ಸ್ನೇಹಿತರೆ ಮೊನ್ನೆ ನಾನು ಮತ್ತು ನನ್ನ ಸ್ನೇಹಿತ ರಾಮಕೃಷ್ಣ ನಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಆಫೀಸಲ್ಲಿ ಒಬ್ಬರಿಗೊಬ್ಬರು ಚಾಟ್ ಮಾಡುತ್ತಾ ಇದ್ದೆವು. ಇತ್ತೀಚಿನ ದಿನಗಳಲ್ಲಿ ಆ ಹಳೆಯ ನೆನಪುಗಳು ನನ್ನನ್ನು ತುಂಬಾ ಕಾಡತೊಡಗಿವೆ. ನಾವು ಆಡಿದ ಆಟಗಳು,ನಾವಾಡಿದ ಜಾಗಗಳು,ನಾವಾಡಿದ ಜಗಳಗಳು,ತಿಂದ ಏಟುಗಳು,ಬಿಟ್ಟ ಬಸ್ಸು ಮತ್ತು ರೈಲುಗಳು,ಸುತ್ತಿದ ಬೇಲಿ ಸಾಲುಗಳು, ಕೋತಿಗಳಂತಿದ್ದ ನಮಗೆ ಆಶ್ರಯ ನೀಡುತ್ತಿದ್ದ ಮರಗಳು,ನಮ್ಮಿಂದ ಕಲ್ಲೇಟು ತಿಂದರು ಹುಣಸೇ ಮತ್ತು ಮಾವಿನ ಹಣ್ಣುಗಳನ್ನು ಕೊಟ್ಟ ಮರಗಳು, ಬಿಸಿಲಲ್ಲಿ ಬಳಲಿ ಬಾಯಾರಿದಾಗ ನೀರುಣಿಸುತಿದ್ದ ಬೋರುಗಳು, ನಾವಾಡುತ್ತಿದ್ದ ಕೆರೆ, ಆಟದ ಮೈದಾನ,ನಾವು ಕದ್ದು ತಿನ್ನುತಿದ್ದ ಸೀಬೇಕಾಯಿ ಹಣ್ಣಿನ ಗಿಡಗಳು, ಕತೆ ಹಾಗೂ ಸಿನಿಮಾ ಸ್ಟೋರಿ ಕೇಳಲು ಸೇರುತಿದ್ದ ಅಮ್ಮನ ಗುಡಿ,ಇಂದು ಇವೆಲ್ಲ ಮತ್ತೆ ನನ್ನನ್ನು ಮತ್ತೆ ಆ ಕಡೆ ಸೆಳೆಯುತ್ತಿವೆ.
ಸಿರಿ,ರಾಮ,ರವಿ,ರಾಮಕೃಷ್ಣ ಮತ್ತು ಸಂತೋಷ್ ನಾವೆಲ್ಲ ಒಂದೇ ಶಾಲೆಯಲ್ಲಿ ಓದುತ್ತಿದ್ದವರು ಮತ್ತು ನಮ್ಮ ಪಕ್ಕದ ಮನೆಯವರು ಕೂಡ,ಬೇಸಿಗೆ ಬಂತು ಅಂದರೆ ಸಾಕು ನಮಗೆಲ್ಲ ಅದೇನೋ ಸಂತೋಷ ಮತ್ತು ಆನಂದ.ಆ ದಿನಗಳ ನಮ್ಮ ದಿನಚರಿಯೇ ಬೇರೆ ಮತ್ತು ವಿಚಿತ್ರ.ವಿಷನ್,ಕಮ್ಮಿಟ್ಮೆಂಟ್ಸ್ ,ಪ್ರಾಜೆಕ್ಟ್,ದುಡ್ಡು, ಮಧುವೆ !!! ಇವೇನೂ ತಲೆಯಲ್ಲಿ ಇಲ್ಲದ ಸ್ವಚ್ಛ ಮನಸುಗಳು ನಮ್ಮವು ಆಗ.ನಾವೆಲ್ಲಿ ಹೋದರು ಜೊತೆಗೆ ಹೋಗುತ್ತಿದ್ದೆವು,ಬರುತ್ತಿದ್ದೆವು,ಎಲ್ಲ ಕೆಲಸಗಳನ್ನು ಜೊತೆಗೆ ಮಾಡುತಿದ್ದೆವು, ನಿಜ ಹೇಳಬೇಕೆಂದ್ರೆ ನಾವೆಲ್ಲ ಗುಂಪಾಗಿಯೇ ಕೆರೆಯಗಲಕ್ಕೆ ಹೋಗುತಿದ್ದೆವು !!! ಬೇಸಿಗೆಯ ದಿನಗಳೆಂದರೆ ಸಾಮಾನ್ಯವಾಗಿ ನನ್ನ ಮೊದಲ ಕೆಲಸವೆಂದರೆ ಎದ್ದ ಕೂಡಲೇ ಮುಖ ತೊಳೆದು ಅಮ್ಮ ಕೊಟ್ಟ ಟೀ ಕುಡಿದ ಕೂಡಲೇ ಸಿರಿ ಹಾಗೂ ರಾಮು ಮನೆಗೆ ಹೋಗುತಿದ್ದೆ, ಕಾರಣ ಅಲ್ಲಿಯೂ ಟೀ ಸಿಗುತ್ತೆ , ಅದು ದೊಡ್ಡ ಕಪ್ಪಲ್ಲಿ ಅಂತ. ಇಷ್ಟಾದ ಮೇಲೆ ನಾವೆಲ್ಲ ಒಂದೆಡೆ ಸೇರಿ ನೇರ ಹೋಗುತಿದ್ದು ಸಾಮಾನ್ಯವಾಗಿ ಸಿರಿಯ ಹೊಲದ ಕಡೆಗೆ. ಊರಿನಿಂದ ಸ್ವಲ್ಪ ಹತ್ತಿರ ಮತ್ತು ಒಂದು ಮಾವಿನ ತೋಟವಿದ್ದ ಹೊಲ ಅದು. ಹೇರಳವಾಗಿ ದೊರೆಯುತಿದ್ದ ಮಾವಿನ ಹಣ್ಣುಗಳು,ಬಾರೆ ಮತ್ತು ಕಾರೆ ಹಣ್ಣುಗಳು ನಮ್ಮನ್ನು ಅಲ್ಲಿಗೆ ಬೆಳ್ಳಬೆಳಗ್ಗೆ ನಮ್ಮನು ಕೈ ಬೀಸಿ ಕರೆಯುತಿದ್ದವು.ಹಾವು,ಹುಳ ಉಪ್ಪಡಿಗಳಿಗೆ ಹೆದರದೇ ಒಂದು ರೀತಿಯ ವಿಚಿತ್ರರಾಗಿದ್ದ ನಾವು ಬೇಲಿ,ಪೊದೆ,ಮುಳ್ಳುಗಳೆನ್ನದೇ ಬರಿ ಕಾಲಲ್ಲೇ ಅಡ್ಡಾಡುತ್ತಿದ್ದ ನಾವು ಬೇಲಿ ಸಾಲುಗಳಲ್ಲಿ ಸಾಮಾನ್ಯವಾಗಿ ಇರುತಿದ್ದ ಬಾರೆ ಹಣ್ಣುಗಳಿಗಾಗಿ ಹೊಳನುಗ್ಗಿ ಹಣ್ಣು ಕೀಳುತಿದ್ದೆವು. ಮುಳ್ಳುಗಳು ತರಚಿದರು ಮತ್ತು ಚುಚ್ಚಿದರು ಗಮನ ಕೊಡದ ನಾವು ಗುಂಪಾಗಿ ಕುಳಿತು ಅವುಗಳ್ನ್ನು ಹಂಚಿ ತಿನ್ನುವುದನ್ನು ನೆನಸಿಕೊಂಡರೆ ಈಗಲೂ ಆನಂದವಾಗುತ್ತೆ ಮತ್ತು ಊರಿನ ಯೋಚನೆಗಳೇ ಇರುತ್ತಿರಲಿಲ್ಲ. ಜೇನುಗಳನ್ನು ಮುರಿದು ಅವುಗಳಿಂದ ಕಡಿಸಿಕೊಂಡದ್ದು ಉಂಟು. ಸ್ವಲ್ಪ ಬಿಸಿಲೇರುತಿದ್ದಂತೆ ನಾವೆಲ್ಲರೂ ಊರಿಗೆ ವಾಪಾಸಾಗಿ ಹೋಗುತಿದ್ದದ್ದು ಮನೆಗಳಿಗಲ್ಲ, ನೇರವಾಗಿ ನಮ್ಮೂರಿನ ಮಠದ ಹಿಂದೆ ಇದ್ದ ದೊಡ್ಡ ಕಲ್ಲು ಭಾವಿಗೆ ಅಥವಾ ನಮ್ಮೋರಿನ ದೊಡ್ಡ ಕೆರೆಗೆ, ಅವೇ ನಮಗೆ ದೊಡ್ಡ ಸ್ವಿಮ್ಮಿಂಗ್ ಪೂಲುಗಳು !! ಅಲ್ಲಿ ಈಜಾಡಿದ ಮೇಲೆ ಹೊಟ್ಟೆ ಚುರುಗುಟ್ಟಿದ ಮೇಲೆಯೇ ನಮಗೆ ನಮ್ಮ ಮನೆಗಳ ನೆನಪು ಬರುತಿದ್ದದ್ದು. ಆಗ ಮನೆಗೆ ಹೋಗಿ ನೇರ ಊಟ ( ತಿಂಡಿಯ ಸಮಯ ಸಾಮಾನ್ಯವಾಗಿ ಮೀರಿರುತಿತ್ತು ಅಥವಾ ಹಳ್ಳಿಗಳಲ್ಲಿ ಸಾಮಾನ್ಯವಾಗಿ ತಿಂಡಿ ಮಾಡುತಿರಲಿಲ್ಲ) ಮಾಡಿ ತಕ್ಷಣ ಮತ್ತೆ ನಾವು ಮಾಡುತಿದ್ದ ಕೆಲ್ಸಾ ಮತ್ತೆಲ್ಲಿಗೆ ನಾವು ಹೋಗೋದು ಅಂತ ಗಾಡವಾದ ಯೋಚನೆ!!.ಅಷ್ಟೊತ್ತಿಗೆ ನಮಗೆ ಐಸ್ ಬಸಣ್ಣನ ಪೀಪೀ ಸದ್ದು ಕೇಳುತಿದ್ದಂತೆ ಕೆಂಪಾದ ನೀರ್ಐಸ್ ತಿನ್ನುವ ಬಯಕೆ ಆದರೆ ಅದು ದಿನವೂ ನೆರವೇರುತಿರಲಿಲ್ಲ. ಬರಿ ಅದನ್ನು ತಿನ್ನುವ ಜನರನ್ನು ನೋಡುತ್ತಾ ನಮ್ಮ ದಾಹ ತೀರಿಸಿಕೊಳ್ಳುತಿದ್ದೆವು !!
ಹೀಗೆ ಹೇಳುತ್ತಾ ಹೋದರೆ ನಮ್ಮ ಬಾಲ್ಯದ ದಿನಗಳ ಬಗ್ಗೆ,ಆಡಿದ ಆಟಗಳ,ಮಾಡಿದ ಚೇಷ್ಟೆಗಳ,ತಿಂದ ಏಟುಗಳಿಗೆ ಕಾರಣಗಳು,ಶಾಲೆಯ ಅನುಭವಗಳ ಬಗ್ಗೆ ಹೇಳಲು ಪುಟಗಳನ್ನೇ ಬರೆಯಬೇಕಾಗುತ್ತೆ.ಇಲ್ಲಿಗೆ ಯಾಕೆ ನಿಲ್ಲಿಸಿದ್ದೇನೆ ಅಂದ್ರೆ ನನ್ನ ಸ್ನೇಹಿತ ಫೋನ್ ಮಾಡಿ ಸ್ವಲ್ಪ ಬರೆಯೋ ಕೊರೀಬೇಡ ಅಂತ ಹೇಳಿದ !! ಮತ್ತು ಲೇಖನಗಳು ಚಿಕ್ಕದಾಗಿದ್ದರೆ ಒಳ್ಳೆಯದು ಎಂಬ ಭಾವನೆ ನನ್ನದು ಕೂಡ.ಈ ಬ್ಲಾಗ್ ಓದಿದ ಮೇಲೆ ನಿಮ್ಮ ಚಿಕ್ಕಂದಿನ ನೆನಪುಗಳು ನಿಮಗೂ ಕೂಡ ಬಂದರೆ ಆಗ ನಿಮ್ಮ ಒಳ್ಳೆಯ ನೆನಪುಗಳನ್ನು ನೆನಪಿಸಿದ ಸ್ವಲ್ಪ ತೃಪ್ತಿ ನನಗೂಸಿಗುತ್ತೆ , ಏಕೆಂದರೆ ನೆನಪುಗಳಲ್ಲಿ ಬಾಲ್ಯದ ನೆನೆಪುಗಳು ಮಾತ್ರ ಸಂತೋಷ,ಮಜ,ಸ್ಪೂರ್ತಿ ನೀಡುವವು , ಬಿಟ್ಟರೆ ಮತ್ತೆ ಯಾವ ನೆನೆಪುಗಳು ನಮ್ಮನು ರೆಫ್ರೆಶ್ ಮಾಡೋಲ್ಲ !!! ನಿಮ್ಮನ್ನು ಕೂಡ ನಿಮ್ಮ ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ಯುವ ಒಂದು ಸಣ್ಣ ಕೆಲಸ ಮತ್ತು ನನ್ನ ಅನುಭವಗಳ ಬಿಚ್ಚಿಡುವ ಒಂದು ಸಣ್ಣ ಲೇಕನವಿದು ..............
" ಮನುಷ್ಯನ ವಯಸ್ಸು ಏರುತ್ತಿದ್ದಂತೆ , ಹುಮ್ಮಸ್ಸೂ ಏರಬೇಕು. ನಮ್ಮ ಬಾಲ್ಯದಲ್ಲಿನ ಚಟುವಟಿಕೆ ಯುಳ್ಳ ಮನಸ್ಸು ಇಂದಿಗೂ ನಮ್ಮ ಸ್ವತ್ತು . ನಾವು ದಿನೇ ದಿನೇ ಎದುರಿಸುವ ಚಿಂತಾಗ್ರಸ್ಥ ಸಂಧರ್ಭಗಳಲ್ಲಿ 'ಅಯ್ಯೋ ನಾ ಸೋತೆ ' ಅನ್ನದೆ ಬಾಲ್ಯದ ಆ ಹುರುಪನ್ನು ಮರು ಉಪಯೊಗಿಸಿಕೊಲ್ಳುವುದು ನಮ್ಮ ಮೇಲಿದೆ " by Aswini BM
ನಿಮಗಾಗಿ.......
ನಿರಂಜನ್