ಗುರುವಾರ, ಆಗಸ್ಟ್ 4, 2011

ಸಂಭ್ರಮದ ಆ ಪಂಚಮಿ......

                                                                   ನಾಗರ ಪಂಚಮಿ

ನಾಗರ ಪಂಚಮಿ ನಾಡಿಗೆ ದೊಡ್ಡದು ಅಣ್ಣ ಬರಲಿಲ್ಲ ಕರೆಯಾಕಾ, ಅಣ್ಣ ಬರಲಿಲ್ಲ ತಂಗಿಯ ಕರೆಯಾಕಾ……. ಎಂದು ಇನ್ನೂ ನಾಗರ ಪಂಚಮಿ ಒಂದು ವಾರವಿದ್ದರೂ, ಪ್ರತಿದಿನವೂ ವಿವಿಧ್ಭಾರತಿ ಹಾಗು ಧಾರವಾಡ ರೇಡಿಯೋ ಸ್ಟೇಷನ್ಗಳಲ್ಲಿ  ಬರುತ್ತಿದ್ದ ಅದ್ಭುತವಾದ ಆ ಜಾನಪದ ಹಾಡು,  ಅದೇ ರೀತಿ  ಹಬ್ಬದ  ಹಿಂದಿನ ಒಂದು ಭಾನುವಾರ DD ಒಂದರಲ್ಲಿ  ಬಂದಿರುತ್ತಿದ್ದ ಕಪ್ಪು-ಬಿಳುಪು ಕನ್ನಡ ಚಲನಚಿತ್ರ, ಅದು ನಾಗ ಮಹಾತ್ಮೆಯೋ , ನಾಗ ಕನ್ಯೆಯೋ  ಅಥವಾ ನಾಗ ದೇವತೆಯೋ  ನಮಗೆ ಮುಂಬರುವ ನಾಗರ ಪಂಚಮಿ ಹಬ್ಬದ ಮುನ್ಸೂಚನೆ ನೀಡಿ ಹಬ್ಬಕ್ಕೊಸ್ಕರ ಕಾಯುವಂತೆ ಮಾಡುತ್ತಿದ್ದವು. ಹುಣಸೆ ಮರದಲ್ಲಿ ಎಳೆ ಹುಣಸೇಕಾಯಿ, ಆಗ ತಾನೇ ಇಡಿದು ಬಿಟ್ಟಿರುತ್ತಿದ್ದ ಆಷಾಡದ ಜಿಟಿ ಜಿಟಿ ಮಳೆ, ಹೊಸದಾಗಿ ಮದುವೆಯಾಗಿ ಬಂದಿರುವ ಹೆಣ್ಣುಮಕ್ಕಳ ತವರಿಗೆ ತೆರಳುವ ಸಂಬ್ರಮ, ಎಲ್ಲಿ ನೋಡಿದರೂ ಕೇಳಿದರು ಪಂಚಮಿ ಹಬ್ಬದ ಮಾತುಗಳು, ಬೇರೆಯ ತರಹದ ವಾತಾವರಣವನ್ನೇ ಸೃಷ್ಟಿ ಮಾಡುತ್ತಿದ್ದವು. ಈ ಎಲ್ಲಾ ಸಡಗರಗಳು ಹಬ್ಬದ ವಾತಾವರಣವನ್ನು ವಾರಕ್ಕೂ ಮೊದಲೇ  ನಮ್ಮ ಕಣ್ಣುಮುಂದೆ ತಂದು ಬಿಡುತ್ತಿದ್ದವು.

           ಮನೆ ಮಂದಿಯಲ್ಲ ಹಬ್ಬಕ್ಕೆ ಬೇಕಾದ ಸಾಮಾನು ಸರಂಜಾಮುಗಳನ್ನೂ ಜೋಡಿಸಿಕೊಳ್ಳುವುದರ ಕಡೆ ಗಮನ ನೀಡುತ್ತಿದ್ದರು, ತವರೂರಿಗೆ ಬರಲು ಅಕ್ಕ-ತಂಗಿಯರು  ಹಾತೊರೆಯುತ್ತ ಇದ್ದರು, ಮನೆಯಲ್ಲಿ ಬೆಲ್ಲ, ಶೆಂಗಾ, ಕಡ್ಲೆ, ಎಳ್ಳು, ಹೆಸರುಕಾಳು ಇನ್ನೂ ಹತ್ತು ಹಲವು ಧಾನ್ಯಗಳನ್ನು ಜೋಡಿಸಿಕೊಂಡು, ನಾಗರ ಪಂಚಮಿಗೆ ವಿಶೇಷ ಅಡುಗೆ, "ಉಂಡೆಗಳನ್ನು" ಮಾಡಲು ದೊಡ್ಡವರೆಲ್ಲ  ಅಣಿಯಾಗುತ್ತಾ, ನಾಡಿಗೆ ದೊಡ್ಡ ಹಬ್ಬ ನಾಗರ ಪಂಚಮಿಯನ್ನು ಹಿರಿಯರೆಲ್ಲ ಅವರದೇ ಆದ ರೀತಿಯಲ್ಲಿ ಸ್ವಾಗತಿಸುತ್ತಿದ್ದರು. ಚಿಕ್ಕವರಾಗಿದ್ದ ನಾವು ನಮ್ಮ ತುಂಟ ತನದಿಂದ , ಶೆಂಗಾ ಮತ್ತು ಬೆಲ್ಲದ ವಾಸನೆ ಇಡಿದು ಅವುಗಳನ್ನು ಮನೆಯ ಯಾವ ಡಬ್ಬದಲ್ಲೂ ಬಚ್ಚಿಟ್ಟರು ಬಿಡದೆ, ಇಲಿಗಳು ಹುಡುಕಿ-ಹುಡುಕಿ ತಿನ್ನುವ ಹಾಗೆ , ಕದ್ದು-ಕದ್ದು, ನಮ್ಮ ಮೊಣಕಾಲುದ್ದದ ಚಡ್ಡಿ ಮತ್ತು ಅಂಗಿ ಜೇಬುಗಳಲ್ಲಿ ತುಂಬಿಸಿಕೊಂಡು, ಕಣದಲಿದ್ದ ಹುಣಸೇಮರ ಅಥವಾ ಬೇವಿನ ಮರದ ಕೆಳಗೆ ಕುಳಿತು, "ನಾವು ಈ ಮರದ ಯಾವ ಕೊಂಬೆಗೆ ಈ ಬಾರಿ ಹಬ್ಬದ ಜೋಕಾಲಿ ಹಾಕಬೇಕು,,, ಹಗ್ಗವನ್ನು ಯಾರ ಮನೆಯಿಂದ ತರಬೇಕು,, ನನಗೆ ಶೆಂಗಾ ಉಂಡೆ ಅಂದರೆ ತುಂಬಾ ಇಷ್ಟ, ನಿನಗೆ ಯಾವ ಉಂಡೆ ಇಷ್ಟ ? "  ಅಂತೆಲ್ಲಾ ಸ್ನೇಹಿತರೊಂದಿಹೆ ಮಾತುಗಳಾಡುತ್ತಾ, ಕದ್ದು ತಂದ ಶೆಂಗಾ-ಬೆಲ್ಲಗಳನ್ನು ಸ್ನೇಹಿತರಿಗೆ  ಹಂಚಿ, ಶೆಂಗಾ ತಿಂದ ಮೇಲೆ ದೊಡ್ಡ ಬೆಲ್ಲದ ಚೂರುಗಳನ್ನು ನಮ್ಮ ಬಾಯಿಯ ಎಡ ಅಥವಾ ಬಲಗದೆ  ಇಟ್ಟುಕೊಳ್ಳುತ್ತಿದ್ದದ್ದು, ಅದರ ಸವಿಯನ್ನು ನಿಧಾನವಾಗಿ ಸವಿಯುತ್ತಾ ಸುರ್-ಸುರ್ ಅಂತ ಬೆಲ್ಲದ  ಸಿಹಿಯನ್ನು ಹೀರುತ್ತ ನಾಗರಪಂಚಮಿಯನ್ನು ನಾವು ಕೂಡ ಸ್ವಾಗತಿಸುತ್ತಾ ಇದ್ದದ್ದು ತಕ್ಷಣ ನನ್ನ ಕಣ್ಣ ಮುಂದೆಯೇ ಬಂದಂತಾಯಿತು ನಮ್ಮ ಸ್ನೇಹಿತ ಸುರೇಶ್ ಪಾಟೀಲರು ಆಫೀಸಿನಲ್ಲಿ  "ಏನೋ ನಿರಂಜನ್ ಪಂಚಮಿ ಜೋರ  " ಅಂತ ಕೇಳಿದ ಕೂಡಲೆ. 
       
             ಇತ್ತೀಚ್ಚಿನ ಕೆಲಸದ ಒತ್ತಡಗಳಲ್ಲಿ, ಬೆಂಗಳೂರಿನ ಜನಗಳ ಮದ್ಯ ಈ ಹಬ್ಬದ ಸಂಭ್ರಮ ನಮ್ಮ ಮನೆಯಲ್ಲೂ ಕೂಡ ಕಡಿಮೆ ಆಗಿದೆ ಅನ್ನೋ ಭಾವನೆ ನನ್ನ ಮಸಿಗ್ಗೆ ಬಂದಿದೆ, ಇಲ್ಲಿಯ ಯಾಂತ್ರಿಕ ಬದುಕಿನಲ್ಲಿ ಬಹಳಷ್ಟು ನಾವು ಈಗಾಗಲೇ ಕಳೆದುಕೊಂಡಿರುವ ಪಟ್ಟಿಗೆ, ನಾಗರ ಪಂಚಮಿಯ ಹಬ್ಬದ ಸಂಭ್ರಮವೂ ಸೇರಿದೆ ಅಂದರೆ ತಪ್ಪು ಆಗಲ್ಲಿಕ್ಕಿಲ್ಲ. ಇದನ್ನೆಲ್ಲ ನೆನೆಯುತ್ತ ಮತ್ತೆ ನನ್ನ ಹಬ್ಬದಾಚರಣೆಯ ನೆನಪುಗಳ ಗಂಟು ಬಿಚ್ಚು-ಬಿಚ್ಚುತ್ತಾ, ನಮ್ಮ ಕಡೆ ನಾವು ಆಚರಿಸುತ್ತಾ ಇದ್ದ ನಾಗರಪಂಚಮಿ ಹಬ್ಬದ ಬಗ್ಗೆ ಒಂದಿಷ್ಟು ಹೇಳ ಬಯಸುತ್ತೇನೆ.

       ನಮಗೆಲ್ಲ ಗೊತ್ತಿರುವ ಹಾಗೆ ನಾಗರಪಂಚಮಿಯ ಆಚರಣೆ ನಮ್ಮ ಉತ್ತರ ಹಾಗೂ ಮಧ್ಯ ಕರ್ನಾಟಕದ ಭಾಗದಲ್ಲಿ ಬಹು ಸಂಭ್ರಮದಿಂದ ಕೂಡಿರುತ್ತದೆ,ಪಂಚಮಿ ಹಬ್ಬ ಪ್ರಕೃತಿಯಲ್ಲಿ ಇರುವ ಒಂದು ಅತ್ಯಂತ ಸುಂದರವಾದ ಒಂದು Creature ಅನ್ನು ಪೂಜಿಸುವ ಒಂದು ಹಬ್ಬ, ನಾವು ನಮ್ಮ ಸುತ್ತ ಮುತ್ತಲಿನ ಪ್ರಾಣಿಗಳನ್ನು ಪ್ರೀತಿಸುತ್ತೇವೆ ಎಂಬುದರ ಸೂಚಕವಾಗಿ ಹಾಗು ನಮಗೆ ಈ ರೀತಿಯ ಪ್ರಾಣಿಗಳ ಮೇಲೆ ಪ್ರೇಮ ಮನೋಭಾವ ಬರಲೆಂದು ಈ ಹಬ್ಬದ ಆಚರಣೆಯನ್ನು ಶುರುಮಾಡಿದ್ದಾರೆ ನಮ್ಮ ಹಿರಿಯರು ಎಂಬುದು ನನ್ನ ಅಭಿಪ್ರಾಯ. ಪಂಚಮಿ ಹಬ್ಬ ಇನ್ನೂ ನಾಳೆ ನಾಡಿದ್ದು  ಇದೆ ಎನ್ನುವಾಗಲೇ ಮನೆಯಲ್ಲೆಲ್ಲಾ  ಹೆಣ್ಣು ಮಕ್ಕಳು ಹಬ್ಬಕ್ಕೆ ಮನೆ ಬಳಿಯುವುದು, ಮಳೆಗಾಲವಾದ್ದರಿಂದ ಅತೀ ಜಾಗರೂಕರಾಗಿ  ಕಟ್ಟಿಗೆ ಜೋಡಿಸಿಕೊಳ್ಳುವುದು, ಉಂಡೆಗಳನ್ನು  ತಯಾರಿಸಲು ಬೇಕಾಗುವ ಕಾಳು-ಕಡಿಗಳ ಸ್ವಚ್ಛ ಮಾಡುವುದರಲ್ಲಿ ಮಗ್ನರಾಗಿರುತ್ತಿದ್ದರು, ಶೆಂಗಾ, ಕಡಲೆ, ಎಳ್ಳುಗಳನ್ನು ಹದವಾಗಿ ಉರಿದುಕೊಂಡು, ಮನೆಯಲ್ಲಿ ಇರುತ್ತಿದ್ದ ಒಳಕಲ್ಲುಗಳನ್ನು ಶುದ್ದಗೊಳಿಸಿ , ತುಂಬಾರೆ ಮತ್ತು ಒಣಕೆಗಳನ್ನು ಉಪಯೋಗಿಸಿ ಉರಿದ ಧಾನ್ಯಗಳನ್ನು ನಯವಾಗಿ ಪುಡಿಮಾಡಿ, ಬಿಸಿ-ಬಿಸಿ ಅಚ್ಚುಬೆಲ್ಲದ ಗಟ್ಟಿ ಪಾಕವನ್ನು ಆ ಮಿಶ್ರಣಗಳಿಗೆ ಹಾಕಿ ಕಲುಸುವಾಗ ಬರುತ್ತಿದ್ದ ಅದರ ವಾಸನೆ ನಿಜವಾಗಿಯೂ ನಮ್ಮ ಬಾಯಲ್ಲಿ ನೀರೂರಿಸುತ್ತಾ ಇದ್ದವು.
          
                ನಮ್ಮ ಕಣ್ಣ ಮುಂದೆಯೇ ಅವರು ಅವುಗಳನ್ನು ದುಂಡು ದುಂಡಾಗಿ ಉಂಡೆಯ ಆಕಾರ ಕೊಡುತ್ತಿರುವಾಗ ಏನಾದರೂ ಮಾಡಿ ಅಮ್ಮ,ಅಜ್ಜಿ,ಅತ್ತೆಗಳಿಗೆ ಗೊತ್ತಾಗದಂತೆ ಒಂದು ಉಂಡೆಯನ್ನಾದರೂ ಕದ್ದು ತಿಂದು ಬಿಡಬೇಕು ಎನ್ನುವ ಆಸೆ ಒಂದು ಕಡೆಯಾದರೆ, ಮೊದಲೇ ನಾಗರ ಪಂಚಮಿ, ಮೊದಲು ಹಬ್ಬದ ಅಡುಗೆಗಳು ನಾಗಪ್ಪನಿಗೆ ಸಲ್ಲಲೇ ಬೇಕು, ನಾವೇನಾದ್ರೌೂ ಕದ್ದು ತಿಂದರೆ ಎಲ್ಲಿ ನಮಗೆ ನಾಗಪ್ಪ ಹೊಲಕ್ಕೆ ಹೋಗುತ್ತಿರುವಾಗ, ಕೆರೆ ಏರಿ ಮೇಲೆ ಹೋಗುತ್ತಿರುವಾಗ, ಅಲ್ಲೇ ಆಲದ ಮರದ ಕೆಳಗೆ ಇರುವ ಚೌಡಮ್ಮ ದೇವರ ಹಾವು ನಮ್ಮನ್ನು  ಕಚ್ಚಿ ಬಿಡುತ್ತೋ ಎನ್ನೋ ಭಯ ಇನ್ನೋದು ಕಡೆ. ಬೇಗ ಹಬ್ಬದ ದಿನ ಯಾವಾಗ ಬರುತ್ತೋ ?  ಪೂಜೆ ಎಷ್ಟು ಹೊತ್ತಿಗೆ ಆಗುತ್ತೋ ? ಉಂಡೆಗಳನ್ನು ನಾವು ಯಾವಾಗ ತಿನ್ನುತ್ತೇವೋ ? ಅಂತ ಅಂದುಕೊಳ್ಳುತ್ತ ಇರುವಂತೆಯೇ ದೊಡ್ಡವರು ಎಷ್ಟೇ ನಾಗಪ್ಪನ ಭಯ ಇಟ್ಟರು, ಸ್ನೇಹಿತರೋ  ಅಥವಾ ನಮ್ಮ ಮಾವನ ಮಕ್ಕಳುಗಳು ಕದ್ದು ತಂದೆ ಬಿಡುತ್ತಿದ್ದ ಉಂಡೆಗಳನ್ನು ಯಾವ ಹೆದರಿಕೆಯೂ ಇಲ್ಲದೇ ತಿಂದು ಬಿಡುತ್ತಾ ಇದ್ದೆವು. ನಾನು ಮಾತ್ರ ಎಂದು ಕದಿಯುತ್ತಿರಲಿಲ್ಲ, ಏಕೆ ಅಂದ್ರೆ ನಮ್ಮ ಅಮ್ಮ ಸಾಕಷ್ಟು ಭಯಾನಕವಾಗಿ ನಾಗಪ್ಪನ ಶಾಪಗಳನ್ನು ವರ್ಣಿಸಿ ನಮ್ಮಲ್ಲಿ ಎಲ್ಲಿಲ್ಲದ ಭಯ ಮೂಡಿಸುತ್ತಿದ್ದರು,,ಇಷ್ಟೆಲ್ಲಾ ಭಯವಿದ್ದರು ನಮ್ಮ ಅಣ್ಣ ವೇದು ಬಂದದ್ದು ಬರಲಿ, ಆದದ್ದು ಆಗಲಿ, ನಾಗಪ್ಪ ಯಾವ ಶಾಪವನ್ನಾದರೂ ಕೊಡಲಿ, ಎಲ್ಲಿಗೆ ಬೇಕೋ ಅಲ್ಲಿಗೆ ಕಚ್ಚಲಿ ಎಂದು , ಬೆಲ್ಲವನ್ನು ಕದ್ದು ತನ್ನ ಸ್ವಾಟೆಯಲ್ಲಿ ( ಬಲ ಅಥವಾ ಎಡ ದವಡೆ ) ಇಟ್ಟುಕೊಂಡು ಅದರ ರಸವನ್ನು ಹೀರುತ್ತಿದ್ದು ನೋಡಿದರೆ ಎಂತವರು ಕೂಡ ಇವನಿಗೆ ಏನೋ ಹಾಗಿ ಗಲ್ಲಗಳು ದಪ್ಪವಾಗಿವೆ ಅಂದು ಕೊಳ್ಳುತ್ತಿದ್ದರು. ಆದರೆ ಅವ ಅಲ್ಲಿ ತುಂಬಿಕೊಳ್ಳುತ್ತಿದ್ದದ್ದು ಬರಿ  ಬೆಲ್ಲ , ಬರಿ ಬೆಲ್ಲ.
             ಸಾಮಾನ್ಯವಾಗಿ ಹಬ್ಬದ ಹಿಂದಿನ ಒಂದು ದಿನವನ್ನು ರೊಟ್ಟಿ ಹಬ್ಬವೆಂದು ಆಚರಿಸುತ್ತಾ ಇದ್ದ ನಾವು, ಆ ದಿನ ಬರಿ ಬಿಳಿ ಜೋಳದ ರೊಟ್ಟಿ, ಕಾಳು ಪಲ್ಯಗಳು, ಚಟ್ನಿ ಪುಡಿಗಳನ್ನು ಮಾತ್ರ ತಿನ್ನುತ್ತಾ ಇದ್ದೆವು, ಆ ದಿನದ ರೊಟ್ಟಿಯ ವಿಶೇಷತೆ ಎಂದರೆ ರೊಟ್ಟಿ ಮಾಡುವಾಗ ನಮ್ಮ ಅಮ್ಮ ಎಳ್ಳನ್ನು ರೊಟ್ಟಿಯ ಮೇಲೆ ಉದುರಿಸಿ ರೊಟ್ಟಿ ಸುಡುತ್ತಿದ್ದರು. ಅವು ಸಾಮಾನ್ಯ ರೊಟ್ಟಿಗಿಂತ  ಒಂದು ರೀತಿಯ ಬೇರೆಯೇ ರುಚಿಯನ್ನು ಕೊಡುತ್ತಾ ಇದ್ದವು, ಮಳೆಗಾಲದ ದಿನಗಳಲ್ಲೊಂತು , ನಸುಗತ್ತಲ ಅಡುಗೆ ಮನೆ, ಸೌದೆ ಒಲೆಗೆ ಅಂಟಿಕೊಂಡಿರುತ್ತಿದ್ದ ನೀರಿನ ಅಂಡೆ, ಅಮ್ಮ ಅಲ್ಲಿ ರೊಟ್ಟಿ ಮಾಡಿ ಒಲೆಯ ಮೇಲೆ ಬಿಸಿಯಾಗಿರಲೆಂದು ಜೋಡಿಸಿ ಇಟ್ಟಿರುತ್ತ ಇದ್ದರು, ಅಂಡೆಯ ಬಿಸಿನೀರಿನಲ್ಲಿ ಕೈ ಕಾಲು ತೊಳೆದು, ಅಲ್ಲೇ ಪಕ್ಕಕ್ಕೆ ನಮಗೂ ಒಲೆಯ ಜಳ ಬಡಿಯುವಂತೆ ಕುಳಿತುಕೊಂಡು , ನಾವು ಒಂದೊಂದೇ-ಒಂದೊಂದೇ ಜೋಡಿಸಿದ ರೊಟ್ಟಿ ಎಳೆದುಕೊಂಡು ಅದೆಷ್ಟು ತಿಂದಿರುತ್ತ ಇದ್ದೆವು ಎಂದು ನಾವು ಲೆಕ್ಕವನ್ನೇ ಇಟ್ಟಿರಲಿಲ್ಲ. ನಮ್ಮ ಅಣ್ಣಂದಿರೊಂದಿಗೆ  ನಾನು ಪೈಪೋಟಿಗೆ ಇಳಿಯುತಿದ್ದು ಈ ತಿನ್ನುವ ವಿಷಯದಲ್ಲಿ ಮಾತ್ರ , ಆಗ  ಆ ಅಡುಗೆ ಮನೆ ನನಗೆ ಒಂದು ಸ್ಪರ್ಧಾತ್ಮಕ  ಜಗತ್ತಿನಂತೆಯೇ  ಭಾಸವಾಗುತ್ತಿತ್ತು,

           ಹಬ್ಬದ ದಿನದಂದು , ಬೆಳ್ಳ - ಬೆಳಗ್ಗೆ ಸ್ನಾನ ಮಾಡಿ,ನಿಜವಾದ ಉತ್ತದ ಮಣ್ಣಿನಿಂದಲೇ ಮಾಡಿದ ನಾಗಪ್ಪನೆ ಶ್ರೇಷ್ಠ ಇಂದು ನಂಬಿದ್ದ ನಾವು, ಬೆಳ್ಳ ಬೆಲ್ಲಿಗ್ಗೆಯೇ  ಹೊಲಗಳಲ್ಲಿ ಹೋಗಿ , ಹೊಲಗಳ ಬದಗಳಲ್ಲಿ  ಇರುತ್ತಾ ಇದ್ದ  ಉತ್ತದ ಮಣ್ಣನ್ನು ತಂದು, ಅದು ಜಿಗಟಾಗಲೆನ್ದು  ಸ್ವಲ್ಪ ಹತ್ತಿ ಸೇರಿಸಿ ಹದವಾಗಿ ನೀರಿನೊಂದಿಗೆ ಕುಟ್ಟಿ-ಕಲೆಸಿ, ಒಂದು ಸಣ್ಣ ಉತ್ತ, ಮೂರು ನಾಲ್ಕು ಹಾವುಗಳನ್ನು ಒಂದು ಸಣ್ಣ ಪ್ಲೇಟಿನಲ್ಲಿ ಎದ್ದು ಬರುವಂತೆ ಮಾಡಿ, ಅದರ ಕಣ್ಣುಗಳಿಗೆ ಹುರಿದ ಬಿಳಿ ಜೋಳದ ಹರಳುಗಳನ್ನು ಇಟ್ಟು, ತೇಟ್ ನಾಗಪ್ಪಗಳೆ ಎಡೆ ಬಿಚ್ಚಿ ಕುಳಿತಿರುವಂತೆ , ತಮ್ಮ ಕುಶಲತೆಯಿಂದ ಮಣ್ಣಿನ ನಾಗ ದೇವತೆಗಳನ್ನು ಮಾಡುತಿದ್ದರು ನಮ್ಮ ಕಲಾವಿದ ಅಣ್ಣಂದಿರು, ನಂತರ ಅವುಗಳಿಗೆ ಪೂಜೆ ಮಾಡಿ, ಮನೆಯವರೆಲ್ಲ ಮೂರು-ಮೂರು ಚಮಚ ಹಾಲು-ತುಪ್ಪ ಹಾಕಿ , ನಾಗಪ್ಪನಿಗೆ ಹಾಲು ಎರೆದವೆಂದು,  ಇನ್ನೂ ನಮಗೆ ಉಂಡಿ ತಿನ್ನಲು ಯಾವ ಭಯವೂ ಇಲ್ಲವೆಂದು, ದೈರ್ಯದಿಂದ ಅಮ್ಮನಿಗೆ ಉಂಡಿ ಕೋಡಮ್ಮ ಈಗಲಾದರೂ ಎಂದು ಗೋಗರೆಯುತ್ತಾ ಇದ್ದೆವು.
       
              ನನಗೊಂತೂ ಬರಿ ಶೆಂಗಾ ಮತ್ತು ಎಳ್ಳು  ಉಂಡೆಗಳು  ಮಾತ್ರ ತುಂಬಾ ಪ್ರಿಯವಾಗಿದ್ದರಿಂದ , ಅವು ಖಾಲಿ ಆಗುವವರೆಗೂ ಅವನ್ನೇ ತಿನ್ನುತ್ತಾ ಇದ್ದೇ. ಅಷ್ಟೊತ್ತಿಗೆ ನಮ್ಮ ಅಜ್ಜಿ ನಮಗೆ ಕೊಬ್ಬರಿ ಬಟ್ಟಲುಗಳಿಗೆ ಎರೆಡು ತೂತುಗಳನ್ನು ಮಾಡಿ, ದಾರ ಪೋಣಿಸಿ, ಕೊಬ್ಬರಿ ಬಟ್ಟಲು ಆಡಲು ನಮಗೆ ಕೊಡುತ್ತಾ ಇದ್ದರು,,, ಸ್ವಲ್ಪ ಸ್ವಲ್ಪವೇ ಕೊಬ್ಬರಿ ಬಟ್ಟಲುಗಳು,ಸಣ್ಣ-ಸಣ್ಣವಾಗಿ ಬಿಡುತ್ತಾ ಇದ್ದವು ನಮ್ಮ ಕೈ-ಬಾಯಿಗೆ ಸಿಕ್ಕು, ಮನೆಯ ನಡು ತೊಲೆಗೆ ಹಾಕುತ್ತಿದ್ದ  ಸಣ್ಣ-ಸಣ್ಣ ಜೋಕಾಲೆಗಳು, ಕಣದಲ್ಲಿ ಹುಣಸೇ ಮರಕ್ಕೆ  ಹಾಕುತ್ತಾ ಇದ್ದ ದೊಡ್ಡ-ದೊಡ್ಡ ಜೋಕಾಲಿಗಳು, ನಾವು ಜೋಕಾಲೆಗಳನ್ನು ಜೀಕುತಿದ್ದ ರೀತಿ, ಒಂದು ಕೈ ಅಲ್ಲಿ ಉಂಡಿ, ಮತ್ತೊಂದು ಕೈಲಿ ಮಾತ್ರ ಹಗ್ಗ ಇಡಿದು ಜೋಕಾಲಿ ಜೀಕುವಾಗ ಇನ್ನೊಬ್ಬ ಕೆಳಗಿಂದ “ ಲೇಯ್ ಈಗ ನೀ ಬೀಳ್ತಿಯ ಹುಷಾರು “ ಎಂದರು, ನಮಗೆ ಬೀಳುವ ಬಯವೇ ಇರುತ್ತ ಇರಲಿಲ್ಲ ಆಗ. ಹಬ್ಬ ಮುಗಿದು ಹಲವು ದಿನಗಳವರೆಗೂ  ನಮಗೆ ಬರಿ ಉಂಡೆಗಳನ್ನು ತಿನ್ನುವುದೇ ಸಂಭ್ರಮ. ಸಂಬಂದಿಗಳ,ಸ್ನೇಹಿತರ ಮನೆಗಳಿಗೆ ಹೋಗಿ ನಮ್ಮ ಮನೆಗಳ ಉಂಡೆಗಳನ್ನು ಕೊಟ್ಟು, ಅವರು ನಮಗೆ ಕೊಟ್ಟ ಉಂಡೆಗಳನ್ನು ತಿನ್ನುತ್ತಾ , ಹಬ್ಬವನ್ನು ಮಜವಾಗಿ ಮೂರು-ನಾಲಕ್ಕು ದಿನ ಆಚರಿಸಿ, ಮುಗಿಸುತ್ತಾ ಇದ್ದೊಡನೆಯೇ,, ಕೆರೆಯಂಗಳದ ಎರೆಮಣ್ಣನ್ನು ತಂದು ಮುಂಬರುವ ಗಣೇಶ ಹಬ್ಬಕ್ಕೆ ನಾವು ಟ್ರಯಲ್ ಅಂಡ್ ಎರರ್ ಗಣಪನನ್ನು ನಮ್ಮ ಕೈಯಲ್ಲಿಯೇ ಮಾಡು ಮಾಡುತ್ತಾ , ಮತ್ತೊಂದು ಹಬ್ಬಕ್ಕೆ ಅಷ್ಟೇ ಉತ್ಸಾಹದಿಂದ ಸಜ್ಜಾಗುತ್ತಾ  ಇದ್ದೆವು.

ನಿಮಗಾಗಿ 
ನಿರಂಜನ್ 

2 ಕಾಮೆಂಟ್‌ಗಳು:

  1. Special thanks to Ramakrish and Vijayalakshmi for giving me beautiful pics of delicious "UNDE" :D , thanks to Suresh patil and Kaaka for taking me to that festive mood :)

    ಪ್ರತ್ಯುತ್ತರಅಳಿಸಿ
  2. Nag panchami habba endare "hindu sampradaya habba"...edu "anna,thangi pavitravada sambandavanu olaparisutade..."
    akka athava thangi thana anna ,thammandira "shreyasu koruva habba.".
    avaru "sada arogya,aishwarya koodi..santoshavanu neeru" mathu "sambanda gatti madu" endu naga devade namaskarisuvvaru.......

    ಪ್ರತ್ಯುತ್ತರಅಳಿಸಿ