ಗುರುವಾರ, ಮಾರ್ಚ್ 22, 2012

ನಮ್ಮ ಹಳ್ಳಿಯ ಹಬ್ಬ


                                    ಯುಗಾದಿಯ ನೆನಪುಗಳು..... 

ಸಂತನ ಆಗಮನದಿಂದ ಕಂಗೊಳಿಸುತ್ತಿರುವ ಪ್ರಕೃತಿ ಮರ-ಗಿಡಗಳನ್ನು ಹಸಿರು ಚಿಗುರಿನಿಂದ ಸಿಂಗರಿಸಿದೆ, ಎಳೆಯ ಚಿಗುರು ತಿಂದು ಪಂಚಮದಲ್ಲಿ ಹಾಡುವ ಕೋಗಿಲೆಗಳು ಎಲ್ಲೆಲ್ಲೂ ತಮ್ಮ ಸಂಗೀತ ಗೋಷ್ಠಿ ನಡೆಸುತ್ತಿವೆ, ಸುಡುವ ಬೇಸಗೆಯ ಬಿಸಿಲ ಜಳಕ್ಕೆ ಅಂಜದೆ ಅಳುಕದೆ  ಬೇಸಗೆಯ ರಜವನ್ನು ಅನುಭವಿಸುತ್ತಿರುವ ಚಿಕ್ಕ ಚಿಕ್ಕ ಮಕ್ಕಳು , ನಮ್ಮ ಹೊಸ ವರುಷವನ್ನು ಸ್ವಾಗತಿಸಲು ಸಂಭ್ರಮದಿಂದ ಸಜ್ಜಾಗಿದ್ದಾರೆ . ಈ ಹೊಸ ಸಂವತ್ಸರವನ್ನು, ಹೊಸ ವರುಷವನ್ನು ಸ್ವಾಗತಿಸುವ ಈ ದಿನ ಅಂದರೆ  ನಮ್ಮ ನೆಚ್ಚಿನ ಯುಗಾದಿ ಹಬ್ಬ ಮತ್ತೆ ಬಂದು ಬಿಟ್ಟಿದೆ. ಖರನಾಮ ಸಂವತ್ಸರವನ್ನು ಕಳೆದು , ಬರುವ ನಂದನ ಸಂವತ್ಸರವು ಎಲ್ಲರಿಗೂ ಒಳಿತು ಮಾಡಲಿ, ಕಳೆದ ವರುಷದ ಕಹಿ ಮರೆತು ಸಿಹಿ ಮಾತ್ರ ನೆನೆದು , ಈ ವರುಷದಲಿ ಸಿಹಿ-ಕಹಿಗಳನ್ನು ಸಮನಾಗಿ ಅನುಭವಿಸುವ ಶಕ್ತಿಯನ್ನು ಆ ದೇವರು ಎಲ್ಲರಿಗೂ ಕರುಣಿಸಲಿ  ಎಂದು ದೇವರಲ್ಲಿ ಬೇಡುತ್ತ , ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಆಚರಿಸುತ್ತಿದ್ದ  ಆ ಯುಗಾದಿಯ ನೆನಪುಗಳ ಬಗ್ಗೆ ಸ್ವಲ್ಪ ಮೇಲುಕು ಹಾಕುತ್ತೇನೆ. 

                                        ಯುಗಯುಗಾದಿ ಕಳೆದರೂ
                                        ಯುಗಾದಿ ಮರಳಿ ಬರುತಿದೆ 
                                        ಹೊಸ ವರುಷಕೆ ಹೊಸ ಹರುಷವ 
                                        ಹೊಸತು ಹೊಸತು ತರುತಿದೆ....
                                  
                                        ಹೊಂಗೆಹೂವ ತೊಂಗಲಲ್ಲಿ 
                                        ಭೃಂಗದ ಸಂಗೀತಕೇಳಿ 
                                        ಮತ್ತೆ ಕೇಳಿ ಬರುತಿದೆ.
                                        ಬೇವಿನ ಕಹಿ ಬಾಳಿನಲ್ಲಿ
                                        ಹೂವಿನ ನಸುಗಂಪು ಸೂಸು
                                        ಜೀವ ಕಳೆಯ ತರುತಿದೆ.
                                                            - ದ.ರಾ. ಬೇಂದ್ರೆ 

            ಯುಗಾದಿ ಬಂತೆಂದರೆ ನಮಗೆ ತಟಕ್ಕನೆ ನೆನಪಾಗುವುದು ನಾವು ರೇಡಿಯೋದಲ್ಲಿ  ಕೇಳುತ್ತಿದ್ದ ಬೇಂದ್ರೆಯವರ  ಈ ಸಾಲುಗಳು. ಈ ಸಾಲುಗಳು ನಿಜವಾಗಿಯೂ ನಮ್ಮೆಲ್ಲರನ್ನು  ಒಂದೇ  ಕ್ಷಣದಲ್ಲಿ  ಹಬ್ಬದ ವಾತಾವರಣಕ್ಕೆ ಎಳೆದೊಯ್ದು  ಬಿಡುತ್ತವೆ.ಯುಗಾದಿಯನ್ನು ವರ್ಣಿಸಲು ಇದಕ್ಕಿಂತ ಬೇರೆ ಸಾಲುಗಳು ಬೇಕೇ. ನಿಜವಾಗಿಯೂ ಬೇಂದ್ರೆಯವರಿಗೆ ನನ್ನ ಅಂತರಾಳದ  ನಮನಗಳು. 

  
          ಸ್ನೇಹಿತರೆ ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದ  ರೀತಿಯೇ ಬೇರೆ. ಬೇಸಗೆಯ ರಜಾ ದಿನಗಳಲ್ಲಿ ಹುಡುಗರೆಲ್ಲಾ ಸೇರಿ ಹಬ್ಬ ಯಾವಾಗ ಬರುತ್ತೋ ಅಂತ ಕಾಯುತ್ತಿದ್ದ ನಮಗೆ, ಹಬ್ಬದ ಮೊದಲ ದಿನ  ಚೆಂಡಾಟ  ಆಡಲು ಬಟ್ಟೆ ಚೆಂಡನ್ನು ಸಿದ್ದ ಮಾಡುವುದರಲ್ಲೇ ಒಂದೆರೆಡು ದಿನ ಕಳೆಯುತ್ತಿದ್ದೆವು. ಅಂತೂ ಇಂತೂ ಹಬ್ಬದ ದಿನ ಬಂತೆಂದರೆ ಸಾಕು ಬೆಳಗಿನ ಜಾವಕ್ಕೆ ಎದ್ದು ಹೊಲಕ್ಕೆ ಹೋಗಿ ಮಾವಿನ ಸೊಪ್ಪು, ಬೇವಿನ ಸೊಪ್ಪು , ಬೇವಿನ ಹೂವು ತಂದು. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸುತ್ತಿದ್ದೆವು. ಅಷ್ಟೊತ್ತಿಗಾಗಲೇ ಮನೆಯ ಅಂಗಳಗಳನ್ನು ಸಗಣಿಯಲ್ಲಿ ಸಾರಿಸಿ , ರಂಗೋಲಿ ಬಿಟ್ಟಿರುತ್ತಿದ್ದರು ಮನೆಯ ಹೆಣ್ಣು ಮಕ್ಕಳು ಬಲು ಸಡಗರದಿಂದ. ಅಷ್ಟರಲ್ಲಿ  ಅಮ್ಮ-ಅಜ್ಜಿಯರು ನಮಗೆಲ್ಲ ಹರಳೆಣ್ಣೆ - ಕೊಬ್ಬರಿ ಎಣ್ಣೆ ಹಚ್ಚಿ  ಹಣೆಗೆ ಕುಂಕುಮವನಿತ್ತು , ಸಣ್ಣ ಆರತಿ ಮಾಡುತಿದ್ದರು. ಎಣ್ಣೆ ಹಚ್ಚಿಕೊಂಡು ನಾವು ನಮ್ಮ ಸ್ನೇಹಿತರ , ದೊಡ್ಡಪ್ಪ- ಚಿಕ್ಕಪ್ಪ, ಮಾವಂದಿರ ಮನೆಗೆ ಹೋಗಿ, ಸಮಾನ ವಯಸ್ಸಿನ ಎಲ್ಲ ಹುಡುಗರನ್ನು ಕರೆತಂದು ಮೊದಲೇ ಸಿದ್ದ ಪಡಿಸಿದ್ದ ಬಟ್ಟೆ ಚೆಂಡಿನಿಂದ ಲಗ್ಗೋರಿ ಆಟ ಆಡುವುದಂತೂ ತುಂಬಾ ಮಜವಾಗಿರುತ್ತಿತ್ತು. ಅಬ್ಬಾ ಒಂದೊಂದು ಹೊಡೆತಗಳು ಬೆನ್ನನ್ನು ಕೆಂಪಾಗಿಸುತ್ತಿದ್ದವು, ಚರ್ಮವೂ ಚುರ್‌ ಗುಟ್ಟಿ   ಗಟ್ಟಿಯಾಗುತ್ತಿತ್ತು.  ಹಾಗೂ-ಹೀಗೂ  ಸ್ನೇಹಿತರು ಸಂಬಂಧಿಗಳ ಜೊತೆ ಚೆನ್ನಾಗಿ ಎಳೆಯ ಬಿಸಿಲಲ್ಲಿ ಮೈಗೆ ಎಣ್ಣೆ ಹಚ್ಚಿ ಆಟವಾಡಿ ದಣಿದು ಮನೆಗೆ ಬಂದಾಗ, ಮನೆಯಲ್ಲಿ ಬೇಸಿಗೆಗಾಗಿಯೇ ಇಟ್ಟಿರುತ್ತಿದ್ದ ದೊಡ್ಡ ಮಡಿಕೆಯ(ಗಡಿಗೆ) ನೀರನ್ನು  ಗಟ ಗಟ ಕುಡಿದಾಗ  ನಮಗಾಗುತ್ತಿದ್ದ ನೆಮ್ಮದಿಯೇ ಬೇರೆ .  ಸಾಕೆನ್ನುವೊಷ್ಟು  ಆಟವಾಡಿ  ಹಿತ್ತಾಳೆ ಅಂಡೆಯ ನೀರಲ್ಲಿ ಮಿಂದರೆ " ಅಬ್ಬಾ ಅದೆಷ್ಟು ಸುಖ ಸಿಗುತಿತ್ತು ಅದರಲ್ಲಿ " ಅಂತ ಈಗಲೂ ನನಗೆನ್ನಿಸುತ್ತದೆ . ಬೇವಿನ ಸಪ್ಪು ಹಾಕಿದ ಹಿತ್ತಾಳೆ ಅಂಡೆಯ  ನೀರಲ್ಲಿ , ಒಳ್ಳೆಯ ಸ್ನಾನ ಮುಗಿಸಿ ಆಮೇಲೆ ಶುಭ್ರ  ಬಟ್ಟೆಯ ಧರಿಸಿ ಮತ್ತೊಮ್ಮೆ ಎಲ್ಲರ ಮನೆಗಳಿಗೆ ಬೇಟಿ ನೀಡಿ ಮನೆಯಲ್ಲಿ ಹಿರಿಯರು ತಯಾರಿಸಿದ ಬೇವು-ಬೆಲ್ಲ ತಿಂದು ಬೆಳಿಗ್ಗೆ ಆಡಿದ ಆಟದ ಅವಲೋಕನ ಮಾಡುತಿದ್ದಂತೆಯೇ ಹೊಟ್ಟೆ ಚುರ್ ಎನ್ನುತ್ತಿತ್ತು.

             ಸ್ನೇಹಿತರೆ ಈ ಹಬ್ಬದ ಸಮಯದಲ್ಲಿ ಹಳ್ಳಿಗಲ್ಲಿ ಹೇರಳವಾಗಿ ಸಿಗುವ ತರಕಾರಿ ಎಂದರೆ ನುಗ್ಗೆಕಾಯಿ.ಆದ್ದರಿಂದ ನುಗ್ಗೆ ಕಾಯಿ ಸಾಂಬಾರು , ಬೇಸಗೆಯ ದಿನಗಳಲ್ಲಿ ದೇಹದ ಉಷ್ಣತೆಯನ್ನು  ಕಾಪಾಡಲು   ರಾಗಿಯಿಂದಲೇ  ಬೇರೆ ರೀತಿಯ ಪದ್ದತಿಯಲ್ಲಿ  ಹಿಟ್ಟಿನ್ನು  ತೆಗೆದು ಮಾಡುತಿದ್ದ ಒತ್ತಿದ ಶಾವಿಗೆ ನಮ್ಮ ಯುಗಾದಿ ಹಬ್ಬದ ವಿಶೇಷ ಅಡುಗೆಗಳು.  ಈ ಶಾವಿಗೆ ಮಾಡೋ ವಿಧಾನವಂತೂ ಅದ್ಬುತವಾಗಿರುತಿತ್ತು.  ಮನೆಯ ಹೆಣ್ಣುಮಕ್ಕಳು ಹಬ್ಬಕ್ಕೂ ಹದಿನೈದು ದಿನ ಮುಂಚಿತವಾಗಿಯೇ ರಾಗಿಯನ್ನು ನೀರಲ್ಲಿ ನೆನೆಸಿಟ್ಟು , ಮೊಳಕೆ  ಕಟ್ಟಿ , ಮೊಳಕೆ ಬಂದ ರಾಗಿಯನ್ನು ಹದವಾಗಿ ಬಿಸಿಲಲ್ಲಿ ಒಣಗಿಸಿ, ಆಮೇಲೆ ಗಿರಣಿಯಲ್ಲಿ ನಯವಾಗಿ ಹೊಡೆಸಿ, ಹಿಟ್ಟು ಮತ್ತೆ ರಾಗಿ ತೌಡನ್ನು  ಬೇರ್ಪಡಿಸಿ,  ಮತ್ತೆ ಆ ಹಿಟ್ಟನ್ನು  ಬಿಸಿಲಿನಲ್ಲಿ ಎಷ್ಟು ಬೇಕೋ ಅಷ್ಟು  ಒಣಗಿಸಿ ಹಬ್ಬಕೆಂದೇ ಸಿದ್ದಪಡಿಸುತ್ತಾ ಇದ್ದರು ವೊಡ್ಡರಾಗಿ ಹಿಟ್ಟನ್ನು . ಮೊಳಕೆ ತಗೆದು ಮಾಡಿದ ಈ ಹಿಟ್ಟು ದೇಹಕ್ಕೆ ತಂಪು ಎಂದು  ಬೇಸಗೆಯಲ್ಲಿ ಇದರಿಂದ ಬೇರೆ ಬೇರೆ  ತಿನಿಸುಗಳನ್ನು ನಮ್ಮ  ಕಡೆ  ಮಾಡುತ್ತಾರೆ. ಇದೇ ಹಿಟ್ಟಿನಿಂದ ಮುದ್ದೆ ಮಾಡಿ ಅವುಗಳಿಂದ ಶಾವಿಗೆ ತಯಾರಿಸುತ್ತಿದ್ದರು.ಈ ಶಾವಿಗೆ ಮಾಡಲು ನಮ್ಮ ಹಳಿಗಳಲ್ಲಿ ಒಂದು ರೀತಿಯ ಮರದ ಯಂತ್ರ ಇರುತ್ತಿತ್ತು ಅದನ್ನು ನಾವು  ಶಾವಿಗೆ ಕೊಂತಿ ಎಂದು ಕರೆಯುತ್ತಿದ್ದವು. ಅದರ ಒಂದು ಬಾಗದಲ್ಲಿ ಒಂದು ಮುದ್ದೆ  ಇಟ್ಟು ಶಕ್ತಿ ಬಿಟ್ಟು ಒತ್ತಿದರೆ ಶಾವಿಗೆ  ಸಿದ್ದವಾಗುತ್ತಿದ್ದವು. ನಿಜವಾಗಿಯೂ ನಾವು ಚಿಕ್ಕವರಿದ್ದಾಗ ಅದೊಂದು ಅದ್ಬುತವಾದ  ಯಂತ್ರವಾಗಿಯೇ ನಮಗೆ ಅದು  ಕಾಣುತ್ತಿತ್ತು. ಅದನ್ನು ಮೇಲಿನಿಂದ  ಒತ್ತುವುದು ಆಮೇಲೆ ಕೆಳಗೆ ಶಾವಿಗೆ ಬರುವುದು ನಮಗೆ ಆ ಸಮಯದಲ್ಲಿ ಏನೋ ಒಂದು ವಿಚಿತ್ರದಂತೆ ಕಾಣುತ್ತಿತ್ತು . ಅದರಲ್ಲಿ ಭಾಗಿಯಾಗಿ ಶಾವಿಗೆ ಒತ್ತುವುದು  ನಮಗೆ  ತುಂಬಾ ಆನಂದವನ್ನೂ ತರುತ್ತಿತ್ತು. ಸಾಕಷ್ಟು  ಆಟ ಆಡಿ, ಬಿಸಿಲಲ್ಲಿ ದಣಿದು ಸಾಕಾಗಿರುತ್ತಿದ್ದ  ನಮಗೆ ಹೊಲದ ಪೂಜೆ, ಹಸು ಎತ್ತುಗಳ ಪೂಜೆಯ ನಂತರ ಊಟ ಮಾಡಲು ಕೂತರೆ ಸಾಕು , ಆ ಚಿಕ್ಕ ಹೊಟ್ಟೆಗಳಿಗೆ ಅದೆಷ್ಟು ತುಂಬಿಸುತ್ತಿದ್ದೆವೋ ಗೊತ್ತಿಲ್ಲ. ನುಗ್ಗೆಕಾಯಿ ಬೇಳೆ ಸಾರು , ಅನ್ನ , ವೊಡ್ಡರಾಗಿ  ಹಿಟ್ಟಿನ ಶಾವಿಗೆ, ಶಾವಿಗೆಗೆ ಏಲಕ್ಕಿ- ಶುಂಠಿ ಮಿಶ್ರಿತ ಬೆಲ್ಲದ ಪಾಕ ಮತ್ತು  ಕಾಯಿರಸ, ಅಬ್ಬಾ ಚಪ್ಪರಿಸಿಕೊಂಡು ಸ್ಪರ್ದೆಗೆ ಕೂತವರಂತೆ ತಿನ್ನುತ್ತಿದ್ದೆವು. ಹೀಗೆ ಊಟ ಮುಗಿಸಿ ಎಲ್ಲರೂ ಅಲ್ಲಿ ಇಲ್ಲಿ ಅಡ್ಡಾಡಿಕೊಂಡು, ಹೊಲಗಳಿಗೋ , ನಮ್ಮೂರ ಕೆರೆ ಏರಿ ಮೇಲೋ ಸುತ್ತುತ್ತಾ ಇದ್ದೆವು. ಅಲ್ಲಿ ಇಲ್ಲಿ ಕೋಗಿಲೆಗಳ ಹಾಡು, ಸುತ್ತಲು ಹಸುರು ಹೊತ್ತ ಮರಗಿಡಗಳ ಆ ವಾತಾವರಣ   ನಿಜವಾಗಿಯೂ  ಹಬ್ಬದ ದಿನ  ನಮಗೊಂದು ಸ್ವರ್ಗದಂತೆ  ಕಾಣುತ್ತ ಇತ್ತು. 

                 ಮೊದಲ ದಿನ ಎಣ್ಣೆ ನೀರು, ಚೆಂಡಾಟ , ಶಾವಿಗೆ ಊಟ ಆದ ಮೇಲೆ ಮಾರನೆ ದಿನ ಮತ್ತೆ ಅದೇ ಲಗ್ಗೋರಿ ಆಟ. ಆದರೆ ಎಣ್ಣೆ ಹಚ್ಚಿರುತ್ತಿರಲಿಲ್ಲ ಅಷ್ಟೇ. ಆ ದಿನ ಅಂತಹ ವಿಶೇಷ ಪೂಜೆಗಳಿಲ್ಲದಿದ್ದರು ಹೋಳಿಗೆ ಊಟವೇ ನಮಗೆ ಅತ್ಯಂತ ವಿಶೇಷವಾಗಿರುತಿತ್ತು . ಮನೆಯ ತೊಗರಿ ಬೇಳೆ, ತಂದ ಬೆಲ್ಲ, ಸಿಹಿ ನೀರಲ್ಲಿ ಬೇಯಿಸಿ ದುಂಡಿ ಕಲ್ಲಿನಲ್ಲಿ ರುಬ್ಬಿ,ಉರುಣ ಸಿದ್ದಪಡಿಸಿ ಕಟ್ಟಿಗೆ ಓಲೆಯ ಮೇಲೆ ಮಾಡುತಿದ್ದ ಹೋಳಿಗೆಗಳು, ಅವುಗಳ ಸುವಾಸನೆ ಮದ್ಯಾಹ್ನದ  ಹೊತ್ತಿಗೆ ನಮ್ಮನ್ನು ಎಲ್ಲಿದ್ದರೂ ಮನೆಗೆ ಸೆಳೆಯುತ್ತಿತ್ತು. ಆಗಲೇ ನಾವು ನಮ್ಮ ಅಮ್ಮ ಮಾಡುತಿದ್ದ ಸಕತ್ ಅಗಲವಾದ 4-5 ಹೋಳಿಗೆ ತಿನ್ನುತ್ತಿದ್ದೆವು. ಹಬ್ಬದ ಹೋಳಿಗೆ ಊಟ ಮುಗಿಸಿದ ಮೇಲೆ ಸಂಜೆ ಎಲ್ಲರೂ ನಮ್ಮ ಮನೆಯ ಬೀದಿಯಲ್ಲಿ ಸೇರಿ "ಸೂರ್ಯ ಅದೆಷ್ಟೊತ್ತಿಗೆ  ಮುಳುಗುತ್ತಾನೋ ನಾವು ಎಷ್ಟೊತ್ತಿಗೆ ಚಂದ್ರನನ್ನು ನೋಡುತ್ತೇವೋ" ಎಂದು ಆಕಾಶವನ್ನೇ ದಿಟ್ಟಿಸುತ್ತಾ," ಕಾಣುಸ್ತೇನೋ ಚಂದ್ರ ನಿಂಗೆ " ಅಂತ ಒಬ್ಬರಿಗೊಬ್ಬರು ಕೇಳುತ್ತಾ ಇದ್ವಿ. ಅಮಾವಾಸ್ಯ ಆಗಿ  ಎರೆಡು ದಿನವಾಗಿರುತಿತ್ತು . ತೇಳು ಚಂದ್ರನನ್ನು ಆಕಾಶದಲ್ಲಿ ಹುಡುಕುವುದೇ ಒಂದು ಚಾಲೆಂಜ್  ಆಗಿರುತ್ತಿತ್ತು. ಅದು ಕಂಡ ಕ್ಷಣ ಅದರ ವರ್ಣನೆಯಂತೂ  ಒಬ್ಬಬ್ಬರ ಬಾಯಲ್ಲಿ ಒಂದೊಂದು ರೀತಿಯಲ್ಲಿ  ಅದ್ಬುತವಾಗಿರುತಿತ್ತು , ಮೊದಲು ನೋಡಿದವರಂತು  ನಿಜವಾಗಿಯೂ ನಾವೇನೋ ಕಂಡು ಹಿಡಿದಷ್ಟೇ ಖುಷಿ  ಪಡುತ್ತಿದ್ದರು. ಚಂದ್ರ ದರ್ಶನವಾದ ಮೇಲೆ ಗುರು ಹಿರಿಯರುಗಳ , ತಂದೆ ತಾಯಿಗಳ ಕಾಲಿಗೆ ಬಿದ್ದು ಅವರ ಆಶೀರ್ವಾದ ಪಡೆದು. ಚಂದ್ರಮಾನ ಯುಗಾದಿಗೆ ವಿಧಾಯ ಹೇಳುವುದಂತೂ ನಮಗೆ ತುಂಬಾ ದುಃಖದ ವಿಷಯವೇ ಆಗಿರುತಿತ್ತು. ನಮ್ಮೂರಲ್ಲಿ ಆಗ ದೋಸೆ ಮಾಡುತ್ತಾ ಇದ್ದದ್ದು ವರ್ಷಕ್ಕೆ ಒಂದೆರೆಡು ಸಲ ಮಾತ್ರ. ಯುಗಾದಿ ಹಬ್ಬದ ನಂತರದ ಮಾತ್ರ ಕಾಯಂ ಆಗಿ  ವೊಡ್ಡ ರಾಗಿ ಹಿಟ್ಟಿನ ದೋಸೆ ಎಲ್ಲರ ಮನೆಯಲ್ಲೂ ನಮಗೆ ಸಿಗುತ್ತಾ ಇದ್ದವು. ಅದೇ ರೀತಿ ಹಬ್ಬ ಮುಗಿಯುವ ದಿನ ನಾಳೆ ನಮಗೆ ಸಿಗುತ್ತಿದ್ದ ಕಾಯಿ ಚಟ್ನಿ-ದೋಸೆ ಮತ್ತು ಬೆಳಿಗ್ಗೆ ಆಡುತ್ತಿದ್ದ ಹೋಳಿ ನಮ್ಮ " ಹಬ್ಬ ಮುಗಿಯಿತಲ್ಲಪ್ಪ " ಎಂಬ  ದುಃಖವನ್ನು ಮರೆಸುತಿತ್ತು . ನಿಜವಾಗಿಯೂ ಸ್ನೇಹಿತರೆ ಹಳ್ಳಿಗಳಲ್ಲಿ ಮಾಡುವ ಯುಗಾದಿಗೂ, ಪೇಟೆಗಳಲ್ಲಿ ಮಾಡುವ ಯುಗಾದಿಗೂ ತುಂಬಾ ವ್ಯತ್ಯಾಸಗಳಿವೆ. ಆದರೂ ನಾ ಸಾಕಷ್ಟು ಬಾರಿ ಹಳ್ಳಿಯಲ್ಲಿ ಆಚರಿಸಿದ  ಆ ಸಡಗರದ ಯುಗಾದಿಯನ್ನು ಹೇಗೆ ಮರೆಯಲು ಸಾದ್ಯ. ಒಂದೊಂದು ಪ್ರಾಂತ್ಯದಲ್ಲಿ  ಒಂದು ಒಂದು ರೀತಿಯಾಗಿ, ವಿಶಿಷ್ಟವಾಗಿ ಆಚರಿಸುವ ಈ ಹಬ್ಬ ಎಲ್ಲರಿಗೂ  ಸಿಹಿ ಕಹಿಗಳನ್ನು ಸಮನಾಗಿ ಸ್ವೀಕರಿಸುವ ಶಕ್ತಿ ನೀಡಲಿ, ನಾಡಿನ ಜನತೆಗೆ ಒಳ್ಳೆಯದನ್ನು ಮಾಡಲಿ ಎಂದು ಆಶಿಸುತ್ತ ನೆನಪುಗಳ ಈ ಗಂಟನ್ನು ಮತ್ತೆ ಕಟ್ಟಿ ನನ್ನ ಮನದಾಳದಲ್ಲಿ  ಬಚ್ಚಿಡುತ್ತೇನೆ.

                                 


ನಿಮಗಾಗಿ 
ನಿರಂಜನ್ 

7 ಕಾಮೆಂಟ್‌ಗಳು:

  1. ಸೂಪರ್ ಮಗಾ. ನಿನ್ನ ಬರವಣಿಗೆಯೂ ಹೀಗೆ ಸಾಗುತ್ತಿರುಲಿ. ಕೀಪ್ ಇಟ್ ಅಪ್ :-)

    ಪ್ರತ್ಯುತ್ತರಅಳಿಸಿ