ಶನಿವಾರ, ಆಗಸ್ಟ್ 23, 2014

ಅನಂತಮೂರ್ತಿ ....



                                                            ಅನಂತ ಮೌನಿ ....


ಮೂರ್ನಾಲ್ಕು ದಿನಗಳ ಹಿಂದೆ , ಅನಂತಮೂರ್ತಿಯವರ ಭಾರತೀಪುರ ಕತೆಯನ್ನು ನನ್ನ ಹೆಂಡತಿ ಶೋಭಾಳಿಗೆ ವಿವರವಾಗಿ ಹೇಳಿ ಮುಗಿಸಿದ್ದೆ . ಅದೇ ಸಮಯದಲ್ಲಿ ಅನಂತಮೂರ್ತಿಯವರ ಕತೆಗಳ ಬಗ್ಗೆ , ಅವರ ಹೋರಾಟಗಳ ಬಗ್ಗೆ , ಅವರ ಸುತ್ತ ಹುಟ್ಟಿದ್ದ ವಿವಾದಗಳ ಬಗ್ಗೆ ನಾವಿಬ್ಬರು ಗಂಟೆಗಳ ಕಾಲ ಚರ್ಚಿಸಿದ್ವಿ . ಯಾರು ಏನು ಹೇಳಲಿ ಬಿಡಲಿ , ಯಾರು ಅವರನ್ನು ಒಪ್ಪಲಿ ಬಿಡಲಿ , ಅವರ ವಿಚಾರಧಾರೆಗಳು ಮತ್ತು ಯೋಚನೆಗಳು ನಮ್ಮನ್ನು ಪ್ರಭಾವಿಸದೆ ಬಿಡವು. ಅದೇ ರೀತಿಯಾಗಿ ಮೂರ್ತಿಯವರು ನನ್ನನ್ನು ಅನೇಕ ವಿಷಯಗಳಲ್ಲಿ ಪ್ರಭಾವಿಸಿದ್ದಾರೆ ಹಾಗು ನಾನು ಅವರಿಂದ ಸಾಹಿತ್ಯಿಕವಾಗಿ, ವೈಚಾರಿಕವಾಗಿ, ತಾತ್ವಿಕವಾಗಿ ಬಹುವಾಗಿ ಪ್ರೇರೇಪಿತಗೊಂಡಿರುವುದು ನಿಜ . 

 
             ಪ್ರತಿದಿನದಂತೆ ನಾನು  ಮತ್ತು ನನ್ನ ಶೋಭ  ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ , ನಮ್ಮ  ಮನೆಯಲ್ಲಿ ಒಂದು ರೀತಿಯ ಮೌನ ಆವರಿಸಿತ್ತು . ನಮ್ಮ ಅಮ್ಮ ನನಗೆ ಮೂರ್ತಿಯವರ ಸಾವಿನ ಸುದ್ದಿ ಹೇಳಿದರು ,, ಸ್ನೇಹಿತರೆ ನನಗೇನು ಅವರು ಸ್ನೇಹಿತರಲ್ಲ , ಸಂಭಂದಿಯೂ ಅಲ್ಲ , ಆದರೂ  ಆ ಕ್ಷಣದಲ್ಲಿ ನನಗೆ ಭೂಮಿಯೇ ಕುಸಿದಂತಾಯಿತು , ಮೊನ್ನೆ ಮೊನ್ನೆ ಶಿವರುದ್ರಪ್ಪರನ್ನು ಕಳೆದುಕೊಂಡ ನಮಗೆ ಮತ್ತೊಂದು ಆಘಾತ ಇದಾಗಿತ್ತು. ನಿಜವಾಗಿಯೂ ಅವರು ನನ್ನನ್ನು ಅತಿಯಾಗಿ ಆಕ್ರಮಿಸಿದ್ದರು ಅನೇಕ ವೈಚಾರಿಕ ವಿಷಗಳಲ್ಲಿ ಅವರ ನೇರ ಪ್ರಭಾವು ಇದೆ . ನಾನು ಇಷ್ಟಪಡುವ ಅನೇಕ ಲೇಖಕರಲ್ಲಿ ಇವರೂ  ಕೂಡ ಅಗ್ರ ಗಣ್ಯರು. 

                 ಒಬ್ಬ ಲೇಖಕರಾಗಿ ಮೂರ್ತಿಯವರು ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ .  ಸಾಹಿತ್ಯ ಅವರಿಗೆ  ಬರೀ  ಕತೆ ಕಟ್ಟುವುದು , ಭ್ರಮೆ ಸೃಷ್ಟಿಸುವುದು ಹಾಗು ಕೇವಲ ತನ್ನ ಯೋಚನೆಗಳನ್ನು ಇತರರ ಮೇಲೆ ಏರುವುದಷ್ಟೇ ಆಗಿರಲಿಲ್ಲ. ಸಾಹಿತ್ಯ ಮೂರ್ತಿಯವರಿಗೆ ಒಂದು ಬದುಕಾಗಿತ್ತು , ಸಾಹಿತ್ಯ ಅವರ ಹೋರಾಟಗಳಿಗೆ  ವೇದಿಕೆಯಾಗಿತ್ತು, ಪ್ರಸ್ತುತ ಬೆಳವಣಿಗೆಗಳೊಂದಿಗೆ ಸಾಹಿತ್ಯ ಅವರನ್ನು ಸದಾ ಬೆಸೆಯುತ್ತಿತ್ತು. ತಮ್ಮ ನಿಜ ಚಿಂತನೆಗಳನ್ನು, ಸಮಾಜದಲ್ಲಿ ನಡೆಯುವ ಅನ್ಯಾಯ , ಮೂಡನಂಬಿಕೆ , ಗೊಡ್ಡು ಸಂಪ್ರದಾಯಗಳ ಬಗ್ಗೆ ಓದುಗರಲ್ಲಿ ಅರಿವು ಮೂಡಿಸಲು ಅವರು ತಮ್ಮ ಸಾಹಿತ್ಯವನ್ನು ಸರಿಯಾಗಿ, ಸ್ಪುಟವಾಗಿ ಉಪಯೋಗಿಸಿಕೊಂಡರು. ಸಂಸ್ಕಾರ, ಭವ , ಭಾರತೀಪುರ , ಸೂರ್ಯನಕುದುರೆ , ಮೌನಿ , ಆಕಾಶ ಮತ್ತು ಬೆಕ್ಕು , ಅವಸ್ತೆ , ಇವೆಲ್ಲ ನಾನು ಓದಿದ ಅವರ ಕೆಲವು ಪುಸ್ತಕಗಳು , ಇವು ಕೇವಲ ಕತೆಗಳು ಮಾತ್ರ ಆಗಿರಲಿಲ್ಲ. ನಿಜಕ್ಕೂ ಆ ಕೃತಿಗಳು ತತ್ವ , ಹೋರಾಟ , ವಿಡಂಬನೆ, ವಿಚಾರಗಳ ಕಣಜಗಳೆ ಆಗಿದ್ದವು. ಈ ಎಲ್ಲಾ ಕೃತಿಗಳು ನನ್ನ ಮೇಲೆ ಅದೆಷ್ಟು ಪರಿಣಾಮ ಬೀರಿದ್ದವೆಂದರೆ ನನಗೆ ಮೂರ್ತಿಯವರು ಅಂದಿನಿಂದ ಮಾನಸ ಗುರುಗಳೇ ಆಗಿ  ಬಿಟ್ಟರು.

               ಕೇವಲ ಸಾಹಿತ್ಯಕಾರ ಮಾತ್ರ ಆಗಿರದ ಮೂರ್ತಿಯವರು ಒಬ್ಬ ಹೋರಾಟಗಾರ ಕೂಡ ಹೌದು. ಸಾಹಿತ್ಯದಲ್ಲೂ ಹಾಗು ನಿಜ ಜೀವದಲ್ಲೂ ತಮ್ಮನ್ನು ತಮ್ಮದೇ ಆದ ರೀತಿಯಲ್ಲಿ ಅನೇಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಸಿಕ್ಕ ಅವಕಾಶ, ವೇದಿಕೆಗಳನ್ನ ಅವರು ತಮ್ಮ ಹೋರಾಟಗಳಿಗೆ ಸರಿಯಾಗಿಯೇ ಉಪಯೋಗಿಸಿಕೊಂಡರು. ಅರಣ್ಯ, ನದಿ ಒತ್ತುವರಿಗಳು, ಗಣಿ ಹೋರಾಟಗಳು , ಸಮಾಜದಲ್ಲಿನ ಜಾತಿ ಪದ್ದತಿ, ರಾಜಕೀಯ ವ್ಯವಸ್ತೆ  ಹಾಗು ಸಮಾಜವಾದ ಚಳುವಳಿಗಳಲ್ಲೂ ಸಹ ಮೂರ್ತಿಯವರು ಸಕ್ರಿಯಾವಾಗಿ ತೊಡಗಿಸಿಕೊಂಡಿದ್ದರು.

            ಸಾಂಪ್ರದಾಯಿಕ ಸಾಹಿತಿಗಳಂತೆ ಒಂದೇ ಸಿದ್ದಾಂತ , ಒಂದೇ ಯೋಚನೆ , ಒಂದೇ ನಿಲುವುಗಳಿಗೆ ತಮ್ಮನ್ನು ತಾನು ಎಂದೂ ಅಂಟಿಸಿಕೊಳ್ಳದ ಮೂರ್ತಿಯವರು , ಹೊಸ ಚಿಂತನೆಗಳಿಗೆ , ಹೊಸ ಯೋಚನೆಗಳಿಗೆ , ಹೊಸ ವಿಚಾರಗಳಿಗೆ  ಬಹುವಾಗಿ ಸ್ಪಂದಿಸುತ್ತಿದ್ದರು. ಒಳ್ಳೆಯ ವಿಷಯಗಳನ್ನು ಸದಾ ಒಪ್ಪುತ್ತಿದ್ದರು. ಕೆಲವು ಸಾಂಪ್ರದಾಯಿಕ ಸಿದ್ದಾಂತಗಳನ್ನು ಅಷ್ಟೇ ಕಟುವಾಗಿ ಖಂಡಿಸಿ, ವಾದ ವಿವಾದಗಳ ನಂತರ ಅದೇ ವಿಷಯವನ್ನು ಒಪ್ಪುತಿದ್ದರು. ಮನಸ್ಸಿನ್ನಲ್ಲಿರುವುದನ್ನೇ ತಾವು ಸದಾ ಮಾತಾಡುತ್ತಿದ್ದರು.  ಒಳಗೊಂದಾಗಲಿ-ಹೊರಗೊಂದಾಗಲಿ ಎಂದು ಅವರು ಮಾತನಾಡುತ್ತಿರಲಿಲ್ಲ. ಯಾವುದೇ ವಿಷಯಗಳನ್ನು ಚಿಂತನ-ಮಂಥನಗಳಿಲ್ಲದೆ ಒಪ್ಪಿಕೊಳ್ಳುವ ಮನಸ್ಸು ಕೂಡ ಅವರದ್ದಾಗಿಲಿಲ್ಲ .

            ಒಬ್ಬ ದೊಡ್ಡ ಮಾನವತವಾದಿಯಾಗಿ, ಸಮಜಾವಾದಿಯಾಗಿ,  ಬರಹಗಾರನಾಗಿ , ನಮ್ಮವರೇ ಆಗಿ,  ಮೂರ್ತಿಯವರು ನಮ್ಮನ್ನು ಒಂದಲ್ಲ ಒಂದು ರೀತಿಯಾಗಿ ಯೋಚನೆಗಳಿಗೆ ತಳ್ಳಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಅವರು ಪ್ರಭಾವಿಸಿದ್ದಾರೆ ಕೂಡ. ಕನ್ನಡಕ್ಕೆ ಅಪಾರ ಹೆಸರು ತಂದಿದ್ದಾರೆ . ಕನ್ನಡ ಹಾಗು ಸಾಹಿತ್ಯಕ್ಕೆ ದುಡಿದಿದ್ದಾರೆ. ಇಂತಹ ವ್ಯಕ್ತಿ ನಮ್ಮನ್ನು ಅಗಲಿರುವುದು ನಿಜಕ್ಕೂ ಒಂದು ದುಃಖದ ಸಂಗತಿ. ಇಂಥವರು ಇನ್ನುಮುಂದೆ ನಮ್ಮೊಂದಿಗೆ ಇರುವುದಿಲ್ಲ ಎಂಬುದು ಎಷ್ಟು ಕಹಿ ಸತ್ಯವೋ , ಅವರ ಚಿಂತನೆಗಳು, ಆಲೋಚನೆಗಳು ಮಾತ್ರ ಸಮಾಜದಿಂದ ದೂರವಾಗುವುದಿಲ್ಲವೆಂಬುದು ಒಂದು ಸಿಹಿ ಸತ್ಯ .  ದೇವರು ಆ ಅನಂತ ಮೌನಿಯ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ , ನನ್ನ ಮಾನಸು ಗುರುವಿಗೆ ನನ್ನ ಅನಂತ ನಮನಗಳು..... 

ನಿಮಗಾಗಿ 
ನಿರಂಜನ್