ನಂಬಿಕೆ
ಇತ್ತೀಚಿನ ದಿನಗಳಲ್ಲಿ ನಾನು ಈ ಚೆನ್ನೈ ಮತ್ತೆ ಬೆಂಗಳೂರುಗಳ ನಡುವೆ ಬಹುವಾಗಿ ಪ್ರಯಾಣ ಮಾಡುತ್ತಿದ್ದೇನೆ ಕೆಲಸದ ನಿಮಿತ್ತ. ಇಂಥಹ ಹಲವು ಪ್ರಯಾಣಗಳನ್ನು ನಾನು ಬಸ್ಸು, ಟ್ರೈನ್ ಹಾಗು ಕಾರುಗಳಲ್ಲಿ ಮಾಡಿದ್ದೆನಾದರು , ರೈಲು ಪ್ರಯಾಣದ ಅನುಭವವೇ ಒಂದು ರೀತಿಯಲ್ಲಿ ಹಿತವಾಗಿರುತ್ತೆ ಅನ್ನುವುದು ನನ್ನ ಭಾವನೆ. ನಾನೇಕೆ ಹೀಗೆ ಹೇಳುತ್ತಿದ್ದೇನೆ ಎಂದರೆ, ಒಂದೊಂದು ಸಾರಿ ನಾವು ರೈಲು ಏರಿದರೂ ಒಂದೊಂದು ರೀತಿಯ ಅನುಭವಗಳು ನಮಗಾಗುತ್ತವೆ.ಹಲವು ರೀತಿಯ ವ್ಯಾಪಾರ-ವಹಿವಾಟುಗಳನ್ನು, ಅನೇಕ ಬಗೆಯ ಮಾತು-ಮೋಜುಗಳನ್ನು, ದೊಡ್ಡವರನ್ನು ,ಸಣ್ಣವರನ್ನು, ಬೇರೆ ಬೇರೆ ಜಾತಿ-ದರ್ಮಗಳನ್ನು ಬೇದ ಭಾವವಿಲ್ಲದೆ ಒಂದೆಡೆ ಸೇರಿಸುವುದು ನಮ್ಮ ಈ ರೈಲುಗಳು ಎಂದರೆ ತಪ್ಪಾಗಲಾರದು. ನಿಜ ಹೇಳಬೇಕೆಂದರೆ ವಿವಿದ ರೀತಿಯ ಜಾತಿಗಳು, ಧರ್ಮಗಳು, ಎಲ್ಲ ದ್ವೇಷ ಅಸೂಯೆಗಳನ್ನು ಮರೆತು ಅಕ್ಷರಶ ಜೊತೆಯಾಗಿ ಕಲೆಯುವುದು, ಕೂರುವರು, ತಿನ್ನುವರು, ಹರಟುವುದು, ಮಲಗುವುದು, ಮೇಲೂ-ಕೀಳೆನ್ನದೆ ಮುಂದೆ ಸಾಗುವುದು ಈ ರೈಲು ಡಬ್ಬಿಗಳಲ್ಲಿ ಮಾತ್ರ. ಜೊತೆಗೆ ಆಗ್ಗಿಂದಾಗೆ ರುಚಿ ಇರುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ವಾಸನೆಯನ್ನು ಮಾತ್ರ ಅದ್ಬುತವಾಗಿ ಬೀರುವ ಆ ರೈಲು ತಿಂಡಿಗಳು ಕೂಡ ನಮ್ಮನ್ನು ರೈಲು ಪ್ರಯಾಣಕ್ಕೆ ಪ್ರೇರೇಪಿಸುತ್ತವೆ. ಹಾಗಾಗಿ ನನಗೆ ಇತ್ತೀಚಿನ ದಿನಗಳಲ್ಲಿ ಈ ರೈಲು ಪ್ರಯಾಣ ಸಕತ್ ಇಶತವಾಗುತ್ತೆ.
ಹೀಗೆ ನಾನು ಮಾಡಿರುವ ಅನೇಕ ರೈಲು ಪ್ರಯಾಣಗಳಲ್ಲಿ ನನಗೂ ಕೂಡ ಬಗೆಬಗೆಯ ಅನುಭವಗಳಾಗಿವೆ, ಇಂಥಹ ಅನೇಕದರಲ್ಲಿ, ಒಂದು ದಿನ ನನಗಾದ ಒಂದು ಸಣ್ಣ ಅನುಭವವನ್ನು ಮಾತ್ರ ನಿಮ್ಮ ಮುಂದೆ ಬಿಚ್ಚಿಡುವ ಸಲುವಾಗಿ ಈ ಲೇಖನ ಬರೆಯುವ ಮನಸ್ಸನ್ನು ನಾನು ಮಾಡಿದೆ. ಈ ಕಾಲದಲ್ಲಿ ನಾವೆಷ್ಟೇ ಓದಿದ್ದರು ಅದು ಕೇವಲ ಓದು, ಹೊಟ್ಟೆವರಿಯಲು ನಾವು ಮಾಡಿಕೊಂಡ ದಾರಿ ಮಾತ್ರ, ನಮಗರಿಯದ ವಿಷಯಗಳು ಬಹಾಳೋಷ್ಟಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕಾದ ವಿಚಾರ. ಹಾಗೆಯೇ ನಮಗರಿಯದ ಅದೆಷ್ಟೋ ವಿಷಯಗಳನ್ನು ನಾವು ನಮ್ಮ ಅನುಭವಗಳಿಂದಾನೋ ಅಥವಾ ನೋಡಿಯೋ ಕಲಿಯಬಹುದು. ನನಗನಿಸಿದ ಮಟ್ಟಿಗೆ ಅಂಥಹ ಅನೇಕ ಅನುಭವಗಳು ನಮ್ಮ ಜೀವನದ ದಿಕ್ಕುಗಳನ್ನೇ ಒಮ್ಮೊಮ್ಮೆ ಬದಲಾಯಿಸಬಹುದು, ಜೀವನವನ್ನು ನೋಡುವ, ರೂಪಿಸಿಕೊಳ್ಳುವ ರೀತಿಯನ್ನೂ ಕೂಡ ಬದಲಾಯಿಸಬಹುದು.
ಅದೊಂದು ದಿನ ಮಧ್ಯಾನ , ಬರೀ ಮಧ್ಯಾಹ್ನ ಅಲ್ಲ , ಮಟಮಟ ಮದ್ಯಾಹ್ನ , ಆಫಿಸ್ ಬಿಟ್ಟು , ಸುಮಾರು ೩.೨೦ಕ್ಕೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ಸೇರಿದೆ. ಬೇಸಿಗೆ ಚೆನ್ನೈಯಲ್ಲಿ ಹೊತ್ತಿ ಉರಿಯುತ್ತಿತ್ತು , ಬಿಸಿಲ ಜಳ ಬಿಡದೆ ದಾರಿಯುದ್ದಕ್ಕೂ ನನ್ನನ್ನು ಕಾಡಿದ್ದರೆ , ನಿಲ್ದಾಣದಲ್ಲಿ ನನ್ನನು ಬಿಸಿಲ ಧಗೆ ಕಾಡಲಾರಂಬಿಸಿತ್ತು. ಅಪ್ಪ.... ಅಂತು-ಇಂತು ನಿಲ್ದಾಣ ಸೇರಿದೆ, ಇನ್ನೈದು ದಿನ ಈ ಚೆನ್ನೈ ಸಹವಾಸ ಸಾಕೆಂದು ನಿಟ್ಟುಸಿರು ಬಿಟ್ಟು, ಒಂದು ಬಾಟಲ್ ನೀರು ತಗೊಂಡು, ನಿಂತಿದ್ದ ಲಾಲ್ ಬಾಗ್ express ರೈಲನ್ನೆರಿದೆ. ಇನ್ನು ರೈಲು ಹೊರಡಲು ೧೫ ನಿಮಿಷ ಬೇಕಿತ್ತು. ಅಬ್ಭಾ ಅದೆಷ್ಟು ಸೆಕೆ ರೈಲಿನಲ್ಲಿ ಎಂದರೆ ದೇಹದ ಎಲ್ಲ ಭಾಗಗಳಲ್ಲೂ ನೀರಿನ ಬುಗ್ಗೆಗಳು ಆಷ್ಟೊತ್ತಿಗೆ ಚಿಮ್ಮತೊಡಗಿದ್ದವು. ಇರುವೆಲ್ಲ ರಂದ್ರಗಳಲ್ಲೂ ಬೆವರೋ ಬೆವರೋ. ಆ ಬೆವರಧಾರೆಯಲ್ಲಿಯೇ ರೈಲಿನಲ್ಲಿ ನಾನು ಮುಂಚಿತವಾಗಿ ಕಾಯಿದಿರಿಸಿದ ಜಾಗ ಗುರುತಿಸಿ ನನ್ನ ಬ್ಯಾಗ್ ಇಟ್ಟೆ ಕೂತೆ. ರೈಲು ಒಳ್ಳೆ ಓವೆನ್ ತರಾ ಆಗಿತ್ತು ಆ ಬಿಸಿಲಿನ ಹೊಡೆತಕ್ಕೆ. ಹಾಗಾಗಿ ಹೊರಡುವುದಕ್ಕೆ ಇನ್ನು ಸಮಯವಿದ್ದುದ್ದರಿಂದ ಕೆಳಗಿಳಿದು ಬೆವರೋರಸಿಕೊಳ್ಳಲು ಕರ್ಚಿಫ್ ತಗೆದರೆ ಅದು ತೆಗೆಯುವ ಮೊದಲೇ ಜೇಬಿನಲ್ಲಿ ನೆನೆದು ಹೋಗಿತ್ತು ! .
ಬೆಂಗಳೂರಿನಲ್ಲಿ ದುಡಿಯುವ ಜನರು ಕೂಡ ಬೆವರು ಸುರಿಸುವುದಿಲ್ಲ , ಆದರೆ ಚೆನ್ನೈಯಲ್ಲಿ ಎಲ್ಲರು ಬೆವರು ಸುರಿಸೇ ಸುರಿಸುತ್ತಾರೆ , ಅದೆಷ್ಟು ದುಡಿಯುತ್ತರೋ ಇಲ್ಲವೋ ಗೊತ್ತಿಲ್ಲ. ರೈಲಿನಲ್ಲಿ ಬರುವ ಬಿಕ್ಷುಕರಿಗೆ ಬೆಂಗಳೂರಿನಲ್ಲಿ ಹೇಳುವ ಹಾಗೆ " ಬೆವರು ಸುರಿಸಿ ದುಡಿಯೋದು ಬಿಟ್ಟು , ಬಿಕ್ಷೆ ಕೇಳ್ತೀರಲ್ಲ, ನಿಮಗೆ ನಾಚಿಕೆ ಆಗೋಲ್ಲವಾ " ಅಂತ ಅಪ್ಪಿತಪ್ಪಿಯೂ ಹೇಳಿದರೆ, ಅವರು ನಮ್ಮ ಮುಖಕ್ಕೇ ತುಪುಕ್ ಅಂತ ಉಗುದು "ಅಯ್ಯ ತಂಬಿ, ನೋಡು ನಾವು ಕೂಡ ಹೇಗೆ ಬೆವರು ಸುರಿಸುತ್ತೇವೆ " ಎಂದು ತಮ್ಮ ಬೆವರಿನ ಸೌಗಂಧವನ್ನು ನಮ್ಮ ಮೂಗಿಗೆ ಸೂಸಿ, ಮುಖಕ್ಕೆ ಬೆವರ ಪ್ರೋಕ್ಷಣೆ ಕೂಡ ಮಾಡಿ ಬಿಡುವರು. ಸೂರ್ಯ ಚಂದ್ರರನ್ನೂ ನೋಡಿರದ ಜೀವಿಯು ಈ ಭಾಮಿಯ ಮೇಲೆ ಇದ್ದರೂ ಇರಬಹುದು ಆದರೆ ಚೆನ್ನೈಲ್ಲಿ ಬೆವರದ ಪುಣ್ಯಾತ್ಮನಿಲ್ಲ. ಚೆನ್ನೈ ಅಲ್ಲಿ ನಮ್ಮಂಥ ಇಂಜಿನಿಯರ್ಸ್ ಕೂಡ ಬೆವರು ಸುರಿಸೆ ದುಡಿಯಬೇಕು !.... ಅಷ್ಟೊತ್ತಿಗೆ ಸ್ವಲ್ಪ ಸಮಯ ಕಳೆಯಿತು, ರೈಲು ಕೂಗಿದಾಕ್ಷಣ , ಹೋಗಿ ನನ್ನ ಜಾಗದಲ್ಲಿ ಕೂತುಕೊಂಡೆನು. ರೈಲು ನಿದಾನವಾಗಿ ಚಲಿಸತೊಡಗಿದಾಗ ನಿಜವಾಗಿಯೂ ನಿಟ್ಟುಸಿರು ಬಿಟ್ಟು ಬೀಸುವ ಬಿಸಿಗಾಳಿಗೆ ಮುಖವೊಡ್ಡಿ ಕೂರುವ ಅದೃಷ್ಟವನ್ನು ಶಪಿಸುತ್ತ ಬೆಂಗಳೂರಿನ ಕಡೆ ಪ್ರಯಾಣವನ್ನು ಆರಂಭಿಸಿದೆ.
ಅಷ್ಟೊತ್ತಿಗೆ ಅನೇಕ , ಚಟುವಟಿಕೆಗಳು ರೈಲಿನಲ್ಲಿ ಆರಂಭಗೊಂಡಿದ್ದವು. ರೈಲು ಓಡಲು ಶುರುಮಾಡಿತೆಂದರೆ ರೈಲಿನಲ್ಲಿ ಬೇರೆಯೇ ಜಗತ್ತೇ ಸೃಷ್ಟಿಯಾಗುತ್ತೆ. ಒಮ್ಮೆಯೂ ಮುಖಗಳನ್ನು ನೋಡಿಕೊಂಡಿರದ ಅನೇಕರು ಸ್ನೇಹಿತರಾಗುತ್ತಾರೆ, ಮಾತುಗಳು ಶುರುವಾಗುತ್ತವೆ, ರಾಜಕೀಯ, ಪ್ರಪಂಚದ ಆಗುಹೋಗುಗಳೆಲ್ಲ ರೈಲ ಡಬ್ಬಿ ಸೇರುತ್ತವೆ. ಮಾರಾಟಗಾರರು ಅನೇಕ ಬಗೆಯ ವಸ್ತುಗಳನ್ನು ತಂದು ಮಾರುತ್ತಾರೆ. ಪೆನ್ನು, ಪುಸ್ತಕ, ಹಣ್ಣು-ಹಂಪಲುಗಳು, ಬಟ್ಟೆಬರೆ, ಅಲಂಕಾರಿಕೆ ವಸ್ತುಗಳು, ಆಟಿಕೆಗಳು, ತಿಂಡಿ-ತಿನಿಸುಗಳು,ದವಸ-ದಾನ್ಯಗಳು ಇನ್ನು ಅನೇಕ ಬಗೆಯ ವ್ಯಾಪಾರ ನಡೆಯುತ್ತೆ. ಇದೆಲ್ಲ ಅದೆಷ್ಟು ಜನರ ಹೊಟ್ಟೆಪಾಡಿಗೆ ಸಹಾಯವಾಗುತ್ತೋ ದೇವರಿಗೆ ಗೊತ್ತು. ಕೆಲವರು ಈ ಎಲ್ಲ ವಸ್ತುಗಳನ್ನೊತ್ತು ಮಾರಿ, ಕಷ್ಟ ಪಟ್ಟು ಸಂಪಾದಿಸಿದರೆ, ಇನ್ನು ಕೆಲವರು ಬೇರೆ ರೀತಿಯಾಗೆ ಸಂಪಾದಿಸುತ್ತಾರೆ. ಮಂಗಳಮುಖಿಗಳು ಗುಂಪಾಗಿ ಬಂದರೆ ಸಾಕು ಜನ ಚಕಾರವೆತ್ತದೆ ತೆಪ್ಪಗೆ ದುಡ್ಡು ತೆಗೆದು ಕೊಡುತ್ತಾರೆ. ಮತ್ತೆ ಅನೇಕ ಸೋಗಲಾಡಿಗಳು ನನಗದಿಲ್ಲ-ಇದಿಲ್ಲ ಅನ್ನುತ್ತ, ದೇಹ ನ್ಯೂನತೆಗಳು ಇರದಿದ್ದರೂ ಇರುವ ಹಾಗೆ ತೋರಿಸಿ ಹೆಣ್ಣುಮಕ್ಕಳ, ಚಿಕ್ಕಮಕ್ಕಳ ಕನಿಕರಗಿಟ್ಟಿಸಿ ಖಾಸು ಸಂಪಾದಿಸುತ್ತಾರೆ. ಈ ರೀತಿಯ ಲೋಕವೇ ರೈಲಿನಲ್ಲಿ ಪ್ರತಿ ಸಾರಿಯೂ ಸೃಷ್ಟಿಯಾಗುತ್ತೆ. ಅದೇ ರೀತಿ ಆ ದಿನವೂ ಪ್ರಯಾಣದ ಒಂರ್ದಗಂಟೆಯಲ್ಲಿಯೇ ಇದೆಲ್ಲವೂ ನನ್ನ ಕಣ್ಮುಂದೆ ಬಂದಿತು.
ಮೇಲೆ ಹೇಳಿದ ರೀತಿಯಲ್ಲಿ ಈ ವ್ಯಾಪಾರ-ವಹಿವಾಟುಗಳು ರೈಲಿನಲ್ಲಿ ಬಹು ಸಹಜವಾಗಿ ನಡೆಯುತ್ತವೆ ಮತ್ತು ಈ ರೀತಿಯ ವ್ಯಾಪಾರ ಅಲ್ಲಿ ತೀರ ಸಾಮಾನ್ಯದ ವಿಷಯವೂ ಕೂಡ. ಆದರೆ ಆ ದಿನ ಮಾತ್ರ ನನಗೆ ಒಂದು ಆಶ್ಚರ್ಯ ಕಾದಿತ್ತು. ಸಾಮಾನ್ಯವಾಗಿ ನಾನು ರೈಲಿನಲ್ಲಿ ಏನನ್ನು ಖರೀದಿಸುವುದಿಲ್ಲ ಆದರೆ ನನಗೆ ಅವತ್ತು ಒಂದು ವಸ್ತುವಿನ ಅಗತ್ಯತೆ ತೀರ ಕಾಡತೊಡಗಿತ್ತು. ಅದೇನಪ್ಪ ಅಂದರೆ ಇಳಿಯುವ ಬೆವರೋರೆಸಲು ಅಗತ್ಯವಾಗಿ ಬೇಕಿದ್ದ ಕರ್ಚಿಫ್. ನನ್ನ ಬಳಿ ಇದ್ದದ್ದು ತೊಯ್ದು , ಗಮ್ಮೆನ್ನುತ್ತಿತ್ತು. ಹಾಗಾಗಿ ದೂರದಲ್ಲಿ " ಕರ್ಚೀಫ್ ಕರ್ಚೀಫ್ , ಕರ್ಚೀಫ್ " ಎಂದು ಕೂಗುತ್ತ ಬರುತ್ತಿದ್ದವನನ್ನು ನೋಡಿದೆ. ಹತ್ತಿರ ಬಂದಾಗಲೇ ನನಗೆ ಗೊತ್ತಾಗಿದ್ದು ಆ ಮನುಷ್ಯ ಕಣ್ಣಿಲ್ಲದ ಕುರುಡನೆಂದು. ನೋಡಿದ ತಕ್ಷಣವೇ ಕನಿಕರ ಬಂತಾದರೂ , ಕಷ್ಟಪಟ್ಟು ದುಡಿಯುವ ಆತನ ಮನೋಭಾವ ನನಗೆ ತುಂಬಾ ಮೆಚ್ಚಿಗೆಯಾಯಿತು. ಆತ ತನ್ನ ಒಂದು ಕೈಯಲ್ಲಿ ಒಂದು ಮಾಧರಿಯ , ಮತ್ತೊಂದು ಕೈಯಲ್ಲಿ ಮತ್ತೊಂದು ಮಾಧರಿಯ ಕರ್ಚಿಫ್ ಇಟ್ಟುಕೊಂಡಿದ್ದ. ಜೊತೆಗೆ ಹೆಗಲಿಗೊಂದು ಚೀಲ, ಚೀಲದಲ್ಲಿ ಮತ್ತೊಷ್ಟು ಬಗೆಯ ಕರ್ಚೀಫುಗಳು ಇದ್ದವು. ಸುಮಾರು ೪೦ ವರ್ಷದ ಪ್ರಾಯವಿರಬಹುದು, ಮುಖದಲ್ಲಿ ನಿರಾಸೆಯ ಒಂದಂಶವೂ ಇರಲಿಲ್ಲ. ನೋಡಿದಾಕ್ಷಣವೇ ತಿಳಿಯುತ್ತಿತ್ತು ಆತ ಹುಟ್ಟು ಕುರುಡನೆಂದು. ನಾ "ಇಲ್ಲಿ ತಿರುಗಿ" ಅಂದಾಕ್ಷಣ " ಆತ ನನ್ನ ಕಡೆ ತಿರುಗಿ ಕರ್ಚೀಫ್ ಬೇಕಾ ಸಾರ್ " ಎಂದಾಗಲೇ ನನಗೆ ತಿಳಿಯಿತು ಆತ ಬಹು ಚುರುಕಾದ ಮನುಷ್ಯನೆಂದು. ತನ್ನ ಎಡಗೈಯನ್ನು ಮುಂದೆ ಚಾಚಿ " ಇದು ತಗೊಳ್ಳಿ ಸಾರ್, ಒಳ್ಳೆ quality ಬಟ್ಟೆ , ಒಳ್ಳೆ ಬಣ್ಣ , ಚೆನ್ನಾಗಿ ಬಾಳಿಕೆ ಬರುತ್ತೆ ಸಾರ್ " ಎಂದಾಗ ನನಗೇನೋ ಒಂದು ಬಗೆಯ ವಿಚಿತ್ರ ಅನುಭವ, ಈತನಿಗೆ ಕಣ್ಣಿಲ್ಲ ಆದರೂ ವ್ಯಾಪಾರ ಮಾಡುತ್ತಿದ್ದಾನೆ ಎಂದು. ಅವನ ಆ ಮಾರ್ಕೆಟಿಂಗ್ style ನನಗೆ ತುಂಬಾ ಹಿಡಿಸಿತು. ಆತನ attitude ನಾ ಕುರುಡ ಎಂದು ಕರುಣೆಗಿಟ್ಟಿಸಿ ವ್ಯಾಪಾರ ಮಾಡುವ ರೀತಿಯಲ್ಲಿ ಇರಲಿಲ್ಲ. ಅದೊಂದು ಬಗೆಯ ಬೇರೇನೇ ತರಹ ಇತ್ತು.
ಆತನು ಹೇಳಿದ ಹಾಗೆ ನಾನು ಆತನ ಎಡಗೈಯ ಮೇಲಿಂದ ಒಂದು ಕರ್ಚೀಫ್ ತಗೆದುಕೊಂಡು ಒಂದದಿನೈದು ಸೆಕೆಂಡ್ ನೋಡುತ್ತಿದ್ದೆ , ಅಷ್ಟರಲ್ಲಿ ಆತ " ಯಾಕೆ ಸಾರ್ ಇಷ್ಟ ಆಗಲಿಲ್ಲವಾ , ಹಾಗಾದರೆ ನನ್ ಬ್ಯಾಗ್ ಅಲ್ಲಿ ಇರೋದನ್ನ ತಗೊಳ್ಳಿ ಸಾರ್, ತುಂಬಾ ಚೆನ್ನಾಗಿವೆ , ಸ್ವಲ್ಪ costly ಆಗುತ್ತೆ " ನಸು ನಗುತ್ತಲೇ ಹೇಳಿದ. ನಾ ೫-೬ ಸೆಕೆಂಡ್ ಕಾಲ ಏನನ್ನು ನಿರ್ಧರಿಸದೆ ಇದ್ದಾಗ ಆತ ಚುರುಕಾಗಿ ನನ್ನ ಮನಸ್ಸನ್ನು ಅರಿತು ಬೇರೆ ಮಾದರಿ ಕರ್ಚೀಫ್ ನೋಡಿ ಅಂತ ಹೇಳಿದ. ಇದು ಆತನ ವ್ಯಾಪಾರ ಚತುರತೆಯನ್ನು ತೋರಿಸಿತಿತ್ತು. ನಾನು ಆತನ ಚೀಲದೊಳಗೆ ಕೈಹಾಕಲು ಸ್ವಲ್ಪ ಹಿಂದೆ ಮುಂದೆ ಮಾಡಿದಾಗ , " ಪರವಾಗಿಲ್ಲ ತಗೋಳಿ ಸಾರ್, ನೀವೇ ತಗೋಳಿ " ಎಂದನು. "ಇದೇನಪ್ಪ ಯಾವ ನಂಬಿಕೆ ಮೇಲೆ ಈ ಮನುಷ್ಯ ಈ ರೀತಿ ಹೇಳುತ್ತಾನೆ " ಅಂತ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಎದ್ದಿತು. ನಾ ಚೀಲದಲಿದ್ದ ಒಂದನ್ನು ತಗೆದು ನೋಡಿದೆ ಅದು ಇಷ್ಟವಾಯಿತು. " ಇದು ನನಗಿರಲಿ " ಅಂತ ಹೇಳಿ , " ಈ ಕರ್ಚೀಫ್ ಗೆ ಎಷ್ಟು ? " ಎಂದು ಕೇಳಿದೆ. ಮೊದಲು ಇಡಿದಿದ್ದ ಆ ಕರ್ಚೀಫ್ ಅನ್ನು ಆತನ ಎಡಗೈ ಮೇಲೆ ಹಾಕಿದೆ ನಾ. " ಸಾರ್ ಅದು ೫೦ ರುಪಾಯಿ , ಸ್ವಲ್ಪ costly ದು ಸಾರ್, ಆದ್ರೆ ತುಂಬಾ ಒಳ್ಳೆಯದು" ಎಂದು ಹೇಳಿದಾಗ. ನನಗೆ ಚೌಕಾಷಿ ಮಾಡಲು ಮನಸ್ಸು ಒಪ್ಪಲಿಲ್ಲ. ಸರಿ "ನಾ ಇದನ್ನೇ ತಗೊಂತೀನಿ " ಎಂದು , ನನ್ನ ಪರ್ಸ್ ತೆಗೆದು ನೋಡಿದೆ. ೫೦ ರುಪಾಯಿ ನೋಟು ಇರಲಿಲ್ಲ ಬದಲು ೧೦೦ , ೫೦೦ ರೂಪಾಯಿಗಳು ಇದ್ದವು. " ಚೇಂಜ್ ಇದೆಯಾ ನಿಮ್ಮತ್ರ " ಎಂದಾಗ " ಇಲ್ಲ ಸಾರ್ , ನೀವೇ ಸ್ವಲ್ಪ ನೋಡಿ ಸಾರ್ " ಎಂದು ಹೇಳಿದ ಆ ಮನುಷ್ಯ. ಅಷ್ಟರಲ್ಲಿ ಅಲ್ಲಿ ಇಲ್ಲಿ ತೆಗೆದು ಹತ್ತರ ಮೂರು , ಇಪ್ಪತ್ತರ ಒಂದು ನೋಟು ಸೇರಿಸಿ ಒಟ್ಟು ೫೦ ರುಪಾಯಿಗಳನ್ನೂ ನಾನು ಆತನಿಗೆ ಕೊಟ್ಟೆನು. ಆತ "thank ಯು ಸಾರ್, ಇವು ಯಾವ್ಯಾವ ನೋಟುಗಳು ಸಾರ್ " ಅಂದು ನನ್ನ ಕಡೆಗೆ ಕೈ ಚಾಚಿ ಕೇಳಿದ. ನಾನು ೩ ಹತ್ತು ರುಪಾಯಿಗಳನ್ನು ಮೊದಲು ಆತನ ಕೈಗೆ ಇಟ್ಟಾಗ " ಸ್ವಲ್ಪ ತಡೀರಿ ಸಾರ್ ಎಂದು, ಅವುಗಳನ್ನು ಒಂದು ಜೇಬಿನಲ್ಲಿ ಇಟ್ಟುಕೊಂಡನು. ಮತ್ತೊಮ್ಮೆ ನಾ ಕೊಟ್ಟ ೨೦ ರುಪಾಯಿ ನೋಟನ್ನು ಮತ್ತೊಂದು ಜೇಬಿನಲ್ಲಿ ಇಟ್ಟುಕೊಂಡಾಗ ಆತ ನೋಟುಗಳನ್ನು ವಿಂಗಡಿಸಲು ಈ ರೀತಿಯಾಗಿ ಮಾಡಿದ ಎಂದೆನಿಸಿತು.
ನಾನು ತಕ್ಷಣವೇ "ಸರಿಯಾಗಿ ನೋಡಿಕೊಳ್ರಿ, ಸರಿಯಾಗಿ ಕೊಟ್ಟಿದೇನೋ ಇಲ್ಲವ ಅಂತ , ಮತ್ತೆ ನಾನು ಒಂದನ್ನೇ ತೆಗೆದುಕೊಂಡಿರೋದು " ಎಂದು ಆತನಿಗೆ ನಂಬಿಕೆ ಬರಲು ಹೇಳಿದೆ. ಅದಕ್ಕೆ ಆತ "ಸಾರ್ ನಾನು ನಿಮ್ಮನ್ನ ನಂಬುತ್ತೇನೆ ಸಾರ್ " ಎಂದು ಬಹು ನಮ್ರತೆಯಿಂದ ಹೇಳಿದ. " ಅಲ್ಲಪ್ಪಾ ಆದರರೂ ನನ್ನ ಸಮಾಧಾನಕ್ಕೆ ನಾ ಹೇಳಿದ " ಎಂದಾಗ , " ಆತ ನಂಬಿಕೆಯಿಂದಲೇ ಸಾರ್ ನನ್ನ ವ್ಯಾಪಾರ ಮತ್ತೆ ಜೀವನ ನಡಿತ ಇರೋದು, ನಾ ಎಲ್ಲರನ್ನು ನಂಬಲೇ ಬೇಕು ಸಾರ್ " ಎಂದ. ಹಾಗ ನಮ್ಮನ್ನೇ ನೋಡುತ್ತಾ ಇದ್ದ ವಯಸ್ಸಾದ ಅಜ್ಜಿಯೊಂದು " ಆತ ದೇವರನ್ನು ನಂಬಿ ವ್ಯಾಪಾರ ಮಾಡುತ್ತಾನೆ , ಹಾಗಾಗಿ ದೇವರು ಆತನನ್ನು ಚೆನ್ನಾಗಿಯೇ ಇಟ್ಟಿದ್ದಾನೆ " ಎಂದಿತು. ಆ ಕ್ಷಣಕ್ಕೆ ಆತ ನಸುನಗುತ್ತಲ್ಲೇ" ಇಲ್ಲ ಅಮ್ಮ , ಕಾಣದ , ನಮ್ಮ ಸುತ್ತ-ಮುತ್ತ ಇರದ ಆ ದೇವರನ್ನು ನಂಬಿದರೆ ನನ್ನ ಹೊಟ್ಟೆ ತುಂಬಲ್ಲ, ನನ್ನ ಸುತ್ತ ಮುತ್ತ ಇರೋ ಈ ಜನರನ್ನ ನಂಬಿದರೆ ಮಾತ್ರ ನನ್ನ ಹೊಟ್ಟೆ ತುಂಬುತ್ತದೆ " ಎಂದು ತನ್ನೆಲ್ಲ ಅನುಭವ , ಸಂಕಟ , ಬುದ್ದಿವಂತಿಕೆ , ಆಶಾಭಾವಗಳನ್ನು ಬೆರೆಯಿಸಿ ಆ ಮಾತನ್ನಾಡಿ ಮುಂದೆ ಸಾಗಿದ ಆ ಕುರುಡು ಮನುಷ್ಯ " ಕರ್ಚೀಫ್ ಕರ್ಚೀಫ್ " ಅನ್ನುತ್ತ .
ಆ ಕ್ಷಣದಲ್ಲಿ ನಾ ಅಬ್ಭಾ "ಎಂಥಹ ಮಾತನ್ನು ಆಡಿದ ಆ ಮುನುಷ್ಯ , ಆ ಮಾತಿನಲ್ಲಿ ಅದೆಷ್ಟು ಅರ್ಥವಿದೆ , ನಾವೆಲ್ಲರೂ ಕಣ್ಣುಗಳಿದ್ದು , ಪ್ರಪಂಚವನೆಲ್ಲ ನೋಡಿಯೂ ಕೂಡ ಒಬ್ಬರನ್ನೊಬ್ಬರು ನಂಬುವುದಿಲ್ಲ, ಯಾರು ಏನು ಹೇಳಿದರು , ಕೊಟ್ಟರು ಅವರನ್ನು ನಂಬದೆ , ಅದನ್ನು ನಮ್ಮ ಕಣ್ಣಿನಿಂದ ಪರೀಕ್ಷಿಸಿದ ಮೇಲೆಯೇ ಒಪ್ಪುತ್ತೇವೆ. ನಮ್ಮ ನಮ್ಮಲ್ಲಿ ಪರಸ್ಪರ ನಂಬಿಕೆಗಳು ಕೂಡ ಇರುವುದಿಲ್ಲ, ಒಬ್ಬರನ್ನೋಬರು ಒಪ್ಪುವುದೂ ಇಲ್ಲ. ಮನುಷ್ಯರನ್ನೊಂತು ಮಾತ್ರ ನಾವು ಅದೇಕೋ ಅಷ್ಟಾಗಿ ನಂಬುವುದೂ ಇಲ್ಲ . ಬದಲಾಗಿ ನಮಗೆ ಗೊತ್ತಿರದ, ನೋಡದ ದೇವರನ್ನು ಮಾತ್ರ ನಂಬುತ್ತೇವೆ. ಆದರೆ ಈ ಮನುಷ್ಯ ಮಾತ್ರ ನಿಜ ಸತ್ಯವನ್ನರಿತು ನಮ್ಮ ಸುತ್ತ ಮುತ್ತಲಿರುವ ಜನರನ್ನು ನಂಬುತ್ತಾನೆ , ಆದ್ದರಿಂದಲೇ ಯಾರು ಆತನಿಗೆ ದ್ರೋಹ ಬಗೆಯುವುದಿಲ್ಲ , ಮೋಸ ಮಾಡುವುದಿಲ್ಲ. ಕಣ್ಣಿರದ ಆತನಿಗೆ ಸುತ್ತಲಿನ ಜನರೇ ದೇವರುಗಳು , ಆತ ಎಲ್ಲರಲ್ಲೂ ದೇವರನ್ನೇ ಕಾಣುತ್ತಾನೆ , ಹಾಗಾಗಿ ಎಲ್ಲರನ್ನು ನಂಬುತ್ತಾನೆ , ನಿಜವಾಗಿಯೂ ಆತನ ಮಾತೆ ಸತ್ಯ " ಎಂದು ನನಗೂ ಅನ್ನಿಸಿತು.
ಇನ್ನುಳಿದ ಪ್ರಯಾಣದುದ್ದಕ್ಕೂ ಆತನ ಆ ಮಾತುಗಳು ನನ್ನನು ಅನೇಕೆ ವಿಚಾರಗಳ ಗಂಟಲ್ಲಿ ಸಿಕ್ಕಿಸಿ ಹಾಕಿಸಿದ್ದವು. ಆತ ಆ ಕ್ಷಣಕ್ಕೆ ನನಗೆ ಮಹಾನ್ ತತ್ವಜ್ಞಾನಿಯಂತೆ ಕಂಡನು ಕೂಡ. ಆತನ ಆ ಮಾತುಗಳ ಅರ್ಥ , ತಾತ್ಪರ್ಯ , ವಿಮರ್ಶೆಯಲ್ಲೇ ನಾನು ನನ್ನ ಆ ದಿನದ ಪ್ರಯಾಣವನ್ನ ಸವೆಸುತ್ತಿದ್ದಂತೆ , ನನ್ನ ಚಿಂತನೆಯು ಕೂಡ ಹೊಸ "ನಂಬಿಕೆ"ಯ ಹಾದಿ ತುಳಿದಿತ್ತು.
ನಿಮಗಾಗಿ
ನಿರಂಜನ್