ಬುಧವಾರ, ಆಗಸ್ಟ್ 14, 2013

ಸ್ವಾತಂತ್ರ್ಯದ ದಿನ .....

                                                  
                                                           ಸ್ವಾತಂತ್ರ್ಯದ  ದಿನ  ..... 
 
ಸ್ನೇಹಿತರೆ  ಮತ್ತೆ ಬಂದಿತು ಈ ದಿನ , ಸ್ವಾತಂತ್ರದ  ದಿನ , ನಮ್ಮೆಲ್ಲರನ್ನೂ ಬ್ರಿಟೀಷರ  ಕೈ ವಶದಿಂದ ಮುಕ್ಥವಾಗಿಸಿದ ದಿನ . ಇದೇ ದಿನಕ್ಕಲ್ಲವೇ ನಾವೆಲ್ಲರೂ ಕಾದದ್ದು ಅದೆಷ್ಟೋ ದಿನ. ಹಗಲಿರುಳೆನ್ನದೆ , ಮೇಲು ಕೀಳೆನ್ನದೆ, ಹಿರಿಯ-ಕಿರಿಯರೆನ್ನದೆ, ಗಂಡು ಹೆಣ್ಣೆನ್ನದೆ ತ್ಯಾಗಬಲಿದಾನ ಮಾಡಿದ ಆ ಮಾಹಾತ್ಮರನ್ನು ನೆನೆಯುವ ಸುದಿನ. ದೇಶಕ್ಕಾಗಿ ದುಡಿಯುವ , ಪ್ರಾಮಾಣಿಕವಾಗಿ ದೇಶದ ಹಿತಕ್ಕಾಗಿ ಚಿಂತಿಸುವ ದಿನ , ಒಗ್ಗಟ್ಟಾಗಿ ನಾವೆಲ್ಲರೂ ಮುಂದಿನ ಭಾರತಕ್ಕೆ ಏನು ಕೊಡುತ್ತೇವೆ ಎಂಬುದರ ಬಗ್ಗೆ ಯೋಚಿಸುವ  ದಿನ. 
 
                ಈ ದಿನ ಬರೀ ಕೇವಲ  ದ್ವಜ ಹಾರಿಸಿ, ಸಿಹಿ ಹಂಚಿ , ರಜ ಕಳೆಯುವುದಕ್ಕೆ ಮಾತ್ರ ಸೀಮಿತವಾಗಿರದೆ , ನಮ್ಮ ದೇಶದ ಇತಿಹಾಸವನ್ನು  ತಿಳಿಯುವ, ಯುವ ಜನತೆಯಲ್ಲಿ ದೇಶಪ್ರೇಮ ಮೂಡಿಸುವ , ನಾಡಿನ ಅಭಿವೃದ್ದಿಗೆ ಶ್ರಮಿಸಿದ , ಈಗಲೂ ಶ್ರಮಿಸುತ್ತಿರುವ ಪುಣ್ಯ ಪುರುಷರ ಬಗ್ಗೆ ತಿಳಿದಿಕೊಳ್ಳುವ ದಿನವಾಗುವುದರ ಜೊತೆಗೆ ಅಂಥಹ ಮಹನೀಯರಿಗೆ  ಅಭಿನಂದನೆ , ಗೌರವ  ಸಲ್ಲಿಸುವ ದಿನವಾಗಬೇಕು. ನಾವೆಲ್ಲರೂ ಚಿಕ್ಕ ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸುವ ಕೆಲಸದಲ್ಲಿ ಪಾಲ್ಗೊಳ್ಳಬೇಕು , ದೇಶದ ಯುವ ಜನತೆಗೆ ನಮ್ಮ ದೇಶದ ಇತಿಹಾಸದ ಬಗ್ಗೆ , ನಮ್ಮವರು  ನಮ್ಮ ದೇಶಕ್ಕೆ ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಅರಿವು ಮೂಡಿಸಿ , ಜಾಗೃಥರನ್ನಾಗಿಸಬೇಕು.  ಸದೃಡ ದೇಶ ಕಟ್ಟಲು ನಮ್ಮದೇ ಆದ ರೀತಿಯಲ್ಲಿ ನಾವು ದುಡಿಯಲು ಭಾರತಾಂಬೆಯ ಹೆಸರಲ್ಲಿ ಪ್ರತಿಜ್ಞೆ ಮಾಡಿ, ಆ ದಿಸೆಯಲ್ಲಿ ಕಾರ್ಯಮಗ್ನರಾಗಬೇಕು. 
 
 
 
              ಸ್ನೇಹಿತರೆ ,  ಈಗಿನ ಸದ್ಯದ ಪರಿಸ್ಥಿತಿಯಲ್ಲಿನಾವು ನಮ್ಮ ದೇಶದ ಬಗ್ಗೆ ಇನ್ನೂ ಹೆಚ್ಚಿನ ಖಾಳಜಿ  ವಹಿಸಬೇಕಾಗಿದೆ. ದೇಶದ ಹಾಗು-ಹೋಗುಗಳ ಬಗ್ಗೆ ಜಾಗೃತರಾಗಬೇಕಾಗಿದೆ.  ರಾಜಕೀಯ ದೊಂಬರಾಟಗಳು , ದೇಶದ ಗಡಿಯಲ್ಲಾಗುತ್ತಿರುವ ಪ್ರಸಕ್ತ ಬೆಳವಣಿಗೆಗಳು, ನಮ್ಮ ದೇಶದ ಕಿರೀಟಪ್ರಾಯವಾದ ಕಾಶ್ಮೀರದಲ್ಲಿ ನಡೆಯುತ್ತಿರುವ ಕೋಮುಗಲಬೆ , ಸದ್ಯದ ಆರ್ಥಿಕ ಸಂಕಷ್ಟಗಳು, ರಾಜ್ಯ-ರಾಜ್ಯಗಳ  ನಡುವಿನ ಅಂತಃ ಕಲಹಗಳು , ಆಂದ್ರದಲ್ಲಿರುವ  ಪ್ರಕ್ಷುಬ್ದ  ವಾತಾವರಣ ನಮಗೆಲ್ಲ ನಿದ್ದೆಗೆಡಿಸಿವೆ ನಿಜ. ಆದರೆ ಅದಕ್ಕೆಲ್ಲ ಪರಿಹಾರವು ಕೂಡ ಇದ್ದೆ ಇದೆ. ಈ ಎಲ್ಲಾ  ಸಮಸ್ಯಗಳ ಪರಿಹಾರಕ್ಕೆ ಸೂತ್ರಗಳು ದೇಶದ ಎಲ್ಲ ಪ್ರಜೆಯ ಕೈಯಲ್ಲೂ ಇವೆ. ಹಾಗಾಗಿ ನಾವು ಸರಿಯಾಗಿ ಚಿಂತಿಸಿ ಯಾವುದು ಸರಿ ಯಾವುದು ತಪ್ಪು , ನಮ್ಮ ದೇಶದ ಪ್ರಗತಿಯಲ್ಲಿ ನಾವು ನಮ್ಮನ್ನು ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ಅರಿತು ಪ್ರತಿಯೊಬ್ಬರು ದೇಶವನ್ನು ಕಟ್ಟುವುದರಲ್ಲಿ , ದೇಶದ ಏಳಿಗೆಯ ಮಹಾನ್ ಕಾರ್ಯಕ್ರಮದಲ್ಲಿ  ಹಿಂಜರಿಯದೆ  ಪಾಲ್ಗೊಳ್ಳಬೇಕಾಗಿದೆ. ಪ್ರತಿಯೂಬ್ಬ ಪ್ರಜ್ಞಾವಂತ ಪ್ರಜೆಯು ಕೂಡ ತನ್ನದೇ ರೀತಿಯಲ್ಲಿ ತಾನು ಈ ಮಹತ್ವದ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಹಾಗು ಇದಕ್ಕೆ ಅನೇಕ ದಾರಿಗಳೂ ಕೂಡ ಇವೆ. 
 
              ಜನರಲ್ಲಿ ದೇಶದ ಸದ್ಯದ ಬೆಳವಣಿಗೆಗಳ  ಬಗ್ಗೆ  ಜಾಗೃತಿ ಮೂಡಿಸುವುದು, ಬ್ರಷ್ಟಚಾರದ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಕ್ಕೆ ಸ್ವಲ್ಪವೂ ವಂಚಿಸದೆ ಸರಿಯಾದ ರೀತಿಯಲ್ಲಿ TAX ಕಟ್ಟುವುದು , ಚಿಕ್ಕ ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸುವುದು , ದೇಶದ ಗಡಿ ರಕ್ಷಣೆಯಲ್ಲಿರುವ ವೀರ ಯೋದರ ಕುಟುಂಬಗಳಿಗೆ ಸಹಾಯ ಹಸ್ತ ನೀಡುವುದು, ಪ್ರಜಾಪ್ರಭುತ್ವದಲ್ಲಿ ನಮ್ಮೆಲ್ಲರ ಹಕ್ಕಾದ ಮತದಾನವನ್ನು ತಪ್ಪಿಸದಂತೆ ಮಾಡುವುದು , ಇನ್ನು ಅನೇಕ ಕೆಲಸಗಳನ್ನು ನಾವು ತಪ್ಪದೆ ಮಾಡಬೇಕಾಗಿದೆ.   ದೇಶದ ಮೂಲಭೂತ  ಸಮಸ್ಯೆಗಳಾದ ಪರಿಸರ ಮಾಲಿನ್ಯದ ಕಡೆ  ವಿಶೇಷ ಗಮನ ಹರಿಸಿ, ನಮ್ಮ  ನದಿ, ಕೆರೆ , ಕಾಡುಗಳ  ಉಳಿವಿಗಾಗಿ ಹೋರಾಡಬೇಕಾಗಿದೆ .  ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ  , ಸರ್ಕಾರದ ಗಮನೆ ಸೆಳೆಯಬಕಾಗಿದೆ .  ಆಡಳಿತ  ಯಂತ್ರವನ್ನು ಮುನ್ನೆಡೆಸುತ್ತಿರುವ ಕೆಲ ಬ್ರಷ್ಟ ರಾಜಕಾರಣಿಗಳನ್ನು ಕಿತ್ತೊಗೆದು ಒಳ್ಳೆಯ , ಸಜ್ಜನ , ದೇಶದ ಬಗ್ಗೆ ಖಾಳಜಿ ಇರುವ , ದೇಶದ ಎಲ್ಲ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು , ನಮ್ಮ ದೇಶವನ್ನು ಅಭಿವೃದ್ದಿಯ  ಪಥದಲ್ಲಿ ಸಾಗಿಸುವ  ಇಚ್ಚಾಶಕ್ತಿ ಇರುವ ನಾಯಕರನು ಚುನಾಯಿಸಬೇಕಾಗಿದೆ. 
 
              ಇವೆಲ್ಲದರ ಜೊತೆಗೆ ನಮ್ಮ ದೇಶದಲ್ಲಿ ಇರುವ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ಭಾಷೆ , ಜಾತಿ , ಹಣಗಳಿಂದ  ನಮ್ಮಲ್ಲಿ ಉಂಟಾಗಿರುವ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಅಂತರವನ್ನು  ಬಡಿದೊಡಿಸಲು  ಸನ್ನದ್ದರಾಗಬೇಕು.  ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಗೌರವಗಳಿಂದ ಕಾಣಬೇಕು. ನಿರಂತರವಾಗಿ ಜಾತಿ, ಭಾಷೆ,  ಧರ್ಮಗಳ ಆಧಾರದ ಮೇಲೆ ನಮ್ಮನ್ನು ನಮ್ಮ ನಮ್ಮ ನಡುವಿನ ಅಂತರವನ್ನು ಹೆಚ್ಚು ಮಾಡುತ್ತಿರುವ ಅಜ್ಞಾನಿಗಳ ವಿರುದ್ದ ದ್ವನಿಯೆತ್ತಿ , ಪ್ರೀತಿಯ ಚಿಲುಮೆಯುಕ್ಕುವಂತೆ ಮಾಡಬೇಕು.  ನಮ್ಮ ಮುಂದಿನ ಪೀಳಿಗೆಗೆ  ನಾವೆಲ್ಲರೂ ಒಳ್ಳೆಯ ಉದಾಹರಣೆಗಾಳಗಬೇಕು ,  ವಿಜ್ಞಾನ , ತಂತ್ರಜ್ಞಾನ,ಆರೋಗ್ಯ ಕ್ಷೇತ್ರದಲ್ಲಿ ನಾವು ಸ್ವಯಂ ಸೇವಕರಂತೆ ದುಡಿಯಬೇಕು. ಒಳ್ಳೆಯ ದೇಶವನ್ನು ನಾವು  ನಮ್ಮ  ಮುಂದಿನ ಪೀಳಿಗೆಗೆ ನೀಡಬೇಕು.  ಈ ಎಲ್ಲ ಕಾರ್ಯ ಕ್ರಮಕ್ಕೂ ನಾವು ನಮ್ಮದೆಲ್ಲವನ್ನು ಅರ್ಪಿಸಿ , ದೇಶದ ಪ್ರಗತಿಗೆ ನಮ್ಮದೇ ಆದ ರೀತಿಯಲ್ಲಿ ಶ್ರಮಿಸಬೇಕು.  
 
ಮೇಲಿನ ಎಲ್ಲ ವಿಷಯಗಳ ಬಗ್ಗೆ ನಾವು ಗಮನ ಹರಿಸುವ , ದೇಶದ ಪ್ರಗತಿಗೆ ನಮ್ಮ ಕೈಲಾದ ಸೇವೆಯನ್ನು ನಾವು ಮಾಡೋಣವೆಂದು  ಪ್ರತಿಜ್ಞೆ ಮಾಡುತ್ತಾ , ಎಲ್ಲರಿಗು ನನ್ನ ಸ್ವಾತಂತ್ರ ದಿನದ ಶುಭಾಷಯಗಳನ್ನು  ಕೋರುತ್ತ ನನ್ನ ಈ ಲೇಖನಕ್ಕೆ ವಿರಾಮ ಹಾಕುತ್ತಿದ್ದೇನೆ. 
 
ನಿಮಗಾಗಿ 
ನಿರಂಜನ್ 
 
 
 
 
 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ