ಬುಧವಾರ, ಅಕ್ಟೋಬರ್ 14, 2015

ಇದು ನಿಜವಾದ ಧರ್ಮವೇ ??

ಒಂದು ದೊಡ್ಡ ಜನಗಳ ಗುಂಪು  ಉತ್ತರ ಪ್ರದೇಶದ ಒಂದು ಗ್ರಾಮದಲ್ಲಿ ಇದ್ದಕ್ಕಿದ್ದಂತೆಯೇ ಒಂದು ಮನೆಗೆ ನುಗ್ಗುತ್ತದೆ. ಮನೆಯಲ್ಲಿದ್ದ ಕುಟುಂಬ ಸದಸ್ಯರನ್ನ ಬೀದಿಗೆ ನಿರ್ದಾಕ್ಷಣ್ಯವಾಗಿ  ಎಳೆದು ಬಾಯಿಗೆ ಬಂದಂತೆ ನಿಂದಿಸುತ್ತದೆ. ಆ ಕುಟುಂಬಕ್ಕೆ ಏನಾಗುತ್ತಿದೆ ಎನ್ನುವಷ್ಟರಲ್ಲಿ, ಆ ಗುಂಪು ಅವರ ಮೇಲೆರಗಿ ಜೀವ ಹೋಗುವಂತೆ ಅವರನ್ನು ಥಳಿಸುತ್ತದೆ. ಅಷ್ಟೊತ್ತಿಗೆ ಮನೆಯ ಮುಖಂಡನ ಜೀವವು  ಆ ಗುಂಪಿನ ಮೊಂಡುತನಕ್ಕೆ ನಲುಗಿ ನಂತರ ಬಲಿಯಾಗುತ್ತದೆ. 

          ಆ ರೀತಿಯಾಗಿ ಆಕ್ರಮಣ ಮಾಡಿದ ಆ ಗುಂಪು ಯಾವುದು , ಆ ಕುಟುಂಬ ಯಾರದ್ದು , ಸತ್ತುಹೋದ ಆ ಮನುಷ್ಯ ಯಾರು ಎಂದು ನಮಗೆಲ್ಲ ತಿಳಿದಿದೆ. ನಡೆದಿರುವ ಕೃತ್ಯ ಸರಿಯೋ ತಪ್ಪೋ , ಧರ್ಮವೋ ಅಧರ್ಮವೋ, ಯಾರದು ಸರಿ ಯಾರದು ತಪ್ಪು ಎನ್ನುವುದು ನಮ್ಮ ನಿಮ್ಮೆಲ್ಲರ ಯೋಚನೆಗೆ ಬಿಟ್ಟದ್ದು.
 
         ಕೆಲವರಿಗೆ  ಈ ಘಟನೆ ತೀರ ಅಸಹ್ಯ ಮತ್ತು ಅಧರ್ಮೀಯವಾಗಿ ಕಾಣಿಸುತ್ತದೆ , ಮತ್ತೆ ಕೆಲವರಿಗೆ ಇದು ಧರ್ಮ ರಕ್ಷಿಸಿದ ಮಹಾತ್ ಕಾರ್ಯವಾಗಿ ಕಾಣುತ್ತದೆ. ಎಲ್ಲಾ ಜನರು ಅವರದೇ ಆದ ದೃಷ್ಟಿಕೋನಗಳಿಂದ ಈ ಘಟನೆಯನ್ನು ವಿಶ್ಲೇಷಿಸುತ್ತಾರೆ. 


    
        ಈ ವಿಚಾರದಲ್ಲಿ ನನ್ನ ವೈಯುಕ್ತಿಕ ಭಾವನೆ ಏನೆಂದರೆ , "ಪ್ರತ್ಯಕ್ಷವಾಗಿ ನೋಡಿದರೂ ಸಹ ಪ್ರಮಾಣಿಸಿ ನೋಡು" ಎಂದು  ಹೇಳುವ ನಾವು , ಒಹಾಪೋಹಗಳ ಆಧಾರದ ಮೇಲೆ ಒಬ್ಬ ಮನುಷ್ಯನನ್ನು ಹತ್ಯೆ ಮಾಡಿ, ಅ ಘಟನೆಗೆ ಧರ್ಮ-ಅಧರ್ಮದ ಬಣ್ಣ ಲೇಪಿಸುವುದು ಅದೆಷ್ಟು ಸರಿ ?

         ಧಯವೇ ಧರ್ಮದ ಮೂಲವಯ್ಯ, ಧಯವೇ ನಮ್ಮ ಧರ್ಮದ ಭದ್ರ ಬುನಾದಿ, ಪರಧರ್ಮ ಸಹಿಷ್ಣತೆ ಎನ್ನುವ ಸತ್ವ ನಮ್ಮ ಧರ್ಮದ ಬೇರು ಎಂದು ಹೇಳುವ ನಾವು, ಇನ್ನೊಬ್ಬ ಧರ್ಮೀಯನನ್ನು ಕ್ಶುಲ್ಲಕ್ಕ ಗಾಳಿಮಾತಿನ ಆಧಾರದ ಮೇಲೆ  ಸಾಯಿಸಿ, ಗೋಹತ್ಯಗೆ ಬದಲಾಗಿ ಆತನ ಹತ್ಯ ಎನ್ನುವುದು ನಮ್ಮ ಧರ್ಮದ ಸಂಸ್ಕೃತಿಯೇ ?

        ದೇವರು ಕಣ-ಕಣಗಳಲ್ಲೂ,  ಜಗತ್ತಿನ ಎಲ್ಲಾ ಜೀವರಾಶಿಗಳಲ್ಲೂ, ಪ್ರತಿಯೊಬ್ಬರ ಹೃದಯದಲ್ಲೂ ಇದ್ದಾನೆ ಎನ್ನುವ  ಧರ್ಮವನ್ನು ಪಾಲಿಸುವ ನಾವು , ಮತ್ತೊಂದೆಡೆ ಅದೇ ಧರ್ಮ ಹೆಸರಿನಲ್ಲಿ ಮತ್ತೊಬ್ಬನ ಜೀವ ತೆಗೆದು, ನಾವು ಧರ್ಮ ರಕ್ಷಕರು ಎನ್ನುವುದನ್ನು ನಾವೇ ಒಪ್ಪಬಹುದೇ ? 

        ಕೆಲವರು ಧರ್ಮಾಂಧರಾಗಿ  ಒಳ್ಳೆಯ ಹಾದಿ ಬಿಟ್ಟು ಅಧರ್ಮಿಗಳಾಗಿ ಅನ್ಯಾಯ ಅಕ್ರಮಗಳನ್ನು ಮಾಡಿದರೆ , ಸೇಡು ತೀರಿಸಿಕೊಳ್ಳಲು ನಾವು ಕೂಡ ಅದೇ ಮಾರ್ಗವನ್ನು ತುಳಿದರೆ ನಮಗೂ ಮತ್ತು ಅವರಿಗೂ ಇರುವ ವ್ಯತ್ಯಾಸವಾದರೂ ಏನು ?

       ಇಂಥಹ ಘಟನೆಗಳಿಂದ ನಡೆದಾಗ ಧರ್ಮದ ಹೆಸರಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಕೆಲವು ರಾಜ್ಯಗಳಲ್ಲಿ ಈಗ ಚುನಾವಣಾ ಸಮಯವಾದ್ದರಿಂದ, ರಾಜಕೀಯ ಪಕ್ಷಗಳಿಗೂ ಈ ಘಟನೆ ಒಂದು ಕೆಟ್ಟ ಅಸ್ತ್ರವಾಗಿದೆ.  ಒಬ್ಬರನ್ನೊಬ್ಬರು ದೂರಲು , ಜನಗಳ ಮದ್ಯ ಕಿಚ್ಚು ಹಚ್ಚಲು, ತಾವು ಅಧಿಕಾರಕ್ಕೆ ಬರಲು ಎಲ್ಲಾ ರಾಜಕೀಯ ಪಕ್ಷಗಳು ಇಂಥಹ ಘಟನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದಕ್ಕೆ ನಾವು ಎಂದಿಗೂ ಅವಕಾಶ ಕೊಡಬಾರದು.
 
       ನಮ್ಮ ಸ್ವಂತ ಬುದ್ದಿಯಿಂದ , ಸ್ವಲ್ಪ ವಿವೇಚನೆಯಿಂದ ಯೋಚಿಸಿದರೆ ಮಾತ್ರ ಈ ಘಟನೆ ಯಾವ ಮಟ್ಟದ್ದು ,  ಈ ರೀತಿ ನೆಡೆದ್ದದ್ದು ಅದೆಷ್ಟು ದುರಾದೃಷ್ಟಕರ ಎಂದು ತಿಳಿಯುತ್ತದೆ. ಧರ್ಮೋ ರಕ್ಷಿತಿ ರಕ್ಷಿತಃ ಎಂಬುದರ ಸರಿಯಾದ ಅರ್ಥ ನಮಗೆ ಆಗದೆ ಹೋದಾಗ ಸಮಾಜದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ.  ಎಲ್ಲಾ ಧರ್ಮಗಳಲ್ಲೂ ಒಳ್ಳೆಯದು ಕೆಟ್ಟದ್ದು ಇದ್ದೆ ಇರುತ್ತದೆ. ನಾವು ಏನನ್ನು ಅಳವಡಿಸಿಕೊಳ್ಳುತ್ತೇವೆ ಅನ್ನುವುದು ಮುಖ್ಯ. ನಮ್ಮ ಧರ್ಮದಲ್ಲಿ ಇರುವ ಪ್ರತಿಯೊಬ್ಬರು ಒಳ್ಳೆಯವರಲ್ಲ, ಅನ್ಯ ಧರ್ಮದಲ್ಲಿ ಇರುವವರೆಲ್ಲರೂ  ಕೆಟ್ಟವರಲ್ಲ. ಧರ್ಮ ರಕ್ಷಣೆಯ ಸುಳ್ಳು ನೆವದ ಮೇಲೆ ಯಾವುದೇ ಧರ್ಮದ ಜನರು ಯಾವುದೇ ಅನ್ಯಾಯ ಅಕ್ರಮಗಳನ್ನು ಮಾಡಿದರೆ ಒಳ್ಳೆಯ ಸಮಾಜವು ಅಂಥಹ ಧರ್ಮವನ್ನು ಎಂದಿಗೂ ಒಪ್ಪುವುದಿಲ್ಲ.

ನಿಮಗಾಗಿ 
ನಿರಂಜನ್

ನಾಮಕರಣ



                                       ನಾಮಕರಣ 

ಅಡುಗೆ ಮನೆಯಲ್ಲಿ ಕೆಲಸ ಮಾಡಿಕೊಳ್ಳುತ್ತಿರುವ ರೂಪ ಈಗಿನ ಕಾಲದ ಹೆಣ್ಣು ಮಗಳು, ಅದೇ ಕೋಣೆಗೆ ಅಂಟಿಕೊಂಡಿರುವ ಸಣ್ಣ ದೇವರಮನೆಯಲ್ಲಿ ಪೂಜೆ ಮಾಡುತ್ತಿರುವ ಹಳೆಕಾಲದ "ದೇವಮ್ಮ" ರೂಪಳ ಅತ್ತೆ. ಈಗಿನ ಕಾಲಕ್ಕೂ ಮತ್ತು ಆಗಿನ ಕಾಲಕ್ಕೂ ಮದ್ಯ ಸಿಕ್ಕಿ ಹಾಕಿಕೊಂಡಿರುವವನು "ಮೋಹನ", ಪಕ್ಕದಲ್ಲೇ ಪೇಪರ್ ಓದುತ್ತಿದ್ದಾನೆ.

ದೇವಮ್ಮ :  ರೂಪ  , ಸ್ವಲ್ಪ ನೀರು ಕೊಡೆ ...

ರೂಪ :  ತಂದೆ ಅತ್ತೆ , ( ನೀರು ತಂದ ರೂಪ ಅತ್ತೆಗೆ) ನೀರು ತಗೋಳಿ ,

ದೇವಮ್ಮ : ನಿಮ್ಮ ಅಣ್ಣನ ಮಗನಿಗೆ ನಾಮಕರಣದ  ಮಾಡಿದ್ರೇನೆ  ರೂಪ ? 

ರೂಪ : ಇನ್ನೂ ಇಲ್ಲ ಅತ್ತೆ,  ಅವರು ಹೆಸರು ಚೂಸ್ ಮಾಡೋದ್ರಲ್ಲೇ ಇದ್ದಾರೆ .

ದೇವಮ್ಮ : ಹೌದ ? , ಹೆಸರು ಇಡೋಕೆ ಅಷ್ಟೊಂದು ಯಾಕೆ ತಲೆ ಕೆಡಿಸಿಕೊಂಡಿದ್ದಾರೆ ಅಂತ ?? ಯಾವ್ದೋ ಒಂದು ಹೆಸರು ಇಟ್ಟರೆ ಆಯ್ತಪ್ಪ. ಹೆಸರುಗಳಿಗೇನು ಬರವೆ ??. 

ರೂಪ : ಏನೋ ಗೊತ್ತಿಲ್ಲ ಅತ್ತೆ , ಅವರಿಷ್ಟ ಬಿಡಿ... 

ದೇವಮ್ಮ : ನನಗೆ ಹುಟ್ಟೋ ಮೊಮ್ಮಕ್ಕಳಿಗೆ ಹೆಸರು ಇಡೋದು, ಇಷ್ಟೊಂದು ಕಷ್ಟ ಆಗೋಲ್ಲ ನೋಡ್ತಾ ಇರು, 

ಮೋಹನ : ( ನಗುತ್ತ )  ಮೊದ್ಲು ಮಗು ಆಗ್ಲಿ ತಡಿಯಮ್ಮ ..( ರೂಪಾಳೂ ಕೂಡ ನಸು ನಗುತ್ತಾಳೆ, ಅಡುಗೆ ಮನೆಯಿಂದ )
 
ದೇವಮ್ಮ :  ಇರೋ ಹೆಸರುಗಳನ್ನೂ ಬಿಟ್ಟು , ಎಂತೆಂತವೋ ಹೆಸರನ್ನ ಹುಡಿಕೊಂಡು ಕೂತ್ರೆ ಹಿಂಗೆ ಲೇಟ್ ಆಗುತ್ತೆ ನೋಡು, ಏನೇನೋ ಕೇಳದ ಹೆಸರುಗಳು, ಅರ್ಥ ಆಗದ ಹೆಸರುಗಳೆಲ್ಲ ಇಡ್ತಾರೆ ಈ ಕಾಲದಲ್ಲಿ. ನಾ ಹಿಂಗೆ ಆಗೋಕೆ ಬಿಡೋಲ್ಲ ನೋಡ್ತಾ ಇರು. 

ರೂಪ : ಅದೆಲ್ಲ ಮಕ್ಳು ಅದಮೇಲೆ ಯೋಚನೆ ಮಾಡಿದ್ರೆ ಆಯ್ತು ಬಿಡಿ ಅತ್ತೆ. 

ದೇವಮ್ಮ : ಆಗ್ತಾವೆ ಬಿಡೇ , ನಿಮ್ಮಿಬ್ರಿಗೂ ಮದುವೇನೆ ಆಗಿದೆ ಅಂತೆ .  
  ( ರೂಪ ನಗುತ್ತ ಮೋಹನ ಮುಖ ನೋಡುತ್ತಾಳೆ ) 

ದೇವಮ್ಮ:  ಜನಕ್ಕೆ ಈ  ಹೆಸರು ಹುಡೋಕೊಕೆ ಯಾಕೆ ಇಷ್ಟು ಕ್ಷಷ್ಟ ಅಂತ ??  ಹೆಸರು ಇಡಬೇಕು ಅಂದ್ರೆನೂ  ಎಷ್ಟೊಂದು ಒಳ್ಳೆ ಹೆಸರು ಸಿಗ್ತಾವೆ.. .. 

ಮೋಹನ : ಹಾಗಾದ್ರೆ ನಂಗೆ ಗಂಡು ಮಗು ಆದ್ರೆ ಏನು ಹೆಸರು ಇಡೋಣಮ್ಮ ??? 

ದೇವಮ್ಮ :  ಸಕತ್ ಈಸಿ ನೋಡು , ಗಂಡು ಮಗು ಆದ್ರೆ ಈರಭದ್ರ ಅಂತ ಇಟ್ರೆ ಆಯ್ತಪ್ಪ . ಅದು ನಿಮ್ಮ ಮುತ್ತಾತನ ಹೆಸರು . 

ಮೋಹನ : ( ಉಕ್ಕಿ ಬರುವ ನಗೆಯನ್ನು ತದೆದುಕೊಳ್ಳುತ್ತ ) " ಈರಭದ್ರ " , ಆಹಾ ಎಷ್ಟೊಂದು ಒಳ್ಳೆ ಹೆಸರು , ಒಂದು ವೇಳೆ ಹೆಣ್ಣು ಮಗು ಆದ್ರೆ ??

ದೇವಮ್ಮ:  " ಕಾಳಮ್ಮ" , ಕಾಳಮ್ಮ ನಮ್ಮ ಕುಲ ದೇವಂತೆ ಹೆಸರು , ಪ್ರತಿ ದಿನ ಆ ತಾಯಿ ಹೆಸರು ನಮ್ ಬಾಯಲ್ಲಿ ಬಂದ್ರೆ ಕೋಟಿ ಪುಣ್ಯ ಬರುತ್ತೆ ಕಣೋ. 

ರೂಪ : " ಕಾಳಮ್ಮ " (ಭಯದೊಂದಿಗೆ ,,ನಗುತ್ತ) , ಒಂದು ವೇಳೆ  ಒಟ್ಟಿಗೆ ಅವಳಿ-ಜವಳಿ ಹೆಣ್ಣು-ಗಂಡು ಮಕ್ಳು ಹುಟ್ಟಿದ್ರೆ  ???

ದೇವಮ್ಮ : ನಮ್ಮ ಪುಣ್ಯ ಅಂತ ಅಂದುಕೊಂಡು , ಭದ್ರ ಅಂತ ಗಂಡಿಗೂ ಕಾಳಿ ಅಂತ ಅಂತ ಹೆಣ್ಣಿಗೂ , ಒಟ್ಟಾಗಿ   "ಭದ್ರ-ಕಾಳಿ " ಅಂತ ನಾಮಕರಣ ಮಾಡಿದ್ರೆ ಆಯ್ತಪ್ಪ , ಅಷ್ಟೇ ... 

ನಿಮಗಾಗಿ 
ನಿರಂಜನ್

ಸೋಮವಾರ, ಅಕ್ಟೋಬರ್ 5, 2015

ಪರ-ವಿರೋದ

                         
                                                  ಚರ್ಚೆಗಳು ....                                                                      

        ತ್ತೀಚಿನ ದಿನಗಳಲ್ಲಿ ನಾವೆಲ್ಲರೂ ರಾಜಕೀಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಯಾವ ರಾಜಕೀಯ ಪಕ್ಷ ನಮ್ಮ ಚಿಂತನೆಗೆ ಹತ್ತಿರವಾಗಿದೆಯೋ ಆ ಪಕ್ಷಗಳನ್ನು ನಾವು ಬೆಂಬಲಿಸುತ್ತೇವೆ. ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿದಿನವೂ ಯಾವುದಾದರು ಒಂದು ಸಮಾಜದ ವಿಷಯಗಳನ್ನು ಚರ್ಚೆಗೆ ತೆಗೆದುಕೊಂಡು, ಆ ವಿಷಯದ ಮೇಲೆ ತಮ್ಮ ನಿಲುವನ್ನು ವ್ಯಕ್ತಪಡಿಸಿ, ಆ ವಿಷಯಗಳ ಮೇಲೆ ಪಕ್ಷ-ಪಕ್ಷಗಳ ಮದ್ಯ  ಚರ್ಚೆಗಳನ್ನು ಆರಂಭಿಸುತ್ತವೆ. ಆ ಪಕ್ಷಗಳ   ಬೆಂಬಲಿಗರಾದ ನಾವು ಕೂಡ ನಮ್ಮದೇ ರೀತಿಯಲ್ಲಿ ಆ ವಿಷಯಗಳ ಬಗ್ಗೆ  ಸಮಾಲೋಚನೆ ಮಾಡುತ್ತೇವೆ. ಒಮ್ಮೊಮ್ಮೆ ಚರ್ಚೆಯಲ್ಲಿ ವಿಷಯದ ಪರವಿರುತ್ತೇವೆ , ಕೆಲವೊಮ್ಮೆ ವಿಷಯದ ವಿರುದ್ದವಿರುತ್ತೇವೆ. ಈ ರೀತಿಯ ಎಲ್ಲ ಚರ್ಚೆ-ಸಮಾಲೋಚನೆಗಳು ಪ್ರಜಾಪ್ರಭುತ್ವದಲ್ಲಿ ಬಹಳ ಆರೋಗ್ಯಕರ ಪಕ್ರಿಯೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಚರ್ಚೆಗಳೆಲ್ಲ ಆರೋಗ್ಯಕರವಾಗಿವೆಯಾ ಎನ್ನುವ ಪ್ರಶ್ನೆ ನನಗೆ ಕಾಡಲು ಶುರುವಾಗಿದೆ. ನಮ್ಮ ರಾಜಕೀಯ ಪಕ್ಷಗಳು ಸಾಮಾಜಿಕ ಕಳಕಳಿ ಇರುವ ವಿಷಗಳ ಮೇಲೆ ಚರ್ಚೆಗಳನ್ನು  ಪ್ರಾರಂಭಿಸುತ್ತಿವೆಯಾ ? ಅದೇ ರೀತಿಯಾಗಿ ಆ ಪಕ್ಷಗಳ ಬೆಂಬಲಿಗರಾದ ನಾವು ಕೂಡ ಅದೇ ವಿಷಯಗಳ ಬಗ್ಗೆ  ಪ್ರಾಮಾಣಿಕವಾಗಿ ನಮ್ಮ ನಿಲುವುಗಳನ್ನು ವ್ಯಕ್ತಪಡಿಸುತ್ತೇದ್ದೆವೆಯೇ ? ನಮ್ಮ ಚರ್ಚೆಗಳು ಸಾರ್ವಜನಿಕೆ ವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ , ಮಾಧ್ಯಮಗಳಲ್ಲಿ ಸರಿಯಾದ ಹಾದಿಯಲ್ಲಿ ಸಾಗುತ್ತಿವೆಯೇ ? ಎಂದು ನಮ್ಮನ್ನು  ನಾವೇ  ಪ್ರಶ್ನೆ ಮಾಡಿಕೊಳ್ಳುವಂತಹ ವಾತಾವರಣವೂ ಕೂಡ ಈಗ ಹುಟ್ಟಿಕೊಂಡಿದೆ ಎಂಬುದು ನನ್ನ ಭಾವನೆ. 

ರಾಜಕೀಯ ಪಕ್ಷಗಳು ಯಾವಗಲು ತಮ್ಮ ರಾಜಕೀಯ ಬೇಳೆ  ಬೇಯಿಸಿಕೊಳ್ಳಲು ಸಾಮಾಜಿಕ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತವೆ. ಇದು ನಮಗೆ ಗೊತ್ತಿರುವ ಸಹಜ ವಿಷಯ. ಆ ವಿಷಯಗಳಿಗೆ ತಾತ್ವಿಕ ಅಂತ್ಯ ಯಾವ ರಾಜಕೀಯ ಪಕ್ಷಕ್ಕೂ, ಯಾವ ಕಾಲಕ್ಕೂ ಬೇಕಾಗಿರುವುದಿಲ್ಲ. ಆದರೆ ನಾವು ಆ ಪಕ್ಷಗಳ ಬೆಂಬಲಿಗರು ಎಂಬ ಒಂದೇ ಕಾರಣಕ್ಕೆ ನಮ್ಮ ಪಕ್ಷಗಳು ಮಾಡಿದ್ದನ್ನೆಲ್ಲ ಸಮರ್ಥಿಸಿಕೊಳ್ಳುವುದು, ವಿರೋದ ಅಭಿಪ್ರಾಯ ವ್ಯಕ್ತಪಡಿಸುವ ಬೇರೆಯವರನ್ನು  ನಿಂದಿಸುವುದು, ಮೂದಲಿಸುವುದು ಅದೆಷ್ಟು ಸರಿ. ಚರ್ಚೆಗಳೆಂದರೆ ವಿಷಯಗಳ  ಪರ-ವಿರೋದ ಸಹಜ ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಬಾಯಿಗೆ ಬಂದಂತೆ ಅರಚುವುದು, ನಮ್ಮ ಪಕ್ಷ ಮಾಡಿದ್ದೆಲ್ಲ ಸರಿ , ನಿನ್ನ ಪಕ್ಷ ಏನು ಮಾಡಿದರು ತಪ್ಪು, ನಮ್ಮ ನಾಯಕನೊಬ್ಬನೆ ಸರಿ , ನಿಮ್ಮ ನಾಯಕ ನೀಚ ಎನ್ನುವ ಚರ್ಚೆಗಳು ನಿಜವಾಗಿಯೂ ನಮ್ಮ ದೇಶದ ಏಳಿಗೆಗೆ ಸಹಕಾರಿಯಲ್ಲ. 

ಬಹುದಿನಗಳಿಂದ ಜಾತಿ ರಾಜಕೀಯ ಮಾಡುತ್ತಿದ್ದ ಪಕ್ಷಗಳು ಈಗ ಧರ್ಮ ರಾಜಕೀಯಕ್ಕೂ ಇಳಿದಿವೆ. ಒಂದು ಪಕ್ಷ ತಾನೇ ಒಂದು ಧರ್ಮದ ರಕ್ಷನಂತೆ ಬಿಂಬಿಸಿಕೊಂಡರೆ , ಮತ್ತೊಂದು ಪಕ್ಷ ಇನ್ನೊಂದು ಧರ್ಮ ಅದೇ ಪಕ್ಷಕ್ಕೆ ಸೇರಿದ್ದು ಬೇರೆ ಯಾರು ಕೂಡ ಈ ಧರ್ಮದ  ಬಗ್ಗೆಯೂ ಮಾತನಾಡಬಾರದು ಎನ್ನುತ್ತಿವೆ. ಇದು ಕೇವಲ ಕೆಟ್ಟ ರಾಜಕೀಯವಲ್ಲವೇ ಮತ್ತೇನು ? ಈ ಪಕ್ಷಗಳನ್ನು ಹಿಂಬಾಲಿಸುವ ನಾವು ಸಾಮಾಜಿಕ ಜಾಲತಾಣಗಳಲ್ಲಿ ಜಾತಿ-ಧರ್ಮದ ಬಗ್ಗೆ ಕೀಳು ಮಟ್ಟದ ಚರ್ಚೆಗಳಲ್ಲಿ ತೊಡಗುತ್ತೇವೆ. ಸಾಮಾಜಿಕ ಜಾಲತಾಣಗಳನ್ನು  ನಾವು ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳದೆ ವಿಷಯ ವಿರೋದಿಗಳನ್ನು ನಿಂದಿಸಲು, ಧರ್ಮವೆನ್ನುವ ಸೂಕ್ಷ್ಮ ವಿಷಯದಲ್ಲಿ ಮತ್ತೊಬ್ಬರ ನಂಬಿಕೆಗೆ ದಕ್ಕೆ ತರಲು, ಶಾಂತಿ ಕದಡುವ ಸಲ್ಲದ ಚರ್ಚೆಗಳನ್ನು ಮಾಡಲು, ಸ್ನೇಹಿತರನ್ನು ಕೆರಳಿಸಲು , ಪಕ್ಷಗಳ ನಡುವೆ, ಜನರ ನಡುವೆ , ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತಲು ಬಳಸಿಕ್ಕೊಳ್ಳುತ್ತಿಲ್ಲವೇ ? 

ವಿಷಯ ಅದೆಷ್ಟೇ ಸೂಕ್ಷ್ಮವಾಗಿದ್ದರು ಅದರ ಮೇಲೆ ಚರ್ಚೆಯಾಗಬೇಕು ನಿಜ, ಆದರೆ ಸಾರ್ವಜನಿಕ ಚರ್ಚೆಗಳು ಇನ್ನೊಬ್ಬರ ಭಾವನೆಗಳನ್ನು ಕೆರಳಿಸುವ ಮಟ್ಟಕ್ಕೆ ಇಳಿಯಬಾರದು. ನಾನೇ ಸರಿ, ನನ್ನ ಆಲೋಚನೆಯಷ್ಟೇ  ಶ್ರೇಷ್ಠ,  ನನ್ನ ಪಕ್ಷವೇ ನಿಜವಾದ ರಾಜಕೀಯ ಪಕ್ಷ, ನನ್ನ ನಾಯಕನೇ ನಿಜವಾದ ದೇಶಭಕ್ತ ಬೇರೆಯವರೆಲ್ಲ ಧರ್ಮ-ರಾಷ್ಟ್ರ ವಿರೋದಿಗಳು, ನನ್ನ ವಿಷಯಗಳನ್ನು ನೀನು ವಿರೋದಿಸಿದರೆ ನೀನು ಕೂಡ ರಾಷ್ಟ್ರವಿರೋದಿ ಎನ್ನುವುದು ಸರಿಯಲ್ಲ. ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶವಿದೆ,  ಯಾರೇ ಚರ್ಚೆ ಆರಂಭಿಸಿದರು ಆ ವಿಷಯಗಳನ್ನು ನಾವು ಅಳೆದು-ತೂಗಿ ಆ ವಿಷಯಗಳನ್ನು  ಒಪ್ಪಬಹುದು ಇಲ್ಲದಿದ್ದರೆ ಬಿಡಬಹುದು. ಆದರೆ ಎಲ್ಲರ ಮೇಲೂ ತಮ್ಮ ಚಿಂತನೆಗಳನ್ನೇ ಏರುವುದು, ರಾಜಕೀಯ ಪಕ್ಷಗಳು ಏನು ಮಾಡಿದರು ಅವುಗಳ ಮೇಲೆ ಕುರುಡು ವಿಶ್ವಾಸ ಇಡುವುದು, ವಿಷಯ ವಿರೋದಿಗಳ ದ್ವೇಷಿಸುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.  

ನಿಮಗಾಗಿ 
ನಿರಂಜನ್