ಬುದ್ದಿವಂತಿಕೆ
ಒಂದಾನೊಂದು ಕಾಲದಲ್ಲಿ , ಒಬ್ಬ ರೈತನಿದ್ದ . ಅವನ ಬಳಿ ಒಂದು ಕಟ್ಟು ಮಸ್ತಾದ ಕುದುರೆಯೊಂದಿತ್ತು . ಕುದುರೆಯು ಯವ್ವನದಲ್ಲಿ ತನ್ನ ಶಕ್ತಿಯನ್ನೆಲ್ಲ ವ್ಯಯಿಸಿ , ಕಷ್ಟ ಪಟ್ಟು ರೈತನಿಗಾಗಿ ದುಡಿಯುತ್ತಿತ್ತು. ರೈತನೂ ಕೂಡ ಕುದುರೆಯನ್ನು ಚೆನ್ನಾಗಿ ನೋಡಿಕೊಳ್ಳುತಿದ್ದ. ಕೆಲಕಾಲ ಕಳೆದ ನಂತರ ಕುದುರೆಗೆ ಸಹಜವಾಗಿ ವಯಸ್ಸಾಯಿತು. ರೈತನಿಗೆ ಇನ್ನು ಮೇಲೆ ಈ ವಯಸ್ಸಾದ ಕುದುರೆಯಿಂದ ನನ್ನ ಒಕ್ಕಲುತನಕ್ಕೆ ಉಪಯೋಗವಿಲ್ಲ ಎಂಬ ಭಾವನೆ ಬೆಳೆಯಿತು. ಒಂದು ದಿನ ಕುದುರೆಯನ್ನು ಕರೆದು ಹೇಳುತ್ತಾನೆ "ಉಪಯೋಗ ಇಲ್ಲದ ನಿನ್ನನ್ನು ಸಾಕಲು ನನ್ನಿಂದ ಆಗುವುದಿಲ್ಲ , ಇನ್ನು ಮುಂದೆ ನಿನ್ನ ದಾರಿಯನ್ನು ನೀನು ನೋಡಿಕೋ , ಈ ದಿನವೇ ನನ್ನ ಮನೆಯನ್ನು ಬಿಟ್ಟು ಹೊರಡು " . ಗಾಬರಿಗೊಂಡ ಕುದುರೆ "ರೈತನೇ ನನ್ನ ಜೀವನವೆಲ್ಲ ನಾನು ನಿನಗಾಗಿಯೆ ದುಡಿದಿದ್ದೇನೆ, ನಿನ್ನ ಹೊರತು ನನಗೆ ಬೇರೆ ಯಾರು ಗೊತ್ತಿಲ್ಲ , ನನಗೆ ನಿನ್ನ ಮನೆಯಲ್ಲಿಯೇ ಇರಲು ಅವಕಾಶ ಕೊಡು ", ಎಂದಾಗ ಕುದುರೆಯ ಮಾಲೀಕ ಬಹುವಾಗಿ ಯೋಚಿಸಿ , ಕುದುರೆಯನ್ನು ಮನೆಯಿಂದ ಹೊರಗಟ್ಟಲು ಬುದ್ದಿವಂತಿಕೆಯಿಂದ ಒಂದು ಉಪಾಯ ಮಾಡುತ್ತಾನೆ.
ಮರುದಿನ ಬಂದು ತನ್ನ ವಯಸ್ಸಾದ ಕುದುರೆಗೆ " ನೋಡು ನಿನಗೆ ನಾನು ಒಂದು ಕಡೆಯ ಅವಕಾಶ ಕೊಡುತ್ತೇನೆ ,ನೀನು ನನಗೆ ಕಾಡಿನಿಂದ ಒಂದು ಗಂಡು ಹುಲಿಯ ಚರ್ಮ ತಂದು ಕೊಡಬೇಕು , ಹಾಗೇನಾದರು ನೀನು ಚರ್ಮವನ್ನು ತಂದು ಕೊಟ್ಟರೆ ಮಾತ್ರ ನಾನು ನಿನಗೆ ಸಾಯುವವರೆಗೆ ನನ್ನ ಮನೆಯಲ್ಲಿ ನಿನ್ನನ್ನು ಇಟ್ಟುಕೊಂಡು , ಮೇವು ಹಾಕುತ್ತೇನೆ " ಎಂದು ಹೇಳುತ್ತಾನೆ. ರೈತನೋ " ಈ ಕುದುರೆಗೆ ಇಂಥಹ ಕಷ್ಟದ ಕೆಲಸ ಮಾಡಲು ಸಾದ್ಯವಿಲ್ಲ , ಒಂದು ವೇಳೆ ಈ ಕೆಲಸ ಮಾಡಲು ಕುದುರೆ ಕಾಡಿಗೆ ಹೋದರೆ ಅದು ಅಲ್ಲಿನ ಕಾಡು ಮೃಗಗಳಿಗೆ ಆಹಾರವಾಗುವುದೊಂತು ಖಚಿತ , ಒಟ್ಟಿಗೆ ಈ ವಯಸ್ಸಾದ ಕುದುರೆ ಮನೆಯಿಂದ ತೊಲಗಿದರೆ ಸಾಕು " ಎಂದು ಯೋಚಿಸಿದ್ದ.
ರೈತನ ಈ ಶರತ್ತನ್ನು ಸ್ವೀಕರಿಸಿದ ಕುದುರೆ ಕಾಡಿಗೆ ಹೊರಡುತ್ತೆ. ಕಾಡಿನಲೆಲ್ಲ ಹುಲಿಯನ್ನು ಹುಡುಕಲು ಶುರು ಮಾಡುತ್ತದೆ. "ಹುಲಿಯು ಸಿಕ್ಕರೂ ನಾನು ಅದನ್ನು ಕೊಲ್ಲಲು ಸಾದ್ಯವೇ , ಅದು ನನ್ನನ್ನು ತಿನ್ನದೇ ಬಿಡುವುದೇ , ಹುಲಿಯನ್ನು ಕೊಂದು ನಾನು ಹೇಗೆ ಅದರ ಚರ್ಮವನ್ನು ರೈತನಿಗೆ ಕೊಡುವುದು " ಎಂದು ಯೋಚಿಸುತ್ತ ಅಲ್ಲೇ ಇದ್ದ ಒಂದು ಮರದ ಕೆಳಗೆ ನಿಂತುಕೊಳ್ಳುತ್ತದೆ. ಎಷ್ಟು ಯೋಚಿಸಿದರು ಅದಕ್ಕೆ ಏನು ಉಪಾಯ ತೋಚುವುದಿಲ್ಲ . ಅಷ್ಟರಲ್ಲೇ ಅಲ್ಲಿಗೊಂದು ಬುದ್ದಿವಂತ ನರಿ ಬಂದು, ಯೋಚಿಸುತ್ತ ನಿಂತ ಮುದಿ ಕುದುರೆಯನ್ನು ನೋಡಿ ಅದರ ಸಂಕಷ್ಟವನ್ನು ಕೇಳಿ ತಿಳಿಯುತ್ತದೆ. ಕುದುರೆಯ ಮೇಲೆ ಕನಿಕರ ಬಂದು ಕುದುರೆಗೆ ಸಹಾಯ ಮಾಡಲು ನಿರ್ದರಿಸಿ , ಒಂದು ಉಪಾಯ ಮಾಡುತ್ತದೆ. ಉಪಾಯದ ಪ್ರಕಾರ ನರಿಯು "ನೋಡಪ್ಪ ಕುದುರೆ, ನೀನು ಈಗ ಅಲ್ಲಿ ಕಾಣುವ ನದಿಯ ದಡದಲ್ಲಿ ಸತ್ತು ಬಿದ್ದ ಹಾಗೆ ನಟಿಸಬೇಕು. ನಾನು ಹೇಳುವವರೆಗೂ ನೀನು ಮೇಲೆಳುವಂತಿಲ್ಲ. ನಾನು ಹೇಳಿದ ತಕ್ಷಣವೆ ನೀನು ಮೇಲೆದ್ದು ಓಡಬೇಕು " ಎಂದು ಹೇಳಿತು . ಕುದುರೆಯು ಅದಕ್ಕೊಪ್ಪಿ ಸತ್ತಹಾಗೆ ನಟಿಸ ತೊಡಗಿತು.
ಅಷ್ಟರಲ್ಲಿ ನರಿಯು ದೂರದಲಿದ್ದ , ಕಾಡಿನ ಎಲ್ಲ ಪ್ರಾಣಿಗಳಿಗೂ ಉಪದ್ರವವಾಗಿದ್ದ , ಒಂದು ಹುಲಿಯ ಬಳಿಗೆ ಹೋಗಿ " ಹುಲಿರಾಯ , ಅಲ್ಲೊಂದು ಕುದುರೆಯು ಈಗ ತಾನೇ ಸತ್ತು ಬಿದ್ದಿದೆ. ನೀನು ಬಂದರೆ ತಿನ್ನಬಹುದು , ನೀನು ಉಳಿಸಿ ಬಿಟ್ಟದ್ದನ್ನು ನಾನು ತಿನ್ನುವೆ , ಕಾಡಿನ ರಾಜನಾದ ನಿನಗೆ ಕಷ್ಟ ಪಡದೆ ಬೇಟೆ ಸಿಕ್ಕರೆ ಬಿಟ್ಟು ಬಿಡುವೆಯಾ " ಎಂದಾಗ , ಏನನ್ನು ಯೋಚಿಸದೆ ಆ ಹುಲಿಯು ನದಿಯ ದಡಕ್ಕೆ ಬಂದು , ಕುದುರೆ ಬಿದ್ದಿರುವುದನ್ನು ನೋಡಿ " ಕಷ್ಟ ಪಡದೆ ಒಳ್ಳೆಯ ಬೇಟೆ ಸಿಕ್ಕಿದೆ" ಎಂದು ಮನಸ್ಸಿನಲ್ಲೇ ಖುಷಿ ಪಡುತ್ತದ್ದೆ. ಇನ್ನೇನು ಹುಲಿಯು ಕುದುರೆಯ ಕುತ್ತಿಗೆಗೆ ಬಾಯಿ ಹಾಕ ಬೇಕು , ಅಷ್ಟರಲ್ಲಿ ನರಿಯು "ಅವಸರ ಮಾಡಬೇಡ ಹುಲಿರಾಯ, ನಾವು ಇಲ್ಲೇ ಇದನ್ನು ತಿನ್ನಲು ಶುರು ಮಾಡಿದರೆ ಬೇರೆ ಪ್ರಾಣಿಗಳು ಬಂದು ಪಾಲು ಕೇಳಬಹುದು. ಹಾಗಾಗಿ ನಾವು ಅಲ್ಲಿ ಕಾಣುವ ದೊಡ್ಡ ಪೊದೆಯ ಹಿಂದೆ ಇದನ್ನು ಎಳೆದೊಯ್ದು , ಅಲ್ಲಿ ಬಚ್ಚಿಟ್ಟುಕೊಂಡು ತಿನ್ನೋಣ " ಎಂದು ಹೇಳುತ್ತದೆ. ಅದಕ್ಕೊಪ್ಪಿದ ಹುಲಿಗೆ " ನೋಡು ನಾನು ಈ ಕುದುರೆಯ ಬಾಲಕ್ಕೆ ನಿನ್ನ ಬಾಲ ಕಟ್ಟುತ್ತೇನೆ , ಬೇಗನೆ ನೀನು ಇದನ್ನು ಪೊದೆಯ ಹಿಂದಕ್ಕೆ ಎಳೆದುಕೊಂಡು ಹೋಗು , ನಾವಿಬ್ಬರು ಅಲ್ಲಿ ಇದನ್ನು ತಿನ್ನೋಣ" ಎಂದಿತು. ಇಂದೆ-ಮುಂದೆ ಯೋಚಿಸದ ಹುಲಿ ತನ್ನ ಬಾಲವನ್ನು ಕೊಟ್ಟು ತಿರುಗಿ ನಿಲ್ಲುತ್ತದೆ. ನರಿಯು ಬಿದ್ದಿದ್ದ ಕುದುರೆಯ ಬಾಲಕ್ಕೆ ಹುಲಿಯ ಬಾಲದ ಜೊತೆಗೆ ಒಂದು ಕಾಲನ್ನು ಕೂಡ ಕಟ್ಟಿ , ತಾನು ಮೊದಲೇ ಹೇಳಿದಂತೆ ಕುದುರೆಗೆ "ಏಳಪ್ಪ ಕುದರೆ , ಮೇಲೇಳು , ಮೇಲೆದ್ದು ನಿನ್ನ ಮನೆಗೆ ಓಡಿ ಹೋಗು. ಎಲ್ಲಿಯೂ ನಿಲ್ಲಬೇಡ , ಜೋರಾಗಿ ಓಡು " ಎಂದು ಹೇಳಿತು. ತಕ್ಷಣಕ್ಕೆ ಕುದುರೆಯು ಚಂಗನೆ ಜಿಗಿದು ಕಟ್ಟಿದ್ದ ಹುಲಿಯನ್ನು ಶರವೇಗದಲ್ಲಿ ಜಗ್ಗಿಕೊಂಡು ಹೋಗತೊಡಗಿತು. ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ತನ್ನ ಉಳುವಿಗಾಗಿ ಕುದುರೆಯು ಶಕ್ತಿ ಮೀರಿ ಓಡಿತು.ಹುಲಿಗೆ ಆ ಗಂಟನ್ನು ಬಿಡಿಸಿಕೊಳ್ಳಲಾಗಲಿಲ್ಲ. ಈ ಎಳೆತದಿಂದ ಬಹುವಾಗಿ ಗಾಯಗೊಂಡ ಹುಲಿಯು ಅರ್ಧ ದಾರಿಯಲ್ಲಿ ಪ್ರಾಣ ಬಿಟ್ಟಿತು.
ಕುದುರೆಯು ಹುಲಿಯನ್ನು ಎಳೆದುಕೊಂಡೆ ಬಂದು ರೈತನ ಮನೆ ಮುಂದೆ ಬಂದು ನಿಂತಿತು. ರೈತನಿಗೋ ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು. ಆದರೆ ಹುಲಿಯ ಚರ್ಮ ಸಿಕ್ಕ ಸಂತೋಷದಿಂದ ಕುದುರೆಯನ್ನು ಮತ್ತೆ ಮನೆಯಲ್ಲೇ ಇಟ್ಟುಕೊಂಡನು.
ಸ್ನೇಹಿತರೆ ಈ ಕತೆಯನ್ನು ನಾನು ಏಕೆ ಇಲ್ಲಿ ಹೇಳಿದೆ ಅಂದರೆ , ಆ ಕುದುರೆಗೆ ಬಂದ ಸಂಕಷ್ಟದಂತೆಯೇ ನಮಗೂ ಕೂಡ ಜೀವನದಲ್ಲಿ ಸಂಕಷ್ಟ ಬರುವುದು ಖಚಿತ. ಅದರಲ್ಲೂ ಈಗಿನ ಜಾಗತೀಕರಣದ ಪ್ರಭಾವದಲ್ಲಿ , ಖಾಸಗಿ ಕಂಪನಿಗಳು ನಮ್ಮಲ್ಲಿ ಶಕ್ತಿಯಿದ್ದಾಗ ಸರಿಯಾಗಿ ದುಡಿಸಿಕೊಂಡು , ತದನಂತರ unrealistic ಕೆಲಸಗಳನ್ನು ಕೊಟ್ಟು . ಅದನ್ನು ಮುಗಿಸದೆ ಹೋದಾಗ ನಮ್ಮನ್ನು ಕಂಪನಿಗಳಿಂದ ಹೊರದೂಡಲು ಯೋಚಿಸಬಹುದು. ಆಗ ನಾವು ಎದೆ ಗುಂದದೆ , ಬರುವ ಸಂಕಷ್ಟಗಳನ್ನು ಬುದ್ದಿವಂತಿಕೆಯಿಂದ ಎದುರಿಸಬೇಕಾಗುತ್ತೆ. ಮೇಲೆ ಹೇಳಿದ ರೈತನಂತೆ ನಮ್ಮ ಮ್ಯಾನೇಜರ್ಗಳೂ ಇರಬಹುದು, ಜಾಣ ನರಿಯಂಥಹ ಸ್ನೇಹಿತರು ನಮಗೆ ಕಷ್ಟದಲ್ಲಿ ಸಿಗಬಹುದು. ಹಾಗಾಗಿ ಸೂಕ್ಷ್ಮಮತಿಗಳಾಗಿ ,ಯುಕ್ತಿಯನ್ನುಪಯೋಗಿಸಿ ಸಮಸ್ಯಗಳನ್ನೂ ಬಗೆಹರಿಸಿಕೊಳ್ಳಬೇಕು. ಬಿದಿದ್ದ ಕುದುರೆಗೆ ಹೇಗೆ ನರಿಯು ಉತ್ತೇಜಿಸಿ , ಜೀವನದ ಉಳಿವಿಗಾಗಿ ಓಡಿಸುತ್ತೋ ಹಾಗೆ ನಾವು,ಎದೆಗುಂದಿದವರಿಗೆ ಪ್ರೋತ್ಸಾಹ ಕೊಡಬೇಕು. ನಾವೇ ಎದೆಗುಂದಿದ್ದರೆ ಒಳ್ಳೆಯವರ ಸಹಾಯದಿಂದ ಎದ್ದು ಮುಂದೆ ಸಾಗಬೇಕು.
ನಿಮಗಾಗಿ
ನಿರಂಜನ್
It always good to help others...and it gives happiness to both who take & receive it..and maintain a friendly nature..
ಪ್ರತ್ಯುತ್ತರಅಳಿಸಿ