ಶುಕ್ರವಾರ, ಫೆಬ್ರವರಿ 7, 2014

ಜಾಲಹಳ್ಳಿಯಲ್ಲಿ

                                                               ಜಾಗ್ವಾರ್ ನುಗ್ಗಿದ್ದು ....

ಬೆಳ್ಳಂಬೆಳ್ಳಿಗ್ಗೆ ,  ಮೋಡ ಮುಚ್ಚಿದ ದಿನ,  ಗಾಂಧೀ ಕೃಷಿ ವಿಶ್ವವಿದ್ಯಾಲಯದಲ್ಲಿ ಜಾಗಿಂಗ್ ಮುಗಿಸಿ , ಹತ್ತಿರವಿರುವ  ಜಾಲಹಳ್ಳಿಯ ನಮ್ಮ HMT ರಸ್ತೆಯಲ್ಲಿ ನಾನು ಮತ್ತು ನನ್ನ ತಮ್ಮ "ಮದುಸೂಧನ " ಹೀಗೆ  ನೆಡೆದು ಬರ್ತಾ ಇದ್ವಿ.  ಬೆಳಗಿನಿಂದ ನೆಡೆದು ನೆಡೆದು ದಣಿದಿದ್ದ ನಮಗೆ ಅಲ್ಲೇ ಇರುವ ಕಾಮತ್ ಹೋಟೆಲ್ ಅಲ್ಲಿ ಏನಾದರು ತಿನ್ನುವ ಬಯಕೆ ಆಗಿತ್ತು ... ಅಷ್ಟರಲ್ಲಿ  ಒಂದು ವಿಚಿತ್ರ ಘಟನೆಯ ನಡೆಯುತ್ತೆ , ನಿಮಗೆ ಅದರ ಬಗ್ಗೆ  ಹೇಳ ಬಯಸುತ್ತೇನೆ... ಆ ಘಟನೆ  ರೊಚಕವಾಗಿಯೆನೋ ಇದೆ , ಅದು ಇನ್ನು ರೊಚಕವಾಗಬೇಕೆಂದರೆ ,  ನಾನು  ನಿಮಗೆ ಮೊದಲು ನಮ್ಮ ಜಾಲಹಳ್ಳಿ ಮತ್ತು ಅದರ ಸುತ್ತ ಮುತ್ತಲಿನ ಪರಿಸರದ  ಬಗ್ಗೆ ಸ್ವಲ್ಪ  ಹೇಳಲೇ ಬೇಕು .. ಆಗ ನಾ ಹೇಳುವ ಕತೆಯ ಬಗ್ಗೆ ಸ್ವಲ್ಪ ಕಲ್ಪನೆಯೂ ನಿಮಗೆ ಬಂದು ಕತೆ ಇನ್ನು ಮಜಾ ಕೊಡುತ್ತೆ... 
 
              ಹೆಸರಿಗೆ ತಕ್ಕಂತೆ ಜಾಲಹಳ್ಳಿ ಥೇಟ್ ಹಳ್ಳಿಯೇ .. ಬೆಂಗಳೂರಿನಲ್ಲಿದ್ದರು ಇನ್ನು ಅದು ಹಳ್ಳಿಯಾಗಿಯೇ ಉಳಿದಿದೆ. ಸುತ್ತಲು ಮರ ಗಿಡಗಳು , ಕಡಿಮೆ ಜನಸಂದಣಿ , ದೊಡ್ಡ ದೊಡ್ಡ ಖಾಲಿ ಜಾಗಗಳು ..  ಒಂದು ಕಡೆ HMT ವಾಚ್ ಕಂಪನಿ , ಮತ್ತೊಂದು ಕಡೆ  BEL ಕಂಪನಿ. ಇಲ್ಲಿಯ ಹಳ್ಳಿಯಂತಹ ಪ್ರಕೃತಿ ಉಳಿವಿಕೆಗೆ ಈ ಎರೆಡು ಕಂಪನಿಗಳು ಸಹ ತಮ್ಮದೇ  ರೀತಿಯಲ್ಲಿ  ಕಾಣಿಕೆ ನೀಡಿವೆ. ದೊಡ್ಡ ದೊಡ್ಡ ಉದ್ಯಾನವನಗಳು , ನೀಟಾದ ರಸ್ತೆಗಳು , ರಸ್ತೆಯ ಇಕ್ಕೆಲಗಳಲ್ಲೂ ಈ ಕಂಪನಿಯೇ ನಿರ್ವಹಿಸುವ ಮರ ಗಿಡಗಳು ನಮ್ಮ ಜಾಲಹಳ್ಳಿಗೆ ಒಂದು ರೀತಿಯ ಅಂದವನ್ನು ತಂದುಕೊಟ್ಟಿವೆ...  ಬೆಂಗಳೂರಿನ ಬೇರೆ ಯಾವುದೇ ಭಾಗದಿಂದ ಬರುವ ಜನರಿಗೆ ಜಾಲಹಳ್ಳಿ ಒಂದು ರೀತಿಯಾಗಿ ಕಾಡಿನಂತೆ ಕಾಣುತ್ತೆ , ಅಲ್ಲಿ ಬೀದಿ ಬೀದಿ ಸುತ್ತುವ ನಾವೆಲ್ಲರೂ ಕಾಡು ಜನರಂತೆ ಕಾಣುತ್ತೇವೆ...  ಈ ವಾತಾವರಣಕ್ಕೆ  ಮಾರುಹೋಗಿಯೇ ನಾವು ಮೊದಲು ಬೆಂಗಳೂರಿಗೆ ಬಂದ ಸಮಯದಲ್ಲಿ ಸುಮಾರು 8-10 ವರ್ಷಗಳ ಕಾಲ ಇಲ್ಲಿಯೇ ವಾಸಮಾಡಿದ್ದೆವು. ಒಂದು ತರಹ ಜಾಲಹಳ್ಳಿ ನನಗೆ ತವರು ಮನೆ ಇದ್ದಂತೆ ಅಂತಲೂ ಹೇಳಬಹುದು.  ನಾವು ಎಲ್ಲಿಗೆ ಹೋದರು , ಬೆಂಗಳೂರಿನ ಯಾವ ಭಾಗದಲ್ಲಿ ಇದ್ದರೂ  ಸಹ ನಾನು  ಜಾಲಹಳ್ಳಿಗೆ  ವಾರಕ್ಕೆ ಒಮ್ಮೆಯಾದರೂ  ಬೇಟಿ ಕೊಡಲೇಬೇಕು. ಈಗಲೂ  ಜಾಲಹಳ್ಳಿಯಲ್ಲಿಯೆ  ಇರುವ  ನಮ್ಮ ತಮ್ಮ  ಮದು ಜೊತೆ  ಜಾಲಹಳ್ಳಿಯ ಬೀದಿ ಬೀದಿಗಳಲ್ಲಿ ನಾವಿಬ್ಬರೂ ಸುತ್ತಲೇಬೇಕು. ಹಾಗೆ  ಸುತ್ತಿ ಬಂದರೆ ಮಾತ್ರ  ನನಗೆ ಏನೋ ಒಂದು ತರಹದ ನೆಮ್ಮದಿ ಹಾಗು ಸಮಾಧಾನ.. ಅಲ್ಲಿಯ ವಾತಾವರಣ , ಕಡಿಮೆ ಜನಸಂದಣಿ , ವಿಶಾಲವಾದ HMT ಹಾಗು BEL ರಸ್ತೆಗಳು , ಸುತ್ತಲಿನ ಮರಗಿಡಗಳು , ಸಾಂಪ್ರದಾಯಿಕ ಜನರು , ಅಲ್ಲಿರುವ ಉದ್ಯಾನವನಗಳು , ದೇವಸ್ತಾನಗಳು  , ಸಂಜೆಯ ನಂತರ ಸಿಗುವ ತಿಂಡಿ-ತಿನಿಸುಗಳು ಮೊದಲಿನಿಂದಲೂ ನನ್ನನ್ನು ಆಕರ್ಷಿಸುತ್ತಲೇ ಇವೆ...
 
                    ಇತ್ತೆಚಿಗೆ ಅಲ್ಲಿ ಇಲ್ಲಿ  ಉದ್ದನೆಯ ಕೆಲವು appartments ಗಳೂ  ಎದ್ದಿರುವುದು ಬಿಟ್ಟರೆ  ಜಾಲಹಳ್ಳಿ  ಇನ್ನು ತನ್ನ ಹಳೆಯ ಮಜಲನ್ನೆ ಉಳಿಸಿಕೊಂಡಿದೆ ಎಂದರೆ ತಪ್ಪಾಗಲಾರದು . ಅನೇಕ ಮರಗಿಡಗಳು ಈ ಜಾಲಹಳ್ಳಿಯನ್ನು ಇನ್ನೂ  ಆವರಿಸಿಕೊಂಡಿವೆ.  ಒಂದತ್ತು ವರ್ಷದ ಇಂದೇ BEL ಕಂಪನಿಯ ಹತ್ತಿರ , HMT ಸುತ್ತಮುತ್ತ ಚಿರತೆಗಳು ಕೂಡ ಹಾಗೊಮ್ಮೆ ಹೀಗೊಮ್ಮೆ  ಕಾಣಿಸಿಕೊಳ್ಳುತ್ತ  ಇದ್ವಂತೆ,  ಅವುಗಳ ಬಗ್ಗೆಯೂ  ರೋಚಕ ಕತೆಗಳು  ಇವೆ.
 
                   ಮಲ್ಲೇಶ್ವರಂನ ಮಂತ್ರಿ ಮಾಲು , ಗರುಡ ಮಹಲ್ಲು , ಫೋರಂಗಳು ಕೊಡದ ಮಜವನ್ನು ನಮಗೆ ಈ ಜಾಲಹಳ್ಳಿ ಇಷ್ಟು ದಿನ  ಉದಾರವಾಗಿ ಕೊಟ್ಟಿದೆ.. ಇಂತಹ ವಾತವರಣದಲ್ಲಿ ಆದಿನ ನಾ ಮತ್ತೆ ಮದು , ಅದೇ ರೀತಿಯ  ಮಜವನ್ನು ಅನುಭವಿಸುತ್ತ HMT ಮೈನ್ ರೋಡಲ್ಲಿ , ಕಾಮತ್ ಹೋಟೆಲ್ಲು  ಬಳಿ , ಯಾವುದೋ ಒಂದು ವಿಷಯ ಮಾತಾಡ್ಕೊಂಡು BEL ಕಡೆಯಿಂದ ಬರ್ತಾ ಇದ್ವಿ . ಯಾರೋ ಹಿಂದಿನಿಂದ  " ಹೇ ನಿರಂಜನ್ , ಮಗಾ ... ನಿರಂಜನ್ " ಎಂದು  ಕೂಗಿದಂತಾಯಿತು. ಕೂಗಿನ ದಿಕ್ಕಿನಲ್ಲಿ  ತಿರುಗಿ  ನೋಡಿದೆ , ಅದು ನಮ್ಮ ಜಾಲಹಳ್ಳಿಯ ನಂಜೇಶ .."  . ನಂಜೇಶ ನನ್ನ ಒಳ್ಳೆಯ ಸ್ನೇಹಿತ , ಆತ  ಕೂಡ ಜಾಲಹಳ್ಳಿಯ ಮೂಲನಿವಾಸಿಯೇ. ನಾವಿಬ್ರು ಒಂದೊಷ್ಟು ದಿನ ಒಂದೇ  ಕಂಪನಿಯಲ್ಲಿ  ಕೆಲಸ ಮಾದಿದ್ವಿ.ನಮ್ಮ ಏರಿಯದ ಹುಡುಗ ಆದ್ದರಿಂದ  ಸ್ವಲ್ಪ  ಜಾಸ್ತಿ ಸ್ನೇಹನೇ  ನಮ್ಮಿಬ್ಬರ ನಡುವೆ ಬೆಳೆದಿತ್ತು. ನಾ ಜಾಲಹಳ್ಳಿಗೆ ಹೋದಾಗ  ಹಾಗೊಮ್ಮೆ ಹೀಗೊಮ್ಮೆ ಸಿಗ್ತಾನೆ ಇರ್ತಾನೆ. ಅದೇ ರೀತಿ ಮತ್ತೆ ಆದಿನ ಕೂಡ ಸಿಕ್ಕಿದ್ದ. ಉಭಯ ಕುಶೊಲೊಪರಿಗಳ ನಂತರ  " ಬಾ ಮಗ ಟೀ ಕುಡಿಯೋಣ , ಕಾಮತ್ ಅಲ್ಲಿ "ಎಂದಾಗ , ತಕ್ಷಣಕ್ಕೆ ನಾ ಒಪ್ಪಿ ,ಕಾಮತ್ ಹೊಳಗೆ ನಡೆದೆವು.
  
                ಜಾಲಹಳ್ಳಿಗೆ ಹಳಬನಾದ ನಂಜೇಶ ತನ್ನ ಭಾರಿ ಹವಾ ತೋರಿಸುತ್ತ , ಕಾಮತ್ ಹೋಟೆಲ್ಲಿನಲ್ಲಿ ನಮಗೆ ಒಳ್ಳೆಯ ಜಾಗ ಗಿಟ್ಟಿಸಿದ ಕೂತು ತಿನ್ನಲು . ನಾವು ಲೇಟ್ ಆಗ ಬಹುದೆಂದು ಬರಿ ಟೀ ಕುಡಿಯಲು ನಿರ್ಧರಿಸಿ, ಮಾಣಿಗೆ ಕೇವಲ ಟೀ  ತರಲು ಹೇಳಿದೆವು... ಈ ಹೊಟೇಲುಗಳಲ್ಲಿ  3 ಟೀ ಹೇಳಿದರು ಅಷ್ಟೇ ಕೊಡುತ್ತಾರೆ , 2/3 ಹೇಳಿದರು 3 ಟೀ ಕೊಡುವೊಷ್ಟೇ ಕೊಡುತ್ತಾರೆ , ಹಾಗಾಗಿ ನಾವು 2/3 ಟೀ ಗೆ ಹೇಳಿ ಕೂತೆವು. ಅಷ್ಟರಲ್ಲಿ  ನಮ್ಮ ನಂಜೇಶ " ಇವರೆಲ್ಲ ನಮ್ಮ ಹುಡುಗ್ರು ಕಣೋ , ಸ್ವಲ್ಪ ಟೀ ಚೆನ್ನಾಗಿ , ಸಕ್ಕರೆ ಹಾಕಿ  ಕುದಿಸಿ , ಸೋಸಿ ತಾ " ಎಂದು ತನ್ನದೆ ಆದ  ಒಂದು ಗತ್ತಿನಲ್ಲಿ ಮಾಣಿಗೆ  ಹೇಳಿದ. ಮಾಣಿ  " ಸರಿ ಅಣ್ಣ " ಎಂದು ಸ್ವಲ್ಪ ಭಯ-ಭಕ್ತಿಯಿಂದಲೇ ಟೀ ತರಲು  ಹೋದ. ಆ  ಮಾಣಿ ಈ ರೀತಿ ಭಯ ಭಕ್ತಿ ತೋರಿಸಲು  ನಮ್ಮ ನಂಜೇಶ ತೊಟ್ಟಿದ್ದ ತಿಳಿ-ಬಿಳಿ ಬಣ್ಣದ ಖಾದಿ ಶರ್ಟ್ ಕಾರಣವಿರಬಹುದು...

              ಬಿಸಿ-ಬಿಸಿ ಟೀ ಬಂತು , ಸುತ್ತಲು ಹಸಿರು ಮರಗಿಡಗಳು , ಪಕ್ಕೆಕ್ಕೆ ದೊಡ್ಡ ಪಾರ್ಕ್ , ಸ್ವಲ್ಪ ಮುಂದೆ ಕಣ್ಣಾಯಿಸಿದರೆ HMT ಕಾಂಪೌಂಡ್ , ಅದರಲ್ಲಿ ಹಳೆಯ ಬಾರಿ ಮರಗಳು , ಆ ಮರಗಳು  ಬೀಸುವ ಗಾಳಿಗೆ ಬೇಸಣಿಗೆಯಂತೆ ಬೀಗುತ್ತಿದ್ದವು.. ಮೊದಲೇ ಹೇಳಿದ ಹಾಗೆ ನಮ್ಮ ಸುತ್ತಲು ಕಾಡಿನಂತಹ ವಾತಾವರಣವೇ ಇತ್ತು , ನಮಗೆ ನಾವೆಲ್ಲೋ ಯಾವುದೋ ಕಾಡ ಮಡಿಲಲ್ಲಿ ಬಿಸಿ ಬಿಸಿ ಟೀ ಕುಡಿಯುವಂತೆ ಆಗುತ್ತಿತ್ತು... ಪಿಂಗಾಣಿ ಸಾಸರ್ ನಲ್ಲಿ ಇದ್ದ ಟೀಯನ್ನು  15 ಸೆಕೆಂಡ್ಗೊಮ್ಮೆ ಸ್ವಲ್ಪ ಸ್ವಲ್ಪವೆ ಹೀರುತ್ತಾ , ನಂಜೇಶನ  ಹಾಸ್ಯ ಬರಿತ ಡೈಲಾಗುಗಳನ್ನು ಕೇಳುತ್ತ , ಸುತ್ತಲಿನ ಕಾಡಿನಂತಹ ವಾತಾವರಣದ ಸವಿಯುತ್ತ , ಕಾಲ ಕಳೆಯುತ್ತಿದ್ದೆವು ನಾನು ಮತ್ತು ಮದು .. ಇಲ್ಲಿಯವರೆಗೂ ಅದು ಇದು ಹೇಳಿ ನಮ್ಮನ್ನು ನಗಿಸುತ್ತಾ ಇದ್ದ ನಮ್ಮ ನಂಜೇಶ ಇದ್ದಕಿದ್ದಂತೆ ..



"ಮಗಾ , ಮೊನ್ನೆ ಇಲ್ಲಿ ಒಂದು ಜಾಗ್ವಾರ್  ಬಂದಿತ್ತು ,  ಬಂದು ಇಲ್ಲೇ ಒಂದು ಮನೆಗೆ ನುಗ್ಗಿತ್ತು ಕಣೋ " ಎಂದ . ಆ ಕ್ಷಣಕ್ಕೆ ಹೌಹಾರಿದ ನಾನು ಮತ್ತೆ ಮದು  "ಹೋದೇನೋ  ??. .. ಅದೇಗೋ  ಇಲ್ಲಿಗೆ  ಬಂತು  ?? " ಎಂದು ಪ್ರಶ್ನಿಸಿದೆವು .. "ಮಗ ನೀವು ನೋಡ್ಬೇಕು ಅದು ಹೇಗೆ ಆ ಮನೆಗೆ ನುಗ್ಗಿದೆ ಅಂತ ,, ಊಷ್ ಹಾಗ್ತೀರ ಅಷ್ಟೇ ,,, " ಎಂದ .. ನಾವು  ಬರಿ ಅವನ ಮುಖಭಾವವನ್ನು  ನೋಡಿಯೇ ಬೆಚ್ಚಿದೆವು.. ಕುತೂಹಲ ಹೆಚ್ಚಾಯಿತು ,, " ಅಲ್ಲೋ  ನಂಜೇಶ  ಅದು ಹೇಗೋ ಇಲ್ಲಿಗೆ ಬಂತು , ಅದರಲ್ಲೂ  ಇಂತಾ  ಜಾಗಕ್ಕೆ ?? "... ಅದಕ್ಕೆ  ನಮ್ಮ ಮದು ಸಮಾಧಾನದಲ್ಲಿ " ಬಂದ್ರು  ಬಂದಿರಬಹುದು ಕಣೋ, ಹೀಗೆನು ಎಲ್ಲ ಕಡೆ ಇವೆ ಅವು " ಎಂದನು.. ನನ್ನ ಮನಸ್ಸಿನಲು ಇದ್ದರು ಇರಬಹುದು  ಎಂದು   " ಮೊದಲೇ ಇಲ್ಲಿ ,, ಎಲ್ಲಿ ನೋಡಿದರು ಅಲ್ಲಿ ಮರಗಿಡಗಳು , ಜನಸಂದಣಿಯೊಂತು ಬಲು ಕಡಿಮೆ , ಜಾಗ್ವಾರ್  ಬಂದಿದ್ದರೂ  ಬಂದಿರ ಬಹುದು "ಅಂತ ಮನಸ್ಸಿನಲ್ಲೇ ಅಂದುಕೊಂಡೆ ...

             ಆದರೆ ಆ ಜಾಗ್ವಾರ್  " ಇಲ್ಲಿಗೆ ಯಾವ ಕಡೆಯಿಂದ ಬಂದಿರಬಹುದು , ಅದೇಗೆ ಇತ್ತು "  ಎನ್ನುವ ಸಂಶಯ ಶುರುವಾಯಿತು ,  " ಅಲ್ಲ ಮಗ ಅದು ಯಾವ ಕಡೆಯಿಂದ  ಬಂತು , ಅಷ್ಟೊತ್ತಲ್ಲಿ ಯಾರು ಜನರು ಇರಲೇ ಇಲ್ಲವ ??? " ಎಂದು ನಾ ಕೇಳಿದೇನು ...

" ಇಲ್ಲ ಮಗ ಬೇಜಾನ್ ಜನ ಇದ್ರೂ , ನಾವು ಕೂಡ ಇಲ್ಲೇ ಕ್ರಿಕೆಟ್ ಆಡ್ತಾ ಇದ್ವಿ , ಹೋಟೆಲ್ ಮುಂದೆ ಇದೆಯಲ್ಲ ಅದೇ ಗ್ರೌಂಡಲ್ಲಿ , ಜಾಗ್ವಾರ್  ಆ ಕಡೆಯಿಂದಲೇ  ಬಂತಂತೆ , ನನ್ ಫ್ರೆಂಡ್ಸ್ಸ ಕೂಡ ನೋಡಿದ್ರಂತೆ " ಎಂದು HMT ವಾಚ್ ಫ್ಯಾಕ್ಟರಿ ಕಡೆ ಕೈ ತೋರಿಸಿದ ... ನಾ ತಕ್ಷಣಕ್ಕೆ ಬೆಚ್ಚಿ ಬಿದ್ದೆ , ಯಾಕೆಂದ್ರೆ  ಆ ಕಡೆ ಜನ ಸಂದಣಿ ಇರುವುದೇ ಇಲ್ಲ , ಬಾರಿ ಮರಗಳು , ಎತ್ತಲು ಬರಿ ಪೊದೆಗಳು , ಆಕಡೆಯಿಂದ ಬಂದಿದ್ದರು ಬಂದಿರಬಹುದು ಎಂದು ನನಗೆ ಅನ್ನಿಸಿತು.. ಆ ಕ್ಷಣಕ್ಕೆ ಸ್ವಲ್ಪ  ಭಯವೂ  ಆಯಿತು , ನಾನು ಮತ್ತು ಮದು ಅದೇ   HMT ವಾಚ್ ಫ್ಯಾಕ್ಟರಿ ಕಡೆಗೆ ಬಹುವಾಗಿ ವಾಕ್ ಹೋಗ್ತಾ ಇದ್ವಿ ಹೊತ್ತು-ಗೊತ್ತೆನ್ನದೆ.. "ಯಪ್ಪಾ ನಾವಿಬ್ಬರೇ ಇದ್ದ್ದಾಗ ಜಾಗ್ವಾರ್ ಬಂದಿದ್ದಾರೆ ಏನ್ ಆಗ್ತಾ ಇತ್ತು " ಎಂದು ಭಯವಾಯಿತು... "ಮೊನ್ನೆ ಮೊನ್ನೆಯ ತನಕ ನಮ್ಮ ಅಮ್ಮ ಕೂಡ ಆ ಕಡೆ ವಾಲ್ಕಿಂಗ್ ಗೆ  ಅಂತ ಹೋಗಿ , ಪೊದೆಗಳನ್ನೆಲ್ಲ ಬೆದಕಿ , ದೇವರಿಗೆ ಅಂತ ಹೂವು ತರ್ತ ಇದ್ರೂ , ಸದ್ಯ ಆಗ ಬಂದಿಲ್ಲ , ಈ ಪ್ರಾಣಿ " ಅಂತ ಅಂದುಕೊಂಡೆ

" ಪುಣ್ಯಕ್ಕೆ  ಮಗಾ ,  ಆ ಜಾಗ್ವಾರ್ ಅವರ ಮನೆಗೆ ನುಗ್ಗಿದಾಗ ಅವರು ಮನೆಯಲ್ಲಿ  ಇರಲಿಲ್ಲ  ನೋಡು , ಬಚಾವ್ದರು  ಅವರು..  ಈ ಮೈಸೂರ್ ಗೆ ಹೋಗಿದ್ರಂತೆ ಯಾರದೋ ಸೀಮಂತ ಕಾರ್ಯ ಅಂತ "  ಎಂದು  ನನಗೆ ಆ ಮನೆಯವರ ಗುರುತು ಹೇಳಿದ .. ಅಷ್ಟೊತ್ತಿಗೆ ನನಗೆ ಆ ಮನೆ ಯಾವುದು ಎಂದು ತಿಳಿದಿತ್ತು... ಇದನೆಲ್ಲ ನಂಜೇಶ ನನಗೆ ಹೇಳುವಾಗ " ಅದು ಹೇಗೆ ಬಂದಿರಬಹುದು , ಇಲ್ಲಿಗೆ ಯಾಕೆ ಬಂತು , ಯಾವ ಕಾಡಿನಿಂದ ಬಂತು " ಎನ್ನುವ ಪ್ರಶ್ನೆಗಳೆಲ್ಲ ಕಾಡ  ತೊಡಗಿದವು ...

"ನಂಜೇಶ ಅದು ,, ಇಲ್ಲಿಗೆ ಹೇಗೋ ಬಂತು , ?? ಇಲ್ಲಿಗೆ ಬಾರೋ ತನಕ ಯಾರ ಕಣ್ಣಿಗೂ ಬೀಳಲೇ ಇಲ್ಲವಾ ?? " ಎಂದಾಗ .. "ಹೇ ಮಗಾ , ಅದು ಇಲ್ಲಿಗೆ ಯಾವಾಗ್ಲೂ ಬರ್ತಾ ಇತ್ತು ಕಣೋ , ನಾವು ಬೇಜಾನ್ ಸರಿ ನೋಡಿದ್ವಿ , ಆ ಮರಗಳಿಲ್ವಾ  , ಅಲ್ಲೇ ನೆರಳಲ್ಲಿ ನಿಂತಿರ್ತ ಇತ್ತು " ಎಂದನು ... ಅದಕ್ಕೆ ನಾ " ಅಂದ್ರೆ ನೀವು ಅದನ್ನು ಮೊದ್ಲೇ ನೋಡಿದ್ರ ??? " ಎಂದಾಗ " ಹೌದು ಮಗ , ಇಲ್ಲೇ ಓಡಾಡ್ಕೊಂಡು  ಇರ್ತಿತ್ತು ,, ಅದು ಇಲ್ಲಿ ಜಾಲಹಳ್ಳಿ ಕ್ರಾಸ್  ಅನು ಸೋಲಾರ್ ಇದೆಯಲ್ಲ , ಅದರ ಓನರ್  ಮಗಂದು ಎಂದಾಗ ... "ಅಯ್ಯೋ ಆ ಮುಂಡೆ  ಮಗ ಯಾಕೆ  ಈ ನಾಯಿ-ಪಾಯಿ ಸಾಕ ಬಿಟ್ಟು ,  ಈ ಜಾಗ್ವಾರ್ ಸಾಕಿದ , ಇಲ್ಲಿಗೆ  ಯಾಕೆ ಅದನ್ನ ಕರ್ಕೊಂಡು ಬರ್ತಿದ್ದ " ಅಂತ ಆಶ್ಚರ್ಯ ಆಯ್ತು , ಭಯದಲ್ಲಿ ... ಅರಣ್ಯಾದಿಕಾರಿಗಳು  ಇವನು ಜಾಗ್ವಾರ್ ಸಾಕೋಕೆ ಹೇಗೆ ಲೈಸೆನ್ಸ್ ಕೊಟ್ರು ಎಂದು ಯೋಚಿಸುತ್ತಾ ...  " ಅಲ್ಲ ನಂಜೇಶ ಅವನಿಗೆ ಅದನ್ನು ಇಟ್ಕೊಳೋಕೆ ಲೈಸನ್ಸ್ ಇತ್ತಾ  " ಎಂದಾಗ , " ಏನೋ ಮಗ ಹಿಂಗೆ ಅಂತೀಯ , ಅವಾ ಬಾರಿ ಖುಳ ಕಣೋ ,, ಬೇಜಾನ್ ಮಡಿಗಿದಾನೆ " ಎಂದನು .. "ಆದರೂ  ಅದೇಗೆ ಆವಾ ಜಾಗ್ವಾರ್ ಸಾಕಿದ ಅಂತ ನಾ ಯೋಚಿಸುತ್ತಲೇ ಇದ್ದೆ .. ಅಷ್ಟೊತ್ತಿಗೆ ನಂಜೇಶ " ಮಗ ಇಲ್ಲೇ ಆಟ ಆಡ್ತಾ ಇದ್ವಿ ಕಣೋ , ನಮ್ಮ ಹುಡುಗ ತೋರಿಸಿದ , ನೋಡೋ ಜಾಗ್ವಾರ್ ಅಂತ , ನಾವು ಇದೇನೋ ಹೀಗೆ ಬರ್ತಾ ಇದೆ ಅಂತ ನೋಡ್ತಾನೆ ಇದ್ವಿ ,, ನೋಡ್ತಾ ನೋಡ್ತಾ ನಮ್ಮ ಮುಂದೇನೆ ಹೋಯ್ತು , ಹಂಗೇ  ಹೋಗಿ , ಆ ದೊಡ್ಡ ಚರಂಡಿ ಹಾರಿ ನುಗ್ಗೆ ಬಿಡ್ತು ಕಣೋ ಆ ಮನೆಗೆ " ಎಂದಾಗ ನಾ ಅಲ್ಲೇ ಸುಸ್ತಾಗಿದ್ದೆ....

" ಆಮೇಲೆ ಸ್ವಲ್ಪ ಹೊತ್ತಿಗೆ ಜನ ಸೇರಿದ್ರು , ಜಾಗ್ವಾರ್ ನ ಸೀಜ್ ಮಾಡಿ , ಎತ್ತಕ್ಕೊಂಡು ಹೋದರು " ಎಂದು ಏನೋ ಒಂದು ರೀತಿಯ ಭಾವದಲ್ಲಿ ನಮಗೆ ಹೇಳಿದ.. ನಾ ಅಂತೂ  " ಜಾಗ್ವಾರ್ ಅವನಿಗೆ ಹೇಗೆ ಸಿಗ್ತು , ಅವನಿಗೆ ಹೇಗೆ ಲೈಸನ್ಸ್ ಸಿಕ್ತು ಅದುನ್ನ ಸಾಕಲು , ಯಾವ್ ಕಡೆಯಿಂದ ಬಂದು ಅದು ಈ ಮನೆಗೆ ನುಗ್ತು , ಬರ್ಬೇಕಾದ್ರೆ ಜನಕ್ಕೆ ಏನು ತೊಂದ್ರೆ ಮಾಡಲಿಲ್ಲವ .. ಸದ್ಯ ನಾವು ಸಿಕ್ಕಲಿಲ್ಲ ಅದಕ್ಕೆ " ಅಂತ ಅಂದುಕೊಳ್ತಾ ಇದ್ದೆ.. ಅಷ್ಟರಲ್ಲಿ  ನಮ್ಮ ನಂಜೇಶ  "ನೋಡು ಮಗ ಅದರ ಫೋಟೋ ತಕ್ಕೊಂಡಿದಿನಿ.. ಮಸ್ತ್ ಬಂದಿದೆ ,,, ಫೇಸ್ ಬುಕ್ ಅಲ್ಲಿ ಅವತ್ತೇ  ಶೇರ್ ಮಾಡಿದ್ದೆ,,, ನೊಡಿರ್ಲಿಲ್ಲವಾ " ಎಂದು ಬೇಜಾನ್ ಸಮದಾನದಲ್ಲಿ ಹೇಳಿದ..  ನಾ ಅದಕ್ಕೆ " ಹೌದೇನೋ , ಜಾಗ್ವಾರ್ ಬಂತು ಅಂತೀಯ , ಅವರ ಮನೆಗೆ ನಮ್ ಕಣ್ಣ್ಮುಂದೆನೇ  ನುಗ್ತು ಅಂತೀಯ , ಫೋಟೋ ಬೇರೆ ತೆಗೆದೇ ಅಂತೀಯ , ಭಯ ಆಗ್ಲಿಲ್ಲೆನೊ"  ಅಂದ್ರೆ .. " ಅದ್ರಲೇನು ಭಯ ಮಗ  , ನೋಡು ಹೇಗೆ ಬಂದಿದ್ದೆ ಫೋಟೋ , awesome ಆಗಿದೆ ಅಲ್ವ "  ಎಂದ ನಮಗೆ ಆ ಫೋಟೋ ತೋರಿಸಿದ ...



              ಭಾರಿ ಕುತೂಹಲದಿಂದ  , ಅಶ್ಚರ್ಯದಿಂದ , ಭಯದಿಂದ  ಫೋಟೋ ನೋಡಿದ ಮೇಲೆನೇ  ನನಗೆ ಗೊತ್ತಾಗಿದ್ದು ಇಷ್ಟೋ ತನಕ  ನಮ್ಮ ಜಾಲಹಳ್ಳಿ ನಂಜೇಶ  ಗುಣಗಾನ ಮಾಡಿದ್ದು  ಜಾಗ್ವಾರ್ ಅನ್ನೋ  ಪ್ರಾಣಿಯ ಬಗ್ಗೆ ಅಲ್ಲ ಎಂದು ...  ಅಂತು ಇಂತು ಜಾಗ್ವಾರ್ ಕತೆ ಹೇಳಿ ಮುಗಿಸಿದ ನಂಜೇಶ  ,  ಕತೆ ಕೇಳಿ , ಸುಮ್ಮನೆ ಏನೆಲ್ಲಾ ಯೋಚಿಸಿ ನಾ ಸುಸ್ತಾಗಿದ್ದೆ , ನಂಜೇಶನಿಗೆ ನಗುತ್ತಲೇ  ನಮಸ್ಕಾರ ಹೇಳಿ ನಾನು ಮತ್ತೆ ಮದು ಮನೆಗೆ ವಾಪಸ್ ಆದೆವು ಮನಸಿನ್ನಲ್ಲೆ  ಹುಸಿ ನಗೆ ಬೀರುತ್ತ ....


ನಿಮಗಾಗಿ
ನಿರಂಜನ್