ಶನಿವಾರ, ಏಪ್ರಿಲ್ 26, 2014

ಅವಳ (ಸಂ)ದರ್ಶನ ...


                                                                  ಅವಳ (ಸಂ)ದರ್ಶನ  ...
                                                    
ಸಾಂಪ್ರದಾಯದಂತೆ  ಮೊದಲ ಸುತ್ತಿನ ಬೇಟಿ ಆಗಿತ್ತು , ಆಮೇಲೆ ಬೆಂಗಳೂರಿನಲ್ಲಿ ನಮ್ಮದೇ ಶೈಲಿಯಲ್ಲಿ ನಾವು ಮತ್ತೊಮ್ಮೆ ಬೇಟಿಯಾಗಿ  ಪರಸ್ಪರ ಮಾತಾನಾಡಿಕೊಂಡಿದ್ದೆವು. ಪರಸ್ಪರ  ಅರಿಯಲು ಸಾಕೊಷ್ಟು ಸಮಯವನ್ನು ನಮ್ಮವರು ಕೊಡದೆ ಹೋದರು , ನಾವು ಸಮಯ ಮಾಡಿಕೊಂಡು ಮಾತಾಡಿ , ನಮ್ಮ ಮುಂದಿನ ಭವಿಷ್ಯದ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿದ್ದೆವು. ಇದೆಲ್ಲದರ ಬಳಿಕ  ನಾವೆಲ್ಲರೂ  ಅವಳ ಊರಿಗೆ  ಮೊಗದೊಮ್ಮೆ ಹೋಗಿ, ನಮ್ಮ ಕುಟುಂಬದ ಎಲ್ಲರೂ  ಅವಳನ್ನು ಇನ್ನೊಮ್ಮೆ ಸರಿಯಾಗಿ ನೋಡಿ, ಅವಳೊಂದಿಗೆ  ಸಾಕೊಷ್ಟು ಮಾತನಾಡಿ , ಆಮೇಲೆ ನಮ್ಮ ಒಪ್ಪಿಗೆಯನ್ನು ಅವರಿಗೆ ತಿಳಿಸಲು ಮುಂದಾಗಿದ್ದರು . ನಾನು ಕೂಡ ಮತ್ತೆ ಹೊಸ ಹುರುಪಿನಲ್ಲಿ ಅವಳೂರಿಗೆ ಹೋಗಲು ಅಣಿಯಾದೆನು  .   
 
 
                 ಬಾಲ್ಯದ ಗೆಳೆಯನೊಬ್ಬ ವಿದೇಶದಿಂದ ಬಂದಿದ್ದ , ಅವನು ಮತ್ತು  ಅವನ ಪತ್ನಿಯೂ  ಕೂಡ ನಮ್ಮನ್ನು ಸೇರಿದರು , ಅವಳ ಊರಿಗೆ ಪ್ರಯಾಣವನ್ನು ನಮ್ಮ ಊರಾದ ದಾವಣಗೆರೆಯಿಂದಲೇ ನಾವು ಶುರುಮಾಡಿದೆವು. ಆ ರಸ್ತೆಯನ್ನು ನೋಡಿ ನಾವು ಹೇಳಿದ ಸಮಯಕ್ಕಿಂತಲೂ   ಬಹಳ ತಡವಾಗಿಯೇ ಅವಳೂರು ಸೇರುವುದು ಖಚಿತವಾಯಿತು. ರಸ್ತೆ ಸರಿ ಇಲ್ಲದಿದ್ದರೂ , ಸುತ್ತಲಿನ ಪ್ರಕೃತಿ  ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು.. ನನ್ನೂರಿಗೆ ಮತ್ತು ಅವಳೂರಿಗೆ ಅಂತರ ಕಡಿಮೆಯಿದ್ದರೂ  ಸಹ ರಸ್ತೆಯ ಅದೊಗತಿಯಿಂದ  ನಮಗೆ ಪ್ರಯಾಣ ಆಯಾಸವಾಗಿತ್ತು. ಅಂತು-ಇಂತು ಮದ್ಯಾನದೋಷ್ಟತ್ತಿಗೆ  ನಾವು ಅವಳೂರು  ತಲುಪಿದೆವು . ಅದೇ ಊರಿನಲ್ಲಿ ಇರುವ ನಮ್ಮ ಸಂಬಂದಿಕರ ಮನೆಯಲ್ಲಿ ಸ್ವಲ್ಪ ಸುಧಾರಿಸಿಕೊಂಡು , ದಣಿದ ದೇಹಗಳನ್ನು ತಣಿಸಿಕೊಂಡು , ಬೆಳಗಿನ ಪ್ರಯಾಸದ ಪಯಣವನ್ನು ಆ ಕ್ಷಣಕ್ಕೆ ಮರೆತು , ನನ್ನ  ಜೀವನ ಪಯಣಕ್ಕೆ ಅವಳನ್ನು ಸಹ ಚಾರಿಣಿಯನ್ನಾಗಿಸಿಕೊಳ್ಳುವ ತವಕದಲ್ಲೇ ಅವಳ ಮನೆಯ ಕಡೆ ಹೊರೆಟೆವು. 
 
 
                 
                     ಅವಳಪ್ಪ  ನಮ್ಮನ್ನು ನಗುಮೊಗದಲ್ಲೇ ಸ್ವಾಗತಿಸಿದರು ಅವಳ ಮನೆ ಬಾಗಿಲ್ಲಲ್ಲಿ , ಅವಳಕ್ಕ ಲವಲವಿಕೆಯಿಂದ  ನಮಗೆ ತಣ್ಣನೆಯ ಜ್ಯೂಸು ಕೊಟ್ಟರು.  ಮನೆಯೆಲ್ಲ ಸ್ವಚ್ಚವಾಗಿ , ಸಡಗರದ ವಾತಾವರಣದಿಂದ ಕೂಡಿತ್ತು. ಅವಳ ಚಿಕ್ಕಪ್ಪ , ಚಿಕ್ಕಮ್ಮ , ಅಪ್ಪ , ಅಮ್ಮ , ಅವಳಕ್ಕನ ಚಿಕ್ಕ ಮಗು ನಮ್ಮನ್ನು ಖುಷಿಯಿಂದ ಮಾತನಾಡಿಸಿದರು. ನಮ್ಮ ಹಿರಿಯರೊಂದಿಗೆ ಅವಳಪ್ಪ ಮತ್ತು ಚಿಕ್ಕಪ್ಪ ನಮ್ಮ ಕ್ಷೇಮ ಸಮಾಚಾರ , ಸಂಬಂದಗಳು , ಇನ್ನಿತರ  ಮಾತುಗಳನ್ನು ಆಡತೊಡಗಿದರು . ನನಗೆ ಅಷ್ಟರಲ್ಲಿ ಅವಳನ್ನು ನೋಡುವ ಕುತುಹಲ ಕೆರಳಿ , ಕಣ್ಣುಗಳು   ಕೋಣೆಗಳ ಕಡೆಗೆ ಕದ್ದು-ಮುಚ್ಚಿ ನೋಡ-ತೊಡಗಿದವು. ಇರುವ ೪ ಕೋಣೆಗಳು , ಒಂದು ಅವರಪ್ಪನ ಆಫೀಸ್ ಆಗಿ ಮಾರ್ಪಟ್ಟಿತ್ತು , ಮತ್ತೊಂದು ಅವಳಕ್ಕನ ಮಗುವಿಗೆ ಮೀಸಲಾಗಿತ್ತು. ಇನ್ನೊಂದು ಖಾಲಿ-ಖಾಲಿ ಕಾಣುತಿತ್ತು, ಮತ್ತೊಂದು ಮಾತ್ರ ಸದ್ದಿಲ್ಲದೇ , ಕದ ಮುಚ್ಚಿದ ಸ್ಥಿಯಲ್ಲಿ ಕಂಡಿತು.  ಅವಳು ಆ ಕೋಣೆಯಲ್ಲೇ ಇರಬಹುದೆಂದು ಊಹಿಸಿತು ನನ್ನ ಮನಸ್ಸು. ಈಗಿನ ಕಾಲದಲ್ಲಿ ಯಾವ ಹುಡುಗಿ ಇಂಥಹ ಸಮಯದಲ್ಲಿ ಅಮ್ಮನಿಗೆ ಸಹಯಾಮಾಡಲು ಅಡುಗೆ ಮನೆಯಲ್ಲಿ ಇರುವಳು ??. ಪಾಪ ಅವರ ಸೀರೆ , ಮೇಕಪ್ ಹಾಳಾಗೋದಿಲ್ವೆ !!! . ಇವೆಲ್ಲ ಕಾರಣಗಳಿಂದ  ಅವಳು ಅಲ್ಲೇ, ಅದೇ ಕೋಣೆಯಲ್ಲೇ  ಇರುವಳೆಂದು ನನಗೆ ಖಾತ್ರಿಯೂ ಆಯಿತು. ಅಷ್ಟೊತ್ತಿಗೆ ಸುಮಾರು ಸಮಯ ಕಳೆದಿತ್ತು . ಅವಳನ್ನು ನೋಡ ಬಂದ  ನಮ್ಮ ಮನೆಯವರೆಲ್ಲ ಮಾತಿಗಿಳಿದು , ನಾವು ಬಂದ  ಕೆಲಸವನ್ನೇ ಮರೆತಿರುವರು ಎಂದು ನನಗೆ ಅನ್ನಿಸುತಿತ್ತು. ನನಗೋ ಎಷ್ಟೊತ್ತಿಗೆ ಅವಳನ್ನು ನೋಡುತ್ತೇನೋ  ಅನ್ನುವ ಬಯಕೆಯಾದರೆ , ದೊಡ್ಡವರೆಲ್ಲ ತಮ್ಮ ತಮ್ಮ ಮಾತುಗಳಲ್ಲೇ ತೊಡಗಿದ್ದರು . ಒಬ್ಬರಿಗೂ ಹುಡುಗಿಯ ನೋಡುವ ಹಾತುರವಿರಲಿಲ್ಲ . 
 
                     ನನಗೆ ಅವಳನ್ನು ನೋಡುವ ಆ ಹಂಬಲ , ಕಾಯುವ ನನ್ನ ತಾಳ್ಮೆಯನ್ನು ಸೋಲಿಸತೊಡಗಿತ್ತು , ಆದರೂ  ನನ್ನ ಕೈಯಲ್ಲಿ ಏನೂ  ಇರಲಿಲ್ಲ . ಅಷ್ಟರಲ್ಲಿ ಅವಳಮ್ಮ ಈಗ " ತಿಂಡಿ ತಿನ್ನಿ ಆಮೇಲೆ ನೀವು ಎಷ್ಟಾದರೂ ಮಾತನಾಡಬಹುದು" ಎಂದರು , ನನಗಾಗ ಎಲ್ಲಿಲ್ಲದ ಸಂತಸವಾಯಿತು , " ಅಬ್ಬಾ ಈಗಲಾದರೂ ಅವಳು ಬರುತ್ತಾಳೆ  ತಿಂಡಿ ತಟ್ಟೆಯ ಇಡಿದು"  ಎಂದು   ಮನಸ್ಸಿನಲೇ ಖುಶಿಯನ್ನು ಅನುಭವಿಸುತ್ತ ನೋಡಿದರೆ,  ಅವಳಪ್ಪ ಮತ್ತೆ ಚಿಕ್ಕಪ್ಪ ತಿಂಡಿ ತರೋದ ?  ... ಇದೇನು ಅವಳಿನ್ನು ಹೊರಗೆ ಬರಲೇ ಇಲ್ಲವಲ್ಲವೆಂದು  ಆ ಕ್ಷಣಕ್ಕೆ ಬೇಸರ ಆಯಿತು . ತಿಂಡಿ ತಿನ್ನುತ್ತ ಮತ್ತೆ ಬರೀ ಅದೇ ಮಾತುಗಳಾದವು , ಅವಳದು ಮಾತ್ರ  ಸದ್ದಿಲ್ಲ. ಯಾರು ಕೂಡ ಅವಳ ಬಗ್ಗೆ  ಮಾತಾಡುತ್ತಿಲ್ಲ , ಅವಳನ್ನು ಕರೆಯುತ್ತಲು ಇಲ್ಲ. ಚೆನ್ನಾಗಿ ತಿಂಡಿ ಮಾತ್ರ ತಿನ್ನುತ್ತಿದ್ದಾರೆ ..  ನನಗೋ ಆತುರ ಅತೀಯಾಗಿ , ದೊಡ್ಡವರ ಬರೀ ಮಾತುಗಳಿಂದ ಬೇಸರವೂ  ಬರತೊಡಗಿತ್ತು . ಒಂದರ್ದ ಗಂಟೆಯಲ್ಲಿ  ತಿಂಡಿ  ತಿನ್ನುವ ಕಾರ್ಯಕ್ರಮವೂ  ಆಯಿತು ಆದರೆ ಅವಳದು ಮಾತ್ರ ಇನ್ನೂ  ಸದ್ದಿಲ್ಲ. ನನಗೆ ಅವಳು ಬೆಂಗಳೂರಿನಿಂದ ನಿಜವಾಗಿಯೂ ಬಂದಿಹಳೋ ಅಥವಾ ಇಲ್ಲವೋ ಎನ್ನುವ ಅನುಮಾನವೂ ಹುಟ್ಟಿತು.
 
                    ಅವಸರದಲ್ಲಿ ಸ್ವಲ್ಪ ತಿಂಡಿ ತಿಂದು , ನಾನು  ನಮ್ಮಣನ ಮಗಳನ್ನು ಎತ್ತಿಕೊಂಡು ಸ್ವಲ್ಪ ಹೊರಗೆ ಹೋದೆ.  ಗಾಳಿ ಚೆನ್ನಾಗಿದ್ದರಿಂದ ವಾತಾವರಣ ಹಿತವೆನಿಸಿತು  , ಸ್ವಲ್ಪ ತಣ್ಣಗಾಗಿ , ನಮ್ಮಣ್ಣನನ್ನು ಕೂಗಿ ಹೊರ ಕರೆದು , " ನಾವು ಬಂದಿರುವುದು ಹುಡುಗಿಯ ನೋಡೋಕಾ ಅಥವಾ ಬರೀ ಮಾತಾಡಿ , ತಿಂಡಿ ತಿಂದು ಹೋಗೋಕಾ ?? ,, ಹುಡುಗಿಯ ಸುದ್ದಿನೇ ಇಲ್ಲ ಅಲ್ಲೋ ? .. ಯಾರು ಹುಡುಗಿಯ ಸುದ್ದಿಯೇ ತಗಿತಿಲ್ಲ , ಒಂದು ಸಾರಿ ಹೊರಗಡೆ ಕರೆಸಿ ತೋರುಸ್ರೋ " ಎಂದು ಮನದ ಸಂಕಟವನ್ನು ಬಿಚ್ಚಿಟ್ಟೆನು . ನನ್ನ ಕುತೂಹಲ ಸಂಕಟಗಳು ಅವನಿಗೆ ಅರ್ಥವಾದರೂ ಕೂಡ  ನಮ್ಮಣ್ಣನ ಕೈಯಲ್ಲೂ ಏನು ಮಾಡಲು ಆಗುತ್ತಿರಲಿಲ್ಲ . ಅವರಾಡುವ ಮಾತು ಕೇಳುವುದಷ್ಟೇ ಆಗಿತ್ತು  ಆ ದಿನ ನಮಗೆ  . ಅಷ್ಟರಲ್ಲಿ ನನಗೆ ಈ  ದಿನ ಅವಳನ್ನು ನೋಡುತ್ತೇನೆ ಎನ್ನುವ ಆಸೆಯೂ ಕಮರಿ ಹೋಯಿತು , ಅವರು ನನಗವಳನ್ನು ತೋರಿಸುತ್ತಾರೆನ್ನುವ ಆಸೆಯು  ಸರಿದಿತ್ತು , ಹಾಗೆಯೇ ನಮ್ಮಣ್ಣ ಮಗಳನ್ನು ಆಟ ಆಡಿಸಿಕೊಳ್ಳುತ್ತ ತಣ್ಣನೆ ಗಾಳಿಯಲ್ಲಿ ವಿಹರಿಸತೊಡಗಿದೆ..  ಇದಾದ ಒಂದೈದು ನಿಮಿಷದಲ್ಲಿ ಒಳಗಿನಿಂದ ನಮ್ಮಮ್ಮ ನನ್ನನ್ನು ಕೂಗಿ  ಕರೆದ ಹಾಗಾಯಿತು , ಹೋಗ್ಲೋ ಬೇಡ್ವೋ ಅಂತ ಒಂದೊಂದೇ ಹೆಜ್ಜೆ ಇಟ್ಟು ಒಳನೆಡೆದೆ , ಎಲ್ಲರ ಕೈಯಲ್ಲೂ ಕಾಫಿ ಲೋಟಗಳಿದ್ದವು. ಅಷ್ಟರಲ್ಲಿ ಅವಳಮ್ಮ "ಅವರಿಗೂ ಕಾಫೀ ಕೊಡಮ್ಮ "   ಎಂದಾಗ , ಪ್ರತ್ಯಕ್ಷಳಾದಳು ಅವಳು. ಕೈಯಲ್ಲಿ ಕಾಫೀ , ತಿಳಿ ನೀಲಿ ಬಣ್ಣದ ಸೀರೆಯುಟ್ಟಿದ್ದಳು , ನಾಚಿಕೆಯಲ್ಲೇ ನನ್ನ ಕಡೆ ಬಂದು , ಕಾಫೀ ಕೊಟ್ಟಳು. ಮುಗುಳುನಗೆಯನ್ನೂ ಕೂಡ ಬೀರಿದಳು. ಆ ಕ್ಷಣಮಾತ್ರದಲ್ಲೇ ಅವಳನ್ನು ನನ್ನ ಕಣ್ಗಳಲ್ಲಿ ಸೆರೆ ಇಡಿದುಕೊಂಡೆನು .. ಮನಸ್ಸಿಗೆ ಇಷ್ಟು ಹೊತ್ತು  ಕಾದದ್ದು  ಕೂಡ ಸಾರ್ಥಕವೆನಿಸಿತು .. ಅಗಾದವಾಗಿ ಆದ  ಸಂತೋಷವನ್ನು  ಆ ಕ್ಷಣಕ್ಕೆ ಸುಧಾರಿಸಿಕೊಂಡು  ಮತ್ತೊಮ್ಮೆ ಆ ಕಡೆಗೆ ತಿರುಗಿ ನೋಡುವೊಷ್ಟರಲ್ಲಿ  ಅವಳು ಮತ್ತೆ  ಆ  ಜಾಗದಲ್ಲಿ  ಇರಲಿಲ್ಲ, ಮತ್ತೆ ಕಾಣಿಯಾಗಿದ್ದಳು . ಅವಳನ್ನು ನಾನು ಮಾತನಾಡಿಸುವ ಹಂಬಲಕ್ಕೆ  ಇನ್ನೊಮೆ  ನೆಲಕಚ್ಚಿತ್ತು.
 
                      ನೆಲಕಚ್ಚಿದ ಆಸೆಗೆ ಮಣ್ಣೆಳೆದು ,  ಮನಸ್ಸಿನಲೇ ಕುಹಕ ನಗೆ ಬೀರಿಕೊಂಡು "ಒಂದು ವಾರ ಕಾದು , ಅಷ್ಟು ದೂರದಿಂದ ಬಂದು , ಏನೆಲ್ಲಾ ಅಂದುಕೊಂಡಿದ್ದ  ನನಗೆ ಕೇವಲ ಕೆಲವೇ ಕೆಲವು  ಸೆಕೆಂಡುಗಳ ಕಾಲ ಅವಳನ್ನು ತೋರಿಸಿ ಬಚ್ಚಿಟ್ಟರಲ್ಲ" ಎಂದು  ಕೋಪವು ಮತ್ತೆ ಒತ್ತರಿಸಿ  ಬಂತು, ಆದರೆ ಬಂದ ಕೋಪವನ್ನು  ತೋರಿಸಿಕೊಳ್ಳುವ ಸಂದರ್ಭವೂ  ಅದಲ್ಲವೆಂದು  ನನ್ನನ್ನು ನಾನೇ ಸಮಾಧಾನವಾಗಿಸಿಕೊಂಡೆನು . ಆದರೂ  ನಾನು  ಒಂದು ಸಾರಿ ನಮ್ಮ ಅಮ್ಮ ಮತ್ತು ಅಣ್ಣಂದಿರ ಮುಖಗಳನ್ನು ನನಗಾದ  ಸಂಕಟದ ತೀವ್ರತೆಯಲ್ಲೇ ಗುರಾಯಿಸಿದೆ ಅಥವಾ ಕೆಕ್ಕರಿಸಿ ನೋಡಿದೆ. ಒಂದೆರೆಡು ಗಂಟೆಗಳ ನಂತರ ನನ್ನ ಕಷ್ಟ ಅವರಿಗೆ  ಅರಿವಾಯಿತು. ಆಗ ನಮ್ಮ ಅಮ್ಮನೇ " ಇನ್ನೋದ್ನು ಸಾರಿ ಅವಳೊಡನೆ  ಮಾತಾಡ್ತೀಯೇನೋ ?? " ಎಂದು ಕೇಳಿದರು. ನನಗೆ  ಏನು ಹೇಳಬೇಕೋ ತಿಳಿಯಲಿಲ್ಲ , ಅವಳೊಂದಿಗೆ ಮಾತಾಡ್ತೀನಿ  ಅನ್ನೋಕೆ ಸಂಕೋಚ , ಮಾತಾಡೋಲ್ಲ  ಅನ್ನೋಕೆ  ಸಂಕಟ , ತಕ್ಷಣಕ್ಕೆ  ಹೊಳೆದ  ಯೋಚನೆಯಂತೆ  " ನಾನು ಮಾತಾಡೋದು ಏನು ಇಲ್ಲ , ನೀವೇ ಕರೆದು ಏನಾದರು ಮಾತಾಡಿ "ಎಂದೆನು . ಆಗ  ನಮ್ಮ ಅಮ್ಮ ಅವಳನ್ನು ಕರೆದು ಮಾತಾಡಿದರು , ನನ್ನೆದೆರು ಕೂರಿಸಿದರು , ನನ್ನದು ಮಾತಿಲ್ಲ ಕತೆಯಿಲ್ಲ , ಆಗಾಗ ಅವಳನ್ನು ದಿಟ್ಟಿಸುವುದು ,  ಅವಳನ್ನು ನೋಡಿ ನಗುವುದಷ್ಟೇ ಆಗಿತ್ತು ,  ಅವಳೂ ಕೂಡ ಆಗೊಮ್ಮೆ ಈಗೊಮ್ಮೆ  ನನ್ನ ಕಡೆ ಕಣ್ಣಾಡಿಸಿ ನಗುತ್ತಿದ್ದಳು. ಅಂತು ಇಂತು  ಒಂದರ್ದಗಂಟೆ ಕಾಲ ಅವಳ ಮಾತುಗಳನ್ನು  ಕೇಳಿ , ಕೋಪವೆಲ್ಲ ಹಿಂಗಿಹೋಗಿ  ,   ನಾನು ಮಾತಿಗಿಳಿಯುವ ಮುನ್ನವೇ , ನಮ್ಮ ಚಿಕ್ಕಪ್ಪ  " ಸರಿ  ನಮಗಿನ್ನು ಹೊತ್ತಾಯಿತು   , ನಾವಿನ್ನು ಹೊರಡುತ್ತೇವೆ , ನಮ್ಮನ್ನು ಬೀಳ್ಕೊಡಿ " ಎಂದಾಗ  , ಅವಳಿಗೂ  ನನ್ನ ಸಂಕಟ ಅರ್ಥವಾಗಿ,  ಚುಡಾಯಿಸಿವಂತೆ ಕಿರುನಗೆ ಬೀರಿ , ಕೂತಿದ್ದ ಜಾಗದಿಂದ ಮೇಲೆದ್ದಳು .   
ನಿಮಗಾಗಿ
ನಿರಂಜನ್       

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ