ಬುಧವಾರ, ಡಿಸೆಂಬರ್ 26, 2012

ಶಾಂತಿ


                                                            ನನ್ನಲೇ ಇರುವಳು ...... 
ಸ್ನೇಹಿತರೆ , 
ತ್ತೀಚಿಗೆ ನಾನು ತಿರುಪತಿ ಬೆಟ್ಟಕ್ಕೆ ಹೋಗಿದ್ದೆ  ಶಾಂತಿಯನ್ನು ಹರಸಿ. ಕಷ್ಟ ಪಟ್ಟು, ಬೆಟ್ಟ ಏರಿ , ದೇವಾಲಯ ಸೇರಿ, ಸ್ನಾನ ಮಾಡಿ, ಮಡಿಯುಟ್ಟು, ಗೋವಿಂದ ಗೋವಿಂದ ಎಂದು ಆತನ ನಾಮ ಸ್ಮರಣೆ ಮಾಡುತ್ತಾ ,ಸರಧಿ ಸಾಲಿನಲ್ಲಿ ನಾವೂ  ನಿಂತೆವು. ಜನರಲ್ಲಿ ಅದೇನೋ ಒಂದು ಭಕ್ತಿ , ಭಾವ , ಭಯ , ಆಸೆ  ಜೊತೆಗೆ ಅವಸರವೂ ಇತ್ತು  ದೇವರ ದರುಶನ ಪಡೆಯಲು. ಅಂತು-ಇಂತು ದೇವರ ಸನ್ನಿದಿ ಸಮೀಪಿಸಿತು. ನನಗೇನೋ ತವಕ , ದೇವರನ್ನು ಇನ್ನೇನು ನಾನೇ ನೋಡಿ ಬಿಡುತ್ತೇನೆ, ದರುಶನ ಆಗೇ ಬಿಟ್ಟಿತು ಎಂದು. ಆಗಿನ ಕಾಲದಲ್ಲಿ ಪಾಪ ಋಷಿ ಮುನಿಗಳು , ಅನೇಕ ಯೋಗಿಗಳು ವರ್ಷಗಟ್ಟಲೆ ತಪಸ್ಸು ಮಾಡಿದರೂ, ಹಗಲಿರುಳೆನ್ನದೆ ಪೂಜಿಸಿದರು ಸಿಗದ ಈತ ನಮಗೆ ೪ ಗಂಟೆ ಸರದಿಸಾಲಿನಲ್ಲಿ ಕಷ್ಟ ಪಟ್ಟು ಬಂದಿದ್ದಕ್ಕೆ ದರುಶನ ನೀಡಿದ. ನಿಜವಾಗಿಯೂ ತಿಮ್ಮಪ್ಪ ಭಕ್ತರ ಪಾಲಿನ ಬಂಧು. ಜನರಲ್ಲಿ ಈತನ ಮೇಲೆ ಅದೆಷ್ಟು ನಂಬಿಕೆ ಅಂದರೆ "ಈತ ಖಂಡಿತವಾಗಿಯೂ ನಮಗೆ ಬೇಗ ದರುಶನ ಕೊಟ್ಟೆ ಕೊಡುತ್ತಾನೆ"  ಎಂದು ಮೊದಲೇ ಇಂತಿಷ್ಟು ಗಂಟೆಗೆ ನಾವು ವಾಪಾಸು ಹೋಗಬೇಕೆಂದು ಬಸ್ ಕೂಡ ಬುಕ್ ಮಾಡಿರುತ್ತೇವೆ. ಪಾಪ ಆಗಿನ ಕಾಲದ ಋಷಿಮುನಿಗಳು ಸುಮ್-ಸುಮ್ನೆ ವರ್ಷಗಟ್ಟಲೆ time waste ಮಾಡಿದ್ರು ಅಲ್ಲವಾ ??? . 
           ಹೀಗೆ ಮೊನ್ನೆ ಒಬ್ರು ಹೇಳ್ತಾ ಇದ್ರು " ನೋಡಿ ಸಾರ್ ಮೊನ್ನೆ ರಾತ್ರಿ ಇಲ್ಲಿ ೮.೩೦ ಕ್ಕೆ ಬೆಂಗಳೂರು ಬಿಟ್ವಿ, ರಾತ್ರಿ ನಮಗೆ ೩ ಗಂಟೆಗೆ ದೇವರ ದರುಶನ ಆಗೇ ಬಿಡ್ತು , ಅದೆಷ್ಟು ಜಲ್ದಿ ಅಂತೀರಾ , ನನಗೆ ನಂಬೋಕೆ ಸಾದ್ಯವಾಗಲಿಲ್ಲ " ಎಂದಾಗ , ಮತ್ತೊಬ್ಬ " ಎಲ್ಲ ನಿಮ್ಮ ಪುಣ್ಯಾ ಸಾರ್, ನೀವ್ ಮಾಡಿರೋ ಪುಣ್ಯದ ಫಲ" ಎಂದ. ಅದಕ್ಕೆ ಆತ "ಎಲ್ಲಿಯ  ಪುಣ್ಯ ಮಾರಾಯ ಅದು ಪುಣ್ಯ ದ ಫಲ ಅಲ್ಲ... ನಮ್ಮ ಪ್ಯಾಕೇಜ್ ದರ್ಶನದ ಫಲ .... ಕಿತ್ತರು ಬೇಜಾನ್ ದುಡ್ಡ "  ಎಂದಾಗ ಅಲ್ಲಿದ್ದ ನನಗೆ ನಗು ಬಂತು...
            ಬರಿ ದುಡ್ಡಿದ್ದರೆ ಮಾತ್ರ ಅಲ್ಲಿ ದೇವರು ಕಾಣುತ್ತಾನೆ ಅಂತ ಅಲ್ಲ. ದುಡ್ಡು ಕೊಟ್ಟರೆ ಮಾತ್ರ ಬೇಗ ಕಾಣುತ್ತಾನೆ.  ಇಲ್ಲದಿದ್ದರೆ ಅಷ್ಟೇ , ಕಾಯಬೇಕು , ತುಂಬಾ ಕಷ್ಟ ಪಡಬೇಕು.

                                             ದೇವರೋಲಿಯುತ್ತಿದ್ದನಂತೆ 
                                             ತೋರಿದ್ದರೆ ಒಂದಿಷ್ಟು
                                             ಪ್ರೀತಿ, ಭಕುತಿ..... 
                                             ಅದಕ್ಕೆ ವಿರುದ್ದವಾಗಿದೆ
                                             ಈಗಿನ ನಮ್ಮ 
                                             ತಿರುಪತಿ!!!!

                  ದೇವಾಲಯದಲ್ಲಿ ನಾವು ಆತನ ದರುಶನಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದಾಗ ಎತ್ತ ನೋಡಿದರತ್ತ ನಮಗೆ ಕಾಣುತ್ತಿದ್ದದ್ದು ದೇವರ ಚಿತ್ರಗಳಲ್ಲ, ದೇವರ ಮಂತ್ರಗಳೂ ಅಲ್ಲ, ಕಾಣುತ್ತಿದ್ದದ್ದು " ಸರಗಳರಿದ್ದಾರೆ ಎಚ್ಚರಿಕೆ " ಎಂಬ ನಾಮಪಲಕಗಳು. ದೇವರು ನಮಗೆ ಭಕ್ತಿಯ ಜೊತೆಗೆ ಭಯವನ್ನು ಇಟ್ಟಿದ್ದಾನೆ ಎಂಬುದಕ್ಕೆ ಅದೇ ಸಾಕ್ಷಿ. ಕಳ್ಳರನ್ನು ಕೂಡ ಅವನು ಶಿಕ್ಷಿಸದೆ ಸಲಹುತ್ತಾನೆ ಎಂಬುದಕ್ಕೆ ಆ  ಬೋರ್ಡ್ ಗಳೇ ನಿದರ್ಶನಗಳು. ಇದು ಬರೀ  ಅದೊಂದೇ ದೇವಸ್ತಾನದನ ಕತೆ ಅಲ್ಲ ಎಲ್ಲ ಕಡೆಗಳಲ್ಲೂ ಅದು ಹೀಗೇನೆ. ದೇವಾಲಯದೊಳಗೆ ಪಾದ ಇಡುವುದಕ್ಕೂ ಮೊದಲು ಪಾದರಕ್ಷೆಗಳ ಭಯ. ದೇವಾಲಯದೊಳಗೆ ಸರ , ಪರ್ಸುಗಳ ಭಯ ನಮಗೆ ಇದ್ದೆ ಇರುತ್ತದೆ.    


                                           ದೇವಾಲಯಗಳಿಗೋದರೆ 
                                           ಕಳೆದೋಗುತ್ತಿತ್ತು ಪಾಪ,
                                           ಸಿಗುತ್ತಿತ್ತು  ಶ್ರೀರಕ್ಷೆ .....
                                           ಈಗ  
                                           ದೇವಾಲಯಗಳಿಗೆ 
                                           ಹೋದರೆ ಕಳೆಯುವುದೊಂದೇ 
                                           ನಮ್ಮ ಪಾದರಕ್ಷೆ !!!

       ಇತ್ತೀಚಿಗೆ ಈ ಕಳ್ಳತನಗಳು ಮನೆಗಳಲ್ಲಿ ಮಾತ್ರ ಆಗ್ತಾ ಇಲ್ಲ. ಯಾವುದೋ ನ್ಯೂಸ್ ಚಾನಲ್ನಲ್ಲಿ  ತೋರಿಸುತ್ತಾ ಇದ್ದರು , ತಿರುಪತಿ ತಿಮ್ಮಪ್ಪನಿಗೆ ನೀಡಿದ ಕಾಣಿಕೆಯನ್ನು ಎಣಿಸುವ ಮಹಾ ಪುರುಷರೆ ,  ಭಕ್ತರು ಕೊಡೊ ಕಾಣಿಕೆಯನ್ನು ಕದಿಯುತ್ತಾರೆ. ಅವರನ್ನು ತಿಮ್ಮಪ್ಪನೆ ಅಲ್ಲಿ ವಂಶ ಪಾರಂಪರ್ಯವಾಗಿ ಸಾಕಿ ಸಲಹುತ್ತಿದ್ದಾನೆ ಎಂದು. ನಾವು ಮನೆಗಳಲ್ಲಿ ಅಮ್ಮ ದೇವರ ಮೀಸಲು ಅಂತ ಇಟ್ಟ ಒಂದೆರೆಡು ರುಪಾಯಿಗಳನ್ನೇ ಮುಟ್ಟಲು ಹೆದರುತ್ತೇವೆ. ಆದರೆ ಕೆಲವು ಭಕ್ತ ಮಹಾಶಯರು ದೇವರ ಹೃದಯ ಕದಿಯಿರೋ ಎಂದರೆ , ದೇವರಿಗೆ ಬಂಡ ಹಣ, ನಿಧಿ ಕದಿಯುತ್ತಾರೆ. ಕೆಲವೊಂದು ದೇವಾಲಯಗಳಲ್ಲಿ ದೇವರನ್ನೇ ಕದ್ದ ಅನೇಕ ಉದಾಹರಣೆಗಳಿವೆ .  

                                           ಯಮನಿಗೂ  ಭಯವಾಗುತ್ತಿತ್ತಂತೆ
                                           ನೋಡಿದರೆ ದೇವರ
                                           ದಿವ್ಯ ಸನ್ನಿಧಿ....
                                           ಈಗ ಕಳ್ಳ ಕಾಕರಿಗೂ 
                                           ಇಲ್ಲ ಭಯ, ಕದಿಯಲು 
                                           ದೇವರ  ನಿಧಿ!!!

            ಮುಗಿಸುವ ಮುನ್ನ , ಸ್ನೇಹಿತರೆ ನಾನೇನು ತಿರುಪತಿ ತಿಮ್ಮಪ್ಪನ ದ್ವೇಷಿಯಲ್ಲ , ಆದರೆ ಅಲ್ಲಿ ನಾವು ನೆಡೆದು ಕೊಳ್ಳುವ ರೀತಿ, ನನಗೆ ಸರಿ ಬರೋಲ್ಲ. ಅಲ್ಲಿ ಎಲ್ಲ ರೀತಿಯ ವ್ಯವಸ್ತೆಗಳಿವೆ, ಎಲ್ಲವು ಸರಿಯಿದೆ , ಆದರೆ ನಾವೇ ಯಾಕೋ ಸರಿಯಾಗಿ ಅಲ್ಲಿ  ನಡೆದುಕೊಳ್ಳುವುದಿಲ್ಲ. ದೇವರ ಮೇಲೆ ನಮಗೆ ಭಕ್ತಿಗಿಂತ ಭಯ ಜಾಸ್ತಿಯಾಗಿದೆ. ಶಾಂತಿಗಾಗಿ , ಸಮಧಾನಕಾಗಿ ದೇವರ ದರುಶನಕ್ಕೆ ಹೋಗುತ್ತೇವೆ . ಆದರೆ ನಮಗೆ ಅಲ್ಲಿ ಸಿಗುವುದು ಅವಸರ , ಬೇಸರ  ಮತ್ತು ಗಲಾಟೆಗಳು , ಇಲ್ಲ ಸಲ್ಲದ ಮಾತುಗಳು ಮಾತ್ರ.  ಶಾಂತಿ , ಸಮಾಧಾನಗಳನ್ನು  ನಾವು ಹುಡುಕಿಕೊಂಡು ಹೋಗಬೇಕೆ ? ಅವು ದೇವರ ವಿಗ್ರಹ ನೋಡಿದರೆ ನಮಗೆ ಸಿಕ್ಕು ಬಿಡುತ್ತವೆಯೇ ?? ಇವು ಸಿಕ್ಕಿದ ಮೇಲೆಯೇ ನಮಗೆ ಸಂತ್ರುಪ್ತಿದೊರೆಯುತ್ತದೆಯೇ ???... ಇದಕ್ಕೆ ವಿರುದ್ದವಾಗಿ ನಾನು  ನಂಬಿರುವ ತತ್ವವೆಂದರೆ , ನಾವೆಲ್ಲಿರುವೆವೋ ಅಲ್ಲಿಯೇ ಶಾಂತಿ ಸಮಾಧಾನಗಳನ್ನು ತಂದುಕೊಳ್ಳಬೇಕು. ಶಾಂತಿ ಮೊದಲು ನಮ್ಮ ಮನ , ಮನೆಯಲಿದ್ದರೆ  ಎಲ್ಲ ಕಡೆಯೂ ಅದು ನಮಗೆ ಕಾಣುತ್ತದೆ. ನಮಗೆ ಮನೆಯಲ್ಲಿ ಸಿಗುವ ಶಾಂತಿಯೇ ನಿಜವಾದ ಶಾಂತಿ , ಹೊರಗಡೆ ದೊರೆಯುವುದು ಅದರ ನೆರಳು ಮಾತ್ರ.  

                                          ಕೆಲವರೋಗುವರು 
                                          ದೇವಾಲಯಕ್ಕೆ 
                                          ಬೇಕೆಂದು  ಆರತಿ ..
                                          ಕೆಲವರೋಗುವರು 
                                          ದೇವಾಲಯಕ್ಕೆ 
                                          ಬೇಕೆಂದು ಪ್ರಸಾದ ..
                                          ನಾ ಇವರಾಗೆ ಅಲ್ಲ , 
                                          ದೇವಾಲಯಕ್ಕೂ ಹೋಗೋಲ್ಲ 
                                          ಏಕೆಂದರೆ 
                                          ನನ್ನ ಮನೆಯಲ್ಲೇ ಇರುವಳು ನನ್ನ ಶಾಂತಿ !!! 

ನಿಮಗಾಗಿ 
ನಿರಂಜನ್ 

ಮಂಗಳವಾರ, ಡಿಸೆಂಬರ್ 25, 2012

ಸ್ಪೂರ್ತಿ


                                     ನಿಜವಾದ ಸ್ಪೂರ್ತಿ...               
          

ಹೀಗೆ  ಕೆಲವು ದಿನಗಳಿಂದ ತಲೆಯಲ್ಲಿ ಒಂದು ಹುಳ  ಬಿಟ್ಕೊಂಡು  , ಏನಾದ್ರೂ ಮಾಡಿ  ಆ ಹುಳವನ್ನು  ಸಾಕಿ , ಚೆನ್ನಾಗಿ ಬೆಳೆಸಿ, ದೊಡ್ಡದ್ ಮಾಡಿ , ಆ ಹುಳಕ್ಕೆ ಒಂದು ಒಳ್ಳೆ ಗಂಡು ನೋಡಿ ಮಧುವೆ  ಮಾಡ್ಸಿ , ಅದುಕ್ಕೆ ಹುಟ್ಟೋ ಮರಿಗಳ ಜೊತೆ   ಕಾಲ ಕಳಿಬೇಕು. ಆ ಮರಿ ಹುಳಗಳನ್ನೆಲ್ಲ ಒಮ್ಮೆಗೆ ನನ್ನ ತಲೆಯಲ್ಲಿ ಬಿಟ್ಕೊಂಡ್ರೆ  ಲೈಫ್ ಅಲ್ಲಿ ಎಷ್ಟೊಂದು ಮಜಾ ಇರುತ್ತೆ , ಎಷ್ಟು ಥ್ರಿಲ್ಲಿಂಗ್ ಆಗಿ ಇರುತ್ತೆ ಎನ್ನುವ ಯೋಚನಾಲಹರಿಯಲ್ಲೇ ತೇಲುತಿದ್ದೆ.  ಅದಕ್ಕೆ ಸರಿಯಾಗಿಯೇ  ಒಂದು ದಿನ ಯಾಕೋ ತುಬಾ ಬೇಜಾರ್ ಕೂಡ ಆಗಿ , ಈ  ಆಫೀಸ್ ಕೆಲಸಾನೂ ಸಾಕಾಗಿತ್ತು. ನನ್ನದೇ ಏನಾದರು ಸ್ವಂತ ಐಡಿಯಾ ಮೇಲೆ ಸ್ವಲ್ಪ ದಿನ ಕೆಲಸ ಮಾಡ್ಬೇಕು. ಆ ಕೆಲಸದೆಲ್ಲೇ ನಾನು ನನ್ನನ್ನು ಕಾಣಬೇಕು. ನನಗೆ ನಾನೇ ಅಲ್ಲಿ ಎಲ್ಲ ಆಗಿರಬೇಕೆಂದು ಯೋಚಿಸತೊಡಗಿದ್ದೆ. ಇದರ ಜೊತೆಗೆ ನನಗೆ ಅನ್ನಿಸಿದ ಹಾಗೆ ನಾ ಇರಬೇಕು, ಮನಸ್ಸಿಗೆ ಖುಷಿ ಸಿಗೋ ಜಾಗಗಳಿಗೆ ಹೋಗ್ಬೇಕು. ಸಾಕೊಷ್ಟು ಪುಸ್ತಕಗಳನ್ನ ಓದಬೇಕು, ನನ್ನೆಲ್ಲ ಸ್ನೇಹಿತರ ಜೊತೆ ಎಲ್ಲೆಲ್ಲಿಗೆ  ಹೋಗ್ಬೇಕು ಅಂತ ಅನ್ಸುತ್ತೋ  ಅಲ್ಲೆಲ್ಲ ಅಡ್ಡಾಡಿ ಸ್ವಲ್ಪ ದಿನ ಆರಾಮಾಗಿ ಇರ್ಬೇಕು ಅಂತೆಲ್ಲ ನನ್ನ ಮನಸ್ಸು ಬಹುವಾಗಿ ಬಯಸುತ್ತಿತ್ತು. ನನ್ನ ಆಫೀಸ್ ಕೆಲಸ ಮಾಡಿ ಮಾಡಿ ಮನಸ್ಸಿಗೆ ಜಡ್ಡು ಹಿಡಿದು ನನಗೆ ಈ ರೀತಿ ಅನ್ನಿಸುತ್ತಿತ್ತೇನೋ ನನಗೆ ಇನ್ನೂ  ಸರಿಯಾಗಿ ಅರ್ಥ ಆಗಿಲ್ಲ. ನಾ ಇದುವರೆಗೂ ಮಾಡಿದ್ದು ಏನು ಅಲ್ಲ, ಇನ್ನೂ ಮೇಲಾದರೂ ನನಗಿಷ್ಟವಾದದ್ದನ್ನು ನಾ ಮಾಡಲೇಬೇಕು ಎಂಬ ಬಯಕೆ ಮನಸ್ಸಿನಲ್ಲಿ ಬೇರೂರಿತ್ತು. ಅಂದರೆ ಇಷ್ಟು ದಿನ ನಾ ಏನೇನು ಮಾಡಬೇಕು ಅಂತೆಲ್ಲಾ ಬರೀ ಅಂದುಕೊಂಡಿದ್ದೆನೋ ಆ ಆಸೆಗಳೆಲ್ಲ ಒಟ್ಟಿಗೆ ಸೇರಿ ನನ್ನನು ತುಂಬಾ  ಕುಟುಕುತ್ತಿದ್ದವು. ಆ ಕ್ಷಣಕ್ಕೆ ನನ್ನ ಮನಸ್ಸು ವೃತ್ತಿಗಿಂತ  ನನ್ನ ಪ್ರವೃತ್ತಿಗಳ ಕಡೆಗೆ  ಹೆಚ್ಚು ವಾಲುತ್ತಿತ್ತು.

            ಇಷ್ಟೆಲ್ಲಾ ಯೋಚನೆಗಳು ಬಂದಾಗ ಸಮಯ ಇನ್ನು ಹೆನ್ನೆರೆಡು ಆಗಿತ್ತು. ಮಧ್ಯಾನದ ಊಟವೂ ಆ ದಿನ ನನಗೆ  ಬೇಡವಾಗಿತ್ತು.  ಮಾಡುತ್ತಿದ್ದ ಕೆಲಸವು ಸಾಕಾಗಿ, ಯೋಚನೆಯಲ್ಲೇ ಒಂದು ದೊಡ್ಡ ಕಪ್ ಟೀ ಹೀರಿ, cafetaria ದ ಕಿಟಕಿಯಿಂದ  ಹೊರಗೆ ನೋಡಿದಾಗ ,  ಸುತ್ತಲು  ಕಾಣುತ್ತಿದ್ದ ಕಾಂಕ್ರೀಟು ಕಟ್ಟಡಗಳು ನೀರಸವೆನಿಸಿದವು. ಹಾಗ ಆ ಸಮಯಕ್ಕೆ ನನಗೆ ಸ್ವಲ್ಪ ಆಫೀಸ್ ಕೆಲಸದಿಂದ ವಿಶ್ರಾಂತಿಯ ಅಗತ್ಯವಿದೆ ಎಂದೆನಿಸಿತು. ಅದ್ದರಿಂದ ಅಲ್ಲಿಂದ ನೇರವಾಗಿ  ಹೋರಟ ನಾನು ಮನೆಗೆ ತೆರಳಿ, ಸ್ವಲ್ಪ ಹೊತ್ತು ಎಲ್ಲಿಗಾದರು ಹೋಗಿ ಬರಲೆಂದು ನಿರ್ಧರಿಸಿದೆ. ನನಗೆ ಇಷ್ಟವಾದ ಜಾಗ ಇಲ್ಲಿ ಯಾವುದಿದೆ ? ಎಂದು ಯೋಚಿಸುವ ಮೊದಲೇ ನನಗೆ ನೆನಪಾದದ್ದು GKVK (ಗಾಂದಿ ಕೃಷಿ ವಿಶ್ವವಿದ್ಯಾಲಯ). ನನಗೆ ಸಾಕೆನ್ನುವೊಷ್ಟು ಕಾಲ ಅಲ್ಲಿ ಕಳಿಬೇಕು, ಹಿತವಾಗುವೊಷ್ಟು ವಾತಾವರಣವನ್ನು ಅಲ್ಲಿ ಸವಿಯಬೇಕು ಎಂದು ತವಕಿಸುತ್ತ  ಆ ಕೃಷಿ ವಿದ್ಯಾಲಯದ ಕಡೆ ಪ್ರಯಾಣ ಬೆಳೆಸಿದೆ. ಸ್ನೇಹಿತರೆ ನಾನು ಅಲ್ಲಿ ಹೋಗಿ ಏನೇನು ಮಾಡಿದೆ ಅಂತ ಹೇಳುವ ಮೊದಲು , ಈ  GKVK ಬಗ್ಗೆ  ನಿಮಗೆ ಸ್ವಲ್ಪ ಹೇಳಲೇ ಬೇಕು.


          ಈ ೧೮೯೯ ರಲ್ಲಿ ಪ್ರಾರಂಭವಾಗಿ, ಹಂತ ಹಂತವಾಗಿ ಬೆಳೆದು ನಿಂತಿದೆ ಈ ವಿಶ್ವವಿದ್ಯಾಲಯ. ಎತ್ತ ನೋಡಿದರತ್ತ ಹಸಿರುಹೊತ್ತ ಮರಗಿಡಗಳು, ಎಷ್ಟೋ ಬಗೆಯ ಹಣ್ಣಿನ ತೋಟಗಳು, ಹೂಗಿಡಗಳು , ವಿಶಾಲವಾದ ಹೊಲಗಳು , ಜನರಿಗೆ ನಡೆಯಲು ಅಷ್ಟೇ ವಿಶಾಲವಾದ ದಾರಿಗಳು, ಬಿದಿರು , ತೇಗ, ಶ್ರೀಗಂಧ , ಬೇವು , ಮಾವು ,ಅರಳೆ , ಅಶ್ವಥ, ದೊಡ್ದಾಲ   ಇನ್ನು ಅನೇಕ ನೋಡಿರದ, ಕೇಳರಿಯದ  ಹೊಸ ಬಗೆಯ ಕಾಡು ಮರಗಳು ಇಲ್ಲಿ ನಮಗೆ ನೋಡ ಸಿಗುತ್ತವೆ.  ಅತಿಯಾದ ಜನ ಸಂದಣಿ ಇಲ್ಲದ ಈ ಜಾಗದಲ್ಲಿ, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲದೆ ಬೇರೆ ಯಾರು ಇರುವುದಿಲ್ಲ. GKVK ಬೆಂಗಳೂರಿನಲ್ಲೇ ಇದ್ದರು ಅದು ಬೆಂಗಳೂರಿನಂತಲ್ಲ. ಸಾಕಷ್ಟು ಮರಗಿಡಗಳಿರುವ ಈ ಜಾಗದಲ್ಲಿ ನಾವು ಅನೇಕ ಬಗೆಯ ಪಕ್ಷಿಗಳು ನೋಡ ಬಹುದು, ಅವುಗಳ ಕೂಗು ಕೇಳುವುದಕ್ಕೊಂತು ಇನ್ನೂ ಖುಷಿ ಆಗುತ್ತದೆ. ಬೆಂಗಳೂರಿನಲ್ಲಿ ಈ ತರಹದ ಜಾಗವೂ ಇದೆ ಎಂದು ನಮಗೆ ಆಶ್ಚರ್ಯ ಆಗುವುದೇ ಇರುವುದಿಲ್ಲ , ನಾವು ಒಮ್ಮೆ ಇಲ್ಲಿಗೆ ಬೇಟಿ ನೀಡಿದರೆ.
 
           ನನಗೂ ಮತ್ತು ಈ ಜಾಗಕ್ಕೂ ಬುಹು ದಿನದಿಂದಲೂ  ಒಂದು ರೀತಿಯಾದ ನಂಟು ಇದೆ. ನಾನು ಈಗಲೂ  ವಾರಕ್ಕೆ ಕನಿಷ್ಠ ಮೂರು-ನಾಲ್ಕು ಭಾರಿ ಬಂದು ಹೋಗುವ ಜಾಗ ಇದು. ಶನಿವಾರ ಮತ್ತೆ ಭಾನುವಾರ ಬೆಳಿಗ್ಗೆ   ಜಾಗಿಂಗ್ ಗೆ GKVK ಗೆ ಬರದಿದ್ದರೆ ನನಗೆ ಸಮಾಧಾನವಿರುವುದಿಲ್ಲ. ನನಗೆ ತುಂಬಾ ಬೇಜಾರ್ ಆದಾಗಲೂ,  ಸಕತ್ ಖುಶಿ ಆದಾಗಲೂ ನಾನು ಇಲ್ಲಿಗೆ ಬರುವುದುಂಟು. ಇಲ್ಲಿಗೆ ಯಾವಾಗ ಬಂದರೂ ಒಂದು ದೊಡ್ಡ ವಾಕ್ ಮಾಡಿ , ಇಲ್ಲಿರುವ  ಪ್ರಕೃತಿಯ ಹಿತವನ್ನೀರಿ, ಹಕ್ಕಿ ಪಕ್ಕಿಗಳ ಜೊತೆ oneway ಮಾತ್ ಆಡಿ, ಇಲ್ಲಿಯ ಕ್ಯಾಂಟೀನ್ ಅಲ್ಲಿ ಏನಾದ್ರೂ ತಿಂದು , ಒಂದ್ ಕಪ್ ಕಾಫೀ ಇಲ್ಲವೆ  ಟೀ ಕುಡಿದು ಹೋದರೆ ನನಗೆ ಸಿಗುವ ಸಂತೋಷ ಮತ್ತೆ relaxation , ಇದುವರೆಗೂ ಬೆಂಗಳೂರಿನಲ್ಲಿ ಯಾವ ಜಾಗದಲ್ಲೂ ಸಿಕ್ಕಿಲ್ಲ.  ಹಾಗಾಗಿ ನಾನು ಆ ದಿನ GKVK ಗೆ  ತುಂಬಾ ಇಷ್ಟಪಟ್ಟು ಬಂದಿದ್ದೆ.         

       ಒಮ್ಮೆಮೊಮ್ಮೆ   ನನ್ನ ರೂಮಿನ ಪುಸ್ತಕದ  ಗೂಡಲ್ಲಿರುವ ನನಗೆ ಹೆಚ್ಚು ಇಷ್ಟವಾದ ಪುಸ್ತಕಗಳು, ನಾನು ಎಂಜಿನೀರಿಂಗ್ ಅಲ್ಲಿ ಸರಿಯಾಗಿ ಓದದ ಪುಸ್ತಕಗಳು ಕೂಡ  "ಈಗಲಾದರೂ ನಮ್ಮನ್ನು ಸ್ವಲ್ಪ ತೆಗೆದು ನೋಡೋ , ನಾಳೆ ಈ software ಕ್ಷೇತ್ರದಲ್ಲಿ ನಿನ್ನ ಕೈಯಿಡಿತ್ತೇವೆ" ಎನ್ನುತ್ತವೆ. ಅದೇ ರೀತಿ ಬೈರಪ್ಪ, ತಾರಸು ,ಕುಂವಿ , ಕಾರಂತ, ಬೀಚಿ , ಅನಂತಮೂರ್ತಿಯವರ ಪುಸ್ತಕಗಳೊಂತು" ನೀನು ನಮ್ಮೊಂದಿಗೆ ಯಾಕೋ ಸಮಯವನ್ನೇ ಕಳೆಯುತ್ತಿಲ್ಲ, ನಮ್ಮನ್ನು ಇತ್ತೇಚೆಗೆ ನೀನು ಮರೆತೇ ಬಿಟ್ಟಿದ್ದೀಯ, ಇದರಿಂದ ನಮಗೆ ನಿನ್ ಮೇಲೆ ಬೇಜಾರಾಗಿದೆ " ಎಂದು ಸದಾ ನನ್ನನ್ನು ಮೂದಲಿಸುತ್ತಲೇ ಇರುತ್ತವೆ. ಇಂಥ ಪುಸ್ತಕಗಳ ಗುಂಪಿಂದ, ನನ್ನಿಷ್ಟದ ಒಂದು ಕುವೆಂಪುರವರ ಪುಸ್ತಕವನ್ನು ನಾನು ಆ ದಿನ   ನನ್ನೊಂದಿಗೆ GKVK ಗೆ ತೆಗೆದುಕೊಂಡು ಹೋಗಿದ್ದೆ. GKVK ಯ ಹೊಲಗಳಲ್ಲಿ , ತೋಟಗಳಲ್ಲಿ ಕೂತು ಕುವೆಂಪು ಬರೆದಿರೋ, ಅವರು ಪ್ರಕೃತಿಯನ್ನು ವರ್ಣಿಸಿರೊ  ಪುಸ್ತಕವನ್ನೇ ತಂದು ಅಲ್ಲಿ ಓದುವುದೇ ಒಂದು ರೀತಿಯಲ್ಲಿ ರೋಮಾಂಚನ ನೀಡುತ್ತದೆ.

               ಆ ದಿನ ಮಧ್ಯಾನದಿಂದ ಸಂಜೆ ೩.೩೦ ರ ತನಕ , ಅದೇ ಜಾಗದಲ್ಲಿ, ಎಲ್ಲವನ್ನು ಮರೆತು , ನನಗೆ ಇಷ್ಟವಾದ ಒಂದು ಜಾಗದಲ್ಲಿ ಕೂತು  ಕುವೆಂಪುರವರ "ಪರಿಸರದ ಚಿತ್ರಗಳು" ಎಂಬ ಒಂದು ಪುಸ್ತಕವನ್ನು  ಓದಿದೆ. ಸ್ನೇಹಿತರೆ ಆ ಪುಸ್ತಕದಲ್ಲಿ ಕುವೆಂಪು ತಾವು ಚಿಕ್ಕವರಿದ್ದಾಗ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ತಾವು ಮಾಡಿದ ಸಾಹಸಗಳ ಬಗ್ಗೆ, ಅಲ್ಲಿಯ ಪ್ರಕೃತಿಯ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ, ಅಲ್ಲಿಯ ಸೂರ್ಯಾಸ್ತ , ಸೂರ್ಯೋದಯಗಳ ಬಗ್ಗೆ ನಿಜವಾಗಿಯೂ ಅದ್ಭುತವಾಗಿ, ಓದುಗನ ಕಣ್ಣಿಗೆ ಕಟ್ಟುವಹಾಗೆ ವರ್ಣನೆ ನೀಡಿದ್ದಾರೆ. ನಾವು ಆ ಪುಸ್ತಕವನ್ನು ಓದಿದರೆ ನಮ್ಮನ್ನು ಅವರು ನೇರವಾಗಿ ಪಶ್ಚಿಮಘಟ್ಟದ ಮಡಿಲಲ್ಲಿರುವ ತಮ್ಮ ಊರಿಗೆನೆ ಕರೆದುಕೊಂಡು ಹೋಗಿ ಬಿಡುತ್ತಾರೆ. ತಮಗೆ ಏನಾದರು ಸ್ವಲ್ಪ ಸಮಯ ಸಿಕ್ಕರೆ ನೀವು ದಯವಿಟ್ಟು ಒಮ್ಮೆ ಆ ಪುಸ್ತಕದಮೇಲೆ ಕಣ್ಣಾಡಿಸಿ , ನಿಮಗೂ ಮಜಾ ಬಂದರೂ  ಬರಬಹುದು.

          ಒಂದೆರೆಡು ಗಂಟೆಗಳ ಕಾಲ ಒಬ್ಬನೇ ಕೂತು ಪುಸ್ತಕ ಓದಿ,  ಸ್ವಲ್ಪ ಹಿತವೆನ್ನಿಸಿದಾಗ , ನೇರವಾಗಿ ನೆಡೆದು ಅಲ್ಲಿಯ ಕ್ಯಾಂಟೀನ್ ಗೆ ಬಂದೆ. ಅಷ್ಟೊತ್ತಿಗೆ ನನ್ನ cousin ಕೂಡ ಅಲ್ಲಿಗೆ ಬಂದಿದ್ದ. ಇಬ್ಬರು ಜೊತೆಯಾಗಿ ತಿನ್ನಲು, ಅದು-ಇದು ತಗೊಂಡು, ಅಲ್ಲೇ ಇದ್ದ ಒಂದು ಟೇಬಲ್ ಮೇಲೆ ಕೂತೆವು.  ಅಷ್ಟೊತ್ತಿಗಾಗಲೇ ನನ್ನ ತಲೆಯನ್ನು ಸಂಪೂರ್ಣವಾಗಿ ಆವರಿಸಿದ್ದು  ನಾ ಓದಿದ ಮಲೆನಾಡಿನ ಚಿತ್ರಗಳು ಪುಸ್ತಕದ ಲೇಖನಗಳು ಮಾತ್ರ. ನಾ ಬರಿ ಕುವೆಂಪುರವರ ವರ್ಣನೆಗಳ , ಆ ಸಾಲುಗಳ ಮೆಲುಕು ಹಾಕುತ್ತ, ನನ್ನೆದುರಿಗೆ ತಟ್ಟೆಯಲ್ಲಿದ್ದ ಅನೇಕ ತಿಂಡಿಗಳನ್ನು ಕೂಡ ಮೆಲುಕು ಹಾಕಿದೆ.
  
         ನಾನು ನನ್ನ causin ಗೆ ನಾ ಓದಿದ ಪುಸ್ತಕದ ಬಗ್ಗೆ ಹೇಳತೊಡಗಿದ. ಅವನಿಗೂ ಕೂಡ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ನಾನು ಹೇಳುವುದನ್ನೆಲ್ಲ ಕೇಳಿದ. ನನಗೆ ಬೆಳಿಗ್ಗೆ ಏಕೆ ಹಾಗೆ ಬೇಜಾರಾಗಿತ್ತು, ಆಫೀಸ್ ಇಂದ ಏಕೆ ಹೀಗೆ ಬೇಗನೆ ಬಂದೆ ಎಂದು ಅವನಿಗೆ ಹೇಳಿದೆ. ಅದಕ್ಕೆ ಅವನು ಕೂಡ ಕೆಲವು ಕಾರಣಗಳನ್ನು ನೀಡಿ ಸಮಾಧಾನದ ಮಾತುಗಳಾಡಿದ. ನಮಗೆ ಅನ್ನಿಸಿದ್ದನ್ನು ನಾವು ಮಾಡದೆ ಇದ್ದರೆ, ಇಷ್ಟವಿಲ್ಲದ ಕೆಲವು ಕೆಲಸಗಳನ್ನು ಮಾಡಿದರೆ, ಒಮ್ಮೊಮ್ಮೆ ಹೀಗೆ ಆಗುವುದುಂಟು ಎಂದು ನನಗೆ ಅನ್ನಿಸಿತ್ತು. ನಾವು ವಾಕ್ ಮಾಡುವಾಗ ಅಲ್ಲಿಯ ವಾತಾವರಣ ನಿಜವಾಗಿಯೂ ನಮ್ಮೆಲ್ಲ ಜಂಜಾಟಗಳನ್ನು ಮರೆಸುತ್ತೆ ,  ಆ ಪ್ರಕೃತಿಯಲ್ಲಿ ನಮ್ಮನ್ನು ತನ್ನಲ್ಲಿ ಒಂದಾಗಿಸಿ ಕೊಳ್ಳುತ್ತೆ ಎನ್ನುವುದು ಆದಿನ ಮತ್ತೊಮ್ಮೆ ನನಗೆ ಹರಿವಾಯಿತು. 


          ಯಾವಾಗಲು ಚಿಟಪಟ ಮಾತಾಡುವ ನಾನು ಆ ಕ್ಷಣಕ್ಕೆ ಅಂತರ್ಮುಖಿಯಾಗಿ ಮಾತಿಲ್ಲದೆ  ಸುಮ್ಮನೆ ನಡೆಯುತ್ತಿದ್ದೆ. ಅಷ್ಟೊತ್ತಿಗೆ ಪಶ್ಚಿಮದಲ್ಲಿ ಸ್ವಾಮೀ ಮುಳುಗುತ್ತಾ , ಪ್ರಕೃತಿಗೆ ಸಂಜೆಯೋತ್ಸಾಹ ನೀಡಿ, ಆಕಾಶಕ್ಕೆ ಕೆಂಬಣ್ಣ ಚೆಲ್ಲಿ , ಪಕ್ಷಿಗಳಿಗೆ ಚೇತನ ನೀಡಿ ಗೂಡು ಸೇರಲು ಪ್ರೇರೇಪಿಸಿದ್ದ. ನನಗೂ ಕೂಡ ಅದೇ ಸೂರ್ಯ, ಆ ಕೆಂಬಣ್ಣ,ಆ ಪಕ್ಷಿಗಳ ಚಿಲಿಪಿಲಿಗಳು, ದೂರದಲ್ಲಿ ಕಿರ್-ಕಿರ್ ಎನ್ನುವ  ಸಂಜೆಯುಳುಗಳ  ಗಾನಗಳು  ಮತ್ತೆ ಹೊಸ ಚೈತನ್ಯ ನೀಡಿದ್ದವು. ನನ್ನೆಲ್ಲ ಯೋಚನೆಗಳು , ಬೇಜಾರುಗಳನ್ನು , ನಾನು ಪಶ್ಚಿಮದಲ್ಲಿ ಮುಳುಗುತಿದ್ದ ಆ ಸೂರ್ಯನಿಗೆ ಸಮರ್ಪಿಸಿ , ಅವನನ್ನೇ ದಿಟ್ಟಿಸುತ್ತ, ಕುವೆಂಪು ಹೇಳಿದ ರೀತಿಯಲ್ಲೇ ಅವನನ್ನು ಬಣ್ಣಿಸಿಕೊಳ್ಳುತ್ತ, ನನ್ನನ್ನೇ ನಾನು ಮರೆತು ಹೋಗಿದ್ದೆ. ನನ್ನ cousin ನನ್ನನ್ನು ಎಚ್ಚರಿಸಿದಾಗಲೇ ನಾನು ಅಲ್ಲಿಂದ ಹೊರಬಂದದ್ದು. ನಿಜ ಸ್ನೇಹಿತರೆ ನಮಗೆ ಅದೆಷ್ಟೇ ಬೇಜಾರಾದರು, ದುಃಖವಾದರೂ ಅದನ್ನು ಮರೆಸೋ ಶಕ್ತಿಯನ್ನು ದೇವರು ಪ್ರಕೃತಿಯಲ್ಲಿ ಮಾತ್ರ ಇಟ್ಟಿದ್ದಾನೆ. ಪ್ರಕೃತಿ ನಮ್ಮೊಳಗಿನ ತೊಳಲಾಟಗಳನ್ನೆಲ್ಲ ತನ್ನದಾಗಿಸಿಕೊಂಡು ನಮಗೆ ಅದಮ್ಯ ಚೇತನ ನೀಡುತ್ತದೆ. ಪ್ರಕೃತಿಯ ಸೌಂದರ್ಯ ಮಾತ್ರ ನಮಗೆ ನಿಜವಾದ ಸ್ಪೂರ್ತಿಯಾಗುತ್ತದೆ.

ನಿಮಗಾಗಿ 
ನಿರಂಜನ್ 

ಬುಧವಾರ, ಡಿಸೆಂಬರ್ 19, 2012

ಪ್ರಳಯ


                                               ಪ್ರಳಯ ಆಗೊದಿಲ್ರಿ  !

ಮೊನ್ನೆ ನಮ್ಮ ಒಬ್ಬ ಅತ್ತೆ ಮನೆಗೆ ಹೋಗಿದ್ದೆ, ನಮ್ಮ ಅತ್ತೆಯವರ ಅತ್ತೆಯವರನ್ನು ಬೇಟಿ ಮಾಡಿದೆ. ಅವರು ಸುಮಾರು 70 ವರ್ಷದ ವೃದ್ದರು, ಯಾವುದೋ ಒಂದು ಬಾರಿ ಚಿಂತೆಯಲ್ಲಿದ್ದರು. ನಾವು ಹೋದಮೇಲೆ ನಮ್ಮನ್ನು ನೋಡಿದ ತಕ್ಷಣವೇ ಅವರ ಮುಖ ಅರಳಿದಂತೆ ಕಂಡರೂ ಅವರಲ್ಲಿ ಏನೋ ಭಯ ಮತ್ತು ದುಃಖ ಆವರಿಸಿತ್ತು. ವಯೋಸಹಜವಾದ ನಡುಕ ದ್ವನಿಯಲ್ಲಿ ಅವರು "ಸದ್ಯ ನೀವ್ ಬಂದ್ರಿ ಬಿಡಪ್ಪ, ನಿಮ್ಮನ್ನ ನೋಡಿದ್ದು ತುಂಬಾ ಚೆನ್ನಾಗಾಯಿತು , ನಿಮ್ಮನ್ನೇನು ನೋಡ್ತಿನೋ ಇಲ್ಲೋ ಅನ್ನೋ ಹಾಗೆ ಆಗಿತ್ತು ", ಇದೇನಪ್ಪ ಅಜ್ಜಿ ಹೀಗೆ ಮಾತಾಡುತ್ತೆ ಅಂತ ಹೌಹಾರಿದ ನಾನು, " ಏನಜ್ಜಿ ಏನ್ ಆಯಿತು ಯಾಕೆ ಹೀಗೆ ಮಾತ್ ಆಡ್ತಾ ಇದ್ದೀಯ ? " ಎಂದಾಗ , ಅಜ್ಜಿ " ಅಯ್ಯೋ ಮಾರಾಯ ನಿಂಗೆ ಗೊತ್ತಿಲ್ಲೇನಪ್ಪ ??? ಈ ತಿಂಗಳು ಅದೇನೋ ಪ್ರಳಯ ಆಗುತ್ತೆ ಅಂತೆ , ನಾವೆಲ್ಲಾ ಸತ್ತೆ ಹೋಗ್ತಿವಂತೆ ???" .
            " ಅಯ್ಯೋ ಅಜ್ಜಿ ಅದೆಲ್ಲ ಸುಳ್ಳು , ಏನು ಆಗೊಲ್ಲಜ್ಜಿ . ಭೂಮಿ ಇನ್ನು ಚಿಕ್ಕ ವಯಸ್ಸಿನದು, ಅದಕ್ಕೆ ಇನ್ನು ವಯಸ್ಸಾಗಿಲ್ಲ. ನಮ್ಮ ಭೂಮಿಗೆ ಸದ್ಯಕ್ಕೆ ಏನು ಆಗೋಲ್ಲ. ಇವೆಲ್ಲ ಕಥೆಗಳು ಕಣಜ್ಜಿ . ಜಾಸ್ತಿ ಯೋಚಿಸಬೇಡ , ಏನೇನೂ ಆಗೋಲ್ಲ , ಆರಾಮಾಗಿ ಇದ್ಬಿಡು" ಅಂತ ನಾ ಸಮಾಧಾನ ಪಡಿಸಲು ಕೆಲವು ಮಾತುಗಳನ್ನ ಹೇಳಿದೆ.

            "ಅಲ್ಲಪ್ಪ ಜನ ದಿನ ಮಾತಾಡ್ತಾರೆ ಈ Tv ಗೆಲ್ಲ ಇದರ ಬಗ್ಗೆ , ಅವ್ರು ಹೇಳೋದು ಸುಳ್ಳು ಅಂತಿಯಾ ?? , ಅವರೆಲ್ಲ ದೊಡ್ಡ ಜನ ಕಣಪ್ಪ , ಪ್ರಳಯ ಆಗೇ ಆಗುತ್ತೆ " ಅಂತ ಅಜ್ಜಿ ಖಂಡಿತವಾಗಿ ನಂಬೆ ಬಿಟ್ಟಿದ್ದರು .

           "ನಮ್ದೇನು ಬಿಡಪ್ಪ , ಪ್ರಳಯ ಆಗ್ಲಿ ಬಿಡ್ಲಿ ಹೋಗಲೇ ಬೇಕಿತ್ತು ,ಹೋಗ್ತಿವಿ , ನನಗೆ ನನ್ನ ಮಕ್ಕಳು, ಮೊಮ್ಮಕ್ಕಳದೆ ಚಿಂತೆ ಕಣಪ್ಪ " ಅಂತ ನಿಜವಾದ ದುಃಖದಲ್ಲೇ ಹೇಳಿದ ಅಜ್ಜಿ ಗೆ " ಇಲ್ಲ ಅಜ್ಜಿ ಏನು ಯೋಚಿಸಬೇಡ, ಏನೇನು ಆಗೋಲ್ಲ " ಎಂದು ಹೇಳಿದರು, ಅಜ್ಜಿ " ಅಲ್ಲಪ್ಪ ನಾವೇನೋ ಮಕ್ಕಳು ಮರಿ ಕಂಡ್ವಿ , ಮಂತ್ಯಾನ ಮಠ ಅಂತ ಸವೆದ್ವಿ , ಆದ್ರೆ ನೀವಿನ್ನು ಚಿಕ್ಕವರು , ಮಧುವೆ ಇಲ್ಲ ಮುಂಜಿನು ಇಲ್ಲ , ಅದೆಂಗೆ ಸಮಾಧಾನ ತಂದುಕೊಳನಪ್ಪ " ಎಂದಾಗ ಸ್ವಲ್ಪ ನಗು ಬಂತಾದರೂ ಈ ಪ್ರಳಯ ಎಂಬ ಭಯ ಬಿತ್ತಿದೊರ ಬಗ್ಗೆ ಸಿಟ್ಟು ಬಂತು.

            ಸ್ನೇಹಿತರೆ, ಈ "ಪ್ರಳಯ ಆಗುತ್ತೆ, ಹಾಗೆ ಆಗುತ್ತೆ " ಎಂಬ ಊಹ-ಪೋಹಗಳ ಸುದ್ದಿ ಎಲ್ಲೆಡೆ ಹಬ್ಬಿದೆ ಎಂದು ನನಗೆ ಗೊತ್ತಿತ್ತು. ಆದರೆ ಈ ಮಟ್ಟಿಗೆ ಅದು ಜನರ ಮೇಲೆ ಪ್ರಭಾವ ಬೀರಿದೆ ಎಂದು ತಿಳಿದಿರಲಿಲ್ಲ. ಈ ಸುದ್ದಿಯನ್ನ ಹಬ್ಬಿಸಿದ ಕೀರ್ತಿ ಮಾತ್ರ ಈ ಕನ್ನಡ ನ್ಯೂಸ್ ಚಾನೆಲ್ಗಳಿಗೆ ಮಾತ್ರ ಸಲ್ಲಲೇ ಬೇಕು.

             ಹೀಗೆ ಮಾತಾಡುವಾಗ ಅಜ್ಜಿಗೊಂದು ಪ್ರಶ್ನೆ ಕೇಳಿದೆ , "ಅಜ್ಜಿ ಈ ಪ್ರಳಯ ಆಗುತ್ತೆ ಅಂದ್ರೆಲ್ಲ ಅದನ್ನ ಯಾರು ಹೇಳಿದ್ರು ?? " ಅಜ್ಜಿ ಥಟ್ ಅಂತ , ತಮ್ಮ ಮಕ್ಕಳ ಮೊಮ್ಮಕ್ಕಳ ಹೆಸರನ್ನು ಈ ರೀತಿ ಸರಾಗವಾಗಿ ಹೇಳುತ್ತೋ ಇಲ್ಲವೋ ಗೊತ್ತಿಲ್ಲ , ಆದ್ರೆ ಒಂದು ಎಂಟು-ಹತ್ತು ಹೆಸರುಗಳನ್ನು ಮಾತ್ರ ಪಟ ಪಟ ಹೇಳಿತು. " ಇದೇನಪ್ಪ ಅಜ್ಜಿ ಈ ರೀತಿ ಹೆಸರುಗಳನ್ನ ನೆನಪಿಟ್ಟುಕೊಂಡು ಹೇಳುತ್ತೆ " ಅಂತ ಅಂದುಕೊಂಡೆ. ಅಜ್ಜಿ ಹೇಳಿದೆ ಹೆಸರುಗಳು ಯಾರದು ಗೊತ್ತೇ ?? ಅಜ್ಜಿ ಹೇಳಿದ್ದು ಬರಿ ನಮ್ಮ ಕನ್ನಡ ನ್ಯೂಸ್ ಚಾನೆಲ್ ಗಳ ಮತ್ತು ಅದರಲ್ಲಿ ಬರುವ ಎಲ್ಲಾ ಜೋತಿಷಿಗಳು !! .

             ನಿಜ, ಈ ನ್ಯೂಸ್ ಚನ್ನೆಲ್‍ಗಳನ್ನ ನೀವು ಒಂದರ್ದ ಗಂಟೆ ಕೂತು ನೋಡಿದ್ರೆ ಸಾಕು ನಿಮಗೂ ಅರ್ಥಆಗುತ್ತೆ, ಅವು ಹೆಸರಿಗೆ ಮಾತ್ರ ನ್ಯೂಸ್ ಚನ್ನೆಲ್‍ಗಳು. ಆದ್ರೆ ಅವು ಪ್ರಸಾರ ಮಾಡುವುದು ಮಾತ್ರ ಬರಿ ಜ್ಯೋತಿಷ್ಯ ಕಾರ್ಯಕ್ರಮಗಳು, ಬಿಟ್ಟರೆ ಸಿನೆಮಾ ಕಾರ್ಯಕ್ರಮಗಳು. ಬೆಳಿಗ್ಗೆ ಟೀವೀ ಹಚ್ಚಿದರೆ ಸಾಕು ಯಾವ ಚಾನೆಲ್ ನೋಡಿದ್ರೂ ಅಲ್ಲಿ ಬರಿ ಈ ಜ್ಯೋತಿಷಿಗಳದ್ದೆ ಖಾರುಬಾರು. ಖಾವಿ ಬಟ್ಟೆಗಳು, ಮೈಕೈಗೆಲ್ಲ ರುದ್ರಾಕ್ಷಿ ಮಾಲೆಗಳು, ಎಲ್ಲೂ ಜಾಗ ಬಿಡದೆ ಹಚ್ಚಿದ ವಿಭೂತಿ, ಮುಂದೊಂದು ಲ್ಯಾಪ್-ಟಾಪ್, ಜೊತೆಗೊಬ್ಬಳು ರೇಷ್ಮೆ ಸೀರೆ ಧರಿಸಿ ನಗುಮುಖದ ಸುಂದರಿ ಇದು ಎಲ್ಲಾ ಚಾನೆಲ್‌ಗಳಲ್ಲೂ ಬೆಳಿಗ್ಗೆ 7 ರಿಂದ ಹತ್ತರ ತನಕ ನಮಗೆ ಸಿಗುವ ದೃಶ್ಯಗಳು.

              ಈ ಭಾರಿ ಗುರೂಜಿಗಳ ಪಕ್ಕಕೆ ಕೂತ ಆ ಹುಡುಗಿಯರು " ನಮ್ಮ ಗುರೂಜಿಗಳು " ಎಂದು ನಗುಮುಖ ಹೊತ್ತು, ಬಾಯಿ ತುಬಾ ಕರೆಯುತ್ತಾರೆ. ಜನರೋ ಅವರಿಗೆ ತಮ್ಮೆಲ್ಲ ಕಷ್ಟಗಳನ್ನು ದುಃಖದಿಂದ ಬಿದ್ದು ಬಿದ್ದು ಹೇಳಿಕೊಳ್ತಾರೆ, ನಿರೂಪಕಿ ಸುಂದರಿ ಮಾತ್ರ ಜನರ ಸಮಸ್ಯೆಗಳನ್ನ ನಗು ನಗುತ್ತಲೇ ಕೇಳಿ , ಗುರೂಜಿಗೆ ಇನ್ನು ಜಾಸ್ತಿ ನಗುತ್ತಲೇ ಜನರ ಕಷ್ಟಗಳನ್ನು ವೈಭವೀಕರೆಸಿ ಹೇಳುತ್ತಾಳೆ. ಗುರೂಜಿ ಕೂಡ ಸಮಸ್ಯಗಳಿಗೆ ಉತ್ತರಿಸೋದ ನೋಡ್ಬೇಕು , ಬರಿ ಅಡ್ಡಗೋಡೆ ಮೇಲೆ ದೀಪ ಇಡೋಹಾಗೆ ಮಾತ್ ಆಡ್ತಾರೆ. ಒಬ್ಬ ಗುರೂಜಿಯಂತೂ ಕೈ ಅಲ್ಲಿ ಚೂಪಾದ ಈಟಿಯನ್ನು ಇಟ್ಕೊಂಡೇ ಕೂತಿರುತಾರೆ , ಅದ್ಯಾಕೋ ಗೊತ್ತಿಲ್ಲ. ಬಹುಷ್ಯ ಯಾರಾದರೂ ವಿಚಾರವಂತರು ಏನಾದರೂ ಕೇಳಿದರೆ ಅವರು ಅದರಿಂದ ಚುಚ್ಚೆ ಬಿಡುತ್ತಾರೇನೋ ! .ಈ ಚಾನೆಲ್ ಗಳು , ಈ ಜ್ಯೋತಿಷಿ ಗುರೂಜಿಗಳು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದಾರೆ ಎಂದರೆ ನಮಗೆ ನಿಜವಾಗಿಯೂ ಆಶ್ಚರ್ಯವಾಗುತ್ತೆ . ಕೆಲವು ಅಂಕಿ ಅಂಶಗಳ ಪ್ರಕಾರ ಇಂಥಹ ಕಾರ್ಯಕ್ರಮಗಳಿಗೆನೇ ಜಾಸ್ತಿ ವೀಕ್ಷಕರಿದ್ದಾರಂತೆ.

              ಈ ಟೀವಿ ಚಾನೆಲ್ಲುಗಳು " ಇನ್ನೇನು ಪ್ರಳಯ ಆಗೇ ಆಗುತ್ತೆ , ಆಗುವುದರಲ್ಲಿ ಸಂಶಯವೇ ಇಲ್ಲ. ಈ ಪ್ರಳಯ ಆದಾಗ ಏನೆಲ್ಲಾ ಆಗುತ್ತೆ ಅಂತ, ಉಚಿತವಾಗಿ ಸಿಕ್ಕ youtube ಮತ್ತೆ ಕೆಲವು ಇಂಗ್ಲಿಷ್ ಸಿನಿಮಾಗಳ vedio ತುಣುಕುಗಳನ್ನ ಬಳಸಿ, ಜನರಲ್ಲಿ ಭಯದ ಬೀಜಗಳನ್ನೇ ಬಿತ್ತಿದರು. ತಮಗೆ ಏನು ರೋಚಕ ವಿಷಯಗಳು ಇಲ್ಲವೆಂದಾಗ , ಈ ಪ್ರಳಯದ ಮೇಲೆ ಅವರು ಅನೇಕ ಚರ್ಚೆಗಳನ್ನೇ ಮಾಡಿದರು, ಅನೇಕ ಪ್ರಳಯ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡಿದರು. ಜ್ಯೋತಿಷಿಗಳನ್ನು ಕರೆಸಿ ಮುಂದಾಗುವುದನ್ನ ನಾವು ಕರಾರುವಕ್ಕಾಗಿ ಹೇಳ್ತಾ ಇದೀವಿ ಅಂತ ಜನರನ್ನು ನಂಬಿಸಿದರು. ಸ್ನೇಹಿತರೆ ನಿಜ ಹೇಳಬೇಕೆಂದರೆ ಇವರಿಗೆ ತಮ್ಮ ನ್ಯೂಸ್ ಚಾನೆಲ್ಗಳನ್ನು ಸದಾ ಚಟುವಟಿಕೆಯಲ್ಲಿಡುವ ಉದ್ದೇಶದಿಂದ , ಒಂದೊಷ್ಟು ದಿನ "ಈ ಪ್ರಳಯ ಆಗುತ್ತೆ " ಕಾರ್ಯಕ್ರಮ ಪ್ರಸಾರ ಮಾಡಿದರು , ಈಗ ಅವರೇ " ಪ್ರಳಯ ಆಗೋಲ್ಲ " ಅಂತ ಮತ್ತೆ ಕಾರ್ಯಕ್ರಮಗಳನ್ನು ಶುರು ಮಾಡಿದ್ದಾರೆ. ಆ ಜ್ಯೋತಿಶಿಗಲೋ ಹಾಗ "ಪ್ರಳಯ ಆದೆ ಆಗುತ್ತೆ " ಅಂತ ಹೇಳಿ " ಆ ಪೂಜೆ ಈ ಪೂಜೆ, ಆ ಶಾಂತಿ , ಆ ಹೋಮ ಮಾಡಿಸಿ" ಅಂತ ಜನರನ್ನು ಸುಲಿದು , ಈಗ "ಪ್ರಳಯ ಆಗೋಲ್ಲ , ನಾವು ಮಾಡಿರ್ತಕ್ಕಂಥ ಪೂಜೆಗಳಿಂದ ಭಗವಂತ ಶಾಂತಗೊಂಡು ನಮ್ಮನ್ನು ಕಾಯುತ್ತಾನೆ , ನೀವೇನು ಭಯ ಪಡಬೇಡಿ " ಎಂದು ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ.

             ಎಲ್ಲಿಯವರೆಗೂ ನಾವು ಈ ಟೀವಿಗಳಲ್ಲಿ ಬರೋದೆಲ್ಲ ಸತ್ಯ , ಈ ಜ್ಯೋತಿಷಿಗಳು ಹೇಳೋದೆಲ್ಲ ಸತ್ಯ ಅಂತ ನಂಬುತ್ತೇವೋ ಅಲ್ಲಿಯವರೆಗೂ ನಾವು ತಪ್ಪು ಕಲ್ಪನೆಗಳನ್ನು ಮಾಡಿಕೊಂತ , ಭಯದಲ್ಲಿ ಬದುಕುತ್ತೇವೆ. ಅವರು ತೋರಿಸೋದೆಲ್ಲ ನಿಜವಲ್ಲ. ಖಾವಿ ತೊಟ್ಟು ಹೇಳಿದರೆ ಅದು ನಿಜವೂ ಆಗುವುದಿಲ್ಲ.

ನಿಮಗಾಗಿ
ನಿರಂಜನ್

ಮಂಗಳವಾರ, ನವೆಂಬರ್ 13, 2012

ನನ್ನ

  
ಬಿನ್ನಹ 
 ಬೆಳೆಯುವ ಮುನ್ನವೇ ಅಳಿಯುವ ಸೂಚನೆ 
ಕಲೆಯುವ ಮೊದಲೇ ಸರಿಯುವೆ ಎನ್ನುವೆ 

    ಬೇಡವೆಂದರೂ ಬೆನ್ನುಹತ್ತಿ ನೀ ಬರುವೆನೆನ್ನುವೆ 
      ಬೇಕೆಂದಾಗ ಬೆನ್ನುಮಾಡಿ ನೀ ಹೋಗುವೆನೆನ್ನುವೆ 

 ಅರಿಯದೆ ನನ್ನ ನೋವು , ತಿಳಿಯದೆ ಒಲವು
      ಸರಿಯದಿರು ನನ್ನಿಂದ ,ಕೂಡಿರಲಿಚ್ಚೆಯು ದಿನವು 

   ಕಟ್ಟಿರುವ ಕನಸು ಇನ್ನು ಹಸಿಯಾಗಿಯೇ ಇದೆ 
        ನೆಟ್ಟಿರುವ ಪ್ರೀತಿಯ ಬಳ್ಳಿ ಇನ್ನು  ಹಸಿರಾಗಬೇಕಿದೆ 

          ಯಾಕಿಷ್ಟು ಅವಸರ , ಯಾಕಿಷ್ಟು ಕಾತರ , ಯೋಚಿಸು 
                      ನನ್ನ ಜೊತೆಯಲಿರಲು ಸಹಕರಿಸು , ಅಂಗೀಕರಿಸು , ಪ್ರೀತಿಸು ........

                                                              --- ನಿರಂಜನ್ 


ಬುಧವಾರ, ಅಕ್ಟೋಬರ್ 31, 2012

ಅವನ


                                              ಆ ಪುಸ್ತಕ .....

ಹಿಂದಿನ ದಿನ ನಡೆದ ಕೆಲವು ಘಟನೆಗಳಿಂದ ಬೇಜಾರಾಗಿದ್ದ ನಾನು, ಆ ದಿನ ತುಂಬಾ ದುಃಖ ಪಟ್ಟಿದ್ದೆ. ನಾ ಮಾಡಿದ ಸಣ್ಣ ತಪ್ಪು ನನ್ನನ್ನು ಆ ದಿನ ತುಂಬಾ ಹಿಂಸಿಸಿತ್ತು.ಮಾಡಿದ ಅ ಚಿಕ್ಕ ತಪ್ಪು ನಿಜವಾಗಿಯೂ ನನಗೆ ತುಂಬಾನೇ ಬುದ್ದಿ ಕಲಿಸಿತ್ತು.  ಅದೇ ತಪ್ಪನ್ನು ನಾನು ಮತ್ತೆ ಎಂದು ಮಾಡಬಾರದು ಎಂದು ನಿರ್ದರಿಸಿದ ನಾನು ಸ್ವಲ್ಪ ಸಮಾಧಾನಗೊಂಡು, ಒಂದು ಸಣ್ಣ ವಾಕ್ ( walk ) ಮಾಡಲು ನಿರ್ದರಿಸಿದೆ.ಮನೆಯ ಹತ್ತಿರವೇ ಇದ್ದ ನನ್ನ ಸ್ನೇಹಿತ ಕೂಡ ನನ್ನೊಂದಿಗೆ ವಾಕ್ ಬರುವುದಾಗಿ ಹೇಳಿದ. ನಾವಿಬ್ಬರು ಹೀಗೆ ನಡೆದುಕೊಂಡು ಹೋಗುತ್ತಿರುವಾಗ  ನನ್ನ  ಎದುರಿಗೆ ಬರುವ ಚಿಕ್ಕ ಹುಡುಗನೊಬ್ಬ ಒಂದು ಪುಸ್ತಕವನ್ನು ರಸ್ತೆಗೆ ಎಸೆದ, ನಾನು " ಹೇ ಯಾಕೋ ಪುಸ್ತಕವನ್ನು ಎಸೆದೆ " ಅಂತ ಕೇಳಿದ, ತಕ್ಷಣ ಆ ಚಿಕ್ಕ ಹುಡುಗ ನನ್ನ ಮುಖವನ್ನೊಮ್ಮೆ ನೋಡಿ , ಏನೂ ಉತ್ತರಿಸದೆ  ಅಲ್ಲಿಂದ ಕಾಲು ಕಿತ್ತ. ನಾ ಆ ಪುಸ್ತಕವನ್ನು ಕೈಯಲ್ಲಿ ಎತ್ತಿಕ್ಕೊಳ್ಳುವ ಮೊದಲೇ  ಇನ್ನೊಬ್ಬ ಮದ್ಯವಯಸ್ಸಿನ ಯುವಕನೊಬ್ಬನು ಅದರ ಮೇಲೆ ಕಾಲಿಟ್ಟು ನೆಡದೆ ಸಾಗಿದ್ದನು. ಇನ್ನೇನು ಮತ್ತೊಬ್ಬರು ಅದನ್ನು ತುಳಿಯುವ ಮೊದಲೇ ನಾ ಅದನ್ನು ನನ್ನ ಕೈಗೆ ಎತ್ತಿಕೊಂಡಿದ್ದೆ. 


           ಆ ಪುಸ್ತಕ ಒಂದು ಚಿಕ್ಕ ಇಂಗ್ಲಿಷ್ ಪುಸ್ತಕವಾಗಿತ್ತು. ಅದು ಬಹಳ ಮಟ್ಟಿಗೆ ಈಗಿನ LKG ಅಥವಾ UKG ತರಗತಿಯದಿರಬಹುದು. ನಿಜವಾಗಿಯೂ ಸ್ನೇಹಿತರೆ ಅದರ ಮೇಲೆ ಸುಂದರ ಕಾರ್ಟೂನ್ ತರಹದ ಚಿತ್ರಗಳಿದ್ದವು. ಒಳ್ಳೆಯ ಬಣ್ಣಗಳಿಂದ ಚಿತ್ರಿಸಿದ ಆ ಚಿತ್ರಗಳು ನಿಜವಾಗಿಯೂ ನನ್ನನ್ನು ಸಹಜವಾಗಿ ತನ್ನತ್ತ ಸೆಳೆದವು. ಆ ಪುಸ್ತಕದಲ್ಲಿ  ಇದ್ದದ್ದು ಕೇವಲ ಕೆಲವೇ ಪುಟಗಳು. ಎಲ್ಲ ಪುಟಗಳಲ್ಲು ಒಂದೊಂದು ವರ್ಣರಂಜಿತವಾದ ಚಿತ್ರ, ಅದರೊಂದಿಗೆ ಚಿಕ್ಕ ಮಕ್ಕಳಿಗಾಗಿಯೇ ರಚಿಸಿದ ಆರೇಳು ಸಾಲುಗಳ ಮಕ್ಕಳ ಪದ್ಯಗಳು ಕೂಡ ಇದ್ದವು. ಚಿಕ್ಕ ಮಕ್ಕಳ ಪದ್ಯಗಳು ಚಿಕ್ಕದಾಗಿದ್ದರೂ ಪ್ರಾಸಬದ್ದವಾಗಿದ್ದವು ಕೂಡ. ಅದರಲ್ಲಿನ ಒಂದನ್ನು ನಾ 5ನೇ  ತರಗತಿಯಲ್ಲಿ ಓದಿದ ನೆನಪು. ನಿಜವಾಗಿಯೂ ಅವೆಲ್ಲವೂ ಎಷ್ಟು ಚಿಕ್ಕವಾಗಿದ್ದವೋ ಅಷ್ಟೇ ಅರ್ಥಗರ್ಬಿತವಾಗಿದ್ದವು. ಅಲ್ಲಿದ್ದ ಹಿತವಾದ ಪ್ರಾಸಗಳು ನನ್ನ  ಮುಖದಲ್ಲಿ ಒಂದು ಸಣ್ಣನಗುವುಕ್ಕಲು ಕೂಡ  ಕಾರಣವಾಗಿದ್ದವು. ಇಡೀ ನನ್ನ ಬಾಲ್ಯವನ್ನೇ ನನ್ನ ಕಣ್ಮುಂದೆ ತಂದಿಟ್ಟ ಆ 4-5 ಪುಟಗಳ  ಆ ಸಣ್ಣ ಪುಸ್ತಕ, ಬೇಜಾರಾಗಿದ್ದ ನನ್ನ ಮನಸ್ಸನ್ನು ತಿಳಿಗೊಳಿಸಿದ್ದಲ್ಲದೆ , ನನಗೆ ನನ್ನ ಬಾಲ್ಯದ ನೆನಪು ತಂದು ಹಿತ ನೀಡಿತು.  ಪುಸ್ತಕಗಳಿಗೆ ಈ ಶಕ್ತಿ ನಿಜವಾಗಿಯೂ ಇದೆ ಎಂದು ಮತ್ತೆ ನನಗೆ ಮನವರಿಕೆ ಆಯಿತು. ಅಲ್ಲಿದ್ದ ಚಿತ್ರಗಳು, ನಾ ಚಿಕ್ಕವನಿದ್ದಾಗ ರಚಿಸುತ್ತಿದ್ದ ಚಿತ್ರಗಳ ಹಾಗೆಯೇ ಇದ್ದವು. 

               ನಾವು ಚಿಕ್ಕವರಿದ್ದಾಗ ಓದಿದ ಪುಸ್ತಕಗಳಲ್ಲಿ ಈ ರೀತಿಯ ವರ್ಣ ರಂಜಿತ ಚಿತ್ರಗಲಿರುತ್ತಿರಲಿಲ್ಲ, ಆದರೂ ಆ ಪದ್ಯಗಳು ನಮ್ಮನ್ನು ಆ ರೀತಿಯ ಪ್ರಪಂಚಕ್ಕೊಂತು ಕೊಂಡೊಯ್ಯುತ್ತಿದ್ದವು.  ಚಿಕ್ಕ ಮಕ್ಕಳಿಗೆ ಕಲ್ಪಾನಶಕ್ತಿ  ಹೆಚ್ಚಿಸುವ ಈ ರೀತಿಯ ಪದ್ಯಗಳು ಆ ಕ್ಷಣಕ್ಕೆ ನನ್ನನ್ನು ಕೂಡ ಕಲ್ಪನಾ ಲೋಕಕ್ಕೆ ಕರೆದೊಯ್ದವು. ಪುಸ್ತಕಗಳ ಈ ಶಕ್ತಿಯೇ ನನ್ನ ಮತ್ತು ಅವುಗಳ ಸಂಗಕ್ಕೆ ಕಾರಣ. ಕೆಲವರು ಹೇಳುವಂತೆ ಎಲ್ಲ ವಯ್ಯಸಿನ ಮನುಷ್ಯರಲ್ಲೂ ಒಬ್ಬ ಚಿಕ್ಕ ವಯಸ್ಸಿನ ಪುಟ್ಟ ಮಗುವು ಇರುತ್ತಾನೆ ಎಂಬುದು ಅಕ್ಷರಷಃ ನಿಜ ಎಂದು ನನಗೆ ಆ ಪದ್ಯಗಳನ್ನು ಓದಿದಾಗ , ಚಿತ್ರಗಳನ್ನು ನೋಡಿದಾಗ ಅರಿಯಿತು.  ನನ್ನಲ್ಲಿದ್ದ ಆ ಚಿಕ್ಕ ಕಂದ  ಅದೆಷ್ಟು ಖುಷಿ ಪಟ್ಟ ಎಂದರೆ ನಾ ಮನೆಗೆ ಬಂದು ನನ್ನ ಪಕ್ಕದ ಮನೆಯಲ್ಲಿದ್ದ 1ನೇ  ತರಗತಿಯ ಹುಡುಗನ ಪುಸ್ತಕ ಓದಿದೆ.  

             ಪುಸ್ತಕವನ್ನು ಬೀದಿಗೆ  ಎಸೆದ ಆ ಹುಡುಗನ ಮೇಲೆ ಕ್ಷಣ ಕಾಲ ಸಿಟ್ಟು ಬಂದಿದ್ದ ನನಗೆ "ಹೋಗ್ಲಿ ಬಿಡು ಅವನಿಗೆ ಗೊತ್ತಿಲ್ಲ ಅದರ ಬೆಲೆ " ಅಂತ ಅಂದುಕೊಂಡಿದ್ದೆ .  ನಾನು ಪುಸ್ತಕವನ್ನು ಓದಿದ ಮೇಲೆ ನನಗೆ ತಿಳಿಯಿತು ,  ಆ ಹುಡುಗ ಅವನಿಗೆ ಅರಿಯದೆಯೇ ನನಗೆ ಒಂದು ರೀತಿಯಲ್ಲಿ ಸಹಾಯ ಮಾಡಿದ್ದ. ಯಾವುದೋ ವಿಷಯಕ್ಕೆ ಬೇಜಾರಾಗಿದ್ದ ನಾನು ಬೇರೆಯ ವಿಷಯದ ಬಗ್ಗೆ ಗಮನಹರಿಸಲು ಒಂದು ರೀತಿಯಲ್ಲಿ ಕಾರಣನಾಗಿದ್ದ. ನಿಜವಾಗಿಯೂ  ಸ್ನೇಹಿತರೆ ನಿಮಗೂ ಕೂಡ ಸ್ವಲ್ಪ ಸಮಯ ಸಿಕ್ಕರೆ ಚಿಕ್ಕ ಮಕ್ಕಳ ಪುಸ್ತಕಗಳನ್ನು ಓದಿ ನೋಡಿ, ಅವುಗಳೇನು ಬಾರಿ ಕತೆ-ಕಾದಂಭರಿಗಳಾಗಿರುವುದಿಲ್ಲ ಆದರೂ  ಹಲವು ವಿಷಯಗಳ್ಳನ್ನ  ಅವು ಸಾರಿ  ಹೇಳುತ್ತವೆ. ನಿಮ್ಮನ್ನು ನಿಮ್ಮ ಭಾಲ್ಯಕ್ಕೆ ಮತ್ತೊಮ್ಮೆ ಕರೆದೊಯ್ಯುತ್ತವೆ. ನೆನಪುಗಳಲ್ಲೆಲ್ಲ ನಮ್ಮ ಭಾಲ್ಯದ ನೆನಪುಗಳೇ  ಅತೀ  ಹಿತ ನೀಡುವುವು. "ನೋಡಿ , ನಿಮ್ಮ ಮನೆಯ ಹತ್ತಿರವಿರುವ ಅಥವಾ ನಿಮ್ಮ ಮನೆಯಲ್ಲಿಯೇ ಇರುವ ಚಿಕ್ಕ ಮಕ್ಕಳ ಪುಸ್ತಕದ ಮೇಲೆ ಒಮ್ಮೆ ಕಣ್ಣಾಡಿಸಿ, ನಾವು ಕಲಿಯೋದು ಬೇಜಾನ್ ಇದೆ "



ನಿಮಗಾಗಿ 
ನಿರಂಜನ್  

ಬುಧವಾರ, ಅಕ್ಟೋಬರ್ 17, 2012

Just for laugh ....


                                                     ಗೋಪಾಲಣ್ಣನ  ಮಾಲು......

ಬೇಜಾನ್ ದಿನ ಆದ್ಮೇಲೆ , ಮುತ್ತು ಮಾರಿಯಮ್ಮ ದೇವಸ್ತಾನಕ್ಕೆ ಬರ್ತಿದ್ದ ನಮ್ಮ ಲಕ್ಷ್ಮಕ್ಕ ಹಳೆ ಬೆಂಗಳೂರು ಮತ್ತೆ ಹೊಸ ಬೆಂಗಳೂರು  ಬಗ್ಗೆ ಮಾತ್ ಆಡ್ತಾನೆ ಇದ್ಲು. ಇದನ್ನ ಕೇಳಿ ಕೇಳಿ ಸುಸ್ತಾಗಿದ್ದ ಮುರಳಿ , ಸುಮ್ನೆ ಬಸ್ಸಿನ ಕಿಟಕಿಯಿಂದ ಹೊರಗೆ ನೋಡ್ತಾನೆ ಇದ್ದ . ಮುರಳಿ ಏನು ಮಾತಾಡದೆ ಇದ್ರೂ ಲಕ್ಷ್ಮಕ್ಕ ನ  ಬಾಯಿ ಮಾತ್ರ ಬೆಂಗಳೂರಿನ ಜನರ ಬಗ್ಗೆ , ಜನರ ಬಟ್ಟೆ ಬರೆಗಳ ಬಗ್ಗೆ , ಇಲ್ಲಿಯ  ಜನರ  ತಿಂಡಿ ತೀರ್ಥಗಳ ಬಗ್ಗೆ  ಮಾತ್ ಆಡ್ತಾನೆ ಇದ್ಲು. ಮುರಳಿಗೋ ಆಗ್ಲೇ ಸಾಕಾಗಿ ಹೋಗಿತ್ತು. ಯಾರೋ ಈ ನ್ಯೂಸ್ ಚಾನೆಲ್ ಅಲ್ಲಿ ಬರೋ ಜ್ಯೋತಿಷಿ ಹೇಳಿದ್ದ ಅಂತೆ ಲಕ್ಷ್ಮಕ್ಕಗೆ ಈ ಮುತ್ತು ಮಾರಿಯಮ್ಮ ಟೆಂಪಲ್ ಗೆ ಬರಲು. ಅದೇ ಸಮಯಕ್ಕೆ ಮುರಳಿಯ  ಗ್ರಹಚಾರ ಕೆಟ್ಟೋ ಏನೋ ಲಕ್ಷ್ಮಕ್ಕನನ್ನು  ಅನಿವಾರ್ಯವಾಗಿ ತನ್ನ  ಜೊತೆಗೆ   ಕರ್ಕೊಂಡು ಬರಲೇ ಬೇಕಿತ್ತು.
          ಮುರಳಿ ಏನ್ ಮಾತಾಡಿದ್ರು ಕೇಳದ ಲಕ್ಷ್ಮಕ್ಕ , ಬಾಯಿ ತಗುದ್ರೆ ಸಾಕು "ಈ ಹಾಳಾದ್ ಬೆಂಗಳೂರು ಜನ , ಸ್ವಲ್ಪನು ಆಚಾರ, ವಿಚಾರ ಇಲ್ಲ , ನೋಡೋ ಅದೆಂಗೆ ಈ ತರದ ಬಟ್ಟೆ ಬರಿ ಹಾಕೊಂಡು ಬೀದಿ ಬೀದಿ ಸುತ್ತವೇ,,, ಇವಕ್ಕೆ ಅದೇನು ಅನ್ಸೋಲ್ಲವಾ ? ಅದೇ ನಮ್ಮೂರಗೆ ನೋಡು ನಾವು ಹೇಗೆ ಇರ್ತೀವಿ. ಇವುಕ್ಕೆ  ಏನಾದ್ರೂ  ಭಯ ಭಕ್ತಿ ಇದೇನಾ? , ಅಲ್ನೋಡೋ  ಅದು ತುಂಡು ಬಟ್ಟೆ ಹೇಗೆ ತೊಟ್ಕೊಂದೈತಿ" ಅಂದದ್ದೇ ತಡ ಮುರಳಿ ತನ್ನ ಕಣ್ಣುಗಳನ್ನೂ  ಊರಡ್ದಾರ  ಹಗಲಿಸಿ "ಎಲ್ಲಿ ಲಕ್ಷ್ಮಕ್ಕ ??? " ಅಂತ ಬಾಯಿ ತೆಗೆದ.  ಲಕ್ಷ್ಮಕ್ಕ ಆ ವಿಚಿತ್ರ ತುಂಡು ಬಟ್ಟೆ ಹಾಕೊಂಡು , ಬೈಕ್ ಹಿಂದೆ ಕೂತ್ಕೊಂಡು ಹೋಗ್ತಿದ್ದ ಆ ಹುಡುಗಿಯನ್ನು ನೋಡ್ತಾ ಹೇಳ್ತಾಳೆ... 
              " ಅದ್ಯಾಕ ಹಂಗೆ ಅಂಟಿಕೊಂಡು ಕುತ್ಕಬೇಕು ,   ಅವಯ್ಯನ ಮೇಲೆ  ಹಿಂಗೆ ಕೂತರೆ ಆತ ಅದೆಂಗೆ ಗಾಡಿ ಓಡಿಸ್ಬೇಕು ??   ಇನ್ನು ಒಬ್ರು ಹಿಂದೆ ಕೂರೋವಷ್ಟು ಜಾಗ ಐತಿ ನೋಡೋ, ಅದೇನು ಹಿಂಗೋ , ಅದ್ಯಾಕೋ ಈ ತರನೋ ಇಲ್ಲಿ .... " ಅಂತ ಕೇಳ್ತಾನೆ ಇದಾಳೆ ಮುರಳಿಗೆ ,  ಆದ್ರೆ ಉತ್ತರ ಮಾತ್ರ ಅವನಿಂದ ಇಲ್ಲ. ಬಿಟ್ಟ ಬಾಯಿ ಬಿಟ್ಕೊಂಡು , ತೆರೆದ ಕಣ್ಣು ಮುಚ್ಚದೆ ಲಕ್ಷ್ಮಕ್ಕ ತೋರಿಸಿದ ಹುಡುಗಿಯನ್ನೇ ನೋಡುತ್ತಾ  , ಏನನ್ನೋ ತನ್ನ ಕಣ್ಣೊಳಗೆ  ತುಂಬಿ ಕೊಳ್ತಾನೆ ಇದ್ದ ....  ಮಾತಿನ ಮದ್ಯ ಇದನ್ನು ಗಮನಿಸಿದ ಲಕ್ಷ್ಮಕ್ಕ " ಹೇ ಮುರಳಿ , ಏನೋ ಹಾಗೆ ನೊಡ್ತಿಯ , ಏನ್ ಹುಡುಗರೋ ಅವಕ್ಕಂತು ಮಾನ ಮರಿಯಾದೆ ಇಲ್ಲ ನಿಂಗು ಇಲ್ಲೇನೋ  ? ಏನೂ ಮಾತಾಡದೆ ಹಂಗ್ಯಾಕೆ  ನೊಡ್ತಿಯ  ಅವುನ್ನ ?? " ಅಂದಾಕ್ಷಣ  " ಅಕ್ಕ ಅಲ್ಲಿ ಅವರ ಗಾಡಿಯಲ್ಲಿ ಖಾಲಿ ಇರುವ ಜಾಗದಲ್ಲಿ ನಾ ಕೂರೋಕೆ ಯೋಚನೆ ಮಾಡ್ತಾ ಇದೀನಿ ಕಣಕ್ಕ " ಎಂದಾಗ ಲಕ್ಷ್ಮಕ್ಕ  ಅವಾಕ್ಕಾಗಿದ್ದೊಂತು  ನಿಜ...



      ಅಷ್ಟರಲ್ಲೇ ಲಕ್ಷ್ಮಕ್ಕ ಬಾಯಿ ಮೇಲೆ ಕೈ ಇಟ್ಕೊಂಡು " ಇದೇನೋ ಮುರಳಿ ಹೀಗಿದೆ  ದೇವಸ್ತಾನ ??? ಇಷ್ಟು ಬೇಗ ಬಂದೆ ಬಿಡ್ತು ಅಲ್ಲವೋ ನಮ್ಮ ಮುತ್ತು ಮಾರಿಯಮ್ಮನ್ನ ಗುಡಿ ??? " 
      
       "ಇದೇನೋ ಇಷ್ಟು ದೊಡ್ದದೈತಿ , ಏನೋ ಇವು ಈ ಪರಿ ಗೋಪ್ರಗಳು. ಆಯವ್ವಂದು ಬಾರಿ ನೆಡಿತ್ತೈತಿ ಅನ್ನು. ನಮ್ಮವ್ವಂದು  TV ಅಲ್ಲೆಲ್ಲ  ಬರ್ತತಿ ಅಂದ್ರೆ ಏನ್ ಸುಮ್ಕೆಯ ?? ನಮ್ಮವ್ವನ್ ಗುಡಿ ನೋಡೋಯಪ್ಪಾ ಅಂದ್ಲು"

         ಒಂದು ಕ್ಷಣ  ಬಂದ ನಗುವನ್ನು  ಇಡಿದು ಇಟ್ಕೊಂಡ  ಮುರಳಿ "ಅಯ್ಯೋ ಲಕ್ಷ್ಮಕ್ಕ ಇದು ನಿಮ್ಮ  ಮುತ್ತು ಮಾರಮ್ಮನ ಗುಡಿ  ಅಲ್ಲಕ್ಕೊ  , ,ಇದು ದೊಡ್ಡ  ಮಾಲು , ಗೋಪಾಲನ್ ಮಾಲ್ " ಅಂತ ಹೇಳಿದ.

         "ಏನಪ್ಪಾ ಇದು  ನಮ್ಮ ಮಾರಮ್ಮನ್ ಗುಡಿ ಅಲ್ಲವಾ ?? ಗೋಪಾಲನ ಗುಡಿಯೇ ???? ನಮಪ್ಪ ಅದೆಂಥ ದೇವಸ್ತಾನಗೆ ಕುಂತಾನೆ  ನೋಡೋ , ಗೋಪಾಲ ಅಂದ್ರೇನು ಕಡಿಮೇನೆ ... ತಿರುಪತಿ , ತಿರುಪತಿ ತರ  ಇದೆ ನೋಡು ......."

         "ಇಲ್ಲ ಇಲ್ಲ ಲಕ್ಷ್ಮಕ್ಕ ಇದು ನಿಮ್ ಮಾರಮ್ಮನ ಗುಡಿನು ಅಲ್ಲ , ಗೋಪಾಲಣ್ಣ ನ್ನ  ಗುಡಿನೂ ಅಲ್ಲ , ಮಾಲು ಇದು ಗೋಪಾಲನ್  ಮಾಲ್ . " ಅಂತ ಹೇಳಿದ ಮುರಳಿ. 

         "ಮಾಲ ??? ಗೋಪಾಲಣ್ಣನ ಮಾಲ ???? ಹಂಗೆ ಅಂದ್ರೇನಪ್ಪ ,,, ನಾ ಇದೆ ಮೊದ್ಲು ನೋಡು ಕೇಳಿದ್ದು ನೋಡಿದ್ದು ........ "

         ಲಕ್ಷ್ಮಕ್ಕಗೆ  ಇದರ ಬಗ್ಗೆ " ಹೇಗೆ ಹೇಳೋದು  ?? ಏನ್ ಹೇಳೋದು ? ಅಲ್ಲಿ ಜನ ಯಾಕೆ ಬರ್ತಾರೆ  ?  ಹೆಂಗೆ ಬರ್ತಾರೆ ?  ಏನ್ ಮಾಡ್ತಾರೆ ? " ಅಂತ  ತೋಚದ ಮುರಳಿ " ನಾ ಇದರ ಬಗ್ಗೆ ಹೇಳಿದ್ರು ಇವಕ್ಕ ಗೆ ಅದು ಅರ್ಥ ಆಗುತ್ತಾ ? ಅರ್ಥ ಆದ್ರೆ ಸುಮ್ ಸುಮ್ಕೆ ತಲೆ ತಿಂತಾಳೆ. ಇಲ್ಲಿಯ  ಜನಗಳ ಬಗ್ಗೆ ಏನೇನೋ ಅನ್ಕೊಲ್ತಾಳೆ ,  ಹೇಗಾದ್ರು ಮಾಡಿ ಇದರ ಬಗ್ಗೆ ನಾ ಅವಳಿಗೆ ಏನಾದ್ರೂ ಹೇಳ್ಬೇಕು, ಆದ್ರೆ ಅದು ಇಲ್ಲಿ ಇರೋ ತರ ಅಲ್ಲ ಅಂತ ಯೋಚಿಸಿ  " ಹೌದು ಕಣಕ್ಕ  ಇದು ಗುಡಿಯಲ್ಲ ಆದ್ರೆ ಗುಡಿ
ತರ "

     " ಅದೇನೋ ಮುರಳಿ ಗುಡಿ ಅಲ್ಲ ಅಂತಿಯ , ಗುಡಿ ತರ  ಅಂತಿಯಾ ,, ನನಗೇನು ತಿಳಿತಿಲ್ಲ ನೋಡು ...."

     "ಹೌದು  ಲಕ್ಷ್ಮಕ್ಕ .... ಇದು ಗುಡಿ ತರ. ಕೆಲವರಿಗೋ ಇದು ಸಾಕ್ಷಾತ್ ಗುಡಿಯೇ ,,, ತಮ್ಮ ಮನಸ್ಸಿಗೆ ಬೇಕು
ಅನ್ಸಿದಾಗೆಲ್ಲ ಇಲ್ಲಿಗೆ ಬರ್ತಾರೆ , ತಮಗೆ ಬೇಕಾದ ದೇವರನ್ನು ಹಾಗೆ ಪೂಜಿಸುತಾರೆ. ಸ್ವಲ್ಪ ಹೊತ್ತು ಇಲ್ಲೇ ಇದ್ದು ಆಮೇಲೆ ಹೋಗ್ತಾರೆ " .

   " ಹೌದೆ ?? ಅದು ಹೆಂಗೆ ???" 

    "ನೋಡಕ್ಕ....ನಮ್ಮೂರಲ್ಲಿ ನೀವು ಹೇಗೆ ಮಾಡ್ತೀರ ಬೆಳ್ಳಿಗ್ಗೆ  ಎದ್  ತಕ್ಷಣ ದೇವರನ್ನ ನೆನೆಸಿ ಕೊಳ್ತಿಯಾ ತಾನೇ ??? "

   " ಹೌದು ಕಣೋ ಮುರಳಿ ..." 

   " ಇಲ್ಲಿ ಕೂಡ ಹಾಗೆನೆ  ಜನರು ಅಲ್ಲ ಭಕ್ತರು ,, ಬೆಳ್ಳಿಗ್ಗೆ  ಎದ್ದ ತಕ್ಷಣ ತಮ್ಮ ಆ ದಿನದ ದೇವರನ್ನು ನೆನೆಸಿ ಕೊಳ್ತಾರೆ ... ಆಮೇಲೆ  ದೇವರನ್ನು ಬೇಡಿಕೊಳ್ತಾರೆ ?? ದೇವಿ ನಿನ್ನ ದರುಶನ ನನಗೆ ಈ ದಿನ ಬೇಕೇ ಬೇಕು ಅಂತ... ಭಕ್ತರು ಅದೆಷ್ಟು ಭಕ್ತಿಯಿಂದ ಬೇಡಿಕೊಳ್ತಾರೆ ಅಂದ್ರೆ ಆ ದೇವ್ರು ಕೂಡ  ಭಕ್ತನ ಕೋರಿಕೆಗೆ  ಇಲ್ಲ ಅನ್ನೋದೇ ಇಲ್ಲ .... ಆದ್ರೆ ದೇವರಿಗೆ ಆ  ದಿನ ಬೇರೆ ಭಕ್ತರ ಯಾವುದೇ ಕೋರಿಕೆ  ಇರಬಾರದು ಅಷ್ಟೇ ... ಇಲ್ಲಿ ದೇವತೆಗಳು ಹಾಗೆ ಕಣಕ್ಕೋ  ಯಾವಾಗಲು ಸ್ವಲ್ಪ ಬ್ಯುಸಿನೆ , ನಮ್ಮೂರು ಚೌಡಮ್ಮ , ಕೋಟೆ ಬರಮಪ್ಪನ ತರ ಅಲ್ಲ ,,, ಬೆಂಗಳೂರ್ ನೋಡು ಇದು ಅದಕ್ಕೆ ಹೀಗೆ .... "

   "ಹ ಹ ಹ ,,, ಹೌದೆನಪ್ಪ ??? " 

   "ಹೌದು ಕಣಕ್ಕ,  ಒಂದ್ ಸರಿ ಅವ್ರು  ಕೇಳ್ಕೊಂಡ್  ದೇವ್ರು ಅಥವಾ ದೇವತೆ ಸರಿ ನಿಂಗೆ  ಈ ದಿನ ದರ್ಶನ  ಕೊಡ್ತೀನಿ, ಅಂದ್ರೆ ಮುಗಿತು  ಎದ್ವೋ -ಬಿದ್ವೋ  ಅಂತ ದೇವಸ್ತಾನೆಕ್ಕೆ ಬಂದೆ  ಬಿಡ್ತಾರೆ  ಕಣಕ್ಕೊ ...." 

   "ಅಯ್ಯೋ ಅಯ್ಯೋ ಏನ್ ಭಯ ಭಕ್ತಿ  ಏನ್ ಕತೆ , ನಾ ಇಲ್ಲಿ ಜನಕ್ಕೆ ಅದೆಲ್ಲ ಇಲ್ಲವೇ ಇಲ್ಲ ಅಂತ ಅಂದುಕೊಂಡಿದ್ದೆ ಕಣೋ ಮುರಳಿ ....."

   "ಇಲ್ಲಕ್ಕ ಇಲ್ಲ ,,,, ಬೆಂಗಳೂರ್ ಜನ  ಅಂದ್ರೆ ಏನ್ ಸುಮ್ನೆನ , ಇವ್ರು  ಕೂಡ ಮನುಶ್ರೆ ... ಬಾರಿ ಭಕ್ತರು ಇವ್ರು,,, ಒಂದೊಂದಲ್ಲ ಬೇಜಾನ್ ದೇವರುಗಳ ಹತ್ರ ಹೋಗ್ತಾರೆ ಇವ್ರು ,,,,,, ಇವರಿಗೆ  ಎಲ್ಲ ದೇವ್ರುಗಳು ಒಂತರ ಒಂದೇನೆ ... ಒಂದ್ ಒಂದ್ ಸಾರಿ ಬೇರೆರು ಪೂಜೆ ಮಾಡೋ ದೇವರುಗಳನ್ನು ಬಿಡೋಲ್ಲ , ಅವುಕ್ಕು ಪೂಜೆ ಗೀಜೆ ಮಾಡಿ ವರ  ಕೇಳ್ತಾರೆ ,,, ದೇವರು ಸ್ವಲ್ಪ ಉದಾರಿಯಾಗಿದ್ರೆ  ಎಷ್ಟು ಜನ ಭಕ್ತರು ಏನ್ ಕೇಳಿದ್ರು ಇವ್ರು ಕೇಳೋ ವರಗಳಿಗೆಲ್ಲ ಅಸ್ತು ಅಂದು ಬಿಡ್ತಾವೆ , ಅಂತಂತ ಒಳ್ಳೊಳ್ಳೆ ದೇವತೆ ದೇವರುಗಳಿವೆ ಈ ಬೆಂಗಳೂರಲ್ಲಿ ....."

 "ಹಿಂಗೆಲ್ಲ ಇದಿಯೋ ಇಲ್ಲಿ ,,, ನಂಗೆ ಗೊತ್ತೇ ಇರಲಿಲ್ಲ ನೋಡು ಮತ್ತೆ ...."

 "ಹೌದಕ್ಕೋ ... ಬೆಳ್ ಬೆಳಗ್ಗೆ ಎದ್ದು , ಹಂಗು ಹಿಂಗು ದೇವರಿಗೆ ಹರಿಕೆ ಮಾಡಿಕೊಂಡು , ಆ ದೇವರುಗಳು ಇವ್ರು ಕೇಳೋ ವರಗಳಿಗೆ  ಅಸ್ತು ಅಂದ್ರೆ ಮುಗಿತು , ಇಂಥ ಹತ್ತಿರ ಇರುವ ಗುಡಿಗಳಿಗೆ ಬಂದು   ಗುಡಿಯ ಬಾಗ್ಲು ಹತ್ರನೇ ಬಂದು ಕಾಯಿತಿರ್ತಾರೆ. ಒಂದು ಒಂದು ಸಾರಿ ಬಾಗಿಲು ತೆಗೆದೇ ಇರೋಲ್ಲ ಆದರು ಪಾಪ ಭಕ್ತರು ಬಂದು ಬಾಗಿಲ ಹತ್ರನೇ ಗಂಟೆಗಟ್ಟಲೆ  ಕಾಯಿತಾರೆ .."

  "ತಮ್ಮ ತಮ್ಮ ಇಷ್ಟ ದೇವತೆಗಳಿಗೆ ಕಾಯೋದ್ರಲ್ಲೇ ಇವರಿಗೆ ಒಂತರ ಖುಷಿ  ಕಣಕ್ಕ.. ತಮ್ಮ ಇಷ್ಟದ ದೇವರುಗಳು ಕಣ್ಣಿಗೆ ಬಿದ್ರೆ ಸಾಕು , ಭಾವ ಪರವಶರಾಗಿ , ತಾವಿರುವ ಲೋಕವನ್ನೇ ಮರೆತು ದೇವತೆಯ ಸಾನಿದ್ಯಕ್ಕೆ ಹೋಗಿ ಬಿಡ್ತಾರೆ ,,, ಆ ನಮೂನಿ ಪ್ರೀತಿ , ಭಕ್ತಿ ಅವರ ದೇವರುಗಳ ಮೇಲೆ....."  

  "ಇಲ್ಲಿ ನೋಡಕ್ಕ ಹೆಣ್ಣ ಮಕ್ಳು ಗಂಡು ದೇವ್ರನ್ನ ಪೂಜಿಸ್ತಾರೆ , ಗಂಡ ಮಕ್ಳು ಹೆಣ್ ದೇವ್ರನ್ನ ಪೂಜಿಸ್ತಾರೆ..... ಇನ್ನು ಕೆಲವು ವಿಶೇಷ ಭಕ್ತರೂ ಇದಾರೆ ಅವ್ರು ಎಲ್ಲ ತರದ ದೇವರನ್ನು ಪೂಜಿಸ್ತಾರೆ... ಅದಕ್ಕೆಲ್ಲ ಇಲ್ಲಿ ಅವಕಾಶ ಇದೆ...."

 "ಒಂದು ಸಾರಿ ಇಲ್ಲಿ ಗುಡಿ ಒಳಗೆ ಹೋದ್ರೆ ಮುಗಿತು ,,, ಅವರಾಯಿತು ಅವರ ದೇವರಾಯಿತು ಬೇರೆ  ಯಾವುದರ ಬಗ್ಗೇನೂ  ತಲೆ ಕೆಡಿಸಿಕೊಳ್ಳೋಲ್ಲ.. ಅಷ್ಟು ಪ್ರೀತಿ ತಮ್ಮ ತಮ್ಮ ದೇವರುಗಳ ಮೇಲೆ...."

 "ಅಕ್ಕ ನಿಂಗೆ ಗೊತ್ತ ,,, ಇಲ್ಲಿಯ ದೇವರುಗಳೇನು ಕಡಿಮೆ ಅಲ್ಲ ,,, ಬೇಜಾನ್ ಶ್ರೀಮಂತ ದೇವರುಗಳು ಇವು.. ಹಂಗಾಗಿ ಭಕ್ತರು ಕೂಡ ಒಳ್ಳೆ ಒಳ್ಳೆ ಬಟ್ಟೆ ಬರಿಗಳನ್ನು , ಒಡವೆ , ವಸ್ತುಗಳನ್ನೂ ಕೊಟ್ಟು ತಮ್ಮ ಕಡೆಗೆ ಒಲಿಸಿಕೊಳ್ತಾರೆ..  ಇಂಥಹ  ಗುಡಿಯಲ್ಲೇ ದೇವರುಗಳಿಗೆ ಬೇಕಾದ ವಸ್ತುಗಳು ಸಿಗೋ ಜಾಗಗಳಿವೆ. ದೇವರಿಗೆ ಒಳ್ಳೊಳ್ಳೆ ಬಟ್ಟೆ ಕೊಡ್ತಾರೆ , ಒಳ್ಳೊಳ್ಳೆ ಆಭರಣಗಳನ್ನು ತೊಡಿಸಿ ಭಕ್ತರು ತಮ್ಮ ಕಂಗಳಲ್ಲಿ ದೇವರನ್ನ ತುಂಬಿ ಕೊಳ್ತಾರೆ ಪ್ರೀತಿಯಿಂದ ....."

  "ನಿಜ ಕಣೋ ನಾವು ಇಷ್ಟ ಪಡೋ ದೇವರಿಗೆ ನಮಗೆ ಬೇಕಾದ ಬಟ್ಟೆ ಬರಿ, ಆಭರಣಗಳನ್ನು ತೊಡಿಸಿ , ದೇವರಿಗೆ ಪ್ರಿಯವಾದ ಅಡುಗೆನ  ಮಾಡಿ ನೇವೇದ್ಯ  ಮಾಡೋದ್ರಲ್ಲಿ ಏನೋ ಒಂದು ಖುಷಿ ಸಿಗುತ್ತೆ ಕಣೋ ....... ನೋಡೋ ಬೆಂಗಳೂರ್ ಜನ ಕೂಡ ತುಂಬಾ ಒಳ್ಳೇವ್ರು ಕಣೋ ಹಾಗಾದ್ರೆ .. ನಾ ಸುಮ್ನೆ ಏನ್ ಏನೇನೋ ಅಂದುಕೊಂಡಿದ್ದೆ......." 

  "ಹೌದಕ್ಕ ತುಂಬಾ ಒಳ್ಳೇವ್ರು..... ಅಕ್ಕ ಇಂಥ ಮಾಲ್ ಗಳಲ್ಲಿ ಒಳ್ಳೊಳ್ಳೆ ಜಾಗಗಳಿವೆ  ಕಣಕ್ಕ , ದೇವರಿಗೆ ಬಟ್ಟೆ ಬರೆ , ಆಭರಣ , ಪಾದುಕೆಗಳನ್ನೂ  ಕೊಡ್ಸೋಕೆ...  ಈ ಬಟ್ಟೆ ಬರೆ ತೊಡ್ಸಿ , ಆಭರಣ ಹಾಕಿ , ಒಳ್ಳೊಳ್ಳೆ ಮಂತ್ರಗಳನ್ನೇಳಿ ದೇವರನ್ನು ಒಲಿಸಿಕೊಳ್ಲೋದರಲ್ಲಿ ನಿಸ್ಸೀಮರು ಇಲ್ಲಿ ಜನ ...  ಇಷ್ಟೆಲ್ಲಾ  ಆದ ಮೇಲೆ ದೇವರ ಪ್ರಸಾದಕ್ಕೆಂದೇ  ಸಕತ್ ಒಳ್ಳೆ ಜಾಗಗಳು ಇರ್ತಾವೆ ಕಣಕ್ಕ.. ದೇವರ ಪೂಜೆ ಆದ್ಮೇಲೆ ದೇವರುಗಳಿಗೆ ತೀರ್ಥ-ಪ್ರಸಾದ ಅದಮೇಲೆ ನೆ ಭಕ್ತರು  ಇಂಥ ಮಾಲ್ ಗಳಿಂದ ಮನೆಗೆ ಹೋಗೋದು..."

  "ಇಲ್ಲಿ ಒಂದ್ ಒಂದ್ಸಾರಿ ನೋಡ್ಬೇಕು ಕಣಕ್ಕೋ ,, ಭಕ್ತಿಯಲ್ಲಿ ಎಷ್ಟೊಂದು ಜನ ಭಕ್ತರು ತಾವಿರೋ ಲೋಕವನ್ನೇ ಮರೆತು , ತಮ್ಮದೇ ಆದ ಲೋಕಕ್ಕೆ ಹೋಗಿಬಿಡ್ತಾರಕ್ಕ... ಪ್ರೀತಿ ಭಕ್ತಿ ಹೆಚ್ಚಾಗಿ ದೇವರನ್ನು ಅಪ್ಪುತಾರೆ , ಮುದ್ದುತ್ತಾರೆ.. ಇನ್ನು ಅನೇಕ ರೀತಿಗಳಲ್ಲಿ ತಮ್ಮ ಭಕ್ತಿಯನ್ನು ದೇವರಲ್ಲಿ ತೋರಿಸುತ್ತಾರೆ..... "

 "ಹೌದೇನೋ ಮುರಳಿ ಇಷ್ಟೆಲ್ಲಾ ನೆಡೆಯುತ್ತೇನೋ ಇಲ್ಲಿ ???"

" ಹೌದಕ್ಕ ,,,, ಇಲ್ಲಿ ಎಷ್ಟೋ ಜನರು ಕೆಲವು ಭಕ್ತರನ್ನು ನೋಡಲೆಂದೇ ಬರ್ತಾರೆ... ತಮಗೆ ಯಾವ ದೇವರ ಮೇಲೆ ಭಕ್ತಿ ಇಲ್ಲ ಅಂದ್ರು ಇಲ್ಲಿಗೆ ಬಂದು ಒಂದಲ್ಲ ಒಂದು ದಿನ ನಮಗೂ ದೇವರ ಮೇಲೆ ಭಕ್ತಿ ಹುಟ್ಟಬಹುದು , ನಮಗೂ ಒಂದು ಆರಾದ್ಯ  ದೈವ ಸಿಕ್ಕರೂ ಸಿಗಬಹುದು , ಆ ದೈವ ನಾವು ಕೇಳೋದೆಲ್ಲ ಕೊಟ್ಟರು ಕೊಡಬಹುದು ಎಂಬ ಆಶಾ ಭಾವನೆಯೊಂದಿಗೆ ಬರುವವರು ಇದ್ದಾರಕ್ಕ ......"

 "ಈ ರಜ ದಿನಗಳು , ಶನಿವಾರ ಭಾನುವಾರ ಇಲ್ಲಿ ಭಕ್ತರ ನೂಕು ನುಗ್ಗಲು ಕಣಕ್ಕ... ಬಾರಿ ಜನ, ಭಾರಿ ಭಕ್ತಿ ನೋಡೋಕೆ ನಮ್ಮ ಎರೆಡು ಕಣ್ಣು ಸಾಲದು ಅಕ್ಕ....."  

"ನಿಜ ನಿಜ ಕಣೋ ,,,, ಈ ಭಕ್ತಿ ಅಂದ್ರೆ ಅದು ಹಾಗೆ ಕಣೋ ,,, ಒಂದು ಸಾರಿ ಅದು ಬಂದ್ರೆ ಆಯಿತು ಆ ದೇವರನ್ನು ನಾವು ಒಲಿಸಿಕೊಳೋ  ತನಕ ಸುಮ್ನೆ ಇರೋದೇ ಇಲ್ಲ.. ಒಂದಲ್ಲ ಒಂದು ಪೂಜೆ ಮಾಡ್ತಾನೆ ಇರ್ತೀವಿ...  " 

"ಅಕ್ಕ ನಿಂಗೆ ಇನ್ನು ಒಂದು ವಿಷಯ ಹೇಳಲೇ ಬೇಕು ,,,ಇಲ್ಲಿ ಇಂತಹ ಮಾಲ್ ಗಳಲ್ಲಿ ದೇವರುಗಳ , ಬೇರೆ ಭಕ್ತರ ಕತೆಗಳನ್ನು , ಅವರ ಮೇಲೆ ಬಂದ ಚಿತ್ರಗಳನ್ನು ತೋರುಸ್ತಾರೆ ಕಣಕ್ಕ.... ಭಕ್ತರೆಲ್ಲ ಅಲ್ಲಿ ಹೋಗಿ ಅಲ್ಲಿ ಬೇರೆ ಬೇರೆ ದೇವರುಗಳ-ಭಕ್ತರ ಮಹಿಮೆಗಳನ್ನು ನೋಡಿಕೊಂಡು ,, ಅದೇ ರೀತಿ ಅವ್ರು ಕೂಡ ದೇವರನ್ನು ಪೂಜಿಸುತ್ತಾರೆ... ಇಷ್ಟೆಲ್ಲಾ ಇರುತ್ತೆ ನೋಡಕ್ಕ ಇಂಥಹ ಮಾಲ್ಗಳಲ್ಲಿ.... "

" ಮುರಳಿ ,,,, ಒಂದ್ ಮಾತ್ ನಿಂಗೆ  ಹೇಳಲೇಬೇಕು ಕಣೋ   ,,, ಬೆಂಗಳೂರಿಗೆ ಬಂದ್  ಎಷ್ಟೆಲ್ಲಾ ವಿಷಯನೆಲ್ಲ ತಿಳ್ಕೊಂಡಿದಿಯ ಕಣೋ... ತುಂಬಾ ಬುದ್ದಿವಂತ ಆಗಿದಿಯ , ನಮ್ಮೂರಲ್ಲಿದ್ದಾಗ  ನೀ ಹಿಂಗೆ ಇರಲಿಲ್ಲ.. ಈಗ ಎಷ್ಟೊಂದು ದೇವರುಗಳ ವಿಷಯ , ಏನ್ ಆಸಕ್ತಿ ,,, ಖುಷಿ ಆಯಿತು ಕಣೋ...."

" ಹ ಹ ಹ ,,, ಹೌದಕ್ಕ ನಮ್ಮೂರಲ್ಲಿ ಅದೇ ಚೌಡಮ್ಮ , ಮಾರಮ್ಮ ,ಅದೇ ಮಂಚಾಲಮ್ಮ... ನಮಗೆ ಇಲ್ಲಿ ಬಂದಾಗಲೇ ಗೊತ್ತಾಗಿದ್ದು ಅವರನೆಲ್ಲ ಬಿಟ್ಟು ಇನ್ನು  ಅನೇಕ ಹೊಸ ಹೊಸ ದೇವರುಗಳಿವೆ ಅಂತ..."

"ಹೌದೇನೋ ?? ನೀ  ಇಷೆಲ್ಲ ಹೇಳಿದ್ಮೇಲೆ ನಂಗು ಈ ಗೋಪಾಲಣ್ಣನ ಮಾಲ್ ನೋಡ್ಬೇಕು ,ಅಲ್ಲಿಗೆ ಬರೋ ದೇವತೆ ಗಳನ್ನೂ, ಬರೋ ಭಕ್ತರನ್ನು ನೋಡ್ಬೇಕು ಕಣೋ ... ನನ್ನೂ ಅಲ್ಲಿಗೆ ಕರ್ಕೊಂಡು  ಹೋಗೋ...." 

ಪೇಚಿಗೆ ಬಿದ್ದ ಮುರಳಿ " ಅಕ್ಕ ಮೊದ್ಲು ನಿ ಮುತ್ತು ಮಾರಿಯಮ್ಮನ ದರುಶನ ಮಾಡು ಆಮೇಲೆ ನೋಡುವ ಏನ್ ಮಾಡೋದು ಅಂತ..........."  ಹೀಗೆ ಹೇಳಿ ಸದ್ಯಕ್ಕೆ  ಹಾಗೆ ಜಾರಿಕೊಂಡನು......

ನಿಮಗಾಗಿ 
ನಿರಂಜನ್                                              

ಶನಿವಾರ, ಸೆಪ್ಟೆಂಬರ್ 22, 2012

ಬಂದ್ ಬೆನ್ನು ಹತ್ತಿ

                                                          ಬಂದ್ ಬೆನ್ನು ಹತ್ತಿ....... 

ಸ್ನೇಹಿತರೆ , ದೇಶದ ಅರ್ಥ ವ್ಯವಸ್ಥೆಯ   ಬಗ್ಗೆ ಮಾತನಾಡುವ , ದೇಶದ ಏಳಿಗೆಯ ಬಗ್ಗೆ ಕಾಳಜಿ ತೋರಿಸುವ , ದೇಶದ ರಾಜಕೀಯ ವ್ಯವಸ್ತೆಯನ್ನೇ  ಪ್ರಶ್ನಿಸುವ ನಾವು , ಮೊನ್ನೆ ನಡೆದ ಬಂದ್ ಬಗ್ಗೆ ಸ್ವಲ್ವುವೂ  ಯೋಚಿಸಲಿಲ್ಲ , ಒಂದು ದಿನ  ರಜ  ಸಿಕ್ಕಿತಲ್ಲ ಎಂದು ಖುಷಿಯಾದೆವೇ ಹೊರತು ಬೇರೆ ಏನನ್ನು ಯೋಚಿಸಲೇ ಇಲ್ಲ. ನಿಜವಾಗಿಯೂ ನಮಗೆ ಆ ಬಂದ್ ಬೇಕಿತ್ತಾ ??? ಯಾರೋ ದೆಹಲಿಯಲ್ಲಿ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಂದ್ ಕರೆ ನೀಡಿದರೆ ನಾವು ಅದಕ್ಕೆ ಸ್ಪಂದಿಸಬೇಕಿತ್ತಾ  ?? ಆ ದಿನ ಬಂದ್ ಮಾಡಿದ್ದಕ್ಕೆ ನಮಗೆ ಸಿಕ್ಕಿದ್ದಾದ್ರು ಏನು ??? ಕೇಂದ್ರ ಸರ್ಕಾರವೇನು ತಾನು ಮೊದಲು  ತೆಗೆದುಕೊಂಡ ನಿರ್ಧಾರಗಳನ್ನು ವಾಪಾಸ್  ಪಡಿಯಿತೆ ??? ನಾವು ಇಂಥಹ ಬಂದ್ ಗಳಿಗೆ ನಿಜವಾಗಿಯೂ ಪ್ರೋತ್ಸಾಹಿಸಬೇಕೆ ??? 


                 ನಿಜ , ಸರ್ಕಾರವು  ಹೊಸದಾಗಿ ತರುವ ಯೋಜನಗಳನ್ನು ಮತ್ತು ಸಾಮಾನ್ಯ  ಜನರ ಜೀವನದ ಮೇಲೆ ಪರಿಣಾಮ ಬೀರುವ ಹೊಸ ಕಾನೂನುಗಳನ್ನು ಜಾರಿಗೊಳಿಸಿದಾಗ , ಅವುಗಳನ್ನು  ಪ್ರಶ್ನಿಸುವ , ಆ ಕಾನೂನುಗಳ  ಸಾಧಕ ಬಾಧಕಗಳ ಚರ್ಚಿಸುವ , ತಮ್ಮ ಭಾವನೆಗಳನ್ನು  ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೂ  ಇದೆ .  ಆದರೆ ಆ ಹಕ್ಕನ್ನು ನಾವು ಹೇಗೆ ಚಲಾಯಿಸಬೇಕು , ಹೇಗೆ ಅದನ್ನು ಸರ್ಕಾರಕ್ಕೆ ತಿಳಿಸಬೇಕು ಎಂಬುದಕ್ಕೆ ಅದರದೇ ಆದ ವಿಧಿವಿಧಾನಗಳಿವೆ. ಆದರೆ ಈ ರೀತಿಯಾಗಿ ಇಡೀ ದೇಶವನ್ನೇ ಬಂದ್ ಮಾಡುವುದರಿಂದ , ಸಾಮನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುವುದರಿಂದ , ತನ್ನ ಪಾಡಿಗೆ ತಾನು ನಿಂತ ಬಸ್ಸುಗಳಿಗೆ ಬೆಂಕಿ ಹಚ್ಚುವುದರಿಂದ ನಾವೇನಾದರೂ ಸಾದಿಸಬಹುದೇ ?? ಮೊನ್ನೆ ನಾವು ಮಾಡಿದ ಬಂದ್ ಇಂದ ನಮ್ಮ ದೇಶದ ಅರ್ಥ ವ್ಯವಸ್ತೆಗೆ ದಕ್ಕೆ ಮತ್ತು ನಷ್ಟ ಆಗಿದೆಯೇ ಹೊರತು ಉಪಯೋಗ ವಾಗಿಲ್ಲ ,  12,500  ಕೋಟಿ ನಷ್ಟವನ್ನು ನಾವು ಆ ದಿನ ನಮ್ಮ ದೇಶಕ್ಕೆ ನಾವು ಮಾಡಿದ್ದೇವೆ. ನಾವು ಮಾಡಿದ ನಷ್ಟವನ್ನು  ನಾವಲ್ಲದೆ ಬೇರೆ ಯಾರು ಭರಿಸಬೇಕು ??  ಆ ನಷ್ಟದ ಪರಿಣಾಮ ನಮ್ಮ ಮೇಲಲ್ಲದೆ ಪಾಕಿಸ್ತಾನಕ್ಕೆ ಬೀಳುತ್ತದೆಯೇ ?? .  ಬರುವ ದಿನಗಳಲ್ಲಿ ಸರ್ಕಾರ ಅದರ ಹೊರೆಯನ್ನು ನಮ್ಮ ಮೇಲೆಯೇ ಹೊರಿಸುತ್ತದೆ. ಅದಕ್ಕೆ ತಕ್ಕೆ ಬೆಲೆಯನ್ನು ನಾವೇ ಭರಿಸಬೇಕು. ಬಂದ್ ಮಾಡಿದಾಗ ಬಿಸಿ ತಟ್ಟಿದ್ದು ಸಾಮಾನ್ಯ ಜನರಿಗೆ , ಆ ನಷ್ಟದ ಪರಿಣಾಮವು ಇನ್ನು ಮುಂದೆ ಬೀಳುವುದು ನಮ್ಮ ಮೇಲೆಯೇ. 


                 ಇದನ್ನೆಲ್ಲಾ ಯೋಚಿಸದ ನಾವು ಬಂದ್ ಎಂದಾಕ್ಷಣ ಸ್ವಲ್ಪುವೂ  ಯೋಚಿಸದೆ , ಒಂದು ದಿನ ರಾಜ ಸಿಗುತ್ತಲ್ಲ ಅಂತ ಮಾತ್ರ ಯೋಚಿಸುತ್ತೇವೆ. ಆ ದಿನ ಮನೆಯಲ್ಲಿ ಇದ್ದು ಸಂಪೂರ್ಣವಾಗಿ ಮಲಗಿ , ರೆಸ್ಟ್ ತಗಬೇಕು ಅಂತ ಯೋಚಿಸುತ್ತೇವೆ ಹೊರತು ಅದರ ಪರಿಣಾಮದ ಬೆಗ್ಗೆ ಸ್ವಲ್ಪವು ಯೋಚಿಸಲಿಲ್ಲ. ಆ ದಿನ ನಾವು ಮಾಡಿದ್ದು ಅದೇ . ಸಣ್ಣ ಸಣ್ಣ ಅಂಗಡಿ , ಹೋಟೆಲು , ತರಕಾರಿ ಅಂಗಡಿಗಳನ್ನು , ಚಿಲ್ಲರೆ ವ್ಯಾಪಾರಿಗಳ ವ್ಯಾಪಾರವನ್ನು ನಾವು ಒತ್ತಾಯಮಾಡಿ, ಗಲಾಟೆ ಮಾಡಿ ಮುಚ್ಚಿಸಿ , ಅವರ ದಿನದ ದುಡಿಮೆಗೆ ಕುಂದುಂಟು ಮಾಡಿದೇವೆ ಹೊರತು ಇದರಿಂದ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರಲಿಲ್ಲ. ಅಲ್ಲಿ ಆ ದಿನ ಒಣಗಿಸಿಕೊಂಡಿದ್ದು ನಾವೇ ಹೊರತು ಸರ್ಕಾರ ಕಳೆದು ಕೊಂಡಿದ್ದು ಏನು ಇಲ್ಲ . ಈ ಎಲ್ಲ ಅಂಶಗಳನ್ನು ಗಮನಿಸಿ  ಕೇರಳ ಉಚ್ಚ ನ್ಯಾಯಾಲಯ ಅನೇಕ ಭಾರಿ ಈ ಬಂದ್ ಗಳ ವಿರುದ್ದ ತೀರ್ಪು ನೀಡಿ , ಬಂದ್ ಮಾಡುವುದು ಕಾನೂನು ಬಾಹಿರ , ಬಂದ್ ಕರೆ ನೀಡುವವರ ವಿರುದ್ದ ಶಿಸ್ತು ಕ್ರಮವನ್ನು ಜರುಗಿಸಬಹುದೆಂದು ಮಹತ್ವದ ತೀರ್ಪು ನೀಡಿತ್ತು. ಇದನ್ನೇ ನಮ್ಮ ದೇಶದ ಸರ್ವೋಚ್ಚ್ ನ್ಯಾಯಾಲಯವೂ  ಸಮರ್ಥಿಸಿಕೊಂಡಿತ್ತು. ಮಹಾರಾಷ್ಟ್ರದಲ್ಲಿ  BJP  ಮತ್ತು ಶಿವಸೇನೆಗೆ  ಬಂದ್ ಮಾಡಿಸಿದಕ್ಕೆ ತಲಾ 20 ಲಕ್ಷ ದಂಡವನ್ನೂ  ವಿದಿಸಿತ್ತು.  ಶಾಂತಿಯುತ ಪ್ರತಿಭಟನೆ ನಮ್ಮ ಹಕ್ಕು, ಇದರಲ್ಲಿಯೇ  ನಾವು ನಮ್ಮ ನಿಲುವುಗಳನ್ನು ವ್ಯಕ್ತಪಡಿಸುವುದು ಸರಿಯಾದ ಮಾರ್ಗ.  ಹಾಗಾಗಿ ನಮ್ಮ ದೇಶದ ಸಮಸ್ಯೆಗಳಿಗೆ ಬಂದ್ ಗಳು  ಯಾವಾಗಲು ಪರಿಹಾರ ನೀಡವು. ಚುನಾವಣೆಯ ಸಂದರ್ಭದಲ್ಲಿ ನಾವು ಸ್ವಲ್ಪ ಯೋಚಿಸಿ ಮತ ಚಲಾಯಿಸಿದರೆ ಈ ಎಲ್ಲ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕರೂ ಸಿಗಬಹುದು ಆದರೆ ಈ ಬಂದ್ ಗಳಿಂದ ನಮಗೆ ನಮ್ಮ ದೇಶಕ್ಕೆ ನಷ್ಟವೇ  ಹೊರತು ಮತ್ತ್ಯಾರಿಗೂ ಅಲ್ಲ. 

ನಿಮಗಾಗಿ 
ನಿರಂಜನ್     










ಸೋಮವಾರ, ಜುಲೈ 23, 2012

ಹಣ್ಣು, ಹಾಲು ಮತ್ತು ದೇವರು ......


                                                      ಹಣ್ಣು, ಹಾಲು ಮತ್ತು ದೇವರು ......

ಮ್ಮ ಮನೆಯ ಸೋಫಾ ಮೇಲೆ ಕುಳಿತುಕೊಂಡು,ಕಿಟಕಿಯ ಮೂಲಕ ಕಣ್ಣಾಯಿಸಿದರೆ ದೂರದಲ್ಲಿ ಕಾಣುವುದೊಂದು ಎತ್ತರದ ದೇವಸ್ತಾನದ ಗೋಪುರ. ಮಳೆಗಾಲದಲ್ಲೋಂತೂ  ಹಚ್ಚ ಹಸಿರಿನ ನಡುವೆ ಎದ್ದು ಕಾಣುವ ಆ ಎತ್ತರದ ದೇವಸ್ತಾನದ ಗೋಪುರ, ನನ್ನನ್ನು ಸದಾ ತನ್ನತ್ತ  ಸೆಳೆಯುತ್ತದೆ. ದೇವಸ್ತಾನವೂ ಹಾಗೆಯೇ ಇದೆ, ವಿಶಾಲವಾದ ಜಾಗದಲ್ಲಿ, ಒಳ್ಳೆಯ ವಾತಾವರಣದಲ್ಲಿ, ಸುಸಜ್ಜಿತವಾಗಿಯೇ ಇದೆ. ಅಂತಹ ದೇವಾಲಯದಲ್ಲಿ ನೆಲಸಿಹ ಮುಖ್ಯ ದೇವರು ತಾಯಿ ದುರ್ಗಪರಮೇಶ್ವರಿ. ದೇವರ ವಿಗ್ರಹವು ಅದ್ಭುತವಾಗಿದೆ. ಅನೇಕ ಭಕ್ತರೂ ಬರುತ್ತಾರೆ. ಪ್ರತಿನಿತ್ಯ ಎಡೆಬಿಡದೆ ಪೂಜೆ ಪುನಸ್ಕಾರಗಳು ನಿರಂತರವಾಗಿ ಅನೇಕ ದಿನಗಳಿಂದಲೂ ನಡೆದು ಬರುತ್ತಿವೆ. ಒಟ್ಟಿನಲ್ಲಿ ದೇವಸ್ತಾನದ ಒಳಗೆ ಹೋದರೆ ನಮಗೆ ಬರೀ  ಪರಮೇಶ್ವರಿಯ ಮಾತ್ರ ಕಾಣಸಿಗುವುದಿಲ್ಲ ಜೊತೆಗೆ ನಮ್ಮ ಎಲ್ಲಾ  ಇಷ್ಟ ದೇವರುಗಳು ಅಂದರೆ  ಗಣೇಶ,ವೆಂಕಟೇಶ,ಶಣೇಶ,ಆಂಜನೇಯ,ನವಗ್ರಹಗಳು, ಅನೇಕ ಹೆಣ್ಣು ದೇವರುಗಳು, ಜೊತೆಗೆ ನಾನು ನೋಡಿರದ, ಕೇಳಿರದ ಅನೇಕ ದೇವರುಗಳು ಕೂಡ ಅಲ್ಲಿ ವೀರಾಜಿಸುತ್ತಿವೆ. ಒಟ್ಟಿನಲ್ಲಿ ಎಂತವರಿಗೂ ಒಂದಲ್ಲ ಒಂದು ದೇವರ ಮೇಲೆ ಭಕ್ತಿ ಬಂದೆ ಬರುತ್ತೆ, ಆದ್ದರಿಂದ ಅಲ್ಲಿ ಯಾರು ಬೇಕಾದರೂ ಅಲ್ಲಿಗೆ ಬರಬಹುದು , ಬಂದರಂತೂ ಅಲ್ಲಿ ಅವರ  ಇಷ್ಟ ದೇವತೆ ಸಿಕ್ಕೇ ಸಿಗುತ್ತೆ.


             ಇಂತಹ ದೇವಾಲಯವೆಂದರೆ ಕೇಳಬೇಕೇ, ಪೇಟೆಗಳಲ್ಲೇನು ಭಕ್ತ ಮಹಾಶಯರಿಗೆನು ಭರವೇ ?? ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಅನೇಕ ಧಾನಿಗಳೂ ಇದ್ದಾರೆ. ಅನೇಕ ಕೊಡುಗೈ  ಭಕ್ತರು ತಮ್ಮ ತನು-ಮನ-ಧನವನ್ನೆಲ್ಲ ಈ ದೇವಸ್ತಾನಕ್ಕೆ , ಅಲ್ಲಿರುವ ದೇವರಿಗೆ  ಸಮರ್ಪಿಸಿದ್ದಾರೆ. ಅವಕ್ಕೆಲ್ಲ ಸಾಕ್ಷಿಯಾಗಿ ಆ ದೇವರುಗಳೆಲ್ಲ ತುಂಬಾ ಅಚ್ಚು ಕಟ್ಟಾಗಿ ಅಲಂಕೃತವಾಗಿ ನಿಂತಿವೆ. ದೇವಲಾಯದ ಜೀರ್ಣೊದ್ದರಾದ ಸಮಯದಲ್ಲಿ ಆಗಿನ ಪ್ರಧಾನಿಗಳಾದ ನಮ್ಮ ಸಜ್ಜನ, ಹಿರಿಯ, ಮಣ್ಣಿನ ಮಗ ದೇವೇಗೌಡ್ರು ಕೂಡ ತುಂಬಾ ಶ್ರಮಿಸಿದ್ದರಂತೆ ! . ಆಗಿನ ಪ್ರಧಾನಿಗಳೆ ಈ ದೇವಾಲಯದ ಭಕ್ತರೆಂದರೆ ಯೋಚಿಸಿ ಆ ದೇವರು ಅದೆಷ್ಟು ಶಕ್ತಿಯುತವಾದುದೆಂದು. 

             ಅನೇಕ ಪೂಜೆಗಳು ನೆಡೆಯುವ ಇಂತಹ ದೇವಾಲಯದಲ್ಲಿ, ಕೆಲವು ವಿಶೇಷ ಪೂಜೆಗಳೂ ಕೂಡ ನೆಡೆಯುತ್ತವೆ. ಬರುವ  ಭಕ್ತರು  ಅಲ್ಲಿರುವ ಅನೇಕ ದೇವರುಗಳಲ್ಲಿ ತಾವು ನಂಬಿರುವ ದೇವರುಗಳಲ್ಲಿ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ, ಶಾಂತಿ ಸಮಾದಾನಕ್ಕಾಗಿ ಅನೇಕ ಪೂಜೆಗಳನ್ನೂ , ಶಾಂತಿ, ಹೋಮ-ಹವನಗಳನ್ನು ಮಾಡುತ್ತಾರೆ.ಈ ಪೂಜೆ ವಿದಿವಿದಾನಗಳನ್ನು ಮಾಡಲು ಅಲ್ಲಿ ಆಚಾರ್ಯವರ್ಯರ ದಂಡೆ ಇದೆ. ಪೂಜೆಯನ್ನ ಎಷ್ಟಾದರೂ ಮಾಡಲಿ ಅದು ಅವರವರ ನಂಬಿಕೆ ಮತ್ತು ಭಕ್ತಿ. ಆದರೆ ಅಲ್ಲಿ ವಿಚಿತ್ರ ರೀತಿಯ  ಕೆಲವು ಪೂಜೆಗಳು ಕೂಡ ನೆಡೆಯುತ್ತವೆ ಅದು ನನ್ನ ಮನಸ್ಸಿಗೆ ಯಾಕೋ ಅಷ್ಟೊಂದು ಇಷ್ಟವಾಗುವುದಿಲ್ಲ. ಅದು ಅವರ ಮೂಡ ನಂಬಿಕೆಯೋ , ಅಂದಶ್ರದ್ದೆಯೊ ನನಗೆ ಅರ್ಥವಾಗುತ್ತಿಲ್ಲ. ಅಲ್ಲಿಗೆ ಬರುವ ಭಕ್ತರೇನು ದಡ್ಡರಲ್ಲ, ಅನಕ್ಷರಸ್ಥರಲ್ಲ ಆದರೂ ಯಾಕೆ ಅವರು ಈ ರೀತಿಯಾಗಿ ವರ್ತಿಸುತಾರೋ ಗೊತ್ತಿಲ್ಲ. ಅದಕ್ಕೆ ಕಾರಣ ಅವರೋ , ಅವರ  ಕಷ್ಟ ಕಾರ್ಪಣ್ಯಗಳೋ, ಅತಿಯಾದ ಆಸೆಗಳೋ ಅಥವಾ ಅಲ್ಲಿರುವ ಪೂಜಾರಿಗಳ ಪ್ರೋತ್ಸಾಹವೋ ನನಗೆ ಗೊತ್ತಿಲ್ಲ.   ದೀಪಗಳೆಂದರೆ ಕತ್ತಲಲ್ಲಿ ಬೆಳಕು ನೀಡುವ .ಅಜ್ಞಾನದಿಂದ-ಜ್ಞಾನದೆಡೆಗೆ ಸಾಗುವ, ಕೆಟ್ಟದರಿಂದ - ಒಳ್ಳೆಯಕಡೆಗೆ ನಡೆಯುವುದರ  ಪ್ರತೀಕ. ಅದೇ ರೀತಿ ದೀಪಗಳಲ್ಲಿ ಅನೇಕ ಬಗೆಯ ದೀಪಗಳೂ  ಇವೆ, ಮಣ್ಣಿನ ದೀಪಗಳು, ಬೆಳ್ಳಿ, ಇತ್ತಾಳೆ, ಪಂಚಲೋಹದ ದೀಪಗಳು. ಎಲ್ಲವಕ್ಕೂ ಎಣ್ಣೆ ಹಾಕಲೇಬೇಕು. ಸಾಮಾನ್ಯರು ಹರಳೆ,ಸಾಸಿವೆ ಎಣ್ಣೆ ಹಾಕಿ ದೀಪ ಹಚ್ಚಿದರೆ, ಅನುಕೂಲಸ್ತರು ,ಶ್ರೀಮಂತರು ತುಪ್ಪದಲ್ಲಿ ದೀಪವನ್ನು ಹಚ್ಚುತ್ತಾರೆ. ಸ್ನೇಹಿತರೆ ನಾವು ಯಾವ ಲೋಹದ ದೀಪಕ್ಕೆ ಯಾವ ಎಣ್ಣೆ ಹಾಕಿ ದೀಪ ಹಚ್ಚಿದರು ಅದರಿಂದ ಬರುವ ಬೆಳಕು, ಅದರ ದೇದೀಪ್ಯಮಾನ ಮಾತ್ರ ಒಂದೇ ಆಗಿರುತ್ತೆ. ಆದರೆ ಇವೆಲ್ಲಕ್ಕೂ ಹೊರತಾಗಿ ಇಲ್ಲೊಂದು ವಿಚಿತ್ರ ಪದ್ದತಿಯಿದೆ. ಅದೇನೆಂದರೆ ದೊಡ್ಡ ದೊಡ್ಡ ನಿಂಬೆ ಹಣ್ಣುಗಳನ್ನು ಎರೆಡು  ಓಳಾಗಿ ವಿಭಜಿಸಿ, ಅದರಿಂದ ಅದರ ರಸ ಮತ್ತು ತಿರುಳು ತಗೆದು ಹಾಕಿ, ಅವುಗಳನ್ನು ಬಟ್ಟಲು ರೂಪಕ್ಕೆ ತಂದು ಅದರೊಳಗೆ ಎಣ್ಣೆಯೋ ತುಪ್ಪವೋ ಹಾಕಿ ದೀಪ ಹಚ್ಚಿ ದೇವರಿಗೆ ಮಂಗಳಾರತಿ ಮಾಡುತ್ತಾರೆ. ಕನಿಷ್ಟಪಕ್ಷ  ದಿನಕ್ಕೆ ೨೦೦ -೩೦೦ ಹಣ್ಣುಗಳು ಆ ರೀತಿಯಾಗಿ ದೀಪಗಳಾಗಿ ಪರಿವರ್ತಿತವಾಗುತ್ತವೆ. ವಿಶೇಷ ದಿನಗಳಲ್ಲಿ, ಹಬ್ಬಗಳಲ್ಲಿ, ಈ ಶ್ರಾವಣ- ಆಶಾಡಗಳಲ್ಲೋಂತು ಅದೆಷ್ಟು ನಿಂಬೆ ಹಣ್ಣುಗಳ ದೀಪಾರತಿಯಾಗುತ್ತೋ ಗೊತ್ತಿಲ್ಲ. ಸ್ನೇಹಿತರೆ ಪ್ರಕೃತಿಯಿಂದ ದೊರೆತ ಒಂದು ಹಣ್ಣನ್ನು ಅದನ್ನು ಸರಿಯಾಗಿ ಉಪಯೋಗಿಸದೇ , ಅದರ ರಸ-ತಿರುಳನ್ನು ತಿನ್ನದೇ, ಮಣ್ಣುಪಾಲು ಮಾಡಿ ದೀಪ ಹಚ್ಚಿ ಮಂಗಳಾರತಿ ಮಾಡುವುದರಲ್ಲಿ ಏನಾದರೂ ಅರ್ಥ ಇದೆಯಾ ??? ಇನ್ನು ಕೆಲವರು ನಿಂಬೆ ಹಣ್ಣಿನಲ್ಲೇ ಭಾರಿ  ಸರಗಳನ್ನು , ಕೆಲವರು 101, 2001... ಹೀಗೆ ಸಾವಿರದ ಒಂದು ಹಣ್ಣುಗಳಿಗೆ ದಾರ ಪೋಣಿಸಿ  ಸರಗಳನ್ನು ಮಾಡಿ  ದೇವರ ಕೊರಳಿಗೆ ಹಾಕಿ, ಶಾಂತರೂಪಿಯಾದ ತಾಯಿಗೆ ಉಗ್ರರೂಪ ನೀಡುತ್ತಾರೆ, ಉಗ್ರಾವರಾರದಲ್ಲಿ ದೇವರನ್ನು ನೋಡುವುದರಲ್ಲಿ ಅವರಿಗೇನು ಆನಂದ,ಮಜಾ ಸಿಗುತ್ತೋ ಆ ದೇವರಿಗೆ ಗೊತ್ತು. ನಿಂಬೆ ಹಣ್ಣಿನ ಸಹಜ ಉಪಯೋಗವನ್ನೇ ನಾವು ಮರೆತಿರುವುದು ಸರಿಯೇ.? ಭಕ್ತರು ಆರೋಗ್ಯಾವೃದ್ದಿಗಾಗಿ ಪ್ರಕೃತಿ ಕೊಟ್ಟ ಒಂದು ಹಣ್ಣನ್ನು ಈ ರೀತಿ ಉಪಯೋಗಿಸುವುದು ಸರಿಯೇ ??? . ಬಾಳೆ, ತೆಂಗನ್ನು ನಾವು ಉಪಯೋಗಿಸಿದರು ಅವುಗಳನ್ನು ನಾವು ಪೂಜೆಯ ನಂತರ ಉಪಯೋಗಿಸುತ್ತೇವೆ. ನಮ್ಮ ಹಿರಿಯರು ಪೂಜೆಯ ನಂತರ ಅವುಗಳ ಬಳಕೆ ಸಮರ್ಪಕವಾಗಿಯೇ ಮಾಡುತ್ತಿದ್ದರು. ಈ ನಿಂಬೆ ಹಣ್ಣಿನ ಈ ರೀತಿಯ ಬಳಕೆಯನ್ನು ನಾನು ನೋಡಿದ್ದೇ ಇದೆ ಮೊದಲು ಮತ್ತು ಇತ್ತೀಚೆಗೆ.



                ಅದೇ ರೀತಿ ಇಲ್ಲಿ ಅನೇಕ ನಾಗರ ಕಲ್ಲುಗಳಿವೆ, ಅಲ್ಲಿ ಅವುಗಳಿಗೆ ನಿತ್ಯವೂ ಹಾಲು ಎರೆಯುತ್ತಾರೆ. ನಿಜವಾಗಿಯೂ ನನಗೆ ಅದು ಮೂಡನಂಬಿಕೆಯ ಪರಮಾವದಿ ಎಂದೆನಿಸುತ್ತದೆ. ದಿನವೂ ಅದೆಷ್ಟು ಲೀಟರ್ ಹಾಲು ದುರ್ಬಳಕೆ ಆಗುತ್ತೋ ?? ಗೊತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ದೇವಸ್ತಾನ ಮಂಡಳಿಯವರು ಹಾಕಿದ ಹಾಲು ಹರಿದು ಹೋಗಲು ಕಾಲುವೆಯನ್ನೇ ಮಾಡಿದ್ದಾರೆ. ಆ ಕಾಲುವೆಯಲ್ಲಿ ಹರಿದ ಹಾಲು ನೀರ ಚರಂಡಿಯನ್ನು ಸೇರುತ್ತದೆ. ನೀರೆ ಸಿಗದ ಈಕಾಲದಲ್ಲಿ ಹಾಲನ್ನು ಈ ರೀತಿ ವ್ಯಯ ಮಾಡುವುದು ಅದೆಷ್ಟು ಸರಿ ?? . ಮೊನ್ನೆ ಅದೇ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಒಂದು ವಿಶೇಷ ಸೂಚನೆಯನ್ನು ಭಕ್ತರಿಗೆ ನೀಡಿದ್ದರು. ಏನೋ ಆಗಸ್ಟ್ ತಿಂಗಳಲ್ಲಿ ಅದೇನೋ ವಿಶೇಷ ಮೂರು ಸಾವಿರ  ಲೀಟರ್/ಕುಂಬ  ಕ್ಷೀರಾಭಿಷೇಕವಂತೆ, ಅಂದರೆ 3000 ಲೀಟರ್ ಹಾಲಿನ ಅಭಿಷೇಕ, ಒಂದು ಕುಂಬ ಹಾಲನ್ನು ಒಬ್ಬ ಭಕ್ತ ದೇವಸ್ತಾನಕ್ಕೆ ನೀಡಬೇಕೆಂದರೆ ಭಕ್ತನೇ 400 ರೂ ಕೊಡಬೇಕಂತೆ. ನಿಜವಾಗಿಯೂ ನಾವು ಸ್ವಲ್ಪ ಯೋಚಿಸಬೇಕಾದ ಸಂಗತಿಯಲ್ಲವೇ ಇದು. ಒಂದು ಹಸು ಏನೆಲ್ಲಾ ತಿಂದು ಒಂದು ಲೀಟರ್ ಹಾಲು ಕೊಡುತ್ತದೆ. ಆ ಹಾಲನ್ನು ಈ ರೀತಿಯಾಗಿ ಉಪಯೋಗಿಸುವುದು ಸರಿಯೇ ??.ಒಂದು ಲೀಟರ್ ಹಾಲು ಉತ್ಪಾದಿಸಲು ಮನುಷ್ಯರಾದ ನಮಗೆ ಸಾದ್ಯವೇ ??? ಅಭಿಷೇಕ ಮಾಡಲಿ ತಪ್ಪಲ್ಲ ಅದು ಅವರವರ ನಂಬಿಕೆ , ಹಾಲನ್ನೇ ಉಪಯೋಗಿಸಲಿ ಆದರೆ ಈ ಪ್ರಮಾಣದಲ್ಲಿ ನಾವು ಹಾಲಿನ ಅಭಿಷೇಕ ಮಾಡುವುದು ಸರಿಯೇ ??? . ದೇವರನ್ನು ಈ ರೀತಿ ಆರಾಧಿಸಿದರೆ ನಮಗೆ ಒಳ್ಳೆಯದು ಆಗಿ ಬಿಡುತ್ತೋ ??? ಶಾಂತಿ ಸಮಾಧಾನ ಸಿಗುತ್ತೋ ??

              ಸ್ನೇಹಿತರೆ ದೇವರನ್ನು ನಾವು ಆರಾಧಿಸುವುದು ನಮ್ಮ ಶಾಂತಿಗಾಗಿ, ಸಮಾಧಾನಕ್ಕಾಗಿ, ನೆಮ್ಮದಿಗಾಗಿ. ಇವುಗಳನ್ನು ಪಡೆಯಲು ನಾವು ಈ ರೀತಿ ಹಣ್ಣು ಹಾಲನ್ನು ವೇಸ್ಟ್ ಮಾಡಬೇಕಾ ?? ಅರ್ಚಕರು, ಪುರೋಹಿತರು , ಹಿರಿಯರು ಇದಕ್ಕೆಲ್ಲ ಉತ್ತೇಜನ ನೀಡಬೇಕಾ ??? ಅವರು ನಮ್ಮನ್ನು ಈ ರೀತಿ ಮೂಡನಂಬಿಕೆ, ಅಂದಶ್ರದ್ದೆಯಲ್ಲಿ ದೂಡಿದರೆ ನಾವು ಅವುಗಳಲ್ಲಿ ಬೀಳಬೇಕಾ ???.ಭಕ್ತಿಯಿಂದ ದೇವರಿಗೆ ನಾವು ಒಂದು ಪ್ರಾರ್ಥನೆ, ಎರಡೇ ಎರಡು ಪುಷ್ಪಗಳು, ಒಳ್ಳೆ ಮನಸ್ಸಿನಿದ ಅರಾಧಿಸಿದರೆ ನಿಜವಾಗಿಯೂ ನಮಗೆ ಶಾಂತಿ ನೆಮ್ಮದಿ ಸಿಕ್ಕೆ ಸಿಗುವುದು ಸ್ನೇಹಿತರೆ.  ಆಡಂಬರದ , ಅಜ್ಞಾನದ, ಅಂದ ಶ್ರದ್ದೆಯ ಪೂಜೆಗಳಿಂದ ಅಲ್ಲ. ಲೋಕಕ್ಕೆ ಬೆಳಕನ್ನು ನೀಡುವ ದೇವರಿಗೆ ನಿಂಬೆ ಹಣ್ಣಿನ ದೀಪದ ಬೆಳಕು ಬೇಕೇ ?? ಸಮಸ್ತ ಜೀವರಾಶಿಗಳಿಗೆ ಜಲ,ಗಾಳಿ ಬದುಕಲು ಆವಾಸ ನೀಡಿರುವ ಆ ಚೇತನಕ್ಕೆ/ ದೇವರಿಗೆ ಹಸು ಕೊಟ್ಟ ಒಂದು ಲೀಟರ್ ಹಾಲಿನ ಅಭಿಷೇಕ ಮಾಡಿದರೆ ಸಾಕೆ ??? ದೇವರು ಇವನ್ನೆಲ್ಲ ಬಯಸುತ್ತಾನೆಯೇ ???. ಸ್ನೇಹಿತರೆ  ನಾಗರ ಪಂಚಮಿ ಇನ್ನೇನು ಬರುತ್ತಿದೆ. ನಿಮ್ಮಲ್ಲಿ ನನ್ನ ಕಳಕಳಿಯ  ಪ್ರಾರ್ಥನೆ ಏನೆಂದರೆ  ದಯವಿಟ್ಟು ಹಾಲನ್ನು ಕಲ್ಲಿಗೋ , ಉತ್ತಕ್ಕೊ ಎರೆಯದಿರಿ. ಅದರ ಬದಲು ಯಾರಿಗಾದರೂ ಬಡವರಿಗೆ,ಹಸಿದವರಿಗೋ ಕೊಡಿ. ಇಲ್ಲಾ ನೀವೇ ಕುಡಿಯಿರಿ ಸುಮ್ಮನೇ ಅನ್ಯಾಯವಾಗಿ ವೇಸ್ಟ್ ಮಾಡಬೇಡಿ. ನಿಮ್ಮ ಅಮ್ಮನೋ , ಅಜ್ಜಿಯೋ ಈ ರೀತಿಯ ಪೂಜೆ ಸಲ್ಲಿಸುತ್ತಿದರೆ ದಯವಿಟ್ಟು ಅದನ್ನು ತಡೆಯಿರಿ, ಅವರಲ್ಲಿ ಜಾಗೃತಿ ಮೂಡಿಸಿ,ತಿಳಿ ಹೇಳಿ. ಹಾಲು  ಎರೆದರು ಅಡ್ಡಿಯಿಲ್ಲ ಆದರೆ ಲೀಟರ್ ಗಟ್ಟಲೆ ಬೇಡವೇ ಬೇಡ , ಒಂದು ಚಮಚ ಸಾಕೆ ಸಾಕು.



ನಿಮಗಾಗಿ 
ನಿರಂಜನ್ 


ಶನಿವಾರ, ಜೂನ್ 9, 2012

ನಾನು ಮತ್ತು ನನ್ನ ಅನುಭವದ ಗಂಟು

   
                                           " ಹೆಣ್ಣು ಸೌಂದರ್ಯದ ಗಂಟು " 

ನಿಜ ಸ್ನೇಹಿತರೆ .......

'ಹೆಣ್ಣು', ನಮ್ಮ ಬ್ರಹ್ಮ  ದೇವರು ಕಷ್ಟ ಪಟ್ಟು, ಬೆವರು ಸುರಿಸಿ ನಮಗಾಗಿ  ಮಾಡಿಕೊಟ್ಟ ಸೌಂದರ್ಯದಗಂಟು. ಅದಕ್ಕಾಗಿಯೇ  ಏನೋ ಹೆಣ್ಣಿನ  ಮನಸ್ಸು ನಮಗೆ ಹರಿಯಲು ಸಾದ್ಯವೇ ಇಲ್ಲ, ಏಕೆಂದೆರೆ ಅವಳು  ಸೌಂದರ್ಯದ  ಗಂಟಲ್ಲವೆ. ಗಂಟಿನ ಒಳಗೆ ಏನಿದೆ ಎಂದು ಒಳಗೆ ನೋಡಿದಾಗಲೇ ನಮಗೆ ತಿಳಿಯುವುದು. ಇದೆಲ್ಲ ನಮಗೆ ಗೊತ್ತಿದ್ದರೂ  ಕೂಡ, ಹೆಣ್ಣು ಕನ್ನಡಿಯೊಳಗಿನ  ಗಂಟು ಅಂತ   ನಮ್ಮ  ಹಿರಿಯರು, ಬುದ್ದಿವಂತರು ಹೇಳಿದರೂ  ಸಹ, ಹುಡುಗಿ ಎನ್ನುವ  ಆ ಸೌಂದರ್ಯದ ಗಂಟೆಂದರೆ ಯಾರಾದರು ಮೂಗು ಮುರಿಯುತ್ತಾರೆಯೇ ?? ಇಲ್ಲವೇ ಇಲ್ಲ ..   ಎಲ್ಲರಿಗೂ ಅದೇನೋ ಅಚ್ಚು-ಮೆಚ್ಚು, ಪ್ರೀತಿ ,ವ್ಯಾಮೋಹ . ಅದು ಯಾವುದೇ ಗಂಟಾಗಲಿ, ಅದು ಹೇಗೆಯೇ  ಇರಲಿ ನಾವು ಅದನ್ನು ಕದಿಯಬೇಕೆಂದು ಒಮ್ಮೆಯಾದರು ಅಂದುಕೊಳ್ಳುತ್ತೇವೆ. ಅಪ್ಪಿ ತಪ್ಪಿ ಗಂಟೆನಾದರು ಸಿಕ್ಕರೆ ಆ  ಗಂಟನ್ನು  ಸದಾ ನಮ್ಮ ಬಗಲಲ್ಲೇ ಇಟ್ಟುಕೊಳ್ಳಬೇಕು ಅಂತ ಅಂದುಕೊಳ್ಳುತ್ತೇವೆ. ಗಂಟುಗಳು ಕೂಡ ಹಾಗೆಯೇ , ಕೆಲವು ಚಿಕ್ಕವಿರುತ್ತವೆ, ಕೆಲವು ದೊಡ್ಡವಿರುತ್ತವೆ, ಕೆಲವು ಒಳ್ಳೆಯ ಗಂಟುಗಳು, ಮತ್ತೆ ಕೆಲವು ಕೆಟ್ಟವು. ಎಲ್ಲಾ  ಗಂಟುಗಳನ್ನು ನಾವು ಒಮ್ಮೆ ಬಿಚ್ಚಿ ನೋಡಿದಾಗಲೇ ನಮಗೆ ಅವುಗಳ ಸ್ವರೂಪ, ನಿಜವಾದ ಅರ್ಥ ತಿಳಿಯುವುದು. ಇದೇನಪ್ಪ ಇವನ್ನು ಗಂಟು ಗಂಟು ಎಂದು  ತುಂಬಾ ಒಗಟಾಗಿ  ಮಾತನಾಡುತ್ತಿದ್ದಾನೆ ಅಂದುಕೊಂಡಿರಾ ??? ನಿಜ ನಾನು ಈದಿನ ನಿಮಗೆ ಮತ್ತು ನಮಗೆ ಇರುವ ಗಂಟಿನ ನಂಟಿನ ಬಗ್ಗೆ, ನನ್ನ ಅನುಭವಗಳ ಪುಟ್ಟ ಅಬಿಪ್ರಾಯದ  ಗಂಟನ್ನು ನಿಮ್ಮ ಮುಂದೆ ಸ್ಪುಟವಾಗಿ ಬಿಚ್ಚಿಡ ಬಯಸುತ್ತೇನೆ. ನಾ ಹೇಳುವುದು ನಿಮಗೆ ಯಾವುದೇ ಕಾರಣಕ್ಕೂ  ಕಗ್ಗಂಟು ಆಗುವುದಿಲ್ಲ  ಎಂದು ಭಾವಿಸುತ್ತೇನೆ. 

          ಕನ್ನಡ ನಿಘಂಟಿನಲ್ಲಿ ಅಥವಾ ರತ್ನಕೋಶ ದಲ್ಲಿ ನಮಗೆ ಗಂಟು ಪದಕ್ಕೆ ಸಿಗುವ ಅರ್ಥವೆಂದರೆ " ದಾರ ಮುಂತಾದುವುಗಳ ಕಟ್ಟು, ಕಂತೆ, ಗಡ್ಡೆ, ಐಶ್ವರ್ಯ, ನಂಟು, ಸಮಸ್ಯೆ". ಗಂಟು ನನ್ನ ದಿನಬಳಕೆಯ ಸರಕಿನಂತೆ ನನ್ನ ಭಾಷಾ ಸರಕಿನ ಒಂದು ಬಹುಮುಖ್ಯ ಶಬ್ದವಾಗಿದೆ. ಅದನ್ನು ನಾನು ಸ್ವಾಭಾವಿಕವಾಗಿ  ಎತ್ತೇಚವಾಗಿ ಬಳಸುತ್ತೇನೆ, ಅದರಿಂದ ಅತಿಯಾದ ಹಾಸ್ಯ ಕೂಡ ಹೊರಹೊಮ್ಮುತ್ತದೆ. ಕೆಲವರು ಆ ಹಾಸ್ಯವನ್ನು ಮೆಚ್ಚುತ್ತಾರೆ, ಕೆಲವರು ಮುಖ ಗಂಟು ಹಾಕಿಕೊಳ್ಳುತ್ತಾರೆ.


            ಕನ್ನಡ ನಿಘಂಟಿನಲ್ಲಿ ಗಂಟು ಹೇಗೆ ಶಾಶ್ವತ ಸ್ಥಾನ ಪಡೆದಿದೆಯೋ ಹಾಗೆಯೇ ಬ್ರಹ್ಮ ಗಂಟಾಕಿ ಕರೆತರುವ ಹೆಣ್ಣು ಕೂಡ ನಮ್ಮಲ್ಲಿ ಶಾಶ್ವತವಾಗಿದೆ ನೆಲೆಸುತ್ತಾಳೆ. ನೋಡಿ ಗಂಟು ಹೇಗೆ ನಮಗೆ ಅಂಟಿಕೊಳ್ಳುತ್ತದೆ. ಗಂಟಿನ ನಂಟನ್ನು ನಾವು ಬಿಡಬೇಕೆಂದರು ಅದು ನಮ್ಮನ್ನು ಬಿಡೊಲ್ಲ. ಈ ಗಂಟು ಪದದ ಅರ್ಥವು ಕೂಡ ಹಾಗೆಯೇ. ಹೇಗೆ  ಗಂಟಾಕಿಕೊಂಡ ಹೆಣ್ಣು ಬದಲಾಗುತ್ತಾಳೋ, ಹಾಗೆಯೇ ಗಂಟು ಪದದ ಅರ್ಥವು  ಸಂದರ್ಭಕ್ಕೆ ತಕ್ಕಹಾಗೆ ಬದಲಾಗುತ್ತಲೇ ಹೋಗುತ್ತದೆ. ಗಂಟಿನ ಎಲ್ಲ ಮಜಲುಗಳನ್ನು ನಾವು ಸರಿಯಾಗಿ  ಬಳಸಿದಾಗ ಅದರ ಮಜವೇ ಬೇರೆ. ನಮಗೆ ಒಂದೊಂದು ಸಮಯದಲ್ಲಿ ಒಂದೊಂದು "ಗಂಟು" ಗಳು ಬೇಕೆನಿಸುತ್ತವೆ. ಒಂದು ವಯಸ್ಸಿನಲ್ಲಿ "ಸೌಂದರ್ಯದ ಗಂಟು", "ಅಪ್ಪ-ಅಮ್ಮನ ಗಂಟು", "ಸರ್ಕಾರದ ಗಂಟು", "ಜನರ ಗಂಟು", "ದೇಶದ ಗಂಟು", "ಹೆಂಡತಿಯ ಗಂಟು", "ಮಾವನ ಗಂಟು" ಹೀಗೆ ಒಂದಲ್ಲ ಒಂದು ರೀತಿಯಾಗಿ ಗಂಟಿನ ಮೇಲೆ ಗಂಟುಗಳ    ಆಸೆ , ವ್ಯಾಮೋಹ   ಕಾಲಘಟ್ಟದಲ್ಲಿ ಬೆಳೆಯುತ್ತಲೇ ಹೋಗುತ್ತದೆ. ಈ ಗಂಟನ್ನು ಪಡೆದು, ಅನುಭವಿಸುವ ಕ್ರಿಯೆಯನ್ನು ನಾವು ಹಾಡು ಭಾಷೆಯಲ್ಲಿ " ಗಂಟು ನುಂಗುವುದು , ಗಂಟು ಕದಿಯುವುದು, ಗಂಟು ತಿನ್ನುವುದು " ಎಂದು ಹೇಳುತ್ತೇವೆ.     

              ಎಲ್ಲರೂ ಕೂಡ ಹಾಗೆಯೇ ಒಮ್ಮೆ ಗಂಟಿನ ಮೇಲೆ ಕಣ್ಣಿಟ್ಟರೆ ಆ ಗಂಟನ್ನು  ಹೊಡೆಯುವ ತನಕ ಸುಮ್ಮನಿರುವುದಿಲ್ಲ. ಆ ಗಂಟನ್ನು ಕದಿಯಲು ಹಗಲು ರಾತ್ರಿ ಕಷ್ಟ ಪಡುತ್ತಾರೆ. ಅದನ್ನು ಕದಿಯುವ ತನಕ ಅವರು ನಿದ್ದೆ ಕೂಡ ಮಾಡುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ನಾಯಕರುಗಳು. ಅವರು ತಾವು ದೇಶದ, ಸಾರ್ವಜನಿಕರ ಗಂಟನ್ನು  ಹೊಡೆಯಲು ಬಳಸುವ ಕಾರ್ಯಕ್ಷೇತ್ರ ರಾಜಕೀಯ ಸಂತೆ. ಇಲ್ಲಿ ನೋಟಿನ ಕಂತೆಯದೇ ಮೇಲುಗೈ. ಆ ಕಂತೆಗಳ ಗಂಟುಗಳನ್ನು ಕದಿಯಲು ಅವರು ಯಾವ ಮಟ್ಟಕ್ಕೆ ಬೇಕಾದರೂ ಏರುತ್ತಾರೆ. ಆಮೇಲೆ ಯಾವ ಮಟ್ಟಕ್ಕಾದರೂ ಮರ್ಯಾದೆ ಎಲ್ಲಿತ್ತೋ ಅಲ್ಲೇ ಬಿಟ್ಟು   ಇಳಿಯುತ್ತಾರೆ. ಯಾರು ಏನೇ ಅಂದರು, ಏನೇ ಜರಿದರು, ಗಂಟು ಕದ್ದೆ ಕದಿಯುತ್ತಾರೆ. ಭೂಮಿಯ ಅಂತರಾಳದ  ಒಳಪದರದಲ್ಲಿ   ಗಂಟು ಇದ್ದರು ಅದನ್ನು ಅಗೆದು-ಬಗೆದು ತಗೆದ  ಅದೆಷ್ಟೋ ಉದಾಹರಣೆಗಳು ನಮ್ಮ ಮುಂದೆ ಈಗಲೂ ಇವೆ. ಅದು ನಮ್ಮ ಗಂಟಾದರೂ ನಾವು ಮಾತ್ರ ಬಾಯಿ ಬಿಡದೆ, ಮುಖ ಮಾತ್ರ ಗಂಟು ಹಾಕಿಕೊಂಡು ಕೂತುಬಿಡುತ್ತೇವೆ. ನಮ್ಮ ಜನ ಪ್ರತಿ"ನಿಧಿ"ಗಳು ಮಾತ್ರ ತಮ್ಮ ಕುಟುಂಬದವರಿಗೆ ಮಾತ್ರವಲ್ಲದೇ ಬೇರೆ ಬೇನಾಮಿ ಜನಕ್ಕೆಲ್ಲ "ನಿಧಿ ಗಂಟು"ಗಳನ್ನು ಸಂಗ್ರಹಿಸುತ್ತಾರೆ, ನಮ್ಮ ಮಟ್ಟಿಗೆ ಅದು ಗಂಟು ಕದಿಯುವುದು ಎಂದು ಅನ್ನಿಸುತ್ತದೆ ಅಷ್ಟೇ.



            ಇದೇನಪ್ಪ ಬರಿ ಇವನು ರಾಜಕೀಯದವರನ್ನು ಮಾತ್ರ ಕಳ್ಳ ಅಂತ ಅನ್ನುತ್ತಾನೆ, ನಾವೇನೂ ತುಂಬಾ ಸಾಚಗಳ ??? ಹ ಹ ಹ,  ನಾವೇನೂ ಸಾಚಗಳಲ್ಲ ನಾವು ಕೂಡ ಕಳ್ಳರೇ. ನಾವು ಕೂಡ ಒಂದು ವಯಸ್ಸಿನ್ನಲ್ಲಿ ಅಂದರೆ ಚಿಕ್ಕವರಿದ್ದಾಗ ಅಪ್ಪ-ಅಮ್ಮ ಮಾಡಿದ ಗಂಟನ್ನು ಕಳೆಯುತ್ತೇವೆ, ದೊಡ್ಡವರಾದ ಮೇಲೆ ಮೀಸೆಗಳು ಚಿಗುರುವ ಸಮಯದಲ್ಲಿ ಮೇಲೆ ಹೇಳಿದ ಹಾಗೆ ಸೌಂದರ್ಯದ ಗಂಟು ಅಂದರೆ ಹೆಣ್ಣನ್ನು ಕದಿಯ ಬಯಸುತ್ತೇವೆ. ಹೀಗೆ ಮೊನ್ನೆ ನನ್ನ ಸ್ನೇಹಿತ ಇದೆ ರೀತಿಯ ಒಂದು ಗಂಟು ಕದಿಯಲು ಹುಡುಗಿಯ ಬಳಿ ಹೋಗಿದ್ದಾಗ ನೆಡೆದ ಒಂದು ಸಣ್ಣ ಸುಂದರ ಘಟನೆಯ ಬಗ್ಗೆ ನಾನು ಹೇಳ ಬಯಸುತ್ತೇನೆ. ಎಷ್ಟೇ ದೈರ್ಯವಾಂತರಾದರೂ, ಎಷ್ಟು ಕೆರೆ ನೀರು ಕುಡಿದಿದ್ದರೂ ಸಹ,  ಹುಡಿಗಿಯ ಬಳಿ ಹೋಗಿ ನಮ್ಮ "ಪ್ರೀತಿಯ ಗಂಟು"  ಬಿಚ್ಚಿಡಲು ನಿಜವಾದ ಗಂಡೆದೆ ಬೇಕೇ ಬೇಕು. ಅದೇ ರೀತಿ ನಮ್ಮ ಹುಡುಗ ಹುಡುಗಿ ನೋಡಿದ, ನಿಜವಾಗಿಯೂ ಅವಳು ಸೌಂದರ್ಯದ ಗಂಟೆ ಆಗಿದ್ದಳು. ಆ ಗಂಟನ್ನು ಗಂಟು ಹಾಕಿಕೊಳ್ಳಲೇ ಬೇಕು  ಎಂದು ನಿರ್ದರಿಸಿದ.  ಒಮ್ಮೆ ಒಳ್ಳೆಯ ಸಮಯ ನೋಡಿ, ಒಬ್ಬಳೇ ಇದ್ದಾಗ ತನ್ನ ಪ್ರೀತಿಯ "ಭಾವನೆಗಳ ಗಂಟ"ನ್ನು ಅವನು ಅವಳ ಮುಂದೆ ಸಲೀಸಾಗಿ, ಸುಲಲಿತವಾಗಿ, ಯಾವುದೇ ಸಂಕೋಚವಿಲ್ಲದೇ, ತೊಡಕಿಲ್ಲದೆ  ಬಿಚ್ಚಿಟ್ಟ. ಅವಳಿಗೂ ಕೂಡ ತುಂಬಾ ಆಶ್ಚರ್ಯವಾಯಿತು. "ಇದೇನೋ ಇಷ್ಟೊಂದು ಸರಳವಾಗಿ, ನೇರವಾಗಿ ಮನ ಮುಟ್ಟುವಂತೆ ಹೇಳಿಬಿಟ್ಟೆ. ನನಗೆ ನೀನು  ನಿನ್ನ ಭಾವನೆಗಳ ಗಂಟನ್ನು ಬಿಚ್ಚಿಟ್ಟ ಪರಿ ತುಂಬಾ ಇಷ್ಟ ಆಯಿತು, ಹೇಗೋ ಇಷ್ಟು ಸಲೀಸಾಗಿ ಹೇಳಿದೆ ನನಗೆ ಇದನ್ನೆಲ್ಲ " ಅಂದಾಗ ಅವನು , "ಅಯ್ಯೋ ಅದರಲ್ಲಿ ಏನಿದೆ ಚಿನ್ನ , ಅದಕ್ಕೆಲ್ಲ ಬಿಚ್ಚಿಡುವ ಅನುಭವ ಬೇಕಮ್ಮ , ನನಗೆ  ಈಗಾಗಲೇ ನಾಲ್ಕು ಹುಡುಗಿಯರ  ಮುಂದೆ "ಪ್ರೀತಿಯ ಗಂಟು" ಬಿಚ್ಚಿದ ಅನುಭವವಿದೆ ಎಂದು ಹೇಳಿದ. ಆಕೆ ಆಗ ಆ  ಕ್ಷಣಕ್ಕೆ "ಮುಖ ಗಂಟು" ಹಾಕಿಕೊಂಡದ್ದಂತೂ ನಿಜ.


            ಪ್ರೀತಿಸಿದ ಹುಡುಗ ಅಪ್ಪ-ಅಮ್ಮ ಮಾಡಿದ  ಗಂಟನ್ನು ಕಳೆದು ಹುಡುಗಿಯನ್ನು ಗಂಟಾಕಿ ಕೊಂಡರೆ, ಪ್ರೀತಿಸದೇ ಇರುವ ಹುಡುಗ ಗಂಟು ಉಳಿಸಿಕೊಂಡು ಮನೆಯವರ ಸಮ್ಮುಖದಲ್ಲಿ ತನಗೆ ನೀವೇ ಯಾರನ್ನಾದರೂ ಗಂಟು ಹಾಕಿ ಎಂದು ಗೋಗರೆಯುತ್ತಾನೆ. ಅದಕ್ಕೆ ಅವರು ತಮ್ಮ ಪ್ರೀತಿಯ ಮತ್ತು  ಐಶ್ವರ್ಯದ ಗಂಟನ್ನು ತಮ್ಮ ನೆಂಟರ ಮುಂದೆ  ಬಿಚ್ಚಿಡುತ್ತಾರೆ. ಆ ಗಂಟು ನೋಡಿದ ನೆಂಟನು ಮಗಳನ್ನು ಹುಡುಗನಿಗೆ ಗಂಟಾಕಿ, ತಾನು ಅಂಟಿಕೊಳ್ಳುವ ನೆಂಟನಾಗುತ್ತಾನೆ. ಅಳಿಯನೇನು   ಕಡಿಮೆ ಅಲ್ಲ ಹೆಂಡತಿ ತರುವ ಗಂಟು, ಆಮೇಲೆ ಅವನಿಗೆ ಸಿಗುವ ಮಾವನ ಗಂಟಿನ ಮೇಲೆಯೇ ಕಣ್ಣಿಟ್ಟಿರುತ್ತಾನೆ. ಅದು ಸಿಗಲಿಲ್ಲ ಅಂದರೆ ಮುಖ ಗಂಟು ಹಾಕಿ ಕೊರಗುತ್ತಾನೆ. ಒಂದು ರೀತಿಯಲ್ಲಿ ಇಲ್ಲಿ ಎಲ್ಲರೂ ಗಂಟು ಕಳ್ಳರೇ ಮಾವ ಹೆಣ್ಣುಕೊಟ್ಟು INDIRECT ಆಗಿ ಅಳಿಯನ ಗಂಟು ಕಳ್ಳ, ವರದಕ್ಷಿಣೆ ಹಾಳು-ಮೂಳು ಇಸ್ಕೊಂಡು ಮಧುವೆ ಆಗುವ ಅಳಿಯ ಕೂಡ ಮಾವನ  ಗಂಟು ಕಳ್ಳ . 

          ಹೀಗೆ ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಗಂಟು ಕಳ್ಳರು ಮತ್ತು ಗಂಟು ಮಾಲೀಕರು. ಕವಿಗಳಿಗೆ ಗಂಟು ಎಂದರೆ ಅವರ ಭಾವನೆಗಳು,ಕಲ್ಪನೆಗಳು ಮತ್ತು ಕನಸುಗಳು. ವಾಗ್ಮಿಗಳಿಗೆ ಗಂಟು ಎಂದರೆ ಮಾತುಗಳು. ಕೇಳುವವರು ಸಿಕ್ಕರೆ ಸಾಕು ಹಾಗೆ ಇಂದು-ಮುಂದು ಕೇಳದೇ, ಒಡಕು ಸ್ವಾರೆ, ತೆರೆದ ಪುಸ್ತಕದಂತೆ, ಆ ಭಾರಿ ಗಂಟುಗಳ ಮೊನಚಾದ  ಬಾಣಗಳನ್ನು ನಮ್ಮ ಮೇಲೆ ಪ್ರಯೋಗಿಸಿ, ನಮ್ಮನ್ನು ಕೆಲವೊಮ್ಮೆ ಸಂತೋಷಗೊಳಿಸಿ, ಮತ್ತೊಮ್ಮೆ ಪೇಚಿಗೂ ಸಿಗಿಸುತ್ತಾರೆ. ಅದೇ ರೀತಿ ಒಬ್ಬ ಕವಿ ಹೃದಯಿ ಒಮ್ಮೆ ಒಂದು ಕವಿತೆ ಬರೆದು ತನ್ನ ಹೆಂಡತಿ ಬಳಿ ಹೋಗಿ ಅದನ್ನು ಲಯಬದ್ದವಾಗಿ ಬಿಚ್ಚಿಟ್ಟನಂತೆ, ಆಗ ಅವಳಿಗೆ ಅರ್ಥವಾಗದೆ , ಅದರ ಅರ್ಥ ಕಗ್ಗಂಟಾಗಿ , ಮುಖ ಗಂಟು ಹಾಕಿಕೊಂಡಳಂತೆ. ಕವಿಗೆ ಕವನವನ್ನು ಯಾರಾದರೂ ತಿರಸ್ಕರಿಸಿದರೆ ಕವಿಯನ್ನೇ ತಿರಸ್ಕರಿಸಿದಂತೆ ಎಂದು ಭಾವಿಸುತ್ತಾನೆ. ಅದೇ ರೀತಿ ಈ ಕವಿಗೂ ತುಂಬಾ ಬೇಜಾರಾಗಿ ಬೇರೆ ದಾರಿಯಿಲ್ಲದೇ ಅದೇ ದಾರಿಯ ಕೊನೆಯ ಮನೆಯ ಸಾವಿತ್ರಯನ್ನು ಯಾರಿಗೂ ಗೊತ್ತಿಲ್ಲದೇ ಗಂಟು ಹಾಕಿಕೊಂಡನಂತೆ. 

           ಈ "ಗಂಟು" ಸ್ನೇಹಿತರೆ ನಮ್ಮ ಭಾಷೆಯ ಅತ್ಯಂತ ಅದ್ಬುತ , ಹಾಸ್ಯಮಾಯವಾದ ಅರ್ಥ ಕೊಡುವ ಒಂದು ಶಬ್ದವಾಗಿದೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಉಪಯೋಗಿಸುತ್ತೇವೆ. ಹಳ್ಳಿಗಳಲ್ಲೋಂತೂ ಇದರ ಪ್ರಯೋಗ ಮತ್ತು ಭಾವ ವಿಬಿನ್ನವಾಗಿರುತ್ತೆ. ಹಳ್ಳಿಗರು ಅನ್ಯಾಯವಾದಾಗ ಇದನ್ನು ಇನ್ನೊಬ್ಬರನ್ನು ನಿಂದಿಸಲು ಸುಂದರವಾಗಿ ಉಪಯೋಗಿಸುತ್ತಾರೆ. " ಅಯ್ಯೋ ನಿನ್ ಮನೆ ಕಾಯ್ವಾಗ್ ಹೋಗಾ, ನನ್ನ ಗಂಟು ತಿಂದ ನೀ ಮುಂಡಮೋಸಿ ಹೋಗಾ " "ಬೇರೆ ಜನದ್ ಗಂಟು ತಿಂದ ನೀ ಉದ್ದಾರ ಆಗ್ತೀಯ ಎನ್ಲಾ ??? " ಹೀಗೆ ಇನ್ನೂ ಅನೇಕೆ ಅದ್ಬುತ ಬೈಗುಳಗಳಿವೆ. ನೀವ್ ಹಳ್ಳಿಗಳಲ್ಲಿ ನಿಮ್ಮ ಕಿವಿಗಳಲ್ಲೇ ಅವುಗಳನ್ನು ಖುದ್ದಾಗಿ ಕೇಳಿದ್ರೆ ತುಂಬಾ ಮಜ ಬರುತ್ತೆ. ನಾ ಏನೇ ಹೇಳಿದ್ರು ಅದು ಅಷ್ಟೊಂದು ಎಫೆಕ್ಟ್ ಕೊಡೋಲ್ಲ ಬಿಡಿ.  ಹಳ್ಳಿಯಲ್ಲಿ ಗಂಟುಗಳು ಮತ್ತೊಂದು ಬಗೆಯಲ್ಲೂ ಹಿತ   ಕೊಡುತ್ತೆ ನೋಡಿ. ಬಿಸಿಲಲ್ಲಿ ತನಗಾಗಿ ದುಡಿಯುವ ತನ್ನ  ಗಂಡನಿಗೆ ಅವನ ಪ್ರೀತಿಯ  ಹೆಂಡತಿ ಹೊಲದ ಬದುವಿನ ಮೇಲೆ ಬಳುಕುತ್ತಾ  "ಬುತ್ತಿ ಗಂಟ"ನ್ನು ತರುತ್ತಾಳೆ. ಆಕೆ ಬರುವುದನ್ನು ನೋಡಿದ ತಕ್ಷಣ ಆ ಬಳಲಿದ ರೈತ ತನ್ನೆಲ್ಲ ಬವಣೆಗಳನ್ನು ಮರೆತು, ಗಮ್ ಎನ್ನುವ ಬುತ್ತಿ ಗಂಟು ಬಿಚ್ಚಿ ಅದರ ಸವಿ ಸವಿಯುತ್ತಾನೆ. ಹೀಗೆ ಗಂಟಿಗೂ ಬವಣೆಗಳನ್ನು ಮರೆಸುವ ಶಕ್ತಿ ಇದೆ ನೋಡಿ.  ನಮಗೆ ಆ ಹಳ್ಳಿಗನ ಆ ಸಹಜ ಸುಖ ಅಥವಾ ಆ  ಪುಣ್ಯ ಇಲ್ಲವೇ ಇಲ್ಲ  ಅಲ್ಲವೇ ??? ಏಕೆಂದರೆ ನಮ್ಮದು ಜಾಮ್ ರಸ್ತೆಗಳು, ಲಂಚ್ ಬಾಕ್ಸ್ಗಳು ಮೇಲಾಗಿ ಸೆಲ್ಫ್ ಸರ್ವೀಸ್ ....

           ನಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಒಂದು ಭಾರಿ ಗಂಟುಗಳ್ಳರ ವಿರುದ್ದ ಅಂಧೊಲನವೂ ನಮ್ಮ ದೇಶದಲ್ಲಿ  ಆಯಿತು. ಅದರಲ್ಲಿ ನಮ್ಮ ಅಣ್ಣ ತಮ್ಮನ್ನು ತಾವು  ಸಂಪೂರ್ಣವಾಗಿ ತೊಡಗಿಸಿಕೊಂಡರು. ಬಹಳೋಶ್ಟು ಆದಿಕಾರಿಗಳು, ರಾಜಕಾರಿಣಿಗಳು ಇನ್ನೂ ಅನೇಕರು,  ಜನರ ಹಾಗು ದೇಶದ ಗಂಟು ತಿಂದು ನೀರು ಕುಡಿಯುತ್ತಿದ್ದಾರೆಂದು, ಪಾಪ ನಮ್ಮ ಅಣ್ಣ  ಅವರು ತಮ್ಮ ಅನ್ನ-ನೀರು ಬಿಟ್ಟು ಸ್ವಲ್ಪ ದಿನ ಉಪವಾಸ ಮಾಡಿಯೂ ಬಿಟ್ಟರು. ಆದರೆ ಗಂಟುಗಳ್ಳರೂ ಮಾತ್ರ ಇನ್ನೂ ಗಂಟು ಕದಿಯುತ್ತಲೇ ಇದ್ದಾರೆ, ಗಂಟು ನುಂಗುತ್ತಲೇ ಇದ್ದಾರೆ. ಪಾಪ ಅಣ್ಣ ಇದನ್ನೆಲ್ಲ ನಿಲ್ಲಿಸಲು ಇನ್ನೂ ಏನೇನು ಮಾಡಬೇಕೋ ಯಾರಿಗೂ ಗೊತ್ತಿಲ್ಲ.  ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಗಂಟು ಕಳ್ಳರೆ. ಚಿಕ್ಕವರಿದ್ದಾಗ ಅಪ್ಪ ಅಮ್ಮನ ಗಂಟು, ದೊಡ್ಡವರಾದಾಗ ದೇಶದ ಗಂಟು, ಇನ್ನೋಬರ , ಮತ್ತೊಬ್ಬರ ಗಂಟುಗಳನ್ನು ನಾವು ಕದಿಯುತ್ತಲೇ, ನುಂಗುತ್ತಲೇ ಇರುತ್ತೇವೆ. ನಮಗೆ ಅಲ್ಲದೇ ನಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಗಂಟು ಮಾಡೋ ಮುಂದಾಲೋಚನೆ ಮಾಡುತ್ತೇವೆ. ಅದೇ ರೀತಿ ಗಂಟು ಗುಳಮ್ ಮಾಡಲು ಶತಾಯಾಗತ ಪ್ರಯತ್ನವನ್ನು ಮಾಡುತ್ತೇವೆ. ನಾವು ಮಾಡದಿದ್ದರೂ ನಮ್ಮ ಸಮಾಜ ನಮ್ಮ ವಾತಾವರಣ  ನಮ್ಮನ್ನು  ಗಂಟುಗಳ್ಳಾರನ್ನಾಗಿ ಮಾಡುತ್ತದೆ. ಹೀಗೆ ಈ ಹಾಳಾದ ಗಂಟು ನಾವು ಬಿಡಲು ಇಚ್ಛಿಸಿದರು ಅದು ಮಾತ್ರ ನಮ್ಮನ್ನು ಬಿಡದೆ ನಮಗೆ ಅಂಟಿಕೊಂಡು ಬಿಡಿಸಲಾಗ ಕಗಂಟಾಗಿದೆ. 

            ಒಟ್ಟಿನಲ್ಲಿ ಗಂಟು ಯಾವುದೇ ಆಗಿರಲಿ, ಅದು ಹೇಗೆ ಇರಲಿ, ಭಾರ ಕಡಿಮೆ ಇದ್ದರೆ, ಸುಂದರವಾಗಿದ್ದರೆ ನಮಗೆ ಅದನ್ನು ಸಂಪಾದಿಸಲು, ಕದಿಯಲು ಸುಲಭವಾಗುತ್ತೆ. ಸೌಂದರ್ಯದ ಗಂಟು ಕದಿಯಬೇಕಾದಗ ಮಾತ್ರ ಗಾತ್ರದ ಬಗ್ಗೆ ಗಮನ ಕೊಡಿ. ಒಳ್ಳೆಯ ಗಂಟೆ ಬ್ರಹ್ಮ-ಗಂಟಾಗಲಿ. ನಮ್ಮ ಮುಂದಿನ ಪೀಳಿಗೆಗೆ ನಾವು ಒಳ್ಳೆಯ, ಸುಂದರವಾದ, ಸಾತ್ವಿಕವಾದ, ಗಂಟನ್ನು ಬಿಟ್ಟು ಹೋಗುವ . ಆಮೇಲೆ ಅವರಿಗೆ ಬೇಕಾದ ಗಂಟುಗಳನ್ನು ಅವರು ಆರಿಸಿಕೊಳ್ಳುತ್ತಾರೆ. ಮೊದಲು ನಾವು ಒಳ್ಳೆಯ ಗಂಟು ಕದಿಯಲು ಪ್ರಯತ್ನ ಪಡೋಣ. 

          ಇತೀಚೆಗೆ ನಾನು ಕೂಡ ಬೇಜಾನ್ ಗಂಟುಗಳನ್ನು ತಿಂದೆ , ನುಂಗಿದೆ . ಆದ್ರೆ ಯಾವ ಗಂಟು ನುಂಗಿದೆ, ಯಾರ ಗಂಟು ನುಂಗಿದೆ ಅನ್ನೋದು  ಸಕತ್ ಆಗಿ ಇದೆ. ಗಂಟು ತಿಂದಾಗ ಗಂಟು ಕಳೆದು ಕೊಂಡವರು ಸಾಮಾನ್ಯವಾಗಿ ಬೇಜಾರಾಗುತ್ತಾರೆ , ಇಡೀ ಶಾಪವನ್ನೇ ಕೊಡತ್ತಾರೆ. ಆದರೆ ನಾನು ಗಂಟು ನುಂಗಿದಾಗ ಮಾತ್ರ ಎಲ್ಲರೂ ತುಂಬಾ ಖುಷಿ ಪಟ್ಟರು, ಷಹಬ್ಬಾಷ್ ಗಿರಿ ಕೂಡ ಕೊಟ್ರೂ. ಅಂತಹ ಅದೇನು ಆ ಗಂಟು ಅಂತೀರಾ ??? " ನಮ್ಮ ಅತ್ತಿಗೆ ಕಲಿಯುವ ಸಂದರ್ಭದಲ್ಲಿ  ಮಾಡಿದ ರಾಗಿ ಮುದ್ದೆಯಲ್ಲಿ ಸಿಕ್ಕ ಹೇರಳವಾದ, ಹರಳು-ಹರಳಾದ, ದುಂಡು-ದುಂಡನೆ ಮುದ್ದೆಯ ಗಂಟುಗಳು "

       ಲಂಚಕೋರರು "ದೇಶದ ಗಂಟು"
          ನುಂಗಿದ್ದಕ್ಕೆ
          ಸಿಡಿಮಿಡಿಗೊಂಡರು "ಅಣ್ಣ
          ನಮ್ಮತ್ತಿಗೆಯ "ಮುದ್ದೆಯ ಗಂಟು"
          ನುಂಗಿದ್ದಕ್ಕೆ 
          ಸಂತೋಷಗೊಂಡನು 
          ನನ್ನ ಸ್ವಂತ "ಅಣ್ಣ"

ನಿಮಗಾಗಿ 
ನಿರಂಜನ್  

ಭಾನುವಾರ, ಏಪ್ರಿಲ್ 22, 2012

ಪ್ರಕೃತಿಯ

                               
                                                ಮರೆತೆವಾ ನಾವೆಲ್ಲರು.......

ದೊಂದು ರಜ ದಿನ , ಬೆಳಿಗ್ಗೆ ಜಲ್ದಿ ಎದ್ದು  ಬೇಸಗೆಯ  ಸೂರ್ಯನ ಎಳೆ ಬಿಸಿಲಿನಲ್ಲಿ  ಒಂದು ಸಣ್ಣ ವಾಕ್ ಹೊರಟಿದ್ದೆ. ಎಲ್ಲರೂ ಇಷ್ಟ ಪಡುವಂತೆಯೇ ನಾನು ಕೂಡ ಈ ಹಸಿರು  ಗಿಡ-ಮರ, ಹಕ್ಕಿ-ಪಕ್ಷಿಗಳ ಚಿಲಿ -ಪಿಲಿ ಜಾಸ್ತಿ ಇರುವ, ನಾಯಿಗಳು ಹಾಗು ಜನಸಂದಣಿ ಕಡಿಮೆ ಇರುವ ದಾರಿಗಳನ್ನೇ ಇಷ್ಟ ಪಡ್ತೇನೆ ಹಾಗು ಅಂತಹ ಜಾಗಗಳಲ್ಲಿ ಸದಾ ಇರಲು ಕೂಡ  ಬಯಸುತ್ತೇನೆ. ಅದೇ ತರ ಆ ದಿನ ಕೂಡ ಅಂತಹ ಒಂದು ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದೆ ವಾಕ್ ಮಾಡಲು.



 
             
               ನಿಜಕ್ಕೂ ಅದು ಒಂದು ಪಕ್ಕ ರೆಸಿಡೆನ್ ಶಿಯಲ್  ಪ್ರದೇಶ ಆದರೂ ಕೂಡ ಸಕತ್ ಡಿಫರೆಂಟ್ ಆಗಿ ಇತ್ತು. ಆ ರಸ್ತೆಯ ಇಕ್ಕೆಲಗಳಲ್ಲೂ ಸುಂದರ ಮನೆಗಳು , ಮನೆಗಳು ಸ್ವಲ್ಪ ಹಳೆಯವಾಗಿದ್ದರೂ, ಸುಂದರವಾಗೇ ಇದ್ದವು. ಒಂದು ಕ್ಷಣ ನನಗೆ ಏನು ಇಂತಹ ಬೆಂಗಳೂರಿನಲ್ಲಿ, ಅದು ಈ ಪರಿಯ ಬೇಸಗೆಯ ಕಾಲದಲ್ಲೂ  ಈ ರೀತಿಯ ವಾತಾವರಣ ?? . ನಿಜವಾಗಿಯೂ  ಸ್ನೇಹಿತರೆ  ಸೂರ್ಯನ ಬಿಸಿಲು ಎಲ್ಲಿ ರಸ್ತೆಗೆ ಬಿದ್ದು ಬಿಡುತ್ತೋ ಅಂತ ರಸ್ತೆಯ ಬದಿಯಲಿದ್ದ ಆ ಬೃಹದಾಕಾರದ ಮರಗಳು ತಾವೇ ಬಿಸಿಲೀರಿ ರಸ್ತೆಗೆ ನೆರಳಾಸಿದ್ದವು. ಕೋಗಿಲೆ ಕೂಗು ಮಾವಿನ ಮರಗಳಿಂದ ನನ್ನ ಕಿವಿಗೆ ಕೇಳಿದರೆ, ಸಂಪಿಗೆಯ ಸುವಾಸನೆ ಗಗನ ಚುಂಬಿಸುತ್ತಿದ್ದ ಆ ಸಂಪಿಗೆ ಮರದಿಂದ ನನ್ನ ಮೂಗಿಗೆ ಬಡಿಯುತ್ತಿತ್ತು. ರಸ್ತೆಗೆ ಬಿದ್ದ ಗಸಗಸೆ ಮರದ ಹಣ್ಣುಗಳ ಆ ವಾಸನೆಯಂತು ಬಾಯಲ್ಲಿ ನೀರೂರಿಸುತಿತ್ತು , ಹಕ್ಕಿ ಪಕ್ಷಿಗಳು ಆ ಮರಗಳಲ್ಲಿ ಕಾಣದಂತೆ ಅಡಗಿ ಹಾಡಿದರೂ  ಅವುಗಳ ಹಾಡು ಮಾತ್ರ ನನ್ನ ಕಿವಿಗೆ ಕೇಳಿಸುತ್ತಿತ್ತು. ಕಾಯಿಡಿದ ಮಾವಿನ ಮರದ ಮೇಲೊಂದು ಮಂಗನ  ಕುಟುಂಬವು ಮಾವಿನ ಕಾಯಿಯನ್ನು ತಿನ್ನುವ ದೃಶ್ಯವಂತೂ ಸೊಗಸಾಗಿತ್ತು. ಮನೆಯ ಮುಂದೆ ಇರುವ ಸ್ವಲ್ಪ ಜಾಗದಲ್ಲೇ ಅಲ್ಲಿಯ ಜನರು ಹೂವು ಹಣ್ಣುಗಳ ಗಿಡ ಸಾಕಿಕೊಂಡಿದ್ದರು. ಪೇರಲ, ಸಪೋಟ ,ಗಸಗಸೆ, ದಾಳಿಂಬೆ ಹಣ್ಣಿನ ಗಿಡಗಳಾದರೆ, ಮಲ್ಲಿಗೆ ಬಳ್ಳಿಗಳು , ದಾಸವಾಳ , ಕಣಗಿಲೆ ಹಾಗೆ ಇನ್ನು ಹಲವು ಹೂವಿನ ಗಿಡ ಬಳ್ಳಿಗಳಿದ್ದವು. ದೊಡ್ಡ ಪೊದೆಗಳ ತರ ಇದ್ದ ಹೂವು ಗಿಡ ಬಳ್ಳಿಗಳು ಸಣ್ಣ ಸಣ್ಣ ಪಕ್ಷಿಗಳಾದ ಗುಬ್ಬಿಗಳು,ಹಮ್ಮಿಂಗ್ ಬರ್ಡ್ ಗಳಿಗೆ  ಆವಾಸ ಕಲ್ಪಿಸಿದ್ದವು.ಆದಿ ಬೀದಿಗಳೆಲ್ಲ, ಊರು ಕೇರಿಗಳೆಲ್ಲ, ಸಂಪೂರ್ಣ ಪ್ರಪಂಚವೆಲ್ಲ  ಹೀಗೆಯೇ  ಹಚ್ಚ ಹಸುರಾಗಿದ್ದರೆ , ಹಕ್ಕಿ-ಪಕ್ಕಿಗಳಿಂದ ತುಂಬಿದ್ದರೆ  ಅದೆಷ್ಟು ಚಂದ ಅಂತ ಅಂದು ಕೊಂಡೆ .




        






                   ಹಾಗೆ ಸವಿಯುತ್ತ ಮುಂದೆ ಸಾಗಿದ ನಾನು ಅಲ್ಲಿಯೇ ಮರಗಳ ನೆರಳಲ್ಲಿ ಆಡುತಿದ್ದ ಚಿಕ್ಕ ಮಕ್ಕಳ ಗುಂಪನ್ನು ಮಾತಾಡಿಸಿ, ಇವರೆಲ್ಲ ಇಂತಹ ವಾತಾವರಣದಲ್ಲಿ ಇರುವರಲ್ಲ ಅದೆಷ್ಟು ಅದೃಷ್ಟವಂತರು ಅಂತ ಮನಸ್ಸಿನಲ್ಲೇ ಅಂದುಕೊಂಡೆ. ಇದೆಲ್ಲವೂ ನಮ್ಮ  ಪ್ರದೇಶಗಳ ಒಂದು ಮುಖವಷ್ಟೇ. ಇನ್ನೊಂದು ಮುಖದ ಬಗ್ಗೆಯೂ ನಾನು ಹೇಳಲೇಬೇಕು.  ಹೀಗೆ ಮುಂದೆ ಬಂದ ನಾನು ಅಲ್ಲಿಯೇ ಇದ್ದ ನಮ್ಮ ಪ್ರದೇಶದಲ್ಲಿ  BBMP ನೋಡಿಕೊಳ್ಳುವ ಒಂದು ಉದ್ಯಾನವನವನ್ನು ಹೊಕ್ಕು , ಸ್ವಲ್ಪ ಹೊತ್ತು ಸುತ್ತಾಡಿದೆ. ಆ ಉದ್ಯಾನವನವೂ ಮರಗಿಡ, ಹೂ ಬಳ್ಳಿಗಳಿಂದ  ಅದ್ಬುತವಾಗಿದೆ. ಅಲ್ಲಿ ಜನಸಂದಣಿ ಜಾಸ್ತಿ ಇರುವ ಕಾರಣವೇನೋ ಹಕ್ಕಿ ಪಕ್ಷಿಗಳು  ಅಷ್ಟೊಂದು ಇಲ್ಲ . ಆದರೂ ನೋಡಲು ತುಂಬಾ ಹಸಿರಾಗಿದ್ದು ವಿಶಾಲವಾದ ಜಾಗ. ಎಲ್ಲಿ ನೋಡಿದರು   ಅಲ್ಲಿ ಹಸಿರು, ನೆಲ ಕಾಣದಂತೆ ಹುಲ್ಲು ಬೆಳಸಿ, ದಿನವು ಅದಕ್ಕೆ ನೀರುಣಿಸಿ BBMP  ಅದರ ಅಬಿವೃದ್ದಿ ಮಾಡುತ್ತಿದೆ. ಆ ಉದ್ಯಾನವನದಲ್ಲಿ , ಹಸಿರು ಹುಲ್ಲಿದೆ, ಮರಗಿಡಗಳ ನೆರಳಿದೆ, ಬಹಾಳೋಷ್ಟು ನೀರಿದೆ ಆದರೆ ಉದ್ಯಾನವನಕ್ಕೊಂದು ದೊಡ್ಡ ತಂತಿ ಬೇಲಿಯೂ ಇದೆ. ಮನುಷ್ಯ ಪಕ್ಷಿಗಳಿಗೆ ಬಿಟ್ಟರೆ ಎಲ್ಲಿ ಯಾರಿಗೂ ಪ್ರವೇಶವಿಲ್ಲ. ಬೇಸಗೆಯ ದಿನವಾದರಿಂದ ಸೂರ್ಯ ಅಷ್ಟರಲ್ಲೇ ಸಾಕೊಷ್ಟು ಮೇಲೇರಿ ಬಂದಿದ್ದ ಪ್ರಕರವಾದ ಬಿಸಿಲನ್ನು ಕೂಡ  ಚೆಲ್ಲಿದ್ದ. ಅದೇ ಸಮಯದಲ್ಲಿ ಆ ಬಿಸಿಲಿಗೆ ದಣಿದಂತೆ ಕಾಣುತಿದ್ದ ೩ ಹಸುಗಳ ಗುಂಪೊಂದು ಅಲ್ಲಿ ಕಂಡಿತು. ಅಲ್ಲಿ ಹುಲ್ಲಿಗೆ ನೀರು ಹಾಯಿಸುತ್ತಿರುವುದು ಅವುಗಳಿಗೆ ಕಾಣುತ್ತಿವೆ , ಹಸಿರು ಹುಲ್ಲು ಕೂಡ ಅಲ್ಲಿದೆ ಆದರೆ ಅದೆಲ್ಲ ಆ ಹಸುಗಳಿಗೆ ಸಿಗುತ್ತಿಲ್ಲ. ಅವು ನೋಡುತ್ತಲೇ ಇವೆ ಹೊರಗಡೆ ಇಂದ. ಅವೆಷ್ಟು ಬಾಯಾರಿದ್ದವೋ ಅದೆಷ್ಟು ಹಸಿದಿದ್ದವೋ.???

                ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಮ್ಮ  ನಾಗರಿಕತೆ ಹೆಚ್ಚಾಗಿ ಅವುಗಳಿಗೆ ಕುಡಿಯಲು ನೀರು, ಆಹಾರ ಸರಿಯಾದ ಪ್ರಮಾಣದಲ್ಲಿ ಈ ಪ್ರಾಣಿ ಪಕ್ಷಿಗಳಿಗೆ  ಪೇಟೆಗಳಲ್ಲಿ ಸಿಗುತ್ತಿಲ್ಲ . ಮೊದಲೆಂದರೆ ನೀರಿನ ಹೊರ  ಚರಂಡಿಗಳಿದ್ದವು, ಬೀದಿಗೊಂದು ನಲ್ಲಿ - ಬೋರುಗಳು, ಅಲ್ಲಿ ನಿಂತ ನೀರು , ಮುಚ್ಚದ ನೀರಿನ  ಟ್ಯಾಂಕುಗಳು  ಈ ಪ್ರಾಣಿ ಪಕ್ಷಿಗಳಿಗೆ ನೀರಿನ ಆಕರವಾಗಿರುತ್ತಿದ್ದವು , ಈಗ ಅವುಗಳು ಇಲ್ಲ. ನೀರಿನ ನಲ್ಲಿಗಳು ಈಗ  ನಮ್ಮ ಮನೆಯೊಳಗೇ ಇವೆ,  ಟ್ಯಾಂಕುಗಳಿಗೆ ಮುಚ್ಚಣಿಕೆಗಳು ಬಂದಿವೆ. ಇನ್ನು ಬೋರುಗಳಿದ್ದರು ಅವುಗಳಲ್ಲಿ  ನೀರು ಇಲ್ಲ. ಅದಕ್ಕೆ ಕಾರಣ ಭೂಮಿಯಲ್ಲಿ ಅಂತರ್ಜಲದ ಕೊರತೆ.  ಹಾಗಾಗಿ ಈ ಬೆಸಿಗೆಯಲೊಂತು ಪಕ್ಷಿಗಳಿಗೆ ನೀರುಡುಕುವುದು ಅಸಾದ್ಯದ ಕೆಲಸ. ಸ್ನೇಹಿತರೆ ಸ್ವಲ್ಪ ಯೋಚಿಸಿ ನಮಗಂತೂ ಬೀದಿ ಬೀದಿಗೆ ತಂಪು ಪಾನೀಯಗಳ ಅಂಗಡಿಗಳು, Fruit  juice  ಸಿಗುವ ಅಂಗಡಿಗಳು ಇವೆ ಆದರೆ ಈ ಚಿಕ್ಕ ಪುಟ್ಟ ಪಕ್ಷಿಗಳಿಗೆ ನೀರೆಲ್ಲಿ ಸಿಗಬೇಕು ???   ನಮ್ಮ ಮನೆಯ ಮುಂದಿನ ಜಾಗವನ್ನೆಲ್ಲ ಕಾಂಕ್ರೀಟು ಗೊಳಿಸಿ, ಕಾರ್ ಪಾರ್ಕಿಂಗ್ ಮಾಡಿಕೊಂಡರೆ ಹೇಗೆ ??? ಮಕ್ಕಳಿಗೆ Dust allergy ಅಂತ ಮಣ್ಣಿನ ಜಾಗ ಬಿಡದೆ, ಹಾವು, ಹುಳು ಹುಪ್ಪಡಿ ಸೇರುತ್ತವೆಂದು ಮನೆಯ ಮುಂದೆ ಗಿಡ ಮರಗಳನ್ನು ಹಾಕದಿದ್ದರೆ ಪಕ್ಷಿಗಳು ಹೇಗೆ ಬದುಕಬೇಕು ???? ಎಷ್ಟೋ ಜನರು ಒಣಗಿದ ಎಲೆಗಳು ಬೀಳುತ್ತವೆ, ದಿನವು ಕಸ ಹೊಡೆಯುವರಾರು ಎಂದು ಮರಗಳನ್ನು ಕಡಿಸಿರುವವರು ಇದ್ದಾರೆ. ನಾವು ಹೀಗೆ ಮಾಡಿದರೆ, ಮರ ಗಿಡ ಕಡಿದರೆ, ಬೆಳಸದಿದ್ದರೆ, ಸಾಮನ್ಯವಾಗಿ ನಮ್ಮ ಜೊತೆಯಲ್ಲೇ ಸಾವಿರಾರು ವರ್ಷಗಳಿಂದ ಸಹಬಾಳ್ವೆ ಮಾಡಿಕೊಂಡಿದ್ದ ಕೋತಿ, ಗಿಳಿ, ಪಾರಿವಾಳ, ಗುಬ್ಬಿ, ಹಮ್ಮಿಂಗ್ ಬರ್ಡ್, ಮೈನ, ಕೋಗಿಲೆಗಳು, ಟಿಟ್ಟಿಬಗಳು  ಹೇಗೆ ನಮ್ಮೊಡನೆ ಇರುತ್ತವೆ. ಅವುಗಳಿಗೆ ನೀರು, ದಾನ್ಯ, ಗೂಡು ಕಟ್ಟಲು, ಮಾವು, ಸಂಪಿಗೆ, ಬೇವು, ಮಲ್ಲಿಗೆ ಬಳ್ಳಿಗಳು ಎಲ್ಲಿ ಸಿಗುತ್ತವೆ ??? ನಾಳೆ  ಇವುಗಳೊಂದಿಗೆ ಬಾಳುವ ಸಹಜ ಸುಖವನ್ನು ನಾವು ಕಳೆದು ಕೊಲ್ಲುವುದಿಲ್ಲವೇ ??? ನಮ್ಮ ಮುಂದಿನ ಪೀಳಿಗೆಗೆ ನಾವು ಉಳಿಸಿ ಕೊಡುವುದಾದರೂ ಏನು ???  ವರ್ಷ ವರ್ಷಕ್ಕೂ ಬರಿ ಬಿಸಿಲು ಜಾಸ್ತಿ ಆಗುತ್ತಿದೆ ಎಂದು ನಾವು ಅಂದುಕೊಳ್ಳುತ್ತೇವೆ ಮತ್ತು ಪ್ರಕೃತಿಗೆ ಇಡಿ ಶಾಪವನ್ನೇ ಹಾಕುತ್ತೇವೆ ಹೊರತು ನಾವು ಈ ಬಿಸಿಲು  ಕಡಿಮೆ ಆಗಲು ಏನಾದರು ಕ್ರಮ ಕೈಗೊಂಡಿದ್ದೇವೆಯೇ ??? ಬರಿ ಚೆನ್ನಾಗಿರುವ ಪ್ರಕೃತಿಯನ್ನು ಸವಿಯುವ ನಾವು ಆ ಸೊಬಗನ್ನು ಮತ್ತೊಷ್ಟು ಹೆಚ್ಚಿಸಲು ನಾವೇನಾದರೂ ಮಾಡುತ್ತಿದ್ದೇವೆಯೇ ???  ಹಕ್ಕಿ ಪಕ್ಕಿಗಳಿಗೆ ನೀರುಣಿಸಿದ್ದೆವೆಯೇ ???
 


                ಸ್ನೇಹಿತರೆ, ನಾವೆಷ್ಟೇ ಮುಂದುವರಿದರೂ, ಎಷ್ಟೇ ದುಡಿದರೂ, ಪ್ರಾಣಿ ಪಕ್ಷಿಗಳಿಲ್ಲದ, ಮರ-ಗಿಡ, ಬಳ್ಳಿಗಳಿಲ್ಲದ, ಹಕ್ಕಿ ಪಕ್ಕಿಗಳ ಕೂಗಿಲ್ಲದ ನಮ್ಮ  ಬಾಳು ನಿಜವಾಗಿಯೂ ಬರಡು, ಅಂತಹ ಆ ಜೀವನ ಅಸ್ತಿ ಇಲ್ಲದ ದೇಹದಂತೆ. ನಮ್ಮ ಬಳಿ ಅದೆಷ್ಟೇ ದುಡ್ಡು ಇದ್ದರು, ಎಂತಹ ಮನೆ ಇದ್ದರು, ಮನೆಯ ಸುತ್ತ ಹಸಿರು ಬಳ್ಳಿ, ಕುಡಿಯಲು ನೀರು ಇಲ್ಲ ಅಂದರೆ ಅದು ನಮಗೆ ಬದುಕಲು ಯೋಗ್ಯವೇ. ಹಾಗಾಗಿ ನಾನು ವರ್ಷಕ್ಕೆ ಒಂದಾದರು ಗಿಡ ನೆಡುವ ಪ್ರತಿಜ್ಞೆ ಮಾಡಿದ್ದೇನೆ ಅದು ಎಲ್ಲಾದರೂ ಸರಿಯೇ, ಯಾವ ಗಿಡವಾದರು ಸರಿಯೇ. ನಾನು ಗಿಡ ನೆಡಲೇ ಬೇಕು, ನನ್ನ ಮುಂದಿನ ಪೀಳಿಗೆಯು ನನಗೆ ಶಾಪ ಹಾಕದಿರುವಂತೆ ನಾನು ನಡೆದುಕೊಳ್ಳಬೇಕು. ನನ್ನ ಮುಂದಿನ ಜನಾಗಂಗಕ್ಕೆ ಹಾಗು ನನ್ನ ಮುಂದಿನ ಜೀವನದ ಒಳಿತಿಗಾಗಿ ಕೊನೆ ಪಕ್ಷ ವರ್ಷಕ್ಕೆ ಒಂದಾದರು ಒಳ್ಳೆಯ ಗಿಡ ನೆಡಬೇಕು. ನಾಲ್ಕು ಜನರಿಗೆ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತೀರ್ಮಾನಿಸಿದ್ದೇನೆ. ನೀವು ಕೂಡ ಯೋಚಿಸಿ, ಚಿಂತಿಸಿ ನಮ್ಮ ಹಿರಿಯರು ನಮಗೆ ಕೊಟ್ಟ ಈ ವಾತಾವರಣವನ್ನು ನಾವು ಒಳ್ಳೆಯ ರೀತಿಯಲ್ಲೇ ನಮ್ಮ ಮುಂದಿನವರಿಗೆ ಕೊಡಲು ನಿರ್ಧರಿಸಿ.


**  ಸದ್ಯಕ್ಕೆ  ನಮ್ಮ ಮನೆಗಳ ಮುಂದಿನ ಜಾಗಗಳಲ್ಲಿ, ಮಹಡಿಗಳ ಮೇಲೆ ಸ್ವಲ್ಪ ನೀರನ್ನು  ನಮ್ಮ ಪಕ್ಷಿಗಳಿಗೆ ಬೇಸಗೆಯಲ್ಲಿ ಕುಡಿಯಲು ಇಡಬೇಕು.
** ಚಿಕ್ಕ ಪುಟ್ಟ ಗಿಡ ಬಳ್ಳಿಗಳನ್ನು ಸಾದ್ಯವಾದರೆ ನಮ್ಮ ಮನೆಯಂಗಳಲ್ಲಿ, ಕುಂಡಗಳಲ್ಲಿ ಬೆಳೆಸಬೇಕು.
** ವರ್ಷಕ್ಕೆ ಒಂದಾದರು ನಮ್ಮ ಕೈಯಿಂದ ಗಿಡ ನೆಡಲೇಬೇಕು.
** ಆದೊಷ್ಟು ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ, ಮರ ಗಿಡ, ಹಕ್ಕಿ ಪಕ್ಷಿಗಳ ಬಗ್ಗೆ ಆಸಕ್ತಿ,  ಪ್ರೀತಿ ಹಾಗು ಜಾಗೃತಿ  ಮೂಡುವಂತೆ ಮಾಡಬೇಕು.

ನಿಮಗಾಗಿ 
ನಿರಂಜನ್

ಭಾನುವಾರ, ಏಪ್ರಿಲ್ 8, 2012

ಹನಿಗವನಗಳು .......


                                                        ಹನಿಗವನಗಳು .......
ಸ್ನೇಹಿತರೆ.....

ನಾ ಚಿಕ್ಕವನಾಗಿದ್ದಾಗಿನಿಂದಲೂ , ಅನೇಕ ಲೇಖಕರ ಲೇಖನಗಳಿಗೆ, ಮಾರು ಹೋಗಿದ್ದೇನೆ, ಅವುಗಳಿಂದ ಪ್ರಭಾವಿತನಾಗಿದ್ದೇನೆ, ಕಲಿತಿದ್ದೇನೆ, ಎಷ್ಟೋ ಬಾರಿ ಅವರಿಂದಲೇ ಪ್ರೇರೇಪಿತನಾಗಿ ಅವರನ್ನೇ ಅನುಕರಿಸಿದ್ದೇನೆ ಕೂಡ. ಅವರ ಶೈಲಿಗಳಲ್ಲೇ ಬರಹಗಳನ್ನು ಸಹ ಬರೆದಿದ್ದೇನೆ. ಅವರ ರೀತಿಯಲ್ಲೇ ಮಾತು ಕೂಡ ಆಡುತ್ತೇನೆ. ನಾನು ಅವರನ್ನು ಅನುಕರಿಸುತ್ತೇನೆ ಅನ್ನುವುದಕಿಂತ ಅವರ ಬರವಣಿಗೆ, ಶೈಲಿ  ಹಾಗು ಅವರ ಚಿಂತನೆಗಳಿಂದ ನಾನು ಅಷ್ಟೊಂದು ಪ್ರಭಾವಿತನಾಗಿದ್ದೇನೆ. ಸದಾ ನಗುವ, ನಗಿಸುವ , ನಾಲ್ಕೇ ನಾಲ್ಕು ಸಾಲುಗಳಲ್ಲೇ ಜೀವನ , ಪ್ರೀತಿ , ಸ್ನೇಹ, ಸಂಬಂದಗಳನ್ನು ಹಾಗು ವಿಡಂಬನೆಗಳನ್ನು ಹಾಸ್ಯದ ರೂಪದಲ್ಲಿ ಬಿಚ್ಚಿಡುವ ನಮ್ಮ ನೆಚ್ಚಿನ ಕವಿ ಚುಟುಕ ಬ್ರಹ್ಮರೆಂದೇ ಪ್ರಸಿದ್ದಿಯಾಗಿರುವ ಶ್ರೀ ದುಂಡಿರಾಜ್ ರವರ ಪ್ರಭಾವ ಕೂಡ ನನ್ನ ಮೇಲೆ ಅಷ್ಟಿಷ್ಟಲ್ಲ.  ಇಂತಹ ದೊಡ್ಡ ಹಾಸ್ಯ ಕವಿ  ದುಂಡಿರಾಜ್ ಸಾಹಿತ್ಯದ ಪ್ರಭಾವಕ್ಕೆ ಸಾಕ್ಷಿಯೇ ಈ ಕೆಳಗಿನ ನನ್ನ ಕೆಲವು ಹನಿಗವನಗಳು. ಈ ನನ್ನ ಹನಿಗವನಗಳನ್ನು ನಾನು ನನ್ನ ಮಾನಸ ಗುರುವಾದ ದುಂಡಿರಾಜ್ ರವರಿಗೆ  ಅರ್ಪಿಸುತ್ತಿದ್ದೇನೆ.  
         ಆಸೆ 
ಪರೂಪಕ್ಕೆ ಹತ್ತಿರ ಬಂದ
ನನ್ನವಳ ನಾ ಕೇಳಿದೆ
ಕೈ ಹಿಡಿದು
ಒಂದೇ ಒಂದು 'ಕೊಡುವೆಯ' .....
ಅದಕ್ಕವಳು ಹೇಳಿದಳು
ಸದ್ಯಕ್ಕೆ ಕೈ ಬಿಟ್ಟು ಬಿಡು'WAY"ಯ....
                          
      ನಿರಾಸೆ 
ನ್ನವಳ ಒಡಲು
ಪ್ರೀತಿಯ ಬಾರಿ  'ಕಡಲು'
ಅಂತ ತಿಳಿದಿದ್ದೆ....
ಅದು ನಿಜ ತಾನೇ
ಬಿದ್ದ ಮೇಲೆ  ನನಗೆ ಆಗುತ್ತಲೇ
ಇಲ್ಲ , ಇನ್ನು ಮೇಲೆ 'ಏಳಲು'....


  ಕಾಮನ ಬಿಲ್ಲು 
ದುವೆಯ ಮೊದಲು
ಮಾತು ಮಾತಿಗೂ ಬಿಡುತ್ತಿದ್ದಳು
ಪ್ರೀತಿಯ ಬಾಣಗಳನ್ನು,  ಹೂಡಿ  ನಗು ಮುಖದ ಬಿಲ್ಲು
ಈಗಲೂ ಕೊಡುತ್ತಾಳೆ  ಮಾತು ಮಾತಿಗೂ
ಶಾಕ್ ಕೊಡುವ ಕರೆಂಟ್ ಬಿಲ್ಲು, ನೀರು ಬಿಲ್ಲು

    ಮೊದಮೊದಲು 
ದುವೆಗೂ ಮೊದಲು 
ನನ್ನವಳ ಗಲ್ಲ 
ಸಿಹಿ ಬೆಲ್ಲ....
ಬಹಳ ದಿನವಾಯಿತಲ್ಲ
ಅದೇ ಸಿಹಿ ಬೆಲ್ಲ   
ಈಗ
ಹುಳಿ ಬೆಲ್ಲ  ........


    ಅನ್ವೇಷಣೆ 
ನಮ್ಮ ಪ್ರೀತಿ 
ನೆನ್ನೆ ಮೊನ್ನೆಯದಲ್ಲ 
ಪ್ರಿಯ
ಜನ್ಮ ಜನ್ಮಾಂತರದು...... 
ನಿಜ ನಿಜ 
ಪ್ರಿಯೆ 
ತುಂಬಾ 'ಹಳೆಯದು'
ಅದಕ್ಕೆ ನಾ ಹುಡುಕುತ್ತಿರುವೆ  
ಮತ್ತೊಂದು 'ಹೊಸದು'.... 


        ಇರುವೆ 
ಮೊದಮೊದಲು ನನಗನ್ನಿಸುತ್ತಿತ್ತು
ನೀ ನನ್ನ ಚಲುವೆ
ನಾ ನಿನಗಾಗಿಯೇ  'ಇರುವೆ'......
ಈಗಲೂ ಕೂಡ ಅನ್ನಿಸುತ್ತಿದೆ
ಇನ್ನೂ ಯಾಕೆ ನೀ
ನನ್ನ ಜೊತೆಯಲ್ಲೇ 'ಇರುವೆ'....

   ನಿನ್ನ  ನಲ್ಲ 
ಹೇ ಹುಡುಗಿ, ನಾ ನಿನ್ನ ನಲ್ಲ
ಕೊಡುವೆಯಾ ನಿನ್ನ ಗಲ್ಲ.....
ಲೊ ಹುಡುಗ, ಅದು ನಿನಗಲ್ಲ
ನನ್ನ ನಲ್ಲ ನೀ ಅಲ್ಲವೇ ಅಲ್ಲ.....

   ಬುದ್ದಿವಂತರು 
ದುವೆಗೂ ಮೊದಲೇ ಹುಡುಗರು
ಕಷ್ಟ ಪಟ್ಟು ಸಂಪಾದಿಸುತ್ತಾರೆ 
ಚಿಕ್ಕದೋ ದೊಡ್ಡದೋ ಒಂದು
'ಕೆಲಸ'.....
ಏಕೆಂದರೆ ???
ಖಾಲಿ ಇದ್ರೆ ಕೊಡುವಳಲ್ಲ
ಮುಂದೊಂದು ದಿನ ಮನೆಯ 
ಎಲ್ಲಾ  'ಕೆಲಸ'......


   ಕಿಲಾಡಿ
ಲೋ ಹುಡುಗ
ನೀ ತುಂಬಾ
ಪೋಲಿ , ಕಿಲಾಡಿ
"ಒಳ್ಳೆನಲ್ಲ".....
ಹೌದು ಹುಡುಗಿ
ನೀ ಹೇಳಿದ
ಹಾಗೆ ನಾ
ಒಳ್ಳೇ 'ನಲ್ಲ'

    ಬಲ್ಲೆ
ಗೊತ್ತಿತ್ತು ಒಂದಲ್ಲ
ಒಂದು ದಿನ
ಹೇಳುವಳು
ನೀ ನನಗೆ ಬರಿ
' ಸ್ನೇಹಿತ '
ಅದಕ್ಕೆ ನಾ ಕೂಡ
ಮಾಡಿದ್ದೆ
ಅವಳಿಗಾಗಿ
ಕರ್ಚು
'ಹಿತ' 'ಮಿತ '


ನಿಮಗಾಗಿ 
ನಿರಂಜನ್

ಗುರುವಾರ, ಮಾರ್ಚ್ 22, 2012

ನಮ್ಮ ಹಳ್ಳಿಯ ಹಬ್ಬ


                                    ಯುಗಾದಿಯ ನೆನಪುಗಳು..... 

ಸಂತನ ಆಗಮನದಿಂದ ಕಂಗೊಳಿಸುತ್ತಿರುವ ಪ್ರಕೃತಿ ಮರ-ಗಿಡಗಳನ್ನು ಹಸಿರು ಚಿಗುರಿನಿಂದ ಸಿಂಗರಿಸಿದೆ, ಎಳೆಯ ಚಿಗುರು ತಿಂದು ಪಂಚಮದಲ್ಲಿ ಹಾಡುವ ಕೋಗಿಲೆಗಳು ಎಲ್ಲೆಲ್ಲೂ ತಮ್ಮ ಸಂಗೀತ ಗೋಷ್ಠಿ ನಡೆಸುತ್ತಿವೆ, ಸುಡುವ ಬೇಸಗೆಯ ಬಿಸಿಲ ಜಳಕ್ಕೆ ಅಂಜದೆ ಅಳುಕದೆ  ಬೇಸಗೆಯ ರಜವನ್ನು ಅನುಭವಿಸುತ್ತಿರುವ ಚಿಕ್ಕ ಚಿಕ್ಕ ಮಕ್ಕಳು , ನಮ್ಮ ಹೊಸ ವರುಷವನ್ನು ಸ್ವಾಗತಿಸಲು ಸಂಭ್ರಮದಿಂದ ಸಜ್ಜಾಗಿದ್ದಾರೆ . ಈ ಹೊಸ ಸಂವತ್ಸರವನ್ನು, ಹೊಸ ವರುಷವನ್ನು ಸ್ವಾಗತಿಸುವ ಈ ದಿನ ಅಂದರೆ  ನಮ್ಮ ನೆಚ್ಚಿನ ಯುಗಾದಿ ಹಬ್ಬ ಮತ್ತೆ ಬಂದು ಬಿಟ್ಟಿದೆ. ಖರನಾಮ ಸಂವತ್ಸರವನ್ನು ಕಳೆದು , ಬರುವ ನಂದನ ಸಂವತ್ಸರವು ಎಲ್ಲರಿಗೂ ಒಳಿತು ಮಾಡಲಿ, ಕಳೆದ ವರುಷದ ಕಹಿ ಮರೆತು ಸಿಹಿ ಮಾತ್ರ ನೆನೆದು , ಈ ವರುಷದಲಿ ಸಿಹಿ-ಕಹಿಗಳನ್ನು ಸಮನಾಗಿ ಅನುಭವಿಸುವ ಶಕ್ತಿಯನ್ನು ಆ ದೇವರು ಎಲ್ಲರಿಗೂ ಕರುಣಿಸಲಿ  ಎಂದು ದೇವರಲ್ಲಿ ಬೇಡುತ್ತ , ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಆಚರಿಸುತ್ತಿದ್ದ  ಆ ಯುಗಾದಿಯ ನೆನಪುಗಳ ಬಗ್ಗೆ ಸ್ವಲ್ಪ ಮೇಲುಕು ಹಾಕುತ್ತೇನೆ. 

                                        ಯುಗಯುಗಾದಿ ಕಳೆದರೂ
                                        ಯುಗಾದಿ ಮರಳಿ ಬರುತಿದೆ 
                                        ಹೊಸ ವರುಷಕೆ ಹೊಸ ಹರುಷವ 
                                        ಹೊಸತು ಹೊಸತು ತರುತಿದೆ....
                                  
                                        ಹೊಂಗೆಹೂವ ತೊಂಗಲಲ್ಲಿ 
                                        ಭೃಂಗದ ಸಂಗೀತಕೇಳಿ 
                                        ಮತ್ತೆ ಕೇಳಿ ಬರುತಿದೆ.
                                        ಬೇವಿನ ಕಹಿ ಬಾಳಿನಲ್ಲಿ
                                        ಹೂವಿನ ನಸುಗಂಪು ಸೂಸು
                                        ಜೀವ ಕಳೆಯ ತರುತಿದೆ.
                                                            - ದ.ರಾ. ಬೇಂದ್ರೆ 

            ಯುಗಾದಿ ಬಂತೆಂದರೆ ನಮಗೆ ತಟಕ್ಕನೆ ನೆನಪಾಗುವುದು ನಾವು ರೇಡಿಯೋದಲ್ಲಿ  ಕೇಳುತ್ತಿದ್ದ ಬೇಂದ್ರೆಯವರ  ಈ ಸಾಲುಗಳು. ಈ ಸಾಲುಗಳು ನಿಜವಾಗಿಯೂ ನಮ್ಮೆಲ್ಲರನ್ನು  ಒಂದೇ  ಕ್ಷಣದಲ್ಲಿ  ಹಬ್ಬದ ವಾತಾವರಣಕ್ಕೆ ಎಳೆದೊಯ್ದು  ಬಿಡುತ್ತವೆ.ಯುಗಾದಿಯನ್ನು ವರ್ಣಿಸಲು ಇದಕ್ಕಿಂತ ಬೇರೆ ಸಾಲುಗಳು ಬೇಕೇ. ನಿಜವಾಗಿಯೂ ಬೇಂದ್ರೆಯವರಿಗೆ ನನ್ನ ಅಂತರಾಳದ  ನಮನಗಳು. 

  
          ಸ್ನೇಹಿತರೆ ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದ  ರೀತಿಯೇ ಬೇರೆ. ಬೇಸಗೆಯ ರಜಾ ದಿನಗಳಲ್ಲಿ ಹುಡುಗರೆಲ್ಲಾ ಸೇರಿ ಹಬ್ಬ ಯಾವಾಗ ಬರುತ್ತೋ ಅಂತ ಕಾಯುತ್ತಿದ್ದ ನಮಗೆ, ಹಬ್ಬದ ಮೊದಲ ದಿನ  ಚೆಂಡಾಟ  ಆಡಲು ಬಟ್ಟೆ ಚೆಂಡನ್ನು ಸಿದ್ದ ಮಾಡುವುದರಲ್ಲೇ ಒಂದೆರೆಡು ದಿನ ಕಳೆಯುತ್ತಿದ್ದೆವು. ಅಂತೂ ಇಂತೂ ಹಬ್ಬದ ದಿನ ಬಂತೆಂದರೆ ಸಾಕು ಬೆಳಗಿನ ಜಾವಕ್ಕೆ ಎದ್ದು ಹೊಲಕ್ಕೆ ಹೋಗಿ ಮಾವಿನ ಸೊಪ್ಪು, ಬೇವಿನ ಸೊಪ್ಪು , ಬೇವಿನ ಹೂವು ತಂದು. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸುತ್ತಿದ್ದೆವು. ಅಷ್ಟೊತ್ತಿಗಾಗಲೇ ಮನೆಯ ಅಂಗಳಗಳನ್ನು ಸಗಣಿಯಲ್ಲಿ ಸಾರಿಸಿ , ರಂಗೋಲಿ ಬಿಟ್ಟಿರುತ್ತಿದ್ದರು ಮನೆಯ ಹೆಣ್ಣು ಮಕ್ಕಳು ಬಲು ಸಡಗರದಿಂದ. ಅಷ್ಟರಲ್ಲಿ  ಅಮ್ಮ-ಅಜ್ಜಿಯರು ನಮಗೆಲ್ಲ ಹರಳೆಣ್ಣೆ - ಕೊಬ್ಬರಿ ಎಣ್ಣೆ ಹಚ್ಚಿ  ಹಣೆಗೆ ಕುಂಕುಮವನಿತ್ತು , ಸಣ್ಣ ಆರತಿ ಮಾಡುತಿದ್ದರು. ಎಣ್ಣೆ ಹಚ್ಚಿಕೊಂಡು ನಾವು ನಮ್ಮ ಸ್ನೇಹಿತರ , ದೊಡ್ಡಪ್ಪ- ಚಿಕ್ಕಪ್ಪ, ಮಾವಂದಿರ ಮನೆಗೆ ಹೋಗಿ, ಸಮಾನ ವಯಸ್ಸಿನ ಎಲ್ಲ ಹುಡುಗರನ್ನು ಕರೆತಂದು ಮೊದಲೇ ಸಿದ್ದ ಪಡಿಸಿದ್ದ ಬಟ್ಟೆ ಚೆಂಡಿನಿಂದ ಲಗ್ಗೋರಿ ಆಟ ಆಡುವುದಂತೂ ತುಂಬಾ ಮಜವಾಗಿರುತ್ತಿತ್ತು. ಅಬ್ಬಾ ಒಂದೊಂದು ಹೊಡೆತಗಳು ಬೆನ್ನನ್ನು ಕೆಂಪಾಗಿಸುತ್ತಿದ್ದವು, ಚರ್ಮವೂ ಚುರ್‌ ಗುಟ್ಟಿ   ಗಟ್ಟಿಯಾಗುತ್ತಿತ್ತು.  ಹಾಗೂ-ಹೀಗೂ  ಸ್ನೇಹಿತರು ಸಂಬಂಧಿಗಳ ಜೊತೆ ಚೆನ್ನಾಗಿ ಎಳೆಯ ಬಿಸಿಲಲ್ಲಿ ಮೈಗೆ ಎಣ್ಣೆ ಹಚ್ಚಿ ಆಟವಾಡಿ ದಣಿದು ಮನೆಗೆ ಬಂದಾಗ, ಮನೆಯಲ್ಲಿ ಬೇಸಿಗೆಗಾಗಿಯೇ ಇಟ್ಟಿರುತ್ತಿದ್ದ ದೊಡ್ಡ ಮಡಿಕೆಯ(ಗಡಿಗೆ) ನೀರನ್ನು  ಗಟ ಗಟ ಕುಡಿದಾಗ  ನಮಗಾಗುತ್ತಿದ್ದ ನೆಮ್ಮದಿಯೇ ಬೇರೆ .  ಸಾಕೆನ್ನುವೊಷ್ಟು  ಆಟವಾಡಿ  ಹಿತ್ತಾಳೆ ಅಂಡೆಯ ನೀರಲ್ಲಿ ಮಿಂದರೆ " ಅಬ್ಬಾ ಅದೆಷ್ಟು ಸುಖ ಸಿಗುತಿತ್ತು ಅದರಲ್ಲಿ " ಅಂತ ಈಗಲೂ ನನಗೆನ್ನಿಸುತ್ತದೆ . ಬೇವಿನ ಸಪ್ಪು ಹಾಕಿದ ಹಿತ್ತಾಳೆ ಅಂಡೆಯ  ನೀರಲ್ಲಿ , ಒಳ್ಳೆಯ ಸ್ನಾನ ಮುಗಿಸಿ ಆಮೇಲೆ ಶುಭ್ರ  ಬಟ್ಟೆಯ ಧರಿಸಿ ಮತ್ತೊಮ್ಮೆ ಎಲ್ಲರ ಮನೆಗಳಿಗೆ ಬೇಟಿ ನೀಡಿ ಮನೆಯಲ್ಲಿ ಹಿರಿಯರು ತಯಾರಿಸಿದ ಬೇವು-ಬೆಲ್ಲ ತಿಂದು ಬೆಳಿಗ್ಗೆ ಆಡಿದ ಆಟದ ಅವಲೋಕನ ಮಾಡುತಿದ್ದಂತೆಯೇ ಹೊಟ್ಟೆ ಚುರ್ ಎನ್ನುತ್ತಿತ್ತು.

             ಸ್ನೇಹಿತರೆ ಈ ಹಬ್ಬದ ಸಮಯದಲ್ಲಿ ಹಳ್ಳಿಗಲ್ಲಿ ಹೇರಳವಾಗಿ ಸಿಗುವ ತರಕಾರಿ ಎಂದರೆ ನುಗ್ಗೆಕಾಯಿ.ಆದ್ದರಿಂದ ನುಗ್ಗೆ ಕಾಯಿ ಸಾಂಬಾರು , ಬೇಸಗೆಯ ದಿನಗಳಲ್ಲಿ ದೇಹದ ಉಷ್ಣತೆಯನ್ನು  ಕಾಪಾಡಲು   ರಾಗಿಯಿಂದಲೇ  ಬೇರೆ ರೀತಿಯ ಪದ್ದತಿಯಲ್ಲಿ  ಹಿಟ್ಟಿನ್ನು  ತೆಗೆದು ಮಾಡುತಿದ್ದ ಒತ್ತಿದ ಶಾವಿಗೆ ನಮ್ಮ ಯುಗಾದಿ ಹಬ್ಬದ ವಿಶೇಷ ಅಡುಗೆಗಳು.  ಈ ಶಾವಿಗೆ ಮಾಡೋ ವಿಧಾನವಂತೂ ಅದ್ಬುತವಾಗಿರುತಿತ್ತು.  ಮನೆಯ ಹೆಣ್ಣುಮಕ್ಕಳು ಹಬ್ಬಕ್ಕೂ ಹದಿನೈದು ದಿನ ಮುಂಚಿತವಾಗಿಯೇ ರಾಗಿಯನ್ನು ನೀರಲ್ಲಿ ನೆನೆಸಿಟ್ಟು , ಮೊಳಕೆ  ಕಟ್ಟಿ , ಮೊಳಕೆ ಬಂದ ರಾಗಿಯನ್ನು ಹದವಾಗಿ ಬಿಸಿಲಲ್ಲಿ ಒಣಗಿಸಿ, ಆಮೇಲೆ ಗಿರಣಿಯಲ್ಲಿ ನಯವಾಗಿ ಹೊಡೆಸಿ, ಹಿಟ್ಟು ಮತ್ತೆ ರಾಗಿ ತೌಡನ್ನು  ಬೇರ್ಪಡಿಸಿ,  ಮತ್ತೆ ಆ ಹಿಟ್ಟನ್ನು  ಬಿಸಿಲಿನಲ್ಲಿ ಎಷ್ಟು ಬೇಕೋ ಅಷ್ಟು  ಒಣಗಿಸಿ ಹಬ್ಬಕೆಂದೇ ಸಿದ್ದಪಡಿಸುತ್ತಾ ಇದ್ದರು ವೊಡ್ಡರಾಗಿ ಹಿಟ್ಟನ್ನು . ಮೊಳಕೆ ತಗೆದು ಮಾಡಿದ ಈ ಹಿಟ್ಟು ದೇಹಕ್ಕೆ ತಂಪು ಎಂದು  ಬೇಸಗೆಯಲ್ಲಿ ಇದರಿಂದ ಬೇರೆ ಬೇರೆ  ತಿನಿಸುಗಳನ್ನು ನಮ್ಮ  ಕಡೆ  ಮಾಡುತ್ತಾರೆ. ಇದೇ ಹಿಟ್ಟಿನಿಂದ ಮುದ್ದೆ ಮಾಡಿ ಅವುಗಳಿಂದ ಶಾವಿಗೆ ತಯಾರಿಸುತ್ತಿದ್ದರು.ಈ ಶಾವಿಗೆ ಮಾಡಲು ನಮ್ಮ ಹಳಿಗಳಲ್ಲಿ ಒಂದು ರೀತಿಯ ಮರದ ಯಂತ್ರ ಇರುತ್ತಿತ್ತು ಅದನ್ನು ನಾವು  ಶಾವಿಗೆ ಕೊಂತಿ ಎಂದು ಕರೆಯುತ್ತಿದ್ದವು. ಅದರ ಒಂದು ಬಾಗದಲ್ಲಿ ಒಂದು ಮುದ್ದೆ  ಇಟ್ಟು ಶಕ್ತಿ ಬಿಟ್ಟು ಒತ್ತಿದರೆ ಶಾವಿಗೆ  ಸಿದ್ದವಾಗುತ್ತಿದ್ದವು. ನಿಜವಾಗಿಯೂ ನಾವು ಚಿಕ್ಕವರಿದ್ದಾಗ ಅದೊಂದು ಅದ್ಬುತವಾದ  ಯಂತ್ರವಾಗಿಯೇ ನಮಗೆ ಅದು  ಕಾಣುತ್ತಿತ್ತು. ಅದನ್ನು ಮೇಲಿನಿಂದ  ಒತ್ತುವುದು ಆಮೇಲೆ ಕೆಳಗೆ ಶಾವಿಗೆ ಬರುವುದು ನಮಗೆ ಆ ಸಮಯದಲ್ಲಿ ಏನೋ ಒಂದು ವಿಚಿತ್ರದಂತೆ ಕಾಣುತ್ತಿತ್ತು . ಅದರಲ್ಲಿ ಭಾಗಿಯಾಗಿ ಶಾವಿಗೆ ಒತ್ತುವುದು  ನಮಗೆ  ತುಂಬಾ ಆನಂದವನ್ನೂ ತರುತ್ತಿತ್ತು. ಸಾಕಷ್ಟು  ಆಟ ಆಡಿ, ಬಿಸಿಲಲ್ಲಿ ದಣಿದು ಸಾಕಾಗಿರುತ್ತಿದ್ದ  ನಮಗೆ ಹೊಲದ ಪೂಜೆ, ಹಸು ಎತ್ತುಗಳ ಪೂಜೆಯ ನಂತರ ಊಟ ಮಾಡಲು ಕೂತರೆ ಸಾಕು , ಆ ಚಿಕ್ಕ ಹೊಟ್ಟೆಗಳಿಗೆ ಅದೆಷ್ಟು ತುಂಬಿಸುತ್ತಿದ್ದೆವೋ ಗೊತ್ತಿಲ್ಲ. ನುಗ್ಗೆಕಾಯಿ ಬೇಳೆ ಸಾರು , ಅನ್ನ , ವೊಡ್ಡರಾಗಿ  ಹಿಟ್ಟಿನ ಶಾವಿಗೆ, ಶಾವಿಗೆಗೆ ಏಲಕ್ಕಿ- ಶುಂಠಿ ಮಿಶ್ರಿತ ಬೆಲ್ಲದ ಪಾಕ ಮತ್ತು  ಕಾಯಿರಸ, ಅಬ್ಬಾ ಚಪ್ಪರಿಸಿಕೊಂಡು ಸ್ಪರ್ದೆಗೆ ಕೂತವರಂತೆ ತಿನ್ನುತ್ತಿದ್ದೆವು. ಹೀಗೆ ಊಟ ಮುಗಿಸಿ ಎಲ್ಲರೂ ಅಲ್ಲಿ ಇಲ್ಲಿ ಅಡ್ಡಾಡಿಕೊಂಡು, ಹೊಲಗಳಿಗೋ , ನಮ್ಮೂರ ಕೆರೆ ಏರಿ ಮೇಲೋ ಸುತ್ತುತ್ತಾ ಇದ್ದೆವು. ಅಲ್ಲಿ ಇಲ್ಲಿ ಕೋಗಿಲೆಗಳ ಹಾಡು, ಸುತ್ತಲು ಹಸುರು ಹೊತ್ತ ಮರಗಿಡಗಳ ಆ ವಾತಾವರಣ   ನಿಜವಾಗಿಯೂ  ಹಬ್ಬದ ದಿನ  ನಮಗೊಂದು ಸ್ವರ್ಗದಂತೆ  ಕಾಣುತ್ತ ಇತ್ತು. 

                 ಮೊದಲ ದಿನ ಎಣ್ಣೆ ನೀರು, ಚೆಂಡಾಟ , ಶಾವಿಗೆ ಊಟ ಆದ ಮೇಲೆ ಮಾರನೆ ದಿನ ಮತ್ತೆ ಅದೇ ಲಗ್ಗೋರಿ ಆಟ. ಆದರೆ ಎಣ್ಣೆ ಹಚ್ಚಿರುತ್ತಿರಲಿಲ್ಲ ಅಷ್ಟೇ. ಆ ದಿನ ಅಂತಹ ವಿಶೇಷ ಪೂಜೆಗಳಿಲ್ಲದಿದ್ದರು ಹೋಳಿಗೆ ಊಟವೇ ನಮಗೆ ಅತ್ಯಂತ ವಿಶೇಷವಾಗಿರುತಿತ್ತು . ಮನೆಯ ತೊಗರಿ ಬೇಳೆ, ತಂದ ಬೆಲ್ಲ, ಸಿಹಿ ನೀರಲ್ಲಿ ಬೇಯಿಸಿ ದುಂಡಿ ಕಲ್ಲಿನಲ್ಲಿ ರುಬ್ಬಿ,ಉರುಣ ಸಿದ್ದಪಡಿಸಿ ಕಟ್ಟಿಗೆ ಓಲೆಯ ಮೇಲೆ ಮಾಡುತಿದ್ದ ಹೋಳಿಗೆಗಳು, ಅವುಗಳ ಸುವಾಸನೆ ಮದ್ಯಾಹ್ನದ  ಹೊತ್ತಿಗೆ ನಮ್ಮನ್ನು ಎಲ್ಲಿದ್ದರೂ ಮನೆಗೆ ಸೆಳೆಯುತ್ತಿತ್ತು. ಆಗಲೇ ನಾವು ನಮ್ಮ ಅಮ್ಮ ಮಾಡುತಿದ್ದ ಸಕತ್ ಅಗಲವಾದ 4-5 ಹೋಳಿಗೆ ತಿನ್ನುತ್ತಿದ್ದೆವು. ಹಬ್ಬದ ಹೋಳಿಗೆ ಊಟ ಮುಗಿಸಿದ ಮೇಲೆ ಸಂಜೆ ಎಲ್ಲರೂ ನಮ್ಮ ಮನೆಯ ಬೀದಿಯಲ್ಲಿ ಸೇರಿ "ಸೂರ್ಯ ಅದೆಷ್ಟೊತ್ತಿಗೆ  ಮುಳುಗುತ್ತಾನೋ ನಾವು ಎಷ್ಟೊತ್ತಿಗೆ ಚಂದ್ರನನ್ನು ನೋಡುತ್ತೇವೋ" ಎಂದು ಆಕಾಶವನ್ನೇ ದಿಟ್ಟಿಸುತ್ತಾ," ಕಾಣುಸ್ತೇನೋ ಚಂದ್ರ ನಿಂಗೆ " ಅಂತ ಒಬ್ಬರಿಗೊಬ್ಬರು ಕೇಳುತ್ತಾ ಇದ್ವಿ. ಅಮಾವಾಸ್ಯ ಆಗಿ  ಎರೆಡು ದಿನವಾಗಿರುತಿತ್ತು . ತೇಳು ಚಂದ್ರನನ್ನು ಆಕಾಶದಲ್ಲಿ ಹುಡುಕುವುದೇ ಒಂದು ಚಾಲೆಂಜ್  ಆಗಿರುತ್ತಿತ್ತು. ಅದು ಕಂಡ ಕ್ಷಣ ಅದರ ವರ್ಣನೆಯಂತೂ  ಒಬ್ಬಬ್ಬರ ಬಾಯಲ್ಲಿ ಒಂದೊಂದು ರೀತಿಯಲ್ಲಿ  ಅದ್ಬುತವಾಗಿರುತಿತ್ತು , ಮೊದಲು ನೋಡಿದವರಂತು  ನಿಜವಾಗಿಯೂ ನಾವೇನೋ ಕಂಡು ಹಿಡಿದಷ್ಟೇ ಖುಷಿ  ಪಡುತ್ತಿದ್ದರು. ಚಂದ್ರ ದರ್ಶನವಾದ ಮೇಲೆ ಗುರು ಹಿರಿಯರುಗಳ , ತಂದೆ ತಾಯಿಗಳ ಕಾಲಿಗೆ ಬಿದ್ದು ಅವರ ಆಶೀರ್ವಾದ ಪಡೆದು. ಚಂದ್ರಮಾನ ಯುಗಾದಿಗೆ ವಿಧಾಯ ಹೇಳುವುದಂತೂ ನಮಗೆ ತುಂಬಾ ದುಃಖದ ವಿಷಯವೇ ಆಗಿರುತಿತ್ತು. ನಮ್ಮೂರಲ್ಲಿ ಆಗ ದೋಸೆ ಮಾಡುತ್ತಾ ಇದ್ದದ್ದು ವರ್ಷಕ್ಕೆ ಒಂದೆರೆಡು ಸಲ ಮಾತ್ರ. ಯುಗಾದಿ ಹಬ್ಬದ ನಂತರದ ಮಾತ್ರ ಕಾಯಂ ಆಗಿ  ವೊಡ್ಡ ರಾಗಿ ಹಿಟ್ಟಿನ ದೋಸೆ ಎಲ್ಲರ ಮನೆಯಲ್ಲೂ ನಮಗೆ ಸಿಗುತ್ತಾ ಇದ್ದವು. ಅದೇ ರೀತಿ ಹಬ್ಬ ಮುಗಿಯುವ ದಿನ ನಾಳೆ ನಮಗೆ ಸಿಗುತ್ತಿದ್ದ ಕಾಯಿ ಚಟ್ನಿ-ದೋಸೆ ಮತ್ತು ಬೆಳಿಗ್ಗೆ ಆಡುತ್ತಿದ್ದ ಹೋಳಿ ನಮ್ಮ " ಹಬ್ಬ ಮುಗಿಯಿತಲ್ಲಪ್ಪ " ಎಂಬ  ದುಃಖವನ್ನು ಮರೆಸುತಿತ್ತು . ನಿಜವಾಗಿಯೂ ಸ್ನೇಹಿತರೆ ಹಳ್ಳಿಗಳಲ್ಲಿ ಮಾಡುವ ಯುಗಾದಿಗೂ, ಪೇಟೆಗಳಲ್ಲಿ ಮಾಡುವ ಯುಗಾದಿಗೂ ತುಂಬಾ ವ್ಯತ್ಯಾಸಗಳಿವೆ. ಆದರೂ ನಾ ಸಾಕಷ್ಟು ಬಾರಿ ಹಳ್ಳಿಯಲ್ಲಿ ಆಚರಿಸಿದ  ಆ ಸಡಗರದ ಯುಗಾದಿಯನ್ನು ಹೇಗೆ ಮರೆಯಲು ಸಾದ್ಯ. ಒಂದೊಂದು ಪ್ರಾಂತ್ಯದಲ್ಲಿ  ಒಂದು ಒಂದು ರೀತಿಯಾಗಿ, ವಿಶಿಷ್ಟವಾಗಿ ಆಚರಿಸುವ ಈ ಹಬ್ಬ ಎಲ್ಲರಿಗೂ  ಸಿಹಿ ಕಹಿಗಳನ್ನು ಸಮನಾಗಿ ಸ್ವೀಕರಿಸುವ ಶಕ್ತಿ ನೀಡಲಿ, ನಾಡಿನ ಜನತೆಗೆ ಒಳ್ಳೆಯದನ್ನು ಮಾಡಲಿ ಎಂದು ಆಶಿಸುತ್ತ ನೆನಪುಗಳ ಈ ಗಂಟನ್ನು ಮತ್ತೆ ಕಟ್ಟಿ ನನ್ನ ಮನದಾಳದಲ್ಲಿ  ಬಚ್ಚಿಡುತ್ತೇನೆ.

                                 


ನಿಮಗಾಗಿ 
ನಿರಂಜನ್