ದಾರಿ ತಪ್ಪಿಸುತ್ತಿರುವ ಖಾಸಗಿ ಸುದ್ದಿ ವಾಹಿನಿಗಳು ???
ನಾವೆಲ್ಲ ನಮ್ಮಸುದ್ದಿ ಮಾದ್ಯಮಗಳನ್ನು ನಮ್ಮ ದೇಶದ ನಾಲ್ಕನೇ ಆಧಾರ ಸ್ತಂಬವೆಂದು ಭಾವಿಸಿದ್ದೇವೆ ಹಾಗು ಅಕ್ಷರಶಃ ಹಾಗೆಯೇ ಒಪ್ಪಿಕೊಂಡಿದ್ದೇವೆ ಕೂಡ. ನಮ್ಮ ಮಾದ್ಯಮಗಳು ಸತ್ಯದಿಂದ , ಪ್ರಾಮಾಣಿಕತೆಯಿಂದ , ನಿಷ್ಟೂರತೆಯನ್ನೂ ಕೂಡ ಲೆಕ್ಕಿಸದೆ ಸಮಾಜದ ಏಳಿಗೆಗಾಗಿ ದುಡಿಯುತ್ತವೆ , ಇದರಿಂದ ಸಮಾಜದ ಅರೋಗ್ಯ ಹೆಚ್ಚುತ್ತದೆ , ಹಲವು ಸಮಸ್ಯಗಳ ಮೇಲೆ ಮಾಧ್ಯಮದವರು ಬೆಳಕು ಚೆಲ್ಲಿ , ನಿಷ್ಪಕ್ಷಪಾತ ವರದಿಗಳನ್ನು ನೀಡುತ್ತಾರೆ , ಸರ್ಕಾರಗಳನ್ನು ಎಲ್ಲ ಸಮಯದಲ್ಲಿ ಹೆಚ್ಚರಿಸುತ್ತಾರೆ , ನೊಂದವರ ದ್ವನಿಯಾಗುತ್ತಾರೆ , ಜನರಲ್ಲಿ ಜಾಗೃತಿ ಮೂಡಿಸುತ್ತಾರೆ , ಒಟ್ಟಾರೆ ಸಮಾಜದ ಏಳಿಗೆಗಾಗಿ , ಅಬಿವೃದ್ದಿಗಾಗಿ ದುಡಿಯುತ್ತಾರೆ ಎಂದು ನಾವು ಭಾವಿಸಿದ್ದೇವೆ . ಆದರೆ ನಮ್ಮ ಎಲ್ಲಾ ಸುದ್ದಿ ಮಾಧ್ಯಮಗಳು ಅದರಲ್ಲೂ , ಖಾಸಗಿ ದೃಶ್ಯ ಮಾದ್ಯಮಗಳು ಈ ರೀತಿಯಾಗಿ ನಿಜವಾಗಿಯೂ ಕಾರ್ಯ ನಿರ್ವಹಣೆ ಮಾಡುತ್ತಿವೆಯಾ ?? ನಾವು ಅಂದುಕೊಂಡ ಹಾಗೆ ತಾರತಮ್ಯವಿಲ್ಲದೆ , ನಿಷ್ಪಕ್ಷಪಾತವಾಗಿ , ಪ್ರಾಮಾಣಿಕವಾಗಿ ಮಾದ್ಯಮಗಳು ಸಮಾಜದ ಉದ್ದಾರಕ್ಕಾಗಿ ದುಡಿಯುತ್ತಿವೆಯಾ ?? .
ಇತೀಚಿನ ದಿನಗಳಲ್ಲಿ ನನಗೆ ಈ ರೀತಿಯ ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ . ನಮ್ಮ ಸುತ್ತ ನಡೆದ ಅನೇಕ ಘಟನೆಗಳನ್ನು ನಮ್ಮ ಸುದ್ದಿ ಮಾದ್ಯಮಗಳು ಹೇಗೆ ಜನರಿಗೆ ಮುಟ್ಟಿಸಿದವು, ಮಾದ್ಯಮದ ಮಂದಿ ಹೇಗೆ ಆ ವಿಷಯಗಳನ್ನು ಅವಲೋಕಿಸಿದರು, ಎಷ್ಟರ ಮಟ್ಟಿಗೆ ಮಾದ್ಯಮಗಳು ಆ ವಿಷಯಗಳ ಮೇಲೆ ಬೆಳಕು ಚೆಲ್ಲಿದವು ಎಂದು ನೋಡಿದರೆ ನನಗೆ ಈ ಸುದ್ದಿ ಮಾದ್ಯಮಗಳ ಮೇಲೆಯೇ ಅದರಲ್ಲೂ ಈ ಖಾಸಗಿ ಒಡೆತನದ ಸುದ್ದಿ ಮಾದ್ಯಮಗಳು, ಅದರಲ್ಲೂ ದೃಶ್ಯ ಮಾಧ್ಯಮಗಳ ಮೇಲೆ ಒಂದು ರೀತಿಯ ಅಪನಂಬಿಕೆ ಮೂಡಿರುವುದು ನಿಜ .
ಎಲ್ಲ ಮಾಧ್ಯಮಗಳು ಹಾಗೆಯೇ ಎಂದು ನಾನು ಹೇಳುವುದಿಲ್ಲ , ಪತ್ರಿಕೋದ್ಯಮ ಇನ್ನು ತನ್ನ ನೈತಿಕತೆಯನ್ನು ಉಳಿಸಿಕೊಂಡಿದೆ. ಆದರೆ ಖಾಸಗಿ ಸುದ್ದಿ ವಾಹಿನಿಗಳು ಮಾತ್ರ , ಅದರಲ್ಲೂ ಇತ್ತೀಚಿಗೆ ಪ್ರಾರಂಭವಾಗಿರುವ , ಅನೇಕ ಟೀವಿ ಚಾನೆಲ್ಲುಗಳು , ತಾರತಮ್ಯ ಮಾಡುವ ವಾಹಿನಿಗಳಾಗಿ ಮಾರ್ಪಟ್ಟಿವೆ ಅನ್ನುವುದು ನನ್ನ ಭಾವನೆ. ಕನ್ನಡದಲ್ಲಿ ಸುಮಾರು ಏಳೆಂಟು ಟೀವಿ ನ್ಯೂಸ್ ಚಾನೆಲ್ಲುಗಳಿವೆ . ಸಮಾಜದಲ್ಲಿ ಯಾವುದೇ ವಿಷಯಗಳು ಉದ್ಭವಿಸಲಿ , ಹಗರಣವೇ ಆಗಿರಲಿ ಮತ್ಯಾವ ವಿಷಯವೇ ಆಗಿರಲಿ , ಈ ಎಲ್ಲ ವಾಹಿನಿಗಳು ತತ್ಕ್ಷಣಕ್ಕೆ ಎರೆಡು ಗುಂಪುಗಳಾಗಿ ಇಬ್ಬಾಗವಾಗಿ , ಒಂದು ಗುಂಪು ಒಂದು ವಿಷಯದ ಪರವಾಗಿ ಮಾತ್ರ ಸುದ್ದಿ ಬಿತ್ತರ ಮಾಡಿದರೆ , ಮತ್ತೊಂದು ಗುಂಪು ಅದೇ ವಿಷಯದ ವಿರುದ್ದವಾಗಿ ನಿಲ್ಲುತ್ತವೆ. ಆ ವಿಷಯದ ಸರಿ-ತಪ್ಪು ಗಳನ್ನೂ ಚರ್ಚಿಸದೆ ತಮ್ಮ ಅನಿಸಿಕೆಗಳನ್ನು ಮಾತ್ರ ಜನರ ಮುಂದಿಡುತ್ತವೆ . ಈ ರೀತಿಯ ಪಕ್ರಿಯೆಯಲ್ಲಿ ಪ್ರೇಕ್ಷಕನಿಗೆ ಅಥವಾ ಜನರಿಗೆ ಕೇವಲ ವಿಷಯದ ಒಂದೇ ಮುಖ ತಿಳಿಯುತ್ತದೆ. ಇದು ಸಮಾಜದ ಒಳಿತಿಗೆ ಮಾರಕವಾಗುವುದಿಲ್ಲವೇ ?? .
ನಮಗೆಲ್ಲ ಗೊತ್ತಿರುವಂತೆ , ಹಲವು ಸೂಕ್ಷ್ಮ ವಿಷಯಗಳ ಬಗ್ಗೆ ಸುದ್ದಿ ವಾಹಿನಿಗಳೇ ಆಗಲಿ , ಸಾಮಾನ್ಯ ಜನರೇ ಆಗಲಿ ಮಾದ್ಯಮದ ವೇದಿಕೆಯಲ್ಲಿ ಕುಳಿತು , ಆ ವಿಷಯಗಳ ಬಗ್ಗೆ ಚರ್ಚಿಸಬಹುದು ಅಥವಾ ತಮ್ಮ ವೈಯುಕ್ತಿಕ ನಿಲುವುಗಳನ್ನು ವ್ಯಕ್ತ ಪಡಿಸಬಹುದೇ ಹೊರತು , ಆ ವಿಷಯದ ಬಗ್ಗೆ ತಮ್ಮ ಮೂಗಿನ ನೇರಕ್ಕಷ್ಟೇ ಚರ್ಚಿಸಿ ತೀರ್ಪನ್ನು ಕೊಡುವುದು ಅದೆಷ್ಟು ಸರಿ ?? . ಆದರೆ ಈಗ ಆಗುತ್ತಿರುವುದು ಹಾಗೆಯೇ ಅನೇಕ ವಿಷಯಗಳ ಬಗ್ಗೆ ವಾಹಿನಿಗಳ ಮಂದಿಯೇ ತೀರ್ಪನ್ನು ಕೊಟ್ಟು ಬಿಡುತ್ತಾರೆ , ಆ ತೀರ್ಪೇ ಅಂತಿಮ ತೀರ್ಪು , ಅದೇ ಸರಿ ಕೂಡ ಎಂಬಂತೆಯೂ ವಾದ ಮಾಡುತ್ತಾರೆ. ಇದು ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು. ಹಲವು ವಿಷಯಗಳಲ್ಲಿ ಕೆಲವು ವಾಹಿನಿಗಳು ತೆಗೆದೆಕೊಳ್ಳುವ ನಿಲುವು , ಚರ್ಚಿಸುವ ವಿಧಾನ , ಚರ್ಚಿಸುವ ವೈಖರಿ ನೋಡಿದರೆ , ಒಬ್ಬ ಪ್ರೇಕ್ಷಕನಾದ ನನಗೆ ಅಥವಾ ಎಂಥವರಿಗೂ ಒಂದು ಕ್ಷಣ ಆ ವಾಹಿನಿಗಳ ಮೇಲೆಯೇ ಅನುಮಾನ ಮೂಡುವುದು ಸಹಜ. ಕೆಲವೊಂದು ವಾಹಿನಿಗಳೊಂತು ಕೆಲವು ವಿಷಯಗಳ ಬಗ್ಗೆ ಮಾತೆ ಆಡುವುದಿಲ್ಲ , ಕೆಲವು ವಾಹಿನಿಗಳು ಕೇವಲ ಕೆಲವೇ ವಿಷಯಗಳ ಬಗ್ಗೆ ಮಾತ್ರ ಗಮನ ನೀಡುವುದು. ಇನ್ನೂ ಕೆಲವು ವಾಹಿನಿಗಳೊಂತು ಕೆಲವು ಆರೋಪಿಗಳ ಪರ ವಕಾಲತ್ತೇ ವಹಿಸುವರು, ಅವರದ್ದು ತಪ್ಪೇ ಇಲ್ಲ ಎಂಬಂತೆ ವಾದಿಸಿ , ತಮ್ಮ ತೀರ್ಪನ್ನು ಕೊಟ್ಟೆ ಬಿಡುವರು , ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಪ್ರತಿವಾದಿಯನ್ನು ನಿಂದಿಸುವರ ಜೊತೆಗೆ ,ಅವರ ನೈತಿಕ ಸ್ಥೈರ್ಯವನ್ನು ಕೂಡ ಕುಗ್ಗಿಸುತ್ತಾರೆ. ಇವೆಲ್ಲವನ್ನೂ ಗಮನಿಸಿದರೆ ನಿಜವಾಗಿಯೂ ಯಾವುದು ಸರಿ ,ಯಾವುದು ತಪ್ಪು ಅನ್ನುವುದೇ ಜನರಿಗೆ ಅರ್ಥವಾಗದಂತೆ ಮಾಡುತ್ತವೆ ನಮ್ಮ ದೃಶ್ಯ ಮಾದ್ಯಮಗಳು.
ಇತೀಚಿನ ಹಗರಣ ಹಾಗು ಬಹು ಚರ್ಚಿತ ವಿಷಯಗಳಾದ KPSC ಸ್ಕಾಮ್ , ಮೈತ್ರಿ ಹಾಗು ಸದಾನಂದ ಗೌಡರ ಪುತ್ರನ ವಿಷಯ , ನಿತ್ಯಾನಂದ ಸ್ವಾಮಿ , ರಾಘವೇಶ್ವರ ಸ್ವಾಮಿಗಳ ವಿಷಯ , ಸೃಷ್ಟಿ ಯ ಗುರುಮೂರ್ತಿ ವಿಷಯ , ರಾಜಕಾರಣಿಗಳ, ನಮ್ಮ ಇನ್ನು ಅನೇಕ ಸ್ವಾಮಿಗಳ ಪರ ವಿರೋದ ಚರ್ಚೆಗಳು , ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿವೆಯೇ ಹೊರತು , ನಿಜ ವಿಷಯ ಮಾತ್ರ ಬಿತ್ತರವಾಗುವುತ್ತಿಲ್ಲ, ಮತ್ತು ಅರ್ಥವೂ ಆಗುತ್ತಿಲ್ಲ .
ಒಂದು ಖಾಸಗಿ ಟೀವಿ ಚಾನೆಲ್ ಒಬ್ಬ ಪ್ರಭಾವಿ ವ್ಯಕ್ತಿಯ ಹಗರಣವನ್ನು ಬಯಲು ಮಾಡುತ್ತೆ , ಇನ್ನೊದು ಚಾನೆಲ್ ಅದೇ ವ್ಯಕ್ತಿ ಏನು ಮಾಡಿಲ್ಲ ಎಂಬುವಂತೆ ಬಿಂಬಿಸುತ್ತೆ. ಒಬ್ಬ ವ್ಯಕ್ತಿ ಒಂದು ಆಸ್ಪತ್ರೆಯ ಹಗರಣದಲ್ಲಿ ಜೈಲು ಸೇರುತ್ತಾನೆ , ನೂರಾರು ಜನ ಆತನ ಬಗ್ಗೆ ಕೇಸು ದಾಖಲಿಸುತ್ತಾರೆ ಆದರು ಆತನ ಆಸ್ಪತ್ರೆಯ ಬಗ್ಗೆ ಮತ್ತೊಂದು ಚಾನೆಲ್ ನಲ್ಲಿ ನೇರ ಪ್ರಸಾರ ಬರುತ್ತೆ, ಅದೇನೋ ಭಾರಿ ಒಳ್ಳೆಯ ಆಸ್ಪತ್ರೆ ಎಂದು. ಒಬ್ಬರು ಅದೇ ವ್ಯಕ್ತಿಯನ್ನು ಜೀವ ತೆಗೆಯುವ ದೇವರು ಎಂಬಂತೆ ಬಿಂಬಿಸುತ್ತಾರೆ ಮತ್ತೊಬ್ಬರು ಅವನೊಬ್ಬ ಕಿರಾತಕ ಎಂದು ಪ್ರತಿಪಾದಿಸುತ್ತಾರೆ .
ನಿಜ ಹೇಳಬೇಕೆಂದರೆ ಜನರಿಗೆ ತಲುಪಿಸಲು ಮಾದ್ಯಮಗಳಿಗೆ ಅನೇಕ ವಿಷಯಗಳಿವೆ , ರಾಜ್ಯದ , ದೇಶದ ಅಬಿವೃದ್ದಿಯ ಬಗ್ಗೆ , ಸಮಾಜದಲ್ಲಿ ಏನು ನಡೆಯುತ್ತೋ ಅದನ್ನೇ ತಾರತಮ್ಯವಿಲ್ಲದೆ ತೋರಿಸಿದರೆ ಸಾಕು ಅವರ ಕೆಲಸಕ್ಕೆ ಒಂದು ಸಾರ್ಥಕತೆ ಸಿಗುತ್ತೆ . ಆದರೆ ಅದನ್ನು ಬಿಟ್ಟು , ಸ್ವಜನ ಪಕ್ಷಪಾತ , ತಮಗೆ ಹಿತವೆನಿಸಿದವರನ್ನು ಮಾತ್ರ ವೈಭವೀಕರಿಸುವುದು , ಮತ್ತೊಬ್ಬರನ್ನು ತೆಗೆಳುವುದು , ತಮಗೆ ಮತ್ತು ತಮ್ಮ ಚಾನೆಲ್ ಗೆ ವೈಯುಕ್ತಿಕ ಲಾಭವಾಗುವ ವಿಷಯಗಳನ್ನು ಮಾತ್ರ ಬಿತ್ತರಿಸುವುದು ,ಆರೋಪ ಹೊತ್ತ ರಾಜಕಾರಣಿಗಳೊಂದಿಗೆ ಚರ್ಚಿಸಿ , ಆರೋಪದ ತೀವ್ರತೆಯನ್ನೇ ಲಘುವಾಗಿ ಪರಿವರ್ತಿಸುವುದು. ಅವರೊಂದಿಗೆ ಸೇರಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರುವುದು ಮಾತ್ರ ಇವರ ಕೆಲಸವಾಗಿವೆ.
ಇವೆಲ್ಲ ಬಿಟ್ಟರೆ , ಜನರಿಗೆ ಸುದ್ದಿ ಮಾಧ್ಯಮದವರು ತೋರಿಸಿವುದು ಕೆಟ್ಟ ಕ್ರೈಂ ಸ್ಟೋರಿಗಳು , ಹಾಳು ಜ್ಯೋತಿಷ್ಯ , ಹಳೆಯ ಜನ್ಮ ಜನ್ಮಾಂತರದ ಕತೆಗಳು , ಉಹಾಪೋಹಗಳು , ಹೇಸಿಗೆ ಬರುವ ಚಿತ್ರ ಸುದ್ದಿಗಳು . ಇವೆಲ್ಲದರ ಬದಲಾಗಿ ನಮ್ಮ ಹೆಮ್ಮೆಯ ವಿಜ್ಞಾನಿಗಳ ಬಗ್ಗೆ , ವಿಜ್ಞಾನ ಜಗತ್ತಿನ ಆಗು ಹೋಗುಗಳ ಬಗ್ಗೆ , ಸಾಮಾಜಿಕ ಹೊರಾಟಗಳ ಬಗ್ಗೆ, ದೇಶದ ಒಳಿತಿಗಾಗಿ ಹೋರಾಡುವ ಹೋರಾಟಗಾರರ ಬಗ್ಗೆ , ಪ್ರೇಕ್ಷರಿಗೆ , ಮಕ್ಕಳಿಗೆ ಸ್ಪೂರ್ತಿ ತುಂಬುವಂಥಹ ಅನೇಕ ಸಾಧಕರ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಿ , ಬಿತ್ತರಿಸಿದರೆ , ಸಮಾಜಕ್ಕೆ ಒಳ್ಳೆಯದಾಗುವುದು , ಜೊತೆಗೆ ತಾವು ಮಾಡುವ ಕೆಲಸಕ್ಕೆ ಸಾರ್ಥಕತೆಯು ದೊರೆಯುತ್ತದೆ.
ಪತ್ರಿಕೋದ್ಯಮ ಮಾತ್ರ ತನ್ನ ನೀತಿ - ಸಿದ್ದಾಂಥಗಳಿಗೆ ಇನ್ನು ಬದ್ದವಾಗಿರುವುದು ನಿಜವಾಗಿಯೂ ನಮಗೆ ಹೆಮ್ಮೆ ಮೂಡಿಸುತ್ತದೆ ಜೊತೆಗೆ ಪತ್ರಿಕೋದ್ಯಮ ತನ್ನ ನಂಬಿಕೆಯನ್ನು ಕಾಪಾಡಿಕೊಂಡಿದೆ. ಎಲ್ಲವು ಅಲ್ಲದಿದ್ದರೂ , ಕೆಲವು ದೃಶ್ಯ ಮಾದ್ಯಮದವರು , ಅದರಲ್ಲೂ ಕೆಲವು ಖಾಸಗಿ ಸುದ್ದಿ ವಾಹಿನಿಗಳು ಇತೀಚಿನ ದಿನಗಳಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೋ ಇಲ್ಲವೋ , ಅವರೇ ಪರಾಮರ್ಶಿಸಿಕೊಳ್ಳಬೇಕು. ಇಂಥವರ ಮದ್ಯಯು ಅನೇಕ ಒಳ್ಳೆಯ ಸುದ್ದಿ ವಾಹಿನಿಗಳಿವೆ , ಒಳ್ಳೆಯ ಕಾರ್ಯಕ್ರಮಗಳು , ಚರ್ಚೆಗಳು ಅವರಿಂದ ನಡೆಯುತ್ತಿವೆ , ಸಮಸ್ಯೆಗಳ ಬಗ್ಗೆ ಎದ್ದು ಬೀಳುವ ಅವರ ನೀತಿಗೆ ನನ್ನ ಸಹಮತವು ಇದೆ, ಅವರ ಬಗ್ಗೆ ನನಗೆ ಅಪಾರ ಗೌರವವು ಕೂಡ ಇದೆ . ಎಲ್ಲ ಮಾದ್ಯಮಗಳು ಹೀಗೆಯೇ ಪ್ರಾಮಾಣಿಕರಾದರೆ ಅದೆಷ್ಟು ನಮ್ಮ ಏಳಿಗೆ ಆಗುತ್ತೆ ಅಲ್ಲವೇ ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ