ಬುಧವಾರ, ಡಿಸೆಂಬರ್ 26, 2012

ಶಾಂತಿ


                                                            ನನ್ನಲೇ ಇರುವಳು ...... 
ಸ್ನೇಹಿತರೆ , 
ತ್ತೀಚಿಗೆ ನಾನು ತಿರುಪತಿ ಬೆಟ್ಟಕ್ಕೆ ಹೋಗಿದ್ದೆ  ಶಾಂತಿಯನ್ನು ಹರಸಿ. ಕಷ್ಟ ಪಟ್ಟು, ಬೆಟ್ಟ ಏರಿ , ದೇವಾಲಯ ಸೇರಿ, ಸ್ನಾನ ಮಾಡಿ, ಮಡಿಯುಟ್ಟು, ಗೋವಿಂದ ಗೋವಿಂದ ಎಂದು ಆತನ ನಾಮ ಸ್ಮರಣೆ ಮಾಡುತ್ತಾ ,ಸರಧಿ ಸಾಲಿನಲ್ಲಿ ನಾವೂ  ನಿಂತೆವು. ಜನರಲ್ಲಿ ಅದೇನೋ ಒಂದು ಭಕ್ತಿ , ಭಾವ , ಭಯ , ಆಸೆ  ಜೊತೆಗೆ ಅವಸರವೂ ಇತ್ತು  ದೇವರ ದರುಶನ ಪಡೆಯಲು. ಅಂತು-ಇಂತು ದೇವರ ಸನ್ನಿದಿ ಸಮೀಪಿಸಿತು. ನನಗೇನೋ ತವಕ , ದೇವರನ್ನು ಇನ್ನೇನು ನಾನೇ ನೋಡಿ ಬಿಡುತ್ತೇನೆ, ದರುಶನ ಆಗೇ ಬಿಟ್ಟಿತು ಎಂದು. ಆಗಿನ ಕಾಲದಲ್ಲಿ ಪಾಪ ಋಷಿ ಮುನಿಗಳು , ಅನೇಕ ಯೋಗಿಗಳು ವರ್ಷಗಟ್ಟಲೆ ತಪಸ್ಸು ಮಾಡಿದರೂ, ಹಗಲಿರುಳೆನ್ನದೆ ಪೂಜಿಸಿದರು ಸಿಗದ ಈತ ನಮಗೆ ೪ ಗಂಟೆ ಸರದಿಸಾಲಿನಲ್ಲಿ ಕಷ್ಟ ಪಟ್ಟು ಬಂದಿದ್ದಕ್ಕೆ ದರುಶನ ನೀಡಿದ. ನಿಜವಾಗಿಯೂ ತಿಮ್ಮಪ್ಪ ಭಕ್ತರ ಪಾಲಿನ ಬಂಧು. ಜನರಲ್ಲಿ ಈತನ ಮೇಲೆ ಅದೆಷ್ಟು ನಂಬಿಕೆ ಅಂದರೆ "ಈತ ಖಂಡಿತವಾಗಿಯೂ ನಮಗೆ ಬೇಗ ದರುಶನ ಕೊಟ್ಟೆ ಕೊಡುತ್ತಾನೆ"  ಎಂದು ಮೊದಲೇ ಇಂತಿಷ್ಟು ಗಂಟೆಗೆ ನಾವು ವಾಪಾಸು ಹೋಗಬೇಕೆಂದು ಬಸ್ ಕೂಡ ಬುಕ್ ಮಾಡಿರುತ್ತೇವೆ. ಪಾಪ ಆಗಿನ ಕಾಲದ ಋಷಿಮುನಿಗಳು ಸುಮ್-ಸುಮ್ನೆ ವರ್ಷಗಟ್ಟಲೆ time waste ಮಾಡಿದ್ರು ಅಲ್ಲವಾ ??? . 
           ಹೀಗೆ ಮೊನ್ನೆ ಒಬ್ರು ಹೇಳ್ತಾ ಇದ್ರು " ನೋಡಿ ಸಾರ್ ಮೊನ್ನೆ ರಾತ್ರಿ ಇಲ್ಲಿ ೮.೩೦ ಕ್ಕೆ ಬೆಂಗಳೂರು ಬಿಟ್ವಿ, ರಾತ್ರಿ ನಮಗೆ ೩ ಗಂಟೆಗೆ ದೇವರ ದರುಶನ ಆಗೇ ಬಿಡ್ತು , ಅದೆಷ್ಟು ಜಲ್ದಿ ಅಂತೀರಾ , ನನಗೆ ನಂಬೋಕೆ ಸಾದ್ಯವಾಗಲಿಲ್ಲ " ಎಂದಾಗ , ಮತ್ತೊಬ್ಬ " ಎಲ್ಲ ನಿಮ್ಮ ಪುಣ್ಯಾ ಸಾರ್, ನೀವ್ ಮಾಡಿರೋ ಪುಣ್ಯದ ಫಲ" ಎಂದ. ಅದಕ್ಕೆ ಆತ "ಎಲ್ಲಿಯ  ಪುಣ್ಯ ಮಾರಾಯ ಅದು ಪುಣ್ಯ ದ ಫಲ ಅಲ್ಲ... ನಮ್ಮ ಪ್ಯಾಕೇಜ್ ದರ್ಶನದ ಫಲ .... ಕಿತ್ತರು ಬೇಜಾನ್ ದುಡ್ಡ "  ಎಂದಾಗ ಅಲ್ಲಿದ್ದ ನನಗೆ ನಗು ಬಂತು...
            ಬರಿ ದುಡ್ಡಿದ್ದರೆ ಮಾತ್ರ ಅಲ್ಲಿ ದೇವರು ಕಾಣುತ್ತಾನೆ ಅಂತ ಅಲ್ಲ. ದುಡ್ಡು ಕೊಟ್ಟರೆ ಮಾತ್ರ ಬೇಗ ಕಾಣುತ್ತಾನೆ.  ಇಲ್ಲದಿದ್ದರೆ ಅಷ್ಟೇ , ಕಾಯಬೇಕು , ತುಂಬಾ ಕಷ್ಟ ಪಡಬೇಕು.

                                             ದೇವರೋಲಿಯುತ್ತಿದ್ದನಂತೆ 
                                             ತೋರಿದ್ದರೆ ಒಂದಿಷ್ಟು
                                             ಪ್ರೀತಿ, ಭಕುತಿ..... 
                                             ಅದಕ್ಕೆ ವಿರುದ್ದವಾಗಿದೆ
                                             ಈಗಿನ ನಮ್ಮ 
                                             ತಿರುಪತಿ!!!!

                  ದೇವಾಲಯದಲ್ಲಿ ನಾವು ಆತನ ದರುಶನಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದಾಗ ಎತ್ತ ನೋಡಿದರತ್ತ ನಮಗೆ ಕಾಣುತ್ತಿದ್ದದ್ದು ದೇವರ ಚಿತ್ರಗಳಲ್ಲ, ದೇವರ ಮಂತ್ರಗಳೂ ಅಲ್ಲ, ಕಾಣುತ್ತಿದ್ದದ್ದು " ಸರಗಳರಿದ್ದಾರೆ ಎಚ್ಚರಿಕೆ " ಎಂಬ ನಾಮಪಲಕಗಳು. ದೇವರು ನಮಗೆ ಭಕ್ತಿಯ ಜೊತೆಗೆ ಭಯವನ್ನು ಇಟ್ಟಿದ್ದಾನೆ ಎಂಬುದಕ್ಕೆ ಅದೇ ಸಾಕ್ಷಿ. ಕಳ್ಳರನ್ನು ಕೂಡ ಅವನು ಶಿಕ್ಷಿಸದೆ ಸಲಹುತ್ತಾನೆ ಎಂಬುದಕ್ಕೆ ಆ  ಬೋರ್ಡ್ ಗಳೇ ನಿದರ್ಶನಗಳು. ಇದು ಬರೀ  ಅದೊಂದೇ ದೇವಸ್ತಾನದನ ಕತೆ ಅಲ್ಲ ಎಲ್ಲ ಕಡೆಗಳಲ್ಲೂ ಅದು ಹೀಗೇನೆ. ದೇವಾಲಯದೊಳಗೆ ಪಾದ ಇಡುವುದಕ್ಕೂ ಮೊದಲು ಪಾದರಕ್ಷೆಗಳ ಭಯ. ದೇವಾಲಯದೊಳಗೆ ಸರ , ಪರ್ಸುಗಳ ಭಯ ನಮಗೆ ಇದ್ದೆ ಇರುತ್ತದೆ.    


                                           ದೇವಾಲಯಗಳಿಗೋದರೆ 
                                           ಕಳೆದೋಗುತ್ತಿತ್ತು ಪಾಪ,
                                           ಸಿಗುತ್ತಿತ್ತು  ಶ್ರೀರಕ್ಷೆ .....
                                           ಈಗ  
                                           ದೇವಾಲಯಗಳಿಗೆ 
                                           ಹೋದರೆ ಕಳೆಯುವುದೊಂದೇ 
                                           ನಮ್ಮ ಪಾದರಕ್ಷೆ !!!

       ಇತ್ತೀಚಿಗೆ ಈ ಕಳ್ಳತನಗಳು ಮನೆಗಳಲ್ಲಿ ಮಾತ್ರ ಆಗ್ತಾ ಇಲ್ಲ. ಯಾವುದೋ ನ್ಯೂಸ್ ಚಾನಲ್ನಲ್ಲಿ  ತೋರಿಸುತ್ತಾ ಇದ್ದರು , ತಿರುಪತಿ ತಿಮ್ಮಪ್ಪನಿಗೆ ನೀಡಿದ ಕಾಣಿಕೆಯನ್ನು ಎಣಿಸುವ ಮಹಾ ಪುರುಷರೆ ,  ಭಕ್ತರು ಕೊಡೊ ಕಾಣಿಕೆಯನ್ನು ಕದಿಯುತ್ತಾರೆ. ಅವರನ್ನು ತಿಮ್ಮಪ್ಪನೆ ಅಲ್ಲಿ ವಂಶ ಪಾರಂಪರ್ಯವಾಗಿ ಸಾಕಿ ಸಲಹುತ್ತಿದ್ದಾನೆ ಎಂದು. ನಾವು ಮನೆಗಳಲ್ಲಿ ಅಮ್ಮ ದೇವರ ಮೀಸಲು ಅಂತ ಇಟ್ಟ ಒಂದೆರೆಡು ರುಪಾಯಿಗಳನ್ನೇ ಮುಟ್ಟಲು ಹೆದರುತ್ತೇವೆ. ಆದರೆ ಕೆಲವು ಭಕ್ತ ಮಹಾಶಯರು ದೇವರ ಹೃದಯ ಕದಿಯಿರೋ ಎಂದರೆ , ದೇವರಿಗೆ ಬಂಡ ಹಣ, ನಿಧಿ ಕದಿಯುತ್ತಾರೆ. ಕೆಲವೊಂದು ದೇವಾಲಯಗಳಲ್ಲಿ ದೇವರನ್ನೇ ಕದ್ದ ಅನೇಕ ಉದಾಹರಣೆಗಳಿವೆ .  

                                           ಯಮನಿಗೂ  ಭಯವಾಗುತ್ತಿತ್ತಂತೆ
                                           ನೋಡಿದರೆ ದೇವರ
                                           ದಿವ್ಯ ಸನ್ನಿಧಿ....
                                           ಈಗ ಕಳ್ಳ ಕಾಕರಿಗೂ 
                                           ಇಲ್ಲ ಭಯ, ಕದಿಯಲು 
                                           ದೇವರ  ನಿಧಿ!!!

            ಮುಗಿಸುವ ಮುನ್ನ , ಸ್ನೇಹಿತರೆ ನಾನೇನು ತಿರುಪತಿ ತಿಮ್ಮಪ್ಪನ ದ್ವೇಷಿಯಲ್ಲ , ಆದರೆ ಅಲ್ಲಿ ನಾವು ನೆಡೆದು ಕೊಳ್ಳುವ ರೀತಿ, ನನಗೆ ಸರಿ ಬರೋಲ್ಲ. ಅಲ್ಲಿ ಎಲ್ಲ ರೀತಿಯ ವ್ಯವಸ್ತೆಗಳಿವೆ, ಎಲ್ಲವು ಸರಿಯಿದೆ , ಆದರೆ ನಾವೇ ಯಾಕೋ ಸರಿಯಾಗಿ ಅಲ್ಲಿ  ನಡೆದುಕೊಳ್ಳುವುದಿಲ್ಲ. ದೇವರ ಮೇಲೆ ನಮಗೆ ಭಕ್ತಿಗಿಂತ ಭಯ ಜಾಸ್ತಿಯಾಗಿದೆ. ಶಾಂತಿಗಾಗಿ , ಸಮಧಾನಕಾಗಿ ದೇವರ ದರುಶನಕ್ಕೆ ಹೋಗುತ್ತೇವೆ . ಆದರೆ ನಮಗೆ ಅಲ್ಲಿ ಸಿಗುವುದು ಅವಸರ , ಬೇಸರ  ಮತ್ತು ಗಲಾಟೆಗಳು , ಇಲ್ಲ ಸಲ್ಲದ ಮಾತುಗಳು ಮಾತ್ರ.  ಶಾಂತಿ , ಸಮಾಧಾನಗಳನ್ನು  ನಾವು ಹುಡುಕಿಕೊಂಡು ಹೋಗಬೇಕೆ ? ಅವು ದೇವರ ವಿಗ್ರಹ ನೋಡಿದರೆ ನಮಗೆ ಸಿಕ್ಕು ಬಿಡುತ್ತವೆಯೇ ?? ಇವು ಸಿಕ್ಕಿದ ಮೇಲೆಯೇ ನಮಗೆ ಸಂತ್ರುಪ್ತಿದೊರೆಯುತ್ತದೆಯೇ ???... ಇದಕ್ಕೆ ವಿರುದ್ದವಾಗಿ ನಾನು  ನಂಬಿರುವ ತತ್ವವೆಂದರೆ , ನಾವೆಲ್ಲಿರುವೆವೋ ಅಲ್ಲಿಯೇ ಶಾಂತಿ ಸಮಾಧಾನಗಳನ್ನು ತಂದುಕೊಳ್ಳಬೇಕು. ಶಾಂತಿ ಮೊದಲು ನಮ್ಮ ಮನ , ಮನೆಯಲಿದ್ದರೆ  ಎಲ್ಲ ಕಡೆಯೂ ಅದು ನಮಗೆ ಕಾಣುತ್ತದೆ. ನಮಗೆ ಮನೆಯಲ್ಲಿ ಸಿಗುವ ಶಾಂತಿಯೇ ನಿಜವಾದ ಶಾಂತಿ , ಹೊರಗಡೆ ದೊರೆಯುವುದು ಅದರ ನೆರಳು ಮಾತ್ರ.  

                                          ಕೆಲವರೋಗುವರು 
                                          ದೇವಾಲಯಕ್ಕೆ 
                                          ಬೇಕೆಂದು  ಆರತಿ ..
                                          ಕೆಲವರೋಗುವರು 
                                          ದೇವಾಲಯಕ್ಕೆ 
                                          ಬೇಕೆಂದು ಪ್ರಸಾದ ..
                                          ನಾ ಇವರಾಗೆ ಅಲ್ಲ , 
                                          ದೇವಾಲಯಕ್ಕೂ ಹೋಗೋಲ್ಲ 
                                          ಏಕೆಂದರೆ 
                                          ನನ್ನ ಮನೆಯಲ್ಲೇ ಇರುವಳು ನನ್ನ ಶಾಂತಿ !!! 

ನಿಮಗಾಗಿ 
ನಿರಂಜನ್ 

ಮಂಗಳವಾರ, ಡಿಸೆಂಬರ್ 25, 2012

ಸ್ಪೂರ್ತಿ


                                     ನಿಜವಾದ ಸ್ಪೂರ್ತಿ...               
          

ಹೀಗೆ  ಕೆಲವು ದಿನಗಳಿಂದ ತಲೆಯಲ್ಲಿ ಒಂದು ಹುಳ  ಬಿಟ್ಕೊಂಡು  , ಏನಾದ್ರೂ ಮಾಡಿ  ಆ ಹುಳವನ್ನು  ಸಾಕಿ , ಚೆನ್ನಾಗಿ ಬೆಳೆಸಿ, ದೊಡ್ಡದ್ ಮಾಡಿ , ಆ ಹುಳಕ್ಕೆ ಒಂದು ಒಳ್ಳೆ ಗಂಡು ನೋಡಿ ಮಧುವೆ  ಮಾಡ್ಸಿ , ಅದುಕ್ಕೆ ಹುಟ್ಟೋ ಮರಿಗಳ ಜೊತೆ   ಕಾಲ ಕಳಿಬೇಕು. ಆ ಮರಿ ಹುಳಗಳನ್ನೆಲ್ಲ ಒಮ್ಮೆಗೆ ನನ್ನ ತಲೆಯಲ್ಲಿ ಬಿಟ್ಕೊಂಡ್ರೆ  ಲೈಫ್ ಅಲ್ಲಿ ಎಷ್ಟೊಂದು ಮಜಾ ಇರುತ್ತೆ , ಎಷ್ಟು ಥ್ರಿಲ್ಲಿಂಗ್ ಆಗಿ ಇರುತ್ತೆ ಎನ್ನುವ ಯೋಚನಾಲಹರಿಯಲ್ಲೇ ತೇಲುತಿದ್ದೆ.  ಅದಕ್ಕೆ ಸರಿಯಾಗಿಯೇ  ಒಂದು ದಿನ ಯಾಕೋ ತುಬಾ ಬೇಜಾರ್ ಕೂಡ ಆಗಿ , ಈ  ಆಫೀಸ್ ಕೆಲಸಾನೂ ಸಾಕಾಗಿತ್ತು. ನನ್ನದೇ ಏನಾದರು ಸ್ವಂತ ಐಡಿಯಾ ಮೇಲೆ ಸ್ವಲ್ಪ ದಿನ ಕೆಲಸ ಮಾಡ್ಬೇಕು. ಆ ಕೆಲಸದೆಲ್ಲೇ ನಾನು ನನ್ನನ್ನು ಕಾಣಬೇಕು. ನನಗೆ ನಾನೇ ಅಲ್ಲಿ ಎಲ್ಲ ಆಗಿರಬೇಕೆಂದು ಯೋಚಿಸತೊಡಗಿದ್ದೆ. ಇದರ ಜೊತೆಗೆ ನನಗೆ ಅನ್ನಿಸಿದ ಹಾಗೆ ನಾ ಇರಬೇಕು, ಮನಸ್ಸಿಗೆ ಖುಷಿ ಸಿಗೋ ಜಾಗಗಳಿಗೆ ಹೋಗ್ಬೇಕು. ಸಾಕೊಷ್ಟು ಪುಸ್ತಕಗಳನ್ನ ಓದಬೇಕು, ನನ್ನೆಲ್ಲ ಸ್ನೇಹಿತರ ಜೊತೆ ಎಲ್ಲೆಲ್ಲಿಗೆ  ಹೋಗ್ಬೇಕು ಅಂತ ಅನ್ಸುತ್ತೋ  ಅಲ್ಲೆಲ್ಲ ಅಡ್ಡಾಡಿ ಸ್ವಲ್ಪ ದಿನ ಆರಾಮಾಗಿ ಇರ್ಬೇಕು ಅಂತೆಲ್ಲ ನನ್ನ ಮನಸ್ಸು ಬಹುವಾಗಿ ಬಯಸುತ್ತಿತ್ತು. ನನ್ನ ಆಫೀಸ್ ಕೆಲಸ ಮಾಡಿ ಮಾಡಿ ಮನಸ್ಸಿಗೆ ಜಡ್ಡು ಹಿಡಿದು ನನಗೆ ಈ ರೀತಿ ಅನ್ನಿಸುತ್ತಿತ್ತೇನೋ ನನಗೆ ಇನ್ನೂ  ಸರಿಯಾಗಿ ಅರ್ಥ ಆಗಿಲ್ಲ. ನಾ ಇದುವರೆಗೂ ಮಾಡಿದ್ದು ಏನು ಅಲ್ಲ, ಇನ್ನೂ ಮೇಲಾದರೂ ನನಗಿಷ್ಟವಾದದ್ದನ್ನು ನಾ ಮಾಡಲೇಬೇಕು ಎಂಬ ಬಯಕೆ ಮನಸ್ಸಿನಲ್ಲಿ ಬೇರೂರಿತ್ತು. ಅಂದರೆ ಇಷ್ಟು ದಿನ ನಾ ಏನೇನು ಮಾಡಬೇಕು ಅಂತೆಲ್ಲಾ ಬರೀ ಅಂದುಕೊಂಡಿದ್ದೆನೋ ಆ ಆಸೆಗಳೆಲ್ಲ ಒಟ್ಟಿಗೆ ಸೇರಿ ನನ್ನನು ತುಂಬಾ  ಕುಟುಕುತ್ತಿದ್ದವು. ಆ ಕ್ಷಣಕ್ಕೆ ನನ್ನ ಮನಸ್ಸು ವೃತ್ತಿಗಿಂತ  ನನ್ನ ಪ್ರವೃತ್ತಿಗಳ ಕಡೆಗೆ  ಹೆಚ್ಚು ವಾಲುತ್ತಿತ್ತು.

            ಇಷ್ಟೆಲ್ಲಾ ಯೋಚನೆಗಳು ಬಂದಾಗ ಸಮಯ ಇನ್ನು ಹೆನ್ನೆರೆಡು ಆಗಿತ್ತು. ಮಧ್ಯಾನದ ಊಟವೂ ಆ ದಿನ ನನಗೆ  ಬೇಡವಾಗಿತ್ತು.  ಮಾಡುತ್ತಿದ್ದ ಕೆಲಸವು ಸಾಕಾಗಿ, ಯೋಚನೆಯಲ್ಲೇ ಒಂದು ದೊಡ್ಡ ಕಪ್ ಟೀ ಹೀರಿ, cafetaria ದ ಕಿಟಕಿಯಿಂದ  ಹೊರಗೆ ನೋಡಿದಾಗ ,  ಸುತ್ತಲು  ಕಾಣುತ್ತಿದ್ದ ಕಾಂಕ್ರೀಟು ಕಟ್ಟಡಗಳು ನೀರಸವೆನಿಸಿದವು. ಹಾಗ ಆ ಸಮಯಕ್ಕೆ ನನಗೆ ಸ್ವಲ್ಪ ಆಫೀಸ್ ಕೆಲಸದಿಂದ ವಿಶ್ರಾಂತಿಯ ಅಗತ್ಯವಿದೆ ಎಂದೆನಿಸಿತು. ಅದ್ದರಿಂದ ಅಲ್ಲಿಂದ ನೇರವಾಗಿ  ಹೋರಟ ನಾನು ಮನೆಗೆ ತೆರಳಿ, ಸ್ವಲ್ಪ ಹೊತ್ತು ಎಲ್ಲಿಗಾದರು ಹೋಗಿ ಬರಲೆಂದು ನಿರ್ಧರಿಸಿದೆ. ನನಗೆ ಇಷ್ಟವಾದ ಜಾಗ ಇಲ್ಲಿ ಯಾವುದಿದೆ ? ಎಂದು ಯೋಚಿಸುವ ಮೊದಲೇ ನನಗೆ ನೆನಪಾದದ್ದು GKVK (ಗಾಂದಿ ಕೃಷಿ ವಿಶ್ವವಿದ್ಯಾಲಯ). ನನಗೆ ಸಾಕೆನ್ನುವೊಷ್ಟು ಕಾಲ ಅಲ್ಲಿ ಕಳಿಬೇಕು, ಹಿತವಾಗುವೊಷ್ಟು ವಾತಾವರಣವನ್ನು ಅಲ್ಲಿ ಸವಿಯಬೇಕು ಎಂದು ತವಕಿಸುತ್ತ  ಆ ಕೃಷಿ ವಿದ್ಯಾಲಯದ ಕಡೆ ಪ್ರಯಾಣ ಬೆಳೆಸಿದೆ. ಸ್ನೇಹಿತರೆ ನಾನು ಅಲ್ಲಿ ಹೋಗಿ ಏನೇನು ಮಾಡಿದೆ ಅಂತ ಹೇಳುವ ಮೊದಲು , ಈ  GKVK ಬಗ್ಗೆ  ನಿಮಗೆ ಸ್ವಲ್ಪ ಹೇಳಲೇ ಬೇಕು.


          ಈ ೧೮೯೯ ರಲ್ಲಿ ಪ್ರಾರಂಭವಾಗಿ, ಹಂತ ಹಂತವಾಗಿ ಬೆಳೆದು ನಿಂತಿದೆ ಈ ವಿಶ್ವವಿದ್ಯಾಲಯ. ಎತ್ತ ನೋಡಿದರತ್ತ ಹಸಿರುಹೊತ್ತ ಮರಗಿಡಗಳು, ಎಷ್ಟೋ ಬಗೆಯ ಹಣ್ಣಿನ ತೋಟಗಳು, ಹೂಗಿಡಗಳು , ವಿಶಾಲವಾದ ಹೊಲಗಳು , ಜನರಿಗೆ ನಡೆಯಲು ಅಷ್ಟೇ ವಿಶಾಲವಾದ ದಾರಿಗಳು, ಬಿದಿರು , ತೇಗ, ಶ್ರೀಗಂಧ , ಬೇವು , ಮಾವು ,ಅರಳೆ , ಅಶ್ವಥ, ದೊಡ್ದಾಲ   ಇನ್ನು ಅನೇಕ ನೋಡಿರದ, ಕೇಳರಿಯದ  ಹೊಸ ಬಗೆಯ ಕಾಡು ಮರಗಳು ಇಲ್ಲಿ ನಮಗೆ ನೋಡ ಸಿಗುತ್ತವೆ.  ಅತಿಯಾದ ಜನ ಸಂದಣಿ ಇಲ್ಲದ ಈ ಜಾಗದಲ್ಲಿ, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲದೆ ಬೇರೆ ಯಾರು ಇರುವುದಿಲ್ಲ. GKVK ಬೆಂಗಳೂರಿನಲ್ಲೇ ಇದ್ದರು ಅದು ಬೆಂಗಳೂರಿನಂತಲ್ಲ. ಸಾಕಷ್ಟು ಮರಗಿಡಗಳಿರುವ ಈ ಜಾಗದಲ್ಲಿ ನಾವು ಅನೇಕ ಬಗೆಯ ಪಕ್ಷಿಗಳು ನೋಡ ಬಹುದು, ಅವುಗಳ ಕೂಗು ಕೇಳುವುದಕ್ಕೊಂತು ಇನ್ನೂ ಖುಷಿ ಆಗುತ್ತದೆ. ಬೆಂಗಳೂರಿನಲ್ಲಿ ಈ ತರಹದ ಜಾಗವೂ ಇದೆ ಎಂದು ನಮಗೆ ಆಶ್ಚರ್ಯ ಆಗುವುದೇ ಇರುವುದಿಲ್ಲ , ನಾವು ಒಮ್ಮೆ ಇಲ್ಲಿಗೆ ಬೇಟಿ ನೀಡಿದರೆ.
 
           ನನಗೂ ಮತ್ತು ಈ ಜಾಗಕ್ಕೂ ಬುಹು ದಿನದಿಂದಲೂ  ಒಂದು ರೀತಿಯಾದ ನಂಟು ಇದೆ. ನಾನು ಈಗಲೂ  ವಾರಕ್ಕೆ ಕನಿಷ್ಠ ಮೂರು-ನಾಲ್ಕು ಭಾರಿ ಬಂದು ಹೋಗುವ ಜಾಗ ಇದು. ಶನಿವಾರ ಮತ್ತೆ ಭಾನುವಾರ ಬೆಳಿಗ್ಗೆ   ಜಾಗಿಂಗ್ ಗೆ GKVK ಗೆ ಬರದಿದ್ದರೆ ನನಗೆ ಸಮಾಧಾನವಿರುವುದಿಲ್ಲ. ನನಗೆ ತುಂಬಾ ಬೇಜಾರ್ ಆದಾಗಲೂ,  ಸಕತ್ ಖುಶಿ ಆದಾಗಲೂ ನಾನು ಇಲ್ಲಿಗೆ ಬರುವುದುಂಟು. ಇಲ್ಲಿಗೆ ಯಾವಾಗ ಬಂದರೂ ಒಂದು ದೊಡ್ಡ ವಾಕ್ ಮಾಡಿ , ಇಲ್ಲಿರುವ  ಪ್ರಕೃತಿಯ ಹಿತವನ್ನೀರಿ, ಹಕ್ಕಿ ಪಕ್ಕಿಗಳ ಜೊತೆ oneway ಮಾತ್ ಆಡಿ, ಇಲ್ಲಿಯ ಕ್ಯಾಂಟೀನ್ ಅಲ್ಲಿ ಏನಾದ್ರೂ ತಿಂದು , ಒಂದ್ ಕಪ್ ಕಾಫೀ ಇಲ್ಲವೆ  ಟೀ ಕುಡಿದು ಹೋದರೆ ನನಗೆ ಸಿಗುವ ಸಂತೋಷ ಮತ್ತೆ relaxation , ಇದುವರೆಗೂ ಬೆಂಗಳೂರಿನಲ್ಲಿ ಯಾವ ಜಾಗದಲ್ಲೂ ಸಿಕ್ಕಿಲ್ಲ.  ಹಾಗಾಗಿ ನಾನು ಆ ದಿನ GKVK ಗೆ  ತುಂಬಾ ಇಷ್ಟಪಟ್ಟು ಬಂದಿದ್ದೆ.         

       ಒಮ್ಮೆಮೊಮ್ಮೆ   ನನ್ನ ರೂಮಿನ ಪುಸ್ತಕದ  ಗೂಡಲ್ಲಿರುವ ನನಗೆ ಹೆಚ್ಚು ಇಷ್ಟವಾದ ಪುಸ್ತಕಗಳು, ನಾನು ಎಂಜಿನೀರಿಂಗ್ ಅಲ್ಲಿ ಸರಿಯಾಗಿ ಓದದ ಪುಸ್ತಕಗಳು ಕೂಡ  "ಈಗಲಾದರೂ ನಮ್ಮನ್ನು ಸ್ವಲ್ಪ ತೆಗೆದು ನೋಡೋ , ನಾಳೆ ಈ software ಕ್ಷೇತ್ರದಲ್ಲಿ ನಿನ್ನ ಕೈಯಿಡಿತ್ತೇವೆ" ಎನ್ನುತ್ತವೆ. ಅದೇ ರೀತಿ ಬೈರಪ್ಪ, ತಾರಸು ,ಕುಂವಿ , ಕಾರಂತ, ಬೀಚಿ , ಅನಂತಮೂರ್ತಿಯವರ ಪುಸ್ತಕಗಳೊಂತು" ನೀನು ನಮ್ಮೊಂದಿಗೆ ಯಾಕೋ ಸಮಯವನ್ನೇ ಕಳೆಯುತ್ತಿಲ್ಲ, ನಮ್ಮನ್ನು ಇತ್ತೇಚೆಗೆ ನೀನು ಮರೆತೇ ಬಿಟ್ಟಿದ್ದೀಯ, ಇದರಿಂದ ನಮಗೆ ನಿನ್ ಮೇಲೆ ಬೇಜಾರಾಗಿದೆ " ಎಂದು ಸದಾ ನನ್ನನ್ನು ಮೂದಲಿಸುತ್ತಲೇ ಇರುತ್ತವೆ. ಇಂಥ ಪುಸ್ತಕಗಳ ಗುಂಪಿಂದ, ನನ್ನಿಷ್ಟದ ಒಂದು ಕುವೆಂಪುರವರ ಪುಸ್ತಕವನ್ನು ನಾನು ಆ ದಿನ   ನನ್ನೊಂದಿಗೆ GKVK ಗೆ ತೆಗೆದುಕೊಂಡು ಹೋಗಿದ್ದೆ. GKVK ಯ ಹೊಲಗಳಲ್ಲಿ , ತೋಟಗಳಲ್ಲಿ ಕೂತು ಕುವೆಂಪು ಬರೆದಿರೋ, ಅವರು ಪ್ರಕೃತಿಯನ್ನು ವರ್ಣಿಸಿರೊ  ಪುಸ್ತಕವನ್ನೇ ತಂದು ಅಲ್ಲಿ ಓದುವುದೇ ಒಂದು ರೀತಿಯಲ್ಲಿ ರೋಮಾಂಚನ ನೀಡುತ್ತದೆ.

               ಆ ದಿನ ಮಧ್ಯಾನದಿಂದ ಸಂಜೆ ೩.೩೦ ರ ತನಕ , ಅದೇ ಜಾಗದಲ್ಲಿ, ಎಲ್ಲವನ್ನು ಮರೆತು , ನನಗೆ ಇಷ್ಟವಾದ ಒಂದು ಜಾಗದಲ್ಲಿ ಕೂತು  ಕುವೆಂಪುರವರ "ಪರಿಸರದ ಚಿತ್ರಗಳು" ಎಂಬ ಒಂದು ಪುಸ್ತಕವನ್ನು  ಓದಿದೆ. ಸ್ನೇಹಿತರೆ ಆ ಪುಸ್ತಕದಲ್ಲಿ ಕುವೆಂಪು ತಾವು ಚಿಕ್ಕವರಿದ್ದಾಗ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ತಾವು ಮಾಡಿದ ಸಾಹಸಗಳ ಬಗ್ಗೆ, ಅಲ್ಲಿಯ ಪ್ರಕೃತಿಯ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ, ಅಲ್ಲಿಯ ಸೂರ್ಯಾಸ್ತ , ಸೂರ್ಯೋದಯಗಳ ಬಗ್ಗೆ ನಿಜವಾಗಿಯೂ ಅದ್ಭುತವಾಗಿ, ಓದುಗನ ಕಣ್ಣಿಗೆ ಕಟ್ಟುವಹಾಗೆ ವರ್ಣನೆ ನೀಡಿದ್ದಾರೆ. ನಾವು ಆ ಪುಸ್ತಕವನ್ನು ಓದಿದರೆ ನಮ್ಮನ್ನು ಅವರು ನೇರವಾಗಿ ಪಶ್ಚಿಮಘಟ್ಟದ ಮಡಿಲಲ್ಲಿರುವ ತಮ್ಮ ಊರಿಗೆನೆ ಕರೆದುಕೊಂಡು ಹೋಗಿ ಬಿಡುತ್ತಾರೆ. ತಮಗೆ ಏನಾದರು ಸ್ವಲ್ಪ ಸಮಯ ಸಿಕ್ಕರೆ ನೀವು ದಯವಿಟ್ಟು ಒಮ್ಮೆ ಆ ಪುಸ್ತಕದಮೇಲೆ ಕಣ್ಣಾಡಿಸಿ , ನಿಮಗೂ ಮಜಾ ಬಂದರೂ  ಬರಬಹುದು.

          ಒಂದೆರೆಡು ಗಂಟೆಗಳ ಕಾಲ ಒಬ್ಬನೇ ಕೂತು ಪುಸ್ತಕ ಓದಿ,  ಸ್ವಲ್ಪ ಹಿತವೆನ್ನಿಸಿದಾಗ , ನೇರವಾಗಿ ನೆಡೆದು ಅಲ್ಲಿಯ ಕ್ಯಾಂಟೀನ್ ಗೆ ಬಂದೆ. ಅಷ್ಟೊತ್ತಿಗೆ ನನ್ನ cousin ಕೂಡ ಅಲ್ಲಿಗೆ ಬಂದಿದ್ದ. ಇಬ್ಬರು ಜೊತೆಯಾಗಿ ತಿನ್ನಲು, ಅದು-ಇದು ತಗೊಂಡು, ಅಲ್ಲೇ ಇದ್ದ ಒಂದು ಟೇಬಲ್ ಮೇಲೆ ಕೂತೆವು.  ಅಷ್ಟೊತ್ತಿಗಾಗಲೇ ನನ್ನ ತಲೆಯನ್ನು ಸಂಪೂರ್ಣವಾಗಿ ಆವರಿಸಿದ್ದು  ನಾ ಓದಿದ ಮಲೆನಾಡಿನ ಚಿತ್ರಗಳು ಪುಸ್ತಕದ ಲೇಖನಗಳು ಮಾತ್ರ. ನಾ ಬರಿ ಕುವೆಂಪುರವರ ವರ್ಣನೆಗಳ , ಆ ಸಾಲುಗಳ ಮೆಲುಕು ಹಾಕುತ್ತ, ನನ್ನೆದುರಿಗೆ ತಟ್ಟೆಯಲ್ಲಿದ್ದ ಅನೇಕ ತಿಂಡಿಗಳನ್ನು ಕೂಡ ಮೆಲುಕು ಹಾಕಿದೆ.
  
         ನಾನು ನನ್ನ causin ಗೆ ನಾ ಓದಿದ ಪುಸ್ತಕದ ಬಗ್ಗೆ ಹೇಳತೊಡಗಿದ. ಅವನಿಗೂ ಕೂಡ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ನಾನು ಹೇಳುವುದನ್ನೆಲ್ಲ ಕೇಳಿದ. ನನಗೆ ಬೆಳಿಗ್ಗೆ ಏಕೆ ಹಾಗೆ ಬೇಜಾರಾಗಿತ್ತು, ಆಫೀಸ್ ಇಂದ ಏಕೆ ಹೀಗೆ ಬೇಗನೆ ಬಂದೆ ಎಂದು ಅವನಿಗೆ ಹೇಳಿದೆ. ಅದಕ್ಕೆ ಅವನು ಕೂಡ ಕೆಲವು ಕಾರಣಗಳನ್ನು ನೀಡಿ ಸಮಾಧಾನದ ಮಾತುಗಳಾಡಿದ. ನಮಗೆ ಅನ್ನಿಸಿದ್ದನ್ನು ನಾವು ಮಾಡದೆ ಇದ್ದರೆ, ಇಷ್ಟವಿಲ್ಲದ ಕೆಲವು ಕೆಲಸಗಳನ್ನು ಮಾಡಿದರೆ, ಒಮ್ಮೊಮ್ಮೆ ಹೀಗೆ ಆಗುವುದುಂಟು ಎಂದು ನನಗೆ ಅನ್ನಿಸಿತ್ತು. ನಾವು ವಾಕ್ ಮಾಡುವಾಗ ಅಲ್ಲಿಯ ವಾತಾವರಣ ನಿಜವಾಗಿಯೂ ನಮ್ಮೆಲ್ಲ ಜಂಜಾಟಗಳನ್ನು ಮರೆಸುತ್ತೆ ,  ಆ ಪ್ರಕೃತಿಯಲ್ಲಿ ನಮ್ಮನ್ನು ತನ್ನಲ್ಲಿ ಒಂದಾಗಿಸಿ ಕೊಳ್ಳುತ್ತೆ ಎನ್ನುವುದು ಆದಿನ ಮತ್ತೊಮ್ಮೆ ನನಗೆ ಹರಿವಾಯಿತು. 


          ಯಾವಾಗಲು ಚಿಟಪಟ ಮಾತಾಡುವ ನಾನು ಆ ಕ್ಷಣಕ್ಕೆ ಅಂತರ್ಮುಖಿಯಾಗಿ ಮಾತಿಲ್ಲದೆ  ಸುಮ್ಮನೆ ನಡೆಯುತ್ತಿದ್ದೆ. ಅಷ್ಟೊತ್ತಿಗೆ ಪಶ್ಚಿಮದಲ್ಲಿ ಸ್ವಾಮೀ ಮುಳುಗುತ್ತಾ , ಪ್ರಕೃತಿಗೆ ಸಂಜೆಯೋತ್ಸಾಹ ನೀಡಿ, ಆಕಾಶಕ್ಕೆ ಕೆಂಬಣ್ಣ ಚೆಲ್ಲಿ , ಪಕ್ಷಿಗಳಿಗೆ ಚೇತನ ನೀಡಿ ಗೂಡು ಸೇರಲು ಪ್ರೇರೇಪಿಸಿದ್ದ. ನನಗೂ ಕೂಡ ಅದೇ ಸೂರ್ಯ, ಆ ಕೆಂಬಣ್ಣ,ಆ ಪಕ್ಷಿಗಳ ಚಿಲಿಪಿಲಿಗಳು, ದೂರದಲ್ಲಿ ಕಿರ್-ಕಿರ್ ಎನ್ನುವ  ಸಂಜೆಯುಳುಗಳ  ಗಾನಗಳು  ಮತ್ತೆ ಹೊಸ ಚೈತನ್ಯ ನೀಡಿದ್ದವು. ನನ್ನೆಲ್ಲ ಯೋಚನೆಗಳು , ಬೇಜಾರುಗಳನ್ನು , ನಾನು ಪಶ್ಚಿಮದಲ್ಲಿ ಮುಳುಗುತಿದ್ದ ಆ ಸೂರ್ಯನಿಗೆ ಸಮರ್ಪಿಸಿ , ಅವನನ್ನೇ ದಿಟ್ಟಿಸುತ್ತ, ಕುವೆಂಪು ಹೇಳಿದ ರೀತಿಯಲ್ಲೇ ಅವನನ್ನು ಬಣ್ಣಿಸಿಕೊಳ್ಳುತ್ತ, ನನ್ನನ್ನೇ ನಾನು ಮರೆತು ಹೋಗಿದ್ದೆ. ನನ್ನ cousin ನನ್ನನ್ನು ಎಚ್ಚರಿಸಿದಾಗಲೇ ನಾನು ಅಲ್ಲಿಂದ ಹೊರಬಂದದ್ದು. ನಿಜ ಸ್ನೇಹಿತರೆ ನಮಗೆ ಅದೆಷ್ಟೇ ಬೇಜಾರಾದರು, ದುಃಖವಾದರೂ ಅದನ್ನು ಮರೆಸೋ ಶಕ್ತಿಯನ್ನು ದೇವರು ಪ್ರಕೃತಿಯಲ್ಲಿ ಮಾತ್ರ ಇಟ್ಟಿದ್ದಾನೆ. ಪ್ರಕೃತಿ ನಮ್ಮೊಳಗಿನ ತೊಳಲಾಟಗಳನ್ನೆಲ್ಲ ತನ್ನದಾಗಿಸಿಕೊಂಡು ನಮಗೆ ಅದಮ್ಯ ಚೇತನ ನೀಡುತ್ತದೆ. ಪ್ರಕೃತಿಯ ಸೌಂದರ್ಯ ಮಾತ್ರ ನಮಗೆ ನಿಜವಾದ ಸ್ಪೂರ್ತಿಯಾಗುತ್ತದೆ.

ನಿಮಗಾಗಿ 
ನಿರಂಜನ್ 

ಬುಧವಾರ, ಡಿಸೆಂಬರ್ 19, 2012

ಪ್ರಳಯ


                                               ಪ್ರಳಯ ಆಗೊದಿಲ್ರಿ  !

ಮೊನ್ನೆ ನಮ್ಮ ಒಬ್ಬ ಅತ್ತೆ ಮನೆಗೆ ಹೋಗಿದ್ದೆ, ನಮ್ಮ ಅತ್ತೆಯವರ ಅತ್ತೆಯವರನ್ನು ಬೇಟಿ ಮಾಡಿದೆ. ಅವರು ಸುಮಾರು 70 ವರ್ಷದ ವೃದ್ದರು, ಯಾವುದೋ ಒಂದು ಬಾರಿ ಚಿಂತೆಯಲ್ಲಿದ್ದರು. ನಾವು ಹೋದಮೇಲೆ ನಮ್ಮನ್ನು ನೋಡಿದ ತಕ್ಷಣವೇ ಅವರ ಮುಖ ಅರಳಿದಂತೆ ಕಂಡರೂ ಅವರಲ್ಲಿ ಏನೋ ಭಯ ಮತ್ತು ದುಃಖ ಆವರಿಸಿತ್ತು. ವಯೋಸಹಜವಾದ ನಡುಕ ದ್ವನಿಯಲ್ಲಿ ಅವರು "ಸದ್ಯ ನೀವ್ ಬಂದ್ರಿ ಬಿಡಪ್ಪ, ನಿಮ್ಮನ್ನ ನೋಡಿದ್ದು ತುಂಬಾ ಚೆನ್ನಾಗಾಯಿತು , ನಿಮ್ಮನ್ನೇನು ನೋಡ್ತಿನೋ ಇಲ್ಲೋ ಅನ್ನೋ ಹಾಗೆ ಆಗಿತ್ತು ", ಇದೇನಪ್ಪ ಅಜ್ಜಿ ಹೀಗೆ ಮಾತಾಡುತ್ತೆ ಅಂತ ಹೌಹಾರಿದ ನಾನು, " ಏನಜ್ಜಿ ಏನ್ ಆಯಿತು ಯಾಕೆ ಹೀಗೆ ಮಾತ್ ಆಡ್ತಾ ಇದ್ದೀಯ ? " ಎಂದಾಗ , ಅಜ್ಜಿ " ಅಯ್ಯೋ ಮಾರಾಯ ನಿಂಗೆ ಗೊತ್ತಿಲ್ಲೇನಪ್ಪ ??? ಈ ತಿಂಗಳು ಅದೇನೋ ಪ್ರಳಯ ಆಗುತ್ತೆ ಅಂತೆ , ನಾವೆಲ್ಲಾ ಸತ್ತೆ ಹೋಗ್ತಿವಂತೆ ???" .
            " ಅಯ್ಯೋ ಅಜ್ಜಿ ಅದೆಲ್ಲ ಸುಳ್ಳು , ಏನು ಆಗೊಲ್ಲಜ್ಜಿ . ಭೂಮಿ ಇನ್ನು ಚಿಕ್ಕ ವಯಸ್ಸಿನದು, ಅದಕ್ಕೆ ಇನ್ನು ವಯಸ್ಸಾಗಿಲ್ಲ. ನಮ್ಮ ಭೂಮಿಗೆ ಸದ್ಯಕ್ಕೆ ಏನು ಆಗೋಲ್ಲ. ಇವೆಲ್ಲ ಕಥೆಗಳು ಕಣಜ್ಜಿ . ಜಾಸ್ತಿ ಯೋಚಿಸಬೇಡ , ಏನೇನೂ ಆಗೋಲ್ಲ , ಆರಾಮಾಗಿ ಇದ್ಬಿಡು" ಅಂತ ನಾ ಸಮಾಧಾನ ಪಡಿಸಲು ಕೆಲವು ಮಾತುಗಳನ್ನ ಹೇಳಿದೆ.

            "ಅಲ್ಲಪ್ಪ ಜನ ದಿನ ಮಾತಾಡ್ತಾರೆ ಈ Tv ಗೆಲ್ಲ ಇದರ ಬಗ್ಗೆ , ಅವ್ರು ಹೇಳೋದು ಸುಳ್ಳು ಅಂತಿಯಾ ?? , ಅವರೆಲ್ಲ ದೊಡ್ಡ ಜನ ಕಣಪ್ಪ , ಪ್ರಳಯ ಆಗೇ ಆಗುತ್ತೆ " ಅಂತ ಅಜ್ಜಿ ಖಂಡಿತವಾಗಿ ನಂಬೆ ಬಿಟ್ಟಿದ್ದರು .

           "ನಮ್ದೇನು ಬಿಡಪ್ಪ , ಪ್ರಳಯ ಆಗ್ಲಿ ಬಿಡ್ಲಿ ಹೋಗಲೇ ಬೇಕಿತ್ತು ,ಹೋಗ್ತಿವಿ , ನನಗೆ ನನ್ನ ಮಕ್ಕಳು, ಮೊಮ್ಮಕ್ಕಳದೆ ಚಿಂತೆ ಕಣಪ್ಪ " ಅಂತ ನಿಜವಾದ ದುಃಖದಲ್ಲೇ ಹೇಳಿದ ಅಜ್ಜಿ ಗೆ " ಇಲ್ಲ ಅಜ್ಜಿ ಏನು ಯೋಚಿಸಬೇಡ, ಏನೇನು ಆಗೋಲ್ಲ " ಎಂದು ಹೇಳಿದರು, ಅಜ್ಜಿ " ಅಲ್ಲಪ್ಪ ನಾವೇನೋ ಮಕ್ಕಳು ಮರಿ ಕಂಡ್ವಿ , ಮಂತ್ಯಾನ ಮಠ ಅಂತ ಸವೆದ್ವಿ , ಆದ್ರೆ ನೀವಿನ್ನು ಚಿಕ್ಕವರು , ಮಧುವೆ ಇಲ್ಲ ಮುಂಜಿನು ಇಲ್ಲ , ಅದೆಂಗೆ ಸಮಾಧಾನ ತಂದುಕೊಳನಪ್ಪ " ಎಂದಾಗ ಸ್ವಲ್ಪ ನಗು ಬಂತಾದರೂ ಈ ಪ್ರಳಯ ಎಂಬ ಭಯ ಬಿತ್ತಿದೊರ ಬಗ್ಗೆ ಸಿಟ್ಟು ಬಂತು.

            ಸ್ನೇಹಿತರೆ, ಈ "ಪ್ರಳಯ ಆಗುತ್ತೆ, ಹಾಗೆ ಆಗುತ್ತೆ " ಎಂಬ ಊಹ-ಪೋಹಗಳ ಸುದ್ದಿ ಎಲ್ಲೆಡೆ ಹಬ್ಬಿದೆ ಎಂದು ನನಗೆ ಗೊತ್ತಿತ್ತು. ಆದರೆ ಈ ಮಟ್ಟಿಗೆ ಅದು ಜನರ ಮೇಲೆ ಪ್ರಭಾವ ಬೀರಿದೆ ಎಂದು ತಿಳಿದಿರಲಿಲ್ಲ. ಈ ಸುದ್ದಿಯನ್ನ ಹಬ್ಬಿಸಿದ ಕೀರ್ತಿ ಮಾತ್ರ ಈ ಕನ್ನಡ ನ್ಯೂಸ್ ಚಾನೆಲ್ಗಳಿಗೆ ಮಾತ್ರ ಸಲ್ಲಲೇ ಬೇಕು.

             ಹೀಗೆ ಮಾತಾಡುವಾಗ ಅಜ್ಜಿಗೊಂದು ಪ್ರಶ್ನೆ ಕೇಳಿದೆ , "ಅಜ್ಜಿ ಈ ಪ್ರಳಯ ಆಗುತ್ತೆ ಅಂದ್ರೆಲ್ಲ ಅದನ್ನ ಯಾರು ಹೇಳಿದ್ರು ?? " ಅಜ್ಜಿ ಥಟ್ ಅಂತ , ತಮ್ಮ ಮಕ್ಕಳ ಮೊಮ್ಮಕ್ಕಳ ಹೆಸರನ್ನು ಈ ರೀತಿ ಸರಾಗವಾಗಿ ಹೇಳುತ್ತೋ ಇಲ್ಲವೋ ಗೊತ್ತಿಲ್ಲ , ಆದ್ರೆ ಒಂದು ಎಂಟು-ಹತ್ತು ಹೆಸರುಗಳನ್ನು ಮಾತ್ರ ಪಟ ಪಟ ಹೇಳಿತು. " ಇದೇನಪ್ಪ ಅಜ್ಜಿ ಈ ರೀತಿ ಹೆಸರುಗಳನ್ನ ನೆನಪಿಟ್ಟುಕೊಂಡು ಹೇಳುತ್ತೆ " ಅಂತ ಅಂದುಕೊಂಡೆ. ಅಜ್ಜಿ ಹೇಳಿದೆ ಹೆಸರುಗಳು ಯಾರದು ಗೊತ್ತೇ ?? ಅಜ್ಜಿ ಹೇಳಿದ್ದು ಬರಿ ನಮ್ಮ ಕನ್ನಡ ನ್ಯೂಸ್ ಚಾನೆಲ್ ಗಳ ಮತ್ತು ಅದರಲ್ಲಿ ಬರುವ ಎಲ್ಲಾ ಜೋತಿಷಿಗಳು !! .

             ನಿಜ, ಈ ನ್ಯೂಸ್ ಚನ್ನೆಲ್‍ಗಳನ್ನ ನೀವು ಒಂದರ್ದ ಗಂಟೆ ಕೂತು ನೋಡಿದ್ರೆ ಸಾಕು ನಿಮಗೂ ಅರ್ಥಆಗುತ್ತೆ, ಅವು ಹೆಸರಿಗೆ ಮಾತ್ರ ನ್ಯೂಸ್ ಚನ್ನೆಲ್‍ಗಳು. ಆದ್ರೆ ಅವು ಪ್ರಸಾರ ಮಾಡುವುದು ಮಾತ್ರ ಬರಿ ಜ್ಯೋತಿಷ್ಯ ಕಾರ್ಯಕ್ರಮಗಳು, ಬಿಟ್ಟರೆ ಸಿನೆಮಾ ಕಾರ್ಯಕ್ರಮಗಳು. ಬೆಳಿಗ್ಗೆ ಟೀವೀ ಹಚ್ಚಿದರೆ ಸಾಕು ಯಾವ ಚಾನೆಲ್ ನೋಡಿದ್ರೂ ಅಲ್ಲಿ ಬರಿ ಈ ಜ್ಯೋತಿಷಿಗಳದ್ದೆ ಖಾರುಬಾರು. ಖಾವಿ ಬಟ್ಟೆಗಳು, ಮೈಕೈಗೆಲ್ಲ ರುದ್ರಾಕ್ಷಿ ಮಾಲೆಗಳು, ಎಲ್ಲೂ ಜಾಗ ಬಿಡದೆ ಹಚ್ಚಿದ ವಿಭೂತಿ, ಮುಂದೊಂದು ಲ್ಯಾಪ್-ಟಾಪ್, ಜೊತೆಗೊಬ್ಬಳು ರೇಷ್ಮೆ ಸೀರೆ ಧರಿಸಿ ನಗುಮುಖದ ಸುಂದರಿ ಇದು ಎಲ್ಲಾ ಚಾನೆಲ್‌ಗಳಲ್ಲೂ ಬೆಳಿಗ್ಗೆ 7 ರಿಂದ ಹತ್ತರ ತನಕ ನಮಗೆ ಸಿಗುವ ದೃಶ್ಯಗಳು.

              ಈ ಭಾರಿ ಗುರೂಜಿಗಳ ಪಕ್ಕಕೆ ಕೂತ ಆ ಹುಡುಗಿಯರು " ನಮ್ಮ ಗುರೂಜಿಗಳು " ಎಂದು ನಗುಮುಖ ಹೊತ್ತು, ಬಾಯಿ ತುಬಾ ಕರೆಯುತ್ತಾರೆ. ಜನರೋ ಅವರಿಗೆ ತಮ್ಮೆಲ್ಲ ಕಷ್ಟಗಳನ್ನು ದುಃಖದಿಂದ ಬಿದ್ದು ಬಿದ್ದು ಹೇಳಿಕೊಳ್ತಾರೆ, ನಿರೂಪಕಿ ಸುಂದರಿ ಮಾತ್ರ ಜನರ ಸಮಸ್ಯೆಗಳನ್ನ ನಗು ನಗುತ್ತಲೇ ಕೇಳಿ , ಗುರೂಜಿಗೆ ಇನ್ನು ಜಾಸ್ತಿ ನಗುತ್ತಲೇ ಜನರ ಕಷ್ಟಗಳನ್ನು ವೈಭವೀಕರೆಸಿ ಹೇಳುತ್ತಾಳೆ. ಗುರೂಜಿ ಕೂಡ ಸಮಸ್ಯಗಳಿಗೆ ಉತ್ತರಿಸೋದ ನೋಡ್ಬೇಕು , ಬರಿ ಅಡ್ಡಗೋಡೆ ಮೇಲೆ ದೀಪ ಇಡೋಹಾಗೆ ಮಾತ್ ಆಡ್ತಾರೆ. ಒಬ್ಬ ಗುರೂಜಿಯಂತೂ ಕೈ ಅಲ್ಲಿ ಚೂಪಾದ ಈಟಿಯನ್ನು ಇಟ್ಕೊಂಡೇ ಕೂತಿರುತಾರೆ , ಅದ್ಯಾಕೋ ಗೊತ್ತಿಲ್ಲ. ಬಹುಷ್ಯ ಯಾರಾದರೂ ವಿಚಾರವಂತರು ಏನಾದರೂ ಕೇಳಿದರೆ ಅವರು ಅದರಿಂದ ಚುಚ್ಚೆ ಬಿಡುತ್ತಾರೇನೋ ! .ಈ ಚಾನೆಲ್ ಗಳು , ಈ ಜ್ಯೋತಿಷಿ ಗುರೂಜಿಗಳು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದಾರೆ ಎಂದರೆ ನಮಗೆ ನಿಜವಾಗಿಯೂ ಆಶ್ಚರ್ಯವಾಗುತ್ತೆ . ಕೆಲವು ಅಂಕಿ ಅಂಶಗಳ ಪ್ರಕಾರ ಇಂಥಹ ಕಾರ್ಯಕ್ರಮಗಳಿಗೆನೇ ಜಾಸ್ತಿ ವೀಕ್ಷಕರಿದ್ದಾರಂತೆ.

              ಈ ಟೀವಿ ಚಾನೆಲ್ಲುಗಳು " ಇನ್ನೇನು ಪ್ರಳಯ ಆಗೇ ಆಗುತ್ತೆ , ಆಗುವುದರಲ್ಲಿ ಸಂಶಯವೇ ಇಲ್ಲ. ಈ ಪ್ರಳಯ ಆದಾಗ ಏನೆಲ್ಲಾ ಆಗುತ್ತೆ ಅಂತ, ಉಚಿತವಾಗಿ ಸಿಕ್ಕ youtube ಮತ್ತೆ ಕೆಲವು ಇಂಗ್ಲಿಷ್ ಸಿನಿಮಾಗಳ vedio ತುಣುಕುಗಳನ್ನ ಬಳಸಿ, ಜನರಲ್ಲಿ ಭಯದ ಬೀಜಗಳನ್ನೇ ಬಿತ್ತಿದರು. ತಮಗೆ ಏನು ರೋಚಕ ವಿಷಯಗಳು ಇಲ್ಲವೆಂದಾಗ , ಈ ಪ್ರಳಯದ ಮೇಲೆ ಅವರು ಅನೇಕ ಚರ್ಚೆಗಳನ್ನೇ ಮಾಡಿದರು, ಅನೇಕ ಪ್ರಳಯ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡಿದರು. ಜ್ಯೋತಿಷಿಗಳನ್ನು ಕರೆಸಿ ಮುಂದಾಗುವುದನ್ನ ನಾವು ಕರಾರುವಕ್ಕಾಗಿ ಹೇಳ್ತಾ ಇದೀವಿ ಅಂತ ಜನರನ್ನು ನಂಬಿಸಿದರು. ಸ್ನೇಹಿತರೆ ನಿಜ ಹೇಳಬೇಕೆಂದರೆ ಇವರಿಗೆ ತಮ್ಮ ನ್ಯೂಸ್ ಚಾನೆಲ್ಗಳನ್ನು ಸದಾ ಚಟುವಟಿಕೆಯಲ್ಲಿಡುವ ಉದ್ದೇಶದಿಂದ , ಒಂದೊಷ್ಟು ದಿನ "ಈ ಪ್ರಳಯ ಆಗುತ್ತೆ " ಕಾರ್ಯಕ್ರಮ ಪ್ರಸಾರ ಮಾಡಿದರು , ಈಗ ಅವರೇ " ಪ್ರಳಯ ಆಗೋಲ್ಲ " ಅಂತ ಮತ್ತೆ ಕಾರ್ಯಕ್ರಮಗಳನ್ನು ಶುರು ಮಾಡಿದ್ದಾರೆ. ಆ ಜ್ಯೋತಿಶಿಗಲೋ ಹಾಗ "ಪ್ರಳಯ ಆದೆ ಆಗುತ್ತೆ " ಅಂತ ಹೇಳಿ " ಆ ಪೂಜೆ ಈ ಪೂಜೆ, ಆ ಶಾಂತಿ , ಆ ಹೋಮ ಮಾಡಿಸಿ" ಅಂತ ಜನರನ್ನು ಸುಲಿದು , ಈಗ "ಪ್ರಳಯ ಆಗೋಲ್ಲ , ನಾವು ಮಾಡಿರ್ತಕ್ಕಂಥ ಪೂಜೆಗಳಿಂದ ಭಗವಂತ ಶಾಂತಗೊಂಡು ನಮ್ಮನ್ನು ಕಾಯುತ್ತಾನೆ , ನೀವೇನು ಭಯ ಪಡಬೇಡಿ " ಎಂದು ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ.

             ಎಲ್ಲಿಯವರೆಗೂ ನಾವು ಈ ಟೀವಿಗಳಲ್ಲಿ ಬರೋದೆಲ್ಲ ಸತ್ಯ , ಈ ಜ್ಯೋತಿಷಿಗಳು ಹೇಳೋದೆಲ್ಲ ಸತ್ಯ ಅಂತ ನಂಬುತ್ತೇವೋ ಅಲ್ಲಿಯವರೆಗೂ ನಾವು ತಪ್ಪು ಕಲ್ಪನೆಗಳನ್ನು ಮಾಡಿಕೊಂತ , ಭಯದಲ್ಲಿ ಬದುಕುತ್ತೇವೆ. ಅವರು ತೋರಿಸೋದೆಲ್ಲ ನಿಜವಲ್ಲ. ಖಾವಿ ತೊಟ್ಟು ಹೇಳಿದರೆ ಅದು ನಿಜವೂ ಆಗುವುದಿಲ್ಲ.

ನಿಮಗಾಗಿ
ನಿರಂಜನ್