ಸೋಮವಾರ, ಆಗಸ್ಟ್ 31, 2015

ವಿಚಾರವಾದಕ್ಕಿರುವ ಬೆಲೆಯೆಷ್ಟು ??

                                                    ವಿಚಾರವಾದಕ್ಕಿರುವ ಬೆಲೆಯೆಷ್ಟು ?? 

ಸ್ನೇಹಿತರೆ, ವಿಚಾರವಾದವೆಂದರೆ "ಯಾವುದೇ ಒಂದು ವಿಷಯವನ್ನು ಕೇವಲ ನಂಬಿಕೆಯಾಧಾರದ ಮೇಲೆ ಅರ್ಥೈಸದೆ ,  ಸಂಶೋದನೆ, ಅದ್ಯಯನ ಹಾಗು ಅದರ ಮೂಲ ಸ್ವರೂಪದ ಆಧಾರದ ಮೇಲೆ ಆ ವಿಷಯವನ್ನು ಅರ್ಥೈಸುವುದು". ಆಗ ಸಿಗುವ ವಿಷಯದ ಅರ್ಥ ಅಥವಾ ಸತ್ಯ ಕೆಲವೊಮ್ಮೆ ನಮ್ಮ ಸಾಂಪ್ರದಾಯಿಕ ನಂಬಿಕೆಗಿಂತ ಬಿನ್ನವೂ ಆಗಿರಬಹುದು, ಕೆಲವೊಮ್ಮೆ ನಮ್ಮ ನಂಬಿಕೆಗಳಿಗೆ ನಿಕಟವೂ ಇರಬಹುದು, ವಿಚಾರ ಸತ್ಯವೂ ಆಗಿರಬಹುದು ಕೆಲವೊಮ್ಮೆ ಸತ್ಯಕ್ಕೆ ದೂರವು ಇರಬಹುದು. ಅಧ್ಯಯನದ ಆಧಾರದ ಮೇಲೆ ಅನೇಕ ವಿಚಾರಗಳನ್ನು ಚರ್ಚೆಗೆ ತಳ್ಳುವುದೇ  "ವಿಚಾರವಾದ". ಈ ರೀತಿಯ ಸಿದ್ದಾಂಥವನ್ನು ನಂಬಿ ವಿಷಯಗಳನ್ನು ವಿಬಿನ್ನ ದೃಷ್ಟಿಕೋನಗಳಲ್ಲಿ ನೋಡಿ ಸತ್ಯವನ್ನು ಅರಿಯುವವರು "ವಿಚಾರವಾದಿ"ಗಳು. ವಿಚಾರವಾದಿಗಳು ಪ್ರತಿಪಾದಿಸುವ ವಿಚಾರಗಳ ಮೇಲೆ ಚರ್ಚೆಗಳು ಆಗಬೇಕೆ ವಿನಃ ವಿಚಾರವಾದಿಗಳ ಕೊಲೆಗಳಲ್ಲ.  ಚರ್ಚೆಯ ಬಳಿಕ ಆ ಸತ್ಯವನ್ನು ಒಪ್ಪಿಕೊಳ್ಳುವುದು ಬಿಡುವುದು ನಮಗೆ ಬಿಟ್ಟ ವಿಷಯ.   


           ನಮ್ಮ ಸಮಾಜದಲ್ಲಿ ಅನೇಕ ವಿಚಾರವಾದಿಗಳು ಇದ್ದಾರೆ. ಕೆಲವರ ವಾದ  ನಮಗೆ ಇಷ್ಟವಾಗಬಹುದು, ಮತ್ತೆ ಕೆಲವರಿಗೆ ಇಷ್ಟವಾಗದೆಯೂ  ಇರಬಹುದು. ಈ ರೀತಿಯ ಬಿನ್ನತೆಯನ್ನು ನಮ್ಮ ಸಮಾಜ ಹೇಗೆ ಸ್ವೀಕರಿಸುತ್ತದೆ, ಹೇಗೆ ಆ ವಿಷಯವನ್ನು ಚರ್ಚಿಸುತ್ತದೆ ಎನ್ನುವುದರ ಮೇಲೆ ನಮ್ಮ ಸಮಾಜದ ಪ್ರೌಡತೆ ತಿಳಿಯುತ್ತದೆ. ವಿಚಾರವಾದ ಕೇವಲ ವಿವಾದಗಳನ್ನು ಹುಟ್ಟಿಹಾಕದೆ , ಒಂದು ವಿಷಯಕ್ಕೆ ತಾತ್ವಿಕ ಅಂತ್ಯವನ್ನು ನೀಡಬೇಕು. ಆ ರೀತಿಯ ವಿಚಾರವಾದವನ್ನು ಪ್ರತಿಪಾದಿಸುತ್ತಿದ್ದ ಅನೇಕ ಮಹಾನ್ ವ್ಯಕ್ತಿಗಳು ಶತಮಾನಗಳಿಂದಲೂ ನಮ್ಮ ಸಮಾಜದಲ್ಲಿ ಇದ್ದಾರೆ. ಆದರೆ ನಾವು ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬುದೇ ಒಂದು ದೊಡ್ಡ ಪ್ರಶ್ನೆ . ೧೨ನೆ ಶತಮಾನದಲ್ಲಿ ಬಸವಣ್ಣ ಹಾಗು ಅನೇಕ ವಚನಕಾರರು ವಿಚಾರವಾದಿಗಳಾಗಿದ್ದರೆ, ರಾಜಾರಾಂ ಮೋಹನ್ ರೋಯ್, ದಯಾನಂದ ಸರಸ್ವತಿ ಇನ್ನು ಅನೇಕ ಮಹನೀಯರು ವಿಚಾರವಾದದ  ಪರಂಪರೆಯನ್ನು ಪ್ರಾರಂಬಿಸಿದರು. ಆದರೆ ಅವರುಗಳನ್ನು ನಮ್ಮ ಸಮಾಜ ಹೇಗೆ ನಡೆಸಿಕೊಂಡಿದೆ ಎಂದು ನಮ್ಮ ಇತಿಹಾಸವೇ ಹೇಳುತ್ತದೆ. 



            ಅದು ಆಗಿನಕಾಲ, ಆದರೆ ಈ ೨೧ನೇ  ಶತಮಾನದಲ್ಲೂ ನಾವೇಕೆ ಇಷ್ಟೊಂದು ಕುಬ್ಜರಾಗಿದ್ದೇವೆ. ವಿಚಾರವಾದಕ್ಕೆ ನಮ್ಮ ಸಮಾಜದಲ್ಲಿ ಇನ್ನೂ ಬೆಲೆಯೇ ಇಲ್ಲವೇ ?  ವಿಚಾರವಾದಿಗಳನ್ನು ದ್ವೇಶಿಸುವುದರ ಬದಲು ಅವರು ಎತ್ತುವ ವಿಷಯಗಳ ಮೇಲೆ ನಾವು ಚರ್ಚಿಸಬೇಕಲ್ಲವೇ ?  ವಿಚಾರವಾದಿಗಳಿಗೆ ನೀನು ಎಡಪಂಕ್ತೀಯ , ನೀನು ಬಲಪಂಕ್ತೀಯ ಎಂಬ ಬಣ್ಣಗಳನ್ನು ಹಚ್ಚಿ, ಅವರ ವಿಚಾರಗಳಿಂದ ವಿವಾದಗಳನ್ನು  ಮಾತ್ರ ಸೃಷ್ಟಿಸುತ್ತಿದ್ದೆವೆಯೇ ಹೊರತು ಚರ್ಚೆ ಮಾಡುತ್ತಿಲ್ಲ.  ನಮ್ಮ ಸಮಾಜ ಇನ್ನೂ ಅದೆಷ್ಟು ಕೆಳಮಟ್ಟಕ್ಕೆ ಸರಿದಿದೆ ಎಂದರೆ ವಿಚಾರವಾದಕ್ಕೆ ಧರ್ಮ ಹಾಗು ಜಾತಿಗಳ ವಿಷ ಸೇರಿಸಿ ವಿಚಾರವಾದವೇ ಸರಿಯಲ್ಲ. ವಿಚಾರವಾದಿಗಳು ಆ ಧರ್ಮ ವಿರೋಧಿಗಳು, ಈ ಜಾತಿ ವಿರೋದಿಗಳು ಎಂದು ,  ಕೆಲವರಿಗೆ  ಜೀವ ಬೆದರಿಕೆ ಹಾಕಿದರೆ , ಮತ್ತೆ ಕೆಲವರ ಕೊಲೆಗಳೇ ಆಗಿ ಹೋಗಿವೆ. 

             ವಿಚಾರವಾದಿಗಳ ವಿಚಾರ ನಿಮಗೆ ಸರಿ ಅನ್ನಿಸದಿದ್ದಲ್ಲಿ ಅವುಗಳನ್ನು ನಾವು  ನಂಬುವ ಅವಶ್ಯಕತೆಯಿಲ್ಲ. ಆದರೆ ಅವರ ಆ ವಿಚಾರ ಮಾಡುವ ಮನೋಭಾವವೇ ಸರಿ ಅಲ್ಲ ಎಂದು ನಾವೇಕೆ ಅವರನ್ನು ಕೊಲ್ಲಬೇಕು ? ಈ ರೀತಿಯಾಗಿ ನಾವು ವಿಚಾರವಾದಗಳಿಗೆ  ಋಣಾತ್ಮಕವಾಗಿ ಸ್ಪಂದಿಸಿದರೆ ನಮ್ಮ ಸಮಾಜದ ಮುಂದಿನ ಗತಿಯೇನು ?.    

           ನಮ್ಮ ದೇಶ ಹಾಗೆ,  ಹೀಗೆ ಎಂದು ಹೆಮ್ಮೆಯಿಂದ  ವಾಕ್ ಸ್ವಾತಂತ್ರದ ಬಗ್ಗೆ ಮಾತನಾಡುವ ನಾವು , ಒಂದುಕಡೆ "ಸತ್ಯವೇ ದೇವರು" ಎಂದು  ಹೇಳಿದರೆ , ಮತ್ತೊಂದೆಡೆ  "ಸಿಹಿ ಸುಳ್ಳನ್ನಾದರು ಹೇಳು ಕಟು ಸತ್ಯವನ್ನು ಹೇಳಬೇಡ" ಎನ್ನುತ್ತೇವೆ. ಇದರ ಮೇಲೆ ಯಾರಾದರು ಯಾವುದೋ ಸತ್ಯವನ್ನು ಮಾತಾಡಿದರೆ ಇವನು ನಮ್ಮ ವಿರೋದಿ , ಇವನು ಅವರ ವಿರೋದಿ ಎಂದು, ಆ ವಿಚಾರ ಮಾಡಿದವನ ಜೀವಕ್ಕೆ ಕುತ್ತು ತರುತ್ತೇವೆ. ಬಿಬಿ ಕಲ್ಬುರ್ಗಿ ಕರ್ನಾಟಕದಲ್ಲಿ ಈ ದಿನ ಇದೆ ರೀತಿಯ ಹಗೆತನಕ್ಕೆ ಬಲಿಯಾದರೆ , ನರೇಂದ್ರ ಧಬೋಲ್ಕರ್ , ಗೋವಿಂದ್ ಪನ್ಸರೆ ಮಹಾರಾಷ್ಟ್ರದಲ್ಲಿ ತೀರ ಇತ್ತೀಚಿಗೆ ಬಲಿಯಾದವರು. ಇವರ ವಿಚಾರಗಳಿಗೆಲ್ಲ ಜಾತಿ,ಧರ್ಮದ ಬಣ್ಣ ಹಚ್ಚಿ,ಕೊನೆಗೆ ಜೀವ ತೆಗೆದ ನಮ್ಮ ಸಮಾಜ ನಿಜವಾಗಿಯೂ ವಿಚಾರವಾದಿಗಳಿಗೆ ಏನು ಸಂದೇಶ ನೀಡುತ್ತಿದೆ. ನಮ್ಮ ಸಮಾಜ ಇನ್ನು ವಿಚಾರಗಳನ್ನು ಜೀರ್ಣಿಕೊಳ್ಳದೊಷ್ಟು ಸಣ್ಣ ಮಟ್ಟದ್ದೆ ? 

          ಬಾಂಗ್ಲದೇಶದಲ್ಲಿ ಬರಹಗಾರ್ತಿ ತಸ್ಲಿಮ ನಸ್ರೀನ್ ವಿರೋದಿಸಿದ್ದಕ್ಕೆ , ಬ್ಲಾಗರ್ ನೆಲೊಯ್ ನೀಲ್ ಹತ್ಯಮಾಡಿದ್ದಕ್ಕೆ ಭಾರತ ಮೊಸಳೆ ಕಣೀರು ಸುರಿಸುತ್ತದೆ. ನಮ್ಮ ದೇಶಲ್ಲಿ ಹೀಗಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ ನಮ್ಮಲ್ಲೂ ಇದೆ ರೀತಿಯಲ್ಲೇ ಬಂಡಾಯ ಸಾಹಿತಿಗಳನ್ನು, ಬರಹಗಾರರನ್ನು ಹಾಗು ವಿಚಾರವಾದಿಗಳನ್ನು ಕೆಲವರು ಹೆದರಿಸುತ್ತಿದ್ದಾರೆ, ಹಲವರ  ಪ್ರಾಣವನ್ನು ಕೂಡ ನಮ್ಮ ಸಮಾಜದ ಕೆಲವು ಸಂಘಟನೆಗಳು ತೆಗೆದುಕೊಂಡಿವೆ. ಇಂಥಹ ಸಂಘಟನೆಗಳನ್ನು ಅನೇಕರು ಬೆಂಬಲಿಸುತ್ತಾರೆ.


              ಈ ರೀತಿಯಾದರೆ ಭಾರತಕ್ಕೂ, ಬಾಂಗ್ಲಕ್ಕೂ ಇರುವ ವ್ಯತ್ಯಾಸವೇನು ?, ಬಸವಣ್ಣನವರ ಪೂರ್ವಕಾಲಕ್ಕೂ ಹಾಗು ಬಸವಣ್ಣನವರ ನಂತರದ ಕಾಲಕ್ಕೂ ಆಗಿರುವ ಬದಲಾವಣೆಯಾದರು ಏನು ?? ಒಟ್ಟಾರೆ ಹೇಳುವುದಾದರೆ, ಕೇವಲ ನಂಬಿಕೆಯ ಮೇಲೆ , ಕಟ್ಟು ಕತೆಗಳ ಮೇಲೆ , ಸಾಂಪ್ರದಾಯಿಕ ಯೋಚನೆಗಳ ಮೇಲೆ ವಿಷಯವನ್ನು ನಂಬದೆ ಅದರ ಅರ್ಥ ಹಾಗು ಸತ್ಯದ ಮೇಲೆ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಲು, ನಮ್ಮನ್ನು ಸರಿ-ತಪ್ಪುಗಳ ತುಲನೆ ಮಾಡಲು ಈ ವಿಚಾರವಾದ ಪ್ರೇರೇಪಿಸುತ್ತದೆ.  ಆದರೆ ಈ ರೀತಿಯ ವಾದಗಳಿಗೆ , ಚರ್ಚೆಗಳಿಗೆ ಈ  ಪ್ರಾಣ ಹತ್ಯೆಯ ಘಟನೆಗಳು, ನಮ್ಮ ಸಮಾಜದ  ಮೇಲೆಯೇ ಹಲವಾರು ಅನುಮಾನವನ್ನು ಮೂಡಿಸುತ್ತವೆ.  ನಮ್ಮ ಸಮಾಜ ಇದನೆಲ್ಲ ವಿಚಾರ ಮಾಡುವಷ್ಟು ಪ್ರೌಡವಾಗಿದೆಯಾ?  ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ಬಂದು ನಿಲ್ಲುತ್ತದೆ.  


ನಿಮಗಾಗಿ 
ನಿರಂಜನ್ 

ಶನಿವಾರ, ಆಗಸ್ಟ್ 22, 2015

ಯಾರು ಹಿತವರು ನಿನಗೆ ಈ ಮೂವರೊಳಗೆ


                                          ಕಳ್ಳನೋ , ಸುಳ್ಳನೋ , ಮಳ್ಳನೋ ? 

ಸ್ನೇಹಿತರೆ , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಈ ಹಿಂದೆ ಬಂದಂತೆ ಮತ್ತೆ ಬಂತು, ಈ ದಿನ ಮುಗಿಯುತ್ತದೆ ಕೂಡ.  ನೀವು ಮತದಾನ ಮಾಡಿದ್ದೀರಿ, ಬದಲಾವಣೆಯನ್ನು ಸಹ ನಿರೀಕ್ಷಿಸುತ್ತಿದ್ದೀರಿ. ಅತಿಯಾದ ನಿರೀಕ್ಷೆಗಳನ್ನೂ ನೀವೇನಾದರು ಇಟ್ಟುಕೊಂಡಿದ್ದಾರೆ ಸ್ವಲ್ಪ ತಾಳಿ, ಈ ಚುನಾವಣೆಯ ಬಗ್ಗೆ ಹೇಳ್ತೀನಿ, ನಂತರ ನೀವೇ ತಿಳಿಸಿ ನಿಮ್ಮ ನಿರೀಕ್ಷೆಗಳ ಗತಿ ಏನಾಗುವುದು ಎಂದು.

          ಈಗಿನ ಚುನಾವಣೆಗಳು ಬಂದರೆ ಈ ರಾಜಕೀಯ ಪಕ್ಷಗಳಿಗೆ ಗೆಲ್ಲುವುದು ಒಂದೇ ಗುರಿಯಾದರೆ , ರಾಜಕೀಯ ಪುಡಾರಿಗಳಿಗೆ ಪಕ್ಷಗಳಿಂದ ಸಿಗುವ ಹಣ ಮಾತ್ರವೇ ಮುಖ್ಯ. ಚುನಾವಣೆಯಲ್ಲಿ ಪಕ್ಷಗಳ ಟಿಕೇಟ್ ಸಿಗಬೇಕೆಂದರೆ ಅಭ್ಯರ್ಥಿಯ ಪ್ರಾಮಾಣಿಕತೆ, ವಿದ್ಯಾಭ್ಯಾಸ , ಅವನ ಬುದ್ದಿವಂತಿಕೆ ಯಾವತ್ತು ಮಾನದಂಡ ಆಗುವುದಿಲ್ಲ. ಟಿಕೆಟ್ ಅಕಾಂಕ್ಷಿ  ಎಷ್ಟು ದುಡ್ಡು ಮಾಡಿದ್ದಾನೆ, ಅವನ ಹಿಂದೆ ಎಷ್ಟು ರೌಡಿಗಳಿದ್ದಾರೆ , ಪಕ್ಷಕ್ಕೆ ಅವನು ಎಷ್ಟು ದುಡ್ಡು ಕೊಡುತ್ತಾನೆ ಎಂಬುದು ಮಾತ್ರ ಪಕ್ಷಗಳಿಗೆ ಮುಖ್ಯ. ಅಂತವರಿಗೆ ಮಾತ್ರ ಪಕ್ಷದ ಟಿಕೇಟ್ ಖಚಿತ.    

         ರಾಜಕೀಯ ಪಕ್ಷಗಳಿಗೆ ಕಳ್ಳರುಗಳನ್ನು , ತಲೆಮರೆಸಿಕೊಂಡಿದ್ದ ರೌಡಿಗಳನ್ನು , ಪೊಲೀಸರಿಗೆ ಎಂದೂ ಸಿಗದ ಅಪರಾದಿಗಳನ್ನು ಸಮಾಜಸೇವಕರ ಹೆಸರಲ್ಲಿ ಸಮಾಜದ ಮುಖ್ಯವಾಹಿನಿಗೆ ತರಲು ಈ ಚುನಾವಣೆಗಳು ವೇದಿಕೆ ಆಗುತ್ತಿವೆ. ಪಕ್ಷಗಳು  ಅಭ್ಯರ್ಥಿಗಳಿಗೆ ಟಿಕೆಟ್ಟು ನೀಡುವ ನೆಪದಲ್ಲಿ ಕೋಟಿ ಕೋಟಿ ಹಣ ಮಾಡುತ್ತವೆ. ಅಭ್ಯರ್ಥಿಗಳು ಕೋಟಿ-ಕೋಟಿ ಹಣ, ಬ್ಯಾರಲ್ಲುಗಟ್ಟಲೆ ಹೆಂಡ ಹಂಚಿ ಮತದಾರನಿಂದ ಮತಗಳನ್ನು ಖರೀದಿಸುತ್ತಾರೆ. ತಲೆಮರಿಸಿಕೊಂಡಿದ್ದ ಕಳ್ಳ, ಸುಳ್ಳ, ಪಾತಕಿಗಳು ಚುನಾವಣೆಯಲ್ಲಿ ಜನ ನಾಯಕರಾಗಿ ಹೊರಹೊಮ್ಮುತ್ತಾರೆ. ಇಂಥವರಿಗೆ ಜನಪ್ರಿಯ ಪಕ್ಷಗಳ ಆಶಿರ್ವಾದ ಸಿಗುವುದರ ಜೊತೆಗೆ ತಮ್ಮ ಅಕ್ರಮ ಚಟುವಟಿಕೆಗಳಿಗೆ ಅಧಿಕಾರದ ಒಂದು ಭರ್ಜರಿ ಕವಚವೂ ಕೂಡ ಸಿಗುತ್ತದೆ. ಇದಕ್ಕಾಗಿಯೇ ಟಿಕೆಟ್ ಅಕಾಂಷಿಗಳು ಟಿಕೇಟಿಗಾಗಿ ಏನು ಮಾಡಲು ಸಿದ್ದರಿರುತ್ತಾರೆ.

           ಇಂಥ ಕಳ್ಳರು ಕೊನೆಗೆ ಟಿಕೆಟ್ಟು ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ನಿಲ್ಲುತ್ತಾರೆ. ಇರುವ ಪಕ್ಷಗಳೆಲ್ಲ ಇಂತವರನ್ನೇ ಚುನಾವಣೆಗೆ ನಿಲ್ಲಿಸುತ್ತವೆ. ಮೂರು ಮುಖ್ಯ ಪಕ್ಷಗಳಿದ್ದರೆ  ಚುನಾವಣೆಯ ಕಣದಲ್ಲಿ ಮೂರು ಜನ ಸಮರ್ಥ ರೌಡಿಗಳೋ , ಭ್ರಷ್ಟಚಾರಿಗಳೋ ಕಣದಲ್ಲಿ ಇದ್ದೆ ಇರುತ್ತಾರೆ. ಇಂತವರಲ್ಲಿ ನಾವು ಒಬ್ಬರಿಗೆ ವೋಟು ನೀಡುತ್ತೇವೆ , ಸಮರ್ಥರಿಲ್ಲದ ಕಾರಣ ಇಂತವರಿಗೆ ವೋಟು ನೀಡುವುದು ಅನಿವಾರ್ಯ ಕೂಡ . ಇಂಥಹ ಸನ್ನಿವೇಶದಲ್ಲಿ ಕೆಲವು ಬುದ್ದಿವಂತ ಮತದಾರರು ಚುನಾವಣ ಕಣದಲ್ಲಿರುವ ಮೂವರಲ್ಲಿ ಸ್ವಲ್ಪ ಕಡಿಮೆ ಕಳ್ಳನೋ, ಸ್ವಲ್ಪ  ಭ್ರಷ್ಟಚಾರಿಗೋ ವೋಟು ಹಾಕಿದರೆ, ಸಾಮಾನ್ಯ ಜನರು ಪಕ್ಷಗಳನ್ನು ನೋಡಿಯೋ, ಅಭ್ಯರ್ಥಿಗಳ ಆಮಿಶಗಳಿಗೆ ಬಲಿಯಾಗಿಯೋ, ಜಾತಿಯಾದಾರದ ಮೇಲೋ ವೋಟು ಹಾಕುತ್ತಾರೆ. ಅಂತು ಇಂತು ಕೊನೆಗೆ ಗೆಲ್ಲುವುದು ಒಬ್ಬ ಕಳ್ಳನೇ. ಇಂಥವರಿಂದ ನಾವೇನು ನಿರೀಕ್ಷಿಸಲು ಸಾದ್ಯ ??.  ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿ ಕೋಟಿಗಟ್ಟಲೆ ಹಣ ಖರ್ಚು ಮಾಡಿರುತ್ತಾನೆ, ಗೆದ್ದಮೇಲೆ ಅವನು ಆ ಹಣವನ್ನು ವಾಪಾಸು ಪಡೆಯಲು ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಾನೆ.  ಇಂಥಹ ಭ್ರಷ್ಟರಿಗೆ ನಮ್ಮ ಇಡೀ ವ್ಯವಸ್ತೆಯೇ ಜನರ ಹಣ ಕದಿಯಲು ಇಂಬು ನೀಡುತ್ತದೆ. ಈ ಪ್ರಕ್ರಿಯೇ ನಮ್ಮ ಸಮಾಜದ ಅಥವಾ ವ್ಯವಸ್ತೆಯ ಒಂದು  ಭಾಗವಾಗಿಯೆ ಹೋಗಿದೆ. 

        ಇಂಥಹ ವ್ಯವಸ್ತೆಯನ್ನು ನಮ್ಮ ಸಮಾಜವೇ ಒಂದು ರೀತಿಯಲ್ಲಿ ಒಪ್ಪಿಕೊಂಡಿದೆ. ಕೆಲವರು ಇದನ್ನು ವಿರೋದಿಸುತ್ತಾರೆ, ಮತ್ತೆ ಕೆಲವರು ಇದರ ವಿರುದ್ದ ಹೋರಾಟವನ್ನು ಕೂಡ ಮಾಡುತ್ತಾರೆ, ಇನ್ನು ಕೆಲವರು ಈ ಹಾಳು ವ್ಯವಸ್ತೆಯಿಂದ ದೂರವೇ ಉಳಿಯುತ್ತಾರೆ. ಕೆಟ್ಟ ವ್ಯವಸ್ತೆಯ ವಿರುದ್ದ ಹೋರಾಡುವವರಿಗೆ ನಾವು ಕೂಡ ಬೆಂಬಲ ನೀಡುವುದಿಲ್ಲ, ಕೆಲವೊಮ್ಮ ಅವರನ್ನು ನೋಡಿ ನಗುತ್ತೇವೆ. ಮಾದ್ಯಮಗಳು ಮತ್ತು ಜನರು ಕೆಟ್ಟ ವ್ಯವಸ್ತೆಯ ವಿರ್ರುದ್ದ ಹೊರಡುವವರಿಗೆ ಬೆಂಬಲ ನೀಡುವತನಕ, ಬುದ್ದಿವಂತರು, ಪ್ರಾಮಾಣಿಕರು ಚುನಾವಣೆಯಲ್ಲಿ ಭಾಗವಹಿಸುವ ತನಕ ಈ ಕೆಟ್ಟ ವ್ಯವಸ್ತೆ ಕೆಟ್ಟದ್ದಾಗಿಯೇ ಉಳಿಯುತ್ತದೆ. 

          ಇಂಥಹ ವಾತಾವರಣದಲ್ಲೂ ಕೂಡ ಇತ್ತೀಚಿಗೆ ಬೆರೆಳೆಣಿಕೆಯೊಷ್ಟು  ಸಮರ್ಥ ಸಾಮಾಜಿಕ ಕಾರ್ಯಕರ್ತರು , ಬುದ್ದಿವಂತರು, ವಿದ್ಯಾವಂತರು ರಾಜಕೀಯಕ್ಕೆ ಬಂದು ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಬಹು ಆಶಾದಾಯಕ ಬೆಳವಣಿಗೆ. ಇಂತವರನ್ನು ನಾವು ಗುರುತಿಸಿ, ಅಂತವರಿಗೆ ನಮ್ಮ ಅಮೂಲ್ಯ ವೋಟು ಹಾಕಿದರೆ ಮಾತ್ರ ರಾಜಕೀಯ ದುಷ್ಟಶಕ್ತಿಗಳನ್ನು ರಾಜಕೀಯದಿಂದ ನಾವು ದೂರವಿಡಲು ಸಾದ್ಯವಾಗದಿದ್ದರು ಸಹ,  ಅಧಿಕಾರದಿಂದ ದೂರವಿಡಬಹುದು. ಇಲ್ಲದಿದ್ದರೆ  ನಾವೆನಾದರು "ಯಾರು ಹಿತವರು ನಿಮಗೆ ಈ ಮೂವರೊಳಗೆ , ಕಳ್ಳನೋ , ಸುಳ್ಳನೋ, ಮಳ್ಳನೋ" ಎಂದು ಕೇಳಿದರೆ "ಕಡಿಮೆ ಕಳ್ಳ"  "ಸ್ವಲ್ಪ ಸುಳ್ಳ-ಮಳ್ಳ" ಎಂದು ಆಯ್ಕೆ ಮಾಡಿದರೆ, ನಮ್ಮ ನಿರೀಕ್ಷೆಗಳ  ಗತಿ ಏನಾಗಬಹುದೆಂದು  ನೀವೇ ಯೋಚಿಸಿ.
      


ನಿಮಗಾಗಿ 
ನಿರಂಜನ್

ಬುಧವಾರ, ಆಗಸ್ಟ್ 19, 2015

ರಾಮ ಮತ್ತು ಕೃಷ್ಣ ....


                                            
                                                                  ಶಾಶ್ವತ ಪ್ರೇಮ ....  

ರಾಮ ಮತ್ತು ಕೃಷ್ಣ  ಭಾಲ್ಯದಿಂದಲೂ ಸ್ನೇಹಿತರು.  ತುಂಬಾ  ಆತ್ಮೀಯರು.  ಅವರೆಷ್ಟು ಅತ್ಮೀಯರೆಂದರೆ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಕೂಡ ಇರುತ್ತಿರಲಿಲ್ಲ.  ಅದೆಷ್ಟೋ ಬಾರಿ ಸಣ್ಣ  ಪುಟ್ಟ ಜಗಳಗಳನ್ನು ಆಡಿದರೂ ಸಹ ಆ ಜಗಳಗಳು  ಕೇವಲ ಆ ಕ್ಷಣಗಳಿಗೆ  ಮಾತ್ರ ಸೀಮಿತವಾಗಿರುತ್ತಿದ್ದವು.

              ಈ ರೀತಿ ಇದ್ದ ರಾಮ ಹಾಗು ಕೃಷ್ಣರು  ದೊಡ್ಡವರಾದ ಮೇಲೆ ಉದ್ಯೋಗವನ್ನರಸಿ ತಮ್ಮ ಹುಟ್ಟೂರು ಬಿಟ್ಟು ಹೊರಟರು.  ಕೆಲಸವನ್ನು ಹುಡುಕುತ್ತ ಊರೂರು ಅಲೆದರು. ಇಬ್ಬರಿಗೂ ಒಟ್ಟಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಆದರೆ ಅವರ ಹುಡುಕಾಟ ಮಾತ್ರ ನಿಲ್ಲಲಿಲ್ಲ. ಸುತ್ತಲಿನ ಊರುಗಳು , ಪೇಟೆಗಳು, ಸುಮುದ್ರ ಬಂದರುಗಳು ಹಾಗು ಕಾಡುಗಳನ್ನು ಸುತ್ತಿದರು ಎಲ್ಲೂ ಕೆಲಸ ಸಿಗಲಿಲ್ಲ.  ಯಾರೋ ಹೇಳಿದ ಮಾತು ಕೇಳಿ ಅಲ್ಲಿರುವ ದೂರದ ಮರುಭೂಮಿಯನ್ನು  ದಾಟಿದರೆ, ಆಚೆ ಇರುವ  ಮತ್ತೊಂದು ಊರಿನಲ್ಲಿ ಕೆಲಸ ಸಿಗಬಹುದೆಂದು ನಂಬಿ , ಆ  ಮರುಭೂಮಿಯನ್ನು ದಾಟಲು ನಿರ್ಧರಿಸಿದರು.

              ಪ್ರಯಾಣ ಶುರುವಾಯಿತು, ಮರುಭೂಮಿಯನ್ನು ಅವರು ಕಾಲು ನಡಿಗೆಯಲ್ಲೇ ದಾಟಬೇಕಿತ್ತು. ನಡೆಯಲು ಭಾರ ಆಗದಿರಲಿ ಎಂದು ಸ್ವಲ್ಪ ಆಹಾರ ಹಾಗು ಒಂದು ಸಣ್ಣ  ಬಾಟಲಿಯಲ್ಲಿ ನೀರನ್ನು ತುಂಬಿಕೊಂಡಿದ್ದರು.  ಒಂದು ಪೂರ್ಣ ದಿನದ ಪ್ರಯಾಣದ ನಂತರ ಹಸಿವೆಯಾಯಿತು, ರಾಮನು ಕೃಷ್ಣನಿಗೆ ಚೀಲದಲಿದ್ದ ಆಹಾರದಲ್ಲಿ ಅರ್ಧ ಮಾತ್ರ ತಿನ್ನಲು ಹೇಳಿದನು.  ಅದೇ ರೀತಿ ಕೇವಲ ಅರ್ಧ ಆಹಾರವನ್ನು ಇಬ್ಬರು ಹಂಚಿಕೊಂಡು ತಿಂದರು.  ಮರುದಿನ ಇನ್ನರ್ಧ ಆಹಾರವನ್ನು ತಿಂದು ಮುಗಿಸಿದರು.ಅಷ್ಟೊತ್ತಿಗೆ ತಾವು ತಂದಿದ್ದ ನೀರು ಕೂಡ ಸ್ವಲ್ಪವೆ ಉಳಿದಿತ್ತು. ಮರುಭೂಮಿಯಲ್ಲಿ ಇನ್ನು ಎಲ್ಲೂ ಓಯಸಿಸ್ ಕಾಣುತ್ತಿಲ್ಲ. ಬಿಸಿಲಿನ ಬೇಗೆಯಿಂದ ಕೃಷ್ಣನಿಗೆ ತುಂಬಾ ಭಾಯಾರಿಕೆಯಾಗಿ ಬಳಲಿದ್ದ. ರಾಮನು ಕೃಷ್ಣನಿಗೆ" ಕೃಷ್ಣ ಉಳಿದಿರುವ ನೀರಿನಲ್ಲಿ ಅರ್ದವನ್ನು ಮಾತ್ರ ಕುಡಿ,ನೀರು ನಮಗೆ ಮುಂದೆ ಬೇಕಾಗುತ್ತದೆ ,  ನಮಗೆ ಮತ್ತೆಲ್ಲಿ ನೀರು ಸಿಗುತ್ತೋ ಗೊತ್ತಿಲ್ಲ" ಎಂದನು. ಆದರೆ ಭಾಯರಿಕೆಯಿಂದ ಕಂಗೆಟ್ಟಿದ್ದ ಕೃಷ್ಣ "ಇಲ್ಲ ನಾನು ಎಲ್ಲವನ್ನು ಕುಡಿಯುತ್ತೇನೆ , ಇಲ್ಲದಿದ್ದರೆ ನಾನು ಇಲ್ಲೇ ಸತ್ತೆ ಹೋಗುತ್ತೇನೆ " ಎಂದು ಕೋಪಗೊಂಡು ಹೇಳಿದ. ಅದಕ್ಕೆ ರಾಮ" ನೋಡು ಕೃಷ್ಣ ನಮ್ಮ ಮುಂದಿನ ಪ್ರಯಾಣಕ್ಕೆ ನೀರು ಮುಖ್ಯ, ಅಹಾರವಂತೂ ಖಾಲಿಯಾಗಿದೆ, ಓಯಸಿಸ್ ಸಿಗುವ ತನಕ  ನಮ್ಮಲ್ಲಿರುವ  ನೀರನ್ನೇ  ನಾವು ಸ್ವಲ್ಪ ಸ್ವಲ್ಪವೇ ಕುಡಿದು ಜೀವ ಉಳಿಸಿಕೊಳ್ಳಬೇಕು" ಎಂದನು. ಆದರೆ ಕೃಷ್ಣ ಇದನ್ನೆಲ್ಲಾ ಕೇಳದೆ ಎಲ್ಲ ನೀರನ್ನು ಕುಡಿಯಲು ಹೋದಾಗ , ರಾಮನಿಗೂ ಕೋಪ ಬಂದು ಇಬ್ಬರು ಜಗಳವಾಡಿದರು, ಆ ಜಗಳದಲ್ಲಿ ರಾಮನು ಕೃಷ್ಣನ ಕಪಾಳಕ್ಕೆ ಹೊಡೆದನು. ಕೃಷ್ಣನಿಗೆ ರಾಮನ ಮೇಲೆ ಎಲ್ಲಿಲ್ಲದ ಸಿಟ್ಟು ಬಂದಿತು. ಕೋಪಗೊಂಡು ಸುಮ್ಮನೆ ಕುಳಿತುಕೊಂಡ. ತನ್ನ ಮುಂದೆಯೇ ಇದ್ದ ಒಂದು ಸಣ್ಣ ಕಲ್ಲನ್ನು ತೆಗೆದುಕೊಂಡು ಮರಳಿನ ಮೇಲೆ " ನನ್ನ ಪ್ರಾಣ ಸ್ನೇಹಿತ ರಾಮ ನನ್ನ ಕಪಾಳಕ್ಕೆ ಹೊಡೆದ" ಎಂದು ದೊಡ್ಡದಾಗಿ ಬರೆದ. ರಾಮನಿಗೆ ಅದನ್ನು ನೋಡಿ ಬೇಜಾರು ಆಯಿತು ಆದರೂ ಸಹಿಸಿಕೊಂಡ.
 
                  ಕೆಲ ಸಮಯದ ನಂತರ ಪ್ರಯಾಣವನ್ನು ಮತ್ತೆ ಮುಂದುವರೆಸಿದರು , ಸ್ವಲ್ಪ ದೂರದಲ್ಲೇ ಒಂದು ಮರಳುಗಾಡಿನ ಓಯಸಿಸ್  ಕಾಣಿಸಿತು. ಗಿಡ-ಮರಗಳು, ಅವುಗಳ ನೆರಳು, ಕುಡಿಯಲು ಸಾಕೊಷ್ಟು ನೀರು ಅವರಿಗೆ ಹೋದ ಜೀವ ಮತ್ತೆ ಬಂದ  ಹಾಗೆ ಆಯಿತು. ಹೊಟ್ಟೆ ತುಂಬುವಷ್ಟು ನೀರು ಕುಡಿದರು, ನೆರಳಲ್ಲಿ ವಿಶ್ರಾಂತಿ ಪಡೆದರು. ನಂತರ ದಣಿದಿದ್ದ ದೇಹಗಳನ್ನು ತಂಪಾಗಿಸಲು ಅಲ್ಲೇ ಇದ್ದ ಒಂದು ಕೊಳದಲ್ಲಿ ಈಜಲು ಶುರು ಮಾಡಿದರು. ಆ ಕೊಳ ಸಣ್ಣದಿದ್ದರೂ ಆಳವಾಗಿತ್ತು. ಕೃಷ್ಣ ಏನನ್ನು ಲೆಕ್ಕಿಸದೆ ನೀರಿಗೆ ದುಮುಕಿದಾಗ, ಅದರ ಪಾತಾಳ ಸೇರಿದ, ಹೇಗೋ ಕಷ್ಟಪಟ್ಟು ಮೇಲೆ ಬಂದ. ಆದರೆ ದಡಕ್ಕೆ ಬರಲು ಕೃಷ್ಣನಿಗೆ ಸಾದ್ಯವಾಗಲಿಲ್ಲ. ಪ್ರಯಾಣದಲ್ಲಿ ದಣಿದಿದ್ದ ಕೈಕಾಲುಗಳು ಅವನಿಗೆ ಸಹಕರಿಸಲೇ ಇಲ್ಲ. ಜೋರಾಗಿ " ಕಾಪಾಡಿ , ಕಾಪಾಡಿ " ಎಂದು ಕೂಗಿಕೊಂಡ. ಪ್ರಾಣ ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ರಾಮ ನೀರಿಗೆ ದುಮುಕಿ ಕೃಷ್ಣನನ್ನು ಕಾಪಾಡಿ ದಡಕ್ಕೆ ಎಳೆದುಕೊಂಡು ಬಂದ. ತಾನು ಸತ್ತೆ ಹೋದೆ ಅಂತ ಅಂದುಕೊಂಡಿದ್ದ ಕೃಷ್ಣನ ಜೀವವನ್ನು ರಾಮ ಉಳಿಸಿದ್ದ. ರಾಮನನ್ನು ಆಲಂಗಿಸಿದ ಕೃಷ್ಣ " ರಾಮ ನೀ ನನ್ನ ಜೀವ ಉಳಿಸಿದೆ, ನೀ ನನ್ನ ನಿಜವಾದ ಪ್ರಾಣ ಸ್ನೇಹಿತ" ಎಂದನು.

                  ಆ ಕ್ಷಣದಲ್ಲೇ ಅಲ್ಲಿ ಇದ್ದ ಒಂದು  ಬಂಡೆಗಲ್ಲಿನ ಮೇಲೆ "ನನ್ನ ಪ್ರಾಣ ಸ್ನೇಹಿತ ರಾಮ ನನ್ನ ಜೀವ ಉಳಿಸಿದ" ಎಂದು ಕೃಷ್ಣ ಮತ್ತೆ ಕೆತ್ತಿದ್ದ. ಇದನ್ನು ನೋಡಿ ಆಶ್ಚರ್ಯ ಚಕಿತನಾದ ರಾಮನು ಕೃಷ್ಣನಿಗೆ ಕೇಳಿದ " ಕೃಷ್ಣ ಅಲ್ಲಿ ಮರಳಿನ ಮೇಲೆ ನನ್ನ ಸ್ನೇಹಿತ ನನ್ನನ್ನು  ಹೊಡೆದ ಅಂತ ಬರೆದೆ,  ಈಗ  ಬಂಡೆಗಲ್ಲಿನ ಮೇಲೆ ನನ್ನ ಸ್ನೇಹಿತ ನನ್ನ ಜೀವ ಉಳಿಸಿದ ಅಂತ ಬರೆದೆ, ಏಕೆ ಹೀಗೆ ಮಾಡಿದೆ ?" ಎಂದಾಗ , ಕೃಷ್ಣನು ಹೇಳುತ್ತಾನೆ " ನೋಡು ರಾಮ " ನೀ ನನ್ನ ಪ್ರಾಣ ಸ್ನೇಹಿತ, ನೀನು ನನ್ನ ಕಪಾಳಕ್ಕೆ ಹೊಡೆದಾಗ ಆ ಕ್ಷಣಕ್ಕೆ ನಾನು ಕೋಪಗೊಂಡು ಹಾಗೆ ಬರೆದಿದ್ದು ನಿಜ, ಅದು ಕೇವಲ ಕ್ಷಣಿಕ , ಬೇಕಾದರೆ ಈಗ ಹೋಗಿ ನೋಡು ಮರಳಿನ ಮೇಲೆ ಬರೆದದ್ದು ಗಾಳಿಯಿಂದ ಅಳಿಸಿ ಹೋಗಿರುತ್ತೆ. ನನ್ನ ಕೋಪ ಯಾವಗಲು ಕ್ಷಣಿಕ. ಈಗ ನಿಜವಾಗಿಯೂ ನಿನ್ನ ಮೇಲೆ ಪ್ರೀತಿಯಿಂದ ಬಂಡೆಗಲ್ಲಿನ ಮೇಲೆ ನಿನ್ನ ಒಳ್ಳೆಯತನದ ಬಗ್ಗೆ ಬರೆದಿರುವೆ ಇದು ಶಾಶ್ವತ, ಸದಾ ನೆನಪಿನಲ್ಲಿ ಇರುತ್ತದೆ, ಒಳ್ಳೆಯದನ್ನು ಮಾತ್ರ ನಾ ನೆನಪಿನಲ್ಲಿ ಇಟ್ಟುಕೊಳ್ಳು ಬಯಸುತ್ತೇನೆ" ಎಂದನು.

ಸ್ನೇಹಿತರೆ ನಾವು ಕೂಡ ಯಾವಾಗಲೂ ಇನ್ನೊಬ್ಬರ ಒಳ್ಳೆಯ ಗುಣಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ನೋಡಿಯೂ ನೋಡದಿರಬೇಕು , ಒಂದು ವೇಳೆ ನೋಡಿದರೂ ಸಹ ಮರೆಯಬೇಕು. 


ನಿಮಗಾಗಿ
ನಿರಂಜನ್