ಮಂಗಳವಾರ, ಜೂನ್ 10, 2014

ನಾವ್ ನೋಡಿದ ....

 
                                                                 ಒಗ್ಗರಣೆ  .... 
 
ನಾನೇನು ಚಿತ್ರ ವಿಮರ್ಶಕನಲ್ಲ , ಪತ್ರಕರ್ತನೂ ಅಲ್ಲ , ಒಬ್ಬ ಸಾಮಾನ್ಯ ಚಿತ್ರ ರಸಿಕ ,  ಆದರೂ ಸಹ ಈ ದಿನ ನಾ ನೋಡಿದ ಒಂದು  ಅದ್ಭುತ ಕನ್ನಡ  ಚಿತ್ರದ ಬಗ್ಗೆ ನಿಮಗೆ ಹೇಳಲೇ ಬೇಕ್ಕೆನ್ನಿಸುತ್ತಿದೆ.  ಇದೇನಪ್ಪ ಕನ್ನಡದಲ್ಲಿ  ಅದ್ಭುತ ಚಿತ್ರ  ??? ಆಶ್ಚರ್ಯವೇ ?? ತಮಾಷೆಯೇ ?? ಇಲ್ಲ ಇಲ್ಲ . ಇದು ನಿಜ ಸ್ನೇಹಿತರೆ , ಒಂದು ಅದ್ಭುತ ಸಿನೆಮಾ ಬಗ್ಗೆನೆ ನಾ ಹೇಳಬೇಕು... ಅದ್ಭುತ ಚಿತ್ರ ಎಂದಾಕ್ಷಣ ನಿಮಗೆ   ನಾನೇನು  ಡಾ. ರಾಜ್ ಚಿತ್ರದ ಬಗ್ಗೆ ಹೇಳುವುದಿಲ್ಲ, ಬದಲಾಗಿ  ಈಗಷ್ಟೇ  ಪ್ರಕಾಶ್ " ರಾಜ್ " ಹಾಕಿರುವ ಒಗ್ಗರಣೆ ಹಾಗು ಅದರ ಗಮ್ಮತ್ತಿನ ಬಗ್ಗೆ ನಿಮಗೆ ಹೇಳಬೇಕು . 
 
                 ಮುಂಗಾರು ಮಳೆ, ಅದಾದ ನಂತರ ಕೇವಲ ಕೆಲವೇ ಚಿತ್ರಗಳ ತಕ್ಕಮಟ್ಟಿಗೆ ನನಗೆ ರುಚಿಸಿದವಾದರೂ, ಆಮೇಲೆ ಸಾಲು ಸಾಲಾಗಿ ಬಂದ  ಚಲನಚಿತ್ರಗಳೊ , ಹಳಸಿದ ಚಿತ್ರನ್ನಾಗಳು.  ಈ ಸಿನೆಮಾಗಳ ಸಹವಾಸವೇ ಸಾಕು ಸಾಕೆನಿಸಿ ,  ಚಿತ್ರ ಸವಿಯುವ  ನನ್ನ ರುಚಿ ಮೊಗ್ಗುಗಳು ಕೂಡ ಬಾಡಿದ್ದವು ಇತ್ತೀಚಿಗೆ.  ನನ್ನ ಹೆಂಡತಿ ರೀ  " ಕನ್ನಡ ಫಿಲಂ ಗೆ ಹೋಗೋಣ " ಎಂದಾಗಲೆಲ್ಲ , ಹೇಗೋ ಸಮಾಧಾನ ಮಾಡಿ ಮನೆಯಲ್ಲಿ ಡಾ. ರಾಜ್ ಚಿತ್ರ ತೋರಿಸುತ್ತಿದ್ದೆ. ಆದರೆ ಮೊನ್ನೆ ಹೀಗೆ ಜಾಲಹಳ್ಳಿ ಕ್ರಾಸ್ ಬಳಿ  ಹೋಗುವಾಗ ,  ಪ್ರಕಶ್ ರೈ ನಿರ್ದೇಶನದ ಒಗ್ಗರಣೆ ಚಿತ್ರದ  ಒಂದು  ಚಿಕ್ಕ ಪೋಸ್ಟರ್ , ಪಕ್ಕದಲ್ಲೇ ಇದ್ದ  rockline ಮಾಲ್ ಬಳಿ ಕಂಡಿತು. ನೋಡಿದ ತಕ್ಷಣವೇ ಒಗ್ಗರಣೆಯ ಪದಾರ್ಥಗಳಾದ ಪ್ರಕಾಶ್ ರಾಜ್ , ಮಂಡ್ಯ ರಮೇಶ್ , ಅಚ್ಯುತ್ ಕುಮಾರ್ , ಸ್ನೇಹ , ಇಳೆಯರಾಜ, ಜಯಂತ್ ಕಾಯ್ಕಿಣಿ  ಇನ್ನು ಅನೇಕರು  ನನ್ನನ್ನು ಆ ಚಿತ್ರವನ್ನು ನೋಡಲು ಸೆಳೆದವು .
 
 
 
               ತಕ್ಷಣವೇ ಟಿಕೆಟ್ ಕೌಂಟರ್ ಹೋಗಿ " ಎರೆಡು  ಒಗ್ಗರಣೆ ಕೊಡಿ " ಎಂದಾಗ , ನನ್ನ ಹೆಂಡತಿ ಕಿಸಕ್ಕನೆ ನಕ್ಕಳು , ಚಿತ್ರದ ಹೆಸರಿನಲ್ಲಿರುವ ಈ ರೀತಿಯ  ಹೊಸತನವಿದೆ ನೋಡಿ.  ಚಿತ್ರ ಶುರುವಾಯಿತು ,  ನಾನು ನನ್ನ ಹೆಂಡತಿ ಶೋಭಾ ಚಿತ್ರ ನೋಡ ತೊಡಗಿದೆವು. ಅಭ್ಹಾ ಎಂಥಹ ಹಾಡಿನೊಂದಿಗೆ ಚಿತ್ರ ಶುರು ವಾಯಿತು , ಕೈಲಾಶ್ ಕೇರ್ ದ್ವನಿ , ಕಾಯ್ಕಿಣಿ ಸಾಹಿತ್ಯ ,ಸಂಗೀತ ಮಾಂತ್ರಿಕ ಇಳೆಯರಾಜ ರ ಸಂಗೀತ  ಒಟ್ಟಾಗಿ ಬೆರೆತು , ಇಡೀ ನಮ್ಮ ಕರ್ನಾಟಕದ ತಿಂಡಿ ತೀರ್ಥ , ಭಕ್ಷ್ಯಗಳ  ಚಿತ್ರಣವನ್ನೇ ನಮ್ಮ ಮುಂದಿಟ್ಟಾಗ ನನ್ನ ಬಾಯಲ್ಲಿ ನೀರು "ತೊಟ್ " ಅಂತ ಹೊರ ಹೊಮ್ಮಿತ್ತು.  ನಂತರದಲ್ಲಿ  ಮಂಡ್ಯ ರಮೇಶ್ ಹಾಗು ಅಚ್ಯುತ್  ಕುಮಾರರ ಹಿತವಾದ ಹಾಸ್ಯ , ಒಗ್ಗರಣೆಯಲ್ಲಿ ನಯವಾಗಿ ಸಾಸಿವೆ ಉರಿದಂತಿತ್ತು. ಅನಂತರ  ಬರುವ  ಮದ್ಯ ವಯಸ್ಕರರ ಪ್ರೇಮ -ಸಲ್ಲಾಪಗಳು , ಮುಜುಗರಗಳು, ಮೂದಲಿಕೆಗಳು ,  ಪ್ರೀತಿ ಹುಟ್ಟಿದಾಗ  ನಾಯಕ -ನಾಯಕಿಯರಲ್ಲಾಗುವ ಬದಲಾವಣೆಗಳು , ಕಾಲೆಳದಾಟಗಳು , ಆಗಾಗ ಬಂದೋಗುವ ಭಾವನಾತ್ಮಕ ಸನ್ನಿವೇಶಗಳು , ಅಡುಗೆ ತಯಾರಿಸುವ ಹಾಗು ತಿನ್ನುವ ತುಣುಕುಗಳು  ನಿಜವಾಗುಯೂ  ನಮ್ಮನ್ನು ಆಕರ್ಷಿಸಿದವು. 
 
                ಒಟ್ಟಾಗಿ ಇದೊಂದು  ನನಗೆ ಇಷ್ಟವಾದ ಇತ್ತೆಚಿನ ಚಿತ್ರಗಳಲ್ಲಿ ಒಂದು. ಗೀರೀಶ್ ಕಾಸರವಳ್ಳಿ ಮಗಳು ಅನನ್ಯ ಕಾಸರವಳ್ಳಿ  ಕೂಡ ಇದಕ್ಕೆ ಸಹ ನಿರ್ದೇಶನ ಮಾಡಿದ್ದಾರೆ. ಒಳ್ಳೆಯ ಪದಾರ್ಥಗಳೊಂದಿಗೆ ಪ್ರಕಶ್ ರಾಜ್ ಉತ್ತಮ ಚಿತ್ರವನ್ನು ನಮಗೆ ನೀಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ.   ನೀವು ಕೂಡ ಹೋಗಿ ಬನ್ನಿ , ನಿಜವಾಗಿಯೂ ನಿಮಗೆ ಖುಷಿ ಕೊಡುವ ಚಿತ್ರ ಇದು. ನಿಜವಾಗಿಯು ಎಲ್ಲರು ನೋಡ ಬಹುದಾದ ಚಿತ್ರ. ಆಶ್ಲೀಲ ಸಂಭಾಷಣೆಗಳಿಲ್ಲ , ಅನಗತ್ಯ ಹಾಸ್ಯ ಸನ್ನಿವೇಶಗಳಿಲ್ಲ , ಸುಮ್-ಸುಮ್ನೆ ನಿರ್ಮಾಪಕರ ತೆವಲಿಗೆ  ನಮಗೆಲ್ಲ ತೋರಿಸುವ ಐಟಂ ಸಾಂಗ್ ಗಳಿಲ್ಲ , ಮಚ್ಚು - ಲಾಂಗುಗಳೋ ಇಲ್ಲವೇ ಇಲ್ಲ .  ಇವೆಲ್ಲ ಇಲ್ಲದಿರುವುದೇ ಈ ಚಿತ್ರದ ಪ್ಲಸ್ ಪಾಯಿಂಟ್....  
 
 
ನಿಮಗಾಗಿ
ನಿರಂಜನ್  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ