ಸೋಮವಾರ, ಮೇ 30, 2011

Travel experience

                  ನಮ್ಮ ಕಾಕನ್ ಮದ್ವೆ ಮತ್ತು ಉತ್ತರ ಕರ್ನಾಟಕ ಪ್ರವಾಸ...

ಅಂತು ಇಂತು ನಮ್ಮ ಸ್ನೇಹಿತ  ಕಾಕನ ( ವೀರೇಶ್ ) ಮಧುವೆಯ ದಿನ ಬಂದೆ ಬಿಟ್ಟಿತ್ತು, ದೂರದ ಅಂದರೆ ಉತ್ತರ ಕರ್ನಾಟಕ ಒಂದು " ಕೊಡೇಕಲ್ಲ " ಎಂಬ ಹಳ್ಳಿಯಲ್ಲಿ  ನೆಡೆಯುತ್ತಿದ್ದ ಈ ಮಧುವೆಗೆ ಬಾರಿ ಜನ ಸಮ್ಮೂಹವೆ ನೆರೆದಿತ್ತು. ಸುರಿಯುವ ಹುರಿ ಬಿಸಿಲು, ಎತ್ತ ನೊಡಿದರು ಕಲ್ಲಿನಿಂದ ಕಟ್ಟಿದ್ದ ಮಾಳಿಗೆ ಮನೆಗಳು, ಮನೆಯ ಮುಂದೆ ನಿಂತುಕೊಂಡು ವಧು-ವರರಿಗೆ ಅವರು ಅಶೀರ್ವದಿಸುತ್ತಿದ್ದ ರೀತಿ , ವಧು-ವರರನ್ನು ಅಲ್ಲಿಯ ಸಂಪ್ರದಾಯದಂತೆ ಸಿಂಗರಿಸಿದ್ದ ಬಗೆ ನಿಜವಾಗಿಯು ವಿಬಿನ್ನವಾಗಿತ್ತು. ಬೆಂಗಳೂರಿಂದ ಹೋಗಿದ್ದ ನಮಗಿದೊಂದು ಬೇರೆಯ ತರಹನಾದ ಪರಿಸರವೆ ಆಗಿತ್ತು. ಅತಿಯಾದ ಆ ಬಿಸಿಲು ಇದ್ದರು ಸಹ ಕಾಕನ ಮಧುವೆಯ ಬರದಲ್ಲಿ ನಾವು ಸುರಿಯುವ ಬಿಸಿಲನ್ನು ಲೆಕ್ಕಿಸದೆ, ಬೆವೆರನ್ನು ಹರಿಸಿ,ಮಧುವೆಯಲ್ಲಿ , ಮೆರವಣಿಗೆಗಳಲ್ಲಿ ಭಾಗಿಯಾಗಿ ನಗಲೊಲ್ಲದ ಕಾಕನ ಮುಖದಲ್ಲಿ  ಆಗೊಮ್ಮೆ ಈಗೊಮ್ಮೆ ನಗು ತರಿಸುತ್ತ ಮಧುವೆ ಮಾಡಿ ಮುಗಿಸಿಯೇ ಬಿಟ್ಟೆವು :). ಮಹೂರ್ತದ ನಂತರ ಕಾಕ ಮತ್ತು ಅವರ ಧರ್ಮಪತ್ನಿ ಮಿಸಸ್ ಕಾಕ ಅವರನ್ನು ಮಾತಾಡಿಸಿಕೊಂಡು ಉತ್ತರ ಕರ್ನಾಟಕ ಶೈಲಿಯ ಮಧುವೆಯ ಊಟ ,ಸಜ್ಜೆ ರೊಟ್ಟಿ, ಪೂರಿ, ಕಾಳು ಪಲ್ಯ,ಲಾಡು, ಅನ್ನ -ಸಾಂಬಾರು , ಮಜ್ಜಿಗೆ ಎಲ್ಲವನ್ನು ಗಡತ್ತಾಗಿ ಸೇವಿಸಿ, ನಮ್ಮ ಪೂರ್ವ ನಿಯೋಜಿತ  ಉತ್ತರ ಕರ್ನಾಟಕ  ಪ್ರವಾಸಕ್ಕೆ  ಸಜ್ಜಾದೆವು.  

                                                        
              ಇದಕ್ಕೂ ಮೊದಲು ಮಧುವೆ ನೆಡೆದ "ಕೊಡೇಕಲ್ಲ" ಗ್ರಾಮದ ಬಸವಣ್ಣನ ದೇವಸ್ತಾನ ಮತ್ತು ಲಿಂಗಸೂರಿನಿಂದ ಈ ಊರಿಗೆ ಬರುವ ದಾರಿಯಲ್ಲಿ ನಾವು ನೋಡಿದ ಮೌನೇಶ್ವರ ದೇವಾಲಯಗಳು ಪಕ್ಕಾ ಹಿಂದೂ ದೇವಾಲಯಗಳಾದರೂ ಸಹ, ಅವು ಇದ್ದದ್ದು ಮಾತ್ರ ಮುಸ್ಲಿಮ್ ದೇವಾಲಯಗಳಂತೆ. ಇಂಡೊ-ಇಸ್ಲಾಮಿಕ್ ಶೈಲಿಯೆಂದರೆ ತಪ್ಪಾಗುವುದಿಲ್ಲ. ಅವು ಈ ರೀತಿ ಕಟ್ಟಿರುವುದಕ್ಕೆ ಕಾರಣಗಳು ಅನೇಕ ಇವೆ. ಕೆಲವು ಇತಿಹಾಸಕಾರರ ಪ್ರಕಾರ ಇವು ಸುಲ್ತಾನರ ಆಳ್ವಿಕೆಯ ಸಮಯದಲ್ಲಿ , ಮುಸ್ಲಿಮರ ಪ್ರಭಾವದಿಂದ ಈ ರೀತಿಯಾಗಿ ಬದಲಾವಣೆಗೊಂಡಿರುವುವು ಎಂಬ ವಾದ ಒಂದುಕಡೆ, ಆದರೆ ಇನ್ನೊಂದೆಡೆ ಇದು ಹಿಂದೂ-ಮುಸ್ಲಿಮರ ಭಾವೈಕೈತೆಯ ಸಂಕೇತ ಎಂಬ ಇತಿಹಾಸವು ಇದೆ. ಅದೇನೇ ಇರಲಿ ನಾವು ಅವುಗಳನ್ನು ನೋಡಿ ಆಶ್ಚರ್ಯಚಕಿತರಾದದಂತು ನಿಜ.  ಸಮಯ ಮಧ್ಯಾನ 2.30 ರ ಸಮಯ. ನಾವೆಲ್ಲರೂ ನಮ್ಮ ಕಾಕನ ಸಂಭಂದಿಕರಿಗೆ ನಮಸ್ಕಾರಗಳನ್ನು ತಿಳಿಸಿ , ಕೊಡೇಕಲ್ಲ ಗ್ರಾಮಕ್ಕೆ ವಿಧಾಯ ಹೇಳಿ, ನಾವು ಹೊರಟಿದ್ದು ಬಿಜಾಪುರದ ಕಡೆಗೆ. 

                                                        
           ಬಿಜಾಪುರ ಆ ಗ್ರಾಮದಿಂದ ಸುಮಾರು 100 km ಗಳು. ಪ್ರಯಾಣವನ್ನು ಆರಂಬಿಸಿದಾಗ, ಹೊರಗಡೆ ಉತ್ತರ ಕರ್ನಾಟಕದ ಬಾರಿ ಬಿಸಿಲು, ಗಾಡಿಯಿಂದ ಹೊಳಗೆ ನುಗ್ಗುತ್ತಿರುವ ಬಿಸಿಗಾಳಿ, ನೋಡಿದಷ್ಟು ದೂರ ಕಾಣುವ ಖಾಲಿ ಹೊಲಗಳು, ಅಲ್ಲೊಂದು ಇಲ್ಲೊಂದು ಬೇವಿನ ಮರಗಳು, ರಸ್ತೆಯ ಬದಿಯಲ್ಲಿ ಇದ್ದ ಜೀಕ್-ಜಾಲಿ ಅಥವಾ ಬಳ್ಳಾರಿ- ಜಾಲಿ, ನಮಗೆಲ್ಲ ನೀರು ಇಳಿಸುತ್ತಿದ್ದವು. ಸಂಜೆ 4.30ರ ಸಮಯಕ್ಕೆ ನಾವು ಬಿಜಾಪುರ ತಲುಪುತಿದ್ದಂತೆ ನಮಗೆ ಕಣ್ಣಿಗೆ ಕಂಡಿದ್ದು ಬಿಜಾಪುರದ "ಗೋಳಗುಮ್ಮಟ" ಬೃಹದಾಕಾರವಾದ ಆ ಬಾರಿ ಸಂಕೀರ್ಣ ನಿಜಕ್ಕೂ ನನಗೆ ಅಚ್ಚರಿ ಮೂಡಿಸುವುದರ ಜೊತೆಗೆ ನಾವು ಚಿಕ್ಕವರಾಗಿದ್ದಾಗ ಓದಿದ "ಬಿಜಾಪುರದ ಗೋಳಗುಮ್ಮಟ" ಪಾಠವನ್ನು ನೆನಪಿಸಿತು.ಆಗ ನಮಗೆ ಪಾಠ ಓದಿದಾಗ ಆದ ಅನುಭವವೇ ಈಗಲೂ ಆಯಿತು. ಒಬ್ಬ ಗೈಡ್ ಸಹಾಯಾದಿಂದ ಅಲ್ಲಿಯ ಇತಿಹಾಸವನ್ನು ತಿಳಿದು. ಅದನ್ನು ಕಟ್ಟಿದವರ ಗಟ್ಟಿತನವನ್ನು ಮೆಚ್ಚಿ , ಬಸವಣ್ಣನವರು ಐಕ್ಯವಾದ "ಕೂಡಲ-ಸಂಗಮ"ದ ಕಡೆಗೆ ಹೋಗಬೇಕೆಂದು ನಿರ್ಧರಿಸಿ, ಅಲ್ಲಿಯೇ ಇದ್ದ ಕುದುರೆಗಾಡಿ ಹೇರಿ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯುದ್ದಕ್ಕೂ ಒಂದು ಕಡೆ ಕುದುರೆಗೆ ಹಿಂಸೆ ಕೊಡುತ್ತಿದ್ದ ಪಾಪಪ್ರಜ್ಞೆ, ಮತ್ತೊಂದೆಡೆ ಕುದುರೆಗಾಡಿ ಚಾಲಕರ ಹೊಟ್ಟೆಪಾಡು ಎಂಬ ಧರ್ಮಸಕಟ. ಇದನ್ನು ಯೋಚಿಸುತ್ತಿರುವಷ್ಟರಲ್ಲಿ ನಿಲ್ದಾಣವೂ ಬಂದೆ ಬಿಟ್ಟಿತ್ತು. ಮೊದಲು ಗಾಡಿಯಿಂದಿಳಿದು , ಅಲ್ಲಿಯೇ ಇದ್ದ ಹೊಟೆಲ್ನಲ್ಲಿ ಟೀ ಕುಡಿದು, ಕೂಡಲ ಸಂಗಮಕ್ಕೆ ಬಸ್ ಹತ್ತಿ ಹೊರಟಾಗ ನಮ್ಮ ಪುಣ್ಯವೋ , ಅಲ್ಲಿಯ ಜನರ ಪುಣ್ಯವೋ ತುಂತುರು ಮಳೆ ಬರ ತೊಡಗಿತು. ಸುಮಾರು 2.30 ಗಂಟೆಗಳ ಪ್ರಯಾಣ ಮುಗಿಸಿ ಕೂಡಲ ಸಂಗಮ ತಲುಪಿದಾಗ ನಿಜಕ್ಕೂ ವಾತಾವರಣ ತಂಪಾಗಿ ಬಿಸಿಲಿನಿಂದ ದಗೆ ಮತ್ತು ಸೆಕೆ ಇಂದ ಕೊಂಚ ರಿಲೀಫ್ ನೀಡಿತ್ತು. ಅಷ್ಟೊತ್ತಿಗೆ ರಾತ್ರಿ 9 ಗಂಟೆ, ನಾವು ಅಲ್ಲಿಯೇ ಇದ್ದ ಯಾತ್ರಿ ನಿವಾಸದಲ್ಲಿ ರೂಮ್ ಬಾಡಿಗೆ ಪಡೆದು , ಚೆನ್ನಾಗಿ ನಿದ್ದೆ ಮಾಡಿ ಬೆಳ್ಳಿಗ್ಗೆ 7 ರ ಹೊತ್ತಿಗೆ ಸಂಗಮದ ಕಡೆ ವಾಕ್ ಮಾಡಿದ್ದಂತೂ ಒಂದು ಸುಂದರ ಅನುಭವ. ಒಂದು ಕಡೆ ಕೃಷ್ಣ ಮತ್ತು ಘಟಪ್ರಭ ನದಿಗಳು, ಮತ್ತೊಂದೆಡೆ ಮಲಪ್ರಭ ನದಿ, ಸುತ್ತಲು ಮರ ಗಿಡಗಳು, ಆಗತಾನೆ ಬಂದು ಹೋಗಿದ್ದ ಮಳೆ, ಇನ್ನೂ ಮರಗಳ ಎಲೆಗಳಿಂದ ಬೆಳುತಿದ್ದ ಹನಿಗಳು ಕೂಡಲ ಸಂಗಮಕ್ಕೆ ಒಂದು ಎಫೆಕ್ಟ್ ನೀಡಿದ್ದವು. ದೇವಾಲಯವನ್ನೆಲ್ಲ ವೀಕ್ಷಿಸಿ, ದೋಸೆ, ಅಜ್ಜಿ ಮಾಡಿದ್ದ ಗಟ್ಟಿ ಮೊಸರು, ತೋಯಿಸಿದ ಒಗ್ಗರಣೆ ಮಂಡಕ್ಕಿ- ಮೆಣಸಿನಕಾಯಿ ತಿಂದು, ನಾಲಿಗೆ ತುದಿ ಚುರ್ ಅನ್ನುವಂತೆ ಬಿಸಿ ಚಹಾ ಕುಡಿದು ಅಲ್ಲಿಂದ ನಾವು ಹೊರಟು,  ಐಹೊಳೆ,ಪಟ್ಟದಕಲ್ಲು,ಮಹಕೂಟ,ಬನಶಂಕರಿ ಮತ್ತು ಬಾದಾಮಿ ನೋಡಲು ಅಲ್ಲಿಯೇ ಇದ್ದ ಒಂದು ವಾಹನವನ್ನು ಬಾಡಿಗೆ ಮಾಡಿಕೊಂಡು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.


    
  







    


            ನಿಜವಾಗಿಯೂ ನಮಗೆ ಕರ್ನಾಟಕದ ಇತಿಹಾಸ ತಿಳಿಯಬೇಕಾದರೆ, ಇಲ್ಲಿ ಆಡಳಿತ ಮಾಡಿದ ರಾಜ-ಮಹಾರಾಜರ ಸಾಧನಗಳನ್ನು ತಿಳಿಯಲು ಐಹೊಳೆಯನ್ನು ನಾವು ನೋಡಲೇ ಬೇಕು. ಹೇಗೆ ನಮ್ಮಲ್ಲಿರುವ ದೇವಾಲಯಗಳು, ಅರಮನೆಗಳು, ಕೋಟೆ-ಕೊತ್ತಲಗಳು ಬೆಳೆದು ಬಂದವು, ಹೇಗೆ ಶಿಲ್ಪಿಗಳು, ಕಲಾವಿದರು ತಮ್ಮ ಕಲೆಯಲ್ಲಿ, ಕೆಲಸದಲ್ಲಿ ನಿಪುಣತೆ ಸಾಧಿಸಿದರು ಎಂಬುದಕ್ಕೆ ಉತ್ತರ ನಮಗೆ ಐಹೊಳೆಯಲ್ಲಿ ಸಿಗುತ್ತದೆ. ಕ್ರಿ.ಶ 3,4,5 ಶತಮಾನದಲ್ಲೇ ಚಾಲುಕ್ಯ ಹಾಗೂ ಹೊಯ್ಸಳರು ಕಟ್ಟಿದ ಆ ದೇವಾಲಯಗಳು, ನಿಜಕ್ಕೂ ಅದ್ಭುತವಾಗಿವೆ. ಇವೆ ಮುಂದೆ ಹಂಪಿಯ ವಿಜಯನಗರ ದೇವಾಲಗಳಿಗೂ, ಬೇಲೂರು-ಹಳೆ ಬೀಡುಗಳಿಗೂ ಸ್ಪೂರ್ತಿಯಾಗುತ್ತವೆ.  ಒಂದು ರೀತಿಯಲ್ಲಿ ಐಹೊಳೆ ಒಂದು ದೇವಾಲಯಗಳ ಕಟ್ಟುವ ಪ್ರಯೋಗಾಲಯದಂತೆ ಇತ್ತೆಂದು ಇತಿಹಾಸ ಹೇಳುತ್ತದೆ. ಅಲ್ಲಿ ಎತ್ತ ನೋಡಿದರು ಕಾಣುವುದು ಸುಂದರ ದೇವಾಲಯಗಳು  ಮಾತ್ರ. ಹೊಲಗಳ ನಡುವೆ, ಊರಿನ ಮದ್ಯ,  ಮನೆ-ಮನೆಗಳ ನಡುವೆಯೂ ಬರಿ ದೇವಾಲಯಗಳು. ನಿಜ ಹೇಳಬೇಕೆಂದರೆ ಇವುಗಳನ್ನೆಲ್ಲ ನೋಡಲು ಕೆಲ ದಿನಗಳೆ ನಮಗೆ ಬೇಕಾಗಬಹುದು.ಅವಸರದಲ್ಲೇ ಕೆಲವು ದೇವಾಲಯಗಳನ್ನು ಮಾತ್ರ ನೋಡಿ , ಅವುಗಳ ಬಗ್ಗೆ ತಿಳಿದುಕೊಂಡು ನಾವು ಅಲ್ಲಿಂದ ಪಟ್ಟದಕಲ್ಲಿ ಗೆ ನೆಡೆದೆವು.
          ಇಹೊಳೆ ನಂತರ ನಾವು ನೋಡಿದ ಪಟ್ಟದಕಲ್ಲು,ಮಹಕೂಟ ಮತ್ತು ಬಾದಾಮಿಗಳು ಕೂಡ ಅಷ್ಟೇ ಸುಂದರ ಮತ್ತು ಶ್ರೀಮಂತ ಇತಿಹಾಸವುಳ್ಳ ಜಾಗಗಳು. ಇವುಗಳ ಬಗ್ಗೆ ಅನೇಕರು ಬರೆದಿದ್ದಾರೆ, ಅವುಗಳ ವೈಭವವನ್ನು ವರ್ಣಿಸಿದ್ದಾರೆ , ನಿಜಕ್ಕೂ ನಮಗೆ ಆ ದೇವಾಲಯಗಳನ್ನು ನೋಡಿ ತುಂಬಾ ಸಂತೋಷವಾಯಿತು ಹಾಗೆ ಇನ್ನೂ ಇವುಗಳ ಬಗ್ಗೆ ತಿಳಿಯುವ ಹಂಬಲವು ಕೂಡ  ಹೆಚ್ಚಾಯಿತು.
       ಸ್ನೇಹಿತರೆ ನಿಜ ಹೇಳಬೇಕೆಂದರೆ, ಆ ದೇವಾಲಯಗಳನ್ನು ವರ್ಣಿಸಲು ಅಸಾಧ್ಯ. ಅಷ್ಟೊಂದು ಸುಂದರವಾದ ದೇವಾಲಯಗಳು ನಿಜಕ್ಕೂ ನಮ್ಮ ನಾಡಿನಲ್ಲಿ ಇರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಆ ಕಲಾವಿದರ ಬುದ್ದಿವಂತಿಕೆ,ಕೌಶಲ್ಯ ಎಲ್ಲವೂ ನಮ್ಮ ಯೋಚನೆಗೂ ನಿಲುಕದಂತವು . ಇವೆಲ್ಲ ಸೇರಿ ನಮ್ಮ ಕರ್ನಾಟಕಕ್ಕೆ ಒಂದು ರೀತಿಯ ಸೊಬಗು ಮತ್ತೆ ಗೌರವ ತಂದುಕೊಟ್ಟಿರುವುದಂತೂ ನಿಜ. ಆದರೆ ಎಲ್ಲೋ ಒಂದು ಕಡೆ ನಾವು ಅವುಗಳನ್ನು ಸಂರಕ್ಷಿಸುವುದರಲ್ಲಿ ಸಂಪೂರ್ಣ ವಿಪಲರಾಗಿದ್ದೇವೆ ಮತ್ತು ಅವುಗಳನ್ನು ಜನರಿಗೆ ಪರಿಚಯಿಸುವುದರಲ್ಲಿ ಕೂಡ ನಮ್ಮ ಪ್ರವಾಸೋದ್ಯಮ ಇಲಾಖೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬಹುಪಾಲು ಪ್ರವಾಸಿಗರ ನೋವಾಗಿದೆ. ಅದೇನೇ ಇರಲಿ ನಾವಂತೂ ಈ ಪ್ರವಾಸದಿಂದ ತುಂಬಾ ತಿಳಿದುಕೊಂಡೆವು ಎಂಬುದರಲಿ ಎರೆಡು ಮಾತಿಲ್ಲ. ನಿಜಕ್ಕೂ ಈ ಪ್ರವಾಸ ನಾ ಮಾಡಿದ ಅನೇಕ ಪ್ರವಾಸಗಳಿಗಿಂತ ಬಿನ್ನಾವೂ ಆಗಿತ್ತು. ಬರಿ ಮನೋರಂಜನೆಗಾಗಿ ಮಾಡುತಿದ್ದ ಪ್ರವಾಸಕ್ಕು ಹಾಗೂ ಇದಕ್ಕೂ ತುಂಬಾ ವ್ಯತ್ಯಾಸವು ಇತ್ತು.  ಬಾದಾಮಿ ನೋಡುವಷ್ಟರಲ್ಲಿ  ಸಂಜೆಯಾಗುತ್ತಾ ಬಂದಿತ್ತು. ನಾವು ಅಲ್ಲಿಂದ ಬಾಗಲಕೋಟೆಗೆ ಬಂದು ಅಲ್ಲಿಂದ ಬಸ್ಅಲ್ಲಿ ಬೆಂಗಳೂರಿಗೆ ಬರಬೇಕಿತ್ತು. ಹಾಗಾಗಿ ಸಂಜೆ ೬ ಕ್ಕೆ ಅಲ್ಲಿಂದ ಹೊರಟು, ಬಾಗಲಕೋಟೆಯಲ್ಲಿ ರೊಟ್ಟಿ ಊಟ ಮುಗಿಸಿ , ಬೆಂಗಳೂರಿನ ಕಡೆ ಹೊರಟೆವು.




    









ನಿಮಗಾಗಿ.......
ನಿರಂಜನ್

ಭಾನುವಾರ, ಮೇ 15, 2011

Travel experience

                                       ಮಡಿಕೇರಿಯಲ್ಲಿ ನಾವು ಮತ್ತು ಮಂಜು........

ಸಂಜೆಯ ಸಮಯ , ಸೂರ್ಯ ಇನ್ನೇನು ಮುಳುಗಬೇಕು ಅನ್ನುವಷ್ಟರಲ್ಲಿ, ಆಗಸದ ತುಂಬಾ ಕಾರ್ಮೋಡಗಳು, ಜೋರಾದ ಗಾಳಿ, ಗೂಡು ಸೇರಲು ಗಾಳಿಯ ಜೊತೆಗೆ ಮತ್ತು ವಿರುದ್ದವಾಗಿ ಹಾರುತ್ತಿರುವ ಪಕ್ಷಿಗಳು, ಜೊತೆಗೆ ಕೋಲ್ಮಿಂಚುಗಳು , ಗುಡುಗಿನ ಆರ್ಭಟ, ಇವೆಲ್ಲ ಬಾರಿ ಮಳೆಯ ಮುನ್ಸೂಚನೆ  ನೀಡುತ್ತಿದ್ದವು. ಅಷ್ಟರಲ್ಲಿ ಅಮ್ಮನಿಂದ ಫೋನ್ ಬಂತು “ ಎಲ್ಲಿದಿಯೋ ಮಳೆ ಬರೋ ಹಾಗಿದೆ ಬೇಗ ಮನೆಗೆ ಬಾ” ಎಂಬ ಆತಂಕದ ಮಾತುಗಳು. ಅಷ್ಟೊತ್ತಿಗಾಗ್ಲೇ ಆಫೀಸ್ ಕ್ಯಾಬ್ ಹಿಳಿದು ಮನೆಯ ಹತ್ತಿರವಿದ್ದ ನನಗೆ ಮಳೆಯ ಹನಿಗಳ ಚುಂಬನುವು ಹಾಗಿಯೇ ಬಿಟ್ಟಿತು. ಮನೆ ಸೇರಿದ ತಕ್ಷಣವೇ ಮಳೆಯ ಆರ್ಭಟ ಇನ್ನೂ ಜೋರಾಯಿತು. ಸದ್ಯ ಮಳೆ ಆರಂಭಕ್ಕೂ ಮೊದಲೇ ಬಂದ್ಯಲ್ಲ ಅಂತ ಅಮ್ಮ ನಿಟ್ಟುಸಿರು ಬಿಟ್ಟರು. ಒಂದು ಹತ್ತು ನಿಮಿಷ ಟೀ ಕುಡಿಯುತ್ತಾ  ಕಿಟಕಿಯಿಂದಲೆ ಮಳೆಯನ್ನು ನೋಡಿ, ನನ್ನ ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗತೊಡಗಿದೆ.
        ನಾ ಇನ್ನೂ ಅಮ್ಮನಿಗೆ ಏನು ಕೂಡ ಹೇಳಿರಲಿಲ್ಲ. ನಾನು ತಯಾರಿ ನೆಡೆಸುತ್ತಿರುವುದನ್ನು ಆಶ್ಚರ್ಯದಿಂದ ನೋಡಿ, ಆತಂಕದಿಂದಲೇ ಕೇಳಿದರು " ಏನು ಇದೆಲ್ಲ ಅಂತ" . ಅದಕ್ಕೆ ನನ್ನ ಉತ್ತರ “ ನಾ ನನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ಟ್ರಿಪ್ ಹೋಗುತ್ತಾ ಇದೀನಿ “ ಅಂದೇ. ತಕ್ಷಣ ಅಮ್ಮ " ಇದೇನೋ... ಹೊರಗಡೆ ಜೋರಾಗಿ ಮಳೆ ಬರ್ತ ಇದೆ, ಏಕಾಏಕಿ ಏನು ಇದೆಲ್ಲ"  ಅಂತ ಕೇಳಿದರು, ನಾ ಹೇಗೋ ಸಮಾಜಾಹಿಶಿ ನೀಡಿ. ಪ್ರವಾಸಕ್ಕೆ ಹೊರಡಲು ಶುರು ಮಾಡಿದೆ. ಅಮ್ಮನು ಕೂಡ ನಮಗೆ " ಸರಿ ಹೋಗು ಆದರೆ ಹುಷಾರಾಗಿರು ಅಂತೆಲ್ಲಾ ಹೇಳಿ ಅಪ್ಪಣೆ ನೀಡಿದರು :) " , ಅಲ್ಲೇ ಇದ್ದ ನನ್ನ ಬಟ್ಟೆಗಳನ್ನು ಒಂದು ಬ್ಯಾಗಿಗೆ ತುಂಬಿಕೊಂಡು , ಅಮ್ಮ ಮಾಡಿದ ಬಿಸಿ ಮುದ್ದೆಯನ್ನು ಗುಳುಮ್ ಮಾಡಿ , ಮಳೆಯಲ್ಲಿಯೇ ವಿಜಯನಗರದ ಕಡೆ ಹೊರಟಾಗ ರಾತ್ರಿ 9 ಗಂಟೆ ಆಗಿತ್ತು.

           ನಾವೆಲ್ಲ ಸ್ನೇಹಿತರು ವಿಜಯನಗರದಲ್ಲಿ ಸಿಗಬೇಕು , ಅಲ್ಲಿಂದ ಸರಿಯಾಗಿ ರಾತ್ರಿ 10 ಕ್ಕೆ ಪ್ರಯಾಣ ಶುರು ಮಾಡಬೇಕು ಅಂತ ಮಾತಾಗಿತ್ತು. ಸಂಜೆ ಶುರುವಾಗಿದ್ದ ಮಳೆ ಇನ್ನೂ ನಿಂತಿರದ ಕಾರಣ ನಮ್ಮ ಪ್ಲಾನ್ ಸ್ವಲ್ಪ ಹೆಚ್ಚು ಕಮ್ಮಿಯಾಗುವ ಎಲ್ಲಾ ಸಾದ್ಯತೆಗಳು ಇದ್ದವು. ದೊ ಎಂದು ಸುರಿಯುತ್ತಾ ಇದ್ದ ಮಳೆ ನಿಲ್ಲಲೇ ಇಲ್ಲ, ಆದರೆ ನಾ ವಿಜಯನಗರಕ್ಕೆ ಹತ್ತಿದ್ದ ಬಸ್ಸು ನಿಂತ್ತೇ ಬಿಟ್ಟಿತ್ತು . ಮಳೆಯಲ್ಲೇ ಓಡುತ್ತಾ ಅಲ್ಲೇ ಇದ್ದ ಒಂದು ಅಂಗಡಿಯ ಬಳಿ ಹೋಗಿ ನಿಂತೆ. ನೀರ ಹನಿಗಳು  ಅಂಗಡಿಯ ಸೂರಿನಿಂದ ನನ್ನ ಮೇಲೆ  ತೊಟ-ತೊಟ  ಅನುಕುತ್ತಲೆ ಇದ್ದವು. ಆಗ ರಾತ್ರಿ 10 ಗಂಟೆ ಆಗಿತ್ತು, ನನ್ನ ಸ್ನೇಹಿತರ ಸುಳಿವು ಇನ್ನೂ ಇರಲೇ ಇಲ್ಲ .ಕಾಲ ಕಳೆಯುವುದು ಹೇಗೆ ಎಂದು ಯೋಚಿಸುವಷ್ಟರಲ್ಲಿ ಕೈ ಗೆ ಮೆಹೇಂದಿ ಹಾಕಿಸಿಕೊಳ್ಳುತ್ತ, ಚಿಟ-ಪಟ ಮಾತನಾಡುತ್ತಾ ಇದ್ದ ಹುಡುಗಿಯರ ಗುಂಪನ್ನು ನೋಡುತ್ತಾ ಕಾಲ ಕಳೆಯಲು ಶುರು ಮಾಡಿದೆ :) . ಅಷ್ಟರಲ್ಲಿ ರಸ್ತೆಯ ಆ ತುದಿಯಲ್ಲಿ " ನೀರಿ,ನೀರಿ " ಅಂತ ಕೂಗುತ್ತಾ ಬಂದ ನನ್ನ ನೆಚ್ಚಿನ ಸ್ನೇಹಿತ ಮಂಜು ಜೊತೆಗೆ ಮಳೆಯಲ್ಲಿಯೇ ಅವನ ರೂಮಿಗೆ ನೆಡೆದೆವು. ಮಳೆಯ ಕಾರಣ ಕ್ಯಾಬ್ ಬರುವುದು ಸ್ವಲ್ಪ ಲೇಟ್ ಆಗುತ್ತೆ ಅಂತ ಪ್ರಭುಗಳು ಫೋನ್ ಮಾಡಿ ತಿಳಿಸಿದರು. ಮಂಜು ಕೂಡ ಅವಸರ ಅವಸರದಲ್ಲಿ ಬಟ್ಟೆ ಬರೆ ಜೋಡಿಸಿಕೊಂಡು ರೆಡಿ ಆಗಿಯೇ ಬಿಟ್ಟ. ಅಷ್ಟೊತ್ತಿಗೆ ವಿಜಯನಗರ ತಲುಪಿದ ಪ್ರಭುಗಳು ಕ್ಯಾಬಿನಿಂದ ನಮ್ಮನ್ನು ಕೂಗಿ " ಬರ್ರೋ " ಎಂದರು. ಜೋರಾಗಿ ಸುರಿಯುತ್ತಿದ್ದ ಮಳೆ ಇನ್ನೂ ಕಡಿಮೆ ಆಗಿರಲೇ ಇಲ್ಲ. ಅಲ್ಲಿಂದ ಹೊರಟ ನಾವು ಜ್ಯೋತಿರ್ಲಿಂಗನ ಮನೆಯಕಡೆ ಹೊರಟು ಪಪ್ಯ ಅಲಿಯಾಸ್ ಪ್ರದೀಪ್ ಮತ್ತು ಜ್ಯೋತಿಯನ್ನು ಕರೆದುಕೊಂಡು ನಮ್ಮ ಪ್ರಯಾಣವನ್ನು ಕೆಂಗೇರಿ ಕಡೆ ಬೆಳೆಸಿದೆವು. ಅಲ್ಲಿ ನಮ್ಮ ಕಿಲಾಡಿ ಕಿರಣ್ ಅಲಿಯಾಸ್ ಮೂಸು ಹತ್ತಬೇಕಾಗಿತ್ತು. ಕೆಂಗೇರಿಯಲ್ಲಿ ಮೂಸು ನಮ್ಮ ಜೊತೆ ಸೇರಿದಾಗ ರಾತ್ರಿ ೧೧ ರ ಸಮಯ, ನಾವು ನಮ್ಮ ಪ್ರವಾಸದ ಪ್ರಯಾಣವನ್ನು ಶುರು ಮಾಡಿಯೇ ಬಿಟ್ಟೆವು. ಎಲ್ಲರೂ ತಮ್ಮ ಕುಶಲೋಪರಿಗಳನ್ನು ವಿಚಾರಿಸುತ್ತಾ, ಈ ಪ್ರವಾಸದ ಪೂರ್ವ ಯೋಜನೆ ಮತ್ತು ಯಾವುದೇ ಸಿದ್ದತೆಗಳಿಲ್ಲದೇ ಹೊರಟ ಬಗ್ಗೆ ಮಾತನಾಡುತ್ತಾ, ಮೈಸೂರು ರಸ್ತೆಯಲ್ಲಿ ಸಾಗತೊಡಗಿದೆವು. ಬಾರಿ ಮಳೆ , ರಸ್ತೆಯಲೆಲ್ಲ ನೀರು, ಮಳೆಯಲ್ಲಿ 20 ಅಡಿಗಳಷ್ಟು ದೂರ ಬಿಟ್ಟರೆ ಮತ್ತೇನು ಕಾಣುತ್ತಿಲ್ಲ.ರಸ್ತೆಯ ತುಂಬಾ ನೀರಿದ್ದ ಕಾರಣ ಒಂದು ರೋಡ್ ಹಂಪ್ ಹಾರಿಸಿದ ನಮ್ಮ ಡ್ರೈವರ್ ಗೆ ನಾವು ಹೇಳಿದ್ದು “ ತಮ್ಮ ಹುಷಾರಾಗಿಯೇ ಹೋಡಿಸಪ್ಪ, ನಮಗೇನೂ ಅವಸರವಿಲ್ಲ, ನಮ್ಮದೆನೂ ಸಾದನೆಯಾಗಿಲ್ಲ ಇನ್ನೂ, ಯಾರು ಮದುವೆ ಕೂಡ ಆಗಿಲ್ಲ, ಕಿರಣ್ ಮದುವೆ ಈಗ ತಾನೇ ಸೆಟ್ ಆಗಿದೆ, ಜ್ಯೋತಿ ಹುಡುಗಿ ನೋಡಿಕೊಂಡು ಬಂದು ಇನ್ನೂ ಅವನ ಅಬಿಪ್ರಾಯ ಕೂಡ ಅವರಿಗೆ ಹೇಳಿಲ್ಲ, ಆರಾಮಾಗಿಯೇ ಹೋಗು, ಬಹಳ ಆಸೆಗಳಿವೆ ಎಂದಾಗ “ ಡ್ರೈವರ್ ನಸು ನಕ್ಕ ಸರಿ ಸಾರ್ ನೀವು ಹೇಳಿದ ಹಾಗೆಯೇ ಹಾಗಲಿ ಎಂದು ನಿದಾನವಾಗಿ ಡ್ರೈವ್ ಮಾಡಲು ಶುರು ಮಾಡಿದ. ಅಷ್ಟರಲ್ಲಿ ನಮ್ಮ ಮೂಸು ನಾ ಊಟ ಮಾಡಿಲ್ಲ ಏನಾದರೂ ತಿನ್ನಲೆಬೇಕು ಅಂತ ಹೇಳತೊಡಗಿದ. ಸ್ವಲ್ಪ ದೂರಕ್ಕೆ ಹೋಗಿ ಅಲ್ಲಿಯೇ ರಸ್ತೆ ಬದಿಯಲ್ಲಿದ್ದ  ಒಂದು ಟೀ ಹೋಟೆಲ್ ಬಳಿ ಗಾಡಿ ನಿಲ್ಲಿಸಿ ಎಲ್ಲರೂ ಬೀಳುವ ಮಳೆಯಲ್ಲಿಯೇ ಬಿಸಿ ಬಿಸಿ ಚಹಾ ಹೀರಿದೆವು. ನಾನು,ಮಂಜು,ಜ್ಯೋತಿ ಪ್ರಯಾಣಾದುದ್ದಕ್ಕೂ ತಿನ್ನಲು ತಿಂಡಿ ತೆಗೆದುಕೊಂಡರೆ, ಪ್ರಭುಗಳು,ಪಪ್ಯ ಮತ್ತು ಮೂಸು ತೀರ್ಥಗಳನ್ನು ತೆಗೆದುಕೊಂಡರು ... !!!! . ಇದೆಲ್ಲದರ ಜೊತೆಗೆ ಮತ್ತೆ ಗಾಡಿಯನ್ನೇರಿದ ನಾವು ಪ್ರಯಾಣಾದುದ್ದಕ್ಕೂ ಮಲಗದೇ ಬರಿ ಹಳೆಯ ನೆನಪುಗಳು, ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಾ ಮುನ್ನೆಡೆದೆವು.
               ಅತೀಯಾಗಿ ಮಾತನಾಡುತ್ತಾ ಇದ್ದ ಮೂಸು ಈ ಬಾರಿ ಸುಮ್ಮನೇ ಇರುವುದು ನಮಗೆ ತುಂಬಾ ಆಶ್ಚರ್ಯ ತರಿಸಿತ್ತು, ಅದಕ್ಕೆ ಕಾರಣವಾದ ಅವನ ಅಕ್ಕನ ಮಗಳನ್ನು ಹೋಗಳುತ್ತ ಅವನ ಕಾಲೆಳೆಯುತ್ತಿದ್ದೆವು , ಹೀಗೆ ಪೋಲಿ ಮಾತುಗಳು, ಹಾಸ್ಯ ಚಟಾಕಿಗಳು ನೆಡೆಯುತ್ತಲೇ ಇದ್ದವು, ಮಳೆಯೋಂತು ನಿಂತಿರಲೇ ಇಲ್ಲ. ಇನ್ನೇನು ಕುಶಾಲನಗರದ ಹತ್ತಿರ ಬಂದಂತೆ ಮಳೆ ತುಂಬಾ ಜೂರಾಗತೊಡಗಿತು.ನಾವು ಮಾತಾಡಿ ಮಾತಾಡಿ ತುಂಬಾ ಸುಸ್ತಾಗಿದ್ದರಿಂದ , ಡ್ರೈವರ್ ಗೆ ಗಾಡಿ ಪಕ್ಕಕ್ಕೆ ಹಾಕುವಂತೆ ಹೇಳಿ , ಸ್ವಲ್ಪ ಸಮಯ ಕ್ಯಾಬ್ಅಲ್ಲಿ ಮಲಗಿದೆವು.
       ಸ್ವಲ್ಪ ವಿಶ್ರಾಂತಿಯ ನಂತರ ಕಣ್ಣು ಬಿಟ್ಟಾಗ ಬೆಳ್ಳಿಗ್ಗೆ 5.45 ರ ಸಮಯ, ಮಳೆ ಸ್ವಲ್ಪ ಕಡಿಮೆ ಆಗಿತ್ತು , ಮತ್ತೆ ಪ್ರಯಾಣ ಆರಂಬಿಸಿದ ನಾವು ಬೆಳ್ಳಿಗ್ಗೆ 6.15 ರ ಹೊತ್ತಿಗೆ "ಕುಶಾಲನಗರ" ಮುಟ್ಟಿದ್ದೆವು. ಅಲ್ಲಿ ಮತ್ತೆ ಇಳಿದು ಮೊದಲ ಮಲೆನಾಡಿನ ಬಿಸಿ ಕಾಫೀ ಕುಡಿದು, ಬೆಳಗಿನ ಪ್ರಯಾಣವನ್ನು ಮುಂದುವರೆಸಿದೆವು. ಅಷ್ಟೊತ್ತಿಗೆ ಸಂಪೂರ್ಣವಾಗಿ ನಿಂತಿದ್ದ ಮಳೆ ಪ್ರಕೃತಿಗೊಂದು ಅಂದ ತಂದುಕೊಟ್ಟಿತ್ತು. ಕಿಟಕಿಯಿಂದ ತಣ್ಣನೆ ಗಾಳಿ, ಎತ್ತ ನೋಡಿದರತ್ತ ಹಸಿರು ತೋಟ-ತುಡಿಕೆಗಳು, ಗುಡ್ಡ-ಬೆಟ್ಟಗಳು ನಮ್ಮ ಪ್ರಯಾಣಕೊಂದು ಚೈತನ್ಯ ನೀಡಿದ್ದವು. ಅಕಾಲಿಕವಾಗಿ ಆ ವಾರವೆಲ್ಲ ಬಂದಿದ್ದ ಮಳೆಯು ಮಡಿಕೇರಿಯ ಸೌಂದರ್ಯಕ್ಕೆ ಬೇರೆಯ ಲುಕ್ ನೀಡಿತ್ತು. ಬೇಸಿಗೆಯಲ್ಲಿ ಕೂಡ ಮಡಿಕೇರಿ ಆ ವಾರದ ಮಳೆಯಿಂದ, ಮಳೆಗಾಲದಲ್ಲಿ ಇರುವ ರೀತಿ ಹಚ್ಚ ಹಸಿರಿನಿದ ಕಂಗೊಳಿಸುತ್ತ ಇತ್ತು. ಹೀಗೆ ಮುಂದೆ ಸಾಗುತ್ತಾ ಇರುವಾಗ  ಕೆಲವು ಸುಂದರವಾದ ಜಾಗಗಳಲ್ಲಿ ಇಳಿದು ಅಲ್ಲಿಯ ವಾತಾವರಣವನ್ನು ಸವಿದೆವು. ಅಷ್ಟೊತ್ತಿಗೆ ನಮ್ಮ ಹುಡುಗರ ಫೋಟೋ ಸೆಶನ್ಸ್ ಆರಂಬವಾಗಿಯೇ ಬಿಟ್ಟವು. ಸ್ವಲ್ಪ ಮುಂದೆ ನೆಡೆದಾಗ ನಮಗೆ ಅತ್ಯಂತ ಆಶ್ಚರ್ಯ ತರಿಸುವಂತ ಸುಂದರ ದೃಶ್ಯ, ಬೆಟ್ಟದ ಸಾಲುಗಳು, ಬೆಟ್ಟಗಳಿಗೆ ಮುದ್ದಿಡಲು ತವಕಿಸುತ್ತಿರುವ ಮೋಡಗಳು, ಎತ್ತ ನೋಡಿದರು ಮಡಿಕೇರಿಯ ಮಂಜು , ಗಾಳಿ ಬೀಸಿದಾಗ ಸ್ವಲ್ಪ ಸರಿಯುತಿದ್ದ ಮೋಡಗಳು. ನಾವು ಈ ರೀತಿಯ ವಾತಾವರಣವನ್ನು ಈ ಬೇಸಿಗೆಯಲ್ಲಿ ಯೋಚಿಸಿಯೂ ಕೂಡ ಇರಲಿಲ್ಲ. ಒಟ್ಟಾರೆ ಹೇಳುವುದಾದರೆ ನನಗೆ ಅಲ್ಲಿಯ ಈ ರೀತಿಯ ವಾತಾವರಣ ತುಂಬಾ ಸರ್ಪ್ರೈಸ್ ಆಗಿತ್ತು.


         ಅಲ್ಲಿ ಇಲ್ಲಿ ಇಳಿದು ಫೋಟೋ ಕ್ಲಿಕ್ಕಿಸಿ ಮಡಿಕೇರಿ ತಲುಪಿದ್ದು ಸರಿಯಾಗಿ 8 ಗಂಟೆ ಆಗಿತ್ತು.  ಅತ್ಯಂತ ಸುಂದರ ಮತ್ತು ಶಾಂತ ರೂಪದಲ್ಲಿ ಕಾಣುತಿದ್ದ ಆ ಊರು, ಅಲ್ಲಿಯ ಜನ , ಹುಡುಗೆ ತೊಡಿಗೆಗಳು  ನಮಗೆ ಹೊಸ ಎಫೆಕ್ಟ್ ಕೊಟ್ಟವು. ಮಡಿಕೇರಿಯಲ್ಲಿ ನಾವು ನೇರವಾಗಿ ಹೋಗಿದ್ದು "ರಾಜಸೀಟ್"ಗೆ. ಅಲ್ಲಿಯ ಮುಂಜಾನೆಯ ದೃಶ್ಯವಂತು ವರ್ಣಿಸಲಸಾದ್ಯ. ಎತ್ತ ನೋಡಿದರು ಮಡಿಕೇರಿಯ ಮಂಜು, ಬಿಳಿ ಮೋಡಗಳು, ದೂರದಲ್ಲಿ ಕಾಣುವ ಬೆಟ್ಟಗಳ ತುದಿಗಳು, ಅವುಗಳಿಗೆ ಸುತ್ತಿಕೊಂಡಿದ್ದ ಮೋಡಗಳು, ಬಾರಿ ಪ್ರಪಾತಗಳು, ಇದೆಲ್ಲ ನಿಜಕ್ಕೂ ನಮಗೆ ಮುದ ನೀದಿದವು.ಎದೆಲ್ಲ ನಮಗೆ ಒಂದು ರೀತಿಯಲ್ಲಿ ಹಿಮದ ರಾಶಿಗಳಂತೆ ಕಾಣುತ್ತಿದ್ದವು. ಸ್ವಲ್ಪ ಸಮಯ ಕಳೆದು ಫೋಟೋಗಳನ್ನು ಕ್ಲಿಕ್ಕಿಸಿ ಅಲ್ಲಿಂದ ಹೊರಟು ನಾವು, ಅಲ್ಲಿಯೇ ಇದ್ದ ಒಂದು ಹೋಮ್ ಸ್ಟೇ ಬುಕ್ ಮಾಡಿ, ನಮ್ಮ ಬ್ಯಾಗುಗಳನ್ನ ಅಲ್ಲಿ ಇಟ್ಟು, ಸ್ನಾನ ಮುಗಿಸಿ, ಫ್ರೆಶ್ ಆಗಿ, ಬಟ್ಟರ ಹೋಟೆಲ್‍ಗೆ ಹೋಗಿ 4 ಇಡ್ಲಿ, 1 ಪ್ಲೇಟ್ ಪುಳಿಯೋಗರೆ, ನಾಲಿಗೆ ಚುರ್ ಅನ್ನುವಷ್ಟು ಬಿಸಿಯಾದ ಕಾಫೀ ಕುಡಿದು.ತಲಕಾವೇರಿಗೆ ಹೊರಡಲು ನಿರ್ಧರಿಸಿ, ಅಲ್ಲಿಂದ ಹೊರಟೆವು.

        ಮಡಿಕೇರಿಯ ಪುರಾತನ ದೇವಾಲಯ ಶ್ರೀ ಓಂಕಾರೇಶ್ವರ ದೇವಸ್ತಾನಕ್ಕೆ ದಾರಿಯಿಂದಲೇ ಕೈ ಮುಗಿದು ಮಡಿಕೇರಿಯಿಂದ  ತಲಕಾವೇರಿ ಕಡೆಗೆ ಹೊರಟಾಗ ಬೆಳಿಗ್ಗೆ 9 ರ ಸಮಯ. ತಲಕಾವೇರಿ ತಲುಪುತ್ತಿದ್ದಂತೆ , ಮತ್ತೆ ಪ್ರಕೃತಿಯು ಅದರ ಅತ್ಯಂತ ಹೆಚ್ಚಿನ ಸೌಂದರ್ಯದಿಂದ ನಮಗೆ ಚಮಕ್ ಕೊಡುತ್ತಲೇ ಇತ್ತು. ತಲಕಾವೇರಿಯಲ್ಲಿ, ಕಾವೇರಿಯ ಉಗಮ ಸ್ಥಾನಕ್ಕೆ ನಮಿಸಿ, ಅಲ್ಲಿಯೆ ಬೆಟ್ಟದ ಮೇಲಿರುವ "ವ್ಯೂ ಪಾಯಂಟ್" ಇಂದ ತಲಕಾವೇರಿಯ ವೈಭವ ನೋಡುವುದೇ ಒಂದು ವಿಶೇಷವಾದ ಅನುಭವ. ಬೆಟ್ಟವೇರುವುದಂತೂ ಒಂದು ಅತ್ಯಂತ  ಆನಂದದ ಮತ್ತು ಸಾಹಸದ ಕೆಲಸವಾಗಿತ್ತು. ನಮ್ಮ ಮುಂದೆಯೇ ಮೋಡಗಳು ಹೋಗುವ ಅನುಭವ. ಎತ್ತ ನೋಡಿದರು ಪ್ರಪಾತಗಳು, ಹಸಿರು ಬೆಟ್ಟಗಳು ಬಿಳಿ ಮೋಡಗಳ ಸೀರೆಯುಟ್ಟು ನಮಗೆ ತಮ್ಮ ವೈಯ್ಯಾರ ಪ್ರದರ್ಶಿಸಲೆಂದೇ ನಿಂತಿದ್ದಂತೆ ದೃಶ್ಯ. ನಿಜವಾಗಿಯೂ ನಾವೇನೂ ಸ್ವರ್ಗದಲ್ಲಿ ಇದೀವೇನೋ ಅನ್ನೋ ಅನುಭವ. ಅಲ್ಲಿಂದ ಒಲ್ಲದ  ಮನಸ್ಸಿನಿಂದ ಕೆಳಗೆ ಹಿಳಿದು ಸ್ವಲ್ಪ ಸಮಯ ಅಲ್ಲಿಯೇ ಕುಳಿತು, ಪ್ರಕೃತಿಯ ಪೂರ್ಣಾನಂದವನ್ನು ಅನುಭವಿಸಿ , ಭಾಗಮಂಡಲದ ಭಗಂಡೇಶ್ವರಸ್ವಾಮಿ ದೇವಸ್ತಾನಕ್ಕೆ ನಮ್ಮ ಪ್ರಯಾಣ ಬೆಳೆಸಿದೆವು. ಅಷ್ಟೊತ್ತಿಗೆ ತಡ ಮಧ್ಯಾಹ್ನವಾಗಿದ್ದರಿಂದ ದೇವಸ್ತಾನದ ಬಾಗಿಲು ಮುಚ್ಚಿತ್ತು, ದೇವೇರ ದರುಶನ ನಮಗೆ ಆಗಲಿಲ್ಲ, ಆದರೆ ಅಲ್ಲಿಯ ಪ್ರಸಾದ ಮಾತ್ರ ಸಿಕ್ಕಿತು. ಕೊಡಗಿನ ಶೈಲಿಯ  ಪಲ್ಯ,ಪಾಯಸ ಮತ್ತು ಬಿಸಿ ಬಿಸಿ ಅನ್ನ ಸಾಂಬಾರು ಹೊಟ್ಟೆಗಿಳಿಸಿ , ಹೊರಗಿನಿಂದಲೇ ದೇವರಿಗೆ ನಮಸ್ಕಾರ ಮಾಡಿ ಅಲ್ಲಿಂದ ಹೊರಟಾಗ ಸರಿಯಾಗಿ 2 ಗಂಟೆ ಆಗಿತ್ತು. ಅಲ್ಲಿಂದ ನಾವು ನೇರವಾಗಿ ಹೊರಟಿದ್ದು "ಹಬ್ಬಿ" ಜಲಪಾತದ ಕಡೆಗೆ. ಹಬ್ಬಿ ಜಲಪಾತ ಸ್ವಲ್ಪ ನೀರಿಲ್ಲದೇ  ಸಪ್ಪೆಯಾಗಿದ್ದರು ಸಹ ಅಲ್ಲಿಯ ದೃಶ್ಯ ಮಾತ್ರ ರಮಣೀಯವಾಗಿತ್ತು. ತೇಲಾಡುವ ಬ್ರಿಡ್ಜ್, ಕೆಳಗೆ ನೀರು, ಮೇಲಿಂದ ಕೆಳಗೆ ಬೀಳುವ ನೀರಿನ ಶಬ್ದ  ಮತ್ತೆ ಒಂದು ತರದ ಎಫೆಕ್ಟ್ ನೀಡುತ್ತಾ ಇತ್ತು. ಹಬ್ಬಿ ಜಲಪಾತದ ಬಳಿ ಸಾಕಷ್ಟು ಸಮಯ ಕಳೆದ ನಾವು ಮಡಿಕೇರಿಗೆ ಹಿಂತಿರುಗಿದಾಗ ಸಂಜೆಯಾಗಿತ್ತು. ಜಾಸ್ತಿ ಸುಸ್ತಾಗಿದ್ದ ನಮಗೆ ಮತ್ತೆ ಹೊಟ್ಟೆ ಚುರುಕ್ ಅಂದಿತ್ತು, ಅಲ್ಲಿಯೇ ಇದ್ದ ಒಂದು ಉಡುಪಿ ಹೊಟೆಲ್ ಗೆ ಹೋಗಿ ದೋಸೆ ತಿಂದು ಮುಗಿಸಿ, ಸರಿಯಾಗಿ 7 ಗಂಟೆಗೆ ಮತ್ತೆ ರಾಜ ಸೀಟ್‌ಗೆ ಹೊರಟೆವು. ಅಲ್ಲಿಗೆ ಹೋಗುತ್ತಿದ್ದಂತೆಯೆ  ಅಲ್ಲಿ ಮಬ್ಬುಗತ್ತಲಲ್ಲಿ ನಮ್ಮನ್ನು ಸ್ವಾಗತಿಸಿದ್ದು ಸಂಗೀತ ಕಾರಂಜಿಗಳು. 15 ನಿಮಿಷಗಳ ಕಾಲ ನೆಡೆಯುವ ಈ ಕಾರಂಜಿಗಳ  ನೃತ್ಯ ಮಕ್ಕಳನ್ನ ಮತ್ತು ದೊಡ್ಡವರನ್ನು ರಂಜಿಸುವುದರಲ್ಲಿ ಎರೆಡು ಮಾತಿಲ್ಲ. ಇನ್ನೇನು ಆ ಕಾರ್ಯಕ್ರಮ ಮುಗಿಯುವ ವೇಳೆಗೆ ಮತ್ತೆ ಮಡಿಕೇರಿಯ ಮಳೆ ಆರಂಬವಾಗಿಯೇ ಬಿಟ್ಟಿತ್ತು.  ಮಳೆಯಲ್ಲಿ ಮತ್ತೆ ತೊಯ್ದುಹೋದ ನಾವು , ಊಟ-ತಿಂಡಿ ಕಟ್ಟಿಸಿಕೊಂಡು ಹೋಮ್ ಸ್ಟೇ ತಲುಪಿದ ನಾವು, ಆ ದಿನದ ನೆನಪುಗಳನ್ನ ಮೆಲುಕು ಹಾಕುತ್ತಾ, ಒಬ್ಬರಿಗೊಬ್ಬರು ಚುಡಾಯಿಸಿಕೊಳ್ಳುತ್ತ , ನಾವು ತಿಂಡಿ ತಿಂದು ಮುಗಿಸಿದೆವು , ಇನ್ನೂ ಕೆಲವರು ತೀರ್ಥ ಕುಡಿಯುತ್ತಲೇ ಇದ್ದರು, ಮಾತು ಮಾತಲ್ಲೇ ನಿದ್ರರಾಣಿ ನಮ್ಮನ್ನು ಕರೆದಿದ್ದರಿಂದ,  ಆದಿನವನ್ನು ಅಲ್ಲೆಗೆ ಮುಗಿಸಲು ತೀರ್ಮಾನಿಸಿ, ನಿದ್ರೆಗೆ ಜಾರಿದೆವು.

            ಹಿಂದಿನ ದಿನ ಚೆನ್ನಾಗಿ  ದಣಿದಿದ್ದ  ನಮಗೆ ಆ ರಾತ್ರಿ ಹೋದದ್ದೇ ಗೊತ್ತಾಗಲಿಲ್ಲ, ಬೆಳ್ಳಿಗ್ಗೆ 5 ಕ್ಕೆ ಎದ್ದು, ಒಬ್ಬೊಬ್ಬರೇ ಸ್ನಾನ ಮಾಡಿ ಮತ್ತೆ ನಮ್ಮ ಮುಂದಿನ ಪ್ರವಾಸಿ ತಾಣಗಳ ಬೇಟಿಗೆ ರೆಡಿಯಾಗಿ  6.30 ಕ್ಕೆ ರೂಮ್ ಕಾಲಿ ಮಾಡಿ ಅಲ್ಲಿಂದ ನಾವು ಹೊರಟೆವು.
            ನಮ್ಮ ಮುಂದಿನ ತಾಣವು "ದುಭಾರೆ" ಎಲಿಫೆಂಟ್ ಕ್ಯಾಂಪ್ ಆಗಿತ್ತು. ಅಲ್ಲಿ ಸರಿಯಾಗಿ ಉಪಹಾರ ವ್ಯವಸ್ತೆ ಇಲ್ಲದ ಕಾರಣ ಮಡಿಕೇರಿಯಲ್ಲಿಯೇ ಬೆಳ್ಳಿಗ್ಗೆ 7 ಕ್ಕೆ ಸರಿಯಾಗಿ ತಿಂಡಿ ತಿಂದು, ಮಡಿಕೇರಿಯ ಕೊನೆ ಕಾಫಿ ಕುಡಿದು, ಮಡಿಕೇರಿಗೆ ನಮಸ್ಕಾರ ಹೇಳಿ, ಹೋರಾಟ ನಾವು ಸರಿಯಾಗಿ 9-10 ಕ್ಕೆ ದುಬಾರೆ ತಲುಪಿದೆವು. ಅಲ್ಲಿ ಕಾವೇರಿ ನದಿಯಲ್ಲಿ ವಾಟರ್ ರಾಫ್ಟಿಂಗ್ ಮಾಡಿ, ನದಿಯ ಇನ್ನೊಂದು ದಡದಲ್ಲಿ ಇದ್ದ ಆನೆಗಳ ಕ್ಯಾಂಪ್ ಗೆ ಹೋಗಿ ಅಲ್ಲಿಗೆ ಬರುವ ಆನೆಗಳಿಗೆ ಕಾಯುತ್ತಾ ಕುಳಿತೆವು. ಆನೆಗಳು ಅಲ್ಲೆಗೆ ಬಂದಾಗ ಅವುಗಳನ್ನು ನೋಡಿ ಅವುಗಳ ಬಗ್ಗೆ ತಿಳಿದುಕೊಂಡು ಅಲ್ಲಿಂದ ಹೊರಡಲು ತೀರ್ಮಾನಿಸಿದೆವು.  ಅಲ್ಲಿಂದ ಹೊರಟು ನಾವು " ಕಾವೇರಿ ನಿಸರ್ಗದಾಮಕ್ಕೆ"  ಬಂದು ಅಲ್ಲಿ ಸ್ವಲ್ಪ ಸಮಯ ಕಳೆದು, ಆನೆಯ ಮೇಲೆ ಸವಾರಿ ಮಾಡಿ, ಬಾರಿ ಫೋಟೋ ಸೆಶನ್ ಗಳನ್ನು ಮುಗಿಸಿ, ನಿಸರ್ಗಾಧಾಮದಲ್ಲಿ ಅಡ್ಡಾಡಿ ಅಲ್ಲಿಂದ ಹೊರಟಾಗ ಸರಿಯಾಗಿ 11 ಗಂಟೆಯ ಸಮಯವಿರಬಹುದು. ದಾರಿಯಲ್ಲಿಯೇ ಇದ್ದ ಒಂದು "ಚಿಕ್ಲಿಹೊಳೆ" ಜಲಾಶಯ ನೋಡಿಕೊಂಡು, ಅದರ ಸೌಂದರ್ಯವನ್ನೂ ನಮ್ಮ ಕಣ್ಣಿನಲ್ಲಿ ತುಂಬಿಕೊಂಡು ನಮ್ಮ ಪ್ರವಾಸದ ಕೊನೆಯ ತಾಣ "ಬೈಲುಕುಪ್ಪೆಯ" ಟಿಬೆಟ್ ಜನರ " ಗೋಲ್ಡನ್ ಟೆಂಪಲ್ " ಗೆ ಹೋದೆವು. ನಿಜಕ್ಕೂ ಅದೊಂದು ಅಪರೂಪದ ಮತ್ತೆ ಸುಂದರವಾದ ತಾಣ. ಕರ್ನಾಟಕದಲ್ಲಿ ಈ ರೀತಿಯ ಒಂದು ಜಾಗ ಅದು ಇಷ್ಟು ಹತ್ತಿರದಲ್ಲಿ ಇದೆ ಅಂದರೆ ನಂಬಲು ಆಗುವುದಿಲ್ಲ.  ಎಲ್ಲಿ ನೋಡಿದರು ಟಿಬೆಟ್ ಜನರು, ಅವರ ವಿಶೇಷ ಹಾಗೂ ವಿಬಿನ್ನವಾದ ಉಡುಗೆ ತೊಡುಗೆಗಳು, ಅವರ ಶೈಲಿಯ ಆ ದೇವಸ್ಥಾನ, ಬಾರಿ ಗಾತ್ರದ ಸುಂದರ ಆ ಮೂರು ವಿಗ್ರಹಗಳು ನಿಜಕ್ಕೂ ಅವು ನಮ್ಮನ್ನು ಬೇರೆಯ ಲೋಕಕ್ಕೆ ಕರೆದು ಕೊಂಡು ಹೋದಂತಿದ್ದವು . ಅಷ್ಟೊತ್ತಿಗೆ ಸರಿ ಸುಮಾರು 1 ಗಂಟೆ ಆಗಿತ್ತು .
             ಜ್ಯೋತಿ ದರ್ಮಸ್ಥಳಕ್ಕೆ ಮತ್ತು ನಾನು ಶೃಂಗೇರಿಗೆ ನನ್ನ ಸ್ನೇಹಿತ ಶಾಂತೇಷ್ ಮಧುವೆಗೆ ಹೋಗಬೇಕಾಗಿತ್ತು ಅದೇ ದಿನ ರಾತ್ರಿ. ಹಾಗಾಗಿ ಅಲ್ಲಿಂದ ಬೆಂಗಳೂರಿಗೆ ಹೊರಡಲು ಸಿದ್ದರಾದೇವು. ದಾರಿಯುದ್ದಕ್ಕೂ ಟ್ರಿಪ್ ಬಗ್ಗೆ ಮಾತನಾಡುತ್ತಾ , ಮೂಸು( ಕಿರಣ್ ) ಚೇಂಜ್ ಆಗಿರುವುದರ ಬಗ್ಗೆ, ಪಪ್ಯನ ಮುಂದಿನ ಯೋಜನೆಗಳ ಬಗ್ಗೆ ಅವನ ಕಾಲು ಎಳೆಯುತ್ತಾ ಬಂಗಳೂರಿನ ಕಡೆ ಬರತೊಡಗಿದೆವು. ಅಂತೂ ಇಂತೂ ಬೆಂಗಳೂರು ಬಂದೇಬಿಟ್ಟಿತು, ಇಲ್ಲಿಗೆ  ತಲುಪುತಿದ್ದಂತೆಯೇ ಮತ್ತೆ ಮಳೆಯ ಆರ್ಭಟ, ಹೇಗೋ ವಿಜಯನಗರ ಸೇರಿದ ನಾನು, ಅಲ್ಲಿಯೇ ಮಂಜನ ರೂಮಿನಲ್ಲಿ ಕಾಲ ಕಳೆದು ಮತ್ತೆ ನನ್ನ ಶೃಂಗೇರಿ ಪ್ರಯಾಣಕ್ಕೆ ಸಿದ್ದವಾಗಿ, ಅದೇ ಬೆಂಗಳೂರಿನ  ಜನಜಂಗುಳಿಯ ಮೆಜೆಸ್ಟಿಕ್ ಕಡೆ ಹೋಗಿ ಬಸ್ಸನ್ನೇರಿ ಮತ್ತೆ ಮುಂದಿನ ಪ್ರಯಾಣವನ್ನು ಆರಬಿಸಿದೆ ……… .........










ನಿಮಗಾಗಿ.......
ನಿರಂಜನ್