ಮಂಗಳವಾರ, ಮಾರ್ಚ್ 8, 2011

"ವಿಶ್ವ ಕನ್ನಡ ಸಮ್ಮೇಳನ"

                   "ವಿಶ್ವ ಕನ್ನಡ ಸಮ್ಮೇಳನ" ವಿವಾದಗಳು ಬೇಕೆ ???

ನ್ನಡ ರಾಜ್ಯೋತ್ಸವ , ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಮ್ಮೇಳನಗಳು ಕನ್ನಡ ಭಾಷೆ ಹಾಗೂ ರಾಜ್ಯದ ಮೇಲಿರುವ ಗೌರವವನ್ನು ತೋರಿಸುವ, ಹಿರಿಮೆಯನ್ನು ಎತ್ತಿ ಹಿಡಿವ , ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಕನ್ನಡ ಸಂಸ್ಕೃತಿಯನ್ನು ಪ್ರಪಂಚಕ್ಕೆ ತೋರಿಸುವ ಹಬ್ಬಗಳಾಗ ಬೇಕೇ ಹೊರತು,ನಾವು ತಲೆ ತಗ್ಗಿಸುವಂತ ವಿವಾದಗಳನ್ನು ಸೃಷ್ಟಿಸಿ , ಇವುಗಳ ಜೊತೆ ರಾಜಕೀಯ ಮಾಡುವುದು ಅದೆಷ್ಟು ಸರಿ ?  ಇದಕ್ಕೆ ತಾಜಾ ಉದಾಹರಣೆಯೆಂದರೆ ಇನ್ನೂ ಕೆಲವೇ  ದಿನಗಳಲ್ಲಿ ಆರಂಭವಾಗಲಿರುವ  ಬೆಳಗಾವಿ " ವಿಶ್ವ ಕನ್ನಡ ಸಮ್ಮೇಳನ ". ಸಮ್ಮೇಳನದ ಉದ್ಘಾಟನೆ ಯಾರು ಮಾಡಬೇಕೆಂಬುದರ  ಬಗ್ಗೆ ಕೆಲವರು ಸೃಷ್ಟಿ ಮಾಡಿರುವ ವಿವಾದ ನಿಜಕ್ಕೂ ನಾವೆಲ್ಲರೂ ತಲೆ ತಗ್ಗಿಸಬೇಕಾದ ವಿಚಾರವೇ ಸರಿ.


          












       
             ಕೆಲವು ಜನರು ಅನಾವಶ್ಯಕವಾಗಿ ಇಂತಹ ವಿವಾದಗಳಿಗೆ ನಾಂದಿ ಹಾಡುತ್ತಾ ಮತ್ತು ಜನರನ್ನು ಪ್ರಚೋದಿಸುತ್ತಾ ತಮ್ಮ ತಮ್ಮ ಗೌರವಗಳನ್ನು ತಾವೇ ಕಡಿಮೆ ಮಾಡಿಕೊಳುತ್ತ, ಹಾದಿ ಬೀದಿಗಳಲ್ಲಿ, ಟೀವೀ ಮತ್ತು ಪತ್ರಿಕಾ ಮಾದ್ಯಮಗಳಲ್ಲಿ ತಮ್ಮ ಸಣ್ಣ ತನವನ್ನು ತಾವೇ ತೋರಪಡಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ವಿಶ್ವ ಕನ್ನಡ ಸಮ್ಮೇಳನ ಕೇವಲ ಕನ್ನಡ ಸಾಹಿತಿಗಳಿಗೆ,ಕವಿಗಳಿಗೆ ,ಚಲನ ಚಿತ್ರ ನಟರಿಗೆ ಹಾಗೂ ಕನ್ನಡ ಪರ ಹೋರಾಟಗಾರರಿಗೆ ಮಾತ್ರ ಅಲ್ಲ. ಇದು ಕರ್ನಾಟಕದ ಪ್ರತಿಯೊಬ್ಬ  ನಾಗರೀಕನಿಗೂ, ದೇಶ ವಿದೇಶದಲ್ಲಿರುವ ಪ್ರತಿಯೊಬ್ಬ ಕನ್ನಡಿಗನಿಗೂ  ಕೂಡ ಇದು ಒಂದು ಹಬ್ಬ. ಕನ್ನಡ ಕೇವಲ ಸಾಹಿತಿಗಳ,ಕವಿಗಳ ಹಾಗೂ ಹೋರಾಟಗಾರರ ಸ್ವಂತ ಆಸ್ತಿಯೂ ಅಲ್ಲ ಮತ್ತು ಅವರಿಗೆ ಮಾತ್ರ ಇದು ಸೀಮಿತವಲ್ಲ. ಇದು ಕರ್ನಾಟಕದ ಹೊರಗೆ ಮತ್ತು ಇಲ್ಲಿ  ಇರುವ ಪ್ರತಿಯೊಬ್ಬ ಸಾಮಾನ್ಯ ಕನ್ನಡಿಗನ ಆಸ್ತಿ. ಕನ್ನಡಕ್ಕೆ ದುಡಿಯುವುದೆಂದರೆ ಕನ್ನಡದಲ್ಲಿ ನಾಲ್ಕಾರು ಪುಸ್ತಕಗಳನ್ನು ಬರೆಯುವುದಲ್ಲ, ಕವನಗಳನ್ನು ಗೀಚುವುದಲ್ಲ ಹಾಗೂ ಗಂಟೆಗಟ್ಟಲೇ ಕನ್ನಡದ ಬಗ್ಗೆ ಭಾಷಣ ಮಾಡುವುದಲ್ಲ. ಕನ್ನಡ ಭಾಷೆಯನ್ನು ಮಾತನಾಡುತ್ತಾ, ಕನ್ನಡವನ್ನು ಗೌರವಿಸುತ್ತಾ  , ಕರ್ನಾಟಕದಲ್ಲಿ ದುಡಿಯುವ ಮತ್ತು ಜೀವಿಸುವ ಪ್ರತಿಯೊಬ್ಬರೂ ಕನ್ನಡಿಗರೇ. ಅದೇ ರೀತಿ ನಮ್ಮ ಹೆಮ್ಮೆಯ ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ, ಕವಿ ಅಥವಾ ಲೇಖಕರಾಗದೆ ಇರಬಹುದು, ಆದರೆ ಅವರು ಒಬ್ಬ ಕನ್ನಡಿಗ ಹಾಗೂ ಅದೇ ರೀತಿ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳುವ ಅವರ ಹಕ್ಕನ್ನು ಯಾರು ಪ್ರಶ್ನಿಸುವಂತಿಲ್ಲ. ನೇರವಾಗಿ ಅವರು ಕನ್ನಡ ಭಾಷೆಗೆ ಯಾವುದೇ ಕೊಡುಗೆ ನೀಡದಿರಬಹುದು, ಕನ್ನಡ ಚಳುವಳಿಗಳಲ್ಲಿ ಭಾಗವಹಿಸದೇ ಇರಬಹುದು ಆದರೆ ಕರ್ನಾಟಕಕ್ಕೆ ಅವರದೇ ಆದ ಶೈಲಿಯಲ್ಲಿ ಅವರು ನೀಡಿರುವ ಕೊಡುಗೆಯನ್ನು ನಾವು ಮೆಚ್ಚಲೆ ಬೇಕು.ಅವರ ಕಾರ್ಯ ಕ್ಷೇತ್ರದಲ್ಲಿ  ಅವರ ಬುದ್ದಿ ಮಟ್ಟಕ್ಕೆ ಸರಿಯಾಗಿ ಅವರು ಕಾರ್ಯ ನಿರ್ವಹಿಸಿ , ಯಶಸ್ವಿ ಉದ್ಯಮಿಯಾಗಿ, ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ , ಪ್ರಪಂಚವೇ ನಮ್ಮ ದೇಶದ ಕಡೆಗೆ ನೋಡುವಂತೆ ಮಾಡಿದ, ದೇಶದ ಹೆಮ್ಮೆಯಾಗಿರುವ ಅವರು ಕನ್ನಡಿಗರೆಂದರೆ ನಮಗೂ ಹೆಮ್ಮೆಯ ಸಂಗತಿ ಅಲ್ಲವೇ. ಕರ್ನಾಟಕ ಸರಕಾರ ಮತ್ತು ಹಿರಿಯ ಅಧಿಕಾರಿ ವಿಠ್ಠಲಮೂರ್ತಿಯವರ  ಒತ್ತಾಯದ ಮೇರೆಗೆ ಸಮ್ಮೇಳನವನ್ನು ಉದ್ಘಾಟಿಸಲು ಒಪ್ಪಿಕೊಂಡ ನಾರಾಯಣಮೂರ್ತಿಯವರ  ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ ???.

                 ನಾರಾಯಣಮೂರ್ತಿಯವರ ಸಾಧನೆಗಳನ್ನು ಪ್ರಶ್ನಿಸುತ್ತಿರುವ ಬುದ್ದಿಜೀವಿಗಳಾದರೂ ನಮ್ಮ ನಾಡಿಗೆ ಕೊಟ್ಟಿರುವುದೇನು ?  ನಾರಾಯಣಮೂರ್ತಿಯವರನ್ನು ಬರಿ ಒಬ್ಬ ಉದ್ಯಮಿ ಮತ್ತು ಹಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಅವರು ತಾವು ಬರೆದ ಪುಸ್ತಕಗಳನ್ನೇನು ಉಚಿತವಾಗಿ ಜನರಿಗೆ ಕೊಡುತ್ತಿದ್ದಾರ ? ನಾರಾಯಣಮೂರ್ತಿಯವರನ್ನು ಮತ್ತೊಬ್ಬ ಉದ್ಯಮಿ ಮಲ್ಲ್ಯ ಜೊತೆ ಹೋಲಿಸುವುದು ಅದೆಷ್ಟು ಸರಿ ?. ಕನ್ನಡ ಹಬ್ಬಗಳು ಮೇಲೆ ಹೇಳಿದಂತೆ ಬರಿ ಸಾಹಿತಿ ಮತ್ತು ಕವಿಗಳಿಗೆ ಅಲ್ಲ ಮತ್ತು ಅವರ ಖಾಸಗಿ ಕಾರ್ಯಕ್ರಮಗಳು ಅಲ್ಲ. ಆದ್ದರಿಂದ ನಾರಾಯಣಮೂರ್ತಿಯವರು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುವುದರಲ್ಲಿ ಯಾವ ತಪ್ಪು ಕಾಣಿಸುತ್ತಿಲ್ಲ ಮತ್ತು ಉದ್ಘಾಟಿಸುವ ಎಲ್ಲ ಹಕ್ಕು ಅವರಿಗಿದೆ. ಸರಕಾರ ಮತ್ತು ಸಮ್ಮೇಳನ ಸಮಿತಿಯು ನಾರಾಯಣಮೂರ್ತಿಯವರ ಪರವಾಗಿ ನಿಂತಿರುವುದು ಸರಿ ಎಂದು ನನ್ನ ಭಾವನೆ.

            ರಾಜ್ಯದ ನಾಯಕರು,ಹಿರಿಯರು ಮತ್ತು ನಾವುಗಳು ನಿಜವಾಗಿಯೂ ಭಾಷೆಯನ್ನು, ಕನ್ನಡಿಗರನ್ನು ಹಾಗೂ ಕರ್ನಾಟಕದ ಸಾದಕರನ್ನುಗೌರವಿಸದೇ ಇದ್ದರೆ ಮತ್ತ್ಯಾರೂ ನಮ್ಮನು ಗೌರವಿಸುತ್ತಾರೆ. ವಿವಾದಗಳಿಗೆ ಎಡೆಮಾಡಿಕೊಡದೇ , ಒಬ್ಬರನ್ನೊಬ್ಬರು ಗೌರವಿಸುತ್ತಾ, ಪ್ರೀತಿಸುತ್ತ ಹಬ್ಬಗಳನ್ನು ಅಥವಾ ಸಮ್ಮೇಳನಗಳನ್ನು ಆಚರಿಸಿದರೆ ಮಾತ್ರ ಸಾರ್ಥಕತೆ ದೊರೆಯುವುದೇ ಹೊರತು ವಿವಾದಗಳಿಂದ ಅಲ್ಲ.  

ನಿಮಗಾಗಿ.......
ನಿರಂಜನ್

2 ಕಾಮೆಂಟ್‌ಗಳು:

  1. ನೀನು ಬರೆದಿರುವ ವಿಷಯ ತುಂಬಾ ಚೆನ್ನಾಗಿದೆ. ನಿಜಕ್ಕೂ ಸಾಹಿತ್ಯ ಸಮ್ಮೇಳನ ರಾಜಕೀಯವಾಗುತ್ತಿದೆಯೇ ಹೊರತು ಕನ್ನಡದ ಉದ್ಹ್ಧಾರಕ್ಕಾಗಿ ಅಲ್ಲ.ಅದೊಂದು ರಾಜಕೀಯ ಧನ್ದೆಯೇ ಹೊರತು ಬೇರೇನೂ ಅಲ್ಲ.

    ಪ್ರತ್ಯುತ್ತರಅಳಿಸಿ
  2. U r correct ....Really there are lot of other issues which these people can look out for.

    ಪ್ರತ್ಯುತ್ತರಅಳಿಸಿ