ಶುಕ್ರವಾರ, ನವೆಂಬರ್ 22, 2013

Hate mistakes not the parson ....

 

                                                     Hate mistakes not the person ....

" The Supreme Court on Wednesday accepted former Army Chief VK Singh’s unconditional apology withdrawing his comments questioning a judicial verdict on his age row controversy and dropped the contempt proceedings against him " .....

ಸ್ನೇಹಿತರೆ ...

ಕೆಲವು ದಿನಗಳಿಂದ , ದಿನಗಳೇನು ಕೆಲ ವರ್ಷಗಳಿಂದ ನಮ್ಮ VK .ಸಿಂಗ್ ಮೇಲಿಂದ ಮೇಲೆ ಸುದ್ದಿಯಲ್ಲಿದ್ದಾರೆ. ಇವರು  ನಮ್ಮ  ದೇಶದ ಭೂಸೇನಾ ಮುಖ್ಯಸ್ಥರಾಗಿದ್ದಾಗ ತಮ್ಮ ಜನ್ಮದಿನದ ಸಂಬಂಧವಾಗಿ, ಕೇಂದ್ರ ಸರ್ಕಾರದ ವಿರುದ್ದವೇ ನ್ಯಾಯಲಯದಲ್ಲಿ  ಹೋರಾಡಿದ್ದರು .  ಸೇನೆಯಲ್ಲಿ ಅಧಿಕಾರದಲಿದ್ದು , ಸರ್ಕಾರವನ್ನೇ  ಕೋರ್ಟ್ ಖಟಖಟೆ ಏರಿಸಿದ್ದ ಮೊದಲ ಅಧಿಕಾರಿಯೆಂಬ ಕುಖ್ಯಾತಿಯನ್ನೂ ಸಹ ಇವರು ಪಡೆದಿದ್ದರು. ನಂತರ ನಿವೃತ್ತರಾದಾಗ ಅಣ್ಣ ಹಜಾರೆಯವರೊಂದಿಗೆ ಬ್ರಷ್ಟಾಚಾರ ವಿರೋದಿ ಆಂದೋಲನದಲ್ಲಿ ಭಾಗಿಯಾಗಿ ಜನರಿಂದ  ಸೈ ಕೂಡ ಎನಿಸಿಕೊಂಡಿದ್ದರು , ಮೊನ್ನೆ ಇವರ ಮೇಲೆಯೇ   ಅಧಿಕಾರಾವದಿಯಲ್ಲಿ ಹಣ ದುರುಪಯೋಗ ಮಾಡಿದ ಆರೋಪವನ್ನು ನಮ್ಮ ಕಾಂಗ್ರೆಸ್ ಘನ ಸರ್ಕಾರ ಆಗ ಮಾಡದಿದ್ದರೂ ಈಗ ಮಾಡಿದೆ. ಅದೇನೇ ಇರಲಿ ಇವರ ಮೇಲೆ ಅನೇಕರ ಕೆಂಗಣ್ಣುಗಳಂತೂ ಇವೆ,  ಅದಕ್ಕೆ ಅನೇಕ ರಾಜಕೀಯ ಕಾರಣಗಳೂ ಕೂಡ ಇವೆ. ಇಂಥವರು ತಮ್ಮ ಜನ್ಮದಿನದ ಕುರಿತಾಗಿ ದೇಶದ ಉಚ್ಚನ್ಯಾಯಾಲಯ ಕೊಟ್ಟ ತೀರ್ಪಿನ ಬಗ್ಗೆ ಮಾತಾಡುತ್ತ , ತರಾತುರಿಯಲ್ಲಿ ನ್ಯಾಯಾಂಗ ನಿಂದನೆಯನ್ನು  ಕೂಡ ಮಾಡಿದರು , ನ್ಯಾಯಾಲಯದ ಕೆಂಗಣ್ಣಿಗೂ ಗುರಿಯಾದರು .  ದೇಶದ ಅತ್ಯುನ್ನತ್ತ ಅಧಿಕಾರದಲಿದ್ದ ,  ತಿಳುವಳಿಕೆ ಇರುವಂಥಹ ವ್ಯಕ್ತಿಯೇ  ಈ ರೀತಿಯಾಗಿ ನ್ಯಾಯಾಂಗ ನಿಂದನೆ ಮಾಡಿರುವುದನ್ನು ಖಂಡಿಸಿ ಸುಪ್ರೀಂ ಕೋರ್ಟ್ ಇವರನ್ನು ತೀವ್ರ ತರಾಟೆಗೂ ತೆಗೆದುಕೊಂಡಿತ್ತು. ಇದನ್ನು ಅನೇಕರು , ಜನ ಸಾಮಾನ್ಯರು ಖಂಡಿಸಿದ್ದರು.  ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಆರೋಪದ ಮೇಲೆ ಇವರ ಮೇಲೆ  ಕ್ರಮ ಜರುಗಿಸಲು ಆದೇಶವನ್ನು ಸಹ ಮಾಡಿತ್ತು. ಹಾಗಾಗಿ ಕೋರ್ಟ್ VK ಸಿಂಗ್ ರ ಸಮಜಾಯಿಷಿ ಕೂಡ ಕೇಳಿತ್ತು. ತಕ್ಷಣಕ್ಕೆ ತಮ್ಮ ಅಚಾತುರ್ಯದಿಂದ ಆದ ತಪ್ಪನ್ನು  ಅರಿತ  VK ಸಿಂಗ್  ಸುಪ್ರೀಂ ಕೋರ್ಟ್ ಗೆ  ತಮ್ಮ ಬೇಷರತ್ ಕ್ಷಮೆ ಕೇಳಿದರು  ಹಾಗು " ತಮ್ಮ ತಪ್ಪಿನ ಅರಿವಾಗಿದೆ ನಾನೆಂದು ಮುಂದೆ  ಈ ರೀತಿಯ ತಪ್ಪು ಮಾಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ನ್ಯಾಯಾದೀಶರ ಮುಂದೆ  ಸಮಜಾಯಿಷಿ ಕೂಡ ಕೊಟ್ಟರು. ಹಾಗ  ಇವೆಲ್ಲವನ್ನೂ  ಅಳೆದು ತೂಗಿ  ಅಂಥಹ ಸುಪ್ರೀಂ ಕೋರ್ಟ್  ಅವರನ್ನು ಆ ಕ್ಷಣದಲ್ಲೇ  ಕ್ಷಮಿಸಿದೆ ಮತ್ತು ಕ್ರಮ ಜರುಗಿಸುವುದನ್ನು ಆ ಕ್ಷಣಕ್ಕೆ ನಿಲ್ಲಿಸಿದೆ.
 
 
                   ಇದನೆಲ್ಲ ಇವ ಇಲ್ಲಿ ಯಾವ ಕಾರಣಕ್ಕಾಗಿ  ಹೇಳುತ್ತಿದ್ದಾನೆ ಎಂದು ನಿಮಗೆ ಅನ್ನಿಸುತ್ತಿರಬಹುದು . ಕಾರಣ ಇದೆ ಸ್ನೇಹಿತರೆ .  VK .ಸಿಂಗ್ ಏನು ಸಾಮಾನ್ಯ ವ್ಯಕ್ತಿಯಲ್ಲ , ವಿದ್ಯಾವಂತರು , ಬುದ್ದಿವಂತರು , ಸಮರ್ಥ ಹಾಗು ದಕ್ಷ ಆಡಳಿತಗಾರ. ಅನೇಕರೊಂದಿಗೆ , ಅನೇಕ ವಿಷಯಗಳಲ್ಲಿ , ಅನೇಕ ಕ್ಲಿಷ್ಟಕರ ಪರಿಸ್ತಿಥಿಗಳನ್ನು ಎದುರಿಸಿ, ಹೋರಾಡಿದ ಅನುಭವಿಗಳು  ಕೂಡ, ವಯಸ್ಸಿನಲ್ಲೂ ಹಿರಿಯರು . ಇಂಥಹ ವ್ಯಕ್ತಿಯೇ  ಪರಿಸ್ಥಿತಿಯ ಒತ್ತಡಕ್ಕೆ ಮಣಿದು ತಪ್ಪುಗಳನ್ನು ಮಾಡಿದ್ದಾರೆ.  ಅದು ಸಾಮಾನ್ಯ ತಪ್ಪೇನು ಆಗಿರಲಿಲ್ಲ .  ನಮ್ಮ ದೇಶದ ಉನ್ನತ ನ್ಯಾಯಾಲಯವನ್ನೇ ಅವರು  ದೂಷಿಸಿದ್ದರು. ರೊಚ್ಚಿಗೆದ್ದಿದ್ದ ಕೋರ್ಟ್ ಕೂಡ ಇವರ ವಿರುದ್ದ ಕ್ರಮ ಜರುಗಿಸಲು ಮುಂದಾಗಿತ್ತು. ಆದರೂ  VK .ಸಿಂಗ್  ಕೇಳಿದ ಒಂದೇ ಒಂದು ಕ್ಷೆಮೆಯನ್ನು ಕೋರ್ಟ್ ಪುರಸ್ಕರಿಸಿ ಇವರ ತಪ್ಪನ್ನು ಮನ್ನಿಸಿತು. ಇಂಥಹ ವ್ಯಕ್ತಿಗಳು ಕೂಡ ಪರಿಸ್ಥಿತಿಯ ಒತ್ತಡಕ್ಕೆ ಮಣಿದು , ಸಮತೋಲನ ಕಳೆದುಕೊಂಡು ತಪ್ಪುಮಾಡುವಾಗ ನಮ್ಮಂಥ ಸಾಮಾನ್ಯರು ತಪ್ಪು ಎಸಗುವುದು ಮಹಾಪರಾಧವೇನಲ್ಲ.  ಆದರೆ ತಪ್ಪನ್ನು ಅರಿತ ಮೇಲೆ ಸುಮ್ಮನೆ ಕೂರದೆ ತಪ್ಪು ಸರಿ ಮಾಡಿಕೊಳ್ಳುವ ಅವಕಾಶವಿದ್ದರೆ ಆ ಕಡೆಗೆ ಗಮನ ಕೊಡಬೇಕು.ಮಾಡಿದ ತಪ್ಪನ್ನು  ಸರಿಪಡಿಸಿದರೆ  ಅದು ಅವರ ದೊಡ್ಡಗುಣ.  
 
 
                  ಎಂಥಹ ತಪ್ಪುಗಳನ್ನು ಮಾಡಿದರು ಕೂಡ , ಅರಿತು ನಾವು ಸರಿಯಾಗಿ ಆಲೋಚಿಸದರೆ ತಪ್ಪು ಸರಿದೂಗಿಸುವ ಮಾರ್ಗ ಇದ್ದೆ ಇರುತ್ತೆ. ಆ ನಿಟ್ಟಿನಲ್ಲಿ ತಪ್ಪು ಮಾಡಿದವರು ಅರಿತು ತಪ್ಪನ್ನು ಸರಿ ಮಾಡುವ ಕೆಲಸದಲ್ಲಿ ತೊಡಗಿದರೆ ನಾವು ಆ ಕೆಲಸವನ್ನು ಪುರಸ್ಕರಿಸಬೇಕು. ಮಾಡಿದ ತಪ್ಪುಗಳನ್ನೇ ಮುಂದೆಂದು ಮಾಡದಂತೆ ಎಚ್ಚರವಹಿಸಬೇಕು.  ನಮ್ಮ ದೇಶದಲ್ಲಿ ಅತ್ಯಂತ ಕ್ರೂರ ತಪ್ಪು ಮಾಡಿ ಗಲ್ಲು ಶಿಕ್ಷೆಗೆ ಒಳಪಟ್ಟಿದ್ದರೂ , ನಮ್ಮ ರಾಷ್ಟ್ರಪತಿಗಳ ಕೈಯಲ್ಲಿ ಅವರನ್ನು ಮನ್ನಿಸುವ, ಕ್ಷಮಿಸುವ  ಅಥವಾ ಶಿಕ್ಷೆಯನ್ನು ಕಡಿಮೆ ಮಾಡುವ ಅವಕಾಶವಿದೆ.  ಹೀಗಿರುವಾಗ ನಾವು ಸಾಮಾನ್ಯರು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನೇ ಮನ್ನಿಸಲಾಗದೆ , ಕ್ಷಮಿಸಲಾಗದೆ ಮನುಷ್ಯರನ್ನು ದೂಷಿಸುತ್ತೇವೆ. ಕೆಲವೊಮ್ಮೆ ಒಬ್ಬರೊನ್ನೊಬ್ಬರು ನೋಯಿಸಿಕೊಳ್ಳುತ್ತೇವೆ .  ಮಾತು ಬಿಡುತ್ತೇವೆ, ಸಂಬದಗಳನ್ನೇ ಮುರಿದುಕೊಳ್ಳುತ್ತೇವೆ. ನಿಜವಾಗಿಯೂ ನಾವು ಈ ರೀತಿಯಾಗಿ ವರ್ತಿಸುವುದು ಸರಿಯೋ ?. ತಪ್ಪು ಮಾಡಿದಾಗ ಕ್ಷಮಾಪಣೆಯನ್ನು ಕೇಳಲು ಹಾಗು ತಪ್ಪುಗಳನ್ನು ಮನ್ನಿಸಲು ನಮ್ಮ ಅಹಂಗಳನ್ನೂ  ಅಡ್ಡ ಬರಲು ಬಿಟ್ಟುಕೊಂಡು ಸಂಬಂದಗಳನ್ನೇ ಹಾಳು ಮಾಡಿಕೊಳ್ಳುತ್ತೇವೆ, ಸ್ನೇಹವನ್ನು ಕಳೆದುಕೊಳ್ಳುತ್ತೇವೆ. ನಿಜವಾಗಿಯೂ ನಾವು ಸಣ್ಣ ಪುಟ್ಟ ತಪ್ಪುಗಳಿಗೆ  ಅಷ್ಟೊಂದು ಬಿರುಸಾಗಿ ವರ್ತಿಸುವ  ಅವಶ್ಯಕತೆ ಇದೆಯಾ ?.  ಯಾರು ಕೂಡ  ಬೇಕೆಂದೇ ತಪ್ಪುಗಳನ್ನು ಮಾಡುವುದಿಲ್ಲ , ತಪ್ಪು ಅರಿತ ಮೇಲೆಯಾದರು  ಆತ ಕ್ಷೆಮೆಯಾಚಿಸಿದರೆ ಒಳ್ಳೆಯ ಮನಸ್ಸಿನಿಂದ ಆತನನ್ನು ಕ್ಷಮಿಸಿದರೆ ನಾವು ಕಳೆದುಕೊಳ್ಳುವುದು ಏನು ??
 
 
                 ನಮ್ಮ ದೇಶದ ಸುಪ್ರಿಂ ಕೋರ್ಟ್  ಹಾಗು  ರಾಷ್ಟ್ರಪತಿಗಳೇ ಕ್ಷೆಮೆ ನೀಡುವರಂತೆ ಇನ್ನು ನಾವು ತಪ್ಪುಗಳನ್ನು  ಮನ್ನಿಸುವುದರಲ್ಲಿ ದೊಡ್ದಮಾತೆನಿದೆ. ತಪ್ಪು ಮಾಡಿದವನು ಸಣ್ಣವ , ತಪ್ಪು ಅರಿತು ಸರಿ ಮಾಡುವನು ದೊಡ್ಡವ , ತಪ್ಪುಗಳನ್ನು ಕ್ಷಮಿಸುವವನು ದೊಡ್ಡವ,  ಕ್ಷಮಿಸದಿರುವವನು ಮತ್ತೆ ಸಣ್ಣವ.  ಸಹಜವಾಗಿ ನಡೆಯುವ ತಪ್ಪುಗಳನ್ನು ಮನ್ನಿಸಬೇಕು , ನೋಡಿಯು ನೋಡದಿರಬೇಕು. ಕ್ಷಮೆಯನ್ನು ಪುರಸ್ಕರಿಸಿ ಮತ್ತೆ ಸಹಜವಾಗಿ ಬಾಳಿದರೆ ನಾವುಗಳು ಕಳೆದು ಕೊಳ್ಳುವುದು ಏನು ಇಲ್ಲ . ಈ ಅಹಂಮ್ಮುಗಳನ್ನೂ ಬಿಟ್ಟು , ಕೆಲವೊಮ್ಮೆ ಸೋತು ನೆಡೆದದ್ದೇ ಆದರೆ ನಿಜವಾಗಿಯೂ ಆರೋಗ್ಯಕರವಾದ ಜೀವನ ಮಾಡ ಬಹುದು . ಇಲ್ಲವಾದರೆ ನಾವು ಎಂದು ಸುಖಿಗಳಾಗುವುದಿಲ್ಲ. ತಪ್ಪುಗಳ ಪಶ್ಚಾತ್ತಾಪದಲ್ಲಿ ಬೇಯಬೇಕು , ಅಸಹನೆಯಲ್ಲೇ ಸಾಯುವ ತನಕ ಬೇರೆಯವರನ್ನು ದೂಷಿಸುತ್ತ ಕಾಲ ಕಳೆಯಬೇಕು. 
 
                ಸಣ್ಣ ಪುಟ್ಟ ತಪ್ಪುಗಳನ್ನು ಮರೆಯೋಣ , ಕ್ಷಮಿಸುವ ಗುಣ ಬೆಳೆಯಿಸಿಕೊಳ್ಳೋಣ , ಸಣ್ಣ ಪುಟ್ಟ ತಪ್ಪುಗಳಿಗೆ ನಮ್ಮ ಅಮೂಲ್ಯ ಸಂಬಂದಗಳು ಹಾಳಾಗದಂತೆ ಎಚ್ಚರ ವಹಿಸೋಣ , ತಪ್ಪುಗಳನ್ನು ಸರಿಪಡಿಸಿಕೊಳ್ಳಲು ದಾರಿಗಳಿದ್ದರೆ ಅವುಗಳನ್ನು ಹುಡುಕಿ , ತಪ್ಪು ಸರಿದೂಗಿಸುವ ಕೆಲಸ ಮಾಡೋಣ. ಸಣ್ಣ ಪುಟ್ಟ ತಪ್ಪಿಗಾಗಿ ಮನುಷ್ಯರನ್ನು ದೂಷಿಸುವುದನ್ನು ಆದೊಷ್ಟು ಕಡಿಮೆ ಮಾಡಿಕೊಳ್ಳೋಣ . ಇದಕ್ಕೆ ಪೂರಕವಾಗಿ  ಮಹಾತ್ಮ ಗಾಂಧಿ ಹೇಳಿದ ಮಾತಿನೊಂದಿಗೆ ಈ ಲೇಖನವನ್ನು ನಾನು ಮುಗಿಸುತ್ತೇನೆ ,     
                                               "  Hate mistakes not the person "
 
ನಿಮಗಾಗಿ 
ನಿರಂಜನ್ 
 

ಶುಕ್ರವಾರ, ಅಕ್ಟೋಬರ್ 25, 2013

ನಯವಾಗಿ

                  ನಾ ನೊಂದೆ..... 


ಗುವಿನಲಿ ನಲಿವಿದೆ ,ನಯನದಲಿ ನಾಚಿಕೆಯಿದೆ
ನೋಡಿ ಸುಮ್ಮನಿರದೆ, ನಯವಾಗಿ ನಾ ನೊಂದೆ..   

ಬೀಸುವ ತಂಗಾಳಿಯು ನಿನ್ನ ಬಳಸಿ ಬಳಿ ಬಂದು
ಸ್ಪರ್ಶದಿ ಬಳುಕಿದ ನಿನ್ನ ನಡುವ ವರ್ಣಿಸುತಿಹುದು..

ಮೈಮೇಲೆ ಮುಗಿಬಿದ್ದು ನಿನ್ನ ಎಳೆಯ ಯವ್ವನಕೆ
ಬಿಸಿ ತಾಗಿಸಿದ ಬೆಳ್ಳಿ ಬೆಳಕು ತಾ ನಾಚುತಿಹುದು.. 

ನೀನುಟ್ಟ ಆ ವಸ್ತ್ರಗಳು ನಿನ್ನಪ್ಪಿ ಬಿಟ್ಟ ಆ ಕುಹಕ
ನಗೆಯ ಬಾಣಗಳೆನ್ನ ಹೃದಯದಾಳಕ್ಕೆ ನಾಟಿವೆ..   

ಮೂದಲಿಸುತಿಹವು ಪಂಚಬೂತಗಳೆನ್ನ, ಪ್ರೀತಿ
ಯಿಂದಲೇ  ಶರಣಾದವು ನನ್ನ ಅರಿಷಡ್ವರ್ಗಗಳು..      

ಮಣ ಬೆಲ್ಲವ ನೊಣ ಮುತ್ತುವಂತೆ ನಿನ್ನನ್ನೊಮ್ಮೆ 
ಮುತ್ತಲು ಹಾತೊರೆಯುತ್ತಿವೆ ನನ್ನ ಈ ಕಣ್ಣುಗಳು..

ನಗುವಿನಲಿ ನಲಿವಿದೆ ,ನಯನದಲಿ ನಾಚಿಕೆಯಿದೆ
ನೋಡಿ ಸುಮ್ಮನಿರದೆ, ನಯವಾಗಿ ನಾ ನೊಂದೆ..




ನಿಮಗಾಗಿ
ನಿರಂಜನ್

 

ಮಂಗಳವಾರ, ಸೆಪ್ಟೆಂಬರ್ 24, 2013

ಪ್ರೀತಿಯ


           ಇಳಿಮುಖ

ಇಳಿ ಮುಖವಾಗುತ್ತಿಲ್ಲವೇ  ನನ್ನಿನಿಯಾ
ನಮ್ಮ  ಪ್ರೀತಿಯಲೆಗಳ ಬಾರಿಭೋರ್ಗರೆತ.. ?

ನಾವು ಕಟ್ಟಿದ ಕನಸುಗಳು ನನಸಾಗುವ
ಮುನ್ನವೇ  ಮಾಸುತ್ತಿವೆಯಲ್ಲವೇ ಮಾತಿಲ್ಲದೆ ?  

ನಾವು ತುಂಬಿಸುತ್ತಿದ್ದ ತುಂಬುಪ್ರೀತಿಯ
ಬಟ್ಟಲು ಒಣಗಿ ಬರಿದಾಗುತ್ತಿದೆಯಲ್ಲವೇ ?

ನಾನರಿಯೆ ಮನದರಸಿ , ಜಾರುತಿಹುದೆನ್ನ
ಮನಸ್ಸು ಮಂಕಾಗಿ, ಕಳೆಯಬಿಡದಿರದನ್ನ

ಅಮೃತದ ಆಕರಗಳಾಗಿದ್ದ ಅದರಗಳು
ಅಂಜಿಕೆಯಿಂದಗಲಿಕೆಗೆ ಹಾತೊರೆಯುತ್ತಿವೆ

ಪ್ರೀತಿಯ  ಮಧುವಾಗಿದ್ದ  ನಮ್ಮೊಡಲು 
ಕೋಪದ  ಮಡುವಾಗಿವೆ, ಸಹಕರಿಸಬೇಕು 

ನಾವಾಡಿದಾಟ ನಲಿದಾಟಗಳೊಲುಮೆಯ
ಚಿಲುಮೆ ಬತ್ತುವ ಮೊದಲೇ,ಸ್ಫೂರ್ತಿಯಾಗು 

ಹುಸಿಯ  ಕೋಪದ ಮಾತುಗಳು ಪ್ರೀತಿಯ
ಕಸಿದು  ಕೊಳ್ಳುವ ಮೊದಲು , ಹಸಿ ನಗೆಬೀರು

ನಿಮಗಾಗಿ
ನಿರಂಜನ್ 

ಶನಿವಾರ, ಆಗಸ್ಟ್ 31, 2013

ನುಡಿದ ವೀಣೆ

         ನುಡಿದ ವೀಣೆ 

ಬಿಳಿಯ ವಸ್ತ್ರವನುಟ್ಟು  ನೀ ಬರುತಿರೆ ....
ಮಲ್ಲಿಗೆಯನ್ನು ಧರಿಸಿದಂತೆ ಈ ಧರೆ ....

ನೊರೆಯಾಲಿನಂತಹ ನಿನ್ನ ಈ ಚಲುವ
ಮರೆಯುವುದಿಲ್ಲ ಚೆಲುವೆ ನಿನ್ನ ಒಲವ.... 

ಬೋರ್ಗರೆಯಲಿ ನಿನ್ನ  ಪ್ರೇಮದ ಅಲೆ..
ನುಡಿಯಲಿ  ವೀಣೆ ನನ್ನೆದೆಯ ಮೇಲೆ ...  

ಮನದ ತಾಳಕೆ ಶ್ರುತಿ ಇಡಿಯುವವಳು ನೀ
ಮನದ ಹಾಡಿಗೆ  ಸಾಹಿತ್ಯ ರೂಪಳೂ ನೀ....

ನೀ ನನಗುಣ್ಣೆಮೆಯ ಪೂರ್ಣ ಚಂದಿರ 
ಪ್ರತಿ ದಿನವೂ ಪೌರ್ಣಮಿಯಾಗಲೆಂದು,
ಬಯಸುವುದು ನನ್ನ ಈ ಪುಟ್ಟ ಹೃದಯ ....

ನಿಮಗಾಗಿ 
ನಿರಂಜನ್ 

ಗುರುವಾರ, ಆಗಸ್ಟ್ 29, 2013

ಸುಮ್ಮನಿರಲಿಲ್ಲವೇಕೆ...



   ಸುಮ್ಮನಿರಲಿಲ್ಲವೇಕೆ... 

ನ ಹೇಳಲಿ, ನಾ ಅದೆಷ್ಟು ಬಣ್ಣಿಸಲಿ
ಮನದಾಳದಲಿ ಬರೀ ನೀನೆ ಇರಲು...

ಪ್ರಿಯೆ, ನೋಡಿದಾಕ್ಷಣ ಸುಮ್ಮನ್ನಿರದೆ
ಸುಮ್ಮನಿದ್ದ  ಹೃದಯದಾಳಕ್ಕೆ  ಜಿಗಿದೆ 

ತಣ್ಣಗಿದ್ದ , ಭಾವನೆಗಳಿಗೆ ಬಣ್ಣವ ಹಚ್ಚಿ 
ಸಣ್ಣಗಿದ್ದ ಆಸೆಯನ್ನುಬ್ಬಿಸಿ ಹುಚ್ಚಚ್ಚಿಸಿದೆ

ಆಸೆಯ ಬಳ್ಳಿಯ ಬೇರು ಆಳಕ್ಕಿಳಿದಿರಲು
ಆಸರೆಯ ಬಯಸದೇ  ಜೊತೆಯಲಿರಲು

ನೀ ನಡೆದಾಗೆದ್ದೇಳುವ  ಗೆಜ್ಜೆಯ ತಾಳ  
ನೀ ನುಡಿದಾಗುರುಳುವ ಮುತ್ತಿನ ಮೇಳ
ಮೇಳವಿಸಿ ಕುಣಿಯದಿರುವುದೇ ನನ್ನ ಹೃದಯದಾಳ ....

ಮನದ ಕನಸಿನೋತ್ಸವದ ರಾಣಿ ನೀನೆ 
ನನ್ನ ಪ್ರೀತಿಯುತ್ಸಾಹದ ಸ್ಪೂರ್ತಿ ನೀನೆ

ಏನ ಹೇಳಲಿ, ನಾ ಅದೇಷ್ಟು ಬಣ್ಣಿಸಲಿ
ಮನದಾಳದಲಿ ಬರೀ ನೀನೆ ಇರಲು..............

ನಿಮಗಾಗಿ 
ನಿರಂಜನ್ 



ಶನಿವಾರ, ಆಗಸ್ಟ್ 17, 2013



ಸೋತ ಬಳ್ಳಿ , ನುಲಿದ ಮಳ್ಳಿ

ಮರುಕಳಿಸಿ ಮುಂಜಾವಿನಲಿ ಮುತ್ತಿದವು 
ಮರೆತ ಆ ನನ್ನ ಹಳೆಯ ನೆನಪುಗಳು

ಕ್ಷಣದಲ್ಲೇ  ಬಂದವು , ಬಿಗಿದಪ್ಪಿದವು
ಇಡಿದೆಳೆದಾಡಿದವು ನನ್ನ ಹಳೆಯ ನೆನಪುಗಳು

ಆಷಾಡದ ಗಾಳಿ, ತಂಪಾದ ನಿಸರ್ಗ
ಹಕ್ಕಿಗಳಿಂಚರ, ಧರೆಗಿಳಿದಂತಿತ್ತು ಸ್ವರ್ಗ

ನೀನರಿಯದೆ ನಗೆ ಬೀರಿ ನಿಂತಿದ್ದೆ ಅದರ ಬಳಿ  
ನಾಚಿ ನೀರಾಗಿತ್ತು ಕಂಡೊಡನೆ ಆ ಮಲ್ಲಿಗೆ ಬಳ್ಳಿ  

ನಿನ್ ನೋಟಕೆ , ನಿನ್ ಬಳುಕಿಗೆ  ಸೋತಿತ್ತು
ಇವಳೊಬ್ಬಳೆ ಎನಗೆ ಸರಿಸಾಟಿ ಎಂದೆನಿಸಿತ್ತು 

ನೀರ ಮುತ್ತ ಮಣಿಗಳುರುಳಿದವು ನಿನ್ಮೇಲೆ 
ತಾನೇ ಸುರಿಯಿತು ಸೋತು, ಬಳ್ಳಿ ಹೂಮಳೆ

ಉಳಿದ ಮೊಗ್ಗುಗಳೋ ಅರಳುವುವು ಇನ್ನೆಲ್ಲಿ  ?,
ಝೇಂಕರಿಸುವ ಸುಂದರ ದುಂಬಿಯಾಟವಿನ್ನೆಲ್ಲಿ  ?

ಸೋತಿತ್ತು ಅಲ್ಲಿ , ನಿನ್ ನೋಡಿದ ಮಲ್ಲಿಗೆ ಬಳ್ಳಿ , 
ನೀನೋ  ಅರಿಯದೆ , ಹಾಗೆ ಇದ್ದೆ ಬಲು ಮಳ್ಳಿ ..

ನಿಮಗಾಗಿ 
ನಿರಂಜನ್

ಬುಧವಾರ, ಆಗಸ್ಟ್ 14, 2013

ಸ್ವಾತಂತ್ರ್ಯದ ದಿನ .....

                                                  
                                                           ಸ್ವಾತಂತ್ರ್ಯದ  ದಿನ  ..... 
 
ಸ್ನೇಹಿತರೆ  ಮತ್ತೆ ಬಂದಿತು ಈ ದಿನ , ಸ್ವಾತಂತ್ರದ  ದಿನ , ನಮ್ಮೆಲ್ಲರನ್ನೂ ಬ್ರಿಟೀಷರ  ಕೈ ವಶದಿಂದ ಮುಕ್ಥವಾಗಿಸಿದ ದಿನ . ಇದೇ ದಿನಕ್ಕಲ್ಲವೇ ನಾವೆಲ್ಲರೂ ಕಾದದ್ದು ಅದೆಷ್ಟೋ ದಿನ. ಹಗಲಿರುಳೆನ್ನದೆ , ಮೇಲು ಕೀಳೆನ್ನದೆ, ಹಿರಿಯ-ಕಿರಿಯರೆನ್ನದೆ, ಗಂಡು ಹೆಣ್ಣೆನ್ನದೆ ತ್ಯಾಗಬಲಿದಾನ ಮಾಡಿದ ಆ ಮಾಹಾತ್ಮರನ್ನು ನೆನೆಯುವ ಸುದಿನ. ದೇಶಕ್ಕಾಗಿ ದುಡಿಯುವ , ಪ್ರಾಮಾಣಿಕವಾಗಿ ದೇಶದ ಹಿತಕ್ಕಾಗಿ ಚಿಂತಿಸುವ ದಿನ , ಒಗ್ಗಟ್ಟಾಗಿ ನಾವೆಲ್ಲರೂ ಮುಂದಿನ ಭಾರತಕ್ಕೆ ಏನು ಕೊಡುತ್ತೇವೆ ಎಂಬುದರ ಬಗ್ಗೆ ಯೋಚಿಸುವ  ದಿನ. 
 
                ಈ ದಿನ ಬರೀ ಕೇವಲ  ದ್ವಜ ಹಾರಿಸಿ, ಸಿಹಿ ಹಂಚಿ , ರಜ ಕಳೆಯುವುದಕ್ಕೆ ಮಾತ್ರ ಸೀಮಿತವಾಗಿರದೆ , ನಮ್ಮ ದೇಶದ ಇತಿಹಾಸವನ್ನು  ತಿಳಿಯುವ, ಯುವ ಜನತೆಯಲ್ಲಿ ದೇಶಪ್ರೇಮ ಮೂಡಿಸುವ , ನಾಡಿನ ಅಭಿವೃದ್ದಿಗೆ ಶ್ರಮಿಸಿದ , ಈಗಲೂ ಶ್ರಮಿಸುತ್ತಿರುವ ಪುಣ್ಯ ಪುರುಷರ ಬಗ್ಗೆ ತಿಳಿದಿಕೊಳ್ಳುವ ದಿನವಾಗುವುದರ ಜೊತೆಗೆ ಅಂಥಹ ಮಹನೀಯರಿಗೆ  ಅಭಿನಂದನೆ , ಗೌರವ  ಸಲ್ಲಿಸುವ ದಿನವಾಗಬೇಕು. ನಾವೆಲ್ಲರೂ ಚಿಕ್ಕ ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸುವ ಕೆಲಸದಲ್ಲಿ ಪಾಲ್ಗೊಳ್ಳಬೇಕು , ದೇಶದ ಯುವ ಜನತೆಗೆ ನಮ್ಮ ದೇಶದ ಇತಿಹಾಸದ ಬಗ್ಗೆ , ನಮ್ಮವರು  ನಮ್ಮ ದೇಶಕ್ಕೆ ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಅರಿವು ಮೂಡಿಸಿ , ಜಾಗೃಥರನ್ನಾಗಿಸಬೇಕು.  ಸದೃಡ ದೇಶ ಕಟ್ಟಲು ನಮ್ಮದೇ ಆದ ರೀತಿಯಲ್ಲಿ ನಾವು ದುಡಿಯಲು ಭಾರತಾಂಬೆಯ ಹೆಸರಲ್ಲಿ ಪ್ರತಿಜ್ಞೆ ಮಾಡಿ, ಆ ದಿಸೆಯಲ್ಲಿ ಕಾರ್ಯಮಗ್ನರಾಗಬೇಕು. 
 
 
 
              ಸ್ನೇಹಿತರೆ ,  ಈಗಿನ ಸದ್ಯದ ಪರಿಸ್ಥಿತಿಯಲ್ಲಿನಾವು ನಮ್ಮ ದೇಶದ ಬಗ್ಗೆ ಇನ್ನೂ ಹೆಚ್ಚಿನ ಖಾಳಜಿ  ವಹಿಸಬೇಕಾಗಿದೆ. ದೇಶದ ಹಾಗು-ಹೋಗುಗಳ ಬಗ್ಗೆ ಜಾಗೃತರಾಗಬೇಕಾಗಿದೆ.  ರಾಜಕೀಯ ದೊಂಬರಾಟಗಳು , ದೇಶದ ಗಡಿಯಲ್ಲಾಗುತ್ತಿರುವ ಪ್ರಸಕ್ತ ಬೆಳವಣಿಗೆಗಳು, ನಮ್ಮ ದೇಶದ ಕಿರೀಟಪ್ರಾಯವಾದ ಕಾಶ್ಮೀರದಲ್ಲಿ ನಡೆಯುತ್ತಿರುವ ಕೋಮುಗಲಬೆ , ಸದ್ಯದ ಆರ್ಥಿಕ ಸಂಕಷ್ಟಗಳು, ರಾಜ್ಯ-ರಾಜ್ಯಗಳ  ನಡುವಿನ ಅಂತಃ ಕಲಹಗಳು , ಆಂದ್ರದಲ್ಲಿರುವ  ಪ್ರಕ್ಷುಬ್ದ  ವಾತಾವರಣ ನಮಗೆಲ್ಲ ನಿದ್ದೆಗೆಡಿಸಿವೆ ನಿಜ. ಆದರೆ ಅದಕ್ಕೆಲ್ಲ ಪರಿಹಾರವು ಕೂಡ ಇದ್ದೆ ಇದೆ. ಈ ಎಲ್ಲಾ  ಸಮಸ್ಯಗಳ ಪರಿಹಾರಕ್ಕೆ ಸೂತ್ರಗಳು ದೇಶದ ಎಲ್ಲ ಪ್ರಜೆಯ ಕೈಯಲ್ಲೂ ಇವೆ. ಹಾಗಾಗಿ ನಾವು ಸರಿಯಾಗಿ ಚಿಂತಿಸಿ ಯಾವುದು ಸರಿ ಯಾವುದು ತಪ್ಪು , ನಮ್ಮ ದೇಶದ ಪ್ರಗತಿಯಲ್ಲಿ ನಾವು ನಮ್ಮನ್ನು ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ಅರಿತು ಪ್ರತಿಯೊಬ್ಬರು ದೇಶವನ್ನು ಕಟ್ಟುವುದರಲ್ಲಿ , ದೇಶದ ಏಳಿಗೆಯ ಮಹಾನ್ ಕಾರ್ಯಕ್ರಮದಲ್ಲಿ  ಹಿಂಜರಿಯದೆ  ಪಾಲ್ಗೊಳ್ಳಬೇಕಾಗಿದೆ. ಪ್ರತಿಯೂಬ್ಬ ಪ್ರಜ್ಞಾವಂತ ಪ್ರಜೆಯು ಕೂಡ ತನ್ನದೇ ರೀತಿಯಲ್ಲಿ ತಾನು ಈ ಮಹತ್ವದ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಹಾಗು ಇದಕ್ಕೆ ಅನೇಕ ದಾರಿಗಳೂ ಕೂಡ ಇವೆ. 
 
              ಜನರಲ್ಲಿ ದೇಶದ ಸದ್ಯದ ಬೆಳವಣಿಗೆಗಳ  ಬಗ್ಗೆ  ಜಾಗೃತಿ ಮೂಡಿಸುವುದು, ಬ್ರಷ್ಟಚಾರದ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಕ್ಕೆ ಸ್ವಲ್ಪವೂ ವಂಚಿಸದೆ ಸರಿಯಾದ ರೀತಿಯಲ್ಲಿ TAX ಕಟ್ಟುವುದು , ಚಿಕ್ಕ ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸುವುದು , ದೇಶದ ಗಡಿ ರಕ್ಷಣೆಯಲ್ಲಿರುವ ವೀರ ಯೋದರ ಕುಟುಂಬಗಳಿಗೆ ಸಹಾಯ ಹಸ್ತ ನೀಡುವುದು, ಪ್ರಜಾಪ್ರಭುತ್ವದಲ್ಲಿ ನಮ್ಮೆಲ್ಲರ ಹಕ್ಕಾದ ಮತದಾನವನ್ನು ತಪ್ಪಿಸದಂತೆ ಮಾಡುವುದು , ಇನ್ನು ಅನೇಕ ಕೆಲಸಗಳನ್ನು ನಾವು ತಪ್ಪದೆ ಮಾಡಬೇಕಾಗಿದೆ.   ದೇಶದ ಮೂಲಭೂತ  ಸಮಸ್ಯೆಗಳಾದ ಪರಿಸರ ಮಾಲಿನ್ಯದ ಕಡೆ  ವಿಶೇಷ ಗಮನ ಹರಿಸಿ, ನಮ್ಮ  ನದಿ, ಕೆರೆ , ಕಾಡುಗಳ  ಉಳಿವಿಗಾಗಿ ಹೋರಾಡಬೇಕಾಗಿದೆ .  ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ  , ಸರ್ಕಾರದ ಗಮನೆ ಸೆಳೆಯಬಕಾಗಿದೆ .  ಆಡಳಿತ  ಯಂತ್ರವನ್ನು ಮುನ್ನೆಡೆಸುತ್ತಿರುವ ಕೆಲ ಬ್ರಷ್ಟ ರಾಜಕಾರಣಿಗಳನ್ನು ಕಿತ್ತೊಗೆದು ಒಳ್ಳೆಯ , ಸಜ್ಜನ , ದೇಶದ ಬಗ್ಗೆ ಖಾಳಜಿ ಇರುವ , ದೇಶದ ಎಲ್ಲ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು , ನಮ್ಮ ದೇಶವನ್ನು ಅಭಿವೃದ್ದಿಯ  ಪಥದಲ್ಲಿ ಸಾಗಿಸುವ  ಇಚ್ಚಾಶಕ್ತಿ ಇರುವ ನಾಯಕರನು ಚುನಾಯಿಸಬೇಕಾಗಿದೆ. 
 
              ಇವೆಲ್ಲದರ ಜೊತೆಗೆ ನಮ್ಮ ದೇಶದಲ್ಲಿ ಇರುವ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ಭಾಷೆ , ಜಾತಿ , ಹಣಗಳಿಂದ  ನಮ್ಮಲ್ಲಿ ಉಂಟಾಗಿರುವ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಅಂತರವನ್ನು  ಬಡಿದೊಡಿಸಲು  ಸನ್ನದ್ದರಾಗಬೇಕು.  ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಗೌರವಗಳಿಂದ ಕಾಣಬೇಕು. ನಿರಂತರವಾಗಿ ಜಾತಿ, ಭಾಷೆ,  ಧರ್ಮಗಳ ಆಧಾರದ ಮೇಲೆ ನಮ್ಮನ್ನು ನಮ್ಮ ನಮ್ಮ ನಡುವಿನ ಅಂತರವನ್ನು ಹೆಚ್ಚು ಮಾಡುತ್ತಿರುವ ಅಜ್ಞಾನಿಗಳ ವಿರುದ್ದ ದ್ವನಿಯೆತ್ತಿ , ಪ್ರೀತಿಯ ಚಿಲುಮೆಯುಕ್ಕುವಂತೆ ಮಾಡಬೇಕು.  ನಮ್ಮ ಮುಂದಿನ ಪೀಳಿಗೆಗೆ  ನಾವೆಲ್ಲರೂ ಒಳ್ಳೆಯ ಉದಾಹರಣೆಗಾಳಗಬೇಕು ,  ವಿಜ್ಞಾನ , ತಂತ್ರಜ್ಞಾನ,ಆರೋಗ್ಯ ಕ್ಷೇತ್ರದಲ್ಲಿ ನಾವು ಸ್ವಯಂ ಸೇವಕರಂತೆ ದುಡಿಯಬೇಕು. ಒಳ್ಳೆಯ ದೇಶವನ್ನು ನಾವು  ನಮ್ಮ  ಮುಂದಿನ ಪೀಳಿಗೆಗೆ ನೀಡಬೇಕು.  ಈ ಎಲ್ಲ ಕಾರ್ಯ ಕ್ರಮಕ್ಕೂ ನಾವು ನಮ್ಮದೆಲ್ಲವನ್ನು ಅರ್ಪಿಸಿ , ದೇಶದ ಪ್ರಗತಿಗೆ ನಮ್ಮದೇ ಆದ ರೀತಿಯಲ್ಲಿ ಶ್ರಮಿಸಬೇಕು.  
 
ಮೇಲಿನ ಎಲ್ಲ ವಿಷಯಗಳ ಬಗ್ಗೆ ನಾವು ಗಮನ ಹರಿಸುವ , ದೇಶದ ಪ್ರಗತಿಗೆ ನಮ್ಮ ಕೈಲಾದ ಸೇವೆಯನ್ನು ನಾವು ಮಾಡೋಣವೆಂದು  ಪ್ರತಿಜ್ಞೆ ಮಾಡುತ್ತಾ , ಎಲ್ಲರಿಗು ನನ್ನ ಸ್ವಾತಂತ್ರ ದಿನದ ಶುಭಾಷಯಗಳನ್ನು  ಕೋರುತ್ತ ನನ್ನ ಈ ಲೇಖನಕ್ಕೆ ವಿರಾಮ ಹಾಕುತ್ತಿದ್ದೇನೆ. 
 
ನಿಮಗಾಗಿ 
ನಿರಂಜನ್ 
 
 
 
 
 
 

ಶನಿವಾರ, ಜುಲೈ 27, 2013

ನಂಬಿಕೆ


                                                                             ನಂಬಿಕೆ

ತ್ತೀಚಿನ ದಿನಗಳಲ್ಲಿ  ನಾನು ಈ ಚೆನ್ನೈ ಮತ್ತೆ ಬೆಂಗಳೂರುಗಳ ನಡುವೆ ಬಹುವಾಗಿ ಪ್ರಯಾಣ ಮಾಡುತ್ತಿದ್ದೇನೆ ಕೆಲಸದ ನಿಮಿತ್ತ. ಇಂಥಹ ಹಲವು ಪ್ರಯಾಣಗಳನ್ನು ನಾನು ಬಸ್ಸು, ಟ್ರೈನ್ ಹಾಗು ಕಾರುಗಳಲ್ಲಿ ಮಾಡಿದ್ದೆನಾದರು , ರೈಲು ಪ್ರಯಾಣದ ಅನುಭವವೇ ಒಂದು ರೀತಿಯಲ್ಲಿ ಹಿತವಾಗಿರುತ್ತೆ ಅನ್ನುವುದು ನನ್ನ ಭಾವನೆ. ನಾನೇಕೆ ಹೀಗೆ ಹೇಳುತ್ತಿದ್ದೇನೆ ಎಂದರೆ, ಒಂದೊಂದು ಸಾರಿ ನಾವು ರೈಲು ಏರಿದರೂ ಒಂದೊಂದು ರೀತಿಯ ಅನುಭವಗಳು ನಮಗಾಗುತ್ತವೆ.ಹಲವು ರೀತಿಯ ವ್ಯಾಪಾರ-ವಹಿವಾಟುಗಳನ್ನು, ಅನೇಕ ಬಗೆಯ ಮಾತು-ಮೋಜುಗಳನ್ನು, ದೊಡ್ಡವರನ್ನು ,ಸಣ್ಣವರನ್ನು, ಬೇರೆ ಬೇರೆ ಜಾತಿ-ದರ್ಮಗಳನ್ನು ಬೇದ ಭಾವವಿಲ್ಲದೆ ಒಂದೆಡೆ ಸೇರಿಸುವುದು ನಮ್ಮ ಈ ರೈಲುಗಳು ಎಂದರೆ ತಪ್ಪಾಗಲಾರದು. ನಿಜ ಹೇಳಬೇಕೆಂದರೆ ವಿವಿದ ರೀತಿಯ ಜಾತಿಗಳು, ಧರ್ಮಗಳು, ಎಲ್ಲ ದ್ವೇಷ ಅಸೂಯೆಗಳನ್ನು ಮರೆತು ಅಕ್ಷರಶ ಜೊತೆಯಾಗಿ ಕಲೆಯುವುದು, ಕೂರುವರು, ತಿನ್ನುವರು, ಹರಟುವುದು, ಮಲಗುವುದು, ಮೇಲೂ-ಕೀಳೆನ್ನದೆ ಮುಂದೆ ಸಾಗುವುದು  ಈ ರೈಲು ಡಬ್ಬಿಗಳಲ್ಲಿ ಮಾತ್ರ. ಜೊತೆಗೆ  ಆಗ್ಗಿಂದಾಗೆ  ರುಚಿ ಇರುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ವಾಸನೆಯನ್ನು ಮಾತ್ರ ಅದ್ಬುತವಾಗಿ  ಬೀರುವ ಆ ರೈಲು ತಿಂಡಿಗಳು ಕೂಡ ನಮ್ಮನ್ನು ರೈಲು ಪ್ರಯಾಣಕ್ಕೆ ಪ್ರೇರೇಪಿಸುತ್ತವೆ. ಹಾಗಾಗಿ ನನಗೆ ಇತ್ತೀಚಿನ ದಿನಗಳಲ್ಲಿ ಈ ರೈಲು ಪ್ರಯಾಣ ಸಕತ್ ಇಶತವಾಗುತ್ತೆ. 

            ಹೀಗೆ ನಾನು ಮಾಡಿರುವ ಅನೇಕ ರೈಲು ಪ್ರಯಾಣಗಳಲ್ಲಿ ನನಗೂ ಕೂಡ ಬಗೆಬಗೆಯ ಅನುಭವಗಳಾಗಿವೆ, ಇಂಥಹ ಅನೇಕದರಲ್ಲಿ, ಒಂದು ದಿನ ನನಗಾದ ಒಂದು ಸಣ್ಣ ಅನುಭವವನ್ನು ಮಾತ್ರ ನಿಮ್ಮ ಮುಂದೆ ಬಿಚ್ಚಿಡುವ ಸಲುವಾಗಿ ಈ ಲೇಖನ ಬರೆಯುವ ಮನಸ್ಸನ್ನು ನಾನು ಮಾಡಿದೆ. ಈ ಕಾಲದಲ್ಲಿ ನಾವೆಷ್ಟೇ ಓದಿದ್ದರು ಅದು ಕೇವಲ ಓದು, ಹೊಟ್ಟೆವರಿಯಲು ನಾವು ಮಾಡಿಕೊಂಡ ದಾರಿ ಮಾತ್ರ,  ನಮಗರಿಯದ ವಿಷಯಗಳು ಬಹಾಳೋಷ್ಟಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕಾದ ವಿಚಾರ. ಹಾಗೆಯೇ ನಮಗರಿಯದ ಅದೆಷ್ಟೋ ವಿಷಯಗಳನ್ನು ನಾವು ನಮ್ಮ ಅನುಭವಗಳಿಂದಾನೋ ಅಥವಾ ನೋಡಿಯೋ ಕಲಿಯಬಹುದು. ನನಗನಿಸಿದ ಮಟ್ಟಿಗೆ ಅಂಥಹ ಅನೇಕ ಅನುಭವಗಳು ನಮ್ಮ ಜೀವನದ ದಿಕ್ಕುಗಳನ್ನೇ ಒಮ್ಮೊಮ್ಮೆ  ಬದಲಾಯಿಸಬಹುದು,  ಜೀವನವನ್ನು ನೋಡುವ, ರೂಪಿಸಿಕೊಳ್ಳುವ  ರೀತಿಯನ್ನೂ ಕೂಡ ಬದಲಾಯಿಸಬಹುದು.


             ಅದೊಂದು ದಿನ ಮಧ್ಯಾನ , ಬರೀ ಮಧ್ಯಾಹ್ನ ಅಲ್ಲ , ಮಟಮಟ ಮದ್ಯಾಹ್ನ , ಆಫಿಸ್ ಬಿಟ್ಟು , ಸುಮಾರು ೩.೨೦ಕ್ಕೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ಸೇರಿದೆ. ಬೇಸಿಗೆ ಚೆನ್ನೈಯಲ್ಲಿ ಹೊತ್ತಿ ಉರಿಯುತ್ತಿತ್ತು , ಬಿಸಿಲ ಜಳ ಬಿಡದೆ ದಾರಿಯುದ್ದಕ್ಕೂ ನನ್ನನ್ನು ಕಾಡಿದ್ದರೆ , ನಿಲ್ದಾಣದಲ್ಲಿ ನನ್ನನು ಬಿಸಿಲ ಧಗೆ ಕಾಡಲಾರಂಬಿಸಿತ್ತು. ಅಪ್ಪ.... ಅಂತು-ಇಂತು ನಿಲ್ದಾಣ ಸೇರಿದೆ, ಇನ್ನೈದು ದಿನ ಈ ಚೆನ್ನೈ ಸಹವಾಸ ಸಾಕೆಂದು ನಿಟ್ಟುಸಿರು ಬಿಟ್ಟು, ಒಂದು ಬಾಟಲ್ ನೀರು ತಗೊಂಡು, ನಿಂತಿದ್ದ ಲಾಲ್ ಬಾಗ್ express ರೈಲನ್ನೆರಿದೆ. ಇನ್ನು ರೈಲು ಹೊರಡಲು ೧೫ ನಿಮಿಷ ಬೇಕಿತ್ತು. ಅಬ್ಭಾ ಅದೆಷ್ಟು ಸೆಕೆ ರೈಲಿನಲ್ಲಿ ಎಂದರೆ ದೇಹದ ಎಲ್ಲ ಭಾಗಗಳಲ್ಲೂ ನೀರಿನ ಬುಗ್ಗೆಗಳು ಆಷ್ಟೊತ್ತಿಗೆ ಚಿಮ್ಮತೊಡಗಿದ್ದವು. ಇರುವೆಲ್ಲ ರಂದ್ರಗಳಲ್ಲೂ ಬೆವರೋ ಬೆವರೋ. ಆ ಬೆವರಧಾರೆಯಲ್ಲಿಯೇ ರೈಲಿನಲ್ಲಿ ನಾನು ಮುಂಚಿತವಾಗಿ ಕಾಯಿದಿರಿಸಿದ ಜಾಗ ಗುರುತಿಸಿ ನನ್ನ ಬ್ಯಾಗ್ ಇಟ್ಟೆ ಕೂತೆ. ರೈಲು ಒಳ್ಳೆ ಓವೆನ್ ತರಾ ಆಗಿತ್ತು ಆ ಬಿಸಿಲಿನ ಹೊಡೆತಕ್ಕೆ. ಹಾಗಾಗಿ ಹೊರಡುವುದಕ್ಕೆ ಇನ್ನು ಸಮಯವಿದ್ದುದ್ದರಿಂದ ಕೆಳಗಿಳಿದು ಬೆವರೋರಸಿಕೊಳ್ಳಲು ಕರ್ಚಿಫ್ ತಗೆದರೆ ಅದು ತೆಗೆಯುವ ಮೊದಲೇ ಜೇಬಿನಲ್ಲಿ ನೆನೆದು ಹೋಗಿತ್ತು ! . 

             ಬೆಂಗಳೂರಿನಲ್ಲಿ ದುಡಿಯುವ ಜನರು ಕೂಡ ಬೆವರು ಸುರಿಸುವುದಿಲ್ಲ , ಆದರೆ  ಚೆನ್ನೈಯಲ್ಲಿ ಎಲ್ಲರು ಬೆವರು ಸುರಿಸೇ ಸುರಿಸುತ್ತಾರೆ , ಅದೆಷ್ಟು ದುಡಿಯುತ್ತರೋ ಇಲ್ಲವೋ ಗೊತ್ತಿಲ್ಲ. ರೈಲಿನಲ್ಲಿ ಬರುವ ಬಿಕ್ಷುಕರಿಗೆ ಬೆಂಗಳೂರಿನಲ್ಲಿ ಹೇಳುವ ಹಾಗೆ " ಬೆವರು ಸುರಿಸಿ ದುಡಿಯೋದು ಬಿಟ್ಟು , ಬಿಕ್ಷೆ ಕೇಳ್ತೀರಲ್ಲ, ನಿಮಗೆ ನಾಚಿಕೆ ಆಗೋಲ್ಲವಾ " ಅಂತ ಅಪ್ಪಿತಪ್ಪಿಯೂ ಹೇಳಿದರೆ,  ಅವರು ನಮ್ಮ ಮುಖಕ್ಕೇ ತುಪುಕ್ ಅಂತ ಉಗುದು "ಅಯ್ಯ ತಂಬಿ, ನೋಡು ನಾವು ಕೂಡ ಹೇಗೆ ಬೆವರು ಸುರಿಸುತ್ತೇವೆ " ಎಂದು ತಮ್ಮ ಬೆವರಿನ ಸೌಗಂಧವನ್ನು ನಮ್ಮ ಮೂಗಿಗೆ ಸೂಸಿ, ಮುಖಕ್ಕೆ ಬೆವರ ಪ್ರೋಕ್ಷಣೆ  ಕೂಡ ಮಾಡಿ ಬಿಡುವರು. ಸೂರ್ಯ ಚಂದ್ರರನ್ನೂ ನೋಡಿರದ ಜೀವಿಯು ಈ ಭಾಮಿಯ ಮೇಲೆ ಇದ್ದರೂ  ಇರಬಹುದು ಆದರೆ ಚೆನ್ನೈಲ್ಲಿ ಬೆವರದ ಪುಣ್ಯಾತ್ಮನಿಲ್ಲ.  ಚೆನ್ನೈ ಅಲ್ಲಿ ನಮ್ಮಂಥ ಇಂಜಿನಿಯರ್ಸ್ ಕೂಡ ಬೆವರು ಸುರಿಸೆ ದುಡಿಯಬೇಕು !....  ಅಷ್ಟೊತ್ತಿಗೆ ಸ್ವಲ್ಪ ಸಮಯ ಕಳೆಯಿತು, ರೈಲು ಕೂಗಿದಾಕ್ಷಣ , ಹೋಗಿ ನನ್ನ ಜಾಗದಲ್ಲಿ ಕೂತುಕೊಂಡೆನು. ರೈಲು ನಿದಾನವಾಗಿ ಚಲಿಸತೊಡಗಿದಾಗ ನಿಜವಾಗಿಯೂ ನಿಟ್ಟುಸಿರು ಬಿಟ್ಟು ಬೀಸುವ ಬಿಸಿಗಾಳಿಗೆ ಮುಖವೊಡ್ಡಿ ಕೂರುವ ಅದೃಷ್ಟವನ್ನು ಶಪಿಸುತ್ತ ಬೆಂಗಳೂರಿನ ಕಡೆ ಪ್ರಯಾಣವನ್ನು ಆರಂಭಿಸಿದೆ.

           ಅಷ್ಟೊತ್ತಿಗೆ ಅನೇಕ , ಚಟುವಟಿಕೆಗಳು ರೈಲಿನಲ್ಲಿ ಆರಂಭಗೊಂಡಿದ್ದವು. ರೈಲು ಓಡಲು ಶುರುಮಾಡಿತೆಂದರೆ ರೈಲಿನಲ್ಲಿ ಬೇರೆಯೇ ಜಗತ್ತೇ ಸೃಷ್ಟಿಯಾಗುತ್ತೆ. ಒಮ್ಮೆಯೂ ಮುಖಗಳನ್ನು ನೋಡಿಕೊಂಡಿರದ ಅನೇಕರು ಸ್ನೇಹಿತರಾಗುತ್ತಾರೆ, ಮಾತುಗಳು ಶುರುವಾಗುತ್ತವೆ, ರಾಜಕೀಯ, ಪ್ರಪಂಚದ ಆಗುಹೋಗುಗಳೆಲ್ಲ ರೈಲ ಡಬ್ಬಿ ಸೇರುತ್ತವೆ. ಮಾರಾಟಗಾರರು ಅನೇಕ ಬಗೆಯ ವಸ್ತುಗಳನ್ನು ತಂದು ಮಾರುತ್ತಾರೆ. ಪೆನ್ನು, ಪುಸ್ತಕ, ಹಣ್ಣು-ಹಂಪಲುಗಳು, ಬಟ್ಟೆಬರೆ, ಅಲಂಕಾರಿಕೆ ವಸ್ತುಗಳು, ಆಟಿಕೆಗಳು, ತಿಂಡಿ-ತಿನಿಸುಗಳು,ದವಸ-ದಾನ್ಯಗಳು ಇನ್ನು ಅನೇಕ ಬಗೆಯ ವ್ಯಾಪಾರ ನಡೆಯುತ್ತೆ. ಇದೆಲ್ಲ ಅದೆಷ್ಟು ಜನರ ಹೊಟ್ಟೆಪಾಡಿಗೆ ಸಹಾಯವಾಗುತ್ತೋ ದೇವರಿಗೆ ಗೊತ್ತು. ಕೆಲವರು ಈ ಎಲ್ಲ ವಸ್ತುಗಳನ್ನೊತ್ತು ಮಾರಿ, ಕಷ್ಟ ಪಟ್ಟು ಸಂಪಾದಿಸಿದರೆ, ಇನ್ನು ಕೆಲವರು ಬೇರೆ ರೀತಿಯಾಗೆ ಸಂಪಾದಿಸುತ್ತಾರೆ. ಮಂಗಳಮುಖಿಗಳು ಗುಂಪಾಗಿ  ಬಂದರೆ ಸಾಕು ಜನ ಚಕಾರವೆತ್ತದೆ ತೆಪ್ಪಗೆ ದುಡ್ಡು ತೆಗೆದು ಕೊಡುತ್ತಾರೆ. ಮತ್ತೆ ಅನೇಕ ಸೋಗಲಾಡಿಗಳು ನನಗದಿಲ್ಲ-ಇದಿಲ್ಲ ಅನ್ನುತ್ತ, ದೇಹ ನ್ಯೂನತೆಗಳು ಇರದಿದ್ದರೂ ಇರುವ ಹಾಗೆ ತೋರಿಸಿ ಹೆಣ್ಣುಮಕ್ಕಳ, ಚಿಕ್ಕಮಕ್ಕಳ ಕನಿಕರಗಿಟ್ಟಿಸಿ ಖಾಸು ಸಂಪಾದಿಸುತ್ತಾರೆ. ಈ ರೀತಿಯ ಲೋಕವೇ ರೈಲಿನಲ್ಲಿ ಪ್ರತಿ ಸಾರಿಯೂ ಸೃಷ್ಟಿಯಾಗುತ್ತೆ. ಅದೇ ರೀತಿ ಆ ದಿನವೂ  ಪ್ರಯಾಣದ ಒಂರ್ದಗಂಟೆಯಲ್ಲಿಯೇ ಇದೆಲ್ಲವೂ  ನನ್ನ ಕಣ್ಮುಂದೆ ಬಂದಿತು. 

              ಮೇಲೆ ಹೇಳಿದ ರೀತಿಯಲ್ಲಿ ಈ ವ್ಯಾಪಾರ-ವಹಿವಾಟುಗಳು ರೈಲಿನಲ್ಲಿ ಬಹು ಸಹಜವಾಗಿ ನಡೆಯುತ್ತವೆ ಮತ್ತು ಈ ರೀತಿಯ ವ್ಯಾಪಾರ  ಅಲ್ಲಿ ತೀರ ಸಾಮಾನ್ಯದ ವಿಷಯವೂ ಕೂಡ. ಆದರೆ ಆ ದಿನ ಮಾತ್ರ  ನನಗೆ ಒಂದು ಆಶ್ಚರ್ಯ ಕಾದಿತ್ತು. ಸಾಮಾನ್ಯವಾಗಿ ನಾನು ರೈಲಿನಲ್ಲಿ ಏನನ್ನು ಖರೀದಿಸುವುದಿಲ್ಲ ಆದರೆ ನನಗೆ ಅವತ್ತು ಒಂದು ವಸ್ತುವಿನ ಅಗತ್ಯತೆ ತೀರ ಕಾಡತೊಡಗಿತ್ತು. ಅದೇನಪ್ಪ ಅಂದರೆ ಇಳಿಯುವ ಬೆವರೋರೆಸಲು ಅಗತ್ಯವಾಗಿ ಬೇಕಿದ್ದ ಕರ್ಚಿಫ್. ನನ್ನ ಬಳಿ ಇದ್ದದ್ದು ತೊಯ್ದು , ಗಮ್ಮೆನ್ನುತ್ತಿತ್ತು. ಹಾಗಾಗಿ ದೂರದಲ್ಲಿ " ಕರ್ಚೀಫ್ ಕರ್ಚೀಫ್ , ಕರ್ಚೀಫ್ " ಎಂದು ಕೂಗುತ್ತ ಬರುತ್ತಿದ್ದವನನ್ನು ನೋಡಿದೆ. ಹತ್ತಿರ ಬಂದಾಗಲೇ ನನಗೆ ಗೊತ್ತಾಗಿದ್ದು ಆ ಮನುಷ್ಯ ಕಣ್ಣಿಲ್ಲದ ಕುರುಡನೆಂದು. ನೋಡಿದ ತಕ್ಷಣವೇ ಕನಿಕರ ಬಂತಾದರೂ , ಕಷ್ಟಪಟ್ಟು ದುಡಿಯುವ ಆತನ ಮನೋಭಾವ ನನಗೆ ತುಂಬಾ ಮೆಚ್ಚಿಗೆಯಾಯಿತು. ಆತ ತನ್ನ ಒಂದು ಕೈಯಲ್ಲಿ ಒಂದು ಮಾಧರಿಯ , ಮತ್ತೊಂದು ಕೈಯಲ್ಲಿ ಮತ್ತೊಂದು ಮಾಧರಿಯ ಕರ್ಚಿಫ್ ಇಟ್ಟುಕೊಂಡಿದ್ದ. ಜೊತೆಗೆ ಹೆಗಲಿಗೊಂದು ಚೀಲ, ಚೀಲದಲ್ಲಿ ಮತ್ತೊಷ್ಟು ಬಗೆಯ ಕರ್ಚೀಫುಗಳು ಇದ್ದವು. ಸುಮಾರು ೪೦ ವರ್ಷದ ಪ್ರಾಯವಿರಬಹುದು, ಮುಖದಲ್ಲಿ ನಿರಾಸೆಯ ಒಂದಂಶವೂ ಇರಲಿಲ್ಲ. ನೋಡಿದಾಕ್ಷಣವೇ ತಿಳಿಯುತ್ತಿತ್ತು ಆತ ಹುಟ್ಟು ಕುರುಡನೆಂದು. ನಾ "ಇಲ್ಲಿ ತಿರುಗಿ" ಅಂದಾಕ್ಷಣ " ಆತ ನನ್ನ ಕಡೆ ತಿರುಗಿ ಕರ್ಚೀಫ್ ಬೇಕಾ ಸಾರ್ " ಎಂದಾಗಲೇ ನನಗೆ ತಿಳಿಯಿತು ಆತ ಬಹು ಚುರುಕಾದ ಮನುಷ್ಯನೆಂದು. ತನ್ನ ಎಡಗೈಯನ್ನು ಮುಂದೆ ಚಾಚಿ " ಇದು ತಗೊಳ್ಳಿ ಸಾರ್, ಒಳ್ಳೆ quality ಬಟ್ಟೆ , ಒಳ್ಳೆ ಬಣ್ಣ , ಚೆನ್ನಾಗಿ ಬಾಳಿಕೆ ಬರುತ್ತೆ ಸಾರ್ " ಎಂದಾಗ ನನಗೇನೋ ಒಂದು ಬಗೆಯ ವಿಚಿತ್ರ ಅನುಭವ, ಈತನಿಗೆ ಕಣ್ಣಿಲ್ಲ ಆದರೂ  ವ್ಯಾಪಾರ ಮಾಡುತ್ತಿದ್ದಾನೆ ಎಂದು. ಅವನ ಆ ಮಾರ್ಕೆಟಿಂಗ್ style ನನಗೆ ತುಂಬಾ ಹಿಡಿಸಿತು. ಆತನ attitude ನಾ ಕುರುಡ ಎಂದು ಕರುಣೆಗಿಟ್ಟಿಸಿ ವ್ಯಾಪಾರ ಮಾಡುವ ರೀತಿಯಲ್ಲಿ ಇರಲಿಲ್ಲ. ಅದೊಂದು ಬಗೆಯ ಬೇರೇನೇ ತರಹ ಇತ್ತು. 

              ಆತನು ಹೇಳಿದ ಹಾಗೆ ನಾನು ಆತನ ಎಡಗೈಯ ಮೇಲಿಂದ ಒಂದು ಕರ್ಚೀಫ್ ತಗೆದುಕೊಂಡು ಒಂದದಿನೈದು  ಸೆಕೆಂಡ್ ನೋಡುತ್ತಿದ್ದೆ , ಅಷ್ಟರಲ್ಲಿ ಆತ " ಯಾಕೆ ಸಾರ್ ಇಷ್ಟ ಆಗಲಿಲ್ಲವಾ , ಹಾಗಾದರೆ ನನ್  ಬ್ಯಾಗ್ ಅಲ್ಲಿ ಇರೋದನ್ನ ತಗೊಳ್ಳಿ ಸಾರ್, ತುಂಬಾ ಚೆನ್ನಾಗಿವೆ , ಸ್ವಲ್ಪ costly ಆಗುತ್ತೆ " ನಸು ನಗುತ್ತಲೇ  ಹೇಳಿದ. ನಾ ೫-೬ ಸೆಕೆಂಡ್ ಕಾಲ ಏನನ್ನು ನಿರ್ಧರಿಸದೆ ಇದ್ದಾಗ ಆತ ಚುರುಕಾಗಿ ನನ್ನ ಮನಸ್ಸನ್ನು ಅರಿತು ಬೇರೆ ಮಾದರಿ ಕರ್ಚೀಫ್ ನೋಡಿ ಅಂತ ಹೇಳಿದ.  ಇದು ಆತನ ವ್ಯಾಪಾರ ಚತುರತೆಯನ್ನು ತೋರಿಸಿತಿತ್ತು. ನಾನು ಆತನ ಚೀಲದೊಳಗೆ ಕೈಹಾಕಲು ಸ್ವಲ್ಪ ಹಿಂದೆ ಮುಂದೆ ಮಾಡಿದಾಗ , " ಪರವಾಗಿಲ್ಲ ತಗೋಳಿ ಸಾರ್, ನೀವೇ ತಗೋಳಿ " ಎಂದನು. "ಇದೇನಪ್ಪ ಯಾವ ನಂಬಿಕೆ ಮೇಲೆ ಈ ಮನುಷ್ಯ ಈ ರೀತಿ ಹೇಳುತ್ತಾನೆ " ಅಂತ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಎದ್ದಿತು.  ನಾ ಚೀಲದಲಿದ್ದ ಒಂದನ್ನು ತಗೆದು ನೋಡಿದೆ  ಅದು ಇಷ್ಟವಾಯಿತು. " ಇದು ನನಗಿರಲಿ " ಅಂತ ಹೇಳಿ , " ಈ ಕರ್ಚೀಫ್ ಗೆ ಎಷ್ಟು ? " ಎಂದು ಕೇಳಿದೆ. ಮೊದಲು ಇಡಿದಿದ್ದ ಆ ಕರ್ಚೀಫ್ ಅನ್ನು ಆತನ ಎಡಗೈ ಮೇಲೆ ಹಾಕಿದೆ ನಾ. " ಸಾರ್ ಅದು ೫೦ ರುಪಾಯಿ , ಸ್ವಲ್ಪ costly ದು ಸಾರ್, ಆದ್ರೆ ತುಂಬಾ ಒಳ್ಳೆಯದು" ಎಂದು ಹೇಳಿದಾಗ. ನನಗೆ ಚೌಕಾಷಿ ಮಾಡಲು ಮನಸ್ಸು ಒಪ್ಪಲಿಲ್ಲ. ಸರಿ "ನಾ ಇದನ್ನೇ ತಗೊಂತೀನಿ " ಎಂದು , ನನ್ನ ಪರ್ಸ್ ತೆಗೆದು ನೋಡಿದೆ. ೫೦ ರುಪಾಯಿ ನೋಟು ಇರಲಿಲ್ಲ ಬದಲು ೧೦೦ , ೫೦೦ ರೂಪಾಯಿಗಳು ಇದ್ದವು. " ಚೇಂಜ್ ಇದೆಯಾ ನಿಮ್ಮತ್ರ " ಎಂದಾಗ " ಇಲ್ಲ ಸಾರ್ , ನೀವೇ ಸ್ವಲ್ಪ  ನೋಡಿ ಸಾರ್ " ಎಂದು ಹೇಳಿದ ಆ ಮನುಷ್ಯ. ಅಷ್ಟರಲ್ಲಿ ಅಲ್ಲಿ ಇಲ್ಲಿ ತೆಗೆದು ಹತ್ತರ ಮೂರು , ಇಪ್ಪತ್ತರ ಒಂದು ನೋಟು ಸೇರಿಸಿ ಒಟ್ಟು ೫೦ ರುಪಾಯಿಗಳನ್ನೂ ನಾನು ಆತನಿಗೆ ಕೊಟ್ಟೆನು. ಆತ "thank ಯು ಸಾರ್, ಇವು ಯಾವ್ಯಾವ ನೋಟುಗಳು ಸಾರ್ " ಅಂದು ನನ್ನ ಕಡೆಗೆ ಕೈ ಚಾಚಿ ಕೇಳಿದ. ನಾನು ೩ ಹತ್ತು ರುಪಾಯಿಗಳನ್ನು ಮೊದಲು ಆತನ ಕೈಗೆ ಇಟ್ಟಾಗ  " ಸ್ವಲ್ಪ ತಡೀರಿ ಸಾರ್ ಎಂದು, ಅವುಗಳನ್ನು ಒಂದು ಜೇಬಿನಲ್ಲಿ ಇಟ್ಟುಕೊಂಡನು. ಮತ್ತೊಮ್ಮೆ ನಾ ಕೊಟ್ಟ ೨೦ ರುಪಾಯಿ ನೋಟನ್ನು ಮತ್ತೊಂದು ಜೇಬಿನಲ್ಲಿ ಇಟ್ಟುಕೊಂಡಾಗ ಆತ ನೋಟುಗಳನ್ನು ವಿಂಗಡಿಸಲು ಈ ರೀತಿಯಾಗಿ ಮಾಡಿದ ಎಂದೆನಿಸಿತು. 

             ನಾನು ತಕ್ಷಣವೇ "ಸರಿಯಾಗಿ ನೋಡಿಕೊಳ್ರಿ, ಸರಿಯಾಗಿ ಕೊಟ್ಟಿದೇನೋ ಇಲ್ಲವ ಅಂತ , ಮತ್ತೆ ನಾನು ಒಂದನ್ನೇ ತೆಗೆದುಕೊಂಡಿರೋದು " ಎಂದು ಆತನಿಗೆ ನಂಬಿಕೆ ಬರಲು ಹೇಳಿದೆ. ಅದಕ್ಕೆ ಆತ "ಸಾರ್ ನಾನು ನಿಮ್ಮನ್ನ ನಂಬುತ್ತೇನೆ ಸಾರ್ " ಎಂದು ಬಹು ನಮ್ರತೆಯಿಂದ ಹೇಳಿದ. " ಅಲ್ಲಪ್ಪಾ ಆದರರೂ ನನ್ನ ಸಮಾಧಾನಕ್ಕೆ ನಾ ಹೇಳಿದ " ಎಂದಾಗ , " ಆತ ನಂಬಿಕೆಯಿಂದಲೇ ಸಾರ್ ನನ್ನ ವ್ಯಾಪಾರ ಮತ್ತೆ ಜೀವನ ನಡಿತ ಇರೋದು, ನಾ ಎಲ್ಲರನ್ನು ನಂಬಲೇ ಬೇಕು ಸಾರ್ " ಎಂದ. ಹಾಗ ನಮ್ಮನ್ನೇ ನೋಡುತ್ತಾ ಇದ್ದ ವಯಸ್ಸಾದ ಅಜ್ಜಿಯೊಂದು " ಆತ ದೇವರನ್ನು ನಂಬಿ ವ್ಯಾಪಾರ ಮಾಡುತ್ತಾನೆ ,  ಹಾಗಾಗಿ ದೇವರು ಆತನನ್ನು ಚೆನ್ನಾಗಿಯೇ ಇಟ್ಟಿದ್ದಾನೆ " ಎಂದಿತು. ಆ ಕ್ಷಣಕ್ಕೆ ಆತ ನಸುನಗುತ್ತಲ್ಲೇ" ಇಲ್ಲ ಅಮ್ಮ , ಕಾಣದ , ನಮ್ಮ ಸುತ್ತ-ಮುತ್ತ ಇರದ ಆ ದೇವರನ್ನು ನಂಬಿದರೆ ನನ್ನ ಹೊಟ್ಟೆ ತುಂಬಲ್ಲ, ನನ್ನ ಸುತ್ತ ಮುತ್ತ ಇರೋ ಈ ಜನರನ್ನ ನಂಬಿದರೆ ಮಾತ್ರ ನನ್ನ ಹೊಟ್ಟೆ ತುಂಬುತ್ತದೆ " ಎಂದು ತನ್ನೆಲ್ಲ ಅನುಭವ , ಸಂಕಟ , ಬುದ್ದಿವಂತಿಕೆ , ಆಶಾಭಾವಗಳನ್ನು ಬೆರೆಯಿಸಿ ಆ ಮಾತನ್ನಾಡಿ ಮುಂದೆ ಸಾಗಿದ ಆ ಕುರುಡು ಮನುಷ್ಯ  " ಕರ್ಚೀಫ್ ಕರ್ಚೀಫ್ " ಅನ್ನುತ್ತ . 

                ಆ ಕ್ಷಣದಲ್ಲಿ ನಾ ಅಬ್ಭಾ "ಎಂಥಹ ಮಾತನ್ನು ಆಡಿದ ಆ ಮುನುಷ್ಯ ,  ಆ ಮಾತಿನಲ್ಲಿ ಅದೆಷ್ಟು ಅರ್ಥವಿದೆ , ನಾವೆಲ್ಲರೂ ಕಣ್ಣುಗಳಿದ್ದು , ಪ್ರಪಂಚವನೆಲ್ಲ ನೋಡಿಯೂ ಕೂಡ ಒಬ್ಬರನ್ನೊಬ್ಬರು ನಂಬುವುದಿಲ್ಲ, ಯಾರು ಏನು ಹೇಳಿದರು , ಕೊಟ್ಟರು ಅವರನ್ನು ನಂಬದೆ , ಅದನ್ನು ನಮ್ಮ ಕಣ್ಣಿನಿಂದ ಪರೀಕ್ಷಿಸಿದ ಮೇಲೆಯೇ ಒಪ್ಪುತ್ತೇವೆ. ನಮ್ಮ ನಮ್ಮಲ್ಲಿ ಪರಸ್ಪರ ನಂಬಿಕೆಗಳು ಕೂಡ ಇರುವುದಿಲ್ಲ, ಒಬ್ಬರನ್ನೋಬರು ಒಪ್ಪುವುದೂ ಇಲ್ಲ. ಮನುಷ್ಯರನ್ನೊಂತು ಮಾತ್ರ ನಾವು ಅದೇಕೋ ಅಷ್ಟಾಗಿ ನಂಬುವುದೂ ಇಲ್ಲ .  ಬದಲಾಗಿ ನಮಗೆ ಗೊತ್ತಿರದ, ನೋಡದ ದೇವರನ್ನು ಮಾತ್ರ ನಂಬುತ್ತೇವೆ. ಆದರೆ ಈ ಮನುಷ್ಯ ಮಾತ್ರ ನಿಜ ಸತ್ಯವನ್ನರಿತು ನಮ್ಮ ಸುತ್ತ ಮುತ್ತಲಿರುವ ಜನರನ್ನು ನಂಬುತ್ತಾನೆ , ಆದ್ದರಿಂದಲೇ ಯಾರು ಆತನಿಗೆ ದ್ರೋಹ  ಬಗೆಯುವುದಿಲ್ಲ , ಮೋಸ ಮಾಡುವುದಿಲ್ಲ. ಕಣ್ಣಿರದ ಆತನಿಗೆ ಸುತ್ತಲಿನ ಜನರೇ ದೇವರುಗಳು , ಆತ ಎಲ್ಲರಲ್ಲೂ ದೇವರನ್ನೇ ಕಾಣುತ್ತಾನೆ , ಹಾಗಾಗಿ ಎಲ್ಲರನ್ನು ನಂಬುತ್ತಾನೆ , ನಿಜವಾಗಿಯೂ ಆತನ ಮಾತೆ ಸತ್ಯ " ಎಂದು ನನಗೂ ಅನ್ನಿಸಿತು. 

          ಇನ್ನುಳಿದ ಪ್ರಯಾಣದುದ್ದಕ್ಕೂ ಆತನ ಆ ಮಾತುಗಳು ನನ್ನನು ಅನೇಕೆ ವಿಚಾರಗಳ ಗಂಟಲ್ಲಿ ಸಿಕ್ಕಿಸಿ ಹಾಕಿಸಿದ್ದವು. ಆತ ಆ ಕ್ಷಣಕ್ಕೆ ನನಗೆ ಮಹಾನ್ ತತ್ವಜ್ಞಾನಿಯಂತೆ ಕಂಡನು ಕೂಡ. ಆತನ ಆ ಮಾತುಗಳ ಅರ್ಥ , ತಾತ್ಪರ್ಯ , ವಿಮರ್ಶೆಯಲ್ಲೇ ನಾನು ನನ್ನ ಆ ದಿನದ ಪ್ರಯಾಣವನ್ನ ಸವೆಸುತ್ತಿದ್ದಂತೆ , ನನ್ನ ಚಿಂತನೆಯು  ಕೂಡ ಹೊಸ "ನಂಬಿಕೆ"ಯ ಹಾದಿ ತುಳಿದಿತ್ತು.  

ನಿಮಗಾಗಿ 
ನಿರಂಜನ್ 

ಶನಿವಾರ, ಜುಲೈ 20, 2013

ಆಷಾಡದ ಆ ದಿನ


                                                                       ಆಷಾಡದ ಆ ದಿನ .... 

ಷಾಡದ ಒಂದು ದಿನ, ಬೆಳ್ಳಂಬೆಳಗ್ಗೆಯ ಸಮಯ, ಸುತ್ತಲೂ ಮೋಡಗಳು, ಬೀಸುತ್ತಿತ್ತು ತಂಪಾದ  ಚಳಿಗಾಳಿ, ಹಕ್ಕಿ-ಪಕ್ಕಿಗಳೆದ್ದು ಸಂಗೀತ ಸುಧೆಯನ್ನೇ ಹರಿಸುತ್ತಿದ್ದವು. ಮಳೆರಾಯ ಆಗ ತಾನೇ ಪ್ರಕೃತಿಯ ಮೈ ತೊಳೆದು ಸುಮ್ಮನಾಗಿದ್ದಾನೆ. ಗಿಡ ಮರ ಬಳ್ಳಿಗಳ ಎಲೆಗಳು ನೀರಹನಿಗಳನ್ನುಟ್ಟು ಸಿಂಗಾರಗೊಂಡು ನಿಂತಿವೆ. ತಂಗಾಳಿಯೊಮ್ಮೆ ಗಿಡ-ಮರಗಳಿಗೆ ಖಚಗುಳಿಯಿಟ್ಟರೆ, ಅವು ನುಲಿದು, ನಲಿದು, ಕುಣಿದು ಬಚ್ಚಿಟ್ಟುಕೊಂಡಿದ್ದ ನೀರಹನಿಗಳನ್ನು ಭೂಮಿಗೆ ಸುರಿಸುತ್ತಿದ್ದವು. ಆ ದೃಶ್ಯ ಹೇಗಿತ್ತು ಎಂದರೆ ನೀರ ಹನಿಗಳು ಭೂಮಿಗೆ ಬಿದ್ದರೆ  ಮಣಿ-ಮುತ್ತುಗಳೇ   ಧರೆಗುರುಳುವಂತೆ ಕಾಣುತ್ತಿತ್ತು. 

               ನನಗೆ ಒಟ್ಟಾರೆ ಆ ದಿನ ಸ್ವರ್ಗವೇ ಭೂಮಿಯನ್ನು ಬಿಗಿದಪ್ಪಿದ ಹಾಗೆ ಭಾಸವಾಗಿತ್ತು. ಇಂಥಹ ವಾತವರಣದ  ಸವಿಯ ಸವಿಯುವ ಮನಸ್ಸನ್ನು ಕೊಟ್ಟ , ನೋಡಿದ ಅಂದವನ್ನು ಹಾಗೆಯೇ ಕದಿಯುವ ಹೃದಯವನನ್ನೂ ನನ್ನೊಳು ಇರಿಸಿದ, ಈ ರೀತಿಯ ಸುಂದರ ದಿನಗಳನ್ನು ನನಗೆ ಅನುಭವಿಸಲೆಂದೇ ಸೃಷ್ಟಿಸುವ ಆ ಕಾಣದ  ಗಾರುಡಿಗನಿಗೆ ಮನದಲ್ಲೇ ಒಂದು ಕ್ಷಣ ವಂದಿಸಿದೆ. ಇಂಥಹ ವಾತಾವರಣವನ್ನು ನಾನೇನು ಮೊದಲು ನೋಡುತ್ತಿಲ್ಲ,ಅನುಭವಿಸುತ್ತಿಲ್ಲ. ಆದರೂ ಇಂತಹ ದಿನಗಳು ಮಾತ್ರ ನನ್ನನ್ನು ಬಹುವಾಗಿ ಸೆಳೆಯುತ್ತವೆ, ಸೂರೆಗೊಳ್ಳುತ್ತವೆ. ಪ್ರತಿಸಲವೂ ನನಗೆ ಇದರಲ್ಲೊಂದು ನವ ನವೀನತೆ ಕಾಣುತ್ತದೆ. ಈ ರೀತಿಯ ಪ್ರಕೃತಿಯಿಂದ ನಾನು ಬೇಗನೆಯೇ ಆಕರ್ಷಿತನಾಗುತ್ತೇನೆ, ಮನಸ್ಸು ಪುಳಕಗೊಳ್ಳುವುದರ ಜೊತೆಗೆ ಹಗುರವೂ ಆಗುತ್ತೆ, ಅದೇನೇ ದುಃಖ ದುಮ್ಮಾನಗಳಿದ್ದರು ಆ ಕ್ಷಣಕ್ಕೆ ಅವು ದೂರಸರಿದು, ಖುಷಿ, ಶಾಂತಿ, ಪ್ರೀತಿಗಳು ಹತ್ತಿರವಾಗುತ್ತವೆ. ನಿಜ ಹೇಳಬೇಕೆಂದರೆ ಈ ರೀತಿಯ ವಾತಾವರಣ ಅದೇನೋ ಗೊತ್ತಿಲ್ಲ, ನನನ್ನೂ ಮಲಗಲೂ  ಬಿಡೋಲ್ಲ, ಸುಮ್ಮನಿರಲೂ ಬಿಡುವುದಿಲ್ಲ. ಈ ವಿಷಯದ ಬಗ್ಗೆ ನನಗೆ ಸ್ವಲ್ಪವೂ ಬೇಸರ ಇಲ್ಲ. ಈ ರೀತಿಯ ಮನೋಭಾವ ನನಗೆ ದೇವರು ಕೊಟ್ಟ ವರವೆಂದು ನಾನು ತಿಳಿದಿದ್ದೇನೆ. ಇದು ನನ್ನ ಭಾಗ್ಯವೂ ಕೂಡ , ಅದ್ಯಾವ ಜನ್ಮದದಲ್ಲಿ ಅಂಥಹ ಅದೇನು ಘನ ಕಾರ್ಯ ಮಾಡಿದ್ದೇನೋ ಏನೋ ಗೊತ್ತಿಲ್ಲ, ಆದರೆ ಆ ಜನ್ಮದಲ್ಲಿ ಮಾತ್ರ ಈ ರೀತಿಯ ಸುಂದರ ಪ್ರಕೃತಿಯ ಸವಿಯುವ ಮನಸ್ಸುನ್ನೂ  ಕೇಳದಿದ್ದರೂ ಆ ದೇವರು ಕೊಟ್ಟಿದ್ದಾನೆ. ಆತನಿಗೆ ಮತ್ತೊಮ್ಮೆ ನನ್ನ ಹೃದಯಾಂತರಾಳದ  ನಮನ. 

              ವಾತವರಣ ಹೀಗಿದ್ದಾಗ ಅದೇಗೆ ನಾ ಮನೆಯಲ್ಲಿ ಜೊಲ್ಲು ಸುರಿಸಿಕೊಳ್ಳುತ್ತಾ, ನನ್ನ ಉಸಿರು ನಾನೇ ಕುಡಿಯುತ್ತ, ಹೊದಿಕೆಯಲ್ಲಿ ಗೂಡಲ್ಲಿ ಮುದುರಿ ಮಲಗಲಿ ? ಬೀಳುವ ಬೆಳಕಿನಿಂದ , ಬೀಸುವ ಗಾಳಿಯಿಂದ ಅದೇಗೆ ನಾನು ನನ್ನನ್ನು ವಂಚಿಸಿಕೊಳ್ಳಲಿ. ಹೀಗೆ ನಾ ಮಾಡಿದ್ದೆ ಆದರೆ ಅದು ನಾ ಮಾಡಿಕೊಂಡ ಮೂರ್ಖತನವಾಗುತ್ತೆ. ಒಂದು ವೇಳೆ ಪಡುವಣದಲ್ಲಿ ಸ್ವಾಮಿಯು ಮೂಡಿದಾಗಲೂ ನಾನು ಮಲಗಿ ಒಳ್ಳೆಯ ವಾತಾವರಣವನ್ನು ಅನುಭವಿಸದಿದ್ದರೆ ಅದು  ಸೌಂದರ್ಯವೀರುವ ನನ್ ಕಂಗಳಿಗೆ ನಾನ್ ಮಾಡುವ ಮೋಸ ಎಂದೆನಿಸುತ್ತದೆ. ಹಾಗಾಗಿ ಆ ದಿನ ನಾ ಮನೆಯಲ್ಲಿ ಒಂದು ಲೋಟ ತಣ್ಣನೆ ನೀರನ್ನು ಕುಡಿದು, ಬಿಸಿಯ ಕಾಫೀ ಹೀರಿ , ಕೈಯಲ್ಲೊಂದು ಕೊಡೆಹಿಡಿದು ಸಣ್ಣ ವಿಹಾರಕ್ಕೊರಟೆ.



         ಹಾಗೆ ನೆಡೆಯುವಾಗ ನನಗೋ "ಆಹಾ ಎಂಥಹ ವಾತವರಣವಿದು" ಎಂದು ಅನ್ನಿಸುತಿತ್ತು. ಮನಸ್ಸು ಕವಿವರ್ಯ್ಯನಾಗಿ ಬಚ್ಚಿಟ್ಟುಕೊಂಡಿದ್ದ ಭಾವನೆಗಳಿಗೆ ಬಣ್ಣವಚ್ಚಿ ರೂಪು ನೀಡುತ್ತಿತ್ತು. ಏನು ನೋಡಿದರು ನನಗೆ ಎಲ್ಲವೂ ಚಂದವಾಗಿಯೇ ಕಾಣುತ್ತಿದ್ದವು. ಪ್ರತಿಯೊಂದರಲ್ಲೊಂದು ಶುದ್ದತೆ ಕಾಣುತಿತ್ತು. ಅಷ್ಟರಲ್ಲೇ ದೂರದಲ್ಲೊಂದು ಒಂಟಿ ಮನೆ ಕಂಡಿತು. ಅಕ್ಕ-ಪಕ್ಕ ಸ್ವಲ್ಪ ಖಾಲಿ ಜಾಗ, ಖಾಲಿ ಜಾಗದ ತುಂಬೆಲ್ಲ ಹಸಿರು ಹುಲ್ಲು ಬೆಳೆದಿತ್ತು.ಅಲ್ಲೊಂದು ಇಲ್ಲೊಂದು ತುಂಬೆ ಗಿಡಗಳು ಹುಲ್ಲ ನಡುವೆ ರಾರಾಜಿಸುತ್ತಿದ್ದವು. ಬಹು ಮಳೆಯಿಂದಾಗಿ ಮನೆಯ ಕಾಂಪೌಂಡ್ಗೆ  ಪಾಚಿ ಕಟ್ಟಿದಂತಾಗಿ ಹಸಿರು ಹತ್ತಿತ್ತು, ಅನೇಕ ಬಳ್ಳಿಗಳೂ ಅದರ ಮೇಲೆ ಹಬ್ಬಿದ್ದವು. ಅದೇ ಕಾಂಪೌಂಡ್ ಕೊನೆಯಲ್ಲಿ ಒಂದು ದೊಡ್ಡ ಮಲ್ಲಿಗೆ ಬಳ್ಳಿ ಮನೆಯ ಮಹಡಿಯ ಕಡೆ ಹಬ್ಬಿ , ಮೊದಲ ಮಹಡಿಗೂ ತಲುಪಿತ್ತು. ಸೊಂಪಾಗಿ ಬೆಳೆದಿದ್ದ ಅದು ಹಚ್ಚ ಹಸುರಾಗಿತ್ತು. ಬೆಳಗುಜಾವದ ಮಳೆಯಲ್ಲಿ ಜಳಕಮಾಡಿ, ತನ್ನ  ಮೊಲ್ಲೆಯ ಮಗ್ಗುಗಳಿಂದ ತನ್ನನ್ನೇ ಅಲಂಕರಿಸಿಕೊಂಡಿತ್ತು.  ಆ ಮನೆಯೂ ಸುಂದರವಾಗಿದ್ದರೂ ಕೂಡ ಆ ಕಡೆ ನೋಡಿದರೆ ಮೊದಲು ಗಮನ ಹರಿಯುವುದು ಬೆಳೆದು ನಿಂತಿದ್ದ ಆ ಮಲ್ಲಿಗೆ ಬಳ್ಳಿಯ ಕಡೆಗೆ ಹೊರತು ಆ ಮನೆಯ ಮೇಲಲ್ಲ. 

                ಆದರೆ ಆ ದಿನ ಮಾತ್ರ ನನಗೆ ಕಂಡಿದ್ದು ಆ ಬಳ್ಳಿಯ ಜೊತೆಗಿದ್ದ ಮತ್ತೊಂದು ನೀಟಾದ  ಸೌಂದರ್ಯದ ಗಂಟು. ನಿಜ ಅವಳು ಸಕತ್ ಸೌಂದರ್ಯದ ಗಣಿಯೇ ಆಗಿದ್ದಳು. ಆ ದೇವರು ಇದ್ದ ಬದ್ದ ಅಂದ-ಚಂದವನನೆಲ್ಲ ಒಟ್ಟುಗೂಡಿಸಿ ಗಂಟೊಂದನ್ನು ಅಲ್ಲಿರಿಸಿದ್ದನು ಎಂದು ಭಾಸವಾಯಿತು ಅವಳನ್ನು ನೋಡಿದೊಡನೆ. ನೋಡಿದ ತಕ್ಷಣಕ್ಕೆ ಅನ್ನಿಸುತ್ತಿತ್ತು ಅವಳು ಆಗತಾನೆ ಸ್ನಾನ ಮುಗಿಸಿ ಬಂದಿಹಳೆಂದು. ತನ್ನ ನೀಳಗೂದಲುಗಳನ್ನು ಹಾಗೆಯೇ ಕಟ್ಟಿ, ಕಟ್ಟಿಗೊಂದು ಸಣ್ಣ ಸೇವಂತಿಗೆ ಮುಡಿದು, ಚಿಕ್ಕ ಕುಂಕುಮದ ಬೊಟ್ಟು ಹಣೆಗೆ ಇಟ್ಟು , ಶುಭ್ರ ಹಳದಿ ಬಟ್ಟೆಯುಟ್ಟು, ಕೈಯಲ್ಲೊಂದು ಸಣ್ಣ ಕವರ್ ಹಿಡಿದು ಆ ಮಲ್ಲಿಗೆ ಬಳ್ಳಿಯ ಬಳಿ ಅವಳು ನಿಂತಿದ್ದಾಳೆ. ಒಮ್ಮೆ ಅವಳ ಆ ಸೌಂದರ್ಯ ಆ ಮಲ್ಲಿಗೆ ಹೂವ್ ಬಳ್ಳಿಯ ಮತ್ತು  ಆ ಪ್ರಕೃತಿಯ ಸೌಂದರ್ಯಕ್ಕೆ ಸವಾಲಾಕಿದಂತೆ ಕಂಡರೂ ಮತ್ತೊಂದೆಡೆ ಅವಳ ಚೆಂದ ಅಲ್ಲಿಯ ಆ ಪ್ರಕೃತಿಗೇನೆ ಅಂದವನ್ನು  ತಂದುಕೊಟ್ಟಂತೆ ಅನ್ನಿಸುತಿತ್ತು. ಒಟ್ಟಾಗಿ ಹೇಳುವುದಾದರೆ ಒಬ್ಬರ ಚೆಲುವು ಮತ್ತೊಬ್ಬರಿಗೆ ಪೂರಕವಾಗಿದ್ದವು.    

                 ಆದರು ಅವಳು ಮಲ್ಲಿಗೆ ಬಳ್ಳಿಯ ಹೂವು ಕೀಳಲು ಅಲ್ಲಿ ನಿಂತೊಡನೆ ಇಡೀ ಮಲ್ಲಿಗೆ ಬಳ್ಳಿಯೇ ಅವಳ ಆ ಸೌಂದರ್ಯಕ್ಕೆ ಶರಣಾಗಿ ಆ ದಿನ ಕೊಂಚ ಸಪ್ಪೆಯಾಗಿ ಖಂಡಿತು. ಅವಳು ಹೂ ಕೀಳಲು ಕೈ ಎತ್ತುವ ಮೊದಲೇ ಆ ಮಲ್ಲಿಗೆ ಬಳ್ಳಿಯೆ ಭಾಗಿ ತನ್ನನ್ನು ತಾನು ಅವಳಿಗೆ ಅರ್ಪಿಸಿ, ತನ್ನೆಲ್ಲ ಹೂವುಗಳನ್ನು ಅವಳಿಗೆ ಸಮರ್ಪಿಸಿ ಸಾರ್ಥಕ ಗೊಳ್ಳುವಂತೆ ನಡೆದುಕೊಳ್ಳುತ್ತಿದೆಯೆಂದು ನನಗೆ ಭಾಸವಾಗುತಿತ್ತು. ಆ ಕ್ಷಣಕ್ಕೆ ನಾನು ಆ ಪ್ರಕೃತಿಯೋಲ್ಲಿ ಮತ್ತೊಂದು ಸೌಂದರ್ಯದ ನಿಕ್ಷೇಪವನ್ನು ಕಂಡಂತೆ ಆಯಿತು. ಅವಳು ಬಳ್ಳಿಯನ್ನು ಮುಟ್ಟಿ, ತನ್ನ ಕೋಮಲ ಕೈಯಿಂದ ಒಂದು ಮೊಲ್ಲೆಯ ಹೂವನ್ನು ಕಿತ್ತರೆ, ಇಡೀ ಗಿಡವೇ ಇಡಿಯಿಂದ-ಮುಡಿವರೆಗೆ ಪುಳಕಗೊಂಡು ಮೇಲಿಂದ ಮತ್ತೊಷ್ಟು ಹೊವನ್ನು ಅವಳ ಮೇಲೆ ಸುರಿಸುತಿತ್ತು. ಬಳ್ಳಿಯ ಎಲೆಗಳು ಕೂಡ ನೀರ ಮುತ್ತುಗಳನ್ನು ಅವಳ ಮೇಲುದುರಿಸುತ್ತಿದ್ದವು. ಒಟ್ಟಾರೆ ಅವಳು ಅಲ್ಲೊಂದು ಸಹಜ ಸೌಂದರ್ಯದ ಬಲೆಯನ್ನೇ  ಬೀಸಿ ಪ್ರಕೃತಿಗೆ ಮತ್ತು ನನ್ನ ಕುಣಿಯುವ ಮನಸ್ಸಿಗೆ ಸವಾಲೆಸಿದಿದ್ದಳು. 

          ಕ್ಷಣ ಮಾತ್ರದಲ್ಲೇ ಸಾಕೊಷ್ಟು ಹೂವು ಬಿಡಿಸಿ ಕೊಂಡಳು. ಅದೇನೋ ಗೊತ್ತಿಲ್ಲ ಈ ಹೆಣ್ಣು ಮಕ್ಕಳಿಗೆ ಹೂವುಗಳೆಂದರೆ ಅದೆಲ್ಲಿಲ್ಲದ ಪ್ರೀತಿ. ಅದರಲ್ಲಿ ಈ ಮಲ್ಲಿಗೆ ಹೂವೆಂದರೆ ಅಬ್ಬಾ ಅದೆಷ್ಟು ಮೋಹ. ಅದಕ್ಕೆ ಅವಳೇನು ಹೊರತಾಗಿರಲಿಲ್ಲ. ಮಲ್ಲಿಗೆ ಮುಡಿದು ಸೌಂದರ್ಯವನ್ನೇ ಮುಡಿಗೇರಿಸಿಕೊಳ್ಳುವ ಖಾತರ ಅವಳಿಗಿದ್ದರೆ, ಅವಳ ಸೌಂದರ್ಯಕ್ಕೆ ಆ ಬಳ್ಳಿಯೆ ಸೋತು, ತಾವೇ ಅವಳ ಮುಡಿಯೇರಲು ಹೂವುಗಳು ಹಾತೊರೆಯುತ್ತಿವೆ , ಎಂದು ನನಗನಿಸಿತು. ಅವಳ ಮುಖದಲ್ಲೇನೋ ಒಂದು ರೀತಿಯ ಖುಷಿ , ಹೇಳಲಾಗದ ಆನಂದ ಕಾಣಿಸುತ್ತಿತ್ತು. ಮಲ್ಲಿಗೆ ಹೂವ ಸುಹಾಸನೆಯ ಸುಖವನ್ನು ಅವಳು ಅನುಭವಿಸಿವಂತೆ ಕಂಡಳು. ಅವಳು ತನ್ನನ್ನು ತಾನೇ ಮರೆತು ಅಲ್ಲಿದ್ದಳು ಎಂದೆನಿಸಿತು ನನಗಾಗ. ತನ್ನನ್ನು ತಾನೇ ಮರೆತಂತೆ ಅವಳು ಕಾನುತಿದ್ದಳು. ಇದೆಲ್ಲ ನೆಡೆದ ಒಂದೈದು ನಿಮಿಷವಾದಮೇಲೆ ಅವಳು ಆ ಅದ್ಭುತ ಮೂಡ್ ಇಂದ ಹೊರಬಂದು, ತಕ್ಷಣಕ್ಕೆ ಅಲ್ಲೇ ನಿಂತಿದ್ದ ನನ್ನನ್ನು ಗಮನಿಸಿದಳು. ಅಲ್ಲಿಯವರೆಗೂ ಅವಳು ನನ್ನನ್ನು ನೋಡಿಯೇ ಇರಲಿಲ್ಲ. ನಾಚಿಕೆಯಾಯಿತೋ, ಗಾಬರಿಯಾಯಿತೋ, ನಾ ಅರಿಯೇ ಆ ಕ್ಷಣದಲ್ಲೇ ಗೇಟ್ ಹತ್ತಿರ ಹೋಗಿ , ನನ್ನನ್ನೇ ನೋಡುತ್ತ ತಡವರಿಸಿಕೊಂಡು ಗೇಟ್ ಚಿಲುಕ ತಗೆದು ಹೊಳಹೊಕ್ಕು, ಮತ್ತೊಮ್ಮೆ ತಿರುಗಿ ನೋಡಿದಳು. ಅವಳ ಆ ಮುಗ್ದ ನೋಟವಂತೂ ಮಾತ್ರ ವರ್ಣಿಸಲು ನನ್ನಿಂದ ಅಸಾದ್ಯ. ಅಷ್ಟರಲ್ಲಿ ಬಚ್ಚಿಟ್ಟುಕೊಂಡ ಬಯಕೆಯೊಂದು ಹಾಗೆಯೇ  ಆಕ್ಷಣಕ್ಕೆ ಹೃದಯದ ಕದ ತಟ್ಟಿದಂತಾಯಿತು. ಅವಳು ಅಲ್ಲಿಂದ ಮರೆಯಾದರೂ ಕೂಡ ನನ್ನ ಹೃದಯದೊಳಗೊಕ್ಕಿದ್ದಳು. 

                  ನಾ ನೋಡಿದ್ದು, ನಿಜವೋ , ಕನಸೋ ಎಂಬತೆ ಇತ್ತು ಆ ಸೌಂದರ್ಯಗಳ ಸಮಾಗಮ. ಅಲ್ಲಿದ್ದ ಅವಳು ಅಲ್ಲಿಲ್ಲ ಈಗ , ಅಲ್ಲೇ ಇದ್ದ ನಾನು ಆಲ್ಲಿರಲಿಲ್ಲ ಆಗ. ವಾಸ್ತವಕ್ಕೆ ಮರಳಲು ಇಷ್ಟವಿರಲಿಲ್ಲ , ಹಾಗೆಯೇ  ಅದನ್ನೇ ನೆನೆಯುತ್ತ, ಮತ್ತೆ ಮುನ್ನುಗ್ಗಿ ಮಲ್ಲಿಗೆ ಬಳ್ಳಿಯ ಬಳಿ ಹೋದೆ. ಮಾತಿಲ್ಲದೆ ನಿಂತೆ ಮಲ್ಲಿಗೆಯ ವಾಸನೆ ಗಮ್ಮೆನ್ನುತಿತ್ತು, ಬಳ್ಳಿಯು ಅವಳಿಗಾಗೆ ಅದನ್ನು ಸೂಸಿತ್ತೋ ಎಂದೆನಿಸಿತು. ಹರಳದ ಮೊಗ್ಗುಗಳನ್ನವಳು ಗಿಡದಲ್ಲೇ ಇರಿಸಿದ್ದಳು. ನಾ ಆ ಮೊಗ್ಗುಗಳ  ಕೇಳಿದೆ " ನೀವೇಕೆ ಇನ್ನು ಹರಳಿಲ್ಲ ? ಹರಳಿದ್ದರೆ ಅವಳ ಮುಡಿ ಸೇರಬಹುದಿತ್ತಲ್ಲ ?". ಅದಕ್ಕೆ ಆ ಮಲ್ಲೇ ಮೊಗ್ಗುಗಳು ನಾಚಿ ಹೇಳಿದವು " ಹರಳುವ ಮುನ್ನವೇ ಆಕೆ ಬಂದಳು, ತನ್ನ ಮುಖವನೊಮ್ಮೆ ನಮ್ಮುಂದೆ ಹರಳಿಸಿದಳು, ಬೀಸಿದಳು ತನ್ನ ನಗುವಿನ  ಬಲೆಯನ್ನು, ಬೀಗಿದಳು ಸೌಂದರ್ಯದ ಮುಖಹೊತ್ತು, ಮರೆತೆವು ನಾವು ನಮ್ಮನ್ನೇ, ಸೋಲೊಪ್ಪಿ, ಹೇಗಿದ್ದೇವೋ ಹಾಗೆ ಉಳಿದೆವು" , " ಅವಳ ಚೆಲುವ ಬಲೆಯಲ್ಲಿ ನಾವು ಸೆರೆಯಾಗಿ , ಮುಗ್ದ ಮೊಗದ ಮುಂದೆ ನಾಚಿ , ಹರಳದೇ ದುಂಡು ಮಲ್ಲಿಗೆಯಾಗೆ ಉಳಿದೆವು" ಎಂದವು ಹತ್ತಿರದಿಂದ ಅವಳನ್ನು ಕಂಡಿದ್ದ ಆ ಮುಗ್ಗು ಮಲ್ಲಿಗೆ ಹೂವುಗಳು. ನಿಜ ಹೇಳಬೇಕೆಂದರೆ ಅಲ್ಲಿ ಸೋತಿದ್ದು ಮೊಲ್ಲೆಗಳಲ್ಲ , ಪ್ರಪಂಚವನ್ನೇ ಮರೆತು ನಿಂತಿದ್ದ ನಾನು. ಇದು ಆ ಪ್ರಕೃತಿಯ ಪ್ರಭಾವವೋ , ಅವಳ ಸೌಂದರ್ಯವೋ , ಸೌಂದರ್ಯವನ್ನು ಮೆಚ್ಚುವ ನನ್ನ ಮನಸ್ಸೋ ನಾ ಮಾತ್ರ ಅರಿಯೆ. 

ನಿಮಗಾಗಿ 
ನಿರಂಜನ್ 

ಭಾನುವಾರ, ಜುಲೈ 14, 2013

ಹಿತವಾದ

                                                                             ಹೊದಿಕೆ 

ನಾವೆಲ್ಲರೂ ಮೊದಲಿಂದಲೂ ರೂಡಿಸಿಕೊಂಡು ಬಂದಂತೆ , ನಮ್ಮೆಲ್ಲರಿಗೂ ರಾತ್ರಿ ಮಲಗುವಾಗ ಅವಶ್ಯವಾಗಿ ಬೇಕಾಗುವುದು ಯಾವ ವಸ್ತು ?? ಅದು ಖಂಡಿತವಾಗಿಯೂ ಹೊದಿಕೆಯಲ್ಲದೆ ಮತ್ತೇನು ಅಲ್ಲ. ಚೆನ್ನಾಗಿರುವ, ಒಜ್ಜಿಕೊಂಡರೆ ಮೈ-ಕೈ-ಕಾಲು ಮುಚ್ಚುವ, ಒಳ್ಳೆ ಬಣ್ಣದ, ಸಾಕೊಷ್ಟು ಅಗಲವಾದ, ಬೆಸಿಗೆಯಾದರೆ ತೆಳ್ಳನೆಯ, ಚಳಿಗಾಲದಲ್ಲಿ ದಪ್ಪವಾದ, ಶುಭ್ರವಾದ , ಒಳ್ಳೆಯ ಹತ್ತಿಯುಪಯೋಗಿಸಿ ಅದ್ಭುತ ನೇಕಾರ-ಕಲಾವಿದ ತಯಾರಿಸಿದ ಕಸೂತಿಯನ್ನೊಳಗೊಂಡ ಹೊದಿಕೆ ಎಂದರೆ ಯಾರು ತಾನೇ ಬೇಡವೆಂದಾರು ?. ರಾತ್ರಿ ಮಲಗಿದಾಗ ಹೊದಿಕೆಯನ್ನು ಒಜ್ಜಿಕೊಲ್ಲದಿದ್ದರು ಅದು ತಮ್ಮ ಕಾಲ ಬಳಿ ಇರಲೇಬೇಕು. ಅದು ಪಕ್ಕದಲ್ಲೋ, ಹತ್ತಿರದಲ್ಲೋ, ಅವರಿಗೆ ಕೈಗೆ ಬೇಕೆಂದಾಗ ಸಿಗುವಂತಾದರು ಇರಬೇಕು ಅವರ ಹೊದಿಕೆ. ಒಂದೊತ್ತಿನಲ್ಲಿ ಬೇಕೆನಿಸಿದರೆ ಅದು ಗೊತ್ತಿಲ್ಲದೇ ಖಂಡಿತವಾಗಿ ಅವರ ಮೈ ಮೇಲಿರುತ್ತೆ, ಇಲ್ಲವಾದರೆ ಹೊದಿಕೆಯ ಮೇಲೆ ಅವರೇ ಇರುತ್ತಾರೆ .. ಇಲ್ಲಾ...  ಕಾಲಿನ ಮೇಲಾದರು ಹೊದಿಕೆ ಇದ್ದೆ ಇರುತ್ತೆ. ಈ ಕಾಲ ಆ ಕಾಲ, ಯಾವ ಕಾಲವಾದರು ಹೊದಿಕೆ... ಒಂದೊಳ್ಳೆಯ... ಅಚ್ಚುಕಟ್ಟಾದ ಹೊದಿಕೆ ಇರಲೇಬೇಕು. ಇಲ್ಲದೆ ಹೋದರೆ ನಿದ್ದೆ ಬರೋಲ್ಲ. ರಾತ್ರಿಗಳನ್ನು ಕಲ್ಪಿಸಿಕೊಳ್ಳಲು ಸಾದ್ಯವಿಲ್ಲ. ಅದು ಚಳಿಗಾಲದ ರಾತ್ರಿಯೊಂತು ಹೊದಿಕೆ ಬೇಕೇ ಬೇಕು.   

           ಕೆಲವರು ಹೇಳುವ ರೀತಿಯಲ್ಲಿ, ಹೊದಿಕೆ ಇಲ್ಲದೆ ಅವರು ಮಲಗಿದ ದಿನಗಳಿಲ್ಲವಂತೆ. ಹೊದಿಕೆ ಇಲ್ಲದ ದಿನಗಳನ್ನು ನೆನೆಯಲು ಕೂಡ ಸಾದ್ಯವಿಲ್ಲವಂತೆ.  ಏನ್ ಇರಲಿ ಬಿಡಲಿ ತೆಳ್ಳಗಿನ,ಶುದ್ದವಾದ, ಅಂದ ಚಂದದ ಒಂದು ಹೊದಿಕೆ ಬೆಸಿಗೆ , ಮಳೆ, ಚಳಿಗಾಲಗಳ  ರಾತ್ರಿಗಳಲಿ ಬೇಕೇ ಬೇಕು. ಮೆತ್ತನೆಯ ಸ್ವಲ್ಪ ತೆಳ್ಳಗಿರುವ ಹೊದಿಕೆ ಬೇಸಿಗೆಗೆ ಬೇಕೆನಿಸಿದರೆ, ಚಳಿಗಾಲದಲ್ಲೋ "ಒಂದಿಷ್ಟು ಸ್ವಲ್ಪ ದಪ್ಪ ಇದ್ದರೆ ಮಜಾ ಇರುತ್ತೆ,  ಕೈತುಂಬಾ ಸಿಕ್ಕರೆ ಮೈತುಂಬಾ  ಒಜ್ಜಿಕೊಳ್ಳಬಹುದು" ಎಂದು ಎಲ್ಲರಿಗೂ ಅನ್ನಿಸುತ್ತೆ. ಹೊದಿಕೆಯೊಂದಿಗೆ ಮಲಗುವುದೇ ಒಂದು ರೀತಿಯ ಬೆಚ್ಚನೆ ಅನುಭವ. ವಾತಾವರಣ ಹೇಗೆ ಇರಲಿ, ಮೈ ಬಿಗಿಹಿಡಿದು ಹೊದಿಕೆಯನ್ನು ಇಡಿದೆಳೆದುಕೊಂಡು ಮೈ ಸುತ್ತಿಕೊಳ್ಳುತ್ತೇವೋ ಇಲ್ಲವೋ, ಆದರೆ ಒಂದು ಹೊದಿಕೆ ಮಾತ್ರ ಸದಾ ಜೊತೆಯಿದ್ದರೆ ಒಳ್ಳೆಯದು ಅಲ್ಲವೇ ?. ಸಂಪೂರ್ಣ ಒಜ್ಜಿಕೊಳ್ಳದಿದ್ದರು ಅದನ್ನು ಕಾಲ ಮೇಲಾದರೂ ಹಾಕಿ ಮಲಗುವ ರೂಡಿ ಇದ್ದರೆ ಒಳ್ಳೆಯದೆಂದು ನಮ್ಮ ಹಿರಿಯರು ಕೂಡ ಹೇಳುವ ನೆನಪಂತೂ ನನಗೂ ಕೂಡ ಇದೆ. ಏಕೆಂದರೆ ಹೊದಿಕೆ ಕೊರೆಯುವ ಚಳಿಯಿಂದ, ಹೊತ್ತಲ್ಲದ ಹೊತ್ತಲ್ಲಿ ಎಲ್ಲೆಂದರಲ್ಲಿ ನುಗ್ಗುವ ಸೊಳ್ಳೆಗಳಿಂದ ನಮಗೆ ರಕ್ಷಣೆ ನೀಡುವುದರಲ್ಲಿ ಎರೆಡು ಮಾತಿಲ್ಲ.

           ಈ ಹೊದಿಕೆ ಎಂಬುದು ನಾವು ಹೇಳಿದ ಹಾಗೆ ಕೇಳುತ್ತೆ ಅಂತ ಅನ್ನಿಸುವುದಿಲ್ಲವೇ ತಮಗೆ ?. ನಾವು ಹೇಗೆ ಉಪಯೋಗಿಸಿದರು ಅದು ಸುಮ್ಮನಿರುತ್ತದೆ, ನಾವು ಬಿಗಿ ಇಡಿದೊಷ್ಟು ನಮ್ಮ ಬಳಿಯೇ ಇರುತ್ತೆ , ಹಿತವೆನ್ನುವಷ್ಟು ನಮ್ಮನ್ನು ಸುತ್ತುತ್ತದೆ. ಈ ಎಲ್ಲ ಕಾರಣಗಳಿಗಾಗಿ ಹೊದಿಕೆಯನ್ನು ಎಲ್ಲರು ಇಷ್ಟ ಪಡುತ್ತಾರೆ. ಹೊದಿಕೆಗೆ ಅನೇಕ ಪರ್ಯಾಯಗಳಿದ್ದರು ಹೊದಿಕೆಯ ಮಜವೇ ಬೇರೆ. ಅದೇ ರೀತಿ ಹೊದಿಕೆಗಳಲ್ಲಿ ಅನೇಕ ಬಗೆಗಳೂ ಕೂಡ ಇವೆ. ಸಾಂಪ್ರಾದಾಯಿಕ ಹೊದಿಕೆಗಳಿಂದ ಇಡಿದು ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ADVANCED, ಜಿಂಗ್-ಚಾಕ್ ಹೊದಿಕೆಗಳು ನಮಗೆ ಸಿಗುತ್ತವೆ. ಕೆಲವರಿಗೆ ಸಾಂಪ್ರದಾಯಿಕ ಹೊದಿಕೆ ಬೇಕೆನಿಸಿದರೆ, ಕೆಲವರಿಗೆ ಜಿಂಗ್-ಚಾಕ್ ಹೊದಿಕೆಗಳು ಇಷ್ಟವಾಗುತ್ತವೆ. ಆದರೆ ಪ್ರತಿ ರಾತ್ರಿ ಮಲಗುವ ಮೊದಲು ನಮಗೆ ನೆನಪಾಗುವುದು ಇಷ್ಟದ ದೇವರಗಳಲ್ಲ, ಆ ದಿನದ ಘಟನೆಗಳಂತೂ ಅಲ್ಲವೇ ಅಲ್ಲ, ನಮ್ಮ ನೆಚ್ಚಿನ ಹೊದಿಕೆಗಳು ಮಾತ್ರ ಹಾಗೆ ನಮ್ ಕಣ್ ಮುಂದೆ ಬಂದು ಬಿಡುತ್ತವೆ. ಕೆಲವರಂತು ಕೆಲವು ಹೊದಿಕೆಗಳನ್ನು ತಮ್ಮ favorite ಗಳಾಗಿ  ಮಾಡಿಕೊಂಡಿರುತ್ತಾರೆ. ಹೊದಿಕೆಗಳನ್ನು ಯಾರು ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಇಷ್ಟ ಕೂಡ ಪಡುವುದಿಲ್ಲ,  ಅದು ಒಳ್ಳೆಯ ಅಭ್ಯಾಸ ಕೂಡ,  ಅದಕ್ಕೆ ನನ್ನ ತಂಟೆ ತಕರಾರೊಂತು ಇಲ್ಲವೇ ಇಲ್ಲ. ಇದಕ್ಕೆ ಕಾರಣಗಳು ಅನೇಕ. ಅದರ ಮೇಲಿನ ಅತಿಯಾದ ಪ್ರೀತಿ, ನಿಚ್ಚಿನ ಬಣ್ಣ, ಅದರ ಉದ್ದ-ಅಗಲ ಮತ್ತು ಗಾತ್ರಗಳು ಹೆಚ್ಚಿನ ಪಾತ್ರವಹಿಸುತ್ತವೆ. ಕೆಲವರಂತೂ ಕಾರಣಗಳಿಲ್ಲದೆ ಹೋದರು ಕೆಲವು ರೀತಿಯ ಹೊದಿಕೆಗಳನ್ನು ತುಂಬಾ ಇಷ್ಟ ಪಡುತ್ತಾರೆ.  
                
                ಈ ಮಳೆಗಾಲ , ಚಳಿಗಾಲಗಳು ಬಂದವೆಂದರೆ ಮಾತ್ರ ಎಲ್ಲರಿಗೂ ಬೇಕೇ ಬೇಕು ಹೊದಿಕೆ, ಅದರಲ್ಲೂ ಹೀಗಿರುವ ಇಂಥಹ ವಾತವರಣದಲ್ಲಿ ಯಾರಿಗೆ ಬೇಡ ಅಂದ ಚಂದದ ಬೆಚ್ಚಗಿಡುವ ಸುಂದರ ಹೊದಿಕೆಗಳು ?. ದೂರದೃಷ್ಟಿಯುಳ್ಳವರು ಈ ಕಾಲಗಳು ಆರಂಭವಾಗುವ ಮೊದಲೇ ಇವುಗಳ ವ್ಯವಸ್ತೆ ಮಾಡಿಕೊಳ್ಳುತ್ತಾರೆ. ಬುದ್ದಿವಂತ ತಂದೆ-ತಾಯಿಗಳು ಮಕ್ಕಳು ಒಪ್ಪುವ ಹೊದಿಕೆಗಳನ್ನು ಅವರೇ ತಂದು ಮಕ್ಕಳಿಗೆ ಹೊದಿಸುತ್ತಾರೆ. ಕೆಲವರು ಸ್ಥಳಿಯವಾಗಿ ಸಿಗುವ ಹೊದಿಕೆಗಳನ್ನು ಹೊದ್ದುಕೊಂಡು ತೃಪ್ತಿ ಪಟ್ಟರೆ, ಇನ್ನೂ ಕೆಲವರು "ಈ ಹೊದಿಕೆ ಕಾಶ್ಮೀರಿ ಶಾಲ್ ಹಾಗಿದ್ದರೆ ಹೇಗೆ ಇರುತ್ತಿತ್ತು ! " ಎಂದು ಇಲ್ಲದರ ಬಗ್ಗೆ ಯೋಚಿಸುತ್ತಾರೆ. ಪ್ರಜ್ಞಾವಂತ ಜನರು ಹೊದ್ದ ಹೊದಿಕೆಯಲ್ಲೇ ಸಂತುಷ್ಟರಾಗಿ ಹಾಯಾಗಿ ಬೆಚ್ಚಗೆ ಮಲಗುತ್ತಾರೆ. ಆಷಾಡದ ಗಾಳಿಯಲ್ಲೊಂತು ಹೊದಿಕೆಗಳು ಅತ್ಯವಶ್ಯಕ, ಅದರಲ್ಲೂ ಈ ಆಷಾಡದ ವಿರಹಿಗಳಿಗೆ ಬೇಕೇ ಬೇಕು ಅವರ ಆ... ಹೊದಿಕೆ. 

          ನಿಮಗೆ ಗೊತ್ತಾ ? ವಯಸ್ಸಿಗೆ ತಕ್ಕನಾಗಿ ಹೊದಿಕೆಗಳ ಮೇಲೆನ  ಪ್ರೀತಿಯೂ  ಕೂಡ ಬದಲಾಗುತ್ತದೆ. ಒಂದೊಂದು ವಯಸ್ಸಿನಲ್ಲಿ ಒಂದೊಂದು ತರಹದ ಹೊದಿಕೆಗಳು ನಮ್ಮನ್ನು ಆಕರ್ಷಿಸುತ್ತವೆ. ಇದಕ್ಕೆಲ್ಲ ಕಾರಣ ಹೊದಿಕೆಯ ಉಪಯೋಗ , ಅದರ ಅಂದ-ಚಂದ. ಕೊನೆಯಾದಾಗಿ ಹೇಳಬೇಕೆಂದರೆ ಹೊದಿಕೆ ಬೇಕೇ ಬೇಕು ಮಲಗುವಾಗ ಅದು ನಮ್ಮದೇ ಆಗಿದ್ದರೆ ಚೆನ್ನ, ಒಂದೇ ಇದ್ದಾರೆ ಹಿತ, ಒಳ್ಳೆಯದಾದ್ರೆ ಸಂತೋಷ , ಶುಭ್ರವಾಗಿದ್ದರೆ ಆರೋಗ್ಯ. 

ನಿಮಗಾಗಿ 
ನಿರಂಜನ್ 


ಶನಿವಾರ, ಜುಲೈ 6, 2013

ನನ್ನದಲ್ಲ


             ನನ್ನದಲ್ಲ

ರಳದಿದ್ದದ್ದು  ಕಣ್ಣು , ನಗದಿದದ್ದು ಬಾಯಿ
ಅಪರಾದವಂತೆ  ಮುಗ್ದ  ಮುಖದ್ದು.

ಜೋರು ಬೀಸಿದ್ದು ಗಾಳಿ, ಬಿದ್ದದ್ದು ಕಲ್ಲು
ಅಪರಾದವಂತೆ ಹಳೇ ಗುಡಿಯದ್ದು.

ಕಲ್ಲಲ್ಲಿತ್ತು ದೋಷ ,ಆತ ಕಲಿತಿರದ ಶಿಲ್ಪಿ
ವಕ್ರವಂತೆ  ಶಿಲ್ಪದ ಕಣ್ಮುಖಗಳು..

ಅವೇನು ಬಯಸಿ ಪಡೆದಿದ್ದವೆ ಇದೆಲ್ಲವನ್ನು
ವಿಧಿಯಾಟವಲ್ಲದೆ ಇದು ಮತ್ತೇನು.. 
 
ತಲೆ ತಗ್ಗಲೇ ಬೇಕಾಗಿದೆ ಮಾಡದ ತಪ್ಪಿಗೆ ,
ಸಹಕರಿಸದೇ ನಾ ಸುಮ್ಮನಿರಲೇ.....

ನಿಮಗಾಗಿ 
ನಿರಂಜನ್ 


ಮಂಗಳವಾರ, ಜೂನ್ 18, 2013

ಪ್ರೇಮ


                                                                               ಪ್ರೇಮ 

ನಮ್ಮಲ್ಲಿ ಕೆಲವರಿಗೆ ಮದುವೆ ಆಗಿರಬಹುದು, ಕೆಲವರು ಇನ್ನೇನು ಇಷ್ಟರಲ್ಲೇ ಆಗಬಹುದು. ಈ ಮದುವೆ ಆಗದವರು, ಆದವರನ್ನು "ಹೇಗಿರುತ್ತೆ ??" ಅದರ ಸವಿಯೆಂದು ಕೇಳಿದಾಗ , ಮದುವೆಯಾದವರ ಉತ್ತರ "ಆಗಿ ನೋಡಿ", "ಆರಮಾಗಿರೋ ಯಾಕೋ ನಿಂಗೆ ಅದೆಲ್ಲ ?? " , "ಇನ್ನು ಸ್ವಲ್ಪ ದಿನ ಹೀಗೆ ಇರೋ, ಯಾಕೆ ಮೈಯ್ಮೇಲೆ ಎಳೆದು ಕೊಳ್ತಿಯ " . ಇನ್ನು ಕೆಲವರು "ಎಷ್ಟೋ ನಿನ್ ವಯಸ್ಸು , ಆಗು ಸ್ವಲ್ಪ ವರ್ಷ ಬಿಟ್ಟು ಆಗು, ಈಗಲೇ ಯಾಕೆ ಬೇಕು ಅದೆಲ್ಲ ". ಹೀಗೆ ಇನ್ನೂ ಅನೇಕ , ಚಿತ್ರ ವಿಚಿತ್ರ ಉತ್ತರಗಳು ಬಹುವಾಗಿ ಸಿಗುತ್ತವೆ. ಕೆಲವರಂತೂ "ಮೊದ್ಲು ಮೊದ್ಲು ಎಲ್ಲ soooper ಆಗಿ ಇರುತ್ತೆ , ಆಮೇಲೆ ನೋಡು ಶುರುವಾಗೋದು" ಅಂತೆಲ್ಲ ಹೇಳುತ್ತಾರೆ. ಅದೇನು ಮೊದ್ಲು ಮೊದ್ಲು ಸಕತ್ ಆಗಿರುತ್ತೆ , ಆಮೇಲೆ ಅದೇನು ಶುರುವಾಗುತ್ತೆ , ಅದರ ಕಷ್ಟ ಏನು , ಅದೇಗಿರುತ್ತೆ ಅದರ ಸುಖ ಎಂದು ಯಾರು ಹೇಳೋಲ್ಲ. ಹೇಳುವಷ್ಟು ಹಿತವಾಗಿರುತ್ತೋ ಇಲ್ಲವೋ ನನಗೊಂತು ಗೊತ್ತಿಲ್ಲ. ಇಲ್ಲ ಹೇಳದಿರುವಷ್ಟು ಮಜವಾಗಿರುತ್ತೋ ಏನೋ ಅದೂ ಕೂಡ  ನನಗೆ ಗೊತ್ತಿಲ್ಲ. ಅದನ್ನು ನಾವೇ ಖುದ್ದು ಅನುಭವಿಸಿದ ಮೇಲೆಯೇ ನಮಗೆ ತಿಳಿಯಬಹುದು. ಆದರೂ  ಕೆಲವರು ತೀರ ಹತ್ತಿರದವರು ಅಷ್ಟು-ಇಷ್ಟು ಹೇಳುವವರು ಇದ್ದೆ ಇರುತ್ತಾರೆ. ಕೆಲವರ ಪ್ರಕಾರ ಶುರುವಿನಲ್ಲಿ ಎಲ್ಲವು ಈ ರೀತಿ ಇರುತ್ತಂತೆ. 
                                                          ತುಂಬಿದೆ ಚೆಲುವೆ ಜೇನು ನಿನ್ನ ತುಟಿಗಳಲಿ
                                                          ಸುಮ್ಮನೆ  ಹೇಗಿರಲಿ ನಾನು, ಹಾಗೆ ನೋಡುತಲಿ.....

                                                           ಚಿಮ್ಮುತಿಹವು ನಿನ್ನ ಕಂಗಳು ಕಾಂತಿಯನು
                                                           ಬೆಳದಿಂಗಳಲ್ಲದೆ ಅದು ನನಗೆ ಮತ್ತೇನು ....

                                                           ಸುರಿದಂತೆ ಸಿಹಿಯಾದ ಸೋನೆ ನೀ ನಕ್ಕರೆ
                                                           ಹೃದಯದಾಳವ ಒಡ್ಡದೆ ನಾ ಸುಮ್ಮನಿರೆ ....

                                                           ಮಾತಲ್ಲವೇ ಅಲ್ಲವವು,ಮುತ್ತಿನ ಸರಮಾಲೆ
                                                           ಪ್ರೇಮ ಮೂರ್ತಿ ನಾ,ಸಿಂಗಾರಗೊಳ್ಳದಿರಲೇ..

                                                           ನೀ ನನಗೆ ಸಂಪೂರ್ಣ ಸದಾ ಚೇತನುತ್ತೇಜನ
                                                           ತುಂಬಿರು ನನ್ನದಲ್ಲದ ಹೃದಯದಲಿ ಅನುದಿನ..

           ಸ್ವಲ್ಪ ದಿನ  ಕಳೆದ ಮೇಲೆ , ಅವರಿಬ್ಬರ ನಡುವೆ  ಬೇಸಗೆ ಬಂದು , ಭಾವನೆಗಳು ಬಿಸಿಲಿಗೆ ಬತ್ತಿದ  ಮೇಲಂತೂ ಇಬ್ಬರಿಗೂ ಯಾಕೋ ಒಬ್ಬರ ಮೆಲೋಬ್ಬರಿಗೆ ಅಷ್ಟಕ್ಕೇ ಅಷ್ಟೇ ಆಗಿ. ಇಬ್ಬರಲ್ಲಿ ಒಬ್ಬರು ಅಥವಾ ಇಬ್ಬರು ಹೀಗೆ ಅನ್ನುತಾರಂತೆ .  

                                                         ಮೊದ  ಮೊದಲು ಸುರಿಯುತಿದ್ದೆ  ಜೇನಹನಿ
                                                         ಈಗೇಕೆ ಹರಿಯುವಂತೆ ಮಾಡುವೆ ಕಣ್ಣೀರಹನಿ...

                                                         ಹೇಳುತಿದ್ದೆ ನೀನೆ ನನಗೆ , ನಿನ್ನದೆಲ್ಲವು ಇಷ್ಟ
                                                         ಮತ್ತೇಕೆ ಪಡುವೆ ಈಗ ಜೊತೆಯಲಿರಲು ಕಷ್ಟ .... 

ಆದರೆ ಸ್ನೇಹಿತರೆ ನಿಜ ಹೇಳಬೇಕೆಂದರೆ , ಈ ಪ್ರೀತಿ ಬರಿ ದೈಹೀಕವಾಗಿರದಿದ್ದರೆ ಕಡೆಯತನಕವೂ ಅದು ನಮ್ಮ ಜೊತೆಯಲ್ಲೇ ಇರುತ್ತೆ. ನಾವು ಬಿಟ್ಟರು ಅದು ನಮ್ಮನ್ನು ಬಿಡದು. ಬರೀ  ದೇಹಾಕರ್ಷಣೆಯ result ನಮ್ಮ ಪ್ರೀತಿಯಾಗಿದ್ದರೆ , ನಮಗೆ ವಯಸ್ಸಾದಂತೆ ಪ್ರೀತಿಗೂ ವಯಸ್ಸು ಆಗುತ್ತೆ. ಆದರೆ ನಮ್ಮ ಪ್ರೀತಿ ಮನಸ್ಸುಗಳ, ಭಾವನೆಗಳ , ಪರಸ್ಪರ ಗೌರವಗಳ result ಆಗಿದ್ದರೆ, ನಮಗೆ ವಯಸ್ಸು ಆದೊಷ್ಟು ನಮ್ಮ ಪ್ರೀತಿ ಗಟ್ಟಿಗೊಳ್ಳುತ್ತೆ,ವಯಸ್ಸು ಆದೊಷ್ಟು ಅದು ಪರಿ ಪಕ್ವವಾಗುತ್ತೆ , ಸಾಣಿಯಾಗುತ್ತೆ. ಕೊನೆಯಾದಾಗಿ ಹೇಳಬೇಕೆಂದರೆ ಪ್ರೀತಿಗೆ ಆದಿ-ಅಂತ್ಯಗಳಿಲ್ಲ.                                                    

                                                    " ನಾನು ನೀನೆನ್ನದಿರಬೇಕು, ಪ್ರೀತಿಗಳೊಂದಾಗ ಬೇಕು
                                                       ಜೊತೆಕಳೆದಂತೆ ಪ್ರೀತಿಯು ಬೆಳೆದು ಹಿರಿದಾಗ ಬೇಕು 
                                                      ಇಬ್ಬರು ಕಲೆತು, ಆ ಪ್ರೀತಿಯೋಳಗೊಂದಾಗ ಬೇಕು "
  
ನಿಮಗಾಗಿ 
ನಿರಂಜನ್ 

ಶುಕ್ರವಾರ, ಜೂನ್ 14, 2013

ನರಿಯಂತೆ ಇರಬೇಕು

                                           
                                                           ಬುದ್ದಿವಂತಿಕೆ 

ಒಂದಾನೊಂದು ಕಾಲದಲ್ಲಿ , ಒಬ್ಬ ರೈತನಿದ್ದ . ಅವನ ಬಳಿ ಒಂದು ಕಟ್ಟು ಮಸ್ತಾದ  ಕುದುರೆಯೊಂದಿತ್ತು . ಕುದುರೆಯು  ಯವ್ವನದಲ್ಲಿ ತನ್ನ ಶಕ್ತಿಯನ್ನೆಲ್ಲ ವ್ಯಯಿಸಿ , ಕಷ್ಟ ಪಟ್ಟು  ರೈತನಿಗಾಗಿ ದುಡಿಯುತ್ತಿತ್ತು. ರೈತನೂ ಕೂಡ ಕುದುರೆಯನ್ನು ಚೆನ್ನಾಗಿ ನೋಡಿಕೊಳ್ಳುತಿದ್ದ. ಕೆಲಕಾಲ ಕಳೆದ ನಂತರ ಕುದುರೆಗೆ ಸಹಜವಾಗಿ ವಯಸ್ಸಾಯಿತು. ರೈತನಿಗೆ ಇನ್ನು ಮೇಲೆ ಈ ವಯಸ್ಸಾದ  ಕುದುರೆಯಿಂದ ನನ್ನ ಒಕ್ಕಲುತನಕ್ಕೆ ಉಪಯೋಗವಿಲ್ಲ ಎಂಬ ಭಾವನೆ ಬೆಳೆಯಿತು.  ಒಂದು ದಿನ ಕುದುರೆಯನ್ನು ಕರೆದು ಹೇಳುತ್ತಾನೆ "ಉಪಯೋಗ ಇಲ್ಲದ ನಿನ್ನನ್ನು ಸಾಕಲು ನನ್ನಿಂದ ಆಗುವುದಿಲ್ಲ , ಇನ್ನು ಮುಂದೆ ನಿನ್ನ ದಾರಿಯನ್ನು ನೀನು ನೋಡಿಕೋ , ಈ ದಿನವೇ ನನ್ನ ಮನೆಯನ್ನು ಬಿಟ್ಟು ಹೊರಡು " . ಗಾಬರಿಗೊಂಡ ಕುದುರೆ "ರೈತನೇ ನನ್ನ ಜೀವನವೆಲ್ಲ ನಾನು ನಿನಗಾಗಿಯೆ ದುಡಿದಿದ್ದೇನೆ, ನಿನ್ನ ಹೊರತು ನನಗೆ ಬೇರೆ ಯಾರು ಗೊತ್ತಿಲ್ಲ , ನನಗೆ ನಿನ್ನ ಮನೆಯಲ್ಲಿಯೇ ಇರಲು ಅವಕಾಶ ಕೊಡು ", ಎಂದಾಗ ಕುದುರೆಯ ಮಾಲೀಕ ಬಹುವಾಗಿ ಯೋಚಿಸಿ , ಕುದುರೆಯನ್ನು ಮನೆಯಿಂದ ಹೊರಗಟ್ಟಲು ಬುದ್ದಿವಂತಿಕೆಯಿಂದ ಒಂದು ಉಪಾಯ ಮಾಡುತ್ತಾನೆ. 

            ಮರುದಿನ ಬಂದು ತನ್ನ ವಯಸ್ಸಾದ ಕುದುರೆಗೆ " ನೋಡು ನಿನಗೆ ನಾನು ಒಂದು ಕಡೆಯ ಅವಕಾಶ ಕೊಡುತ್ತೇನೆ ,ನೀನು ನನಗೆ ಕಾಡಿನಿಂದ ಒಂದು ಗಂಡು ಹುಲಿಯ ಚರ್ಮ ತಂದು ಕೊಡಬೇಕು , ಹಾಗೇನಾದರು ನೀನು ಚರ್ಮವನ್ನು ತಂದು ಕೊಟ್ಟರೆ ಮಾತ್ರ ನಾನು  ನಿನಗೆ ಸಾಯುವವರೆಗೆ ನನ್ನ ಮನೆಯಲ್ಲಿ ನಿನ್ನನ್ನು ಇಟ್ಟುಕೊಂಡು , ಮೇವು ಹಾಕುತ್ತೇನೆ " ಎಂದು ಹೇಳುತ್ತಾನೆ.  ರೈತನೋ  " ಈ ಕುದುರೆಗೆ ಇಂಥಹ ಕಷ್ಟದ ಕೆಲಸ ಮಾಡಲು ಸಾದ್ಯವಿಲ್ಲ , ಒಂದು ವೇಳೆ ಈ ಕೆಲಸ ಮಾಡಲು ಕುದುರೆ ಕಾಡಿಗೆ ಹೋದರೆ ಅದು ಅಲ್ಲಿನ  ಕಾಡು ಮೃಗಗಳಿಗೆ ಆಹಾರವಾಗುವುದೊಂತು ಖಚಿತ , ಒಟ್ಟಿಗೆ ಈ  ವಯಸ್ಸಾದ ಕುದುರೆ ಮನೆಯಿಂದ ತೊಲಗಿದರೆ ಸಾಕು " ಎಂದು ಯೋಚಿಸಿದ್ದ. 

        ರೈತನ ಈ ಶರತ್ತನ್ನು ಸ್ವೀಕರಿಸಿದ ಕುದುರೆ ಕಾಡಿಗೆ ಹೊರಡುತ್ತೆ. ಕಾಡಿನಲೆಲ್ಲ ಹುಲಿಯನ್ನು ಹುಡುಕಲು ಶುರು ಮಾಡುತ್ತದೆ.  "ಹುಲಿಯು ಸಿಕ್ಕರೂ  ನಾನು ಅದನ್ನು ಕೊಲ್ಲಲು  ಸಾದ್ಯವೇ , ಅದು ನನ್ನನ್ನು ತಿನ್ನದೇ ಬಿಡುವುದೇ , ಹುಲಿಯನ್ನು ಕೊಂದು ನಾನು ಹೇಗೆ ಅದರ ಚರ್ಮವನ್ನು ರೈತನಿಗೆ ಕೊಡುವುದು " ಎಂದು ಯೋಚಿಸುತ್ತ ಅಲ್ಲೇ ಇದ್ದ ಒಂದು ಮರದ ಕೆಳಗೆ ನಿಂತುಕೊಳ್ಳುತ್ತದೆ. ಎಷ್ಟು ಯೋಚಿಸಿದರು ಅದಕ್ಕೆ ಏನು ಉಪಾಯ ತೋಚುವುದಿಲ್ಲ . ಅಷ್ಟರಲ್ಲೇ ಅಲ್ಲಿಗೊಂದು ಬುದ್ದಿವಂತ ನರಿ ಬಂದು, ಯೋಚಿಸುತ್ತ ನಿಂತ ಮುದಿ ಕುದುರೆಯನ್ನು ನೋಡಿ ಅದರ ಸಂಕಷ್ಟವನ್ನು ಕೇಳಿ ತಿಳಿಯುತ್ತದೆ. ಕುದುರೆಯ ಮೇಲೆ ಕನಿಕರ ಬಂದು ಕುದುರೆಗೆ ಸಹಾಯ ಮಾಡಲು ನಿರ್ದರಿಸಿ , ಒಂದು ಉಪಾಯ ಮಾಡುತ್ತದೆ. ಉಪಾಯದ ಪ್ರಕಾರ ನರಿಯು "ನೋಡಪ್ಪ  ಕುದುರೆ, ನೀನು ಈಗ ಅಲ್ಲಿ ಕಾಣುವ ನದಿಯ ದಡದಲ್ಲಿ ಸತ್ತು ಬಿದ್ದ ಹಾಗೆ ನಟಿಸಬೇಕು. ನಾನು ಹೇಳುವವರೆಗೂ ನೀನು ಮೇಲೆಳುವಂತಿಲ್ಲ. ನಾನು ಹೇಳಿದ ತಕ್ಷಣವೆ ನೀನು ಮೇಲೆದ್ದು ಓಡಬೇಕು " ಎಂದು ಹೇಳಿತು . ಕುದುರೆಯು ಅದಕ್ಕೊಪ್ಪಿ ಸತ್ತಹಾಗೆ ನಟಿಸ ತೊಡಗಿತು.

          ಅಷ್ಟರಲ್ಲಿ ನರಿಯು ದೂರದಲಿದ್ದ , ಕಾಡಿನ ಎಲ್ಲ ಪ್ರಾಣಿಗಳಿಗೂ ಉಪದ್ರವವಾಗಿದ್ದ , ಒಂದು ಹುಲಿಯ ಬಳಿಗೆ ಹೋಗಿ " ಹುಲಿರಾಯ , ಅಲ್ಲೊಂದು ಕುದುರೆಯು ಈಗ ತಾನೇ ಸತ್ತು ಬಿದ್ದಿದೆ. ನೀನು ಬಂದರೆ ತಿನ್ನಬಹುದು , ನೀನು ಉಳಿಸಿ ಬಿಟ್ಟದ್ದನ್ನು ನಾನು ತಿನ್ನುವೆ ,  ಕಾಡಿನ ರಾಜನಾದ ನಿನಗೆ ಕಷ್ಟ ಪಡದೆ ಬೇಟೆ ಸಿಕ್ಕರೆ ಬಿಟ್ಟು ಬಿಡುವೆಯಾ  " ಎಂದಾಗ , ಏನನ್ನು ಯೋಚಿಸದೆ ಆ ಹುಲಿಯು ನದಿಯ ದಡಕ್ಕೆ ಬಂದು , ಕುದುರೆ ಬಿದ್ದಿರುವುದನ್ನು ನೋಡಿ " ಕಷ್ಟ ಪಡದೆ ಒಳ್ಳೆಯ ಬೇಟೆ ಸಿಕ್ಕಿದೆ" ಎಂದು ಮನಸ್ಸಿನಲ್ಲೇ ಖುಷಿ ಪಡುತ್ತದ್ದೆ. ಇನ್ನೇನು ಹುಲಿಯು ಕುದುರೆಯ ಕುತ್ತಿಗೆಗೆ ಬಾಯಿ ಹಾಕ ಬೇಕು , ಅಷ್ಟರಲ್ಲಿ ನರಿಯು  "ಅವಸರ ಮಾಡಬೇಡ ಹುಲಿರಾಯ,  ನಾವು ಇಲ್ಲೇ ಇದನ್ನು ತಿನ್ನಲು ಶುರು ಮಾಡಿದರೆ ಬೇರೆ ಪ್ರಾಣಿಗಳು ಬಂದು ಪಾಲು ಕೇಳಬಹುದು. ಹಾಗಾಗಿ ನಾವು ಅಲ್ಲಿ ಕಾಣುವ ದೊಡ್ಡ  ಪೊದೆಯ ಹಿಂದೆ ಇದನ್ನು ಎಳೆದೊಯ್ದು , ಅಲ್ಲಿ ಬಚ್ಚಿಟ್ಟುಕೊಂಡು ತಿನ್ನೋಣ " ಎಂದು ಹೇಳುತ್ತದೆ. ಅದಕ್ಕೊಪ್ಪಿದ ಹುಲಿಗೆ " ನೋಡು ನಾನು ಈ ಕುದುರೆಯ ಬಾಲಕ್ಕೆ ನಿನ್ನ ಬಾಲ ಕಟ್ಟುತ್ತೇನೆ , ಬೇಗನೆ ನೀನು ಇದನ್ನು ಪೊದೆಯ ಹಿಂದಕ್ಕೆ ಎಳೆದುಕೊಂಡು ಹೋಗು , ನಾವಿಬ್ಬರು ಅಲ್ಲಿ ಇದನ್ನು ತಿನ್ನೋಣ" ಎಂದಿತು. ಇಂದೆ-ಮುಂದೆ ಯೋಚಿಸದ ಹುಲಿ ತನ್ನ ಬಾಲವನ್ನು ಕೊಟ್ಟು ತಿರುಗಿ ನಿಲ್ಲುತ್ತದೆ. ನರಿಯು ಬಿದ್ದಿದ್ದ ಕುದುರೆಯ ಬಾಲಕ್ಕೆ ಹುಲಿಯ ಬಾಲದ ಜೊತೆಗೆ ಒಂದು ಕಾಲನ್ನು ಕೂಡ ಕಟ್ಟಿ , ತಾನು ಮೊದಲೇ ಹೇಳಿದಂತೆ ಕುದುರೆಗೆ "ಏಳಪ್ಪ  ಕುದರೆ , ಮೇಲೇಳು ,  ಮೇಲೆದ್ದು  ನಿನ್ನ ಮನೆಗೆ ಓಡಿ  ಹೋಗು. ಎಲ್ಲಿಯೂ ನಿಲ್ಲಬೇಡ , ಜೋರಾಗಿ ಓಡು " ಎಂದು ಹೇಳಿತು. ತಕ್ಷಣಕ್ಕೆ ಕುದುರೆಯು ಚಂಗನೆ ಜಿಗಿದು ಕಟ್ಟಿದ್ದ ಹುಲಿಯನ್ನು ಶರವೇಗದಲ್ಲಿ ಜಗ್ಗಿಕೊಂಡು  ಹೋಗತೊಡಗಿತು. ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ತನ್ನ ಉಳುವಿಗಾಗಿ ಕುದುರೆಯು ಶಕ್ತಿ ಮೀರಿ ಓಡಿತು.ಹುಲಿಗೆ ಆ ಗಂಟನ್ನು ಬಿಡಿಸಿಕೊಳ್ಳಲಾಗಲಿಲ್ಲ. ಈ ಎಳೆತದಿಂದ ಬಹುವಾಗಿ ಗಾಯಗೊಂಡ ಹುಲಿಯು ಅರ್ಧ ದಾರಿಯಲ್ಲಿ ಪ್ರಾಣ ಬಿಟ್ಟಿತು.  

         ಕುದುರೆಯು ಹುಲಿಯನ್ನು ಎಳೆದುಕೊಂಡೆ ಬಂದು ರೈತನ ಮನೆ ಮುಂದೆ ಬಂದು ನಿಂತಿತು. ರೈತನಿಗೋ ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು. ಆದರೆ ಹುಲಿಯ ಚರ್ಮ ಸಿಕ್ಕ ಸಂತೋಷದಿಂದ ಕುದುರೆಯನ್ನು ಮತ್ತೆ ಮನೆಯಲ್ಲೇ ಇಟ್ಟುಕೊಂಡನು. 

            ಸ್ನೇಹಿತರೆ ಈ ಕತೆಯನ್ನು ನಾನು ಏಕೆ ಇಲ್ಲಿ ಹೇಳಿದೆ ಅಂದರೆ , ಆ ಕುದುರೆಗೆ ಬಂದ ಸಂಕಷ್ಟದಂತೆಯೇ ನಮಗೂ ಕೂಡ ಜೀವನದಲ್ಲಿ ಸಂಕಷ್ಟ ಬರುವುದು ಖಚಿತ. ಅದರಲ್ಲೂ ಈಗಿನ ಜಾಗತೀಕರಣದ ಪ್ರಭಾವದಲ್ಲಿ , ಖಾಸಗಿ ಕಂಪನಿಗಳು ನಮ್ಮಲ್ಲಿ ಶಕ್ತಿಯಿದ್ದಾಗ ಸರಿಯಾಗಿ ದುಡಿಸಿಕೊಂಡು , ತದನಂತರ unrealistic ಕೆಲಸಗಳನ್ನು ಕೊಟ್ಟು . ಅದನ್ನು ಮುಗಿಸದೆ ಹೋದಾಗ ನಮ್ಮನ್ನು ಕಂಪನಿಗಳಿಂದ ಹೊರದೂಡಲು ಯೋಚಿಸಬಹುದು. ಆಗ ನಾವು ಎದೆ ಗುಂದದೆ , ಬರುವ ಸಂಕಷ್ಟಗಳನ್ನು   ಬುದ್ದಿವಂತಿಕೆಯಿಂದ  ಎದುರಿಸಬೇಕಾಗುತ್ತೆ.  ಮೇಲೆ ಹೇಳಿದ ರೈತನಂತೆ ನಮ್ಮ ಮ್ಯಾನೇಜರ್ಗಳೂ  ಇರಬಹುದು, ಜಾಣ ನರಿಯಂಥಹ ಸ್ನೇಹಿತರು ನಮಗೆ ಕಷ್ಟದಲ್ಲಿ  ಸಿಗಬಹುದು. ಹಾಗಾಗಿ ಸೂಕ್ಷ್ಮಮತಿಗಳಾಗಿ ,ಯುಕ್ತಿಯನ್ನುಪಯೋಗಿಸಿ  ಸಮಸ್ಯಗಳನ್ನೂ ಬಗೆಹರಿಸಿಕೊಳ್ಳಬೇಕು. ಬಿದಿದ್ದ ಕುದುರೆಗೆ ಹೇಗೆ ನರಿಯು ಉತ್ತೇಜಿಸಿ , ಜೀವನದ ಉಳಿವಿಗಾಗಿ ಓಡಿಸುತ್ತೋ ಹಾಗೆ ನಾವು,ಎದೆಗುಂದಿದವರಿಗೆ ಪ್ರೋತ್ಸಾಹ ಕೊಡಬೇಕು. ನಾವೇ ಎದೆಗುಂದಿದ್ದರೆ ಒಳ್ಳೆಯವರ ಸಹಾಯದಿಂದ ಎದ್ದು ಮುಂದೆ ಸಾಗಬೇಕು.   

ನಿಮಗಾಗಿ 
ನಿರಂಜನ್
           

ಸೋಮವಾರ, ಜೂನ್ 10, 2013

ನಮ್ಮ ಬೆಂಗಳೂರು

                             
                                                     ನಮ್ಮ ನಿಜವಾದ ಸ್ವರ್ಗ 

ಬೇಸಗೆ ಸವೆಸಿ ಮಳೆಗಾಲಕ್ಕೆ ಕಾಯುತ್ತಿರುವ ಬೆಂಗಳೂರು ಈಗಾಲೇ ಮಳೆರಾಯನ ಕೃಪೆಗೆ ಪಾತ್ರವಾಗಿದೆ . ಹಾಗೊಮ್ಮೆ ಈಗೊಮ್ಮ ಮಳೆಯೂ ಆರ್ಭಟಿಸಿ ಸುಮ್ಮನಾಗಿದೆ . ಕಳೆದವಾರ ಬಿದ್ದ ಒಳ್ಳೆಯ ಮಳೆ ಬೆಂಗಳೂರನ್ನು ತಣ್ಣಗೆ ಮಾಡಿದ್ದಲ್ಲದೆ, ಜನರಲ್ಲಿ ಒಂದು ರೀತಿಯ ಚೇತನವನ್ನೂ  ಮೂಡಿಸಿದೆ. ಮುಂಬರುವ ಮಳೆಗಾಲದ ಆರಂಭ ಮಾತ್ರ ಚೆನ್ನಾಗಿಯೇ ಆಗಿದೆ ಎಂದು ನಾವೆಲ್ಲರೂ ನಿಟ್ಟುಸಿರು ಕೂಡ ಬಿಟ್ಟಿದ್ದೇವೆ. ನಿಜ ಸ್ನೇಹಿತರೆ, ನಿಜವಾಗಿಯೂ ಇದು ನಮ್ಮೆಲ್ಲರಿಗೂ ಒಂದು ಒಳ್ಳೆಯ ವಿಷಯ. ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದೆಲ್ಲಡೆಯೂ ಈ ಬಾರಿ ವರುಣ ತನ್ನ ಕೃಪೆಯನ್ನು ತೋರಿದ್ದಾನೆ. ಇದಕ್ಕೆ ಪೂರಕವೆಂಬಂತೆ ಸೂರ್ಯ ಮಳೆಗಾಲದ ಮೋಡಗಳಿಗೆ  ಸೋತು ತನ್ನ ಪ್ರಕರತೆಯನ್ನು ತಗ್ಗಿಸಿಕೊಂಡಿದ್ದಾನೆ, ಎಲ್ಲೆಡೆ ಹಸಿರು ಹಸಿರಾದ ವಾತಾವರಣ ಸೃಷ್ಟಿಯಾಗಿದೆ, ತಣ್ಣನೆ ಗಾಳಿ ಬೀಸತೊಡಗಿದೆ, ಖಗ ಸಂಕುಲವು ಮೈಧುಂಬಿ ನಿಂತಿರುವ ಹಸಿರು ಮರಗಳಲ್ಲಿ ವಿಹರಿಸುತ್ತಿವೆ, ಹೂಗಿಡ ಬಳ್ಳಿಗಳು ಕಣ್ಣಿಗೆ ಎಲ್ಲೆಡೆಯೂ ಕಾಣಸಿಗುತ್ತಿವೆ. ಅಬ್ಭಾ ಇವೆಲ್ಲವೂ  ಸೇರಿ ಬೆಂಗಳೂರಿನ ಸೌಂದರ್ಯವನ್ನು ಮತ್ತೊಷ್ಟು  ಚಿಗುರಿಸಿವೆ ಬೇಸಿಗೆಯ ನಂತರ.


  
               ಇಂಥಹ ಬೆಂಗಳೂರನ್ನು ಬಿಟ್ಟು ನಾನು ಮಾತ್ರ ಕೆಲಸದ ನಿಮಿತ್ತ ವಾರದ ಕೆಲವು ದಿನಗಳು  ಚೆನ್ನೈಯಲ್ಲಿ ಕಳೆಯಬೇಕಿದೆ. ಅಲ್ಲೋ ಬರಿ ಬಿಸಿಲು ಮತ್ತು ಬೆವರು. ಚೆನ್ನೈ ಮುಂದೆ ನಮ್ಮ ಬೆಂಗಳೂರು ನನಗೆ ಸ್ವರ್ಗದಂತೆ ಕಾಣುತ್ತಿದೆ . ಇಂಥಹ ನಗರವನ್ನು ಬಿಟ್ಟು ಅನಿವಾರ್ಯ ಕಾರಣಗಳಿಂದ ನಾನು ಅಲ್ಲಿಗೆ ಅಂದರೆ ಚೆನ್ನೈಗೆ ಓಡಾಡಿಕೊಂಡಿದ್ದೇನೆ. ಬೆಂಗಳೊರಿನ ಬಸ್ ನಿಲ್ದಾಣದಲ್ಲಿ ಬಸ್ ಹತ್ತಬೇಕಾದಾಗ , ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ನನಗೆ ಅದೆಷ್ಟು ಬೇಜಾರು ಆಗುತ್ತೆ ಅಂದ್ರೆ, ತವರು ಬಿಟ್ಟು ಹೋಗುವ ಹೆಣ್ಣು ಮಗಳ ದುಃಖಕ್ಕಿಂತಲೂ ನನಗೆ ಸ್ವಲ್ಪ ಜಾಸ್ತಿಯೇ ದುಃಖ ಆಗುತ್ತೆ. ಇಲ್ಲಿರುವ ಸ್ವರ್ಗದಂಥ ವಾತಾವರಣ, ಪ್ರೀತಿ ತುಂಬಿದ ಮನೆ , ಸ್ನೇಹಿತರನ್ನು ಒಂದು ವಾರದಲ್ಲಿ ೩-೪ ದಿನ ಬಿಟ್ಟು ಅಲ್ಲಿರಬೇಕಲ್ಲ ಎಂದು ಮನಸ್ಸಿಗೆ ತುಂಬಾ ಕಷ್ಟ ಆಗುತ್ತೆ. ಆದರೂ ನಾವು ಹೇರಿರುವ ಬಿಸಿಲ್ಗುದುರೆ ಕರೆದೊಯ್ಯುವ ಕಡೆ ನಾವು ಹೋಗಬೇಕಲ್ಲವೇ, ಅದೇ ರೀತಿ ಏನೇನೋ ಆಸೆಗಳ ಬೆನ್ನರಿ ಅಲ್ಲೊಂದು ಕಾಲು ಇಲ್ಲೊಂದು ಕಾಲು ಇಟ್ಟಿದ್ದೇನೆ.


         ಏಕೆ ಇದೆಲ್ಲ ನಾನು ಬರೆಯುತ್ತೇನೆ ಎಂದು ನೀವು ಅಂದುಕೊಳ್ಳಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ನಾವು ಬಹಳ ದಿನದಿಂದಲೂ ಬೆಂಗಳೂರಿನಲ್ಲಿ ಬದುಕುತ್ತಿದ್ದೇವೆ, ನಮ್ಮ ಜೀವನವನ್ನೇ ನಾವು ಇಲ್ಲಿ ಕಂಡುಕೊಂಡಿದ್ದೇವೆ. ಆದರೂ ನಮಗೆ ಬೆಂಗಳೂರಿನ ಬಗ್ಗೆ ಸ್ವಲ್ಪ ಅಸಮಧಾನ , ಬೇಜಾರು . ಸ್ನೇಹಿತರೆ ನಾನು ಹೇಳುವುದೇನೆಂದರೆ ನಮ್ಮ ದೇಶದ ಬೇರೆ ಯಾವುದೇ ಸಿಟಿಗಳಿಗೆ ಹೋಲಿಸಿದರೆ ನಮ್ಮ ಬೆಂಗಳೂರು ಸ್ವರ್ಗವೇ ಸರಿ. ಇಲಿರುವ ನಾವೆಲ್ಲರೂ ಕೂಡ ಸ್ವರ್ಗ ನಿವಾಸಿಗಳೇ. ಬೆಂಗಳೂರು ನಿಜವಾದ ಸ್ವರ್ಗ ಎಂದು ನಿಮಗೆ ಅನ್ನಿಸಬೇಕಾದರೆ , ಅದರ ನಿಜವಾದ ಅನುಭವ ನಮಗೆ ಆಗಲೇ ಬೇಕೆಂದರೆ ನಾವು ಒಂದು ಬಾರಿ ನಮ್ಮ ದೇಶದ ಬೇರೆ ನಗರಗಳಿಗೆ ಹೋಗಿ ಬರಬೇಕು. ಅಲ್ಲಿಯ ವಿಚಿತ್ರವಾದ ವಾತಾವರಣ ನೋಡಿದ ಮೇಲೆಯೇ ನಮ್ಮ ಬೆಂಗಳೂರಿನ ಬೆಲೆ ನಮಗೆ ನಿಜವಾಗಿಯೂ ತಿಳಿಯುತ್ತದೆ. ಬೆಂಗಳೂರಿನಲ್ಲಿ ಜನಸಂದಣಿ ಜಾಸ್ತಿ ಇರುವುದರಿಂದ ಎಲ್ಲೆಡೆ ಜನರು ಕಾಣಬಹುದು, ಸಂಚಾರ ದಟ್ಟನೆ ಜಾಸ್ತಿ ಅಂತಲೂ ನಮಗೆ ಅನ್ನಿಸಬಹುದು, ಇಲ್ಲಿ ಜೀವನ ನಡೆಸುವುದು ತುಂಬಾ ದುಭಾರಿಯೂ ಅಂತಲೂ  ನಮಗೆ ಅನ್ನಿಸಬಹುದು, ಆದರೆ ನಿಜ ಹೇಳುತ್ತೇನೆ ಇವೆಲ್ಲವೂ ಕೇವಲ ಯಕಶ್ಚಿತ್ ಸಮಸ್ಯೆಗಳು ಮಾತ್ರ. ಬೇರೆ ಎಲ್ಲ ನಗರಗಳಿಗೂ ಹೋಲಿಸಿದರೆ ಇವೆಲ್ಲವು ನಮಗೆ ಸಮಸ್ಯೆಗಳು ಆಲ್ಲವೆ ಅಲ್ಲ. ಆದರೂ ಇವನ್ನೇ ನಾವು ದೊಡ್ಡ ದೊಡ್ಡ ಸಮಸ್ಯೆಗಳೆಂದುಕೊಂಡು ಬೆಂಗಳೂರನ್ನು ಮನ ಬಂದಂತೆ ನಿಂದಿಸಿಕೊಲ್ಲುತ್ತೇವೆ ಮತ್ತು ಅನೇಕ ಬಾರಿ ನಿರಾಶೆಯಿಂದ ಹತಾಶರು ಆಗುತ್ತೇವೆ. ಆದರೆ ಇಲ್ಲಿರುವ ಮೂಲಭೂತ ಸೌಕರ್ಯಗಳು , ಸೌಲಭ್ಯಗಳು , ಜನರು , ಎಲ್ಲವು ಅಧ್ಭುತ. ಇಲ್ಲಿರುವುದೆಲ್ಲವೂ ಯೋಗ್ಯವೇ, ಇಲ್ಲಿ ಸಿಗುವಂತಹ ನೀರು, ಹವಾಮಾನ , ಗಾಳಿ , ಬೆಳಕು ಬೇರೆಲ್ಲೂ ಸಿಗುವುದಿಲ್ಲ. ಇಂಥಹ ಸ್ಥಳದಲ್ಲಿ ನಾವಿದ್ದೇವೆ ಎಂದರೆ ನಿಜವಾಗಿಯೂ ನನಗೆ ಹೆಮ್ಮೆ ಎನ್ನಿಸುತ್ತದೆ. 

          ಚೆನ್ನೈಯಿಂದ ಬೆಂಗಳೂರನ್ನು ತಲುಪುತಿದ್ದಂತೆ ಏನೋ ಒಂದು ತರಹದ ಹಿತವಾದ ಅನುಭವವಂತೂ ನನಗೆ ಅಗುತ್ತೆ. ಇಲ್ಲಿ ಕಾಣಸಿಗುವ ಜನರು ಕೂಡ ಒಳ್ಳೆಯವರಂತೆ, ಹೆಚ್ಚು ಸುಂದರವಾಗಿಯೂ ಕಾಣುತ್ತಾರೆ. ಶುಚಿಯಾದ  ಹೋಟೆಲ್ಗಳು, ಹಿತವಾದ ಕನ್ನಡ ಭಾಷೆ, ಸ್ವಚ್ಚವಾದ ನಗರದ ಬೀದಿಗಳು, ಅತ್ಯುತ್ತಮವಾದ ಬಸ್ ಸೌಕರ್ಯ, ಒಳ್ಳೆಯ ಆಟೋಗಳು, ಆರೋಗ್ಯಕರ ಆಹಾರ ಪರಂಪರೆ , ಇವೆಲ್ಲವೂ ಸೇರಿ ಅಬ್ಭಾ ಬೆಂಗಳೂರನ್ನು ನಿಜವಾಗಿಯೂ ಸ್ವರ್ಗವನ್ನೇ ಮಾಡಿವೆ  ಎಂದು ನನಗನಿಸುತ್ತದೆ. 

         ಆದರೂ ಇದೆಲ್ಲ ಬಿಟ್ಟು ಕೆಲ ದಿನಗಳ ಕಾಲ ದೂರ ಇರಬೇಕಲ್ಲಪ್ಪ ಎಂಬ ನೋವು ನನದೆ ಇದ್ದೆ ಇರುತ್ತೆ , ಮತ್ತೆ ಸಂಪೂರ್ಣವಾಗಿ ಇಲ್ಲಿಗೆ  ಬರೊವರೆಗೆ. ಮತ್ತೊಂದು ವಿಷಯವೇನೆಂದರೆ ಚೆನ್ನೈಗೆ ಅಡ್ಡಾಡೊಕೆ ಶುರು ಮಾಡಿದ ನಂತರ ಬೆಂಗಳೂರಿನ ಸಣ್ಣ ಸಣ್ಣ ವಿಷಯಗಳ,  ಜಾಗಗಳ , ಸೌಕರ್ಯಗಳ ಬಗ್ಗೆ , ಜನರು ಬಗ್ಗೆ , ಬೆಂಗಳೂರಿನ ಪ್ರತಿಯೊಂದರ ಬಗ್ಗೆಯೂ ಹೆಮ್ಮೆ , ಗೌರವ ಮತ್ತು ಪ್ರೀತಿ ತುಂಬಿ ಬರುತ್ತಿದ್ದೆ. ಬೆಂಗಳೂರಿನ ಬೆಲೆ ನನಗೆ ಈಗ ಅರ್ಥವಾಗುತ್ತಿದೆ. ಆದರೂ ವಾರದ ೩-೪ ದಿನಗಳು  ಬೆಂಗಳೂರಿನಲ್ಲೇ ಇರುವ ಅವಕಾಶ ನನಗೆ ಸಿಕ್ಕಿರುವುದು ನನಗೆ ನೆಮ್ಮದಿಯ ವಿಷಯವೇ ಸರಿ. ನಾನು ಅಲ್ಲಿದ್ದರು ಕೂಡ  ನನ್ನ ಮನಸ್ಸು ಇಲ್ಲಿಯೇ, ನಮ್ಮ ಬೆಂಗಳೂರಿನಲ್ಲಿಯೇ ಇರುತ್ತೆ. 


ನಿಮಗಾಗಿ
ನಿರಂಜನ್  

ಭಾನುವಾರ, ಮೇ 5, 2013

ಮತ್ತೊಮ್ಮೆ



             ಮತ್ತೊಮ್ಮೆ

ನಸು ನಗುವೆಯಾ ಮತ್ತೊಮ್ಮೆ ನನ್ನ ಪ್ರೀತಿಯ ಒಲವೆ 
ಚಿಮ್ಮಲಿ ಮಗದೊಮ್ಮೆ ನನ್ನ ಪ್ರೀತಿಯ ಚಿಲುಮೆ

ಮೊದಲ ಆ ನೋಟಗಳು ಪುಟಿದೇಳಿಸುತ್ತಿವೆ
ಮಲಗಿದ್ದ ಮೋಹಕ ಆ ಕನಸುಗಳನ್ನು ,

ಮೊದಲ ಆ ಪಿಸು ಮಾತುಗಳು ಕೆಣಕುತಿವೆ
ಮಂಕಾಗಿ ಬಸವಳೆದ ಆ ಭಾವನೆಗಳನ್ನು ,

ಕಂಗಳಲಿ ಕಂಡ, ಕೈ ಹಿಡಿದು ಕಟ್ಟಿದ ಕನಸುಗಳ
ಗೋಪುರ ಕಾಣೆಯಾಗುವ ಮೊದಲೇ

ನಸು ನಗುವೆಯಾ ಮತ್ತೊಮ್ಮೆ ನನ್ನ ಪ್ರೀತಿಯ ಒಲವೆ 
ಚಿಮ್ಮಲಿ ಮಗದೊಮ್ಮೆ ನನ್ನ ಪ್ರೀತಿಯ ಚಿಲುಮೆ

ನಿಮಗಾಗಿ
ನಿರಂಜನ್