ಶನಿವಾರ, ಜುಲೈ 27, 2013

ನಂಬಿಕೆ


                                                                             ನಂಬಿಕೆ

ತ್ತೀಚಿನ ದಿನಗಳಲ್ಲಿ  ನಾನು ಈ ಚೆನ್ನೈ ಮತ್ತೆ ಬೆಂಗಳೂರುಗಳ ನಡುವೆ ಬಹುವಾಗಿ ಪ್ರಯಾಣ ಮಾಡುತ್ತಿದ್ದೇನೆ ಕೆಲಸದ ನಿಮಿತ್ತ. ಇಂಥಹ ಹಲವು ಪ್ರಯಾಣಗಳನ್ನು ನಾನು ಬಸ್ಸು, ಟ್ರೈನ್ ಹಾಗು ಕಾರುಗಳಲ್ಲಿ ಮಾಡಿದ್ದೆನಾದರು , ರೈಲು ಪ್ರಯಾಣದ ಅನುಭವವೇ ಒಂದು ರೀತಿಯಲ್ಲಿ ಹಿತವಾಗಿರುತ್ತೆ ಅನ್ನುವುದು ನನ್ನ ಭಾವನೆ. ನಾನೇಕೆ ಹೀಗೆ ಹೇಳುತ್ತಿದ್ದೇನೆ ಎಂದರೆ, ಒಂದೊಂದು ಸಾರಿ ನಾವು ರೈಲು ಏರಿದರೂ ಒಂದೊಂದು ರೀತಿಯ ಅನುಭವಗಳು ನಮಗಾಗುತ್ತವೆ.ಹಲವು ರೀತಿಯ ವ್ಯಾಪಾರ-ವಹಿವಾಟುಗಳನ್ನು, ಅನೇಕ ಬಗೆಯ ಮಾತು-ಮೋಜುಗಳನ್ನು, ದೊಡ್ಡವರನ್ನು ,ಸಣ್ಣವರನ್ನು, ಬೇರೆ ಬೇರೆ ಜಾತಿ-ದರ್ಮಗಳನ್ನು ಬೇದ ಭಾವವಿಲ್ಲದೆ ಒಂದೆಡೆ ಸೇರಿಸುವುದು ನಮ್ಮ ಈ ರೈಲುಗಳು ಎಂದರೆ ತಪ್ಪಾಗಲಾರದು. ನಿಜ ಹೇಳಬೇಕೆಂದರೆ ವಿವಿದ ರೀತಿಯ ಜಾತಿಗಳು, ಧರ್ಮಗಳು, ಎಲ್ಲ ದ್ವೇಷ ಅಸೂಯೆಗಳನ್ನು ಮರೆತು ಅಕ್ಷರಶ ಜೊತೆಯಾಗಿ ಕಲೆಯುವುದು, ಕೂರುವರು, ತಿನ್ನುವರು, ಹರಟುವುದು, ಮಲಗುವುದು, ಮೇಲೂ-ಕೀಳೆನ್ನದೆ ಮುಂದೆ ಸಾಗುವುದು  ಈ ರೈಲು ಡಬ್ಬಿಗಳಲ್ಲಿ ಮಾತ್ರ. ಜೊತೆಗೆ  ಆಗ್ಗಿಂದಾಗೆ  ರುಚಿ ಇರುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ವಾಸನೆಯನ್ನು ಮಾತ್ರ ಅದ್ಬುತವಾಗಿ  ಬೀರುವ ಆ ರೈಲು ತಿಂಡಿಗಳು ಕೂಡ ನಮ್ಮನ್ನು ರೈಲು ಪ್ರಯಾಣಕ್ಕೆ ಪ್ರೇರೇಪಿಸುತ್ತವೆ. ಹಾಗಾಗಿ ನನಗೆ ಇತ್ತೀಚಿನ ದಿನಗಳಲ್ಲಿ ಈ ರೈಲು ಪ್ರಯಾಣ ಸಕತ್ ಇಶತವಾಗುತ್ತೆ. 

            ಹೀಗೆ ನಾನು ಮಾಡಿರುವ ಅನೇಕ ರೈಲು ಪ್ರಯಾಣಗಳಲ್ಲಿ ನನಗೂ ಕೂಡ ಬಗೆಬಗೆಯ ಅನುಭವಗಳಾಗಿವೆ, ಇಂಥಹ ಅನೇಕದರಲ್ಲಿ, ಒಂದು ದಿನ ನನಗಾದ ಒಂದು ಸಣ್ಣ ಅನುಭವವನ್ನು ಮಾತ್ರ ನಿಮ್ಮ ಮುಂದೆ ಬಿಚ್ಚಿಡುವ ಸಲುವಾಗಿ ಈ ಲೇಖನ ಬರೆಯುವ ಮನಸ್ಸನ್ನು ನಾನು ಮಾಡಿದೆ. ಈ ಕಾಲದಲ್ಲಿ ನಾವೆಷ್ಟೇ ಓದಿದ್ದರು ಅದು ಕೇವಲ ಓದು, ಹೊಟ್ಟೆವರಿಯಲು ನಾವು ಮಾಡಿಕೊಂಡ ದಾರಿ ಮಾತ್ರ,  ನಮಗರಿಯದ ವಿಷಯಗಳು ಬಹಾಳೋಷ್ಟಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕಾದ ವಿಚಾರ. ಹಾಗೆಯೇ ನಮಗರಿಯದ ಅದೆಷ್ಟೋ ವಿಷಯಗಳನ್ನು ನಾವು ನಮ್ಮ ಅನುಭವಗಳಿಂದಾನೋ ಅಥವಾ ನೋಡಿಯೋ ಕಲಿಯಬಹುದು. ನನಗನಿಸಿದ ಮಟ್ಟಿಗೆ ಅಂಥಹ ಅನೇಕ ಅನುಭವಗಳು ನಮ್ಮ ಜೀವನದ ದಿಕ್ಕುಗಳನ್ನೇ ಒಮ್ಮೊಮ್ಮೆ  ಬದಲಾಯಿಸಬಹುದು,  ಜೀವನವನ್ನು ನೋಡುವ, ರೂಪಿಸಿಕೊಳ್ಳುವ  ರೀತಿಯನ್ನೂ ಕೂಡ ಬದಲಾಯಿಸಬಹುದು.


             ಅದೊಂದು ದಿನ ಮಧ್ಯಾನ , ಬರೀ ಮಧ್ಯಾಹ್ನ ಅಲ್ಲ , ಮಟಮಟ ಮದ್ಯಾಹ್ನ , ಆಫಿಸ್ ಬಿಟ್ಟು , ಸುಮಾರು ೩.೨೦ಕ್ಕೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ಸೇರಿದೆ. ಬೇಸಿಗೆ ಚೆನ್ನೈಯಲ್ಲಿ ಹೊತ್ತಿ ಉರಿಯುತ್ತಿತ್ತು , ಬಿಸಿಲ ಜಳ ಬಿಡದೆ ದಾರಿಯುದ್ದಕ್ಕೂ ನನ್ನನ್ನು ಕಾಡಿದ್ದರೆ , ನಿಲ್ದಾಣದಲ್ಲಿ ನನ್ನನು ಬಿಸಿಲ ಧಗೆ ಕಾಡಲಾರಂಬಿಸಿತ್ತು. ಅಪ್ಪ.... ಅಂತು-ಇಂತು ನಿಲ್ದಾಣ ಸೇರಿದೆ, ಇನ್ನೈದು ದಿನ ಈ ಚೆನ್ನೈ ಸಹವಾಸ ಸಾಕೆಂದು ನಿಟ್ಟುಸಿರು ಬಿಟ್ಟು, ಒಂದು ಬಾಟಲ್ ನೀರು ತಗೊಂಡು, ನಿಂತಿದ್ದ ಲಾಲ್ ಬಾಗ್ express ರೈಲನ್ನೆರಿದೆ. ಇನ್ನು ರೈಲು ಹೊರಡಲು ೧೫ ನಿಮಿಷ ಬೇಕಿತ್ತು. ಅಬ್ಭಾ ಅದೆಷ್ಟು ಸೆಕೆ ರೈಲಿನಲ್ಲಿ ಎಂದರೆ ದೇಹದ ಎಲ್ಲ ಭಾಗಗಳಲ್ಲೂ ನೀರಿನ ಬುಗ್ಗೆಗಳು ಆಷ್ಟೊತ್ತಿಗೆ ಚಿಮ್ಮತೊಡಗಿದ್ದವು. ಇರುವೆಲ್ಲ ರಂದ್ರಗಳಲ್ಲೂ ಬೆವರೋ ಬೆವರೋ. ಆ ಬೆವರಧಾರೆಯಲ್ಲಿಯೇ ರೈಲಿನಲ್ಲಿ ನಾನು ಮುಂಚಿತವಾಗಿ ಕಾಯಿದಿರಿಸಿದ ಜಾಗ ಗುರುತಿಸಿ ನನ್ನ ಬ್ಯಾಗ್ ಇಟ್ಟೆ ಕೂತೆ. ರೈಲು ಒಳ್ಳೆ ಓವೆನ್ ತರಾ ಆಗಿತ್ತು ಆ ಬಿಸಿಲಿನ ಹೊಡೆತಕ್ಕೆ. ಹಾಗಾಗಿ ಹೊರಡುವುದಕ್ಕೆ ಇನ್ನು ಸಮಯವಿದ್ದುದ್ದರಿಂದ ಕೆಳಗಿಳಿದು ಬೆವರೋರಸಿಕೊಳ್ಳಲು ಕರ್ಚಿಫ್ ತಗೆದರೆ ಅದು ತೆಗೆಯುವ ಮೊದಲೇ ಜೇಬಿನಲ್ಲಿ ನೆನೆದು ಹೋಗಿತ್ತು ! . 

             ಬೆಂಗಳೂರಿನಲ್ಲಿ ದುಡಿಯುವ ಜನರು ಕೂಡ ಬೆವರು ಸುರಿಸುವುದಿಲ್ಲ , ಆದರೆ  ಚೆನ್ನೈಯಲ್ಲಿ ಎಲ್ಲರು ಬೆವರು ಸುರಿಸೇ ಸುರಿಸುತ್ತಾರೆ , ಅದೆಷ್ಟು ದುಡಿಯುತ್ತರೋ ಇಲ್ಲವೋ ಗೊತ್ತಿಲ್ಲ. ರೈಲಿನಲ್ಲಿ ಬರುವ ಬಿಕ್ಷುಕರಿಗೆ ಬೆಂಗಳೂರಿನಲ್ಲಿ ಹೇಳುವ ಹಾಗೆ " ಬೆವರು ಸುರಿಸಿ ದುಡಿಯೋದು ಬಿಟ್ಟು , ಬಿಕ್ಷೆ ಕೇಳ್ತೀರಲ್ಲ, ನಿಮಗೆ ನಾಚಿಕೆ ಆಗೋಲ್ಲವಾ " ಅಂತ ಅಪ್ಪಿತಪ್ಪಿಯೂ ಹೇಳಿದರೆ,  ಅವರು ನಮ್ಮ ಮುಖಕ್ಕೇ ತುಪುಕ್ ಅಂತ ಉಗುದು "ಅಯ್ಯ ತಂಬಿ, ನೋಡು ನಾವು ಕೂಡ ಹೇಗೆ ಬೆವರು ಸುರಿಸುತ್ತೇವೆ " ಎಂದು ತಮ್ಮ ಬೆವರಿನ ಸೌಗಂಧವನ್ನು ನಮ್ಮ ಮೂಗಿಗೆ ಸೂಸಿ, ಮುಖಕ್ಕೆ ಬೆವರ ಪ್ರೋಕ್ಷಣೆ  ಕೂಡ ಮಾಡಿ ಬಿಡುವರು. ಸೂರ್ಯ ಚಂದ್ರರನ್ನೂ ನೋಡಿರದ ಜೀವಿಯು ಈ ಭಾಮಿಯ ಮೇಲೆ ಇದ್ದರೂ  ಇರಬಹುದು ಆದರೆ ಚೆನ್ನೈಲ್ಲಿ ಬೆವರದ ಪುಣ್ಯಾತ್ಮನಿಲ್ಲ.  ಚೆನ್ನೈ ಅಲ್ಲಿ ನಮ್ಮಂಥ ಇಂಜಿನಿಯರ್ಸ್ ಕೂಡ ಬೆವರು ಸುರಿಸೆ ದುಡಿಯಬೇಕು !....  ಅಷ್ಟೊತ್ತಿಗೆ ಸ್ವಲ್ಪ ಸಮಯ ಕಳೆಯಿತು, ರೈಲು ಕೂಗಿದಾಕ್ಷಣ , ಹೋಗಿ ನನ್ನ ಜಾಗದಲ್ಲಿ ಕೂತುಕೊಂಡೆನು. ರೈಲು ನಿದಾನವಾಗಿ ಚಲಿಸತೊಡಗಿದಾಗ ನಿಜವಾಗಿಯೂ ನಿಟ್ಟುಸಿರು ಬಿಟ್ಟು ಬೀಸುವ ಬಿಸಿಗಾಳಿಗೆ ಮುಖವೊಡ್ಡಿ ಕೂರುವ ಅದೃಷ್ಟವನ್ನು ಶಪಿಸುತ್ತ ಬೆಂಗಳೂರಿನ ಕಡೆ ಪ್ರಯಾಣವನ್ನು ಆರಂಭಿಸಿದೆ.

           ಅಷ್ಟೊತ್ತಿಗೆ ಅನೇಕ , ಚಟುವಟಿಕೆಗಳು ರೈಲಿನಲ್ಲಿ ಆರಂಭಗೊಂಡಿದ್ದವು. ರೈಲು ಓಡಲು ಶುರುಮಾಡಿತೆಂದರೆ ರೈಲಿನಲ್ಲಿ ಬೇರೆಯೇ ಜಗತ್ತೇ ಸೃಷ್ಟಿಯಾಗುತ್ತೆ. ಒಮ್ಮೆಯೂ ಮುಖಗಳನ್ನು ನೋಡಿಕೊಂಡಿರದ ಅನೇಕರು ಸ್ನೇಹಿತರಾಗುತ್ತಾರೆ, ಮಾತುಗಳು ಶುರುವಾಗುತ್ತವೆ, ರಾಜಕೀಯ, ಪ್ರಪಂಚದ ಆಗುಹೋಗುಗಳೆಲ್ಲ ರೈಲ ಡಬ್ಬಿ ಸೇರುತ್ತವೆ. ಮಾರಾಟಗಾರರು ಅನೇಕ ಬಗೆಯ ವಸ್ತುಗಳನ್ನು ತಂದು ಮಾರುತ್ತಾರೆ. ಪೆನ್ನು, ಪುಸ್ತಕ, ಹಣ್ಣು-ಹಂಪಲುಗಳು, ಬಟ್ಟೆಬರೆ, ಅಲಂಕಾರಿಕೆ ವಸ್ತುಗಳು, ಆಟಿಕೆಗಳು, ತಿಂಡಿ-ತಿನಿಸುಗಳು,ದವಸ-ದಾನ್ಯಗಳು ಇನ್ನು ಅನೇಕ ಬಗೆಯ ವ್ಯಾಪಾರ ನಡೆಯುತ್ತೆ. ಇದೆಲ್ಲ ಅದೆಷ್ಟು ಜನರ ಹೊಟ್ಟೆಪಾಡಿಗೆ ಸಹಾಯವಾಗುತ್ತೋ ದೇವರಿಗೆ ಗೊತ್ತು. ಕೆಲವರು ಈ ಎಲ್ಲ ವಸ್ತುಗಳನ್ನೊತ್ತು ಮಾರಿ, ಕಷ್ಟ ಪಟ್ಟು ಸಂಪಾದಿಸಿದರೆ, ಇನ್ನು ಕೆಲವರು ಬೇರೆ ರೀತಿಯಾಗೆ ಸಂಪಾದಿಸುತ್ತಾರೆ. ಮಂಗಳಮುಖಿಗಳು ಗುಂಪಾಗಿ  ಬಂದರೆ ಸಾಕು ಜನ ಚಕಾರವೆತ್ತದೆ ತೆಪ್ಪಗೆ ದುಡ್ಡು ತೆಗೆದು ಕೊಡುತ್ತಾರೆ. ಮತ್ತೆ ಅನೇಕ ಸೋಗಲಾಡಿಗಳು ನನಗದಿಲ್ಲ-ಇದಿಲ್ಲ ಅನ್ನುತ್ತ, ದೇಹ ನ್ಯೂನತೆಗಳು ಇರದಿದ್ದರೂ ಇರುವ ಹಾಗೆ ತೋರಿಸಿ ಹೆಣ್ಣುಮಕ್ಕಳ, ಚಿಕ್ಕಮಕ್ಕಳ ಕನಿಕರಗಿಟ್ಟಿಸಿ ಖಾಸು ಸಂಪಾದಿಸುತ್ತಾರೆ. ಈ ರೀತಿಯ ಲೋಕವೇ ರೈಲಿನಲ್ಲಿ ಪ್ರತಿ ಸಾರಿಯೂ ಸೃಷ್ಟಿಯಾಗುತ್ತೆ. ಅದೇ ರೀತಿ ಆ ದಿನವೂ  ಪ್ರಯಾಣದ ಒಂರ್ದಗಂಟೆಯಲ್ಲಿಯೇ ಇದೆಲ್ಲವೂ  ನನ್ನ ಕಣ್ಮುಂದೆ ಬಂದಿತು. 

              ಮೇಲೆ ಹೇಳಿದ ರೀತಿಯಲ್ಲಿ ಈ ವ್ಯಾಪಾರ-ವಹಿವಾಟುಗಳು ರೈಲಿನಲ್ಲಿ ಬಹು ಸಹಜವಾಗಿ ನಡೆಯುತ್ತವೆ ಮತ್ತು ಈ ರೀತಿಯ ವ್ಯಾಪಾರ  ಅಲ್ಲಿ ತೀರ ಸಾಮಾನ್ಯದ ವಿಷಯವೂ ಕೂಡ. ಆದರೆ ಆ ದಿನ ಮಾತ್ರ  ನನಗೆ ಒಂದು ಆಶ್ಚರ್ಯ ಕಾದಿತ್ತು. ಸಾಮಾನ್ಯವಾಗಿ ನಾನು ರೈಲಿನಲ್ಲಿ ಏನನ್ನು ಖರೀದಿಸುವುದಿಲ್ಲ ಆದರೆ ನನಗೆ ಅವತ್ತು ಒಂದು ವಸ್ತುವಿನ ಅಗತ್ಯತೆ ತೀರ ಕಾಡತೊಡಗಿತ್ತು. ಅದೇನಪ್ಪ ಅಂದರೆ ಇಳಿಯುವ ಬೆವರೋರೆಸಲು ಅಗತ್ಯವಾಗಿ ಬೇಕಿದ್ದ ಕರ್ಚಿಫ್. ನನ್ನ ಬಳಿ ಇದ್ದದ್ದು ತೊಯ್ದು , ಗಮ್ಮೆನ್ನುತ್ತಿತ್ತು. ಹಾಗಾಗಿ ದೂರದಲ್ಲಿ " ಕರ್ಚೀಫ್ ಕರ್ಚೀಫ್ , ಕರ್ಚೀಫ್ " ಎಂದು ಕೂಗುತ್ತ ಬರುತ್ತಿದ್ದವನನ್ನು ನೋಡಿದೆ. ಹತ್ತಿರ ಬಂದಾಗಲೇ ನನಗೆ ಗೊತ್ತಾಗಿದ್ದು ಆ ಮನುಷ್ಯ ಕಣ್ಣಿಲ್ಲದ ಕುರುಡನೆಂದು. ನೋಡಿದ ತಕ್ಷಣವೇ ಕನಿಕರ ಬಂತಾದರೂ , ಕಷ್ಟಪಟ್ಟು ದುಡಿಯುವ ಆತನ ಮನೋಭಾವ ನನಗೆ ತುಂಬಾ ಮೆಚ್ಚಿಗೆಯಾಯಿತು. ಆತ ತನ್ನ ಒಂದು ಕೈಯಲ್ಲಿ ಒಂದು ಮಾಧರಿಯ , ಮತ್ತೊಂದು ಕೈಯಲ್ಲಿ ಮತ್ತೊಂದು ಮಾಧರಿಯ ಕರ್ಚಿಫ್ ಇಟ್ಟುಕೊಂಡಿದ್ದ. ಜೊತೆಗೆ ಹೆಗಲಿಗೊಂದು ಚೀಲ, ಚೀಲದಲ್ಲಿ ಮತ್ತೊಷ್ಟು ಬಗೆಯ ಕರ್ಚೀಫುಗಳು ಇದ್ದವು. ಸುಮಾರು ೪೦ ವರ್ಷದ ಪ್ರಾಯವಿರಬಹುದು, ಮುಖದಲ್ಲಿ ನಿರಾಸೆಯ ಒಂದಂಶವೂ ಇರಲಿಲ್ಲ. ನೋಡಿದಾಕ್ಷಣವೇ ತಿಳಿಯುತ್ತಿತ್ತು ಆತ ಹುಟ್ಟು ಕುರುಡನೆಂದು. ನಾ "ಇಲ್ಲಿ ತಿರುಗಿ" ಅಂದಾಕ್ಷಣ " ಆತ ನನ್ನ ಕಡೆ ತಿರುಗಿ ಕರ್ಚೀಫ್ ಬೇಕಾ ಸಾರ್ " ಎಂದಾಗಲೇ ನನಗೆ ತಿಳಿಯಿತು ಆತ ಬಹು ಚುರುಕಾದ ಮನುಷ್ಯನೆಂದು. ತನ್ನ ಎಡಗೈಯನ್ನು ಮುಂದೆ ಚಾಚಿ " ಇದು ತಗೊಳ್ಳಿ ಸಾರ್, ಒಳ್ಳೆ quality ಬಟ್ಟೆ , ಒಳ್ಳೆ ಬಣ್ಣ , ಚೆನ್ನಾಗಿ ಬಾಳಿಕೆ ಬರುತ್ತೆ ಸಾರ್ " ಎಂದಾಗ ನನಗೇನೋ ಒಂದು ಬಗೆಯ ವಿಚಿತ್ರ ಅನುಭವ, ಈತನಿಗೆ ಕಣ್ಣಿಲ್ಲ ಆದರೂ  ವ್ಯಾಪಾರ ಮಾಡುತ್ತಿದ್ದಾನೆ ಎಂದು. ಅವನ ಆ ಮಾರ್ಕೆಟಿಂಗ್ style ನನಗೆ ತುಂಬಾ ಹಿಡಿಸಿತು. ಆತನ attitude ನಾ ಕುರುಡ ಎಂದು ಕರುಣೆಗಿಟ್ಟಿಸಿ ವ್ಯಾಪಾರ ಮಾಡುವ ರೀತಿಯಲ್ಲಿ ಇರಲಿಲ್ಲ. ಅದೊಂದು ಬಗೆಯ ಬೇರೇನೇ ತರಹ ಇತ್ತು. 

              ಆತನು ಹೇಳಿದ ಹಾಗೆ ನಾನು ಆತನ ಎಡಗೈಯ ಮೇಲಿಂದ ಒಂದು ಕರ್ಚೀಫ್ ತಗೆದುಕೊಂಡು ಒಂದದಿನೈದು  ಸೆಕೆಂಡ್ ನೋಡುತ್ತಿದ್ದೆ , ಅಷ್ಟರಲ್ಲಿ ಆತ " ಯಾಕೆ ಸಾರ್ ಇಷ್ಟ ಆಗಲಿಲ್ಲವಾ , ಹಾಗಾದರೆ ನನ್  ಬ್ಯಾಗ್ ಅಲ್ಲಿ ಇರೋದನ್ನ ತಗೊಳ್ಳಿ ಸಾರ್, ತುಂಬಾ ಚೆನ್ನಾಗಿವೆ , ಸ್ವಲ್ಪ costly ಆಗುತ್ತೆ " ನಸು ನಗುತ್ತಲೇ  ಹೇಳಿದ. ನಾ ೫-೬ ಸೆಕೆಂಡ್ ಕಾಲ ಏನನ್ನು ನಿರ್ಧರಿಸದೆ ಇದ್ದಾಗ ಆತ ಚುರುಕಾಗಿ ನನ್ನ ಮನಸ್ಸನ್ನು ಅರಿತು ಬೇರೆ ಮಾದರಿ ಕರ್ಚೀಫ್ ನೋಡಿ ಅಂತ ಹೇಳಿದ.  ಇದು ಆತನ ವ್ಯಾಪಾರ ಚತುರತೆಯನ್ನು ತೋರಿಸಿತಿತ್ತು. ನಾನು ಆತನ ಚೀಲದೊಳಗೆ ಕೈಹಾಕಲು ಸ್ವಲ್ಪ ಹಿಂದೆ ಮುಂದೆ ಮಾಡಿದಾಗ , " ಪರವಾಗಿಲ್ಲ ತಗೋಳಿ ಸಾರ್, ನೀವೇ ತಗೋಳಿ " ಎಂದನು. "ಇದೇನಪ್ಪ ಯಾವ ನಂಬಿಕೆ ಮೇಲೆ ಈ ಮನುಷ್ಯ ಈ ರೀತಿ ಹೇಳುತ್ತಾನೆ " ಅಂತ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಎದ್ದಿತು.  ನಾ ಚೀಲದಲಿದ್ದ ಒಂದನ್ನು ತಗೆದು ನೋಡಿದೆ  ಅದು ಇಷ್ಟವಾಯಿತು. " ಇದು ನನಗಿರಲಿ " ಅಂತ ಹೇಳಿ , " ಈ ಕರ್ಚೀಫ್ ಗೆ ಎಷ್ಟು ? " ಎಂದು ಕೇಳಿದೆ. ಮೊದಲು ಇಡಿದಿದ್ದ ಆ ಕರ್ಚೀಫ್ ಅನ್ನು ಆತನ ಎಡಗೈ ಮೇಲೆ ಹಾಕಿದೆ ನಾ. " ಸಾರ್ ಅದು ೫೦ ರುಪಾಯಿ , ಸ್ವಲ್ಪ costly ದು ಸಾರ್, ಆದ್ರೆ ತುಂಬಾ ಒಳ್ಳೆಯದು" ಎಂದು ಹೇಳಿದಾಗ. ನನಗೆ ಚೌಕಾಷಿ ಮಾಡಲು ಮನಸ್ಸು ಒಪ್ಪಲಿಲ್ಲ. ಸರಿ "ನಾ ಇದನ್ನೇ ತಗೊಂತೀನಿ " ಎಂದು , ನನ್ನ ಪರ್ಸ್ ತೆಗೆದು ನೋಡಿದೆ. ೫೦ ರುಪಾಯಿ ನೋಟು ಇರಲಿಲ್ಲ ಬದಲು ೧೦೦ , ೫೦೦ ರೂಪಾಯಿಗಳು ಇದ್ದವು. " ಚೇಂಜ್ ಇದೆಯಾ ನಿಮ್ಮತ್ರ " ಎಂದಾಗ " ಇಲ್ಲ ಸಾರ್ , ನೀವೇ ಸ್ವಲ್ಪ  ನೋಡಿ ಸಾರ್ " ಎಂದು ಹೇಳಿದ ಆ ಮನುಷ್ಯ. ಅಷ್ಟರಲ್ಲಿ ಅಲ್ಲಿ ಇಲ್ಲಿ ತೆಗೆದು ಹತ್ತರ ಮೂರು , ಇಪ್ಪತ್ತರ ಒಂದು ನೋಟು ಸೇರಿಸಿ ಒಟ್ಟು ೫೦ ರುಪಾಯಿಗಳನ್ನೂ ನಾನು ಆತನಿಗೆ ಕೊಟ್ಟೆನು. ಆತ "thank ಯು ಸಾರ್, ಇವು ಯಾವ್ಯಾವ ನೋಟುಗಳು ಸಾರ್ " ಅಂದು ನನ್ನ ಕಡೆಗೆ ಕೈ ಚಾಚಿ ಕೇಳಿದ. ನಾನು ೩ ಹತ್ತು ರುಪಾಯಿಗಳನ್ನು ಮೊದಲು ಆತನ ಕೈಗೆ ಇಟ್ಟಾಗ  " ಸ್ವಲ್ಪ ತಡೀರಿ ಸಾರ್ ಎಂದು, ಅವುಗಳನ್ನು ಒಂದು ಜೇಬಿನಲ್ಲಿ ಇಟ್ಟುಕೊಂಡನು. ಮತ್ತೊಮ್ಮೆ ನಾ ಕೊಟ್ಟ ೨೦ ರುಪಾಯಿ ನೋಟನ್ನು ಮತ್ತೊಂದು ಜೇಬಿನಲ್ಲಿ ಇಟ್ಟುಕೊಂಡಾಗ ಆತ ನೋಟುಗಳನ್ನು ವಿಂಗಡಿಸಲು ಈ ರೀತಿಯಾಗಿ ಮಾಡಿದ ಎಂದೆನಿಸಿತು. 

             ನಾನು ತಕ್ಷಣವೇ "ಸರಿಯಾಗಿ ನೋಡಿಕೊಳ್ರಿ, ಸರಿಯಾಗಿ ಕೊಟ್ಟಿದೇನೋ ಇಲ್ಲವ ಅಂತ , ಮತ್ತೆ ನಾನು ಒಂದನ್ನೇ ತೆಗೆದುಕೊಂಡಿರೋದು " ಎಂದು ಆತನಿಗೆ ನಂಬಿಕೆ ಬರಲು ಹೇಳಿದೆ. ಅದಕ್ಕೆ ಆತ "ಸಾರ್ ನಾನು ನಿಮ್ಮನ್ನ ನಂಬುತ್ತೇನೆ ಸಾರ್ " ಎಂದು ಬಹು ನಮ್ರತೆಯಿಂದ ಹೇಳಿದ. " ಅಲ್ಲಪ್ಪಾ ಆದರರೂ ನನ್ನ ಸಮಾಧಾನಕ್ಕೆ ನಾ ಹೇಳಿದ " ಎಂದಾಗ , " ಆತ ನಂಬಿಕೆಯಿಂದಲೇ ಸಾರ್ ನನ್ನ ವ್ಯಾಪಾರ ಮತ್ತೆ ಜೀವನ ನಡಿತ ಇರೋದು, ನಾ ಎಲ್ಲರನ್ನು ನಂಬಲೇ ಬೇಕು ಸಾರ್ " ಎಂದ. ಹಾಗ ನಮ್ಮನ್ನೇ ನೋಡುತ್ತಾ ಇದ್ದ ವಯಸ್ಸಾದ ಅಜ್ಜಿಯೊಂದು " ಆತ ದೇವರನ್ನು ನಂಬಿ ವ್ಯಾಪಾರ ಮಾಡುತ್ತಾನೆ ,  ಹಾಗಾಗಿ ದೇವರು ಆತನನ್ನು ಚೆನ್ನಾಗಿಯೇ ಇಟ್ಟಿದ್ದಾನೆ " ಎಂದಿತು. ಆ ಕ್ಷಣಕ್ಕೆ ಆತ ನಸುನಗುತ್ತಲ್ಲೇ" ಇಲ್ಲ ಅಮ್ಮ , ಕಾಣದ , ನಮ್ಮ ಸುತ್ತ-ಮುತ್ತ ಇರದ ಆ ದೇವರನ್ನು ನಂಬಿದರೆ ನನ್ನ ಹೊಟ್ಟೆ ತುಂಬಲ್ಲ, ನನ್ನ ಸುತ್ತ ಮುತ್ತ ಇರೋ ಈ ಜನರನ್ನ ನಂಬಿದರೆ ಮಾತ್ರ ನನ್ನ ಹೊಟ್ಟೆ ತುಂಬುತ್ತದೆ " ಎಂದು ತನ್ನೆಲ್ಲ ಅನುಭವ , ಸಂಕಟ , ಬುದ್ದಿವಂತಿಕೆ , ಆಶಾಭಾವಗಳನ್ನು ಬೆರೆಯಿಸಿ ಆ ಮಾತನ್ನಾಡಿ ಮುಂದೆ ಸಾಗಿದ ಆ ಕುರುಡು ಮನುಷ್ಯ  " ಕರ್ಚೀಫ್ ಕರ್ಚೀಫ್ " ಅನ್ನುತ್ತ . 

                ಆ ಕ್ಷಣದಲ್ಲಿ ನಾ ಅಬ್ಭಾ "ಎಂಥಹ ಮಾತನ್ನು ಆಡಿದ ಆ ಮುನುಷ್ಯ ,  ಆ ಮಾತಿನಲ್ಲಿ ಅದೆಷ್ಟು ಅರ್ಥವಿದೆ , ನಾವೆಲ್ಲರೂ ಕಣ್ಣುಗಳಿದ್ದು , ಪ್ರಪಂಚವನೆಲ್ಲ ನೋಡಿಯೂ ಕೂಡ ಒಬ್ಬರನ್ನೊಬ್ಬರು ನಂಬುವುದಿಲ್ಲ, ಯಾರು ಏನು ಹೇಳಿದರು , ಕೊಟ್ಟರು ಅವರನ್ನು ನಂಬದೆ , ಅದನ್ನು ನಮ್ಮ ಕಣ್ಣಿನಿಂದ ಪರೀಕ್ಷಿಸಿದ ಮೇಲೆಯೇ ಒಪ್ಪುತ್ತೇವೆ. ನಮ್ಮ ನಮ್ಮಲ್ಲಿ ಪರಸ್ಪರ ನಂಬಿಕೆಗಳು ಕೂಡ ಇರುವುದಿಲ್ಲ, ಒಬ್ಬರನ್ನೋಬರು ಒಪ್ಪುವುದೂ ಇಲ್ಲ. ಮನುಷ್ಯರನ್ನೊಂತು ಮಾತ್ರ ನಾವು ಅದೇಕೋ ಅಷ್ಟಾಗಿ ನಂಬುವುದೂ ಇಲ್ಲ .  ಬದಲಾಗಿ ನಮಗೆ ಗೊತ್ತಿರದ, ನೋಡದ ದೇವರನ್ನು ಮಾತ್ರ ನಂಬುತ್ತೇವೆ. ಆದರೆ ಈ ಮನುಷ್ಯ ಮಾತ್ರ ನಿಜ ಸತ್ಯವನ್ನರಿತು ನಮ್ಮ ಸುತ್ತ ಮುತ್ತಲಿರುವ ಜನರನ್ನು ನಂಬುತ್ತಾನೆ , ಆದ್ದರಿಂದಲೇ ಯಾರು ಆತನಿಗೆ ದ್ರೋಹ  ಬಗೆಯುವುದಿಲ್ಲ , ಮೋಸ ಮಾಡುವುದಿಲ್ಲ. ಕಣ್ಣಿರದ ಆತನಿಗೆ ಸುತ್ತಲಿನ ಜನರೇ ದೇವರುಗಳು , ಆತ ಎಲ್ಲರಲ್ಲೂ ದೇವರನ್ನೇ ಕಾಣುತ್ತಾನೆ , ಹಾಗಾಗಿ ಎಲ್ಲರನ್ನು ನಂಬುತ್ತಾನೆ , ನಿಜವಾಗಿಯೂ ಆತನ ಮಾತೆ ಸತ್ಯ " ಎಂದು ನನಗೂ ಅನ್ನಿಸಿತು. 

          ಇನ್ನುಳಿದ ಪ್ರಯಾಣದುದ್ದಕ್ಕೂ ಆತನ ಆ ಮಾತುಗಳು ನನ್ನನು ಅನೇಕೆ ವಿಚಾರಗಳ ಗಂಟಲ್ಲಿ ಸಿಕ್ಕಿಸಿ ಹಾಕಿಸಿದ್ದವು. ಆತ ಆ ಕ್ಷಣಕ್ಕೆ ನನಗೆ ಮಹಾನ್ ತತ್ವಜ್ಞಾನಿಯಂತೆ ಕಂಡನು ಕೂಡ. ಆತನ ಆ ಮಾತುಗಳ ಅರ್ಥ , ತಾತ್ಪರ್ಯ , ವಿಮರ್ಶೆಯಲ್ಲೇ ನಾನು ನನ್ನ ಆ ದಿನದ ಪ್ರಯಾಣವನ್ನ ಸವೆಸುತ್ತಿದ್ದಂತೆ , ನನ್ನ ಚಿಂತನೆಯು  ಕೂಡ ಹೊಸ "ನಂಬಿಕೆ"ಯ ಹಾದಿ ತುಳಿದಿತ್ತು.  

ನಿಮಗಾಗಿ 
ನಿರಂಜನ್ 

ಶನಿವಾರ, ಜುಲೈ 20, 2013

ಆಷಾಡದ ಆ ದಿನ


                                                                       ಆಷಾಡದ ಆ ದಿನ .... 

ಷಾಡದ ಒಂದು ದಿನ, ಬೆಳ್ಳಂಬೆಳಗ್ಗೆಯ ಸಮಯ, ಸುತ್ತಲೂ ಮೋಡಗಳು, ಬೀಸುತ್ತಿತ್ತು ತಂಪಾದ  ಚಳಿಗಾಳಿ, ಹಕ್ಕಿ-ಪಕ್ಕಿಗಳೆದ್ದು ಸಂಗೀತ ಸುಧೆಯನ್ನೇ ಹರಿಸುತ್ತಿದ್ದವು. ಮಳೆರಾಯ ಆಗ ತಾನೇ ಪ್ರಕೃತಿಯ ಮೈ ತೊಳೆದು ಸುಮ್ಮನಾಗಿದ್ದಾನೆ. ಗಿಡ ಮರ ಬಳ್ಳಿಗಳ ಎಲೆಗಳು ನೀರಹನಿಗಳನ್ನುಟ್ಟು ಸಿಂಗಾರಗೊಂಡು ನಿಂತಿವೆ. ತಂಗಾಳಿಯೊಮ್ಮೆ ಗಿಡ-ಮರಗಳಿಗೆ ಖಚಗುಳಿಯಿಟ್ಟರೆ, ಅವು ನುಲಿದು, ನಲಿದು, ಕುಣಿದು ಬಚ್ಚಿಟ್ಟುಕೊಂಡಿದ್ದ ನೀರಹನಿಗಳನ್ನು ಭೂಮಿಗೆ ಸುರಿಸುತ್ತಿದ್ದವು. ಆ ದೃಶ್ಯ ಹೇಗಿತ್ತು ಎಂದರೆ ನೀರ ಹನಿಗಳು ಭೂಮಿಗೆ ಬಿದ್ದರೆ  ಮಣಿ-ಮುತ್ತುಗಳೇ   ಧರೆಗುರುಳುವಂತೆ ಕಾಣುತ್ತಿತ್ತು. 

               ನನಗೆ ಒಟ್ಟಾರೆ ಆ ದಿನ ಸ್ವರ್ಗವೇ ಭೂಮಿಯನ್ನು ಬಿಗಿದಪ್ಪಿದ ಹಾಗೆ ಭಾಸವಾಗಿತ್ತು. ಇಂಥಹ ವಾತವರಣದ  ಸವಿಯ ಸವಿಯುವ ಮನಸ್ಸನ್ನು ಕೊಟ್ಟ , ನೋಡಿದ ಅಂದವನ್ನು ಹಾಗೆಯೇ ಕದಿಯುವ ಹೃದಯವನನ್ನೂ ನನ್ನೊಳು ಇರಿಸಿದ, ಈ ರೀತಿಯ ಸುಂದರ ದಿನಗಳನ್ನು ನನಗೆ ಅನುಭವಿಸಲೆಂದೇ ಸೃಷ್ಟಿಸುವ ಆ ಕಾಣದ  ಗಾರುಡಿಗನಿಗೆ ಮನದಲ್ಲೇ ಒಂದು ಕ್ಷಣ ವಂದಿಸಿದೆ. ಇಂಥಹ ವಾತಾವರಣವನ್ನು ನಾನೇನು ಮೊದಲು ನೋಡುತ್ತಿಲ್ಲ,ಅನುಭವಿಸುತ್ತಿಲ್ಲ. ಆದರೂ ಇಂತಹ ದಿನಗಳು ಮಾತ್ರ ನನ್ನನ್ನು ಬಹುವಾಗಿ ಸೆಳೆಯುತ್ತವೆ, ಸೂರೆಗೊಳ್ಳುತ್ತವೆ. ಪ್ರತಿಸಲವೂ ನನಗೆ ಇದರಲ್ಲೊಂದು ನವ ನವೀನತೆ ಕಾಣುತ್ತದೆ. ಈ ರೀತಿಯ ಪ್ರಕೃತಿಯಿಂದ ನಾನು ಬೇಗನೆಯೇ ಆಕರ್ಷಿತನಾಗುತ್ತೇನೆ, ಮನಸ್ಸು ಪುಳಕಗೊಳ್ಳುವುದರ ಜೊತೆಗೆ ಹಗುರವೂ ಆಗುತ್ತೆ, ಅದೇನೇ ದುಃಖ ದುಮ್ಮಾನಗಳಿದ್ದರು ಆ ಕ್ಷಣಕ್ಕೆ ಅವು ದೂರಸರಿದು, ಖುಷಿ, ಶಾಂತಿ, ಪ್ರೀತಿಗಳು ಹತ್ತಿರವಾಗುತ್ತವೆ. ನಿಜ ಹೇಳಬೇಕೆಂದರೆ ಈ ರೀತಿಯ ವಾತಾವರಣ ಅದೇನೋ ಗೊತ್ತಿಲ್ಲ, ನನನ್ನೂ ಮಲಗಲೂ  ಬಿಡೋಲ್ಲ, ಸುಮ್ಮನಿರಲೂ ಬಿಡುವುದಿಲ್ಲ. ಈ ವಿಷಯದ ಬಗ್ಗೆ ನನಗೆ ಸ್ವಲ್ಪವೂ ಬೇಸರ ಇಲ್ಲ. ಈ ರೀತಿಯ ಮನೋಭಾವ ನನಗೆ ದೇವರು ಕೊಟ್ಟ ವರವೆಂದು ನಾನು ತಿಳಿದಿದ್ದೇನೆ. ಇದು ನನ್ನ ಭಾಗ್ಯವೂ ಕೂಡ , ಅದ್ಯಾವ ಜನ್ಮದದಲ್ಲಿ ಅಂಥಹ ಅದೇನು ಘನ ಕಾರ್ಯ ಮಾಡಿದ್ದೇನೋ ಏನೋ ಗೊತ್ತಿಲ್ಲ, ಆದರೆ ಆ ಜನ್ಮದಲ್ಲಿ ಮಾತ್ರ ಈ ರೀತಿಯ ಸುಂದರ ಪ್ರಕೃತಿಯ ಸವಿಯುವ ಮನಸ್ಸುನ್ನೂ  ಕೇಳದಿದ್ದರೂ ಆ ದೇವರು ಕೊಟ್ಟಿದ್ದಾನೆ. ಆತನಿಗೆ ಮತ್ತೊಮ್ಮೆ ನನ್ನ ಹೃದಯಾಂತರಾಳದ  ನಮನ. 

              ವಾತವರಣ ಹೀಗಿದ್ದಾಗ ಅದೇಗೆ ನಾ ಮನೆಯಲ್ಲಿ ಜೊಲ್ಲು ಸುರಿಸಿಕೊಳ್ಳುತ್ತಾ, ನನ್ನ ಉಸಿರು ನಾನೇ ಕುಡಿಯುತ್ತ, ಹೊದಿಕೆಯಲ್ಲಿ ಗೂಡಲ್ಲಿ ಮುದುರಿ ಮಲಗಲಿ ? ಬೀಳುವ ಬೆಳಕಿನಿಂದ , ಬೀಸುವ ಗಾಳಿಯಿಂದ ಅದೇಗೆ ನಾನು ನನ್ನನ್ನು ವಂಚಿಸಿಕೊಳ್ಳಲಿ. ಹೀಗೆ ನಾ ಮಾಡಿದ್ದೆ ಆದರೆ ಅದು ನಾ ಮಾಡಿಕೊಂಡ ಮೂರ್ಖತನವಾಗುತ್ತೆ. ಒಂದು ವೇಳೆ ಪಡುವಣದಲ್ಲಿ ಸ್ವಾಮಿಯು ಮೂಡಿದಾಗಲೂ ನಾನು ಮಲಗಿ ಒಳ್ಳೆಯ ವಾತಾವರಣವನ್ನು ಅನುಭವಿಸದಿದ್ದರೆ ಅದು  ಸೌಂದರ್ಯವೀರುವ ನನ್ ಕಂಗಳಿಗೆ ನಾನ್ ಮಾಡುವ ಮೋಸ ಎಂದೆನಿಸುತ್ತದೆ. ಹಾಗಾಗಿ ಆ ದಿನ ನಾ ಮನೆಯಲ್ಲಿ ಒಂದು ಲೋಟ ತಣ್ಣನೆ ನೀರನ್ನು ಕುಡಿದು, ಬಿಸಿಯ ಕಾಫೀ ಹೀರಿ , ಕೈಯಲ್ಲೊಂದು ಕೊಡೆಹಿಡಿದು ಸಣ್ಣ ವಿಹಾರಕ್ಕೊರಟೆ.



         ಹಾಗೆ ನೆಡೆಯುವಾಗ ನನಗೋ "ಆಹಾ ಎಂಥಹ ವಾತವರಣವಿದು" ಎಂದು ಅನ್ನಿಸುತಿತ್ತು. ಮನಸ್ಸು ಕವಿವರ್ಯ್ಯನಾಗಿ ಬಚ್ಚಿಟ್ಟುಕೊಂಡಿದ್ದ ಭಾವನೆಗಳಿಗೆ ಬಣ್ಣವಚ್ಚಿ ರೂಪು ನೀಡುತ್ತಿತ್ತು. ಏನು ನೋಡಿದರು ನನಗೆ ಎಲ್ಲವೂ ಚಂದವಾಗಿಯೇ ಕಾಣುತ್ತಿದ್ದವು. ಪ್ರತಿಯೊಂದರಲ್ಲೊಂದು ಶುದ್ದತೆ ಕಾಣುತಿತ್ತು. ಅಷ್ಟರಲ್ಲೇ ದೂರದಲ್ಲೊಂದು ಒಂಟಿ ಮನೆ ಕಂಡಿತು. ಅಕ್ಕ-ಪಕ್ಕ ಸ್ವಲ್ಪ ಖಾಲಿ ಜಾಗ, ಖಾಲಿ ಜಾಗದ ತುಂಬೆಲ್ಲ ಹಸಿರು ಹುಲ್ಲು ಬೆಳೆದಿತ್ತು.ಅಲ್ಲೊಂದು ಇಲ್ಲೊಂದು ತುಂಬೆ ಗಿಡಗಳು ಹುಲ್ಲ ನಡುವೆ ರಾರಾಜಿಸುತ್ತಿದ್ದವು. ಬಹು ಮಳೆಯಿಂದಾಗಿ ಮನೆಯ ಕಾಂಪೌಂಡ್ಗೆ  ಪಾಚಿ ಕಟ್ಟಿದಂತಾಗಿ ಹಸಿರು ಹತ್ತಿತ್ತು, ಅನೇಕ ಬಳ್ಳಿಗಳೂ ಅದರ ಮೇಲೆ ಹಬ್ಬಿದ್ದವು. ಅದೇ ಕಾಂಪೌಂಡ್ ಕೊನೆಯಲ್ಲಿ ಒಂದು ದೊಡ್ಡ ಮಲ್ಲಿಗೆ ಬಳ್ಳಿ ಮನೆಯ ಮಹಡಿಯ ಕಡೆ ಹಬ್ಬಿ , ಮೊದಲ ಮಹಡಿಗೂ ತಲುಪಿತ್ತು. ಸೊಂಪಾಗಿ ಬೆಳೆದಿದ್ದ ಅದು ಹಚ್ಚ ಹಸುರಾಗಿತ್ತು. ಬೆಳಗುಜಾವದ ಮಳೆಯಲ್ಲಿ ಜಳಕಮಾಡಿ, ತನ್ನ  ಮೊಲ್ಲೆಯ ಮಗ್ಗುಗಳಿಂದ ತನ್ನನ್ನೇ ಅಲಂಕರಿಸಿಕೊಂಡಿತ್ತು.  ಆ ಮನೆಯೂ ಸುಂದರವಾಗಿದ್ದರೂ ಕೂಡ ಆ ಕಡೆ ನೋಡಿದರೆ ಮೊದಲು ಗಮನ ಹರಿಯುವುದು ಬೆಳೆದು ನಿಂತಿದ್ದ ಆ ಮಲ್ಲಿಗೆ ಬಳ್ಳಿಯ ಕಡೆಗೆ ಹೊರತು ಆ ಮನೆಯ ಮೇಲಲ್ಲ. 

                ಆದರೆ ಆ ದಿನ ಮಾತ್ರ ನನಗೆ ಕಂಡಿದ್ದು ಆ ಬಳ್ಳಿಯ ಜೊತೆಗಿದ್ದ ಮತ್ತೊಂದು ನೀಟಾದ  ಸೌಂದರ್ಯದ ಗಂಟು. ನಿಜ ಅವಳು ಸಕತ್ ಸೌಂದರ್ಯದ ಗಣಿಯೇ ಆಗಿದ್ದಳು. ಆ ದೇವರು ಇದ್ದ ಬದ್ದ ಅಂದ-ಚಂದವನನೆಲ್ಲ ಒಟ್ಟುಗೂಡಿಸಿ ಗಂಟೊಂದನ್ನು ಅಲ್ಲಿರಿಸಿದ್ದನು ಎಂದು ಭಾಸವಾಯಿತು ಅವಳನ್ನು ನೋಡಿದೊಡನೆ. ನೋಡಿದ ತಕ್ಷಣಕ್ಕೆ ಅನ್ನಿಸುತ್ತಿತ್ತು ಅವಳು ಆಗತಾನೆ ಸ್ನಾನ ಮುಗಿಸಿ ಬಂದಿಹಳೆಂದು. ತನ್ನ ನೀಳಗೂದಲುಗಳನ್ನು ಹಾಗೆಯೇ ಕಟ್ಟಿ, ಕಟ್ಟಿಗೊಂದು ಸಣ್ಣ ಸೇವಂತಿಗೆ ಮುಡಿದು, ಚಿಕ್ಕ ಕುಂಕುಮದ ಬೊಟ್ಟು ಹಣೆಗೆ ಇಟ್ಟು , ಶುಭ್ರ ಹಳದಿ ಬಟ್ಟೆಯುಟ್ಟು, ಕೈಯಲ್ಲೊಂದು ಸಣ್ಣ ಕವರ್ ಹಿಡಿದು ಆ ಮಲ್ಲಿಗೆ ಬಳ್ಳಿಯ ಬಳಿ ಅವಳು ನಿಂತಿದ್ದಾಳೆ. ಒಮ್ಮೆ ಅವಳ ಆ ಸೌಂದರ್ಯ ಆ ಮಲ್ಲಿಗೆ ಹೂವ್ ಬಳ್ಳಿಯ ಮತ್ತು  ಆ ಪ್ರಕೃತಿಯ ಸೌಂದರ್ಯಕ್ಕೆ ಸವಾಲಾಕಿದಂತೆ ಕಂಡರೂ ಮತ್ತೊಂದೆಡೆ ಅವಳ ಚೆಂದ ಅಲ್ಲಿಯ ಆ ಪ್ರಕೃತಿಗೇನೆ ಅಂದವನ್ನು  ತಂದುಕೊಟ್ಟಂತೆ ಅನ್ನಿಸುತಿತ್ತು. ಒಟ್ಟಾಗಿ ಹೇಳುವುದಾದರೆ ಒಬ್ಬರ ಚೆಲುವು ಮತ್ತೊಬ್ಬರಿಗೆ ಪೂರಕವಾಗಿದ್ದವು.    

                 ಆದರು ಅವಳು ಮಲ್ಲಿಗೆ ಬಳ್ಳಿಯ ಹೂವು ಕೀಳಲು ಅಲ್ಲಿ ನಿಂತೊಡನೆ ಇಡೀ ಮಲ್ಲಿಗೆ ಬಳ್ಳಿಯೇ ಅವಳ ಆ ಸೌಂದರ್ಯಕ್ಕೆ ಶರಣಾಗಿ ಆ ದಿನ ಕೊಂಚ ಸಪ್ಪೆಯಾಗಿ ಖಂಡಿತು. ಅವಳು ಹೂ ಕೀಳಲು ಕೈ ಎತ್ತುವ ಮೊದಲೇ ಆ ಮಲ್ಲಿಗೆ ಬಳ್ಳಿಯೆ ಭಾಗಿ ತನ್ನನ್ನು ತಾನು ಅವಳಿಗೆ ಅರ್ಪಿಸಿ, ತನ್ನೆಲ್ಲ ಹೂವುಗಳನ್ನು ಅವಳಿಗೆ ಸಮರ್ಪಿಸಿ ಸಾರ್ಥಕ ಗೊಳ್ಳುವಂತೆ ನಡೆದುಕೊಳ್ಳುತ್ತಿದೆಯೆಂದು ನನಗೆ ಭಾಸವಾಗುತಿತ್ತು. ಆ ಕ್ಷಣಕ್ಕೆ ನಾನು ಆ ಪ್ರಕೃತಿಯೋಲ್ಲಿ ಮತ್ತೊಂದು ಸೌಂದರ್ಯದ ನಿಕ್ಷೇಪವನ್ನು ಕಂಡಂತೆ ಆಯಿತು. ಅವಳು ಬಳ್ಳಿಯನ್ನು ಮುಟ್ಟಿ, ತನ್ನ ಕೋಮಲ ಕೈಯಿಂದ ಒಂದು ಮೊಲ್ಲೆಯ ಹೂವನ್ನು ಕಿತ್ತರೆ, ಇಡೀ ಗಿಡವೇ ಇಡಿಯಿಂದ-ಮುಡಿವರೆಗೆ ಪುಳಕಗೊಂಡು ಮೇಲಿಂದ ಮತ್ತೊಷ್ಟು ಹೊವನ್ನು ಅವಳ ಮೇಲೆ ಸುರಿಸುತಿತ್ತು. ಬಳ್ಳಿಯ ಎಲೆಗಳು ಕೂಡ ನೀರ ಮುತ್ತುಗಳನ್ನು ಅವಳ ಮೇಲುದುರಿಸುತ್ತಿದ್ದವು. ಒಟ್ಟಾರೆ ಅವಳು ಅಲ್ಲೊಂದು ಸಹಜ ಸೌಂದರ್ಯದ ಬಲೆಯನ್ನೇ  ಬೀಸಿ ಪ್ರಕೃತಿಗೆ ಮತ್ತು ನನ್ನ ಕುಣಿಯುವ ಮನಸ್ಸಿಗೆ ಸವಾಲೆಸಿದಿದ್ದಳು. 

          ಕ್ಷಣ ಮಾತ್ರದಲ್ಲೇ ಸಾಕೊಷ್ಟು ಹೂವು ಬಿಡಿಸಿ ಕೊಂಡಳು. ಅದೇನೋ ಗೊತ್ತಿಲ್ಲ ಈ ಹೆಣ್ಣು ಮಕ್ಕಳಿಗೆ ಹೂವುಗಳೆಂದರೆ ಅದೆಲ್ಲಿಲ್ಲದ ಪ್ರೀತಿ. ಅದರಲ್ಲಿ ಈ ಮಲ್ಲಿಗೆ ಹೂವೆಂದರೆ ಅಬ್ಬಾ ಅದೆಷ್ಟು ಮೋಹ. ಅದಕ್ಕೆ ಅವಳೇನು ಹೊರತಾಗಿರಲಿಲ್ಲ. ಮಲ್ಲಿಗೆ ಮುಡಿದು ಸೌಂದರ್ಯವನ್ನೇ ಮುಡಿಗೇರಿಸಿಕೊಳ್ಳುವ ಖಾತರ ಅವಳಿಗಿದ್ದರೆ, ಅವಳ ಸೌಂದರ್ಯಕ್ಕೆ ಆ ಬಳ್ಳಿಯೆ ಸೋತು, ತಾವೇ ಅವಳ ಮುಡಿಯೇರಲು ಹೂವುಗಳು ಹಾತೊರೆಯುತ್ತಿವೆ , ಎಂದು ನನಗನಿಸಿತು. ಅವಳ ಮುಖದಲ್ಲೇನೋ ಒಂದು ರೀತಿಯ ಖುಷಿ , ಹೇಳಲಾಗದ ಆನಂದ ಕಾಣಿಸುತ್ತಿತ್ತು. ಮಲ್ಲಿಗೆ ಹೂವ ಸುಹಾಸನೆಯ ಸುಖವನ್ನು ಅವಳು ಅನುಭವಿಸಿವಂತೆ ಕಂಡಳು. ಅವಳು ತನ್ನನ್ನು ತಾನೇ ಮರೆತು ಅಲ್ಲಿದ್ದಳು ಎಂದೆನಿಸಿತು ನನಗಾಗ. ತನ್ನನ್ನು ತಾನೇ ಮರೆತಂತೆ ಅವಳು ಕಾನುತಿದ್ದಳು. ಇದೆಲ್ಲ ನೆಡೆದ ಒಂದೈದು ನಿಮಿಷವಾದಮೇಲೆ ಅವಳು ಆ ಅದ್ಭುತ ಮೂಡ್ ಇಂದ ಹೊರಬಂದು, ತಕ್ಷಣಕ್ಕೆ ಅಲ್ಲೇ ನಿಂತಿದ್ದ ನನ್ನನ್ನು ಗಮನಿಸಿದಳು. ಅಲ್ಲಿಯವರೆಗೂ ಅವಳು ನನ್ನನ್ನು ನೋಡಿಯೇ ಇರಲಿಲ್ಲ. ನಾಚಿಕೆಯಾಯಿತೋ, ಗಾಬರಿಯಾಯಿತೋ, ನಾ ಅರಿಯೇ ಆ ಕ್ಷಣದಲ್ಲೇ ಗೇಟ್ ಹತ್ತಿರ ಹೋಗಿ , ನನ್ನನ್ನೇ ನೋಡುತ್ತ ತಡವರಿಸಿಕೊಂಡು ಗೇಟ್ ಚಿಲುಕ ತಗೆದು ಹೊಳಹೊಕ್ಕು, ಮತ್ತೊಮ್ಮೆ ತಿರುಗಿ ನೋಡಿದಳು. ಅವಳ ಆ ಮುಗ್ದ ನೋಟವಂತೂ ಮಾತ್ರ ವರ್ಣಿಸಲು ನನ್ನಿಂದ ಅಸಾದ್ಯ. ಅಷ್ಟರಲ್ಲಿ ಬಚ್ಚಿಟ್ಟುಕೊಂಡ ಬಯಕೆಯೊಂದು ಹಾಗೆಯೇ  ಆಕ್ಷಣಕ್ಕೆ ಹೃದಯದ ಕದ ತಟ್ಟಿದಂತಾಯಿತು. ಅವಳು ಅಲ್ಲಿಂದ ಮರೆಯಾದರೂ ಕೂಡ ನನ್ನ ಹೃದಯದೊಳಗೊಕ್ಕಿದ್ದಳು. 

                  ನಾ ನೋಡಿದ್ದು, ನಿಜವೋ , ಕನಸೋ ಎಂಬತೆ ಇತ್ತು ಆ ಸೌಂದರ್ಯಗಳ ಸಮಾಗಮ. ಅಲ್ಲಿದ್ದ ಅವಳು ಅಲ್ಲಿಲ್ಲ ಈಗ , ಅಲ್ಲೇ ಇದ್ದ ನಾನು ಆಲ್ಲಿರಲಿಲ್ಲ ಆಗ. ವಾಸ್ತವಕ್ಕೆ ಮರಳಲು ಇಷ್ಟವಿರಲಿಲ್ಲ , ಹಾಗೆಯೇ  ಅದನ್ನೇ ನೆನೆಯುತ್ತ, ಮತ್ತೆ ಮುನ್ನುಗ್ಗಿ ಮಲ್ಲಿಗೆ ಬಳ್ಳಿಯ ಬಳಿ ಹೋದೆ. ಮಾತಿಲ್ಲದೆ ನಿಂತೆ ಮಲ್ಲಿಗೆಯ ವಾಸನೆ ಗಮ್ಮೆನ್ನುತಿತ್ತು, ಬಳ್ಳಿಯು ಅವಳಿಗಾಗೆ ಅದನ್ನು ಸೂಸಿತ್ತೋ ಎಂದೆನಿಸಿತು. ಹರಳದ ಮೊಗ್ಗುಗಳನ್ನವಳು ಗಿಡದಲ್ಲೇ ಇರಿಸಿದ್ದಳು. ನಾ ಆ ಮೊಗ್ಗುಗಳ  ಕೇಳಿದೆ " ನೀವೇಕೆ ಇನ್ನು ಹರಳಿಲ್ಲ ? ಹರಳಿದ್ದರೆ ಅವಳ ಮುಡಿ ಸೇರಬಹುದಿತ್ತಲ್ಲ ?". ಅದಕ್ಕೆ ಆ ಮಲ್ಲೇ ಮೊಗ್ಗುಗಳು ನಾಚಿ ಹೇಳಿದವು " ಹರಳುವ ಮುನ್ನವೇ ಆಕೆ ಬಂದಳು, ತನ್ನ ಮುಖವನೊಮ್ಮೆ ನಮ್ಮುಂದೆ ಹರಳಿಸಿದಳು, ಬೀಸಿದಳು ತನ್ನ ನಗುವಿನ  ಬಲೆಯನ್ನು, ಬೀಗಿದಳು ಸೌಂದರ್ಯದ ಮುಖಹೊತ್ತು, ಮರೆತೆವು ನಾವು ನಮ್ಮನ್ನೇ, ಸೋಲೊಪ್ಪಿ, ಹೇಗಿದ್ದೇವೋ ಹಾಗೆ ಉಳಿದೆವು" , " ಅವಳ ಚೆಲುವ ಬಲೆಯಲ್ಲಿ ನಾವು ಸೆರೆಯಾಗಿ , ಮುಗ್ದ ಮೊಗದ ಮುಂದೆ ನಾಚಿ , ಹರಳದೇ ದುಂಡು ಮಲ್ಲಿಗೆಯಾಗೆ ಉಳಿದೆವು" ಎಂದವು ಹತ್ತಿರದಿಂದ ಅವಳನ್ನು ಕಂಡಿದ್ದ ಆ ಮುಗ್ಗು ಮಲ್ಲಿಗೆ ಹೂವುಗಳು. ನಿಜ ಹೇಳಬೇಕೆಂದರೆ ಅಲ್ಲಿ ಸೋತಿದ್ದು ಮೊಲ್ಲೆಗಳಲ್ಲ , ಪ್ರಪಂಚವನ್ನೇ ಮರೆತು ನಿಂತಿದ್ದ ನಾನು. ಇದು ಆ ಪ್ರಕೃತಿಯ ಪ್ರಭಾವವೋ , ಅವಳ ಸೌಂದರ್ಯವೋ , ಸೌಂದರ್ಯವನ್ನು ಮೆಚ್ಚುವ ನನ್ನ ಮನಸ್ಸೋ ನಾ ಮಾತ್ರ ಅರಿಯೆ. 

ನಿಮಗಾಗಿ 
ನಿರಂಜನ್ 

ಭಾನುವಾರ, ಜುಲೈ 14, 2013

ಹಿತವಾದ

                                                                             ಹೊದಿಕೆ 

ನಾವೆಲ್ಲರೂ ಮೊದಲಿಂದಲೂ ರೂಡಿಸಿಕೊಂಡು ಬಂದಂತೆ , ನಮ್ಮೆಲ್ಲರಿಗೂ ರಾತ್ರಿ ಮಲಗುವಾಗ ಅವಶ್ಯವಾಗಿ ಬೇಕಾಗುವುದು ಯಾವ ವಸ್ತು ?? ಅದು ಖಂಡಿತವಾಗಿಯೂ ಹೊದಿಕೆಯಲ್ಲದೆ ಮತ್ತೇನು ಅಲ್ಲ. ಚೆನ್ನಾಗಿರುವ, ಒಜ್ಜಿಕೊಂಡರೆ ಮೈ-ಕೈ-ಕಾಲು ಮುಚ್ಚುವ, ಒಳ್ಳೆ ಬಣ್ಣದ, ಸಾಕೊಷ್ಟು ಅಗಲವಾದ, ಬೆಸಿಗೆಯಾದರೆ ತೆಳ್ಳನೆಯ, ಚಳಿಗಾಲದಲ್ಲಿ ದಪ್ಪವಾದ, ಶುಭ್ರವಾದ , ಒಳ್ಳೆಯ ಹತ್ತಿಯುಪಯೋಗಿಸಿ ಅದ್ಭುತ ನೇಕಾರ-ಕಲಾವಿದ ತಯಾರಿಸಿದ ಕಸೂತಿಯನ್ನೊಳಗೊಂಡ ಹೊದಿಕೆ ಎಂದರೆ ಯಾರು ತಾನೇ ಬೇಡವೆಂದಾರು ?. ರಾತ್ರಿ ಮಲಗಿದಾಗ ಹೊದಿಕೆಯನ್ನು ಒಜ್ಜಿಕೊಲ್ಲದಿದ್ದರು ಅದು ತಮ್ಮ ಕಾಲ ಬಳಿ ಇರಲೇಬೇಕು. ಅದು ಪಕ್ಕದಲ್ಲೋ, ಹತ್ತಿರದಲ್ಲೋ, ಅವರಿಗೆ ಕೈಗೆ ಬೇಕೆಂದಾಗ ಸಿಗುವಂತಾದರು ಇರಬೇಕು ಅವರ ಹೊದಿಕೆ. ಒಂದೊತ್ತಿನಲ್ಲಿ ಬೇಕೆನಿಸಿದರೆ ಅದು ಗೊತ್ತಿಲ್ಲದೇ ಖಂಡಿತವಾಗಿ ಅವರ ಮೈ ಮೇಲಿರುತ್ತೆ, ಇಲ್ಲವಾದರೆ ಹೊದಿಕೆಯ ಮೇಲೆ ಅವರೇ ಇರುತ್ತಾರೆ .. ಇಲ್ಲಾ...  ಕಾಲಿನ ಮೇಲಾದರು ಹೊದಿಕೆ ಇದ್ದೆ ಇರುತ್ತೆ. ಈ ಕಾಲ ಆ ಕಾಲ, ಯಾವ ಕಾಲವಾದರು ಹೊದಿಕೆ... ಒಂದೊಳ್ಳೆಯ... ಅಚ್ಚುಕಟ್ಟಾದ ಹೊದಿಕೆ ಇರಲೇಬೇಕು. ಇಲ್ಲದೆ ಹೋದರೆ ನಿದ್ದೆ ಬರೋಲ್ಲ. ರಾತ್ರಿಗಳನ್ನು ಕಲ್ಪಿಸಿಕೊಳ್ಳಲು ಸಾದ್ಯವಿಲ್ಲ. ಅದು ಚಳಿಗಾಲದ ರಾತ್ರಿಯೊಂತು ಹೊದಿಕೆ ಬೇಕೇ ಬೇಕು.   

           ಕೆಲವರು ಹೇಳುವ ರೀತಿಯಲ್ಲಿ, ಹೊದಿಕೆ ಇಲ್ಲದೆ ಅವರು ಮಲಗಿದ ದಿನಗಳಿಲ್ಲವಂತೆ. ಹೊದಿಕೆ ಇಲ್ಲದ ದಿನಗಳನ್ನು ನೆನೆಯಲು ಕೂಡ ಸಾದ್ಯವಿಲ್ಲವಂತೆ.  ಏನ್ ಇರಲಿ ಬಿಡಲಿ ತೆಳ್ಳಗಿನ,ಶುದ್ದವಾದ, ಅಂದ ಚಂದದ ಒಂದು ಹೊದಿಕೆ ಬೆಸಿಗೆ , ಮಳೆ, ಚಳಿಗಾಲಗಳ  ರಾತ್ರಿಗಳಲಿ ಬೇಕೇ ಬೇಕು. ಮೆತ್ತನೆಯ ಸ್ವಲ್ಪ ತೆಳ್ಳಗಿರುವ ಹೊದಿಕೆ ಬೇಸಿಗೆಗೆ ಬೇಕೆನಿಸಿದರೆ, ಚಳಿಗಾಲದಲ್ಲೋ "ಒಂದಿಷ್ಟು ಸ್ವಲ್ಪ ದಪ್ಪ ಇದ್ದರೆ ಮಜಾ ಇರುತ್ತೆ,  ಕೈತುಂಬಾ ಸಿಕ್ಕರೆ ಮೈತುಂಬಾ  ಒಜ್ಜಿಕೊಳ್ಳಬಹುದು" ಎಂದು ಎಲ್ಲರಿಗೂ ಅನ್ನಿಸುತ್ತೆ. ಹೊದಿಕೆಯೊಂದಿಗೆ ಮಲಗುವುದೇ ಒಂದು ರೀತಿಯ ಬೆಚ್ಚನೆ ಅನುಭವ. ವಾತಾವರಣ ಹೇಗೆ ಇರಲಿ, ಮೈ ಬಿಗಿಹಿಡಿದು ಹೊದಿಕೆಯನ್ನು ಇಡಿದೆಳೆದುಕೊಂಡು ಮೈ ಸುತ್ತಿಕೊಳ್ಳುತ್ತೇವೋ ಇಲ್ಲವೋ, ಆದರೆ ಒಂದು ಹೊದಿಕೆ ಮಾತ್ರ ಸದಾ ಜೊತೆಯಿದ್ದರೆ ಒಳ್ಳೆಯದು ಅಲ್ಲವೇ ?. ಸಂಪೂರ್ಣ ಒಜ್ಜಿಕೊಳ್ಳದಿದ್ದರು ಅದನ್ನು ಕಾಲ ಮೇಲಾದರೂ ಹಾಕಿ ಮಲಗುವ ರೂಡಿ ಇದ್ದರೆ ಒಳ್ಳೆಯದೆಂದು ನಮ್ಮ ಹಿರಿಯರು ಕೂಡ ಹೇಳುವ ನೆನಪಂತೂ ನನಗೂ ಕೂಡ ಇದೆ. ಏಕೆಂದರೆ ಹೊದಿಕೆ ಕೊರೆಯುವ ಚಳಿಯಿಂದ, ಹೊತ್ತಲ್ಲದ ಹೊತ್ತಲ್ಲಿ ಎಲ್ಲೆಂದರಲ್ಲಿ ನುಗ್ಗುವ ಸೊಳ್ಳೆಗಳಿಂದ ನಮಗೆ ರಕ್ಷಣೆ ನೀಡುವುದರಲ್ಲಿ ಎರೆಡು ಮಾತಿಲ್ಲ.

           ಈ ಹೊದಿಕೆ ಎಂಬುದು ನಾವು ಹೇಳಿದ ಹಾಗೆ ಕೇಳುತ್ತೆ ಅಂತ ಅನ್ನಿಸುವುದಿಲ್ಲವೇ ತಮಗೆ ?. ನಾವು ಹೇಗೆ ಉಪಯೋಗಿಸಿದರು ಅದು ಸುಮ್ಮನಿರುತ್ತದೆ, ನಾವು ಬಿಗಿ ಇಡಿದೊಷ್ಟು ನಮ್ಮ ಬಳಿಯೇ ಇರುತ್ತೆ , ಹಿತವೆನ್ನುವಷ್ಟು ನಮ್ಮನ್ನು ಸುತ್ತುತ್ತದೆ. ಈ ಎಲ್ಲ ಕಾರಣಗಳಿಗಾಗಿ ಹೊದಿಕೆಯನ್ನು ಎಲ್ಲರು ಇಷ್ಟ ಪಡುತ್ತಾರೆ. ಹೊದಿಕೆಗೆ ಅನೇಕ ಪರ್ಯಾಯಗಳಿದ್ದರು ಹೊದಿಕೆಯ ಮಜವೇ ಬೇರೆ. ಅದೇ ರೀತಿ ಹೊದಿಕೆಗಳಲ್ಲಿ ಅನೇಕ ಬಗೆಗಳೂ ಕೂಡ ಇವೆ. ಸಾಂಪ್ರಾದಾಯಿಕ ಹೊದಿಕೆಗಳಿಂದ ಇಡಿದು ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ADVANCED, ಜಿಂಗ್-ಚಾಕ್ ಹೊದಿಕೆಗಳು ನಮಗೆ ಸಿಗುತ್ತವೆ. ಕೆಲವರಿಗೆ ಸಾಂಪ್ರದಾಯಿಕ ಹೊದಿಕೆ ಬೇಕೆನಿಸಿದರೆ, ಕೆಲವರಿಗೆ ಜಿಂಗ್-ಚಾಕ್ ಹೊದಿಕೆಗಳು ಇಷ್ಟವಾಗುತ್ತವೆ. ಆದರೆ ಪ್ರತಿ ರಾತ್ರಿ ಮಲಗುವ ಮೊದಲು ನಮಗೆ ನೆನಪಾಗುವುದು ಇಷ್ಟದ ದೇವರಗಳಲ್ಲ, ಆ ದಿನದ ಘಟನೆಗಳಂತೂ ಅಲ್ಲವೇ ಅಲ್ಲ, ನಮ್ಮ ನೆಚ್ಚಿನ ಹೊದಿಕೆಗಳು ಮಾತ್ರ ಹಾಗೆ ನಮ್ ಕಣ್ ಮುಂದೆ ಬಂದು ಬಿಡುತ್ತವೆ. ಕೆಲವರಂತು ಕೆಲವು ಹೊದಿಕೆಗಳನ್ನು ತಮ್ಮ favorite ಗಳಾಗಿ  ಮಾಡಿಕೊಂಡಿರುತ್ತಾರೆ. ಹೊದಿಕೆಗಳನ್ನು ಯಾರು ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಇಷ್ಟ ಕೂಡ ಪಡುವುದಿಲ್ಲ,  ಅದು ಒಳ್ಳೆಯ ಅಭ್ಯಾಸ ಕೂಡ,  ಅದಕ್ಕೆ ನನ್ನ ತಂಟೆ ತಕರಾರೊಂತು ಇಲ್ಲವೇ ಇಲ್ಲ. ಇದಕ್ಕೆ ಕಾರಣಗಳು ಅನೇಕ. ಅದರ ಮೇಲಿನ ಅತಿಯಾದ ಪ್ರೀತಿ, ನಿಚ್ಚಿನ ಬಣ್ಣ, ಅದರ ಉದ್ದ-ಅಗಲ ಮತ್ತು ಗಾತ್ರಗಳು ಹೆಚ್ಚಿನ ಪಾತ್ರವಹಿಸುತ್ತವೆ. ಕೆಲವರಂತೂ ಕಾರಣಗಳಿಲ್ಲದೆ ಹೋದರು ಕೆಲವು ರೀತಿಯ ಹೊದಿಕೆಗಳನ್ನು ತುಂಬಾ ಇಷ್ಟ ಪಡುತ್ತಾರೆ.  
                
                ಈ ಮಳೆಗಾಲ , ಚಳಿಗಾಲಗಳು ಬಂದವೆಂದರೆ ಮಾತ್ರ ಎಲ್ಲರಿಗೂ ಬೇಕೇ ಬೇಕು ಹೊದಿಕೆ, ಅದರಲ್ಲೂ ಹೀಗಿರುವ ಇಂಥಹ ವಾತವರಣದಲ್ಲಿ ಯಾರಿಗೆ ಬೇಡ ಅಂದ ಚಂದದ ಬೆಚ್ಚಗಿಡುವ ಸುಂದರ ಹೊದಿಕೆಗಳು ?. ದೂರದೃಷ್ಟಿಯುಳ್ಳವರು ಈ ಕಾಲಗಳು ಆರಂಭವಾಗುವ ಮೊದಲೇ ಇವುಗಳ ವ್ಯವಸ್ತೆ ಮಾಡಿಕೊಳ್ಳುತ್ತಾರೆ. ಬುದ್ದಿವಂತ ತಂದೆ-ತಾಯಿಗಳು ಮಕ್ಕಳು ಒಪ್ಪುವ ಹೊದಿಕೆಗಳನ್ನು ಅವರೇ ತಂದು ಮಕ್ಕಳಿಗೆ ಹೊದಿಸುತ್ತಾರೆ. ಕೆಲವರು ಸ್ಥಳಿಯವಾಗಿ ಸಿಗುವ ಹೊದಿಕೆಗಳನ್ನು ಹೊದ್ದುಕೊಂಡು ತೃಪ್ತಿ ಪಟ್ಟರೆ, ಇನ್ನೂ ಕೆಲವರು "ಈ ಹೊದಿಕೆ ಕಾಶ್ಮೀರಿ ಶಾಲ್ ಹಾಗಿದ್ದರೆ ಹೇಗೆ ಇರುತ್ತಿತ್ತು ! " ಎಂದು ಇಲ್ಲದರ ಬಗ್ಗೆ ಯೋಚಿಸುತ್ತಾರೆ. ಪ್ರಜ್ಞಾವಂತ ಜನರು ಹೊದ್ದ ಹೊದಿಕೆಯಲ್ಲೇ ಸಂತುಷ್ಟರಾಗಿ ಹಾಯಾಗಿ ಬೆಚ್ಚಗೆ ಮಲಗುತ್ತಾರೆ. ಆಷಾಡದ ಗಾಳಿಯಲ್ಲೊಂತು ಹೊದಿಕೆಗಳು ಅತ್ಯವಶ್ಯಕ, ಅದರಲ್ಲೂ ಈ ಆಷಾಡದ ವಿರಹಿಗಳಿಗೆ ಬೇಕೇ ಬೇಕು ಅವರ ಆ... ಹೊದಿಕೆ. 

          ನಿಮಗೆ ಗೊತ್ತಾ ? ವಯಸ್ಸಿಗೆ ತಕ್ಕನಾಗಿ ಹೊದಿಕೆಗಳ ಮೇಲೆನ  ಪ್ರೀತಿಯೂ  ಕೂಡ ಬದಲಾಗುತ್ತದೆ. ಒಂದೊಂದು ವಯಸ್ಸಿನಲ್ಲಿ ಒಂದೊಂದು ತರಹದ ಹೊದಿಕೆಗಳು ನಮ್ಮನ್ನು ಆಕರ್ಷಿಸುತ್ತವೆ. ಇದಕ್ಕೆಲ್ಲ ಕಾರಣ ಹೊದಿಕೆಯ ಉಪಯೋಗ , ಅದರ ಅಂದ-ಚಂದ. ಕೊನೆಯಾದಾಗಿ ಹೇಳಬೇಕೆಂದರೆ ಹೊದಿಕೆ ಬೇಕೇ ಬೇಕು ಮಲಗುವಾಗ ಅದು ನಮ್ಮದೇ ಆಗಿದ್ದರೆ ಚೆನ್ನ, ಒಂದೇ ಇದ್ದಾರೆ ಹಿತ, ಒಳ್ಳೆಯದಾದ್ರೆ ಸಂತೋಷ , ಶುಭ್ರವಾಗಿದ್ದರೆ ಆರೋಗ್ಯ. 

ನಿಮಗಾಗಿ 
ನಿರಂಜನ್ 


ಶನಿವಾರ, ಜುಲೈ 6, 2013

ನನ್ನದಲ್ಲ


             ನನ್ನದಲ್ಲ

ರಳದಿದ್ದದ್ದು  ಕಣ್ಣು , ನಗದಿದದ್ದು ಬಾಯಿ
ಅಪರಾದವಂತೆ  ಮುಗ್ದ  ಮುಖದ್ದು.

ಜೋರು ಬೀಸಿದ್ದು ಗಾಳಿ, ಬಿದ್ದದ್ದು ಕಲ್ಲು
ಅಪರಾದವಂತೆ ಹಳೇ ಗುಡಿಯದ್ದು.

ಕಲ್ಲಲ್ಲಿತ್ತು ದೋಷ ,ಆತ ಕಲಿತಿರದ ಶಿಲ್ಪಿ
ವಕ್ರವಂತೆ  ಶಿಲ್ಪದ ಕಣ್ಮುಖಗಳು..

ಅವೇನು ಬಯಸಿ ಪಡೆದಿದ್ದವೆ ಇದೆಲ್ಲವನ್ನು
ವಿಧಿಯಾಟವಲ್ಲದೆ ಇದು ಮತ್ತೇನು.. 
 
ತಲೆ ತಗ್ಗಲೇ ಬೇಕಾಗಿದೆ ಮಾಡದ ತಪ್ಪಿಗೆ ,
ಸಹಕರಿಸದೇ ನಾ ಸುಮ್ಮನಿರಲೇ.....

ನಿಮಗಾಗಿ 
ನಿರಂಜನ್