ಬುಧವಾರ, ಅಕ್ಟೋಬರ್ 31, 2012

ಅವನ


                                              ಆ ಪುಸ್ತಕ .....

ಹಿಂದಿನ ದಿನ ನಡೆದ ಕೆಲವು ಘಟನೆಗಳಿಂದ ಬೇಜಾರಾಗಿದ್ದ ನಾನು, ಆ ದಿನ ತುಂಬಾ ದುಃಖ ಪಟ್ಟಿದ್ದೆ. ನಾ ಮಾಡಿದ ಸಣ್ಣ ತಪ್ಪು ನನ್ನನ್ನು ಆ ದಿನ ತುಂಬಾ ಹಿಂಸಿಸಿತ್ತು.ಮಾಡಿದ ಅ ಚಿಕ್ಕ ತಪ್ಪು ನಿಜವಾಗಿಯೂ ನನಗೆ ತುಂಬಾನೇ ಬುದ್ದಿ ಕಲಿಸಿತ್ತು.  ಅದೇ ತಪ್ಪನ್ನು ನಾನು ಮತ್ತೆ ಎಂದು ಮಾಡಬಾರದು ಎಂದು ನಿರ್ದರಿಸಿದ ನಾನು ಸ್ವಲ್ಪ ಸಮಾಧಾನಗೊಂಡು, ಒಂದು ಸಣ್ಣ ವಾಕ್ ( walk ) ಮಾಡಲು ನಿರ್ದರಿಸಿದೆ.ಮನೆಯ ಹತ್ತಿರವೇ ಇದ್ದ ನನ್ನ ಸ್ನೇಹಿತ ಕೂಡ ನನ್ನೊಂದಿಗೆ ವಾಕ್ ಬರುವುದಾಗಿ ಹೇಳಿದ. ನಾವಿಬ್ಬರು ಹೀಗೆ ನಡೆದುಕೊಂಡು ಹೋಗುತ್ತಿರುವಾಗ  ನನ್ನ  ಎದುರಿಗೆ ಬರುವ ಚಿಕ್ಕ ಹುಡುಗನೊಬ್ಬ ಒಂದು ಪುಸ್ತಕವನ್ನು ರಸ್ತೆಗೆ ಎಸೆದ, ನಾನು " ಹೇ ಯಾಕೋ ಪುಸ್ತಕವನ್ನು ಎಸೆದೆ " ಅಂತ ಕೇಳಿದ, ತಕ್ಷಣ ಆ ಚಿಕ್ಕ ಹುಡುಗ ನನ್ನ ಮುಖವನ್ನೊಮ್ಮೆ ನೋಡಿ , ಏನೂ ಉತ್ತರಿಸದೆ  ಅಲ್ಲಿಂದ ಕಾಲು ಕಿತ್ತ. ನಾ ಆ ಪುಸ್ತಕವನ್ನು ಕೈಯಲ್ಲಿ ಎತ್ತಿಕ್ಕೊಳ್ಳುವ ಮೊದಲೇ  ಇನ್ನೊಬ್ಬ ಮದ್ಯವಯಸ್ಸಿನ ಯುವಕನೊಬ್ಬನು ಅದರ ಮೇಲೆ ಕಾಲಿಟ್ಟು ನೆಡದೆ ಸಾಗಿದ್ದನು. ಇನ್ನೇನು ಮತ್ತೊಬ್ಬರು ಅದನ್ನು ತುಳಿಯುವ ಮೊದಲೇ ನಾ ಅದನ್ನು ನನ್ನ ಕೈಗೆ ಎತ್ತಿಕೊಂಡಿದ್ದೆ. 


           ಆ ಪುಸ್ತಕ ಒಂದು ಚಿಕ್ಕ ಇಂಗ್ಲಿಷ್ ಪುಸ್ತಕವಾಗಿತ್ತು. ಅದು ಬಹಳ ಮಟ್ಟಿಗೆ ಈಗಿನ LKG ಅಥವಾ UKG ತರಗತಿಯದಿರಬಹುದು. ನಿಜವಾಗಿಯೂ ಸ್ನೇಹಿತರೆ ಅದರ ಮೇಲೆ ಸುಂದರ ಕಾರ್ಟೂನ್ ತರಹದ ಚಿತ್ರಗಳಿದ್ದವು. ಒಳ್ಳೆಯ ಬಣ್ಣಗಳಿಂದ ಚಿತ್ರಿಸಿದ ಆ ಚಿತ್ರಗಳು ನಿಜವಾಗಿಯೂ ನನ್ನನ್ನು ಸಹಜವಾಗಿ ತನ್ನತ್ತ ಸೆಳೆದವು. ಆ ಪುಸ್ತಕದಲ್ಲಿ  ಇದ್ದದ್ದು ಕೇವಲ ಕೆಲವೇ ಪುಟಗಳು. ಎಲ್ಲ ಪುಟಗಳಲ್ಲು ಒಂದೊಂದು ವರ್ಣರಂಜಿತವಾದ ಚಿತ್ರ, ಅದರೊಂದಿಗೆ ಚಿಕ್ಕ ಮಕ್ಕಳಿಗಾಗಿಯೇ ರಚಿಸಿದ ಆರೇಳು ಸಾಲುಗಳ ಮಕ್ಕಳ ಪದ್ಯಗಳು ಕೂಡ ಇದ್ದವು. ಚಿಕ್ಕ ಮಕ್ಕಳ ಪದ್ಯಗಳು ಚಿಕ್ಕದಾಗಿದ್ದರೂ ಪ್ರಾಸಬದ್ದವಾಗಿದ್ದವು ಕೂಡ. ಅದರಲ್ಲಿನ ಒಂದನ್ನು ನಾ 5ನೇ  ತರಗತಿಯಲ್ಲಿ ಓದಿದ ನೆನಪು. ನಿಜವಾಗಿಯೂ ಅವೆಲ್ಲವೂ ಎಷ್ಟು ಚಿಕ್ಕವಾಗಿದ್ದವೋ ಅಷ್ಟೇ ಅರ್ಥಗರ್ಬಿತವಾಗಿದ್ದವು. ಅಲ್ಲಿದ್ದ ಹಿತವಾದ ಪ್ರಾಸಗಳು ನನ್ನ  ಮುಖದಲ್ಲಿ ಒಂದು ಸಣ್ಣನಗುವುಕ್ಕಲು ಕೂಡ  ಕಾರಣವಾಗಿದ್ದವು. ಇಡೀ ನನ್ನ ಬಾಲ್ಯವನ್ನೇ ನನ್ನ ಕಣ್ಮುಂದೆ ತಂದಿಟ್ಟ ಆ 4-5 ಪುಟಗಳ  ಆ ಸಣ್ಣ ಪುಸ್ತಕ, ಬೇಜಾರಾಗಿದ್ದ ನನ್ನ ಮನಸ್ಸನ್ನು ತಿಳಿಗೊಳಿಸಿದ್ದಲ್ಲದೆ , ನನಗೆ ನನ್ನ ಬಾಲ್ಯದ ನೆನಪು ತಂದು ಹಿತ ನೀಡಿತು.  ಪುಸ್ತಕಗಳಿಗೆ ಈ ಶಕ್ತಿ ನಿಜವಾಗಿಯೂ ಇದೆ ಎಂದು ಮತ್ತೆ ನನಗೆ ಮನವರಿಕೆ ಆಯಿತು. ಅಲ್ಲಿದ್ದ ಚಿತ್ರಗಳು, ನಾ ಚಿಕ್ಕವನಿದ್ದಾಗ ರಚಿಸುತ್ತಿದ್ದ ಚಿತ್ರಗಳ ಹಾಗೆಯೇ ಇದ್ದವು. 

               ನಾವು ಚಿಕ್ಕವರಿದ್ದಾಗ ಓದಿದ ಪುಸ್ತಕಗಳಲ್ಲಿ ಈ ರೀತಿಯ ವರ್ಣ ರಂಜಿತ ಚಿತ್ರಗಲಿರುತ್ತಿರಲಿಲ್ಲ, ಆದರೂ ಆ ಪದ್ಯಗಳು ನಮ್ಮನ್ನು ಆ ರೀತಿಯ ಪ್ರಪಂಚಕ್ಕೊಂತು ಕೊಂಡೊಯ್ಯುತ್ತಿದ್ದವು.  ಚಿಕ್ಕ ಮಕ್ಕಳಿಗೆ ಕಲ್ಪಾನಶಕ್ತಿ  ಹೆಚ್ಚಿಸುವ ಈ ರೀತಿಯ ಪದ್ಯಗಳು ಆ ಕ್ಷಣಕ್ಕೆ ನನ್ನನ್ನು ಕೂಡ ಕಲ್ಪನಾ ಲೋಕಕ್ಕೆ ಕರೆದೊಯ್ದವು. ಪುಸ್ತಕಗಳ ಈ ಶಕ್ತಿಯೇ ನನ್ನ ಮತ್ತು ಅವುಗಳ ಸಂಗಕ್ಕೆ ಕಾರಣ. ಕೆಲವರು ಹೇಳುವಂತೆ ಎಲ್ಲ ವಯ್ಯಸಿನ ಮನುಷ್ಯರಲ್ಲೂ ಒಬ್ಬ ಚಿಕ್ಕ ವಯಸ್ಸಿನ ಪುಟ್ಟ ಮಗುವು ಇರುತ್ತಾನೆ ಎಂಬುದು ಅಕ್ಷರಷಃ ನಿಜ ಎಂದು ನನಗೆ ಆ ಪದ್ಯಗಳನ್ನು ಓದಿದಾಗ , ಚಿತ್ರಗಳನ್ನು ನೋಡಿದಾಗ ಅರಿಯಿತು.  ನನ್ನಲ್ಲಿದ್ದ ಆ ಚಿಕ್ಕ ಕಂದ  ಅದೆಷ್ಟು ಖುಷಿ ಪಟ್ಟ ಎಂದರೆ ನಾ ಮನೆಗೆ ಬಂದು ನನ್ನ ಪಕ್ಕದ ಮನೆಯಲ್ಲಿದ್ದ 1ನೇ  ತರಗತಿಯ ಹುಡುಗನ ಪುಸ್ತಕ ಓದಿದೆ.  

             ಪುಸ್ತಕವನ್ನು ಬೀದಿಗೆ  ಎಸೆದ ಆ ಹುಡುಗನ ಮೇಲೆ ಕ್ಷಣ ಕಾಲ ಸಿಟ್ಟು ಬಂದಿದ್ದ ನನಗೆ "ಹೋಗ್ಲಿ ಬಿಡು ಅವನಿಗೆ ಗೊತ್ತಿಲ್ಲ ಅದರ ಬೆಲೆ " ಅಂತ ಅಂದುಕೊಂಡಿದ್ದೆ .  ನಾನು ಪುಸ್ತಕವನ್ನು ಓದಿದ ಮೇಲೆ ನನಗೆ ತಿಳಿಯಿತು ,  ಆ ಹುಡುಗ ಅವನಿಗೆ ಅರಿಯದೆಯೇ ನನಗೆ ಒಂದು ರೀತಿಯಲ್ಲಿ ಸಹಾಯ ಮಾಡಿದ್ದ. ಯಾವುದೋ ವಿಷಯಕ್ಕೆ ಬೇಜಾರಾಗಿದ್ದ ನಾನು ಬೇರೆಯ ವಿಷಯದ ಬಗ್ಗೆ ಗಮನಹರಿಸಲು ಒಂದು ರೀತಿಯಲ್ಲಿ ಕಾರಣನಾಗಿದ್ದ. ನಿಜವಾಗಿಯೂ  ಸ್ನೇಹಿತರೆ ನಿಮಗೂ ಕೂಡ ಸ್ವಲ್ಪ ಸಮಯ ಸಿಕ್ಕರೆ ಚಿಕ್ಕ ಮಕ್ಕಳ ಪುಸ್ತಕಗಳನ್ನು ಓದಿ ನೋಡಿ, ಅವುಗಳೇನು ಬಾರಿ ಕತೆ-ಕಾದಂಭರಿಗಳಾಗಿರುವುದಿಲ್ಲ ಆದರೂ  ಹಲವು ವಿಷಯಗಳ್ಳನ್ನ  ಅವು ಸಾರಿ  ಹೇಳುತ್ತವೆ. ನಿಮ್ಮನ್ನು ನಿಮ್ಮ ಭಾಲ್ಯಕ್ಕೆ ಮತ್ತೊಮ್ಮೆ ಕರೆದೊಯ್ಯುತ್ತವೆ. ನೆನಪುಗಳಲ್ಲೆಲ್ಲ ನಮ್ಮ ಭಾಲ್ಯದ ನೆನಪುಗಳೇ  ಅತೀ  ಹಿತ ನೀಡುವುವು. "ನೋಡಿ , ನಿಮ್ಮ ಮನೆಯ ಹತ್ತಿರವಿರುವ ಅಥವಾ ನಿಮ್ಮ ಮನೆಯಲ್ಲಿಯೇ ಇರುವ ಚಿಕ್ಕ ಮಕ್ಕಳ ಪುಸ್ತಕದ ಮೇಲೆ ಒಮ್ಮೆ ಕಣ್ಣಾಡಿಸಿ, ನಾವು ಕಲಿಯೋದು ಬೇಜಾನ್ ಇದೆ "



ನಿಮಗಾಗಿ 
ನಿರಂಜನ್  

ಬುಧವಾರ, ಅಕ್ಟೋಬರ್ 17, 2012

Just for laugh ....


                                                     ಗೋಪಾಲಣ್ಣನ  ಮಾಲು......

ಬೇಜಾನ್ ದಿನ ಆದ್ಮೇಲೆ , ಮುತ್ತು ಮಾರಿಯಮ್ಮ ದೇವಸ್ತಾನಕ್ಕೆ ಬರ್ತಿದ್ದ ನಮ್ಮ ಲಕ್ಷ್ಮಕ್ಕ ಹಳೆ ಬೆಂಗಳೂರು ಮತ್ತೆ ಹೊಸ ಬೆಂಗಳೂರು  ಬಗ್ಗೆ ಮಾತ್ ಆಡ್ತಾನೆ ಇದ್ಲು. ಇದನ್ನ ಕೇಳಿ ಕೇಳಿ ಸುಸ್ತಾಗಿದ್ದ ಮುರಳಿ , ಸುಮ್ನೆ ಬಸ್ಸಿನ ಕಿಟಕಿಯಿಂದ ಹೊರಗೆ ನೋಡ್ತಾನೆ ಇದ್ದ . ಮುರಳಿ ಏನು ಮಾತಾಡದೆ ಇದ್ರೂ ಲಕ್ಷ್ಮಕ್ಕ ನ  ಬಾಯಿ ಮಾತ್ರ ಬೆಂಗಳೂರಿನ ಜನರ ಬಗ್ಗೆ , ಜನರ ಬಟ್ಟೆ ಬರೆಗಳ ಬಗ್ಗೆ , ಇಲ್ಲಿಯ  ಜನರ  ತಿಂಡಿ ತೀರ್ಥಗಳ ಬಗ್ಗೆ  ಮಾತ್ ಆಡ್ತಾನೆ ಇದ್ಲು. ಮುರಳಿಗೋ ಆಗ್ಲೇ ಸಾಕಾಗಿ ಹೋಗಿತ್ತು. ಯಾರೋ ಈ ನ್ಯೂಸ್ ಚಾನೆಲ್ ಅಲ್ಲಿ ಬರೋ ಜ್ಯೋತಿಷಿ ಹೇಳಿದ್ದ ಅಂತೆ ಲಕ್ಷ್ಮಕ್ಕಗೆ ಈ ಮುತ್ತು ಮಾರಿಯಮ್ಮ ಟೆಂಪಲ್ ಗೆ ಬರಲು. ಅದೇ ಸಮಯಕ್ಕೆ ಮುರಳಿಯ  ಗ್ರಹಚಾರ ಕೆಟ್ಟೋ ಏನೋ ಲಕ್ಷ್ಮಕ್ಕನನ್ನು  ಅನಿವಾರ್ಯವಾಗಿ ತನ್ನ  ಜೊತೆಗೆ   ಕರ್ಕೊಂಡು ಬರಲೇ ಬೇಕಿತ್ತು.
          ಮುರಳಿ ಏನ್ ಮಾತಾಡಿದ್ರು ಕೇಳದ ಲಕ್ಷ್ಮಕ್ಕ , ಬಾಯಿ ತಗುದ್ರೆ ಸಾಕು "ಈ ಹಾಳಾದ್ ಬೆಂಗಳೂರು ಜನ , ಸ್ವಲ್ಪನು ಆಚಾರ, ವಿಚಾರ ಇಲ್ಲ , ನೋಡೋ ಅದೆಂಗೆ ಈ ತರದ ಬಟ್ಟೆ ಬರಿ ಹಾಕೊಂಡು ಬೀದಿ ಬೀದಿ ಸುತ್ತವೇ,,, ಇವಕ್ಕೆ ಅದೇನು ಅನ್ಸೋಲ್ಲವಾ ? ಅದೇ ನಮ್ಮೂರಗೆ ನೋಡು ನಾವು ಹೇಗೆ ಇರ್ತೀವಿ. ಇವುಕ್ಕೆ  ಏನಾದ್ರೂ  ಭಯ ಭಕ್ತಿ ಇದೇನಾ? , ಅಲ್ನೋಡೋ  ಅದು ತುಂಡು ಬಟ್ಟೆ ಹೇಗೆ ತೊಟ್ಕೊಂದೈತಿ" ಅಂದದ್ದೇ ತಡ ಮುರಳಿ ತನ್ನ ಕಣ್ಣುಗಳನ್ನೂ  ಊರಡ್ದಾರ  ಹಗಲಿಸಿ "ಎಲ್ಲಿ ಲಕ್ಷ್ಮಕ್ಕ ??? " ಅಂತ ಬಾಯಿ ತೆಗೆದ.  ಲಕ್ಷ್ಮಕ್ಕ ಆ ವಿಚಿತ್ರ ತುಂಡು ಬಟ್ಟೆ ಹಾಕೊಂಡು , ಬೈಕ್ ಹಿಂದೆ ಕೂತ್ಕೊಂಡು ಹೋಗ್ತಿದ್ದ ಆ ಹುಡುಗಿಯನ್ನು ನೋಡ್ತಾ ಹೇಳ್ತಾಳೆ... 
              " ಅದ್ಯಾಕ ಹಂಗೆ ಅಂಟಿಕೊಂಡು ಕುತ್ಕಬೇಕು ,   ಅವಯ್ಯನ ಮೇಲೆ  ಹಿಂಗೆ ಕೂತರೆ ಆತ ಅದೆಂಗೆ ಗಾಡಿ ಓಡಿಸ್ಬೇಕು ??   ಇನ್ನು ಒಬ್ರು ಹಿಂದೆ ಕೂರೋವಷ್ಟು ಜಾಗ ಐತಿ ನೋಡೋ, ಅದೇನು ಹಿಂಗೋ , ಅದ್ಯಾಕೋ ಈ ತರನೋ ಇಲ್ಲಿ .... " ಅಂತ ಕೇಳ್ತಾನೆ ಇದಾಳೆ ಮುರಳಿಗೆ ,  ಆದ್ರೆ ಉತ್ತರ ಮಾತ್ರ ಅವನಿಂದ ಇಲ್ಲ. ಬಿಟ್ಟ ಬಾಯಿ ಬಿಟ್ಕೊಂಡು , ತೆರೆದ ಕಣ್ಣು ಮುಚ್ಚದೆ ಲಕ್ಷ್ಮಕ್ಕ ತೋರಿಸಿದ ಹುಡುಗಿಯನ್ನೇ ನೋಡುತ್ತಾ  , ಏನನ್ನೋ ತನ್ನ ಕಣ್ಣೊಳಗೆ  ತುಂಬಿ ಕೊಳ್ತಾನೆ ಇದ್ದ ....  ಮಾತಿನ ಮದ್ಯ ಇದನ್ನು ಗಮನಿಸಿದ ಲಕ್ಷ್ಮಕ್ಕ " ಹೇ ಮುರಳಿ , ಏನೋ ಹಾಗೆ ನೊಡ್ತಿಯ , ಏನ್ ಹುಡುಗರೋ ಅವಕ್ಕಂತು ಮಾನ ಮರಿಯಾದೆ ಇಲ್ಲ ನಿಂಗು ಇಲ್ಲೇನೋ  ? ಏನೂ ಮಾತಾಡದೆ ಹಂಗ್ಯಾಕೆ  ನೊಡ್ತಿಯ  ಅವುನ್ನ ?? " ಅಂದಾಕ್ಷಣ  " ಅಕ್ಕ ಅಲ್ಲಿ ಅವರ ಗಾಡಿಯಲ್ಲಿ ಖಾಲಿ ಇರುವ ಜಾಗದಲ್ಲಿ ನಾ ಕೂರೋಕೆ ಯೋಚನೆ ಮಾಡ್ತಾ ಇದೀನಿ ಕಣಕ್ಕ " ಎಂದಾಗ ಲಕ್ಷ್ಮಕ್ಕ  ಅವಾಕ್ಕಾಗಿದ್ದೊಂತು  ನಿಜ...



      ಅಷ್ಟರಲ್ಲೇ ಲಕ್ಷ್ಮಕ್ಕ ಬಾಯಿ ಮೇಲೆ ಕೈ ಇಟ್ಕೊಂಡು " ಇದೇನೋ ಮುರಳಿ ಹೀಗಿದೆ  ದೇವಸ್ತಾನ ??? ಇಷ್ಟು ಬೇಗ ಬಂದೆ ಬಿಡ್ತು ಅಲ್ಲವೋ ನಮ್ಮ ಮುತ್ತು ಮಾರಿಯಮ್ಮನ್ನ ಗುಡಿ ??? " 
      
       "ಇದೇನೋ ಇಷ್ಟು ದೊಡ್ದದೈತಿ , ಏನೋ ಇವು ಈ ಪರಿ ಗೋಪ್ರಗಳು. ಆಯವ್ವಂದು ಬಾರಿ ನೆಡಿತ್ತೈತಿ ಅನ್ನು. ನಮ್ಮವ್ವಂದು  TV ಅಲ್ಲೆಲ್ಲ  ಬರ್ತತಿ ಅಂದ್ರೆ ಏನ್ ಸುಮ್ಕೆಯ ?? ನಮ್ಮವ್ವನ್ ಗುಡಿ ನೋಡೋಯಪ್ಪಾ ಅಂದ್ಲು"

         ಒಂದು ಕ್ಷಣ  ಬಂದ ನಗುವನ್ನು  ಇಡಿದು ಇಟ್ಕೊಂಡ  ಮುರಳಿ "ಅಯ್ಯೋ ಲಕ್ಷ್ಮಕ್ಕ ಇದು ನಿಮ್ಮ  ಮುತ್ತು ಮಾರಮ್ಮನ ಗುಡಿ  ಅಲ್ಲಕ್ಕೊ  , ,ಇದು ದೊಡ್ಡ  ಮಾಲು , ಗೋಪಾಲನ್ ಮಾಲ್ " ಅಂತ ಹೇಳಿದ.

         "ಏನಪ್ಪಾ ಇದು  ನಮ್ಮ ಮಾರಮ್ಮನ್ ಗುಡಿ ಅಲ್ಲವಾ ?? ಗೋಪಾಲನ ಗುಡಿಯೇ ???? ನಮಪ್ಪ ಅದೆಂಥ ದೇವಸ್ತಾನಗೆ ಕುಂತಾನೆ  ನೋಡೋ , ಗೋಪಾಲ ಅಂದ್ರೇನು ಕಡಿಮೇನೆ ... ತಿರುಪತಿ , ತಿರುಪತಿ ತರ  ಇದೆ ನೋಡು ......."

         "ಇಲ್ಲ ಇಲ್ಲ ಲಕ್ಷ್ಮಕ್ಕ ಇದು ನಿಮ್ ಮಾರಮ್ಮನ ಗುಡಿನು ಅಲ್ಲ , ಗೋಪಾಲಣ್ಣ ನ್ನ  ಗುಡಿನೂ ಅಲ್ಲ , ಮಾಲು ಇದು ಗೋಪಾಲನ್  ಮಾಲ್ . " ಅಂತ ಹೇಳಿದ ಮುರಳಿ. 

         "ಮಾಲ ??? ಗೋಪಾಲಣ್ಣನ ಮಾಲ ???? ಹಂಗೆ ಅಂದ್ರೇನಪ್ಪ ,,, ನಾ ಇದೆ ಮೊದ್ಲು ನೋಡು ಕೇಳಿದ್ದು ನೋಡಿದ್ದು ........ "

         ಲಕ್ಷ್ಮಕ್ಕಗೆ  ಇದರ ಬಗ್ಗೆ " ಹೇಗೆ ಹೇಳೋದು  ?? ಏನ್ ಹೇಳೋದು ? ಅಲ್ಲಿ ಜನ ಯಾಕೆ ಬರ್ತಾರೆ  ?  ಹೆಂಗೆ ಬರ್ತಾರೆ ?  ಏನ್ ಮಾಡ್ತಾರೆ ? " ಅಂತ  ತೋಚದ ಮುರಳಿ " ನಾ ಇದರ ಬಗ್ಗೆ ಹೇಳಿದ್ರು ಇವಕ್ಕ ಗೆ ಅದು ಅರ್ಥ ಆಗುತ್ತಾ ? ಅರ್ಥ ಆದ್ರೆ ಸುಮ್ ಸುಮ್ಕೆ ತಲೆ ತಿಂತಾಳೆ. ಇಲ್ಲಿಯ  ಜನಗಳ ಬಗ್ಗೆ ಏನೇನೋ ಅನ್ಕೊಲ್ತಾಳೆ ,  ಹೇಗಾದ್ರು ಮಾಡಿ ಇದರ ಬಗ್ಗೆ ನಾ ಅವಳಿಗೆ ಏನಾದ್ರೂ ಹೇಳ್ಬೇಕು, ಆದ್ರೆ ಅದು ಇಲ್ಲಿ ಇರೋ ತರ ಅಲ್ಲ ಅಂತ ಯೋಚಿಸಿ  " ಹೌದು ಕಣಕ್ಕ  ಇದು ಗುಡಿಯಲ್ಲ ಆದ್ರೆ ಗುಡಿ
ತರ "

     " ಅದೇನೋ ಮುರಳಿ ಗುಡಿ ಅಲ್ಲ ಅಂತಿಯ , ಗುಡಿ ತರ  ಅಂತಿಯಾ ,, ನನಗೇನು ತಿಳಿತಿಲ್ಲ ನೋಡು ...."

     "ಹೌದು  ಲಕ್ಷ್ಮಕ್ಕ .... ಇದು ಗುಡಿ ತರ. ಕೆಲವರಿಗೋ ಇದು ಸಾಕ್ಷಾತ್ ಗುಡಿಯೇ ,,, ತಮ್ಮ ಮನಸ್ಸಿಗೆ ಬೇಕು
ಅನ್ಸಿದಾಗೆಲ್ಲ ಇಲ್ಲಿಗೆ ಬರ್ತಾರೆ , ತಮಗೆ ಬೇಕಾದ ದೇವರನ್ನು ಹಾಗೆ ಪೂಜಿಸುತಾರೆ. ಸ್ವಲ್ಪ ಹೊತ್ತು ಇಲ್ಲೇ ಇದ್ದು ಆಮೇಲೆ ಹೋಗ್ತಾರೆ " .

   " ಹೌದೆ ?? ಅದು ಹೆಂಗೆ ???" 

    "ನೋಡಕ್ಕ....ನಮ್ಮೂರಲ್ಲಿ ನೀವು ಹೇಗೆ ಮಾಡ್ತೀರ ಬೆಳ್ಳಿಗ್ಗೆ  ಎದ್  ತಕ್ಷಣ ದೇವರನ್ನ ನೆನೆಸಿ ಕೊಳ್ತಿಯಾ ತಾನೇ ??? "

   " ಹೌದು ಕಣೋ ಮುರಳಿ ..." 

   " ಇಲ್ಲಿ ಕೂಡ ಹಾಗೆನೆ  ಜನರು ಅಲ್ಲ ಭಕ್ತರು ,, ಬೆಳ್ಳಿಗ್ಗೆ  ಎದ್ದ ತಕ್ಷಣ ತಮ್ಮ ಆ ದಿನದ ದೇವರನ್ನು ನೆನೆಸಿ ಕೊಳ್ತಾರೆ ... ಆಮೇಲೆ  ದೇವರನ್ನು ಬೇಡಿಕೊಳ್ತಾರೆ ?? ದೇವಿ ನಿನ್ನ ದರುಶನ ನನಗೆ ಈ ದಿನ ಬೇಕೇ ಬೇಕು ಅಂತ... ಭಕ್ತರು ಅದೆಷ್ಟು ಭಕ್ತಿಯಿಂದ ಬೇಡಿಕೊಳ್ತಾರೆ ಅಂದ್ರೆ ಆ ದೇವ್ರು ಕೂಡ  ಭಕ್ತನ ಕೋರಿಕೆಗೆ  ಇಲ್ಲ ಅನ್ನೋದೇ ಇಲ್ಲ .... ಆದ್ರೆ ದೇವರಿಗೆ ಆ  ದಿನ ಬೇರೆ ಭಕ್ತರ ಯಾವುದೇ ಕೋರಿಕೆ  ಇರಬಾರದು ಅಷ್ಟೇ ... ಇಲ್ಲಿ ದೇವತೆಗಳು ಹಾಗೆ ಕಣಕ್ಕೋ  ಯಾವಾಗಲು ಸ್ವಲ್ಪ ಬ್ಯುಸಿನೆ , ನಮ್ಮೂರು ಚೌಡಮ್ಮ , ಕೋಟೆ ಬರಮಪ್ಪನ ತರ ಅಲ್ಲ ,,, ಬೆಂಗಳೂರ್ ನೋಡು ಇದು ಅದಕ್ಕೆ ಹೀಗೆ .... "

   "ಹ ಹ ಹ ,,, ಹೌದೆನಪ್ಪ ??? " 

   "ಹೌದು ಕಣಕ್ಕ,  ಒಂದ್ ಸರಿ ಅವ್ರು  ಕೇಳ್ಕೊಂಡ್  ದೇವ್ರು ಅಥವಾ ದೇವತೆ ಸರಿ ನಿಂಗೆ  ಈ ದಿನ ದರ್ಶನ  ಕೊಡ್ತೀನಿ, ಅಂದ್ರೆ ಮುಗಿತು  ಎದ್ವೋ -ಬಿದ್ವೋ  ಅಂತ ದೇವಸ್ತಾನೆಕ್ಕೆ ಬಂದೆ  ಬಿಡ್ತಾರೆ  ಕಣಕ್ಕೊ ...." 

   "ಅಯ್ಯೋ ಅಯ್ಯೋ ಏನ್ ಭಯ ಭಕ್ತಿ  ಏನ್ ಕತೆ , ನಾ ಇಲ್ಲಿ ಜನಕ್ಕೆ ಅದೆಲ್ಲ ಇಲ್ಲವೇ ಇಲ್ಲ ಅಂತ ಅಂದುಕೊಂಡಿದ್ದೆ ಕಣೋ ಮುರಳಿ ....."

   "ಇಲ್ಲಕ್ಕ ಇಲ್ಲ ,,,, ಬೆಂಗಳೂರ್ ಜನ  ಅಂದ್ರೆ ಏನ್ ಸುಮ್ನೆನ , ಇವ್ರು  ಕೂಡ ಮನುಶ್ರೆ ... ಬಾರಿ ಭಕ್ತರು ಇವ್ರು,,, ಒಂದೊಂದಲ್ಲ ಬೇಜಾನ್ ದೇವರುಗಳ ಹತ್ರ ಹೋಗ್ತಾರೆ ಇವ್ರು ,,,,,, ಇವರಿಗೆ  ಎಲ್ಲ ದೇವ್ರುಗಳು ಒಂತರ ಒಂದೇನೆ ... ಒಂದ್ ಒಂದ್ ಸಾರಿ ಬೇರೆರು ಪೂಜೆ ಮಾಡೋ ದೇವರುಗಳನ್ನು ಬಿಡೋಲ್ಲ , ಅವುಕ್ಕು ಪೂಜೆ ಗೀಜೆ ಮಾಡಿ ವರ  ಕೇಳ್ತಾರೆ ,,, ದೇವರು ಸ್ವಲ್ಪ ಉದಾರಿಯಾಗಿದ್ರೆ  ಎಷ್ಟು ಜನ ಭಕ್ತರು ಏನ್ ಕೇಳಿದ್ರು ಇವ್ರು ಕೇಳೋ ವರಗಳಿಗೆಲ್ಲ ಅಸ್ತು ಅಂದು ಬಿಡ್ತಾವೆ , ಅಂತಂತ ಒಳ್ಳೊಳ್ಳೆ ದೇವತೆ ದೇವರುಗಳಿವೆ ಈ ಬೆಂಗಳೂರಲ್ಲಿ ....."

 "ಹಿಂಗೆಲ್ಲ ಇದಿಯೋ ಇಲ್ಲಿ ,,, ನಂಗೆ ಗೊತ್ತೇ ಇರಲಿಲ್ಲ ನೋಡು ಮತ್ತೆ ...."

 "ಹೌದಕ್ಕೋ ... ಬೆಳ್ ಬೆಳಗ್ಗೆ ಎದ್ದು , ಹಂಗು ಹಿಂಗು ದೇವರಿಗೆ ಹರಿಕೆ ಮಾಡಿಕೊಂಡು , ಆ ದೇವರುಗಳು ಇವ್ರು ಕೇಳೋ ವರಗಳಿಗೆ  ಅಸ್ತು ಅಂದ್ರೆ ಮುಗಿತು , ಇಂಥ ಹತ್ತಿರ ಇರುವ ಗುಡಿಗಳಿಗೆ ಬಂದು   ಗುಡಿಯ ಬಾಗ್ಲು ಹತ್ರನೇ ಬಂದು ಕಾಯಿತಿರ್ತಾರೆ. ಒಂದು ಒಂದು ಸಾರಿ ಬಾಗಿಲು ತೆಗೆದೇ ಇರೋಲ್ಲ ಆದರು ಪಾಪ ಭಕ್ತರು ಬಂದು ಬಾಗಿಲ ಹತ್ರನೇ ಗಂಟೆಗಟ್ಟಲೆ  ಕಾಯಿತಾರೆ .."

  "ತಮ್ಮ ತಮ್ಮ ಇಷ್ಟ ದೇವತೆಗಳಿಗೆ ಕಾಯೋದ್ರಲ್ಲೇ ಇವರಿಗೆ ಒಂತರ ಖುಷಿ  ಕಣಕ್ಕ.. ತಮ್ಮ ಇಷ್ಟದ ದೇವರುಗಳು ಕಣ್ಣಿಗೆ ಬಿದ್ರೆ ಸಾಕು , ಭಾವ ಪರವಶರಾಗಿ , ತಾವಿರುವ ಲೋಕವನ್ನೇ ಮರೆತು ದೇವತೆಯ ಸಾನಿದ್ಯಕ್ಕೆ ಹೋಗಿ ಬಿಡ್ತಾರೆ ,,, ಆ ನಮೂನಿ ಪ್ರೀತಿ , ಭಕ್ತಿ ಅವರ ದೇವರುಗಳ ಮೇಲೆ....."  

  "ಇಲ್ಲಿ ನೋಡಕ್ಕ ಹೆಣ್ಣ ಮಕ್ಳು ಗಂಡು ದೇವ್ರನ್ನ ಪೂಜಿಸ್ತಾರೆ , ಗಂಡ ಮಕ್ಳು ಹೆಣ್ ದೇವ್ರನ್ನ ಪೂಜಿಸ್ತಾರೆ..... ಇನ್ನು ಕೆಲವು ವಿಶೇಷ ಭಕ್ತರೂ ಇದಾರೆ ಅವ್ರು ಎಲ್ಲ ತರದ ದೇವರನ್ನು ಪೂಜಿಸ್ತಾರೆ... ಅದಕ್ಕೆಲ್ಲ ಇಲ್ಲಿ ಅವಕಾಶ ಇದೆ...."

 "ಒಂದು ಸಾರಿ ಇಲ್ಲಿ ಗುಡಿ ಒಳಗೆ ಹೋದ್ರೆ ಮುಗಿತು ,,, ಅವರಾಯಿತು ಅವರ ದೇವರಾಯಿತು ಬೇರೆ  ಯಾವುದರ ಬಗ್ಗೇನೂ  ತಲೆ ಕೆಡಿಸಿಕೊಳ್ಳೋಲ್ಲ.. ಅಷ್ಟು ಪ್ರೀತಿ ತಮ್ಮ ತಮ್ಮ ದೇವರುಗಳ ಮೇಲೆ...."

 "ಅಕ್ಕ ನಿಂಗೆ ಗೊತ್ತ ,,, ಇಲ್ಲಿಯ ದೇವರುಗಳೇನು ಕಡಿಮೆ ಅಲ್ಲ ,,, ಬೇಜಾನ್ ಶ್ರೀಮಂತ ದೇವರುಗಳು ಇವು.. ಹಂಗಾಗಿ ಭಕ್ತರು ಕೂಡ ಒಳ್ಳೆ ಒಳ್ಳೆ ಬಟ್ಟೆ ಬರಿಗಳನ್ನು , ಒಡವೆ , ವಸ್ತುಗಳನ್ನೂ ಕೊಟ್ಟು ತಮ್ಮ ಕಡೆಗೆ ಒಲಿಸಿಕೊಳ್ತಾರೆ..  ಇಂಥಹ  ಗುಡಿಯಲ್ಲೇ ದೇವರುಗಳಿಗೆ ಬೇಕಾದ ವಸ್ತುಗಳು ಸಿಗೋ ಜಾಗಗಳಿವೆ. ದೇವರಿಗೆ ಒಳ್ಳೊಳ್ಳೆ ಬಟ್ಟೆ ಕೊಡ್ತಾರೆ , ಒಳ್ಳೊಳ್ಳೆ ಆಭರಣಗಳನ್ನು ತೊಡಿಸಿ ಭಕ್ತರು ತಮ್ಮ ಕಂಗಳಲ್ಲಿ ದೇವರನ್ನ ತುಂಬಿ ಕೊಳ್ತಾರೆ ಪ್ರೀತಿಯಿಂದ ....."

  "ನಿಜ ಕಣೋ ನಾವು ಇಷ್ಟ ಪಡೋ ದೇವರಿಗೆ ನಮಗೆ ಬೇಕಾದ ಬಟ್ಟೆ ಬರಿ, ಆಭರಣಗಳನ್ನು ತೊಡಿಸಿ , ದೇವರಿಗೆ ಪ್ರಿಯವಾದ ಅಡುಗೆನ  ಮಾಡಿ ನೇವೇದ್ಯ  ಮಾಡೋದ್ರಲ್ಲಿ ಏನೋ ಒಂದು ಖುಷಿ ಸಿಗುತ್ತೆ ಕಣೋ ....... ನೋಡೋ ಬೆಂಗಳೂರ್ ಜನ ಕೂಡ ತುಂಬಾ ಒಳ್ಳೇವ್ರು ಕಣೋ ಹಾಗಾದ್ರೆ .. ನಾ ಸುಮ್ನೆ ಏನ್ ಏನೇನೋ ಅಂದುಕೊಂಡಿದ್ದೆ......." 

  "ಹೌದಕ್ಕ ತುಂಬಾ ಒಳ್ಳೇವ್ರು..... ಅಕ್ಕ ಇಂಥ ಮಾಲ್ ಗಳಲ್ಲಿ ಒಳ್ಳೊಳ್ಳೆ ಜಾಗಗಳಿವೆ  ಕಣಕ್ಕ , ದೇವರಿಗೆ ಬಟ್ಟೆ ಬರೆ , ಆಭರಣ , ಪಾದುಕೆಗಳನ್ನೂ  ಕೊಡ್ಸೋಕೆ...  ಈ ಬಟ್ಟೆ ಬರೆ ತೊಡ್ಸಿ , ಆಭರಣ ಹಾಕಿ , ಒಳ್ಳೊಳ್ಳೆ ಮಂತ್ರಗಳನ್ನೇಳಿ ದೇವರನ್ನು ಒಲಿಸಿಕೊಳ್ಲೋದರಲ್ಲಿ ನಿಸ್ಸೀಮರು ಇಲ್ಲಿ ಜನ ...  ಇಷ್ಟೆಲ್ಲಾ  ಆದ ಮೇಲೆ ದೇವರ ಪ್ರಸಾದಕ್ಕೆಂದೇ  ಸಕತ್ ಒಳ್ಳೆ ಜಾಗಗಳು ಇರ್ತಾವೆ ಕಣಕ್ಕ.. ದೇವರ ಪೂಜೆ ಆದ್ಮೇಲೆ ದೇವರುಗಳಿಗೆ ತೀರ್ಥ-ಪ್ರಸಾದ ಅದಮೇಲೆ ನೆ ಭಕ್ತರು  ಇಂಥ ಮಾಲ್ ಗಳಿಂದ ಮನೆಗೆ ಹೋಗೋದು..."

  "ಇಲ್ಲಿ ಒಂದ್ ಒಂದ್ಸಾರಿ ನೋಡ್ಬೇಕು ಕಣಕ್ಕೋ ,, ಭಕ್ತಿಯಲ್ಲಿ ಎಷ್ಟೊಂದು ಜನ ಭಕ್ತರು ತಾವಿರೋ ಲೋಕವನ್ನೇ ಮರೆತು , ತಮ್ಮದೇ ಆದ ಲೋಕಕ್ಕೆ ಹೋಗಿಬಿಡ್ತಾರಕ್ಕ... ಪ್ರೀತಿ ಭಕ್ತಿ ಹೆಚ್ಚಾಗಿ ದೇವರನ್ನು ಅಪ್ಪುತಾರೆ , ಮುದ್ದುತ್ತಾರೆ.. ಇನ್ನು ಅನೇಕ ರೀತಿಗಳಲ್ಲಿ ತಮ್ಮ ಭಕ್ತಿಯನ್ನು ದೇವರಲ್ಲಿ ತೋರಿಸುತ್ತಾರೆ..... "

 "ಹೌದೇನೋ ಮುರಳಿ ಇಷ್ಟೆಲ್ಲಾ ನೆಡೆಯುತ್ತೇನೋ ಇಲ್ಲಿ ???"

" ಹೌದಕ್ಕ ,,,, ಇಲ್ಲಿ ಎಷ್ಟೋ ಜನರು ಕೆಲವು ಭಕ್ತರನ್ನು ನೋಡಲೆಂದೇ ಬರ್ತಾರೆ... ತಮಗೆ ಯಾವ ದೇವರ ಮೇಲೆ ಭಕ್ತಿ ಇಲ್ಲ ಅಂದ್ರು ಇಲ್ಲಿಗೆ ಬಂದು ಒಂದಲ್ಲ ಒಂದು ದಿನ ನಮಗೂ ದೇವರ ಮೇಲೆ ಭಕ್ತಿ ಹುಟ್ಟಬಹುದು , ನಮಗೂ ಒಂದು ಆರಾದ್ಯ  ದೈವ ಸಿಕ್ಕರೂ ಸಿಗಬಹುದು , ಆ ದೈವ ನಾವು ಕೇಳೋದೆಲ್ಲ ಕೊಟ್ಟರು ಕೊಡಬಹುದು ಎಂಬ ಆಶಾ ಭಾವನೆಯೊಂದಿಗೆ ಬರುವವರು ಇದ್ದಾರಕ್ಕ ......"

 "ಈ ರಜ ದಿನಗಳು , ಶನಿವಾರ ಭಾನುವಾರ ಇಲ್ಲಿ ಭಕ್ತರ ನೂಕು ನುಗ್ಗಲು ಕಣಕ್ಕ... ಬಾರಿ ಜನ, ಭಾರಿ ಭಕ್ತಿ ನೋಡೋಕೆ ನಮ್ಮ ಎರೆಡು ಕಣ್ಣು ಸಾಲದು ಅಕ್ಕ....."  

"ನಿಜ ನಿಜ ಕಣೋ ,,,, ಈ ಭಕ್ತಿ ಅಂದ್ರೆ ಅದು ಹಾಗೆ ಕಣೋ ,,, ಒಂದು ಸಾರಿ ಅದು ಬಂದ್ರೆ ಆಯಿತು ಆ ದೇವರನ್ನು ನಾವು ಒಲಿಸಿಕೊಳೋ  ತನಕ ಸುಮ್ನೆ ಇರೋದೇ ಇಲ್ಲ.. ಒಂದಲ್ಲ ಒಂದು ಪೂಜೆ ಮಾಡ್ತಾನೆ ಇರ್ತೀವಿ...  " 

"ಅಕ್ಕ ನಿಂಗೆ ಇನ್ನು ಒಂದು ವಿಷಯ ಹೇಳಲೇ ಬೇಕು ,,,ಇಲ್ಲಿ ಇಂತಹ ಮಾಲ್ ಗಳಲ್ಲಿ ದೇವರುಗಳ , ಬೇರೆ ಭಕ್ತರ ಕತೆಗಳನ್ನು , ಅವರ ಮೇಲೆ ಬಂದ ಚಿತ್ರಗಳನ್ನು ತೋರುಸ್ತಾರೆ ಕಣಕ್ಕ.... ಭಕ್ತರೆಲ್ಲ ಅಲ್ಲಿ ಹೋಗಿ ಅಲ್ಲಿ ಬೇರೆ ಬೇರೆ ದೇವರುಗಳ-ಭಕ್ತರ ಮಹಿಮೆಗಳನ್ನು ನೋಡಿಕೊಂಡು ,, ಅದೇ ರೀತಿ ಅವ್ರು ಕೂಡ ದೇವರನ್ನು ಪೂಜಿಸುತ್ತಾರೆ... ಇಷ್ಟೆಲ್ಲಾ ಇರುತ್ತೆ ನೋಡಕ್ಕ ಇಂಥಹ ಮಾಲ್ಗಳಲ್ಲಿ.... "

" ಮುರಳಿ ,,,, ಒಂದ್ ಮಾತ್ ನಿಂಗೆ  ಹೇಳಲೇಬೇಕು ಕಣೋ   ,,, ಬೆಂಗಳೂರಿಗೆ ಬಂದ್  ಎಷ್ಟೆಲ್ಲಾ ವಿಷಯನೆಲ್ಲ ತಿಳ್ಕೊಂಡಿದಿಯ ಕಣೋ... ತುಂಬಾ ಬುದ್ದಿವಂತ ಆಗಿದಿಯ , ನಮ್ಮೂರಲ್ಲಿದ್ದಾಗ  ನೀ ಹಿಂಗೆ ಇರಲಿಲ್ಲ.. ಈಗ ಎಷ್ಟೊಂದು ದೇವರುಗಳ ವಿಷಯ , ಏನ್ ಆಸಕ್ತಿ ,,, ಖುಷಿ ಆಯಿತು ಕಣೋ...."

" ಹ ಹ ಹ ,,, ಹೌದಕ್ಕ ನಮ್ಮೂರಲ್ಲಿ ಅದೇ ಚೌಡಮ್ಮ , ಮಾರಮ್ಮ ,ಅದೇ ಮಂಚಾಲಮ್ಮ... ನಮಗೆ ಇಲ್ಲಿ ಬಂದಾಗಲೇ ಗೊತ್ತಾಗಿದ್ದು ಅವರನೆಲ್ಲ ಬಿಟ್ಟು ಇನ್ನು  ಅನೇಕ ಹೊಸ ಹೊಸ ದೇವರುಗಳಿವೆ ಅಂತ..."

"ಹೌದೇನೋ ?? ನೀ  ಇಷೆಲ್ಲ ಹೇಳಿದ್ಮೇಲೆ ನಂಗು ಈ ಗೋಪಾಲಣ್ಣನ ಮಾಲ್ ನೋಡ್ಬೇಕು ,ಅಲ್ಲಿಗೆ ಬರೋ ದೇವತೆ ಗಳನ್ನೂ, ಬರೋ ಭಕ್ತರನ್ನು ನೋಡ್ಬೇಕು ಕಣೋ ... ನನ್ನೂ ಅಲ್ಲಿಗೆ ಕರ್ಕೊಂಡು  ಹೋಗೋ...." 

ಪೇಚಿಗೆ ಬಿದ್ದ ಮುರಳಿ " ಅಕ್ಕ ಮೊದ್ಲು ನಿ ಮುತ್ತು ಮಾರಿಯಮ್ಮನ ದರುಶನ ಮಾಡು ಆಮೇಲೆ ನೋಡುವ ಏನ್ ಮಾಡೋದು ಅಂತ..........."  ಹೀಗೆ ಹೇಳಿ ಸದ್ಯಕ್ಕೆ  ಹಾಗೆ ಜಾರಿಕೊಂಡನು......

ನಿಮಗಾಗಿ 
ನಿರಂಜನ್