ಮಂಗಳವಾರ, ಜೂನ್ 18, 2013

ಪ್ರೇಮ


                                                                               ಪ್ರೇಮ 

ನಮ್ಮಲ್ಲಿ ಕೆಲವರಿಗೆ ಮದುವೆ ಆಗಿರಬಹುದು, ಕೆಲವರು ಇನ್ನೇನು ಇಷ್ಟರಲ್ಲೇ ಆಗಬಹುದು. ಈ ಮದುವೆ ಆಗದವರು, ಆದವರನ್ನು "ಹೇಗಿರುತ್ತೆ ??" ಅದರ ಸವಿಯೆಂದು ಕೇಳಿದಾಗ , ಮದುವೆಯಾದವರ ಉತ್ತರ "ಆಗಿ ನೋಡಿ", "ಆರಮಾಗಿರೋ ಯಾಕೋ ನಿಂಗೆ ಅದೆಲ್ಲ ?? " , "ಇನ್ನು ಸ್ವಲ್ಪ ದಿನ ಹೀಗೆ ಇರೋ, ಯಾಕೆ ಮೈಯ್ಮೇಲೆ ಎಳೆದು ಕೊಳ್ತಿಯ " . ಇನ್ನು ಕೆಲವರು "ಎಷ್ಟೋ ನಿನ್ ವಯಸ್ಸು , ಆಗು ಸ್ವಲ್ಪ ವರ್ಷ ಬಿಟ್ಟು ಆಗು, ಈಗಲೇ ಯಾಕೆ ಬೇಕು ಅದೆಲ್ಲ ". ಹೀಗೆ ಇನ್ನೂ ಅನೇಕ , ಚಿತ್ರ ವಿಚಿತ್ರ ಉತ್ತರಗಳು ಬಹುವಾಗಿ ಸಿಗುತ್ತವೆ. ಕೆಲವರಂತೂ "ಮೊದ್ಲು ಮೊದ್ಲು ಎಲ್ಲ soooper ಆಗಿ ಇರುತ್ತೆ , ಆಮೇಲೆ ನೋಡು ಶುರುವಾಗೋದು" ಅಂತೆಲ್ಲ ಹೇಳುತ್ತಾರೆ. ಅದೇನು ಮೊದ್ಲು ಮೊದ್ಲು ಸಕತ್ ಆಗಿರುತ್ತೆ , ಆಮೇಲೆ ಅದೇನು ಶುರುವಾಗುತ್ತೆ , ಅದರ ಕಷ್ಟ ಏನು , ಅದೇಗಿರುತ್ತೆ ಅದರ ಸುಖ ಎಂದು ಯಾರು ಹೇಳೋಲ್ಲ. ಹೇಳುವಷ್ಟು ಹಿತವಾಗಿರುತ್ತೋ ಇಲ್ಲವೋ ನನಗೊಂತು ಗೊತ್ತಿಲ್ಲ. ಇಲ್ಲ ಹೇಳದಿರುವಷ್ಟು ಮಜವಾಗಿರುತ್ತೋ ಏನೋ ಅದೂ ಕೂಡ  ನನಗೆ ಗೊತ್ತಿಲ್ಲ. ಅದನ್ನು ನಾವೇ ಖುದ್ದು ಅನುಭವಿಸಿದ ಮೇಲೆಯೇ ನಮಗೆ ತಿಳಿಯಬಹುದು. ಆದರೂ  ಕೆಲವರು ತೀರ ಹತ್ತಿರದವರು ಅಷ್ಟು-ಇಷ್ಟು ಹೇಳುವವರು ಇದ್ದೆ ಇರುತ್ತಾರೆ. ಕೆಲವರ ಪ್ರಕಾರ ಶುರುವಿನಲ್ಲಿ ಎಲ್ಲವು ಈ ರೀತಿ ಇರುತ್ತಂತೆ. 
                                                          ತುಂಬಿದೆ ಚೆಲುವೆ ಜೇನು ನಿನ್ನ ತುಟಿಗಳಲಿ
                                                          ಸುಮ್ಮನೆ  ಹೇಗಿರಲಿ ನಾನು, ಹಾಗೆ ನೋಡುತಲಿ.....

                                                           ಚಿಮ್ಮುತಿಹವು ನಿನ್ನ ಕಂಗಳು ಕಾಂತಿಯನು
                                                           ಬೆಳದಿಂಗಳಲ್ಲದೆ ಅದು ನನಗೆ ಮತ್ತೇನು ....

                                                           ಸುರಿದಂತೆ ಸಿಹಿಯಾದ ಸೋನೆ ನೀ ನಕ್ಕರೆ
                                                           ಹೃದಯದಾಳವ ಒಡ್ಡದೆ ನಾ ಸುಮ್ಮನಿರೆ ....

                                                           ಮಾತಲ್ಲವೇ ಅಲ್ಲವವು,ಮುತ್ತಿನ ಸರಮಾಲೆ
                                                           ಪ್ರೇಮ ಮೂರ್ತಿ ನಾ,ಸಿಂಗಾರಗೊಳ್ಳದಿರಲೇ..

                                                           ನೀ ನನಗೆ ಸಂಪೂರ್ಣ ಸದಾ ಚೇತನುತ್ತೇಜನ
                                                           ತುಂಬಿರು ನನ್ನದಲ್ಲದ ಹೃದಯದಲಿ ಅನುದಿನ..

           ಸ್ವಲ್ಪ ದಿನ  ಕಳೆದ ಮೇಲೆ , ಅವರಿಬ್ಬರ ನಡುವೆ  ಬೇಸಗೆ ಬಂದು , ಭಾವನೆಗಳು ಬಿಸಿಲಿಗೆ ಬತ್ತಿದ  ಮೇಲಂತೂ ಇಬ್ಬರಿಗೂ ಯಾಕೋ ಒಬ್ಬರ ಮೆಲೋಬ್ಬರಿಗೆ ಅಷ್ಟಕ್ಕೇ ಅಷ್ಟೇ ಆಗಿ. ಇಬ್ಬರಲ್ಲಿ ಒಬ್ಬರು ಅಥವಾ ಇಬ್ಬರು ಹೀಗೆ ಅನ್ನುತಾರಂತೆ .  

                                                         ಮೊದ  ಮೊದಲು ಸುರಿಯುತಿದ್ದೆ  ಜೇನಹನಿ
                                                         ಈಗೇಕೆ ಹರಿಯುವಂತೆ ಮಾಡುವೆ ಕಣ್ಣೀರಹನಿ...

                                                         ಹೇಳುತಿದ್ದೆ ನೀನೆ ನನಗೆ , ನಿನ್ನದೆಲ್ಲವು ಇಷ್ಟ
                                                         ಮತ್ತೇಕೆ ಪಡುವೆ ಈಗ ಜೊತೆಯಲಿರಲು ಕಷ್ಟ .... 

ಆದರೆ ಸ್ನೇಹಿತರೆ ನಿಜ ಹೇಳಬೇಕೆಂದರೆ , ಈ ಪ್ರೀತಿ ಬರಿ ದೈಹೀಕವಾಗಿರದಿದ್ದರೆ ಕಡೆಯತನಕವೂ ಅದು ನಮ್ಮ ಜೊತೆಯಲ್ಲೇ ಇರುತ್ತೆ. ನಾವು ಬಿಟ್ಟರು ಅದು ನಮ್ಮನ್ನು ಬಿಡದು. ಬರೀ  ದೇಹಾಕರ್ಷಣೆಯ result ನಮ್ಮ ಪ್ರೀತಿಯಾಗಿದ್ದರೆ , ನಮಗೆ ವಯಸ್ಸಾದಂತೆ ಪ್ರೀತಿಗೂ ವಯಸ್ಸು ಆಗುತ್ತೆ. ಆದರೆ ನಮ್ಮ ಪ್ರೀತಿ ಮನಸ್ಸುಗಳ, ಭಾವನೆಗಳ , ಪರಸ್ಪರ ಗೌರವಗಳ result ಆಗಿದ್ದರೆ, ನಮಗೆ ವಯಸ್ಸು ಆದೊಷ್ಟು ನಮ್ಮ ಪ್ರೀತಿ ಗಟ್ಟಿಗೊಳ್ಳುತ್ತೆ,ವಯಸ್ಸು ಆದೊಷ್ಟು ಅದು ಪರಿ ಪಕ್ವವಾಗುತ್ತೆ , ಸಾಣಿಯಾಗುತ್ತೆ. ಕೊನೆಯಾದಾಗಿ ಹೇಳಬೇಕೆಂದರೆ ಪ್ರೀತಿಗೆ ಆದಿ-ಅಂತ್ಯಗಳಿಲ್ಲ.                                                    

                                                    " ನಾನು ನೀನೆನ್ನದಿರಬೇಕು, ಪ್ರೀತಿಗಳೊಂದಾಗ ಬೇಕು
                                                       ಜೊತೆಕಳೆದಂತೆ ಪ್ರೀತಿಯು ಬೆಳೆದು ಹಿರಿದಾಗ ಬೇಕು 
                                                      ಇಬ್ಬರು ಕಲೆತು, ಆ ಪ್ರೀತಿಯೋಳಗೊಂದಾಗ ಬೇಕು "
  
ನಿಮಗಾಗಿ 
ನಿರಂಜನ್ 

ಶುಕ್ರವಾರ, ಜೂನ್ 14, 2013

ನರಿಯಂತೆ ಇರಬೇಕು

                                           
                                                           ಬುದ್ದಿವಂತಿಕೆ 

ಒಂದಾನೊಂದು ಕಾಲದಲ್ಲಿ , ಒಬ್ಬ ರೈತನಿದ್ದ . ಅವನ ಬಳಿ ಒಂದು ಕಟ್ಟು ಮಸ್ತಾದ  ಕುದುರೆಯೊಂದಿತ್ತು . ಕುದುರೆಯು  ಯವ್ವನದಲ್ಲಿ ತನ್ನ ಶಕ್ತಿಯನ್ನೆಲ್ಲ ವ್ಯಯಿಸಿ , ಕಷ್ಟ ಪಟ್ಟು  ರೈತನಿಗಾಗಿ ದುಡಿಯುತ್ತಿತ್ತು. ರೈತನೂ ಕೂಡ ಕುದುರೆಯನ್ನು ಚೆನ್ನಾಗಿ ನೋಡಿಕೊಳ್ಳುತಿದ್ದ. ಕೆಲಕಾಲ ಕಳೆದ ನಂತರ ಕುದುರೆಗೆ ಸಹಜವಾಗಿ ವಯಸ್ಸಾಯಿತು. ರೈತನಿಗೆ ಇನ್ನು ಮೇಲೆ ಈ ವಯಸ್ಸಾದ  ಕುದುರೆಯಿಂದ ನನ್ನ ಒಕ್ಕಲುತನಕ್ಕೆ ಉಪಯೋಗವಿಲ್ಲ ಎಂಬ ಭಾವನೆ ಬೆಳೆಯಿತು.  ಒಂದು ದಿನ ಕುದುರೆಯನ್ನು ಕರೆದು ಹೇಳುತ್ತಾನೆ "ಉಪಯೋಗ ಇಲ್ಲದ ನಿನ್ನನ್ನು ಸಾಕಲು ನನ್ನಿಂದ ಆಗುವುದಿಲ್ಲ , ಇನ್ನು ಮುಂದೆ ನಿನ್ನ ದಾರಿಯನ್ನು ನೀನು ನೋಡಿಕೋ , ಈ ದಿನವೇ ನನ್ನ ಮನೆಯನ್ನು ಬಿಟ್ಟು ಹೊರಡು " . ಗಾಬರಿಗೊಂಡ ಕುದುರೆ "ರೈತನೇ ನನ್ನ ಜೀವನವೆಲ್ಲ ನಾನು ನಿನಗಾಗಿಯೆ ದುಡಿದಿದ್ದೇನೆ, ನಿನ್ನ ಹೊರತು ನನಗೆ ಬೇರೆ ಯಾರು ಗೊತ್ತಿಲ್ಲ , ನನಗೆ ನಿನ್ನ ಮನೆಯಲ್ಲಿಯೇ ಇರಲು ಅವಕಾಶ ಕೊಡು ", ಎಂದಾಗ ಕುದುರೆಯ ಮಾಲೀಕ ಬಹುವಾಗಿ ಯೋಚಿಸಿ , ಕುದುರೆಯನ್ನು ಮನೆಯಿಂದ ಹೊರಗಟ್ಟಲು ಬುದ್ದಿವಂತಿಕೆಯಿಂದ ಒಂದು ಉಪಾಯ ಮಾಡುತ್ತಾನೆ. 

            ಮರುದಿನ ಬಂದು ತನ್ನ ವಯಸ್ಸಾದ ಕುದುರೆಗೆ " ನೋಡು ನಿನಗೆ ನಾನು ಒಂದು ಕಡೆಯ ಅವಕಾಶ ಕೊಡುತ್ತೇನೆ ,ನೀನು ನನಗೆ ಕಾಡಿನಿಂದ ಒಂದು ಗಂಡು ಹುಲಿಯ ಚರ್ಮ ತಂದು ಕೊಡಬೇಕು , ಹಾಗೇನಾದರು ನೀನು ಚರ್ಮವನ್ನು ತಂದು ಕೊಟ್ಟರೆ ಮಾತ್ರ ನಾನು  ನಿನಗೆ ಸಾಯುವವರೆಗೆ ನನ್ನ ಮನೆಯಲ್ಲಿ ನಿನ್ನನ್ನು ಇಟ್ಟುಕೊಂಡು , ಮೇವು ಹಾಕುತ್ತೇನೆ " ಎಂದು ಹೇಳುತ್ತಾನೆ.  ರೈತನೋ  " ಈ ಕುದುರೆಗೆ ಇಂಥಹ ಕಷ್ಟದ ಕೆಲಸ ಮಾಡಲು ಸಾದ್ಯವಿಲ್ಲ , ಒಂದು ವೇಳೆ ಈ ಕೆಲಸ ಮಾಡಲು ಕುದುರೆ ಕಾಡಿಗೆ ಹೋದರೆ ಅದು ಅಲ್ಲಿನ  ಕಾಡು ಮೃಗಗಳಿಗೆ ಆಹಾರವಾಗುವುದೊಂತು ಖಚಿತ , ಒಟ್ಟಿಗೆ ಈ  ವಯಸ್ಸಾದ ಕುದುರೆ ಮನೆಯಿಂದ ತೊಲಗಿದರೆ ಸಾಕು " ಎಂದು ಯೋಚಿಸಿದ್ದ. 

        ರೈತನ ಈ ಶರತ್ತನ್ನು ಸ್ವೀಕರಿಸಿದ ಕುದುರೆ ಕಾಡಿಗೆ ಹೊರಡುತ್ತೆ. ಕಾಡಿನಲೆಲ್ಲ ಹುಲಿಯನ್ನು ಹುಡುಕಲು ಶುರು ಮಾಡುತ್ತದೆ.  "ಹುಲಿಯು ಸಿಕ್ಕರೂ  ನಾನು ಅದನ್ನು ಕೊಲ್ಲಲು  ಸಾದ್ಯವೇ , ಅದು ನನ್ನನ್ನು ತಿನ್ನದೇ ಬಿಡುವುದೇ , ಹುಲಿಯನ್ನು ಕೊಂದು ನಾನು ಹೇಗೆ ಅದರ ಚರ್ಮವನ್ನು ರೈತನಿಗೆ ಕೊಡುವುದು " ಎಂದು ಯೋಚಿಸುತ್ತ ಅಲ್ಲೇ ಇದ್ದ ಒಂದು ಮರದ ಕೆಳಗೆ ನಿಂತುಕೊಳ್ಳುತ್ತದೆ. ಎಷ್ಟು ಯೋಚಿಸಿದರು ಅದಕ್ಕೆ ಏನು ಉಪಾಯ ತೋಚುವುದಿಲ್ಲ . ಅಷ್ಟರಲ್ಲೇ ಅಲ್ಲಿಗೊಂದು ಬುದ್ದಿವಂತ ನರಿ ಬಂದು, ಯೋಚಿಸುತ್ತ ನಿಂತ ಮುದಿ ಕುದುರೆಯನ್ನು ನೋಡಿ ಅದರ ಸಂಕಷ್ಟವನ್ನು ಕೇಳಿ ತಿಳಿಯುತ್ತದೆ. ಕುದುರೆಯ ಮೇಲೆ ಕನಿಕರ ಬಂದು ಕುದುರೆಗೆ ಸಹಾಯ ಮಾಡಲು ನಿರ್ದರಿಸಿ , ಒಂದು ಉಪಾಯ ಮಾಡುತ್ತದೆ. ಉಪಾಯದ ಪ್ರಕಾರ ನರಿಯು "ನೋಡಪ್ಪ  ಕುದುರೆ, ನೀನು ಈಗ ಅಲ್ಲಿ ಕಾಣುವ ನದಿಯ ದಡದಲ್ಲಿ ಸತ್ತು ಬಿದ್ದ ಹಾಗೆ ನಟಿಸಬೇಕು. ನಾನು ಹೇಳುವವರೆಗೂ ನೀನು ಮೇಲೆಳುವಂತಿಲ್ಲ. ನಾನು ಹೇಳಿದ ತಕ್ಷಣವೆ ನೀನು ಮೇಲೆದ್ದು ಓಡಬೇಕು " ಎಂದು ಹೇಳಿತು . ಕುದುರೆಯು ಅದಕ್ಕೊಪ್ಪಿ ಸತ್ತಹಾಗೆ ನಟಿಸ ತೊಡಗಿತು.

          ಅಷ್ಟರಲ್ಲಿ ನರಿಯು ದೂರದಲಿದ್ದ , ಕಾಡಿನ ಎಲ್ಲ ಪ್ರಾಣಿಗಳಿಗೂ ಉಪದ್ರವವಾಗಿದ್ದ , ಒಂದು ಹುಲಿಯ ಬಳಿಗೆ ಹೋಗಿ " ಹುಲಿರಾಯ , ಅಲ್ಲೊಂದು ಕುದುರೆಯು ಈಗ ತಾನೇ ಸತ್ತು ಬಿದ್ದಿದೆ. ನೀನು ಬಂದರೆ ತಿನ್ನಬಹುದು , ನೀನು ಉಳಿಸಿ ಬಿಟ್ಟದ್ದನ್ನು ನಾನು ತಿನ್ನುವೆ ,  ಕಾಡಿನ ರಾಜನಾದ ನಿನಗೆ ಕಷ್ಟ ಪಡದೆ ಬೇಟೆ ಸಿಕ್ಕರೆ ಬಿಟ್ಟು ಬಿಡುವೆಯಾ  " ಎಂದಾಗ , ಏನನ್ನು ಯೋಚಿಸದೆ ಆ ಹುಲಿಯು ನದಿಯ ದಡಕ್ಕೆ ಬಂದು , ಕುದುರೆ ಬಿದ್ದಿರುವುದನ್ನು ನೋಡಿ " ಕಷ್ಟ ಪಡದೆ ಒಳ್ಳೆಯ ಬೇಟೆ ಸಿಕ್ಕಿದೆ" ಎಂದು ಮನಸ್ಸಿನಲ್ಲೇ ಖುಷಿ ಪಡುತ್ತದ್ದೆ. ಇನ್ನೇನು ಹುಲಿಯು ಕುದುರೆಯ ಕುತ್ತಿಗೆಗೆ ಬಾಯಿ ಹಾಕ ಬೇಕು , ಅಷ್ಟರಲ್ಲಿ ನರಿಯು  "ಅವಸರ ಮಾಡಬೇಡ ಹುಲಿರಾಯ,  ನಾವು ಇಲ್ಲೇ ಇದನ್ನು ತಿನ್ನಲು ಶುರು ಮಾಡಿದರೆ ಬೇರೆ ಪ್ರಾಣಿಗಳು ಬಂದು ಪಾಲು ಕೇಳಬಹುದು. ಹಾಗಾಗಿ ನಾವು ಅಲ್ಲಿ ಕಾಣುವ ದೊಡ್ಡ  ಪೊದೆಯ ಹಿಂದೆ ಇದನ್ನು ಎಳೆದೊಯ್ದು , ಅಲ್ಲಿ ಬಚ್ಚಿಟ್ಟುಕೊಂಡು ತಿನ್ನೋಣ " ಎಂದು ಹೇಳುತ್ತದೆ. ಅದಕ್ಕೊಪ್ಪಿದ ಹುಲಿಗೆ " ನೋಡು ನಾನು ಈ ಕುದುರೆಯ ಬಾಲಕ್ಕೆ ನಿನ್ನ ಬಾಲ ಕಟ್ಟುತ್ತೇನೆ , ಬೇಗನೆ ನೀನು ಇದನ್ನು ಪೊದೆಯ ಹಿಂದಕ್ಕೆ ಎಳೆದುಕೊಂಡು ಹೋಗು , ನಾವಿಬ್ಬರು ಅಲ್ಲಿ ಇದನ್ನು ತಿನ್ನೋಣ" ಎಂದಿತು. ಇಂದೆ-ಮುಂದೆ ಯೋಚಿಸದ ಹುಲಿ ತನ್ನ ಬಾಲವನ್ನು ಕೊಟ್ಟು ತಿರುಗಿ ನಿಲ್ಲುತ್ತದೆ. ನರಿಯು ಬಿದ್ದಿದ್ದ ಕುದುರೆಯ ಬಾಲಕ್ಕೆ ಹುಲಿಯ ಬಾಲದ ಜೊತೆಗೆ ಒಂದು ಕಾಲನ್ನು ಕೂಡ ಕಟ್ಟಿ , ತಾನು ಮೊದಲೇ ಹೇಳಿದಂತೆ ಕುದುರೆಗೆ "ಏಳಪ್ಪ  ಕುದರೆ , ಮೇಲೇಳು ,  ಮೇಲೆದ್ದು  ನಿನ್ನ ಮನೆಗೆ ಓಡಿ  ಹೋಗು. ಎಲ್ಲಿಯೂ ನಿಲ್ಲಬೇಡ , ಜೋರಾಗಿ ಓಡು " ಎಂದು ಹೇಳಿತು. ತಕ್ಷಣಕ್ಕೆ ಕುದುರೆಯು ಚಂಗನೆ ಜಿಗಿದು ಕಟ್ಟಿದ್ದ ಹುಲಿಯನ್ನು ಶರವೇಗದಲ್ಲಿ ಜಗ್ಗಿಕೊಂಡು  ಹೋಗತೊಡಗಿತು. ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ತನ್ನ ಉಳುವಿಗಾಗಿ ಕುದುರೆಯು ಶಕ್ತಿ ಮೀರಿ ಓಡಿತು.ಹುಲಿಗೆ ಆ ಗಂಟನ್ನು ಬಿಡಿಸಿಕೊಳ್ಳಲಾಗಲಿಲ್ಲ. ಈ ಎಳೆತದಿಂದ ಬಹುವಾಗಿ ಗಾಯಗೊಂಡ ಹುಲಿಯು ಅರ್ಧ ದಾರಿಯಲ್ಲಿ ಪ್ರಾಣ ಬಿಟ್ಟಿತು.  

         ಕುದುರೆಯು ಹುಲಿಯನ್ನು ಎಳೆದುಕೊಂಡೆ ಬಂದು ರೈತನ ಮನೆ ಮುಂದೆ ಬಂದು ನಿಂತಿತು. ರೈತನಿಗೋ ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು. ಆದರೆ ಹುಲಿಯ ಚರ್ಮ ಸಿಕ್ಕ ಸಂತೋಷದಿಂದ ಕುದುರೆಯನ್ನು ಮತ್ತೆ ಮನೆಯಲ್ಲೇ ಇಟ್ಟುಕೊಂಡನು. 

            ಸ್ನೇಹಿತರೆ ಈ ಕತೆಯನ್ನು ನಾನು ಏಕೆ ಇಲ್ಲಿ ಹೇಳಿದೆ ಅಂದರೆ , ಆ ಕುದುರೆಗೆ ಬಂದ ಸಂಕಷ್ಟದಂತೆಯೇ ನಮಗೂ ಕೂಡ ಜೀವನದಲ್ಲಿ ಸಂಕಷ್ಟ ಬರುವುದು ಖಚಿತ. ಅದರಲ್ಲೂ ಈಗಿನ ಜಾಗತೀಕರಣದ ಪ್ರಭಾವದಲ್ಲಿ , ಖಾಸಗಿ ಕಂಪನಿಗಳು ನಮ್ಮಲ್ಲಿ ಶಕ್ತಿಯಿದ್ದಾಗ ಸರಿಯಾಗಿ ದುಡಿಸಿಕೊಂಡು , ತದನಂತರ unrealistic ಕೆಲಸಗಳನ್ನು ಕೊಟ್ಟು . ಅದನ್ನು ಮುಗಿಸದೆ ಹೋದಾಗ ನಮ್ಮನ್ನು ಕಂಪನಿಗಳಿಂದ ಹೊರದೂಡಲು ಯೋಚಿಸಬಹುದು. ಆಗ ನಾವು ಎದೆ ಗುಂದದೆ , ಬರುವ ಸಂಕಷ್ಟಗಳನ್ನು   ಬುದ್ದಿವಂತಿಕೆಯಿಂದ  ಎದುರಿಸಬೇಕಾಗುತ್ತೆ.  ಮೇಲೆ ಹೇಳಿದ ರೈತನಂತೆ ನಮ್ಮ ಮ್ಯಾನೇಜರ್ಗಳೂ  ಇರಬಹುದು, ಜಾಣ ನರಿಯಂಥಹ ಸ್ನೇಹಿತರು ನಮಗೆ ಕಷ್ಟದಲ್ಲಿ  ಸಿಗಬಹುದು. ಹಾಗಾಗಿ ಸೂಕ್ಷ್ಮಮತಿಗಳಾಗಿ ,ಯುಕ್ತಿಯನ್ನುಪಯೋಗಿಸಿ  ಸಮಸ್ಯಗಳನ್ನೂ ಬಗೆಹರಿಸಿಕೊಳ್ಳಬೇಕು. ಬಿದಿದ್ದ ಕುದುರೆಗೆ ಹೇಗೆ ನರಿಯು ಉತ್ತೇಜಿಸಿ , ಜೀವನದ ಉಳಿವಿಗಾಗಿ ಓಡಿಸುತ್ತೋ ಹಾಗೆ ನಾವು,ಎದೆಗುಂದಿದವರಿಗೆ ಪ್ರೋತ್ಸಾಹ ಕೊಡಬೇಕು. ನಾವೇ ಎದೆಗುಂದಿದ್ದರೆ ಒಳ್ಳೆಯವರ ಸಹಾಯದಿಂದ ಎದ್ದು ಮುಂದೆ ಸಾಗಬೇಕು.   

ನಿಮಗಾಗಿ 
ನಿರಂಜನ್
           

ಸೋಮವಾರ, ಜೂನ್ 10, 2013

ನಮ್ಮ ಬೆಂಗಳೂರು

                             
                                                     ನಮ್ಮ ನಿಜವಾದ ಸ್ವರ್ಗ 

ಬೇಸಗೆ ಸವೆಸಿ ಮಳೆಗಾಲಕ್ಕೆ ಕಾಯುತ್ತಿರುವ ಬೆಂಗಳೂರು ಈಗಾಲೇ ಮಳೆರಾಯನ ಕೃಪೆಗೆ ಪಾತ್ರವಾಗಿದೆ . ಹಾಗೊಮ್ಮೆ ಈಗೊಮ್ಮ ಮಳೆಯೂ ಆರ್ಭಟಿಸಿ ಸುಮ್ಮನಾಗಿದೆ . ಕಳೆದವಾರ ಬಿದ್ದ ಒಳ್ಳೆಯ ಮಳೆ ಬೆಂಗಳೂರನ್ನು ತಣ್ಣಗೆ ಮಾಡಿದ್ದಲ್ಲದೆ, ಜನರಲ್ಲಿ ಒಂದು ರೀತಿಯ ಚೇತನವನ್ನೂ  ಮೂಡಿಸಿದೆ. ಮುಂಬರುವ ಮಳೆಗಾಲದ ಆರಂಭ ಮಾತ್ರ ಚೆನ್ನಾಗಿಯೇ ಆಗಿದೆ ಎಂದು ನಾವೆಲ್ಲರೂ ನಿಟ್ಟುಸಿರು ಕೂಡ ಬಿಟ್ಟಿದ್ದೇವೆ. ನಿಜ ಸ್ನೇಹಿತರೆ, ನಿಜವಾಗಿಯೂ ಇದು ನಮ್ಮೆಲ್ಲರಿಗೂ ಒಂದು ಒಳ್ಳೆಯ ವಿಷಯ. ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದೆಲ್ಲಡೆಯೂ ಈ ಬಾರಿ ವರುಣ ತನ್ನ ಕೃಪೆಯನ್ನು ತೋರಿದ್ದಾನೆ. ಇದಕ್ಕೆ ಪೂರಕವೆಂಬಂತೆ ಸೂರ್ಯ ಮಳೆಗಾಲದ ಮೋಡಗಳಿಗೆ  ಸೋತು ತನ್ನ ಪ್ರಕರತೆಯನ್ನು ತಗ್ಗಿಸಿಕೊಂಡಿದ್ದಾನೆ, ಎಲ್ಲೆಡೆ ಹಸಿರು ಹಸಿರಾದ ವಾತಾವರಣ ಸೃಷ್ಟಿಯಾಗಿದೆ, ತಣ್ಣನೆ ಗಾಳಿ ಬೀಸತೊಡಗಿದೆ, ಖಗ ಸಂಕುಲವು ಮೈಧುಂಬಿ ನಿಂತಿರುವ ಹಸಿರು ಮರಗಳಲ್ಲಿ ವಿಹರಿಸುತ್ತಿವೆ, ಹೂಗಿಡ ಬಳ್ಳಿಗಳು ಕಣ್ಣಿಗೆ ಎಲ್ಲೆಡೆಯೂ ಕಾಣಸಿಗುತ್ತಿವೆ. ಅಬ್ಭಾ ಇವೆಲ್ಲವೂ  ಸೇರಿ ಬೆಂಗಳೂರಿನ ಸೌಂದರ್ಯವನ್ನು ಮತ್ತೊಷ್ಟು  ಚಿಗುರಿಸಿವೆ ಬೇಸಿಗೆಯ ನಂತರ.


  
               ಇಂಥಹ ಬೆಂಗಳೂರನ್ನು ಬಿಟ್ಟು ನಾನು ಮಾತ್ರ ಕೆಲಸದ ನಿಮಿತ್ತ ವಾರದ ಕೆಲವು ದಿನಗಳು  ಚೆನ್ನೈಯಲ್ಲಿ ಕಳೆಯಬೇಕಿದೆ. ಅಲ್ಲೋ ಬರಿ ಬಿಸಿಲು ಮತ್ತು ಬೆವರು. ಚೆನ್ನೈ ಮುಂದೆ ನಮ್ಮ ಬೆಂಗಳೂರು ನನಗೆ ಸ್ವರ್ಗದಂತೆ ಕಾಣುತ್ತಿದೆ . ಇಂಥಹ ನಗರವನ್ನು ಬಿಟ್ಟು ಅನಿವಾರ್ಯ ಕಾರಣಗಳಿಂದ ನಾನು ಅಲ್ಲಿಗೆ ಅಂದರೆ ಚೆನ್ನೈಗೆ ಓಡಾಡಿಕೊಂಡಿದ್ದೇನೆ. ಬೆಂಗಳೊರಿನ ಬಸ್ ನಿಲ್ದಾಣದಲ್ಲಿ ಬಸ್ ಹತ್ತಬೇಕಾದಾಗ , ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ನನಗೆ ಅದೆಷ್ಟು ಬೇಜಾರು ಆಗುತ್ತೆ ಅಂದ್ರೆ, ತವರು ಬಿಟ್ಟು ಹೋಗುವ ಹೆಣ್ಣು ಮಗಳ ದುಃಖಕ್ಕಿಂತಲೂ ನನಗೆ ಸ್ವಲ್ಪ ಜಾಸ್ತಿಯೇ ದುಃಖ ಆಗುತ್ತೆ. ಇಲ್ಲಿರುವ ಸ್ವರ್ಗದಂಥ ವಾತಾವರಣ, ಪ್ರೀತಿ ತುಂಬಿದ ಮನೆ , ಸ್ನೇಹಿತರನ್ನು ಒಂದು ವಾರದಲ್ಲಿ ೩-೪ ದಿನ ಬಿಟ್ಟು ಅಲ್ಲಿರಬೇಕಲ್ಲ ಎಂದು ಮನಸ್ಸಿಗೆ ತುಂಬಾ ಕಷ್ಟ ಆಗುತ್ತೆ. ಆದರೂ ನಾವು ಹೇರಿರುವ ಬಿಸಿಲ್ಗುದುರೆ ಕರೆದೊಯ್ಯುವ ಕಡೆ ನಾವು ಹೋಗಬೇಕಲ್ಲವೇ, ಅದೇ ರೀತಿ ಏನೇನೋ ಆಸೆಗಳ ಬೆನ್ನರಿ ಅಲ್ಲೊಂದು ಕಾಲು ಇಲ್ಲೊಂದು ಕಾಲು ಇಟ್ಟಿದ್ದೇನೆ.


         ಏಕೆ ಇದೆಲ್ಲ ನಾನು ಬರೆಯುತ್ತೇನೆ ಎಂದು ನೀವು ಅಂದುಕೊಳ್ಳಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ನಾವು ಬಹಳ ದಿನದಿಂದಲೂ ಬೆಂಗಳೂರಿನಲ್ಲಿ ಬದುಕುತ್ತಿದ್ದೇವೆ, ನಮ್ಮ ಜೀವನವನ್ನೇ ನಾವು ಇಲ್ಲಿ ಕಂಡುಕೊಂಡಿದ್ದೇವೆ. ಆದರೂ ನಮಗೆ ಬೆಂಗಳೂರಿನ ಬಗ್ಗೆ ಸ್ವಲ್ಪ ಅಸಮಧಾನ , ಬೇಜಾರು . ಸ್ನೇಹಿತರೆ ನಾನು ಹೇಳುವುದೇನೆಂದರೆ ನಮ್ಮ ದೇಶದ ಬೇರೆ ಯಾವುದೇ ಸಿಟಿಗಳಿಗೆ ಹೋಲಿಸಿದರೆ ನಮ್ಮ ಬೆಂಗಳೂರು ಸ್ವರ್ಗವೇ ಸರಿ. ಇಲಿರುವ ನಾವೆಲ್ಲರೂ ಕೂಡ ಸ್ವರ್ಗ ನಿವಾಸಿಗಳೇ. ಬೆಂಗಳೂರು ನಿಜವಾದ ಸ್ವರ್ಗ ಎಂದು ನಿಮಗೆ ಅನ್ನಿಸಬೇಕಾದರೆ , ಅದರ ನಿಜವಾದ ಅನುಭವ ನಮಗೆ ಆಗಲೇ ಬೇಕೆಂದರೆ ನಾವು ಒಂದು ಬಾರಿ ನಮ್ಮ ದೇಶದ ಬೇರೆ ನಗರಗಳಿಗೆ ಹೋಗಿ ಬರಬೇಕು. ಅಲ್ಲಿಯ ವಿಚಿತ್ರವಾದ ವಾತಾವರಣ ನೋಡಿದ ಮೇಲೆಯೇ ನಮ್ಮ ಬೆಂಗಳೂರಿನ ಬೆಲೆ ನಮಗೆ ನಿಜವಾಗಿಯೂ ತಿಳಿಯುತ್ತದೆ. ಬೆಂಗಳೂರಿನಲ್ಲಿ ಜನಸಂದಣಿ ಜಾಸ್ತಿ ಇರುವುದರಿಂದ ಎಲ್ಲೆಡೆ ಜನರು ಕಾಣಬಹುದು, ಸಂಚಾರ ದಟ್ಟನೆ ಜಾಸ್ತಿ ಅಂತಲೂ ನಮಗೆ ಅನ್ನಿಸಬಹುದು, ಇಲ್ಲಿ ಜೀವನ ನಡೆಸುವುದು ತುಂಬಾ ದುಭಾರಿಯೂ ಅಂತಲೂ  ನಮಗೆ ಅನ್ನಿಸಬಹುದು, ಆದರೆ ನಿಜ ಹೇಳುತ್ತೇನೆ ಇವೆಲ್ಲವೂ ಕೇವಲ ಯಕಶ್ಚಿತ್ ಸಮಸ್ಯೆಗಳು ಮಾತ್ರ. ಬೇರೆ ಎಲ್ಲ ನಗರಗಳಿಗೂ ಹೋಲಿಸಿದರೆ ಇವೆಲ್ಲವು ನಮಗೆ ಸಮಸ್ಯೆಗಳು ಆಲ್ಲವೆ ಅಲ್ಲ. ಆದರೂ ಇವನ್ನೇ ನಾವು ದೊಡ್ಡ ದೊಡ್ಡ ಸಮಸ್ಯೆಗಳೆಂದುಕೊಂಡು ಬೆಂಗಳೂರನ್ನು ಮನ ಬಂದಂತೆ ನಿಂದಿಸಿಕೊಲ್ಲುತ್ತೇವೆ ಮತ್ತು ಅನೇಕ ಬಾರಿ ನಿರಾಶೆಯಿಂದ ಹತಾಶರು ಆಗುತ್ತೇವೆ. ಆದರೆ ಇಲ್ಲಿರುವ ಮೂಲಭೂತ ಸೌಕರ್ಯಗಳು , ಸೌಲಭ್ಯಗಳು , ಜನರು , ಎಲ್ಲವು ಅಧ್ಭುತ. ಇಲ್ಲಿರುವುದೆಲ್ಲವೂ ಯೋಗ್ಯವೇ, ಇಲ್ಲಿ ಸಿಗುವಂತಹ ನೀರು, ಹವಾಮಾನ , ಗಾಳಿ , ಬೆಳಕು ಬೇರೆಲ್ಲೂ ಸಿಗುವುದಿಲ್ಲ. ಇಂಥಹ ಸ್ಥಳದಲ್ಲಿ ನಾವಿದ್ದೇವೆ ಎಂದರೆ ನಿಜವಾಗಿಯೂ ನನಗೆ ಹೆಮ್ಮೆ ಎನ್ನಿಸುತ್ತದೆ. 

          ಚೆನ್ನೈಯಿಂದ ಬೆಂಗಳೂರನ್ನು ತಲುಪುತಿದ್ದಂತೆ ಏನೋ ಒಂದು ತರಹದ ಹಿತವಾದ ಅನುಭವವಂತೂ ನನಗೆ ಅಗುತ್ತೆ. ಇಲ್ಲಿ ಕಾಣಸಿಗುವ ಜನರು ಕೂಡ ಒಳ್ಳೆಯವರಂತೆ, ಹೆಚ್ಚು ಸುಂದರವಾಗಿಯೂ ಕಾಣುತ್ತಾರೆ. ಶುಚಿಯಾದ  ಹೋಟೆಲ್ಗಳು, ಹಿತವಾದ ಕನ್ನಡ ಭಾಷೆ, ಸ್ವಚ್ಚವಾದ ನಗರದ ಬೀದಿಗಳು, ಅತ್ಯುತ್ತಮವಾದ ಬಸ್ ಸೌಕರ್ಯ, ಒಳ್ಳೆಯ ಆಟೋಗಳು, ಆರೋಗ್ಯಕರ ಆಹಾರ ಪರಂಪರೆ , ಇವೆಲ್ಲವೂ ಸೇರಿ ಅಬ್ಭಾ ಬೆಂಗಳೂರನ್ನು ನಿಜವಾಗಿಯೂ ಸ್ವರ್ಗವನ್ನೇ ಮಾಡಿವೆ  ಎಂದು ನನಗನಿಸುತ್ತದೆ. 

         ಆದರೂ ಇದೆಲ್ಲ ಬಿಟ್ಟು ಕೆಲ ದಿನಗಳ ಕಾಲ ದೂರ ಇರಬೇಕಲ್ಲಪ್ಪ ಎಂಬ ನೋವು ನನದೆ ಇದ್ದೆ ಇರುತ್ತೆ , ಮತ್ತೆ ಸಂಪೂರ್ಣವಾಗಿ ಇಲ್ಲಿಗೆ  ಬರೊವರೆಗೆ. ಮತ್ತೊಂದು ವಿಷಯವೇನೆಂದರೆ ಚೆನ್ನೈಗೆ ಅಡ್ಡಾಡೊಕೆ ಶುರು ಮಾಡಿದ ನಂತರ ಬೆಂಗಳೂರಿನ ಸಣ್ಣ ಸಣ್ಣ ವಿಷಯಗಳ,  ಜಾಗಗಳ , ಸೌಕರ್ಯಗಳ ಬಗ್ಗೆ , ಜನರು ಬಗ್ಗೆ , ಬೆಂಗಳೂರಿನ ಪ್ರತಿಯೊಂದರ ಬಗ್ಗೆಯೂ ಹೆಮ್ಮೆ , ಗೌರವ ಮತ್ತು ಪ್ರೀತಿ ತುಂಬಿ ಬರುತ್ತಿದ್ದೆ. ಬೆಂಗಳೂರಿನ ಬೆಲೆ ನನಗೆ ಈಗ ಅರ್ಥವಾಗುತ್ತಿದೆ. ಆದರೂ ವಾರದ ೩-೪ ದಿನಗಳು  ಬೆಂಗಳೂರಿನಲ್ಲೇ ಇರುವ ಅವಕಾಶ ನನಗೆ ಸಿಕ್ಕಿರುವುದು ನನಗೆ ನೆಮ್ಮದಿಯ ವಿಷಯವೇ ಸರಿ. ನಾನು ಅಲ್ಲಿದ್ದರು ಕೂಡ  ನನ್ನ ಮನಸ್ಸು ಇಲ್ಲಿಯೇ, ನಮ್ಮ ಬೆಂಗಳೂರಿನಲ್ಲಿಯೇ ಇರುತ್ತೆ. 


ನಿಮಗಾಗಿ
ನಿರಂಜನ್