ಭಾನುವಾರ, ಜುಲೈ 14, 2013

ಹಿತವಾದ

                                                                             ಹೊದಿಕೆ 

ನಾವೆಲ್ಲರೂ ಮೊದಲಿಂದಲೂ ರೂಡಿಸಿಕೊಂಡು ಬಂದಂತೆ , ನಮ್ಮೆಲ್ಲರಿಗೂ ರಾತ್ರಿ ಮಲಗುವಾಗ ಅವಶ್ಯವಾಗಿ ಬೇಕಾಗುವುದು ಯಾವ ವಸ್ತು ?? ಅದು ಖಂಡಿತವಾಗಿಯೂ ಹೊದಿಕೆಯಲ್ಲದೆ ಮತ್ತೇನು ಅಲ್ಲ. ಚೆನ್ನಾಗಿರುವ, ಒಜ್ಜಿಕೊಂಡರೆ ಮೈ-ಕೈ-ಕಾಲು ಮುಚ್ಚುವ, ಒಳ್ಳೆ ಬಣ್ಣದ, ಸಾಕೊಷ್ಟು ಅಗಲವಾದ, ಬೆಸಿಗೆಯಾದರೆ ತೆಳ್ಳನೆಯ, ಚಳಿಗಾಲದಲ್ಲಿ ದಪ್ಪವಾದ, ಶುಭ್ರವಾದ , ಒಳ್ಳೆಯ ಹತ್ತಿಯುಪಯೋಗಿಸಿ ಅದ್ಭುತ ನೇಕಾರ-ಕಲಾವಿದ ತಯಾರಿಸಿದ ಕಸೂತಿಯನ್ನೊಳಗೊಂಡ ಹೊದಿಕೆ ಎಂದರೆ ಯಾರು ತಾನೇ ಬೇಡವೆಂದಾರು ?. ರಾತ್ರಿ ಮಲಗಿದಾಗ ಹೊದಿಕೆಯನ್ನು ಒಜ್ಜಿಕೊಲ್ಲದಿದ್ದರು ಅದು ತಮ್ಮ ಕಾಲ ಬಳಿ ಇರಲೇಬೇಕು. ಅದು ಪಕ್ಕದಲ್ಲೋ, ಹತ್ತಿರದಲ್ಲೋ, ಅವರಿಗೆ ಕೈಗೆ ಬೇಕೆಂದಾಗ ಸಿಗುವಂತಾದರು ಇರಬೇಕು ಅವರ ಹೊದಿಕೆ. ಒಂದೊತ್ತಿನಲ್ಲಿ ಬೇಕೆನಿಸಿದರೆ ಅದು ಗೊತ್ತಿಲ್ಲದೇ ಖಂಡಿತವಾಗಿ ಅವರ ಮೈ ಮೇಲಿರುತ್ತೆ, ಇಲ್ಲವಾದರೆ ಹೊದಿಕೆಯ ಮೇಲೆ ಅವರೇ ಇರುತ್ತಾರೆ .. ಇಲ್ಲಾ...  ಕಾಲಿನ ಮೇಲಾದರು ಹೊದಿಕೆ ಇದ್ದೆ ಇರುತ್ತೆ. ಈ ಕಾಲ ಆ ಕಾಲ, ಯಾವ ಕಾಲವಾದರು ಹೊದಿಕೆ... ಒಂದೊಳ್ಳೆಯ... ಅಚ್ಚುಕಟ್ಟಾದ ಹೊದಿಕೆ ಇರಲೇಬೇಕು. ಇಲ್ಲದೆ ಹೋದರೆ ನಿದ್ದೆ ಬರೋಲ್ಲ. ರಾತ್ರಿಗಳನ್ನು ಕಲ್ಪಿಸಿಕೊಳ್ಳಲು ಸಾದ್ಯವಿಲ್ಲ. ಅದು ಚಳಿಗಾಲದ ರಾತ್ರಿಯೊಂತು ಹೊದಿಕೆ ಬೇಕೇ ಬೇಕು.   

           ಕೆಲವರು ಹೇಳುವ ರೀತಿಯಲ್ಲಿ, ಹೊದಿಕೆ ಇಲ್ಲದೆ ಅವರು ಮಲಗಿದ ದಿನಗಳಿಲ್ಲವಂತೆ. ಹೊದಿಕೆ ಇಲ್ಲದ ದಿನಗಳನ್ನು ನೆನೆಯಲು ಕೂಡ ಸಾದ್ಯವಿಲ್ಲವಂತೆ.  ಏನ್ ಇರಲಿ ಬಿಡಲಿ ತೆಳ್ಳಗಿನ,ಶುದ್ದವಾದ, ಅಂದ ಚಂದದ ಒಂದು ಹೊದಿಕೆ ಬೆಸಿಗೆ , ಮಳೆ, ಚಳಿಗಾಲಗಳ  ರಾತ್ರಿಗಳಲಿ ಬೇಕೇ ಬೇಕು. ಮೆತ್ತನೆಯ ಸ್ವಲ್ಪ ತೆಳ್ಳಗಿರುವ ಹೊದಿಕೆ ಬೇಸಿಗೆಗೆ ಬೇಕೆನಿಸಿದರೆ, ಚಳಿಗಾಲದಲ್ಲೋ "ಒಂದಿಷ್ಟು ಸ್ವಲ್ಪ ದಪ್ಪ ಇದ್ದರೆ ಮಜಾ ಇರುತ್ತೆ,  ಕೈತುಂಬಾ ಸಿಕ್ಕರೆ ಮೈತುಂಬಾ  ಒಜ್ಜಿಕೊಳ್ಳಬಹುದು" ಎಂದು ಎಲ್ಲರಿಗೂ ಅನ್ನಿಸುತ್ತೆ. ಹೊದಿಕೆಯೊಂದಿಗೆ ಮಲಗುವುದೇ ಒಂದು ರೀತಿಯ ಬೆಚ್ಚನೆ ಅನುಭವ. ವಾತಾವರಣ ಹೇಗೆ ಇರಲಿ, ಮೈ ಬಿಗಿಹಿಡಿದು ಹೊದಿಕೆಯನ್ನು ಇಡಿದೆಳೆದುಕೊಂಡು ಮೈ ಸುತ್ತಿಕೊಳ್ಳುತ್ತೇವೋ ಇಲ್ಲವೋ, ಆದರೆ ಒಂದು ಹೊದಿಕೆ ಮಾತ್ರ ಸದಾ ಜೊತೆಯಿದ್ದರೆ ಒಳ್ಳೆಯದು ಅಲ್ಲವೇ ?. ಸಂಪೂರ್ಣ ಒಜ್ಜಿಕೊಳ್ಳದಿದ್ದರು ಅದನ್ನು ಕಾಲ ಮೇಲಾದರೂ ಹಾಕಿ ಮಲಗುವ ರೂಡಿ ಇದ್ದರೆ ಒಳ್ಳೆಯದೆಂದು ನಮ್ಮ ಹಿರಿಯರು ಕೂಡ ಹೇಳುವ ನೆನಪಂತೂ ನನಗೂ ಕೂಡ ಇದೆ. ಏಕೆಂದರೆ ಹೊದಿಕೆ ಕೊರೆಯುವ ಚಳಿಯಿಂದ, ಹೊತ್ತಲ್ಲದ ಹೊತ್ತಲ್ಲಿ ಎಲ್ಲೆಂದರಲ್ಲಿ ನುಗ್ಗುವ ಸೊಳ್ಳೆಗಳಿಂದ ನಮಗೆ ರಕ್ಷಣೆ ನೀಡುವುದರಲ್ಲಿ ಎರೆಡು ಮಾತಿಲ್ಲ.

           ಈ ಹೊದಿಕೆ ಎಂಬುದು ನಾವು ಹೇಳಿದ ಹಾಗೆ ಕೇಳುತ್ತೆ ಅಂತ ಅನ್ನಿಸುವುದಿಲ್ಲವೇ ತಮಗೆ ?. ನಾವು ಹೇಗೆ ಉಪಯೋಗಿಸಿದರು ಅದು ಸುಮ್ಮನಿರುತ್ತದೆ, ನಾವು ಬಿಗಿ ಇಡಿದೊಷ್ಟು ನಮ್ಮ ಬಳಿಯೇ ಇರುತ್ತೆ , ಹಿತವೆನ್ನುವಷ್ಟು ನಮ್ಮನ್ನು ಸುತ್ತುತ್ತದೆ. ಈ ಎಲ್ಲ ಕಾರಣಗಳಿಗಾಗಿ ಹೊದಿಕೆಯನ್ನು ಎಲ್ಲರು ಇಷ್ಟ ಪಡುತ್ತಾರೆ. ಹೊದಿಕೆಗೆ ಅನೇಕ ಪರ್ಯಾಯಗಳಿದ್ದರು ಹೊದಿಕೆಯ ಮಜವೇ ಬೇರೆ. ಅದೇ ರೀತಿ ಹೊದಿಕೆಗಳಲ್ಲಿ ಅನೇಕ ಬಗೆಗಳೂ ಕೂಡ ಇವೆ. ಸಾಂಪ್ರಾದಾಯಿಕ ಹೊದಿಕೆಗಳಿಂದ ಇಡಿದು ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ADVANCED, ಜಿಂಗ್-ಚಾಕ್ ಹೊದಿಕೆಗಳು ನಮಗೆ ಸಿಗುತ್ತವೆ. ಕೆಲವರಿಗೆ ಸಾಂಪ್ರದಾಯಿಕ ಹೊದಿಕೆ ಬೇಕೆನಿಸಿದರೆ, ಕೆಲವರಿಗೆ ಜಿಂಗ್-ಚಾಕ್ ಹೊದಿಕೆಗಳು ಇಷ್ಟವಾಗುತ್ತವೆ. ಆದರೆ ಪ್ರತಿ ರಾತ್ರಿ ಮಲಗುವ ಮೊದಲು ನಮಗೆ ನೆನಪಾಗುವುದು ಇಷ್ಟದ ದೇವರಗಳಲ್ಲ, ಆ ದಿನದ ಘಟನೆಗಳಂತೂ ಅಲ್ಲವೇ ಅಲ್ಲ, ನಮ್ಮ ನೆಚ್ಚಿನ ಹೊದಿಕೆಗಳು ಮಾತ್ರ ಹಾಗೆ ನಮ್ ಕಣ್ ಮುಂದೆ ಬಂದು ಬಿಡುತ್ತವೆ. ಕೆಲವರಂತು ಕೆಲವು ಹೊದಿಕೆಗಳನ್ನು ತಮ್ಮ favorite ಗಳಾಗಿ  ಮಾಡಿಕೊಂಡಿರುತ್ತಾರೆ. ಹೊದಿಕೆಗಳನ್ನು ಯಾರು ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಇಷ್ಟ ಕೂಡ ಪಡುವುದಿಲ್ಲ,  ಅದು ಒಳ್ಳೆಯ ಅಭ್ಯಾಸ ಕೂಡ,  ಅದಕ್ಕೆ ನನ್ನ ತಂಟೆ ತಕರಾರೊಂತು ಇಲ್ಲವೇ ಇಲ್ಲ. ಇದಕ್ಕೆ ಕಾರಣಗಳು ಅನೇಕ. ಅದರ ಮೇಲಿನ ಅತಿಯಾದ ಪ್ರೀತಿ, ನಿಚ್ಚಿನ ಬಣ್ಣ, ಅದರ ಉದ್ದ-ಅಗಲ ಮತ್ತು ಗಾತ್ರಗಳು ಹೆಚ್ಚಿನ ಪಾತ್ರವಹಿಸುತ್ತವೆ. ಕೆಲವರಂತೂ ಕಾರಣಗಳಿಲ್ಲದೆ ಹೋದರು ಕೆಲವು ರೀತಿಯ ಹೊದಿಕೆಗಳನ್ನು ತುಂಬಾ ಇಷ್ಟ ಪಡುತ್ತಾರೆ.  
                
                ಈ ಮಳೆಗಾಲ , ಚಳಿಗಾಲಗಳು ಬಂದವೆಂದರೆ ಮಾತ್ರ ಎಲ್ಲರಿಗೂ ಬೇಕೇ ಬೇಕು ಹೊದಿಕೆ, ಅದರಲ್ಲೂ ಹೀಗಿರುವ ಇಂಥಹ ವಾತವರಣದಲ್ಲಿ ಯಾರಿಗೆ ಬೇಡ ಅಂದ ಚಂದದ ಬೆಚ್ಚಗಿಡುವ ಸುಂದರ ಹೊದಿಕೆಗಳು ?. ದೂರದೃಷ್ಟಿಯುಳ್ಳವರು ಈ ಕಾಲಗಳು ಆರಂಭವಾಗುವ ಮೊದಲೇ ಇವುಗಳ ವ್ಯವಸ್ತೆ ಮಾಡಿಕೊಳ್ಳುತ್ತಾರೆ. ಬುದ್ದಿವಂತ ತಂದೆ-ತಾಯಿಗಳು ಮಕ್ಕಳು ಒಪ್ಪುವ ಹೊದಿಕೆಗಳನ್ನು ಅವರೇ ತಂದು ಮಕ್ಕಳಿಗೆ ಹೊದಿಸುತ್ತಾರೆ. ಕೆಲವರು ಸ್ಥಳಿಯವಾಗಿ ಸಿಗುವ ಹೊದಿಕೆಗಳನ್ನು ಹೊದ್ದುಕೊಂಡು ತೃಪ್ತಿ ಪಟ್ಟರೆ, ಇನ್ನೂ ಕೆಲವರು "ಈ ಹೊದಿಕೆ ಕಾಶ್ಮೀರಿ ಶಾಲ್ ಹಾಗಿದ್ದರೆ ಹೇಗೆ ಇರುತ್ತಿತ್ತು ! " ಎಂದು ಇಲ್ಲದರ ಬಗ್ಗೆ ಯೋಚಿಸುತ್ತಾರೆ. ಪ್ರಜ್ಞಾವಂತ ಜನರು ಹೊದ್ದ ಹೊದಿಕೆಯಲ್ಲೇ ಸಂತುಷ್ಟರಾಗಿ ಹಾಯಾಗಿ ಬೆಚ್ಚಗೆ ಮಲಗುತ್ತಾರೆ. ಆಷಾಡದ ಗಾಳಿಯಲ್ಲೊಂತು ಹೊದಿಕೆಗಳು ಅತ್ಯವಶ್ಯಕ, ಅದರಲ್ಲೂ ಈ ಆಷಾಡದ ವಿರಹಿಗಳಿಗೆ ಬೇಕೇ ಬೇಕು ಅವರ ಆ... ಹೊದಿಕೆ. 

          ನಿಮಗೆ ಗೊತ್ತಾ ? ವಯಸ್ಸಿಗೆ ತಕ್ಕನಾಗಿ ಹೊದಿಕೆಗಳ ಮೇಲೆನ  ಪ್ರೀತಿಯೂ  ಕೂಡ ಬದಲಾಗುತ್ತದೆ. ಒಂದೊಂದು ವಯಸ್ಸಿನಲ್ಲಿ ಒಂದೊಂದು ತರಹದ ಹೊದಿಕೆಗಳು ನಮ್ಮನ್ನು ಆಕರ್ಷಿಸುತ್ತವೆ. ಇದಕ್ಕೆಲ್ಲ ಕಾರಣ ಹೊದಿಕೆಯ ಉಪಯೋಗ , ಅದರ ಅಂದ-ಚಂದ. ಕೊನೆಯಾದಾಗಿ ಹೇಳಬೇಕೆಂದರೆ ಹೊದಿಕೆ ಬೇಕೇ ಬೇಕು ಮಲಗುವಾಗ ಅದು ನಮ್ಮದೇ ಆಗಿದ್ದರೆ ಚೆನ್ನ, ಒಂದೇ ಇದ್ದಾರೆ ಹಿತ, ಒಳ್ಳೆಯದಾದ್ರೆ ಸಂತೋಷ , ಶುಭ್ರವಾಗಿದ್ದರೆ ಆರೋಗ್ಯ. 

ನಿಮಗಾಗಿ 
ನಿರಂಜನ್ 


4 ಕಾಮೆಂಟ್‌ಗಳು: