ಸೋಮವಾರ, ಅಕ್ಟೋಬರ್ 5, 2015

ಪರ-ವಿರೋದ

                         
                                                  ಚರ್ಚೆಗಳು ....                                                                      

        ತ್ತೀಚಿನ ದಿನಗಳಲ್ಲಿ ನಾವೆಲ್ಲರೂ ರಾಜಕೀಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಯಾವ ರಾಜಕೀಯ ಪಕ್ಷ ನಮ್ಮ ಚಿಂತನೆಗೆ ಹತ್ತಿರವಾಗಿದೆಯೋ ಆ ಪಕ್ಷಗಳನ್ನು ನಾವು ಬೆಂಬಲಿಸುತ್ತೇವೆ. ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿದಿನವೂ ಯಾವುದಾದರು ಒಂದು ಸಮಾಜದ ವಿಷಯಗಳನ್ನು ಚರ್ಚೆಗೆ ತೆಗೆದುಕೊಂಡು, ಆ ವಿಷಯದ ಮೇಲೆ ತಮ್ಮ ನಿಲುವನ್ನು ವ್ಯಕ್ತಪಡಿಸಿ, ಆ ವಿಷಯಗಳ ಮೇಲೆ ಪಕ್ಷ-ಪಕ್ಷಗಳ ಮದ್ಯ  ಚರ್ಚೆಗಳನ್ನು ಆರಂಭಿಸುತ್ತವೆ. ಆ ಪಕ್ಷಗಳ   ಬೆಂಬಲಿಗರಾದ ನಾವು ಕೂಡ ನಮ್ಮದೇ ರೀತಿಯಲ್ಲಿ ಆ ವಿಷಯಗಳ ಬಗ್ಗೆ  ಸಮಾಲೋಚನೆ ಮಾಡುತ್ತೇವೆ. ಒಮ್ಮೊಮ್ಮೆ ಚರ್ಚೆಯಲ್ಲಿ ವಿಷಯದ ಪರವಿರುತ್ತೇವೆ , ಕೆಲವೊಮ್ಮೆ ವಿಷಯದ ವಿರುದ್ದವಿರುತ್ತೇವೆ. ಈ ರೀತಿಯ ಎಲ್ಲ ಚರ್ಚೆ-ಸಮಾಲೋಚನೆಗಳು ಪ್ರಜಾಪ್ರಭುತ್ವದಲ್ಲಿ ಬಹಳ ಆರೋಗ್ಯಕರ ಪಕ್ರಿಯೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಚರ್ಚೆಗಳೆಲ್ಲ ಆರೋಗ್ಯಕರವಾಗಿವೆಯಾ ಎನ್ನುವ ಪ್ರಶ್ನೆ ನನಗೆ ಕಾಡಲು ಶುರುವಾಗಿದೆ. ನಮ್ಮ ರಾಜಕೀಯ ಪಕ್ಷಗಳು ಸಾಮಾಜಿಕ ಕಳಕಳಿ ಇರುವ ವಿಷಗಳ ಮೇಲೆ ಚರ್ಚೆಗಳನ್ನು  ಪ್ರಾರಂಭಿಸುತ್ತಿವೆಯಾ ? ಅದೇ ರೀತಿಯಾಗಿ ಆ ಪಕ್ಷಗಳ ಬೆಂಬಲಿಗರಾದ ನಾವು ಕೂಡ ಅದೇ ವಿಷಯಗಳ ಬಗ್ಗೆ  ಪ್ರಾಮಾಣಿಕವಾಗಿ ನಮ್ಮ ನಿಲುವುಗಳನ್ನು ವ್ಯಕ್ತಪಡಿಸುತ್ತೇದ್ದೆವೆಯೇ ? ನಮ್ಮ ಚರ್ಚೆಗಳು ಸಾರ್ವಜನಿಕೆ ವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ , ಮಾಧ್ಯಮಗಳಲ್ಲಿ ಸರಿಯಾದ ಹಾದಿಯಲ್ಲಿ ಸಾಗುತ್ತಿವೆಯೇ ? ಎಂದು ನಮ್ಮನ್ನು  ನಾವೇ  ಪ್ರಶ್ನೆ ಮಾಡಿಕೊಳ್ಳುವಂತಹ ವಾತಾವರಣವೂ ಕೂಡ ಈಗ ಹುಟ್ಟಿಕೊಂಡಿದೆ ಎಂಬುದು ನನ್ನ ಭಾವನೆ. 

ರಾಜಕೀಯ ಪಕ್ಷಗಳು ಯಾವಗಲು ತಮ್ಮ ರಾಜಕೀಯ ಬೇಳೆ  ಬೇಯಿಸಿಕೊಳ್ಳಲು ಸಾಮಾಜಿಕ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತವೆ. ಇದು ನಮಗೆ ಗೊತ್ತಿರುವ ಸಹಜ ವಿಷಯ. ಆ ವಿಷಯಗಳಿಗೆ ತಾತ್ವಿಕ ಅಂತ್ಯ ಯಾವ ರಾಜಕೀಯ ಪಕ್ಷಕ್ಕೂ, ಯಾವ ಕಾಲಕ್ಕೂ ಬೇಕಾಗಿರುವುದಿಲ್ಲ. ಆದರೆ ನಾವು ಆ ಪಕ್ಷಗಳ ಬೆಂಬಲಿಗರು ಎಂಬ ಒಂದೇ ಕಾರಣಕ್ಕೆ ನಮ್ಮ ಪಕ್ಷಗಳು ಮಾಡಿದ್ದನ್ನೆಲ್ಲ ಸಮರ್ಥಿಸಿಕೊಳ್ಳುವುದು, ವಿರೋದ ಅಭಿಪ್ರಾಯ ವ್ಯಕ್ತಪಡಿಸುವ ಬೇರೆಯವರನ್ನು  ನಿಂದಿಸುವುದು, ಮೂದಲಿಸುವುದು ಅದೆಷ್ಟು ಸರಿ. ಚರ್ಚೆಗಳೆಂದರೆ ವಿಷಯಗಳ  ಪರ-ವಿರೋದ ಸಹಜ ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಬಾಯಿಗೆ ಬಂದಂತೆ ಅರಚುವುದು, ನಮ್ಮ ಪಕ್ಷ ಮಾಡಿದ್ದೆಲ್ಲ ಸರಿ , ನಿನ್ನ ಪಕ್ಷ ಏನು ಮಾಡಿದರು ತಪ್ಪು, ನಮ್ಮ ನಾಯಕನೊಬ್ಬನೆ ಸರಿ , ನಿಮ್ಮ ನಾಯಕ ನೀಚ ಎನ್ನುವ ಚರ್ಚೆಗಳು ನಿಜವಾಗಿಯೂ ನಮ್ಮ ದೇಶದ ಏಳಿಗೆಗೆ ಸಹಕಾರಿಯಲ್ಲ. 

ಬಹುದಿನಗಳಿಂದ ಜಾತಿ ರಾಜಕೀಯ ಮಾಡುತ್ತಿದ್ದ ಪಕ್ಷಗಳು ಈಗ ಧರ್ಮ ರಾಜಕೀಯಕ್ಕೂ ಇಳಿದಿವೆ. ಒಂದು ಪಕ್ಷ ತಾನೇ ಒಂದು ಧರ್ಮದ ರಕ್ಷನಂತೆ ಬಿಂಬಿಸಿಕೊಂಡರೆ , ಮತ್ತೊಂದು ಪಕ್ಷ ಇನ್ನೊಂದು ಧರ್ಮ ಅದೇ ಪಕ್ಷಕ್ಕೆ ಸೇರಿದ್ದು ಬೇರೆ ಯಾರು ಕೂಡ ಈ ಧರ್ಮದ  ಬಗ್ಗೆಯೂ ಮಾತನಾಡಬಾರದು ಎನ್ನುತ್ತಿವೆ. ಇದು ಕೇವಲ ಕೆಟ್ಟ ರಾಜಕೀಯವಲ್ಲವೇ ಮತ್ತೇನು ? ಈ ಪಕ್ಷಗಳನ್ನು ಹಿಂಬಾಲಿಸುವ ನಾವು ಸಾಮಾಜಿಕ ಜಾಲತಾಣಗಳಲ್ಲಿ ಜಾತಿ-ಧರ್ಮದ ಬಗ್ಗೆ ಕೀಳು ಮಟ್ಟದ ಚರ್ಚೆಗಳಲ್ಲಿ ತೊಡಗುತ್ತೇವೆ. ಸಾಮಾಜಿಕ ಜಾಲತಾಣಗಳನ್ನು  ನಾವು ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳದೆ ವಿಷಯ ವಿರೋದಿಗಳನ್ನು ನಿಂದಿಸಲು, ಧರ್ಮವೆನ್ನುವ ಸೂಕ್ಷ್ಮ ವಿಷಯದಲ್ಲಿ ಮತ್ತೊಬ್ಬರ ನಂಬಿಕೆಗೆ ದಕ್ಕೆ ತರಲು, ಶಾಂತಿ ಕದಡುವ ಸಲ್ಲದ ಚರ್ಚೆಗಳನ್ನು ಮಾಡಲು, ಸ್ನೇಹಿತರನ್ನು ಕೆರಳಿಸಲು , ಪಕ್ಷಗಳ ನಡುವೆ, ಜನರ ನಡುವೆ , ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತಲು ಬಳಸಿಕ್ಕೊಳ್ಳುತ್ತಿಲ್ಲವೇ ? 

ವಿಷಯ ಅದೆಷ್ಟೇ ಸೂಕ್ಷ್ಮವಾಗಿದ್ದರು ಅದರ ಮೇಲೆ ಚರ್ಚೆಯಾಗಬೇಕು ನಿಜ, ಆದರೆ ಸಾರ್ವಜನಿಕ ಚರ್ಚೆಗಳು ಇನ್ನೊಬ್ಬರ ಭಾವನೆಗಳನ್ನು ಕೆರಳಿಸುವ ಮಟ್ಟಕ್ಕೆ ಇಳಿಯಬಾರದು. ನಾನೇ ಸರಿ, ನನ್ನ ಆಲೋಚನೆಯಷ್ಟೇ  ಶ್ರೇಷ್ಠ,  ನನ್ನ ಪಕ್ಷವೇ ನಿಜವಾದ ರಾಜಕೀಯ ಪಕ್ಷ, ನನ್ನ ನಾಯಕನೇ ನಿಜವಾದ ದೇಶಭಕ್ತ ಬೇರೆಯವರೆಲ್ಲ ಧರ್ಮ-ರಾಷ್ಟ್ರ ವಿರೋದಿಗಳು, ನನ್ನ ವಿಷಯಗಳನ್ನು ನೀನು ವಿರೋದಿಸಿದರೆ ನೀನು ಕೂಡ ರಾಷ್ಟ್ರವಿರೋದಿ ಎನ್ನುವುದು ಸರಿಯಲ್ಲ. ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶವಿದೆ,  ಯಾರೇ ಚರ್ಚೆ ಆರಂಭಿಸಿದರು ಆ ವಿಷಯಗಳನ್ನು ನಾವು ಅಳೆದು-ತೂಗಿ ಆ ವಿಷಯಗಳನ್ನು  ಒಪ್ಪಬಹುದು ಇಲ್ಲದಿದ್ದರೆ ಬಿಡಬಹುದು. ಆದರೆ ಎಲ್ಲರ ಮೇಲೂ ತಮ್ಮ ಚಿಂತನೆಗಳನ್ನೇ ಏರುವುದು, ರಾಜಕೀಯ ಪಕ್ಷಗಳು ಏನು ಮಾಡಿದರು ಅವುಗಳ ಮೇಲೆ ಕುರುಡು ವಿಶ್ವಾಸ ಇಡುವುದು, ವಿಷಯ ವಿರೋದಿಗಳ ದ್ವೇಷಿಸುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.  

ನಿಮಗಾಗಿ 
ನಿರಂಜನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ