ಮಂಗಳವಾರ, ನವೆಂಬರ್ 22, 2011

ಪ್ರೀತಿ ಅಂದರೆ ಅದು ಹೀಗೇನಾ ...........

ಗತಾನೆ ಆಫೀಸ್ ಗೆ ಎಲ್ಲರೂ ಬಂದು, ಬೆಳಗಿನ ಮೀಟಿಂಗ್ ಅಲ್ಲಿ ನೆನ್ನೆ ಮಾಡಿರದ ಕೆಲಸಗಳ ಬಗ್ಗೆ  ಮ್ಯಾನೇಜರ್ಗೆ ಬೇಜಾನ್ ಪುಂಗಿ,  "ಅದು ಹಾಗೆ ಇದು ಹೀಗೆ, ಅದೆಲ್ಲ ಮಾಡ್ಬೇಕಂದ್ರೆ ಇದೆಲ್ಲ ಬೇಕೇ ಬೇಕು ......." ಅಂತೆಲ್ಲಾ ಅವರನ್ನ ಸ್ವಲ್ಪ, ಅಲ್ಲ ಅಲ್ಲ  ಜಾಸ್ತಿನೆ  confuse ಮಾಡಿ. ಆಗದ  ಕೆಲಸಗಳನ್ನು ನಾವು ಇಂದು ಮಾಡಿಯೇ ತೀರುತ್ತೇವೆ ಅಂತ ಒಪ್ಪಿಕೊಂಡು, ಮೀಟಿಂಗ್ ಮುಗಿದ ತಕ್ಷಣ  "ಯಪ್ಪಾ ಮುಗಿಸಿದ ಪುಣ್ಯಾತ್ಮ ಮೀಟಿಂಗ್ನ " ಅಂತ ಮನದಲ್ಲೇ ಖುಷಿಪಟ್ಟು , ಜೋರಾಗಿ ನಿಟ್ಟುಸಿರೆಳೆದು , ನನ್ನೆಲ್ಲ ಸ್ನೇಹಿತರ ಜೊತೆಗೆ ಬೆಳಗಿನ ಉಪಹಾರಕ್ಕೆ  ಹೊರಟೆವು. ಮೀಟಿಂಗ್ ಹಾಲ್ ಇಂದ ಹೊರಗೆ ಬಂದರೆ ಸಾಕು ಅಲ್ಲಿ ಮಾಡಿದ ಪ್ರಾಮಿಸ್ಸುಗಳ ಬಗ್ಗೆ, ತೆಗೆದುಕೊಂಡ ನಿರ್ಧಾರಗಳ (decisions) ಬಗ್ಗೆ  ಸ್ವಲ್ಪಾನೂ ಯೋಚಿಸುತ್ತಲೇ  ಇರಲಿಲ್ಲ ನಾವುಗಳು.ಕಾರಣವೇನೆಂದರೆ ಅದು ತಿಂಡಿಯ ಸಮಯ. ತಿಂಡಿ ಸಮಯದಲ್ಲಿ ತಿಂಡಿ ತಿನ್ನುವುದು, ಊಟದ ಸಮಯದಲ್ಲಿ ಊಟ ಮಾಡುವುದು , ಈ ಮಲಗುವ ಸಮಯದಲ್ಲಿ ಮಲಗುವುದು ನಮ್ಮ ಮಂತ್ರ  ಆಗಿದ್ದರೆ, ಈ ತಿಂಡಿಯ ಸಮಯದಲ್ಲಿ ಮೀಟಿಂಗ್ ಮಾಡೋದು , ಊಟದ ಸಮಯದಲ್ಲಿ issue discussion ಮಾಡೋದು , ಮನೆಗೆ ಹೋಗುವ ಸಮಯದಲ್ಲಿ ಕೆಲಸ ಅಂದ್ರೆ work assign ಮಾಡೋದು ಈ software ಕಂಪನಿಗಳ ಸಂಪ್ರದಾಯವಾಗಿದೆ ಬಿಡಿ.

           ಇತ್ತ  ತಿಂಡಿಯವನು ಬೆಳ್ಳಂಬೆಳ್ಳಿಗ್ಗೆ ತಿಂಡಿಗಳನ್ನೆಲ್ಲಾ ತನ್ನ ಮನೆಯಲ್ಲಿಯೋ ಎಲ್ಲಿಯೋ ಮಾಡಿ , ನಮ್ಮ  cafeteria ಕ್ಕೆ ಬಂದು , ಆರಿದ ಇಡ್ಲಿ, ಬೆಳಗಿನ ಚಳಿಗೆ ತಣ್ಣಗಾದ  ಕೆಂಪನೆ ಸಾಂಬಾರು, ನೀರಿಗೆ ಸ್ವಲ್ಪ ಚಟ್ನಿ ಬೆರಸಿ  ತಯಾರಿಸಿದ್ದ ನೀರು ಚಟ್ನಿ, ಆ ಸೀದ ದೋಸೆಗಳು, ಎಣ್ಣೆಯಲ್ಲಿ ಮುಳುಗೆದ್ದ ಚಪಾತಿಯಂತೆ ಕಾಣುತ್ತಿದ್ದ  ಪೂರಿಗಳನ್ನು ಒಂದೇ ಸಾಲಿನಲ್ಲಿ ಜೋಡಿಸಿಕೊಂಡು ನಮಗಾಗಿಯೇ ಕಾಯುತ್ತ ಇದ್ದ ಅನ್ನಿಸುತ್ತಿತ್ತು . ಏಕೆಂದರೆ ನಾವುಗಳು ಅವನು ಏನೇ  ಕೊಟ್ಟರು , ಅದು ಹೇಗೆ ಇದ್ದರು, ಉಪ್ಪು ಇರಲಿ ಬಿಡಲಿ, ರುಚಿಯಾಗಿ ಇರಲಿ ಬಿಡಲಿ, ತಟ್ಟೆಗಳು ಸರಿಯಾಗಿ ತೊಳೆದಿರದಿದ್ದರು ಸಹ ಅಲ್ಲೇ ಜೊತೆಗೆ ಇಡುವ Tissue ಪೇಪರ್ ಅಲ್ಲಿ ತಟ್ಟೆಯನ್ನು ಒರೆಸಿಕೊಂಡು, ಏನನ್ನು ಅವನಿಗೆ ಅನ್ನದೆ, ಆಡದೆ , ಅವನು ಕೊಟ್ಟಿದ್ದನ್ನೇ ಮಹಾ ಪ್ರಸಾದವೆಂದು  ತಿನ್ನುವ ಮಹಾ ಸಾದುಗಳು ನಾವು. ಆ ತಿಂಡಿಯವನಿಗೂ ಗೊತ್ತು  ನಾವು "ಸಾಫ್ಟ್ ಎಂಜಿನೀರ್'s"ಅಂತ. ಪ್ರತಿ ದಿನದಂತೆಯೇ ಈ ದಿನವು ದೂರದಿಂದಲೇ ಇದ್ದ  ಬಾರಿ ಭಕ್ಷ್ಯಗಳೆಲ್ಲವನ್ನ ನೋಡಿ ಮುಖ ಸಣ್ಣಗೆ ಮಾಡಿಕೊಂಡು ಮನದಲ್ಲೇ ನಮ್ಮ ಕಂಪನಿಯ  ADMINಗೆ, ಅಡುಗೆ ಭಟ್ಟನಿಗೆ, ತಿಂಡಿ ಬಡಿಸಿ ಬಡಿಸಿ ಕೊಡುತ್ತಿದ್ದರು ಕಳ್ಳನಂತೆ ಕಾಣುತ್ತಿದ್ದ ಕೃಷ್ಣ ವರ್ಣದ ಆ ಹುಡುಗನಿಗೆ, ಬಾಯಿ  ತಗೆದುಕೊಂಡೇ  ಇರುತ್ತಾ ಇದ್ದ  cashierಗೆ ಮನ ಬಂದಂತೆ "ಮನಸ್ಸಿನಲ್ಲಷ್ಟೇ"  ಬಯ್ಯುತ್ತಾ, ಅವುಗಳಲ್ಲೇ ಸ್ವಲ್ಪ ಉತ್ತಮವಾಗಿ ಕಾಣುತ್ತಿದ್ದ 2 ಇಡ್ಲಿ ಮಾತ್ರ ತೆಗೆದುಕೊಂಡು, ಇಡೀ ಶಾಪವನ್ನೇ ಅವರಿಗೆಲ್ಲ ಹಾಕುತ್ತಾ , ಕಷ್ಟ ಪಟ್ಟು ಮುಖ ಕಿವುಚಿಕೊಂಡು ತಿನ್ನಲು ಶುರು ಮಾಡಿದ  ನಮ್ಮ ನನ್ನ ಕತೆಯ ನಾಯಕ ಸಂಜುವಿನ  ದುಃಖ ನನಗೆ ನೋಡಲಾಗುತ್ತಿಲ್ಲ . ನಾನೋ  ಮನೆಯಲ್ಲೇ  ತಿಂಡಿ ಮುಗಿಸಿ ಬಂದಿದ್ದೆ. ಜೊತೆಗಿದ್ದ ಇನ್ನೊಬ್ಬ ಸ್ನೇಹಿತ ನಮ್ಮ ಮಂಜು ಮಾತ್ರ  ಆ ದಿನ  ಸ್ವಲ್ಪ ವಿಶೇಷವಾಗಿದ್ದರಿಂದ ಯಾವ ತಿಂಡಿಯನ್ನು ತಿನ್ನದೇ, ಕೇವಲ ಒಂದೇ ಒಂದು ಲೋಟ ಹಣ್ಣಿನ  ಜ್ಯೂಸ್ ,ಜೊತೆಗೆ ಒಂದೆಂಟು(8)  ಬಗೆಯ ಹಣ್ಣುಗಳನ್ನು ಕುಯ್ದಾಕಿ ರೆಡಿ ಮಾಡಿದ್ದ  ಹಣ್ಣುಗಳ ಸಲಾಡ್ ( fruit salad) ತಿನ್ನುತ್ತ , " ಶಿಷ್ಯ ಈ ದಿನ ನನ್ನದು ಉಪವಾಸ ಕಣೋ , ಮಹಾ ಗಣಪತಿಯ ಸಂಕಷ್ಟಿ, ನಾ ಈದಿನ ಏನನ್ನು ತಿನ್ನೋಲ್ಲ" ಅಂತ ಹೇಳುತ್ತಾ ಇದ್ದ ,  ಪಾಪ ನಮ್ಮ ಶಿಷ್ಯ ಅದೇ ಸಂಜು ಮಾತ್ರ ಅಲ್ಲಿಯೇ ಬಂದು ಬೇರೆ ದಾರಿಯಿಲ್ಲದೇ ಆ ತಿಂಡಿಯನ್ನೇ ತಿನ್ನಲು ಶುರು ಮಾಡಿದ. ಮೇಲೆ ಹೇಳಿದ ರೀತಿ ತಿಂಡಿಯಿದ್ದರು ಸಹ  ಅದನ್ನು ತಿನ್ನಲು ಎಳೆ ಬಿಸಿಲಿನಲ್ಲಿ ಒಂದು ದೊಡ್ಡ ಸಾಲೆ ಇರುತ್ತಾ ಇತ್ತು, ಆ cashier ನಮ್ಮ ತಿಂಡಿಯನ್ನು  ತಿನ್ನಲೂ  ಜನ ಸಾಲು ಸಾಲಾಗಿ ಕಾದು , ನಿಂತು ತಿನ್ನುತ್ತಾರೆ ಅಂತ ಒಳ ಒಳಗೆ ಬೀಗುತ್ತಿದ್ದ ಹೆಮ್ಮೆಯಿಂದ, ಸಾಲಿನಲ್ಲಿ ನಿಂತವರಾಕುತ್ತಿದ್ದ  ಶಾಪವನೆಲ್ಲ  ಅದೆಲ್ಲಿಗೋ ಒರಸಿಕೊಂಡು.
                                                       


                                                   

       ತಿಂಡಿ ತಿನ್ನುವ ಸಮಯದಲ್ಲಿ ನಮ್ಮ ಶಿಷ್ಯ ಸಂಜು ಕೋಪ  ತಾರಕಕ್ಕೆ ಏರಿರುತ್ತಿತ್ತು , ಯಾರಾದರೂ ಅವನೊಡನೆ ಆ ಸಮಯದಲ್ಲಿ  ಮಾತನಾಡಿದರೆ ಸಾಕು ರೇಗಿಬಿಡುವ ಸಮಯ ಅದು. ನಾವು ಕೂತ  ಜಾಗದಲ್ಲೇ ಆಗ ತಾನೇ ಮೇಲೇರಿದ ಸೂರ್ಯ ತನ್ನ ರಷ್ಮಿಗಳನ್ನ ಹದವಾಗಿ  ನಮ್ಮ ಮೇಲೆ ಹರಿಯ ಬಿಟ್ಟಿದ್ದ , ೫ ನೆ ಮಹಡಿಯಾದ್ದರಿಂದ  ಆ ಕಡೆ ಇಂದ ಜೋರಾಗಿ ಗಾಳಿ ಕೂಡ ಬೀಸುತ್ತಾ ಇತ್ತು. ಸಂಜು ತಿಂಡಿಯ ಮೇಲಿದ್ದ ಕೋಪವನ್ನು ,  ಮುದ ನೀಡುತ್ತಿದ್ದ ಆ ಎಳೆ  ಬಿಸಿಲು ಮತ್ತು  ಗಾಳಿಯ ಜೊತೆಗೆ ಅವರಪ್ಪ- ಅಜ್ಜಿಯ ಮೇಲು ಈ ರೀತಿ ವ್ಯಕ್ತ ಪಡಿಸುತ್ತಾ ಇದ್ದ " ಶಿಷ್ಯಾ ಏನೋ ಇದು ಅವನೌನು ಈ ಬಿಸಿಲು, ಬೆಳ್ ಬೆಳಗ್ಗೆನೆ  ಸುರಿತೈತಿ  , ಅವರಜ್ಜಿ ....  ಜೊತೆಗೆ ಈ ಹಾಳಾದ್ ಗಾಳಿ ಬೇರೆ.... ತತ್ , ಸಾಕಾಗಿದೆಯಪ್ಪ  ಇದೆಲ್ಲ..... ". ಆದರೆ   ನಮಗೇನು ಬಯ್ಯುವ ವಿಷಯವೇನು ಹೊಸದಾಗಿರಲಿಲ್ಲ, ಇದೊಂದು ತೀರ ಸಾಮನ್ಯವಾಗಿ ನಡೆಯುವ ಸಾದಾರಣವಾದ  ಪಕ್ರಿಯೇ ಆಗಿ ಹೋಗಿತ್ತು. ಆದ್ದರಿಂದ ನಾನು ಈ ತಿಂಡಿ ತಿನ್ನುವ ಸಮಯದಲ್ಲಿ ಸಂಜುವನ್ನು  ಜಾಸ್ತಿ ಮಾತನಾಡಿಸುತ್ತಿರಲಿಲ್ಲ, ಮಾತಿಗೂ  ಅವನನ್ನು ಕೆಣಕದೆ,  ನಮ್ಮ ಮಂಜನ ಜೊತೆ ಮಾತ್ರ ಮಾತನಾಡುತ್ತಾ ಇರುತ್ತಿದ್ದೆ. ತಿಂಡಿ ತಿನ್ನುವಾಗ  ಯಾವಾಗಲು ಮುಖ ಸಿಂಡರಿಸಿಕೊಂಡಿರುತ್ತ ಇದ್ದ ಸಂಜುಗೆ , ಇಂದಿನ ದಿನ ಅವನ ಜೀವದ ಗೆಳತಿ ಸ್ನೇಹ ಆಡಿದ ಜಗಳ ಅವನನ್ನು ಇನ್ನು ಸಿಟ್ಟಿಗೇರಿಸಿತ್ತು.
              ಅದೇ ಕ್ಷಣ  ಎಲ್ಲಿಂದಲೋ ಒಂದು ಫೋನ್ ಕರೆ  ಬಂತು. ಫೋನ್ ರಿಂಗ್ ಆಗುತ್ತಲೇ ಇತ್ತು,  ನಾವು " ಲೊ ಸಂಜು  ನಿಂಗೆ ಕಣೋ ಕಾಲ್ ಬಂದಿರೋದು ಎತ್ತೋ ಫೋನ್ "  ಅಂದ್ರೂ , ಶಿಷ್ಯ ಸಿಟ್ಟಿನಲ್ಲಿ ನಮ್ಮನ್ನು ಒಮ್ಮೆ ನೋಡಿ ಮತ್ತೆ ತಿಂಡಿ ತಿನ್ನುವುದಕ್ಕೆ ಶುರು ಮಾಡಿದ. ಒಂದು ನಿಮಿಷ ಆದ ಮೇಲೆ  ಮತ್ತೆ ಫೋನ್ ಕಾಲ್,  " ಯಪ್ಪ ಈ ಹಾಳಾದ್ ತಿಂಡಿ ತಿನ್ನೋಕು ಬಿಡೊಲ್ಲ ಜನ "  ಅನ್ನುತ್ತಾ ಜೇಬಿಗೆ ಕೈ ಹಾಕಿ ಫೋನ್ ತೆಗೆದು ನಂಬರ್ ನೋಡತೊಡಗಿದ, ಅದೇನೋ  ಹೆಸರು ಬಂದದ್ದನ್ನು ನೋಡಿ, ತಕ್ಷಣ ತಿಂಡಿ ತಿನ್ನುವುದನ್ನೇ ನಿಲ್ಲಿಸಿದ, ಮುಖದಲಿ ಏನೋ ಸಂತೋಷ, ಖುಷಿ ಆದರು ನಮ್ಮ ಬಳಿ ತೋರಿಸದೆ  ಸ್ವಲ್ಪ ಗತ್ತಿನಲ್ಲೇ  " ಹೇ  ಹೇಳು , ಎನ್ ಸಮಾಚಾರ ", ಅಂತ ಅಂದ. ಸ್ವಲ್ಪ ನಿಶ್ಯಬ್ದವಾಗಿದ್ದರಿಂದ ಮತ್ತು ಫೋನ್ volume ಜಾಸ್ತಿ ಇಟ್ಟಿದ್ದರಿಂದ, ಆಕಡೆ ಇಂದ ಮಾತನಾಡುತ್ತಾ ಇದ್ದದ್ದು ಒಂದು ಹುಡುಗಿ ಅಂತ ನಮಗೆ ತಿಳಿಯಿತು, ಅವನ  ಮುಖ ಭಾವಗಳು, ಮಾತನಾಡವ ಪರಿ ನೋಡಿ ನಮಗೆ ಅವಳು ಅವಳೇ ಅಂತ ಇನ್ನೋರರೋಷ್ಟು ಖಾತ್ರಿ ಆಯಿತು. ಅವಳ ದ್ವನಿ ನಮಗೂ ಕೇಳಿಸುತ್ತಿತ್ತು.ನಾನು ಮತ್ತೆ ಮಂಜ ಅವರ ಸಂಭಾಷಣೆಯನ್ನು ಕೇಳಲೇ ಬೇಕು, ಅದೆಂತ ವಿಷಯಗಳನ್ನು ಗಂಟೆ ಗಟ್ಟಲೆ ಪ್ರೇಮಿಗಳಿಬ್ಬರು ಮಾತನಾಡುತ್ತಾರೆ ಎಂಬುದನ್ನು ಕದ್ದು ಕೇಳಲೇ ಬೇಕೆಂದಿದ್ದ ನಮ್ಮ ಬಹು ದಿನದ ಬಯಕೆಯನ್ನು ಈ ದಿನ ಈಡೇರಿಸಿ ಕೊಳ್ಳಲೆಬೇಕೆಂದು ಎದ್ದೋಗದೆ ಅಲ್ಲೇ ಕೂತೆವು, ಅವರ ಸಂಭಾಷಣೆಗೆ ಕಿವಿಗೊಟ್ಟು. ಅಷ್ಟೊತ್ತಿಗೆ ಸಂಜು ನಮ್ಮನ್ನು ಮರೆತೇ ಹೋಗಿದ್ದ. ಯಾವಾಗಲು  ಹುಡುಗ ಅಥವಾ  ಹುಡುಗಿ ಫೋನ್ ಬಂದಾಕ್ಷಣ , ಊಟ ಮಾಡುತ್ತಿದ್ದರು, ಎಷ್ಟೇ ಆಪ್ತ ಸ್ನೇಹಿತನೊಂದಿಗೆ ಇದ್ದರು ಸೈಡಿಗೆ ಹೋಗಿ ಮಾತಾಡುವುದು ಸಹಜ. ಆದ್ರೆ ಇವತ್ತು ಮಾತ್ರ  ಈ ಶಿಷ್ಯ ನಮ್ಮ ಪಕ್ಕದಲ್ಲೇ ಕೂತು ಮಾತನಾಡಲು ಶುರು ಮಾಡಿದ ಕಾರಣ ಆ ಅರ್ಧ ಮುಗಿಸಿದ ಆ ತಿಂಡಿ. ಸಂಜುನೇ  ಈ ಮೊದಲು ನಮಗೆ ಹೇಳಿದ ಪ್ರಕಾರ ಅವಳ ಹೆಸರು "ಸ್ನೇಹ", ಮೊನ್ನೆ ತಾನೇ ಬೇಜಾನ್ ಜಗಳವಾಡಿ , ನೆನ್ನೆಯವರೆಗೂ  ಅವಳನ್ನು  ಸಕ್ಕತಾಗಿ ನಮ್ಮತ್ರ  ಬಯ್ಯುತ್ತಾ ಇದ್ದ. ಅವಳ ಮೇಲೆ ಬೇಜಾನ್ ಕೂಪ ಬೇರೆ ಇತ್ತು ಅಂತ ನಮಗೆ  ಹಿಂದಿನ ದಿನ ಹೇಳಿದ್ದ ,ಗೊತ್ತಿಲ್ಲ ನಿಜವಾಗಿಯೂ ಅವನಿಗೆ ಕೋಪ ಇತ್ತೋ  ಅಥವಾ ಸುಮ್ನೆ ನಾಟಕವೋ , ಏನೋ ಗೊತ್ತಿಲ್ಲ  !  " ಅವಳನ್ನು ಇನ್ನು ಮುಂದೆ  ಕಣ್ಣೆತ್ತಿ  ಕೂಡ ನೋಡುವುದಿಲ್ಲ, ಮಾತು ಆಡೋಲ್ಲ , ತುಂಬಾ ಗಾಂಚಲಿ ಮಾಡ್ತಾಳೆ ,ಫೋನ್ ನಂಬರ್ ಕೂಡ ಡೆಲೀಟ್ ಮಾಡಿದೀನಿ" ಅಂತ ಫೋನ್ ತೋರ್ಸಿದ್ದ ಇಂದಿನ ದಿನ ರಾತ್ರಿ ನಾವೆಲ್ಲಾ ಊಟ ಮಾಡುವಾಗ , ಅದೇ ಕೋಪ ಮತ್ತು ನಿರಾಸೆ ಅವ ತಿಂಡಿ ತಿನ್ನಲು ಶುರು ಮಾಡಿದಾಗೂ  ಮತ್ತೆ  ಮತ್ತೆ ನಮಗೆ ಅವನ ಮುಖದಲ್ಲಿ ಕಂಡಿತ್ತು. ಅವಳು ಫೋನ್ ಮಾಡಿದ ಕ್ಷಣದಿಂದ ಅದೆಲ್ಲಾ ಮಾಯವಾಗಿ ಹುಡುಗ ಜಿಂಗ್ ಆಗಿದ್ದ. ಅಷ್ಟರಲ್ಲಿ  ಆ ಕಡೆಯಿಂದ

ಸ್ನೇಹ :  ಯಾಕೋ  ಆಗಲೇ ನೀ ಫೋನ್ ಎತ್ಲಿಲ್ಲ  ?

ಸಂಜು : " ಸುಮ್ನೇ.... " ಸ್ವಲ್ಪ ಕೋಪವಿರುವ ಹಾಗೆ ನಟಿಸುತ್ತ......

ಸ್ನೇಹ :"ಕೋಪ ಏನೋ  ನನ್ನ ಮೇಲೆ ... ಹೇಳೋ ??? " ಸ್ವಲ್ಪ ಮೆಲು ದನಿಯಲ್ಲಿ.....  

ಸಂಜು  : ಇಲ್ಲ ,, ಆಗ್ಲೇ ಮೀಟಿಂಗ್ ಇತ್ತು, ಮ್ಯಾನೇಜರ್ ಜೊತೆ ಡಿಸ್ಕಶನ್ ಇತ್ತು...( ಏನೋ ಬಾರಿ ಕಡಿದು ಕಟ್ಟೆ ಹಾಕ್ತಿದ್ದ ರೀತಿ,, ಅಸಲಿಗೆ ನಮ್ಮ ಜೊತೆ ಎಣ್ಣೆ  ಕುಡಿದವರ ರೀತಿ ಮುಖ ಮಾಡಿಕೊಂಡು ಇಡ್ಲಿ  ತಿಂತಿದ್ದ  )

ಸ್ನೇಹ : ಹಾಗ, ನಾ ಏನೋ ನಿಂಗೆ ನನ್ನ ಮೇಲೆ ತುಂಬಾ ಕೋಪ  ಬಂದು ಫೋನ್ ಎತ್ತಲಿಲ್ಲ ಅಂತ ಅಂದುಕೊಂಡೆ, ನಿಜ ಹೇಳು  ನಿಜವಾಗಿಯೂ ಕೋಪ ಇಲ್ಲ ಅಂತ  ... ??? ( ಸ್ವಲ್ಪ ಮಳ್ಳಿಯ ರೀತಿ, ಸಣ್ಣ ದ್ವನಿಯಲ್ಲಿ )

ಸಂಜು ಹೇಗಪ್ಪ ಅಂತ ಅಂದ್ರೆ, ಅವನ ಅಕ್ಕನೋ, ತಂಗಿಯೋ,ಅಮ್ಮನೋ ಮಾತಿಗಾದ್ರು ಬೈದಿದ್ರೆ  ಅಂದಿದ್ದರೆ ತಿಂಗಳುಗಟ್ಟಲೆ ಮಾತ್ ಬಿಟ್ಟಿರುತ್ತ ಇದ್ದ. ಆದರೆ ಹುಡುಗಿಯ  ಈ ಮಾತು " ಕೋಪ ಏನೋ ನನ್ ಮೇಲೆ ??? " ಕೇಳಿದ ತಕ್ಷಣ  ವಿಷಕಂಠನ ರೀತಿ ಇದ್ದಬದ್ದ ಕೊಪವನೆಲ್ಲ ಗಟ ಗಟ  ಕುಡಿದು..... 

ಸಂಜು : ಇಲ್ಲ ಇಲ್ಲ ನಿನ್  ಮೇಲೆ ನನಗೆ ಕೋಪನ...? ಇಲ್ಲ ಕಣೋ ,, ಯಾಕೋ  ಆ ರೀತಿ ಯೋಚನೆ ಮಾಡ್ತಿಯಾ  ???  ಹೇಳು ಏನ್ ಸಮಾಚಾರ ??? ಅಂತ ಅಂದ..... ( ಹುಡುಗರು ಈ ಪ್ರೀತಿ ಜಾಸ್ತಿ ಆದ್ರೆ ಹುಡುಗಿಯರನ್ನು ಹೇಳಪ್ಪ, ಏನೋ , ಯಾಕೋ , ಹೋಗೋ , ಬಾರೋ, ಬಂಗಾರು ಅಂತೆಲ್ಲಾ  ಚಿಕ್ಕ ಮಕ್ಕಳನ್ನು ಮಾತ್ ಆಡಿಸುವ ರೀತಿಯಲ್ಲಿ ಮಾತ್ ಆಡಿಸುತ್ತಾರೆ ಪ್ರೀತಿಸುವ ಹುಡುಗಿಯನ್ನು )

ಸ್ನೇಹ : ಸಾರೀ ರೀ  ನೆನ್ನೆ ನಾ ಹಾಗೆಲ್ಲಾ ಮಾತ್  ಆಡಿದ್ದಕ್ಕೆ, ನಿಜವಾಗಿಯೂ ನೆನ್ನೆ ನಮ್ಮ ಅಮ್ಮ ನನಗೆ ತುಂಬಾ ಬೇಜಾರ್ ಮಾಡಿದ್ರು , ಸೊ ಆ ಸಿಟ್ಟನ್ನ ನಿಮ್ಮೇಲೆ ತೀರಿಸಿಕೊಂಡೆ ,  (ನಿಜವಾಗಿಯೂ ಬೇಜಾರಾಗಿತ್ತೋ ಅಥವಾ ಒಳೋ ಯಾರಿಗೆ ಗೊತ್ತು , ಇವನ್ನೊಂತು ಅಲ್ಲಿ ಬಿಸಿಲು ಗಾಳಿಗೆ ಜಗ್ಗದ ಬೆದರು ಗೊಂಬೆ ತರ ಹುಡುಗಿಯ ಸಿಟ್ಟು ಸೆಡವಿಗೆ ಸೋತ ಸುಬ್ಬನಾಗಿದ್ದಂತು  ನಿಜ )

ಸಂಜು :ಹೇ ಆತರ ಎಲ್ಲ ಯಾಕೆ ಸಾರೀ ಕೇಳ್ತೀಯಾ ?? ನಿಜವಾಗಿಯೂ ನನಗೆ ಕೊಪನೆ ಬರಲಿಲ್ಲ , ನನಗೆ ಕೋಪ ಬರುತ್ತಾ  ??? ಅದು ನಿನ್ ಮೇಲೆ ????  ನಿಜವಾಗಿಯೂ  ನನಗೆ ಕೋಪನೆ  ಬರೋಲ್ಲ ಗೊತ್ತಾ ??  ನನಗೆ ಕೋಪ ಬಂದಿರೋದನ್ನ  ನೀ ಯಾವತ್ತಾದ್ರು  ನೋಡಿದಿಯಾ  ??? ( ಶಿಷ್ಯ ನೆನ್ನೆ ಎಲ್ಲ ಉರ್ಕೊಂಡು ಸರಿಯಾಗಿ ರಾತ್ರಿ ನಿದ್ದೆ ಕೂಡ  ಮಾಡಿಲ್ಲ ಆದ್ರೂ  ಕೋಪಾನೆ ಇಲ್ಲ ಅಂತ dialogs   ಬಿಡ್ತಾ ಇದಾನೆ , ಮೊನ್ನೆ ಮೊನ್ನೆ ಆರ್ಟ್ ಆಫ್ ಲಿವಿಂಗ್ ಅಲ್ಲಿ ANGER MANAGEMENT ಅಂತ ಒಂದು ಕೋರ್ಸ್ ಬೇರೆ ಮಾಡಿದ್ದ ಅವನಿಗೆ ತುಂಬಾ ಸಿಟ್ಟು ಬರುತ್ತೆ ಆಗಾಗ ಅಂತ ;) )

ಸ್ನೇಹ : ಮತ್ತೆ ನೆನ್ನೆ ಯಾಕೆ ನನ್ನ ಮೆಸೇಜ್ ಗೆ  ರಿಪ್ಲೈ ಕೂಡ ಮಾಡ್ಲಿಲ್ಲ.... ನನಗೆ ತುಂಬಾ ಕೋಪ ಬಂತು , ಬೇಜಾರು ಕೂಡ ಆಯಿತು ಗೊತ್ತ  ??? ( ಇದನ್ನು ಕೇಳಿದ ತಕ್ಷಣ , ಮಾಡಿರದ ತಪ್ಪಿಗೆ ಶಿಷ್ಯನೆ ಕ್ಷಮೆ ಕೇಳಲು ರೆಡಿ ಆಗಿದ್ದ ... ಅಷ್ಟೊತ್ತಿಗೆ ಯಾಕೋ ಸುಮ್ಮನೆ ಆದ )
 
ಸಂಜು  " ಇಲ್ಲ ಚಿನ್ನ ನಾ ನೆನ್ನೆ ರಾತ್ರಿ ಆಫೀಸ್ ಅಲ್ಲಿ ತುಂಬಾ busy ಆಗಿ ಇದ್ದೇ,, ತುಂಬಾ ಕೆಲಸ ಇತ್ತು , ಜೊತೆಗೆ " ಯಾಕೆ ನನ್ನ ಸ್ನೇಹ ಸ್ವಲ್ಪ ಡಿಸ್ಟರ್ಬ್ ಆಗಿದ್ದಳಲ್ಲ, ಸರಿಯಾಗಿ ಮಾತ್ ಕೂಡ ಆಡಲಿಲ್ಲ"   ಅಂತ ಯೋಚಿಸುತ್ತ ಊಟ ಮಾಡೋಕೂ ಆಗ್ಲಿಲ್ಲ ಗೊತ್ತಾ.... " ..... ( ಹ ಹ ಹ,, ನೆನ್ನೆ ನಾನು ಮಂಜು ಮತ್ತೆ ನಮ್ಮ ಈ ಶಿಷ್ಯ ಎಲ್ಲರು  ಸೇರಿ ಒಂದು ದೊಡ್ಡ ಹೋಟೆಲ್  ಅಲ್ಲಿ  ಡಿನ್ನರ್ ಗೆ ಹೋಗಿದ್ವಿ. ಅಲ್ಲಿ ಅವ ತಿಂಡಿಗಳ ಜೊತೆ ತೀರ್ಥ ಕುಡಿದು ಸ್ವಲ್ಪ ದೇವರ ಮೇಲೆ ಭಕ್ತಿ ಜಾಸ್ತಿಯಾಗಿ ದೇವರಲ್ಲೇ ಲೀನವಾಗಿದ್ದ ಎಚ್ಚರವಿಲ್ಲದೆ  ,ಪ್ರಪಂಚದ ಪರಿವೆ ಇರಲಿಲ್ಲ ). ಅಷ್ಟೊತ್ತಿಗೆ ಹಾ ಹುಡುಗಿ  "ಯಾಕೆ ಊಟ ಮಾಡೋಕೂ ಟೈಮ್ ಸಿಗ್ಲಿಲಿಲ್ಲವಾ ??  , ಹೇ ಹುಷಾರು ಟೈಮ್ ಟೈಮ್ ಗೆ ಊಟ ಮಾಡು ಓಕೇ " ಅದಕ್ಕೆ ನಮ್ಮ ಶಿಷ್ಯ ಸಂಜು " ಸರಿ ಸರಿ , ಎನ್ ಮಾಡೋಕೆ ಆಗುತ್ತೆ ಕೆಲಸ  ಮಾಡ್ಲೆ ಬೇಕಲ್ಲೋ,  ಸೋ ನೀನು ಏನು ಊಟ ಮಾಡಿದೆ ರಾತ್ರಿ ??? "
            ಇಲ್ಲಿಯವರೆಗೂ ಪೀಟಿಕೆ ಮುಗಿದಿತ್ತು ಅಷ್ಟೇ .... ಈಗ ನೆನ್ನೆ ರಾತ್ರಿಯ ಊಟದ ಬಗ್ಗೆ ಈ ದಿನ ಬೆಳಿಗ್ಗೆ ಕೇಳೋಕೆ  ಶುರು ಮಾಡಿದ ನಮ್ಮ ಸಂಜು. " ಲೋ ಇವ ಕುಯ್ಯೋಕೆ  ಶುರು ಮಾಡಿದ ಕಣೋ " ಅಂತ ನಮ್ಮ ಮುಗುಳು  ನಗೆ  ಮಂಜ ನಕ್ಕೆ ಬಿಟ್ಟ ಆ  ಕಿಸ್ಸಕ್ಕನೆ  :) . ಪ್ರೇಮಿಗಳ ಮಾತು-ಕತೆ ಕೇಳಲೇ ಬೇಕೆಂದಿದ್ದ ನನಗೆ ಇದೊಂದು ಒಳ್ಳೆಯ ಚಾನ್ಸ್ ಅಂದು, ಕಣ್ಣು ಸೊನ್ನೆ ಮಾಡಿ" ಸುಮ್ಮನಿರೋ ಇನ್ನು ಅದೇನು ಮಾತಾಡ್ತಾರೆ ಕೇಳೋಣ ಅಂತ " ಹೇಳಿದ ನಮ್ಮ ಮಂಜನಿಗೆ. ರಾತ್ರಿ ಊಟದ ಬಗ್ಗೆ ಕೇಳಿದ ಸಂಜುವಿಗೆ ಉತ್ತರ ಹೇಳಲು ಸ್ನೇಹ ಶುರು ಮಾಡಿಯೇ ಬಿಟ್ಟಳು.

ಸ್ನೇಹ : ರಾತ್ರಿ, ಎನ್ ಊಟ ಮಾಡಿದೆ  ..??? ....( ಸ್ವಲ್ಪ ತುಂಟತನದಿಂದ ಪ್ರೀತಿ ಮತ್ತೆ ನಾಚಿಕೆಯಿಂದ ಎಳೆದು ಎಳೆದು ಮಾತ್ ಆಡಲು ಶುರು ಮಾಡಿದಳು )  ಒಂದ್ ನಿಮಿಷ ತಡಿ ಹೇಳ್ತೀನಿ,,, ಹಾ ನೆನಪು ಆಯಿತು ,, ಚಪಾತಿ ಮತ್ತೆ ಸ್ವಲ್ಪ ರೈಸ್.....
ಸಂಜು:  ಚಪಾತಿ ನಾ  ??

ಸ್ನೇಹ :ಹಾ ಚಪ್ ಚಪ್  ಚಪಾತಿನೇ :)

ಸಂಜು  ಎಷ್ಟು ತಿಂದೆ ???

ಸ್ನೇಹ : ಒಂದೇ ಒಂದು ಮತ್ತೆ ಆರ್ದ...

ಸಂಜು  ಎನ್ ಪಲ್ಯ ಮಾಡಿದ್ರು ಚಪಾತಿಗೆ ????

ಸ್ನೇಹ : hmm ಅದೇನೋ ಅಮ್ಮ ಮಾಡಿತ್ತು ನನಗೆ ಗೊತ್ತಿಲ್ಲ...  ಅದೇನ್ ತರಕಾರಿ ಅಂತ...(  ತೀರಾ ಇನೊಸೆಂಟ್ ತರ ಹೇಳಿದಳು  )

ಸಂಜು  ತರಕಾರಿ ಏನು ಅಂತನು ನಿಂಗೆ ಗೊತ್ತಿಲ್ಲವಾ  ??? ಅದು ಹೇಗಿತ್ತು ಅಂತ ಹೇಳು ನಾ ಹೇಳ್ತೀನಿ  ???

ಸ್ನೇಹ :ಅದೇ ಉದ್ದಕ್ಕೆ..... ದುಂಡಕ್ಕೆ ...... ಸಿಪ್ಪೆ ತಗೆದು ಮಾಡ್ತಾರಲ್ಲ ಅದು... ನಿಂಗೆ ಗೊತ್ತಾ ಅದು ಏನು ಅಂತ ???

ಅದಕ್ಕೆ ನಮ್ಮ ಸಂಜು ಶಿಷ್ಯ " ಹೇಯ್ ಗೊತ್ತು ಗೊತ್ತು ,, MOSTLY  ಅದು ಮಂಗಳೂರು  ಸೌತೆ ಕಾಯಿಯೇ  ಇರಬೇಕೆಂದೂ ಊಹಿಸಿದ. ಅದಕ್ಕೆ ಅವಳು "  ಅಲ್ಲ ಅದೇನೋ ಬೇರೆ ಅಂತ ಅಂದಳು ", ಶಿಷ್ಯನ ಮುಖ ಇಷ್ಟಾಗಿ "ಮತ್ತೆ ಏನ್ ಸಮಾಚಾರ ಅಂತ ಅಂದ". ಇನ್ನೂ ರೈಸ್ ತಿಂದ ವಿಷಯಕ್ಕೆ ಬಂದಿಲ್ಲ,ಆಗಲೇ  ಅವರು ಸುಮಾರು 20 ನಿಮಿಷ ಆಗಿತ್ತು ಇಷ್ಟು ಮಾತು ಆಡಲು, ಇದನ್ನು ನಾ ಯೋಚಿಸುವೊಷ್ಟರಲ್ಲಿ ಬಂದೆ ಬಿಟ್ಟ ನೋಡಿ ರೈಸ್ ವಿಷಯಕ್ಕೆ, ಮರೀಬೇಡಿ ಇದೆಲ್ಲ ಇನ್ನೂ ರಾತ್ರಿ ಊಟದ ಬಗ್ಗೆ ಪ್ರತಿದಿನ ಸಾಮಾನ್ಯವಾಗಿ  ಪ್ರೇಮಿಗಳು ಬೆಳಿಗ್ಗೆ ಅಥವಾ ಮದ್ಯಾಹ್ನ  ಮಾತನಾಡುವ ಪರಿ :)

ಸಂಜು  ಹೋಗ್ಲಿ ಬಿಡು ಯಾವ್ದೋ ಒಂದ್ ತರಕಾರಿ ,,, ಮತ್ತೆ ಎನ್ ಏನ್  ತಿಂದೆ  ????

ಸ್ನೇಹ ಸ್ವಲ್ಪ ಅನ್ನ ಕಣೋ, ಸಾರು ಇಷ್ಟ ಆಗ್ಲಿಲ್ಲ, ಅಮ್ಮ ಇತ್ತೀಚಿಗೆ ಸಾರು ಸರಿ ಮಾಡೋಲ್ಲ.........

ಸಂಜು  ಹ ಹ ಹ,, ಯಾಕೆ ಸರಿ ಮಾಡೋಲ್ಲ ??? ನೀ ಹೆಲ್ಪ್ ಮಾಡು ,  ನೀ ಕೂಡ ಅಡುಗೆ ಮಾಡು ,,,, ಸಕತ್ ಟೇಸ್ಟೀ ಆಗಿ ಇರುತ್ತೆ ನೀ ಎನ್ ಮಾಡಿದ್ರೂ ( ಎನ್ ಶಿಷ್ಯ ದಿನ ಅವಳ ಕೈಯ ಅಡುಗೆ ತಿಂದ್ ತಿಂದು ತೇಗಿದ್ದ ನೋಡಿ, ಏನೋ ಬೇಜಾನ್ ಟೇಸ್ಟೀ ಆಗಿರುತ್ತೆ ಅಂತೆ ಅವಳ ಕೈ ರುಚಿ ;), ಅವರಮ್ಮಗೆ ಈ ರೀತಿ ಒಂದ್ ಸಾರಿ ಆದರು ಹೇಳಿದ್ದನೋ ಇಲ್ಲವೋ ಗೊತ್ತಿಲ್ಲ ;) "

ಅದಕ್ಕೆ ಆ ಹುಡುಗಿ ಸ್ನೇಹ  " ನಾ ಏನಾದ್ರೂ ಅಡುಗೆ ಮಾಡಿದ್ರೆ ಅಷ್ಟೇ,, ತಿನ್ನೋರು  ಕತೆ  ಗೋತಾ ಅಷ್ಟೇ ಕಣೋ "

ಸಂಜು : ಹ ಹ ಹ,, ನೀ ಎನ್ ಮಾಡಿದ್ರು  SOOOOOPER  ಆಗಿ ಇರುತ್ತೆ ಕಣೆ, ಕಣ್ಣು ಮುಚ್ಚಿಕೊಂಡು ತಿಂತಾರೆ ನೀ ಎನ್ ಕೊಟ್ರೂ...... ( ಪ್ರೀತಿಯಲ್ಲಿ ಎಲ್ಲರಿಗೂ ಕಣ್ಣು ಕುರುಡಾಗುತ್ತೆ ಅಂತ ಗೊತ್ತಿತ್ತು ಆದ್ರೆ ರುಚಿ  ಕೂಡ ನಾಲಿಗೆಗೆ ಗೊತ್ತಾಗೋಲ್ಲ ಅಂತ ಶಿಷ್ಯ ಹೇಳಿದ ಮೇಲೆ ನನಗೆ ಗೊತ್ತಾಗಿದ್ದು. ಅದೇನೋ ಯಾವಗಲೋ ಮೊಸರನ್ನ ಮಾಡಿದಳಂತೆ ಅದು ಏನೋ ತುಂಬಾ TESTY ಮತ್ತೆ DIFFERENT ಆಗಿ ಇತ್ತಂತೆ ... ಏನ್  ಮೊಸರನ್ನ ಅದೇನು DIFFERENT ಆಗಿರುತ್ತೋ ಯಾರಿಗೆ ಗೊತ್ತು ??? )

ಸ್ನೇಹ ನೋ ಚಾನ್ಸ್ ........ನನಗೆ ಅಡುಗೆ ಮಾಡೋಕೆ ಬರೋಲ್ಲ ಬಿಡು,, ಒಂದ್ ಸಾರಿನು ಅಡುಗೆ ಮನೆಗೆ ಹೋಗಿಲ್ಲ ನಾ
( ಎಲ್ಲೋ ಒಳ ಒಳಗೆ ಬೇಜಾರ್ ಆದ್ರೂ ಈ ವಿಷಯದಲ್ಲಿ,,,,,, ನಮ್ಮ ಶಿಷ್ಯ ಏನೋ ತುಂಬಾ ಅಡ್ಜಸ್ಟ್ ಮಾಡಿಕೊಳ್ಳೋ ಸ್ವಭಾವ ನಂದು ಅಂತ ತೋರಿಸಿ ಕೊಳ್ಳುತ್ತಾ )

ಸಂಜು :  ಕಲಿತರೆ  ಆಯಿತು ಬಿಡು ಆಮೇಲೆ,,,, ಈಗ ಯಾಕೆ ಚಿಂತೆ.... ???  ಮತ್ತೆ ಎನ್  ಹಾಕಿಕೊಂಡು ತಿಂದೆ ಅನ್ನದ ಜೊತೆ  ಸಾರು ಸರಿ ಇರಲಿಲ್ಲ ಅಂತ ???

ಸ್ನೇಹ ಅದೇ ಉಪ್ಪಿನಕಾಯಿ,, ಮಸ್ತ್  ಇತ್ತು ಗೊತ್ತಾ ???

ಸಂಜು  ಉಪ್ಪಿನಕಾಯಿ,,.. ಹೇ WOW  ನನಗು ತುಂಬಾ ಇಷ್ಟ ಕಣೆ ಉಪ್ಪಿನಕಾಯಿ ಅಂದ್ರೆ,, ಯಾವ್ ಉಪ್ಪಿನಕಾಯಿ ??? ಮಾವಿಂದೋ  ??? ನಿಂಬೇದೊ ?? ( ಅದೇನೋ ಹುಡುಗಿಗೆ ಇಷ್ಟ ಆಗೋದೆಲ್ಲ ಇವನಿಗೂ ಇಷ್ಟ ಆಗ್ತಿದೆ, ಇದೇನಾ attitude ಅಂಡ್ taste  ಮ್ಯಾಚ್ ಆಗೋದು ಅಂದ್ರೆ ??? )

ಸ್ನೇಹ : " ಚಳ್ಳೆರೆಕಾಯಿದು ,, ನಮ್ಮಕಡೆ ಅದೇ ತುಂಬಾ ಸ್ಪೆಷಲ್  ಗೊತ್ತಾ ..... ?, ಮಸ್ತ್ ಇರುತ್ತೆ "

ಆ ಕಾಯಿ ಬಗ್ಗೆ ಎಂದು ಕೇಳದಿದ್ದರು ಶಿಷ್ಯ  " ಓ ಅದಾ  ಸಕ್ಕತ್ತಾಗಿ ಇರುತ್ತೆ ಅಲ್ಲವ,  ಅದುನ್ನ  ನಮ್ಮ ಅಮ್ಮ ಕೂಡ ಮಾಡ್ತಾನೆ ಇರ್ತಾರೆ,,, ನಂಗೆ ಅದೇ  ತುಂಬಾ  ಇಷ್ಟವಾದ ಉಪ್ಪಿನಕಾಯಿ U KNOW ????  ಅಂದಾಗ ಅದಕ್ಕೆ ಅವಳು
" ಹೋ  ನನಗು ಅದೇ ತುಂಬಾ  ಇಷ್ಟ  SAME PINCH ;)" ಅಂತ ಅಂದ್ಲು ..... ನಮಗೆ ನಗು ಬಂತು ಅದನ್ನ ಕೇಳಿ.....

ಸಂಜು  ಮತ್ತೆ ಏನ್ ಏನ್  ತಿಂದೆ ??? ( ಸಂಜುನೋ ಮಾತು ಬೆಳೆಸುತ್ತಲೇ ಇದ್ದ )

ಅದಕ್ಕೆ ಅವಳು " ಮತ್ತೆ.... ಮತ್ತೆ...."  ಸ್ವಲ್ಪ ಯೋಚಿಸುತ್ತ "  ಹಾ ಹಪ್ಪಳ , ಯಾವ್ ಹಪ್ಪಳ  ???  ಜೋಳದ್ದೋ ?? ಉದ್ದಿನ ಹಪ್ಪಳವೋ ??? ಉತ್ತರವಾಗಿ ಅವಳು " ಅಕ್ಕಿಯದು " ಅಂದಾಗ 2 ಸೆಕೆಂಡ್ ಸುಮ್ನೆ ಆದ ಶಿಷ್ಯ... 

        ಯಪ್ಪ ಯಪ್ಪ ಹೀಗೆ ಸಾಗುತ್ತಾ ಹೋಗ್ತಾ ಇತ್ತು ಅವರ ಸಂಭಾಷಣೆ , ನಾ ಏನೋ ಪ್ರೇಮಿಗಳು ಏನೋ ಬೇರೆ ಬೇರೆ ರೀತಿಯಲ್ಲಿ , ಕವನಗಳೋ, ಹಾಡುಗಳೋ, ಏನೋ ರಸಿಕತೆಯಿಂದ, ಒಬ್ಬರಿಗೊಬ್ಬರು ಪಿಸು ಮಾತುಗಳನ್ನೋ ,,,, ಆಡ್ತಾರೆ ಅಂತ ಅಂದುಕೊಂಡಿದ್ದೆ, ಆದಿನವೇ ಗೊತ್ತಾಗಿದ್ದು ಇವ್ರು ಅದೆನೆಲ್ಲ ಬಿಟ್ಟು ಬರಿ ಊಟ, ತಿಂಡಿ, ಅವ್ಳು ಹಿಂಗೆ ಅಂದ್ಲು , ಇವ್ನು ಹಾಗೆ ನೋಡಿದ , ಅಮ್ಮ ಹಾಗೆ ಅಂದ್ರು , ಅಪ್ಪ ಬೈದ್ರು , ನೀ ಯಾಕೆ ನೆನ್ನೆ ಕಾಲ್ ಮಾಡ್ಲಿಲ್ಲ, ನನಗೆ ಕೋಪ ಬಂದಿದೆ, etc etc ಗಳನ್ನಷ್ಟೇ ಮಾತ್ ಆಡ್ತಾರೆ ಅಂತ ಆದಿನವೇ ನನಗೆ ಗೊತ್ತಾಗಿದ್ದು ....

ಇನ್ನೂ ತಮಾಷೆಯ  ವಿಷಯ ಅಂದ್ರೆ ಅವಳು ಮಾತ್  ಹಾಡೋವಾಗ   ಏನೋ ಸೌಂಡ್ ಆಯ್ತು ಅಂತೆ  ಅದಕ್ಕೆ ಶಿಷ್ಯ
ಕೇಳ್ತಾನೇ "ಎನ್ ಸೌಂಡ್ ಅದು ನಿನ್ ಹಿಂದೆ ??? "

ಸ್ನೇಹ ಅವಾ..... ನಾಯಿಗಳು,, ನನ್ನ  ಪ್ರೀತಿಯ ನಾಯಿಗಳು  ಗೊತ್ತಾ ????

ಸಂಜು  ಹೇ sooooper ,,,  ದೊಡ್ಡದೋ ?? ಚಿಕ್ಕದೋ ನಿಮ್ಮ  ನಾಯಿ ???

ಅದಕ್ಕ ಸ್ನೇಹ : " ಪಪ್ಪಿ, ಇನ್ನೂ ಚಿಕ್ಕದು , ನಮ್ಮ ಆಂಟೀ ಮನೆ ಇಂದ ತಂದಿದ್ವಿ , ಅವರ ಮನೇಲಿ ಎಷ್ಟೊಂದು ನಾಯಿಗಳಿವೆ ಗೊತ್ತಾ ?? ಅವರ ಮನೆ ತುಂಬಾ ಎಲ್ಲ ಬರಿ ನಾಯಿಗಳೇ ಇವೆ ಗೊತ್ತಾ ??? " ಅಂತ ಅಂದ್ಲು,,, ಅದಕ್ಕೆ ಈ ಶಿಷ್ಯ " ನಮ್ಮ ಮನೇಲಿ ಬರಿ  ಮನುಷ್ಯರಷ್ಟೇ  ಇರೋದು ನಾಯಿಗಳಿಲ್ಲ" ಅಂತ ಅಂದೇ ಬಿಟ್ಟ... 

ಸ್ನೇಹ : "ನಿಂದು ಬರಿ ಇದೆ ಆಯಿತು "  

ಸಂಜು : ಹ ಹ ಹ,, ನಿನ್ನ ಪಪ್ಪಿ ಯಾವ್ ಬಣ್ಣದ್ದು , ಕರಿಯೋ ?? ಬಿಳಿಯೋ ???

ಸ್ನೇಹ : " ಕಂದು  ಬಣ್ಣದ್ದು " ಅಂದಾಗ ಶಿಷ್ಯ ನಸು ನಕ್ಕೂ ಸುಮ್ನೇ ಆದ

ಸ್ನೇಹ : ಸರಿ ಈಗ ಎಲ್ಲಿದಿಯ ??? ನೀ ಎನ್ ಮಾಡ್ತಿದಿಯ ??? ( ಈಗ ಅವ್ಳು ಪ್ರಶ್ನೆ ಕೇಳೋಕೆ ಶುರು ಮಾಡಿದ್ಲು ಅವನ ತಿಂಡಿಯ ಬಗ್ಗೆ ) 

ಸಂಜು : ತಿಂಡಿ ತಿನ್ನುತ್ತ  ಇದೀನಿ,  ಹೇ ನಿನ್ ಜೊತೆ ಮಾತ್ ಹಾಡ್ತಾ ಹಾಡ್ತಾ  2 ಇಡ್ಲಿ ಜಾಸ್ತಿ ತಿಂದೆ ಗೊತ್ತಾ ,, ( ಇದ್ದದ್ದೇ 2 ಇಡ್ಲಿ ,, ) ರಾತ್ರಿ ಬೇರೆ ತಿಂದಿರಲಿಲ್ಲ ಅಲ್ಲವಾ  , ಈಗ ಹೊಟ್ಟೆ ತುಂಬ್ತು ನೋಡು ( ಹಾಗೆ ಎಸೆದ ಒಂದ್ ಡೈಯಲಾಗ್ )

ಅದಕ್ಕೆ ಅವಳು ಖುಷಿಯಿಂದ  ,,"  ಗುಡ್.... ಗುಡ್ ಬಾಯ್ , ತಿನ್ನು ತಿನ್ನು ಚೆನ್ನಾಗಿ ತಿನ್ನು  ,, ಈಗ ಎಲ್ಲಿ  ಇದ್ದೀಯ  ??? "

ಸಂಜು :"ಇಲ್ಲೇ ನಮ್ಮ ಆಫೀಸ್ ಕೆಫೇಟೇರಿಯದಲ್ಲಿ,,,,,,  ಒಳ್ಳೇ ಸೂರ್ಯನ ತೇಳು ಬಿಸಿಲಲ್ಲಿ, ಬೀಸೊ ತಣ್ಣನೆ ಗಾಳಿಯಲ್ಲಿ , ನಿನ್ ಜೊತೆ ಮಾತ್  ಆಡ್ತಾ ಇದೀನಿ " ಅಂತ ಮತ್ತೊಂದ್ ಡೈಯಲಾಗ್  ಬಿಟ್ಟ . ( ಇದೆ ಬಿಸಿಲು ಮತ್ತೆ ಗಾಳಿನ 30 ನಿಮಿಷದ ಇಂದೆ ಚೆನ್ನಾಗಿ ಉಗಿದಿದ್ದ ಈ ಮಹಾಶಯ ಈಗ ಅದೇ ಬಿಸಿಲು ಗಾಳಿಗಳು  ಅವನಿಗೆ ಚೆನ್ನಾಗಿ ಅನ್ನಿಸತೊಡಗಿದವು , ಇದೇನು  ಪ್ರೀತಿಯ ಮಾಯೆಯೋ ಅಥವಾ  ನಾಟಕವೋ ಯಾರಿಗೆ ಗೊತ್ತು . ಹಿಂಗೆ ಸಾಗಿ ಸಾಗಿ ಅಂತೂ ಇಂತೂ ಸ್ವಲ್ಪ ರೊಮ್ಯಾಂಟಿಕ್ ಮಾತುಗಳನ್ನು ಆಡಿದ ನಮ್ಮ ಶಿಷ್ಯ ಅಪರೂಪಕ್ಕೆ....ಅದಕ್ಕೆ ಅವಳು " ನೀ ತುಂಬಾ ತುಂಟ ಕಣೋ, ಪೋಲಿ ನೀ " ಅಂತ ಸ್ವಲ್ಪ ನುಲಿಯುತ್ತ ಹೇಳಿದಳು ಅಂತ ಅನ್ಸುತ್ತೆ, ಶಿಷ್ಯನ  ಆವ ಭಾವಗಳೇ ಆಗ ಬದಲಾದವು, ನಮಗೆ ಅವ ಮೇಲೆ ಹಾರಾಡಿದಂತೆ ಅನ್ನಿಸತೊಡಗಿತು...

               ಇಷ್ಟಾದ ಮೇಲೆ ಅವರು ಮತ್ತೆ ಮಾತನಾಡಲು ಶುರು ಮಾಡಿದ್ದು ಸಂಜು ತಿನ್ನುತ್ತಿರುವ ತಿಂಡಿಯ ಬಗ್ಗೆನೇ. ಮತ್ತೆ ಶಿಷ್ಯ ನಾಯಿ ನಾಲಿಗೆ ತಾರಾ ಇದ್ದ ಇಡ್ಲಿ ಗಳನ್ನು, ಪರಿ ಪರಿಯಾಗಿ ವಿವರಿಸ ತೊಡಗಿದ. ಅದು ಕೂಡ ಒಂದ್ 10 ನಿಮಿಷ ನಡೆದಿತು . ಅಷ್ಟೊತ್ತಿಗೆ ನಾನು ಮತ್ತೆ ಮಂಜ " ಲೋ  ಇದು ಮುಗಿಯುವ ಮಾತಲ್ಲ, ಇನ್ನೂ ಏನೇನು ಎಕ್ಸ್‌ಪ್ಲೇನ್  ಮಾಡಿಕೊಳ್ತಾರೋ,  ಯಾರ್ಯಾರು  ಯಾರನ್ನು ಮೇಲಕ್ಕೆ ಹೇರಿಸುತ್ತಾರೋ,  ಬಾರಲೇ ಕೆಲಸ ಇದೆ " ಅಂತ ಹೊರಡಲು ಶುರು ಆಗುತ್ತಾ ಇದ್ದಂತೆಯೇ ಶಿಷ್ಯ ಅವಳಿಗೆ " ನೀ ಎಲ್ಲಿ ಇದ್ದೀಯ ??? " ಅಂತ ಕೇಳಿದ. "ನಿನಗೆ  ಫೋನ್ ಮಾಡಿದಾಗ ಬಸ್  ಹತ್ತಿದೆ ಅದೆಲ್ಲಿಗೋ ಹೋಗಲು, ಈಗ ಸ್ಟಾಪ್ ಬಂದೆ ಬಿಡ್ತು ನೋಡು....ನಿನ್ ಜೊತೆ ಮಾತ್  ಆಡ್ತಾ ಇದ್ರೆ ನಂಗೆ ಟೈಮ್ ಹೋಗೋದೆ ಗೊತ್ತಾಗೋಲ್ಲ ಅಂತ ಹೇಳಿದಳು...ನಾ ಆಮೇಲೆ ಕಾಲ್ ಮಾಡ್ತೀನಿ, ಈಗ ಫೋನ್ ಇಡ್ತಿನಿ " ಅಂತಿದ್ದ ಹಾಗೆ, ಶಿಷ್ಯನು "ಸರಿ ಸರಿ,, ನನಗು ತುಂಬಾ ಕೆಲ್ಸಾ ಇದೆ " ಅಂದು ತಕ್ಷಣ ಕಾಲ್ ಕಟ್ ಮಾಡಿ.ನಮ್ಮ ಆಫೀಸ್ ಅಲ್ಲೇ ಇದ್ದ , ಅವನಿಗೆ ತುಂಬಾ ಇಷ್ಟವಾದ ಹುಡುಗಿ ಒಬ್ಬಳೇ ಜ್ಯೂಸ್  ಕುಡಿಯುತ್ತಾ ಇರುವುದನ್ನು ನೋಡಿ,  ಅವಳ ಬಳಿ ಹೋಗಿ ಮತ್ತೆ ಅವಳ ಬಳಿ ಏನೇನೋ ಮಾತ್ ಆಡಲು ಶುರು ಮಾಡಿಯೇ ಬಿಟ್ಟ. ಅವಳೊಂತು ಇವ ಅಲ್ಲಿಗೆ ಹೋದಮೇಲೆ ಬಿದ್ದು ಬಿದ್ದು ನಗುತ್ತ " ನೀ ತುಂಬಾ NAUGHTY ಕಣೋ " ಅಂದದ್ದು ನಮಗೆಲ್ಲ ಕೇಳಿತು ಅಷ್ಟೇ ಅದೇನು ಹೇಳಿದನೋ ಇವಳಿಗೂ ........

             ಒಟ್ಟಿಗೆ ಅವಳಿಗೆ ಬಸ್  ಹತ್ತಿದ ಮೇಲೆ ಒಬ್ಬಳಿಗೆ ಬೋರ್ ಆಗ್ತಾ ಇತ್ತು ಅನ್ಸುತ್ತೆ , ಬೇಜಾರ್ ಕಳಿಬೇಕಿತ್ತು,  ಪ್ರಯಾಣ  ಕೂಡ ಸಾಗ್ಬೇಕಿತ್ತು,  ಯಾರಾತ್ರಾನಾದ್ರೂ  ಮಾತ್  ಆಡಬೇಕಿತ್ತು ಅಷ್ಟೇ, ಸರಿಯಾಗಿ ಈ ಶಿಷ್ಯ ಸಿಕ್ಕ ,, ಇವನಿಗೋ ಎದುರಿಗೆ ಇರೋ ಜನರ ಹತ್ರ ಮಾತಾಡಿ ರೂಡಿ ಇಲ್ಲ . ಇವನಿಗೆ ಹುಡುಗಿ ಅಂದ್ರೆ ಸಾಕು ಸುಮ್ನೇ ಸುಮ್ನೇ ಮಾತ್ ಆಡೋಕೆ  ತುಂಬಾ  ಇಷ್ಟ , ಇವನಿಗೆ ಅವಳು ಸಿಕ್ಲು . ಮಾತ್ ಆಡ್ತಾನೆ ಇದ್ರು ಇದೆ ತರ ದಿನ. ಆದ್ರೆ ಇವನು ಅದನ್ನ ಪ್ರೀತಿ  ಅಂತ ಆಗ ನಂಬಿದ್ದ, ಇಷ್ಟರಲ್ಲಿ  ಪ್ರಪೋಸ್ ಮಾಡ್ತೀನಿ ಅಂತ ಕೂಡ ಹೇಳಿದ್ದ. ಅದಕ್ಕೆ ಎಲ್ಲ ಸ್ನೇಹಿತರು " ಅವಳು ಒಪ್ಪಿದ್ರು ಪಾರ್ಟೀ ಆಗುತ್ತೆ ಒಪ್ಪದಿದ್ದರೂ ತೀರ್ಥ  ಪಾರ್ಟಿಯಂತು ಆದೆ  ಆಗುತ್ತೆ ಅಂತ , ಒಳಗೊಳಗೇ ಖುಷಿಯಿಂದ  ಆ ದಿನವನ್ನು ಎದಿರು ನೋಡುತ್ತಾ ಕಾಯುತ್ತಿದ್ದರು.ಹಾಗೆ  ಒಂದು ದಿನ ಪಾರ್ಟಿಯು ಆಗೇ ಬಿಟ್ಟಿತು. ಇಬ್ಬರದು ಮಧುವೆಯು ಆಯಿತು. ಅವಳ ಪಾಡಿಗೆ ಅವಳು ತನ್ನ ಗಂಡನ ಜೊತೆ ತುಂಬಾ ಚೆನ್ನಾಗಿ ಇದ್ದಾಳೆ ಅಂತೆ, ಇತ್ತ ಇವ ತನ್ನ ಹೆಂಡತಿಯೊಂದಿಗೆ ತುಂಬಾ ಚೆನ್ನಾಗಿಯೇ ಇದ್ದಾನೆ, ಅದಕ್ಕೆ ನಮ್ಮ    FACEBOOK ಕ್ಕೆ  ಸಾಕ್ಷಿಯಾಗಿದೆ.      

ನಿಮಗಾಗಿ 
ನಿರಂಜನ್ 

ಭಾನುವಾರ, ನವೆಂಬರ್ 6, 2011

ಕನ್ನಡ ರಾಜ್ಯೋತ್ಸವದ ಉದ್ದೇಶ ಮತ್ತು ನಮ್ಮ ಕರ್ತವ್ಯ

                             
ಸ್ನೇಹಿತರೆ

ಮೊದಲಿಗೆ ನಿಮಗೆಲ್ಲರಿಗೂ, ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ , ನಮ್ಮೆಲರ ಹೆಮ್ಮೆಯ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು. ನಮಗೆಲ್ಲ ಗೊತ್ತಿರುವ ಹಾಗೆ ಈ ಹಬ್ಬ ನಿಜವಾಗಿಯೂ ಒಂದು ರೀತಿಯ ಹೆಮ್ಮೆಯ ಹಬ್ಬ, ಕನ್ನಡ ನಾಡಿಗಾಗಿ ದುಡಿದವರ, ಕನ್ನಡ ನಾಡಿನಲ್ಲಿ ಹುಟ್ಟಿ ದೇಶ-ವಿದೇಶದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ  ಸಾಧನೆಗೈದ ಕನ್ನಡಿಗರ,ಕನ್ನಡ ಸಾಹಿತ್ಯ-ಸಂಗೀತದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಹಿರಿಯರನ್ನು ಸ್ಮರಿಸುವ, ನೆನೆಯುವ, ಗೌರವಿಸುವ ದಿನ. ಹಾಗೆಯೇ ಸಾದನೆಯ ಹಾದಿಯಲ್ಲಿರುವ  ಕಿರಿಯರನ್ನು-ಯುವ ಜನಾಂಗವನ್ನು ಪ್ರೋತ್ಸಾಹಿಸುವ ಸುದಿನ.


                 ಕನ್ನಡ ರಾಜ್ಯೋತ್ಸವದ ದಿನದಂದು ಒಬ್ಬ ಸಾಮಾನ್ಯ ಕನ್ನಡಿಗನಿಂದ ಇಡಿದು ರಾಜ್ಯದ ಮೊದಲ ಪ್ರಜೆಯು ಕೂಡ ಈ ಹಬ್ಬದ ನಿಜವಾದ ಮಹತ್ವವನ್ನು ಅರಿತು ಆಚರಿಸಿದರೆ ಮಾತ್ರ ಈ ಹಬ್ಬವನ್ನು ಆಚರಿಸುವ ಉದ್ದೇಶಕ್ಕೆ ಒಂದು ಅರ್ಥ ಇರುತ್ತದೆ ಎನ್ನುವುದು ನನ್ನ ಭಾವನೆ. ಆದರೆ ನಿಜವಾಗಿಯೂ ನಾವು ಈ ರೀತಿ ಈ ಹಬ್ಬವನ್ನು ಪ್ರತಿವರ್ಷವೂ ಆಚರಿಸುತ್ತಾ ಇದ್ದೀವಾ ??? ಹೀಗೆ ಆಚರಿಸುವುದರ ಬಗ್ಗೆ ಯೋಚನೆಯನ್ನಾದರೂ ಮಾಡಿದ್ದೇವಾ ???. ರಾಜ್ಯೋತ್ಸವದ ದಿನ ನಮ್ಮ ಕರ್ನಾಟಕ ಘನ ಸರ್ಕಾರ ಒಂದೊಷ್ಟು ಕ್ಷೇತ್ರದಲ್ಲಿ ಕೆಲಸ ಮಾಡಿರುವವರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನೂ ಪ್ರಕಟಿಸಿ, ಮತ್ತೆ ಪ್ರಧಾನಮಾಡಿ ತಮ್ಮ ಕರ್ತವ್ಯ ಇಷ್ಟೇ  ಎಂದು ಸರ್ಕಾರ ಕೈ ತೊಳೆದುಕೊಳ್ಳುತ್ತದೆ.  ಪ್ರತಿ ವರ್ಷ ಆ ಪ್ರಶಸ್ತಿ ಪ್ರಧಾನ ಸಮಾರಂಬ ಗೊಂದಲದ ಗೂಡಾಗುತ್ತಿತ್ತು, ಸದ್ಯ ಈ ಭಾರಿ ೫೦ ಅರ್ಹರಿಗೆ  ಮಾತ್ರ ಪ್ರಶಸ್ತಿ ಕೊಟ್ಟಿರುವುದು ಸ್ವಲ್ಪ ಸಮಾಧಾನದ ಸಂಗತಿ. ಸಾಮನ್ಯ ಜನರಾದ ನಾವು ಕೂಡ ಆ ದಿನವನ್ನು ಒಂದು ಕೇವಲ ರಜಾ ದಿನದಂತೆಯೇ ರಜೆ ಕಳೆದು ನಮ್ಮ ಪಾಡಿದೆ ನಾವು ಇದ್ದು ಬಿಡುತ್ತೇವೆ. ಕೆಲ ಕನ್ನಡ ಪರ ಸಂಘಟನೆಗಳು ಮಾತ್ರ ಆ ದಿನ ಈ ಹಬ್ಬವನ್ನು ಆಚರಿಸುವುದನ್ನು ರೂಡಿ ಮಾಡಿಕೊಂಡಿದ್ದಾರೆ .
        
               ಕನ್ನಡ ರಾಜ್ಯೋತ್ಸವವೆಂದರೆ, ಇದು ಕೇವಲ ಕನ್ನಡ ಪರ ಸಂಘಟನೆಗಳಿಗೆ, ಕೆಲಸ ಸಾಹಿತಿಗಳಿಗೆ, ಕನ್ನಡ ಚಲನಚಿತ್ರ ನಟರಿಗೆ ಮಾತ್ರ ಉತ್ಸವವಲ್ಲ. ಉತ್ಸವ ಎಂದರೆ ಬರಿ ಆ ದಿನ ತಾಯಿ ಭುವನೇಶ್ವರಿ ದೇವಿ  ಚಿತ್ರಕ್ಕೆ ಸಲ್ಲಿಸುವ ಪೂಜೆಯಷ್ಟೇ ಅಲ್ಲ, ಕನ್ನಡ ಭಾವುಟಗಳ ಪ್ರದರ್ಶನಗಳು ಅಲ್ಲ , ಕನ್ನಡ ಚಲನಚಿತ್ರಗಳ ಹಾಡುಗಳನ್ನು ಬೀದಿ ಬೀದಿಯಲ್ಲಿ ರಸಮಂಜರಿ ಕಾರ್ಯಕ್ರಮಗಳನ್ನಾಯೋಜಿಸಿ ಹಾಡುಗಳನ್ನು  ಹಾಡಿ-ಕುಣಿಯುವುದು ಅಲ್ಲ , ಬೇರೆ ಭಾಷಿಗರನ್ನು ಬಯ್ಯುವ ಅಥವಾ ನಿಂದಿಸುವ ದಿನವಂತೂ ಅಲ್ಲವೇ ಅಲ್ಲ. ಸರಿ ಇವೆಲ್ಲವನ್ನು  ಕೂಡ ಮಾಡಲಿ ಆದರೆ ಇವುಗಳ ಜೊತೆಗೆ ನಾವು ಮಾಡಬೇಕಿರುವ ಕೆಲಸಗಳು ಸಾಕಷ್ಟಿವೆ. ಆ ದಿನದ  ನಿಜವಾದ ಆಚರಣೆಗಳು  ಎಂದರೆ , ನಾಡು-ನುಡಿಯ ಬಗ್ಗೆ ಚಿಂತನೆ, ನಾಡಿಗಾಗಿ ನಮ್ಮ ಕೊಡುಗೆಯಾ ಬಗ್ಗೆ ಸಾಮಾನ್ಯರು ಕೂಡ ಯೋಚಿಸಬೇಕು, ರಾಜ್ಯಕ್ಕಾಗಿ ನಾವು ದುಡಿಯುವ ಬಗ್ಗೆ ಚಿಂತನೆ ನಡೆಸಬೇಕು ,ನಾಡು ಹೆದರಿಸುತ್ತ ಇರುವ  ಸಮಸ್ಯಗಳ ಬಗ್ಗೆ ಬರಿ ಚರ್ಚಿಸದೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಆ ದಿನವೇ ಶುರುಮಾಡಬೇಕು.ಆದರೆ ನಾವು ನಿಜವಾಗಿಯೂ ಈ ನಿಟ್ಟಿನಲ್ಲಿ ನಾವು ಸಾಗುತ್ತಿದ್ದೆವೆಯಾ ? ಈ ಕೆಲಸಗಳನ್ನು ನಿಯತ್ತಾಗಿ ಮಾದುತ್ತಿದ್ದೆವೆಯಾ ?? ಕನ್ನಡಿಗರಾದ ನಾವೇ ಹೀಗೆ ಮಾಡಿದರೆ , ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸುವರೆ ????
                ನವಂಬರ್  ೧ ಬಂತೆಂದರೆ , ನಮಗೆ ತಟ್ಟನೆ ನೆನಪು ಆಗುವುದು ಆ ದಿನದ ರಜೆ ಮತ್ತು ಅದರ ಮಜಾ ಅಷ್ಟೇ. ನಿಜವಾದ ಹಬ್ಬದ ಅರ್ಥ ಮತ್ತು ಆ ದಿನದ ಜವಾಬ್ದಾರಿಗಳನ್ನು ನಾವು ಗಾಳಿಗೆ ತೂರಿದ್ದೇವೆ. TV ಮಾಧ್ಯಮಗಳು ಬರಿ ಒಂದೆರೆಡು ಕನ್ನಡ ಅಭಿಮಾನ ತೋರಿಸುವ ಹಳೆ ಕನ್ನಡ ಹಾಡುಗಳನ್ನು-ಸಿನಿಮಾಗಳನ್ನು ಬಿತ್ತರಿಸಿ ತಮ್ಮ ಆ ದಿನದ ಕೆಲಸವನ್ನು "ನಮ್ಮದಿಷ್ಟೇ ಕನ್ನಡಾಭಿಮಾನ" ಎಂದು ಮುಗಿಸುತ್ತವೆ. ನಾವು ಕೂಡ ಆ ದಿನವೆಲ್ಲ ಟೀವೀ ಮುಂದೆ ಕುಳಿತುಕೊಂಡು ಉದಯ,ಉಷೆ TVಗಳಲ್ಲಿ ಬರುವ ಜಮಾನದ ಕನ್ನಡ ಸಿನಿಮಾ - ಹಾಡುಗಳನ್ನು , ಸಿನೆಮ ನೋಡುವುದು ನಮ್ಮ ಕೆಲಸವಾಗಿದೆ. ಕೆಲವು ಸುದ್ದಿ ವಾಹಿನಿಗಳು ಬರಿ  ಬೆಳಗಾವಿಯಲ್ಲಿ ನಡೆಯುವ ಮರಾಠಿ ಸಂಘಟನೆಯ ಪುಂಡಾಟಿಕೆ, ಅದಕ್ಕೆ ನಮ್ಮ ಕನ್ನಡ ಸಂಘಟನೆಗಳ ಕೀಳು ಮಟ್ಟದ ಪ್ರತಿಕ್ರಿಯೆಗಳ ಬಗ್ಗೆ, ಅಲ್ಲಿ ಇಲ್ಲಿ ಕನ್ನಡರಿಗೆ, ಕನ್ನಡ ಭಾವುಟಗಳಿಗೆ ಆದ ಅವಮಾನಗಳ ಬಗ್ಗೆ ಮಾತ್ರ ಭರ್ಜರಿ ಪ್ರಸಾರಗಳನ್ನು ಮಾಡುತ್ತವೆ. ಎಲ್ಲೋ ಮಾದ್ಯಮಗಳು ತಾವು ಮಾಡಬೇಕಾಗಿರುವ ಕೆಲಸವನ್ನು ಸರಿಯಾಗಿ ಮಾಡದೆ, ಜನರಿಗೆ ಸ್ಪೂರ್ತಿಯಾಗುವ ಮತ್ತು ಒಳ್ಳೆಯ ವಿಚಾರಗಳ ಬಗ್ಗೆ ಗಮನ ಕೊಡದೆ, ಅಚ್ಚು-ಕಟ್ಟಾದ ಸಮಾಜದ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ ಎಂಬುದು ತುಂಬಾ ಬೇಸರದ ಸಂಗತಿ. ರಾಜ್ಯೋತ್ಸವದ ಆ ಒಂದು ತಿಂಗಳು ಬರಿ ಬೆಳಗಾವಿಯಲ್ಲಿ ಅಲ್ಲಿ ಕಲ್ಲು ತೂರಾಟ, ಇಲ್ಲಿ ಚಾಕು ಇರಿತ, ಬರಿ ಇಂತಹ ವಿಷಯಗಲ್ಲೇ ಮಾದ್ಯಮಗಳು ಕಾಲ ಕಳೆದು ಬಿಡುತ್ತವೆ . ಪತ್ರಿಕೆ ಮತ್ತು ಟೀವಿ ಮಾಧ್ಯಮಗಳು ಇರುವ ಸಮಸ್ಯೆಗಳಿಗೆ ಎಣ್ಣೆ ಸುರಿಯದೆ , ಸರಿಯಾದ ಚರ್ಚೆಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನಾಡಿನ ಒಳ್ಳೆ ಸಾಧಕರ ಬಗ್ಗೆ , ಸಂಸ್ಕೃತಿಯ ಬಗ್ಗೆ ಜನರಿಗೆ ಸುದ್ದಿ ಹಾಗು ದೃಶ್ಯ ಪ್ರಸಾರಗಳನ್ನು ಮಾಡಬೇಕು.ಕನ್ನಡದ ಸಂಸ್ಕೃತಿಯನ್ನು ಬಿಂಬಿಸುವ, ಭಾಷೆಯ ಸೊಗಡನ್ನು ಪ್ರಚುರ ಪಡಿಸುವ ಕಾರ್ಯ ಕ್ರಮಗಳಿಗೆ ಹೊತ್ತು ನೀಡಬೇಕು, ರಾಜ್ಯದ ಏಳಿಗೆಗೆ ಪೂರಕವಾಗುವ ಚರ್ಚೆಗಳಿಗೆ ಪತ್ರಿಕಾ ಮತ್ತು TV ಮಾದ್ಯಮಗಳು ವೇದಿಕೆ ಆಗಬೇಕು, ನಾಡಿನ ಜನತೆಯ ಕಷ್ಟ ಸುಖಗಳ ಬಗ್ಗೆ ಸರ್ಕಾರಕ್ಕೆ ಅರಿವು ಮೂಡಿಸಬೇಕು, ಸಮಾಜದ ನಿಜವಾದ ದ್ವನಿ ನಮ್ಮ ಮಾಧ್ಯಮಗಳಾಗಬೇಕು. ಆದರೆ ಆ ಕೆಲಸ  ನಿಜವಾಗಿಯೂ ಮಾಧ್ಯಮಗಳಿಂದ ಆಗುತ್ತಿದೆಯೇ ??? .
             ಒಬ್ಬ ಸಾಮಾನ್ಯ ಕನ್ನಡಿಗನಾದ ನನಗೆ ಅನಿಸಿದ್ದು , ಆ ದಿನ ಬರಿ ಮರಾಠಿ-ಮಲೆಯಾಳಿಗಳನ್ನೂ , ತಮಿಳರನ್ನೂ , ತೆಲುಗರನ್ನೂ ಕನ್ನಡ ಮಾತನಾಡುವುದಿಲ್ಲ, ನಮ್ಮ ರಾಜ್ಯಕ್ಕೆ ಬಂದು ಕನ್ನಡದಲ್ಲಿ ಮಾತನಾಡುವುದಿಲ್ಲ , ಅವರು ನಮ್ಮ ದ್ವೇಷಿಗಳು , ಎಂದೆಲ್ಲ ದೂಷಿಸದೆ, ನಾವು ಮಾಡಬೇಕಾಗಿರುವ ಸಾಮಾನ್ಯ ಮತ್ತು ಸರಳ ಕೆಲಸಗಳ ಬಗೆ ಗಮನ ಕೊಡಬೇಕು. ಒಬ್ಬ ಕನ್ನಡಿಗ  ಮತ್ತೊಬ್ಬ ಕನ್ನಡಿಗನನ್ನು ಪ್ರೀತಿಸುವುದು-ಪ್ರೋತ್ಸಾಹಿಸುವುದು, ಕನ್ನಡಿಗ ಕನ್ನಡ ಪುಸ್ತಕಗಳನ್ನು ಓದುವುದು , ಕನ್ನಡಿಗ ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವುದು, ಪರ-ಭಾಷಿಗರಿಗೆ ನಮ್ಮ ರಾಜ್ಯದ ಬಗ್ಗೆ ,ನಮ್ಮ ಭಾಷೆಯ ಬಗ್ಗೆ,ನಮ್ಮ ರಾಜ್ಯದ ಇತಿಹಾಸದ ಬಗ್ಗೆ ಹೆಮ್ಮೆಯಿಂದ ಒಂದಿಷ್ಟು ಮಾಹಿತಿ ಕೊಡುವುದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ಪ್ರಚಾರ ಮಾಡುವುದು. ಬೇರೆ ಬೇರೆ ಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ , ಅನೇಕ ಸಾದನೆಗಳನ್ನು ಮಾಡಿರುವ ಸಾಧಕರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನಾಡಿ ಸುತ್ತ ಮುತ್ತಲಿನ ಜನರಿಗೆ ಅವರ ಬಗ್ಗೆ ತಿಳಿಸುವುದು. ಕನ್ನಡ ಸಾಹಿತ್ಯ-ಸಂಗೀತದ  ಬಗ್ಗೆ ನಮ್ಮ ಯುವ ಜನಾಂಗಕ್ಕೆ ಆಸಕ್ತಿ  ಕುಗ್ಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ನಾವು ಆ ಆಸಕ್ತಿಯನ್ನು, ಅಭಿರುಚಿಯನ್ನು ಬೆಳೆಸಿಕೊಳ್ಳುವತ್ತ ಕಾರ್ಯಪ್ರವ್ರುತ್ತಾರಾಗಬೇಕು. ಇದೆಲ್ಲಕ್ಕೂ ಮೊದಲು ನಾವು ಮೊದಲು ಕನ್ನಡ ಭಾಷೆಯನ್ನೂ ಸ್ವಚ್ಚವಾಗಿ ,ಅಚ್ಚುಕಟ್ಟಾಗಿ ಮಾತನಾಡುವುದು, ಒಳ್ಳೆ ಒಳ್ಳೆ ಕನ್ನಡ ಪುಸ್ತಕಗಳನ್ನು ಓದುವುದು ನಿಜವಾಗಿಯೂ ಮಾಡಬೇಕಾಗಿರುವ ಮೊದಲ ಕೆಲಸವಾಗಿದೆ. ಕನ್ನಡ ಭಾಷೆಯ ಬಗ್ಗೆ ಒಳ್ಳೆಯ ಭಾವನೆ ,ಸಾಹಿತ್ಯ -ಸಂಗೀತದಲ್ಲಿ ಒಳ್ಳೆಯ ಅಭಿರುಚಿ ನಮ್ಮೆಲರಿಗೂ,ಮುಖ್ಯವಾಗಿ  ಚಿಕ್ಕ ಚಿಕ್ಕ ಮಕ್ಕಳಿಗೆ ಬಂದರೆ ನಿಜವಾಗಿಯೂ ಕನ್ನಡ ರಾಜ್ಯೋತ್ಸವದ ಉದ್ದೇಶ ಸಾಕಾರವಾಗುತ್ತದೆ. ಇದನ್ನು ಸಾರ್ಥಕಗೊಳಿಸುವ ಜವಾಬ್ದಾರಿ ನಮ್ಮೆಲರ ಮೇಲೆ ಇದೆ. ನಾವು ಆ ದಾರಿಯಲ್ಲಿ ಸಾಗಲೇ ಬೇಕಾಗಿದೆ.

 ಸ್ನೇಹಿತರೆ ಮೇಲೆ ಹೇಳಿರುವ ಎಲ್ಲ ಅಂಶಗಳು ಕೇವಲ ನನ್ನ ಭಾವನೆಗಳು ಮತ್ತು ವಯ್ಯಕ್ತಿಕ ಅನಿಸಿಕೆಗಳು ಮಾತ್ರ , ನಾ ಇಲ್ಲಿ ಯಾರ ಕನ್ನಡ ಅಭಿಮಾನ, ಪ್ರೀತಿ  ಮತ್ತು ಬದ್ದತೆಯನ್ನು ಪ್ರಶ್ನಿಸಿಲ್ಲ, ಇವೆಲ್ಲ ನನ್ನ ಆಲೋಚನೆಗಳು ಅಷ್ಟೇ.

ನಿಮಗಾಗಿ
ನಿರಂಜನ್