ಮಂಗಳವಾರ, ನವೆಂಬರ್ 4, 2014

News channels

                            ದಾರಿ ತಪ್ಪಿಸುತ್ತಿರುವ ಖಾಸಗಿ ಸುದ್ದಿ ವಾಹಿನಿಗಳು  ???

ನಾವೆಲ್ಲ ನಮ್ಮಸುದ್ದಿ ಮಾದ್ಯಮಗಳನ್ನು  ನಮ್ಮ ದೇಶದ ನಾಲ್ಕನೇ ಆಧಾರ ಸ್ತಂಬವೆಂದು ಭಾವಿಸಿದ್ದೇವೆ  ಹಾಗು ಅಕ್ಷರಶಃ ಹಾಗೆಯೇ ಒಪ್ಪಿಕೊಂಡಿದ್ದೇವೆ ಕೂಡ. ನಮ್ಮ ಮಾದ್ಯಮಗಳು ಸತ್ಯದಿಂದ , ಪ್ರಾಮಾಣಿಕತೆಯಿಂದ , ನಿಷ್ಟೂರತೆಯನ್ನೂ  ಕೂಡ ಲೆಕ್ಕಿಸದೆ ಸಮಾಜದ  ಏಳಿಗೆಗಾಗಿ ದುಡಿಯುತ್ತವೆ ,  ಇದರಿಂದ ಸಮಾಜದ ಅರೋಗ್ಯ ಹೆಚ್ಚುತ್ತದೆ , ಹಲವು ಸಮಸ್ಯಗಳ ಮೇಲೆ ಮಾಧ್ಯಮದವರು ಬೆಳಕು ಚೆಲ್ಲಿ , ನಿಷ್ಪಕ್ಷಪಾತ ವರದಿಗಳನ್ನು ನೀಡುತ್ತಾರೆ , ಸರ್ಕಾರಗಳನ್ನು ಎಲ್ಲ ಸಮಯದಲ್ಲಿ ಹೆಚ್ಚರಿಸುತ್ತಾರೆ , ನೊಂದವರ ದ್ವನಿಯಾಗುತ್ತಾರೆ , ಜನರಲ್ಲಿ ಜಾಗೃತಿ ಮೂಡಿಸುತ್ತಾರೆ , ಒಟ್ಟಾರೆ ಸಮಾಜದ  ಏಳಿಗೆಗಾಗಿ , ಅಬಿವೃದ್ದಿಗಾಗಿ ದುಡಿಯುತ್ತಾರೆ  ಎಂದು ನಾವು ಭಾವಿಸಿದ್ದೇವೆ . ಆದರೆ ನಮ್ಮ ಎಲ್ಲಾ  ಸುದ್ದಿ ಮಾಧ್ಯಮಗಳು  ಅದರಲ್ಲೂ , ಖಾಸಗಿ ದೃಶ್ಯ ಮಾದ್ಯಮಗಳು ಈ  ರೀತಿಯಾಗಿ ನಿಜವಾಗಿಯೂ  ಕಾರ್ಯ ನಿರ್ವಹಣೆ ಮಾಡುತ್ತಿವೆಯಾ ?? ನಾವು ಅಂದುಕೊಂಡ ಹಾಗೆ  ತಾರತಮ್ಯವಿಲ್ಲದೆ , ನಿಷ್ಪಕ್ಷಪಾತವಾಗಿ , ಪ್ರಾಮಾಣಿಕವಾಗಿ  ಮಾದ್ಯಮಗಳು  ಸಮಾಜದ ಉದ್ದಾರಕ್ಕಾಗಿ ದುಡಿಯುತ್ತಿವೆಯಾ ?? .

ಇತೀಚಿನ ದಿನಗಳಲ್ಲಿ  ನನಗೆ ಈ ರೀತಿಯ ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ . ನಮ್ಮ  ಸುತ್ತ ನಡೆದ ಅನೇಕ ಘಟನೆಗಳನ್ನು  ನಮ್ಮ ಸುದ್ದಿ ಮಾದ್ಯಮಗಳು ಹೇಗೆ ಜನರಿಗೆ  ಮುಟ್ಟಿಸಿದವು, ಮಾದ್ಯಮದ ಮಂದಿ  ಹೇಗೆ ಆ ವಿಷಯಗಳನ್ನು ಅವಲೋಕಿಸಿದರು,  ಎಷ್ಟರ ಮಟ್ಟಿಗೆ  ಮಾದ್ಯಮಗಳು ಆ ವಿಷಯಗಳ ಮೇಲೆ ಬೆಳಕು ಚೆಲ್ಲಿದವು ಎಂದು  ನೋಡಿದರೆ ನನಗೆ  ಈ ಸುದ್ದಿ ಮಾದ್ಯಮಗಳ ಮೇಲೆಯೇ ಅದರಲ್ಲೂ  ಈ ಖಾಸಗಿ ಒಡೆತನದ ಸುದ್ದಿ  ಮಾದ್ಯಮಗಳು, ಅದರಲ್ಲೂ  ದೃಶ್ಯ ಮಾಧ್ಯಮಗಳ  ಮೇಲೆ ಒಂದು ರೀತಿಯ ಅಪನಂಬಿಕೆ ಮೂಡಿರುವುದು ನಿಜ .

ಎಲ್ಲ ಮಾಧ್ಯಮಗಳು ಹಾಗೆಯೇ ಎಂದು ನಾನು ಹೇಳುವುದಿಲ್ಲ , ಪತ್ರಿಕೋದ್ಯಮ ಇನ್ನು ತನ್ನ ನೈತಿಕತೆಯನ್ನು ಉಳಿಸಿಕೊಂಡಿದೆ.  ಆದರೆ  ಖಾಸಗಿ ಸುದ್ದಿ ವಾಹಿನಿಗಳು ಮಾತ್ರ , ಅದರಲ್ಲೂ ಇತ್ತೀಚಿಗೆ  ಪ್ರಾರಂಭವಾಗಿರುವ , ಅನೇಕ ಟೀವಿ ಚಾನೆಲ್ಲುಗಳು , ತಾರತಮ್ಯ ಮಾಡುವ ವಾಹಿನಿಗಳಾಗಿ ಮಾರ್ಪಟ್ಟಿವೆ ಅನ್ನುವುದು ನನ್ನ ಭಾವನೆ. ಕನ್ನಡದಲ್ಲಿ ಸುಮಾರು  ಏಳೆಂಟು  ಟೀವಿ ನ್ಯೂಸ್ ಚಾನೆಲ್ಲುಗಳಿವೆ .  ಸಮಾಜದಲ್ಲಿ ಯಾವುದೇ ವಿಷಯಗಳು  ಉದ್ಭವಿಸಲಿ , ಹಗರಣವೇ ಆಗಿರಲಿ ಮತ್ಯಾವ ವಿಷಯವೇ ಆಗಿರಲಿ , ಈ ಎಲ್ಲ ವಾಹಿನಿಗಳು ತತ್ಕ್ಷಣಕ್ಕೆ  ಎರೆಡು  ಗುಂಪುಗಳಾಗಿ  ಇಬ್ಬಾಗವಾಗಿ  , ಒಂದು  ಗುಂಪು  ಒಂದು ವಿಷಯದ ಪರವಾಗಿ ಮಾತ್ರ  ಸುದ್ದಿ ಬಿತ್ತರ ಮಾಡಿದರೆ  , ಮತ್ತೊಂದು ಗುಂಪು ಅದೇ ವಿಷಯದ ವಿರುದ್ದವಾಗಿ ನಿಲ್ಲುತ್ತವೆ. ಆ ವಿಷಯದ ಸರಿ-ತಪ್ಪು ಗಳನ್ನೂ ಚರ್ಚಿಸದೆ ತಮ್ಮ ಅನಿಸಿಕೆಗಳನ್ನು ಮಾತ್ರ ಜನರ ಮುಂದಿಡುತ್ತವೆ .  ಈ ರೀತಿಯ ಪಕ್ರಿಯೆಯಲ್ಲಿ  ಪ್ರೇಕ್ಷಕನಿಗೆ ಅಥವಾ ಜನರಿಗೆ ಕೇವಲ ವಿಷಯದ ಒಂದೇ ಮುಖ ತಿಳಿಯುತ್ತದೆ. ಇದು ಸಮಾಜದ ಒಳಿತಿಗೆ ಮಾರಕವಾಗುವುದಿಲ್ಲವೇ ?? .

ನಮಗೆಲ್ಲ ಗೊತ್ತಿರುವಂತೆ ,  ಹಲವು ಸೂಕ್ಷ್ಮ  ವಿಷಯಗಳ ಬಗ್ಗೆ  ಸುದ್ದಿ ವಾಹಿನಿಗಳೇ  ಆಗಲಿ ,  ಸಾಮಾನ್ಯ ಜನರೇ ಆಗಲಿ ಮಾದ್ಯಮದ ವೇದಿಕೆಯಲ್ಲಿ ಕುಳಿತು , ಆ ವಿಷಯಗಳ  ಬಗ್ಗೆ ಚರ್ಚಿಸಬಹುದು ಅಥವಾ ತಮ್ಮ  ವೈಯುಕ್ತಿಕ  ನಿಲುವುಗಳನ್ನು  ವ್ಯಕ್ತ  ಪಡಿಸಬಹುದೇ   ಹೊರತು , ಆ ವಿಷಯದ  ಬಗ್ಗೆ  ತಮ್ಮ ಮೂಗಿನ ನೇರಕ್ಕಷ್ಟೇ  ಚರ್ಚಿಸಿ ತೀರ್ಪನ್ನು ಕೊಡುವುದು ಅದೆಷ್ಟು ಸರಿ ?? . ಆದರೆ ಈಗ  ಆಗುತ್ತಿರುವುದು ಹಾಗೆಯೇ ಅನೇಕ ವಿಷಯಗಳ ಬಗ್ಗೆ ವಾಹಿನಿಗಳ ಮಂದಿಯೇ ತೀರ್ಪನ್ನು ಕೊಟ್ಟು ಬಿಡುತ್ತಾರೆ , ಆ ತೀರ್ಪೇ  ಅಂತಿಮ ತೀರ್ಪು , ಅದೇ ಸರಿ ಕೂಡ ಎಂಬಂತೆಯೂ  ವಾದ ಮಾಡುತ್ತಾರೆ. ಇದು ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು. ಹಲವು  ವಿಷಯಗಳಲ್ಲಿ  ಕೆಲವು ವಾಹಿನಿಗಳು   ತೆಗೆದೆಕೊಳ್ಳುವ ನಿಲುವು , ಚರ್ಚಿಸುವ ವಿಧಾನ , ಚರ್ಚಿಸುವ  ವೈಖರಿ ನೋಡಿದರೆ ,   ಒಬ್ಬ ಪ್ರೇಕ್ಷಕನಾದ  ನನಗೆ ಅಥವಾ ಎಂಥವರಿಗೂ ಒಂದು ಕ್ಷಣ ಆ ವಾಹಿನಿಗಳ ಮೇಲೆಯೇ ಅನುಮಾನ  ಮೂಡುವುದು ಸಹಜ. ಕೆಲವೊಂದು  ವಾಹಿನಿಗಳೊಂತು  ಕೆಲವು ವಿಷಯಗಳ ಬಗ್ಗೆ ಮಾತೆ ಆಡುವುದಿಲ್ಲ , ಕೆಲವು ವಾಹಿನಿಗಳು ಕೇವಲ ಕೆಲವೇ ವಿಷಯಗಳ ಬಗ್ಗೆ ಮಾತ್ರ  ಗಮನ ನೀಡುವುದು. ಇನ್ನೂ ಕೆಲವು   ವಾಹಿನಿಗಳೊಂತು ಕೆಲವು ಆರೋಪಿಗಳ ಪರ ವಕಾಲತ್ತೇ  ವಹಿಸುವರು, ಅವರದ್ದು ತಪ್ಪೇ ಇಲ್ಲ ಎಂಬಂತೆ  ವಾದಿಸಿ , ತಮ್ಮ ತೀರ್ಪನ್ನು ಕೊಟ್ಟೆ ಬಿಡುವರು , ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಪ್ರತಿವಾದಿಯನ್ನು ನಿಂದಿಸುವರ ಜೊತೆಗೆ  ,ಅವರ ನೈತಿಕ ಸ್ಥೈರ್ಯವನ್ನು ಕೂಡ ಕುಗ್ಗಿಸುತ್ತಾರೆ. ಇವೆಲ್ಲವನ್ನೂ ಗಮನಿಸಿದರೆ ನಿಜವಾಗಿಯೂ ಯಾವುದು ಸರಿ ,ಯಾವುದು ತಪ್ಪು ಅನ್ನುವುದೇ ಜನರಿಗೆ ಅರ್ಥವಾಗದಂತೆ ಮಾಡುತ್ತವೆ ನಮ್ಮ ದೃಶ್ಯ ಮಾದ್ಯಮಗಳು.

ಇತೀಚಿನ ಹಗರಣ ಹಾಗು ಬಹು ಚರ್ಚಿತ ವಿಷಯಗಳಾದ  KPSC ಸ್ಕಾಮ್ , ಮೈತ್ರಿ  ಹಾಗು ಸದಾನಂದ ಗೌಡರ ಪುತ್ರನ ವಿಷಯ , ನಿತ್ಯಾನಂದ ಸ್ವಾಮಿ  , ರಾಘವೇಶ್ವರ ಸ್ವಾಮಿಗಳ ವಿಷಯ , ಸೃಷ್ಟಿ ಯ ಗುರುಮೂರ್ತಿ ವಿಷಯ , ರಾಜಕಾರಣಿಗಳ, ನಮ್ಮ ಇನ್ನು ಅನೇಕ ಸ್ವಾಮಿಗಳ ಪರ ವಿರೋದ ಚರ್ಚೆಗಳು , ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿವೆಯೇ ಹೊರತು , ನಿಜ ವಿಷಯ ಮಾತ್ರ ಬಿತ್ತರವಾಗುವುತ್ತಿಲ್ಲ, ಮತ್ತು ಅರ್ಥವೂ ಆಗುತ್ತಿಲ್ಲ .

ಒಂದು  ಖಾಸಗಿ ಟೀವಿ ಚಾನೆಲ್ ಒಬ್ಬ ಪ್ರಭಾವಿ ವ್ಯಕ್ತಿಯ ಹಗರಣವನ್ನು ಬಯಲು ಮಾಡುತ್ತೆ , ಇನ್ನೊದು ಚಾನೆಲ್ ಅದೇ ವ್ಯಕ್ತಿ ಏನು ಮಾಡಿಲ್ಲ ಎಂಬುವಂತೆ ಬಿಂಬಿಸುತ್ತೆ. ಒಬ್ಬ ವ್ಯಕ್ತಿ ಒಂದು ಆಸ್ಪತ್ರೆಯ ಹಗರಣದಲ್ಲಿ   ಜೈಲು ಸೇರುತ್ತಾನೆ , ನೂರಾರು ಜನ ಆತನ ಬಗ್ಗೆ  ಕೇಸು ದಾಖಲಿಸುತ್ತಾರೆ ಆದರು ಆತನ ಆಸ್ಪತ್ರೆಯ ಬಗ್ಗೆ ಮತ್ತೊಂದು ಚಾನೆಲ್ ನಲ್ಲಿ  ನೇರ ಪ್ರಸಾರ ಬರುತ್ತೆ,  ಅದೇನೋ ಭಾರಿ ಒಳ್ಳೆಯ ಆಸ್ಪತ್ರೆ ಎಂದು. ಒಬ್ಬರು ಅದೇ ವ್ಯಕ್ತಿಯನ್ನು ಜೀವ ತೆಗೆಯುವ ದೇವರು ಎಂಬಂತೆ ಬಿಂಬಿಸುತ್ತಾರೆ ಮತ್ತೊಬ್ಬರು ಅವನೊಬ್ಬ ಕಿರಾತಕ ಎಂದು ಪ್ರತಿಪಾದಿಸುತ್ತಾರೆ .

ನಿಜ ಹೇಳಬೇಕೆಂದರೆ  ಜನರಿಗೆ ತಲುಪಿಸಲು ಮಾದ್ಯಮಗಳಿಗೆ  ಅನೇಕ ವಿಷಯಗಳಿವೆ ,  ರಾಜ್ಯದ , ದೇಶದ  ಅಬಿವೃದ್ದಿಯ ಬಗ್ಗೆ , ಸಮಾಜದಲ್ಲಿ ಏನು ನಡೆಯುತ್ತೋ ಅದನ್ನೇ ತಾರತಮ್ಯವಿಲ್ಲದೆ ತೋರಿಸಿದರೆ ಸಾಕು  ಅವರ ಕೆಲಸಕ್ಕೆ ಒಂದು ಸಾರ್ಥಕತೆ ಸಿಗುತ್ತೆ . ಆದರೆ  ಅದನ್ನು ಬಿಟ್ಟು , ಸ್ವಜನ ಪಕ್ಷಪಾತ , ತಮಗೆ ಹಿತವೆನಿಸಿದವರನ್ನು ಮಾತ್ರ ವೈಭವೀಕರಿಸುವುದು , ಮತ್ತೊಬ್ಬರನ್ನು ತೆಗೆಳುವುದು , ತಮಗೆ ಮತ್ತು ತಮ್ಮ ಚಾನೆಲ್ ಗೆ ವೈಯುಕ್ತಿಕ ಲಾಭವಾಗುವ ವಿಷಯಗಳನ್ನು ಮಾತ್ರ ಬಿತ್ತರಿಸುವುದು ,ಆರೋಪ ಹೊತ್ತ ರಾಜಕಾರಣಿಗಳೊಂದಿಗೆ ಚರ್ಚಿಸಿ , ಆರೋಪದ ತೀವ್ರತೆಯನ್ನೇ ಲಘುವಾಗಿ ಪರಿವರ್ತಿಸುವುದು. ಅವರೊಂದಿಗೆ ಸೇರಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರುವುದು ಮಾತ್ರ ಇವರ ಕೆಲಸವಾಗಿವೆ.

ಇವೆಲ್ಲ ಬಿಟ್ಟರೆ , ಜನರಿಗೆ ಸುದ್ದಿ ಮಾಧ್ಯಮದವರು ತೋರಿಸಿವುದು  ಕೆಟ್ಟ  ಕ್ರೈಂ ಸ್ಟೋರಿಗಳು ,  ಹಾಳು ಜ್ಯೋತಿಷ್ಯ , ಹಳೆಯ ಜನ್ಮ ಜನ್ಮಾಂತರದ  ಕತೆಗಳು , ಉಹಾಪೋಹಗಳು , ಹೇಸಿಗೆ ಬರುವ ಚಿತ್ರ ಸುದ್ದಿಗಳು . ಇವೆಲ್ಲದರ ಬದಲಾಗಿ ನಮ್ಮ ಹೆಮ್ಮೆಯ ವಿಜ್ಞಾನಿಗಳ ಬಗ್ಗೆ , ವಿಜ್ಞಾನ ಜಗತ್ತಿನ ಆಗು ಹೋಗುಗಳ ಬಗ್ಗೆ , ಸಾಮಾಜಿಕ ಹೊರಾಟಗಳ ಬಗ್ಗೆ,  ದೇಶದ ಒಳಿತಿಗಾಗಿ ಹೋರಾಡುವ ಹೋರಾಟಗಾರರ ಬಗ್ಗೆ , ಪ್ರೇಕ್ಷರಿಗೆ , ಮಕ್ಕಳಿಗೆ ಸ್ಪೂರ್ತಿ ತುಂಬುವಂಥಹ  ಅನೇಕ ಸಾಧಕರ ಬಗ್ಗೆ   ಕಾರ್ಯಕ್ರಮಗಳನ್ನು ರೂಪಿಸಿ , ಬಿತ್ತರಿಸಿದರೆ , ಸಮಾಜಕ್ಕೆ ಒಳ್ಳೆಯದಾಗುವುದು , ಜೊತೆಗೆ ತಾವು ಮಾಡುವ ಕೆಲಸಕ್ಕೆ ಸಾರ್ಥಕತೆಯು ದೊರೆಯುತ್ತದೆ.

ಪತ್ರಿಕೋದ್ಯಮ ಮಾತ್ರ ತನ್ನ ನೀತಿ - ಸಿದ್ದಾಂಥಗಳಿಗೆ ಇನ್ನು ಬದ್ದವಾಗಿರುವುದು ನಿಜವಾಗಿಯೂ ನಮಗೆ ಹೆಮ್ಮೆ ಮೂಡಿಸುತ್ತದೆ ಜೊತೆಗೆ  ಪತ್ರಿಕೋದ್ಯಮ ತನ್ನ ನಂಬಿಕೆಯನ್ನು ಕಾಪಾಡಿಕೊಂಡಿದೆ. ಎಲ್ಲವು ಅಲ್ಲದಿದ್ದರೂ , ಕೆಲವು ದೃಶ್ಯ ಮಾದ್ಯಮದವರು , ಅದರಲ್ಲೂ ಕೆಲವು  ಖಾಸಗಿ ಸುದ್ದಿ ವಾಹಿನಿಗಳು ಇತೀಚಿನ ದಿನಗಳಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೋ ಇಲ್ಲವೋ , ಅವರೇ ಪರಾಮರ್ಶಿಸಿಕೊಳ್ಳಬೇಕು. ಇಂಥವರ ಮದ್ಯಯು ಅನೇಕ ಒಳ್ಳೆಯ ಸುದ್ದಿ ವಾಹಿನಿಗಳಿವೆ , ಒಳ್ಳೆಯ ಕಾರ್ಯಕ್ರಮಗಳು , ಚರ್ಚೆಗಳು ಅವರಿಂದ ನಡೆಯುತ್ತಿವೆ , ಸಮಸ್ಯೆಗಳ ಬಗ್ಗೆ ಎದ್ದು ಬೀಳುವ ಅವರ ನೀತಿಗೆ ನನ್ನ ಸಹಮತವು ಇದೆ, ಅವರ ಬಗ್ಗೆ ನನಗೆ ಅಪಾರ ಗೌರವವು ಕೂಡ ಇದೆ . ಎಲ್ಲ ಮಾದ್ಯಮಗಳು ಹೀಗೆಯೇ ಪ್ರಾಮಾಣಿಕರಾದರೆ ಅದೆಷ್ಟು ನಮ್ಮ ಏಳಿಗೆ ಆಗುತ್ತೆ ಅಲ್ಲವೇ .... 


ಶನಿವಾರ, ಆಗಸ್ಟ್ 23, 2014

ಅನಂತಮೂರ್ತಿ ....



                                                            ಅನಂತ ಮೌನಿ ....


ಮೂರ್ನಾಲ್ಕು ದಿನಗಳ ಹಿಂದೆ , ಅನಂತಮೂರ್ತಿಯವರ ಭಾರತೀಪುರ ಕತೆಯನ್ನು ನನ್ನ ಹೆಂಡತಿ ಶೋಭಾಳಿಗೆ ವಿವರವಾಗಿ ಹೇಳಿ ಮುಗಿಸಿದ್ದೆ . ಅದೇ ಸಮಯದಲ್ಲಿ ಅನಂತಮೂರ್ತಿಯವರ ಕತೆಗಳ ಬಗ್ಗೆ , ಅವರ ಹೋರಾಟಗಳ ಬಗ್ಗೆ , ಅವರ ಸುತ್ತ ಹುಟ್ಟಿದ್ದ ವಿವಾದಗಳ ಬಗ್ಗೆ ನಾವಿಬ್ಬರು ಗಂಟೆಗಳ ಕಾಲ ಚರ್ಚಿಸಿದ್ವಿ . ಯಾರು ಏನು ಹೇಳಲಿ ಬಿಡಲಿ , ಯಾರು ಅವರನ್ನು ಒಪ್ಪಲಿ ಬಿಡಲಿ , ಅವರ ವಿಚಾರಧಾರೆಗಳು ಮತ್ತು ಯೋಚನೆಗಳು ನಮ್ಮನ್ನು ಪ್ರಭಾವಿಸದೆ ಬಿಡವು. ಅದೇ ರೀತಿಯಾಗಿ ಮೂರ್ತಿಯವರು ನನ್ನನ್ನು ಅನೇಕ ವಿಷಯಗಳಲ್ಲಿ ಪ್ರಭಾವಿಸಿದ್ದಾರೆ ಹಾಗು ನಾನು ಅವರಿಂದ ಸಾಹಿತ್ಯಿಕವಾಗಿ, ವೈಚಾರಿಕವಾಗಿ, ತಾತ್ವಿಕವಾಗಿ ಬಹುವಾಗಿ ಪ್ರೇರೇಪಿತಗೊಂಡಿರುವುದು ನಿಜ . 

 
             ಪ್ರತಿದಿನದಂತೆ ನಾನು  ಮತ್ತು ನನ್ನ ಶೋಭ  ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ , ನಮ್ಮ  ಮನೆಯಲ್ಲಿ ಒಂದು ರೀತಿಯ ಮೌನ ಆವರಿಸಿತ್ತು . ನಮ್ಮ ಅಮ್ಮ ನನಗೆ ಮೂರ್ತಿಯವರ ಸಾವಿನ ಸುದ್ದಿ ಹೇಳಿದರು ,, ಸ್ನೇಹಿತರೆ ನನಗೇನು ಅವರು ಸ್ನೇಹಿತರಲ್ಲ , ಸಂಭಂದಿಯೂ ಅಲ್ಲ , ಆದರೂ  ಆ ಕ್ಷಣದಲ್ಲಿ ನನಗೆ ಭೂಮಿಯೇ ಕುಸಿದಂತಾಯಿತು , ಮೊನ್ನೆ ಮೊನ್ನೆ ಶಿವರುದ್ರಪ್ಪರನ್ನು ಕಳೆದುಕೊಂಡ ನಮಗೆ ಮತ್ತೊಂದು ಆಘಾತ ಇದಾಗಿತ್ತು. ನಿಜವಾಗಿಯೂ ಅವರು ನನ್ನನ್ನು ಅತಿಯಾಗಿ ಆಕ್ರಮಿಸಿದ್ದರು ಅನೇಕ ವೈಚಾರಿಕ ವಿಷಗಳಲ್ಲಿ ಅವರ ನೇರ ಪ್ರಭಾವು ಇದೆ . ನಾನು ಇಷ್ಟಪಡುವ ಅನೇಕ ಲೇಖಕರಲ್ಲಿ ಇವರೂ  ಕೂಡ ಅಗ್ರ ಗಣ್ಯರು. 

                 ಒಬ್ಬ ಲೇಖಕರಾಗಿ ಮೂರ್ತಿಯವರು ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ .  ಸಾಹಿತ್ಯ ಅವರಿಗೆ  ಬರೀ  ಕತೆ ಕಟ್ಟುವುದು , ಭ್ರಮೆ ಸೃಷ್ಟಿಸುವುದು ಹಾಗು ಕೇವಲ ತನ್ನ ಯೋಚನೆಗಳನ್ನು ಇತರರ ಮೇಲೆ ಏರುವುದಷ್ಟೇ ಆಗಿರಲಿಲ್ಲ. ಸಾಹಿತ್ಯ ಮೂರ್ತಿಯವರಿಗೆ ಒಂದು ಬದುಕಾಗಿತ್ತು , ಸಾಹಿತ್ಯ ಅವರ ಹೋರಾಟಗಳಿಗೆ  ವೇದಿಕೆಯಾಗಿತ್ತು, ಪ್ರಸ್ತುತ ಬೆಳವಣಿಗೆಗಳೊಂದಿಗೆ ಸಾಹಿತ್ಯ ಅವರನ್ನು ಸದಾ ಬೆಸೆಯುತ್ತಿತ್ತು. ತಮ್ಮ ನಿಜ ಚಿಂತನೆಗಳನ್ನು, ಸಮಾಜದಲ್ಲಿ ನಡೆಯುವ ಅನ್ಯಾಯ , ಮೂಡನಂಬಿಕೆ , ಗೊಡ್ಡು ಸಂಪ್ರದಾಯಗಳ ಬಗ್ಗೆ ಓದುಗರಲ್ಲಿ ಅರಿವು ಮೂಡಿಸಲು ಅವರು ತಮ್ಮ ಸಾಹಿತ್ಯವನ್ನು ಸರಿಯಾಗಿ, ಸ್ಪುಟವಾಗಿ ಉಪಯೋಗಿಸಿಕೊಂಡರು. ಸಂಸ್ಕಾರ, ಭವ , ಭಾರತೀಪುರ , ಸೂರ್ಯನಕುದುರೆ , ಮೌನಿ , ಆಕಾಶ ಮತ್ತು ಬೆಕ್ಕು , ಅವಸ್ತೆ , ಇವೆಲ್ಲ ನಾನು ಓದಿದ ಅವರ ಕೆಲವು ಪುಸ್ತಕಗಳು , ಇವು ಕೇವಲ ಕತೆಗಳು ಮಾತ್ರ ಆಗಿರಲಿಲ್ಲ. ನಿಜಕ್ಕೂ ಆ ಕೃತಿಗಳು ತತ್ವ , ಹೋರಾಟ , ವಿಡಂಬನೆ, ವಿಚಾರಗಳ ಕಣಜಗಳೆ ಆಗಿದ್ದವು. ಈ ಎಲ್ಲಾ ಕೃತಿಗಳು ನನ್ನ ಮೇಲೆ ಅದೆಷ್ಟು ಪರಿಣಾಮ ಬೀರಿದ್ದವೆಂದರೆ ನನಗೆ ಮೂರ್ತಿಯವರು ಅಂದಿನಿಂದ ಮಾನಸ ಗುರುಗಳೇ ಆಗಿ  ಬಿಟ್ಟರು.

               ಕೇವಲ ಸಾಹಿತ್ಯಕಾರ ಮಾತ್ರ ಆಗಿರದ ಮೂರ್ತಿಯವರು ಒಬ್ಬ ಹೋರಾಟಗಾರ ಕೂಡ ಹೌದು. ಸಾಹಿತ್ಯದಲ್ಲೂ ಹಾಗು ನಿಜ ಜೀವದಲ್ಲೂ ತಮ್ಮನ್ನು ತಮ್ಮದೇ ಆದ ರೀತಿಯಲ್ಲಿ ಅನೇಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಸಿಕ್ಕ ಅವಕಾಶ, ವೇದಿಕೆಗಳನ್ನ ಅವರು ತಮ್ಮ ಹೋರಾಟಗಳಿಗೆ ಸರಿಯಾಗಿಯೇ ಉಪಯೋಗಿಸಿಕೊಂಡರು. ಅರಣ್ಯ, ನದಿ ಒತ್ತುವರಿಗಳು, ಗಣಿ ಹೋರಾಟಗಳು , ಸಮಾಜದಲ್ಲಿನ ಜಾತಿ ಪದ್ದತಿ, ರಾಜಕೀಯ ವ್ಯವಸ್ತೆ  ಹಾಗು ಸಮಾಜವಾದ ಚಳುವಳಿಗಳಲ್ಲೂ ಸಹ ಮೂರ್ತಿಯವರು ಸಕ್ರಿಯಾವಾಗಿ ತೊಡಗಿಸಿಕೊಂಡಿದ್ದರು.

            ಸಾಂಪ್ರದಾಯಿಕ ಸಾಹಿತಿಗಳಂತೆ ಒಂದೇ ಸಿದ್ದಾಂತ , ಒಂದೇ ಯೋಚನೆ , ಒಂದೇ ನಿಲುವುಗಳಿಗೆ ತಮ್ಮನ್ನು ತಾನು ಎಂದೂ ಅಂಟಿಸಿಕೊಳ್ಳದ ಮೂರ್ತಿಯವರು , ಹೊಸ ಚಿಂತನೆಗಳಿಗೆ , ಹೊಸ ಯೋಚನೆಗಳಿಗೆ , ಹೊಸ ವಿಚಾರಗಳಿಗೆ  ಬಹುವಾಗಿ ಸ್ಪಂದಿಸುತ್ತಿದ್ದರು. ಒಳ್ಳೆಯ ವಿಷಯಗಳನ್ನು ಸದಾ ಒಪ್ಪುತ್ತಿದ್ದರು. ಕೆಲವು ಸಾಂಪ್ರದಾಯಿಕ ಸಿದ್ದಾಂತಗಳನ್ನು ಅಷ್ಟೇ ಕಟುವಾಗಿ ಖಂಡಿಸಿ, ವಾದ ವಿವಾದಗಳ ನಂತರ ಅದೇ ವಿಷಯವನ್ನು ಒಪ್ಪುತಿದ್ದರು. ಮನಸ್ಸಿನ್ನಲ್ಲಿರುವುದನ್ನೇ ತಾವು ಸದಾ ಮಾತಾಡುತ್ತಿದ್ದರು.  ಒಳಗೊಂದಾಗಲಿ-ಹೊರಗೊಂದಾಗಲಿ ಎಂದು ಅವರು ಮಾತನಾಡುತ್ತಿರಲಿಲ್ಲ. ಯಾವುದೇ ವಿಷಯಗಳನ್ನು ಚಿಂತನ-ಮಂಥನಗಳಿಲ್ಲದೆ ಒಪ್ಪಿಕೊಳ್ಳುವ ಮನಸ್ಸು ಕೂಡ ಅವರದ್ದಾಗಿಲಿಲ್ಲ .

            ಒಬ್ಬ ದೊಡ್ಡ ಮಾನವತವಾದಿಯಾಗಿ, ಸಮಜಾವಾದಿಯಾಗಿ,  ಬರಹಗಾರನಾಗಿ , ನಮ್ಮವರೇ ಆಗಿ,  ಮೂರ್ತಿಯವರು ನಮ್ಮನ್ನು ಒಂದಲ್ಲ ಒಂದು ರೀತಿಯಾಗಿ ಯೋಚನೆಗಳಿಗೆ ತಳ್ಳಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಅವರು ಪ್ರಭಾವಿಸಿದ್ದಾರೆ ಕೂಡ. ಕನ್ನಡಕ್ಕೆ ಅಪಾರ ಹೆಸರು ತಂದಿದ್ದಾರೆ . ಕನ್ನಡ ಹಾಗು ಸಾಹಿತ್ಯಕ್ಕೆ ದುಡಿದಿದ್ದಾರೆ. ಇಂತಹ ವ್ಯಕ್ತಿ ನಮ್ಮನ್ನು ಅಗಲಿರುವುದು ನಿಜಕ್ಕೂ ಒಂದು ದುಃಖದ ಸಂಗತಿ. ಇಂಥವರು ಇನ್ನುಮುಂದೆ ನಮ್ಮೊಂದಿಗೆ ಇರುವುದಿಲ್ಲ ಎಂಬುದು ಎಷ್ಟು ಕಹಿ ಸತ್ಯವೋ , ಅವರ ಚಿಂತನೆಗಳು, ಆಲೋಚನೆಗಳು ಮಾತ್ರ ಸಮಾಜದಿಂದ ದೂರವಾಗುವುದಿಲ್ಲವೆಂಬುದು ಒಂದು ಸಿಹಿ ಸತ್ಯ .  ದೇವರು ಆ ಅನಂತ ಮೌನಿಯ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ , ನನ್ನ ಮಾನಸು ಗುರುವಿಗೆ ನನ್ನ ಅನಂತ ನಮನಗಳು..... 

ನಿಮಗಾಗಿ 
ನಿರಂಜನ್ 

ಮಂಗಳವಾರ, ಜೂನ್ 10, 2014

ನಾವ್ ನೋಡಿದ ....

 
                                                                 ಒಗ್ಗರಣೆ  .... 
 
ನಾನೇನು ಚಿತ್ರ ವಿಮರ್ಶಕನಲ್ಲ , ಪತ್ರಕರ್ತನೂ ಅಲ್ಲ , ಒಬ್ಬ ಸಾಮಾನ್ಯ ಚಿತ್ರ ರಸಿಕ ,  ಆದರೂ ಸಹ ಈ ದಿನ ನಾ ನೋಡಿದ ಒಂದು  ಅದ್ಭುತ ಕನ್ನಡ  ಚಿತ್ರದ ಬಗ್ಗೆ ನಿಮಗೆ ಹೇಳಲೇ ಬೇಕ್ಕೆನ್ನಿಸುತ್ತಿದೆ.  ಇದೇನಪ್ಪ ಕನ್ನಡದಲ್ಲಿ  ಅದ್ಭುತ ಚಿತ್ರ  ??? ಆಶ್ಚರ್ಯವೇ ?? ತಮಾಷೆಯೇ ?? ಇಲ್ಲ ಇಲ್ಲ . ಇದು ನಿಜ ಸ್ನೇಹಿತರೆ , ಒಂದು ಅದ್ಭುತ ಸಿನೆಮಾ ಬಗ್ಗೆನೆ ನಾ ಹೇಳಬೇಕು... ಅದ್ಭುತ ಚಿತ್ರ ಎಂದಾಕ್ಷಣ ನಿಮಗೆ   ನಾನೇನು  ಡಾ. ರಾಜ್ ಚಿತ್ರದ ಬಗ್ಗೆ ಹೇಳುವುದಿಲ್ಲ, ಬದಲಾಗಿ  ಈಗಷ್ಟೇ  ಪ್ರಕಾಶ್ " ರಾಜ್ " ಹಾಕಿರುವ ಒಗ್ಗರಣೆ ಹಾಗು ಅದರ ಗಮ್ಮತ್ತಿನ ಬಗ್ಗೆ ನಿಮಗೆ ಹೇಳಬೇಕು . 
 
                 ಮುಂಗಾರು ಮಳೆ, ಅದಾದ ನಂತರ ಕೇವಲ ಕೆಲವೇ ಚಿತ್ರಗಳ ತಕ್ಕಮಟ್ಟಿಗೆ ನನಗೆ ರುಚಿಸಿದವಾದರೂ, ಆಮೇಲೆ ಸಾಲು ಸಾಲಾಗಿ ಬಂದ  ಚಲನಚಿತ್ರಗಳೊ , ಹಳಸಿದ ಚಿತ್ರನ್ನಾಗಳು.  ಈ ಸಿನೆಮಾಗಳ ಸಹವಾಸವೇ ಸಾಕು ಸಾಕೆನಿಸಿ ,  ಚಿತ್ರ ಸವಿಯುವ  ನನ್ನ ರುಚಿ ಮೊಗ್ಗುಗಳು ಕೂಡ ಬಾಡಿದ್ದವು ಇತ್ತೀಚಿಗೆ.  ನನ್ನ ಹೆಂಡತಿ ರೀ  " ಕನ್ನಡ ಫಿಲಂ ಗೆ ಹೋಗೋಣ " ಎಂದಾಗಲೆಲ್ಲ , ಹೇಗೋ ಸಮಾಧಾನ ಮಾಡಿ ಮನೆಯಲ್ಲಿ ಡಾ. ರಾಜ್ ಚಿತ್ರ ತೋರಿಸುತ್ತಿದ್ದೆ. ಆದರೆ ಮೊನ್ನೆ ಹೀಗೆ ಜಾಲಹಳ್ಳಿ ಕ್ರಾಸ್ ಬಳಿ  ಹೋಗುವಾಗ ,  ಪ್ರಕಶ್ ರೈ ನಿರ್ದೇಶನದ ಒಗ್ಗರಣೆ ಚಿತ್ರದ  ಒಂದು  ಚಿಕ್ಕ ಪೋಸ್ಟರ್ , ಪಕ್ಕದಲ್ಲೇ ಇದ್ದ  rockline ಮಾಲ್ ಬಳಿ ಕಂಡಿತು. ನೋಡಿದ ತಕ್ಷಣವೇ ಒಗ್ಗರಣೆಯ ಪದಾರ್ಥಗಳಾದ ಪ್ರಕಾಶ್ ರಾಜ್ , ಮಂಡ್ಯ ರಮೇಶ್ , ಅಚ್ಯುತ್ ಕುಮಾರ್ , ಸ್ನೇಹ , ಇಳೆಯರಾಜ, ಜಯಂತ್ ಕಾಯ್ಕಿಣಿ  ಇನ್ನು ಅನೇಕರು  ನನ್ನನ್ನು ಆ ಚಿತ್ರವನ್ನು ನೋಡಲು ಸೆಳೆದವು .
 
 
 
               ತಕ್ಷಣವೇ ಟಿಕೆಟ್ ಕೌಂಟರ್ ಹೋಗಿ " ಎರೆಡು  ಒಗ್ಗರಣೆ ಕೊಡಿ " ಎಂದಾಗ , ನನ್ನ ಹೆಂಡತಿ ಕಿಸಕ್ಕನೆ ನಕ್ಕಳು , ಚಿತ್ರದ ಹೆಸರಿನಲ್ಲಿರುವ ಈ ರೀತಿಯ  ಹೊಸತನವಿದೆ ನೋಡಿ.  ಚಿತ್ರ ಶುರುವಾಯಿತು ,  ನಾನು ನನ್ನ ಹೆಂಡತಿ ಶೋಭಾ ಚಿತ್ರ ನೋಡ ತೊಡಗಿದೆವು. ಅಭ್ಹಾ ಎಂಥಹ ಹಾಡಿನೊಂದಿಗೆ ಚಿತ್ರ ಶುರು ವಾಯಿತು , ಕೈಲಾಶ್ ಕೇರ್ ದ್ವನಿ , ಕಾಯ್ಕಿಣಿ ಸಾಹಿತ್ಯ ,ಸಂಗೀತ ಮಾಂತ್ರಿಕ ಇಳೆಯರಾಜ ರ ಸಂಗೀತ  ಒಟ್ಟಾಗಿ ಬೆರೆತು , ಇಡೀ ನಮ್ಮ ಕರ್ನಾಟಕದ ತಿಂಡಿ ತೀರ್ಥ , ಭಕ್ಷ್ಯಗಳ  ಚಿತ್ರಣವನ್ನೇ ನಮ್ಮ ಮುಂದಿಟ್ಟಾಗ ನನ್ನ ಬಾಯಲ್ಲಿ ನೀರು "ತೊಟ್ " ಅಂತ ಹೊರ ಹೊಮ್ಮಿತ್ತು.  ನಂತರದಲ್ಲಿ  ಮಂಡ್ಯ ರಮೇಶ್ ಹಾಗು ಅಚ್ಯುತ್  ಕುಮಾರರ ಹಿತವಾದ ಹಾಸ್ಯ , ಒಗ್ಗರಣೆಯಲ್ಲಿ ನಯವಾಗಿ ಸಾಸಿವೆ ಉರಿದಂತಿತ್ತು. ಅನಂತರ  ಬರುವ  ಮದ್ಯ ವಯಸ್ಕರರ ಪ್ರೇಮ -ಸಲ್ಲಾಪಗಳು , ಮುಜುಗರಗಳು, ಮೂದಲಿಕೆಗಳು ,  ಪ್ರೀತಿ ಹುಟ್ಟಿದಾಗ  ನಾಯಕ -ನಾಯಕಿಯರಲ್ಲಾಗುವ ಬದಲಾವಣೆಗಳು , ಕಾಲೆಳದಾಟಗಳು , ಆಗಾಗ ಬಂದೋಗುವ ಭಾವನಾತ್ಮಕ ಸನ್ನಿವೇಶಗಳು , ಅಡುಗೆ ತಯಾರಿಸುವ ಹಾಗು ತಿನ್ನುವ ತುಣುಕುಗಳು  ನಿಜವಾಗುಯೂ  ನಮ್ಮನ್ನು ಆಕರ್ಷಿಸಿದವು. 
 
                ಒಟ್ಟಾಗಿ ಇದೊಂದು  ನನಗೆ ಇಷ್ಟವಾದ ಇತ್ತೆಚಿನ ಚಿತ್ರಗಳಲ್ಲಿ ಒಂದು. ಗೀರೀಶ್ ಕಾಸರವಳ್ಳಿ ಮಗಳು ಅನನ್ಯ ಕಾಸರವಳ್ಳಿ  ಕೂಡ ಇದಕ್ಕೆ ಸಹ ನಿರ್ದೇಶನ ಮಾಡಿದ್ದಾರೆ. ಒಳ್ಳೆಯ ಪದಾರ್ಥಗಳೊಂದಿಗೆ ಪ್ರಕಶ್ ರಾಜ್ ಉತ್ತಮ ಚಿತ್ರವನ್ನು ನಮಗೆ ನೀಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ.   ನೀವು ಕೂಡ ಹೋಗಿ ಬನ್ನಿ , ನಿಜವಾಗಿಯೂ ನಿಮಗೆ ಖುಷಿ ಕೊಡುವ ಚಿತ್ರ ಇದು. ನಿಜವಾಗಿಯು ಎಲ್ಲರು ನೋಡ ಬಹುದಾದ ಚಿತ್ರ. ಆಶ್ಲೀಲ ಸಂಭಾಷಣೆಗಳಿಲ್ಲ , ಅನಗತ್ಯ ಹಾಸ್ಯ ಸನ್ನಿವೇಶಗಳಿಲ್ಲ , ಸುಮ್-ಸುಮ್ನೆ ನಿರ್ಮಾಪಕರ ತೆವಲಿಗೆ  ನಮಗೆಲ್ಲ ತೋರಿಸುವ ಐಟಂ ಸಾಂಗ್ ಗಳಿಲ್ಲ , ಮಚ್ಚು - ಲಾಂಗುಗಳೋ ಇಲ್ಲವೇ ಇಲ್ಲ .  ಇವೆಲ್ಲ ಇಲ್ಲದಿರುವುದೇ ಈ ಚಿತ್ರದ ಪ್ಲಸ್ ಪಾಯಿಂಟ್....  
 
 
ನಿಮಗಾಗಿ
ನಿರಂಜನ್  

ಗುರುವಾರ, ಜೂನ್ 5, 2014

ಮಹಾತಾಯಿ

                                                           ಮತ್ತೊಮ್ಮೆ ಕ್ಷಮಿಸು  .....


ನಿಜ  ತಿಳಿದವರು  ಹೇಳುವಂತೆ , ನಿನ್ನ ಮಗನಾಗಿ  ನನಗೆ ತಿಳಿದಂತೆ , ನಿನ್ನದು ತುಂಬಾ ವಿಶಾಲ ಹೃದಯ , ಬಹು ತಾಳ್ಮೆಯ ಒಡಲು ,  ಕೋಟ್ಯಾಂತರ ಜೀವ ಜಂತುಗಳನ್ನು ನಿನ್ನ ಮಡಿಲಿನಲ್ಲಿ ಇಟ್ಟುಕೊಂಡು , ಸದಾ ಕಾಪಾಡುತ್ತಿರುವೆ.  ಹಲವು  ವರ್ಷಗಳಿಂದ  ಎಲ್ಲರನ್ನು ಸಲಹುತ್ತಲೂ ಇರುವೆ   ಮತ್ತು   ಸಹಿಸಿಕೊಳ್ಳುತ್ತಲೂ ಇರುವೆ . ಹೆತ್ತತಾಯಿಯಾದರು ಒಮ್ಮೊಮ್ಮೆ ತಾಳ್ಮೆ ಕಳೆದುಕೊಳ್ಳುವಳು  ಆದರೆ  ನಮ್ಮೆಲ್ಲರ  ಅದೆಷ್ಟೋ  ತಪ್ಪುಗಳನ್ನೆಲ್ಲ ನೀನು  ಸಾವಿರಾರು ವರ್ಷಗಳಿಂದಲೂ ಸಹನಯಿಂದಲೇ ಮನ್ನಿಸಿರುವೆ , ನಮ್ಮೆಲ್ಲರ ಆಸೆ , ದುರಾಸೆ  ಮತ್ತು ಅಜ್ಞಾನಗಳು ಮುಗಿಲು ಮುಟ್ಟಿದರು  ಕೂಡ , ನಮ್ಮನ್ನು ನೀ  ಕೈ ಬಿಡದೆ  , ಎಲ್ಲವನ್ನು  ನಿನ್ನ ಒಡಲಾಳದಲ್ಲೇ   ನುಂಗಿಕೊಂಡು , ಹಾಗೆಯೇ ಮರೆತು , ನಮ್ಮನ್ನು ಸದಾ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿರುವ ನೀನು ನಿಜವಾಗಿಯೂ  ಬರೀ  ತಾಯಿಯಲ್ಲ  "ಮಹಾ ತಾಯಿ".  ನಮ್ಮೆಲರ ಜೀವ ಗಳನ್ನೂ ಸಲಹುತ್ತಿರುವ  ಮಹಾತಾಯಿ  "ಪರಿಸರ"ವೇ  ನಿನಗೆ ನಾನು  ಈ ದಿನ , ನಾ ಮಾಡಿದ ಪ್ರಮಾದಗಳ ವರದಿಯನ್ನು ಒಪ್ಪಿಸಿ ,  ಪ್ರತಿಬಾರಿಯೂ  ಕೇಳುವಂತೆ , ಮತ್ತೊಮ್ಮೆ ಕ್ಷೆಮೆ ಕೇಳಲೇ ಬೇಕಾಗಿದೆ . ನನ್ನ ಎಲ್ಲ ತಪ್ಪುವಪ್ಪುಗಳನ್ನು ಮನ್ನಿಸಲು ಕಳಕಳಿಯಿಂದ ನಿನ್ನ ಕಾಲಿಗೆ ಬಿದ್ದು ಕ್ಷೆಮೆಯಾಚಿಸಬೇಕಾಗಿದೆ.

 
 
                   ನನ್ನನ್ನು ಹೆತ್ತವಳು  ತಾಯಿ  , ಅವಳು  ನನಗೆ ಬರಿ  ಜೀವ ಕೊಟ್ಟಿಹಳು  , ಆದರೆ ಈ ಜೀವವನ್ನು ಸಲಹುವಳು ನೀನು , ಹಾಗಾಗಿ ನೀನು ನನ್ನ "ಮಹಾತಾಯಿ ".  ಈ  ದಿನವನ್ನು ಪ್ರಪಂಚದಲ್ಲಿ ಕೆಲವರು  ನಿನ್ನ ದಿನವನ್ನಾಗಿ ಆಚರಿಸುತಿಹರು  , ನೀ ನಮಗೆ ಮಾಡುವ ಉಪಕಾರಗಳನ್ನು , ನಿನ್ನ ಕುಶಲೋಪರಿಗಳ ಬಗ್ಗೆ ಹಲವರು  ಮಾತಾಡುವರು , ಅದರಲ್ಲಿ ಕೆಲವರು ನಿನ್ನ ಬಗ್ಗೆ ಕಾಳಜಿಯನ್ನೂ  ಕೂಡ ತೋರುವರು . ಆದರೆ ನಾನು ಮಾತ್ರ ನಿನಗಾಗಿ  ಏನನ್ನು  ಮಾಡುಲಿಲ್ಲ.. ನಿನಗೆ ಸರಿಯಾದ ಮಗನಾಗಲಿಲ್ಲ ಎಂಬ ಸಂಕಟ ನನ್ನನ್ನು ತುಂಬುತ್ತಿದೆ.  ನಿನ್ನನ್ನು ಸಂಪೂರ್ಣವಾಗಿ ನಾ ನಿರ್ಲಕ್ಷಿಸಿದೇ ಎನ್ನುವ  ಪಾಪ ಪ್ರಜ್ಞೆ ನನ್ನನ್ನು ಹಿಡಿಹಿಡಿಯಾಗಿ  ಹಿಂಡುತಿದೆ. ಕಳೆದ ಬಾರಿ ನಾ ನಿನಗೆ ಕೊಟ್ಟ ಮಾತುಗಳನ್ನು , ಮಾಡಿದ  ಪ್ರಮಾಣಗಳನ್ನೂ  ಮರೆತು ಅದೆಷ್ಟೋ  ಪ್ರಮಾದಗಳನ್ನು ಮತ್ತೆ ಮಾಡಿ ನಿನಗೆ ನಾ  ಮೋಸ ಮಾಡಿದೆ.  ಈ ದಿನ ನಾನು ನಿನ್ನಲ್ಲಿ ಕ್ಷೆಮೆ ಕೇಳಲೇಬೇಕು ,  
 
 
ಮಹಾತಾಯಿಯೇ  ಮನ್ನಿಸು ... 
  
                 ನೀ ನನ್ನನ್ನು ನಿನ್ನ ಮಗನಂತೆ ಉಣಿಸಿದೆ , ಆದರೆ ನಾನು ನಿನಗೆ ಸಾಕೊಷ್ಟು ಪ್ಲಾಸ್ಟಿಕ್ ಹಾಗು ಕರಗದ ಘನ ತ್ಯಾಜ್ಯವನ್ನು ನಿನ್ನ ಒಡಲಿಗೆ ಸುರಿದೆ.  ನಿನ್ನ ಆರೋಗ್ಯಕ್ಕೆ ಕುತ್ತು ತರುವ  ಅನೇಕ ವಸ್ತುಗಳನ್ನು ನನ್ನ ದೈನಂದಿನ ಕೆಲಸಗಳಿಗೆ ಉಪಯೋಗಿಸಿ ನಿನ್ನ ಆರೋಗ್ಯಕ್ಕೆ ನಾ  ದಕ್ಕೆ ತಂದೆ. ಪ್ಲಾಸ್ಟಿಕ್ ಗೆ ಅನೇಕ  ಪರ್ಯಾಯಗಳಿದ್ದರು ಅವುಗಳ ಸದ್ಬಳಕೆ ಮಾಡದೆ , ನಿನಗೆ  ಮೋಸ ಮಾಡಿದೆ . .. 
 
ಮಹತಾಯಿಯೇ  ಮನ್ನಿಸು .. 
             
               ನೀ ನನಗೆ ಒಳ್ಳೆಯ ಗಾಳಿ ನೀಡಿದೆ , ನಾ ಆ ಗಾಳಿಯನ್ನು ಕುಡಿದು , ನಿನಗೆ  ಬರಿ ಹೊಗೆಕುಡಿಸಿ , ನಿನಗೆ ದ್ರೋಹ ಬಗೆದು , ನಿನ್ನ ಬೇರೆ ಮಕ್ಕಳಿಗೂ ಆ ಹೊಗೆಯಿಂದ ಹಾನಿಯುಂಟು ಮಾಡಿದೆ. ಬೇಕೆಂದಾಗ ನನಗೊಬ್ಬನಿಗೆ ದೊಡ್ಡ ವಾಹನ ಉಪಯೋಗಿಸಿದೆ. ಅವಶ್ಯಕತೆ ಇಲ್ಲದಿದ್ದರೂ ವಾಹನ ಉಪಯೋಗಿಸಿ ,  ನಿನ್ನ ಉಸಿರನ್ನು ಕಲುಷಿತಗೊಳಿಸಿದ ಪಾಪಿಯಾದೆ .  ಪರ್ಯಾಯ ಸಂಚಾರಿ ವ್ಯವಸ್ತೆಗಳಿದ್ದರು  ಉಪಯೋಗಿಸದೆ ನಿನಗೆ ನಾ ಉಸಿರುಗಟ್ಟಿಸಿದೆ ... 
 
ಮಹತಾಯಿಯೇ ಮನ್ನಿಸು 
            
              ನೀ ನನಗೆ , ನನ್ನ ಸುತ್ತಮುತ್ತಲು ಒಳ್ಳೆಯ ವಾತವರಣವನ್ನು ಕರುಣಿಸಿದೆ , ಆದರೆ ನಾ ಬೇಕಾಬಿಟ್ಟಿ , ಕೆಟ್ಟ ವಸ್ತುಗಳನೆಲ್ಲ , ಎಲ್ಲೆಂದರಲ್ಲಿ ಚಲ್ಲಿ .  ಆ  ವಾತಾವರಣದ  ಹಾಳು  ಮಾಡಿದೆ .  ಹಸಿರುಗಿಡಕ್ಕೆ ಒಮ್ಮೆಯೂ ನೀರು ಹಾಕಲಿಲ್ಲ , ಒಂದು ಗಿಡವನ್ನು ನಾ ನೆಡಲಿಲ್ಲ . ಮರಗಿಡ ಕಡಿಯುವಾಗ ನಾ " ಏಕೆ ಕಡಿಯುವಿರಿ ? " ಎಂದು ಪ್ರಶ್ನಿಸಲಿಲ್ಲ .. ನೀರು ಪೋಲು ಮಾಡಿದೆ . ನೀರು ಕಲುಷಿತ ಮಾಡಿದೆ. ಅಗತ್ಯಕ್ಕಿಂತಲೂ ಹೆಚ್ಚು ನೀರು ಉಪಯೋಗಿಸಿ ನಾ ತಪ್ಪು ಮಾಡಿದೆ.
                  
 
ಮಹತಾಯಿಯೇ ಮನ್ನಿಸು 
 
            ನನ್ನ ಮುಂದಿನ ಪೀಳಿಗೆಗೆ ನಿನ್ನ ಬಗ್ಗೆ ಒಂದಿಷ್ಟು ಜಾಗೃತಿ ಮೂಡಿಸುವ  ಕೆಲಸವವನ್ನಾದರು ಸಹ ನಾ ಮಾಡಬಹುದಿತ್ತು . ಆದರೆ ನಾ ಅದನ್ನು ಮರೆತು ನಿನ್ನನ್ನು ನಿರ್ಲಕ್ಷಿಸಿದೆ.  ನೀ ನನಗೆ  ನಿನ್ನ ಮಡಿಲಲ್ಲೇ ಅನೇಕ ಪಾಠಗಳನ್ನು ಹೇಳಿಕೊಟ್ಟೆ . ನಾನು  ಅವುಗಳನ್ನು ಕಲಿತೆನೇ  ಹೊರತು , ಮುಂದಿನವರಿಗೆ ತಿಳಿಹೇಳಲಿಲ್ಲ, ನಿನ್ನ ಬಗ್ಗೆ ಜಾಗೃತಿ ಮೂಡಿಸಲಿಲ್ಲ , ನಿನ್ನನ್ನು ನನ್ನವಳೆಂದು ಭಾವಿಸಲಿಲ್ಲ. ನಾನು ನಿನಗೆ ಮಾಡಿದ ದೊಡ್ಡ ಮೊಸವಿದು ಮಹಾತಾಯಿ.      
 
              
             ನನಗೆ ಗೊತ್ತು , ಇಷ್ಟೆಲ್ಲಾ ಮೋಸಗಳನ್ನು ನಾ ನಿನಗೆ ಮಾಡಿದರು ಸಹ ನಿ ನಿನ್ನ ಶಕ್ತಿ ಮೀರಿ ನನ್ನನು ಪೋಷಿಸುವೆ . ನನಗಿಂದು ನಾಚಿಕೆ ಯಾಗುತಿದೆ ಮಹಾತಾಯಿ . ನಿನ್ನಿಂದ ಬರಿ ಪ್ರಯೋಜನ ಪಡೆಯುವ ನಾನು ನಿನಗಾಗಿ ಏನನ್ನು  ಮಾಡಲಿಲ್ಲವಲ್ಲವೆಂದು . ಇದೊಮ್ಮೆ  ಮಾತ್ರ ನನ್ನನು ಕ್ಷಮಿಸು , ನನಗೆ ನನ್ನ ತಪ್ಪಿನ ಹರಿವಾಗಿದೆ , ಸಾದ್ಯವಾದೊಷ್ಟು ಒಳ್ಳೆಯ ಕೆಲಸಗಳನ್ನು ಇನ್ನು ಮುಂದೆಯಾದರೂ ಮಾಡುತ್ತೇನೆ ,ತಪ್ಪುಗಳನ್ನು  ಆದೊಷ್ಟು  ಕಡಿಮೆ ಮಾಡುತ್ತೇನೆ .  ನಿನಗೆ ಒಳ್ಳೆಯ ಮಗನಾಗಿ ಇನ್ನುಮುಂದೆಯಾದರು ನಾನು ಇರಲು ಬಯಸುತ್ತೇನೆ .  
 
ನಿಮಗಾಗಿ 
ನಿರಂಜನ್  

ಶನಿವಾರ, ಏಪ್ರಿಲ್ 26, 2014

ಅವಳ (ಸಂ)ದರ್ಶನ ...


                                                                  ಅವಳ (ಸಂ)ದರ್ಶನ  ...
                                                    
ಸಾಂಪ್ರದಾಯದಂತೆ  ಮೊದಲ ಸುತ್ತಿನ ಬೇಟಿ ಆಗಿತ್ತು , ಆಮೇಲೆ ಬೆಂಗಳೂರಿನಲ್ಲಿ ನಮ್ಮದೇ ಶೈಲಿಯಲ್ಲಿ ನಾವು ಮತ್ತೊಮ್ಮೆ ಬೇಟಿಯಾಗಿ  ಪರಸ್ಪರ ಮಾತಾನಾಡಿಕೊಂಡಿದ್ದೆವು. ಪರಸ್ಪರ  ಅರಿಯಲು ಸಾಕೊಷ್ಟು ಸಮಯವನ್ನು ನಮ್ಮವರು ಕೊಡದೆ ಹೋದರು , ನಾವು ಸಮಯ ಮಾಡಿಕೊಂಡು ಮಾತಾಡಿ , ನಮ್ಮ ಮುಂದಿನ ಭವಿಷ್ಯದ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿದ್ದೆವು. ಇದೆಲ್ಲದರ ಬಳಿಕ  ನಾವೆಲ್ಲರೂ  ಅವಳ ಊರಿಗೆ  ಮೊಗದೊಮ್ಮೆ ಹೋಗಿ, ನಮ್ಮ ಕುಟುಂಬದ ಎಲ್ಲರೂ  ಅವಳನ್ನು ಇನ್ನೊಮ್ಮೆ ಸರಿಯಾಗಿ ನೋಡಿ, ಅವಳೊಂದಿಗೆ  ಸಾಕೊಷ್ಟು ಮಾತನಾಡಿ , ಆಮೇಲೆ ನಮ್ಮ ಒಪ್ಪಿಗೆಯನ್ನು ಅವರಿಗೆ ತಿಳಿಸಲು ಮುಂದಾಗಿದ್ದರು . ನಾನು ಕೂಡ ಮತ್ತೆ ಹೊಸ ಹುರುಪಿನಲ್ಲಿ ಅವಳೂರಿಗೆ ಹೋಗಲು ಅಣಿಯಾದೆನು  .   
 
 
                 ಬಾಲ್ಯದ ಗೆಳೆಯನೊಬ್ಬ ವಿದೇಶದಿಂದ ಬಂದಿದ್ದ , ಅವನು ಮತ್ತು  ಅವನ ಪತ್ನಿಯೂ  ಕೂಡ ನಮ್ಮನ್ನು ಸೇರಿದರು , ಅವಳ ಊರಿಗೆ ಪ್ರಯಾಣವನ್ನು ನಮ್ಮ ಊರಾದ ದಾವಣಗೆರೆಯಿಂದಲೇ ನಾವು ಶುರುಮಾಡಿದೆವು. ಆ ರಸ್ತೆಯನ್ನು ನೋಡಿ ನಾವು ಹೇಳಿದ ಸಮಯಕ್ಕಿಂತಲೂ   ಬಹಳ ತಡವಾಗಿಯೇ ಅವಳೂರು ಸೇರುವುದು ಖಚಿತವಾಯಿತು. ರಸ್ತೆ ಸರಿ ಇಲ್ಲದಿದ್ದರೂ , ಸುತ್ತಲಿನ ಪ್ರಕೃತಿ  ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು.. ನನ್ನೂರಿಗೆ ಮತ್ತು ಅವಳೂರಿಗೆ ಅಂತರ ಕಡಿಮೆಯಿದ್ದರೂ  ಸಹ ರಸ್ತೆಯ ಅದೊಗತಿಯಿಂದ  ನಮಗೆ ಪ್ರಯಾಣ ಆಯಾಸವಾಗಿತ್ತು. ಅಂತು-ಇಂತು ಮದ್ಯಾನದೋಷ್ಟತ್ತಿಗೆ  ನಾವು ಅವಳೂರು  ತಲುಪಿದೆವು . ಅದೇ ಊರಿನಲ್ಲಿ ಇರುವ ನಮ್ಮ ಸಂಬಂದಿಕರ ಮನೆಯಲ್ಲಿ ಸ್ವಲ್ಪ ಸುಧಾರಿಸಿಕೊಂಡು , ದಣಿದ ದೇಹಗಳನ್ನು ತಣಿಸಿಕೊಂಡು , ಬೆಳಗಿನ ಪ್ರಯಾಸದ ಪಯಣವನ್ನು ಆ ಕ್ಷಣಕ್ಕೆ ಮರೆತು , ನನ್ನ  ಜೀವನ ಪಯಣಕ್ಕೆ ಅವಳನ್ನು ಸಹ ಚಾರಿಣಿಯನ್ನಾಗಿಸಿಕೊಳ್ಳುವ ತವಕದಲ್ಲೇ ಅವಳ ಮನೆಯ ಕಡೆ ಹೊರೆಟೆವು. 
 
 
                 
                     ಅವಳಪ್ಪ  ನಮ್ಮನ್ನು ನಗುಮೊಗದಲ್ಲೇ ಸ್ವಾಗತಿಸಿದರು ಅವಳ ಮನೆ ಬಾಗಿಲ್ಲಲ್ಲಿ , ಅವಳಕ್ಕ ಲವಲವಿಕೆಯಿಂದ  ನಮಗೆ ತಣ್ಣನೆಯ ಜ್ಯೂಸು ಕೊಟ್ಟರು.  ಮನೆಯೆಲ್ಲ ಸ್ವಚ್ಚವಾಗಿ , ಸಡಗರದ ವಾತಾವರಣದಿಂದ ಕೂಡಿತ್ತು. ಅವಳ ಚಿಕ್ಕಪ್ಪ , ಚಿಕ್ಕಮ್ಮ , ಅಪ್ಪ , ಅಮ್ಮ , ಅವಳಕ್ಕನ ಚಿಕ್ಕ ಮಗು ನಮ್ಮನ್ನು ಖುಷಿಯಿಂದ ಮಾತನಾಡಿಸಿದರು. ನಮ್ಮ ಹಿರಿಯರೊಂದಿಗೆ ಅವಳಪ್ಪ ಮತ್ತು ಚಿಕ್ಕಪ್ಪ ನಮ್ಮ ಕ್ಷೇಮ ಸಮಾಚಾರ , ಸಂಬಂದಗಳು , ಇನ್ನಿತರ  ಮಾತುಗಳನ್ನು ಆಡತೊಡಗಿದರು . ನನಗೆ ಅಷ್ಟರಲ್ಲಿ ಅವಳನ್ನು ನೋಡುವ ಕುತುಹಲ ಕೆರಳಿ , ಕಣ್ಣುಗಳು   ಕೋಣೆಗಳ ಕಡೆಗೆ ಕದ್ದು-ಮುಚ್ಚಿ ನೋಡ-ತೊಡಗಿದವು. ಇರುವ ೪ ಕೋಣೆಗಳು , ಒಂದು ಅವರಪ್ಪನ ಆಫೀಸ್ ಆಗಿ ಮಾರ್ಪಟ್ಟಿತ್ತು , ಮತ್ತೊಂದು ಅವಳಕ್ಕನ ಮಗುವಿಗೆ ಮೀಸಲಾಗಿತ್ತು. ಇನ್ನೊಂದು ಖಾಲಿ-ಖಾಲಿ ಕಾಣುತಿತ್ತು, ಮತ್ತೊಂದು ಮಾತ್ರ ಸದ್ದಿಲ್ಲದೇ , ಕದ ಮುಚ್ಚಿದ ಸ್ಥಿಯಲ್ಲಿ ಕಂಡಿತು.  ಅವಳು ಆ ಕೋಣೆಯಲ್ಲೇ ಇರಬಹುದೆಂದು ಊಹಿಸಿತು ನನ್ನ ಮನಸ್ಸು. ಈಗಿನ ಕಾಲದಲ್ಲಿ ಯಾವ ಹುಡುಗಿ ಇಂಥಹ ಸಮಯದಲ್ಲಿ ಅಮ್ಮನಿಗೆ ಸಹಯಾಮಾಡಲು ಅಡುಗೆ ಮನೆಯಲ್ಲಿ ಇರುವಳು ??. ಪಾಪ ಅವರ ಸೀರೆ , ಮೇಕಪ್ ಹಾಳಾಗೋದಿಲ್ವೆ !!! . ಇವೆಲ್ಲ ಕಾರಣಗಳಿಂದ  ಅವಳು ಅಲ್ಲೇ, ಅದೇ ಕೋಣೆಯಲ್ಲೇ  ಇರುವಳೆಂದು ನನಗೆ ಖಾತ್ರಿಯೂ ಆಯಿತು. ಅಷ್ಟೊತ್ತಿಗೆ ಸುಮಾರು ಸಮಯ ಕಳೆದಿತ್ತು . ಅವಳನ್ನು ನೋಡ ಬಂದ  ನಮ್ಮ ಮನೆಯವರೆಲ್ಲ ಮಾತಿಗಿಳಿದು , ನಾವು ಬಂದ  ಕೆಲಸವನ್ನೇ ಮರೆತಿರುವರು ಎಂದು ನನಗೆ ಅನ್ನಿಸುತಿತ್ತು. ನನಗೋ ಎಷ್ಟೊತ್ತಿಗೆ ಅವಳನ್ನು ನೋಡುತ್ತೇನೋ  ಅನ್ನುವ ಬಯಕೆಯಾದರೆ , ದೊಡ್ಡವರೆಲ್ಲ ತಮ್ಮ ತಮ್ಮ ಮಾತುಗಳಲ್ಲೇ ತೊಡಗಿದ್ದರು . ಒಬ್ಬರಿಗೂ ಹುಡುಗಿಯ ನೋಡುವ ಹಾತುರವಿರಲಿಲ್ಲ . 
 
                     ನನಗೆ ಅವಳನ್ನು ನೋಡುವ ಆ ಹಂಬಲ , ಕಾಯುವ ನನ್ನ ತಾಳ್ಮೆಯನ್ನು ಸೋಲಿಸತೊಡಗಿತ್ತು , ಆದರೂ  ನನ್ನ ಕೈಯಲ್ಲಿ ಏನೂ  ಇರಲಿಲ್ಲ . ಅಷ್ಟರಲ್ಲಿ ಅವಳಮ್ಮ ಈಗ " ತಿಂಡಿ ತಿನ್ನಿ ಆಮೇಲೆ ನೀವು ಎಷ್ಟಾದರೂ ಮಾತನಾಡಬಹುದು" ಎಂದರು , ನನಗಾಗ ಎಲ್ಲಿಲ್ಲದ ಸಂತಸವಾಯಿತು , " ಅಬ್ಬಾ ಈಗಲಾದರೂ ಅವಳು ಬರುತ್ತಾಳೆ  ತಿಂಡಿ ತಟ್ಟೆಯ ಇಡಿದು"  ಎಂದು   ಮನಸ್ಸಿನಲೇ ಖುಶಿಯನ್ನು ಅನುಭವಿಸುತ್ತ ನೋಡಿದರೆ,  ಅವಳಪ್ಪ ಮತ್ತೆ ಚಿಕ್ಕಪ್ಪ ತಿಂಡಿ ತರೋದ ?  ... ಇದೇನು ಅವಳಿನ್ನು ಹೊರಗೆ ಬರಲೇ ಇಲ್ಲವಲ್ಲವೆಂದು  ಆ ಕ್ಷಣಕ್ಕೆ ಬೇಸರ ಆಯಿತು . ತಿಂಡಿ ತಿನ್ನುತ್ತ ಮತ್ತೆ ಬರೀ ಅದೇ ಮಾತುಗಳಾದವು , ಅವಳದು ಮಾತ್ರ  ಸದ್ದಿಲ್ಲ. ಯಾರು ಕೂಡ ಅವಳ ಬಗ್ಗೆ  ಮಾತಾಡುತ್ತಿಲ್ಲ , ಅವಳನ್ನು ಕರೆಯುತ್ತಲು ಇಲ್ಲ. ಚೆನ್ನಾಗಿ ತಿಂಡಿ ಮಾತ್ರ ತಿನ್ನುತ್ತಿದ್ದಾರೆ ..  ನನಗೋ ಆತುರ ಅತೀಯಾಗಿ , ದೊಡ್ಡವರ ಬರೀ ಮಾತುಗಳಿಂದ ಬೇಸರವೂ  ಬರತೊಡಗಿತ್ತು . ಒಂದರ್ದ ಗಂಟೆಯಲ್ಲಿ  ತಿಂಡಿ  ತಿನ್ನುವ ಕಾರ್ಯಕ್ರಮವೂ  ಆಯಿತು ಆದರೆ ಅವಳದು ಮಾತ್ರ ಇನ್ನೂ  ಸದ್ದಿಲ್ಲ. ನನಗೆ ಅವಳು ಬೆಂಗಳೂರಿನಿಂದ ನಿಜವಾಗಿಯೂ ಬಂದಿಹಳೋ ಅಥವಾ ಇಲ್ಲವೋ ಎನ್ನುವ ಅನುಮಾನವೂ ಹುಟ್ಟಿತು.
 
                    ಅವಸರದಲ್ಲಿ ಸ್ವಲ್ಪ ತಿಂಡಿ ತಿಂದು , ನಾನು  ನಮ್ಮಣನ ಮಗಳನ್ನು ಎತ್ತಿಕೊಂಡು ಸ್ವಲ್ಪ ಹೊರಗೆ ಹೋದೆ.  ಗಾಳಿ ಚೆನ್ನಾಗಿದ್ದರಿಂದ ವಾತಾವರಣ ಹಿತವೆನಿಸಿತು  , ಸ್ವಲ್ಪ ತಣ್ಣಗಾಗಿ , ನಮ್ಮಣ್ಣನನ್ನು ಕೂಗಿ ಹೊರ ಕರೆದು , " ನಾವು ಬಂದಿರುವುದು ಹುಡುಗಿಯ ನೋಡೋಕಾ ಅಥವಾ ಬರೀ ಮಾತಾಡಿ , ತಿಂಡಿ ತಿಂದು ಹೋಗೋಕಾ ?? ,, ಹುಡುಗಿಯ ಸುದ್ದಿನೇ ಇಲ್ಲ ಅಲ್ಲೋ ? .. ಯಾರು ಹುಡುಗಿಯ ಸುದ್ದಿಯೇ ತಗಿತಿಲ್ಲ , ಒಂದು ಸಾರಿ ಹೊರಗಡೆ ಕರೆಸಿ ತೋರುಸ್ರೋ " ಎಂದು ಮನದ ಸಂಕಟವನ್ನು ಬಿಚ್ಚಿಟ್ಟೆನು . ನನ್ನ ಕುತೂಹಲ ಸಂಕಟಗಳು ಅವನಿಗೆ ಅರ್ಥವಾದರೂ ಕೂಡ  ನಮ್ಮಣ್ಣನ ಕೈಯಲ್ಲೂ ಏನು ಮಾಡಲು ಆಗುತ್ತಿರಲಿಲ್ಲ . ಅವರಾಡುವ ಮಾತು ಕೇಳುವುದಷ್ಟೇ ಆಗಿತ್ತು  ಆ ದಿನ ನಮಗೆ  . ಅಷ್ಟರಲ್ಲಿ ನನಗೆ ಈ  ದಿನ ಅವಳನ್ನು ನೋಡುತ್ತೇನೆ ಎನ್ನುವ ಆಸೆಯೂ ಕಮರಿ ಹೋಯಿತು , ಅವರು ನನಗವಳನ್ನು ತೋರಿಸುತ್ತಾರೆನ್ನುವ ಆಸೆಯು  ಸರಿದಿತ್ತು , ಹಾಗೆಯೇ ನಮ್ಮಣ್ಣ ಮಗಳನ್ನು ಆಟ ಆಡಿಸಿಕೊಳ್ಳುತ್ತ ತಣ್ಣನೆ ಗಾಳಿಯಲ್ಲಿ ವಿಹರಿಸತೊಡಗಿದೆ..  ಇದಾದ ಒಂದೈದು ನಿಮಿಷದಲ್ಲಿ ಒಳಗಿನಿಂದ ನಮ್ಮಮ್ಮ ನನ್ನನ್ನು ಕೂಗಿ  ಕರೆದ ಹಾಗಾಯಿತು , ಹೋಗ್ಲೋ ಬೇಡ್ವೋ ಅಂತ ಒಂದೊಂದೇ ಹೆಜ್ಜೆ ಇಟ್ಟು ಒಳನೆಡೆದೆ , ಎಲ್ಲರ ಕೈಯಲ್ಲೂ ಕಾಫಿ ಲೋಟಗಳಿದ್ದವು. ಅಷ್ಟರಲ್ಲಿ ಅವಳಮ್ಮ "ಅವರಿಗೂ ಕಾಫೀ ಕೊಡಮ್ಮ "   ಎಂದಾಗ , ಪ್ರತ್ಯಕ್ಷಳಾದಳು ಅವಳು. ಕೈಯಲ್ಲಿ ಕಾಫೀ , ತಿಳಿ ನೀಲಿ ಬಣ್ಣದ ಸೀರೆಯುಟ್ಟಿದ್ದಳು , ನಾಚಿಕೆಯಲ್ಲೇ ನನ್ನ ಕಡೆ ಬಂದು , ಕಾಫೀ ಕೊಟ್ಟಳು. ಮುಗುಳುನಗೆಯನ್ನೂ ಕೂಡ ಬೀರಿದಳು. ಆ ಕ್ಷಣಮಾತ್ರದಲ್ಲೇ ಅವಳನ್ನು ನನ್ನ ಕಣ್ಗಳಲ್ಲಿ ಸೆರೆ ಇಡಿದುಕೊಂಡೆನು .. ಮನಸ್ಸಿಗೆ ಇಷ್ಟು ಹೊತ್ತು  ಕಾದದ್ದು  ಕೂಡ ಸಾರ್ಥಕವೆನಿಸಿತು .. ಅಗಾದವಾಗಿ ಆದ  ಸಂತೋಷವನ್ನು  ಆ ಕ್ಷಣಕ್ಕೆ ಸುಧಾರಿಸಿಕೊಂಡು  ಮತ್ತೊಮ್ಮೆ ಆ ಕಡೆಗೆ ತಿರುಗಿ ನೋಡುವೊಷ್ಟರಲ್ಲಿ  ಅವಳು ಮತ್ತೆ  ಆ  ಜಾಗದಲ್ಲಿ  ಇರಲಿಲ್ಲ, ಮತ್ತೆ ಕಾಣಿಯಾಗಿದ್ದಳು . ಅವಳನ್ನು ನಾನು ಮಾತನಾಡಿಸುವ ಹಂಬಲಕ್ಕೆ  ಇನ್ನೊಮೆ  ನೆಲಕಚ್ಚಿತ್ತು.
 
                      ನೆಲಕಚ್ಚಿದ ಆಸೆಗೆ ಮಣ್ಣೆಳೆದು ,  ಮನಸ್ಸಿನಲೇ ಕುಹಕ ನಗೆ ಬೀರಿಕೊಂಡು "ಒಂದು ವಾರ ಕಾದು , ಅಷ್ಟು ದೂರದಿಂದ ಬಂದು , ಏನೆಲ್ಲಾ ಅಂದುಕೊಂಡಿದ್ದ  ನನಗೆ ಕೇವಲ ಕೆಲವೇ ಕೆಲವು  ಸೆಕೆಂಡುಗಳ ಕಾಲ ಅವಳನ್ನು ತೋರಿಸಿ ಬಚ್ಚಿಟ್ಟರಲ್ಲ" ಎಂದು  ಕೋಪವು ಮತ್ತೆ ಒತ್ತರಿಸಿ  ಬಂತು, ಆದರೆ ಬಂದ ಕೋಪವನ್ನು  ತೋರಿಸಿಕೊಳ್ಳುವ ಸಂದರ್ಭವೂ  ಅದಲ್ಲವೆಂದು  ನನ್ನನ್ನು ನಾನೇ ಸಮಾಧಾನವಾಗಿಸಿಕೊಂಡೆನು . ಆದರೂ  ನಾನು  ಒಂದು ಸಾರಿ ನಮ್ಮ ಅಮ್ಮ ಮತ್ತು ಅಣ್ಣಂದಿರ ಮುಖಗಳನ್ನು ನನಗಾದ  ಸಂಕಟದ ತೀವ್ರತೆಯಲ್ಲೇ ಗುರಾಯಿಸಿದೆ ಅಥವಾ ಕೆಕ್ಕರಿಸಿ ನೋಡಿದೆ. ಒಂದೆರೆಡು ಗಂಟೆಗಳ ನಂತರ ನನ್ನ ಕಷ್ಟ ಅವರಿಗೆ  ಅರಿವಾಯಿತು. ಆಗ ನಮ್ಮ ಅಮ್ಮನೇ " ಇನ್ನೋದ್ನು ಸಾರಿ ಅವಳೊಡನೆ  ಮಾತಾಡ್ತೀಯೇನೋ ?? " ಎಂದು ಕೇಳಿದರು. ನನಗೆ  ಏನು ಹೇಳಬೇಕೋ ತಿಳಿಯಲಿಲ್ಲ , ಅವಳೊಂದಿಗೆ ಮಾತಾಡ್ತೀನಿ  ಅನ್ನೋಕೆ ಸಂಕೋಚ , ಮಾತಾಡೋಲ್ಲ  ಅನ್ನೋಕೆ  ಸಂಕಟ , ತಕ್ಷಣಕ್ಕೆ  ಹೊಳೆದ  ಯೋಚನೆಯಂತೆ  " ನಾನು ಮಾತಾಡೋದು ಏನು ಇಲ್ಲ , ನೀವೇ ಕರೆದು ಏನಾದರು ಮಾತಾಡಿ "ಎಂದೆನು . ಆಗ  ನಮ್ಮ ಅಮ್ಮ ಅವಳನ್ನು ಕರೆದು ಮಾತಾಡಿದರು , ನನ್ನೆದೆರು ಕೂರಿಸಿದರು , ನನ್ನದು ಮಾತಿಲ್ಲ ಕತೆಯಿಲ್ಲ , ಆಗಾಗ ಅವಳನ್ನು ದಿಟ್ಟಿಸುವುದು ,  ಅವಳನ್ನು ನೋಡಿ ನಗುವುದಷ್ಟೇ ಆಗಿತ್ತು ,  ಅವಳೂ ಕೂಡ ಆಗೊಮ್ಮೆ ಈಗೊಮ್ಮೆ  ನನ್ನ ಕಡೆ ಕಣ್ಣಾಡಿಸಿ ನಗುತ್ತಿದ್ದಳು. ಅಂತು ಇಂತು  ಒಂದರ್ದಗಂಟೆ ಕಾಲ ಅವಳ ಮಾತುಗಳನ್ನು  ಕೇಳಿ , ಕೋಪವೆಲ್ಲ ಹಿಂಗಿಹೋಗಿ  ,   ನಾನು ಮಾತಿಗಿಳಿಯುವ ಮುನ್ನವೇ , ನಮ್ಮ ಚಿಕ್ಕಪ್ಪ  " ಸರಿ  ನಮಗಿನ್ನು ಹೊತ್ತಾಯಿತು   , ನಾವಿನ್ನು ಹೊರಡುತ್ತೇವೆ , ನಮ್ಮನ್ನು ಬೀಳ್ಕೊಡಿ " ಎಂದಾಗ  , ಅವಳಿಗೂ  ನನ್ನ ಸಂಕಟ ಅರ್ಥವಾಗಿ,  ಚುಡಾಯಿಸಿವಂತೆ ಕಿರುನಗೆ ಬೀರಿ , ಕೂತಿದ್ದ ಜಾಗದಿಂದ ಮೇಲೆದ್ದಳು .   
ನಿಮಗಾಗಿ
ನಿರಂಜನ್       

ಶುಕ್ರವಾರ, ಫೆಬ್ರವರಿ 7, 2014

ಜಾಲಹಳ್ಳಿಯಲ್ಲಿ

                                                               ಜಾಗ್ವಾರ್ ನುಗ್ಗಿದ್ದು ....

ಬೆಳ್ಳಂಬೆಳ್ಳಿಗ್ಗೆ ,  ಮೋಡ ಮುಚ್ಚಿದ ದಿನ,  ಗಾಂಧೀ ಕೃಷಿ ವಿಶ್ವವಿದ್ಯಾಲಯದಲ್ಲಿ ಜಾಗಿಂಗ್ ಮುಗಿಸಿ , ಹತ್ತಿರವಿರುವ  ಜಾಲಹಳ್ಳಿಯ ನಮ್ಮ HMT ರಸ್ತೆಯಲ್ಲಿ ನಾನು ಮತ್ತು ನನ್ನ ತಮ್ಮ "ಮದುಸೂಧನ " ಹೀಗೆ  ನೆಡೆದು ಬರ್ತಾ ಇದ್ವಿ.  ಬೆಳಗಿನಿಂದ ನೆಡೆದು ನೆಡೆದು ದಣಿದಿದ್ದ ನಮಗೆ ಅಲ್ಲೇ ಇರುವ ಕಾಮತ್ ಹೋಟೆಲ್ ಅಲ್ಲಿ ಏನಾದರು ತಿನ್ನುವ ಬಯಕೆ ಆಗಿತ್ತು ... ಅಷ್ಟರಲ್ಲಿ  ಒಂದು ವಿಚಿತ್ರ ಘಟನೆಯ ನಡೆಯುತ್ತೆ , ನಿಮಗೆ ಅದರ ಬಗ್ಗೆ  ಹೇಳ ಬಯಸುತ್ತೇನೆ... ಆ ಘಟನೆ  ರೊಚಕವಾಗಿಯೆನೋ ಇದೆ , ಅದು ಇನ್ನು ರೊಚಕವಾಗಬೇಕೆಂದರೆ ,  ನಾನು  ನಿಮಗೆ ಮೊದಲು ನಮ್ಮ ಜಾಲಹಳ್ಳಿ ಮತ್ತು ಅದರ ಸುತ್ತ ಮುತ್ತಲಿನ ಪರಿಸರದ  ಬಗ್ಗೆ ಸ್ವಲ್ಪ  ಹೇಳಲೇ ಬೇಕು .. ಆಗ ನಾ ಹೇಳುವ ಕತೆಯ ಬಗ್ಗೆ ಸ್ವಲ್ಪ ಕಲ್ಪನೆಯೂ ನಿಮಗೆ ಬಂದು ಕತೆ ಇನ್ನು ಮಜಾ ಕೊಡುತ್ತೆ... 
 
              ಹೆಸರಿಗೆ ತಕ್ಕಂತೆ ಜಾಲಹಳ್ಳಿ ಥೇಟ್ ಹಳ್ಳಿಯೇ .. ಬೆಂಗಳೂರಿನಲ್ಲಿದ್ದರು ಇನ್ನು ಅದು ಹಳ್ಳಿಯಾಗಿಯೇ ಉಳಿದಿದೆ. ಸುತ್ತಲು ಮರ ಗಿಡಗಳು , ಕಡಿಮೆ ಜನಸಂದಣಿ , ದೊಡ್ಡ ದೊಡ್ಡ ಖಾಲಿ ಜಾಗಗಳು ..  ಒಂದು ಕಡೆ HMT ವಾಚ್ ಕಂಪನಿ , ಮತ್ತೊಂದು ಕಡೆ  BEL ಕಂಪನಿ. ಇಲ್ಲಿಯ ಹಳ್ಳಿಯಂತಹ ಪ್ರಕೃತಿ ಉಳಿವಿಕೆಗೆ ಈ ಎರೆಡು ಕಂಪನಿಗಳು ಸಹ ತಮ್ಮದೇ  ರೀತಿಯಲ್ಲಿ  ಕಾಣಿಕೆ ನೀಡಿವೆ. ದೊಡ್ಡ ದೊಡ್ಡ ಉದ್ಯಾನವನಗಳು , ನೀಟಾದ ರಸ್ತೆಗಳು , ರಸ್ತೆಯ ಇಕ್ಕೆಲಗಳಲ್ಲೂ ಈ ಕಂಪನಿಯೇ ನಿರ್ವಹಿಸುವ ಮರ ಗಿಡಗಳು ನಮ್ಮ ಜಾಲಹಳ್ಳಿಗೆ ಒಂದು ರೀತಿಯ ಅಂದವನ್ನು ತಂದುಕೊಟ್ಟಿವೆ...  ಬೆಂಗಳೂರಿನ ಬೇರೆ ಯಾವುದೇ ಭಾಗದಿಂದ ಬರುವ ಜನರಿಗೆ ಜಾಲಹಳ್ಳಿ ಒಂದು ರೀತಿಯಾಗಿ ಕಾಡಿನಂತೆ ಕಾಣುತ್ತೆ , ಅಲ್ಲಿ ಬೀದಿ ಬೀದಿ ಸುತ್ತುವ ನಾವೆಲ್ಲರೂ ಕಾಡು ಜನರಂತೆ ಕಾಣುತ್ತೇವೆ...  ಈ ವಾತಾವರಣಕ್ಕೆ  ಮಾರುಹೋಗಿಯೇ ನಾವು ಮೊದಲು ಬೆಂಗಳೂರಿಗೆ ಬಂದ ಸಮಯದಲ್ಲಿ ಸುಮಾರು 8-10 ವರ್ಷಗಳ ಕಾಲ ಇಲ್ಲಿಯೇ ವಾಸಮಾಡಿದ್ದೆವು. ಒಂದು ತರಹ ಜಾಲಹಳ್ಳಿ ನನಗೆ ತವರು ಮನೆ ಇದ್ದಂತೆ ಅಂತಲೂ ಹೇಳಬಹುದು.  ನಾವು ಎಲ್ಲಿಗೆ ಹೋದರು , ಬೆಂಗಳೂರಿನ ಯಾವ ಭಾಗದಲ್ಲಿ ಇದ್ದರೂ  ಸಹ ನಾನು  ಜಾಲಹಳ್ಳಿಗೆ  ವಾರಕ್ಕೆ ಒಮ್ಮೆಯಾದರೂ  ಬೇಟಿ ಕೊಡಲೇಬೇಕು. ಈಗಲೂ  ಜಾಲಹಳ್ಳಿಯಲ್ಲಿಯೆ  ಇರುವ  ನಮ್ಮ ತಮ್ಮ  ಮದು ಜೊತೆ  ಜಾಲಹಳ್ಳಿಯ ಬೀದಿ ಬೀದಿಗಳಲ್ಲಿ ನಾವಿಬ್ಬರೂ ಸುತ್ತಲೇಬೇಕು. ಹಾಗೆ  ಸುತ್ತಿ ಬಂದರೆ ಮಾತ್ರ  ನನಗೆ ಏನೋ ಒಂದು ತರಹದ ನೆಮ್ಮದಿ ಹಾಗು ಸಮಾಧಾನ.. ಅಲ್ಲಿಯ ವಾತಾವರಣ , ಕಡಿಮೆ ಜನಸಂದಣಿ , ವಿಶಾಲವಾದ HMT ಹಾಗು BEL ರಸ್ತೆಗಳು , ಸುತ್ತಲಿನ ಮರಗಿಡಗಳು , ಸಾಂಪ್ರದಾಯಿಕ ಜನರು , ಅಲ್ಲಿರುವ ಉದ್ಯಾನವನಗಳು , ದೇವಸ್ತಾನಗಳು  , ಸಂಜೆಯ ನಂತರ ಸಿಗುವ ತಿಂಡಿ-ತಿನಿಸುಗಳು ಮೊದಲಿನಿಂದಲೂ ನನ್ನನ್ನು ಆಕರ್ಷಿಸುತ್ತಲೇ ಇವೆ...
 
                    ಇತ್ತೆಚಿಗೆ ಅಲ್ಲಿ ಇಲ್ಲಿ  ಉದ್ದನೆಯ ಕೆಲವು appartments ಗಳೂ  ಎದ್ದಿರುವುದು ಬಿಟ್ಟರೆ  ಜಾಲಹಳ್ಳಿ  ಇನ್ನು ತನ್ನ ಹಳೆಯ ಮಜಲನ್ನೆ ಉಳಿಸಿಕೊಂಡಿದೆ ಎಂದರೆ ತಪ್ಪಾಗಲಾರದು . ಅನೇಕ ಮರಗಿಡಗಳು ಈ ಜಾಲಹಳ್ಳಿಯನ್ನು ಇನ್ನೂ  ಆವರಿಸಿಕೊಂಡಿವೆ.  ಒಂದತ್ತು ವರ್ಷದ ಇಂದೇ BEL ಕಂಪನಿಯ ಹತ್ತಿರ , HMT ಸುತ್ತಮುತ್ತ ಚಿರತೆಗಳು ಕೂಡ ಹಾಗೊಮ್ಮೆ ಹೀಗೊಮ್ಮೆ  ಕಾಣಿಸಿಕೊಳ್ಳುತ್ತ  ಇದ್ವಂತೆ,  ಅವುಗಳ ಬಗ್ಗೆಯೂ  ರೋಚಕ ಕತೆಗಳು  ಇವೆ.
 
                   ಮಲ್ಲೇಶ್ವರಂನ ಮಂತ್ರಿ ಮಾಲು , ಗರುಡ ಮಹಲ್ಲು , ಫೋರಂಗಳು ಕೊಡದ ಮಜವನ್ನು ನಮಗೆ ಈ ಜಾಲಹಳ್ಳಿ ಇಷ್ಟು ದಿನ  ಉದಾರವಾಗಿ ಕೊಟ್ಟಿದೆ.. ಇಂತಹ ವಾತವರಣದಲ್ಲಿ ಆದಿನ ನಾ ಮತ್ತೆ ಮದು , ಅದೇ ರೀತಿಯ  ಮಜವನ್ನು ಅನುಭವಿಸುತ್ತ HMT ಮೈನ್ ರೋಡಲ್ಲಿ , ಕಾಮತ್ ಹೋಟೆಲ್ಲು  ಬಳಿ , ಯಾವುದೋ ಒಂದು ವಿಷಯ ಮಾತಾಡ್ಕೊಂಡು BEL ಕಡೆಯಿಂದ ಬರ್ತಾ ಇದ್ವಿ . ಯಾರೋ ಹಿಂದಿನಿಂದ  " ಹೇ ನಿರಂಜನ್ , ಮಗಾ ... ನಿರಂಜನ್ " ಎಂದು  ಕೂಗಿದಂತಾಯಿತು. ಕೂಗಿನ ದಿಕ್ಕಿನಲ್ಲಿ  ತಿರುಗಿ  ನೋಡಿದೆ , ಅದು ನಮ್ಮ ಜಾಲಹಳ್ಳಿಯ ನಂಜೇಶ .."  . ನಂಜೇಶ ನನ್ನ ಒಳ್ಳೆಯ ಸ್ನೇಹಿತ , ಆತ  ಕೂಡ ಜಾಲಹಳ್ಳಿಯ ಮೂಲನಿವಾಸಿಯೇ. ನಾವಿಬ್ರು ಒಂದೊಷ್ಟು ದಿನ ಒಂದೇ  ಕಂಪನಿಯಲ್ಲಿ  ಕೆಲಸ ಮಾದಿದ್ವಿ.ನಮ್ಮ ಏರಿಯದ ಹುಡುಗ ಆದ್ದರಿಂದ  ಸ್ವಲ್ಪ  ಜಾಸ್ತಿ ಸ್ನೇಹನೇ  ನಮ್ಮಿಬ್ಬರ ನಡುವೆ ಬೆಳೆದಿತ್ತು. ನಾ ಜಾಲಹಳ್ಳಿಗೆ ಹೋದಾಗ  ಹಾಗೊಮ್ಮೆ ಹೀಗೊಮ್ಮೆ ಸಿಗ್ತಾನೆ ಇರ್ತಾನೆ. ಅದೇ ರೀತಿ ಮತ್ತೆ ಆದಿನ ಕೂಡ ಸಿಕ್ಕಿದ್ದ. ಉಭಯ ಕುಶೊಲೊಪರಿಗಳ ನಂತರ  " ಬಾ ಮಗ ಟೀ ಕುಡಿಯೋಣ , ಕಾಮತ್ ಅಲ್ಲಿ "ಎಂದಾಗ , ತಕ್ಷಣಕ್ಕೆ ನಾ ಒಪ್ಪಿ ,ಕಾಮತ್ ಹೊಳಗೆ ನಡೆದೆವು.
  
                ಜಾಲಹಳ್ಳಿಗೆ ಹಳಬನಾದ ನಂಜೇಶ ತನ್ನ ಭಾರಿ ಹವಾ ತೋರಿಸುತ್ತ , ಕಾಮತ್ ಹೋಟೆಲ್ಲಿನಲ್ಲಿ ನಮಗೆ ಒಳ್ಳೆಯ ಜಾಗ ಗಿಟ್ಟಿಸಿದ ಕೂತು ತಿನ್ನಲು . ನಾವು ಲೇಟ್ ಆಗ ಬಹುದೆಂದು ಬರಿ ಟೀ ಕುಡಿಯಲು ನಿರ್ಧರಿಸಿ, ಮಾಣಿಗೆ ಕೇವಲ ಟೀ  ತರಲು ಹೇಳಿದೆವು... ಈ ಹೊಟೇಲುಗಳಲ್ಲಿ  3 ಟೀ ಹೇಳಿದರು ಅಷ್ಟೇ ಕೊಡುತ್ತಾರೆ , 2/3 ಹೇಳಿದರು 3 ಟೀ ಕೊಡುವೊಷ್ಟೇ ಕೊಡುತ್ತಾರೆ , ಹಾಗಾಗಿ ನಾವು 2/3 ಟೀ ಗೆ ಹೇಳಿ ಕೂತೆವು. ಅಷ್ಟರಲ್ಲಿ  ನಮ್ಮ ನಂಜೇಶ " ಇವರೆಲ್ಲ ನಮ್ಮ ಹುಡುಗ್ರು ಕಣೋ , ಸ್ವಲ್ಪ ಟೀ ಚೆನ್ನಾಗಿ , ಸಕ್ಕರೆ ಹಾಕಿ  ಕುದಿಸಿ , ಸೋಸಿ ತಾ " ಎಂದು ತನ್ನದೆ ಆದ  ಒಂದು ಗತ್ತಿನಲ್ಲಿ ಮಾಣಿಗೆ  ಹೇಳಿದ. ಮಾಣಿ  " ಸರಿ ಅಣ್ಣ " ಎಂದು ಸ್ವಲ್ಪ ಭಯ-ಭಕ್ತಿಯಿಂದಲೇ ಟೀ ತರಲು  ಹೋದ. ಆ  ಮಾಣಿ ಈ ರೀತಿ ಭಯ ಭಕ್ತಿ ತೋರಿಸಲು  ನಮ್ಮ ನಂಜೇಶ ತೊಟ್ಟಿದ್ದ ತಿಳಿ-ಬಿಳಿ ಬಣ್ಣದ ಖಾದಿ ಶರ್ಟ್ ಕಾರಣವಿರಬಹುದು...

              ಬಿಸಿ-ಬಿಸಿ ಟೀ ಬಂತು , ಸುತ್ತಲು ಹಸಿರು ಮರಗಿಡಗಳು , ಪಕ್ಕೆಕ್ಕೆ ದೊಡ್ಡ ಪಾರ್ಕ್ , ಸ್ವಲ್ಪ ಮುಂದೆ ಕಣ್ಣಾಯಿಸಿದರೆ HMT ಕಾಂಪೌಂಡ್ , ಅದರಲ್ಲಿ ಹಳೆಯ ಬಾರಿ ಮರಗಳು , ಆ ಮರಗಳು  ಬೀಸುವ ಗಾಳಿಗೆ ಬೇಸಣಿಗೆಯಂತೆ ಬೀಗುತ್ತಿದ್ದವು.. ಮೊದಲೇ ಹೇಳಿದ ಹಾಗೆ ನಮ್ಮ ಸುತ್ತಲು ಕಾಡಿನಂತಹ ವಾತಾವರಣವೇ ಇತ್ತು , ನಮಗೆ ನಾವೆಲ್ಲೋ ಯಾವುದೋ ಕಾಡ ಮಡಿಲಲ್ಲಿ ಬಿಸಿ ಬಿಸಿ ಟೀ ಕುಡಿಯುವಂತೆ ಆಗುತ್ತಿತ್ತು... ಪಿಂಗಾಣಿ ಸಾಸರ್ ನಲ್ಲಿ ಇದ್ದ ಟೀಯನ್ನು  15 ಸೆಕೆಂಡ್ಗೊಮ್ಮೆ ಸ್ವಲ್ಪ ಸ್ವಲ್ಪವೆ ಹೀರುತ್ತಾ , ನಂಜೇಶನ  ಹಾಸ್ಯ ಬರಿತ ಡೈಲಾಗುಗಳನ್ನು ಕೇಳುತ್ತ , ಸುತ್ತಲಿನ ಕಾಡಿನಂತಹ ವಾತಾವರಣದ ಸವಿಯುತ್ತ , ಕಾಲ ಕಳೆಯುತ್ತಿದ್ದೆವು ನಾನು ಮತ್ತು ಮದು .. ಇಲ್ಲಿಯವರೆಗೂ ಅದು ಇದು ಹೇಳಿ ನಮ್ಮನ್ನು ನಗಿಸುತ್ತಾ ಇದ್ದ ನಮ್ಮ ನಂಜೇಶ ಇದ್ದಕಿದ್ದಂತೆ ..



"ಮಗಾ , ಮೊನ್ನೆ ಇಲ್ಲಿ ಒಂದು ಜಾಗ್ವಾರ್  ಬಂದಿತ್ತು ,  ಬಂದು ಇಲ್ಲೇ ಒಂದು ಮನೆಗೆ ನುಗ್ಗಿತ್ತು ಕಣೋ " ಎಂದ . ಆ ಕ್ಷಣಕ್ಕೆ ಹೌಹಾರಿದ ನಾನು ಮತ್ತೆ ಮದು  "ಹೋದೇನೋ  ??. .. ಅದೇಗೋ  ಇಲ್ಲಿಗೆ  ಬಂತು  ?? " ಎಂದು ಪ್ರಶ್ನಿಸಿದೆವು .. "ಮಗ ನೀವು ನೋಡ್ಬೇಕು ಅದು ಹೇಗೆ ಆ ಮನೆಗೆ ನುಗ್ಗಿದೆ ಅಂತ ,, ಊಷ್ ಹಾಗ್ತೀರ ಅಷ್ಟೇ ,,, " ಎಂದ .. ನಾವು  ಬರಿ ಅವನ ಮುಖಭಾವವನ್ನು  ನೋಡಿಯೇ ಬೆಚ್ಚಿದೆವು.. ಕುತೂಹಲ ಹೆಚ್ಚಾಯಿತು ,, " ಅಲ್ಲೋ  ನಂಜೇಶ  ಅದು ಹೇಗೋ ಇಲ್ಲಿಗೆ ಬಂತು , ಅದರಲ್ಲೂ  ಇಂತಾ  ಜಾಗಕ್ಕೆ ?? "... ಅದಕ್ಕೆ  ನಮ್ಮ ಮದು ಸಮಾಧಾನದಲ್ಲಿ " ಬಂದ್ರು  ಬಂದಿರಬಹುದು ಕಣೋ, ಹೀಗೆನು ಎಲ್ಲ ಕಡೆ ಇವೆ ಅವು " ಎಂದನು.. ನನ್ನ ಮನಸ್ಸಿನಲು ಇದ್ದರು ಇರಬಹುದು  ಎಂದು   " ಮೊದಲೇ ಇಲ್ಲಿ ,, ಎಲ್ಲಿ ನೋಡಿದರು ಅಲ್ಲಿ ಮರಗಿಡಗಳು , ಜನಸಂದಣಿಯೊಂತು ಬಲು ಕಡಿಮೆ , ಜಾಗ್ವಾರ್  ಬಂದಿದ್ದರೂ  ಬಂದಿರ ಬಹುದು "ಅಂತ ಮನಸ್ಸಿನಲ್ಲೇ ಅಂದುಕೊಂಡೆ ...

             ಆದರೆ ಆ ಜಾಗ್ವಾರ್  " ಇಲ್ಲಿಗೆ ಯಾವ ಕಡೆಯಿಂದ ಬಂದಿರಬಹುದು , ಅದೇಗೆ ಇತ್ತು "  ಎನ್ನುವ ಸಂಶಯ ಶುರುವಾಯಿತು ,  " ಅಲ್ಲ ಮಗ ಅದು ಯಾವ ಕಡೆಯಿಂದ  ಬಂತು , ಅಷ್ಟೊತ್ತಲ್ಲಿ ಯಾರು ಜನರು ಇರಲೇ ಇಲ್ಲವ ??? " ಎಂದು ನಾ ಕೇಳಿದೇನು ...

" ಇಲ್ಲ ಮಗ ಬೇಜಾನ್ ಜನ ಇದ್ರೂ , ನಾವು ಕೂಡ ಇಲ್ಲೇ ಕ್ರಿಕೆಟ್ ಆಡ್ತಾ ಇದ್ವಿ , ಹೋಟೆಲ್ ಮುಂದೆ ಇದೆಯಲ್ಲ ಅದೇ ಗ್ರೌಂಡಲ್ಲಿ , ಜಾಗ್ವಾರ್  ಆ ಕಡೆಯಿಂದಲೇ  ಬಂತಂತೆ , ನನ್ ಫ್ರೆಂಡ್ಸ್ಸ ಕೂಡ ನೋಡಿದ್ರಂತೆ " ಎಂದು HMT ವಾಚ್ ಫ್ಯಾಕ್ಟರಿ ಕಡೆ ಕೈ ತೋರಿಸಿದ ... ನಾ ತಕ್ಷಣಕ್ಕೆ ಬೆಚ್ಚಿ ಬಿದ್ದೆ , ಯಾಕೆಂದ್ರೆ  ಆ ಕಡೆ ಜನ ಸಂದಣಿ ಇರುವುದೇ ಇಲ್ಲ , ಬಾರಿ ಮರಗಳು , ಎತ್ತಲು ಬರಿ ಪೊದೆಗಳು , ಆಕಡೆಯಿಂದ ಬಂದಿದ್ದರು ಬಂದಿರಬಹುದು ಎಂದು ನನಗೆ ಅನ್ನಿಸಿತು.. ಆ ಕ್ಷಣಕ್ಕೆ ಸ್ವಲ್ಪ  ಭಯವೂ  ಆಯಿತು , ನಾನು ಮತ್ತು ಮದು ಅದೇ   HMT ವಾಚ್ ಫ್ಯಾಕ್ಟರಿ ಕಡೆಗೆ ಬಹುವಾಗಿ ವಾಕ್ ಹೋಗ್ತಾ ಇದ್ವಿ ಹೊತ್ತು-ಗೊತ್ತೆನ್ನದೆ.. "ಯಪ್ಪಾ ನಾವಿಬ್ಬರೇ ಇದ್ದ್ದಾಗ ಜಾಗ್ವಾರ್ ಬಂದಿದ್ದಾರೆ ಏನ್ ಆಗ್ತಾ ಇತ್ತು " ಎಂದು ಭಯವಾಯಿತು... "ಮೊನ್ನೆ ಮೊನ್ನೆಯ ತನಕ ನಮ್ಮ ಅಮ್ಮ ಕೂಡ ಆ ಕಡೆ ವಾಲ್ಕಿಂಗ್ ಗೆ  ಅಂತ ಹೋಗಿ , ಪೊದೆಗಳನ್ನೆಲ್ಲ ಬೆದಕಿ , ದೇವರಿಗೆ ಅಂತ ಹೂವು ತರ್ತ ಇದ್ರೂ , ಸದ್ಯ ಆಗ ಬಂದಿಲ್ಲ , ಈ ಪ್ರಾಣಿ " ಅಂತ ಅಂದುಕೊಂಡೆ

" ಪುಣ್ಯಕ್ಕೆ  ಮಗಾ ,  ಆ ಜಾಗ್ವಾರ್ ಅವರ ಮನೆಗೆ ನುಗ್ಗಿದಾಗ ಅವರು ಮನೆಯಲ್ಲಿ  ಇರಲಿಲ್ಲ  ನೋಡು , ಬಚಾವ್ದರು  ಅವರು..  ಈ ಮೈಸೂರ್ ಗೆ ಹೋಗಿದ್ರಂತೆ ಯಾರದೋ ಸೀಮಂತ ಕಾರ್ಯ ಅಂತ "  ಎಂದು  ನನಗೆ ಆ ಮನೆಯವರ ಗುರುತು ಹೇಳಿದ .. ಅಷ್ಟೊತ್ತಿಗೆ ನನಗೆ ಆ ಮನೆ ಯಾವುದು ಎಂದು ತಿಳಿದಿತ್ತು... ಇದನೆಲ್ಲ ನಂಜೇಶ ನನಗೆ ಹೇಳುವಾಗ " ಅದು ಹೇಗೆ ಬಂದಿರಬಹುದು , ಇಲ್ಲಿಗೆ ಯಾಕೆ ಬಂತು , ಯಾವ ಕಾಡಿನಿಂದ ಬಂತು " ಎನ್ನುವ ಪ್ರಶ್ನೆಗಳೆಲ್ಲ ಕಾಡ  ತೊಡಗಿದವು ...

"ನಂಜೇಶ ಅದು ,, ಇಲ್ಲಿಗೆ ಹೇಗೋ ಬಂತು , ?? ಇಲ್ಲಿಗೆ ಬಾರೋ ತನಕ ಯಾರ ಕಣ್ಣಿಗೂ ಬೀಳಲೇ ಇಲ್ಲವಾ ?? " ಎಂದಾಗ .. "ಹೇ ಮಗಾ , ಅದು ಇಲ್ಲಿಗೆ ಯಾವಾಗ್ಲೂ ಬರ್ತಾ ಇತ್ತು ಕಣೋ , ನಾವು ಬೇಜಾನ್ ಸರಿ ನೋಡಿದ್ವಿ , ಆ ಮರಗಳಿಲ್ವಾ  , ಅಲ್ಲೇ ನೆರಳಲ್ಲಿ ನಿಂತಿರ್ತ ಇತ್ತು " ಎಂದನು ... ಅದಕ್ಕೆ ನಾ " ಅಂದ್ರೆ ನೀವು ಅದನ್ನು ಮೊದ್ಲೇ ನೋಡಿದ್ರ ??? " ಎಂದಾಗ " ಹೌದು ಮಗ , ಇಲ್ಲೇ ಓಡಾಡ್ಕೊಂಡು  ಇರ್ತಿತ್ತು ,, ಅದು ಇಲ್ಲಿ ಜಾಲಹಳ್ಳಿ ಕ್ರಾಸ್  ಅನು ಸೋಲಾರ್ ಇದೆಯಲ್ಲ , ಅದರ ಓನರ್  ಮಗಂದು ಎಂದಾಗ ... "ಅಯ್ಯೋ ಆ ಮುಂಡೆ  ಮಗ ಯಾಕೆ  ಈ ನಾಯಿ-ಪಾಯಿ ಸಾಕ ಬಿಟ್ಟು ,  ಈ ಜಾಗ್ವಾರ್ ಸಾಕಿದ , ಇಲ್ಲಿಗೆ  ಯಾಕೆ ಅದನ್ನ ಕರ್ಕೊಂಡು ಬರ್ತಿದ್ದ " ಅಂತ ಆಶ್ಚರ್ಯ ಆಯ್ತು , ಭಯದಲ್ಲಿ ... ಅರಣ್ಯಾದಿಕಾರಿಗಳು  ಇವನು ಜಾಗ್ವಾರ್ ಸಾಕೋಕೆ ಹೇಗೆ ಲೈಸೆನ್ಸ್ ಕೊಟ್ರು ಎಂದು ಯೋಚಿಸುತ್ತಾ ...  " ಅಲ್ಲ ನಂಜೇಶ ಅವನಿಗೆ ಅದನ್ನು ಇಟ್ಕೊಳೋಕೆ ಲೈಸನ್ಸ್ ಇತ್ತಾ  " ಎಂದಾಗ , " ಏನೋ ಮಗ ಹಿಂಗೆ ಅಂತೀಯ , ಅವಾ ಬಾರಿ ಖುಳ ಕಣೋ ,, ಬೇಜಾನ್ ಮಡಿಗಿದಾನೆ " ಎಂದನು .. "ಆದರೂ  ಅದೇಗೆ ಆವಾ ಜಾಗ್ವಾರ್ ಸಾಕಿದ ಅಂತ ನಾ ಯೋಚಿಸುತ್ತಲೇ ಇದ್ದೆ .. ಅಷ್ಟೊತ್ತಿಗೆ ನಂಜೇಶ " ಮಗ ಇಲ್ಲೇ ಆಟ ಆಡ್ತಾ ಇದ್ವಿ ಕಣೋ , ನಮ್ಮ ಹುಡುಗ ತೋರಿಸಿದ , ನೋಡೋ ಜಾಗ್ವಾರ್ ಅಂತ , ನಾವು ಇದೇನೋ ಹೀಗೆ ಬರ್ತಾ ಇದೆ ಅಂತ ನೋಡ್ತಾನೆ ಇದ್ವಿ ,, ನೋಡ್ತಾ ನೋಡ್ತಾ ನಮ್ಮ ಮುಂದೇನೆ ಹೋಯ್ತು , ಹಂಗೇ  ಹೋಗಿ , ಆ ದೊಡ್ಡ ಚರಂಡಿ ಹಾರಿ ನುಗ್ಗೆ ಬಿಡ್ತು ಕಣೋ ಆ ಮನೆಗೆ " ಎಂದಾಗ ನಾ ಅಲ್ಲೇ ಸುಸ್ತಾಗಿದ್ದೆ....

" ಆಮೇಲೆ ಸ್ವಲ್ಪ ಹೊತ್ತಿಗೆ ಜನ ಸೇರಿದ್ರು , ಜಾಗ್ವಾರ್ ನ ಸೀಜ್ ಮಾಡಿ , ಎತ್ತಕ್ಕೊಂಡು ಹೋದರು " ಎಂದು ಏನೋ ಒಂದು ರೀತಿಯ ಭಾವದಲ್ಲಿ ನಮಗೆ ಹೇಳಿದ.. ನಾ ಅಂತೂ  " ಜಾಗ್ವಾರ್ ಅವನಿಗೆ ಹೇಗೆ ಸಿಗ್ತು , ಅವನಿಗೆ ಹೇಗೆ ಲೈಸನ್ಸ್ ಸಿಕ್ತು ಅದುನ್ನ ಸಾಕಲು , ಯಾವ್ ಕಡೆಯಿಂದ ಬಂದು ಅದು ಈ ಮನೆಗೆ ನುಗ್ತು , ಬರ್ಬೇಕಾದ್ರೆ ಜನಕ್ಕೆ ಏನು ತೊಂದ್ರೆ ಮಾಡಲಿಲ್ಲವ .. ಸದ್ಯ ನಾವು ಸಿಕ್ಕಲಿಲ್ಲ ಅದಕ್ಕೆ " ಅಂತ ಅಂದುಕೊಳ್ತಾ ಇದ್ದೆ.. ಅಷ್ಟರಲ್ಲಿ  ನಮ್ಮ ನಂಜೇಶ  "ನೋಡು ಮಗ ಅದರ ಫೋಟೋ ತಕ್ಕೊಂಡಿದಿನಿ.. ಮಸ್ತ್ ಬಂದಿದೆ ,,, ಫೇಸ್ ಬುಕ್ ಅಲ್ಲಿ ಅವತ್ತೇ  ಶೇರ್ ಮಾಡಿದ್ದೆ,,, ನೊಡಿರ್ಲಿಲ್ಲವಾ " ಎಂದು ಬೇಜಾನ್ ಸಮದಾನದಲ್ಲಿ ಹೇಳಿದ..  ನಾ ಅದಕ್ಕೆ " ಹೌದೇನೋ , ಜಾಗ್ವಾರ್ ಬಂತು ಅಂತೀಯ , ಅವರ ಮನೆಗೆ ನಮ್ ಕಣ್ಣ್ಮುಂದೆನೇ  ನುಗ್ತು ಅಂತೀಯ , ಫೋಟೋ ಬೇರೆ ತೆಗೆದೇ ಅಂತೀಯ , ಭಯ ಆಗ್ಲಿಲ್ಲೆನೊ"  ಅಂದ್ರೆ .. " ಅದ್ರಲೇನು ಭಯ ಮಗ  , ನೋಡು ಹೇಗೆ ಬಂದಿದ್ದೆ ಫೋಟೋ , awesome ಆಗಿದೆ ಅಲ್ವ "  ಎಂದ ನಮಗೆ ಆ ಫೋಟೋ ತೋರಿಸಿದ ...



              ಭಾರಿ ಕುತೂಹಲದಿಂದ  , ಅಶ್ಚರ್ಯದಿಂದ , ಭಯದಿಂದ  ಫೋಟೋ ನೋಡಿದ ಮೇಲೆನೇ  ನನಗೆ ಗೊತ್ತಾಗಿದ್ದು ಇಷ್ಟೋ ತನಕ  ನಮ್ಮ ಜಾಲಹಳ್ಳಿ ನಂಜೇಶ  ಗುಣಗಾನ ಮಾಡಿದ್ದು  ಜಾಗ್ವಾರ್ ಅನ್ನೋ  ಪ್ರಾಣಿಯ ಬಗ್ಗೆ ಅಲ್ಲ ಎಂದು ...  ಅಂತು ಇಂತು ಜಾಗ್ವಾರ್ ಕತೆ ಹೇಳಿ ಮುಗಿಸಿದ ನಂಜೇಶ  ,  ಕತೆ ಕೇಳಿ , ಸುಮ್ಮನೆ ಏನೆಲ್ಲಾ ಯೋಚಿಸಿ ನಾ ಸುಸ್ತಾಗಿದ್ದೆ , ನಂಜೇಶನಿಗೆ ನಗುತ್ತಲೇ  ನಮಸ್ಕಾರ ಹೇಳಿ ನಾನು ಮತ್ತೆ ಮದು ಮನೆಗೆ ವಾಪಸ್ ಆದೆವು ಮನಸಿನ್ನಲ್ಲೆ  ಹುಸಿ ನಗೆ ಬೀರುತ್ತ ....


ನಿಮಗಾಗಿ
ನಿರಂಜನ್          

ಬುಧವಾರ, ಜನವರಿ 15, 2014

ದೇಶಕ್ಕೆ


                                     ಸಾಮೂಹಿಕ ನಾಯಕತ್ವ ಬೇಕು , ಒಬ್ಬ ವ್ಯಕ್ತಿಯಲ್ಲ .... 

ಸ್ನೇಹಿತರೆ  

ನಿಮಗೆಲ್ಲ ಗೊತ್ತಿರುವ ಹಾಗೆ ಇನ್ನೇನು ನಮ್ಮ ಲೋಕಸಭಾ ಚುನಾವಣಾ ಹತ್ತಿರವಾಗುತ್ತಿವೆ. ಮತ್ತೆ ನನಗೆ  ಒಬ್ಬ ಒಳ್ಳೆಯ , ನಿಷ್ಕಳಂಕ ವ್ಯಕ್ತಿಯನ್ನು ನನ್ನ ಕ್ಷೇತ್ರದಿಂದ ನಾಯಕನನ್ನಾಗಿ ಲೊಕಸಬೆಗೆ ಚುನಾಯಿಸುವ ಅವಕಾಶವಿದೆ. ಈ ಸಮಯದಲ್ಲಿ ನಾನು  ಸ್ವಲ್ಪ ಎಚ್ಚರದಿಂದ  , ಹೆಚ್ಚಿನ ಜವಾಬ್ದಾರಿಯಿಂದ ನನ್ನ ಹಕ್ಕನ್ನು ಚಲಾಯಿಸಿ ಅತ್ಯತ್ತಮ ವ್ಯಕ್ತಿಯನ್ನು ಚುನಾಯಿಸ ಬೇಕಾಗಿದೆ. ಸದ್ಯದ ದೇಶದ ಪರೀಸ್ಥಿಥಿ ಮತ್ತು ನಮ್ಮ ಸುತ್ತ ಮುತ್ತಲಿನ ಪರೀಸ್ಥಿಯನ್ನು ಗಮನಿಸಿದಾಗ ನಾನೊಂತು  ಬಹಾಳೋಷ್ಟು ಯೋಚಿಸಿ ನನ್ನ ನಾಯಕನನ್ನು ನಾನು ನಿರ್ಧರಿಸುವ ಸಮಯ ಇದಾಗಿದೆ ಎಂದು ಅರಿತಿದ್ದೇನೆ.  ಈ ಸಮಯದಲ್ಲಿ ನನ್ನ ಮುಂದಿರುವ ಬಹು ದೊಡ್ಡ  ಪ್ರಶ್ನೆಯೆಂದರೆ ಯಾವ ನಾಯಕನನ್ನು ನಾನು ಚುನಾಯಿಸಬೇಕು ? ಎಂಬುದು. ನಿಜ ನಮಗೆಲ್ಲ ಪ್ರತಿ ಚುನಾವಣೆಗಳಲ್ಲೂ ನಮ್ಮ ಕಣ್ಮುಂದೆ ಬಂದು ನಿಲ್ಲುವ ಬಾರಿ ಪ್ರಶ್ನೆ ಇದೊಂದೆ, ಯಾರನ್ನು ಚುನಾಯಿಸಬೇಕು.. ಯಾವ ಪಕ್ಷವನ್ನು ನಾನು ಬೆಂಬಲಿಸಬೇಕು ..   ಯಾವ ವ್ಯಕ್ತಿ ನಮ್ಮ ಸಮಸ್ಯಗಳಿಗೆ  ಲೊಕಸಬೆಯಲ್ಲಿ ದ್ವನಿಯಾಗುತ್ತಾನೆ  ?? ಯಾರು ನಮ್ಮೆಲ್ಲರನು ಒಟ್ಟಾಗಿ ತೆಗೆದುಕೊಂಡು ನಮ್ಮ ಸಮಸ್ಯೆಗಳಿಗೆ ಮತ್ತು ಭಾವನೆಗಳಿಗೆ ಸ್ಪಂದಿಸುತ್ತಾರೆ  ???  . ... 

               ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಹಾಗು ನಮ್ಮ ರಾಜ್ಯದಲ್ಲಿ ಅನೇಕ ಪಕ್ಷಗಳಿವೆ. ಎಲ್ಲ ಪಕ್ಷಗಳಿಗೂ ಅವುಗಳದೇ ಆದ ರಾಜಕೀಯ ನಿಲುವುಗಳಿವೆ , ರಾಜಕೀಯ  ಸಿದ್ದಾಂತಗಳಿವೆ , ಅವುಗಳದೇ ಆದ ನೆಲೆಗಟ್ಟುಗಳಿವೆ . ಈ ರಾಜಕೀಯ ಪಕ್ಷಗಳು ಎಲ್ಲಾ  ಚುನಾವಣೆಗಳಲ್ಲೂ ಅದೇ ಸಿದ್ದಾಂತಗಳ ಮೇಲೆಯೇ ತಮ್ಮ  ಹೋರಾಟವನ್ನು ನಿರ್ದರಿಸುತ್ತವೆ. ನಿಜ ಹೇಳಬೇಕೆಂದರೆ ಎಲ್ಲಾ  ರಾಜಕೀಯ ಪಕ್ಷಗಳ ಹುಟ್ಟು ಕೂಡ ಒಂದು ವಿಷಯಾಧಾರಿತ  ಹೋರಾಟದ ತಳಹದಿ ಹೊಂದಿರುತ್ತವೆ. ಆ ಹೋರಾಟವು ಯಾವ ರೀತಿಯದಾಗಿದೆ, ಯಾವ ವಿಷಯದ ಮೇಲಿತ್ತು  ಎನ್ನುವುದರ ಮೇಲೆ ಅಲ್ಲಿ ಉಗಮವಾದ ಪಕ್ಷದ  ಸಿದ್ದಾಂತ ಹಾಗು ನಿಲುವುಗಳು ನಿರ್ಧಾರಿತವಾಗಿರುತ್ತವೆ. ಈಗಿರುವ ನಮ್ಮ ಅನೇಕ ರಾಜಕೀಯ ಪಕ್ಷಗಳ ಸಿದ್ದಾಂತಗಳು ಕೂಡ ಅದೇ ರೀತಿಯ ನಿಲುವುಗಳನ್ನು ಹೊಂದಿವೆ. ಈಗಲೂ ಆ ಪಕ್ಷಗಳು ಆ ಎಲ್ಲಾ ನಿಲುವುಗಳನ್ನೇ ಸಮರ್ಥಿಸಿಕೊಲ್ಲುತ್ತವೆ. ಆದರೆ ನನಗೆ ಕಾಡುವ ಪ್ರಶ್ನೆಯೆಂದರೆ , ಆ ನಿಲುವು , ಹೋರಾಟ ಹಾಗು ಸಿದ್ದಾಂತಗಳು ಈ ಕಾಲಕ್ಕೆ ಸಮಂಜಸವಾದವುಗಳೆ  (relavent) ??? .  ನಾ ಒಪ್ಪಿಕೊಳ್ತೀನಿ ಆ ಪಕ್ಷಗಳು ಹುಟ್ಟಿಕೊಂಡಾಗ ಅವೆಲ್ಲವೂ ಆ ಸಮಯದಲ್ಲಿ relavent ಆದರೆ ಈಗ ??? ಈಗಲೂ ಆ ಪಕ್ಷಗಳು ಈ ಸಮಯಕ್ಕೆ ಬದಲಾಗದಿದ್ದರೆ , ಈ ಸಮಯದಲ್ಲಿ ಇರುವಂಥಹ ಸಮಸ್ಯೆಗಳು , ವಿಷಯಗಳ ಮೇಲೆ ತಮ್ಮ ನಿಲುವನ್ನು ಬದಲಿಸದೆ ಅವೇ ಹಳೆಯ ನಿಲುವುಗಳ ಮೇಲೆ ಚುನಾವಣೆಗೆ ಸ್ಪರ್ದಿಸುವ , ಅದೇ ಸಿದ್ದಾಂತಗಳನ್ನು ಒಪ್ಪಿಕೊಳ್ಳುವ ಈಗಿನ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿದರೆ ನಾ ಅದೇಗೆ ಆ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳಲಿ ???  ಚುನಾವಣೆಗಳು , ಹೋರಾಟಗಳು ನಡೆಯಬೇಕಾದದ್ದು ಸಮಸ್ಯೆಗಳ ಮೇಲೆ , ದೇಶದ ಅಬಿವೃದ್ದಿಯ ಯೋಜನೆಗಳ ಮೇಲೆ  ಆದರೆ ನಮ್ಮ ದುರಾದೃಷ್ಟ ನಮ್ಮ ಚುನಾವಣೆಗಳು ಈಗ ನೆಡೆಯುತ್ತಿರುವುದು ಜಾತಿ , ಹಣ , ಧರ್ಮ ಮತ್ತು ತಮ್ಮ ಹಳೆಯ ಸಿದ್ದಾಂತಗಳ ಮೇಲೆ. ಇಂತಹ ಸಮಯದಲ್ಲಿ ನಾನು ಅತೀ ಜಾಗರೂಕತೆಯಿಂದ ನನ್ನ ನಾಯಕನ್ನನ್ನು ಆರಿಸಬೇಕಾಗಿದೆ.  


                ಆದರೆ ನಿಜವಾಗಿ ನನ್ನನ್ನು ಕಾಡುತ್ತಿರುವ  ಒಂದು ಮುಖ್ಯವಾದ ಪ್ರಶ್ನೆಯೆಂದರೆ ಈ ಕಾಲಕ್ಕೆ ಹೊಂದಿಕೊಳ್ಳುವ ಸಿದ್ದಾಂತಗಳು, ಈಗಿನ ನಮ್ಮ ಸಮಸ್ಯಗಳ ಪರವಾಗಿ ಪ್ರಥಿದ್ವನಿಸುವ ರಾಜಕೀಯ ಪಕ್ಷಗಳು ಎಷ್ಟು ಇವೆ ??? ಅಂಥಹ ಪಕ್ಷ ಇದ್ದರೂ , ಒಳ್ಳೆಯ ಸಮರ್ಥ , ನಿಷ್ಕಲ್ಮಶ , ಜಾತಿ ಧರ್ಮಗಳನ್ನು ಮೀರಿ ನಡೆಯುವ ಅರ್ಹ ವ್ಯಕ್ತಿಯನ್ನು ಚುನಾವಣೆಗೆ ಆ ಪಕ್ಷ ನಿಲ್ಲಿಸುವರೆ ??? ಅಂಥಹ ಅರ್ಹ ವ್ಯಕ್ತಿ ನಿಜವಾಗಿಯೂ ಹೋರಾಟದ ಹಾದಿಯಲ್ಲಿ ಬಂದವನೇ ಅಥವಾ ವ್ಯಾಪಾರ ಮನೋಭಾವದಿಂದ ರಾಜಕೀಯಕ್ಕೆ ಕಾಲಿಟ್ಟವನೇ ?? ಆ ವ್ಯಕ್ತಿ ಪ್ರಾಮಾಣಿಕವಾಗಿ ನನ್ನ ಸಮಸ್ಯೆಗಳಿಗೆ ಲೋಕಸಬೆಯಲ್ಲಿ ದ್ವನಿಯಾಗುವನೆ ??? ಇದನ್ನೆಲ್ಲಾ ನಾ ಯೋಚಿಸಲೇಬೇಕು, ಪ್ರಮಾಣ ಮಾಡಿ ಹೇಳುತ್ತೇನೆ ನನ್ನ ನೆಚ್ಚಿನ ಪಕ್ಷವೇ ಸಮರ್ಥ , ಅರ್ಹ ವ್ಯಕ್ತಿಯನ್ನು ಚುನಾವಣ ಕಣಕ್ಕೆ ಇಳಿಸದೆ , ಯಾರೋ ಸ್ಥಳೀಯ ರೌಡಿಯನ್ನೋ , ಪುಡಾರಿಯನ್ನೋ , ಜಾತಿವಾರು ಆಧಾರದ ಮೇಲೆ ಅಭ್ಯರ್ಥಿಯನ್ನು ನನ್ನ ಕ್ಷೇತ್ರದಲ್ಲಿ ನಿಲ್ಲಿಸಿದರೆ ,  ನಾ ನಿಜವಾಗಿಯೂ ಆ ಪಕ್ಷವನ್ನು , ಆ ವ್ಯಕ್ತಿಯನ್ನು ಬೆಂಬಲಿಸುವುದಿಲ್ಲ .  

               ನನಗೆ ನನ್ನ ಸ್ಥಳೀಯ ಸಮಸ್ಯಗಳು ಮುಖ್ಯ , ಸ್ಥಳೀಯ ಸಮಸ್ಯೆಗಳು ಪರಿಹಾರವಾದರೆ ಮಾತ್ರ ದೇಶದ ಏಳಿಗೆ ಸಾದ್ಯ. ನನಗೆ ನನ್ನ ಕ್ಷೇತ್ರದ ಮುಖ್ಯ , ನಾ ಇಲ್ಲಿ ಒಳ್ಳೆಯ ವ್ಯಕ್ತಿಯನ್ನು ಚುನಾಯಿಸಿದರೆ ಮಾತ್ರ  ಆ ವ್ಯಕ್ತಿ ಒಳ್ಳೆಯ ಪ್ರದಾನಿಯನ್ನು ಚುನಾಯಿಸುತ್ತಾನೆ. ದೆಹೆಲಿಯಲ್ಲಿರುವ ಒಬ್ಬ ವ್ಯಕ್ತಿಯನ್ನು ನೋಡಿ ನಾ ಇಲ್ಲಿ ಮತ ಚಲಾಯಿಸುವುದು ಅದೆಷ್ಟು ಸರಿ ?  ಎನ್ನುವುದು ನನ್ನ ನಂಬಿಕೆ. ನಿಜವಾಗಿಯೂ ನಾನು ಈ ಭಾರಿ ಜಾತಿ , ಧರ್ಮ ಹಾಗು ಕುರುಡು ಪ್ರೀತಿಯಾದರದ ಮೇಲೆ ಯಾವ ಪ್ರಮುಖ ಪಕ್ಷವನ್ನು ಬೆಂಬಲಿಸುವುದಿಲ್ಲ. ನನಗೆ ಈ ಭಾರಿ ಜನಪ್ರಿಯ ಪಕ್ಷಗಳಿಗಿಂತ ಒಳ್ಳೆಯ ಅಭ್ಯರ್ಥಿ ಮುಖ್ಯ ನನ್ನ ಕ್ಷೇತ್ರದಲ್ಲಿ .  ಯಾವ ರಾಜಕೀಯ ಪಕ್ಷವು ಒಂದು ಧರ್ಮವನ್ನು ಉಳಿಸಲು , ಬೆಳೆಸಲು ಸಮರ್ಥವಲ್ಲ , ಧರ್ಮಗಳು ಜಾತಿಗಳು ಯಾವ ಪಕ್ಷಗಳ ಆಸ್ತಿಗಳೂ  ಅಲ್ಲ. ಚುನಾವಣೆಗಳು ಸಮಸ್ಯೆಗಳ ಮೇಲೆ, ಯೋಜನೆಗಳ ಮೇಲೆ , ದೇಶದ ಹಿತಾಸಕ್ತಿಗಳ ಮೇಲೆ ನಡೆಯಬೇಕು ಹೊರತು ಧರ್ಮ , ಹಣ ಮತ್ತು ಹಗೆತನದ ಮೇಲೆ ಅಲ್ಲ.  ದುರಾದೃಷ್ಟವಶಾತ್  ನಮ್ಮ ನೆಚ್ಚಿನ ಪಕ್ಷಗಳು , ಅನೇಕ ಪ್ರಮುಖ ಪಕ್ಷಗಳು ಅದೇ ಹಳೆಯ ಸಿದ್ದಾಂತಗಳ ಮೇಲೆ , ಜಾತಿಗಳ ಮೇಲೆ , ಧರ್ಮಗಳ ಮೇಲೆ ಮುನ್ನೆಡೆಯುತ್ತಿವೆ. ಇಂತವರನ್ನು ಬೆಂಬಲಿಸುವುದಕ್ಕೆ ನನಗಂತು  ಹೇಸಿಗೆ ಆಗುತ್ತಿದೆ,,, ನಿಮಗೆ ??? .
               
              ಭ್ರಷ್ಟಾಚಾರದ ವಿರುದ್ದ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳದ  ಯಾವ ಪಕ್ಷವನ್ನು ನಾನು ಬೆಂಬಲಿಸುವುದಿಲ್ಲ.  ಸ್ವತಂತ್ರ ಬಂದು ಇಷ್ಟು ದಿನವಾದರೂ ಇನ್ನೂ  ಬಡತನ , ನೀರು , ಆಹಾರಗಳು ಒಂದು ಪಕ್ಷದ ಹೋರಾಟವಾದರೆ , ಧರ್ಮ , ಜಾತಿ ಇನ್ನೊಂದು ಪಕ್ಷದ್ದು. ಅನೇಕ ಒಳ್ಳೆಯ ನಾಯಕರು ಆ ಪಕ್ಷಗಲ್ಲಿ ಇದ್ದರು ಅವರನ್ನು ಮೂಲೆಗುಂಪು ಮಾಡಿ ಕೆಟ್ಟವರೆ ಆ ಪಕ್ಷಗಳನ್ನು ಆಸ್ಥಿಯನ್ನಾಗಿಸಿಕೊಂಡಿದ್ದಾರೆ, ಇಂಥಹ ಪಕ್ಷಗಳು ನಿಜವಾಗಿಯೂ ನಮ್ಮ ಹಿತಾಸಕ್ತಿಯನ್ನು ಕಾಪಾಡುತ್ತವೆಯೋ ? ನಮ್ಮ ಸಮಸ್ಯಗಳಿಗೆ ದ್ವನಿಯಾಗುತ್ತವೆಯೊ ?? ನಮ್ಮ ನಿಜವಾದ ಹೋರಾಟಕ್ಕೆ ದಾರಿ ತೋರಿಸುತ್ತವೆಯೋ ?? ... ಕೇವಲ ಒಂದಿಬ್ಬರು ಸಮರ್ಥ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ದೇಶದ ಜನರಿಗೆ ಮಂಕುಬೂದಿ ಎರೆಚುವ ಪಕ್ಷಗಳನ್ನು ನಾನು ತಿರಸ್ಕರಿಸಬೇಕಾಗಿದೆ. ಸಾಮಾಜಿಕ ಸುದ್ದಿ ತಾಣಗಳಲ್ಲಿ ಒಳ್ಳೆಯ ನಾಯಕರುಗಳ ಬಗ್ಗೆ ಕೆಟ್ಟದ್ದಾಗಿ ಪ್ರಚಾರ ಮಾಡುವ ಅನೇಕ ಪಕ್ಷಗಳನ್ನು ನಾನು ಜಾಡಿಸಬೇಕಾಗಿದೆ. ಇದು ಈ ಭಾರಿಯ  ಚುನಾವಣೆಗೆ ನಾನು ಮಾಡಿಕೊಂಡಿರುವ ಒಂದು ಸಿದ್ದತೆ. ಈ ಬಾರಿ  ನಮ್ಮ ಪ್ರಮುಖ  ಪಕ್ಷಗಳು ನನಗೆ ಮೋಸ ಮಾಡಲು ಸಾದ್ಯವಿಲ್ಲ , ಒಳ್ಳೆಯ ವ್ಯಕ್ತಿ ನನ್ನ ನಾಯಕ , ಒಳ್ಳೆಯ ಪಕ್ಷ  ಒಳ್ಳೆಯ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿದರೆ ಮಾತ್ರ ನನ್ನ ಅಮೂಲ್ಯ ಮತ ಆ ಪಕ್ಷಕ್ಕೆ  ಇಲ್ಲದಿದ್ದರೆ ಇಲ್ಲ , ಪಕ್ಷವನ್ನು ಪ್ರೀತಿಸಿದರು ಒಳ್ಳೆಯ ವ್ಯಕ್ತಿ ನನಗೆ ಮುಖ್ಯ ಇಲ್ಲವಾದರೆ ಇಲ್ಲ.  ಪ್ರತಿ ಕ್ಷೇತ್ರದಿಂದಲೂ ಒಳ್ಳೆಯ ವ್ಯಕ್ತಿ ಆರಿಸಿ ಬಂದರೆ ಮಾತ್ರ ಸದೃಡ ದೇಶ ಕಟ್ಟಲು ಸಾದ್ಯ , ಕೇವಲ ಒಬ್ಬ ವ್ಯಕ್ತಿಯಿಂದ ಏನು ಸಾದ್ಯವಿಲ್ಲ. ಸಾಮೂಹಿಕ ಸಮರ್ಥ ನಾಯಕರಿಂದ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಹಾಗಾಗಿ ನಾವು ಕೇವಲ ಒಬ್ಬ ನಾಯಕನನ್ನು ಚುನಾಯಿಸುವುದರ ಬದಲು ಅನೇಕ ನಾಯಕರನ್ನು ಚುನಾಯಿಸಬೇಕು.  ಯಾವ ಪಕ್ಷದಲ್ಲಿ ಸಭ್ಯ ವ್ಯಕ್ತಿ ಇರುವನೋ ಆತನನ್ನು ನಾನು ಬೆಂಬಲಿಸುತ್ತೇನೆ , ಕೇವಲ ಪಕ್ಷದ ಆಧಾರದ ಮೇಲೆ ನಾನು ಯಾವ ಕೆಟ್ಟ ವ್ಯಕ್ತಿಯನ್ನು ನನ್ನ ನಾಯಕನನ್ನಾಗಿ ಒಪ್ಪಿಕೊಳ್ಳುವುದಿಲ್ಲ. 


ನಿಮಗಾಗಿ 
ನಿರಂಜನ್ 

ಭಾವನೆಗಳು


ಹೃದಯ ದಡ 

 ಡಡಿ ನಿಂತ ಹೃದಯ
 ದಡಕ್ಕೆ
 ಹರಿವ ನಿನ್ನ ಪ್ರೀತಿ
 ನದಿಯ
 ನರಿಗೆಯಂತ  ಒಲವಿನಲೆ
 ಬಂದು ನನ್ನ ತಬ್ಬಿತು .....   

ನಗೆಯಾಲು 

ಲವಿನ ಮಾತುಗಳಿಗೆ
ನಗೆಯಾಲಿನ
ಅಮೃತವ ಸೇರಿಸಿ ನೀಡುವೆ ನೀ
ನನಗೆ ಪ್ರತಿದಿನ
ಅದು ಬಲು ಚೆನ್ನ  ...

ಮರೆಯೋಲ್ಲ 

ಪ್ರಿಯ ಅದೇಗೆ
ನಾ ಮರೆಯಲಿ ನಿನ್ನ ,
ಮರೆತರು ಮರೆಯದು
ಈ ಹೃದಯ
ಅನುದಿನವು ಚಿನ್ನ  ...

ನಿಜ ಸ್ಪೂರ್ತಿ 

ಅಂಚಿಗೆ ಸರಿದಿತ್ತು
ಆ ನನ್ನ ಅಧಮ್ಯ
ಸ್ಪೂರ್ತಿ ....

ಕಣ್ಣಂಚಿನಲ್ಲೇ ಮತ್ತೆ
ನೀ ಹೊತ್ತುತಂದೆ
ಪೂರ್ತಿ  ....

      ಉತ್ತರ ....

ನ್ನೊಲವಿನ  ತೀರದ
ಹಕ್ಕಿ ನೀ  ...
ನೀ ಹಾರಿದೊಷ್ಟು
ಎತ್ತರ ..
ಸಿಗುವುದೆನ್ನ ಪ್ರೀತಿಗೆ
ಉತ್ತರ ..

ಮಿಂಚು 

ಮೊದುವೆಗು ಮೊದಲು
ನನ್ನವಳು
ಮಿಂಚು .....
ನಂತರ
ಗುಡುಗು-ಸಿಡಿಲು ....

ಆ ತೀರ 

ಪ್ರೀತಿಯಲಿ ನಾ
ತೇಲ ಬಯಸಿದಾಗ

ಹುಣ್ಣಿಮೆಯ  ಚಂದ್ರನಡಿಯಲ್ಲಿ
ಒಲುಮೆ ದೋಣಿಯಲೆನ್ನ ಕೂರಿಸಿ

ನಿಜಪ್ರೀತಿಯಲಿ ನೀ ನನ್ನ ಈ ದಡಕ್ಕೆ
ತೇಲಿಸಿ , ನೀ ಅಲ್ಲೇ ಬೆಳದಿಂಗಾಳಾಗಿ  ಉಳಿದೆ ....

ಪ್ರೀತಿಯಾಕಾಶ 

ನಾ ಹೇಳಿದೆ ನನ್ನ
ಪ್ರೀತಿ
ಆಕಾಶದೊಷ್ಟು ವಿಸ್ತಾರ ಎಂದು ...

ನಿರೂಪಿಸಿದೆ ನೀ
ಅದನ್ನೇ
ನನ್ನ ಪ್ರೀತಿಯಾಕಾಶದಲಿ
ಕ್ಷಣಮಾತ್ರ ಮಿಂಚಿ ಮರೆಯಾಗಿ ...  ;)

ಪ್ರೀತಿಯ ಗೋಪುರ
ಮೀರದಿರಲಿ ನಿಮ್ಮೆತ್ತರ
ನೋವಾಗಬಾರದಲ್ಲವೇ ಮೇಲಿಂದ ಬಿದ್ದರ .....

 ಪ್ರೇಮ ಬೆಳೆ 

 ಳೆಗಿಳಿಯುವ ಈ ಮಳೆ ಹನಿಗಳು
 ಗಲ್ಲುಗಲ್ಲೆನ್ನುವ ನಿನ್ನ  ಬಳೆ ಸದ್ದುಗಳು
 ಮೋಹಿಸುವ ನಿನ್ನ ಮುಖ ಕಳೆ, ಕಂಗಳು
 ಹೃದಯದಲ್ಲಿ ಹಾಗೆ ಮೊಳೆತಿವೆ ಪ್ರೇಮ ಬೆಳೆಗಳು .....

 ಕಾಣುತಿರು 

ಕಾಡದಿರು ಕನಸಲಿ ಕಣ್ಣುಮುಚ್ಚಿದಾಕ್ಷಣ
ಕಾಣದಿದ್ದರು ನೀ ಕನಸಲೂ ಅರೆ ಕ್ಷಣ
ಕೈಜಾರುವುದು ನನ್ನ ಜೀವ ಅದೇ ಕ್ಷಣ ....



ನಿಮಗಾಗಿ 
ನಿರಂಜನ್ 

ಸೋಮವಾರ, ಜನವರಿ 6, 2014

ನಮ್ಮ ಜೀವದಡ



ಪ್ರೀತಿಯ ಸ್ನೇಹಿತರೆ ಹೊಸ ವರುಷದ ಶುಭಾಶಯಗಳು. ಕಳೆದ ವರ್ಷದ ಕಹಿಗಳು  ಕಾಣಿಯಾಗಲಿ , ಸಿಹಿ ಮಾತ್ರ ಈ ವರುಷಕ್ಕೆ ಸವಿಯಲು ಸಿಗಲಿ. ಕಳೆದವರ್ಷದ ಅಂತ್ಯ ನನಗಂತೂ ತುಂಬಾ ಆನಂದದಾಯಕವು , ಫಲಪ್ರದವು ಹಾಗು ಸಿಹಿಯಾಗಿಯೂ  ಇತ್ತು , ಈ ಹೊಸ ವರುಷದ ಆದಿಯು   ಅಷ್ಟೇ ಚೆನ್ನಾಗಿ ಇದೆ. ಇದಕ್ಕೆಲ್ಲ ಕಾರಣವೂ ಈಗಾಗಲೇ ನಿಮಗೆಲ್ಲ ಗೊತ್ತಿರಬಹುದು ಕೂಡ.  ನಿಜ ನನ್ನ ಖುಶಿಗಳಿಗೆಲ್ಲ ಕಾರಣ ನನ್ನವಳು....
 
               ಇತ್ತೀಚಿಗೆ ನನ್ನವಳ ಮೇಲೆ ಪ್ರೀತಿಯುಕ್ಕಿ ನಾ ಒಂದು ಕವನ ಗೀಚಿದೆ , ಅದನ್ನು ನಾ ಅವಳ ಮುಂದೆ ಶೃಂಗಾರ ಲಹರಿಯಲ್ಲೇ  ವಾಚನವನ್ನೂ ಮಾಡಿದೆ , ನನ್ನವಳು ಸಕತ್ ಖುಷಿ ಪಟ್ಟಳು , ಸಿಹಿ ನಗೆ ಬೀರಿದಳು , ನಾಚಿ ನೀರಾದಳು ಕೂಡ. ಕೆಲ ಕ್ಷಣ ಬಹು ಸಂತೋಷದಿಂದ ಕುಣಿದು ಕುಪ್ಪಳಿಸಿದ ಅವಳು , ಒಂದು ಕ್ಷಣ ಸುಮ್ಮನಾಗಿ "ರೀ... ನಿಜವಾಗಿಯೂ ನೀವು ನನ್ನನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಇದನ್ನ ಬರೆದಿರಾ ??? " ಎಂದಳು . ನಾ ಅದಕ್ಕೆ " ಹೌದು " ಎಂದಾಗ  ಅವಳ ಮುಖಭಾವ ಮತ್ತೊಂದು ಕವನಕ್ಕೆ ಸ್ಪೂರ್ತಿಯೂ ಆಯಿತು. ಮರು ಕ್ಷಣವೇ ಅವಳು ನಾ ಗಲಿಬಿಲಿಯಾಗುವ ಮತ್ತೊಂದು ಪ್ರಶ್ನೆ ಹಾಕಿದಳು " ನಿಜ ಹೇಳಿ ಯಾವ ಹುಡುಗಿ ಮೇಲೆ ಈ ಕವನ ಬರೆದ್ರಿ ,, ??? ನಾ ಅಂತು ನೀವು ಹೇಳಿದ ಹಾಗೆ ಇಲ್ಲ , ನನ್ನ ಮೇಲೆ ನೀವು ಈ ರೀತಿ ಕವನ ಬರೆದಿರೋದು  ಡೌಟ್  ;) " ಎಂದಳು... ನನಗೋ ಏನು ಹೇಳಬೇಕೋ ತೋಚಲಿಲ್ಲ .. ಅವಳ ಮೇಲೆ ನಾ ಬರೆದ ಸಾಲುಗಳು ಈ ಕೆಳಗಿನವುಗಳಾಗಿದ್ದವು ಅಷ್ಟೇ ..... 


                                            ಒಡೆಯನು  ನಾ ನನ್ನವಳ ಹೃದಯ
                                            ಪ್ರೀತಿಗಳ....

                                            ತಡೆಯನು ನಾ ಉತ್ತರವಾಗರಿಯುವ
                                            ಭಾವನೆಗಳ..

                                            ಜಿನುಗುತ್ತಿವೆ ನಮ್ಮಿಬ್ಬರ ಮನಸ್ಸುಗಳು
                                            ಹಂಬಲಗಳ..

                                            ಜೇನರಿದಂತೆ ಆಕೆ ನನ್ನೊಡೆ ಆಡಿದರೆ
                                            ಮಾತುಗಳ..

                                            ಒಲವಿನೋಲಗದಲ್ಲಿ ನೋಡಿ ನಾಚುವೆ
                                            ನಾ ನನ್ನವಳ..

                                            ಪ್ರೀತಿಯುತ್ಸವದಲ್ಲಿ ಮರೆಸುವಳು ಪ್ರತಿ
                                            ದಿನಗಳ..

                                            ಅವಳ ಆ ಸಿಹಿ ಕಿರುನಗೆ ಬೆಸೆಯುವುದು
                                            ಹೃದಯಗಳ..

                                            ಸಾಮಿಪ್ಯವ ಬಯಸುವುದು ನನ್ನ ಹೃದಯ
                                            ನನ್ನವಳ...

                                            ಸಾಂಗತ್ಯದಿ ಜೀವದಡ ಸೇರಿ ಕಟ್ಟಬೇಕವಳ
                                            ಕನಸುಗಳ..

ನಿಮಗಾಗಿ 
ನಿರಂಜನ್