ಗುರುವಾರ, ಜೂನ್ 5, 2014

ಮಹಾತಾಯಿ

                                                           ಮತ್ತೊಮ್ಮೆ ಕ್ಷಮಿಸು  .....


ನಿಜ  ತಿಳಿದವರು  ಹೇಳುವಂತೆ , ನಿನ್ನ ಮಗನಾಗಿ  ನನಗೆ ತಿಳಿದಂತೆ , ನಿನ್ನದು ತುಂಬಾ ವಿಶಾಲ ಹೃದಯ , ಬಹು ತಾಳ್ಮೆಯ ಒಡಲು ,  ಕೋಟ್ಯಾಂತರ ಜೀವ ಜಂತುಗಳನ್ನು ನಿನ್ನ ಮಡಿಲಿನಲ್ಲಿ ಇಟ್ಟುಕೊಂಡು , ಸದಾ ಕಾಪಾಡುತ್ತಿರುವೆ.  ಹಲವು  ವರ್ಷಗಳಿಂದ  ಎಲ್ಲರನ್ನು ಸಲಹುತ್ತಲೂ ಇರುವೆ   ಮತ್ತು   ಸಹಿಸಿಕೊಳ್ಳುತ್ತಲೂ ಇರುವೆ . ಹೆತ್ತತಾಯಿಯಾದರು ಒಮ್ಮೊಮ್ಮೆ ತಾಳ್ಮೆ ಕಳೆದುಕೊಳ್ಳುವಳು  ಆದರೆ  ನಮ್ಮೆಲ್ಲರ  ಅದೆಷ್ಟೋ  ತಪ್ಪುಗಳನ್ನೆಲ್ಲ ನೀನು  ಸಾವಿರಾರು ವರ್ಷಗಳಿಂದಲೂ ಸಹನಯಿಂದಲೇ ಮನ್ನಿಸಿರುವೆ , ನಮ್ಮೆಲ್ಲರ ಆಸೆ , ದುರಾಸೆ  ಮತ್ತು ಅಜ್ಞಾನಗಳು ಮುಗಿಲು ಮುಟ್ಟಿದರು  ಕೂಡ , ನಮ್ಮನ್ನು ನೀ  ಕೈ ಬಿಡದೆ  , ಎಲ್ಲವನ್ನು  ನಿನ್ನ ಒಡಲಾಳದಲ್ಲೇ   ನುಂಗಿಕೊಂಡು , ಹಾಗೆಯೇ ಮರೆತು , ನಮ್ಮನ್ನು ಸದಾ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿರುವ ನೀನು ನಿಜವಾಗಿಯೂ  ಬರೀ  ತಾಯಿಯಲ್ಲ  "ಮಹಾ ತಾಯಿ".  ನಮ್ಮೆಲರ ಜೀವ ಗಳನ್ನೂ ಸಲಹುತ್ತಿರುವ  ಮಹಾತಾಯಿ  "ಪರಿಸರ"ವೇ  ನಿನಗೆ ನಾನು  ಈ ದಿನ , ನಾ ಮಾಡಿದ ಪ್ರಮಾದಗಳ ವರದಿಯನ್ನು ಒಪ್ಪಿಸಿ ,  ಪ್ರತಿಬಾರಿಯೂ  ಕೇಳುವಂತೆ , ಮತ್ತೊಮ್ಮೆ ಕ್ಷೆಮೆ ಕೇಳಲೇ ಬೇಕಾಗಿದೆ . ನನ್ನ ಎಲ್ಲ ತಪ್ಪುವಪ್ಪುಗಳನ್ನು ಮನ್ನಿಸಲು ಕಳಕಳಿಯಿಂದ ನಿನ್ನ ಕಾಲಿಗೆ ಬಿದ್ದು ಕ್ಷೆಮೆಯಾಚಿಸಬೇಕಾಗಿದೆ.

 
 
                   ನನ್ನನ್ನು ಹೆತ್ತವಳು  ತಾಯಿ  , ಅವಳು  ನನಗೆ ಬರಿ  ಜೀವ ಕೊಟ್ಟಿಹಳು  , ಆದರೆ ಈ ಜೀವವನ್ನು ಸಲಹುವಳು ನೀನು , ಹಾಗಾಗಿ ನೀನು ನನ್ನ "ಮಹಾತಾಯಿ ".  ಈ  ದಿನವನ್ನು ಪ್ರಪಂಚದಲ್ಲಿ ಕೆಲವರು  ನಿನ್ನ ದಿನವನ್ನಾಗಿ ಆಚರಿಸುತಿಹರು  , ನೀ ನಮಗೆ ಮಾಡುವ ಉಪಕಾರಗಳನ್ನು , ನಿನ್ನ ಕುಶಲೋಪರಿಗಳ ಬಗ್ಗೆ ಹಲವರು  ಮಾತಾಡುವರು , ಅದರಲ್ಲಿ ಕೆಲವರು ನಿನ್ನ ಬಗ್ಗೆ ಕಾಳಜಿಯನ್ನೂ  ಕೂಡ ತೋರುವರು . ಆದರೆ ನಾನು ಮಾತ್ರ ನಿನಗಾಗಿ  ಏನನ್ನು  ಮಾಡುಲಿಲ್ಲ.. ನಿನಗೆ ಸರಿಯಾದ ಮಗನಾಗಲಿಲ್ಲ ಎಂಬ ಸಂಕಟ ನನ್ನನ್ನು ತುಂಬುತ್ತಿದೆ.  ನಿನ್ನನ್ನು ಸಂಪೂರ್ಣವಾಗಿ ನಾ ನಿರ್ಲಕ್ಷಿಸಿದೇ ಎನ್ನುವ  ಪಾಪ ಪ್ರಜ್ಞೆ ನನ್ನನ್ನು ಹಿಡಿಹಿಡಿಯಾಗಿ  ಹಿಂಡುತಿದೆ. ಕಳೆದ ಬಾರಿ ನಾ ನಿನಗೆ ಕೊಟ್ಟ ಮಾತುಗಳನ್ನು , ಮಾಡಿದ  ಪ್ರಮಾಣಗಳನ್ನೂ  ಮರೆತು ಅದೆಷ್ಟೋ  ಪ್ರಮಾದಗಳನ್ನು ಮತ್ತೆ ಮಾಡಿ ನಿನಗೆ ನಾ  ಮೋಸ ಮಾಡಿದೆ.  ಈ ದಿನ ನಾನು ನಿನ್ನಲ್ಲಿ ಕ್ಷೆಮೆ ಕೇಳಲೇಬೇಕು ,  
 
 
ಮಹಾತಾಯಿಯೇ  ಮನ್ನಿಸು ... 
  
                 ನೀ ನನ್ನನ್ನು ನಿನ್ನ ಮಗನಂತೆ ಉಣಿಸಿದೆ , ಆದರೆ ನಾನು ನಿನಗೆ ಸಾಕೊಷ್ಟು ಪ್ಲಾಸ್ಟಿಕ್ ಹಾಗು ಕರಗದ ಘನ ತ್ಯಾಜ್ಯವನ್ನು ನಿನ್ನ ಒಡಲಿಗೆ ಸುರಿದೆ.  ನಿನ್ನ ಆರೋಗ್ಯಕ್ಕೆ ಕುತ್ತು ತರುವ  ಅನೇಕ ವಸ್ತುಗಳನ್ನು ನನ್ನ ದೈನಂದಿನ ಕೆಲಸಗಳಿಗೆ ಉಪಯೋಗಿಸಿ ನಿನ್ನ ಆರೋಗ್ಯಕ್ಕೆ ನಾ  ದಕ್ಕೆ ತಂದೆ. ಪ್ಲಾಸ್ಟಿಕ್ ಗೆ ಅನೇಕ  ಪರ್ಯಾಯಗಳಿದ್ದರು ಅವುಗಳ ಸದ್ಬಳಕೆ ಮಾಡದೆ , ನಿನಗೆ  ಮೋಸ ಮಾಡಿದೆ . .. 
 
ಮಹತಾಯಿಯೇ  ಮನ್ನಿಸು .. 
             
               ನೀ ನನಗೆ ಒಳ್ಳೆಯ ಗಾಳಿ ನೀಡಿದೆ , ನಾ ಆ ಗಾಳಿಯನ್ನು ಕುಡಿದು , ನಿನಗೆ  ಬರಿ ಹೊಗೆಕುಡಿಸಿ , ನಿನಗೆ ದ್ರೋಹ ಬಗೆದು , ನಿನ್ನ ಬೇರೆ ಮಕ್ಕಳಿಗೂ ಆ ಹೊಗೆಯಿಂದ ಹಾನಿಯುಂಟು ಮಾಡಿದೆ. ಬೇಕೆಂದಾಗ ನನಗೊಬ್ಬನಿಗೆ ದೊಡ್ಡ ವಾಹನ ಉಪಯೋಗಿಸಿದೆ. ಅವಶ್ಯಕತೆ ಇಲ್ಲದಿದ್ದರೂ ವಾಹನ ಉಪಯೋಗಿಸಿ ,  ನಿನ್ನ ಉಸಿರನ್ನು ಕಲುಷಿತಗೊಳಿಸಿದ ಪಾಪಿಯಾದೆ .  ಪರ್ಯಾಯ ಸಂಚಾರಿ ವ್ಯವಸ್ತೆಗಳಿದ್ದರು  ಉಪಯೋಗಿಸದೆ ನಿನಗೆ ನಾ ಉಸಿರುಗಟ್ಟಿಸಿದೆ ... 
 
ಮಹತಾಯಿಯೇ ಮನ್ನಿಸು 
            
              ನೀ ನನಗೆ , ನನ್ನ ಸುತ್ತಮುತ್ತಲು ಒಳ್ಳೆಯ ವಾತವರಣವನ್ನು ಕರುಣಿಸಿದೆ , ಆದರೆ ನಾ ಬೇಕಾಬಿಟ್ಟಿ , ಕೆಟ್ಟ ವಸ್ತುಗಳನೆಲ್ಲ , ಎಲ್ಲೆಂದರಲ್ಲಿ ಚಲ್ಲಿ .  ಆ  ವಾತಾವರಣದ  ಹಾಳು  ಮಾಡಿದೆ .  ಹಸಿರುಗಿಡಕ್ಕೆ ಒಮ್ಮೆಯೂ ನೀರು ಹಾಕಲಿಲ್ಲ , ಒಂದು ಗಿಡವನ್ನು ನಾ ನೆಡಲಿಲ್ಲ . ಮರಗಿಡ ಕಡಿಯುವಾಗ ನಾ " ಏಕೆ ಕಡಿಯುವಿರಿ ? " ಎಂದು ಪ್ರಶ್ನಿಸಲಿಲ್ಲ .. ನೀರು ಪೋಲು ಮಾಡಿದೆ . ನೀರು ಕಲುಷಿತ ಮಾಡಿದೆ. ಅಗತ್ಯಕ್ಕಿಂತಲೂ ಹೆಚ್ಚು ನೀರು ಉಪಯೋಗಿಸಿ ನಾ ತಪ್ಪು ಮಾಡಿದೆ.
                  
 
ಮಹತಾಯಿಯೇ ಮನ್ನಿಸು 
 
            ನನ್ನ ಮುಂದಿನ ಪೀಳಿಗೆಗೆ ನಿನ್ನ ಬಗ್ಗೆ ಒಂದಿಷ್ಟು ಜಾಗೃತಿ ಮೂಡಿಸುವ  ಕೆಲಸವವನ್ನಾದರು ಸಹ ನಾ ಮಾಡಬಹುದಿತ್ತು . ಆದರೆ ನಾ ಅದನ್ನು ಮರೆತು ನಿನ್ನನ್ನು ನಿರ್ಲಕ್ಷಿಸಿದೆ.  ನೀ ನನಗೆ  ನಿನ್ನ ಮಡಿಲಲ್ಲೇ ಅನೇಕ ಪಾಠಗಳನ್ನು ಹೇಳಿಕೊಟ್ಟೆ . ನಾನು  ಅವುಗಳನ್ನು ಕಲಿತೆನೇ  ಹೊರತು , ಮುಂದಿನವರಿಗೆ ತಿಳಿಹೇಳಲಿಲ್ಲ, ನಿನ್ನ ಬಗ್ಗೆ ಜಾಗೃತಿ ಮೂಡಿಸಲಿಲ್ಲ , ನಿನ್ನನ್ನು ನನ್ನವಳೆಂದು ಭಾವಿಸಲಿಲ್ಲ. ನಾನು ನಿನಗೆ ಮಾಡಿದ ದೊಡ್ಡ ಮೊಸವಿದು ಮಹಾತಾಯಿ.      
 
              
             ನನಗೆ ಗೊತ್ತು , ಇಷ್ಟೆಲ್ಲಾ ಮೋಸಗಳನ್ನು ನಾ ನಿನಗೆ ಮಾಡಿದರು ಸಹ ನಿ ನಿನ್ನ ಶಕ್ತಿ ಮೀರಿ ನನ್ನನು ಪೋಷಿಸುವೆ . ನನಗಿಂದು ನಾಚಿಕೆ ಯಾಗುತಿದೆ ಮಹಾತಾಯಿ . ನಿನ್ನಿಂದ ಬರಿ ಪ್ರಯೋಜನ ಪಡೆಯುವ ನಾನು ನಿನಗಾಗಿ ಏನನ್ನು  ಮಾಡಲಿಲ್ಲವಲ್ಲವೆಂದು . ಇದೊಮ್ಮೆ  ಮಾತ್ರ ನನ್ನನು ಕ್ಷಮಿಸು , ನನಗೆ ನನ್ನ ತಪ್ಪಿನ ಹರಿವಾಗಿದೆ , ಸಾದ್ಯವಾದೊಷ್ಟು ಒಳ್ಳೆಯ ಕೆಲಸಗಳನ್ನು ಇನ್ನು ಮುಂದೆಯಾದರೂ ಮಾಡುತ್ತೇನೆ ,ತಪ್ಪುಗಳನ್ನು  ಆದೊಷ್ಟು  ಕಡಿಮೆ ಮಾಡುತ್ತೇನೆ .  ನಿನಗೆ ಒಳ್ಳೆಯ ಮಗನಾಗಿ ಇನ್ನುಮುಂದೆಯಾದರು ನಾನು ಇರಲು ಬಯಸುತ್ತೇನೆ .  
 
ನಿಮಗಾಗಿ 
ನಿರಂಜನ್  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ