ಮಂಗಳವಾರ, ಡಿಸೆಂಬರ್ 25, 2012

ಸ್ಪೂರ್ತಿ


                                     ನಿಜವಾದ ಸ್ಪೂರ್ತಿ...               
          

ಹೀಗೆ  ಕೆಲವು ದಿನಗಳಿಂದ ತಲೆಯಲ್ಲಿ ಒಂದು ಹುಳ  ಬಿಟ್ಕೊಂಡು  , ಏನಾದ್ರೂ ಮಾಡಿ  ಆ ಹುಳವನ್ನು  ಸಾಕಿ , ಚೆನ್ನಾಗಿ ಬೆಳೆಸಿ, ದೊಡ್ಡದ್ ಮಾಡಿ , ಆ ಹುಳಕ್ಕೆ ಒಂದು ಒಳ್ಳೆ ಗಂಡು ನೋಡಿ ಮಧುವೆ  ಮಾಡ್ಸಿ , ಅದುಕ್ಕೆ ಹುಟ್ಟೋ ಮರಿಗಳ ಜೊತೆ   ಕಾಲ ಕಳಿಬೇಕು. ಆ ಮರಿ ಹುಳಗಳನ್ನೆಲ್ಲ ಒಮ್ಮೆಗೆ ನನ್ನ ತಲೆಯಲ್ಲಿ ಬಿಟ್ಕೊಂಡ್ರೆ  ಲೈಫ್ ಅಲ್ಲಿ ಎಷ್ಟೊಂದು ಮಜಾ ಇರುತ್ತೆ , ಎಷ್ಟು ಥ್ರಿಲ್ಲಿಂಗ್ ಆಗಿ ಇರುತ್ತೆ ಎನ್ನುವ ಯೋಚನಾಲಹರಿಯಲ್ಲೇ ತೇಲುತಿದ್ದೆ.  ಅದಕ್ಕೆ ಸರಿಯಾಗಿಯೇ  ಒಂದು ದಿನ ಯಾಕೋ ತುಬಾ ಬೇಜಾರ್ ಕೂಡ ಆಗಿ , ಈ  ಆಫೀಸ್ ಕೆಲಸಾನೂ ಸಾಕಾಗಿತ್ತು. ನನ್ನದೇ ಏನಾದರು ಸ್ವಂತ ಐಡಿಯಾ ಮೇಲೆ ಸ್ವಲ್ಪ ದಿನ ಕೆಲಸ ಮಾಡ್ಬೇಕು. ಆ ಕೆಲಸದೆಲ್ಲೇ ನಾನು ನನ್ನನ್ನು ಕಾಣಬೇಕು. ನನಗೆ ನಾನೇ ಅಲ್ಲಿ ಎಲ್ಲ ಆಗಿರಬೇಕೆಂದು ಯೋಚಿಸತೊಡಗಿದ್ದೆ. ಇದರ ಜೊತೆಗೆ ನನಗೆ ಅನ್ನಿಸಿದ ಹಾಗೆ ನಾ ಇರಬೇಕು, ಮನಸ್ಸಿಗೆ ಖುಷಿ ಸಿಗೋ ಜಾಗಗಳಿಗೆ ಹೋಗ್ಬೇಕು. ಸಾಕೊಷ್ಟು ಪುಸ್ತಕಗಳನ್ನ ಓದಬೇಕು, ನನ್ನೆಲ್ಲ ಸ್ನೇಹಿತರ ಜೊತೆ ಎಲ್ಲೆಲ್ಲಿಗೆ  ಹೋಗ್ಬೇಕು ಅಂತ ಅನ್ಸುತ್ತೋ  ಅಲ್ಲೆಲ್ಲ ಅಡ್ಡಾಡಿ ಸ್ವಲ್ಪ ದಿನ ಆರಾಮಾಗಿ ಇರ್ಬೇಕು ಅಂತೆಲ್ಲ ನನ್ನ ಮನಸ್ಸು ಬಹುವಾಗಿ ಬಯಸುತ್ತಿತ್ತು. ನನ್ನ ಆಫೀಸ್ ಕೆಲಸ ಮಾಡಿ ಮಾಡಿ ಮನಸ್ಸಿಗೆ ಜಡ್ಡು ಹಿಡಿದು ನನಗೆ ಈ ರೀತಿ ಅನ್ನಿಸುತ್ತಿತ್ತೇನೋ ನನಗೆ ಇನ್ನೂ  ಸರಿಯಾಗಿ ಅರ್ಥ ಆಗಿಲ್ಲ. ನಾ ಇದುವರೆಗೂ ಮಾಡಿದ್ದು ಏನು ಅಲ್ಲ, ಇನ್ನೂ ಮೇಲಾದರೂ ನನಗಿಷ್ಟವಾದದ್ದನ್ನು ನಾ ಮಾಡಲೇಬೇಕು ಎಂಬ ಬಯಕೆ ಮನಸ್ಸಿನಲ್ಲಿ ಬೇರೂರಿತ್ತು. ಅಂದರೆ ಇಷ್ಟು ದಿನ ನಾ ಏನೇನು ಮಾಡಬೇಕು ಅಂತೆಲ್ಲಾ ಬರೀ ಅಂದುಕೊಂಡಿದ್ದೆನೋ ಆ ಆಸೆಗಳೆಲ್ಲ ಒಟ್ಟಿಗೆ ಸೇರಿ ನನ್ನನು ತುಂಬಾ  ಕುಟುಕುತ್ತಿದ್ದವು. ಆ ಕ್ಷಣಕ್ಕೆ ನನ್ನ ಮನಸ್ಸು ವೃತ್ತಿಗಿಂತ  ನನ್ನ ಪ್ರವೃತ್ತಿಗಳ ಕಡೆಗೆ  ಹೆಚ್ಚು ವಾಲುತ್ತಿತ್ತು.

            ಇಷ್ಟೆಲ್ಲಾ ಯೋಚನೆಗಳು ಬಂದಾಗ ಸಮಯ ಇನ್ನು ಹೆನ್ನೆರೆಡು ಆಗಿತ್ತು. ಮಧ್ಯಾನದ ಊಟವೂ ಆ ದಿನ ನನಗೆ  ಬೇಡವಾಗಿತ್ತು.  ಮಾಡುತ್ತಿದ್ದ ಕೆಲಸವು ಸಾಕಾಗಿ, ಯೋಚನೆಯಲ್ಲೇ ಒಂದು ದೊಡ್ಡ ಕಪ್ ಟೀ ಹೀರಿ, cafetaria ದ ಕಿಟಕಿಯಿಂದ  ಹೊರಗೆ ನೋಡಿದಾಗ ,  ಸುತ್ತಲು  ಕಾಣುತ್ತಿದ್ದ ಕಾಂಕ್ರೀಟು ಕಟ್ಟಡಗಳು ನೀರಸವೆನಿಸಿದವು. ಹಾಗ ಆ ಸಮಯಕ್ಕೆ ನನಗೆ ಸ್ವಲ್ಪ ಆಫೀಸ್ ಕೆಲಸದಿಂದ ವಿಶ್ರಾಂತಿಯ ಅಗತ್ಯವಿದೆ ಎಂದೆನಿಸಿತು. ಅದ್ದರಿಂದ ಅಲ್ಲಿಂದ ನೇರವಾಗಿ  ಹೋರಟ ನಾನು ಮನೆಗೆ ತೆರಳಿ, ಸ್ವಲ್ಪ ಹೊತ್ತು ಎಲ್ಲಿಗಾದರು ಹೋಗಿ ಬರಲೆಂದು ನಿರ್ಧರಿಸಿದೆ. ನನಗೆ ಇಷ್ಟವಾದ ಜಾಗ ಇಲ್ಲಿ ಯಾವುದಿದೆ ? ಎಂದು ಯೋಚಿಸುವ ಮೊದಲೇ ನನಗೆ ನೆನಪಾದದ್ದು GKVK (ಗಾಂದಿ ಕೃಷಿ ವಿಶ್ವವಿದ್ಯಾಲಯ). ನನಗೆ ಸಾಕೆನ್ನುವೊಷ್ಟು ಕಾಲ ಅಲ್ಲಿ ಕಳಿಬೇಕು, ಹಿತವಾಗುವೊಷ್ಟು ವಾತಾವರಣವನ್ನು ಅಲ್ಲಿ ಸವಿಯಬೇಕು ಎಂದು ತವಕಿಸುತ್ತ  ಆ ಕೃಷಿ ವಿದ್ಯಾಲಯದ ಕಡೆ ಪ್ರಯಾಣ ಬೆಳೆಸಿದೆ. ಸ್ನೇಹಿತರೆ ನಾನು ಅಲ್ಲಿ ಹೋಗಿ ಏನೇನು ಮಾಡಿದೆ ಅಂತ ಹೇಳುವ ಮೊದಲು , ಈ  GKVK ಬಗ್ಗೆ  ನಿಮಗೆ ಸ್ವಲ್ಪ ಹೇಳಲೇ ಬೇಕು.


          ಈ ೧೮೯೯ ರಲ್ಲಿ ಪ್ರಾರಂಭವಾಗಿ, ಹಂತ ಹಂತವಾಗಿ ಬೆಳೆದು ನಿಂತಿದೆ ಈ ವಿಶ್ವವಿದ್ಯಾಲಯ. ಎತ್ತ ನೋಡಿದರತ್ತ ಹಸಿರುಹೊತ್ತ ಮರಗಿಡಗಳು, ಎಷ್ಟೋ ಬಗೆಯ ಹಣ್ಣಿನ ತೋಟಗಳು, ಹೂಗಿಡಗಳು , ವಿಶಾಲವಾದ ಹೊಲಗಳು , ಜನರಿಗೆ ನಡೆಯಲು ಅಷ್ಟೇ ವಿಶಾಲವಾದ ದಾರಿಗಳು, ಬಿದಿರು , ತೇಗ, ಶ್ರೀಗಂಧ , ಬೇವು , ಮಾವು ,ಅರಳೆ , ಅಶ್ವಥ, ದೊಡ್ದಾಲ   ಇನ್ನು ಅನೇಕ ನೋಡಿರದ, ಕೇಳರಿಯದ  ಹೊಸ ಬಗೆಯ ಕಾಡು ಮರಗಳು ಇಲ್ಲಿ ನಮಗೆ ನೋಡ ಸಿಗುತ್ತವೆ.  ಅತಿಯಾದ ಜನ ಸಂದಣಿ ಇಲ್ಲದ ಈ ಜಾಗದಲ್ಲಿ, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲದೆ ಬೇರೆ ಯಾರು ಇರುವುದಿಲ್ಲ. GKVK ಬೆಂಗಳೂರಿನಲ್ಲೇ ಇದ್ದರು ಅದು ಬೆಂಗಳೂರಿನಂತಲ್ಲ. ಸಾಕಷ್ಟು ಮರಗಿಡಗಳಿರುವ ಈ ಜಾಗದಲ್ಲಿ ನಾವು ಅನೇಕ ಬಗೆಯ ಪಕ್ಷಿಗಳು ನೋಡ ಬಹುದು, ಅವುಗಳ ಕೂಗು ಕೇಳುವುದಕ್ಕೊಂತು ಇನ್ನೂ ಖುಷಿ ಆಗುತ್ತದೆ. ಬೆಂಗಳೂರಿನಲ್ಲಿ ಈ ತರಹದ ಜಾಗವೂ ಇದೆ ಎಂದು ನಮಗೆ ಆಶ್ಚರ್ಯ ಆಗುವುದೇ ಇರುವುದಿಲ್ಲ , ನಾವು ಒಮ್ಮೆ ಇಲ್ಲಿಗೆ ಬೇಟಿ ನೀಡಿದರೆ.
 
           ನನಗೂ ಮತ್ತು ಈ ಜಾಗಕ್ಕೂ ಬುಹು ದಿನದಿಂದಲೂ  ಒಂದು ರೀತಿಯಾದ ನಂಟು ಇದೆ. ನಾನು ಈಗಲೂ  ವಾರಕ್ಕೆ ಕನಿಷ್ಠ ಮೂರು-ನಾಲ್ಕು ಭಾರಿ ಬಂದು ಹೋಗುವ ಜಾಗ ಇದು. ಶನಿವಾರ ಮತ್ತೆ ಭಾನುವಾರ ಬೆಳಿಗ್ಗೆ   ಜಾಗಿಂಗ್ ಗೆ GKVK ಗೆ ಬರದಿದ್ದರೆ ನನಗೆ ಸಮಾಧಾನವಿರುವುದಿಲ್ಲ. ನನಗೆ ತುಂಬಾ ಬೇಜಾರ್ ಆದಾಗಲೂ,  ಸಕತ್ ಖುಶಿ ಆದಾಗಲೂ ನಾನು ಇಲ್ಲಿಗೆ ಬರುವುದುಂಟು. ಇಲ್ಲಿಗೆ ಯಾವಾಗ ಬಂದರೂ ಒಂದು ದೊಡ್ಡ ವಾಕ್ ಮಾಡಿ , ಇಲ್ಲಿರುವ  ಪ್ರಕೃತಿಯ ಹಿತವನ್ನೀರಿ, ಹಕ್ಕಿ ಪಕ್ಕಿಗಳ ಜೊತೆ oneway ಮಾತ್ ಆಡಿ, ಇಲ್ಲಿಯ ಕ್ಯಾಂಟೀನ್ ಅಲ್ಲಿ ಏನಾದ್ರೂ ತಿಂದು , ಒಂದ್ ಕಪ್ ಕಾಫೀ ಇಲ್ಲವೆ  ಟೀ ಕುಡಿದು ಹೋದರೆ ನನಗೆ ಸಿಗುವ ಸಂತೋಷ ಮತ್ತೆ relaxation , ಇದುವರೆಗೂ ಬೆಂಗಳೂರಿನಲ್ಲಿ ಯಾವ ಜಾಗದಲ್ಲೂ ಸಿಕ್ಕಿಲ್ಲ.  ಹಾಗಾಗಿ ನಾನು ಆ ದಿನ GKVK ಗೆ  ತುಂಬಾ ಇಷ್ಟಪಟ್ಟು ಬಂದಿದ್ದೆ.         

       ಒಮ್ಮೆಮೊಮ್ಮೆ   ನನ್ನ ರೂಮಿನ ಪುಸ್ತಕದ  ಗೂಡಲ್ಲಿರುವ ನನಗೆ ಹೆಚ್ಚು ಇಷ್ಟವಾದ ಪುಸ್ತಕಗಳು, ನಾನು ಎಂಜಿನೀರಿಂಗ್ ಅಲ್ಲಿ ಸರಿಯಾಗಿ ಓದದ ಪುಸ್ತಕಗಳು ಕೂಡ  "ಈಗಲಾದರೂ ನಮ್ಮನ್ನು ಸ್ವಲ್ಪ ತೆಗೆದು ನೋಡೋ , ನಾಳೆ ಈ software ಕ್ಷೇತ್ರದಲ್ಲಿ ನಿನ್ನ ಕೈಯಿಡಿತ್ತೇವೆ" ಎನ್ನುತ್ತವೆ. ಅದೇ ರೀತಿ ಬೈರಪ್ಪ, ತಾರಸು ,ಕುಂವಿ , ಕಾರಂತ, ಬೀಚಿ , ಅನಂತಮೂರ್ತಿಯವರ ಪುಸ್ತಕಗಳೊಂತು" ನೀನು ನಮ್ಮೊಂದಿಗೆ ಯಾಕೋ ಸಮಯವನ್ನೇ ಕಳೆಯುತ್ತಿಲ್ಲ, ನಮ್ಮನ್ನು ಇತ್ತೇಚೆಗೆ ನೀನು ಮರೆತೇ ಬಿಟ್ಟಿದ್ದೀಯ, ಇದರಿಂದ ನಮಗೆ ನಿನ್ ಮೇಲೆ ಬೇಜಾರಾಗಿದೆ " ಎಂದು ಸದಾ ನನ್ನನ್ನು ಮೂದಲಿಸುತ್ತಲೇ ಇರುತ್ತವೆ. ಇಂಥ ಪುಸ್ತಕಗಳ ಗುಂಪಿಂದ, ನನ್ನಿಷ್ಟದ ಒಂದು ಕುವೆಂಪುರವರ ಪುಸ್ತಕವನ್ನು ನಾನು ಆ ದಿನ   ನನ್ನೊಂದಿಗೆ GKVK ಗೆ ತೆಗೆದುಕೊಂಡು ಹೋಗಿದ್ದೆ. GKVK ಯ ಹೊಲಗಳಲ್ಲಿ , ತೋಟಗಳಲ್ಲಿ ಕೂತು ಕುವೆಂಪು ಬರೆದಿರೋ, ಅವರು ಪ್ರಕೃತಿಯನ್ನು ವರ್ಣಿಸಿರೊ  ಪುಸ್ತಕವನ್ನೇ ತಂದು ಅಲ್ಲಿ ಓದುವುದೇ ಒಂದು ರೀತಿಯಲ್ಲಿ ರೋಮಾಂಚನ ನೀಡುತ್ತದೆ.

               ಆ ದಿನ ಮಧ್ಯಾನದಿಂದ ಸಂಜೆ ೩.೩೦ ರ ತನಕ , ಅದೇ ಜಾಗದಲ್ಲಿ, ಎಲ್ಲವನ್ನು ಮರೆತು , ನನಗೆ ಇಷ್ಟವಾದ ಒಂದು ಜಾಗದಲ್ಲಿ ಕೂತು  ಕುವೆಂಪುರವರ "ಪರಿಸರದ ಚಿತ್ರಗಳು" ಎಂಬ ಒಂದು ಪುಸ್ತಕವನ್ನು  ಓದಿದೆ. ಸ್ನೇಹಿತರೆ ಆ ಪುಸ್ತಕದಲ್ಲಿ ಕುವೆಂಪು ತಾವು ಚಿಕ್ಕವರಿದ್ದಾಗ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ತಾವು ಮಾಡಿದ ಸಾಹಸಗಳ ಬಗ್ಗೆ, ಅಲ್ಲಿಯ ಪ್ರಕೃತಿಯ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ, ಅಲ್ಲಿಯ ಸೂರ್ಯಾಸ್ತ , ಸೂರ್ಯೋದಯಗಳ ಬಗ್ಗೆ ನಿಜವಾಗಿಯೂ ಅದ್ಭುತವಾಗಿ, ಓದುಗನ ಕಣ್ಣಿಗೆ ಕಟ್ಟುವಹಾಗೆ ವರ್ಣನೆ ನೀಡಿದ್ದಾರೆ. ನಾವು ಆ ಪುಸ್ತಕವನ್ನು ಓದಿದರೆ ನಮ್ಮನ್ನು ಅವರು ನೇರವಾಗಿ ಪಶ್ಚಿಮಘಟ್ಟದ ಮಡಿಲಲ್ಲಿರುವ ತಮ್ಮ ಊರಿಗೆನೆ ಕರೆದುಕೊಂಡು ಹೋಗಿ ಬಿಡುತ್ತಾರೆ. ತಮಗೆ ಏನಾದರು ಸ್ವಲ್ಪ ಸಮಯ ಸಿಕ್ಕರೆ ನೀವು ದಯವಿಟ್ಟು ಒಮ್ಮೆ ಆ ಪುಸ್ತಕದಮೇಲೆ ಕಣ್ಣಾಡಿಸಿ , ನಿಮಗೂ ಮಜಾ ಬಂದರೂ  ಬರಬಹುದು.

          ಒಂದೆರೆಡು ಗಂಟೆಗಳ ಕಾಲ ಒಬ್ಬನೇ ಕೂತು ಪುಸ್ತಕ ಓದಿ,  ಸ್ವಲ್ಪ ಹಿತವೆನ್ನಿಸಿದಾಗ , ನೇರವಾಗಿ ನೆಡೆದು ಅಲ್ಲಿಯ ಕ್ಯಾಂಟೀನ್ ಗೆ ಬಂದೆ. ಅಷ್ಟೊತ್ತಿಗೆ ನನ್ನ cousin ಕೂಡ ಅಲ್ಲಿಗೆ ಬಂದಿದ್ದ. ಇಬ್ಬರು ಜೊತೆಯಾಗಿ ತಿನ್ನಲು, ಅದು-ಇದು ತಗೊಂಡು, ಅಲ್ಲೇ ಇದ್ದ ಒಂದು ಟೇಬಲ್ ಮೇಲೆ ಕೂತೆವು.  ಅಷ್ಟೊತ್ತಿಗಾಗಲೇ ನನ್ನ ತಲೆಯನ್ನು ಸಂಪೂರ್ಣವಾಗಿ ಆವರಿಸಿದ್ದು  ನಾ ಓದಿದ ಮಲೆನಾಡಿನ ಚಿತ್ರಗಳು ಪುಸ್ತಕದ ಲೇಖನಗಳು ಮಾತ್ರ. ನಾ ಬರಿ ಕುವೆಂಪುರವರ ವರ್ಣನೆಗಳ , ಆ ಸಾಲುಗಳ ಮೆಲುಕು ಹಾಕುತ್ತ, ನನ್ನೆದುರಿಗೆ ತಟ್ಟೆಯಲ್ಲಿದ್ದ ಅನೇಕ ತಿಂಡಿಗಳನ್ನು ಕೂಡ ಮೆಲುಕು ಹಾಕಿದೆ.
  
         ನಾನು ನನ್ನ causin ಗೆ ನಾ ಓದಿದ ಪುಸ್ತಕದ ಬಗ್ಗೆ ಹೇಳತೊಡಗಿದ. ಅವನಿಗೂ ಕೂಡ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ನಾನು ಹೇಳುವುದನ್ನೆಲ್ಲ ಕೇಳಿದ. ನನಗೆ ಬೆಳಿಗ್ಗೆ ಏಕೆ ಹಾಗೆ ಬೇಜಾರಾಗಿತ್ತು, ಆಫೀಸ್ ಇಂದ ಏಕೆ ಹೀಗೆ ಬೇಗನೆ ಬಂದೆ ಎಂದು ಅವನಿಗೆ ಹೇಳಿದೆ. ಅದಕ್ಕೆ ಅವನು ಕೂಡ ಕೆಲವು ಕಾರಣಗಳನ್ನು ನೀಡಿ ಸಮಾಧಾನದ ಮಾತುಗಳಾಡಿದ. ನಮಗೆ ಅನ್ನಿಸಿದ್ದನ್ನು ನಾವು ಮಾಡದೆ ಇದ್ದರೆ, ಇಷ್ಟವಿಲ್ಲದ ಕೆಲವು ಕೆಲಸಗಳನ್ನು ಮಾಡಿದರೆ, ಒಮ್ಮೊಮ್ಮೆ ಹೀಗೆ ಆಗುವುದುಂಟು ಎಂದು ನನಗೆ ಅನ್ನಿಸಿತ್ತು. ನಾವು ವಾಕ್ ಮಾಡುವಾಗ ಅಲ್ಲಿಯ ವಾತಾವರಣ ನಿಜವಾಗಿಯೂ ನಮ್ಮೆಲ್ಲ ಜಂಜಾಟಗಳನ್ನು ಮರೆಸುತ್ತೆ ,  ಆ ಪ್ರಕೃತಿಯಲ್ಲಿ ನಮ್ಮನ್ನು ತನ್ನಲ್ಲಿ ಒಂದಾಗಿಸಿ ಕೊಳ್ಳುತ್ತೆ ಎನ್ನುವುದು ಆದಿನ ಮತ್ತೊಮ್ಮೆ ನನಗೆ ಹರಿವಾಯಿತು. 


          ಯಾವಾಗಲು ಚಿಟಪಟ ಮಾತಾಡುವ ನಾನು ಆ ಕ್ಷಣಕ್ಕೆ ಅಂತರ್ಮುಖಿಯಾಗಿ ಮಾತಿಲ್ಲದೆ  ಸುಮ್ಮನೆ ನಡೆಯುತ್ತಿದ್ದೆ. ಅಷ್ಟೊತ್ತಿಗೆ ಪಶ್ಚಿಮದಲ್ಲಿ ಸ್ವಾಮೀ ಮುಳುಗುತ್ತಾ , ಪ್ರಕೃತಿಗೆ ಸಂಜೆಯೋತ್ಸಾಹ ನೀಡಿ, ಆಕಾಶಕ್ಕೆ ಕೆಂಬಣ್ಣ ಚೆಲ್ಲಿ , ಪಕ್ಷಿಗಳಿಗೆ ಚೇತನ ನೀಡಿ ಗೂಡು ಸೇರಲು ಪ್ರೇರೇಪಿಸಿದ್ದ. ನನಗೂ ಕೂಡ ಅದೇ ಸೂರ್ಯ, ಆ ಕೆಂಬಣ್ಣ,ಆ ಪಕ್ಷಿಗಳ ಚಿಲಿಪಿಲಿಗಳು, ದೂರದಲ್ಲಿ ಕಿರ್-ಕಿರ್ ಎನ್ನುವ  ಸಂಜೆಯುಳುಗಳ  ಗಾನಗಳು  ಮತ್ತೆ ಹೊಸ ಚೈತನ್ಯ ನೀಡಿದ್ದವು. ನನ್ನೆಲ್ಲ ಯೋಚನೆಗಳು , ಬೇಜಾರುಗಳನ್ನು , ನಾನು ಪಶ್ಚಿಮದಲ್ಲಿ ಮುಳುಗುತಿದ್ದ ಆ ಸೂರ್ಯನಿಗೆ ಸಮರ್ಪಿಸಿ , ಅವನನ್ನೇ ದಿಟ್ಟಿಸುತ್ತ, ಕುವೆಂಪು ಹೇಳಿದ ರೀತಿಯಲ್ಲೇ ಅವನನ್ನು ಬಣ್ಣಿಸಿಕೊಳ್ಳುತ್ತ, ನನ್ನನ್ನೇ ನಾನು ಮರೆತು ಹೋಗಿದ್ದೆ. ನನ್ನ cousin ನನ್ನನ್ನು ಎಚ್ಚರಿಸಿದಾಗಲೇ ನಾನು ಅಲ್ಲಿಂದ ಹೊರಬಂದದ್ದು. ನಿಜ ಸ್ನೇಹಿತರೆ ನಮಗೆ ಅದೆಷ್ಟೇ ಬೇಜಾರಾದರು, ದುಃಖವಾದರೂ ಅದನ್ನು ಮರೆಸೋ ಶಕ್ತಿಯನ್ನು ದೇವರು ಪ್ರಕೃತಿಯಲ್ಲಿ ಮಾತ್ರ ಇಟ್ಟಿದ್ದಾನೆ. ಪ್ರಕೃತಿ ನಮ್ಮೊಳಗಿನ ತೊಳಲಾಟಗಳನ್ನೆಲ್ಲ ತನ್ನದಾಗಿಸಿಕೊಂಡು ನಮಗೆ ಅದಮ್ಯ ಚೇತನ ನೀಡುತ್ತದೆ. ಪ್ರಕೃತಿಯ ಸೌಂದರ್ಯ ಮಾತ್ರ ನಮಗೆ ನಿಜವಾದ ಸ್ಪೂರ್ತಿಯಾಗುತ್ತದೆ.

ನಿಮಗಾಗಿ 
ನಿರಂಜನ್ 

1 ಕಾಮೆಂಟ್‌: