ಬುಧವಾರ, ಡಿಸೆಂಬರ್ 19, 2012

ಪ್ರಳಯ


                                               ಪ್ರಳಯ ಆಗೊದಿಲ್ರಿ  !

ಮೊನ್ನೆ ನಮ್ಮ ಒಬ್ಬ ಅತ್ತೆ ಮನೆಗೆ ಹೋಗಿದ್ದೆ, ನಮ್ಮ ಅತ್ತೆಯವರ ಅತ್ತೆಯವರನ್ನು ಬೇಟಿ ಮಾಡಿದೆ. ಅವರು ಸುಮಾರು 70 ವರ್ಷದ ವೃದ್ದರು, ಯಾವುದೋ ಒಂದು ಬಾರಿ ಚಿಂತೆಯಲ್ಲಿದ್ದರು. ನಾವು ಹೋದಮೇಲೆ ನಮ್ಮನ್ನು ನೋಡಿದ ತಕ್ಷಣವೇ ಅವರ ಮುಖ ಅರಳಿದಂತೆ ಕಂಡರೂ ಅವರಲ್ಲಿ ಏನೋ ಭಯ ಮತ್ತು ದುಃಖ ಆವರಿಸಿತ್ತು. ವಯೋಸಹಜವಾದ ನಡುಕ ದ್ವನಿಯಲ್ಲಿ ಅವರು "ಸದ್ಯ ನೀವ್ ಬಂದ್ರಿ ಬಿಡಪ್ಪ, ನಿಮ್ಮನ್ನ ನೋಡಿದ್ದು ತುಂಬಾ ಚೆನ್ನಾಗಾಯಿತು , ನಿಮ್ಮನ್ನೇನು ನೋಡ್ತಿನೋ ಇಲ್ಲೋ ಅನ್ನೋ ಹಾಗೆ ಆಗಿತ್ತು ", ಇದೇನಪ್ಪ ಅಜ್ಜಿ ಹೀಗೆ ಮಾತಾಡುತ್ತೆ ಅಂತ ಹೌಹಾರಿದ ನಾನು, " ಏನಜ್ಜಿ ಏನ್ ಆಯಿತು ಯಾಕೆ ಹೀಗೆ ಮಾತ್ ಆಡ್ತಾ ಇದ್ದೀಯ ? " ಎಂದಾಗ , ಅಜ್ಜಿ " ಅಯ್ಯೋ ಮಾರಾಯ ನಿಂಗೆ ಗೊತ್ತಿಲ್ಲೇನಪ್ಪ ??? ಈ ತಿಂಗಳು ಅದೇನೋ ಪ್ರಳಯ ಆಗುತ್ತೆ ಅಂತೆ , ನಾವೆಲ್ಲಾ ಸತ್ತೆ ಹೋಗ್ತಿವಂತೆ ???" .
            " ಅಯ್ಯೋ ಅಜ್ಜಿ ಅದೆಲ್ಲ ಸುಳ್ಳು , ಏನು ಆಗೊಲ್ಲಜ್ಜಿ . ಭೂಮಿ ಇನ್ನು ಚಿಕ್ಕ ವಯಸ್ಸಿನದು, ಅದಕ್ಕೆ ಇನ್ನು ವಯಸ್ಸಾಗಿಲ್ಲ. ನಮ್ಮ ಭೂಮಿಗೆ ಸದ್ಯಕ್ಕೆ ಏನು ಆಗೋಲ್ಲ. ಇವೆಲ್ಲ ಕಥೆಗಳು ಕಣಜ್ಜಿ . ಜಾಸ್ತಿ ಯೋಚಿಸಬೇಡ , ಏನೇನೂ ಆಗೋಲ್ಲ , ಆರಾಮಾಗಿ ಇದ್ಬಿಡು" ಅಂತ ನಾ ಸಮಾಧಾನ ಪಡಿಸಲು ಕೆಲವು ಮಾತುಗಳನ್ನ ಹೇಳಿದೆ.

            "ಅಲ್ಲಪ್ಪ ಜನ ದಿನ ಮಾತಾಡ್ತಾರೆ ಈ Tv ಗೆಲ್ಲ ಇದರ ಬಗ್ಗೆ , ಅವ್ರು ಹೇಳೋದು ಸುಳ್ಳು ಅಂತಿಯಾ ?? , ಅವರೆಲ್ಲ ದೊಡ್ಡ ಜನ ಕಣಪ್ಪ , ಪ್ರಳಯ ಆಗೇ ಆಗುತ್ತೆ " ಅಂತ ಅಜ್ಜಿ ಖಂಡಿತವಾಗಿ ನಂಬೆ ಬಿಟ್ಟಿದ್ದರು .

           "ನಮ್ದೇನು ಬಿಡಪ್ಪ , ಪ್ರಳಯ ಆಗ್ಲಿ ಬಿಡ್ಲಿ ಹೋಗಲೇ ಬೇಕಿತ್ತು ,ಹೋಗ್ತಿವಿ , ನನಗೆ ನನ್ನ ಮಕ್ಕಳು, ಮೊಮ್ಮಕ್ಕಳದೆ ಚಿಂತೆ ಕಣಪ್ಪ " ಅಂತ ನಿಜವಾದ ದುಃಖದಲ್ಲೇ ಹೇಳಿದ ಅಜ್ಜಿ ಗೆ " ಇಲ್ಲ ಅಜ್ಜಿ ಏನು ಯೋಚಿಸಬೇಡ, ಏನೇನು ಆಗೋಲ್ಲ " ಎಂದು ಹೇಳಿದರು, ಅಜ್ಜಿ " ಅಲ್ಲಪ್ಪ ನಾವೇನೋ ಮಕ್ಕಳು ಮರಿ ಕಂಡ್ವಿ , ಮಂತ್ಯಾನ ಮಠ ಅಂತ ಸವೆದ್ವಿ , ಆದ್ರೆ ನೀವಿನ್ನು ಚಿಕ್ಕವರು , ಮಧುವೆ ಇಲ್ಲ ಮುಂಜಿನು ಇಲ್ಲ , ಅದೆಂಗೆ ಸಮಾಧಾನ ತಂದುಕೊಳನಪ್ಪ " ಎಂದಾಗ ಸ್ವಲ್ಪ ನಗು ಬಂತಾದರೂ ಈ ಪ್ರಳಯ ಎಂಬ ಭಯ ಬಿತ್ತಿದೊರ ಬಗ್ಗೆ ಸಿಟ್ಟು ಬಂತು.

            ಸ್ನೇಹಿತರೆ, ಈ "ಪ್ರಳಯ ಆಗುತ್ತೆ, ಹಾಗೆ ಆಗುತ್ತೆ " ಎಂಬ ಊಹ-ಪೋಹಗಳ ಸುದ್ದಿ ಎಲ್ಲೆಡೆ ಹಬ್ಬಿದೆ ಎಂದು ನನಗೆ ಗೊತ್ತಿತ್ತು. ಆದರೆ ಈ ಮಟ್ಟಿಗೆ ಅದು ಜನರ ಮೇಲೆ ಪ್ರಭಾವ ಬೀರಿದೆ ಎಂದು ತಿಳಿದಿರಲಿಲ್ಲ. ಈ ಸುದ್ದಿಯನ್ನ ಹಬ್ಬಿಸಿದ ಕೀರ್ತಿ ಮಾತ್ರ ಈ ಕನ್ನಡ ನ್ಯೂಸ್ ಚಾನೆಲ್ಗಳಿಗೆ ಮಾತ್ರ ಸಲ್ಲಲೇ ಬೇಕು.

             ಹೀಗೆ ಮಾತಾಡುವಾಗ ಅಜ್ಜಿಗೊಂದು ಪ್ರಶ್ನೆ ಕೇಳಿದೆ , "ಅಜ್ಜಿ ಈ ಪ್ರಳಯ ಆಗುತ್ತೆ ಅಂದ್ರೆಲ್ಲ ಅದನ್ನ ಯಾರು ಹೇಳಿದ್ರು ?? " ಅಜ್ಜಿ ಥಟ್ ಅಂತ , ತಮ್ಮ ಮಕ್ಕಳ ಮೊಮ್ಮಕ್ಕಳ ಹೆಸರನ್ನು ಈ ರೀತಿ ಸರಾಗವಾಗಿ ಹೇಳುತ್ತೋ ಇಲ್ಲವೋ ಗೊತ್ತಿಲ್ಲ , ಆದ್ರೆ ಒಂದು ಎಂಟು-ಹತ್ತು ಹೆಸರುಗಳನ್ನು ಮಾತ್ರ ಪಟ ಪಟ ಹೇಳಿತು. " ಇದೇನಪ್ಪ ಅಜ್ಜಿ ಈ ರೀತಿ ಹೆಸರುಗಳನ್ನ ನೆನಪಿಟ್ಟುಕೊಂಡು ಹೇಳುತ್ತೆ " ಅಂತ ಅಂದುಕೊಂಡೆ. ಅಜ್ಜಿ ಹೇಳಿದೆ ಹೆಸರುಗಳು ಯಾರದು ಗೊತ್ತೇ ?? ಅಜ್ಜಿ ಹೇಳಿದ್ದು ಬರಿ ನಮ್ಮ ಕನ್ನಡ ನ್ಯೂಸ್ ಚಾನೆಲ್ ಗಳ ಮತ್ತು ಅದರಲ್ಲಿ ಬರುವ ಎಲ್ಲಾ ಜೋತಿಷಿಗಳು !! .

             ನಿಜ, ಈ ನ್ಯೂಸ್ ಚನ್ನೆಲ್‍ಗಳನ್ನ ನೀವು ಒಂದರ್ದ ಗಂಟೆ ಕೂತು ನೋಡಿದ್ರೆ ಸಾಕು ನಿಮಗೂ ಅರ್ಥಆಗುತ್ತೆ, ಅವು ಹೆಸರಿಗೆ ಮಾತ್ರ ನ್ಯೂಸ್ ಚನ್ನೆಲ್‍ಗಳು. ಆದ್ರೆ ಅವು ಪ್ರಸಾರ ಮಾಡುವುದು ಮಾತ್ರ ಬರಿ ಜ್ಯೋತಿಷ್ಯ ಕಾರ್ಯಕ್ರಮಗಳು, ಬಿಟ್ಟರೆ ಸಿನೆಮಾ ಕಾರ್ಯಕ್ರಮಗಳು. ಬೆಳಿಗ್ಗೆ ಟೀವೀ ಹಚ್ಚಿದರೆ ಸಾಕು ಯಾವ ಚಾನೆಲ್ ನೋಡಿದ್ರೂ ಅಲ್ಲಿ ಬರಿ ಈ ಜ್ಯೋತಿಷಿಗಳದ್ದೆ ಖಾರುಬಾರು. ಖಾವಿ ಬಟ್ಟೆಗಳು, ಮೈಕೈಗೆಲ್ಲ ರುದ್ರಾಕ್ಷಿ ಮಾಲೆಗಳು, ಎಲ್ಲೂ ಜಾಗ ಬಿಡದೆ ಹಚ್ಚಿದ ವಿಭೂತಿ, ಮುಂದೊಂದು ಲ್ಯಾಪ್-ಟಾಪ್, ಜೊತೆಗೊಬ್ಬಳು ರೇಷ್ಮೆ ಸೀರೆ ಧರಿಸಿ ನಗುಮುಖದ ಸುಂದರಿ ಇದು ಎಲ್ಲಾ ಚಾನೆಲ್‌ಗಳಲ್ಲೂ ಬೆಳಿಗ್ಗೆ 7 ರಿಂದ ಹತ್ತರ ತನಕ ನಮಗೆ ಸಿಗುವ ದೃಶ್ಯಗಳು.

              ಈ ಭಾರಿ ಗುರೂಜಿಗಳ ಪಕ್ಕಕೆ ಕೂತ ಆ ಹುಡುಗಿಯರು " ನಮ್ಮ ಗುರೂಜಿಗಳು " ಎಂದು ನಗುಮುಖ ಹೊತ್ತು, ಬಾಯಿ ತುಬಾ ಕರೆಯುತ್ತಾರೆ. ಜನರೋ ಅವರಿಗೆ ತಮ್ಮೆಲ್ಲ ಕಷ್ಟಗಳನ್ನು ದುಃಖದಿಂದ ಬಿದ್ದು ಬಿದ್ದು ಹೇಳಿಕೊಳ್ತಾರೆ, ನಿರೂಪಕಿ ಸುಂದರಿ ಮಾತ್ರ ಜನರ ಸಮಸ್ಯೆಗಳನ್ನ ನಗು ನಗುತ್ತಲೇ ಕೇಳಿ , ಗುರೂಜಿಗೆ ಇನ್ನು ಜಾಸ್ತಿ ನಗುತ್ತಲೇ ಜನರ ಕಷ್ಟಗಳನ್ನು ವೈಭವೀಕರೆಸಿ ಹೇಳುತ್ತಾಳೆ. ಗುರೂಜಿ ಕೂಡ ಸಮಸ್ಯಗಳಿಗೆ ಉತ್ತರಿಸೋದ ನೋಡ್ಬೇಕು , ಬರಿ ಅಡ್ಡಗೋಡೆ ಮೇಲೆ ದೀಪ ಇಡೋಹಾಗೆ ಮಾತ್ ಆಡ್ತಾರೆ. ಒಬ್ಬ ಗುರೂಜಿಯಂತೂ ಕೈ ಅಲ್ಲಿ ಚೂಪಾದ ಈಟಿಯನ್ನು ಇಟ್ಕೊಂಡೇ ಕೂತಿರುತಾರೆ , ಅದ್ಯಾಕೋ ಗೊತ್ತಿಲ್ಲ. ಬಹುಷ್ಯ ಯಾರಾದರೂ ವಿಚಾರವಂತರು ಏನಾದರೂ ಕೇಳಿದರೆ ಅವರು ಅದರಿಂದ ಚುಚ್ಚೆ ಬಿಡುತ್ತಾರೇನೋ ! .ಈ ಚಾನೆಲ್ ಗಳು , ಈ ಜ್ಯೋತಿಷಿ ಗುರೂಜಿಗಳು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದಾರೆ ಎಂದರೆ ನಮಗೆ ನಿಜವಾಗಿಯೂ ಆಶ್ಚರ್ಯವಾಗುತ್ತೆ . ಕೆಲವು ಅಂಕಿ ಅಂಶಗಳ ಪ್ರಕಾರ ಇಂಥಹ ಕಾರ್ಯಕ್ರಮಗಳಿಗೆನೇ ಜಾಸ್ತಿ ವೀಕ್ಷಕರಿದ್ದಾರಂತೆ.

              ಈ ಟೀವಿ ಚಾನೆಲ್ಲುಗಳು " ಇನ್ನೇನು ಪ್ರಳಯ ಆಗೇ ಆಗುತ್ತೆ , ಆಗುವುದರಲ್ಲಿ ಸಂಶಯವೇ ಇಲ್ಲ. ಈ ಪ್ರಳಯ ಆದಾಗ ಏನೆಲ್ಲಾ ಆಗುತ್ತೆ ಅಂತ, ಉಚಿತವಾಗಿ ಸಿಕ್ಕ youtube ಮತ್ತೆ ಕೆಲವು ಇಂಗ್ಲಿಷ್ ಸಿನಿಮಾಗಳ vedio ತುಣುಕುಗಳನ್ನ ಬಳಸಿ, ಜನರಲ್ಲಿ ಭಯದ ಬೀಜಗಳನ್ನೇ ಬಿತ್ತಿದರು. ತಮಗೆ ಏನು ರೋಚಕ ವಿಷಯಗಳು ಇಲ್ಲವೆಂದಾಗ , ಈ ಪ್ರಳಯದ ಮೇಲೆ ಅವರು ಅನೇಕ ಚರ್ಚೆಗಳನ್ನೇ ಮಾಡಿದರು, ಅನೇಕ ಪ್ರಳಯ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡಿದರು. ಜ್ಯೋತಿಷಿಗಳನ್ನು ಕರೆಸಿ ಮುಂದಾಗುವುದನ್ನ ನಾವು ಕರಾರುವಕ್ಕಾಗಿ ಹೇಳ್ತಾ ಇದೀವಿ ಅಂತ ಜನರನ್ನು ನಂಬಿಸಿದರು. ಸ್ನೇಹಿತರೆ ನಿಜ ಹೇಳಬೇಕೆಂದರೆ ಇವರಿಗೆ ತಮ್ಮ ನ್ಯೂಸ್ ಚಾನೆಲ್ಗಳನ್ನು ಸದಾ ಚಟುವಟಿಕೆಯಲ್ಲಿಡುವ ಉದ್ದೇಶದಿಂದ , ಒಂದೊಷ್ಟು ದಿನ "ಈ ಪ್ರಳಯ ಆಗುತ್ತೆ " ಕಾರ್ಯಕ್ರಮ ಪ್ರಸಾರ ಮಾಡಿದರು , ಈಗ ಅವರೇ " ಪ್ರಳಯ ಆಗೋಲ್ಲ " ಅಂತ ಮತ್ತೆ ಕಾರ್ಯಕ್ರಮಗಳನ್ನು ಶುರು ಮಾಡಿದ್ದಾರೆ. ಆ ಜ್ಯೋತಿಶಿಗಲೋ ಹಾಗ "ಪ್ರಳಯ ಆದೆ ಆಗುತ್ತೆ " ಅಂತ ಹೇಳಿ " ಆ ಪೂಜೆ ಈ ಪೂಜೆ, ಆ ಶಾಂತಿ , ಆ ಹೋಮ ಮಾಡಿಸಿ" ಅಂತ ಜನರನ್ನು ಸುಲಿದು , ಈಗ "ಪ್ರಳಯ ಆಗೋಲ್ಲ , ನಾವು ಮಾಡಿರ್ತಕ್ಕಂಥ ಪೂಜೆಗಳಿಂದ ಭಗವಂತ ಶಾಂತಗೊಂಡು ನಮ್ಮನ್ನು ಕಾಯುತ್ತಾನೆ , ನೀವೇನು ಭಯ ಪಡಬೇಡಿ " ಎಂದು ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ.

             ಎಲ್ಲಿಯವರೆಗೂ ನಾವು ಈ ಟೀವಿಗಳಲ್ಲಿ ಬರೋದೆಲ್ಲ ಸತ್ಯ , ಈ ಜ್ಯೋತಿಷಿಗಳು ಹೇಳೋದೆಲ್ಲ ಸತ್ಯ ಅಂತ ನಂಬುತ್ತೇವೋ ಅಲ್ಲಿಯವರೆಗೂ ನಾವು ತಪ್ಪು ಕಲ್ಪನೆಗಳನ್ನು ಮಾಡಿಕೊಂತ , ಭಯದಲ್ಲಿ ಬದುಕುತ್ತೇವೆ. ಅವರು ತೋರಿಸೋದೆಲ್ಲ ನಿಜವಲ್ಲ. ಖಾವಿ ತೊಟ್ಟು ಹೇಳಿದರೆ ಅದು ನಿಜವೂ ಆಗುವುದಿಲ್ಲ.

ನಿಮಗಾಗಿ
ನಿರಂಜನ್

1 ಕಾಮೆಂಟ್‌:

  1. sooper write up!!! remember that fat gurooji.. who would have a weapon in his hand and always talked about ladies wearing nighties... so funny. i suppose he was kicked out of media he he he.... good write up buddy!! keep going... :)

    ಪ್ರತ್ಯುತ್ತರಅಳಿಸಿ