ಹೇಳಲಾಗದ ಒಂದು ಭಾವ ...........
ಏನೋ ಬಿಟ್ಟು ಬಂದ ಭಾವ ಒಂದು ಕಡೆಯಾದರೆ, ತಿಂಗಳ ನಂತರ ಅವಳನ್ನು ನೋಡುವ ಖಾತರ ಮತ್ತೊಂದೆಡೆ. ಸಮಯ ಸಾಗುತ್ತಿಲ್ಲ, ಪ್ರಯಾಣ ಹಿತವಾಗಿದ್ದರು ನಿದ್ದೆ ಮಾತ್ರ ಬರುತ್ತಿಲ್ಲ. ಬೆಳಗಿನ ಜಾವ ಸುಮಾರು ೩ ಗಂಟೆ ಇರಬಹುದು, ಕಷ್ಟಪಟ್ಟು ಕಣ್ಣು ಮುಚ್ಚಿದೆ. ಗಗನಸಖಿಯೋ ಅಥವಾ ಗಗನಸಖನೋ ಬಂದು ಏನೋ ಕೇಳಿದ ಹಾಗೆ ಆಯಿತು. ಕಣ್ಣು ಬಿಟ್ಟು ನೋಡಿದರೆ ಯಾರು ಇಲ್ಲ. ನಾ ಎಲ್ಲಿರಬಹುದೆಂದು ಕಿಟಕಿಯಲ್ಲಿ ನೋಡಿದರೆ ಬರಿ ಕತ್ತಲು. ಮತ್ತೆ ಕಣ್ಣುಮುಚ್ಚಿ ಮಲಗಿದೆ. ಸ್ವಲ್ಪ ಸಮಯದಲ್ಲೇ ಪೈಲಟ್ "ನಾವು ೩೦ ನಿಮಿಷಗಳಲ್ಲಿ ದೋಹಾ ತಲುಪುತ್ತೇವೆ " ಎಂದಾಗ ಒಂದು ಹಂತದ ಪ್ರಯಾಣ ಮುಗಿದಿತ್ತು.
ನಿದ್ದೆ ಇಲ್ಲದ ಆ ಅರೆಗಣ್ಣುಗಳಲ್ಲಿ ಕಿಟಕಿಯಲ್ಲಿ ನೋಡಿದೆ , ಸುತ್ತಲು ನೀಲಾಕಾಶ, ಅಲ್ಲಲ್ಲಿ ಶುಭ್ರ ಬಿಳಿ ಮೋಡಗಳ ರಾಶಿಗಳು. ಬಂಗಾರದಳದಿಯ ಬಣ್ಣದಿಂದ ಕಂಗೊಳಿಸುತ್ತಿದ್ದ ಪೂರ್ವ ಸೂರ್ಯನಾಗಮನಕ್ಕೆ ಸಜ್ಜಾಗಿದ್ದ. ಅಮ್ಮ ಮತ್ತು ಆತ್ಮೀಯರನ್ನು ಬಿಟ್ಟು ಬಂದಾಗ ಆಗಿದ್ದ ದುಃಖಕ್ಕೆ ಈ ಅದ್ಬುತ ವಾತಾವರಣ ಸ್ವಲ್ಪ ಕಡಿವಾಣ ಹಾಕುತಿತ್ತು. ನನ್ನ ಮತ್ತು ನನ್ನವಳ ಆ ಒಂದು ತಿಂಗಳ ಅಗಲಿಕೆಯ ದುಃಖವೂ ಕೂಡ ಕತ್ತಲು ಕಳೆದಂತೆ ಕಳೆಯುತ್ತಿತ್ತು. ಅಷ್ಟರಲ್ಲೇ ವಿಮಾನ ದೋಹಾ ನಿಲ್ದಾಣವನ್ನು ತಲುಪಿತು. ಒಂದು ವಿಮಾನ ಇಳಿದು, ಲಂಡನ್ ಗೆ ತೆರೆಳುವ ಮತ್ತೊಂದು ವಿಮಾನವನ್ನು ನಾನು ಏರಿದಾಗ ನಿದ್ದೆ ಸಂಪೂರ್ಣ ಮಾಯವಾಗಿತ್ತು. ಇನ್ನೇನು ನಾ ಲಂಡನ್ ತಲುಪುತ್ತೇನೆ , ಅವಳನ್ನು ನೋಡುತ್ತೇನೆ ಎನ್ನುವ ಹಂಬಲ ನನ್ನ ಮನಸ್ಸಿನಲ್ಲೂ ಹುಟ್ಟಿತ್ತು, ಪೂರ್ವ ದಿಕ್ಕಿನಲ್ಲಿ ಎಳೆಯ ಸೂರ್ಯ ಉದಯಿಸಿದ ಹಾಗೆ. ನೋಡು ನೋಡುತ್ತಿದ್ದಂತೆಯೇ ವಿಮಾನ ಮತ್ತೊಮ್ಮೆ ಅಕಾಶಕ್ಕೇರಿತು. ಮನಸ್ಸು ಹಗುರವಾಯಿತು, ವಿಮಾನ ತೇಲುತ್ತ ತೇಲುತ್ತಾ ಆಕಾಶದಲ್ಲಿ ಸಾಗಿದಂತೆ, ನನ್ನ ಮನಸ್ಸು ಕೂಡ ನನ್ನವಳನ್ನು ಕಾಣುವ, ತಬ್ಬುವ ತವಕದಲ್ಲಿ ತೇಲುತಿತ್ತು.
ಎರೆಡನೆ ಹಂತದ ಪ್ರಯಾಣವನ್ನು ಶುರು ಮಾಡಿದ ಈ ವಿಮಾನ ಲಂಡನ್ ತಲುಪಲು ಇನ್ನು ಹತ್ತು ಗಂಟೆ ಬೇಕು. ಕಾಲ ಕಳೆಯುವುದು ಕಷ್ಟವಾಗುತ್ತಿದೆ. ಮುಂದಿದ್ದ ಮನೋರಂಜನೆಯ ಪರಿಕರಗಳು ನಿರುಪಯುಕ್ತವೆನಿಸುತ್ತಿವೆ. ನಿದ್ದೆ ಕಣ್ಣು ಬಿಟ್ಟಾಗ ಮಾತ್ರ ಬರುತ್ತಿದೆ , ಕಣ್ಣು ಮುಚ್ಚಿದರೆ ಹೋಗುತ್ತಿದೆ. ಆಗಾಗ ಅಲ್ಪ-ಸ್ವಲ್ಪ ನಿದ್ದೆ ಮಾಡಿ ಕಣ್ಣು ಬಿಟ್ಟು ನೋಡಿದರೆ ಇನ್ನು ಲಂಡನ್ ಬಹಳ ದೂರವೇ ಇದೆ. ಮತ್ತೊಮ್ಮೆ ವಿಮಾನ ಕತ್ತಲಲ್ಲಿ ಪ್ರವೇಶ ಮಾಡಿದಂತೆ ಭಾಸವಾಯಿತು. ನಿಜ ಮತ್ತೆ ಸ್ವಲ್ಪ ಕತ್ತಲು ಸುತ್ತಲು ಆವರಿಸಿತು. ಯುರೋಪ್ ಹಾಗು ಏಷ್ಯ ಖಂಡಗಳ ನಡುವಿರುವ ಸಮಯದ ಅಂತರವೇ ಇದಕ್ಕೆ ಕಾರಣ. ಕೆಲವು ನಿಮಿಷಗಳ ನಂತರ ನಿದಾನವಾಗಿ ಇನ್ನೊಂದು ಬಾರಿ ಸೂರ್ಯ ಉದಯಿಸಿದ ಹಾಗೆ ಕಾಣಿಸಿತು. ಮತ್ತೊಮ್ಮೆ ನನ್ನ ಮನಸ್ಸಿನ್ನಲ್ಲಿ ಆಗ ತಾನೇ ಮಲಗಿದ್ದ ಭಾವನೆಗಳು ಮೇಲೆದ್ದವು. ಇನ್ನೂ ೫ ಗಂಟೆಗಳ ಕಾಲ ಪ್ರಯಾಣವಿದೆ ಲಂಡನ್ ತಲುಪಲು. ಕೇವಲ ಆರೇಳು ಗಂಟೆಗಳ ಅವದಿಯಲ್ಲೇ ಇದು ನನ್ನ ಎರೆಡನೆಯ ಸೂರ್ಯೋದಯದ ದರ್ಶನ.
ನನಗೇನೋ ಪ್ರಯಾಣ ಸಾಗಿದಂತೆ ಅನ್ನಿಸಲೇ ಇಲ್ಲ, ಆದರೂ ಸಹ ನಮ್ಮ ಪೈಲಟ್ ನಿಗಧಿತ ಸಮಯಕ್ಕೂ ಮುನ್ನವೇ ಲಂಡನ್ನಿನ ಸರಹದ್ದಿಗೆ ತಲುಪಿದ್ದ. ಸಮಯಕ್ಕೂ ಮುಂಚಿತವಾಗಿಯೇ ನಮ್ಮ ವಿಮಾನ ಅಲ್ಲಿಗೆ ಬಂದಿದ್ದರಿಂದ ATS ಲಂಡನ್ ಇಂದ ವಿಮಾನಕ್ಕೆ ಹೀತ್ರೋ ನಿಲ್ದಾಣದಲ್ಲಿ ಇಳಿಯಲು ರಹದಾರಿ ಸಿಗಲಿಲ್ಲ. ಈ ಕಾರಣಕ್ಕಾಗಿ ಲಂಡನ್ ಸರಹದ್ದಿನಲ್ಲೇ, ನೀಲಾಶದಲ್ಲಿ ಹದ್ದು ಹಾರಾಡಿದಂತೆ ನಮ್ಮ ವಿಮಾನವು ಕೂಡ ರಹದಾರಿಗೆ ಕಾಯುತ್ತ ಆಕಾಶದಲ್ಲೇ ಹಾರಡತೊಡಗಿತು. ಆ ವೇಳೆಗಾಗಲೇ ನನಗೆ "ನಾ ಅದೆಷ್ಟೋತ್ತಿಗೆ ವಿಮಾನ ಇಳಿಯುತ್ತೇನೋ, ಯಾವಾಗ ಅವಳನ್ನು ನೋಡುತ್ತೇನೋ" ಅನ್ನುವ ಆಸೆ ಅತಿಯಾಗಿತ್ತು. ಈ ಹಾರಾಟದಲ್ಲಿ ನನ್ನ ಕಣ್ಣುಗಳೆನೋ ಲಂಡನ್ನಿನ ಮೇಲ್ನೋಟವನ್ನು ಸವಿದವಾದರೂ, ಆ ಸಮಯದಲ್ಲಿ ಬೇರೆ ಏನೋ ಬಯಸುತ್ತಿದ್ದ ನನ್ನ ಮನಸ್ಸಿಗೆ ಅಷ್ಟೊಂದು ಮುದ ನೀಡಲಿಲ್ಲ.
ವಿಮಾನಕ್ಕೆ ನಿಲ್ದಾಣದಲ್ಲಿ ಇಳಿಯುವ ತವಕ, ನನಗೆ ನನ್ನವಳ ಸೇರುವ ತವಕ. ಕೆಳಗೆ ನೋಡಿದರೆ ನನ್ನ ಕಣ್ಣುಗಳಿಗೆ ಆ ವಿಮಾನ ನಿಲ್ದಾಣ ಕಾಣುತ್ತಿದೆ . "ಅಲ್ಲಿ ನನ್ನವಳು ನನಗಾಗಿ ಕಾಯುತ್ತಿದ್ದಾಳೆ , ನಾನು ಅವಳನ್ನು ನೋಡಬೇಕು, ಅದೊಷ್ಟು ಬೇಗ ಅವಳನ್ನು ಸೇರ ಬೇಕು " ಎನ್ನುವ ಆಸೆ ಹುಚ್ಚಿನಂತೆ ಹೆಚ್ಚುತ್ತಿದೆ. ಹೇಗೆ ವಿಮಾನ ಒಂದೇ ಪಥದಲ್ಲಿ ಈ ಸರಹದ್ದನ್ನು ಸುತ್ತುತಿದೆಯೋ, ಹಾಗೆಯೇ ನನ್ನ ಮನಸ್ಸು ಕೂಡ ಅದೇ ನಿಲ್ದಾಣದಲ್ಲಿ ನನಗಾಗಿ ಕಾಯುತ್ತಿರುವ ನನ್ನವಳನ್ನು ಒಂದೇ ಸಮನೆ ಸುತ್ತುತಿದೆ. ಒಂದೊಷ್ಟು ಸಮಯದ ನಂತರ ATS ಲಂಡನ್ ನಿಂದ ರಹದಾರಿ ಸಿಕ್ಕಿತು. ನಮ್ಮ ವಿಮಾನ ಜೋರಾಗಿ ಭೂಮಿಗೆ ಹತ್ತಿರವಾಗುತ್ತಿದೆ, ನನ್ನ ಮನಸ್ಸು ಸಹ ನನ್ನವಳ ನಿಜ-ಸಾಂಗತ್ಯಕ್ಕೆ ಹತ್ತಿರವಾಗುತ್ತಿದೆ. ವೇಗದಲ್ಲಿ ವಿಮಾನ ಭೂಮಿಯ ಕಡೆ ಬಂದರೆ , ಅದಕ್ಕೆ ಹತ್ತುಪಟ್ಟು ವೇಗದಲೇ ನನ್ನವಳ ಮೇಲಿನ ನನ್ನ ಮೋಹ ಆಕಾಶಕ್ಕೆ ಏರುತ್ತಿದೆ. ಕೆಲವು ನಿಮಿಷದಲ್ಲೇ ವಿಮಾನ ನಿಲ್ದಾಣದಲ್ಲಿ ನಿಂತಿತು. ನನ್ನ ಮನಸ್ಸು ಮಾತ್ರ ಆಸೆಯ ಓಟ ಶುರು ಮಾಡಿತು.
ಸರಸರನೆ ಇಳಿದು , ಎಲ್ಲ ಹಂತದ ವ್ಯವಹಾರಗಳ ಮುಗಿಸಿ, ಹೀತ್ರೋ ವಿಮಾನ ನಿಲ್ದಾಣದಲ್ಲಿ ನನಗಾಗಿ ಕಾಯುತ್ತಿದ್ದ ನನ್ನವಳ ಮೊಬೈಲ್ಗೆ ಕರೆಮಾಡಿ ನನ್ನ ಕುಶಲೋಪರಿ ಹೇಳುತ್ತಾ, ನಿಲ್ದಾಣದಲ್ಲಿ ಅವಳಿರುವ ಕಡೆಗೆ ನಾನು ನೆಡೆಯುವಾಗ , ಏನೋ ಒಂದು ಹೇಳಲಾಗದ ಭಾವ, ಯಾವುದೋ ಮೋಹ ನನ್ನನ್ನು ಅವಳತ್ತ ಸೆಳೆಯುತ್ತಿದೆ. ಅದೇನು ಹುಚ್ಚು ಪ್ರೀತಿಯೋ, ಹೆಚ್ಚು ಪ್ರೇಮವೋ ಗೊತ್ತಿಲ್ಲ. ಆದರೂ ಅದೊಂದು ಸವಿಯಲೇಬೇಕಾದ ಅದ್ಭುತಭಾವ. ಕಣ್ಣಳತೆಯ ದೂರದಲ್ಲಿ ನನಗಾಗಿ ಕಾಯುತಿದ್ದ ಅವಳನ್ನು, ನನ್ನ ಕಣ್ಣುಗಳು ಒಂದೇ ಕ್ಷಣದಲ್ಲಿ ಪತ್ತೆ ಹಚ್ಚಿದವು. ಕಾಲಗಳು ತಮಗೆ ತಾವೇ ವೇಗ ಹೆಚ್ಚಿಸಿಕೊಂಡವು ಅವಳಿದ್ದ ಕಡೆಗೆ. ಅವಳು ಹತ್ತಿರವಾದಂತೆ ನನ್ನ ಕೈಗಳು ತಮ್ಮ ಹಿಡಿತದಲಿದ್ದ ಲಗ್ಗೇಜನ್ನು ತಾವೇ ಬಿಟ್ಟುವು. ಪ್ರಪಂಚದ ಅರಿವಳಿದು ನನ್ನ ಮಾತುಗಳು ಮರೆಯಾಗಿ, ನಾ ಮೋಹದಲಿ ನನ್ನವಳ ಮೈತಬ್ಬಿದೆ .
ನಿಮಗಾಗಿ
ನಿರಂಜನ್