ನಮ್ಮ ನಿಜವಾದ ಸ್ವರ್ಗ
ಬೇಸಗೆ ಸವೆಸಿ ಮಳೆಗಾಲಕ್ಕೆ ಕಾಯುತ್ತಿರುವ ಬೆಂಗಳೂರು ಈಗಾಲೇ ಮಳೆರಾಯನ ಕೃಪೆಗೆ ಪಾತ್ರವಾಗಿದೆ . ಹಾಗೊಮ್ಮೆ ಈಗೊಮ್ಮ ಮಳೆಯೂ ಆರ್ಭಟಿಸಿ ಸುಮ್ಮನಾಗಿದೆ . ಕಳೆದವಾರ ಬಿದ್ದ ಒಳ್ಳೆಯ ಮಳೆ ಬೆಂಗಳೂರನ್ನು ತಣ್ಣಗೆ ಮಾಡಿದ್ದಲ್ಲದೆ, ಜನರಲ್ಲಿ ಒಂದು ರೀತಿಯ ಚೇತನವನ್ನೂ ಮೂಡಿಸಿದೆ. ಮುಂಬರುವ ಮಳೆಗಾಲದ ಆರಂಭ ಮಾತ್ರ ಚೆನ್ನಾಗಿಯೇ ಆಗಿದೆ ಎಂದು ನಾವೆಲ್ಲರೂ ನಿಟ್ಟುಸಿರು ಕೂಡ ಬಿಟ್ಟಿದ್ದೇವೆ. ನಿಜ ಸ್ನೇಹಿತರೆ, ನಿಜವಾಗಿಯೂ ಇದು ನಮ್ಮೆಲ್ಲರಿಗೂ ಒಂದು ಒಳ್ಳೆಯ ವಿಷಯ. ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದೆಲ್ಲಡೆಯೂ ಈ ಬಾರಿ ವರುಣ ತನ್ನ ಕೃಪೆಯನ್ನು ತೋರಿದ್ದಾನೆ. ಇದಕ್ಕೆ ಪೂರಕವೆಂಬಂತೆ ಸೂರ್ಯ ಮಳೆಗಾಲದ ಮೋಡಗಳಿಗೆ ಸೋತು ತನ್ನ ಪ್ರಕರತೆಯನ್ನು ತಗ್ಗಿಸಿಕೊಂಡಿದ್ದಾನೆ, ಎಲ್ಲೆಡೆ ಹಸಿರು ಹಸಿರಾದ ವಾತಾವರಣ ಸೃಷ್ಟಿಯಾಗಿದೆ, ತಣ್ಣನೆ ಗಾಳಿ ಬೀಸತೊಡಗಿದೆ, ಖಗ ಸಂಕುಲವು ಮೈಧುಂಬಿ ನಿಂತಿರುವ ಹಸಿರು ಮರಗಳಲ್ಲಿ ವಿಹರಿಸುತ್ತಿವೆ, ಹೂಗಿಡ ಬಳ್ಳಿಗಳು ಕಣ್ಣಿಗೆ ಎಲ್ಲೆಡೆಯೂ ಕಾಣಸಿಗುತ್ತಿವೆ. ಅಬ್ಭಾ ಇವೆಲ್ಲವೂ ಸೇರಿ ಬೆಂಗಳೂರಿನ ಸೌಂದರ್ಯವನ್ನು ಮತ್ತೊಷ್ಟು ಚಿಗುರಿಸಿವೆ ಬೇಸಿಗೆಯ ನಂತರ.
ಇಂಥಹ ಬೆಂಗಳೂರನ್ನು ಬಿಟ್ಟು ನಾನು ಮಾತ್ರ ಕೆಲಸದ ನಿಮಿತ್ತ ವಾರದ ಕೆಲವು ದಿನಗಳು ಚೆನ್ನೈಯಲ್ಲಿ ಕಳೆಯಬೇಕಿದೆ. ಅಲ್ಲೋ ಬರಿ ಬಿಸಿಲು ಮತ್ತು ಬೆವರು. ಚೆನ್ನೈ ಮುಂದೆ ನಮ್ಮ ಬೆಂಗಳೂರು ನನಗೆ ಸ್ವರ್ಗದಂತೆ ಕಾಣುತ್ತಿದೆ . ಇಂಥಹ ನಗರವನ್ನು ಬಿಟ್ಟು ಅನಿವಾರ್ಯ ಕಾರಣಗಳಿಂದ ನಾನು ಅಲ್ಲಿಗೆ ಅಂದರೆ ಚೆನ್ನೈಗೆ ಓಡಾಡಿಕೊಂಡಿದ್ದೇನೆ. ಬೆಂಗಳೊರಿನ ಬಸ್ ನಿಲ್ದಾಣದಲ್ಲಿ ಬಸ್ ಹತ್ತಬೇಕಾದಾಗ , ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ನನಗೆ ಅದೆಷ್ಟು ಬೇಜಾರು ಆಗುತ್ತೆ ಅಂದ್ರೆ, ತವರು ಬಿಟ್ಟು ಹೋಗುವ ಹೆಣ್ಣು ಮಗಳ ದುಃಖಕ್ಕಿಂತಲೂ ನನಗೆ ಸ್ವಲ್ಪ ಜಾಸ್ತಿಯೇ ದುಃಖ ಆಗುತ್ತೆ. ಇಲ್ಲಿರುವ ಸ್ವರ್ಗದಂಥ ವಾತಾವರಣ, ಪ್ರೀತಿ ತುಂಬಿದ ಮನೆ , ಸ್ನೇಹಿತರನ್ನು ಒಂದು ವಾರದಲ್ಲಿ ೩-೪ ದಿನ ಬಿಟ್ಟು ಅಲ್ಲಿರಬೇಕಲ್ಲ ಎಂದು ಮನಸ್ಸಿಗೆ ತುಂಬಾ ಕಷ್ಟ ಆಗುತ್ತೆ. ಆದರೂ ನಾವು ಹೇರಿರುವ ಬಿಸಿಲ್ಗುದುರೆ ಕರೆದೊಯ್ಯುವ ಕಡೆ ನಾವು ಹೋಗಬೇಕಲ್ಲವೇ, ಅದೇ ರೀತಿ ಏನೇನೋ ಆಸೆಗಳ ಬೆನ್ನರಿ ಅಲ್ಲೊಂದು ಕಾಲು ಇಲ್ಲೊಂದು ಕಾಲು ಇಟ್ಟಿದ್ದೇನೆ.
ಏಕೆ ಇದೆಲ್ಲ ನಾನು ಬರೆಯುತ್ತೇನೆ ಎಂದು ನೀವು ಅಂದುಕೊಳ್ಳಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ನಾವು ಬಹಳ ದಿನದಿಂದಲೂ ಬೆಂಗಳೂರಿನಲ್ಲಿ ಬದುಕುತ್ತಿದ್ದೇವೆ, ನಮ್ಮ ಜೀವನವನ್ನೇ ನಾವು ಇಲ್ಲಿ ಕಂಡುಕೊಂಡಿದ್ದೇವೆ. ಆದರೂ ನಮಗೆ ಬೆಂಗಳೂರಿನ ಬಗ್ಗೆ ಸ್ವಲ್ಪ ಅಸಮಧಾನ , ಬೇಜಾರು . ಸ್ನೇಹಿತರೆ ನಾನು ಹೇಳುವುದೇನೆಂದರೆ ನಮ್ಮ ದೇಶದ ಬೇರೆ ಯಾವುದೇ ಸಿಟಿಗಳಿಗೆ ಹೋಲಿಸಿದರೆ ನಮ್ಮ ಬೆಂಗಳೂರು ಸ್ವರ್ಗವೇ ಸರಿ. ಇಲಿರುವ ನಾವೆಲ್ಲರೂ ಕೂಡ ಸ್ವರ್ಗ ನಿವಾಸಿಗಳೇ. ಬೆಂಗಳೂರು ನಿಜವಾದ ಸ್ವರ್ಗ ಎಂದು ನಿಮಗೆ ಅನ್ನಿಸಬೇಕಾದರೆ , ಅದರ ನಿಜವಾದ ಅನುಭವ ನಮಗೆ ಆಗಲೇ ಬೇಕೆಂದರೆ ನಾವು ಒಂದು ಬಾರಿ ನಮ್ಮ ದೇಶದ ಬೇರೆ ನಗರಗಳಿಗೆ ಹೋಗಿ ಬರಬೇಕು. ಅಲ್ಲಿಯ ವಿಚಿತ್ರವಾದ ವಾತಾವರಣ ನೋಡಿದ ಮೇಲೆಯೇ ನಮ್ಮ ಬೆಂಗಳೂರಿನ ಬೆಲೆ ನಮಗೆ ನಿಜವಾಗಿಯೂ ತಿಳಿಯುತ್ತದೆ. ಬೆಂಗಳೂರಿನಲ್ಲಿ ಜನಸಂದಣಿ ಜಾಸ್ತಿ ಇರುವುದರಿಂದ ಎಲ್ಲೆಡೆ ಜನರು ಕಾಣಬಹುದು, ಸಂಚಾರ ದಟ್ಟನೆ ಜಾಸ್ತಿ ಅಂತಲೂ ನಮಗೆ ಅನ್ನಿಸಬಹುದು, ಇಲ್ಲಿ ಜೀವನ ನಡೆಸುವುದು ತುಂಬಾ ದುಭಾರಿಯೂ ಅಂತಲೂ ನಮಗೆ ಅನ್ನಿಸಬಹುದು, ಆದರೆ ನಿಜ ಹೇಳುತ್ತೇನೆ ಇವೆಲ್ಲವೂ ಕೇವಲ ಯಕಶ್ಚಿತ್ ಸಮಸ್ಯೆಗಳು ಮಾತ್ರ. ಬೇರೆ ಎಲ್ಲ ನಗರಗಳಿಗೂ ಹೋಲಿಸಿದರೆ ಇವೆಲ್ಲವು ನಮಗೆ ಸಮಸ್ಯೆಗಳು ಆಲ್ಲವೆ ಅಲ್ಲ. ಆದರೂ ಇವನ್ನೇ ನಾವು ದೊಡ್ಡ ದೊಡ್ಡ ಸಮಸ್ಯೆಗಳೆಂದುಕೊಂಡು ಬೆಂಗಳೂರನ್ನು ಮನ ಬಂದಂತೆ ನಿಂದಿಸಿಕೊಲ್ಲುತ್ತೇವೆ ಮತ್ತು ಅನೇಕ ಬಾರಿ ನಿರಾಶೆಯಿಂದ ಹತಾಶರು ಆಗುತ್ತೇವೆ. ಆದರೆ ಇಲ್ಲಿರುವ ಮೂಲಭೂತ ಸೌಕರ್ಯಗಳು , ಸೌಲಭ್ಯಗಳು , ಜನರು , ಎಲ್ಲವು ಅಧ್ಭುತ. ಇಲ್ಲಿರುವುದೆಲ್ಲವೂ ಯೋಗ್ಯವೇ, ಇಲ್ಲಿ ಸಿಗುವಂತಹ ನೀರು, ಹವಾಮಾನ , ಗಾಳಿ , ಬೆಳಕು ಬೇರೆಲ್ಲೂ ಸಿಗುವುದಿಲ್ಲ. ಇಂಥಹ ಸ್ಥಳದಲ್ಲಿ ನಾವಿದ್ದೇವೆ ಎಂದರೆ ನಿಜವಾಗಿಯೂ ನನಗೆ ಹೆಮ್ಮೆ ಎನ್ನಿಸುತ್ತದೆ.
ಚೆನ್ನೈಯಿಂದ ಬೆಂಗಳೂರನ್ನು ತಲುಪುತಿದ್ದಂತೆ ಏನೋ ಒಂದು ತರಹದ ಹಿತವಾದ ಅನುಭವವಂತೂ ನನಗೆ ಅಗುತ್ತೆ. ಇಲ್ಲಿ ಕಾಣಸಿಗುವ ಜನರು ಕೂಡ ಒಳ್ಳೆಯವರಂತೆ, ಹೆಚ್ಚು ಸುಂದರವಾಗಿಯೂ ಕಾಣುತ್ತಾರೆ. ಶುಚಿಯಾದ ಹೋಟೆಲ್ಗಳು, ಹಿತವಾದ ಕನ್ನಡ ಭಾಷೆ, ಸ್ವಚ್ಚವಾದ ನಗರದ ಬೀದಿಗಳು, ಅತ್ಯುತ್ತಮವಾದ ಬಸ್ ಸೌಕರ್ಯ, ಒಳ್ಳೆಯ ಆಟೋಗಳು, ಆರೋಗ್ಯಕರ ಆಹಾರ ಪರಂಪರೆ , ಇವೆಲ್ಲವೂ ಸೇರಿ ಅಬ್ಭಾ ಬೆಂಗಳೂರನ್ನು ನಿಜವಾಗಿಯೂ ಸ್ವರ್ಗವನ್ನೇ ಮಾಡಿವೆ ಎಂದು ನನಗನಿಸುತ್ತದೆ.
ಆದರೂ ಇದೆಲ್ಲ ಬಿಟ್ಟು ಕೆಲ ದಿನಗಳ ಕಾಲ ದೂರ ಇರಬೇಕಲ್ಲಪ್ಪ ಎಂಬ ನೋವು ನನದೆ ಇದ್ದೆ ಇರುತ್ತೆ , ಮತ್ತೆ ಸಂಪೂರ್ಣವಾಗಿ ಇಲ್ಲಿಗೆ ಬರೊವರೆಗೆ. ಮತ್ತೊಂದು ವಿಷಯವೇನೆಂದರೆ ಚೆನ್ನೈಗೆ ಅಡ್ಡಾಡೊಕೆ ಶುರು ಮಾಡಿದ ನಂತರ ಬೆಂಗಳೂರಿನ ಸಣ್ಣ ಸಣ್ಣ ವಿಷಯಗಳ, ಜಾಗಗಳ , ಸೌಕರ್ಯಗಳ ಬಗ್ಗೆ , ಜನರು ಬಗ್ಗೆ , ಬೆಂಗಳೂರಿನ ಪ್ರತಿಯೊಂದರ ಬಗ್ಗೆಯೂ ಹೆಮ್ಮೆ , ಗೌರವ ಮತ್ತು ಪ್ರೀತಿ ತುಂಬಿ ಬರುತ್ತಿದ್ದೆ. ಬೆಂಗಳೂರಿನ ಬೆಲೆ ನನಗೆ ಈಗ ಅರ್ಥವಾಗುತ್ತಿದೆ. ಆದರೂ ವಾರದ ೩-೪ ದಿನಗಳು ಬೆಂಗಳೂರಿನಲ್ಲೇ ಇರುವ ಅವಕಾಶ ನನಗೆ ಸಿಕ್ಕಿರುವುದು ನನಗೆ ನೆಮ್ಮದಿಯ ವಿಷಯವೇ ಸರಿ. ನಾನು ಅಲ್ಲಿದ್ದರು ಕೂಡ ನನ್ನ ಮನಸ್ಸು ಇಲ್ಲಿಯೇ, ನಮ್ಮ ಬೆಂಗಳೂರಿನಲ್ಲಿಯೇ ಇರುತ್ತೆ.
ನಿಮಗಾಗಿ
ನಿರಂಜನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ