ್ಮ ??? 

ದೇವಮ್ಮ :  ಸಕತ್ ಈಸಿ ನೋಡು , ಗಂಡು ಮಗು ಆದ್ರೆ ಈರಭದ್ರ ಅಂತ ಇಟ್ರೆ ಆಯ್ತಪ್ಪ . ಅದು ನಿಮ್ಮ ಮುತ್ತಾತನ ಹೆಸರು . 

ಮೋಹನ : ( ಉಕ್ಕಿ ಬರುವ ನಗೆಯನ್ನು ತದೆದುಕೊಳ್ಳುತ್ತ ) " ಈರಭದ್ರ " , ಆಹಾ ಎಷ್ಟೊಂದು ಒಳ್ಳೆ ಹೆಸರು , ಒಂದು ವೇಳೆ ಹೆಣ್ಣು ಮಗು ಆದ್ರೆ ??

ದೇವಮ್ಮ:  " ಕಾಳಮ್ಮ" , ಕಾಳಮ್ಮ ನಮ್ಮ ಕುಲ ದೇವಂತೆ ಹೆಸರು , ಪ್ರತಿ ದಿನ ಆ ತಾಯಿ ಹೆಸರು ನಮ್ ಬಾಯಲ್ಲಿ ಬಂದ್ರೆ ಕೋಟಿ ಪುಣ್ಯ ಬರುತ್ತೆ ಕಣೋ. 

ರೂಪ : " ಕಾಳಮ್ಮ " (ಭಯದೊಂದಿಗೆ ,,ನಗುತ್ತ) , ಒಂದು ವೇಳೆ  ಒಟ್ಟಿಗೆ ಅವಳಿ-ಜವಳಿ ಹೆಣ್ಣು-ಗಂಡು ಮಕ್ಳು ಹುಟ್ಟಿದ್ರೆ  ???

ದೇವಮ್ಮ : ನಮ್ಮ ಪುಣ್ಯ ಅಂತ ಅಂದುಕೊಂಡು , ಭದ್ರ ಅಂತ ಗಂಡಿಗೂ ಕಾಳಿ ಅಂತ ಅಂತ ಹೆಣ್ಣಿಗೂ , ಒಟ್ಟಾಗಿ   "ಭದ್ರ-ಕಾಳಿ " ಅಂತ ನಾಮಕರಣ ಮಾಡಿದ್ರೆ ಆಯ್ತಪ್ಪ , ಅಷ್ಟೇ ... 

ನಿಮಗಾಗಿ 
ನಿರಂಜನ್

ಸೋಮವಾರ, ಅಕ್ಟೋಬರ್ 5, 2015

ಪರ-ವಿರೋದ

                         
                                                  ಚರ್ಚೆಗಳು ....                                                                      

        ತ್ತೀಚಿನ ದಿನಗಳಲ್ಲಿ ನಾವೆಲ್ಲರೂ ರಾಜಕೀಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಯಾವ ರಾಜಕೀಯ ಪಕ್ಷ ನಮ್ಮ ಚಿಂತನೆಗೆ ಹತ್ತಿರವಾಗಿದೆಯೋ ಆ ಪಕ್ಷಗಳನ್ನು ನಾವು ಬೆಂಬಲಿಸುತ್ತೇವೆ. ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿದಿನವೂ ಯಾವುದಾದರು ಒಂದು ಸಮಾಜದ ವಿಷಯಗಳನ್ನು ಚರ್ಚೆಗೆ ತೆಗೆದುಕೊಂಡು, ಆ ವಿಷಯದ ಮೇಲೆ ತಮ್ಮ ನಿಲುವನ್ನು ವ್ಯಕ್ತಪಡಿಸಿ, ಆ ವಿಷಯಗಳ ಮೇಲೆ ಪಕ್ಷ-ಪಕ್ಷಗಳ ಮದ್ಯ  ಚರ್ಚೆಗಳನ್ನು ಆರಂಭಿಸುತ್ತವೆ. ಆ ಪಕ್ಷಗಳ   ಬೆಂಬಲಿಗರಾದ ನಾವು ಕೂಡ ನಮ್ಮದೇ ರೀತಿಯಲ್ಲಿ ಆ ವಿಷಯಗಳ ಬಗ್ಗೆ  ಸಮಾಲೋಚನೆ ಮಾಡುತ್ತೇವೆ. ಒಮ್ಮೊಮ್ಮೆ ಚರ್ಚೆಯಲ್ಲಿ ವಿಷಯದ ಪರವಿರುತ್ತೇವೆ , ಕೆಲವೊಮ್ಮೆ ವಿಷಯದ ವಿರುದ್ದವಿರುತ್ತೇವೆ. ಈ ರೀತಿಯ ಎಲ್ಲ ಚರ್ಚೆ-ಸಮಾಲೋಚನೆಗಳು ಪ್ರಜಾಪ್ರಭುತ್ವದಲ್ಲಿ ಬಹಳ ಆರೋಗ್ಯಕರ ಪಕ್ರಿಯೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಚರ್ಚೆಗಳೆಲ್ಲ ಆರೋಗ್ಯಕರವಾಗಿವೆಯಾ ಎನ್ನುವ ಪ್ರಶ್ನೆ ನನಗೆ ಕಾಡಲು ಶುರುವಾಗಿದೆ. ನಮ್ಮ ರಾಜಕೀಯ ಪಕ್ಷಗಳು ಸಾಮಾಜಿಕ ಕಳಕಳಿ ಇರುವ ವಿಷಗಳ ಮೇಲೆ ಚರ್ಚೆಗಳನ್ನು  ಪ್ರಾರಂಭಿಸುತ್ತಿವೆಯಾ ? ಅದೇ ರೀತಿಯಾಗಿ ಆ ಪಕ್ಷಗಳ ಬೆಂಬಲಿಗರಾದ ನಾವು ಕೂಡ ಅದೇ ವಿಷಯಗಳ ಬಗ್ಗೆ  ಪ್ರಾಮಾಣಿಕವಾಗಿ ನಮ್ಮ ನಿಲುವುಗಳನ್ನು ವ್ಯಕ್ತಪಡಿಸುತ್ತೇದ್ದೆವೆಯೇ ? ನಮ್ಮ ಚರ್ಚೆಗಳು ಸಾರ್ವಜನಿಕೆ ವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ , ಮಾಧ್ಯಮಗಳಲ್ಲಿ ಸರಿಯಾದ ಹಾದಿಯಲ್ಲಿ ಸಾಗುತ್ತಿವೆಯೇ ? ಎಂದು ನಮ್ಮನ್ನು  ನಾವೇ  ಪ್ರಶ್ನೆ ಮಾಡಿಕೊಳ್ಳುವಂತಹ ವಾತಾವರಣವೂ ಕೂಡ ಈಗ ಹುಟ್ಟಿಕೊಂಡಿದೆ ಎಂಬುದು ನನ್ನ ಭಾವನೆ. 

ರಾಜಕೀಯ ಪಕ್ಷಗಳು ಯಾವಗಲು ತಮ್ಮ ರಾಜಕೀಯ ಬೇಳೆ  ಬೇಯಿಸಿಕೊಳ್ಳಲು ಸಾಮಾಜಿಕ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತವೆ. ಇದು ನಮಗೆ ಗೊತ್ತಿರುವ ಸಹಜ ವಿಷಯ. ಆ ವಿಷಯಗಳಿಗೆ ತಾತ್ವಿಕ ಅಂತ್ಯ ಯಾವ ರಾಜಕೀಯ ಪಕ್ಷಕ್ಕೂ, ಯಾವ ಕಾಲಕ್ಕೂ ಬೇಕಾಗಿರುವುದಿಲ್ಲ. ಆದರೆ ನಾವು ಆ ಪಕ್ಷಗಳ ಬೆಂಬಲಿಗರು ಎಂಬ ಒಂದೇ ಕಾರಣಕ್ಕೆ ನಮ್ಮ ಪಕ್ಷಗಳು ಮಾಡಿದ್ದನ್ನೆಲ್ಲ ಸಮರ್ಥಿಸಿಕೊಳ್ಳುವುದು, ವಿರೋದ ಅಭಿಪ್ರಾಯ ವ್ಯಕ್ತಪಡಿಸುವ ಬೇರೆಯವರನ್ನು  ನಿಂದಿಸುವುದು, ಮೂದಲಿಸುವುದು ಅದೆಷ್ಟು ಸರಿ. ಚರ್ಚೆಗಳೆಂದರೆ ವಿಷಯಗಳ  ಪರ-ವಿರೋದ ಸಹಜ ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಬಾಯಿಗೆ ಬಂದಂತೆ ಅರಚುವುದು, ನಮ್ಮ ಪಕ್ಷ ಮಾಡಿದ್ದೆಲ್ಲ ಸರಿ , ನಿನ್ನ ಪಕ್ಷ ಏನು ಮಾಡಿದರು ತಪ್ಪು, ನಮ್ಮ ನಾಯಕನೊಬ್ಬನೆ ಸರಿ , ನಿಮ್ಮ ನಾಯಕ ನೀಚ ಎನ್ನುವ ಚರ್ಚೆಗಳು ನಿಜವಾಗಿಯೂ ನಮ್ಮ ದೇಶದ ಏಳಿಗೆಗೆ ಸಹಕಾರಿಯಲ್ಲ. 

ಬಹುದಿನಗಳಿಂದ ಜಾತಿ ರಾಜಕೀಯ ಮಾಡುತ್ತಿದ್ದ ಪಕ್ಷಗಳು ಈಗ ಧರ್ಮ ರಾಜಕೀಯಕ್ಕೂ ಇಳಿದಿವೆ. ಒಂದು ಪಕ್ಷ ತಾನೇ ಒಂದು ಧರ್ಮದ ರಕ್ಷನಂತೆ ಬಿಂಬಿಸಿಕೊಂಡರೆ , ಮತ್ತೊಂದು ಪಕ್ಷ ಇನ್ನೊಂದು ಧರ್ಮ ಅದೇ ಪಕ್ಷಕ್ಕೆ ಸೇರಿದ್ದು ಬೇರೆ ಯಾರು ಕೂಡ ಈ ಧರ್ಮದ  ಬಗ್ಗೆಯೂ ಮಾತನಾಡಬಾರದು ಎನ್ನುತ್ತಿವೆ. ಇದು ಕೇವಲ ಕೆಟ್ಟ ರಾಜಕೀಯವಲ್ಲವೇ ಮತ್ತೇನು ? ಈ ಪಕ್ಷಗಳನ್ನು ಹಿಂಬಾಲಿಸುವ ನಾವು ಸಾಮಾಜಿಕ ಜಾಲತಾಣಗಳಲ್ಲಿ ಜಾತಿ-ಧರ್ಮದ ಬಗ್ಗೆ ಕೀಳು ಮಟ್ಟದ ಚರ್ಚೆಗಳಲ್ಲಿ ತೊಡಗುತ್ತೇವೆ. ಸಾಮಾಜಿಕ ಜಾಲತಾಣಗಳನ್ನು  ನಾವು ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳದೆ ವಿಷಯ ವಿರೋದಿಗಳನ್ನು ನಿಂದಿಸಲು, ಧರ್ಮವೆನ್ನುವ ಸೂಕ್ಷ್ಮ ವಿಷಯದಲ್ಲಿ ಮತ್ತೊಬ್ಬರ ನಂಬಿಕೆಗೆ ದಕ್ಕೆ ತರಲು, ಶಾಂತಿ ಕದಡುವ ಸಲ್ಲದ ಚರ್ಚೆಗಳನ್ನು ಮಾಡಲು, ಸ್ನೇಹಿತರನ್ನು ಕೆರಳಿಸಲು , ಪಕ್ಷಗಳ ನಡುವೆ, ಜನರ ನಡುವೆ , ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತಲು ಬಳಸಿಕ್ಕೊಳ್ಳುತ್ತಿಲ್ಲವೇ ? 

ವಿಷಯ ಅದೆಷ್ಟೇ ಸೂಕ್ಷ್ಮವಾಗಿದ್ದರು ಅದರ ಮೇಲೆ ಚರ್ಚೆಯಾಗಬೇಕು ನಿಜ, ಆದರೆ ಸಾರ್ವಜನಿಕ ಚರ್ಚೆಗಳು ಇನ್ನೊಬ್ಬರ ಭಾವನೆಗಳನ್ನು ಕೆರಳಿಸುವ ಮಟ್ಟಕ್ಕೆ ಇಳಿಯಬಾರದು. ನಾನೇ ಸರಿ, ನನ್ನ ಆಲೋಚನೆಯಷ್ಟೇ  ಶ್ರೇಷ್ಠ,  ನನ್ನ ಪಕ್ಷವೇ ನಿಜವಾದ ರಾಜಕೀಯ ಪಕ್ಷ, ನನ್ನ ನಾಯಕನೇ ನಿಜವಾದ ದೇಶಭಕ್ತ ಬೇರೆಯವರೆಲ್ಲ ಧರ್ಮ-ರಾಷ್ಟ್ರ ವಿರೋದಿಗಳು, ನನ್ನ ವಿಷಯಗಳನ್ನು ನೀನು ವಿರೋದಿಸಿದರೆ ನೀನು ಕೂಡ ರಾಷ್ಟ್ರವಿರೋದಿ ಎನ್ನುವುದು ಸರಿಯಲ್ಲ. ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶವಿದೆ,  ಯಾರೇ ಚರ್ಚೆ ಆರಂಭಿಸಿದರು ಆ ವಿಷಯಗಳನ್ನು ನಾವು ಅಳೆದು-ತೂಗಿ ಆ ವಿಷಯಗಳನ್ನು  ಒಪ್ಪಬಹುದು ಇಲ್ಲದಿದ್ದರೆ ಬಿಡಬಹುದು. ಆದರೆ ಎಲ್ಲರ ಮೇಲೂ ತಮ್ಮ ಚಿಂತನೆಗಳನ್ನೇ ಏರುವುದು, ರಾಜಕೀಯ ಪಕ್ಷಗಳು ಏನು ಮಾಡಿದರು ಅವುಗಳ ಮೇಲೆ ಕುರುಡು ವಿಶ್ವಾಸ ಇಡುವುದು, ವಿಷಯ ವಿರೋದಿಗಳ ದ್ವೇಷಿಸುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.  

ನಿಮಗಾಗಿ 
ನಿರಂಜನ್

ಸೋಮವಾರ, ಆಗಸ್ಟ್ 31, 2015

ವಿಚಾರವಾದಕ್ಕಿರುವ ಬೆಲೆಯೆಷ್ಟು ??

                                                    ವಿಚಾರವಾದಕ್ಕಿರುವ ಬೆಲೆಯೆಷ್ಟು ?? 

ಸ್ನೇಹಿತರೆ, ವಿಚಾರವಾದವೆಂದರೆ "ಯಾವುದೇ ಒಂದು ವಿಷಯವನ್ನು ಕೇವಲ ನಂಬಿಕೆಯಾಧಾರದ ಮೇಲೆ ಅರ್ಥೈಸದೆ ,  ಸಂಶೋದನೆ, ಅದ್ಯಯನ ಹಾಗು ಅದರ ಮೂಲ ಸ್ವರೂಪದ ಆಧಾರದ ಮೇಲೆ ಆ ವಿಷಯವನ್ನು ಅರ್ಥೈಸುವುದು". ಆಗ ಸಿಗುವ ವಿಷಯದ ಅರ್ಥ ಅಥವಾ ಸತ್ಯ ಕೆಲವೊಮ್ಮೆ ನಮ್ಮ ಸಾಂಪ್ರದಾಯಿಕ ನಂಬಿಕೆಗಿಂತ ಬಿನ್ನವೂ ಆಗಿರಬಹುದು, ಕೆಲವೊಮ್ಮೆ ನಮ್ಮ ನಂಬಿಕೆಗಳಿಗೆ ನಿಕಟವೂ ಇರಬಹುದು, ವಿಚಾರ ಸತ್ಯವೂ ಆಗಿರಬಹುದು ಕೆಲವೊಮ್ಮೆ ಸತ್ಯಕ್ಕೆ ದೂರವು ಇರಬಹುದು. ಅಧ್ಯಯನದ ಆಧಾರದ ಮೇಲೆ ಅನೇಕ ವಿಚಾರಗಳನ್ನು ಚರ್ಚೆಗೆ ತಳ್ಳುವುದೇ  "ವಿಚಾರವಾದ". ಈ ರೀತಿಯ ಸಿದ್ದಾಂಥವನ್ನು ನಂಬಿ ವಿಷಯಗಳನ್ನು ವಿಬಿನ್ನ ದೃಷ್ಟಿಕೋನಗಳಲ್ಲಿ ನೋಡಿ ಸತ್ಯವನ್ನು ಅರಿಯುವವರು "ವಿಚಾರವಾದಿ"ಗಳು. ವಿಚಾರವಾದಿಗಳು ಪ್ರತಿಪಾದಿಸುವ ವಿಚಾರಗಳ ಮೇಲೆ ಚರ್ಚೆಗಳು ಆಗಬೇಕೆ ವಿನಃ ವಿಚಾರವಾದಿಗಳ ಕೊಲೆಗಳಲ್ಲ.  ಚರ್ಚೆಯ ಬಳಿಕ ಆ ಸತ್ಯವನ್ನು ಒಪ್ಪಿಕೊಳ್ಳುವುದು ಬಿಡುವುದು ನಮಗೆ ಬಿಟ್ಟ ವಿಷಯ.   


           ನಮ್ಮ ಸಮಾಜದಲ್ಲಿ ಅನೇಕ ವಿಚಾರವಾದಿಗಳು ಇದ್ದಾರೆ. ಕೆಲವರ ವಾದ  ನಮಗೆ ಇಷ್ಟವಾಗಬಹುದು, ಮತ್ತೆ ಕೆಲವರಿಗೆ ಇಷ್ಟವಾಗದೆಯೂ  ಇರಬಹುದು. ಈ ರೀತಿಯ ಬಿನ್ನತೆಯನ್ನು ನಮ್ಮ ಸಮಾಜ ಹೇಗೆ ಸ್ವೀಕರಿಸುತ್ತದೆ, ಹೇಗೆ ಆ ವಿಷಯವನ್ನು ಚರ್ಚಿಸುತ್ತದೆ ಎನ್ನುವುದರ ಮೇಲೆ ನಮ್ಮ ಸಮಾಜದ ಪ್ರೌಡತೆ ತಿಳಿಯುತ್ತದೆ. ವಿಚಾರವಾದ ಕೇವಲ ವಿವಾದಗಳನ್ನು ಹುಟ್ಟಿಹಾಕದೆ , ಒಂದು ವಿಷಯಕ್ಕೆ ತಾತ್ವಿಕ ಅಂತ್ಯವನ್ನು ನೀಡಬೇಕು. ಆ ರೀತಿಯ ವಿಚಾರವಾದವನ್ನು ಪ್ರತಿಪಾದಿಸುತ್ತಿದ್ದ ಅನೇಕ ಮಹಾನ್ ವ್ಯಕ್ತಿಗಳು ಶತಮಾನಗಳಿಂದಲೂ ನಮ್ಮ ಸಮಾಜದಲ್ಲಿ ಇದ್ದಾರೆ. ಆದರೆ ನಾವು ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬುದೇ ಒಂದು ದೊಡ್ಡ ಪ್ರಶ್ನೆ . ೧೨ನೆ ಶತಮಾನದಲ್ಲಿ ಬಸವಣ್ಣ ಹಾಗು ಅನೇಕ ವಚನಕಾರರು ವಿಚಾರವಾದಿಗಳಾಗಿದ್ದರೆ, ರಾಜಾರಾಂ ಮೋಹನ್ ರೋಯ್, ದಯಾನಂದ ಸರಸ್ವತಿ ಇನ್ನು ಅನೇಕ ಮಹನೀಯರು ವಿಚಾರವಾದದ  ಪರಂಪರೆಯನ್ನು ಪ್ರಾರಂಬಿಸಿದರು. ಆದರೆ ಅವರುಗಳನ್ನು ನಮ್ಮ ಸಮಾಜ ಹೇಗೆ ನಡೆಸಿಕೊಂಡಿದೆ ಎಂದು ನಮ್ಮ ಇತಿಹಾಸವೇ ಹೇಳುತ್ತದೆ. 



            ಅದು ಆಗಿನಕಾಲ, ಆದರೆ ಈ ೨೧ನೇ  ಶತಮಾನದಲ್ಲೂ ನಾವೇಕೆ ಇಷ್ಟೊಂದು ಕುಬ್ಜರಾಗಿದ್ದೇವೆ. ವಿಚಾರವಾದಕ್ಕೆ ನಮ್ಮ ಸಮಾಜದಲ್ಲಿ ಇನ್ನೂ ಬೆಲೆಯೇ ಇಲ್ಲವೇ ?  ವಿಚಾರವಾದಿಗಳನ್ನು ದ್ವೇಶಿಸುವುದರ ಬದಲು ಅವರು ಎತ್ತುವ ವಿಷಯಗಳ ಮೇಲೆ ನಾವು ಚರ್ಚಿಸಬೇಕಲ್ಲವೇ ?  ವಿಚಾರವಾದಿಗಳಿಗೆ ನೀನು ಎಡಪಂಕ್ತೀಯ , ನೀನು ಬಲಪಂಕ್ತೀಯ ಎಂಬ ಬಣ್ಣಗಳನ್ನು ಹಚ್ಚಿ, ಅವರ ವಿಚಾರಗಳಿಂದ ವಿವಾದಗಳನ್ನು  ಮಾತ್ರ ಸೃಷ್ಟಿಸುತ್ತಿದ್ದೆವೆಯೇ ಹೊರತು ಚರ್ಚೆ ಮಾಡುತ್ತಿಲ್ಲ.  ನಮ್ಮ ಸಮಾಜ ಇನ್ನೂ ಅದೆಷ್ಟು ಕೆಳಮಟ್ಟಕ್ಕೆ ಸರಿದಿದೆ ಎಂದರೆ ವಿಚಾರವಾದಕ್ಕೆ ಧರ್ಮ ಹಾಗು ಜಾತಿಗಳ ವಿಷ ಸೇರಿಸಿ ವಿಚಾರವಾದವೇ ಸರಿಯಲ್ಲ. ವಿಚಾರವಾದಿಗಳು ಆ ಧರ್ಮ ವಿರೋಧಿಗಳು, ಈ ಜಾತಿ ವಿರೋದಿಗಳು ಎಂದು ,  ಕೆಲವರಿಗೆ  ಜೀವ ಬೆದರಿಕೆ ಹಾಕಿದರೆ , ಮತ್ತೆ ಕೆಲವರ ಕೊಲೆಗಳೇ ಆಗಿ ಹೋಗಿವೆ. 

             ವಿಚಾರವಾದಿಗಳ ವಿಚಾರ ನಿಮಗೆ ಸರಿ ಅನ್ನಿಸದಿದ್ದಲ್ಲಿ ಅವುಗಳನ್ನು ನಾವು  ನಂಬುವ ಅವಶ್ಯಕತೆಯಿಲ್ಲ. ಆದರೆ ಅವರ ಆ ವಿಚಾರ ಮಾಡುವ ಮನೋಭಾವವೇ ಸರಿ ಅಲ್ಲ ಎಂದು ನಾವೇಕೆ ಅವರನ್ನು ಕೊಲ್ಲಬೇಕು ? ಈ ರೀತಿಯಾಗಿ ನಾವು ವಿಚಾರವಾದಗಳಿಗೆ  ಋಣಾತ್ಮಕವಾಗಿ ಸ್ಪಂದಿಸಿದರೆ ನಮ್ಮ ಸಮಾಜದ ಮುಂದಿನ ಗತಿಯೇನು ?.    

           ನಮ್ಮ ದೇಶ ಹಾಗೆ,  ಹೀಗೆ ಎಂದು ಹೆಮ್ಮೆಯಿಂದ  ವಾಕ್ ಸ್ವಾತಂತ್ರದ ಬಗ್ಗೆ ಮಾತನಾಡುವ ನಾವು , ಒಂದುಕಡೆ "ಸತ್ಯವೇ ದೇವರು" ಎಂದು  ಹೇಳಿದರೆ , ಮತ್ತೊಂದೆಡೆ  "ಸಿಹಿ ಸುಳ್ಳನ್ನಾದರು ಹೇಳು ಕಟು ಸತ್ಯವನ್ನು ಹೇಳಬೇಡ" ಎನ್ನುತ್ತೇವೆ. ಇದರ ಮೇಲೆ ಯಾರಾದರು ಯಾವುದೋ ಸತ್ಯವನ್ನು ಮಾತಾಡಿದರೆ ಇವನು ನಮ್ಮ ವಿರೋದಿ , ಇವನು ಅವರ ವಿರೋದಿ ಎಂದು, ಆ ವಿಚಾರ ಮಾಡಿದವನ ಜೀವಕ್ಕೆ ಕುತ್ತು ತರುತ್ತೇವೆ. ಬಿಬಿ ಕಲ್ಬುರ್ಗಿ ಕರ್ನಾಟಕದಲ್ಲಿ ಈ ದಿನ ಇದೆ ರೀತಿಯ ಹಗೆತನಕ್ಕೆ ಬಲಿಯಾದರೆ , ನರೇಂದ್ರ ಧಬೋಲ್ಕರ್ , ಗೋವಿಂದ್ ಪನ್ಸರೆ ಮಹಾರಾಷ್ಟ್ರದಲ್ಲಿ ತೀರ ಇತ್ತೀಚಿಗೆ ಬಲಿಯಾದವರು. ಇವರ ವಿಚಾರಗಳಿಗೆಲ್ಲ ಜಾತಿ,ಧರ್ಮದ ಬಣ್ಣ ಹಚ್ಚಿ,ಕೊನೆಗೆ ಜೀವ ತೆಗೆದ ನಮ್ಮ ಸಮಾಜ ನಿಜವಾಗಿಯೂ ವಿಚಾರವಾದಿಗಳಿಗೆ ಏನು ಸಂದೇಶ ನೀಡುತ್ತಿದೆ. ನಮ್ಮ ಸಮಾಜ ಇನ್ನು ವಿಚಾರಗಳನ್ನು ಜೀರ್ಣಿಕೊಳ್ಳದೊಷ್ಟು ಸಣ್ಣ ಮಟ್ಟದ್ದೆ ? 

          ಬಾಂಗ್ಲದೇಶದಲ್ಲಿ ಬರಹಗಾರ್ತಿ ತಸ್ಲಿಮ ನಸ್ರೀನ್ ವಿರೋದಿಸಿದ್ದಕ್ಕೆ , ಬ್ಲಾಗರ್ ನೆಲೊಯ್ ನೀಲ್ ಹತ್ಯಮಾಡಿದ್ದಕ್ಕೆ ಭಾರತ ಮೊಸಳೆ ಕಣೀರು ಸುರಿಸುತ್ತದೆ. ನಮ್ಮ ದೇಶಲ್ಲಿ ಹೀಗಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ ನಮ್ಮಲ್ಲೂ ಇದೆ ರೀತಿಯಲ್ಲೇ ಬಂಡಾಯ ಸಾಹಿತಿಗಳನ್ನು, ಬರಹಗಾರರನ್ನು ಹಾಗು ವಿಚಾರವಾದಿಗಳನ್ನು ಕೆಲವರು ಹೆದರಿಸುತ್ತಿದ್ದಾರೆ, ಹಲವರ  ಪ್ರಾಣವನ್ನು ಕೂಡ ನಮ್ಮ ಸಮಾಜದ ಕೆಲವು ಸಂಘಟನೆಗಳು ತೆಗೆದುಕೊಂಡಿವೆ. ಇಂಥಹ ಸಂಘಟನೆಗಳನ್ನು ಅನೇಕರು ಬೆಂಬಲಿಸುತ್ತಾರೆ.


              ಈ ರೀತಿಯಾದರೆ ಭಾರತಕ್ಕೂ, ಬಾಂಗ್ಲಕ್ಕೂ ಇರುವ ವ್ಯತ್ಯಾಸವೇನು ?, ಬಸವಣ್ಣನವರ ಪೂರ್ವಕಾಲಕ್ಕೂ ಹಾಗು ಬಸವಣ್ಣನವರ ನಂತರದ ಕಾಲಕ್ಕೂ ಆಗಿರುವ ಬದಲಾವಣೆಯಾದರು ಏನು ?? ಒಟ್ಟಾರೆ ಹೇಳುವುದಾದರೆ, ಕೇವಲ ನಂಬಿಕೆಯ ಮೇಲೆ , ಕಟ್ಟು ಕತೆಗಳ ಮೇಲೆ , ಸಾಂಪ್ರದಾಯಿಕ ಯೋಚನೆಗಳ ಮೇಲೆ ವಿಷಯವನ್ನು ನಂಬದೆ ಅದರ ಅರ್ಥ ಹಾಗು ಸತ್ಯದ ಮೇಲೆ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಲು, ನಮ್ಮನ್ನು ಸರಿ-ತಪ್ಪುಗಳ ತುಲನೆ ಮಾಡಲು ಈ ವಿಚಾರವಾದ ಪ್ರೇರೇಪಿಸುತ್ತದೆ.  ಆದರೆ ಈ ರೀತಿಯ ವಾದಗಳಿಗೆ , ಚರ್ಚೆಗಳಿಗೆ ಈ  ಪ್ರಾಣ ಹತ್ಯೆಯ ಘಟನೆಗಳು, ನಮ್ಮ ಸಮಾಜದ  ಮೇಲೆಯೇ ಹಲವಾರು ಅನುಮಾನವನ್ನು ಮೂಡಿಸುತ್ತವೆ.  ನಮ್ಮ ಸಮಾಜ ಇದನೆಲ್ಲ ವಿಚಾರ ಮಾಡುವಷ್ಟು ಪ್ರೌಡವಾಗಿದೆಯಾ?  ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ಬಂದು ನಿಲ್ಲುತ್ತದೆ.  


ನಿಮಗಾಗಿ 
ನಿರಂಜನ್ 

ಶನಿವಾರ, ಆಗಸ್ಟ್ 22, 2015

ಯಾರು ಹಿತವರು ನಿನಗೆ ಈ ಮೂವರೊಳಗೆ


                                          ಕಳ್ಳನೋ , ಸುಳ್ಳನೋ , ಮಳ್ಳನೋ ? 

ಸ್ನೇಹಿತರೆ , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಈ ಹಿಂದೆ ಬಂದಂತೆ ಮತ್ತೆ ಬಂತು, ಈ ದಿನ ಮುಗಿಯುತ್ತದೆ ಕೂಡ.  ನೀವು ಮತದಾನ ಮಾಡಿದ್ದೀರಿ, ಬದಲಾವಣೆಯನ್ನು ಸಹ ನಿರೀಕ್ಷಿಸುತ್ತಿದ್ದೀರಿ. ಅತಿಯಾದ ನಿರೀಕ್ಷೆಗಳನ್ನೂ ನೀವೇನಾದರು ಇಟ್ಟುಕೊಂಡಿದ್ದಾರೆ ಸ್ವಲ್ಪ ತಾಳಿ, ಈ ಚುನಾವಣೆಯ ಬಗ್ಗೆ ಹೇಳ್ತೀನಿ, ನಂತರ ನೀವೇ ತಿಳಿಸಿ ನಿಮ್ಮ ನಿರೀಕ್ಷೆಗಳ ಗತಿ ಏನಾಗುವುದು ಎಂದು.

          ಈಗಿನ ಚುನಾವಣೆಗಳು ಬಂದರೆ ಈ ರಾಜಕೀಯ ಪಕ್ಷಗಳಿಗೆ ಗೆಲ್ಲುವುದು ಒಂದೇ ಗುರಿಯಾದರೆ , ರಾಜಕೀಯ ಪುಡಾರಿಗಳಿಗೆ ಪಕ್ಷಗಳಿಂದ ಸಿಗುವ ಹಣ ಮಾತ್ರವೇ ಮುಖ್ಯ. ಚುನಾವಣೆಯಲ್ಲಿ ಪಕ್ಷಗಳ ಟಿಕೇಟ್ ಸಿಗಬೇಕೆಂದರೆ ಅಭ್ಯರ್ಥಿಯ ಪ್ರಾಮಾಣಿಕತೆ, ವಿದ್ಯಾಭ್ಯಾಸ , ಅವನ ಬುದ್ದಿವಂತಿಕೆ ಯಾವತ್ತು ಮಾನದಂಡ ಆಗುವುದಿಲ್ಲ. ಟಿಕೆಟ್ ಅಕಾಂಕ್ಷಿ  ಎಷ್ಟು ದುಡ್ಡು ಮಾಡಿದ್ದಾನೆ, ಅವನ ಹಿಂದೆ ಎಷ್ಟು ರೌಡಿಗಳಿದ್ದಾರೆ , ಪಕ್ಷಕ್ಕೆ ಅವನು ಎಷ್ಟು ದುಡ್ಡು ಕೊಡುತ್ತಾನೆ ಎಂಬುದು ಮಾತ್ರ ಪಕ್ಷಗಳಿಗೆ ಮುಖ್ಯ. ಅಂತವರಿಗೆ ಮಾತ್ರ ಪಕ್ಷದ ಟಿಕೇಟ್ ಖಚಿತ.    

         ರಾಜಕೀಯ ಪಕ್ಷಗಳಿಗೆ ಕಳ್ಳರುಗಳನ್ನು , ತಲೆಮರೆಸಿಕೊಂಡಿದ್ದ ರೌಡಿಗಳನ್ನು , ಪೊಲೀಸರಿಗೆ ಎಂದೂ ಸಿಗದ ಅಪರಾದಿಗಳನ್ನು ಸಮಾಜಸೇವಕರ ಹೆಸರಲ್ಲಿ ಸಮಾಜದ ಮುಖ್ಯವಾಹಿನಿಗೆ ತರಲು ಈ ಚುನಾವಣೆಗಳು ವೇದಿಕೆ ಆಗುತ್ತಿವೆ. ಪಕ್ಷಗಳು  ಅಭ್ಯರ್ಥಿಗಳಿಗೆ ಟಿಕೆಟ್ಟು ನೀಡುವ ನೆಪದಲ್ಲಿ ಕೋಟಿ ಕೋಟಿ ಹಣ ಮಾಡುತ್ತವೆ. ಅಭ್ಯರ್ಥಿಗಳು ಕೋಟಿ-ಕೋಟಿ ಹಣ, ಬ್ಯಾರಲ್ಲುಗಟ್ಟಲೆ ಹೆಂಡ ಹಂಚಿ ಮತದಾರನಿಂದ ಮತಗಳನ್ನು ಖರೀದಿಸುತ್ತಾರೆ. ತಲೆಮರಿಸಿಕೊಂಡಿದ್ದ ಕಳ್ಳ, ಸುಳ್ಳ, ಪಾತಕಿಗಳು ಚುನಾವಣೆಯಲ್ಲಿ ಜನ ನಾಯಕರಾಗಿ ಹೊರಹೊಮ್ಮುತ್ತಾರೆ. ಇಂಥವರಿಗೆ ಜನಪ್ರಿಯ ಪಕ್ಷಗಳ ಆಶಿರ್ವಾದ ಸಿಗುವುದರ ಜೊತೆಗೆ ತಮ್ಮ ಅಕ್ರಮ ಚಟುವಟಿಕೆಗಳಿಗೆ ಅಧಿಕಾರದ ಒಂದು ಭರ್ಜರಿ ಕವಚವೂ ಕೂಡ ಸಿಗುತ್ತದೆ. ಇದಕ್ಕಾಗಿಯೇ ಟಿಕೆಟ್ ಅಕಾಂಷಿಗಳು ಟಿಕೇಟಿಗಾಗಿ ಏನು ಮಾಡಲು ಸಿದ್ದರಿರುತ್ತಾರೆ.

           ಇಂಥ ಕಳ್ಳರು ಕೊನೆಗೆ ಟಿಕೆಟ್ಟು ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ನಿಲ್ಲುತ್ತಾರೆ. ಇರುವ ಪಕ್ಷಗಳೆಲ್ಲ ಇಂತವರನ್ನೇ ಚುನಾವಣೆಗೆ ನಿಲ್ಲಿಸುತ್ತವೆ. ಮೂರು ಮುಖ್ಯ ಪಕ್ಷಗಳಿದ್ದರೆ  ಚುನಾವಣೆಯ ಕಣದಲ್ಲಿ ಮೂರು ಜನ ಸಮರ್ಥ ರೌಡಿಗಳೋ , ಭ್ರಷ್ಟಚಾರಿಗಳೋ ಕಣದಲ್ಲಿ ಇದ್ದೆ ಇರುತ್ತಾರೆ. ಇಂತವರಲ್ಲಿ ನಾವು ಒಬ್ಬರಿಗೆ ವೋಟು ನೀಡುತ್ತೇವೆ , ಸಮರ್ಥರಿಲ್ಲದ ಕಾರಣ ಇಂತವರಿಗೆ ವೋಟು ನೀಡುವುದು ಅನಿವಾರ್ಯ ಕೂಡ . ಇಂಥಹ ಸನ್ನಿವೇಶದಲ್ಲಿ ಕೆಲವು ಬುದ್ದಿವಂತ ಮತದಾರರು ಚುನಾವಣ ಕಣದಲ್ಲಿರುವ ಮೂವರಲ್ಲಿ ಸ್ವಲ್ಪ ಕಡಿಮೆ ಕಳ್ಳನೋ, ಸ್ವಲ್ಪ  ಭ್ರಷ್ಟಚಾರಿಗೋ ವೋಟು ಹಾಕಿದರೆ, ಸಾಮಾನ್ಯ ಜನರು ಪಕ್ಷಗಳನ್ನು ನೋಡಿಯೋ, ಅಭ್ಯರ್ಥಿಗಳ ಆಮಿಶಗಳಿಗೆ ಬಲಿಯಾಗಿಯೋ, ಜಾತಿಯಾದಾರದ ಮೇಲೋ ವೋಟು ಹಾಕುತ್ತಾರೆ. ಅಂತು ಇಂತು ಕೊನೆಗೆ ಗೆಲ್ಲುವುದು ಒಬ್ಬ ಕಳ್ಳನೇ. ಇಂಥವರಿಂದ ನಾವೇನು ನಿರೀಕ್ಷಿಸಲು ಸಾದ್ಯ ??.  ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿ ಕೋಟಿಗಟ್ಟಲೆ ಹಣ ಖರ್ಚು ಮಾಡಿರುತ್ತಾನೆ, ಗೆದ್ದಮೇಲೆ ಅವನು ಆ ಹಣವನ್ನು ವಾಪಾಸು ಪಡೆಯಲು ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಾನೆ.  ಇಂಥಹ ಭ್ರಷ್ಟರಿಗೆ ನಮ್ಮ ಇಡೀ ವ್ಯವಸ್ತೆಯೇ ಜನರ ಹಣ ಕದಿಯಲು ಇಂಬು ನೀಡುತ್ತದೆ. ಈ ಪ್ರಕ್ರಿಯೇ ನಮ್ಮ ಸಮಾಜದ ಅಥವಾ ವ್ಯವಸ್ತೆಯ ಒಂದು  ಭಾಗವಾಗಿಯೆ ಹೋಗಿದೆ. 

        ಇಂಥಹ ವ್ಯವಸ್ತೆಯನ್ನು ನಮ್ಮ ಸಮಾಜವೇ ಒಂದು ರೀತಿಯಲ್ಲಿ ಒಪ್ಪಿಕೊಂಡಿದೆ. ಕೆಲವರು ಇದನ್ನು ವಿರೋದಿಸುತ್ತಾರೆ, ಮತ್ತೆ ಕೆಲವರು ಇದರ ವಿರುದ್ದ ಹೋರಾಟವನ್ನು ಕೂಡ ಮಾಡುತ್ತಾರೆ, ಇನ್ನು ಕೆಲವರು ಈ ಹಾಳು ವ್ಯವಸ್ತೆಯಿಂದ ದೂರವೇ ಉಳಿಯುತ್ತಾರೆ. ಕೆಟ್ಟ ವ್ಯವಸ್ತೆಯ ವಿರುದ್ದ ಹೋರಾಡುವವರಿಗೆ ನಾವು ಕೂಡ ಬೆಂಬಲ ನೀಡುವುದಿಲ್ಲ, ಕೆಲವೊಮ್ಮ ಅವರನ್ನು ನೋಡಿ ನಗುತ್ತೇವೆ. ಮಾದ್ಯಮಗಳು ಮತ್ತು ಜನರು ಕೆಟ್ಟ ವ್ಯವಸ್ತೆಯ ವಿರ್ರುದ್ದ ಹೊರಡುವವರಿಗೆ ಬೆಂಬಲ ನೀಡುವತನಕ, ಬುದ್ದಿವಂತರು, ಪ್ರಾಮಾಣಿಕರು ಚುನಾವಣೆಯಲ್ಲಿ ಭಾಗವಹಿಸುವ ತನಕ ಈ ಕೆಟ್ಟ ವ್ಯವಸ್ತೆ ಕೆಟ್ಟದ್ದಾಗಿಯೇ ಉಳಿಯುತ್ತದೆ. 

          ಇಂಥಹ ವಾತಾವರಣದಲ್ಲೂ ಕೂಡ ಇತ್ತೀಚಿಗೆ ಬೆರೆಳೆಣಿಕೆಯೊಷ್ಟು  ಸಮರ್ಥ ಸಾಮಾಜಿಕ ಕಾರ್ಯಕರ್ತರು , ಬುದ್ದಿವಂತರು, ವಿದ್ಯಾವಂತರು ರಾಜಕೀಯಕ್ಕೆ ಬಂದು ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಬಹು ಆಶಾದಾಯಕ ಬೆಳವಣಿಗೆ. ಇಂತವರನ್ನು ನಾವು ಗುರುತಿಸಿ, ಅಂತವರಿಗೆ ನಮ್ಮ ಅಮೂಲ್ಯ ವೋಟು ಹಾಕಿದರೆ ಮಾತ್ರ ರಾಜಕೀಯ ದುಷ್ಟಶಕ್ತಿಗಳನ್ನು ರಾಜಕೀಯದಿಂದ ನಾವು ದೂರವಿಡಲು ಸಾದ್ಯವಾಗದಿದ್ದರು ಸಹ,  ಅಧಿಕಾರದಿಂದ ದೂರವಿಡಬಹುದು. ಇಲ್ಲದಿದ್ದರೆ  ನಾವೆನಾದರು "ಯಾರು ಹಿತವರು ನಿಮಗೆ ಈ ಮೂವರೊಳಗೆ , ಕಳ್ಳನೋ , ಸುಳ್ಳನೋ, ಮಳ್ಳನೋ" ಎಂದು ಕೇಳಿದರೆ "ಕಡಿಮೆ ಕಳ್ಳ"  "ಸ್ವಲ್ಪ ಸುಳ್ಳ-ಮಳ್ಳ" ಎಂದು ಆಯ್ಕೆ ಮಾಡಿದರೆ, ನಮ್ಮ ನಿರೀಕ್ಷೆಗಳ  ಗತಿ ಏನಾಗಬಹುದೆಂದು  ನೀವೇ ಯೋಚಿಸಿ.
      


ನಿಮಗಾಗಿ 
ನಿರಂಜನ್

ಬುಧವಾರ, ಆಗಸ್ಟ್ 19, 2015

ರಾಮ ಮತ್ತು ಕೃಷ್ಣ ....


                                            
                                                                  ಶಾಶ್ವತ ಪ್ರೇಮ ....  

ರಾಮ ಮತ್ತು ಕೃಷ್ಣ  ಭಾಲ್ಯದಿಂದಲೂ ಸ್ನೇಹಿತರು.  ತುಂಬಾ  ಆತ್ಮೀಯರು.  ಅವರೆಷ್ಟು ಅತ್ಮೀಯರೆಂದರೆ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಕೂಡ ಇರುತ್ತಿರಲಿಲ್ಲ.  ಅದೆಷ್ಟೋ ಬಾರಿ ಸಣ್ಣ  ಪುಟ್ಟ ಜಗಳಗಳನ್ನು ಆಡಿದರೂ ಸಹ ಆ ಜಗಳಗಳು  ಕೇವಲ ಆ ಕ್ಷಣಗಳಿಗೆ  ಮಾತ್ರ ಸೀಮಿತವಾಗಿರುತ್ತಿದ್ದವು.

              ಈ ರೀತಿ ಇದ್ದ ರಾಮ ಹಾಗು ಕೃಷ್ಣರು  ದೊಡ್ಡವರಾದ ಮೇಲೆ ಉದ್ಯೋಗವನ್ನರಸಿ ತಮ್ಮ ಹುಟ್ಟೂರು ಬಿಟ್ಟು ಹೊರಟರು.  ಕೆಲಸವನ್ನು ಹುಡುಕುತ್ತ ಊರೂರು ಅಲೆದರು. ಇಬ್ಬರಿಗೂ ಒಟ್ಟಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಆದರೆ ಅವರ ಹುಡುಕಾಟ ಮಾತ್ರ ನಿಲ್ಲಲಿಲ್ಲ. ಸುತ್ತಲಿನ ಊರುಗಳು , ಪೇಟೆಗಳು, ಸುಮುದ್ರ ಬಂದರುಗಳು ಹಾಗು ಕಾಡುಗಳನ್ನು ಸುತ್ತಿದರು ಎಲ್ಲೂ ಕೆಲಸ ಸಿಗಲಿಲ್ಲ.  ಯಾರೋ ಹೇಳಿದ ಮಾತು ಕೇಳಿ ಅಲ್ಲಿರುವ ದೂರದ ಮರುಭೂಮಿಯನ್ನು  ದಾಟಿದರೆ, ಆಚೆ ಇರುವ  ಮತ್ತೊಂದು ಊರಿನಲ್ಲಿ ಕೆಲಸ ಸಿಗಬಹುದೆಂದು ನಂಬಿ , ಆ  ಮರುಭೂಮಿಯನ್ನು ದಾಟಲು ನಿರ್ಧರಿಸಿದರು.

              ಪ್ರಯಾಣ ಶುರುವಾಯಿತು, ಮರುಭೂಮಿಯನ್ನು ಅವರು ಕಾಲು ನಡಿಗೆಯಲ್ಲೇ ದಾಟಬೇಕಿತ್ತು. ನಡೆಯಲು ಭಾರ ಆಗದಿರಲಿ ಎಂದು ಸ್ವಲ್ಪ ಆಹಾರ ಹಾಗು ಒಂದು ಸಣ್ಣ  ಬಾಟಲಿಯಲ್ಲಿ ನೀರನ್ನು ತುಂಬಿಕೊಂಡಿದ್ದರು.  ಒಂದು ಪೂರ್ಣ ದಿನದ ಪ್ರಯಾಣದ ನಂತರ ಹಸಿವೆಯಾಯಿತು, ರಾಮನು ಕೃಷ್ಣನಿಗೆ ಚೀಲದಲಿದ್ದ ಆಹಾರದಲ್ಲಿ ಅರ್ಧ ಮಾತ್ರ ತಿನ್ನಲು ಹೇಳಿದನು.  ಅದೇ ರೀತಿ ಕೇವಲ ಅರ್ಧ ಆಹಾರವನ್ನು ಇಬ್ಬರು ಹಂಚಿಕೊಂಡು ತಿಂದರು.  ಮರುದಿನ ಇನ್ನರ್ಧ ಆಹಾರವನ್ನು ತಿಂದು ಮುಗಿಸಿದರು.ಅಷ್ಟೊತ್ತಿಗೆ ತಾವು ತಂದಿದ್ದ ನೀರು ಕೂಡ ಸ್ವಲ್ಪವೆ ಉಳಿದಿತ್ತು. ಮರುಭೂಮಿಯಲ್ಲಿ ಇನ್ನು ಎಲ್ಲೂ ಓಯಸಿಸ್ ಕಾಣುತ್ತಿಲ್ಲ. ಬಿಸಿಲಿನ ಬೇಗೆಯಿಂದ ಕೃಷ್ಣನಿಗೆ ತುಂಬಾ ಭಾಯಾರಿಕೆಯಾಗಿ ಬಳಲಿದ್ದ. ರಾಮನು ಕೃಷ್ಣನಿಗೆ" ಕೃಷ್ಣ ಉಳಿದಿರುವ ನೀರಿನಲ್ಲಿ ಅರ್ದವನ್ನು ಮಾತ್ರ ಕುಡಿ,ನೀರು ನಮಗೆ ಮುಂದೆ ಬೇಕಾಗುತ್ತದೆ ,  ನಮಗೆ ಮತ್ತೆಲ್ಲಿ ನೀರು ಸಿಗುತ್ತೋ ಗೊತ್ತಿಲ್ಲ" ಎಂದನು. ಆದರೆ ಭಾಯರಿಕೆಯಿಂದ ಕಂಗೆಟ್ಟಿದ್ದ ಕೃಷ್ಣ "ಇಲ್ಲ ನಾನು ಎಲ್ಲವನ್ನು ಕುಡಿಯುತ್ತೇನೆ , ಇಲ್ಲದಿದ್ದರೆ ನಾನು ಇಲ್ಲೇ ಸತ್ತೆ ಹೋಗುತ್ತೇನೆ " ಎಂದು ಕೋಪಗೊಂಡು ಹೇಳಿದ. ಅದಕ್ಕೆ ರಾಮ" ನೋಡು ಕೃಷ್ಣ ನಮ್ಮ ಮುಂದಿನ ಪ್ರಯಾಣಕ್ಕೆ ನೀರು ಮುಖ್ಯ, ಅಹಾರವಂತೂ ಖಾಲಿಯಾಗಿದೆ, ಓಯಸಿಸ್ ಸಿಗುವ ತನಕ  ನಮ್ಮಲ್ಲಿರುವ  ನೀರನ್ನೇ  ನಾವು ಸ್ವಲ್ಪ ಸ್ವಲ್ಪವೇ ಕುಡಿದು ಜೀವ ಉಳಿಸಿಕೊಳ್ಳಬೇಕು" ಎಂದನು. ಆದರೆ ಕೃಷ್ಣ ಇದನ್ನೆಲ್ಲಾ ಕೇಳದೆ ಎಲ್ಲ ನೀರನ್ನು ಕುಡಿಯಲು ಹೋದಾಗ , ರಾಮನಿಗೂ ಕೋಪ ಬಂದು ಇಬ್ಬರು ಜಗಳವಾಡಿದರು, ಆ ಜಗಳದಲ್ಲಿ ರಾಮನು ಕೃಷ್ಣನ ಕಪಾಳಕ್ಕೆ ಹೊಡೆದನು. ಕೃಷ್ಣನಿಗೆ ರಾಮನ ಮೇಲೆ ಎಲ್ಲಿಲ್ಲದ ಸಿಟ್ಟು ಬಂದಿತು. ಕೋಪಗೊಂಡು ಸುಮ್ಮನೆ ಕುಳಿತುಕೊಂಡ. ತನ್ನ ಮುಂದೆಯೇ ಇದ್ದ ಒಂದು ಸಣ್ಣ ಕಲ್ಲನ್ನು ತೆಗೆದುಕೊಂಡು ಮರಳಿನ ಮೇಲೆ " ನನ್ನ ಪ್ರಾಣ ಸ್ನೇಹಿತ ರಾಮ ನನ್ನ ಕಪಾಳಕ್ಕೆ ಹೊಡೆದ" ಎಂದು ದೊಡ್ಡದಾಗಿ ಬರೆದ. ರಾಮನಿಗೆ ಅದನ್ನು ನೋಡಿ ಬೇಜಾರು ಆಯಿತು ಆದರೂ ಸಹಿಸಿಕೊಂಡ.
 
                  ಕೆಲ ಸಮಯದ ನಂತರ ಪ್ರಯಾಣವನ್ನು ಮತ್ತೆ ಮುಂದುವರೆಸಿದರು , ಸ್ವಲ್ಪ ದೂರದಲ್ಲೇ ಒಂದು ಮರಳುಗಾಡಿನ ಓಯಸಿಸ್  ಕಾಣಿಸಿತು. ಗಿಡ-ಮರಗಳು, ಅವುಗಳ ನೆರಳು, ಕುಡಿಯಲು ಸಾಕೊಷ್ಟು ನೀರು ಅವರಿಗೆ ಹೋದ ಜೀವ ಮತ್ತೆ ಬಂದ  ಹಾಗೆ ಆಯಿತು. ಹೊಟ್ಟೆ ತುಂಬುವಷ್ಟು ನೀರು ಕುಡಿದರು, ನೆರಳಲ್ಲಿ ವಿಶ್ರಾಂತಿ ಪಡೆದರು. ನಂತರ ದಣಿದಿದ್ದ ದೇಹಗಳನ್ನು ತಂಪಾಗಿಸಲು ಅಲ್ಲೇ ಇದ್ದ ಒಂದು ಕೊಳದಲ್ಲಿ ಈಜಲು ಶುರು ಮಾಡಿದರು. ಆ ಕೊಳ ಸಣ್ಣದಿದ್ದರೂ ಆಳವಾಗಿತ್ತು. ಕೃಷ್ಣ ಏನನ್ನು ಲೆಕ್ಕಿಸದೆ ನೀರಿಗೆ ದುಮುಕಿದಾಗ, ಅದರ ಪಾತಾಳ ಸೇರಿದ, ಹೇಗೋ ಕಷ್ಟಪಟ್ಟು ಮೇಲೆ ಬಂದ. ಆದರೆ ದಡಕ್ಕೆ ಬರಲು ಕೃಷ್ಣನಿಗೆ ಸಾದ್ಯವಾಗಲಿಲ್ಲ. ಪ್ರಯಾಣದಲ್ಲಿ ದಣಿದಿದ್ದ ಕೈಕಾಲುಗಳು ಅವನಿಗೆ ಸಹಕರಿಸಲೇ ಇಲ್ಲ. ಜೋರಾಗಿ " ಕಾಪಾಡಿ , ಕಾಪಾಡಿ " ಎಂದು ಕೂಗಿಕೊಂಡ. ಪ್ರಾಣ ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ರಾಮ ನೀರಿಗೆ ದುಮುಕಿ ಕೃಷ್ಣನನ್ನು ಕಾಪಾಡಿ ದಡಕ್ಕೆ ಎಳೆದುಕೊಂಡು ಬಂದ. ತಾನು ಸತ್ತೆ ಹೋದೆ ಅಂತ ಅಂದುಕೊಂಡಿದ್ದ ಕೃಷ್ಣನ ಜೀವವನ್ನು ರಾಮ ಉಳಿಸಿದ್ದ. ರಾಮನನ್ನು ಆಲಂಗಿಸಿದ ಕೃಷ್ಣ " ರಾಮ ನೀ ನನ್ನ ಜೀವ ಉಳಿಸಿದೆ, ನೀ ನನ್ನ ನಿಜವಾದ ಪ್ರಾಣ ಸ್ನೇಹಿತ" ಎಂದನು.

                  ಆ ಕ್ಷಣದಲ್ಲೇ ಅಲ್ಲಿ ಇದ್ದ ಒಂದು  ಬಂಡೆಗಲ್ಲಿನ ಮೇಲೆ "ನನ್ನ ಪ್ರಾಣ ಸ್ನೇಹಿತ ರಾಮ ನನ್ನ ಜೀವ ಉಳಿಸಿದ" ಎಂದು ಕೃಷ್ಣ ಮತ್ತೆ ಕೆತ್ತಿದ್ದ. ಇದನ್ನು ನೋಡಿ ಆಶ್ಚರ್ಯ ಚಕಿತನಾದ ರಾಮನು ಕೃಷ್ಣನಿಗೆ ಕೇಳಿದ " ಕೃಷ್ಣ ಅಲ್ಲಿ ಮರಳಿನ ಮೇಲೆ ನನ್ನ ಸ್ನೇಹಿತ ನನ್ನನ್ನು  ಹೊಡೆದ ಅಂತ ಬರೆದೆ,  ಈಗ  ಬಂಡೆಗಲ್ಲಿನ ಮೇಲೆ ನನ್ನ ಸ್ನೇಹಿತ ನನ್ನ ಜೀವ ಉಳಿಸಿದ ಅಂತ ಬರೆದೆ, ಏಕೆ ಹೀಗೆ ಮಾಡಿದೆ ?" ಎಂದಾಗ , ಕೃಷ್ಣನು ಹೇಳುತ್ತಾನೆ " ನೋಡು ರಾಮ " ನೀ ನನ್ನ ಪ್ರಾಣ ಸ್ನೇಹಿತ, ನೀನು ನನ್ನ ಕಪಾಳಕ್ಕೆ ಹೊಡೆದಾಗ ಆ ಕ್ಷಣಕ್ಕೆ ನಾನು ಕೋಪಗೊಂಡು ಹಾಗೆ ಬರೆದಿದ್ದು ನಿಜ, ಅದು ಕೇವಲ ಕ್ಷಣಿಕ , ಬೇಕಾದರೆ ಈಗ ಹೋಗಿ ನೋಡು ಮರಳಿನ ಮೇಲೆ ಬರೆದದ್ದು ಗಾಳಿಯಿಂದ ಅಳಿಸಿ ಹೋಗಿರುತ್ತೆ. ನನ್ನ ಕೋಪ ಯಾವಗಲು ಕ್ಷಣಿಕ. ಈಗ ನಿಜವಾಗಿಯೂ ನಿನ್ನ ಮೇಲೆ ಪ್ರೀತಿಯಿಂದ ಬಂಡೆಗಲ್ಲಿನ ಮೇಲೆ ನಿನ್ನ ಒಳ್ಳೆಯತನದ ಬಗ್ಗೆ ಬರೆದಿರುವೆ ಇದು ಶಾಶ್ವತ, ಸದಾ ನೆನಪಿನಲ್ಲಿ ಇರುತ್ತದೆ, ಒಳ್ಳೆಯದನ್ನು ಮಾತ್ರ ನಾ ನೆನಪಿನಲ್ಲಿ ಇಟ್ಟುಕೊಳ್ಳು ಬಯಸುತ್ತೇನೆ" ಎಂದನು.

ಸ್ನೇಹಿತರೆ ನಾವು ಕೂಡ ಯಾವಾಗಲೂ ಇನ್ನೊಬ್ಬರ ಒಳ್ಳೆಯ ಗುಣಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ನೋಡಿಯೂ ನೋಡದಿರಬೇಕು , ಒಂದು ವೇಳೆ ನೋಡಿದರೂ ಸಹ ಮರೆಯಬೇಕು. 


ನಿಮಗಾಗಿ
ನಿರಂಜನ್

ಶುಕ್ರವಾರ, ಜುಲೈ 24, 2015

ಮದುವೆಯ ನಂತರವೂ



                       ಹೇಳಲಾಗದ ಒಂದು ಭಾವ  ...........                                                    

ನೋ ಬಿಟ್ಟು ಬಂದ ಭಾವ ಒಂದು ಕಡೆಯಾದರೆ, ತಿಂಗಳ ನಂತರ ಅವಳನ್ನು ನೋಡುವ ಖಾತರ ಮತ್ತೊಂದೆಡೆ. ಸಮಯ ಸಾಗುತ್ತಿಲ್ಲ, ಪ್ರಯಾಣ ಹಿತವಾಗಿದ್ದರು ನಿದ್ದೆ ಮಾತ್ರ ಬರುತ್ತಿಲ್ಲ. ಬೆಳಗಿನ ಜಾವ ಸುಮಾರು ೩ ಗಂಟೆ ಇರಬಹುದು, ಕಷ್ಟಪಟ್ಟು ಕಣ್ಣು ಮುಚ್ಚಿದೆ. ಗಗನಸಖಿಯೋ ಅಥವಾ ಗಗನಸಖನೋ  ಬಂದು ಏನೋ ಕೇಳಿದ ಹಾಗೆ ಆಯಿತು. ಕಣ್ಣು ಬಿಟ್ಟು ನೋಡಿದರೆ ಯಾರು ಇಲ್ಲ. ನಾ ಎಲ್ಲಿರಬಹುದೆಂದು ಕಿಟಕಿಯಲ್ಲಿ ನೋಡಿದರೆ ಬರಿ ಕತ್ತಲು. ಮತ್ತೆ ಕಣ್ಣುಮುಚ್ಚಿ ಮಲಗಿದೆ. ಸ್ವಲ್ಪ ಸಮಯದಲ್ಲೇ ಪೈಲಟ್ "ನಾವು ೩೦ ನಿಮಿಷಗಳಲ್ಲಿ ದೋಹಾ ತಲುಪುತ್ತೇವೆ " ಎಂದಾಗ ಒಂದು ಹಂತದ ಪ್ರಯಾಣ ಮುಗಿದಿತ್ತು. 

              ನಿದ್ದೆ ಇಲ್ಲದ ಆ ಅರೆಗಣ್ಣುಗಳಲ್ಲಿ ಕಿಟಕಿಯಲ್ಲಿ ನೋಡಿದೆ , ಸುತ್ತಲು  ನೀಲಾಕಾಶ, ಅಲ್ಲಲ್ಲಿ ಶುಭ್ರ ಬಿಳಿ ಮೋಡಗಳ ರಾಶಿಗಳು. ಬಂಗಾರದಳದಿಯ ಬಣ್ಣದಿಂದ ಕಂಗೊಳಿಸುತ್ತಿದ್ದ ಪೂರ್ವ ಸೂರ್ಯನಾಗಮನಕ್ಕೆ ಸಜ್ಜಾಗಿದ್ದ. ಅಮ್ಮ ಮತ್ತು ಆತ್ಮೀಯರನ್ನು ಬಿಟ್ಟು ಬಂದಾಗ ಆಗಿದ್ದ ದುಃಖಕ್ಕೆ ಈ ಅದ್ಬುತ ವಾತಾವರಣ  ಸ್ವಲ್ಪ ಕಡಿವಾಣ ಹಾಕುತಿತ್ತು. ನನ್ನ  ಮತ್ತು ನನ್ನವಳ ಆ ಒಂದು ತಿಂಗಳ ಅಗಲಿಕೆಯ ದುಃಖವೂ ಕೂಡ ಕತ್ತಲು ಕಳೆದಂತೆ ಕಳೆಯುತ್ತಿತ್ತು. ಅಷ್ಟರಲ್ಲೇ ವಿಮಾನ ದೋಹಾ ನಿಲ್ದಾಣವನ್ನು ತಲುಪಿತು. ಒಂದು ವಿಮಾನ ಇಳಿದು, ಲಂಡನ್ ಗೆ ತೆರೆಳುವ ಮತ್ತೊಂದು ವಿಮಾನವನ್ನು ನಾನು ಏರಿದಾಗ ನಿದ್ದೆ ಸಂಪೂರ್ಣ ಮಾಯವಾಗಿತ್ತು.  ಇನ್ನೇನು ನಾ ಲಂಡನ್ ತಲುಪುತ್ತೇನೆ , ಅವಳನ್ನು ನೋಡುತ್ತೇನೆ ಎನ್ನುವ ಹಂಬಲ ನನ್ನ  ಮನಸ್ಸಿನಲ್ಲೂ ಹುಟ್ಟಿತ್ತು, ಪೂರ್ವ ದಿಕ್ಕಿನಲ್ಲಿ ಎಳೆಯ ಸೂರ್ಯ ಉದಯಿಸಿದ ಹಾಗೆ.  ನೋಡು ನೋಡುತ್ತಿದ್ದಂತೆಯೇ ವಿಮಾನ ಮತ್ತೊಮ್ಮೆ ಅಕಾಶಕ್ಕೇರಿತು. ಮನಸ್ಸು ಹಗುರವಾಯಿತು, ವಿಮಾನ ತೇಲುತ್ತ ತೇಲುತ್ತಾ  ಆಕಾಶದಲ್ಲಿ ಸಾಗಿದಂತೆ, ನನ್ನ ಮನಸ್ಸು ಕೂಡ ನನ್ನವಳನ್ನು ಕಾಣುವ, ತಬ್ಬುವ ತವಕದಲ್ಲಿ ತೇಲುತಿತ್ತು. 

            ಎರೆಡನೆ ಹಂತದ ಪ್ರಯಾಣವನ್ನು ಶುರು ಮಾಡಿದ ಈ ವಿಮಾನ ಲಂಡನ್ ತಲುಪಲು ಇನ್ನು ಹತ್ತು ಗಂಟೆ ಬೇಕು. ಕಾಲ ಕಳೆಯುವುದು ಕಷ್ಟವಾಗುತ್ತಿದೆ. ಮುಂದಿದ್ದ ಮನೋರಂಜನೆಯ ಪರಿಕರಗಳು ನಿರುಪಯುಕ್ತವೆನಿಸುತ್ತಿವೆ. ನಿದ್ದೆ ಕಣ್ಣು ಬಿಟ್ಟಾಗ  ಮಾತ್ರ  ಬರುತ್ತಿದೆ , ಕಣ್ಣು ಮುಚ್ಚಿದರೆ ಹೋಗುತ್ತಿದೆ. ಆಗಾಗ ಅಲ್ಪ-ಸ್ವಲ್ಪ ನಿದ್ದೆ ಮಾಡಿ ಕಣ್ಣು ಬಿಟ್ಟು ನೋಡಿದರೆ ಇನ್ನು ಲಂಡನ್ ಬಹಳ ದೂರವೇ ಇದೆ. ಮತ್ತೊಮ್ಮೆ ವಿಮಾನ ಕತ್ತಲಲ್ಲಿ ಪ್ರವೇಶ ಮಾಡಿದಂತೆ ಭಾಸವಾಯಿತು. ನಿಜ ಮತ್ತೆ ಸ್ವಲ್ಪ ಕತ್ತಲು ಸುತ್ತಲು ಆವರಿಸಿತು. ಯುರೋಪ್ ಹಾಗು ಏಷ್ಯ ಖಂಡಗಳ ನಡುವಿರುವ ಸಮಯದ ಅಂತರವೇ ಇದಕ್ಕೆ ಕಾರಣ. ಕೆಲವು ನಿಮಿಷಗಳ ನಂತರ ನಿದಾನವಾಗಿ ಇನ್ನೊಂದು ಬಾರಿ ಸೂರ್ಯ ಉದಯಿಸಿದ ಹಾಗೆ  ಕಾಣಿಸಿತು. ಮತ್ತೊಮ್ಮೆ ನನ್ನ ಮನಸ್ಸಿನ್ನಲ್ಲಿ ಆಗ ತಾನೇ ಮಲಗಿದ್ದ ಭಾವನೆಗಳು ಮೇಲೆದ್ದವು. ಇನ್ನೂ  ೫ ಗಂಟೆಗಳ  ಕಾಲ ಪ್ರಯಾಣವಿದೆ ಲಂಡನ್ ತಲುಪಲು. ಕೇವಲ ಆರೇಳು ಗಂಟೆಗಳ ಅವದಿಯಲ್ಲೇ ಇದು ನನ್ನ ಎರೆಡನೆಯ  ಸೂರ್ಯೋದಯದ ದರ್ಶನ.
 
              ನನಗೇನೋ ಪ್ರಯಾಣ ಸಾಗಿದಂತೆ ಅನ್ನಿಸಲೇ ಇಲ್ಲ, ಆದರೂ  ಸಹ ನಮ್ಮ ಪೈಲಟ್ ನಿಗಧಿತ ಸಮಯಕ್ಕೂ ಮುನ್ನವೇ ಲಂಡನ್ನಿನ ಸರಹದ್ದಿಗೆ ತಲುಪಿದ್ದ. ಸಮಯಕ್ಕೂ ಮುಂಚಿತವಾಗಿಯೇ ನಮ್ಮ ವಿಮಾನ ಅಲ್ಲಿಗೆ  ಬಂದಿದ್ದರಿಂದ ATS ಲಂಡನ್  ಇಂದ ವಿಮಾನಕ್ಕೆ ಹೀತ್ರೋ ನಿಲ್ದಾಣದಲ್ಲಿ ಇಳಿಯಲು  ರಹದಾರಿ ಸಿಗಲಿಲ್ಲ. ಈ ಕಾರಣಕ್ಕಾಗಿ ಲಂಡನ್  ಸರಹದ್ದಿನಲ್ಲೇ,  ನೀಲಾಶದಲ್ಲಿ ಹದ್ದು ಹಾರಾಡಿದಂತೆ ನಮ್ಮ  ವಿಮಾನವು ಕೂಡ ರಹದಾರಿಗೆ ಕಾಯುತ್ತ ಆಕಾಶದಲ್ಲೇ ಹಾರಡತೊಡಗಿತು.  ಆ ವೇಳೆಗಾಗಲೇ ನನಗೆ  "ನಾ  ಅದೆಷ್ಟೋತ್ತಿಗೆ ವಿಮಾನ  ಇಳಿಯುತ್ತೇನೋ, ಯಾವಾಗ ಅವಳನ್ನು ನೋಡುತ್ತೇನೋ"  ಅನ್ನುವ ಆಸೆ ಅತಿಯಾಗಿತ್ತು. ಈ ಹಾರಾಟದಲ್ಲಿ ನನ್ನ ಕಣ್ಣುಗಳೆನೋ ಲಂಡನ್ನಿನ ಮೇಲ್ನೋಟವನ್ನು ಸವಿದವಾದರೂ, ಆ ಸಮಯದಲ್ಲಿ ಬೇರೆ ಏನೋ ಬಯಸುತ್ತಿದ್ದ ನನ್ನ ಮನಸ್ಸಿಗೆ ಅಷ್ಟೊಂದು ಮುದ ನೀಡಲಿಲ್ಲ. 

               ವಿಮಾನಕ್ಕೆ  ನಿಲ್ದಾಣದಲ್ಲಿ ಇಳಿಯುವ ತವಕ,  ನನಗೆ ನನ್ನವಳ ಸೇರುವ ತವಕ. ಕೆಳಗೆ ನೋಡಿದರೆ ನನ್ನ ಕಣ್ಣುಗಳಿಗೆ ಆ ವಿಮಾನ ನಿಲ್ದಾಣ ಕಾಣುತ್ತಿದೆ .  "ಅಲ್ಲಿ ನನ್ನವಳು ನನಗಾಗಿ ಕಾಯುತ್ತಿದ್ದಾಳೆ , ನಾನು ಅವಳನ್ನು ನೋಡಬೇಕು, ಅದೊಷ್ಟು ಬೇಗ ಅವಳನ್ನು ಸೇರ ಬೇಕು " ಎನ್ನುವ ಆಸೆ ಹುಚ್ಚಿನಂತೆ ಹೆಚ್ಚುತ್ತಿದೆ. ಹೇಗೆ ವಿಮಾನ ಒಂದೇ ಪಥದಲ್ಲಿ ಈ ಸರಹದ್ದನ್ನು ಸುತ್ತುತಿದೆಯೋ, ಹಾಗೆಯೇ ನನ್ನ ಮನಸ್ಸು ಕೂಡ ಅದೇ ನಿಲ್ದಾಣದಲ್ಲಿ ನನಗಾಗಿ ಕಾಯುತ್ತಿರುವ ನನ್ನವಳನ್ನು ಒಂದೇ ಸಮನೆ ಸುತ್ತುತಿದೆ.  ಒಂದೊಷ್ಟು ಸಮಯದ ನಂತರ ATS ಲಂಡನ್ ನಿಂದ ರಹದಾರಿ ಸಿಕ್ಕಿತು. ನಮ್ಮ  ವಿಮಾನ ಜೋರಾಗಿ ಭೂಮಿಗೆ ಹತ್ತಿರವಾಗುತ್ತಿದೆ, ನನ್ನ ಮನಸ್ಸು ಸಹ ನನ್ನವಳ ನಿಜ-ಸಾಂಗತ್ಯಕ್ಕೆ ಹತ್ತಿರವಾಗುತ್ತಿದೆ. ವೇಗದಲ್ಲಿ ವಿಮಾನ ಭೂಮಿಯ ಕಡೆ ಬಂದರೆ , ಅದಕ್ಕೆ ಹತ್ತುಪಟ್ಟು ವೇಗದಲೇ ನನ್ನವಳ ಮೇಲಿನ ನನ್ನ ಮೋಹ ಆಕಾಶಕ್ಕೆ ಏರುತ್ತಿದೆ. ಕೆಲವು ನಿಮಿಷದಲ್ಲೇ ವಿಮಾನ ನಿಲ್ದಾಣದಲ್ಲಿ ನಿಂತಿತು. ನನ್ನ ಮನಸ್ಸು ಮಾತ್ರ ಆಸೆಯ ಓಟ ಶುರು ಮಾಡಿತು.  

              ಸರಸರನೆ ಇಳಿದು , ಎಲ್ಲ ಹಂತದ ವ್ಯವಹಾರಗಳ ಮುಗಿಸಿ, ಹೀತ್ರೋ ವಿಮಾನ ನಿಲ್ದಾಣದಲ್ಲಿ ನನಗಾಗಿ ಕಾಯುತ್ತಿದ್ದ ನನ್ನವಳ ಮೊಬೈಲ್ಗೆ ಕರೆಮಾಡಿ ನನ್ನ ಕುಶಲೋಪರಿ ಹೇಳುತ್ತಾ, ನಿಲ್ದಾಣದಲ್ಲಿ ಅವಳಿರುವ ಕಡೆಗೆ ನಾನು ನೆಡೆಯುವಾಗ , ಏನೋ ಒಂದು ಹೇಳಲಾಗದ ಭಾವ, ಯಾವುದೋ ಮೋಹ ನನ್ನನ್ನು ಅವಳತ್ತ ಸೆಳೆಯುತ್ತಿದೆ. ಅದೇನು ಹುಚ್ಚು ಪ್ರೀತಿಯೋ, ಹೆಚ್ಚು ಪ್ರೇಮವೋ ಗೊತ್ತಿಲ್ಲ. ಆದರೂ ಅದೊಂದು ಸವಿಯಲೇಬೇಕಾದ ಅದ್ಭುತಭಾವ. ಕಣ್ಣಳತೆಯ ದೂರದಲ್ಲಿ ನನಗಾಗಿ ಕಾಯುತಿದ್ದ ಅವಳನ್ನು, ನನ್ನ ಕಣ್ಣುಗಳು ಒಂದೇ ಕ್ಷಣದಲ್ಲಿ ಪತ್ತೆ ಹಚ್ಚಿದವು. ಕಾಲಗಳು ತಮಗೆ ತಾವೇ ವೇಗ ಹೆಚ್ಚಿಸಿಕೊಂಡವು ಅವಳಿದ್ದ ಕಡೆಗೆ. ಅವಳು ಹತ್ತಿರವಾದಂತೆ ನನ್ನ ಕೈಗಳು ತಮ್ಮ ಹಿಡಿತದಲಿದ್ದ ಲಗ್ಗೇಜನ್ನು ತಾವೇ ಬಿಟ್ಟುವು. ಪ್ರಪಂಚದ ಅರಿವಳಿದು ನನ್ನ ಮಾತುಗಳು ಮರೆಯಾಗಿ, ನಾ ಮೋಹದಲಿ ನನ್ನವಳ ಮೈತಬ್ಬಿದೆ . 


ನಿಮಗಾಗಿ 
ನಿರಂಜನ್

ಸೋಮವಾರ, ಜುಲೈ 20, 2015

Dairy Farm Story ..........


ನನ್ನ ಕನಸನ್ನು ನಾ ಬೆನ್ನುಹತ್ತಿ .....

ನಗೆ  ಅನ್ನಿಸಿದ್ದನ್ನು ಮಾಡಬೇಕು, ನನ್ನ ಇಷ್ಟದಂತೆ ನಾನು ಜೀವಿಸಬೇಕು ಎನ್ನುವ ಹಂಬಲ ಯಾರಿಗೆ ತಾನೇ ಇರುವುದಿಲ್ಲ. ಈ ರೀತಿಯ ಹಂಬಲವೇನೋ ಎಲ್ಲರಿಗೂ ಇದ್ದೆ ಇರುತ್ತದೆ. ಸದ್ಯಕ್ಕೆ ಆ ತರಹದ ಹುಚ್ಚು ಕನಸುಗಳು ನಮಗೆ ಇಲ್ಲವಾದಲ್ಲಿ, ಮೊಂದೊಂದು ದಿನ ಅವೇ ಕನಸುಗಳು ತಾವಾಗಿಯೇ ನಮ್ಮನ್ನು ಬೆನ್ನುಹತ್ತಿ ಬಂದೆ ಬರುತ್ತವೆ. ಕನಸುಗಳು ಕೆಲವರಿಗೆ ಸ್ವಲ್ಪ ಜಲ್ದಿ, ಮತ್ತೆ ಕೆಲವರಿಗೆ ಸ್ವಲ್ಪ ತಡವಾಗಿ ಬೆನ್ನುಹತ್ತುತ್ತವೆ. 

               ಕನಸುಗಳನ್ನು ಸಾಕಾರಗೊಳಿಸಲು ನಮಗೆ ನೂರೆಂಟು ದಾರಿಗಳು ಇರುತ್ತವೆ, ಅದೇ ರೀತಿಯಾಗಿ ನೊರೆಂಟು ಅಡೆತಡೆಗಳು ಕೂಡ ಬರುತ್ತವೆ. ಕನಸಿನ ಆಸೆಯ ಬಗ್ಗೆ ರಿವಿದ್ದರೂ ಕೂಡ, ಆಸೆಯ ದಿಸೆಯಲ್ಲಿ ಸಾಗಲು ನಾವು ಅನೇಕ  ಬಾರಿ ಕೇವಲ ಯೋಚಿಸಿ ಕಾರ್ಯ ಪ್ರವೃತ್ತರಾಗಲು ಮಾತ್ರ ವಿಫಲವಾಗುತ್ತೇವೆ. ಇಚ್ಚಾಶಕ್ತಿಯ ಕೊರತೆ, ಸೋಲಿನ ಭಯ, ಸಾಮಾಜಿಕ ಹಾಗು ಕೌಟಂಬಿಕ ಒತ್ತಡಗಳು, ಸಮಾಜದ ಪ್ರತಿಕ್ರಿಯೆ, ಲಾಭ-ನಷ್ಟಗಳ ತುಲನೆ , ಇನ್ನು ಅನೇಕ ಋಣಾತ್ಮಕ  ಅಂಶಗಳು ನಮ್ಮ ಕನಸುಗಳನ್ನು  ಬೆನ್ನು ಹತ್ತಲು ಬಿಡುವುದಿಲ್ಲ. ಆದರೆ  ಇವೆಲ್ಲವನ್ನೂ ಲೆಕ್ಕಿಸದೆ , ಇವುಗಳನ್ನು ಮೀರಿ ನಡೆಯುವವ  ಮಾತ್ರ ತನ್ನ ಕನಸುಗಳನ್ನ ನನಸಾಗಿಸಿಕೊಳ್ಳುತ್ತಾನೆ. ಅಂತವರು ಮಾತ್ರ ಜೀವನದಲ್ಲಿ ಸಾರ್ತಕಭಾವವನ್ನು  ಒಂದಲ್ಲ ಒಂದು ದಿನ ಕಂಡೇ ಕಾಣುತ್ತಾರೆ.

              ಕೆಲವರಿಗೆ ವೃತ್ತಿಯಲ್ಲಿ ಏನೋ ಸಾದಿಸಬೇಕು ಎನ್ನುವ ಕನಸು, ಮತ್ತೆ ಕೆಲವರಿಗೆ ಪ್ರವೃತ್ತಿಯಲ್ಲಿ ಏನಾದರು ಸಾದಿಸುವ ಕನಸು.  ನಿಜವಾದ ಕನಸನ್ನು ಬೆನ್ನು ಹತ್ತುವವರಿಗೆ ಲಾಭ ನಷ್ಟಗಳ ಪರಿವೇ ಇರುವುದಿಲ್ಲ , ಇರಲು ಕೂಡದು. ಕಂಡ ಕನಸನ್ನು ಸಾಕಾರಗೊಳಿಸುವ ಆ ಹಾದಿಯಲ್ಲಿ ನಮಗೆ ಸಿಗುವ ಸಾರ್ಥಕತೆಯ ಭಾವ ಹಾಗು ನೆಮ್ಮದಿ ಮತ್ಯಾವ ಕೆಲಸದಲ್ಲೂ ನಾವು ಅನುಭವಿಸಲು ಸಾದ್ಯವಿಲ್ಲ.

             ಅದೇ ರೀತಿಯ ಆಸೆ ಹಾಗು ಕನಸು ಮೊದಲಿಂದಲೂ ಕೂಡ ನನಗೂ ಒಂದು ಇದೆ. ನನ್ನ ಬಹುಪಾಲು ಬಾಲ್ಯವನ್ನು  ಗ್ರಾಮೀಣ ಪ್ರದೇಶದಲ್ಲೇ ಕಳೆದ ನನಗೆ ನನ್ನ ಬೇರುಗಳು ಮಾತ್ರ ಇನ್ನು ಅಲ್ಲಿಯೇ ಇವೆ. ಹಳ್ಳಿಗಾಡಿನಲ್ಲಿಯೇ ಏನಾದರು ಮಾಡಬೇಕೆನ್ನುವ ಹಂಬಲ ಕೂಡ ನನಗಿದೆ. ದನಕರುಗಳ ಮೇಲಿನ ಪ್ರೀತಿ, ಏನಾದರು ವಿಬಿನ್ನವಾದ ಕೆಲಸವನ್ನು ಮಾಡುಬೇಕೆನ್ನುವ ಹಂಬಲದಿಂದ ನಾನು ಹೈನುಗಾರಿಕೆಯನ್ನು ನನ್ನ ಮತ್ತೊಂದು ಪ್ರವೃತ್ತಿಯನ್ನಾಗಿಸಿ ಪ್ರಾರಂಬಿಸಿದ್ದೇನೆ. ಇದೇ ಹೈನುಗಾರಿಕೆಯಲ್ಲಿ ಯಶಸ್ಸು ಕಾಣುವ ಕನಸನ್ನು ನಾನು ಸದ್ಯಕ್ಕೆ ಬೆನ್ನುಹತ್ತಿರುವೆ. ಹೈನುಗಾರಿಕೆಯನ್ನು ಪ್ರವೃತ್ತಿಯಾಗಿ ನಾನು ಪ್ರಾರಂಭ ಮಾಡಬೇಕು ಎಂದಾಗ  ನನ್ನ ಹೆಂಡತಿ, ನನ್ನ ಸಹೋದರ-ಸ್ನೇಹಿತರು ಹುಬ್ಬೇರಿಸಿದ್ದರು. "Mtech ಊದಿ ದನ ಕಾಯ್ತಾನೆ ಅಂತೆ" ಅಂತಾನು ಕೆಲವರು ಅಂದ್ರು. ಆದರು ಏನೋ ಒಂದು ಕೆಟ್ಟ ಹಟದಿಂದ ಮುನ್ನುಗ್ಗಿ ಅವರೆಲ್ಲರನ್ನು ಒಪ್ಪಿಸಿದೆ. ಇವರೆಲ್ಲರನ್ನು ಒಪ್ಪಿಸಿದ್ದೆ ನನ್ನ ಮೊದಲ ಸಾದನೆ. ಮೊದಲು ನನ್ನ ಹೆಂಡತಿ ಶೋಭಾ ಒಪ್ಪಿದಳು, ನಂತರ ನನ್ನ ಸಹೋದರ ಸುರೇಶ, ನಂತರ ತಮ್ಮ ಮೇಘ. ಹೀಗೆ ನನ್ನ ಪ್ರವೃತ್ತಿಯನ್ನು ಸಾಕಾರಗೊಳಿಸುವ ಹಾದಿಯಲ್ಲಿ ಎಲ್ಲರು ಒಟ್ಟಾಗಿ ನಡೆಯುತ್ತಿದ್ದೇವೆ.ಇವರೆಲ್ಲರ ಪರಿಶ್ರಮದಿಂದಲೇ ಕಳೆದ ತಿಂಗಳಿಂದ ನಮ್ಮ ಡೈರಿಫಾರ್ಮ್ ನಮ್ಮ ಹುಟ್ಟೂರಿನಲ್ಲಿ ಶುಭಾರಂಭಗೊಂಡಿದೆ. ವೈಜ್ಞಾನಿಕ ಅಂಶಗಳ ಅಳವಡಿಕೆಸಿಕೊಂಡು ಒಂದು ಮಾಧರಿ ಡೈರಿ ಫಾರ್ಮ ಮಾಡುವ ಉದ್ದೇಶ ನಮ್ಮದು. ನನ್ನ ಕನಸಿನ ಒಂದು ಹಂತವಂತೂ ಈಗ ಸಾಕಾರಗೊಂಡಿದೆ. ಆಸೆಯೊಂದಿದ್ದರೆ ಎಲ್ಲವನ್ನು ನಾವು ಮಾಡಿಯೇ ಮಾಡುತ್ತೇವೆ ಎಂಬುದು ನನಗೊಂತು ಸದ್ಯಕ್ಕೆ ಅರಿವಾಗಿದೆ.  


            ಪೇಟೆಯ ಜೀವನ, ಸಾಫ್ಟ್ವೇರ್ ವೃತ್ತಿ , ನೆಮ್ಮದಿ ಕೊಡದ ಸುಳ್ಳು ಸಡಗರದ ಜೀವನ ಶೈಲಿ, ಇನ್ನು ಅನೇಕ ಅಂಶಗಳು ಮೊಂದೊಂದು ದಿನ ನನಗೆ  ಸಾಕಪ್ಪ ಸಾಕು ಎನ್ನಿಸುವುದು ನಿಶ್ಚಿತ. ಆ ಸಮಯದಲ್ಲಿ ನಾನು ಫುಲ್ ಟೈಮ್ ದನಕಾಯುವ ಕೆಲಸ ಮಾಡಿಕೊಂಡಿರಬೇಕು ಎನ್ನುವುದೇ ನನ್ನ ಆಸೆ. ನಾನು ನನ್ನ ಹೊಲದಲ್ಲಿ ದನಕಾಯುವಾಗ ನನ್ನ ಹೆಂಡತಿ ನನಗೆ ಮಧ್ಯಾನದ ಊಟಕ್ಕೆ ರೊಟ್ಟಿ-ಬುತ್ತಿ ತಂದೆ ತರುತ್ತಾಳೆ ಎನ್ನುವುದು ನನ್ನ ಮತ್ತೊಂದು ಕನಸು.

ನಿಮಗಾಗಿ 
ನಿರಂಜನ್  

ಬುಧವಾರ, ಮಾರ್ಚ್ 25, 2015

ನಮ್ಮ ಸರ್ಕಾರ



ಹಣ 

ತಿಂದು ತೇಗ್ತಾರೆ
ನಮ್ಮ ಹಣ..
ಎದ್ದು ಕೇಳಿದರೆ
ಬೀಳುತ್ತೆ
ನಮ್ಮದೇ ಹೆಣ ...

ಆಚಾರ 

ಎಲೆಲ್ಲೂ ಬ್ರಷ್ಟಾಚಾರ
ಹೇಳುವುದು ಮಾತ್ರ
ಆಚಾರ ,
ಜನರ ಆಹಾಕಾರ
ಕೇಳಲ್ಲ ಸಿದ್ದು
ಸರ್ಕಾರ ...

ಮುದ್ದು

 ಮುದ್ದಿನಿಂದ 
 ಅಧಿಕಾರಕ್ಕೀರಿ'ಸಿದ್ದ'
 ಜನತೆಗೆ...
 ಸಿದ್ದುವಿನಿಂದ
 ಅನ್ಯಾಯ,ಅಕ್ರಮಗಳ ಗುದ್ದು ...


ನಿಮಗಾಗಿ
ನಿರಂಜನ್ 

ಶುಕ್ರವಾರ, ಮಾರ್ಚ್ 20, 2015

World Sparrow Day

                                           ಗುಬ್ಬಿಗಳು ಹಾಗು ಅವುಗಳ ಆವಾಸ ....

ಸ್ನೇಹಿತರೆ , ನಾವು ಚಿಕ್ಕವರಿದ್ದಾಗ ಕಾಗಕ್ಕ-ಗುಬ್ಬಕ್ಕನ ಕತೆಗಳನ್ನ ನಮ್ಮ ಅಜ್ಜಿಯರಿಂದ,ಅಪ್ಪ-ಅಮ್ಮನಿಂದ , ಪಂಚತಂತ್ರ ಕತೆಗಳಲ್ಲೂ ಬಹಳ ಕೇಳಿದ್ದೇವೆ. ಹಾಗೆಯೇ ಗುಬ್ಬಿಗಳ ಬಗ್ಗೆ ವಿಶೇಷವಾಗಿ ಅನೇಕ ಕಲ್ಪನೆಗಳನ್ನು ಮಾಡಿಕೊಂಡು, ಹಾರುವ ಹಕ್ಕಿ-ಪಕ್ಷಿಗಳನ್ನೂ ನೋಡಿ ಆನಂದವನ್ನು ಸಹ ಪಟ್ಟಿದ್ದೇವೆ. ನಮಗೆ ದಿನಬೆಳಗಾದರೆ ಮನೆಯ ಸುತ್ತಮುತ್ತಲಿನ ಗಿಡಗಳಲ್ಲಿ, ಹೂಬಳ್ಳಿ-ಬೇಲಿಗಳಲ್ಲಿ, ಎಲ್ಲೆಂದರಲ್ಲಿ ಗುಂಪು-ಗುಂಪು ಸುಂದರ ಗುಬ್ಬಿಗಳ ಕಾಣುತ್ತಿದ್ದವು. ಅವು ನಮ್ಮ ಜೊತೆ-ಜೊತೆಯಲ್ಲೇ ವಾಸಮಾಡುತ್ತಿದ್ದವು. ಅವುಗಳಿಂದ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಅನೇಕ ಉಪಯೋಗಗಳು ಸಹ ಇದ್ದವು. ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಗುಬ್ಬಿಗಳು ಸಹ ತಮ್ಮ ಕಾರ್ಯ ನಿರ್ವಹಿಸುತ್ತಿದ್ದವು.  ಆದರೆ ಈಗ ಪರೀಸ್ತಿತಿ ಸಂಪೂರ್ಣ ಬದಲಾಗಿದೆ, ಅಲ್ಲವೇ ?



ಕೆಲವು ವರ್ಷಗಳ ಹಿಂದೆ, ನಮ್ಮ ಅದೃಷ್ಟಕ್ಕಾದರು  ಕತೆಗಳಲ್ಲಿ ಕೇಳಿದ ಗುಬ್ಬಿಗಳನ್ನು ನಮ್ಮ ಕಣ್ಣಲ್ಲೇ, ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ನೋಡುವ ಅವಕಾಶವಾದರೂ ಇತ್ತು. ಆದರೆ ಈಗ ಕಾಗಕ್ಕ ಅಲ್ಲಿ-ಇಲ್ಲಿ ಕಂಡರೂ , ಗುಬ್ಬಕ್ಕನ ಮಾತ್ರ ಕಾಣ ಸಿಗುವುದಿಲ್ಲ. ಕಾರಣ , ನಾಗರೀಕತೆಯ ಉತ್ತುಂಗದ ಶಿಖರವೇರುವ ಹಾತುರದಲ್ಲಿ , ನಾವು ಗುಬ್ಬಿಗಳ ಆವಾಸಕ್ಕೆ ದಕ್ಕೆ ತಂದಿದ್ದವೆ. ಸಂಪೂರ್ಣ ನಗರೀಕರಣ, ಮರಗಿಡಗಳ ನಾಶ, ಮನೆಯ ಸುತ್ತಮುತ್ತ ಸ್ವಲ್ಪವೂ ಹಸಿರು ಬೆಳೆಯಲು ಬಿಡದೆ ಕಾಂಕ್ರೀಟುಕರಣ ಮಾಡುವುದರ  ಫಲವಾಗಿ, ನಮಗೆ ಇಂದು ಗುಬ್ಬಿಗಳು ನಗರ ಪ್ರದೇಶದಲ್ಲಿ ಕಾಣ ಸಿಗುತ್ತಿಲ್ಲ, ಒಂದು ಅರ್ಥದಲ್ಲಿ ನಗರಗಳಲ್ಲಿ ಗುಬ್ಬಿಗಳೇ ನಾಶವಾಗಿವೆ. ಹಳ್ಳಿಗಳಲ್ಲಿ ಕೂಡ ಅವುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ.  

ಇದನ್ನು ಅರಿತ ಭಾರತದ ಒಂದು ಸಂಸ್ಥೆ " Nature Forever Society" ಮಾರ್ಚ್ ೨೦ ನ್ನು ಪ್ರಪಂಚದ ಗುಬ್ಬಿ ದಿನವನ್ನಾಗಿ ಆಚರಿಸುವುದರ ಜೊತೆಗೆ , ಜನರಲ್ಲಿ ಗುಬ್ಬಿಗಳ ಹಾಗು ಅವುಗಳ ಆವಾಸದ ಬಗ್ಗೆ ಜಾಗೃತಿ ಮೂಡಿಸಲು ಒಂದು ಒಳ್ಳೆಯ ಚಿಕ್ಕ ಹೆಜ್ಜೆಯನ್ನಿಟ್ಟಿತು. ಕಳೆದ ೫ ವರ್ಷಗಳ ಕೆಳಗೆ ಭಾರತದಲ್ಲಿನ ಈ ಒಂದು ಚಿಕ್ಕ ಸಂಸ್ಥೆ ಪ್ರಾರಂಬಿಸಿದ ಈ ಗುಬ್ಬಿ ದಿನಾಚರಣೆ ಹಾಗು ಅದರ ಉದ್ದೇಶವನ್ನು ಅರಿತ ಅನೇಕ ಅನೇಕ ರಾಷ್ಟ್ರಗಳು, ಇಂದು ತಮ್ಮ ದೇಶಗಳಲ್ಲೂ ಗುಬ್ಬಿಗಳ ಹಾಗು ಇತರೆ ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು " World Sparrow Day" ಎಂದು ಘೋಷಿಸಿ , ಆಚರಣೆಯನ್ನು ಮಾಡುತ್ತಾರೆ. 

ಗುಬ್ಬಿಗಳು ನಮ್ಮ ಬೆಳೆಗಳಲ್ಲಿನ ಕೀಟಗಳನ್ನು ತಿನ್ನುವುದರಿಂದ ರೈತನಿಗೆ ಸಹಾಯವಾಗಿವೆ. ಅದೇ ರೀತಿ ಮನೆಯ ಸುತ್ತಮುತ್ತಲಿನ ಗಿಡಗೆಂಟೆಗಳಲ್ಲಿನ ಅನೇಕ ಕೀಟಗಳನ್ನು ತಿಂದು ನಮ್ಮ ಸುತ್ತಲಿನ ಸ್ವಾಸ್ಥ್ಯ ಕಾಪಾಡುತ್ತವೆ. ಅತಿಯಾದ ನಗರೀಕರಣ, ಗಿಡ ಮರಗಳ ನಾಶ, ಅತ್ಯಾದುನಿಕ ತಾಂತ್ರಿಕತೆ, ಗುಬ್ಬಿಗಳ ಆವಾಸಕ್ಕೆ ದಕ್ಕೆ ಮಾಡುತ್ತಿವೆ ಎಂಬುವುದರಲ್ಲಿ ಎರಡು ಮಾತಿಲ್ಲ.ನಗರ ಪ್ರದೇಶಗಳಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು,ತಿನ್ನಲು ಆಹಾರ ಸಿಗುತ್ತಿಲ್ಲ,ಗೂಡು ಕಟ್ಟಲು ಮರ ಗಿಡಗಳಿಲ್ಲ. ಹಾಗಾಗಿ ಅವುಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ. ಇದು ಹೀಗೆಯೇ ಮುಂದುವರೆದರೆ ಮುಂದೊಂದು ದಿನ, ಕತೆ ಹಾಗು ಚಿತ್ರಪಟಗಳಲ್ಲಿ ಮಾತ್ರ ನಾವು ಗುಬ್ಬಿಗಳನ್ನು ನೋಡಬೇಕಾಗುತ್ತದೆ. 



ಗುಬ್ಬಿಗಳು ನಮ್ಮ ಪ್ರಕೃತಿಯಿಂದ ಸಂಪೂರ್ಣ ನಾಶವಾಗುವ ಮೊದಲು ನಾವು ಎಚ್ಚೆತ್ತುಕೊಂಡು, ನಮ್ಮ ಕೈಲಾದ ರೀತಿಯಲ್ಲಿ  ಅವುಗಳ ಸಂರಕ್ಷಣೆ ಮಾಡುವ ದಿಸೆಯಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ನಾವು ಮಾಡಬಹುದಾದಂತ ಸಣ್ಣ ಪುಟ್ಟ ಕೆಲಸಗಳೆಂದರೆ , 

೧.  ಸಣ್ಣ ಸಣ್ಣ ಗುಬ್ಬಿ ಗೂಡುಗಳನ್ನು ನಿರ್ಮಿಸಿ ಮನೆಯ ಕೈದೋಟಗಳಲ್ಲಿ, ಸುತ್ತಲ್ಲಿನ ಗಿಡ-ಮರಗಳಲ್ಲಿ, ಕಂಪೌಂಡಿನ ಅಂಚುಗಳಲ್ಲಿ ಇಟ್ಟರೆ, ಗುಬ್ಬಿಗಳು ಅವುಗಳನ್ನು ತಮ್ಮ ಆವಾಸವಾಗಿ ಪರಿವರ್ಥಿಸಿಕೊಳ್ಳುತ್ತವೆ. ಈ ರೀತಿಯ ಪ್ರಯೋಗ ಸಂಶೋದನೆಗಳಿಂದ ಕೂಡ ದೃಡ ಪಟ್ಟಿದೆ. 
೨. ಬೇಸಗೆಯ ಸಮಯವಾದ್ದರಿಂದ, ಮನೆಯ ಅಂಗಳಗಳಲ್ಲಿ, ಅಂಚುಗಳ ಮೇಲೆ, ಮನೆಯ ತಾರಾಸಿನ ಮೇಲೆ ಬಟ್ಟಲುಗಳಲ್ಲಿ ನೀರು ತುಂಬಿ ಇಡುವುದು. 
೩. ಕಾಳು-ಕಡೆಗಳನ್ನು ಕಸದ ಪುಟ್ಟಿಗೆ ಹಾಕುವ ಬದಲು ಪಕ್ಷಿಗಳು ತಿನ್ನುವಂಥಹ ಜಾಗಳಲ್ಲಿ ಹಾಕಬೇಕು. 
೪. ಚಿಕ್ಕ ಮಕ್ಕಳಲ್ಲಿ ಗುಬ್ಬಿ ಹಾಗು ಇತರ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಕುತೂಹಲ ಬೆಳೆಸುವುದು. 
೫. ಮನೆಯ ಸುತ್ತಲಿನ ಖಾಲಿ ಜಾಗಗಳನ್ನು ಕಾಂಕ್ರೀಟುಕರಣಗೊಳಿಸದೆ , ಗಿಡ-ಬಳ್ಳಿಗಳನ್ನು ನೆಡುವುದು. 

ಹೀಗೆ ಇನ್ನು ಅನೇಕ ರೀತಿಗಳಲ್ಲಿ ನಮ್ಮ ಮನೆಯ ಸುತ್ತ ನಾವು ಗುಬ್ಬಿಗಳಿಗೆ  ಜೀವಿಸಲು ಯೋಗ್ಯವಾದ ವಾತಾವರಣವನ್ನು ನಿರ್ಮಿಸಿದರೆ, ನಾವು ಕೂಡ ಅವುಗಳ ಜೊತೆಗೆ ಜೀವಿಸಬಹುದು. ಇಲ್ಲವಾದರೆ ಅವುಗಳ ಅವಾಸವನ್ನು ಕಸಿದುಕೊಂಡ ಪಾಪಕ್ಕೆ ನಾವು ಗುರಿಯಾಗುವುದಂತೂ ಖಂಡಿತ. ಜೊತೆಗೆ ನಾವು ಮುಂದಿನ ಪೀಳಿಗೆಗೆ ಅಸಮತೋಲನ ಪ್ರಕೃತಿಯನ್ನು ಬಿಟ್ಟು ಹೋಗಬೇಕಾಗುತ್ತದೆ ಕೂಡ.


 
ನಿಮಗಾಗಿ 
ನಿರಂಜನ್ 

ಸೋಮವಾರ, ಮಾರ್ಚ್ 16, 2015

ದಾರಿ ತಪ್ಪಿತೇ ಆಮ್ ಆದ್ಮಿ ಪಕ್ಷ ???

                                                   
ಮ್ ಆದ್ಮಿ ಪಕ್ಷ ತಾನು ಹುಟ್ಟಿದಾಗಿನಿಂದ ತಾನೇನೋ  ಬೇರೆ ಪಕ್ಷಗಳಿಗಿಂತ ಬಹು ಬಿನ್ನ ಹಾಗು ನಾನು ಹುಟ್ಟಿರುವುದೇ ಸ್ವಚ್ಚ ಹಾಗು ಪಾರದರ್ಶಕ ರಾಜಕೀಯ ಮಾಡಲು ಎಂದು ಸಾರಿ ಸಾರಿ ಹೇಳಿಕೊಳ್ಳುತಿತ್ತು. ಅದೇ  ಕಾರಣಕ್ಕಾಗಿ ಅನೇಕ ಚಿಂತಕರು, ದೇಶದ ಯುವಜನತೆ ಹಾಗು ಹೋರಾಟಗಾರರು ನೂರಾರು ಕನುಸುಗಳೊಂದಿಗೆ, ಬಹಳ ಆಶಾವಾದದಿಂದ ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು.

              ಮಳೆಬಂದಾಗ ಭೂಮಿಯಿಂದ ಮೇಲೇಳುವ  ನಾಯಿ ಕೊಡೆಗಳಂತೆ ಅಥವಾ ಅಣಬೆಗಳಂತೆ, ನಮ್ಮ ದೇಶದಲ್ಲೂ ಪ್ರತಿ ವರ್ಷ ಅನೇಕ ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಮೇಲೇಳುತ್ತವೆ ಹಾಗೆಯೇ ಚುನಾವಣೆಯ ನಂತರ ಮರೆಯೂ ಆಗುತ್ತವೆ. ಆಮ್ ಆದ್ಮಿ ಪಕ್ಷ   ಹುಟ್ಟಿದಾಗ ಕೂಡ ಅದೇ ರೀತಿಯಾಗಿ ಮರೆಯಾಗುವ ತಾತ್ಕಾಲಿಕ ಪಕ್ಷಗಳಲ್ಲಿ ಇದೂ ಒಂದು ಎಂದು ಅನೇಕ ಮಂದಿ ವಿಶ್ಲೇಷಿಸಿದರು. ಕಾಂಗ್ರೇಸ್ ಹಾಗು  ಬಿಜೆಪಿ ಪಕ್ಷಗಳು ಕೂಡ ಹಾಗೆಯೇ ಊಹಿಸಿ , ಆಮ್ ಆದ್ಮಿ ಪಕ್ಷವನ್ನು ಲಘುವಾಗಿ ಪರಿಗಣಿಸಿ ಅಣಕವಾಡಿದ್ದರು ಕೂಡ. ಆದರೆ AAP ಆ ರೀತಿಯ ಎಲ್ಲಾ ಊಹೆಗಳನ್ನು ಹುಸಿಮಾಡಿ, ಸ್ಪರ್ದಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವಿನಿಂದ ದೆಹೆಲಿಯಲ್ಲಿ ನೆಲೆಯೂರಿತು. ಆ ಭಾರಿ ಅದು ಚುನಾವಣಾ ಸ್ಪರ್ದಿಸಿದ ರೀತಿ, ಪ್ರಚಾರದಲ್ಲಿ ಬಳಸಿದ ವಿಧಾನಗಳು ಹಾಗು AAP ಸ್ಪರ್ದಿಗಳು ಎದುರಾಳಿಗಳನ್ನು ಹಣಬಲವಿಲ್ಲದಿದ್ದರು ಸೋಲಿಸಿದ ರೀತಿ ನಿಜಕ್ಕೂ ಒಂದು ಬಗೆಯ ಹೊಸ ರಾಜಕೀಯಕ್ಕೆ ನಾಂದಿ ಹಾಡಿತ್ತು. ಆ ಅಭೂತಪೂರ್ವ ಗೆಲುವಿಗೆ ಕಾರಣ ಬರಿ ಆ ಪಕ್ಷದ ಹೋರಾಟದ ತಳಹದಿಯೂ ಅಲ್ಲ, ಹಾಗೆಯೇ ದೈತ್ಯ ನಾಯಕ ಅರವಿಂದ್ ಕೆಜ್ರಿವಾಲ್ ಕೂಡ ಅಲ್ಲ. 


              ನನ್ನ ಪ್ರಕಾರ ಆಪ್ ಗೆಲುವಿಗೆ ಹಾಗು ಅದರ ಜನಪ್ರಿಯತೆಗೆ ಅನೇಕ ಪ್ರಮುಖ ಕಾರಣಗಳಿದ್ದವು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ , ಆಮ್ ಆದ್ಮಿ ಪಕ್ಷ ಹುಟ್ಟಿದ ತಳಹದಿ, ತತ್ವ- ಸಿದ್ದಾಂತಗಳು , ಪಾರದರ್ಶಕತೆ , ಸಾಮಾನ್ಯನೂ ಕೂಡ ನಾಯಕರ ನೈತಿಕತೆಯನ್ನು  ಪ್ರಶ್ನಿಸಬಹುದಾಗಿದ್ದ ಆಂತರಿಕ ಪ್ರಜಾಪ್ರಭುತ್ವ, ಸ್ವಚ ರಾಜಕೀಯ ಮಾಡುವ ಪಕ್ಷದ ಹಿಂಗಿತ. ಅದೇ ರೀತಿ ಅಂದಿನ ರಾಜಕೀಯ ಪರಿಸ್ಥಿತಿ ಕೂಡ, ಹಾಗೆ ತಾನೇ ಹುಟ್ಟಿದ್ದ ಆಮ್ ಆದ್ಮಿ ಪಕ್ಷಕ್ಕೆ ಬಹಳ ಅನುಕೂಲಕರ ವಾತಾವರಣವನ್ನು ಕಲ್ಪಿಸಿತ್ತು. ಸತತ ೧೫ ವರ್ಷ ಅಧಿಕಾರದಲಿದ್ದ ಶೀಲ ದೀಕ್ಷಿತ್ ಸರ್ಕಾರ ಮಾಡಿದ್ದ ಶೇಷ ಅಬಿವೃದ್ದಿ, ಅನೇಕ ಅಕ್ರಮ ಹಗರಣಗಳು ಹಾಗೆಯೇ ಆ ಹಗರಣಗಳನ್ನು ಸರಿಯಾದ ರೀತಿಯಲ್ಲಿ ವಿರೋದಿಸದ ಮತ್ತು ಸರ್ಕಾರ ವಿರೋದಿ ಅಲೆಯನ್ನು ಸದುಪಯೋಗ ಪಡಿಸಿಕೊಳ್ಳಲೂ ಅಸಮರ್ಥವಾಗಿದ್ದ ದೆಹೆಲಿಯ ಪ್ರಾದೇಶಿಕ ಬಿಜೆಪಿ ಬಳಗ ಕೂಡ ಆಮ್ ಆದ್ಮಿ ಪಕ್ಷದ ಚಿಂತನೆ ಸಮಾಜದಲ್ಲಿ ಬೇರೂರಲು ಸಹಕಾರ ಮಾಡಿದ್ದವು. ಇನ್ನು ಅನೇಕ ವಿಷಯಗಳು ಆಪ್ ಉಗಮಕ್ಕೆ ಹಾಗು ಜನರು ಅದರತ್ತ ನೋಡಲು ಸಹಕಾರಿಯಾದವು ಎಂದು ಹೇಳಿದರೆ ತಪ್ಪಾಗಲಾರದು.  

             ತನ್ನ ಮೊದಲ ಚುನಾವಣೆಯಲ್ಲೇ ನಿರೀಕ್ಷೆಗೂ ಮೀರಿ ಜನಮನ್ನಣೆ ದೊರೆತ ನಂತರ  ಪತ್ರಕರ್ತರು, ಹೋರಾಟಗಾರರು, ರಾಜಕೀಯ ವಿಶ್ಲೇಷಕರು ಆಮ್ ಆದ್ಮಿ ಪಕ್ಷವನ್ನು ಇತರ ಪಕ್ಷಗಳಿಗಿಂತ ವಿಬಿನ್ನವೆಂಬಂತೆ  ಮಾದ್ಯಮದಲ್ಲಿ ಬಿಂಬಿಸಿದರು. ಆಪ್ ಮ್ ಆದ್ಮಿ ಪಕ್ಷ ಕೇವಲ ಒಂದು ಪಕ್ಷವಲ್ಲ ಇದೊಂದು ಹೋರಾಟ, ಜನಸಮಾನ್ಯರ  ಕನಸು, ದೇಶದ ಸಾಂಪ್ರದಾಯಿಕ ರಾಜಕೀಯ ವ್ಯವಸ್ತೆಯನ್ನೇ ಬುಡಮೇಲು ಮಾಡುವ ಪರ್ಯಾಯ ರಂಗವೆಂದೆ ಜನರು ಭಾವಿಸಿದರು.  ಆಮ್ ಆದ್ಮಿ ಪಕ್ಷ ಕೂಡ ಆ ಸಮಯಕ್ಕೆ ಅದೇ ಮೂಲ ಮೌಲ್ಯಗಳನ್ನು ಅಳವಡಿಸಿಕೊಂಡು, ಜನರಿಗೆ ನಿಜವಾಗಿಯೂ ಹತ್ತಿರವಾಗುತ್ತಿತ್ತು. ನಾಯಕರ ಸರಳತೆ, ೪೯ ದಿನ ಅದಿಕಾರದಲ್ಲಿದ್ದಾಗ ಮಾಡಿದ್ದ ಜನಪ್ರಿಯ ಕೆಲಸಗಳು,  ರಾಜನಾಮೆ ನೀಡಿ ಮಾಡಿದ್ದ ತಪ್ಪುಗಳಿಗೆ ಬಹಿರಂಗವಾಗಿ ಕ್ಷಮೆ ಕೇಳಿದ ರೀತಿ ನಿಜವಾಗಿಯೂ ಆಪ್ ಪಕ್ಷಕ್ಕೆ ಮತ್ತೆ ನಡೆದ ವಿಧಾನಸಬೆಯಲ್ಲೂ ಕೂಡ ಅಚ್ಚರಿಯ ಗೆಲುವನ್ನು ತಂದುಕೊಟ್ಟವು.ಆಮ್ ಆದ್ಮಿ ಪಕ್ಷ  ಎರಡನೇ ಬಾರಿಗೆ  ಸಂಪೂರ್ಣ ಬಹುಮತದಿಂದ ಅದಿಕಾರಕ್ಕೆ ಬಂದಿತು. ಈ ಭಾರಿಯೂ ಕೂಡ ಆಮ್ ಆದ್ಮಿ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣ ಕೂಡ  ಕೇವಲ ಒಬ್ಬ ವ್ಯಕ್ತಿಯಲ್ಲ. ಬದಲಾಗಿ ಇಡೀ ಪಕ್ಷ, ಪಕ್ಷದ ಸದ್ಯಸ್ಯರು ಹಾಗು ಅದರ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆಯಲ್ಲಿ ದುಡಿದ ರೀತಿ, ಧನಾತ್ಮಕ ಪ್ರಚಾರ, ನಾಯಕರ ಒಗ್ಗಟ್ಟಿನ ಚುನಾವಣ ತಂತ್ರಗಳು ನಿಜವಾಗಿಯೂ  ಆಮ್ ಆದ್ಮಿ ಪಕ್ಷಕ್ಕೆ ತಾನೇ  ನಂಬಲಾಗದ ರೀತಿಯಲ್ಲಿ ಗೆಲುವು ತಂದು ಕೊಟ್ಟವು. ಇದರ ಫಲವಾಗಿ ಎರಡನೇ ಬಾರಿಗೆ ಅರವಿಂದ್ ಕೆಜ್ರಿವಾಲ್ ಮುಖ್ಯಮಂತ್ರಿಯೂ ಆದರು. ದೆಹಲಿಯ ಜನರು ಸುಭದ್ರ ಸರ್ಕಾರದೊಂದಿಗೆ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಕೇಜ್ರಿವಾಲ್ ಸರ್ಕಾರದಿಂದ ನಿರೀಕ್ಷಿಸಿತ್ತಿದ್ದರು. ಜನರ ಸಮಸ್ಯಗಳು ಇನ್ನೇನು ಕೆಲವೇ ದಿನಗಳಲ್ಲಿ ದೂರವಾಗುವುವು, ಆಪ್ ಸರ್ಕಾರ ಜನರ ಆಶೋತ್ತರಗಳಿಗೆ ಮಿಡಿಯುವುದರ ಜೊತೆಗೆ ದೆಹೆಲಿಯನ್ನು ಒಂದು ಮಾಧರಿ ನಗರವನ್ನಾಗಿ ನಿರ್ಮಿಸಿ, ಇಡೀ ದೇಶವೇ ದೆಹೆಲಿಯ ಕಡೆಗೆ ನೋಡುವಂತೆ ಮಾಡುತ್ತದೆ ಎಂದು ಬಹಳವಾಗಿ ಭರವಸೆಗಳನ್ನು ಇಟ್ಟುಕೊಂಡಿದ್ದರು. ದೇಶಕ್ಕೆ ದೇಶವೇ ಆಮ್ ಆದ್ಮಿ ಪಕ್ಷವನ್ನು ಹಾಗು ಅದರ ಸರ್ಕಾರವನ್ನು ಸೂಕ್ಷ್ಮವಾಗಿ ಪ್ರತಿದಿನವೂ ಗಮನಿಸತೊಡಗಿದರು. ಆದರೆ ಇತೀಚಿನ ಕೆಲವು ದಿನಗಳಿಂದ ಆಮ್ ಆದ್ಮಿ ಪಕ್ಷದಲ್ಲಿ ನಡೆಯುತ್ತಿರುವ ಘಟನಾವಳಿಗಳು ಜನರಲ್ಲಿ ತೀರ ನಿರಾಸೆ ಮೂಡಿಸಿವೆ. ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಬಿನ್ನಬಿಪ್ರಾಯದ ಬೆಂಕಿ ಕಾಣಿಸಿದೆ. ಪಕ್ಷದಲ್ಲಿನ ಈ ಬಿನ್ನಬಿಪ್ರಾಯದ ಜ್ವಾಲೆ ಸರ್ಕಾರದ ಮೇಲೆ ಯಾವ ಪರಿಣಾಮ ಬೀರಬಹುದೆಂದು ಕಾಲವೇ ಹೇಳಬೇಕಿದೆ.

                 ಆಮ್ ಆದ್ಮಿ ಪಕ್ಷದ ಈ ಒಳಜಗಳಕ್ಕೆ ಅನೇಕ ಕಾರಣಗಳಿರಬಹುದು, ಇದೊಂದು ಬೇರೆ ರೀತಿಯ ಪಕ್ಷವೆಂದೇ ಭಾವಿಸಿದ್ದ ಜನರಿಗೆ ನಿರಾಸೆ ಹಾಗು ದುಃಖ ಉಮ್ಮಳಿಸಿ ಬರತೊಡಗಿದೆ. ಚುನಾವಣೆಗು ಮೊದಲು ಕಾಣಿಸಿದ್ದ ಆ ನಾಯಕರ ಒಗ್ಗಟ್ಟು ಅದಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮುರಿದುಬಿದ್ದಿದೆ. ಕೆಲವು ನಾಯಕರುಗಳಲ್ಲಿ ಪರಸ್ಪರ ನಂಬಿಕೆಯ ಕೊರತೆ ಎದ್ದು ಕಾಣುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಜನರಿಗೆ, ಪಕ್ಷ ಪ್ರೇಮಿಗಳಿಗೆ ತಮ್ಮ ಪಕ್ಷ ಮೂಲ ಸಿದ್ದಾಂತಗಳನ್ನೇ ಗಾಳಿಗೆತೂರಿದೆ ಎನ್ನುವ ಭಾವ ಕಾಡತೊಡಗಿದೆ. ಪ್ರತಿದಿನವೂ ಆರೋಪ, ಪ್ರತ್ಯಾರೋಪಗಳ ಮಳೆಯೇ ಸುರಿಯುತ್ತಿದೆ ಎಲ್ಲೆಂದರಲ್ಲಿ. ಟ್ವಿಟ್ಟರ್, ಫೇಸ್ಬುಕ್ , ಟೀವಿ ಹಾಗು ದಿನಪತ್ರಿಕೆಗಳಲ್ಲಿ ನಾಯಕರ ಕೆಸರೆರಚಾಟ , ಆಶಾಭರಿತನಾಗಿದ್ದ ಜನಸಾಮಾನ್ಯನಿಗೆ ಹೇಸಿಗೆ ಬರಿಸಿದೆ. ನಾಯಕರ ಈ ಕಿತ್ತಾಟ ಆಮ್ ಆದ್ಮಿ ಪಕ್ಷದ ಬುಡವನ್ನೇ ಇಬ್ಬಾಗವಾಗಿ ಸೀಳುವುದರ ಜೊತೆಗೆ ಕಾರ್ಯಕರ್ತರ ಆತ್ಮ ವಿಶ್ವಾಸವನ್ನೇ ಕುಂದಿಸಿದೆ. ಈ ಎಲ್ಲಾ ಬೆಳವಣಿಗೆಗಳು ಸದಸ್ಯರನ್ನು , ಕಾರ್ಯಕರ್ತರನ್ನು ತೀರ ಮುಜುಗರಕ್ಕೀಡು ಮಾಡಿವೆ ಕೂಡ. ತಿಂಗಳ ಹಿಂದೆಯಷ್ಟೇ ಹಾಡಿ ಹೋಗಳಿದ್ದ ಸುದ್ದಿವಾಹಿನಿಗಳು, ಪತ್ರಕರ್ತಕರು ಈಗ ಮನಸೋ ಇಚ್ಚೆ ಉಗಿಯುವೊಷ್ಟು ಕೀಳುಮಟ್ಟದ ರಾಜಕೀಯ ಮಾಡುತಿದೆ  ಆಮ್ ಆದ್ಮಿ ಪಕ್ಷ. ಇದೊಂದು ತುಂಬಾ ವಿಷಾದದ ಸಂಗತಿ. ನಿಜವಾಗಿಯೂ ಇದೊಂದು ದುರಾದೃಷ್ಟಕರ ಬೆಳವಣಿಗೆಯೂ ಕೂಡ. ಜನರು,ಮತದಾರರು ಕಟ್ಟಿದ ಕನಸುಗಳು ನುಚ್ಚು ನೂರಾಗಿವೆ. ಪಕ್ಷದ ಅದಿನಾಯಕರು ತಮ್ಮ ಅಹಮ್ಮುಗಳನ್ನು ಬಿಟ್ಟು, ತಮ್ಮ ತಮ್ಮ ಜವಾಬ್ದಾರಿಯನ್ನು ತಾವು ಅರಿತುಕೊಂಡರೆ ಮಾತ್ರ ಪಕ್ಷ ಉಳಿಯಬಹುದೇ ಹೊರತು ಈ ರೀತಿಯ ಕೀಳು ಮಟ್ಟದ, ಸಂಕುಚಿತ ರಾಜಕೀಯ ಮಾಡಿದರೆ, ಮುಂದೊಂದು ದಿನ ಜನಸಾಮಾನ್ಯರು ಪಕ್ಷದಿಂದ ದೂರ ಸರಿಯುವುದಂತು ನಿಜ. ತತ್ವ ಸಿದ್ದಾಂತಗಳನ್ನು ಬಿಟ್ಟಮೇಲೆ ಒಬ್ಬ ಕಾರ್ಯಕರ್ತ ಯಾವ ಕಾರಣಗಳಿಗೆ ಆಮ್ ಆದ್ಮಿ ಪಕ್ಷಕ್ಕೆ ದುಡಿಯಬೇಕು ?? ಬೇರೆ ಪಕ್ಷಗಳಿಗಿಂತ ನಾವು ವಿಬಿನ್ನ ಎನ್ನುತ್ತಿದ್ದ ನಾಯಕರು ಈಗ ಆಗುತ್ತಿರುವ ಬೆಳವಣಿಗೆಗಳಿಗೆ ಏನೆಂದು ಉತ್ತರ ಕೊಡುತ್ತಾರೆ ?? ಈ ಜಗಳದಿಂದ ನಿಜವಾಗಿಯೂ ಪಕ್ಷಕ್ಕೆ ಒಳ್ಳೆಯದಾಗುವುದೇ ?? ಎಂದು ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪಕ್ಷವು ತಾನು ತುಳಿಯುತ್ತಿರುವ ಹಾದಿಯ ಬಗ್ಗೆ ಸ್ವಲ್ಪ ಯೋಚಿಸಿ, ಚಿಂತನೆ ಮಾಡಿಕೊಳ್ಳಬೇಕಿದೆ. ನಾಯಕರು ಈ ತಕ್ಷಣಕ್ಕೆ ತಮ್ಮ ವರ್ತನೆಗಳನ್ನು ಬದಾಲಾಯಿಸಿಕೊಳ್ಳದಿದ್ದರೆ, ತಮ್ಮ ಮೂಲ ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ನೀಡದೆ, ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟರೆ ಮಾತ್ರ ಆಮ್ ಆದ್ಮಿ ಪಕ್ಷ ಒಂದು ವಿಬಿನ್ನ ಪಕ್ಷವಾಗಿ ಉಳಿಯುತ್ತದೆ. ಆಮ್ ಆದ್ಮಿ ಪಕ್ಷ ಕೂಡ ಬೇರೆ ಪಕ್ಷಗಳಂತೆ ಕೇವಲ ಒಂದು ಸಮಾನ್ಯ ಪಕ್ಷವಾದರೆ ಜನರು ಆಮ್ ಆದಿ ಪಕ್ಷವನ್ನು ಮತ್ತೆಂದು ಬೆಂಬಲಿಸುವುದಿಲ್ಲ. ಮಾಡಿದ ತಪ್ಪುಗಳಿಗೆ ಕ್ಷಮೆಕೇಳಿ, ಮತ್ತೆಂದೂ  ಈ ರೀತಿಯ ತಪ್ಪುಗಳು ಉದ್ಭವಿಸದಂತೆ, ಎಲ್ಲಾ ನಾಯಕರು ಒಟ್ಟಾಗಿ ಮುನ್ನೆಡೆಯ ಬೇಕಿದೆ. ಎಲ್ಲರನ್ನು ತಮ್ಮೊಂದಿಗೆ  ತೆಗೆದುಕೊಂಡು, ದಕ್ಷವಾಗಿ ಮುನ್ನೆಡೆಯುವ ಮನಸ್ಥಿಯನ್ನು ಪಕ್ಷದ ಅದಿನಾಯಕರು ತುರ್ತಾಗಿ ಬೆಳೆಸಿಕೊಳ್ಳದಿದ್ದರೆ ನಿಜವಾಗಿಯೂ ಈ ಪಕ್ಷಕ್ಕೆ ಕೆಟ್ಟ ಹೆಸರು ಬರುವುದು ನಿಶ್ಚಿತ. ಪಕ್ಷ ಕೆಟ್ಟು ಹೋಗಿ, ಎಷ್ಟೇ ವರ್ಷ ಆದಿಕಾರದಲಿದ್ದು ಎಂಥಹ ಘನಕಾರ್ಯಗಳನ್ನು ಮಾಡಿದರು ಜನರು  ಆಮ್ ಆದ್ಮಿ ಪಕ್ಷವನ್ನು  ಮತ್ತೆಂದೂ  ಒಪ್ಪುವುದಿಲ್ಲ, ಸ್ವೀಕರಿಸುವುದೂ ಇಲ್ಲ.  

              ಚುನಾವಣೆಯಲ್ಲಿ ಬರಿ ಗೆಲ್ಲುವುದೇ ಒಂದು ಪಕ್ಷದ ಮಾನದಂಡವಾಗುವುದಿಲ್ಲ. ಮೂಲ ಸಿದ್ದಾಂತಗಳು, ನಾಯಕರ ನೈತಿಕತೆ,  ಪಾರದರ್ಶಕ ರಾಜಕೀಯ, ಆಂತರಿಕ ಪ್ರಜಾಪ್ರಭುತ್ವ  ಯಾವುದೇ ಪಕ್ಷದ ಬೆನ್ನೆಲುಬು. ಅದೇ ರೀತಿ ಆಮ್ ಆದ್ಮಿ ಪಕ್ಷವು ಕೂಡ ವಿಬಿನ್ನ ಪಕ್ಷವಾಗುವುದಕ್ಕೆ ಮೂಲ ಕಾರಣ ಅದರ  ನೀತಿ ಸಿದ್ದಾಂತಗಳು ಮಾತ್ರ. ಇದನ್ನು ಮರೆತರೆ ಆಮ್ ಆದ್ಮಿ ಪಕ್ಷವೂ ಕೂಡ ಭಾರತದ ಮತ್ತೊಂದು ಸಮಾನ್ಯ ಪಕ್ಷದ ಸಾಲಿಗೆ ಸೇರುತ್ತದೆ. ಚುನಾವಣೆಯಲ್ಲಿ ಗೆಲ್ಲುವುದೊಂದೇ ಗುರಿಯನ್ನಾಗಿಸಿಕೊಳ್ಳದೆ, ಒಳ್ಳೆಯ ನೀತಿ-ಸಿದ್ದಾಂತಗಳೊಂದಿಗೆ, ಎಲ್ಲ ನಾಯಕರು  ಒಗ್ಗಟ್ಟಾಗಿ ಮುನ್ನೆಡೆದು, ಸಾಮನ್ಯ  ಜನರ ದ್ವನಿಯಾದರೆ ಮಾತ್ರ ಆಮ್ ಆದ್ಮಿ ಪಕ್ಷದ ಹುಟ್ಟಿಗೆ ಸಾರ್ತಕತೆ ಸಿಗುತ್ತೆದೆ ಹಾಗು ಲಕ್ಷಾಂತರ ನಿಸ್ವಾರ್ಥ ಕಾರ್ಯಕರ್ತರ ಕನಸು ನನಸಾಗುತ್ತದೆ.

ನಿಮಗಾಗಿ 
ನಿರಂಜನ್