ಸೋಮವಾರ, ಜುಲೈ 23, 2012

ಹಣ್ಣು, ಹಾಲು ಮತ್ತು ದೇವರು ......


                                                      ಹಣ್ಣು, ಹಾಲು ಮತ್ತು ದೇವರು ......

ಮ್ಮ ಮನೆಯ ಸೋಫಾ ಮೇಲೆ ಕುಳಿತುಕೊಂಡು,ಕಿಟಕಿಯ ಮೂಲಕ ಕಣ್ಣಾಯಿಸಿದರೆ ದೂರದಲ್ಲಿ ಕಾಣುವುದೊಂದು ಎತ್ತರದ ದೇವಸ್ತಾನದ ಗೋಪುರ. ಮಳೆಗಾಲದಲ್ಲೋಂತೂ  ಹಚ್ಚ ಹಸಿರಿನ ನಡುವೆ ಎದ್ದು ಕಾಣುವ ಆ ಎತ್ತರದ ದೇವಸ್ತಾನದ ಗೋಪುರ, ನನ್ನನ್ನು ಸದಾ ತನ್ನತ್ತ  ಸೆಳೆಯುತ್ತದೆ. ದೇವಸ್ತಾನವೂ ಹಾಗೆಯೇ ಇದೆ, ವಿಶಾಲವಾದ ಜಾಗದಲ್ಲಿ, ಒಳ್ಳೆಯ ವಾತಾವರಣದಲ್ಲಿ, ಸುಸಜ್ಜಿತವಾಗಿಯೇ ಇದೆ. ಅಂತಹ ದೇವಾಲಯದಲ್ಲಿ ನೆಲಸಿಹ ಮುಖ್ಯ ದೇವರು ತಾಯಿ ದುರ್ಗಪರಮೇಶ್ವರಿ. ದೇವರ ವಿಗ್ರಹವು ಅದ್ಭುತವಾಗಿದೆ. ಅನೇಕ ಭಕ್ತರೂ ಬರುತ್ತಾರೆ. ಪ್ರತಿನಿತ್ಯ ಎಡೆಬಿಡದೆ ಪೂಜೆ ಪುನಸ್ಕಾರಗಳು ನಿರಂತರವಾಗಿ ಅನೇಕ ದಿನಗಳಿಂದಲೂ ನಡೆದು ಬರುತ್ತಿವೆ. ಒಟ್ಟಿನಲ್ಲಿ ದೇವಸ್ತಾನದ ಒಳಗೆ ಹೋದರೆ ನಮಗೆ ಬರೀ  ಪರಮೇಶ್ವರಿಯ ಮಾತ್ರ ಕಾಣಸಿಗುವುದಿಲ್ಲ ಜೊತೆಗೆ ನಮ್ಮ ಎಲ್ಲಾ  ಇಷ್ಟ ದೇವರುಗಳು ಅಂದರೆ  ಗಣೇಶ,ವೆಂಕಟೇಶ,ಶಣೇಶ,ಆಂಜನೇಯ,ನವಗ್ರಹಗಳು, ಅನೇಕ ಹೆಣ್ಣು ದೇವರುಗಳು, ಜೊತೆಗೆ ನಾನು ನೋಡಿರದ, ಕೇಳಿರದ ಅನೇಕ ದೇವರುಗಳು ಕೂಡ ಅಲ್ಲಿ ವೀರಾಜಿಸುತ್ತಿವೆ. ಒಟ್ಟಿನಲ್ಲಿ ಎಂತವರಿಗೂ ಒಂದಲ್ಲ ಒಂದು ದೇವರ ಮೇಲೆ ಭಕ್ತಿ ಬಂದೆ ಬರುತ್ತೆ, ಆದ್ದರಿಂದ ಅಲ್ಲಿ ಯಾರು ಬೇಕಾದರೂ ಅಲ್ಲಿಗೆ ಬರಬಹುದು , ಬಂದರಂತೂ ಅಲ್ಲಿ ಅವರ  ಇಷ್ಟ ದೇವತೆ ಸಿಕ್ಕೇ ಸಿಗುತ್ತೆ.


             ಇಂತಹ ದೇವಾಲಯವೆಂದರೆ ಕೇಳಬೇಕೇ, ಪೇಟೆಗಳಲ್ಲೇನು ಭಕ್ತ ಮಹಾಶಯರಿಗೆನು ಭರವೇ ?? ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಅನೇಕ ಧಾನಿಗಳೂ ಇದ್ದಾರೆ. ಅನೇಕ ಕೊಡುಗೈ  ಭಕ್ತರು ತಮ್ಮ ತನು-ಮನ-ಧನವನ್ನೆಲ್ಲ ಈ ದೇವಸ್ತಾನಕ್ಕೆ , ಅಲ್ಲಿರುವ ದೇವರಿಗೆ  ಸಮರ್ಪಿಸಿದ್ದಾರೆ. ಅವಕ್ಕೆಲ್ಲ ಸಾಕ್ಷಿಯಾಗಿ ಆ ದೇವರುಗಳೆಲ್ಲ ತುಂಬಾ ಅಚ್ಚು ಕಟ್ಟಾಗಿ ಅಲಂಕೃತವಾಗಿ ನಿಂತಿವೆ. ದೇವಲಾಯದ ಜೀರ್ಣೊದ್ದರಾದ ಸಮಯದಲ್ಲಿ ಆಗಿನ ಪ್ರಧಾನಿಗಳಾದ ನಮ್ಮ ಸಜ್ಜನ, ಹಿರಿಯ, ಮಣ್ಣಿನ ಮಗ ದೇವೇಗೌಡ್ರು ಕೂಡ ತುಂಬಾ ಶ್ರಮಿಸಿದ್ದರಂತೆ ! . ಆಗಿನ ಪ್ರಧಾನಿಗಳೆ ಈ ದೇವಾಲಯದ ಭಕ್ತರೆಂದರೆ ಯೋಚಿಸಿ ಆ ದೇವರು ಅದೆಷ್ಟು ಶಕ್ತಿಯುತವಾದುದೆಂದು. 

             ಅನೇಕ ಪೂಜೆಗಳು ನೆಡೆಯುವ ಇಂತಹ ದೇವಾಲಯದಲ್ಲಿ, ಕೆಲವು ವಿಶೇಷ ಪೂಜೆಗಳೂ ಕೂಡ ನೆಡೆಯುತ್ತವೆ. ಬರುವ  ಭಕ್ತರು  ಅಲ್ಲಿರುವ ಅನೇಕ ದೇವರುಗಳಲ್ಲಿ ತಾವು ನಂಬಿರುವ ದೇವರುಗಳಲ್ಲಿ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ, ಶಾಂತಿ ಸಮಾದಾನಕ್ಕಾಗಿ ಅನೇಕ ಪೂಜೆಗಳನ್ನೂ , ಶಾಂತಿ, ಹೋಮ-ಹವನಗಳನ್ನು ಮಾಡುತ್ತಾರೆ.ಈ ಪೂಜೆ ವಿದಿವಿದಾನಗಳನ್ನು ಮಾಡಲು ಅಲ್ಲಿ ಆಚಾರ್ಯವರ್ಯರ ದಂಡೆ ಇದೆ. ಪೂಜೆಯನ್ನ ಎಷ್ಟಾದರೂ ಮಾಡಲಿ ಅದು ಅವರವರ ನಂಬಿಕೆ ಮತ್ತು ಭಕ್ತಿ. ಆದರೆ ಅಲ್ಲಿ ವಿಚಿತ್ರ ರೀತಿಯ  ಕೆಲವು ಪೂಜೆಗಳು ಕೂಡ ನೆಡೆಯುತ್ತವೆ ಅದು ನನ್ನ ಮನಸ್ಸಿಗೆ ಯಾಕೋ ಅಷ್ಟೊಂದು ಇಷ್ಟವಾಗುವುದಿಲ್ಲ. ಅದು ಅವರ ಮೂಡ ನಂಬಿಕೆಯೋ , ಅಂದಶ್ರದ್ದೆಯೊ ನನಗೆ ಅರ್ಥವಾಗುತ್ತಿಲ್ಲ. ಅಲ್ಲಿಗೆ ಬರುವ ಭಕ್ತರೇನು ದಡ್ಡರಲ್ಲ, ಅನಕ್ಷರಸ್ಥರಲ್ಲ ಆದರೂ ಯಾಕೆ ಅವರು ಈ ರೀತಿಯಾಗಿ ವರ್ತಿಸುತಾರೋ ಗೊತ್ತಿಲ್ಲ. ಅದಕ್ಕೆ ಕಾರಣ ಅವರೋ , ಅವರ  ಕಷ್ಟ ಕಾರ್ಪಣ್ಯಗಳೋ, ಅತಿಯಾದ ಆಸೆಗಳೋ ಅಥವಾ ಅಲ್ಲಿರುವ ಪೂಜಾರಿಗಳ ಪ್ರೋತ್ಸಾಹವೋ ನನಗೆ ಗೊತ್ತಿಲ್ಲ.   ದೀಪಗಳೆಂದರೆ ಕತ್ತಲಲ್ಲಿ ಬೆಳಕು ನೀಡುವ .ಅಜ್ಞಾನದಿಂದ-ಜ್ಞಾನದೆಡೆಗೆ ಸಾಗುವ, ಕೆಟ್ಟದರಿಂದ - ಒಳ್ಳೆಯಕಡೆಗೆ ನಡೆಯುವುದರ  ಪ್ರತೀಕ. ಅದೇ ರೀತಿ ದೀಪಗಳಲ್ಲಿ ಅನೇಕ ಬಗೆಯ ದೀಪಗಳೂ  ಇವೆ, ಮಣ್ಣಿನ ದೀಪಗಳು, ಬೆಳ್ಳಿ, ಇತ್ತಾಳೆ, ಪಂಚಲೋಹದ ದೀಪಗಳು. ಎಲ್ಲವಕ್ಕೂ ಎಣ್ಣೆ ಹಾಕಲೇಬೇಕು. ಸಾಮಾನ್ಯರು ಹರಳೆ,ಸಾಸಿವೆ ಎಣ್ಣೆ ಹಾಕಿ ದೀಪ ಹಚ್ಚಿದರೆ, ಅನುಕೂಲಸ್ತರು ,ಶ್ರೀಮಂತರು ತುಪ್ಪದಲ್ಲಿ ದೀಪವನ್ನು ಹಚ್ಚುತ್ತಾರೆ. ಸ್ನೇಹಿತರೆ ನಾವು ಯಾವ ಲೋಹದ ದೀಪಕ್ಕೆ ಯಾವ ಎಣ್ಣೆ ಹಾಕಿ ದೀಪ ಹಚ್ಚಿದರು ಅದರಿಂದ ಬರುವ ಬೆಳಕು, ಅದರ ದೇದೀಪ್ಯಮಾನ ಮಾತ್ರ ಒಂದೇ ಆಗಿರುತ್ತೆ. ಆದರೆ ಇವೆಲ್ಲಕ್ಕೂ ಹೊರತಾಗಿ ಇಲ್ಲೊಂದು ವಿಚಿತ್ರ ಪದ್ದತಿಯಿದೆ. ಅದೇನೆಂದರೆ ದೊಡ್ಡ ದೊಡ್ಡ ನಿಂಬೆ ಹಣ್ಣುಗಳನ್ನು ಎರೆಡು  ಓಳಾಗಿ ವಿಭಜಿಸಿ, ಅದರಿಂದ ಅದರ ರಸ ಮತ್ತು ತಿರುಳು ತಗೆದು ಹಾಕಿ, ಅವುಗಳನ್ನು ಬಟ್ಟಲು ರೂಪಕ್ಕೆ ತಂದು ಅದರೊಳಗೆ ಎಣ್ಣೆಯೋ ತುಪ್ಪವೋ ಹಾಕಿ ದೀಪ ಹಚ್ಚಿ ದೇವರಿಗೆ ಮಂಗಳಾರತಿ ಮಾಡುತ್ತಾರೆ. ಕನಿಷ್ಟಪಕ್ಷ  ದಿನಕ್ಕೆ ೨೦೦ -೩೦೦ ಹಣ್ಣುಗಳು ಆ ರೀತಿಯಾಗಿ ದೀಪಗಳಾಗಿ ಪರಿವರ್ತಿತವಾಗುತ್ತವೆ. ವಿಶೇಷ ದಿನಗಳಲ್ಲಿ, ಹಬ್ಬಗಳಲ್ಲಿ, ಈ ಶ್ರಾವಣ- ಆಶಾಡಗಳಲ್ಲೋಂತು ಅದೆಷ್ಟು ನಿಂಬೆ ಹಣ್ಣುಗಳ ದೀಪಾರತಿಯಾಗುತ್ತೋ ಗೊತ್ತಿಲ್ಲ. ಸ್ನೇಹಿತರೆ ಪ್ರಕೃತಿಯಿಂದ ದೊರೆತ ಒಂದು ಹಣ್ಣನ್ನು ಅದನ್ನು ಸರಿಯಾಗಿ ಉಪಯೋಗಿಸದೇ , ಅದರ ರಸ-ತಿರುಳನ್ನು ತಿನ್ನದೇ, ಮಣ್ಣುಪಾಲು ಮಾಡಿ ದೀಪ ಹಚ್ಚಿ ಮಂಗಳಾರತಿ ಮಾಡುವುದರಲ್ಲಿ ಏನಾದರೂ ಅರ್ಥ ಇದೆಯಾ ??? ಇನ್ನು ಕೆಲವರು ನಿಂಬೆ ಹಣ್ಣಿನಲ್ಲೇ ಭಾರಿ  ಸರಗಳನ್ನು , ಕೆಲವರು 101, 2001... ಹೀಗೆ ಸಾವಿರದ ಒಂದು ಹಣ್ಣುಗಳಿಗೆ ದಾರ ಪೋಣಿಸಿ  ಸರಗಳನ್ನು ಮಾಡಿ  ದೇವರ ಕೊರಳಿಗೆ ಹಾಕಿ, ಶಾಂತರೂಪಿಯಾದ ತಾಯಿಗೆ ಉಗ್ರರೂಪ ನೀಡುತ್ತಾರೆ, ಉಗ್ರಾವರಾರದಲ್ಲಿ ದೇವರನ್ನು ನೋಡುವುದರಲ್ಲಿ ಅವರಿಗೇನು ಆನಂದ,ಮಜಾ ಸಿಗುತ್ತೋ ಆ ದೇವರಿಗೆ ಗೊತ್ತು. ನಿಂಬೆ ಹಣ್ಣಿನ ಸಹಜ ಉಪಯೋಗವನ್ನೇ ನಾವು ಮರೆತಿರುವುದು ಸರಿಯೇ.? ಭಕ್ತರು ಆರೋಗ್ಯಾವೃದ್ದಿಗಾಗಿ ಪ್ರಕೃತಿ ಕೊಟ್ಟ ಒಂದು ಹಣ್ಣನ್ನು ಈ ರೀತಿ ಉಪಯೋಗಿಸುವುದು ಸರಿಯೇ ??? . ಬಾಳೆ, ತೆಂಗನ್ನು ನಾವು ಉಪಯೋಗಿಸಿದರು ಅವುಗಳನ್ನು ನಾವು ಪೂಜೆಯ ನಂತರ ಉಪಯೋಗಿಸುತ್ತೇವೆ. ನಮ್ಮ ಹಿರಿಯರು ಪೂಜೆಯ ನಂತರ ಅವುಗಳ ಬಳಕೆ ಸಮರ್ಪಕವಾಗಿಯೇ ಮಾಡುತ್ತಿದ್ದರು. ಈ ನಿಂಬೆ ಹಣ್ಣಿನ ಈ ರೀತಿಯ ಬಳಕೆಯನ್ನು ನಾನು ನೋಡಿದ್ದೇ ಇದೆ ಮೊದಲು ಮತ್ತು ಇತ್ತೀಚೆಗೆ.



                ಅದೇ ರೀತಿ ಇಲ್ಲಿ ಅನೇಕ ನಾಗರ ಕಲ್ಲುಗಳಿವೆ, ಅಲ್ಲಿ ಅವುಗಳಿಗೆ ನಿತ್ಯವೂ ಹಾಲು ಎರೆಯುತ್ತಾರೆ. ನಿಜವಾಗಿಯೂ ನನಗೆ ಅದು ಮೂಡನಂಬಿಕೆಯ ಪರಮಾವದಿ ಎಂದೆನಿಸುತ್ತದೆ. ದಿನವೂ ಅದೆಷ್ಟು ಲೀಟರ್ ಹಾಲು ದುರ್ಬಳಕೆ ಆಗುತ್ತೋ ?? ಗೊತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ದೇವಸ್ತಾನ ಮಂಡಳಿಯವರು ಹಾಕಿದ ಹಾಲು ಹರಿದು ಹೋಗಲು ಕಾಲುವೆಯನ್ನೇ ಮಾಡಿದ್ದಾರೆ. ಆ ಕಾಲುವೆಯಲ್ಲಿ ಹರಿದ ಹಾಲು ನೀರ ಚರಂಡಿಯನ್ನು ಸೇರುತ್ತದೆ. ನೀರೆ ಸಿಗದ ಈಕಾಲದಲ್ಲಿ ಹಾಲನ್ನು ಈ ರೀತಿ ವ್ಯಯ ಮಾಡುವುದು ಅದೆಷ್ಟು ಸರಿ ?? . ಮೊನ್ನೆ ಅದೇ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಒಂದು ವಿಶೇಷ ಸೂಚನೆಯನ್ನು ಭಕ್ತರಿಗೆ ನೀಡಿದ್ದರು. ಏನೋ ಆಗಸ್ಟ್ ತಿಂಗಳಲ್ಲಿ ಅದೇನೋ ವಿಶೇಷ ಮೂರು ಸಾವಿರ  ಲೀಟರ್/ಕುಂಬ  ಕ್ಷೀರಾಭಿಷೇಕವಂತೆ, ಅಂದರೆ 3000 ಲೀಟರ್ ಹಾಲಿನ ಅಭಿಷೇಕ, ಒಂದು ಕುಂಬ ಹಾಲನ್ನು ಒಬ್ಬ ಭಕ್ತ ದೇವಸ್ತಾನಕ್ಕೆ ನೀಡಬೇಕೆಂದರೆ ಭಕ್ತನೇ 400 ರೂ ಕೊಡಬೇಕಂತೆ. ನಿಜವಾಗಿಯೂ ನಾವು ಸ್ವಲ್ಪ ಯೋಚಿಸಬೇಕಾದ ಸಂಗತಿಯಲ್ಲವೇ ಇದು. ಒಂದು ಹಸು ಏನೆಲ್ಲಾ ತಿಂದು ಒಂದು ಲೀಟರ್ ಹಾಲು ಕೊಡುತ್ತದೆ. ಆ ಹಾಲನ್ನು ಈ ರೀತಿಯಾಗಿ ಉಪಯೋಗಿಸುವುದು ಸರಿಯೇ ??.ಒಂದು ಲೀಟರ್ ಹಾಲು ಉತ್ಪಾದಿಸಲು ಮನುಷ್ಯರಾದ ನಮಗೆ ಸಾದ್ಯವೇ ??? ಅಭಿಷೇಕ ಮಾಡಲಿ ತಪ್ಪಲ್ಲ ಅದು ಅವರವರ ನಂಬಿಕೆ , ಹಾಲನ್ನೇ ಉಪಯೋಗಿಸಲಿ ಆದರೆ ಈ ಪ್ರಮಾಣದಲ್ಲಿ ನಾವು ಹಾಲಿನ ಅಭಿಷೇಕ ಮಾಡುವುದು ಸರಿಯೇ ??? . ದೇವರನ್ನು ಈ ರೀತಿ ಆರಾಧಿಸಿದರೆ ನಮಗೆ ಒಳ್ಳೆಯದು ಆಗಿ ಬಿಡುತ್ತೋ ??? ಶಾಂತಿ ಸಮಾಧಾನ ಸಿಗುತ್ತೋ ??

              ಸ್ನೇಹಿತರೆ ದೇವರನ್ನು ನಾವು ಆರಾಧಿಸುವುದು ನಮ್ಮ ಶಾಂತಿಗಾಗಿ, ಸಮಾಧಾನಕ್ಕಾಗಿ, ನೆಮ್ಮದಿಗಾಗಿ. ಇವುಗಳನ್ನು ಪಡೆಯಲು ನಾವು ಈ ರೀತಿ ಹಣ್ಣು ಹಾಲನ್ನು ವೇಸ್ಟ್ ಮಾಡಬೇಕಾ ?? ಅರ್ಚಕರು, ಪುರೋಹಿತರು , ಹಿರಿಯರು ಇದಕ್ಕೆಲ್ಲ ಉತ್ತೇಜನ ನೀಡಬೇಕಾ ??? ಅವರು ನಮ್ಮನ್ನು ಈ ರೀತಿ ಮೂಡನಂಬಿಕೆ, ಅಂದಶ್ರದ್ದೆಯಲ್ಲಿ ದೂಡಿದರೆ ನಾವು ಅವುಗಳಲ್ಲಿ ಬೀಳಬೇಕಾ ???.ಭಕ್ತಿಯಿಂದ ದೇವರಿಗೆ ನಾವು ಒಂದು ಪ್ರಾರ್ಥನೆ, ಎರಡೇ ಎರಡು ಪುಷ್ಪಗಳು, ಒಳ್ಳೆ ಮನಸ್ಸಿನಿದ ಅರಾಧಿಸಿದರೆ ನಿಜವಾಗಿಯೂ ನಮಗೆ ಶಾಂತಿ ನೆಮ್ಮದಿ ಸಿಕ್ಕೆ ಸಿಗುವುದು ಸ್ನೇಹಿತರೆ.  ಆಡಂಬರದ , ಅಜ್ಞಾನದ, ಅಂದ ಶ್ರದ್ದೆಯ ಪೂಜೆಗಳಿಂದ ಅಲ್ಲ. ಲೋಕಕ್ಕೆ ಬೆಳಕನ್ನು ನೀಡುವ ದೇವರಿಗೆ ನಿಂಬೆ ಹಣ್ಣಿನ ದೀಪದ ಬೆಳಕು ಬೇಕೇ ?? ಸಮಸ್ತ ಜೀವರಾಶಿಗಳಿಗೆ ಜಲ,ಗಾಳಿ ಬದುಕಲು ಆವಾಸ ನೀಡಿರುವ ಆ ಚೇತನಕ್ಕೆ/ ದೇವರಿಗೆ ಹಸು ಕೊಟ್ಟ ಒಂದು ಲೀಟರ್ ಹಾಲಿನ ಅಭಿಷೇಕ ಮಾಡಿದರೆ ಸಾಕೆ ??? ದೇವರು ಇವನ್ನೆಲ್ಲ ಬಯಸುತ್ತಾನೆಯೇ ???. ಸ್ನೇಹಿತರೆ  ನಾಗರ ಪಂಚಮಿ ಇನ್ನೇನು ಬರುತ್ತಿದೆ. ನಿಮ್ಮಲ್ಲಿ ನನ್ನ ಕಳಕಳಿಯ  ಪ್ರಾರ್ಥನೆ ಏನೆಂದರೆ  ದಯವಿಟ್ಟು ಹಾಲನ್ನು ಕಲ್ಲಿಗೋ , ಉತ್ತಕ್ಕೊ ಎರೆಯದಿರಿ. ಅದರ ಬದಲು ಯಾರಿಗಾದರೂ ಬಡವರಿಗೆ,ಹಸಿದವರಿಗೋ ಕೊಡಿ. ಇಲ್ಲಾ ನೀವೇ ಕುಡಿಯಿರಿ ಸುಮ್ಮನೇ ಅನ್ಯಾಯವಾಗಿ ವೇಸ್ಟ್ ಮಾಡಬೇಡಿ. ನಿಮ್ಮ ಅಮ್ಮನೋ , ಅಜ್ಜಿಯೋ ಈ ರೀತಿಯ ಪೂಜೆ ಸಲ್ಲಿಸುತ್ತಿದರೆ ದಯವಿಟ್ಟು ಅದನ್ನು ತಡೆಯಿರಿ, ಅವರಲ್ಲಿ ಜಾಗೃತಿ ಮೂಡಿಸಿ,ತಿಳಿ ಹೇಳಿ. ಹಾಲು  ಎರೆದರು ಅಡ್ಡಿಯಿಲ್ಲ ಆದರೆ ಲೀಟರ್ ಗಟ್ಟಲೆ ಬೇಡವೇ ಬೇಡ , ಒಂದು ಚಮಚ ಸಾಕೆ ಸಾಕು.



ನಿಮಗಾಗಿ 
ನಿರಂಜನ್