ನನ್ನಲೇ ಇರುವಳು ......
ಸ್ನೇಹಿತರೆ ,
ಇತ್ತೀಚಿಗೆ ನಾನು ತಿರುಪತಿ ಬೆಟ್ಟಕ್ಕೆ ಹೋಗಿದ್ದೆ ಶಾಂತಿಯನ್ನು ಹರಸಿ. ಕಷ್ಟ ಪಟ್ಟು, ಬೆಟ್ಟ ಏರಿ , ದೇವಾಲಯ ಸೇರಿ, ಸ್ನಾನ ಮಾಡಿ, ಮಡಿಯುಟ್ಟು, ಗೋವಿಂದ ಗೋವಿಂದ ಎಂದು ಆತನ ನಾಮ ಸ್ಮರಣೆ ಮಾಡುತ್ತಾ ,ಸರಧಿ ಸಾಲಿನಲ್ಲಿ ನಾವೂ ನಿಂತೆವು. ಜನರಲ್ಲಿ ಅದೇನೋ ಒಂದು ಭಕ್ತಿ , ಭಾವ , ಭಯ , ಆಸೆ ಜೊತೆಗೆ ಅವಸರವೂ ಇತ್ತು ದೇವರ ದರುಶನ ಪಡೆಯಲು. ಅಂತು-ಇಂತು ದೇವರ ಸನ್ನಿದಿ ಸಮೀಪಿಸಿತು. ನನಗೇನೋ ತವಕ , ದೇವರನ್ನು ಇನ್ನೇನು ನಾನೇ ನೋಡಿ ಬಿಡುತ್ತೇನೆ, ದರುಶನ ಆಗೇ ಬಿಟ್ಟಿತು ಎಂದು. ಆಗಿನ ಕಾಲದಲ್ಲಿ ಪಾಪ ಋಷಿ ಮುನಿಗಳು , ಅನೇಕ ಯೋಗಿಗಳು ವರ್ಷಗಟ್ಟಲೆ ತಪಸ್ಸು ಮಾಡಿದರೂ, ಹಗಲಿರುಳೆನ್ನದೆ ಪೂಜಿಸಿದರು ಸಿಗದ ಈತ ನಮಗೆ ೪ ಗಂಟೆ ಸರದಿಸಾಲಿನಲ್ಲಿ ಕಷ್ಟ ಪಟ್ಟು ಬಂದಿದ್ದಕ್ಕೆ ದರುಶನ ನೀಡಿದ. ನಿಜವಾಗಿಯೂ ತಿಮ್ಮಪ್ಪ ಭಕ್ತರ ಪಾಲಿನ ಬಂಧು. ಜನರಲ್ಲಿ ಈತನ ಮೇಲೆ ಅದೆಷ್ಟು ನಂಬಿಕೆ ಅಂದರೆ "ಈತ ಖಂಡಿತವಾಗಿಯೂ ನಮಗೆ ಬೇಗ ದರುಶನ ಕೊಟ್ಟೆ ಕೊಡುತ್ತಾನೆ" ಎಂದು ಮೊದಲೇ ಇಂತಿಷ್ಟು ಗಂಟೆಗೆ ನಾವು ವಾಪಾಸು ಹೋಗಬೇಕೆಂದು ಬಸ್ ಕೂಡ ಬುಕ್ ಮಾಡಿರುತ್ತೇವೆ. ಪಾಪ ಆಗಿನ ಕಾಲದ ಋಷಿಮುನಿಗಳು ಸುಮ್-ಸುಮ್ನೆ ವರ್ಷಗಟ್ಟಲೆ time waste ಮಾಡಿದ್ರು ಅಲ್ಲವಾ ??? .
ಹೀಗೆ ಮೊನ್ನೆ ಒಬ್ರು ಹೇಳ್ತಾ ಇದ್ರು " ನೋಡಿ ಸಾರ್ ಮೊನ್ನೆ ರಾತ್ರಿ ಇಲ್ಲಿ ೮.೩೦ ಕ್ಕೆ ಬೆಂಗಳೂರು ಬಿಟ್ವಿ, ರಾತ್ರಿ ನಮಗೆ ೩ ಗಂಟೆಗೆ ದೇವರ ದರುಶನ ಆಗೇ ಬಿಡ್ತು , ಅದೆಷ್ಟು ಜಲ್ದಿ ಅಂತೀರಾ , ನನಗೆ ನಂಬೋಕೆ ಸಾದ್ಯವಾಗಲಿಲ್ಲ " ಎಂದಾಗ , ಮತ್ತೊಬ್ಬ " ಎಲ್ಲ ನಿಮ್ಮ ಪುಣ್ಯಾ ಸಾರ್, ನೀವ್ ಮಾಡಿರೋ ಪುಣ್ಯದ ಫಲ" ಎಂದ. ಅದಕ್ಕೆ ಆತ "ಎಲ್ಲಿಯ ಪುಣ್ಯ ಮಾರಾಯ ಅದು ಪುಣ್ಯ ದ ಫಲ ಅಲ್ಲ... ನಮ್ಮ ಪ್ಯಾಕೇಜ್ ದರ್ಶನದ ಫಲ .... ಕಿತ್ತರು ಬೇಜಾನ್ ದುಡ್ಡ " ಎಂದಾಗ ಅಲ್ಲಿದ್ದ ನನಗೆ ನಗು ಬಂತು...
ಬರಿ ದುಡ್ಡಿದ್ದರೆ ಮಾತ್ರ ಅಲ್ಲಿ ದೇವರು ಕಾಣುತ್ತಾನೆ ಅಂತ ಅಲ್ಲ. ದುಡ್ಡು ಕೊಟ್ಟರೆ ಮಾತ್ರ ಬೇಗ ಕಾಣುತ್ತಾನೆ. ಇಲ್ಲದಿದ್ದರೆ ಅಷ್ಟೇ , ಕಾಯಬೇಕು , ತುಂಬಾ ಕಷ್ಟ ಪಡಬೇಕು.
ದೇವರೋಲಿಯುತ್ತಿದ್ದನಂತೆ
ತೋರಿದ್ದರೆ ಒಂದಿಷ್ಟು
ಪ್ರೀತಿ, ಭಕುತಿ.....
ಅದಕ್ಕೆ ವಿರುದ್ದವಾಗಿದೆ
ಈಗಿನ ನಮ್ಮ
ತಿರುಪತಿ!!!!
ದೇವಾಲಯದಲ್ಲಿ ನಾವು ಆತನ ದರುಶನಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದಾಗ ಎತ್ತ ನೋಡಿದರತ್ತ ನಮಗೆ ಕಾಣುತ್ತಿದ್ದದ್ದು ದೇವರ ಚಿತ್ರಗಳಲ್ಲ, ದೇವರ ಮಂತ್ರಗಳೂ ಅಲ್ಲ, ಕಾಣುತ್ತಿದ್ದದ್ದು " ಸರಗಳರಿದ್ದಾರೆ ಎಚ್ಚರಿಕೆ " ಎಂಬ ನಾಮಪಲಕಗಳು. ದೇವರು ನಮಗೆ ಭಕ್ತಿಯ ಜೊತೆಗೆ ಭಯವನ್ನು ಇಟ್ಟಿದ್ದಾನೆ ಎಂಬುದಕ್ಕೆ ಅದೇ ಸಾಕ್ಷಿ. ಕಳ್ಳರನ್ನು ಕೂಡ ಅವನು ಶಿಕ್ಷಿಸದೆ ಸಲಹುತ್ತಾನೆ ಎಂಬುದಕ್ಕೆ ಆ ಬೋರ್ಡ್ ಗಳೇ ನಿದರ್ಶನಗಳು. ಇದು ಬರೀ ಅದೊಂದೇ ದೇವಸ್ತಾನದನ ಕತೆ ಅಲ್ಲ ಎಲ್ಲ ಕಡೆಗಳಲ್ಲೂ ಅದು ಹೀಗೇನೆ. ದೇವಾಲಯದೊಳಗೆ ಪಾದ ಇಡುವುದಕ್ಕೂ ಮೊದಲು ಪಾದರಕ್ಷೆಗಳ ಭಯ. ದೇವಾಲಯದೊಳಗೆ ಸರ , ಪರ್ಸುಗಳ ಭಯ ನಮಗೆ ಇದ್ದೆ ಇರುತ್ತದೆ.
ದೇವಾಲಯಗಳಿಗೋದರೆ
ಕಳೆದೋಗುತ್ತಿತ್ತು ಪಾಪ,
ಸಿಗುತ್ತಿತ್ತು ಶ್ರೀರಕ್ಷೆ .....
ಈಗ
ದೇವಾಲಯಗಳಿಗೆ
ಹೋದರೆ ಕಳೆಯುವುದೊಂದೇ
ನಮ್ಮ ಪಾದರಕ್ಷೆ !!!
ಇತ್ತೀಚಿಗೆ ಈ ಕಳ್ಳತನಗಳು ಮನೆಗಳಲ್ಲಿ ಮಾತ್ರ ಆಗ್ತಾ ಇಲ್ಲ. ಯಾವುದೋ ನ್ಯೂಸ್ ಚಾನಲ್ನಲ್ಲಿ ತೋರಿಸುತ್ತಾ ಇದ್ದರು , ತಿರುಪತಿ ತಿಮ್ಮಪ್ಪನಿಗೆ ನೀಡಿದ ಕಾಣಿಕೆಯನ್ನು ಎಣಿಸುವ ಮಹಾ ಪುರುಷರೆ , ಭಕ್ತರು ಕೊಡೊ ಕಾಣಿಕೆಯನ್ನು ಕದಿಯುತ್ತಾರೆ. ಅವರನ್ನು ತಿಮ್ಮಪ್ಪನೆ ಅಲ್ಲಿ ವಂಶ ಪಾರಂಪರ್ಯವಾಗಿ ಸಾಕಿ ಸಲಹುತ್ತಿದ್ದಾನೆ ಎಂದು. ನಾವು ಮನೆಗಳಲ್ಲಿ ಅಮ್ಮ ದೇವರ ಮೀಸಲು ಅಂತ ಇಟ್ಟ ಒಂದೆರೆಡು ರುಪಾಯಿಗಳನ್ನೇ ಮುಟ್ಟಲು ಹೆದರುತ್ತೇವೆ. ಆದರೆ ಕೆಲವು ಭಕ್ತ ಮಹಾಶಯರು ದೇವರ ಹೃದಯ ಕದಿಯಿರೋ ಎಂದರೆ , ದೇವರಿಗೆ ಬಂಡ ಹಣ, ನಿಧಿ ಕದಿಯುತ್ತಾರೆ. ಕೆಲವೊಂದು ದೇವಾಲಯಗಳಲ್ಲಿ ದೇವರನ್ನೇ ಕದ್ದ ಅನೇಕ ಉದಾಹರಣೆಗಳಿವೆ .
ಯಮನಿಗೂ ಭಯವಾಗುತ್ತಿತ್ತಂತೆ
ನೋಡಿದರೆ ದೇವರ
ದಿವ್ಯ ಸನ್ನಿಧಿ....
ಈಗ ಕಳ್ಳ ಕಾಕರಿಗೂ
ಇಲ್ಲ ಭಯ, ಕದಿಯಲು
ದೇವರ ನಿಧಿ!!!
ಮುಗಿಸುವ ಮುನ್ನ , ಸ್ನೇಹಿತರೆ ನಾನೇನು ತಿರುಪತಿ ತಿಮ್ಮಪ್ಪನ ದ್ವೇಷಿಯಲ್ಲ , ಆದರೆ ಅಲ್ಲಿ ನಾವು ನೆಡೆದು ಕೊಳ್ಳುವ ರೀತಿ, ನನಗೆ ಸರಿ ಬರೋಲ್ಲ. ಅಲ್ಲಿ ಎಲ್ಲ ರೀತಿಯ ವ್ಯವಸ್ತೆಗಳಿವೆ, ಎಲ್ಲವು ಸರಿಯಿದೆ , ಆದರೆ ನಾವೇ ಯಾಕೋ ಸರಿಯಾಗಿ ಅಲ್ಲಿ ನಡೆದುಕೊಳ್ಳುವುದಿಲ್ಲ. ದೇವರ ಮೇಲೆ ನಮಗೆ ಭಕ್ತಿಗಿಂತ ಭಯ ಜಾಸ್ತಿಯಾಗಿದೆ. ಶಾಂತಿಗಾಗಿ , ಸಮಧಾನಕಾಗಿ ದೇವರ ದರುಶನಕ್ಕೆ ಹೋಗುತ್ತೇವೆ . ಆದರೆ ನಮಗೆ ಅಲ್ಲಿ ಸಿಗುವುದು ಅವಸರ , ಬೇಸರ ಮತ್ತು ಗಲಾಟೆಗಳು , ಇಲ್ಲ ಸಲ್ಲದ ಮಾತುಗಳು ಮಾತ್ರ. ಶಾಂತಿ , ಸಮಾಧಾನಗಳನ್ನು ನಾವು ಹುಡುಕಿಕೊಂಡು ಹೋಗಬೇಕೆ ? ಅವು ದೇವರ ವಿಗ್ರಹ ನೋಡಿದರೆ ನಮಗೆ ಸಿಕ್ಕು ಬಿಡುತ್ತವೆಯೇ ?? ಇವು ಸಿಕ್ಕಿದ ಮೇಲೆಯೇ ನಮಗೆ ಸಂತ್ರುಪ್ತಿದೊರೆಯುತ್ತದೆಯೇ ???... ಇದಕ್ಕೆ ವಿರುದ್ದವಾಗಿ ನಾನು ನಂಬಿರುವ ತತ್ವವೆಂದರೆ , ನಾವೆಲ್ಲಿರುವೆವೋ ಅಲ್ಲಿಯೇ ಶಾಂತಿ ಸಮಾಧಾನಗಳನ್ನು ತಂದುಕೊಳ್ಳಬೇಕು. ಶಾಂತಿ ಮೊದಲು ನಮ್ಮ ಮನ , ಮನೆಯಲಿದ್ದರೆ ಎಲ್ಲ ಕಡೆಯೂ ಅದು ನಮಗೆ ಕಾಣುತ್ತದೆ. ನಮಗೆ ಮನೆಯಲ್ಲಿ ಸಿಗುವ ಶಾಂತಿಯೇ ನಿಜವಾದ ಶಾಂತಿ , ಹೊರಗಡೆ ದೊರೆಯುವುದು ಅದರ ನೆರಳು ಮಾತ್ರ.
ಕೆಲವರೋಗುವರು
ದೇವಾಲಯಕ್ಕೆ
ಬೇಕೆಂದು ಆರತಿ ..
ಕೆಲವರೋಗುವರು
ದೇವಾಲಯಕ್ಕೆ
ಬೇಕೆಂದು ಪ್ರಸಾದ ..
ನಾ ಇವರಾಗೆ ಅಲ್ಲ ,
ದೇವಾಲಯಕ್ಕೂ ಹೋಗೋಲ್ಲ
ಏಕೆಂದರೆ
ನನ್ನ ಮನೆಯಲ್ಲೇ ಇರುವಳು ನನ್ನ ಶಾಂತಿ !!!
ನಿಮಗಾಗಿ
ನಿರಂಜನ್
Nammalle iruvudu preeti mattu shanti. Eradu devara roopagale.. nice message
ಪ್ರತ್ಯುತ್ತರಅಳಿಸಿ