" ನನ್ನವಳ ಆ ಬೆಳದಿಂಗಳು "
ಹುಣ್ಣಿಮೆಯ ರಾತ್ರಿ , ಆಫೀಸಿನಿಂದ ಮನೆಗ ಬಂದಾಗ ರಾತ್ರಿ ಸುಮಾರು 10.30 ರ ಸಮಯ, ಮನೆಗೆ ಬರುವ ಹಾದಿಯುದ್ದಕ್ಕೂ ಅವಳು ನನ್ನನ್ನು ಹಿಂಬಾಲಿಸಿ ಕೊಂಡೆ ಬಂದಿದ್ದಳು. ಬಹು ದೂರದಿಂದ, ದೊಡ್ಡ ದೊಡ್ಡ ಕಟ್ಟಡಗಳ ನಡುವಿನಿಂದ, ಮರಗಿಡಗಳ ನಡುವಿನಿಂದ ನನ್ನನ್ನು ಅವಳು ತಿನ್ನುವಂತೆಯೇ ನೋಡಿದ್ದಳು. ನನಗೂ ಅವಳು ತುಂಬಾ ಸುಂದರವಾಗಿ ಕಾಣುತ್ತಾ ಇದ್ದಳು, ಏಕೆಂದರೆ ಅದು ಅವಳ ರಾತ್ರಿ, ಪ್ರಕೃತಿಯು ಅವಳಿಗಾಗಿಯೇ ಮೀಸಲಿಟ್ಟ ರಾತ್ರಿ. ಸುಂದರವಾಗಿ ಕಾಣುವ ಅವಳು ಶುಭ್ರವಾದ ಬಿಳಿ ವಸ್ತ್ರ ಧರಿಸಿ, ದೂರದಿಂದಲೇ ನನ್ನನ್ನು ನೋಡುತ್ತಿದ್ದಾಗ ಸಹಜವಾಗಿಯೇ ನಾನು ಕೂಡ ಅವಳನ್ನು ಒಮ್ಮೆ ದಿಟ್ಟಿಸಿ ನೋಡಿ, ಅವಳ ಅಂದಕ್ಕೆ ಮರುಳಾಗಿ ಮನಸ್ಸಿನಲ್ಲೇ ಎಷ್ಟೊಂದು ಸುಂದರವಾಗಿ ಇರುವಳೆಂದೂ ಅಂದುಕೊಂಡಿದ್ದೆ ತಡ ನೋಡಿ, ಅವಳು ನನ್ನ ಬೆನ್ನು ಹತ್ತಿಯೆ ಬಿಟ್ಟಳು. ಅವಳ ಆ ಸೊಬಗಿಗೆ ಸೋಲದವರು ಯಾರು ಇಲ್ಲ ಅಂತ ನನಗೆ ಗೊತ್ತಿತ್ತು. ಅದೇ ರೀತಿ ನಾನು ಕೂಡ ಸೋತಿದ್ದೆ. ಆದರೆ ಒಮ್ಮೆ ಗುರಾಯಿಸಿದ್ದೆ ತಡ ಅವಳು ನನ್ನ ಬಿಡಲೇ ಇಲ್ಲ. ಅವಳ ನೇರ ನೋಟ ನನ್ನ ಮೇಲೆಯೇ ಇತ್ತು ಎಂದೆನಿಸುತ್ತಿತ್ತು. ಅಂತೂ ಇಂತೂ ಅವಳಿಂದ ತಪ್ಪಿಸಿಕೊಂಡು ಮನೆಗೆ ಸೇರಿದ್ದರು ಅವಳ ಗುಂಗಿನಲ್ಲೇ ಇದ್ದೆ. ಊಟ ಮಾಡುತ್ತಾ ಇರುವಾಗ ಮನೆಯ ಪೂರ್ವ ದಿಕ್ಕಿನ ದೊಡ್ಡ ಕಿಟಕಿಯಲ್ಲಿ ಪರದೆಯ ಹಿಂದೆಯೇ ಅವಳು ಬಚ್ಚಿಟ್ಟುಕೊಂಡು ನನ್ನ ಕಡೆ ಮತ್ತೆ ಕದ್ದು ಕದ್ದು ನೋಡುತಿದ್ದದ್ದು ಕಂಡಿತು. ಅವಳನ್ನು ನೋಡು ನೋಡುತ್ತಾ ನಾನು ಆ ದಿನ ಒಂದು ರೊಟ್ಟಿ ಜಾಸ್ತಿಯೇ ತಿಂದಿದ್ದೆ. ಪ್ರೀತಿಯಲ್ಲಿ ಬಿದ್ದವರಿಗೆ ಊಟ ಸೇರುವುದಿಲ್ಲ ಅಂತ ಕೇಳಿದ್ದೆ , ಆದರೆ ಅವಳ ಪ್ರೀತಿಯಲಿದ್ದ ನಾನು ಆ ದಿನ ಅವಳನ್ನು ನೋಡು ನೋಡುತ್ತಾ ಜಾಸ್ತಿನೇ ಊಟ ಮಾಡಿದ್ದೆ. ಊಟ ಮುಗಿಸಿ, ಹಾಸಿಗೆ ಹಾಸಿ , ದೀಪ ಆರಿಸಿ , ಕಿಟಕಿಯಲ್ಲಿದ್ದ ಅವಳನ್ನೇ ದಿಟ್ಟಿಸುತ್ತಾ ನಾ ಮಲಗಲು ಪ್ರಯತ್ನಿಸಿದಾಗ ಅವಳ ಆ ಹಾಲು ನಗೆಯ ಬೆಳಕು ನನ್ನ ಕಣ್ಣಿಗೆ ಕುಕ್ಕುತ್ತಾ ನನ್ನೇ ನೋಡು ಎಂದು ಅವಳು ಹೇಳಿದಂತೆ ಆಗುತ್ತಿತ್ತು. ಅವಳ ಆ ಬೆಳದಿಂದಳು ನನ್ನ ಮೇಲೆಲ್ಲಾ ಬಿದ್ದಿತ್ತು.
ಅವಳನ್ನೇ ನೋಡುತ್ತಿದ್ದ ನನಗೆ ಅದು ಯಾವಾಗ ನಿದ್ದೆ ಬಂದಿತೋ ನಾ ಅರಿಯೆ, ಮಾರನೆಯ ದಿನ ಮುಂಜಾನೆ ಎದ್ದಾಗ ಬೆಳಿಗ್ಗೆ 5 ಗಂಟೆ. ಕಿಟಕಿಯಲ್ಲಿ ರಾತ್ರಿ ಕಾಣುತ್ತಾ ಇದ್ದ ಅವಳು ಈಗ ಕಾಣಿಯಾಗಿದ್ದಳು. ಅವಳನ್ನೇ ನೆನೆಸಿಕೊಳ್ಳುತ್ತಾ ರಾತ್ರಿಯ ಆ ಅನುಭವವನು ನೆನೆದು ಅವಳಿಗೆ ನೀ ಅದೆಷ್ಟು ಸುಂದರ ಅಂತ ಮತ್ತೊಮ್ಮೆ ಮನಸ್ಸಿನಲೇ ಅಂದುಕೊಳ್ಳುತ್ತ, ನನ್ನ ಕೆಲಸಗಳನ್ನೆಲ್ಲ ಮುಗಿಸಿ, ಪ್ರತಿ ದಿನದಂತೆ ಹೊರಗೆ ಹೋಗಲು ಹೊರಟು ನಿಂತಾಗ 5.30 ಸಮಯವಿರಬಹುದು. ಕೈಯಲ್ಲಿ ಒಂದು ಲೋಟ ನೀರು ಇಡಿದು , ಭಾಗಿಲು ತೆಗೆದಾಕ್ಷಣ ತಣ್ಣನೆ ಗಾಳಿ ಬಾಚಿ ನನ್ನನ್ನು ತಬ್ಬಿದಾಗ " ಆಹಾ " ಎನ್ನುವಂತ ಸುಂದರ ಅನುಭವ. ಇದು ಮುಂಬರುವ ಸಂಕ್ರಾಂತಿಯ ಚಳಿಯ ಮುನ್ಸೂಚನೆ ಎಂದು ನನಗೆ ಅನ್ನಿಸಿತು. ಅದೇ ಕ್ಷಣ ನನ್ನ ಗಮನ ಹರಿದಿದ್ದು ಪಶ್ಚಿಮದಲ್ಲಿ ಮತ್ತೆ ನನ್ನನ್ನು ನೋಡಿ ನಗುತ್ತಿದ್ದ ನನ್ನ ಕಿಟಕಿಯಿಂದ ಕಾಣೆಯಾಗಿದ್ದ ಆ ನನ್ನ ಶಶಿಯ ಕಡೆ. ಅವಳು ರಾತ್ರಿ ಹೇಗೆ ಇದ್ದಳೊ ಹಾಗೆಯೇ ಕಾಣುತ್ತಿದ್ದಳು, ಸ್ವಲ್ವೂ ಬಳಲಿರಲಿಲ್ಲ. ಆದರೆ ರಾತ್ರಿ ಪೂರ್ವದಲ್ಲಿ ಇದ್ದವಳು ಈಗ ಪಶ್ಚಿಮದ ನೆತ್ತಿಯ ಮೇಲೆ ಮಿನುಗುತ್ತಿದ್ಡಳು.
ನನಗೋಸ್ಕರವಾಗಿಯೇ ಅವಳು ಕಾದಿದ್ದಳೇನೋ ಅನ್ನುವ ಅನುಭವ ಆ ಕ್ಷಣಕ್ಕೆ ನನಗೆ ಆಯಿತು. ಹಾಗೆ ಹೊರಾಂಡದಲ್ಲಿ ಅವಳನ್ನು ನೋಡುತ್ತಲೇ, ಚಳಿಯಲ್ಲಿ , ಕೈಲಿ ಇದ್ದ ನೀರನ್ನು ಕುಡಿದಾಕ್ಷಣ ಹಲ್ಲುಗಳು ಜುಮ್ಮ್ ಎಂದು ಮೈ ಮೇಲೆ ಚಳಿಗುಳ್ಳೆಗಳೆದ್ದವು . ಪಕ್ಕದ ಅಪಾರ್ಟ್‌ಮೆಂಟ್ ಮೇಲೆ "ಗುಟ್ರ್ ಗುಟ್ರ್ " ಅನ್ನುತ್ತಾ ಗಂಡು ಪಾರಿವಾಳ ಹೆಣ್ಣು ಪಾರಿವಾಳವನ್ನು ಸುತ್ತುವುದು, ದೂರದ ಮರದ ಮೇಲೆ ಕಾಗೇಯೊಂದು ಕಾ ಕಾ ಎಂದು ತನ್ನ ಬಳಗವನ್ನು ಕರೆಯುತ್ತಾ ಇದ್ದದ್ದು ಬಿಟ್ಟರೆ ಬೇರೆ ಯಾರು ಇರಲಿಲ್ಲ , ನನ್ನ ಮತ್ತು ಆ ಶಶಿಯನ್ನು ಬಿಟ್ಟು ಅಲ್ಲಿ. ಆಗ ಸಮಯ ಇನ್ನೂ ೫.೩೦ ಆಗಿದ್ದರಿಂದ , ಸಂಕ್ರಾಂತಿಯ ಚಳಿಯೂ ಜೋರಿದ್ದರಿಂದ ಖಗ ಸಂಕುಲವು ಇನ್ನೂ ಹೊರಗೆ ಬರದೇ ಸೂರ್ಯನ್ನನ್ನು ಕಾಯುತ್ತಿದ್ದವು ಅನ್ನಿಸಿತು .ಅಷ್ಟೊತ್ತಿಗೆ ಆಗಲೇ ನಮ್ಮ ಅಮ್ಮ ಅಲ್ಲಿದ್ದ ತುಳುಸಿ ಕಟ್ಟೆ ಸಾರಿಸಿ, ಕುಂಡಕ್ಕೆ ಕುಂಕುಮವಿತ್ತು, ದೀಪ ಹಚ್ಚಿದ್ದರು. ಪಶ್ಚಿಮದಲ್ಲಿ ಚಂದ್ರ , ಹೊರಾಂಡದಲ್ಲಿ ತುಳಸಿ ಕಟ್ಟೆ, ಚಿಕ್ಕದಾಗಿ ಉರಿಯುತಿದ್ದ ದೀಪ, ಅತ್ತ ಆ ಪಾರಿವಾಳಗಳ ಪ್ರಣಯ ಇದೆಲ್ಲ ನೋಡಿ ನನಗೆ ತಕ್ಷಣ ನೆನೆಪಾದದ್ದು ಪ್ರೇಮಕವಿ ಕೆ.ಎಸ್ ನರಸಿಂಹಸ್ವಾಮಿಯವರ ಈ ಸಾಲುಗಳು.
" ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಳಸಿ ಕೃಷ್ಣತುಳಸಿ
ನೀಲಾಂಬರನ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ "
ಕಾಣುವುವು ಶ್ರೀತುಳಸಿ ಕೃಷ್ಣತುಳಸಿ
ನೀಲಾಂಬರನ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ "
ಪ್ರತಿದಿನದಂತೆ ಹೊರಗೆ ಹೊರಟಾಗ ಮತ್ತೆ ಶುರುವಾಯಿತು ಅವಳ ಹಿಂಬಾಲಿಕೆ. ಇನ್ನೂ ಸೂರ್ಯನ ಸದ್ದಿರಲಿಲ್ಲ ಪೂರ್ವದಲ್ಲಿ, ಆದ್ರೆ ಪಶ್ಚಿಮದಲ್ಲಿ ಮಾತ್ರ ಇವಳು ನಲಿಯುತ್ತಾ ಮಂಜಿನ ಮರೆಯಲ್ಲಿ ನನ್ನನ್ನೇ ನೋಡಿ ನುಲಿಯುತ್ತಿದ್ದಳು ಎಂದೆನಿಸಿತು. ಮುಂಜಾವಿನ ಆ ಕೊರೆಯುವ ಚಳಿಯಲ್ಲಿ , ಆ ಬೆಳದಿಂಗಳಲ್ಲಿ, ಅವಳೊಂದಿಗೆ ನಾನೊಬ್ಬನೇ ಇದೀನಿ, ನಮ್ಮ ಜೊತೆ ಯಾರು ಇಲ್ಲ, ನಮ್ಮನ್ನು ಇಲ್ಲಿ ಕೇಳುವರು ಯಾರು ಇಲ್ಲವೆಂಬ ಭಾವನೆ ಮಾಡಿತು. ಆ ಭಾವನೆಯನ್ನು ಸಂಪೂರ್ಣವಾಗಿ ನಾನು ಅನುಭವಿಸತೊಡಗಿದೆ. ಅಷ್ಟೊತ್ತಿಗೆ ಆಟದ ಮೈದಾನ ತಲುಪಿದ ನಾನು ಓಡಲು ಶುರು ಮಾಡಿದೆ, ಅವಳು ಕೂಡ ನನ್ನ ಜೊತೆಯಲ್ಲೇ ಓಡಲು ಶುರು ಮಾಡಿದಳು. ಎಲ್ಲರೂ ಇಷ್ಟ ಪಡುವ ಅವಳನ್ನು ಈ ದಿನ ಮಾತ್ರ ಯಾಕೋ ಯಾರೊಬ್ಬರೂ ಅವಳನ್ನು ನೋಡದೇ ನನಗಾಗಿಯೇ ಬಿಟ್ಟು ಕೊಟ್ಟಿದ್ದಾರೆ ಅನ್ನಿಸುತ್ತಾ ಇತ್ತು. ಮೈದಾನದಲ್ಲಿ ಸಾಕಷ್ಟು ಜನರಿದ್ದರು ಸಹ, ತಮ್ಮ ಪಾಡಿಗೆ ತಾವು ತಲೆ ತಗ್ಗಿಸಿಕೊಂಡು ವಾಕ್ ಮಾಡುತ್ತಾ ಇದ್ದ ಅಂಕಲ್ ಗಳು, ಅಲ್ಲಿಯೂ ಪಿಸು ಪಿಸು ಮಾತನಾಡುತ್ತಾ ಜೊತೆಯಾಗಿಯೇ ವಾಕ್ ಮಾಡುತ್ತಿದ್ದ ಆಂಟೀ ಗಳು, ಸದ್ದಿಲದ್ದೇ ನಿಧಾನವಾಗಿ ನೆಡೆಯುತ್ತಿದ್ದ ಮುಪ್ಪಿನ ತಾತಂದಿರು, ಯಾರು ನನ್ನ ಮತ್ತು ಅವಳನ್ನು ಗಮನಿಸುತ್ತಲೇ ಇರಲಿಲ್ಲ. ಅವಳು ನನ್ನನ್ನು ನೋಡುತ್ತಾ ಇದ್ದಳು ನಾನು ಅವಳನ್ನು ನೋಡುತ್ತಾ ಇದ್ದೇ. ನಾವಿಬ್ಬರು ಜೊತೆ ಜೊತೆಯಾಗಿ ಓಡಿದೆವು, ನನ್ನ ನೋಡಿ ಅವಳು ನಕ್ಕಳು, ನನ್ನ ಮೇಲೆ ಅವಳ ನಗೆಯ ಬೆಳಕನ್ನು ಚಲ್ಲಿದಳು , ನಾನು ಕೂಡ ಅವಳ ನೋಟದ ಖುಷಿಯನ್ನು ಮತ್ತೆ ಮತ್ತೆ ಅನುಭವಿಸಿದೆ. ನನ್ನನ್ನು ಹಿಂಬಾಲಿಸುತ್ತಾ ಬಂದಳು,ನಮ್ಮ ಮನೆಯ ಕಿಟಕಿಯ ಪರದೆಯ ಪಕ್ಕದಲ್ಲೇ ಬಚ್ಚಿಟ್ಟುಕೊಂಡಿದ್ದಳು, ನನ್ನ ಜೊತೆಯೇ ಮಲಗಿದಳು, ಈಗ ನನ್ನ ಜೊತೆಯೇ ಮತ್ತೆ ಓಡಿ ಓಡಿ ಬರುತ್ತ ಇದ್ದಾಳೆ, ಆ ದಿನ ಇವಳು ಇರುವುದು ನನಗಾಗಿಯೇ ನಾ ಇರುವುದು ಇವಳಿಗಾಗಿಯೇ ಎನ್ನೋ ಅನುಭವ.
ನಿಜ ಹೇಳಬೇಕೆಂದರೆ , ಒಂದು ಹೆಣ್ಣು ಇದೆ ಮೊದಲ ಬಾರಿಗೆ ರಾತ್ರಿಯೆಲ್ಲ ಕಾದು ಕಾದು , ಅದು ಮುಂಜಾನೆಯೇ ನನ್ನೊಂದಿಗೆ ಓಡಿ ಬಂದದ್ದು. ಈ ಹಿಂದೆ ಯಾವ ಹೆಣ್ಣು ಕೂಡ ಈ ರೀತಿಯ ದೈರ್ಯ ನನ್ನೊಡನೆ ಮಾಡಿರಲಿಲ್ಲ. ಅವಳ ಆ ಬೆಳದಿಂಗಳು ಹೇಗೆ ಇತ್ತೆಂದರೆ ನನ್ನ ನೆರಳು ನನ್ನ ಇಂದೆ ನೀಟಾಗಿ ನನ್ನನ್ನೇ ಹಿಂಬಾಲಿಸುವುದು ನನಗೆ ಕಾಣುತಿತ್ತು. ಅದು ನನ್ನನ್ನು ಹಿಂಬಾಲಿಸುವ ಪರಿ ಹೇಗಿತ್ತು ಎಂದರೆ ಇವರಿಬ್ಬರನ್ನೇ ಬಿಟ್ಟರೆ ಇವನು ಅವಳಿಗೆ ಏನಾದರು ಮಾಡಿ ಬಿಡುತ್ತಾನೆ ಎಂದು ಅದು ನನ್ನನ್ನು ತುಂಬಾ ಜಾಗರೂಕತೆಯಿಂದ ಗಮನಿಸುತ್ತಿತ್ತು. ಆ ನೆರಳು ನನಗೆ ಆ ಸಮಯದಲ್ಲಿ ಶಿವ ಪೂಜೆಯಲ್ಲಿ ಕರಡಿ ತರ , ಚಲನಚಿತ್ರದ ನಡುವೆ ಬರುವ ಜಾಹೀರಾತಿನ ತರ ಬೇಸರ ತರಿಸಿತ್ತು ಕೂಡ.
ಅಷ್ಟೊತ್ತಿಗೆ ಸಮಯ 6.15 ಇರಬಹುದು , ಪಕ್ಷಿಗಳ ಚಿಲಿಪಿಲಿ ಇಂಚರ ನನ್ನನ್ನು ಅವಳ ಲೋಕದಿಂದ ಹೊರ ಬರುವಂತೆ ಮಾಡಿದವು. ಮೂಡಣ ಕೆಂಪಾಗಿತ್ತು, ಅಲ್ಪ ಬೆಳಕಲ್ಲಿ ಸ್ವಲ್ಪ ಸ್ವಲ್ಪ ಮಂಜು, ಮಂಜು ಸೀಳಿಕೊಂಡು ಬರುತ್ತ ಇದ್ದ ಸೂರ್ಯನ ರಷ್ಮಿಗಳು, ಮೈಧಾನದ ಪಕ್ಕದಲ್ಲಿದ್ದ ಹುಲ್ಲಿನ ಮೇಲೆ ಹೊಳೆಯಲು ಶುರು ಮಾಡಿದ ಇಬ್ಬನಿಯ ಹನಿಗಳು ಎಲ್ಲವು ಸೇರಿ ನನಗೆ " ಬಾರಪ್ಪ ಹೊರಗೆ ಬೆಳಗಾಯಿತು, ಅವಳು ಹೋದ್ಲು , ನೀ ಬಂದ ಕೆಲ್ಸಾ ಕೂಡ ಆಯಿತು, ಇನ್ನೂ ಇಲ್ಲಿಂದ ಹೊರಡಪ್ಪ" ಅನ್ನುವಂತೆ ಭಾಸವಾಯಿತು.
ನೋಡು ನೋಡುತ್ತಿದ್ದಂತೇ ರವಿಯು ನೀಲಾಕಾಶಕ್ಕೆ ಲಗ್ಗೆ ಇಟ್ಟು, ಮೂಡಣದ ಚಿತ್ರಣವನ್ನೇ ಬದಲಾಯಿಸಿ, ಬಣ ಬಣ ಎನ್ನುತ್ತಾ ಇದ್ದ ಮರ ಗಿಡಗಳಲ್ಲಿ ಹಕ್ಕಿ ಪಕ್ಕಿಗಳ ಇಂಚರ ಬರಲು ಸ್ಪೂರ್ತಿಯಾಗಿದ್ದ. ನಮ್ಮಿಬ್ಬರ ನಡುವೆ ಸೂರ್ಯ ಬಂದದ್ದನ್ನು ಕಂಡ ನನ್ನ ಶಶಿ, ನಾಚಿಕೆಯಿಂದ ಮಂಜಿನಲ್ಲಿ ಮತ್ತು ಸೂರ್ಯನ ಪ್ರಕರತೆಯಲ್ಲಿ ಮರೆಯಾಗತೊಡಗಿದಳು . ಅದಕ್ಕೆ ನಾನು " ಅಯ್ಯೋ ಬರೋದ್ ಬಂದೆ ಇನ್ನೂ ಸ್ವಲ್ಪ ಹೊತ್ತು ಆದ ಮೇಲೆ ಬರಬಾರದ " ಅನ್ನುವಷ್ಟರಲ್ಲಿ ಅವಳು ಸಂಪೂರ್ಣ ಮರೆಯಾಗಿದ್ದಳು . ಅವಳ ಆ ಛಾಯೆ ಮಾತ್ರ ನನ್ನ ಮನಸ್ಸಿನ್ನಲ್ಲಿ ಮತ್ತು ಆ ಪಶ್ಚಿಮದ ಒಂದು ತುದಿಯಲ್ಲಿ ಉಳಿದಿತ್ತು. ನಾನು ಇನ್ನೇನು ಬೇಸರದಿಂದ ಮನೆಗೆ ಹೊರಡುವಾಗ ಮಂಜಿನಲಿ ಅವಿತಿದ್ದ ಆ ಸೂರ್ಯ ಮುಖ ತೋರಿಸಿ " ಹೇ ಶಿಷ್ಯ , ಯೋಚನೆ ಮಾಡಬೇಡ, ನೆನ್ನೆ ತಾನೇ ಹುಣ್ಣಿಮೆ ಆಗಿದೆ, ಇನ್ನೂ ಸ್ವಲ್ಪ ದಿನ ಅವಳು ಇಲ್ಲೇ ಇರುತ್ತಾಳೆ , ಸಂಜೆ ಆದರೆ ಸಾಕು ನಿನಗೆ ಕಂಡೆ ಕಾಣಿಸುತ್ತಾಳೆ , ಬೆಳ್ಲಂಬೆಳ್ಳಿಗ್ಗೆ ನಿನಗೆ ಕಾಯುತ್ತಾ ಇರ್ತಾಳೆ, ನಿನ್ನೊಡನೆ ಜಾಗಿಂಗ್ ಕೂಡ ಬರ್ತಾಳೆ , ಈ ಲೆವೆಲ್ಲಿಗೆ ತಲೆ ಕೆಡಿಸಿಕೊಳ್ಳಬೇಡ, ಸಾಕು ಸಾಕು ಮನೆಗೆ ಹೋಗು , ಕೈಗೆ ಸಿಗದ ಅವಳ ಬಗ್ಗೆ ನೀ ಇಷ್ಟೊಂದು ಯೋಚಿಸಿದರೆ ಹೆಂಗಾಪ್ಪ ಜೀವನ ???? " ಅಂತ ಹೇಳಿದ ಹಾಗೆ ಆಯಿತು. ಅದಕ್ಕೆ ನನ್ನ ಮನಸ್ಸು ಕೂಡ ಹೀಗೆ ಹೇಳಿತು " ಹೇ ನಿರಂಜನ ನನ್ನ ಮಾತು ಕೇಳು , ಆ ಸೂರ್ಯ, ಚಲುವೆ ಚಂದ್ರೆಯ ಮೇಲಿರುವ ಹೊಟ್ಟೆ ಕಿಚ್ಚಿನಿಂದ ಹೀಗೆ ಹೇಳ್ತಾ ಇದಾನೆ, ನೀ ಮಾತ್ರ ಅವಳನ್ನ ಬಿಡ್ ಬೇಡ, ಸೂರ್ಯನ ಮಾತ್ ಕೇಳಬೇಡ , ಅವಳೇ ಬಂದು ನಿನ್ನ ಡೌ ಹೊಡೆದ್ರೆ ನೀ ಅದ್ಯಾಕೆ ಸುಮ್ನೇ ಇರ್ತಿಯ ಮಾಡು ಮಾಡು ಮಜ ಮಾಡು ".
ನಿಮಗಾಗಿ
ನಿರಂಜನ್ ......