ಆಷಾಡದ ಆ ದಿನ ....
ಆಷಾಡದ ಒಂದು ದಿನ, ಬೆಳ್ಳಂಬೆಳಗ್ಗೆಯ ಸಮಯ, ಸುತ್ತಲೂ ಮೋಡಗಳು, ಬೀಸುತ್ತಿತ್ತು ತಂಪಾದ ಚಳಿಗಾಳಿ, ಹಕ್ಕಿ-ಪಕ್ಕಿಗಳೆದ್ದು ಸಂಗೀತ ಸುಧೆಯನ್ನೇ ಹರಿಸುತ್ತಿದ್ದವು. ಮಳೆರಾಯ ಆಗ ತಾನೇ ಪ್ರಕೃತಿಯ ಮೈ ತೊಳೆದು ಸುಮ್ಮನಾಗಿದ್ದಾನೆ. ಗಿಡ ಮರ ಬಳ್ಳಿಗಳ ಎಲೆಗಳು ನೀರಹನಿಗಳನ್ನುಟ್ಟು ಸಿಂಗಾರಗೊಂಡು ನಿಂತಿವೆ. ತಂಗಾಳಿಯೊಮ್ಮೆ ಗಿಡ-ಮರಗಳಿಗೆ ಖಚಗುಳಿಯಿಟ್ಟರೆ, ಅವು ನುಲಿದು, ನಲಿದು, ಕುಣಿದು ಬಚ್ಚಿಟ್ಟುಕೊಂಡಿದ್ದ ನೀರಹನಿಗಳನ್ನು ಭೂಮಿಗೆ ಸುರಿಸುತ್ತಿದ್ದವು. ಆ ದೃಶ್ಯ ಹೇಗಿತ್ತು ಎಂದರೆ ನೀರ ಹನಿಗಳು ಭೂಮಿಗೆ ಬಿದ್ದರೆ ಮಣಿ-ಮುತ್ತುಗಳೇ ಧರೆಗುರುಳುವಂತೆ ಕಾಣುತ್ತಿತ್ತು.
ನನಗೆ ಒಟ್ಟಾರೆ ಆ ದಿನ ಸ್ವರ್ಗವೇ ಭೂಮಿಯನ್ನು ಬಿಗಿದಪ್ಪಿದ ಹಾಗೆ ಭಾಸವಾಗಿತ್ತು. ಇಂಥಹ ವಾತವರಣದ ಸವಿಯ ಸವಿಯುವ ಮನಸ್ಸನ್ನು ಕೊಟ್ಟ , ನೋಡಿದ ಅಂದವನ್ನು ಹಾಗೆಯೇ ಕದಿಯುವ ಹೃದಯವನನ್ನೂ ನನ್ನೊಳು ಇರಿಸಿದ, ಈ ರೀತಿಯ ಸುಂದರ ದಿನಗಳನ್ನು ನನಗೆ ಅನುಭವಿಸಲೆಂದೇ ಸೃಷ್ಟಿಸುವ ಆ ಕಾಣದ ಗಾರುಡಿಗನಿಗೆ ಮನದಲ್ಲೇ ಒಂದು ಕ್ಷಣ ವಂದಿಸಿದೆ. ಇಂಥಹ ವಾತಾವರಣವನ್ನು ನಾನೇನು ಮೊದಲು ನೋಡುತ್ತಿಲ್ಲ,ಅನುಭವಿಸುತ್ತಿಲ್ಲ. ಆದರೂ ಇಂತಹ ದಿನಗಳು ಮಾತ್ರ ನನ್ನನ್ನು ಬಹುವಾಗಿ ಸೆಳೆಯುತ್ತವೆ, ಸೂರೆಗೊಳ್ಳುತ್ತವೆ. ಪ್ರತಿಸಲವೂ ನನಗೆ ಇದರಲ್ಲೊಂದು ನವ ನವೀನತೆ ಕಾಣುತ್ತದೆ. ಈ ರೀತಿಯ ಪ್ರಕೃತಿಯಿಂದ ನಾನು ಬೇಗನೆಯೇ ಆಕರ್ಷಿತನಾಗುತ್ತೇನೆ, ಮನಸ್ಸು ಪುಳಕಗೊಳ್ಳುವುದರ ಜೊತೆಗೆ ಹಗುರವೂ ಆಗುತ್ತೆ, ಅದೇನೇ ದುಃಖ ದುಮ್ಮಾನಗಳಿದ್ದರು ಆ ಕ್ಷಣಕ್ಕೆ ಅವು ದೂರಸರಿದು, ಖುಷಿ, ಶಾಂತಿ, ಪ್ರೀತಿಗಳು ಹತ್ತಿರವಾಗುತ್ತವೆ. ನಿಜ ಹೇಳಬೇಕೆಂದರೆ ಈ ರೀತಿಯ ವಾತಾವರಣ ಅದೇನೋ ಗೊತ್ತಿಲ್ಲ, ನನನ್ನೂ ಮಲಗಲೂ ಬಿಡೋಲ್ಲ, ಸುಮ್ಮನಿರಲೂ ಬಿಡುವುದಿಲ್ಲ. ಈ ವಿಷಯದ ಬಗ್ಗೆ ನನಗೆ ಸ್ವಲ್ಪವೂ ಬೇಸರ ಇಲ್ಲ. ಈ ರೀತಿಯ ಮನೋಭಾವ ನನಗೆ ದೇವರು ಕೊಟ್ಟ ವರವೆಂದು ನಾನು ತಿಳಿದಿದ್ದೇನೆ. ಇದು ನನ್ನ ಭಾಗ್ಯವೂ ಕೂಡ , ಅದ್ಯಾವ ಜನ್ಮದದಲ್ಲಿ ಅಂಥಹ ಅದೇನು ಘನ ಕಾರ್ಯ ಮಾಡಿದ್ದೇನೋ ಏನೋ ಗೊತ್ತಿಲ್ಲ, ಆದರೆ ಆ ಜನ್ಮದಲ್ಲಿ ಮಾತ್ರ ಈ ರೀತಿಯ ಸುಂದರ ಪ್ರಕೃತಿಯ ಸವಿಯುವ ಮನಸ್ಸುನ್ನೂ ಕೇಳದಿದ್ದರೂ ಆ ದೇವರು ಕೊಟ್ಟಿದ್ದಾನೆ. ಆತನಿಗೆ ಮತ್ತೊಮ್ಮೆ ನನ್ನ ಹೃದಯಾಂತರಾಳದ ನಮನ.
ವಾತವರಣ ಹೀಗಿದ್ದಾಗ ಅದೇಗೆ ನಾ ಮನೆಯಲ್ಲಿ ಜೊಲ್ಲು ಸುರಿಸಿಕೊಳ್ಳುತ್ತಾ, ನನ್ನ ಉಸಿರು ನಾನೇ ಕುಡಿಯುತ್ತ, ಹೊದಿಕೆಯಲ್ಲಿ ಗೂಡಲ್ಲಿ ಮುದುರಿ ಮಲಗಲಿ ? ಬೀಳುವ ಬೆಳಕಿನಿಂದ , ಬೀಸುವ ಗಾಳಿಯಿಂದ ಅದೇಗೆ ನಾನು ನನ್ನನ್ನು ವಂಚಿಸಿಕೊಳ್ಳಲಿ. ಹೀಗೆ ನಾ ಮಾಡಿದ್ದೆ ಆದರೆ ಅದು ನಾ ಮಾಡಿಕೊಂಡ ಮೂರ್ಖತನವಾಗುತ್ತೆ. ಒಂದು ವೇಳೆ ಪಡುವಣದಲ್ಲಿ ಸ್ವಾಮಿಯು ಮೂಡಿದಾಗಲೂ ನಾನು ಮಲಗಿ ಒಳ್ಳೆಯ ವಾತಾವರಣವನ್ನು ಅನುಭವಿಸದಿದ್ದರೆ ಅದು ಸೌಂದರ್ಯವೀರುವ ನನ್ ಕಂಗಳಿಗೆ ನಾನ್ ಮಾಡುವ ಮೋಸ ಎಂದೆನಿಸುತ್ತದೆ. ಹಾಗಾಗಿ ಆ ದಿನ ನಾ ಮನೆಯಲ್ಲಿ ಒಂದು ಲೋಟ ತಣ್ಣನೆ ನೀರನ್ನು ಕುಡಿದು, ಬಿಸಿಯ ಕಾಫೀ ಹೀರಿ , ಕೈಯಲ್ಲೊಂದು ಕೊಡೆಹಿಡಿದು ಸಣ್ಣ ವಿಹಾರಕ್ಕೊರಟೆ.
ಹಾಗೆ ನೆಡೆಯುವಾಗ ನನಗೋ "ಆಹಾ ಎಂಥಹ ವಾತವರಣವಿದು" ಎಂದು ಅನ್ನಿಸುತಿತ್ತು. ಮನಸ್ಸು ಕವಿವರ್ಯ್ಯನಾಗಿ ಬಚ್ಚಿಟ್ಟುಕೊಂಡಿದ್ದ ಭಾವನೆಗಳಿಗೆ ಬಣ್ಣವಚ್ಚಿ ರೂಪು ನೀಡುತ್ತಿತ್ತು. ಏನು ನೋಡಿದರು ನನಗೆ ಎಲ್ಲವೂ ಚಂದವಾಗಿಯೇ ಕಾಣುತ್ತಿದ್ದವು. ಪ್ರತಿಯೊಂದರಲ್ಲೊಂದು ಶುದ್ದತೆ ಕಾಣುತಿತ್ತು. ಅಷ್ಟರಲ್ಲೇ ದೂರದಲ್ಲೊಂದು ಒಂಟಿ ಮನೆ ಕಂಡಿತು. ಅಕ್ಕ-ಪಕ್ಕ ಸ್ವಲ್ಪ ಖಾಲಿ ಜಾಗ, ಖಾಲಿ ಜಾಗದ ತುಂಬೆಲ್ಲ ಹಸಿರು ಹುಲ್ಲು ಬೆಳೆದಿತ್ತು.ಅಲ್ಲೊಂದು ಇಲ್ಲೊಂದು ತುಂಬೆ ಗಿಡಗಳು ಹುಲ್ಲ ನಡುವೆ ರಾರಾಜಿಸುತ್ತಿದ್ದವು. ಬಹು ಮಳೆಯಿಂದಾಗಿ ಮನೆಯ ಕಾಂಪೌಂಡ್ಗೆ ಪಾಚಿ ಕಟ್ಟಿದಂತಾಗಿ ಹಸಿರು ಹತ್ತಿತ್ತು, ಅನೇಕ ಬಳ್ಳಿಗಳೂ ಅದರ ಮೇಲೆ ಹಬ್ಬಿದ್ದವು. ಅದೇ ಕಾಂಪೌಂಡ್ ಕೊನೆಯಲ್ಲಿ ಒಂದು ದೊಡ್ಡ ಮಲ್ಲಿಗೆ ಬಳ್ಳಿ ಮನೆಯ ಮಹಡಿಯ ಕಡೆ ಹಬ್ಬಿ , ಮೊದಲ ಮಹಡಿಗೂ ತಲುಪಿತ್ತು. ಸೊಂಪಾಗಿ ಬೆಳೆದಿದ್ದ ಅದು ಹಚ್ಚ ಹಸುರಾಗಿತ್ತು. ಬೆಳಗುಜಾವದ ಮಳೆಯಲ್ಲಿ ಜಳಕಮಾಡಿ, ತನ್ನ ಮೊಲ್ಲೆಯ ಮಗ್ಗುಗಳಿಂದ ತನ್ನನ್ನೇ ಅಲಂಕರಿಸಿಕೊಂಡಿತ್ತು. ಆ ಮನೆಯೂ ಸುಂದರವಾಗಿದ್ದರೂ ಕೂಡ ಆ ಕಡೆ ನೋಡಿದರೆ ಮೊದಲು ಗಮನ ಹರಿಯುವುದು ಬೆಳೆದು ನಿಂತಿದ್ದ ಆ ಮಲ್ಲಿಗೆ ಬಳ್ಳಿಯ ಕಡೆಗೆ ಹೊರತು ಆ ಮನೆಯ ಮೇಲಲ್ಲ.
ಆದರೆ ಆ ದಿನ ಮಾತ್ರ ನನಗೆ ಕಂಡಿದ್ದು ಆ ಬಳ್ಳಿಯ ಜೊತೆಗಿದ್ದ ಮತ್ತೊಂದು ನೀಟಾದ ಸೌಂದರ್ಯದ ಗಂಟು. ನಿಜ ಅವಳು ಸಕತ್ ಸೌಂದರ್ಯದ ಗಣಿಯೇ ಆಗಿದ್ದಳು. ಆ ದೇವರು ಇದ್ದ ಬದ್ದ ಅಂದ-ಚಂದವನನೆಲ್ಲ ಒಟ್ಟುಗೂಡಿಸಿ ಗಂಟೊಂದನ್ನು ಅಲ್ಲಿರಿಸಿದ್ದನು ಎಂದು ಭಾಸವಾಯಿತು ಅವಳನ್ನು ನೋಡಿದೊಡನೆ. ನೋಡಿದ ತಕ್ಷಣಕ್ಕೆ ಅನ್ನಿಸುತ್ತಿತ್ತು ಅವಳು ಆಗತಾನೆ ಸ್ನಾನ ಮುಗಿಸಿ ಬಂದಿಹಳೆಂದು. ತನ್ನ ನೀಳಗೂದಲುಗಳನ್ನು ಹಾಗೆಯೇ ಕಟ್ಟಿ, ಕಟ್ಟಿಗೊಂದು ಸಣ್ಣ ಸೇವಂತಿಗೆ ಮುಡಿದು, ಚಿಕ್ಕ ಕುಂಕುಮದ ಬೊಟ್ಟು ಹಣೆಗೆ ಇಟ್ಟು , ಶುಭ್ರ ಹಳದಿ ಬಟ್ಟೆಯುಟ್ಟು, ಕೈಯಲ್ಲೊಂದು ಸಣ್ಣ ಕವರ್ ಹಿಡಿದು ಆ ಮಲ್ಲಿಗೆ ಬಳ್ಳಿಯ ಬಳಿ ಅವಳು ನಿಂತಿದ್ದಾಳೆ. ಒಮ್ಮೆ ಅವಳ ಆ ಸೌಂದರ್ಯ ಆ ಮಲ್ಲಿಗೆ ಹೂವ್ ಬಳ್ಳಿಯ ಮತ್ತು ಆ ಪ್ರಕೃತಿಯ ಸೌಂದರ್ಯಕ್ಕೆ ಸವಾಲಾಕಿದಂತೆ ಕಂಡರೂ ಮತ್ತೊಂದೆಡೆ ಅವಳ ಚೆಂದ ಅಲ್ಲಿಯ ಆ ಪ್ರಕೃತಿಗೇನೆ ಅಂದವನ್ನು ತಂದುಕೊಟ್ಟಂತೆ ಅನ್ನಿಸುತಿತ್ತು. ಒಟ್ಟಾಗಿ ಹೇಳುವುದಾದರೆ ಒಬ್ಬರ ಚೆಲುವು ಮತ್ತೊಬ್ಬರಿಗೆ ಪೂರಕವಾಗಿದ್ದವು.
ಆದರು ಅವಳು ಮಲ್ಲಿಗೆ ಬಳ್ಳಿಯ ಹೂವು ಕೀಳಲು ಅಲ್ಲಿ ನಿಂತೊಡನೆ ಇಡೀ ಮಲ್ಲಿಗೆ ಬಳ್ಳಿಯೇ ಅವಳ ಆ ಸೌಂದರ್ಯಕ್ಕೆ ಶರಣಾಗಿ ಆ ದಿನ ಕೊಂಚ ಸಪ್ಪೆಯಾಗಿ ಖಂಡಿತು. ಅವಳು ಹೂ ಕೀಳಲು ಕೈ ಎತ್ತುವ ಮೊದಲೇ ಆ ಮಲ್ಲಿಗೆ ಬಳ್ಳಿಯೆ ಭಾಗಿ ತನ್ನನ್ನು ತಾನು ಅವಳಿಗೆ ಅರ್ಪಿಸಿ, ತನ್ನೆಲ್ಲ ಹೂವುಗಳನ್ನು ಅವಳಿಗೆ ಸಮರ್ಪಿಸಿ ಸಾರ್ಥಕ ಗೊಳ್ಳುವಂತೆ ನಡೆದುಕೊಳ್ಳುತ್ತಿದೆಯೆಂದು ನನಗೆ ಭಾಸವಾಗುತಿತ್ತು. ಆ ಕ್ಷಣಕ್ಕೆ ನಾನು ಆ ಪ್ರಕೃತಿಯೋಲ್ಲಿ ಮತ್ತೊಂದು ಸೌಂದರ್ಯದ ನಿಕ್ಷೇಪವನ್ನು ಕಂಡಂತೆ ಆಯಿತು. ಅವಳು ಬಳ್ಳಿಯನ್ನು ಮುಟ್ಟಿ, ತನ್ನ ಕೋಮಲ ಕೈಯಿಂದ ಒಂದು ಮೊಲ್ಲೆಯ ಹೂವನ್ನು ಕಿತ್ತರೆ, ಇಡೀ ಗಿಡವೇ ಇಡಿಯಿಂದ-ಮುಡಿವರೆಗೆ ಪುಳಕಗೊಂಡು ಮೇಲಿಂದ ಮತ್ತೊಷ್ಟು ಹೊವನ್ನು ಅವಳ ಮೇಲೆ ಸುರಿಸುತಿತ್ತು. ಬಳ್ಳಿಯ ಎಲೆಗಳು ಕೂಡ ನೀರ ಮುತ್ತುಗಳನ್ನು ಅವಳ ಮೇಲುದುರಿಸುತ್ತಿದ್ದವು. ಒಟ್ಟಾರೆ ಅವಳು ಅಲ್ಲೊಂದು ಸಹಜ ಸೌಂದರ್ಯದ ಬಲೆಯನ್ನೇ ಬೀಸಿ ಪ್ರಕೃತಿಗೆ ಮತ್ತು ನನ್ನ ಕುಣಿಯುವ ಮನಸ್ಸಿಗೆ ಸವಾಲೆಸಿದಿದ್ದಳು.
ಕ್ಷಣ ಮಾತ್ರದಲ್ಲೇ ಸಾಕೊಷ್ಟು ಹೂವು ಬಿಡಿಸಿ ಕೊಂಡಳು. ಅದೇನೋ ಗೊತ್ತಿಲ್ಲ ಈ ಹೆಣ್ಣು ಮಕ್ಕಳಿಗೆ ಹೂವುಗಳೆಂದರೆ ಅದೆಲ್ಲಿಲ್ಲದ ಪ್ರೀತಿ. ಅದರಲ್ಲಿ ಈ ಮಲ್ಲಿಗೆ ಹೂವೆಂದರೆ ಅಬ್ಬಾ ಅದೆಷ್ಟು ಮೋಹ. ಅದಕ್ಕೆ ಅವಳೇನು ಹೊರತಾಗಿರಲಿಲ್ಲ. ಮಲ್ಲಿಗೆ ಮುಡಿದು ಸೌಂದರ್ಯವನ್ನೇ ಮುಡಿಗೇರಿಸಿಕೊಳ್ಳುವ ಖಾತರ ಅವಳಿಗಿದ್ದರೆ, ಅವಳ ಸೌಂದರ್ಯಕ್ಕೆ ಆ ಬಳ್ಳಿಯೆ ಸೋತು, ತಾವೇ ಅವಳ ಮುಡಿಯೇರಲು ಹೂವುಗಳು ಹಾತೊರೆಯುತ್ತಿವೆ , ಎಂದು ನನಗನಿಸಿತು. ಅವಳ ಮುಖದಲ್ಲೇನೋ ಒಂದು ರೀತಿಯ ಖುಷಿ , ಹೇಳಲಾಗದ ಆನಂದ ಕಾಣಿಸುತ್ತಿತ್ತು. ಮಲ್ಲಿಗೆ ಹೂವ ಸುಹಾಸನೆಯ ಸುಖವನ್ನು ಅವಳು ಅನುಭವಿಸಿವಂತೆ ಕಂಡಳು. ಅವಳು ತನ್ನನ್ನು ತಾನೇ ಮರೆತು ಅಲ್ಲಿದ್ದಳು ಎಂದೆನಿಸಿತು ನನಗಾಗ. ತನ್ನನ್ನು ತಾನೇ ಮರೆತಂತೆ ಅವಳು ಕಾನುತಿದ್ದಳು. ಇದೆಲ್ಲ ನೆಡೆದ ಒಂದೈದು ನಿಮಿಷವಾದಮೇಲೆ ಅವಳು ಆ ಅದ್ಭುತ ಮೂಡ್ ಇಂದ ಹೊರಬಂದು, ತಕ್ಷಣಕ್ಕೆ ಅಲ್ಲೇ ನಿಂತಿದ್ದ ನನ್ನನ್ನು ಗಮನಿಸಿದಳು. ಅಲ್ಲಿಯವರೆಗೂ ಅವಳು ನನ್ನನ್ನು ನೋಡಿಯೇ ಇರಲಿಲ್ಲ. ನಾಚಿಕೆಯಾಯಿತೋ, ಗಾಬರಿಯಾಯಿತೋ, ನಾ ಅರಿಯೇ ಆ ಕ್ಷಣದಲ್ಲೇ ಗೇಟ್ ಹತ್ತಿರ ಹೋಗಿ , ನನ್ನನ್ನೇ ನೋಡುತ್ತ ತಡವರಿಸಿಕೊಂಡು ಗೇಟ್ ಚಿಲುಕ ತಗೆದು ಹೊಳಹೊಕ್ಕು, ಮತ್ತೊಮ್ಮೆ ತಿರುಗಿ ನೋಡಿದಳು. ಅವಳ ಆ ಮುಗ್ದ ನೋಟವಂತೂ ಮಾತ್ರ ವರ್ಣಿಸಲು ನನ್ನಿಂದ ಅಸಾದ್ಯ. ಅಷ್ಟರಲ್ಲಿ ಬಚ್ಚಿಟ್ಟುಕೊಂಡ ಬಯಕೆಯೊಂದು ಹಾಗೆಯೇ ಆಕ್ಷಣಕ್ಕೆ ಹೃದಯದ ಕದ ತಟ್ಟಿದಂತಾಯಿತು. ಅವಳು ಅಲ್ಲಿಂದ ಮರೆಯಾದರೂ ಕೂಡ ನನ್ನ ಹೃದಯದೊಳಗೊಕ್ಕಿದ್ದಳು.
ನಾ ನೋಡಿದ್ದು, ನಿಜವೋ , ಕನಸೋ ಎಂಬತೆ ಇತ್ತು ಆ ಸೌಂದರ್ಯಗಳ ಸಮಾಗಮ. ಅಲ್ಲಿದ್ದ ಅವಳು ಅಲ್ಲಿಲ್ಲ ಈಗ , ಅಲ್ಲೇ ಇದ್ದ ನಾನು ಆಲ್ಲಿರಲಿಲ್ಲ ಆಗ. ವಾಸ್ತವಕ್ಕೆ ಮರಳಲು ಇಷ್ಟವಿರಲಿಲ್ಲ , ಹಾಗೆಯೇ ಅದನ್ನೇ ನೆನೆಯುತ್ತ, ಮತ್ತೆ ಮುನ್ನುಗ್ಗಿ ಮಲ್ಲಿಗೆ ಬಳ್ಳಿಯ ಬಳಿ ಹೋದೆ. ಮಾತಿಲ್ಲದೆ ನಿಂತೆ ಮಲ್ಲಿಗೆಯ ವಾಸನೆ ಗಮ್ಮೆನ್ನುತಿತ್ತು, ಬಳ್ಳಿಯು ಅವಳಿಗಾಗೆ ಅದನ್ನು ಸೂಸಿತ್ತೋ ಎಂದೆನಿಸಿತು. ಹರಳದ ಮೊಗ್ಗುಗಳನ್ನವಳು ಗಿಡದಲ್ಲೇ ಇರಿಸಿದ್ದಳು. ನಾ ಆ ಮೊಗ್ಗುಗಳ ಕೇಳಿದೆ " ನೀವೇಕೆ ಇನ್ನು ಹರಳಿಲ್ಲ ? ಹರಳಿದ್ದರೆ ಅವಳ ಮುಡಿ ಸೇರಬಹುದಿತ್ತಲ್ಲ ?". ಅದಕ್ಕೆ ಆ ಮಲ್ಲೇ ಮೊಗ್ಗುಗಳು ನಾಚಿ ಹೇಳಿದವು " ಹರಳುವ ಮುನ್ನವೇ ಆಕೆ ಬಂದಳು, ತನ್ನ ಮುಖವನೊಮ್ಮೆ ನಮ್ಮುಂದೆ ಹರಳಿಸಿದಳು, ಬೀಸಿದಳು ತನ್ನ ನಗುವಿನ ಬಲೆಯನ್ನು, ಬೀಗಿದಳು ಸೌಂದರ್ಯದ ಮುಖಹೊತ್ತು, ಮರೆತೆವು ನಾವು ನಮ್ಮನ್ನೇ, ಸೋಲೊಪ್ಪಿ, ಹೇಗಿದ್ದೇವೋ ಹಾಗೆ ಉಳಿದೆವು" , " ಅವಳ ಚೆಲುವ ಬಲೆಯಲ್ಲಿ ನಾವು ಸೆರೆಯಾಗಿ , ಮುಗ್ದ ಮೊಗದ ಮುಂದೆ ನಾಚಿ , ಹರಳದೇ ದುಂಡು ಮಲ್ಲಿಗೆಯಾಗೆ ಉಳಿದೆವು" ಎಂದವು ಹತ್ತಿರದಿಂದ ಅವಳನ್ನು ಕಂಡಿದ್ದ ಆ ಮುಗ್ಗು ಮಲ್ಲಿಗೆ ಹೂವುಗಳು. ನಿಜ ಹೇಳಬೇಕೆಂದರೆ ಅಲ್ಲಿ ಸೋತಿದ್ದು ಮೊಲ್ಲೆಗಳಲ್ಲ , ಪ್ರಪಂಚವನ್ನೇ ಮರೆತು ನಿಂತಿದ್ದ ನಾನು. ಇದು ಆ ಪ್ರಕೃತಿಯ ಪ್ರಭಾವವೋ , ಅವಳ ಸೌಂದರ್ಯವೋ , ಸೌಂದರ್ಯವನ್ನು ಮೆಚ್ಚುವ ನನ್ನ ಮನಸ್ಸೋ ನಾ ಮಾತ್ರ ಅರಿಯೆ.
ನಿಮಗಾಗಿ
ನಿರಂಜನ್
really nice and very creative ... :D
ಪ್ರತ್ಯುತ್ತರಅಳಿಸಿVery ni e write up... idu ninna kalpaneyo athava vaastavavo? Vaastavavaadare aa hudugi yaaroooo?
ಪ್ರತ್ಯುತ್ತರಅಳಿಸಿha ha ha,,,, no comments,,,, its just abt a day and beauty :)
ಪ್ರತ್ಯುತ್ತರಅಳಿಸಿಅದ್ಭುತವಾಗಿದೆ... ನನಗೆ ಇಷ್ಟವಾದ ಸಾಲು "ಮಲ್ಲಿಗೆ ಬಳ್ಳಿ ಬೆಳಗುಜಾವದ ಮಳೆಯಲ್ಲಿ ಜಳಕಮಾಡಿ, ತನ್ನ ಮೊಲ್ಲೆಯ ಮಗ್ಗುಗಳಿಂದ ತನ್ನನ್ನೇ ಅಲಂಕರಿಸಿಕೊಂಡಿತ್ತು". ಮತ್ತೆ ಮತ್ತೆ ಆ ಮನೆ ಕಡೆಗೆ ಹೋಗುವಿರೇನು :P ;)
ಪ್ರತ್ಯುತ್ತರಅಳಿಸಿಚಿಕ್ಕದಾದರೂ ಚೊಕ್ಕವಾಗಿದೆ ...ಈ ಆರ್ಟಿಕಲ್ ಓದಿದ ಮೇಲೆ ನಮ್ಮ ಸೀ ಪೀ ಮದುವೆಯ ಚಿಕ್ಕಮಗಳೂರ್ ಟ್ರಿಪ್ ನೆನಪು ಆಗ್ತಿದೆ.. :)
ಪ್ರತ್ಯುತ್ತರಅಳಿಸಿGood one..Sishya..You always take us to your world of Imagination..!!!
ಪ್ರತ್ಯುತ್ತರಅಳಿಸಿnija...prakruthiya sobhaganu saviyalu punya madabeku...
ಪ್ರತ್ಯುತ್ತರಅಳಿಸಿthampada gali,
accha asirina maragalu thana ellegalanu kunisalu..
akashadali agethane moodi baruva belaku..
nammagi hoovina alankarisida daari..na nadiyuva daariyali nirina thottu mele billallu..hoovininda swagathisalu
ahaha.thumba chanda iruthe..manasige ullasavanu thumbuthade.....kannige habba anisuthade...
yeno sishya...avalana maroyake agthilwa?nin classmate nenapu madkondya?
ಪ್ರತ್ಯುತ್ತರಅಳಿಸಿHahaha nope I m not able to forget her ;)
ಪ್ರತ್ಯುತ್ತರಅಳಿಸಿ