ಸ್ವಾತಂತ್ರ್ಯದ ದಿನ .....
ಸ್ನೇಹಿತರೆ ಮತ್ತೆ ಬಂದಿತು ಈ ದಿನ , ಸ್ವಾತಂತ್ರದ ದಿನ , ನಮ್ಮೆಲ್ಲರನ್ನೂ ಬ್ರಿಟೀಷರ ಕೈ ವಶದಿಂದ ಮುಕ್ಥವಾಗಿಸಿದ ದಿನ . ಇದೇ ದಿನಕ್ಕಲ್ಲವೇ ನಾವೆಲ್ಲರೂ ಕಾದದ್ದು ಅದೆಷ್ಟೋ ದಿನ. ಹಗಲಿರುಳೆನ್ನದೆ , ಮೇಲು ಕೀಳೆನ್ನದೆ, ಹಿರಿಯ-ಕಿರಿಯರೆನ್ನದೆ, ಗಂಡು ಹೆಣ್ಣೆನ್ನದೆ ತ್ಯಾಗಬಲಿದಾನ ಮಾಡಿದ ಆ ಮಾಹಾತ್ಮರನ್ನು ನೆನೆಯುವ ಸುದಿನ. ದೇಶಕ್ಕಾಗಿ ದುಡಿಯುವ , ಪ್ರಾಮಾಣಿಕವಾಗಿ ದೇಶದ ಹಿತಕ್ಕಾಗಿ ಚಿಂತಿಸುವ ದಿನ , ಒಗ್ಗಟ್ಟಾಗಿ ನಾವೆಲ್ಲರೂ ಮುಂದಿನ ಭಾರತಕ್ಕೆ ಏನು ಕೊಡುತ್ತೇವೆ ಎಂಬುದರ ಬಗ್ಗೆ ಯೋಚಿಸುವ ದಿನ.
ಈ ದಿನ ಬರೀ ಕೇವಲ ದ್ವಜ ಹಾರಿಸಿ, ಸಿಹಿ ಹಂಚಿ , ರಜ ಕಳೆಯುವುದಕ್ಕೆ ಮಾತ್ರ ಸೀಮಿತವಾಗಿರದೆ , ನಮ್ಮ ದೇಶದ ಇತಿಹಾಸವನ್ನು ತಿಳಿಯುವ, ಯುವ ಜನತೆಯಲ್ಲಿ ದೇಶಪ್ರೇಮ ಮೂಡಿಸುವ , ನಾಡಿನ ಅಭಿವೃದ್ದಿಗೆ ಶ್ರಮಿಸಿದ , ಈಗಲೂ ಶ್ರಮಿಸುತ್ತಿರುವ ಪುಣ್ಯ ಪುರುಷರ ಬಗ್ಗೆ ತಿಳಿದಿಕೊಳ್ಳುವ ದಿನವಾಗುವುದರ ಜೊತೆಗೆ ಅಂಥಹ ಮಹನೀಯರಿಗೆ ಅಭಿನಂದನೆ , ಗೌರವ ಸಲ್ಲಿಸುವ ದಿನವಾಗಬೇಕು. ನಾವೆಲ್ಲರೂ ಚಿಕ್ಕ ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸುವ ಕೆಲಸದಲ್ಲಿ ಪಾಲ್ಗೊಳ್ಳಬೇಕು , ದೇಶದ ಯುವ ಜನತೆಗೆ ನಮ್ಮ ದೇಶದ ಇತಿಹಾಸದ ಬಗ್ಗೆ , ನಮ್ಮವರು ನಮ್ಮ ದೇಶಕ್ಕೆ ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಅರಿವು ಮೂಡಿಸಿ , ಜಾಗೃಥರನ್ನಾಗಿಸಬೇಕು. ಸದೃಡ ದೇಶ ಕಟ್ಟಲು ನಮ್ಮದೇ ಆದ ರೀತಿಯಲ್ಲಿ ನಾವು ದುಡಿಯಲು ಭಾರತಾಂಬೆಯ ಹೆಸರಲ್ಲಿ ಪ್ರತಿಜ್ಞೆ ಮಾಡಿ, ಆ ದಿಸೆಯಲ್ಲಿ ಕಾರ್ಯಮಗ್ನರಾಗಬೇಕು.
ಸ್ನೇಹಿತರೆ , ಈಗಿನ ಸದ್ಯದ ಪರಿಸ್ಥಿತಿಯಲ್ಲಿನಾವು ನಮ್ಮ ದೇಶದ ಬಗ್ಗೆ ಇನ್ನೂ ಹೆಚ್ಚಿನ ಖಾಳಜಿ ವಹಿಸಬೇಕಾಗಿದೆ. ದೇಶದ ಹಾಗು-ಹೋಗುಗಳ ಬಗ್ಗೆ ಜಾಗೃತರಾಗಬೇಕಾಗಿದೆ. ರಾಜಕೀಯ ದೊಂಬರಾಟಗಳು , ದೇಶದ ಗಡಿಯಲ್ಲಾಗುತ್ತಿರುವ ಪ್ರಸಕ್ತ ಬೆಳವಣಿಗೆಗಳು, ನಮ್ಮ ದೇಶದ ಕಿರೀಟಪ್ರಾಯವಾದ ಕಾಶ್ಮೀರದಲ್ಲಿ ನಡೆಯುತ್ತಿರುವ ಕೋಮುಗಲಬೆ , ಸದ್ಯದ ಆರ್ಥಿಕ ಸಂಕಷ್ಟಗಳು, ರಾಜ್ಯ-ರಾಜ್ಯಗಳ ನಡುವಿನ ಅಂತಃ ಕಲಹಗಳು , ಆಂದ್ರದಲ್ಲಿರುವ ಪ್ರಕ್ಷುಬ್ದ ವಾತಾವರಣ ನಮಗೆಲ್ಲ ನಿದ್ದೆಗೆಡಿಸಿವೆ ನಿಜ. ಆದರೆ ಅದಕ್ಕೆಲ್ಲ ಪರಿಹಾರವು ಕೂಡ ಇದ್ದೆ ಇದೆ. ಈ ಎಲ್ಲಾ ಸಮಸ್ಯಗಳ ಪರಿಹಾರಕ್ಕೆ ಸೂತ್ರಗಳು ದೇಶದ ಎಲ್ಲ ಪ್ರಜೆಯ ಕೈಯಲ್ಲೂ ಇವೆ. ಹಾಗಾಗಿ ನಾವು ಸರಿಯಾಗಿ ಚಿಂತಿಸಿ ಯಾವುದು ಸರಿ ಯಾವುದು ತಪ್ಪು , ನಮ್ಮ ದೇಶದ ಪ್ರಗತಿಯಲ್ಲಿ ನಾವು ನಮ್ಮನ್ನು ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ಅರಿತು ಪ್ರತಿಯೊಬ್ಬರು ದೇಶವನ್ನು ಕಟ್ಟುವುದರಲ್ಲಿ , ದೇಶದ ಏಳಿಗೆಯ ಮಹಾನ್ ಕಾರ್ಯಕ್ರಮದಲ್ಲಿ ಹಿಂಜರಿಯದೆ ಪಾಲ್ಗೊಳ್ಳಬೇಕಾಗಿದೆ. ಪ್ರತಿಯೂಬ್ಬ ಪ್ರಜ್ಞಾವಂತ ಪ್ರಜೆಯು ಕೂಡ ತನ್ನದೇ ರೀತಿಯಲ್ಲಿ ತಾನು ಈ ಮಹತ್ವದ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಹಾಗು ಇದಕ್ಕೆ ಅನೇಕ ದಾರಿಗಳೂ ಕೂಡ ಇವೆ.
ಜನರಲ್ಲಿ ದೇಶದ ಸದ್ಯದ ಬೆಳವಣಿಗೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಬ್ರಷ್ಟಚಾರದ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಕ್ಕೆ ಸ್ವಲ್ಪವೂ ವಂಚಿಸದೆ ಸರಿಯಾದ ರೀತಿಯಲ್ಲಿ TAX ಕಟ್ಟುವುದು , ಚಿಕ್ಕ ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸುವುದು , ದೇಶದ ಗಡಿ ರಕ್ಷಣೆಯಲ್ಲಿರುವ ವೀರ ಯೋದರ ಕುಟುಂಬಗಳಿಗೆ ಸಹಾಯ ಹಸ್ತ ನೀಡುವುದು, ಪ್ರಜಾಪ್ರಭುತ್ವದಲ್ಲಿ ನಮ್ಮೆಲ್ಲರ ಹಕ್ಕಾದ ಮತದಾನವನ್ನು ತಪ್ಪಿಸದಂತೆ ಮಾಡುವುದು , ಇನ್ನು ಅನೇಕ ಕೆಲಸಗಳನ್ನು ನಾವು ತಪ್ಪದೆ ಮಾಡಬೇಕಾಗಿದೆ. ದೇಶದ ಮೂಲಭೂತ ಸಮಸ್ಯೆಗಳಾದ ಪರಿಸರ ಮಾಲಿನ್ಯದ ಕಡೆ ವಿಶೇಷ ಗಮನ ಹರಿಸಿ, ನಮ್ಮ ನದಿ, ಕೆರೆ , ಕಾಡುಗಳ ಉಳಿವಿಗಾಗಿ ಹೋರಾಡಬೇಕಾಗಿದೆ . ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ , ಸರ್ಕಾರದ ಗಮನೆ ಸೆಳೆಯಬಕಾಗಿದೆ . ಆಡಳಿತ ಯಂತ್ರವನ್ನು ಮುನ್ನೆಡೆಸುತ್ತಿರುವ ಕೆಲ ಬ್ರಷ್ಟ ರಾಜಕಾರಣಿಗಳನ್ನು ಕಿತ್ತೊಗೆದು ಒಳ್ಳೆಯ , ಸಜ್ಜನ , ದೇಶದ ಬಗ್ಗೆ ಖಾಳಜಿ ಇರುವ , ದೇಶದ ಎಲ್ಲ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು , ನಮ್ಮ ದೇಶವನ್ನು ಅಭಿವೃದ್ದಿಯ ಪಥದಲ್ಲಿ ಸಾಗಿಸುವ ಇಚ್ಚಾಶಕ್ತಿ ಇರುವ ನಾಯಕರನು ಚುನಾಯಿಸಬೇಕಾಗಿದೆ.
ಇವೆಲ್ಲದರ ಜೊತೆಗೆ ನಮ್ಮ ದೇಶದಲ್ಲಿ ಇರುವ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ಭಾಷೆ , ಜಾತಿ , ಹಣಗಳಿಂದ ನಮ್ಮಲ್ಲಿ ಉಂಟಾಗಿರುವ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಅಂತರವನ್ನು ಬಡಿದೊಡಿಸಲು ಸನ್ನದ್ದರಾಗಬೇಕು. ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಗೌರವಗಳಿಂದ ಕಾಣಬೇಕು. ನಿರಂತರವಾಗಿ ಜಾತಿ, ಭಾಷೆ, ಧರ್ಮಗಳ ಆಧಾರದ ಮೇಲೆ ನಮ್ಮನ್ನು ನಮ್ಮ ನಮ್ಮ ನಡುವಿನ ಅಂತರವನ್ನು ಹೆಚ್ಚು ಮಾಡುತ್ತಿರುವ ಅಜ್ಞಾನಿಗಳ ವಿರುದ್ದ ದ್ವನಿಯೆತ್ತಿ , ಪ್ರೀತಿಯ ಚಿಲುಮೆಯುಕ್ಕುವಂತೆ ಮಾಡಬೇಕು. ನಮ್ಮ ಮುಂದಿನ ಪೀಳಿಗೆಗೆ ನಾವೆಲ್ಲರೂ ಒಳ್ಳೆಯ ಉದಾಹರಣೆಗಾಳಗಬೇಕು , ವಿಜ್ಞಾನ , ತಂತ್ರಜ್ಞಾನ,ಆರೋಗ್ಯ ಕ್ಷೇತ್ರದಲ್ಲಿ ನಾವು ಸ್ವಯಂ ಸೇವಕರಂತೆ ದುಡಿಯಬೇಕು. ಒಳ್ಳೆಯ ದೇಶವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ನೀಡಬೇಕು. ಈ ಎಲ್ಲ ಕಾರ್ಯ ಕ್ರಮಕ್ಕೂ ನಾವು ನಮ್ಮದೆಲ್ಲವನ್ನು ಅರ್ಪಿಸಿ , ದೇಶದ ಪ್ರಗತಿಗೆ ನಮ್ಮದೇ ಆದ ರೀತಿಯಲ್ಲಿ ಶ್ರಮಿಸಬೇಕು.
ಮೇಲಿನ ಎಲ್ಲ ವಿಷಯಗಳ ಬಗ್ಗೆ ನಾವು ಗಮನ ಹರಿಸುವ , ದೇಶದ ಪ್ರಗತಿಗೆ ನಮ್ಮ ಕೈಲಾದ ಸೇವೆಯನ್ನು ನಾವು ಮಾಡೋಣವೆಂದು ಪ್ರತಿಜ್ಞೆ ಮಾಡುತ್ತಾ , ಎಲ್ಲರಿಗು ನನ್ನ ಸ್ವಾತಂತ್ರ ದಿನದ ಶುಭಾಷಯಗಳನ್ನು ಕೋರುತ್ತ ನನ್ನ ಈ ಲೇಖನಕ್ಕೆ ವಿರಾಮ ಹಾಕುತ್ತಿದ್ದೇನೆ.
ನಿಮಗಾಗಿ
ನಿರಂಜನ್