ಆಮ್ ಆದ್ಮಿ ಪಕ್ಷ ತಾನು ಹುಟ್ಟಿದಾಗಿನಿಂದ ತಾನೇನೋ ಬೇರೆ ಪಕ್ಷಗಳಿಗಿಂತ ಬಹು ಬಿನ್ನ ಹಾಗು ನಾನು ಹುಟ್ಟಿರುವುದೇ ಸ್ವಚ್ಚ ಹಾಗು ಪಾರದರ್ಶಕ ರಾಜಕೀಯ ಮಾಡಲು ಎಂದು ಸಾರಿ ಸಾರಿ ಹೇಳಿಕೊಳ್ಳುತಿತ್ತು. ಅದೇ ಕಾರಣಕ್ಕಾಗಿ ಅನೇಕ ಚಿಂತಕರು, ದೇಶದ ಯುವಜನತೆ ಹಾಗು ಹೋರಾಟಗಾರರು ನೂರಾರು ಕನುಸುಗಳೊಂದಿಗೆ, ಬಹಳ ಆಶಾವಾದದಿಂದ ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು.
ಮಳೆಬಂದಾಗ ಭೂಮಿಯಿಂದ ಮೇಲೇಳುವ ನಾಯಿ ಕೊಡೆಗಳಂತೆ ಅಥವಾ ಅಣಬೆಗಳಂತೆ, ನಮ್ಮ ದೇಶದಲ್ಲೂ ಪ್ರತಿ ವರ್ಷ ಅನೇಕ ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಮೇಲೇಳುತ್ತವೆ ಹಾಗೆಯೇ ಚುನಾವಣೆಯ ನಂತರ ಮರೆಯೂ ಆಗುತ್ತವೆ. ಆಮ್ ಆದ್ಮಿ ಪಕ್ಷ ಹುಟ್ಟಿದಾಗ ಕೂಡ ಅದೇ ರೀತಿಯಾಗಿ ಮರೆಯಾಗುವ ತಾತ್ಕಾಲಿಕ ಪಕ್ಷಗಳಲ್ಲಿ ಇದೂ ಒಂದು ಎಂದು ಅನೇಕ ಮಂದಿ ವಿಶ್ಲೇಷಿಸಿದರು. ಕಾಂಗ್ರೇಸ್ ಹಾಗು ಬಿಜೆಪಿ ಪಕ್ಷಗಳು ಕೂಡ ಹಾಗೆಯೇ ಊಹಿಸಿ , ಆಮ್ ಆದ್ಮಿ ಪಕ್ಷವನ್ನು ಲಘುವಾಗಿ ಪರಿಗಣಿಸಿ ಅಣಕವಾಡಿದ್ದರು ಕೂಡ. ಆದರೆ AAP ಆ ರೀತಿಯ ಎಲ್ಲಾ ಊಹೆಗಳನ್ನು ಹುಸಿಮಾಡಿ, ಸ್ಪರ್ದಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವಿನಿಂದ ದೆಹೆಲಿಯಲ್ಲಿ ನೆಲೆಯೂರಿತು. ಆ ಭಾರಿ ಅದು ಚುನಾವಣಾ ಸ್ಪರ್ದಿಸಿದ ರೀತಿ, ಪ್ರಚಾರದಲ್ಲಿ ಬಳಸಿದ ವಿಧಾನಗಳು ಹಾಗು AAP ಸ್ಪರ್ದಿಗಳು ಎದುರಾಳಿಗಳನ್ನು ಹಣಬಲವಿಲ್ಲದಿದ್ದರು ಸೋಲಿಸಿದ ರೀತಿ ನಿಜಕ್ಕೂ ಒಂದು ಬಗೆಯ ಹೊಸ ರಾಜಕೀಯಕ್ಕೆ ನಾಂದಿ ಹಾಡಿತ್ತು. ಆ ಅಭೂತಪೂರ್ವ ಗೆಲುವಿಗೆ ಕಾರಣ ಬರಿ ಆ ಪಕ್ಷದ ಹೋರಾಟದ ತಳಹದಿಯೂ ಅಲ್ಲ, ಹಾಗೆಯೇ ದೈತ್ಯ ನಾಯಕ ಅರವಿಂದ್ ಕೆಜ್ರಿವಾಲ್ ಕೂಡ ಅಲ್ಲ.
ನನ್ನ ಪ್ರಕಾರ ಆಪ್ ಗೆಲುವಿಗೆ ಹಾಗು ಅದರ ಜನಪ್ರಿಯತೆಗೆ ಅನೇಕ ಪ್ರಮುಖ ಕಾರಣಗಳಿದ್ದವು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ , ಆಮ್ ಆದ್ಮಿ ಪಕ್ಷ ಹುಟ್ಟಿದ ತಳಹದಿ, ತತ್ವ- ಸಿದ್ದಾಂತಗಳು , ಪಾರದರ್ಶಕತೆ , ಸಾಮಾನ್ಯನೂ ಕೂಡ ನಾಯಕರ ನೈತಿಕತೆಯನ್ನು ಪ್ರಶ್ನಿಸಬಹುದಾಗಿದ್ದ ಆಂತರಿಕ ಪ್ರಜಾಪ್ರಭುತ್ವ, ಸ್ವಚ ರಾಜಕೀಯ ಮಾಡುವ ಪಕ್ಷದ ಹಿಂಗಿತ. ಅದೇ ರೀತಿ ಅಂದಿನ ರಾಜಕೀಯ ಪರಿಸ್ಥಿತಿ ಕೂಡ, ಹಾಗೆ ತಾನೇ ಹುಟ್ಟಿದ್ದ ಆಮ್ ಆದ್ಮಿ ಪಕ್ಷಕ್ಕೆ ಬಹಳ ಅನುಕೂಲಕರ ವಾತಾವರಣವನ್ನು ಕಲ್ಪಿಸಿತ್ತು. ಸತತ ೧೫ ವರ್ಷ ಅಧಿಕಾರದಲಿದ್ದ ಶೀಲ ದೀಕ್ಷಿತ್ ಸರ್ಕಾರ ಮಾಡಿದ್ದ ಶೇಷ ಅಬಿವೃದ್ದಿ, ಅನೇಕ ಅಕ್ರಮ ಹಗರಣಗಳು ಹಾಗೆಯೇ ಆ ಹಗರಣಗಳನ್ನು ಸರಿಯಾದ ರೀತಿಯಲ್ಲಿ ವಿರೋದಿಸದ ಮತ್ತು ಸರ್ಕಾರ ವಿರೋದಿ ಅಲೆಯನ್ನು ಸದುಪಯೋಗ ಪಡಿಸಿಕೊಳ್ಳಲೂ ಅಸಮರ್ಥವಾಗಿದ್ದ ದೆಹೆಲಿಯ ಪ್ರಾದೇಶಿಕ ಬಿಜೆಪಿ ಬಳಗ ಕೂಡ ಆಮ್ ಆದ್ಮಿ ಪಕ್ಷದ ಚಿಂತನೆ ಸಮಾಜದಲ್ಲಿ ಬೇರೂರಲು ಸಹಕಾರ ಮಾಡಿದ್ದವು. ಇನ್ನು ಅನೇಕ ವಿಷಯಗಳು ಆಪ್ ಉಗಮಕ್ಕೆ ಹಾಗು ಜನರು ಅದರತ್ತ ನೋಡಲು ಸಹಕಾರಿಯಾದವು ಎಂದು ಹೇಳಿದರೆ ತಪ್ಪಾಗಲಾರದು.
ತನ್ನ ಮೊದಲ ಚುನಾವಣೆಯಲ್ಲೇ ನಿರೀಕ್ಷೆಗೂ ಮೀರಿ ಜನಮನ್ನಣೆ ದೊರೆತ ನಂತರ ಪತ್ರಕರ್ತರು, ಹೋರಾಟಗಾರರು, ರಾಜಕೀಯ ವಿಶ್ಲೇಷಕರು ಆಮ್ ಆದ್ಮಿ ಪಕ್ಷವನ್ನು ಇತರ ಪಕ್ಷಗಳಿಗಿಂತ ವಿಬಿನ್ನವೆಂಬಂತೆ ಮಾದ್ಯಮದಲ್ಲಿ ಬಿಂಬಿಸಿದರು. ಆಪ್ ಮ್ ಆದ್ಮಿ ಪಕ್ಷ ಕೇವಲ ಒಂದು ಪಕ್ಷವಲ್ಲ ಇದೊಂದು ಹೋರಾಟ, ಜನಸಮಾನ್ಯರ ಕನಸು, ದೇಶದ ಸಾಂಪ್ರದಾಯಿಕ ರಾಜಕೀಯ ವ್ಯವಸ್ತೆಯನ್ನೇ ಬುಡಮೇಲು ಮಾಡುವ ಪರ್ಯಾಯ ರಂಗವೆಂದೆ ಜನರು ಭಾವಿಸಿದರು. ಆಮ್ ಆದ್ಮಿ ಪಕ್ಷ ಕೂಡ ಆ ಸಮಯಕ್ಕೆ ಅದೇ ಮೂಲ ಮೌಲ್ಯಗಳನ್ನು ಅಳವಡಿಸಿಕೊಂಡು, ಜನರಿಗೆ ನಿಜವಾಗಿಯೂ ಹತ್ತಿರವಾಗುತ್ತಿತ್ತು. ನಾಯಕರ ಸರಳತೆ, ೪೯ ದಿನ ಅದಿಕಾರದಲ್ಲಿದ್ದಾಗ ಮಾಡಿದ್ದ ಜನಪ್ರಿಯ ಕೆಲಸಗಳು, ರಾಜನಾಮೆ ನೀಡಿ ಮಾಡಿದ್ದ ತಪ್ಪುಗಳಿಗೆ ಬಹಿರಂಗವಾಗಿ ಕ್ಷಮೆ ಕೇಳಿದ ರೀತಿ ನಿಜವಾಗಿಯೂ ಆಪ್ ಪಕ್ಷಕ್ಕೆ ಮತ್ತೆ ನಡೆದ ವಿಧಾನಸಬೆಯಲ್ಲೂ ಕೂಡ ಅಚ್ಚರಿಯ ಗೆಲುವನ್ನು ತಂದುಕೊಟ್ಟವು.ಆಮ್ ಆದ್ಮಿ ಪಕ್ಷ ಎರಡನೇ ಬಾರಿಗೆ ಸಂಪೂರ್ಣ ಬಹುಮತದಿಂದ ಅದಿಕಾರಕ್ಕೆ ಬಂದಿತು. ಈ ಭಾರಿಯೂ ಕೂಡ ಆಮ್ ಆದ್ಮಿ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣ ಕೂಡ ಕೇವಲ ಒಬ್ಬ ವ್ಯಕ್ತಿಯಲ್ಲ. ಬದಲಾಗಿ ಇಡೀ ಪಕ್ಷ, ಪಕ್ಷದ ಸದ್ಯಸ್ಯರು ಹಾಗು ಅದರ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆಯಲ್ಲಿ ದುಡಿದ ರೀತಿ, ಧನಾತ್ಮಕ ಪ್ರಚಾರ, ನಾಯಕರ ಒಗ್ಗಟ್ಟಿನ ಚುನಾವಣ ತಂತ್ರಗಳು ನಿಜವಾಗಿಯೂ ಆಮ್ ಆದ್ಮಿ ಪಕ್ಷಕ್ಕೆ ತಾನೇ ನಂಬಲಾಗದ ರೀತಿಯಲ್ಲಿ ಗೆಲುವು ತಂದು ಕೊಟ್ಟವು. ಇದರ ಫಲವಾಗಿ ಎರಡನೇ ಬಾರಿಗೆ ಅರವಿಂದ್ ಕೆಜ್ರಿವಾಲ್ ಮುಖ್ಯಮಂತ್ರಿಯೂ ಆದರು. ದೆಹಲಿಯ ಜನರು ಸುಭದ್ರ ಸರ್ಕಾರದೊಂದಿಗೆ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಕೇಜ್ರಿವಾಲ್ ಸರ್ಕಾರದಿಂದ ನಿರೀಕ್ಷಿಸಿತ್ತಿದ್ದರು. ಜನರ ಸಮಸ್ಯಗಳು ಇನ್ನೇನು ಕೆಲವೇ ದಿನಗಳಲ್ಲಿ ದೂರವಾಗುವುವು, ಆಪ್ ಸರ್ಕಾರ ಜನರ ಆಶೋತ್ತರಗಳಿಗೆ ಮಿಡಿಯುವುದರ ಜೊತೆಗೆ ದೆಹೆಲಿಯನ್ನು ಒಂದು ಮಾಧರಿ ನಗರವನ್ನಾಗಿ ನಿರ್ಮಿಸಿ, ಇಡೀ ದೇಶವೇ ದೆಹೆಲಿಯ ಕಡೆಗೆ ನೋಡುವಂತೆ ಮಾಡುತ್ತದೆ ಎಂದು ಬಹಳವಾಗಿ ಭರವಸೆಗಳನ್ನು ಇಟ್ಟುಕೊಂಡಿದ್ದರು. ದೇಶಕ್ಕೆ ದೇಶವೇ ಆಮ್ ಆದ್ಮಿ ಪಕ್ಷವನ್ನು ಹಾಗು ಅದರ ಸರ್ಕಾರವನ್ನು ಸೂಕ್ಷ್ಮವಾಗಿ ಪ್ರತಿದಿನವೂ ಗಮನಿಸತೊಡಗಿದರು. ಆದರೆ ಇತೀಚಿನ ಕೆಲವು ದಿನಗಳಿಂದ ಆಮ್ ಆದ್ಮಿ ಪಕ್ಷದಲ್ಲಿ ನಡೆಯುತ್ತಿರುವ ಘಟನಾವಳಿಗಳು ಜನರಲ್ಲಿ ತೀರ ನಿರಾಸೆ ಮೂಡಿಸಿವೆ. ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಬಿನ್ನಬಿಪ್ರಾಯದ ಬೆಂಕಿ ಕಾಣಿಸಿದೆ. ಪಕ್ಷದಲ್ಲಿನ ಈ ಬಿನ್ನಬಿಪ್ರಾಯದ ಜ್ವಾಲೆ ಸರ್ಕಾರದ ಮೇಲೆ ಯಾವ ಪರಿಣಾಮ ಬೀರಬಹುದೆಂದು ಕಾಲವೇ ಹೇಳಬೇಕಿದೆ.
ಆಮ್ ಆದ್ಮಿ ಪಕ್ಷದ ಈ ಒಳಜಗಳಕ್ಕೆ ಅನೇಕ ಕಾರಣಗಳಿರಬಹುದು, ಇದೊಂದು ಬೇರೆ ರೀತಿಯ ಪಕ್ಷವೆಂದೇ ಭಾವಿಸಿದ್ದ ಜನರಿಗೆ ನಿರಾಸೆ ಹಾಗು ದುಃಖ ಉಮ್ಮಳಿಸಿ ಬರತೊಡಗಿದೆ. ಚುನಾವಣೆಗು ಮೊದಲು ಕಾಣಿಸಿದ್ದ ಆ ನಾಯಕರ ಒಗ್ಗಟ್ಟು ಅದಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮುರಿದುಬಿದ್ದಿದೆ. ಕೆಲವು ನಾಯಕರುಗಳಲ್ಲಿ ಪರಸ್ಪರ ನಂಬಿಕೆಯ ಕೊರತೆ ಎದ್ದು ಕಾಣುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಜನರಿಗೆ, ಪಕ್ಷ ಪ್ರೇಮಿಗಳಿಗೆ ತಮ್ಮ ಪಕ್ಷ ಮೂಲ ಸಿದ್ದಾಂತಗಳನ್ನೇ ಗಾಳಿಗೆತೂರಿದೆ ಎನ್ನುವ ಭಾವ ಕಾಡತೊಡಗಿದೆ. ಪ್ರತಿದಿನವೂ ಆರೋಪ, ಪ್ರತ್ಯಾರೋಪಗಳ ಮಳೆಯೇ ಸುರಿಯುತ್ತಿದೆ ಎಲ್ಲೆಂದರಲ್ಲಿ. ಟ್ವಿಟ್ಟರ್, ಫೇಸ್ಬುಕ್ , ಟೀವಿ ಹಾಗು ದಿನಪತ್ರಿಕೆಗಳಲ್ಲಿ ನಾಯಕರ ಕೆಸರೆರಚಾಟ , ಆಶಾಭರಿತನಾಗಿದ್ದ ಜನಸಾಮಾನ್ಯನಿಗೆ ಹೇಸಿಗೆ ಬರಿಸಿದೆ. ನಾಯಕರ ಈ ಕಿತ್ತಾಟ ಆಮ್ ಆದ್ಮಿ ಪಕ್ಷದ ಬುಡವನ್ನೇ ಇಬ್ಬಾಗವಾಗಿ ಸೀಳುವುದರ ಜೊತೆಗೆ ಕಾರ್ಯಕರ್ತರ ಆತ್ಮ ವಿಶ್ವಾಸವನ್ನೇ ಕುಂದಿಸಿದೆ. ಈ ಎಲ್ಲಾ ಬೆಳವಣಿಗೆಗಳು ಸದಸ್ಯರನ್ನು , ಕಾರ್ಯಕರ್ತರನ್ನು ತೀರ ಮುಜುಗರಕ್ಕೀಡು ಮಾಡಿವೆ ಕೂಡ. ತಿಂಗಳ ಹಿಂದೆಯಷ್ಟೇ ಹಾಡಿ ಹೋಗಳಿದ್ದ ಸುದ್ದಿವಾಹಿನಿಗಳು, ಪತ್ರಕರ್ತಕರು ಈಗ ಮನಸೋ ಇಚ್ಚೆ ಉಗಿಯುವೊಷ್ಟು ಕೀಳುಮಟ್ಟದ ರಾಜಕೀಯ ಮಾಡುತಿದೆ ಆಮ್ ಆದ್ಮಿ ಪಕ್ಷ. ಇದೊಂದು ತುಂಬಾ ವಿಷಾದದ ಸಂಗತಿ. ನಿಜವಾಗಿಯೂ ಇದೊಂದು ದುರಾದೃಷ್ಟಕರ ಬೆಳವಣಿಗೆಯೂ ಕೂಡ. ಜನರು,ಮತದಾರರು ಕಟ್ಟಿದ ಕನಸುಗಳು ನುಚ್ಚು ನೂರಾಗಿವೆ. ಪಕ್ಷದ ಅದಿನಾಯಕರು ತಮ್ಮ ಅಹಮ್ಮುಗಳನ್ನು ಬಿಟ್ಟು, ತಮ್ಮ ತಮ್ಮ ಜವಾಬ್ದಾರಿಯನ್ನು ತಾವು ಅರಿತುಕೊಂಡರೆ ಮಾತ್ರ ಪಕ್ಷ ಉಳಿಯಬಹುದೇ ಹೊರತು ಈ ರೀತಿಯ ಕೀಳು ಮಟ್ಟದ, ಸಂಕುಚಿತ ರಾಜಕೀಯ ಮಾಡಿದರೆ, ಮುಂದೊಂದು ದಿನ ಜನಸಾಮಾನ್ಯರು ಪಕ್ಷದಿಂದ ದೂರ ಸರಿಯುವುದಂತು ನಿಜ. ತತ್ವ ಸಿದ್ದಾಂತಗಳನ್ನು ಬಿಟ್ಟಮೇಲೆ ಒಬ್ಬ ಕಾರ್ಯಕರ್ತ ಯಾವ ಕಾರಣಗಳಿಗೆ ಆಮ್ ಆದ್ಮಿ ಪಕ್ಷಕ್ಕೆ ದುಡಿಯಬೇಕು ?? ಬೇರೆ ಪಕ್ಷಗಳಿಗಿಂತ ನಾವು ವಿಬಿನ್ನ ಎನ್ನುತ್ತಿದ್ದ ನಾಯಕರು ಈಗ ಆಗುತ್ತಿರುವ ಬೆಳವಣಿಗೆಗಳಿಗೆ ಏನೆಂದು ಉತ್ತರ ಕೊಡುತ್ತಾರೆ ?? ಈ ಜಗಳದಿಂದ ನಿಜವಾಗಿಯೂ ಪಕ್ಷಕ್ಕೆ ಒಳ್ಳೆಯದಾಗುವುದೇ ?? ಎಂದು ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪಕ್ಷವು ತಾನು ತುಳಿಯುತ್ತಿರುವ ಹಾದಿಯ ಬಗ್ಗೆ ಸ್ವಲ್ಪ ಯೋಚಿಸಿ, ಚಿಂತನೆ ಮಾಡಿಕೊಳ್ಳಬೇಕಿದೆ. ನಾಯಕರು ಈ ತಕ್ಷಣಕ್ಕೆ ತಮ್ಮ ವರ್ತನೆಗಳನ್ನು ಬದಾಲಾಯಿಸಿಕೊಳ್ಳದಿದ್ದರೆ, ತಮ್ಮ ಮೂಲ ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ನೀಡದೆ, ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟರೆ ಮಾತ್ರ ಆಮ್ ಆದ್ಮಿ ಪಕ್ಷ ಒಂದು ವಿಬಿನ್ನ ಪಕ್ಷವಾಗಿ ಉಳಿಯುತ್ತದೆ. ಆಮ್ ಆದ್ಮಿ ಪಕ್ಷ ಕೂಡ ಬೇರೆ ಪಕ್ಷಗಳಂತೆ ಕೇವಲ ಒಂದು ಸಮಾನ್ಯ ಪಕ್ಷವಾದರೆ ಜನರು ಆಮ್ ಆದಿ ಪಕ್ಷವನ್ನು ಮತ್ತೆಂದು ಬೆಂಬಲಿಸುವುದಿಲ್ಲ. ಮಾಡಿದ ತಪ್ಪುಗಳಿಗೆ ಕ್ಷಮೆಕೇಳಿ, ಮತ್ತೆಂದೂ ಈ ರೀತಿಯ ತಪ್ಪುಗಳು ಉದ್ಭವಿಸದಂತೆ, ಎಲ್ಲಾ ನಾಯಕರು ಒಟ್ಟಾಗಿ ಮುನ್ನೆಡೆಯ ಬೇಕಿದೆ. ಎಲ್ಲರನ್ನು ತಮ್ಮೊಂದಿಗೆ ತೆಗೆದುಕೊಂಡು, ದಕ್ಷವಾಗಿ ಮುನ್ನೆಡೆಯುವ ಮನಸ್ಥಿಯನ್ನು ಪಕ್ಷದ ಅದಿನಾಯಕರು ತುರ್ತಾಗಿ ಬೆಳೆಸಿಕೊಳ್ಳದಿದ್ದರೆ ನಿಜವಾಗಿಯೂ ಈ ಪಕ್ಷಕ್ಕೆ ಕೆಟ್ಟ ಹೆಸರು ಬರುವುದು ನಿಶ್ಚಿತ. ಪಕ್ಷ ಕೆಟ್ಟು ಹೋಗಿ, ಎಷ್ಟೇ ವರ್ಷ ಆದಿಕಾರದಲಿದ್ದು ಎಂಥಹ ಘನಕಾರ್ಯಗಳನ್ನು ಮಾಡಿದರು ಜನರು ಆಮ್ ಆದ್ಮಿ ಪಕ್ಷವನ್ನು ಮತ್ತೆಂದೂ ಒಪ್ಪುವುದಿಲ್ಲ, ಸ್ವೀಕರಿಸುವುದೂ ಇಲ್ಲ.
ಚುನಾವಣೆಯಲ್ಲಿ ಬರಿ ಗೆಲ್ಲುವುದೇ ಒಂದು ಪಕ್ಷದ ಮಾನದಂಡವಾಗುವುದಿಲ್ಲ. ಮೂಲ ಸಿದ್ದಾಂತಗಳು, ನಾಯಕರ ನೈತಿಕತೆ, ಪಾರದರ್ಶಕ ರಾಜಕೀಯ, ಆಂತರಿಕ ಪ್ರಜಾಪ್ರಭುತ್ವ ಯಾವುದೇ ಪಕ್ಷದ ಬೆನ್ನೆಲುಬು. ಅದೇ ರೀತಿ ಆಮ್ ಆದ್ಮಿ ಪಕ್ಷವು ಕೂಡ ವಿಬಿನ್ನ ಪಕ್ಷವಾಗುವುದಕ್ಕೆ ಮೂಲ ಕಾರಣ ಅದರ ನೀತಿ ಸಿದ್ದಾಂತಗಳು ಮಾತ್ರ. ಇದನ್ನು ಮರೆತರೆ ಆಮ್ ಆದ್ಮಿ ಪಕ್ಷವೂ ಕೂಡ ಭಾರತದ ಮತ್ತೊಂದು ಸಮಾನ್ಯ ಪಕ್ಷದ ಸಾಲಿಗೆ ಸೇರುತ್ತದೆ. ಚುನಾವಣೆಯಲ್ಲಿ ಗೆಲ್ಲುವುದೊಂದೇ ಗುರಿಯನ್ನಾಗಿಸಿಕೊಳ್ಳದೆ, ಒಳ್ಳೆಯ ನೀತಿ-ಸಿದ್ದಾಂತಗಳೊಂದಿಗೆ, ಎಲ್ಲ ನಾಯಕರು ಒಗ್ಗಟ್ಟಾಗಿ ಮುನ್ನೆಡೆದು, ಸಾಮನ್ಯ ಜನರ ದ್ವನಿಯಾದರೆ ಮಾತ್ರ ಆಮ್ ಆದ್ಮಿ ಪಕ್ಷದ ಹುಟ್ಟಿಗೆ ಸಾರ್ತಕತೆ ಸಿಗುತ್ತೆದೆ ಹಾಗು ಲಕ್ಷಾಂತರ ನಿಸ್ವಾರ್ಥ ಕಾರ್ಯಕರ್ತರ ಕನಸು ನನಸಾಗುತ್ತದೆ.
ನಿಮಗಾಗಿ
ನಿರಂಜನ್
ನಿಮಗಾಗಿ
ನಿರಂಜನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ