ಶುಕ್ರವಾರ, ಮಾರ್ಚ್ 20, 2015

World Sparrow Day

                                           ಗುಬ್ಬಿಗಳು ಹಾಗು ಅವುಗಳ ಆವಾಸ ....

ಸ್ನೇಹಿತರೆ , ನಾವು ಚಿಕ್ಕವರಿದ್ದಾಗ ಕಾಗಕ್ಕ-ಗುಬ್ಬಕ್ಕನ ಕತೆಗಳನ್ನ ನಮ್ಮ ಅಜ್ಜಿಯರಿಂದ,ಅಪ್ಪ-ಅಮ್ಮನಿಂದ , ಪಂಚತಂತ್ರ ಕತೆಗಳಲ್ಲೂ ಬಹಳ ಕೇಳಿದ್ದೇವೆ. ಹಾಗೆಯೇ ಗುಬ್ಬಿಗಳ ಬಗ್ಗೆ ವಿಶೇಷವಾಗಿ ಅನೇಕ ಕಲ್ಪನೆಗಳನ್ನು ಮಾಡಿಕೊಂಡು, ಹಾರುವ ಹಕ್ಕಿ-ಪಕ್ಷಿಗಳನ್ನೂ ನೋಡಿ ಆನಂದವನ್ನು ಸಹ ಪಟ್ಟಿದ್ದೇವೆ. ನಮಗೆ ದಿನಬೆಳಗಾದರೆ ಮನೆಯ ಸುತ್ತಮುತ್ತಲಿನ ಗಿಡಗಳಲ್ಲಿ, ಹೂಬಳ್ಳಿ-ಬೇಲಿಗಳಲ್ಲಿ, ಎಲ್ಲೆಂದರಲ್ಲಿ ಗುಂಪು-ಗುಂಪು ಸುಂದರ ಗುಬ್ಬಿಗಳ ಕಾಣುತ್ತಿದ್ದವು. ಅವು ನಮ್ಮ ಜೊತೆ-ಜೊತೆಯಲ್ಲೇ ವಾಸಮಾಡುತ್ತಿದ್ದವು. ಅವುಗಳಿಂದ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಅನೇಕ ಉಪಯೋಗಗಳು ಸಹ ಇದ್ದವು. ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಗುಬ್ಬಿಗಳು ಸಹ ತಮ್ಮ ಕಾರ್ಯ ನಿರ್ವಹಿಸುತ್ತಿದ್ದವು.  ಆದರೆ ಈಗ ಪರೀಸ್ತಿತಿ ಸಂಪೂರ್ಣ ಬದಲಾಗಿದೆ, ಅಲ್ಲವೇ ?



ಕೆಲವು ವರ್ಷಗಳ ಹಿಂದೆ, ನಮ್ಮ ಅದೃಷ್ಟಕ್ಕಾದರು  ಕತೆಗಳಲ್ಲಿ ಕೇಳಿದ ಗುಬ್ಬಿಗಳನ್ನು ನಮ್ಮ ಕಣ್ಣಲ್ಲೇ, ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ನೋಡುವ ಅವಕಾಶವಾದರೂ ಇತ್ತು. ಆದರೆ ಈಗ ಕಾಗಕ್ಕ ಅಲ್ಲಿ-ಇಲ್ಲಿ ಕಂಡರೂ , ಗುಬ್ಬಕ್ಕನ ಮಾತ್ರ ಕಾಣ ಸಿಗುವುದಿಲ್ಲ. ಕಾರಣ , ನಾಗರೀಕತೆಯ ಉತ್ತುಂಗದ ಶಿಖರವೇರುವ ಹಾತುರದಲ್ಲಿ , ನಾವು ಗುಬ್ಬಿಗಳ ಆವಾಸಕ್ಕೆ ದಕ್ಕೆ ತಂದಿದ್ದವೆ. ಸಂಪೂರ್ಣ ನಗರೀಕರಣ, ಮರಗಿಡಗಳ ನಾಶ, ಮನೆಯ ಸುತ್ತಮುತ್ತ ಸ್ವಲ್ಪವೂ ಹಸಿರು ಬೆಳೆಯಲು ಬಿಡದೆ ಕಾಂಕ್ರೀಟುಕರಣ ಮಾಡುವುದರ  ಫಲವಾಗಿ, ನಮಗೆ ಇಂದು ಗುಬ್ಬಿಗಳು ನಗರ ಪ್ರದೇಶದಲ್ಲಿ ಕಾಣ ಸಿಗುತ್ತಿಲ್ಲ, ಒಂದು ಅರ್ಥದಲ್ಲಿ ನಗರಗಳಲ್ಲಿ ಗುಬ್ಬಿಗಳೇ ನಾಶವಾಗಿವೆ. ಹಳ್ಳಿಗಳಲ್ಲಿ ಕೂಡ ಅವುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ.  

ಇದನ್ನು ಅರಿತ ಭಾರತದ ಒಂದು ಸಂಸ್ಥೆ " Nature Forever Society" ಮಾರ್ಚ್ ೨೦ ನ್ನು ಪ್ರಪಂಚದ ಗುಬ್ಬಿ ದಿನವನ್ನಾಗಿ ಆಚರಿಸುವುದರ ಜೊತೆಗೆ , ಜನರಲ್ಲಿ ಗುಬ್ಬಿಗಳ ಹಾಗು ಅವುಗಳ ಆವಾಸದ ಬಗ್ಗೆ ಜಾಗೃತಿ ಮೂಡಿಸಲು ಒಂದು ಒಳ್ಳೆಯ ಚಿಕ್ಕ ಹೆಜ್ಜೆಯನ್ನಿಟ್ಟಿತು. ಕಳೆದ ೫ ವರ್ಷಗಳ ಕೆಳಗೆ ಭಾರತದಲ್ಲಿನ ಈ ಒಂದು ಚಿಕ್ಕ ಸಂಸ್ಥೆ ಪ್ರಾರಂಬಿಸಿದ ಈ ಗುಬ್ಬಿ ದಿನಾಚರಣೆ ಹಾಗು ಅದರ ಉದ್ದೇಶವನ್ನು ಅರಿತ ಅನೇಕ ಅನೇಕ ರಾಷ್ಟ್ರಗಳು, ಇಂದು ತಮ್ಮ ದೇಶಗಳಲ್ಲೂ ಗುಬ್ಬಿಗಳ ಹಾಗು ಇತರೆ ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು " World Sparrow Day" ಎಂದು ಘೋಷಿಸಿ , ಆಚರಣೆಯನ್ನು ಮಾಡುತ್ತಾರೆ. 

ಗುಬ್ಬಿಗಳು ನಮ್ಮ ಬೆಳೆಗಳಲ್ಲಿನ ಕೀಟಗಳನ್ನು ತಿನ್ನುವುದರಿಂದ ರೈತನಿಗೆ ಸಹಾಯವಾಗಿವೆ. ಅದೇ ರೀತಿ ಮನೆಯ ಸುತ್ತಮುತ್ತಲಿನ ಗಿಡಗೆಂಟೆಗಳಲ್ಲಿನ ಅನೇಕ ಕೀಟಗಳನ್ನು ತಿಂದು ನಮ್ಮ ಸುತ್ತಲಿನ ಸ್ವಾಸ್ಥ್ಯ ಕಾಪಾಡುತ್ತವೆ. ಅತಿಯಾದ ನಗರೀಕರಣ, ಗಿಡ ಮರಗಳ ನಾಶ, ಅತ್ಯಾದುನಿಕ ತಾಂತ್ರಿಕತೆ, ಗುಬ್ಬಿಗಳ ಆವಾಸಕ್ಕೆ ದಕ್ಕೆ ಮಾಡುತ್ತಿವೆ ಎಂಬುವುದರಲ್ಲಿ ಎರಡು ಮಾತಿಲ್ಲ.ನಗರ ಪ್ರದೇಶಗಳಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು,ತಿನ್ನಲು ಆಹಾರ ಸಿಗುತ್ತಿಲ್ಲ,ಗೂಡು ಕಟ್ಟಲು ಮರ ಗಿಡಗಳಿಲ್ಲ. ಹಾಗಾಗಿ ಅವುಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ. ಇದು ಹೀಗೆಯೇ ಮುಂದುವರೆದರೆ ಮುಂದೊಂದು ದಿನ, ಕತೆ ಹಾಗು ಚಿತ್ರಪಟಗಳಲ್ಲಿ ಮಾತ್ರ ನಾವು ಗುಬ್ಬಿಗಳನ್ನು ನೋಡಬೇಕಾಗುತ್ತದೆ. 



ಗುಬ್ಬಿಗಳು ನಮ್ಮ ಪ್ರಕೃತಿಯಿಂದ ಸಂಪೂರ್ಣ ನಾಶವಾಗುವ ಮೊದಲು ನಾವು ಎಚ್ಚೆತ್ತುಕೊಂಡು, ನಮ್ಮ ಕೈಲಾದ ರೀತಿಯಲ್ಲಿ  ಅವುಗಳ ಸಂರಕ್ಷಣೆ ಮಾಡುವ ದಿಸೆಯಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ನಾವು ಮಾಡಬಹುದಾದಂತ ಸಣ್ಣ ಪುಟ್ಟ ಕೆಲಸಗಳೆಂದರೆ , 

೧.  ಸಣ್ಣ ಸಣ್ಣ ಗುಬ್ಬಿ ಗೂಡುಗಳನ್ನು ನಿರ್ಮಿಸಿ ಮನೆಯ ಕೈದೋಟಗಳಲ್ಲಿ, ಸುತ್ತಲ್ಲಿನ ಗಿಡ-ಮರಗಳಲ್ಲಿ, ಕಂಪೌಂಡಿನ ಅಂಚುಗಳಲ್ಲಿ ಇಟ್ಟರೆ, ಗುಬ್ಬಿಗಳು ಅವುಗಳನ್ನು ತಮ್ಮ ಆವಾಸವಾಗಿ ಪರಿವರ್ಥಿಸಿಕೊಳ್ಳುತ್ತವೆ. ಈ ರೀತಿಯ ಪ್ರಯೋಗ ಸಂಶೋದನೆಗಳಿಂದ ಕೂಡ ದೃಡ ಪಟ್ಟಿದೆ. 
೨. ಬೇಸಗೆಯ ಸಮಯವಾದ್ದರಿಂದ, ಮನೆಯ ಅಂಗಳಗಳಲ್ಲಿ, ಅಂಚುಗಳ ಮೇಲೆ, ಮನೆಯ ತಾರಾಸಿನ ಮೇಲೆ ಬಟ್ಟಲುಗಳಲ್ಲಿ ನೀರು ತುಂಬಿ ಇಡುವುದು. 
೩. ಕಾಳು-ಕಡೆಗಳನ್ನು ಕಸದ ಪುಟ್ಟಿಗೆ ಹಾಕುವ ಬದಲು ಪಕ್ಷಿಗಳು ತಿನ್ನುವಂಥಹ ಜಾಗಳಲ್ಲಿ ಹಾಕಬೇಕು. 
೪. ಚಿಕ್ಕ ಮಕ್ಕಳಲ್ಲಿ ಗುಬ್ಬಿ ಹಾಗು ಇತರ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಕುತೂಹಲ ಬೆಳೆಸುವುದು. 
೫. ಮನೆಯ ಸುತ್ತಲಿನ ಖಾಲಿ ಜಾಗಗಳನ್ನು ಕಾಂಕ್ರೀಟುಕರಣಗೊಳಿಸದೆ , ಗಿಡ-ಬಳ್ಳಿಗಳನ್ನು ನೆಡುವುದು. 

ಹೀಗೆ ಇನ್ನು ಅನೇಕ ರೀತಿಗಳಲ್ಲಿ ನಮ್ಮ ಮನೆಯ ಸುತ್ತ ನಾವು ಗುಬ್ಬಿಗಳಿಗೆ  ಜೀವಿಸಲು ಯೋಗ್ಯವಾದ ವಾತಾವರಣವನ್ನು ನಿರ್ಮಿಸಿದರೆ, ನಾವು ಕೂಡ ಅವುಗಳ ಜೊತೆಗೆ ಜೀವಿಸಬಹುದು. ಇಲ್ಲವಾದರೆ ಅವುಗಳ ಅವಾಸವನ್ನು ಕಸಿದುಕೊಂಡ ಪಾಪಕ್ಕೆ ನಾವು ಗುರಿಯಾಗುವುದಂತೂ ಖಂಡಿತ. ಜೊತೆಗೆ ನಾವು ಮುಂದಿನ ಪೀಳಿಗೆಗೆ ಅಸಮತೋಲನ ಪ್ರಕೃತಿಯನ್ನು ಬಿಟ್ಟು ಹೋಗಬೇಕಾಗುತ್ತದೆ ಕೂಡ.


 
ನಿಮಗಾಗಿ 
ನಿರಂಜನ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ